ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ”

“ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ”

“ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ”

“ಇಗೋ, ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ ಆಗಿದೆ. ಇಗೋ, ರಕ್ಷಣೆಯ ದಿನವೂ ಇದೇ ಆಗಿದೆ.”—2 ಕೊರಿಂ. 6:2.

1. ನಿರ್ದಿಷ್ಟ ಸಮಯದಲ್ಲಿ ಏನು ಮಾಡಬೇಕೆಂದು ನಾವು ವಿವೇಚಿಸಿ ನೋಡುವುದು ಏಕೆ ಅಗತ್ಯ?

“ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂ. 3:1) ಇಲ್ಲಿ ಸೊಲೊಮೋನನು ಪ್ರತಿಫಲದಾಯಕ ಕೆಲಸಗಳಿಗೆ ಅತಿ ಸೂಕ್ತ ಸಮಯವನ್ನು ವಿವೇಚಿಸಿ ತಿಳಿಯುವ ಮಹತ್ವದ ಕುರಿತು ಬರೆಯುತ್ತಿದ್ದನು. ಬೇಸಾಯ, ಪ್ರಯಾಣ, ವ್ಯಾಪಾರ, ಇತರರೊಂದಿಗಿನ ಸಂವಾದವೇ ಮುಂತಾದವು ಆ ಕೆಲಸಗಳಲ್ಲಿ ಕೆಲವು. ಹಾಗಿದ್ದರೂ ಯಾವುದೇ ನಿರ್ದಿಷ್ಟ ಸಮಯದಲ್ಲಿ ನಾವು ಮಾಡಬೇಕಾದ ಅತ್ಯಂತ ಮಹತ್ವದ ಕೆಲಸ ಯಾವುದು ಎಂಬುದನ್ನೂ ನಾವು ವಿವೇಚಿಸಿ ನೋಡುವ ಅಗತ್ಯವಿದೆ. ಇನ್ನೊಂದು ಮಾತಿನಲ್ಲಿ, ನಮ್ಮ ಆದ್ಯತೆಗಳು ಯಾವ್ಯಾವುದೆಂದು ನಮಗೆ ತಿಳಿದಿರಲೇಬೇಕು.

2. ಯೇಸು ಸಾರುತ್ತಿದ್ದಾಗ ತನ್ನ ಸಮಯದ ಮಹತ್ವವನ್ನು ಚೆನ್ನಾಗಿ ಅರಿತಿದ್ದನೆಂದು ನಮಗೆ ಹೇಗೆ ಗೊತ್ತು?

2 ಯೇಸು ಭೂಮಿಯಲ್ಲಿದ್ದಾಗ ತಾನು ಜೀವಿಸುತ್ತಿದ್ದ ಸಮಯದ ಮಹತ್ವ ಮತ್ತು ಮಾಡಬೇಕಿದ್ದ ಕೆಲಸದ ಮಹತ್ವವನ್ನು ಚೆನ್ನಾಗಿ ಅರಿತಿದ್ದನು. ತಾನು ಯಾವುದಕ್ಕೆ ಆದ್ಯತೆ ಕೊಡಬೇಕೆಂದು ಅವನಿಗೆ ಸ್ಪಷ್ಟವಾಗಿ ತಿಳಿದಿತ್ತು. ದೀರ್ಘಕಾಲದಿಂದ ಮುನ್ನೋಡಿದ್ದ ಮೆಸ್ಸೀಯನ ಕುರಿತ ಅನೇಕ ಪ್ರವಾದನೆಗಳು ನೆರವೇರುವ ಸಮಯ ಆಗ ಬಂದಿತ್ತೆಂದು ಅವನು ಅರಿತಿದ್ದನು. (1 ಪೇತ್ರ 1:11; ಪ್ರಕ. 19:10) ಆದ್ದರಿಂದ ವಾಗ್ದತ್ತ ಮೆಸ್ಸೀಯನಾದ ತನ್ನ ಪರಿಚಯವನ್ನು ಸ್ಪಷ್ಟಗೊಳಿಸುವ ಕೆಲಸವನ್ನು ಅವನಿಗೆ ಮಾಡಲಿಕ್ಕಿತ್ತು. ರಾಜ್ಯ ಸತ್ಯಕ್ಕೆ ಕೂಲಂಕಷ ಸಾಕ್ಷಿ ನೀಡಲಿಕ್ಕಿತ್ತು ಮತ್ತು ಮುಂದೆ ರಾಜ್ಯದಲ್ಲಿ ತನ್ನೊಂದಿಗೆ ಆಳಲಿರುವ ಸಹಬಾಧ್ಯರನ್ನು ಅವನಿಗೆ ಒಟ್ಟುಗೂಡಿಸಲಿಕ್ಕಿತ್ತು. ಮಾತ್ರವಲ್ಲ ಭೂಲೋಕದ ಕಟ್ಟಕಡೆಯ ವರೆಗೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ನಿರ್ವಹಿಸಲಿದ್ದ ಕ್ರೈಸ್ತ ಸಭೆಗೆ ಅಸ್ತಿವಾರವನ್ನೂ ಹಾಕಲಿಕ್ಕಿತ್ತು.—ಮಾರ್ಕ 1:15.

3. ಯೇಸುವಿಗಿದ್ದ ಸಮಯಪ್ರಜ್ಞೆಯು ಅವನ ಕ್ರಿಯೆಗಳನ್ನು ಹೇಗೆ ಪ್ರಭಾವಿಸಿತು?

3 ಸಮಯದ ವಿಷಯದಲ್ಲಿ ಯೇಸುವಿಗಿದ್ದ ಪ್ರಜ್ಞೆಯು ಅವನ ಜೀವನದಲ್ಲಿ ಒಂದು ಧನಾತ್ಮಕ ಶಕ್ತಿಯಾಗಿದ್ದು ತನ್ನ ತಂದೆಯ ಚಿತ್ತವನ್ನು ಪೂರೈಸುವುದರಲ್ಲಿ ಹುರುಪಿನಿಂದ ಇರುವಂತೆ ಪ್ರಚೋದಿಸಿತು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಕೊಯ್ಲು ನಿಶ್ಚಯವಾಗಿಯೂ ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಲೂಕ 10:2; ಮಲಾ. 4:5, 6) ಅದಕ್ಕಾಗಿ ಯೇಸು ಮೊದಲಾಗಿ ತನ್ನ ಶಿಷ್ಯರಲ್ಲಿ 12 ಮಂದಿಯನ್ನು, ಬಳಿಕ 70 ಮಂದಿಯನ್ನು ಆರಿಸಿಕೊಂಡು ಅವರಿಗೆ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟು ಸಾರಲು ಕಳುಹಿಸಿದನು. “ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂಬ ಉತ್ತೇಜಕ ಸಂದೇಶವನ್ನು ಅವರು ಸಾರಬೇಕಿತ್ತು. ಯೇಸುವಿನ ವಿಷಯದಲ್ಲಾದರೋ ನಾವು ಓದುವುದು: “ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಉಪದೇಶ ನೀಡುವುದನ್ನು ಮುಗಿಸಿದ ಬಳಿಕ ಸುತ್ತಲಿನ ಊರುಗಳಲ್ಲಿ ಬೋಧಿಸುವುದಕ್ಕೂ ಸಾರುವುದಕ್ಕೂ ಅಲ್ಲಿಂದ ಹೊರಟನು.”—ಮತ್ತಾ. 10:5-7; 11:1; ಲೂಕ 10:1.

4. ಪೌಲನು ಯೇಸು ಕ್ರಿಸ್ತನನ್ನು ಅನುಕರಿಸಿದ್ದು ಹೇಗೆ?

4 ಯೇಸು ತನ್ನೆಲ್ಲಾ ಹಿಂಬಾಲಕರಿಗೆ ಹುರುಪು ಮತ್ತು ದೇವಭಕ್ತಿಯ ವಿಷಯದಲ್ಲಿ ಪರಿಪೂರ್ಣ ಮಾದರಿಯಾಗಿದ್ದನು. ಇದಕ್ಕೆ ಸೂಚಿಸುತ್ತಾ ಅಪೊಸ್ತಲ ಪೌಲನು ಜೊತೆವಿಶ್ವಾಸಿಗಳಿಗೆ, “ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ” ಎಂದು ಉತ್ತೇಜಿಸಿದನು. (1 ಕೊರಿಂ. 11:1) ಪೌಲನು ಕ್ರಿಸ್ತನನ್ನು ಅನುಕರಿಸಿದ್ದು ಹೇಗೆ? ಮುಖ್ಯವಾಗಿ ಸುವಾರ್ತೆಯನ್ನು ಸಾರಲು ತನ್ನ ಕೈಲಾದುದ್ದೆಲ್ಲವನ್ನೂ ಮಾಡಿದ ಮೂಲಕ. ಪೌಲನು ಸಭೆಗಳಿಗೆ ಬರೆದ ಪತ್ರಗಳಲ್ಲಿ ನಾವು ಆ ಕುರಿತು ಹೀಗೆ ಓದುತ್ತೇವೆ: “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ,” “ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ,” “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿರಿ,” “ನೀವು ಏನೇ ಮಾಡುವುದಾದರೂ ಅದನ್ನು . . . ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡುವವರಾಗಿರಿ.” (ರೋಮ. 12:11; 1 ಕೊರಿಂ. 15:58; ಕೊಲೊ. 3:23) ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಕರ್ತನಾದ ಯೇಸು ಕ್ರಿಸ್ತನಿಂದ ಕೇಳಿಸಿಕೊಂಡ ವಾಣಿಯನ್ನು ಹಾಗೂ ಶಿಷ್ಯ ಅನನೀಯನು ಅವನಿಗೆ ತಿಳಿಸಿದ್ದಿರಬಹುದಾದ ಯೇಸುವಿನ ಮಾತುಗಳನ್ನು ಪೌಲನೆಂದೂ ಮರೆತಿರಲಿಲ್ಲ. ಯೇಸು ಅಂದದ್ದು: “ಈ ಮನುಷ್ಯನು ಅನ್ಯಜನಾಂಗಗಳಿಗೂ ಅರಸರಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಯಪಡಿಸಲಿಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.”—ಅ. ಕಾ. 9:15; ರೋಮ. 1:1, 5; ಗಲಾ. 1:16.

“ವಿಶೇಷವಾಗಿ ಸ್ವೀಕೃತವಾದ ಸಮಯ”

5. ತನ್ನ ಶುಶ್ರೂಷೆಯನ್ನು ಹುರುಪಿನಿಂದ ಮಾಡಲು ಪೌಲನನ್ನು ಪ್ರಚೋದಿಸಿದ್ದು ಯಾವುದು?

5 ಅಪೊಸ್ತಲರ ಕಾರ್ಯಗಳು ಪುಸ್ತಕವನ್ನು ನಾವು ಓದುವಾಗ, ಪೌಲನು ತನ್ನ ಶುಶ್ರೂಷೆಯಲ್ಲಿ ತೋರಿಸಿದ ಧೈರ್ಯ ಮತ್ತು ಹುರುಪನ್ನು ಗಮನಿಸದಿರಲಾರೆವು. (ಅ. ಕಾ. 13:9, 10; 17:16, 17; 18:5) ತಾನು ಜೀವಿಸುತ್ತಿದ್ದ ಸಮಯದ ಮಹತ್ವವನ್ನು ಪೌಲನು ಮನಗಂಡನು. ಅವನು ಹೇಳಿದ್ದು: “ಇಗೋ, ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ ಆಗಿದೆ. ಇಗೋ, ರಕ್ಷಣೆಯ ದಿನವೂ ಇದೇ ಆಗಿದೆ.” (2 ಕೊರಿಂ. 6:2) ಹಿಂದೆ ಬ್ಯಾಬಿಲೋನ್‌ನಲ್ಲಿ ಬಂದಿವಾಸಿಗಳಾಗಿದ್ದ ಇಸ್ರಾಯೇಲ್ಯರಿಗೆ ತಮ್ಮ ಸ್ವದೇಶಕ್ಕೆ ಹಿಂದಿರುಗಲು ಕ್ರಿ.ಪೂ. 537ನೇ ವರ್ಷ ಸ್ವೀಕೃತವಾದ ಸಮಯವಾಗಿತ್ತು. (ಯೆಶಾ. 49:8, 9) ಆದರೆ ಇಲ್ಲಿ ಪೌಲನು ಯಾವುದಕ್ಕೆ ನಿರ್ದೇಶಿಸುತ್ತಿದ್ದನು? ಅದನ್ನು ತಿಳಿಯಲು ಪೂರ್ವಾಪರ ವಚನಗಳು ನಮಗೆ ನೆರವಾಗುತ್ತವೆ.

6, 7. ಇಂದಿರುವ ಅಭಿಷಿಕ್ತ ಕ್ರೈಸ್ತರಿಗೆ ಯಾವ ದೊಡ್ಡ ಗೌರವದ ಕೆಲಸ ಕೊಡಲಾಗಿದೆ? ಅಭಿಷಿಕ್ತ ಕ್ರೈಸ್ತರೊಂದಿಗೆ ಇಂದು ಬೇರೆ ಯಾರು ಕೆಲಸ ಮಾಡುತ್ತಿದ್ದಾರೆ?

6 ಪೌಲನು ತನ್ನ ಪತ್ರದ ಆರಂಭದಲ್ಲಿ ತನಗೂ ತನ್ನ ಜೊತೆ ಅಭಿಷಿಕ್ತ ಕ್ರೈಸ್ತರಿಗೂ ಕೊಡಲಾದ ದೊಡ್ಡ ಗೌರವದ ಕೆಲಸದ ಕುರಿತು ಮಾತಾಡಿದನು. (2 ಕೊರಿಂಥ 5:18-20 ಓದಿ.) ಅವರು ಒಂದು ವಿಶೇಷ ಉದ್ದೇಶಕ್ಕಾಗಿ ದೇವರಿಂದ ಕರೆಯಲ್ಪಟ್ಟರು ಎಂದು ಅವನು ವಿವರಿಸಿದನು. ಆ ಉದ್ದೇಶ ಯಾವುದೆಂದರೆ “ಸಮಾಧಾನ ಸಂಬಂಧದ ಶುಶ್ರೂಷೆಯನ್ನು” ನಡೆಸುವುದು ಅಂದರೆ “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ” ಎಂದು ಜನರನ್ನು ಬೇಡಿಕೊಳ್ಳುವುದು. ಇದು ದೇವರೊಂದಿಗೆ ಜನರು ಸ್ನೇಹಸಂಬಂಧ ಅಥವಾ ಶಾಂತಿಸಂಬಂಧವನ್ನು ಪುನಃಸ್ಥಾಪಿಸಿಕೊಳ್ಳುವ ಅರ್ಥದಲ್ಲಿತ್ತು.

7 ಏದೆನ್‌ ತೋಟದಲ್ಲಾದ ದಂಗೆಯಂದಿನಿಂದ ಎಲ್ಲ ಮಾನವರು ಯೆಹೋವನಿಂದ ವಿಮುಖರೂ ದೂರತೊಲಗಿದವರೂ ಆಗಿದ್ದಾರೆ. (ರೋಮ. 3:10, 23) ಆ ವಿಮುಖತೆಯು ಸಾಮಾನ್ಯವಾಗಿ ಮಾನವರನ್ನು ಆಧ್ಯಾತ್ಮಿಕ ಅಂಧಕಾರದಲ್ಲಿ ಮುಳುಗಿಸಿ ಕಷ್ಟಾನುಭವ ಮತ್ತು ಮರಣಕ್ಕೆ ನಡೆಸಿದೆ. “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ ಎಂಬುದು ನಮಗೆ ತಿಳಿದಿದೆ” ಎಂದು ಬರೆದನು ಪೌಲನು. (ರೋಮ. 8:22) ಆದರೆ ಜನರು ತನ್ನ ಬಳಿ ಹಿಂತಿರುಗುವಂತೆ ಅಥವಾ ಸಮಾಧಾನ ಸಂಬಂಧಕ್ಕೆ ಬರುವಂತೆ ಉತ್ತೇಜಿಸಲು, ಕಾರ್ಯತಃ ‘ಬೇಡಿಕೊಳ್ಳಲು’ ದೇವರು ಹೆಜ್ಜೆಗಳನ್ನು ತೆಗೆದುಕೊಂಡಿದ್ದಾನೆ. ಪೌಲನಿಗೆ ಮತ್ತು ಅವನ ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಆಗ ವಹಿಸಲಾಗಿದ್ದ ಶುಶ್ರೂಷೆಯು ಅದೇ ಆಗಿತ್ತು. ಯೇಸುವಿನಲ್ಲಿ ನಂಬಿಕೆಯಿಟ್ಟ ಜನರಿಗೆ ಆ “ಸ್ವೀಕೃತವಾದ ಸಮಯವು” ‘ರಕ್ಷಣೆಯ ದಿನವಾಗಿ’ ಇರಸಾಧ್ಯವಿತ್ತು. ಇಂದು ಎಲ್ಲ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರಾದ ‘ಬೇರೆ ಕುರಿಗಳು’ ಜೊತೆಯಾಗಿ ಕೆಲಸಮಾಡುತ್ತಾ ಈ ‘ಸ್ವೀಕೃತವಾದ ಸಮಯದಿಂದ’ ಪ್ರಯೋಜನ ಹೊಂದುವಂತೆ ಜನರನ್ನು ಆಮಂತ್ರಿಸುತ್ತಾ ಇದ್ದಾರೆ.—ಯೋಹಾ. 10:16.

8. ಸಮಾಧಾನ ಸಂಬಂಧಕ್ಕೆ ಬರುವ ಕರೆಯನ್ನು ತುಂಬ ಗಮನಾರ್ಹವಾಗಿ ಮಾಡುವುದು ಯಾವುದು?

8 ಸಮಾಧಾನ ಸಂಬಂಧಕ್ಕೆ ಬರಲು ಕೊಡಲಾದ ಕರೆಯನ್ನು ತುಂಬ ಗಮನಾರ್ಹವಾಗಿ ಮಾಡುವುದು ಯಾವುದು? ಯಾವುದೆಂದರೆ ಏದೆನ್‌ನ ದಂಗೆಯಿಂದಾದ ಒಡಕಿಗೆ ಮನುಷ್ಯನೇ ಕಾರಣನಾಗಿದ್ದರೂ ದೇವರು ತಾನೇ ಆ ಒಡಕನ್ನು ಸರಿಪಡಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಂಡದ್ದೇ. (1 ಯೋಹಾ. 4:10, 19) ದೇವರು ಮಾಡಿದ್ದೇನು? ಪೌಲನು ಉತ್ತರಿಸಿದ್ದು: “ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ತೆಗೆದುಕೊಳ್ಳದೆ, ಕ್ರಿಸ್ತನ ಮೂಲಕ ಲೋಕವನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತರುತ್ತಿದ್ದಾನೆ ಮತ್ತು ಸಮಾಧಾನ ಸಂಬಂಧದ ಕುರಿತಾದ ಈ ವಾಕ್ಯವನ್ನು ನಮಗೆ ಒಪ್ಪಿಸಿದ್ದಾನೆ.”—2 ಕೊರಿಂ. 5:19; ಯೆಶಾ. 55:6.

9. ದೇವರ ಕರುಣೆಗಾಗಿ ಗಣ್ಯತೆಯನ್ನು ತೋರಿಸಲು ಪೌಲನು ಏನು ಮಾಡಿದನು?

9 ಯೆಹೋವನು ವಿಮೋಚನಾ ಮೌಲ್ಯದ ಯಜ್ಞವನ್ನು ಒದಗಿಸುವ ಮೂಲಕ ಅದರಲ್ಲಿ ನಂಬಿಕೆಯಿಡುವ ಜನರು ಪಾಪಕ್ಷಮೆಯನ್ನು ಹೊಂದುವಂತೆ ಏರ್ಪಡಿಸಿದನು ಹಾಗೂ ತನ್ನೊಂದಿಗೆ ಸ್ನೇಹಸಂಬಂಧ ಅಥವಾ ಶಾಂತಿಸಂಬಂಧವನ್ನು ಪುನಃಸ್ಥಾಪಿಸಲು ಸಾಧ್ಯಮಾಡಿದನು. ಅಷ್ಟಲ್ಲದೆ ಭೂಮಿಯಲ್ಲೆಲ್ಲೂ ಇರುವ ಜನರು ಸಮಯವಿರುವಾಗಲೇ ದೇವರೊಂದಿಗೆ ಶಾಂತಿಸಂಬಂಧಕ್ಕೆ ಬರುವಂತೆ ಉತ್ತೇಜಿಸಲಿಕ್ಕಾಗಿ ಆತನು ತನ್ನ ಪ್ರತಿನಿಧಿಗಳನ್ನು ಕಳುಹಿಸಿದನು. (1 ತಿಮೊಥೆಯ 2:3-6 ಓದಿ.) ದೇವರ ಚಿತ್ತವನ್ನು ಅರಿತವನಾಗಿ ಮತ್ತು ತಾನು ಜೀವಿಸುತ್ತಿದ್ದ ಸಮಯದ ಮಹತ್ವವನ್ನು ಮನಗಂಡವನಾಗಿ ಪೌಲನು ‘ಸಮಾಧಾನ ಸಂಬಂಧದ ಶುಶ್ರೂಷೆಯಲ್ಲಿ’ ಅವಿಶ್ರಾಂತವಾಗಿ ದುಡಿದನು. ಯೆಹೋವನ ಚಿತ್ತವು ಈಗಲೂ ಅದೇ ಆಗಿದೆ, ಬದಲಾಗಿಲ್ಲ. ಮಾನವರು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ ಆತನು ಇಂದು ಕೂಡ ಕರೆಕೊಡುತ್ತಿದ್ದಾನೆ. “ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ” ಮತ್ತು “ರಕ್ಷಣೆಯ ದಿನವೂ ಇದೇ” ಎಂಬ ಪೌಲನ ಮಾತುಗಳು ಇಂದು ಸಹ ಅನ್ವಯಿಸುತ್ತವೆ. ಎಂಥ ಕರುಣೆಯೂ ಕನಿಕರವೂ ಉಳ್ಳ ದೇವರು ಯೆಹೋವನು!—ವಿಮೋ. 34:6, 7.

‘ಅದರ ಉದ್ದೇಶವನ್ನು ಕಳಕೊಳ್ಳಬೇಡಿ’

10. ಅಭಿಷಿಕ್ತ ಕ್ರೈಸ್ತರು ಹಿಂದೆ ಮತ್ತು ಇಂದು ‘ರಕ್ಷಣೆಯ ದಿನದಲ್ಲಿ’ ಏನನ್ನು ಮಾಡುತ್ತಿದ್ದಾರೆ?

10 ಯೆಹೋವನ ಈ ಅಪಾತ್ರ ದಯೆಯಿಂದ ಪ್ರಯೋಜನ ಹೊಂದುವವರಲ್ಲಿ ಮೊದಲಿಗರು ‘ಕ್ರಿಸ್ತನೊಂದಿಗೆ ಐಕ್ಯದಲ್ಲಿ’ ಇರುವವರೇ. (2 ಕೊರಿಂ. 5:17, 18) ಅವರಿಗೆ ‘ರಕ್ಷಣೆಯ ದಿನವು’ ಆರಂಭವಾದದ್ದು ಕ್ರಿ.ಶ. 33ರ ಪಂಚಾಶತ್ತಮ ದಿನದಂದು. ಅಂದಿನಿಂದ ಹಿಡಿದು ‘ಸಮಾಧಾನ ಸಂಬಂಧದ ವಾಕ್ಯವನ್ನು’ ಘೋಷಿಸುವ ಕೆಲಸವನ್ನು ಅವರಿಗೆ ವಹಿಸಲಾಗಿದೆ. ಇಂದು ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು “ಸಮಾಧಾನ ಸಂಬಂಧದ ಶುಶ್ರೂಷೆಯನ್ನು” ಇನ್ನೂ ನಡಿಸುತ್ತಿದ್ದಾರೆ. ಅಪೊಸ್ತಲ ಯೋಹಾನನು ಪ್ರವಾದನಾ ದರ್ಶನದಲ್ಲಿ ಕಂಡ ನಾಲ್ಕು ದೇವದೂತರು ‘ಭೂಮಿಯ ಮೇಲೆ ಯಾವ ಗಾಳಿಯೂ ಬೀಸದಂತೆ ಭೂಮಿಯ ನಾಲ್ಕು ಗಾಳಿಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ’ ಎಂಬುದನ್ನು ಅವರು ಮನಗಾಣುತ್ತಾರೆ. ಆದ್ದರಿಂದ ಇದಿನ್ನೂ “ರಕ್ಷಣೆಯ ದಿನ” ಮತ್ತು “ವಿಶೇಷವಾಗಿ ಸ್ವೀಕೃತವಾದ ಸಮಯ” ಆಗಿದೆ. (ಪ್ರಕ. 7:1-3) ಈ ಕಾರಣಕ್ಕಾಗಿ 20ನೇ ಶತಮಾನದ ಆರಂಭದಿಂದ ಅಭಿಷಿಕ್ತ ಉಳಿಕೆಯವರು “ಸಮಾಧಾನ ಸಂಬಂಧದ ಶುಶ್ರೂಷೆಯನ್ನು” ಭೂಮಿಯ ಕಟ್ಟಕಡೆಯ ವರೆಗೆ ಹುರುಪಿನಿಂದ ಸಾರುತ್ತಿದ್ದಾರೆ.

11, 12. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಭಿಷಿಕ್ತ ಕ್ರೈಸ್ತರು ಸಮಯದ ಮಹತ್ವವನ್ನು ಅರಿತಿದ್ದರೆಂದು ತೋರಿಸಿದ್ದು ಹೇಗೆ? (ಪುಟ 15ರ ಚಿತ್ರ ನೋಡಿ.)

11 ಉದಾಹರಣೆಗಾಗಿ, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ತಿಳಿಸಿದಂತೆ, 20ನೇ ಶತಮಾನದ ಆರಂಭದಲ್ಲಿ “ಸಿ.ಟಿ. ರಸ್ಸಲ್‌ ಮತ್ತು ಅವರ ಜೊತೆಗಾರರು ತಾವು ಕೊಯ್ಲಿನ ಸಮಯದಲ್ಲಿ ಇದ್ದೇವೆಂದೂ ಬಿಡುಗಡೆಗೊಳಿಸುವ ಸತ್ಯವನ್ನು ಜನರು ಕೇಳುವ ಅಗತ್ಯವಿದೆಯೆಂದೂ ಬಲವಾಗಿ ನಂಬಿದ್ದರು.” ಈ ಕುರಿತು ಅವರು ಮಾಡಿದ್ದೇನು? ತಾವು ಕೊಯ್ಲಿನ ಸಮಯದಲ್ಲಿ ಅಂದರೆ ‘ವಿಶೇಷವಾಗಿ ಸ್ವೀಕೃತವಾದ ಸಮಯದಲ್ಲಿ’ ಇದ್ದೇವೆ ಎಂಬುದನ್ನು ಮನಗಾಣುತ್ತಾ ಈ ಸಹೋದರರು ಬರೇ ಕೆಲವು ಧಾರ್ಮಿಕ ಕೂಟಗಳಿಗೆ ಜನರನ್ನು ಆಮಂತ್ರಿಸುವುದರಲ್ಲಿ ತೃಪ್ತರಾಗಿರಲಿಲ್ಲ. ಕ್ರೈಸ್ತಪ್ರಪಂಚದ ಪಾದ್ರಿಗಳು ದೀರ್ಘಸಮಯದಿಂದ ಅದನ್ನೇ ಮಾಡುತ್ತಿದ್ದರಲ್ಲಾ. ಆದರೆ ಅಭಿಷಿಕ್ತ ಕ್ರೈಸ್ತರು ಸುವಾರ್ತೆಯನ್ನು ಹಬ್ಬಿಸುವ ಬೇರೆ ವ್ಯಾವಹಾರಿಕ ವಿಧಾನಗಳನ್ನು ಹುಡುಕಿದರು. ಬೇರೆ ವಿಷಯಗಳೂ ಸೇರಿದಂತೆ ಅವರು ತಮ್ಮ ಕೆಲಸವನ್ನು ಪ್ರಗತಿಗೊಳಿಸಲು ನವನವೀನ ತಂತ್ರಜ್ಞಾನವನ್ನು ಸದುಪಯೋಗಿಸಿದರು.

12 ರಾಜ್ಯ ಸುವಾರ್ತೆಯನ್ನು ಪ್ರಚುರಪಡಿಸಿ ಹಬ್ಬಿಸಲು ಹುರುಪಿನ ಶುಶ್ರೂಷಕರ ಆ ಚಿಕ್ಕ ಗುಂಪು ಕರಪತ್ರ, ಕಿರುಹೊತ್ತಿಗೆ, ಪತ್ರಿಕೆ ಮತ್ತು ಪುಸ್ತಕಗಳನ್ನು ಬಳಸಿದರು. ಸಾವಿರಾರು ವಾರ್ತಾ ಪತ್ರಿಕೆಗಳಲ್ಲಿ ಪ್ರಸಂಗಗಳನ್ನೂ ಲೇಖನಗಳನ್ನೂ ಪ್ರಕಟಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರೇಡಿಯೊ ನೆಟ್‌ವರ್ಕ್‌ಗಳಲ್ಲಿ ಅವರು ಬೈಬಲ್‌ ಕಾರ್ಯಕ್ರಮಗಳನ್ನು ಪ್ರಸಾರಮಾಡಿದರು. ಮೌನ ಚಲನಚಿತ್ರಗಳನ್ನು ತಯಾರಿಸಿ ಅವಕ್ಕೆ ಧ್ವನಿಮುದ್ರಣಗಳನ್ನು ಕೂಡಿಸಿ ಪ್ರದರ್ಶಿಸಿದರು. ಚಿತ್ರೋದ್ಯಮವು ಚಲನಚಿತ್ರಗಳನ್ನು ಧ್ವನಿಗಳೊಂದಿಗೆ ಪ್ರದರ್ಶಿಸುವುದಕ್ಕಿಂತ ಮೊದಲೇ ಅವರಿದನ್ನು ಮಾಡಶಕ್ತರಾದರು. ಇಂಥ ಪಟ್ಟುಬಿಡದ ಹುರುಪಿನ ಪರಿಣಾಮ ಏನಾಯಿತು? “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ” ಎಂಬ ಸಂದೇಶದ ಘೋಷಣೆಗೆ ಇಂದು ಸುಮಾರು ಎಪ್ಪತ್ತು ಲಕ್ಷ ಜನರು ಪ್ರತಿಕ್ರಿಯಿಸಿ, ಅದನ್ನು ಇತರರಿಗೆ ಸಾರುವುದರಲ್ಲಿ ಜೊತೆಗೂಡಿದ್ದಾರೆ. ನಿಜವಾಗಿಯೂ ಯೆಹೋವನ ಆ ಆರಂಭದ ಸೇವಕರು ಸೀಮಿತ ಪರಿಸ್ಥಿತಿಗಳ ಕೆಳಗೂ ಹುರುಪಿನ ಆದರ್ಶ ಮಾದರಿಗಳಾಗಿದ್ದರು.

13. ದೇವರ ಯಾವ ಉದ್ದೇಶವನ್ನು ನಾವು ಮನಸ್ಸಿಗೆ ತಂದುಕೊಳ್ಳಬೇಕು?

13 “ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ” ಎಂಬ ಪೌಲನ ಹೇಳಿಕೆಯು ಇಂದೂ ಸತ್ಯವಾಗಿದೆ. ಯೆಹೋವನ ಅಪಾತ್ರ ದಯೆಯನ್ನು ಸವಿದಿರುವ ನಾವು ಸಮಾಧಾನ ಸಂಬಂಧದ ಸಂದೇಶವನ್ನು ಕೇಳುವ ಮತ್ತು ಸ್ವೀಕರಿಸುವ ಅವಕಾಶ ದೊರಕಿದ್ದಕ್ಕಾಗಿ ಕೃತಜ್ಞರಾಗಿದ್ದೇವೆ ನಿಜ. ಆದರೆ ಅದಕ್ಕಾಗಿ ಸ್ವತಃ ನಾವೇ ತೃಪ್ತರಾಗಿರುವ ಬದಲು ಪೌಲನ ಮುಂದಿನ ಈ ಮಾತುಗಳನ್ನು ನಾವು ಮನಸ್ಸಿಗೆ ತಂದುಕೊಳ್ಳಬೇಕು: “ನೀವು ಆತನ ಅಪಾತ್ರ ದಯೆಯನ್ನು ಪಡೆದುಕೊಂಡು ಅದರ ಉದ್ದೇಶವನ್ನು ಕಳೆದುಕೊಳ್ಳಬಾರದೆಂದು ಬೇಡಿಕೊಳ್ಳುತ್ತೇವೆ.” (2 ಕೊರಿಂ. 6:1) ದೇವರ ಅಪಾತ್ರ ದಯೆಯ ಉದ್ದೇಶವೇನೆಂದರೆ ಕ್ರಿಸ್ತನ ಮೂಲಕ ‘ಲೋಕವನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತರುವುದೇ.’—2 ಕೊರಿಂ. 5:19.

14. ಅನೇಕ ದೇಶಗಳ ಜನರಲ್ಲಿ ಯಾವ ಧನಾತ್ಮಕ ಬದಲಾವಣೆಗಳಾಗುತ್ತಿವೆ?

14 ಸೈತಾನನಿಂದ ಕುರುಡುಮಾಡಲ್ಪಟ್ಟ ಹೆಚ್ಚಿನ ಜನರು ಇನ್ನೂ ದೇವರಿಂದ ದೂರತೊಲಗಿದ್ದು ಆತನ ಅಪಾತ್ರ ದಯೆಯ ಉದ್ದೇಶವನ್ನು ಅರಿಯದವರಾಗಿದ್ದಾರೆ. (2 ಕೊರಿಂ. 4:3, 4; 1 ಯೋಹಾ. 5:19) ಆದರೂ ಕೆಡುತ್ತಾ ಬರುತ್ತಿರುವ ಲೋಕದ ಪರಿಸ್ಥಿತಿಗಳು ಅನೇಕರನ್ನು ಸುವಾರ್ತೆಗೆ ಪ್ರತಿಕ್ರಿಯಿಸುವಂತೆ ಮಾಡಿದೆ. ದೇವರಿಂದ ದೂರತೊಲಗಿರುವುದೇ ಮಾನವರ ಕೆಡುಕಿಗೆ ಮತ್ತು ಕಷ್ಟಾನುಭವಕ್ಕೆ ಮೂಲ ಕಾರಣವೆಂದು ಅರಿತಾಗ ಅವರು ಒಳ್ಳೇದಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಸಾರುವ ಕಾರ್ಯಕ್ಕೆ ಹೆಚ್ಚಿನ ಜನರು ನಿರಾಸಕ್ತಿ ತೋರಿಸುವ ದೇಶಗಳಲ್ಲೂ ಈಗ ಅನೇಕರು ಸುವಾರ್ತೆಯನ್ನು ಸ್ವೀಕರಿಸಿ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರಲು ಕ್ರಿಯೆಗೈಯುತ್ತಿದ್ದಾರೆ. ಹಾಗಾದರೆ “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ” ಎಂದು ಇನ್ನಷ್ಟು ಹೆಚ್ಚು ಹುರುಪಿನಿಂದ ಬೇಡಿಕೊಳ್ಳುವ ಸಮಯವು ಇದೇ ಎಂಬುದನ್ನು ನಾವಿಂದು ಅರಿತುಕೊಳ್ಳುತ್ತಿದ್ದೇವೋ?

15. ಜನರ ಕಿವಿಗೆ ಹಿತವೆನಿಸುವ ಸಂದೇಶವನ್ನು ಸಾರುವ ಬದಲಾಗಿ ಎಲ್ಲೆಲ್ಲೂ ಇರುವ ಜನರು ಏನನ್ನು ತಿಳಿಯಬೇಕೆಂದು ನಾವು ಬಯಸುತ್ತೇವೆ?

15 ಜನರು ದೇವರ ಕಡೆ ತಿರುಗಿಕೊಂಡಲ್ಲಿ ಆತನು ಅವರ ಎಲ್ಲ ಸಮಸ್ಯೆಗಳನ್ನು ನಿವಾರಿಸುವನೆಂದು ಮತ್ತು ಅವರಿಗೆ ಒಳ್ಳೇದಾಗುವುದೆಂದು ಕೇವಲ ತಿಳಿಸುವ ಕೆಲಸ ನಮ್ಮದಲ್ಲ. ಚರ್ಚಿಗೆ ಹೋಗುವ ಅನೇಕರು ಹಾಗೆಂದು ಭಾವಿಸುತ್ತಾರೆ. ಅವರ ಅದೇ ಅಪೇಕ್ಷೆಯನ್ನು ಪೂರೈಸಲಿಕ್ಕಾಗಿ ಚರ್ಚುಗಳು ಆತುರಪಡುತ್ತವೆ. (2 ತಿಮೊ. 4:3, 4) ಆದರೆ ಅದು ಎಷ್ಟು ಮಾತ್ರಕ್ಕೂ ನಮ್ಮ ಶುಶ್ರೂಷೆಯ ಗುರಿಯಲ್ಲ. ನಾವು ಸಾರುವ ಸುವಾರ್ತೆಯು ಏನೆಂದರೆ ಯೆಹೋವನು ಪ್ರೀತಿಯಿಂದ ಕ್ರಿಸ್ತನ ಮೂಲಕ ಜನರ ಪಾಪಗಳನ್ನು ಕ್ಷಮಿಸಲು ಸಿದ್ಧನಾಗಿದ್ದಾನೆ ಎಂಬದೇ. ಹೀಗೆ ಜನರು ದೇವರಿಂದ ವಿಮುಖಗೊಂಡ ಸ್ಥಿತಿಯಿಂದ ಬಿಡಿಸಿಕೊಂಡು ಆತನೊಂದಿಗೆ ಸಮಾಧಾನ ಸಂಬಂಧಕ್ಕೆ ಬರಬಲ್ಲರು. (ರೋಮ. 5:10; 8:32) ಆದರೆ “ವಿಶೇಷವಾಗಿ ಸ್ವೀಕೃತವಾದ ಸಮಯ” ಈಗ ಬೇಗನೆ ಕೊನೆಗೊಳ್ಳಲಿದೆ.

“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”

16. ಪೌಲನಲ್ಲಿದ್ದ ಧೈರ್ಯ ಮತ್ತು ಹುರುಪಿಗೆ ಕಾರಣವೇನಾಗಿತ್ತು?

16 ಹೀಗಿರಲಾಗಿ ಸತ್ಯಾರಾಧನೆಗಾಗಿ ನಾವು ಹುರುಪನ್ನು ಬೆಳೆಸಿಕೊಳ್ಳುವುದು ಮತ್ತು ಕಾಪಾಡಿಕೊಳ್ಳುವುದು ಹೇಗೆ? ಕೆಲವರು ಸಹಜವಾಗಿ ಸಂಕೋಚ ಸ್ವಭಾವದವರು, ಹೆಚ್ಚು ಮಾತಾಡದವರು ಆಗಿರಬಹುದು. ಅಂಥವರು ಹೆಚ್ಚು ಉತ್ಸಾಹವನ್ನಾಗಲಿ ಹೆಚ್ಚು ಸ್ನೇಹವನ್ನಾಗಲಿ ತೋರಿಸುವುದಿಲ್ಲ. ಆದರೆ ನೆನಪಿಡಿ, ಹುರುಪು ಅಂದರೆ ಕೇವಲ ಭಾವುಕತೆ ಅಥವಾ ಉತ್ಸಾಹದ ಹೊರತೋರಿಕೆಯಲ್ಲ, ಒಬ್ಬನ ವ್ಯಕ್ತಿತ್ವದ ಮೇಲೂ ಅದು ಆತುಕೊಂಡಿಲ್ಲ. ಹುರುಪನ್ನು ಬೆಳೆಸಿಕೊಳ್ಳುವ ಮತ್ತು ಕಾಪಾಡುವ ವಿಧವನ್ನು ತೋರಿಸುತ್ತಾ ಪೌಲನು “ಪವಿತ್ರಾತ್ಮದಿಂದ ಪ್ರಜ್ವಲಿಸಿರಿ” ಎಂದು ಕ್ರೈಸ್ತರಿಗೆ ಬುದ್ಧಿಹೇಳಿದನು. (ರೋಮ. 12:11) ಸಾರುವ ಕೆಲಸದಲ್ಲಿ ಅಪೊಸ್ತಲ ಪೌಲನ ಧೈರ್ಯ ಮತ್ತು ತಾಳ್ಮೆಗೆ ಮುಖ್ಯ ಕಾರಣವು ಯೆಹೋವನ ಪವಿತ್ರಾತ್ಮವೇ ಆಗಿತ್ತು. ಯೇಸುವಿನ ವಾಣಿಯನ್ನು ಅವನು ಕೇಳಿದಂದಿನಿಂದ ಹಿಡಿದು ರೋಮ್‌ನಲ್ಲಿ ಕೊನೆಯ ಸೆರೆವಾಸ ಹಾಗೂ ಹುತಾತ್ಮನಾಗಿ ಸಾಯುವ ವರೆಗೆ, ಸುಮಾರು 30 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಪೌಲನ ಹುರುಪು ಸ್ವಲ್ಪವೂ ಕುಂದಿರಲಿಲ್ಲ. ಪವಿತ್ರಾತ್ಮದ ಮೂಲಕ ಬೇಕಾದ ಬಲವನ್ನು ಒದಗಿಸಿದ ದೇವರಲ್ಲೇ ಪೌಲನು ಯಾವಾಗಲೂ ಆತುಕೊಂಡನು. ಅವನಂದದ್ದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.” (ಫಿಲಿ. 4:13) ಅವನ ಮಾದರಿಯಿಂದ ನಾವು ಕಲಿಯುವುದಾದರೆ ಎಷ್ಟೋ ಪ್ರಯೋಜನವನ್ನು ಹೊಂದಬಲ್ಲೆವು!

17. ನಾವು ಹೇಗೆ ‘ಪವಿತ್ರಾತ್ಮದಿಂದ ಪ್ರಜ್ವಲಿಸುತ್ತಾ’ ಇರಬಲ್ಲೆವು?

17 ‘ಪ್ರಜ್ವಲಿಸು’ ಎಂದು ಭಾಷಾಂತರವಾದ ಪದದ ಅಕ್ಷರಾರ್ಥ “ಕುದಿಯುವುದು” ಎಂದಾಗಿದೆ. (ಕಿಂಗ್‌ಡಮ್‌ ಇಂಟರ್‌ಲಿನಿಯರ್‌) ಪಾತ್ರೆಯಲ್ಲಿನ ನೀರು ಕುದಿಯುತ್ತಾ ಇರಬೇಕಾದರೆ ಅದಕ್ಕೆ ಒಂದೇಸಮನೆ ಬೆಂಕಿಯನ್ನು ಉರಿಸುತ್ತಾ ಇರಬೇಕು. ತದ್ರೀತಿ ‘ಪವಿತ್ರಾತ್ಮದಿಂದ ಪ್ರಜ್ವಲಿಸಬೇಕಾದರೆ’ ನಮಗೆ ಸದಾ ದೇವರಾತ್ಮದ ಹರಿವು ಬೇಕು. ಅದನ್ನು ಪಡೆಯುವ ವಿಧಾನವು ಯೆಹೋವನು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಗೊಳಿಸಲಿಕ್ಕಾಗಿ ಮಾಡಿರುವ ಎಲ್ಲ ಒದಗಿಸುವಿಕೆಗಳ ಸದುಪಯೋಗವನ್ನು ಮಾಡುವುದೇ. ಅಂದರೆ ನಮ್ಮ ಕುಟುಂಬ ಆರಾಧನೆ ಹಾಗೂ ಸಭಾ ಆರಾಧನೆಯನ್ನು ಗಂಭೀರವಾಗಿ ತಕ್ಕೊಳ್ಳುವುದೇ ಆಗಿದೆ. ಅದರರ್ಥ ಕುಟುಂಬ ಮತ್ತು ವೈಯಕ್ತಿಕ ಅಧ್ಯಯನ, ಪ್ರಾರ್ಥನೆ, ಜೊತೆ ಕ್ರೈಸ್ತರೊಂದಿಗೆ ಕೂಡಿಬರುವಿಕೆಯಲ್ಲಿ ಕ್ರಮತೆಯಿಂದಿರುವುದು. ಅದು ನಮ್ಮನ್ನು ‘ಪವಿತ್ರಾತ್ಮದಿಂದ ಪ್ರಜ್ವಲಿಸುತ್ತಾ,’ ‘ಕುದಿಯುತ್ತಾ’ ಇರುವುದಕ್ಕಾಗಿ ಬೇಕಾದ ‘ಬೆಂಕಿಯನ್ನು’ ಒದಗಿಸಿಕೊಡುವುದು.—ಅ. ಕಾರ್ಯಗಳು 4:20; 18:25 ಓದಿ.

18. ಸಮರ್ಪಿತ ಕ್ರೈಸ್ತರಾದ ನಾವು ಯಾವ ಗುರಿಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು?

18 ಒಂದು ಗುರಿಯ ಕಡೆಗೆ ಪೂರ್ಣ ದೃಷ್ಟಿಯನ್ನು ಕೇಂದ್ರೀಕರಿಸಿ ಆ ಗುರಿಯನ್ನು ಬೆನ್ನಟ್ಟುವವನೇ ಸಮರ್ಪಿತ ವ್ಯಕ್ತಿ; ಅವನು ಸುಲಭವಾಗಿ ಅಪಕರ್ಷಿತನಾಗುವುದಿಲ್ಲ ಅಥವಾ ನಿರಾಶನಾಗುವುದಿಲ್ಲ. ಸಮರ್ಪಿತ ಕ್ರೈಸ್ತರಾದ ನಮ್ಮ ಗುರಿಯಾದರೋ ಯೆಹೋವನು ನಾವೇನನ್ನು ಮಾಡಬೇಕೆಂದು ಬಯಸುತ್ತಾನೋ ಅದನ್ನು ಮಾಡುವುದೇ. ಯೇಸು ಕೂಡ ಅದನ್ನೇ ಮಾಡಿದನು. (ಇಬ್ರಿ. 10:7) ಇಂದು ಸಾಧ್ಯವಾದಷ್ಟು ಹೆಚ್ಚು ಜನರು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ಬರಬೇಕೆಂಬದೇ ಯೆಹೋವನ ಚಿತ್ತವಾಗಿದೆ. ಆದ್ದರಿಂದ ಇಂದು ಮಾಡಲಿರುವ ಅತ್ಯಂತ ಮಹತ್ವದ, ಹೌದು ಅತ್ಯಂತ ತುರ್ತಿನ ಕೆಲಸದಲ್ಲಿ ಯೇಸು ಮತ್ತು ಪೌಲನಂತೆ ಹುರುಪಿನಿಂದಿರಲು ನಾವು ಪರಿಶ್ರಮಪಡೋಣ.

ನೆನಪಿದೆಯೋ?

• ಪೌಲನಿಗೆ ಮತ್ತು ಇತರ ಅಭಿಷಿಕ್ತ ಕ್ರೈಸ್ತರಿಗೆ ವಹಿಸಲಾದ “ಸಮಾಧಾನ ಸಂಬಂಧದ ಶುಶ್ರೂಷೆ” ಯಾವುದಾಗಿತ್ತು?

• ಅಭಿಷಿಕ್ತ ಉಳಿಕೆಯವರು ‘ವಿಶೇಷವಾಗಿ ಸ್ವೀಕೃತವಾದ ಸಮಯದ’ ಸದುಪಯೋಗ ಮಾಡಿದ್ದು ಹೇಗೆ?

• ಕ್ರೈಸ್ತ ಶುಶ್ರೂಷಕರು ಹೇಗೆ ‘ಪವಿತ್ರಾತ್ಮದಿಂದ ಪ್ರಜ್ವಲಿಸಬಲ್ಲರು’?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

ಪೌಲನು ಕರ್ತನಾದ ಯೇಸು ಕ್ರಿಸ್ತನ ವಾಣಿಯನ್ನು ಎಂದೂ ಮರೆಯಲಿಲ್ಲ