ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ

ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ

ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ

“ಬೆಳೆಯು ಬಹಳ, ಕೆಲಸದವರು ಸ್ವಲ್ಪ.”—ಮತ್ತಾ. 9:37.

1. ತುರ್ತನ್ನು ನೀವು ಹೇಗೆ ವಿವರಿಸುತ್ತೀರಿ?

ದಾಖಲೆಪತ್ರವೊಂದಕ್ಕೆ ನೀವು ಅಧಿಕಾರಿಯೊಬ್ಬರ ಸಹಿಯನ್ನು ಸಂಜೆಯೊಳಗೆ ಹಾಕಿಸಲೇಬೇಕು ಎಂದೆಣಿಸಿ. ಏನು ಮಾಡುವಿರಿ? ಅದರ ಮೇಲೆ “ತುರ್ತು!” ಎಂದು ಕೆಂಪಕ್ಷರದಲ್ಲಿ ಬರೆಯುವಿರಿ ಅಲ್ಲವೇ? ಅಥವಾ ಇಂತಿಷ್ಟೇ ಸಮಯಕ್ಕೆ ಒಬ್ಬರನ್ನು ಜರೂರಿಯಾಗಿ ಕಾಣಬೇಕಾಗಿದೆ ಎಂದು ನೆನಸಿ. ಆದರೆ ನಿಮಗೆ ಈಗಾಗಲೇ ತಡವಾಗಿದೆ. ಆಗ? “ಡ್ರೈವರ್‌, ಬೇಗ ಗಾಡಿ ಓಡಿಸಿ, ಟೈಮ್‌ ಓಡುತ್ತಾ ಇದೆ!” ಎಂದು ಅವಸರಪಡಿಸುತ್ತೀರಿ ಅಲ್ಲವೇ? ಹೌದು. ಮಾಡಿಮುಗಿಸಲೇಬೇಕಾದ ಕೆಲಸಕ್ಕೆ ವೇಳೆ ಮೀರುತ್ತಿರುವಾಗ ನಿಮ್ಮಲ್ಲಿ ಒಂದು ರೀತಿಯ ತಳಮಳ, ತವಕ, ತಲೆಬಿಸಿ. ಆದಷ್ಟು ಬೇಗನೆ ಕೆಲಸ ಮುಗಿಸಲು ನೀವು ಧಾವಿಸುತ್ತೀರಿ, ಶ್ರಮಿಸುತ್ತೀರಿ. ಅದಕ್ಕೇ ಅನ್ನೋದು ತುರ್ತು!

2. ಇಂದು ನಿಜ ಕ್ರೈಸ್ತರಿಗಿರುವ ಅತಿ ತುರ್ತಿನ ಕೆಲಸ ಯಾವುದು?

2 ಇಂದು ನಿಜ ಕ್ರೈಸ್ತರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸರ್ವ ಜನಾಂಗದವರಿಗೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಿಂತ ಹೆಚ್ಚು ತುರ್ತಿನ ಕೆಲಸ ಬೇರೆ ಯಾವುದೂ ಇಲ್ಲ. (ಮತ್ತಾ. 24:14; 28:19, 20) ಈ ಕೆಲಸವನ್ನು “ಮೊದಲು” ಅಂದರೆ ಅಂತ್ಯ ಬರುವ ಮುಂಚೆ ಮಾಡಲೇಬೇಕೆಂಬ ಯೇಸುವಿನ ಮಾತುಗಳನ್ನು ಶಿಷ್ಯ ಮಾರ್ಕನು ಉಲ್ಲೇಖಿಸಿ ಬರೆದನು. (ಮಾರ್ಕ 13:10) ನಾವದನ್ನು ‘ಮೊದಲು’ ಮಾಡಬೇಕಾದದ್ದು ಸೂಕ್ತವೇ. ಏಕೆಂದರೆ ಯೇಸು ಹೇಳಿದ್ದು: “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ.” ಕೊಯ್ಲು ನಮಗಾಗಿ ಕಾಯಲಾರದು. ಕೊಯ್ಲಿನ ಕಾಲ ಮುಗಿಯುವುದರೊಳಗೆ ನಾವು ಅದನ್ನು ಒಟ್ಟುಗೂಡಿಸಲೇಬೇಕು.—ಮತ್ತಾ. 9:37.

3. ತುರ್ತಿನಿಂದ ಸಾರುವ ಅಗತ್ಯಕ್ಕೆ ಅನೇಕರು ಹೇಗೆ ಪ್ರತಿಕ್ರಿಯಿಸಿದ್ದಾರೆ?

3 ಸಾರುವ ಕೆಲಸವು ನಮಗೆ ಬಹಳ ಮಹತ್ವದ್ದಾದ ಕಾರಣ ನಮ್ಮಿಂದಾದಷ್ಟು ಹೆಚ್ಚಿನ ಸಮಯ, ಶಕ್ತಿ, ಗಮನವನ್ನು ಅದಕ್ಕೆ ಕೊಡುವುದು ಅತ್ಯಾವಶ್ಯಕ. ಅನೇಕರು ಅದನ್ನೇ ಮಾಡುತ್ತಿರುವುದು ಪ್ರಶಂಸಾರ್ಹ. ಕೆಲವರು ತಮ್ಮ ಕೆಲಸಕಾರ್ಯಗಳನ್ನು ಸರಳೀಕರಿಸಿಕೊಂಡು ಪಯನೀಯರರು, ಮಿಷನೆರಿಗಳು, ಬೆತೆಲಿಗರಾಗಿ ಪೂರ್ಣ ಸಮಯದ ಸೇವೆಮಾಡುತ್ತಿದ್ದಾರೆ. ಅವರದ್ದು ಅತಿ ಕಾರ್ಯನಿರತ ಜೀವನ. ಅವರು ಅದಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ ಮತ್ತು ಅನೇಕ ಸವಾಲುಗಳನ್ನೂ ಅವರಿಗೆ ಎದುರಿಸಲಿಕ್ಕಿದೆ. ಆದರೂ ಯೆಹೋವನು ಅವರನ್ನು ಹೇರಳವಾಗಿ ಆಶೀರ್ವದಿಸಿದ್ದಾನೆ. ಅವರಿಗಾಗಿ ನಾವು ಆನಂದಿತರು. (ಲೂಕ 18:28-30 ಓದಿ.) ಇತರರು ಪೂರ್ಣ ಸಮಯದ ಸೇವಕರಾಗಲು ಶಕ್ತರಾಗದಿದ್ದರೂ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಈ ಜೀವರಕ್ಷಕ ಕೆಲಸಕ್ಕಾಗಿ ಮೀಸಲಾಗಿಡುತ್ತಾರೆ. ಅದರಲ್ಲಿ ನಮ್ಮ ಮಕ್ಕಳು ರಕ್ಷಣೆ ಹೊಂದುವಂತೆ ಸಹಾಯಮಾಡುವುದು ಸಹ ಸೇರಿದೆ.—ಧರ್ಮೋ. 6:6, 7.

4. ಕೆಲವರು ತುರ್ತುಪ್ರಜ್ಞೆಯನ್ನು ಕಳಕೊಳ್ಳಬಹುದು ಏಕೆ?

4 ಆರಂಭದಲ್ಲಿ ನಾವು ನೋಡಿದಂತೆ ತುರ್ತುಪ್ರಜ್ಞೆಯಲ್ಲಿ ಸಾಮಾನ್ಯವಾಗಿ ಸೀಮಿತ ಸಮಯ, ನಿಗದಿತ ಸಮಯ ಹಾಗೂ ಆ ಸಮಯಕ್ಕೊಂದು ಅಂತ್ಯ ಇರುತ್ತದೆ. ನಾವೀಗ ಅಂತ್ಯ ಕಾಲದಲ್ಲಿ ಜೀವಿಸುತ್ತಿದ್ದೇವೆ. ಇದನ್ನು ಸಾಬೀತು ಮಾಡಲು ಬೈಬಲಾಧರಿತವಾದ ಹಾಗೂ ಐತಿಹಾಸಿಕವಾದ ಹೇರಳ ಪುರಾವೆಗಳು ನಮಗಿವೆ. (ಮತ್ತಾ. 24:3, 33; 2 ತಿಮೊ. 3:1-5) ಆದರೂ ಅಂತ್ಯವು ಬರುವ ಸರಿಯಾದ ಸಮಯ ಯಾರೊಬ್ಬರಿಗೂ ತಿಳಿದಿಲ್ಲ. ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯನ್ನು’ ಕೊಡುವಾಗ ಯೇಸು ನಿರ್ದಿಷ್ಟವಾಗಿ ಹೇಳಿದ್ದು: “ಆ ದಿನ ಮತ್ತು ಗಳಿಗೆಯ ವಿಷಯವಾಗಿ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ.” (ಮತ್ತಾ. 24:36) ವಿಷಯವು ಹಾಗಿರಲಾಗಿ ದೀರ್ಘ ಸಮಯದಿಂದ ಸೇವೆಮಾಡುತ್ತಿರುವ ಕೆಲವರಿಗೆ ವರ್ಷ ವರ್ಷವು ಸಂದಂತೆ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾದೀತು. (ಜ್ಞಾನೋ. 13:12) ಕೆಲವೊಮ್ಮೆ ನಿಮಗೂ ಹಾಗನಿಸುತ್ತದೋ? ಯೆಹೋವನು ಮತ್ತು ಯೇಸು ಕ್ರಿಸ್ತನು ನಾವಿಂದು ಮಾಡುವಂತೆ ಬಯಸುವ ಕೆಲಸಕ್ಕಾಗಿ ನಾವು ತುರ್ತುಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಹಾಗೂ ಕಾಪಾಡಿಕೊಳ್ಳಲು ಯಾವುದು ನೆರವಾಗುತ್ತದೆ?

ನಮ್ಮ ಆದರ್ಶನಾದ ಯೇಸುವನ್ನು ಪರಿಗಣಿಸಿ

5. ಶುಶ್ರೂಷೆಯ ಸಂಬಂಧದಲ್ಲಿ ಯೇಸು ತುರ್ತುಪ್ರಜ್ಞೆಯನ್ನು ತೋರಿಸಿದ್ದು ಹೇಗೆ?

5 ದೇವರ ಸೇವೆಯನ್ನು ತುರ್ತಿನಿಂದ ಮಾಡಿದವರೆಲ್ಲರಲ್ಲಿ ಯೇಸು ಕ್ರಿಸ್ತನದ್ದು ಅಗ್ರಗಣ್ಯ ಮಾದರಿ. ಅವನ ತುರ್ತುಪ್ರಜ್ಞೆಗೆ ಒಂದು ಕಾರಣವೇನೆಂದರೆ ಕೇವಲ ಮೂರುವರೆ ವರ್ಷಗಳ ಅವಧಿಯಲ್ಲಿ ಅವನಿಗೆ ಬಹಳಷ್ಟನ್ನು ಮಾಡಲಿಕ್ಕಿತ್ತು. ಆದರೂ ಸತ್ಯಾರಾಧನೆಗಾಗಿ ಬೇರೆ ಯಾರೂ ಎಂದೂ ಮಾಡಿದ್ದಕ್ಕಿಂತ ಹೆಚ್ಚನ್ನು ಯೇಸು ಮಾಡಿಮುಗಿಸಿದನು. ಅವನು ತನ್ನ ತಂದೆಯ ಹೆಸರನ್ನು, ಉದ್ದೇಶವನ್ನು ತಿಳಿಯಪಡಿಸಿದನು. ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು, ಧಾರ್ಮಿಕ ಮುಖಂಡರ ಕಪಟತನ, ಸುಳ್ಳು ಬೋಧನೆಗಳನ್ನು ಬಯಲುಪಡಿಸಿದನು ಹಾಗೂ ಮರಣದ ತನಕವೂ ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಿದನು. ಯೇಸು ದೇಶದಲ್ಲೆಲ್ಲಾ ಸಂಚರಿಸಿ ಜನರಿಗೆ ಬೋಧಿಸುತ್ತಾ, ನೆರವಾಗುತ್ತಾ, ವಾಸಿಮಾಡುತ್ತಾ ನಿಜವಾಗಿ ತನ್ನನ್ನೇ ಸೇವೆಗೆ ಅರ್ಪಿಸಿಕೊಂಡನು. (ಮತ್ತಾ. 9:35) ಅಷ್ಟು ಅಲ್ಪಾವಧಿಯಲ್ಲಿ ಅಷ್ಟೊಂದು ಹೆಚ್ಚು ಕೆಲಸವನ್ನು ಯಾರೂ ಎಂದೂ ಮಾಡಿಮುಗಿಸಿಲ್ಲ. ಯೇಸು ತನ್ನಿಂದ ಸಾಧ್ಯವಾದಷ್ಟು ಹೆಚ್ಚು ಕೆಲಸವನ್ನು ಮಾಡಲು ಶ್ರಮಿಸಿದನು.—ಯೋಹಾ. 18:37.

6. ಯೇಸುವಿಗೆ ತನ್ನ ಜೀವನದಲ್ಲಿ ಯಾವುದು ಮುಖ್ಯವಾಗಿತ್ತು?

6 ತನ್ನ ಶುಶ್ರೂಷೆಯ ಅವಧಿಯಲ್ಲೆಲ್ಲಾ ಅವಿಶ್ರಾಂತವಾಗಿ ದುಡಿಯಲು ಯೇಸುವನ್ನು ಪ್ರೇರಿಸಿದ್ದು ಯಾವುದು? ಯೆಹೋವನ ಕಾಲತಖ್ತೆಗನುಸಾರ ತನ್ನ ಕೆಲಸಕ್ಕೆ ಎಷ್ಟು ಸಮಯವಿದೆಯೆಂದು ದಾನಿಯೇಲನ ಪ್ರವಾದನೆಯಿಂದ ಯೇಸುವಿಗೆ ತಿಳಿದಿರಸಾಧ್ಯವಿತ್ತು. (ದಾನಿ. 9:27) ಹೀಗೆ ಅವನ ಭೂಶುಶ್ರೂಷೆಯ ಸಮಯವು “ಅರ್ಧ ವಾರ” ಅಥವಾ ಮೂರೂವರೆ ವರ್ಷಗಳ ನಂತರ ಕೊನೆಗೊಳ್ಳಲಿತ್ತು. ಕ್ರಿ.ಶ. 33ರಲ್ಲಿ ಯೆರೂಸಲೇಮನ್ನು ವಿಜಯೋತ್ಸವದಿಂದ ಪ್ರವೇಶಿಸಿದ ನಂತರ ಸ್ವಲ್ಪದರಲ್ಲೇ ಯೇಸು ಅಂದದ್ದು: “ಮನುಷ್ಯಕುಮಾರನು ಮಹಿಮೆಗೇರಿಸಲ್ಪಡುವ ಗಳಿಗೆ ಬಂದಿದೆ.” (ಯೋಹಾ. 12:23) ತನ್ನ ಮರಣವು ಸಮೀಪಿಸುತ್ತಿದೆ ಎಂದು ತಿಳಿದಿದ್ದರೂ ಅವನು ತನ್ನ ಬದುಕಿಡೀ ಅದರ ಕುರಿತೇ ಯೋಚಿಸುತ್ತಾ ಇರಲಿಲ್ಲ. ಅವನು ಕಷ್ಟಪಟ್ಟು ದುಡಿದದ್ದು ಮುಖ್ಯವಾಗಿ ಆ ಕಾರಣಕ್ಕಾಗಿಯೂ ಅಲ್ಲ. ಬದಲಾಗಿ ಪ್ರತಿಯೊಂದು ಅವಕಾಶವನ್ನು ತನ್ನ ತಂದೆಯ ಚಿತ್ತವನ್ನು ಮಾಡಲು ಮತ್ತು ಜೊತೆ ಮಾನವರಿಗೆ ಪ್ರೀತಿಯನ್ನು ತೋರಿಸಲು ಅವನು ಮುಖ್ಯವಾಗಿ ಬಳಸಿದನು. ಆ ಪ್ರೀತಿಯೇ ಶಿಷ್ಯರನ್ನು ಒಟ್ಟುಗೂಡಿಸಿ ತರಬೇತುಗೊಳಿಸಲು ಹಾಗೂ ಸಾರಲಿಕ್ಕಾಗಿ ಕಳುಹಿಸಲು ಅವನನ್ನು ಪ್ರೇರಿಸಿತು. ಅವನು ಹಾಗೆ ಮಾಡಿದ್ದು ತಾನು ಆರಂಭಿಸಿದ ಕೆಲಸವನ್ನು ಅವರು ಮುಂದುವರಿಸಲು ಶಕ್ತರಾಗಲಿಕ್ಕಾಗಿ ಮತ್ತು ತಾನು ಮಾಡಿದ್ದಕ್ಕಿಂತಲೂ ಹೆಚ್ಚು ಮಹತ್ತಾದ ಕ್ರಿಯೆಗಳನ್ನು ಅವರು ಪೂರೈಸಲಿಕ್ಕಾಗಿಯೇ.—ಯೋಹಾನ 14:12 ಓದಿ.

7, 8. ಯೇಸು ದೇವಾಲಯವನ್ನು ಶುದ್ಧೀಕರಿಸಿದಾಗ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು? ಯೇಸು ಆ ರೀತಿ ಕ್ರಿಯೆಗೈದದ್ದೇಕೆ?

7 ಯೇಸುವಿನ ಜೀವನದಲ್ಲಾದ ಒಂದು ಘಟನೆಯು ಅವನಿಗೆ ಎಂಥಾ ಹುರುಪಿತ್ತೆಂಬುದಕ್ಕೆ ಬಲವಾದ ಪುರಾವೆ ಕೊಟ್ಟಿತು. ಅದು ಯೇಸುವಿನ ಶುಶ್ರೂಷೆಯ ಆರಂಭದಲ್ಲಾಗಿತ್ತು ಅಂದರೆ ಕ್ರಿ.ಶ. 30ರ ಪಸ್ಕ ಹಬ್ಬದ ಸಮಯದಲ್ಲಿ. ಯೇಸು ಮತ್ತು ಅವನ ಶಿಷ್ಯರು ಯೆರೂಸಲೇಮಿನ ದೇವಾಲಯಕ್ಕೆ ಬಂದಿದ್ದರು. ಅವರು ಅಲ್ಲಿ “ಜಾನುವಾರು, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವವರನ್ನೂ ಹಣವಿನಿಮಯಗಾರರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿರುವುದನ್ನೂ” ಕಂಡರು. ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅದು ಅವನ ಶಿಷ್ಯರ ಮೇಲೆ ಯಾವ ಪರಿಣಾಮ ಬೀರಿತು?—ಯೋಹಾನ 2:13-17 ಓದಿ.

8 ಆ ಸಂದರ್ಭದಲ್ಲಿ ಯೇಸು ಮಾಡಿದ ಮತ್ತು ಹೇಳಿದ ವಿಷಯಗಳು, “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ” ಎಂಬ ದಾವೀದನ ಕೀರ್ತನೆಯೊಂದರ ಪ್ರವಾದನಾ ಮಾತುಗಳನ್ನು ಶಿಷ್ಯರ ಮನಸ್ಸಿಗೆ ತಂದವು. (ಕೀರ್ತ. 69:9) ಏಕೆ? ಏಕೆಂದರೆ ಅಲ್ಲಿ ಯೇಸು ಮಾಡಿದ ವಿಷಯವು ಅವನ ಜೀವವನ್ನು ಬಹುದೊಡ್ಡ ಅಪಾಯಕ್ಕೊಡ್ಡಿತ್ತು. ಎಷ್ಟೆಂದರೂ ಅಲ್ಲಿ ನಡೆಯುತ್ತಿದ್ದ ಹಣದೋಚುವ ಕುಟಿಲ ವ್ಯಾಪಾರದ ಹಿಂದಿದ್ದವರು ಆ ಆಲಯದ ಅಧಿಕಾರಿಗಳಾದ ಯಾಜಕರು, ಫರಿಸಾಯರು, ಮತ್ತಿತರರೇ. ಅವರ ವ್ಯಾಪಾರದ ಕುಟಿಲತನವನ್ನು ಬಯಲುಪಡಿಸಿ ತಡೆಯಲಿಕ್ಕಾಗಿ ಆಗಿನ ಧಾರ್ಮಿಕ ಮುಖಂಡರ ವಿರೋಧವನ್ನೇ ಯೇಸು ತಂದುಕೊಂಡನು. ಶಿಷ್ಯರು ಆ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ದೇವರ “ಆಲಯಾಭಿಮಾನವು” ಅಂದರೆ ಸತ್ಯಾರಾಧನೆಗಾಗಿ ಅವನಿಗಿದ್ದ ಹುರುಪು ಅಲ್ಲಿ ಸ್ಪಷ್ಟವಾಗಿ ತೋರಿಬಂತು. ಹಾಗಾದರೆ ಹುರುಪು ಅಂದರೇನು? ಅದು ತುರ್ತಿಗಿಂತ ಬೇರೆಯೋ?

ತುರ್ತಿಗೆ ಹೋಲಿಕೆಯಾಗಿ ಹುರುಪು

9. ಹುರುಪನ್ನು ಹೇಗೆ ವರ್ಣಿಸಬಹುದು?

9 ಒಂದು ಶಬ್ದಕೋಶವು ಹುರುಪನ್ನು ಹೀಗೆ ಅರ್ಥವಿವರಿಸುತ್ತದೆ: “ಒಂದು ವಿಷಯದ ಕಡೆಗೆ ಒಬ್ಬನಿಗಿರುವ ಉತ್ಸುಕತೆ ಮತ್ತು ತೀವ್ರಾಸಕ್ತಿಯೇ ಹುರುಪಾಗಿದೆ.” ಇದೇ ಶಬ್ದಕೋಶ ಹುರುಪಿಗೆ ಉದ್ವೇಗ, ಕಟ್ಟಾಸಕ್ತಿ, ಭಾವೋದ್ರೇಕ, ಹುಮ್ಮಸ್ಸು ಎಂಬ ಸಮಾನಾರ್ಥಕ ಪದಗಳನ್ನು ಕೊಡುತ್ತದೆ. ಈ ಎಲ್ಲ ಪದಗಳಿಂದಲೂ ಯೇಸುವಿನ ಶುಶ್ರೂಷೆಯನ್ನು ವರ್ಣಿಸಸಾಧ್ಯ ನಿಶ್ಚಯ. ಆದುದರಿಂದ ಕೀರ್ತನೆ 69:9ನ್ನು ಟುಡೇಸ್‌ ಇಂಗ್ಲಿಷ್‌ ವರ್ಷನ್‌ ಹೀಗೆ ಭಾಷಾಂತರಿಸುತ್ತದೆ: “ನಿನ್ನ ಆಲಯಕ್ಕಾಗಿ ನನ್ನಲ್ಲಿರುವ ಧರ್ಮನಿಷ್ಠೆಯು ಬೆಂಕಿಯಂತೆ ನನ್ನಲ್ಲಿ ಉರಿಯುತ್ತದೆ.” ಕುತೂಹಲಕರವಾಗಿ ಕೆಲವು ಪೌರಾತ್ಯ ಭಾಷೆಗಳಲ್ಲಿ ಹುರುಪನ್ನು ಎರಡು ಪದಗಳಲ್ಲಿ ವಿವರಿಸಲಾಗಿದ್ದು, ಅವುಗಳ ಅಕ್ಷರಾರ್ಥವು “ಬಿಸಿ-ಹೃದಯ” ಎಂದಾಗಿದೆ. ಅದು ಹೃದಯವು ದಹಿಸುತ್ತಿದೆಯೋ ಎಂಬರ್ಥದಲ್ಲಿದೆ. ಆದ್ದರಿಂದಲೇ ಯೇಸು ಆಲಯದಲ್ಲಿ ಮಾಡಿದ ವಿಷಯವನ್ನು ಕಂಡಾಗ ಶಿಷ್ಯರು ದಾವೀದನ ಮಾತನ್ನು ನೆನಪಿಸಿಕೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಯೇಸುವಿನ ಹೃದಯವನ್ನು ಬೆಂಕಿಯಿಂದ ದಹಿಸಿತೋ ಎಂಬಂತೆ ಮಾಡಿದ್ದು ಹಾಗೂ ಆ ರೀತಿ ಕ್ರಿಯೆಗೈಯುವಂತೆ ಪ್ರಚೋದಿಸಿದ್ದು ಯಾವುದು?

10. ಬೈಬಲಿನಲ್ಲಿ ಬಳಸಲಾಗಿರುವ ‘ಅಭಿಮಾನ’ ಅಥವಾ ಹುರುಪು ಎಂಬ ಪದದ ಅರ್ಥವೇನು?

10 ದಾವೀದನ ಕೀರ್ತನೆಯಲ್ಲಿರುವ ‘ಅಭಿಮಾನ’ ಅಂದರೆ ಹುರುಪು ಎಂದು ಭಾಷಾಂತರಿಸಲಾಗಿರುವ ಹೀಬ್ರು ಪದವನ್ನು ನೂತನ ಲೋಕ ಭಾಷಾಂತರವು ಕೆಲವೊಮ್ಮೆ ‘ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುವುದು’ ಎಂದು ಭಾಷಾಂತರಿಸಿದೆ. ಇದರ ಕುರಿತು ಒಂದು ಬೈಬಲ್‌ ಶಬ್ದಕೋಶ ಹೇಳುವುದು: “ವೈವಾಹಿಕ ಸಂಬಂಧದಲ್ಲಿ ಇದನ್ನು ಅನೇಕಾವರ್ತಿ ಬಳಸಲಾಗಿದೆ. . . . ಪತಿಪತ್ನಿಯರು ಹೇಗೆ ತಾವು ಒಬ್ಬರಿಗೊಬ್ಬರು ಮಾತ್ರ ಸೇರಿದವರೆಂಬ ಪೂರ್ಣ ಹಕ್ಕನ್ನು ಸಾಧಿಸುತ್ತಾರೋ ಹಾಗೆ ದೇವರು ತನಗೆ ಮೀಸಲಾದ ಭಕ್ತರ ಮೇಲೆ ತನಗಿರುವ ಸಂಪೂರ್ಣ ಹಕ್ಕನ್ನು ಕಂಠೋಕ್ತವಾಗಿ ಕೇಳುತ್ತಾನೆ ಮತ್ತು ಸಮರ್ಥಿಸುತ್ತಾನೆ.” (ಮಾರ್ಕ 12:28-30; ಲೂಕ 4:8) ಹೀಗೆ ಬೈಬಲಿನ ಅರ್ಥದಲ್ಲಿ ಹುರುಪು ಎಂಬ ಪದಕ್ಕೆ, ಅನೇಕ ಕ್ರೀಡಾಭಿಮಾನಿಗಳು ತಮ್ಮ ಅಚ್ಚುಮೆಚ್ಚಿನ ಕ್ರೀಡೆಗಾಗಿ ತೋರಿಸುವಂಥ ಕಟ್ಟಾಸಕ್ತಿ ಅಥವಾ ಹುಮ್ಮಸ್ಸು ಎಂಬ ಅರ್ಥವಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚಿನ ಅರ್ಥವಿದೆ. ದಾವೀದನ ಕೀರ್ತನೆಯಲ್ಲಿ ತಿಳಿಸಲಾದ ಅಭಿಮಾನ ಅಥವಾ ಹುರುಪಿನ ಅರ್ಥ ಪ್ರತಿಸ್ಪರ್ಧೆ, ನಿಂದೆಯನ್ನು ಸಹಿಸದಿರುವುದು ಮತ್ತು ಒಳ್ಳೇ ಹೆಸರಿಗೆ ತಗಲಿರುವ ಅಪಮಾನವನ್ನು ತೆಗೆದುಹಾಕಿ ಆ ಹೆಸರನ್ನು ಉಳಿಸಲು ಇರುವ ಉತ್ಕಟ ಇಚ್ಛೆಯಾಗಿದೆ.

11. ಹುರುಪಿನಿಂದ ಶ್ರಮಿಸುವಂತೆ ಯೇಸುವನ್ನು ಪ್ರೇರಿಸಿದ್ದು ಯಾವುದು?

11 ಯೇಸು ಆಲಯದಲ್ಲಿ ಮಾಡಿದ ವಿಷಯವನ್ನು ಕಂಡ ಶಿಷ್ಯರು ಅದನ್ನು ದಾವೀದನ ಮಾತುಗಳಿಗೆ ಜೋಡಿಸಿದ್ದು ಸರಿಯಾಗಿತ್ತು. ಯೇಸು ಶ್ರಮಪಟ್ಟು ಸೇವೆಮಾಡಿದ್ದು ಕೇವಲ ತನಗಿರುವ ಸಮಯ ಅಂತ್ಯಗೊಳ್ಳುತ್ತಿದೆ ಎಂಬ ಕಾರಣಮಾತ್ರಕ್ಕೆ ಅಲ್ಲ, ಬದಲಾಗಿ ಅವನಲ್ಲಿ ತನ್ನ ತಂದೆಯ ನಾಮಕ್ಕಾಗಿ ಮತ್ತು ಸತ್ಯಾರಾಧನೆಗಾಗಿ ಹುರುಪು ಇದ್ದದರಿಂದಲೇ. ದೇವರ ನಾಮದ ಮೇಲೆ ಹೊರಿಸಲ್ಪಟ್ಟ ನಿಂದೆ, ದೂಷಣೆಯನ್ನು ಕಂಡಾಗ ಅವನು ಸರಿಯಾದ ಹುರುಪನ್ನು ತೋರಿಸಿದನು ಮತ್ತು ಆ ಸನ್ನಿವೇಶವನ್ನು ಸರಿಪಡಿಸಲು ಕ್ರಿಯೆಗೈದನು. ದೀನಜನರು ಧಾರ್ಮಿಕ ಮುಖಂಡರಿಂದ ದಬ್ಬಾಳಿಕೆ, ಶೋಷಣೆಗೆ ಗುರಿಯಾದದ್ದನ್ನು ಕಂಡಾಗ ಅವರಿಗೆ ಉಪಶಮನ ತರುವಂತೆ ಅವನಲ್ಲಿದ್ದ ಹುರುಪು ಪ್ರಚೋದಿಸಿತು. ಹಾಗೂ ನಿರ್ದಯಿಗಳಾದ ಧಾರ್ಮಿಕ ಮುಖಂಡರನ್ನು ಬಲವಾಗಿ ಖಂಡಿಸುವಂತೆಯೂ ಪ್ರೇರಿಸಿತು.—ಮತ್ತಾ. 9:36; 23:2, 4, 27, 28, 33.

ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ

12, 13. ಇಂದು ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು (ಎ) ದೇವರ ನಾಮದ ಕುರಿತು (ಬಿ) ದೇವರ ರಾಜ್ಯದ ಕುರಿತು ಏನು ಮಾಡಿದ್ದಾರೆ?

12 ಇಂದು ನಮ್ಮ ಸುತ್ತಮುತ್ತಲಿರುವ ಧಾರ್ಮಿಕ ಸನ್ನಿವೇಶವು ಯೇಸುವಿನ ದಿನಗಳಲ್ಲಿದ್ದಂತೆಯೇ ಇದೆ, ಅದಕ್ಕಿಂತಲೂ ಹೆಚ್ಚು ಕೆಟ್ಟಿದೆ. ಉದಾಹರಣೆಗೆ ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ ಪ್ರಪ್ರಥಮ ವಿಷಯವೇ ದೇವರ ನಾಮದ ವಿಷಯವಾಗಿತ್ತೆಂದು ನೆನಪಿಸಿಕೊಳ್ಳಿ. ಅವನಂದದ್ದು: “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” (ಮತ್ತಾ. 6:9) ಧಾರ್ಮಿಕ ಮುಖಂಡರು ಅದರಲ್ಲೂ ವಿಶೇಷವಾಗಿ ಕ್ರೈಸ್ತಪ್ರಪಂಚದ ಪಾದ್ರಿಗಳು ಜನರಿಗೆ ದೇವರ ಹೆಸರನ್ನು ಕಲಿಸುತ್ತಾರೋ? ಅಥವಾ ಆ ಹೆಸರನ್ನು ಪವಿತ್ರಮಾಡಲು, ಗೌರವಿಸಲು ಬೋಧಿಸುತ್ತಾರೋ? ಖಂಡಿತ ಇಲ್ಲ! ಬದಲಾಗಿ ತ್ರಯೈಕ್ಯ, ಮಾನವ ಆತ್ಮದ ಅಮರತ್ವ, ನರಕಾಗ್ನಿ ಮುಂತಾದ ಸುಳ್ಳು ಬೋಧನೆಗಳ ಮೂಲಕ ದೇವರು ಅರಿತುಕೊಳ್ಳಲಾಗದ ನಿಗೂಢನು, ಕ್ರೂರನು, ಹಿಂಸಾರಸಿಕನು ಕೂಡ ಆಗಿದ್ದಾನೆಂದು ತೋರಿಸುತ್ತಾರೆ. ತಮ್ಮ ನಿರ್ಲಜ್ಜಾಕೃತ್ಯಗಳಿಂದ ಮತ್ತು ಕಪಟತನದಿಂದ ದೇವರ ಮೇಲೆ ನಿಂದೆಯನ್ನು ಸಹ ಅವರು ತಂದಿದ್ದಾರೆ. (ರೋಮನ್ನರಿಗೆ 2:21-24 ಓದಿ.) ಅಷ್ಟೇ ಅಲ್ಲದೆ ದೇವರ ವೈಯಕ್ತಿಕ ಹೆಸರನ್ನು ಮರೆಮಾಡಲು, ತಮ್ಮ ಬೈಬಲ್‌ ಭಾಷಾಂತರಗಳಿಂದ ಅದನ್ನು ತೆಗೆದುಹಾಕಲು ಸಹ ತಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡಿದ್ದಾರೆ. ಹೀಗೆ ಅವರು ಜನರನ್ನು ದೇವರಿಗೆ ಆಪ್ತರಾಗುವುದರಿಂದ, ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸುವುದರಿಂದ ತಡೆದುಹಿಡಿಯುತ್ತಾರೆ.—ಯಾಕೋ. 4:7, 8.

13 ಯೇಸು ತನ್ನ ಹಿಂಬಾಲಕರಿಗೆ ದೇವರ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆಯೂ ಕಲಿಸಿದನು. ಅವನಂದದ್ದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾ. 6:10) ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಆ ಪ್ರಾರ್ಥನೆಯನ್ನು ಅನೇಕಬಾರಿ ಪುನರುಚ್ಚರಿಸುತ್ತಾರಾದರೂ ಅವರು ಜನರನ್ನು ರಾಜಕೀಯಕ್ಕೆ ಮತ್ತು ಇತರ ಮಾನವ ಸಂಘಟನೆಗಳಿಗೆ ಬೆಂಬಲ ಕೊಡುವಂತೆ ಪ್ರೋತ್ಸಾಹಿಸಿದ್ದಾರೆ. ಅಷ್ಟಲ್ಲದೆ ದೇವರ ರಾಜ್ಯವನ್ನು ಸಾರುವವರನ್ನು ಮತ್ತು ಅದರ ಕುರಿತು ಸಾಕ್ಷಿ ಕೊಡುವವರನ್ನು ಅವರು ಕಡೆಗಣಿಸುತ್ತಾರೆ. ಪರಿಣಾಮವಾಗಿ ಕ್ರೈಸ್ತರೆನಿಸಿಕೊಳ್ಳುವವರಲ್ಲಿ ಹೆಚ್ಚಿನವರು ದೇವರ ರಾಜ್ಯದ ಕುರಿತು ನಂಬುವುದಂತೂ ಬಿಡಿ ಆ ಬಗ್ಗೆ ಮಾತಾಡುವುದು ಕೂಡ ಇಲ್ಲ.

14. ಕ್ರೈಸ್ತಪ್ರಪಂಚದ ಪಾದ್ರಿಗಳು ದೇವರ ವಾಕ್ಯವನ್ನು ಹೇಗೆ ತೊರೆದುಬಿಟ್ಟಿದ್ದಾರೆ?

14 ದೇವರಿಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಸ್ಪಷ್ಟವಾಗಿ ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾ. 17:17) ತನ್ನ ಜನರಿಗೆ ಆಧ್ಯಾತ್ಮಿಕ ಆಹಾರವನ್ನು ನೀಡಲಿಕ್ಕಾಗಿ ತಾನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ನೇಮಿಸುವೆನೆಂದು ಯೇಸು ಸ್ವರ್ಗಕ್ಕೆ ಹೋಗುವ ಮುಂಚೆ ಹೇಳಿದ್ದನು. (ಮತ್ತಾ. 24:45) ದೇವರ ವಾಕ್ಯವನ್ನು ಬೋಧಿಸುವ ಮನೆವಾರ್ತೆಯವರು ತಾವೇ ಎಂದು ಕ್ರೈಸ್ತಪ್ರಪಂಚದ ಪಾದ್ರಿಗಳು ಹೇಳಿಕೊಳ್ಳುವುದಾದರೂ ಅವರು ಯಜಮಾನನು ವಹಿಸಿದ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡಿದ್ದಾರೋ? ಇಲ್ಲ. ಬೈಬಲಿನ ವಿಷಯಗಳು ಕಟ್ಟುಕಥೆಗಳಾಗಿವೆ ಅಥವಾ ಪುರಾಣಕಥೆಗಳಾಗಿವೆ ಎನ್ನುವಷ್ಟೂ ದೂರಕ್ಕೆ ಅವರು ಹೋಗಿದ್ದಾರೆ. ತಮ್ಮ ಮಂದೆಗೆ ಆಧ್ಯಾತ್ಮಿಕ ಆಹಾರವನ್ನು ಉಣಿಸಿ ಅವರಿಗೆ ಸಾಂತ್ವನವನ್ನೂ ಜ್ಞಾನವನ್ನೂ ಕೊಡುವ ಬದಲಾಗಿ ಪಾದ್ರಿಗಳು ತಮ್ಮ ಚರ್ಚ್‌ ಸದಸ್ಯರ ಕಿವಿಗಳನ್ನು ಮಾನವ ತತ್ತ್ವಜ್ಞಾನದಿಂದ ಪುಳಕಗೊಳಿಸಿದ್ದಾರೆ. ಅವರು ದೇವರ ನೈತಿಕ ಮಟ್ಟಗಳನ್ನು ತೊರೆದು ಜನರ ಮನವೊಲಿಸಲಿಕ್ಕಾಗಿ ತಮ್ಮದೇ ಆದ ಹೊಸ ನೈತಿಕತೆಯನ್ನು ಒಳತಂದಿದ್ದಾರೆ.—2 ತಿಮೊ. 4:3, 4.

15. ದೇವರ ಹೆಸರಿನಲ್ಲಿ ಪಾದ್ರಿಗಳು ಮಾಡಿರುವ ಸಂಗತಿಗಳ ವಿಷಯದಲ್ಲಿ ನಿಮಗೆ ಹೇಗನಿಸುತ್ತದೆ?

15 ಬೈಬಲಿನ ದೇವರ ಹೆಸರಿನಲ್ಲೇ ಇದೆಲ್ಲಾ ನಡೆಯುವುದನ್ನು ನೋಡುವಾಗ ಅನೇಕ ಪ್ರಾಮಾಣಿಕ ಜನರು ಆಶಾಭಂಗಗೊಂಡಿದ್ದಾರೆ, ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆಯನ್ನು ಪೂರ್ಣವಾಗಿ ಕಳಕೊಂಡಿದ್ದಾರೆ. ಅವರು ಸೈತಾನನಿಗೆ ಮತ್ತು ಅವನ ದುಷ್ಟ ಲೋಕದ ಪ್ರಭಾವಕ್ಕೆ ಬಲಿಬಿದ್ದಿದ್ದಾರೆ. ದಿನದಿನವೂ ಅಂಥ ಸಂಗತಿಗಳು ನಡೆಯುವುದನ್ನು ಕಾಣುವಾಗ ಹಾಗೂ ಕೇಳುವಾಗ ನಿಮಗೆ ಹೇಗನಿಸುತ್ತದೆ? ದೇವರ ನಾಮದ ಮೇಲೆ ಹೊರಿಸಲಾದ ನಿಂದೆಯನ್ನೂ ದೂಷಣೆಯನ್ನೂ ಕಾಣುವಾಗ ಯೆಹೋವನ ಸೇವಕರಾದ ನೀವು ಅದನ್ನು ಸರಿಪಡಿಸಲು ನಿಮ್ಮಿಂದ ಆಗುವುದೆಲ್ಲವನ್ನೂ ಮಾಡುವುದಿಲ್ಲವೇ? ಯಥಾರ್ಥರೂ ಪ್ರಾಮಾಣಿಕರೂ ಆದ ಜನರು ಮೋಸ, ಶೋಷಣೆಗೆ ಒಳಗಾಗುವುದನ್ನು ಕಾಣುವಾಗ ದಬ್ಬಲ್ಪಟ್ಟ ಅವರಿಗೆ ಸಾಂತ್ವನ ಕೊಡಬೇಕೆಂದು ನಿಮಗೆ ಅನಿಸುವುದಿಲ್ಲವೇ? ತನ್ನ ದಿನಗಳಲ್ಲಿದ್ದ ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಹೋಗಿರುವುದನ್ನು’ ಕಂಡಾಗ ಯೇಸು ಕನಿಕರಪಟ್ಟದ್ದು ಮಾತ್ರವಲ್ಲ, “ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.” (ಮತ್ತಾ. 9:36; ಮಾರ್ಕ 6:34) ಹೌದು, ಯೇಸುವಿನಂತೆ ಸತ್ಯಾರಾಧನೆಗಾಗಿ ಹುರುಪುಳ್ಳವರಾಗಿರಲು ನಮಗೆ ಸಕಾರಣಗಳಿವೆ.

16, 17. (ಎ) ಶುಶ್ರೂಷೆಯಲ್ಲಿ ಶ್ರಮಿಸಲು ನಮ್ಮನ್ನು ಯಾವುದು ಪ್ರಚೋದಿಸಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿರುವೆವು?

16 ನಾವು ನಮ್ಮ ಶುಶ್ರೂಷೆಯನ್ನು ಹುರುಪಿನಿಂದ ಮಾಡುವಾಗ ಅಪೊಸ್ತಲ ಪೌಲನು 1 ತಿಮೊಥೆಯ 2:3, 4ರಲ್ಲಿ ಹೇಳಿರುವ ಮಾತುಗಳು ವಿಶೇಷ ಅರ್ಥ ಕೊಡುತ್ತವೆ. (ಓದಿ.) ನಾವು ಶುಶ್ರೂಷೆಯಲ್ಲಿ ಶ್ರಮಪಟ್ಟು ಕೆಲಸಮಾಡುವುದು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬ ಕಾರಣದಿಂದ ಮಾತ್ರವಲ್ಲ, ಅದು ದೇವರ ಚಿತ್ತವಾಗಿದೆ ಎಂಬ ಕಾರಣದಿಂದಲೂ ಆಗಿದೆ. ಜನರು ಸತ್ಯದ ಜ್ಞಾನವನ್ನು ಪಡೆದು ಅವರು ಕೂಡ ತನ್ನನ್ನು ಆರಾಧಿಸಲು, ಸೇವಿಸಲು ಕಲಿತು, ಆಶೀರ್ವಾದವನ್ನು ಹೊಂದಬೇಕೆಂಬುದು ಆತನ ಅಪೇಕ್ಷೆ. ನಾವು ಶುಶ್ರೂಷೆಯಲ್ಲಿ ಶ್ರಮಿಸುವುದು ಮುಖ್ಯವಾಗಿ ಸಮಯ ಸೀಮಿತವೆಂಬ ಕಾರಣದಿಂದಲೂ ಅಲ್ಲ, ಬದಲಾಗಿ ದೇವರ ನಾಮವನ್ನು ಗೌರವಿಸಲು ಹಾಗೂ ಜನರು ಆತನ ಚಿತ್ತವನ್ನು ತಿಳಿಯುವಂತೆ ನೆರವಾಗಲು ನಾವು ಬಯಸುವುದರಿಂದಲೇ. ಆದ್ದರಿಂದ ಸತ್ಯಾರಾಧನೆಗಾಗಿ ನಾವು ಹುರುಪುಳ್ಳವರಾಗಿರಬೇಕು.—1 ತಿಮೊ. 4:16.

17 ಯೆಹೋವನ ಜನರಾಗಿರುವ ನಾವು ಮಾನವರಿಗಾಗಿ ಮತ್ತು ಭೂಮಿಗಾಗಿರುವ ದೇವರ ಉದ್ದೇಶದ ಸತ್ಯಜ್ಞಾನದಿಂದ ಆಶೀರ್ವದಿತರು. ಜನರು ಸಂತೋಷವನ್ನು ಪಡೆಯುವಂತೆ ಮತ್ತು ಭವಿಷ್ಯತ್ತಿಗಾಗಿ ನಿಜ ನಿರೀಕ್ಷೆಯನ್ನು ಕಂಡುಕೊಳ್ಳುವಂತೆ ನೆರವಾಗುವ ಸಾಧನಗಳು ನಮ್ಮಲ್ಲಿವೆ. ಸೈತಾನನ ದುಷ್ಟ ಲೋಕದ ಮೇಲೆ ನಾಶನವು ಬರುವಾಗ ಜನರು ಸುರಕ್ಷಿತರಾಗಿ ಉಳಿಯುವಂತೆ ನಾವು ಮಾರ್ಗವನ್ನು ತೋರಿಸಬಲ್ಲೆವು. (2 ಥೆಸ. 1:7-9) ಯೆಹೋವನ ದಿನವು ವಿಳಂಬಿಸುತ್ತಾ ಇದೆಯೆಂದು ನಾವು ನೆನಸಿ ನಿರಾಶೆ ಅಥವಾ ಆಶಾಭಂಗ ಹೊಂದುವ ಬದಲು ಸತ್ಯಾರಾಧನೆಗಾಗಿ ಹುರುಪು ತೋರಿಸುವುದಕ್ಕೆ ಇನ್ನೂ ಸಮಯವದೆ ಎಂಬುದಕ್ಕಾಗಿ ಸಂತೋಷಪಡಬೇಕು. (ಮೀಕ 7:7; ಹಬ. 2:3) ಅಂಥ ಹುರುಪನ್ನು ಬೆಳೆಸಿಕೊಳ್ಳುವುದು ಹೇಗೆ? ಇದನ್ನು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.

ವಿವರಿಸಬಲ್ಲಿರೋ?

• ಯೇಸು ತನ್ನ ಶುಶ್ರೂಷೆಯ ಅವಧಿಯಲ್ಲೆಲ್ಲ ಅವಿಶ್ರಾಂತವಾಗಿ ದುಡಿಯುವಂತೆ ಪ್ರಚೋದಿಸಿದ್ದು ಯಾವುದು?

• ‘ಅಭಿಮಾನ’ ಅಥವಾ ಹುರುಪು ಎಂಬ ಪದಕ್ಕೆ ಬೈಬಲ್‌ ಯಾವ ಅರ್ಥ ಕೊಡುತ್ತದೆ?

• ನಾವಿಂದು ಕಾಣುವ ಯಾವ ವಿಷಯಗಳು ಸತ್ಯಾರಾಧನೆಗಾಗಿ ಹುರುಪಿನಿಂದ ಇರುವಂತೆ ನಮ್ಮನ್ನು ಪ್ರಚೋದಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಯೇಸು ತನ್ನ ತಂದೆಯ ಚಿತ್ತವನ್ನು ಮಾಡಲು, ಜೊತೆಮಾನವರಿಗೆ ಪ್ರೀತಿ ತೋರಿಸಲು ಹೆಚ್ಚಿನ ಗಮನಕೊಟ್ಟನು

[ಪುಟ 10ರಲ್ಲಿರುವ ಚಿತ್ರ]

ಸತ್ಯಾರಾಧನೆಗಾಗಿ ಹುರುಪಿನಿಂದಿರಲು ನಮಗೆ ಸಕಾರಣಗಳಿವೆ