ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಸತ್ಯಕ್ಕಿರುವ ಅಪಾರ ಶಕ್ತಿಯನ್ನು ಕಣ್ಣಾರೆ ಕಂಡೆ!

ಬೈಬಲ್‌ ಸತ್ಯಕ್ಕಿರುವ ಅಪಾರ ಶಕ್ತಿಯನ್ನು ಕಣ್ಣಾರೆ ಕಂಡೆ!

ಬೈಬಲ್‌ ಸತ್ಯಕ್ಕಿರುವ ಅಪಾರ ಶಕ್ತಿಯನ್ನು ಕಣ್ಣಾರೆ ಕಂಡೆ!

ವೀಟೋ ಫ್ರಾಏಸೆರವರು ಹೇಳಿದಂತೆ

ಟ್ರೆನ್ಟೀನರಾ ಎಂಬ ಹೆಸರನ್ನು ಪ್ರಾಯಶಃ ನೀವೆಂದೂ ಕೇಳಿರಲಿಕ್ಕಿಲ್ಲ. ಅದು ಇಟಲಿಯ ನೇಪಲ್ಸ್‌ನ ದಕ್ಷಿಣದಲ್ಲಿರುವ ಚಿಕ್ಕ ಊರು. ಅಪ್ಪಅಮ್ಮ ಮತ್ತು ಅಣ್ಣ ಆಂಜೆಲೋ ಹುಟ್ಟಿದ್ದು ಅಲ್ಲಿಯೇ. ಅಣ್ಣ ಹುಟ್ಟಿದ ಮೇಲೆ ಅಪ್ಪಅಮ್ಮ ಅಮೆರಿಕಕ್ಕೆ ವಲಸೆಹೋಗಿ ನ್ಯೂ ಯಾರ್ಕ್‌ನ ರಾಚೆಸ್ಟರ್‌ ಎಂಬಲ್ಲಿ ನೆಲಸಿದರು. ಅಲ್ಲಿ ನಾನು 1926ರಲ್ಲಿ ಹುಟ್ಟಿದೆ. ಆಗ ಬೈಬಲ್‌ ವಿದ್ಯಾರ್ಥಿಗಳೆಂಬ ಹೆಸರಿದ್ದ ಯೆಹೋವನ ಸಾಕ್ಷಿಗಳನ್ನು ಪ್ರಥಮ ಬಾರಿ ಅಪ್ಪ ಭೇಟಿಯಾದದ್ದು 1922ರಲ್ಲಿ. ಸ್ವಲ್ಪದರಲ್ಲೇ ಅಪ್ಪಅಮ್ಮ ಬೈಬಲ್‌ ವಿದ್ಯಾರ್ಥಿಗಳಾದರು.

ನನ್ನ ಅಪ್ಪ ಶಾಂತಭಾವದ ಚಿಂತನಶೀಲ ವ್ಯಕ್ತಿಯಾಗಿದ್ದರು, ಆದರೆ ಅನ್ಯಾಯವನ್ನು ಹೇಸುತ್ತಿದ್ದರು. ಪಾದ್ರಿಗಳು ಜನರನ್ನು ಅಜ್ಞಾನದಲ್ಲಿಡುವುದನ್ನು ಅವರಿಗೆ ಸಹಿಸಲಾಗುತ್ತಿರಲಿಲ್ಲ. ಆದ್ದರಿಂದ ಬೈಬಲ್‌ ಸತ್ಯಗಳನ್ನು ಬೇರೆಯವರಿಗೆ ತಿಳಿಸುವ ಯಾವ ಸಂದರ್ಭವೂ ಕೈಜಾರಿ ಹೋಗುವಂತೆ ಅವರು ಬಿಡುತ್ತಿರಲಿಲ್ಲ. ನಿವೃತ್ತಿಹೊಂದಿದ ಬಳಿಕ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿ 74 ವಯಸ್ಸಿನ ವರೆಗೆ ಮುಂದುವರಿಸಿದರು. ಕೊನೆಗೆ ಅನಾರೋಗ್ಯ, ತೀಕ್ಷ್ಣ ಚಳಿಗಾಲಗಳಿಂದಾಗಿ ಅದನ್ನು ಅವರು ನಿಲ್ಲಿಸಲೇಬೇಕಾಯಿತು. ಹಾಗಿದ್ದರೂ 90ರ ಗಡಿ ದಾಟಿದಾಗಲೂ ತಿಂಗಳಿಗೆ 40 ರಿಂದ 60 ತಾಸುಗಳನ್ನು ಸಾರುವ ಕೆಲಸದಲ್ಲಿ ಕಳೆಯುತ್ತಿದ್ದರು. ತಂದೆಯ ಮಾದರಿ ನನ್ನ ಮೇಲೆ ಮಹತ್ತರ ಪ್ರಭಾವ ಬೀರಿತು. ಹಾಸ್ಯಪ್ರವೃತ್ತಿಯಿದ್ದರೂ ಅಪ್ಪ ಗಂಭೀರ ಸ್ವಭಾವದ ವ್ಯಕ್ತಿ. “ಸತ್ಯವು ತುಂಬ ಪ್ರಾಮುಖ್ಯ, ಆದ್ದರಿಂದ ಅದಕ್ಕೆ ಗಂಭೀರ ಗಮನ ಕೊಡತಕ್ಕದ್ದು” ಎನ್ನುತ್ತಿದ್ದರು ಅವರು.

ನಾವು ನಮ್ಮ ಅಪ್ಪಅಮ್ಮಗೆ ಐವರು ಮಕ್ಕಳು. ನಮಗೆ ಅವರು ದೇವರ ವಾಕ್ಯವನ್ನು ಕಲಿಸಲು ತುಂಬ ಪ್ರಯಾಸಪಟ್ಟರು. 1943ರ ಆಗಸ್ಟ್‌ 23ರಂದು ನನಗೆ ದೀಕ್ಷಾಸ್ನಾನವಾಯಿತು. 1944ರ ಜೂನ್‌ನಲ್ಲಿ ನಾನು ಪಯನೀಯರನಾದೆ. ನ್ಯೂ ಯಾರ್ಕ್‌ನ ಜೆನೀವಾದಲ್ಲಿ ನನ್ನ ಅಕ್ಕ ಕಾರ್ಮೆಲಾ ಪಯನೀಯರಳಾಗಿದ್ದಳು. ಆಕೆಯ ಉತ್ಸಾಹಶೀಲ ಪಯನೀಯರ್‌ ಜೊತೆಗಾರ್ತಿಯೇ ಫರ್ನ್‌ ಎಂಬಾಕೆ. ಇವಳೇ ನನ್ನ ಬಾಳಸಂಗಾತಿ ಆಗುವಳೆಂದು ನಾನು ಗ್ರಹಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. 1946ರ ಆಗಸ್ಟ್‌ನಲ್ಲಿ ನಾವು ವಿವಾಹವಾದೆವು.

ಮಿಷನೆರಿ ಸೇವೆ

ವಿಶೇಷ ಪಯನೀಯರರಾಗಿ ನಮ್ಮ ಮೊದಲನೇ ನೇಮಕವು ನ್ಯೂ ಯಾರ್ಕ್‌ನ ಜೆನೀವಾದಲ್ಲಾಗಿತ್ತು. ಆಮೇಲೆ ನಾವು ಸೇವೆಮಾಡಿದ್ದು ನಾರ್‌ವಿಚ್‌ ಶಹರದಲ್ಲಿ. 1948ರ ಆಗಸ್ಟ್‌ನಲ್ಲಿ ಗಿಲ್ಯಡ್‌ನ 12ನೇ ಕ್ಲಾಸನ್ನು ಹಾಜರಾಗುವ ಸದವಕಾಶ ನಮಗೆ ಸಿಕ್ಕಿತು. ಅನಂತರ ನಮ್ಮನ್ನು ಕಾರ್ಲ್‌ ಮತ್ತು ಜೋಆ್ಯನ್‌ ರಿಜ್ವೇ ಎಂಬ ಇನ್ನೊಬ್ಬ ಮಿಷನೆರಿ ದಂಪತಿಯೊಂದಿಗೆ ಇಟಲಿಯ ನೇಪಲ್ಸ್‌ಗೆ ಕಳುಹಿಸಲಾಯಿತು. ಆ ಸಮಯದಲ್ಲಿ ನೇಪಲ್ಸ್‌ ವಿಧ್ವಂಸಕ ಯುದ್ಧದಿಂದ ಚೇತರಿಸಿಕೊಳ್ಳುತ್ತಿತ್ತು. ವಾಸಕ್ಕೆ ಮನೆಗಳು ಸಿಗುತ್ತಿರಲಿಲ್ಲ. ಆದ್ದರಿಂದ ಕೆಲವು ತಿಂಗಳು ನಾವು ಎರಡು ಕೊಠಡಿಗಳ ಚಿಕ್ಕ ಮನೆಯಲ್ಲಿ ವಾಸಿಸಿದೆವು.

ನಾನು ಚಿಕ್ಕವನಾಗಿದ್ದಾಗ ಅಪ್ಪಅಮ್ಮ ನೇಪಲ್ಸ್‌ನ ನೇಪೋಲಿಟನ್‌ ಭಾಷೆಯನ್ನಾಡುತ್ತಿದ್ದದನ್ನು ಕೇಳಿಸಿಕೊಳ್ಳುತ್ತಿದ್ದೆ. ಆದ್ದರಿಂದ ನಾನು ಆ ಭಾಷೆಯನ್ನು ಅಮೆರಿಕನ್‌ ಉಚ್ಚಾರದಲ್ಲಿ ಆಡುತ್ತಿದ್ದರೂ ಸಾಕಷ್ಟು ಅರ್ಥವಾಗುವಂತಿತ್ತು. ಫರ್ನ್‌ಗೆ ಆ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಸ್ವಲ್ಪದರಲ್ಲಿ ಅವಳು ಆ ಭಾಷೆ ಮಾತಾಡಲು ಕಲಿತಳು ಮಾತ್ರವಲ್ಲ ನನ್ನನ್ನೂ ಮೀರಿಸಿದಳು.

ಮೊದಮೊದಲು ನೇಪಲ್ಸ್‌ನಲ್ಲಿ ನಾವು ಕಂಡುಕೊಂಡ ಆಸಕ್ತ ಜನರೆಂದರೆ ನಾಲ್ಕು ಮಂದಿಯಿದ್ದ ಒಂದು ಕುಟುಂಬ ಮಾತ್ರ. ಅವರು ನಿಷಿದ್ಧ ಸಿಗರೇಟುಗಳನ್ನು ಕಳ್ಳ ಮಾರಾಟಮಾಡುತ್ತಿದ್ದರು. ಪ್ರತಿ ಕೆಲಸದ ದಿನದಲ್ಲಿ ಆ ಕುಟುಂಬದ ಟೇರೆಸಾ ಎಂಬಾಕೆ ಅಚ್ಚರಿಗೊಳಿಸುವ ರೀತಿಯಲ್ಲಿ ತನ್ನ ವೇಷ ಬದಲಾಯಿಸುತ್ತಿದ್ದಳು. ಬೆಳಗಾತ ಲಂಗದ ಅನೇಕಾನೇಕ ಕಿಸೆಗಳಲ್ಲಿ ಸಿಗರೇಟುಗಳನ್ನು ತುರುಕಿಸಿಕೊಂಡು ಹೋಗುತ್ತಿದ್ದ ಅವಳು ಗಾಳಿತುಂಬಿ ಬೀಗಿದ ಬಲೂನಿನಂತೆ ಕಾಣುತ್ತಿದ್ದಳು. ಸಂಜೆಯಷ್ಟರಲ್ಲಿ ಹಂಚಿಕಡ್ಡಿಯಂತೆ ಸಣಕಲಾಗಿ ಕಾಣುತ್ತಿದ್ದಳು. ಆದರೆ ಬೈಬಲ್‌ ಸತ್ಯವು ಈ ಇಡೀ ಕುಟುಂಬವನ್ನು ಬದಲಾಯಿಸಿತು. ಕೊನೆಗೆ ಈ ಕುಟುಂಬದ 16 ಮಂದಿ ಸಾಕ್ಷಿಗಳಾದರು. ಈಗ ನೇಪಲ್ಸ್‌ ನಗರದಲ್ಲಿ ಸುಮಾರು 3,700 ಸಾಕ್ಷಿಗಳಿದ್ದಾರೆ.

ನಮ್ಮ ಸಾರುವ ಕೆಲಸಕ್ಕೆ ವಿರೋಧ

ನೇಪಲ್ಸ್‌ನಲ್ಲಿ ಕೇವಲ 9 ತಿಂಗಳು ನಾವಿದ್ದೆವಷ್ಟೆ. ಆಗ ದೇಶದ ಅಧಿಕಾರಿಗಳು ನಮ್ಮನ್ನು ನಾಲ್ವರನ್ನೂ ಊರಿನಿಂದ ಬಲವಂತವಾಗಿ ಹೊರಗಟ್ಟಿದರು. ನಾವು ಒಂದು ತಿಂಗಳ ಮಟ್ಟಿಗೆ ಸ್ವಿಟ್ಸರ್ಲೆಂಡ್‌ಗೆ ಹೋಗಿ ಬಳಿಕ ಟೂರಿಸ್ಟ್‌ ವೀಸದ ಮೇಲೆ ಪುನಃ ಇಟಲಿಗೆ ಬಂದೆವು. ನನ್ನನ್ನು ಮತ್ತು ಫರ್ನ್‌ಳನ್ನು ಟ್ಯುರಿನ್‌ಗೆ ನೇಮಿಸಲಾಯಿತು. ಅಲ್ಲಿ ಒಬ್ಬಾಕೆ ಮಹಿಳೆ ನಮಗೆ ಕೊಠಡಿಯೊಂದನ್ನು ಬಾಡಿಗೆಗೆ ಕೊಟ್ಟಳಾದರೂ ಅವಳ ಅಡುಗೆಮನೆ ಮತ್ತು ಶೌಚಾಗೃಹವನ್ನೇ ನಾವು ಬಳಸಬೇಕಿತ್ತು. ರಿಜ್ವೇ ದಂಪತಿ ಟ್ಯುರಿನ್‌ಗೆ ಆಗಮಿಸಿದ ಬಳಿಕ ನಾವು ಒಟ್ಟುಗೂಡಿ ಒಂದು ಮನೆಯನ್ನು ಬಾಡಿಗೆಗೆ ಪಡೆದೆವು. ಸಮಯಾನಂತರ ಐದು ಮಿಷನೆರಿ ದಂಪತಿಗಳು ಅದೇ ಮನೆಯಲ್ಲಿ ವಾಸಿಸಿದೆವು.

1955ರಲ್ಲಿ ಅಧಿಕಾರಿಗಳು ನಮ್ಮನ್ನು ಟ್ಯುರಿನ್‌ನಿಂದ ಕೂಡ ಹೊರಡಿಸಿಬಿಟ್ಟರು. ಅಷ್ಟರೊಳಗಾಗಿ ಅಲ್ಲಿ ನಾಲ್ಕು ಹೊಸ ಸಭೆಗಳಿಗೆ ತಳಪಾಯ ಹಾಕಲಾಗಿತ್ತು. ಸಮರ್ಥ ಸ್ಥಳೀಯ ಸಹೋದರರು ಆಗ ಮೇಲ್ವಿಚಾರ ನಡೆಸಲು ಶಕ್ತರಾಗಿದ್ದರು. ಅಧಿಕಾರಿಗಳು ನಮಗಂದದ್ದು: “ನೀವು ಅಮೆರಿಕನ್ನರು ಒಮ್ಮೆ ಇಲ್ಲಿಂದ ತೊಲಗಿದಿರೆಂದರೆ, ನೀವು ಮಾಡಿದ ಕೆಲಸವೂ ನೀರುಪಾಲು ನಿಶ್ಚಯ!” ಆದರೆ ಅದರ ನಂತರ ಅಲ್ಲಿ ಆದ ಅಭಿವೃದ್ಧಿಯು ಸಾರುವ ಕೆಲಸದ ಯಶಸ್ಸು ಯೆಹೋವನ ಕೈಯಲ್ಲಿದೆ ಎಂದು ತೋರಿಸಿತು. ಇಂದು ಟ್ಯುರಿನ್‌ನಲ್ಲಿ 56 ಸಭೆಗಳಿವೆ, 4,600ಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದಾರೆ.

ಸೊಬಗಿನ ಫ್ಲಾರೆನ್ಸ್‌ ನಗರ

ನಮ್ಮ ಮುಂದಿನ ನೇಮಕವೇ ಫ್ಲಾರೆನ್ಸ್‌. ಈ ನಗರದ ಬಗ್ಗೆ ನಾವು ಮುಂಚೆ ಕೇಳಿದ್ದೆವು. ನನ್ನ ಅಕ್ಕ ಕಾರ್ಮೆಲಾ, ಭಾವ ಮರ್ಲನ್‌ ಹಾರ್ಟ್ಸಲ ಅವರು ಮಿಷನೆರಿ ಸೇವೆಮಾಡಿದ ಸ್ಥಳ ಇದಾಗಿತ್ತು. ಆದರೂ ಅಲ್ಲಿ ವಾಸಿಸುವುದನ್ನು ನಾವು ಊಹಿಸಿರಲಿಲ್ಲ. ಪಿಆಸ ಡೆಲ ಸೀನ್ಯೋರಿಯಾ, ಪಾಂಟೆ ವೆಕ್ಯೋ, ಪ್ಯಾಟ್ಸಾಲೇ ಮೀಕೆಲಾಂಜಲೋ, ಪಾಲಾಟ್ಸೋ ಪೀಟೀ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಂದಾಗಿ ಅದು ಸೊಬಗಿನ ನಗರವಾಗಿತ್ತು. ಆದರೆ ನಮಗೆ ತುಂಬ ಸಂತಸವನ್ನು ತಂದ ವಿಷಯವೆಂದರೆ ಫ್ಲಾರೆನ್ಸ್‌ನ ಕೆಲವು ಜನರು ಸುವಾರ್ತೆಗೆ ತೋರಿಸಿದ ಪ್ರತಿಕ್ರಿಯೆಯೇ.

ನಾವು ಬೈಬಲ್‌ ಅಧ್ಯಯನ ಮಾಡಿದ ಒಂದು ಕುಟುಂಬದಲ್ಲಿ ಗಂಡಹೆಂಡತಿ ಮತ್ತು ಮಕ್ಕಳಿದ್ದರು. ಗಂಡನು ಧೂಮಪಾನಿಯಾಗಿದ್ದ. 1973ರ ಒಂದು ಕಾವಲಿನಬುರುಜು ಧೂಮಪಾನದ ಕುರಿತು ತಿಳಿಸುತ್ತಾ ಅದು ಅಶುದ್ಧ ಹವ್ಯಾಸವೆಂದೂ ಅದನ್ನು ವರ್ಜಿಸಬೇಕೆಂದೂ ಓದುಗರನ್ನು ಪ್ರೋತ್ಸಾಹಿಸಿತ್ತು. ಆ ದುಷ್ಚಟವನ್ನು ಬಿಟ್ಟುಬಿಡುವಂತೆ ಹಿರಿಮಕ್ಕಳು ತಂದೆಯನ್ನು ಅಂಗಲಾಚಿದ್ದರು. ಎಷ್ಟೋ ಸಲ ಬಿಟ್ಟುಬಿಡುತ್ತೇನೆಂದು ಮಾತುಕೊಟ್ಟಿದ್ದರೂ ಅವನದನ್ನು ಬಿಟ್ಟಿರಲಿಲ್ಲ. ಒಂದು ರಾತ್ರಿ ತಾಯಿ ಪ್ರಾರ್ಥನೆಗೆ ಮುಂಚೆಯೇ ತನ್ನ 9 ವರ್ಷದ ಅವಳಿ ಮಕ್ಕಳನ್ನು ಬೆಡ್‌ರೂಮ್‌ಗೆ ಮಲಗಲು ಕಳುಹಿಸಿದಳು. ಸ್ವಲ್ಪ ಹೊತ್ತಿನಲ್ಲಿ ಅವಳಿಗೆ ಬೇಸರವಾಗಿ ತಾನೇ ಮಕ್ಕಳ ಬೆಡ್‌ರೂಮ್‌ಗೆ ಹೋದಾಗ ಅವರು ಪ್ರಾರ್ಥನೆ ಮಾಡಿಮುಗಿಸಿದ್ದರು. “ನೀವು ಏನು ಪ್ರಾರ್ಥನೆ ಮಾಡಿದಿರಿ?” ಎಂದು ಆಕೆ ಕೇಳಿದಾಗ, “ಅಪ್ಪ ಸಿಗರೇಟು ಸೇದುವುದನ್ನು ಬಿಟ್ಟುಬಿಡುವಂತೆ ಮಾಡು ಯೆಹೋವ ದೇವರೇ ಎಂದು ಪ್ರಾರ್ಥಿಸಿದೆವು” ಎಂದರು ಮಕ್ಕಳು. ಕೂಡಲೇ ಅವಳು ತನ್ನ ಗಂಡನಿಗೆ, “ರೀ. . . ನಿಮ್ಮ ಮಕ್ಕಳ ಪ್ರಾರ್ಥನೆಯನ್ನು ಬಂದು ಸ್ವಲ್ಪ ಕೇಳಿ” ಎಂದು ಉದ್ಗರಿಸಿದಳು. ಅವನು ಬಂದು ಅದನ್ನು ಕೇಳಿದಾಗ ಅತ್ತುಬಿಟ್ಟನು. “ಇವತ್ತೇ ಕೊನೆ, ಇನ್ನು ನಾನದನ್ನು ಮುಟ್ಟಲಾರೆ!” ಎಂದು ಮಾತುಕೊಟ್ಟನು. ಈ ಬಾರಿ ತಾನು ಹೇಳಿದಂತೆಯೇ ನಡೆದನು. ಬಳಿಕ ಅವನು ಮತ್ತು ಅವನ ಪತ್ನಿ ದೀಕ್ಷಾಸ್ನಾನ ಪಡೆದುಕೊಂಡರು. ಈಗ ಆ ಕುಟುಂಬದಲ್ಲಿ 15ಕ್ಕಿಂತಲೂ ಹೆಚ್ಚು ಮಂದಿ ಸಾಕ್ಷಿಗಳಾಗಿದ್ದಾರೆ.

ಆಫ್ರಿಕದಲ್ಲಿ ಸೇವೆ

1959ರಲ್ಲಿ ನಮ್ಮನ್ನು ಸೊಮಾಲಿಯದ ಮಾಗಡಿಶೂ ಎಂಬಲ್ಲಿಗೆ ಇಬ್ಬರು ಮಿಷನೆರಿಗಳ ಜೊತೆಗೆ ಸ್ಥಳಾಂತರಿಸಲಾಯಿತು. ಅವರು ಆರ್ಟೂರೋ ಲೆವರಸ್‌ ಮತ್ತು ನನ್ನ ಅಣ್ಣ ಆಂಜೆಲೋ. ನಾವು ಅಲ್ಲಿಗೆ ಹೋದಾಗ ರಾಜಕೀಯ ಸನ್ನಿವೇಶ ಗಂಭೀರವಾಗಿತ್ತು. ಇಟ್ಯಾಲಿಯನ್‌ ಸರ್ಕಾರವು ಸೊಮಾಲಿಯಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ವಿಶ್ವ ಸಂಸ್ಥೆಯಿಂದ ನಿಯೋಗವನ್ನು ಪಡೆದಿತ್ತು. ಆದರೆ ಸನ್ನಿವೇಶವು ತುಂಬ ಕೆಟ್ಟದಾಗಿರುವಂತೆ ಕಂಡಿತು. ನಾವು ಅಧ್ಯಯನ ಮಾಡುತ್ತಿದ್ದ ಕೆಲವು ಇಟ್ಯಾಲಿಯನರು ದೇಶವನ್ನು ಬಿಟ್ಟುಹೋದರು. ಅಲ್ಲಿ ಒಂದು ಸಭೆಯನ್ನು ಸ್ಥಾಪಿಸಲು ಸಾಧ್ಯವಾಗಿರಲಿಲ್ಲ.

ಆ ಸಮಯದಲ್ಲಿ ಝೋನ್‌ ಮೇಲ್ವಿಚಾರಕರೊಬ್ಬರು ನನ್ನನ್ನು ಅವರ ಸಹಾಯಕನಾಗಿ ಸೇವೆಮಾಡುವಂತೆ ಸೂಚಿಸಿದರು. ಹೀಗೆ ನಾವು ಸುತ್ತಮುತ್ತಲಿನ ದೇಶಗಳನ್ನು ಸಂದರ್ಶಿಸಲು ಆರಂಭಿಸಿದೆವು. ನಾವು ಅಧ್ಯಯನ ಮಾಡಿದ ಕೆಲವರು ಪ್ರಗತಿಮಾಡಿದರಾದರೂ ವಿರೋಧದಿಂದಾಗಿ ಅವರು ತಮ್ಮ ಸ್ವದೇಶವನ್ನು ಬಿಟ್ಟುಹೋಗಬೇಕಾಯಿತು. ಇತರರಾದರೋ ತುಂಬ ಕಷ್ಟಗಳನ್ನು ತಾಳಿಕೊಂಡು ಅಲ್ಲೇ ಉಳಿದರು. * ಯೆಹೋವನ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಆತನಿಗೆ ನಂಬಿಗಸ್ತರಾಗಿ ಉಳಿಯಲು ಅವರು ತಾಳಿಕೊಂಡ ಸಂಕಷ್ಟಗಳನ್ನು ನೆನೆಸುವಾಗ ಇಂದಿಗೂ ನಮ್ಮ ಕಣ್ಣೆವೆಗಳು ತುಂಬಿಬರುತ್ತವೆ.

ಸೊಮಾಲಿಯ ಮತ್ತು ಎರಿಟ್ರೀಯದಲ್ಲಿ ಹೆಚ್ಚಾಗಿ ಅತಿರೇಕ ಉಷ್ಣ, ಒಣಹವೆ ಇತ್ತು. ಅಲ್ಲಿನ ಕೆಲವು ಪಾಕಭಕ್ಷ್ಯಗಳು ಉಷ್ಣ ಹವೆಗಿಂತಲೂ ಹೆಚ್ಚು ತೀಕ್ಷ್ಣ ಅಂದರೆ ಕಣ್ಣುಮೂಗನ್ನೆಲ್ಲಾ ಕೆಂಪು ಮೆಣಸಿನಕಾಯಿಯಂತೆ ಕೆಂಪೇರಿಸುವಷ್ಟು ಖಾರ. ಅಂಥ ಒಂದು ಊಟವನ್ನು ನಾವು ಮೊದಲಾಗಿ ತಿಂದದ್ದು ನಮ್ಮ ಬೈಬಲ್‌ ವಿದ್ಯಾರ್ಥಿಯ ಮನೆಯಲ್ಲಿ. ಆಗ ನನ್ನ ಪತ್ನಿ ತಮಾಷೆಗೆ ‘ನನ್ನ ಕಣ್ಣುಮೂಗು ಕೆಂಪು ಟ್ರಾಫಿಕ್‌ ಲೈಟ್‌ನಂತೆ ಆದವು’ ಎಂದಳು.

ಆಂಜೆಲೋ ಮತ್ತು ಆರ್ಟೂರೋಗೆ ಬೇರೆ ನೇಮಕ ಸಿಕ್ಕಿದಾಗ ನಾವು ಇಬ್ಬರೇ ಉಳಿದೆವು. ಉತ್ತೇಜನ ಕೊಡಲು ಯಾರೂ ಇರದಿದ್ದಾಗ ಅದು ಸುಲಭವಾಗಿರಲಿಲ್ಲ. ಆದರೂ ಈ ಸನ್ನಿವೇಶವು ಯೆಹೋವನಿಗೆ ನಮ್ಮನ್ನು ಆಪ್ತರಾಗುವಂತೆ ಮಾಡಿ ಆತನಲ್ಲಿ ಇನ್ನಷ್ಟು ಹೆಚ್ಚು ಭರವಸೆಯಿಡುವಂತೆ ಮಾಡಿತು. ನಮ್ಮ ಕೆಲಸಕ್ಕೆ ನಿಷೇಧವಿದ್ದ ದೇಶಗಳಿಗೆ ನಾವು ಮಾಡಿದ ಸಂದರ್ಶನಗಳು ನಿಜವಾಗಿಯೂ ನಮಗೆ ಉತ್ತೇಜನದ ಮೂಲವಾಗಿದ್ದವು.

ಸೊಮಾಲಿಯದಲ್ಲಿ ನಮಗೆ ಅನೇಕ ವಿಧದ ಕಷ್ಟಗಳು ಎದುರಾದವು. ನಮಗೆ ಫ್ರಿಜ್‌ ಇರಲಿಲ್ಲ. ಆದ್ದರಿಂದ ಮಾವು, ಪಪ್ಪಾಯ, ಚಕ್ಕೋತ, ಬಾಳೆಹಣ್ಣು, ಶಾರ್ಕ್‌ ಮೀನು, ತೆಂಗಿನಕಾಯಿ ಮುಂತಾದ ಆಹಾರಸಾಮಗ್ರಿಗಳನ್ನು ನಾವು ದಿನಕ್ಕೆ ಬೇಕಾದಷ್ಟನ್ನೇ ತರುತ್ತಿದ್ದೆವು. ಸೊಳ್ಳೆ-ಕೀಟಗಳ ಕಾಟವನ್ನು ಕೂಡ ನಾವು ಸಹಿಸಬೇಕಿತ್ತು. ಬೈಬಲ್‌ ಅಧ್ಯಯನ ಮಾಡುವಾಗ ಅನೇಕವೇಳೆ ಅವು ನಮ್ಮನ್ನು ಮುತ್ತಿ ಕಚ್ಚುತ್ತಿದ್ದವು. ಪ್ರಯಾಣಕ್ಕೆ ನಮ್ಮ ಬಳಿಗೆ ಒಂದು ಸ್ಕೂಟರ್‌ ಇದ್ದದ್ದು ಒಳ್ಳೇದಾಯಿತು. ಇಲ್ಲವಾದರೆ ಉರಿ ಬಿಸಿಲಲ್ಲಿ ತಾಸುಗಟ್ಟಲೆ ನಡಿಗೆಯೇ ನಡಿಗೆ!

ಮರಳಿ ಇಟಲಿಗೆ

ಸ್ನೇಹಿತರ ಔದಾರ್ಯದಿಂದಾಗಿ ನಾವು 1961ರಲ್ಲಿ ಇಟಲಿಗೆ ಮರಳಿ ಟ್ಯುರಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾದೆವು. ನಾವು ಪ್ರಯಾಣಿಸಿದ ಹಡಗು ಬಾಳೆಹಣ್ಣನ್ನು ರವಾನಿಸುವ ಹಡಗಾಗಿತ್ತು. ಪುನಃ ಇಟಲಿಯಲ್ಲೇ ಸೇವೆಮಾಡುವ ನೇಮಕ ಸಿಗಲಿದೆಯೆಂದು ನಮಗಲ್ಲಿ ತಿಳಿದುಬಂತು. 1962ರ ಸೆಪ್ಟೆಂಬರ್‌ನಲ್ಲಿ ನಾವು ಮತ್ತೆ ಇಟಲಿಗೆ ಹಿಂದಿರುಗಿ ಸರ್ಕಿಟ್‌ ಸೇವೆ ಆರಂಭಿಸಿದೆವು. ನಾವೊಂದು ಚಿಕ್ಕ ಕಾರನ್ನು ಖರೀದಿಸಿ ಸುಮಾರು ಐದು ವರ್ಷಗಳ ತನಕ ಎರಡು ಸರ್ಕಿಟ್‌ಗಳನ್ನು ಸಂದರ್ಶಿಸಲು ಬಳಸಿದೆವು.

ಆಫ್ರಿಕದ ಸುಡುಬಿಸಿಲನ್ನು ಅನುಭವಿಸಿದ ಬಳಿಕ ಈಗ ಕಡುಚಳಿಯನ್ನು ಸಹಿಸಬೇಕಾದ ಸರದಿ. ನಾವು ಮೊದಲ ಚಳಿಗಾಲವನ್ನು ಎದುರಿಸಿದ್ದು ಆ್ಯಲ್ಪ್ಸ್‌ ಪರ್ವತಗಳ ತಪ್ಪಲಿನಲ್ಲಿ ಒಂದು ಸಭೆಯನ್ನು ಸಂದರ್ಶಿಸುತ್ತಿದ್ದಾಗ. ಬೆಚ್ಚಗಿಡುವ ಯಾವುದೇ ವ್ಯವಸ್ಥೆಯಿಲ್ಲದ ಕೋಣೆಯಲ್ಲಿ ಹುಲ್ಲಿನ ಅಟ್ಟದ ಮೇಲೆ ನಾವು ಮಲಗಿದೆವು. ಕೊರೆಯುವ ಚಳಿ ಎಷ್ಟಿತ್ತೆಂದರೆ ನಾವು ನಮ್ಮ ಕೋಟುಗಳನ್ನು ಧರಿಸಿಕೊಂಡೇ ನಿದ್ದೆಹೋದೆವು. ಮಾತ್ರವಲ್ಲ ಅದೇ ರಾತ್ರಿ ನಾಲ್ಕು ಕೋಳಿಗಳೂ ಎರಡು ನಾಯಿಗಳೂ ಚಳಿಯಿಂದ ಸತ್ತವು.

ನಾನು ಡಿಸ್ಟ್ರಿಕ್ಟ್‌ ಮೇಲ್ವಿಚಾರಕನಾಗಿ ಸಹ ಸೇವೆಮಾಡಿದೆ. ಆ ವರ್ಷಗಳಲ್ಲಿ ಇಟಲಿಯಾದ್ಯಂತ ಸಂಚರಿಸಿದೆವು. ಕಲಾಬ್ರಿಯ, ಸಿಸಿಲಿ ಮುಂತಾದ ಕೆಲವು ಕ್ಷೇತ್ರಗಳನ್ನು ನಾವು ಅನೇಕ ಬಾರಿ ಸಂದರ್ಶಿಸಿದೆವು. ಯುವಜನರು ಆಧ್ಯಾತ್ಮಿಕವಾಗಿ ಬೆಳೆದು ಸಭಾ ಮೇಲ್ವಿಚಾರಕರೂ, ಸಂಚರಣ ಮೇಲ್ವಿಚಾರಕರೂ, ಬೆತೆಲ್‌ ಸೇವಕರೂ ಆಗಲು ಅರ್ಹರಾಗುವಂತೆ ನಾವು ತುಂಬ ಪ್ರೋತ್ಸಾಹ ನೀಡಿದೆವು.

ಯೆಹೋವನನ್ನು ಪೂರ್ಣ ಹೃದಯದಿಂದ ಸೇವಿಸಿದ ನಂಬಿಗಸ್ತ ಸ್ನೇಹಿತರಿಂದ ನಾವು ಹೆಚ್ಚು ವಿಷಯಗಳನ್ನು ಕಲಿತೆವು. ಯೆಹೋವನಿಗೆ ದೃಢನಿಷ್ಠೆ, ಔದಾರ್ಯ, ಸಹೋದರರ ಮೇಲಣ ಪ್ರೀತಿ, ಹೊಂದಿಸಿಕೊಳ್ಳುವ ಮತ್ತು ಸ್ವತ್ಯಾಗದ ಮನೋಭಾವ ಮುಂತಾದ ಅವರ ಸುಗುಣಗಳನ್ನು ನಾವು ಗಣ್ಯಮಾಡಿದೆವು. ನಾವು ರಾಜ್ಯ ಸಭಾಗೃಹಗಳಲ್ಲಿ ವಿವಾಹಗಳಿಗೂ ಹಾಜರಾದೆವು. ಅವು ಕಾನೂನುಬದ್ಧ ಧಾರ್ಮಿಕ ಶುಶ್ರೂಷಕರಾಗಿ ಪರಿಗಣಿಸಲಾದ ಸಾಕ್ಷಿಗಳಿಂದ ನಡೆಸಲ್ಪಟ್ಟವು; ಇದನ್ನು ಇಟಲಿಯಲ್ಲಿ ವರ್ಷಗಳ ಹಿಂದೆ ಯೋಚಿಸುವುದೂ ಅಸಾಧ್ಯವಾಗಿತ್ತು. ಟ್ಯುರಿನ್‌ನಲ್ಲಿ ಹಿಂದೆ ಮಾಡುತ್ತಿದ್ದಂತೆ ಈಗ ಸಭೆಗಳು ಕೂಟಗಳನ್ನು ಸಹೋದರರ ಅಡುಗೆಮನೆಗಳಲ್ಲಿ ನಡೆಸುತ್ತಿಲ್ಲ, ಕೂತುಕೊಳ್ಳಲು ಮಣೆಗಳನ್ನು ಬಳಸುವುದಿಲ್ಲ. ಬದಲಿಗೆ ಹೆಚ್ಚಿನ ಸಭೆಗಳು ಯೆಹೋವನನ್ನು ಮಹಿಮೆಪಡಿಸುವಂಥ ಸುಂದರ ರಾಜ್ಯ ಸಭಾಗೃಹಗಳನ್ನು ಹೊಂದಿವೆ. ನಾವೀಗ ಸಮ್ಮೇಳನಗಳನ್ನು ಸರಿಯಾದ ಸೌಲಭ್ಯಗಳಿಲ್ಲದ ಇಕ್ಕಟ್ಟಾದ ಸಭಾಂಗಣಗಳಲ್ಲಿ ನಡೆಸುತ್ತಿಲ್ಲ. ಬದಲಿಗೆ ಸುಂದರವಾದ ವಿಶಾಲ ಅಸೆಂಬ್ಲಿ ಹಾಲ್‌ಗಳಲ್ಲಿ ನಡೆಸುತ್ತೇವೆ. ಇಟಲಿಗೆ ನಾವು ಮೊದಲು ಬಂದಾಗ ಕೇವಲ 490 ಪ್ರಚಾರಕರು ಇದ್ದರಷ್ಟೆ. ಈಗ ಪ್ರಚಾರಕರ ಸಂಖ್ಯೆಯು 2,43,000ಕ್ಕೂ ಹೆಚ್ಚಿರುವುದನ್ನು ಕಾಣುವುದು ಅದೆಷ್ಟು ಉಲ್ಲಾಸಕರ!

ನಾವು ಸರಿಯಾದ ಆಯ್ಕೆಗಳನ್ನೇ ಮಾಡಿದೆವು

ಮನೇ ಹಂಬಲ, ಅಸ್ವಸ್ಥತೆ ಮುಂತಾದ ಕಷ್ಟಗಳನ್ನು ನಾವು ಎದುರಿಸಿದ್ದೆವು. ಪ್ರತಿ ಸಲ ಸಮುದ್ರವನ್ನು ನೋಡಿದಾಕ್ಷಣ ಫರ್ನ್‌ಗೆ ಮನೇ ನೆನಪು ಬರುತಿತ್ತು. ಮೂರು ಗಂಭೀರ ಶಸ್ತ್ರಕ್ರಿಯೆಗಳಿಗೂ ಆಕೆ ಒಳಗಾದಳು. ಒಮ್ಮೆ ಅವಳು ಬೈಬಲ್‌ ಅಧ್ಯಯನ ನಡೆಸಲು ಹೋಗುತ್ತಿದ್ದಾಗ ವಿರೋಧಿಯೊಬ್ಬನು ಕವೆಗೋಲಿನಿಂದ ಅವಳನ್ನು ಹೊಡೆದನು. ಇದರಿಂದಾಗಿಯೂ ಆಕೆ ಆಸ್ಪತ್ರೆ ಸೇರಬೇಕಾಯಿತು.

ಕೆಲವೊಮ್ಮೆ ನಮಗೆ ನಿರಾಶೆಯ ವಿರುದ್ಧ ಹೋರಾಡಬೇಕಾದರೂ ಪ್ರಲಾಪಗಳು 3:24ಕ್ಕೆ ಅನುಸಾರ ನಾವು ‘ಯೆಹೋವನಲ್ಲೇ ನಿರೀಕ್ಷೆ’ ಇಟ್ಟೆವು. ಆತನು ಸಂತೈಸುವ ದೇವರು. ಅಂಥ ಒಂದು ನಿರಾಶೆಯ ಸಂದರ್ಭದಲ್ಲಿ ಫರ್ನ್‌ಗೆ ಸಹೋದರ ನೇತನ್‌ ನಾರ್‌ ಅವರಿಂದ ಒಂದು ಸುಂದರ ಪತ್ರ ಬಂತು. ಅವರು ಬರೆದದ್ದು, ‘ಫರ್ನ್‌ ಪಯನಿಯರ್‌ ಸೇವೆ ಆರಂಭಿಸಿದ ಬೆತ್ಲೆಹೇಮಿನ ಸಮೀಪದ ಪೆನ್ಸಿಲ್ವೇನಿಯದಲ್ಲೇ ನಾನೂ ಹುಟ್ಟಿದೆ. ಆದಕಾರಣ ಪೆನ್ಸಿಲ್ವೇನಿಯದ ಡಚ್‌ ಮಹಿಳೆಯರಂತೆ ಅವಳೂ ಸ್ಥಿರಚಿತ್ತಳು ಹಾಗೂ ದೃಢಸಂಕಲ್ಪದವಳು ಆಗಿದ್ದಾಳೆಂದು ನನಗೆ ಗೊತ್ತು.’ ಅವರು ಹೇಳಿದ್ದು ಸರಿಯಾಗಿತ್ತು. ಇಂಥ ಉತ್ತೇಜನವು ವರ್ಷಗಳಿಂದಲೂ ನಮಗೆ ಅನೇಕ ಜನರಿಂದ ಅನೇಕ ವಿಧಗಳಲ್ಲಿ ದೊರೆತಿದೆ.

ಅನೇಕ ಸಂಕಷ್ಟಗಳ ನಡುವೆಯೂ ನಾವು ಶುಶ್ರೂಷೆಯಲ್ಲಿ ಹುರುಪನ್ನು ಕಾಪಾಡಲು ಪ್ರಯತ್ನಿಸಿದ್ದೇವೆ. ಫರ್ನ್‌ ಒಮ್ಮೆ ನಮ್ಮ ಉತ್ಸಾಹವನ್ನು ಲ್ಯಾಂಬ್ರೂಸ್ಕೋ ಎಂಬ ಮಿರುಮಿರುಗಿನ ಮಧುರ ಇಟ್ಯಾಲಿಯನ್‌ ವೈನ್‌ಗೆ ಹೋಲಿಸುತ್ತಾ, “ನಮ್ಮ ಉತ್ಸಾಹದ ಮಿರುಗು ಎಂದೂ ಕುಂದಿಹೋಗುವಂತೆ ನಾವು ಬಿಡಬಾರದು” ಎಂದು ನಗುತ್ತಾ ನುಡಿದಳು. 40ಕ್ಕಿಂತಲೂ ಹೆಚ್ಚು ವರ್ಷಗಳ ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಸೇವೆಗಳ ನಂತರ ನಮಗೆ ಇನ್ನೊಂದು ಹೊಸ ಸೇವಾಸದವಕಾಶ ಸಿಕ್ಕಿತು. ಅದೇನೆಂದರೆ ಇಟ್ಯಾಲಿಯನ್‌ ಬಿಟ್ಟು ಬೇರೆ ಭಾಷೆಗಳನ್ನಾಡುವ ಗುಂಪುಗಳನ್ನೂ ಸಭೆಗಳನ್ನೂ ಸಂದರ್ಶಿಸುವುದು ಮತ್ತು ಸಂಘಟಿಸುವುದೇ. ಅಂಥ ಗುಂಪುಗಳು ಇಂಡಿಯ, ಇಥಿಯೋಪಿಯ, ಎರಿಟ್ರೀಯ, ಘಾನ, ಚೈನಾ, ನೈಜಿರೀಯ, ಫಿಲಿಪ್ಪೀನ್ಸ್‌, ಬಾಂಗ್ಲಾದೇಶ, ಶ್ರೀಲಂಕ ಮತ್ತಿತರ ದೇಶಗಳಿಂದ ಬಂದ ಜನರಿಗೆ ಸಾರುತ್ತವೆ. ಯೆಹೋವನ ಕರುಣೆಯ ರುಚಿ ಸವಿದವರ ಜೀವಿತವನ್ನು ದೇವರ ವಾಕ್ಯದ ಶಕ್ತಿಯು ಬದಲಾಯಿಸುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆ ಆಶ್ಚರ್ಯಕರ ವಿಧಾನಗಳನ್ನೆಲ್ಲಾ ವಿವರಿಸುತ್ತಾ ಹೋದರೆ ಇಡೀ ಪುಸ್ತಕವೇ ಸಾಲದು!—ಮೀಕ 7:18, 19.

ಯೆಹೋವನು ನಮಗೆ ನಮ್ಮ ಶುಶ್ರೂಷೆಯನ್ನು ನಡೆಸಲು ಬೇಕಾದ ದೈಹಿಕ ಮತ್ತು ಮಾನಸಿಕ ಬಲವನ್ನು ಕೊಡುತ್ತಾ ಇರಲಿ ಎಂಬುದೇ ನಮ್ಮ ಅನುದಿನದ ಪ್ರಾರ್ಥನೆ. ಕರ್ತನ ಸಂತೋಷವೇ ನಮ್ಮ ಬಲ. ಅದು ನಮ್ಮ ಕಣ್ಣುಗಳನ್ನು ಕಳೆಗೊಳಿಸಿ, ನಾವು ಬೈಬಲಿನ ಸತ್ಯವನ್ನು ಪ್ರಸಿದ್ಧಪಡಿಸುತ್ತಿರುವಾಗ ಜೀವಿತದಲ್ಲಿ ಸರಿಯಾದ ಆಯ್ಕೆಗಳನ್ನೇ ಮಾಡಿದ್ದೇವೆ ಎಂಬ ದೃಢಭರವಸೆಯನ್ನು ಕೊಡುತ್ತದೆ.—ಎಫೆ. 3:7; ಕೊಲೊ. 1:29.

[ಪಾದಟಿಪ್ಪಣಿ]

^ ಪ್ಯಾರ. 18 1992ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌) ಪುಟ 95-184 ನೋಡಿ.

[ಪುಟ 27-29ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ನ್ಯೂ ಯಾರ್ಕ್‌ನ ರಾಚೆಸ್ಟರ್‌ನಲ್ಲಿ ನನ್ನ ಅಪ್ಪಅಮ್ಮ

1948

ಗಿಲ್ಯಡ್‌ನ 12ನೇ ಕ್ಲಾಸ್‌ಗಾಗಿ ಸೌತ್‌ ಲಾನ್ಸಿಂಗ್‌ನಲ್ಲಿ

1949

ಇಟಲಿಗೆ ಹೊರಡುವ ಮುನ್ನ ಫರ್ನ್‌ಳೊಂದಿಗೆ

ಇಟಲಿಯ ಕ್ಯಾಪ್ರಿ

1952

ಟ್ಯುರಿನ್‌ ಮತ್ತು ನೇಪಲ್ಸ್‌ನಲ್ಲಿ ಬೇರೆ ಮಿಷನೆರಿಗಳೊಂದಿಗೆ

1963

ಫರ್ನ್‌ ತನ್ನ ಕೆಲವು ಬೈಬಲ್‌ ವಿದ್ಯಾರ್ಥಿಗಳೊಂದಿಗೆ

“ನಮ್ಮ ಉತ್ಸಾಹದ ಮಿರುಗು ಎಂದೂ ಕುಂದಿಹೋಗುವಂತೆ ನಾವು ಬಿಡಬಾರದು”