ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಅದೊಂದು ಕಟ್ಟುಕಥೆನಾ?

ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಅದೊಂದು ಕಟ್ಟುಕಥೆನಾ?

ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಅದೊಂದು ಕಟ್ಟುಕಥೆನಾ?

ಆದಾಮ ಹವ್ವ ಮತ್ತು ಏದೆನ್‌ ತೋಟದ ಕಥೆ ನಿಮಗೆ ಗೊತ್ತಾ? ತುಂಬ ಜನ್ರಿಗೆ ಈ ಕಥೆ ಗೊತ್ತಿದೆ. ನಿಮಗೂ ತಿಳ್ಕೊಳಕ್ಕೆ ಇಷ್ಟ ಇದೆಯಾ? ಹಾಗಾದ್ರೆ ಆದಿಕಾಂಡ 1:26–3:24 ವಚನಗಳನ್ನ ಓದಿ. ಈ ಕಥೆಯ ಸಾರಾಂಶವನ್ನ ಈಗ ನೋಡೋಣ.

ಯೆಹೋವ ದೇವರು a ಮಣ್ಣಿಂದ ಮನುಷ್ಯನನ್ನ ಮಾಡಿ ಅವನಿಗೆ ಆದಾಮ ಅಂತ ಹೆಸರಿಟ್ಟು ಅವನನ್ನ ಏದೆನ್‌ ತೋಟದಲ್ಲಿ ಇರೋಕೆ ಬಿಟ್ಟನು. ನೋಡೋಕೆ ಸುಂದರವಾದ, ತಿನ್ನೋಕೆ ಒಳ್ಳೊಳ್ಳೆ ಮರಗಳ ಹಣ್ಣನ್ನ ಯೆಹೋವ ದೇವರು ಈ ತೋಟದಲ್ಲಿ ಬೆಳೆಯೋ ಹಾಗೆ ಮಾಡಿದ. ತೋಟದ ಮಧ್ಯದಲ್ಲಿ “ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರ” ಬೆಳೆಯೋ ಹಾಗೆ ಕೂಡ ಮಾಡಿದನು. ‘ಆ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಸತ್ತು ಹೋಗ್ತಿಯ’ ಅಂತನೂ ಹೇಳಿದ್ದನು. ಯೆಹೋವನು ಆದಾಮನ ಒಂದು ಪಕ್ಕೆ ಎಲುಬನ್ನ ತೆಗೆದು ಅದ್ರಿಂದ ಸ್ತ್ರೀಯನ್ನ ಮಾಡಿದನು. ಅವರಿಗೆ ತೋಟವನ್ನ ನೋಡ್ಕೊಳ್ಳೋಕೆ ಮತ್ತು ಮಕ್ಕಳನ್ನ ಪಡೆದು ಭೂಮಿಯನ್ನ ತುಂಬ್ಕೊಳ್ಳೋಕೆ ಹೇಳಿದನು.

ಹವ್ವ ತೋಟದಲ್ಲಿ ಒಬ್ಬಳೇ ಇದ್ದಾಗ ಒಂದು ಹಾವು ಬಂದು ತಿನ್ನಬೇಡ ಅಂತ ಹೇಳಿದ ಮರದ ಹಣ್ಣನ್ನ ತಿನ್ನು ಅಂತ ಹೇಳ್ತು. ‘ದೇವರು ನಿಮ್ಗೆ ಸುಳ್ಳು ಹೇಳಿದ್ದಾನೆ, ಆ ಹಣ್ಣನ್ನ ತಿಂದ್ರೆ ನೀವು ದೇವರ ತರ ಆಗ್ತೀರ’ ಅಂತ ಅದು ಹೇಳ್ತು. ಹಾವಿನ ಮಾತನ್ನ ನಂಬಿ ಹವ್ವ ಆ ಹಣ್ಣನ್ನ ತಿಂದಳು. ಆದಾಮ ಸಹ ಆ ಹಣ್ಣನ್ನ ತಿಂದು ದೇವರಿಗೆ ಅವಿಧೇಯತೆ ತೋರಿಸಿದ. ಅದಕ್ಕೆ ಯೆಹೋವ ದೇವರು ಆದಾಮ, ಹವ್ವ ಮತ್ತು ಹಾವಿಗೆ ಶಿಕ್ಷೆ ಕೊಟ್ರು. ತೋಟದಿಂದ ಇವರಿಬ್ರನ್ನ ಹೊರಗೆ ಹಾಕಿ ಅದನ್ನ ಕಾಯೋಕೆ ಇಬ್ಬರು ದೇವದೂತರನ್ನ ಯೆಹೋವ ಇಟ್ಟನು.

ಹಿಂದಿನ ಕಾಲದಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವ್ರೂ ಈ ಆದಿಕಾಂಡದಲ್ಲಿರೋ ಈ ವೃತ್ತಾಂತವನ್ನ ನಂಬಿದ್ರು. ಆದ್ರೆ ಇವತ್ತು ಬೈಬಲಲ್ಲಿ ಇರೋ ಈ ವಿಷ್ಯಗಳನ್ನ ಜನ ನಂಬ್ತಾ ಇಲ್ಲ. ಆದಾಮ, ಹವ್ವ ಏದೆನ್‌ ತೋಟ ಈ ವಿಷ್ಯಗಳನ್ನ ಯಾಕೆ ಜನ್ರು ನಂಬಲ್ಲ? ಅದಕ್ಕಿರೋ ನಾಲ್ಕು ಕಾರಣಗಳನ್ನ ಈಗ ನೋಡೋಣ.

1. ಏದೆನ್‌ ತೋಟ ನಿಜವಾಗ್ಲೂ ಇತ್ತಾ?

ಏದೆನ್‌ ತೋಟ ಅಸ್ತಿತ್ವದಲ್ಲೇ ಇರಲಿಲ್ಲ ಅಂತ ಅನೇಕರು ನಂಬ್ತಾರೆ. ಯಾಕೆ? ತತ್ವಶಾಸ್ತ್ರ ಇದಕ್ಕೊಂದು ಕಾರಣ ಆಗಿರ್ಬಹುದು. ಎಷ್ಟೋ ವರ್ಷಗಳ ತನಕ ಚರ್ಚಿನ ಮುಖಂಡರು ಭೂಮಿ ಮೇಲೆ ಎಲ್ಲೋ ಏದೆನ್‌ ತೋಟ ಇದೆ ಅಂತ ನಂಬಿದ್ರು. ಆದ್ರೆ ಗ್ರೀಕ್‌ ತತ್ವಜ್ಞಾನಿಗಳಾದ ಪ್ಲೇಟೊ ಮತ್ತು ಅರಿಸ್ಟಾಟಲ್‌, ಯಾವ ಪರಿಪೂರ್ಣ ವಿಷ್ಯನೂ ಈ ಭೂಮಿ ಮೇಲೆ ಇರಕ್ಕೆ ಸಾಧ್ಯನೇ ಇಲ್ಲ ಅನ್ನೊ ನಂಬಿಕೆ ಹರಡಿಸಿದ್ರಿಂದ ಏದೆನ್‌ ತೋಟ ಸ್ವರ್ಗದಲ್ಲಿ ಎಲ್ಲೋ ಇದೆ ಅಂತ ನಂಬಕ್ಕೆ ಜನ ಶುರು ಮಾಡಿದ್ರು. ಹಾಗಾಗಿ ತತ್ವಜ್ಞಾನಿಗಳು ಪರದೈಸ್‌ ಭೂಮಿಗೆ ಹತ್ರವಾಗಿದೆ ಅಂತ ನಂಬೋಕೆ ಶುರುಮಾಡಿದ್ರು. b ಈ ಭೂಮಿ ಮೇಲೆ ಕೆಟ್ಟ ವಿಷ್ಯಗಳು ತುಂಬಿರೋದ್ರಿಂದ ಏದೆನ್‌ ತೋಟ ಎತ್ತರವಾದ ಪರ್ವತದ ಮೇಲಿದೆ ಅಂತ ಇನ್ನು ಕೆಲವರು ನಂಬ್ತಿದ್ರು. ಇನ್ನು ಕೆಲವರು ಅದು ಉತ್ತರ ಅಥವಾ ದಕ್ಷಿಣ ಧ್ರುವದ ಹತ್ರ ಇದೆ ಅಂತ ಅನ್ಕೊಂಡ್ರು. ಚಂದ್ರನ ಹತ್ರ ಇದೆ ಅಂತ ಹೇಳಿದ್ದೂ ಇದೆ. ಇಂಥ ಅನೇಕ ನಂಬಿಕೆಗಳು ಇದ್ದಿದ್ರಿಂದ ಏದೆನ್‌ ತೋಟ ಒಂದು ನಿಜವಾದ ಸ್ಥಳ ಅಲ್ಲ ಅಂತ ಅನೇಕ ಜನ್ರಿಗೆ ಅನಿಸ್ತಿತ್ತು. ಇತ್ತೀಚಿನ ದಿನಗಳ ವಿದ್ವಾಂಸರು ಏದೆನ್‌ ತೋಟ ಅಸ್ತಿತ್ವದಲ್ಲಿತ್ತು ಅಂತಾನೇ ನಂಬಲ್ಲ.

ಬೈಬಲ್‌ನಲ್ಲಿ ಈ ತೋಟದ ಬಗ್ಗೆ ಏನಿದೆ ಅಂತ ಈಗ ನೋಡೋಣ. ಆದಿಕಾಂಡ 2:8-14ರಲ್ಲಿ ಇದರ ವಿವರಣೆ ಇದೆ. ಈ ತೋಟ ಪೂರ್ವ ದಿಕ್ಕಿನಲ್ಲಿ ಏದೆನ್‌ ಅನ್ನೋ ಜಾಗದಲ್ಲಿತ್ತು. ಇದರ ಮಧ್ಯೆ ಒಂದು ನದಿ ಹರಿತಿತ್ತು. ಆಮೇಲೆ ಈ ನದಿ ನಾಲ್ಕು ಭಾಗಗಳಾಯ್ತು. ಈ ನಾಲ್ಕು ನದಿಗಳ ಹೆಸ್ರು ಮತ್ತು ವಿಶೇಷತೆ ಬಗ್ಗೆ ಬೈಬಲ್‌ನಲ್ಲಿದೆ. ಈ ಎಲ್ಲಾ ವಿವರಣೆಗಳ ಆಧಾರದ ಮೇಲೆ ಅನೇಕ ವಿದ್ವಾಂಸರು ಏದೆನ್‌ ತೋಟ ಎಲ್ಲಿದೆ ಅಂತ ಹುಡುಕೋ ಪ್ರಯತ್ನ ಮಾಡಿದ್ದಾರೆ. ಆದ್ರೆ ಅವರಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹಾಗಾಗಿ ಬೈಬಲ್‌ನಲ್ಲಿ ಏದೆನ್‌ ಬಗ್ಗೆ, ನಾಲ್ಕು ನದಿಗಳ ಬಗ್ಗೆ ಮತ್ತು ತೋಟದ ಬಗ್ಗೆ ಇರೋ ವಿಷ್ಯಗಳು ಕೇವಲ ಕಲ್ಪನೆನಾ?

ಇದರ ಬಗ್ಗೆ ಯೋಚಿಸಿ: ಏದೆನ್‌ ತೋಟ ಅಸ್ತಿತ್ವದಲ್ಲಿದ್ದು 6,000 ವರ್ಷ ಕಳೆದಿದೆ. ಇಷ್ಟು ಸಮಯದಲ್ಲಿ ಅನೇಕ ವಿಷ್ಯಗಳು ಬದಲಾಗಿದೆ. ಉದಾಹರಣೆಗೆ ನದಿಗಳ ದಿಕ್ಕು ಬದಲಾಗಿದೆ, ಆ ತೋಟ ಇದ್ದ ಜಾಗದಲ್ಲಿ ಎಷ್ಟೋ ಸಲ ಭೂಕಂಪಗಳು ಆಗಿದೆ. ನೋಹನ ಸಮಯದಲ್ಲಾದ ಜಲಪ್ರಳಯದಿಂದ ಭೂಮಿಯ ಆಕೃತಿ ಕೂಡ ಬದಲಾಗಿದೆ. ಈ ಎಲ್ಲಾ ಕಾರಣಗಳಿಂದ ಏದೆನ್‌ ತೋಟ ನಿರ್ದಿಷ್ಟವಾಗಿ ಎಲ್ಲಿತ್ತು ಅಂತ ಹೇಳಕ್ಕಾಗಲ್ಲ. ಜೊತೆಗೆ, ಮೋಶೆ ಏದೆನ್‌ ತೋಟದ ಬಗ್ಗೆ ಬರೆದಾಗ ಅದು ಅಸ್ತಿತ್ವದಲ್ಲಿ ಇರಲಿಲ್ಲ. c

ನಮಗೆ ಗೊತ್ತಿರೋ ಕೆಲವು ನಿಜಾಂಶಗಳ ಬಗ್ಗೆ ನೋಡೋಣ: ಆದಿಕಾಂಡ ಪುಸ್ತಕದಲ್ಲಿ ಏದೆನ್‌ ತೋಟವನ್ನ ನಿಜವಾದ ಜಾಗ ಅಂತ ಹೇಳಲಾಗಿದೆ. ಅಲ್ಲಿ ಹರಿತಿದ್ದ ನಾಲ್ಕು ನದಿಗಳಲ್ಲಿ ಎರಡು ನದಿಗಳು ಅಂದ್ರೆ, ಯುಫ್ರೆಟಿಸ್‌ ಮತ್ತು ಹೆದ್ದೆಕೆಲ್‌ ಇಂದಿಗೂ ಹರಿತಾ ಇದೆ ಮತ್ತು ಈ ಎರಡೂ ನದಿಗಳು ಹುಟ್ಟೋ ಸ್ಥಳ ಒಂದೇ ಆಗಿದೆ. ಈ ನದಿಗಳು ಯಾವೆಲ್ಲಾ ಜಾಗಗಳಲ್ಲಿ ಹರಿತೋ ಅದರ ಬಗ್ಗೆ ಸಹ ಬೈಬಲ್‌ ವಿವರಣೆ ನೀಡುತ್ತೆ. ಬೈಬಲ್‌ ಸಮಯದಲ್ಲಿ ಜೀವಿಸ್ತಾ ಇದ್ದ ಜನ್ರಿಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿತ್ತು.

ಬೈಬಲಲ್ಲಿ ಏದೆನ್‌ ತೋಟದ ಬಗ್ಗೆ ಇರೋ ವಿಷ್ಯಗಳು ಕಟ್ಟುಕಥೆಗಳಲ್ಲ. ಜನ್ರು ಬೇಕಾದ್ರೆ ಬೈಬಲಲ್ಲಿ ಇರೋ ವಿವರಣೆಗಳನ್ನ ಪರೀಕ್ಷೆ ಮಾಡಿ ನೋಡ್ಬಹುದು ಆದ್ರೆ ಕಟ್ಟುಕಥೆಗಳನ್ನ ಪರೀಕ್ಷೆ ಮಾಡಕ್ಕಾಗಲ್ಲ.

2. ಆದಾಮನನ್ನ ಧೂಳಿನಿಂದ ಮತ್ತು ಹವ್ವಳನ್ನ ಆದಾಮನ ಪಕ್ಕೆ ಎಲುಬಿಂದ ಸೃಷ್ಟಿಸಿದನು ಅಂತ ನಂಬಬಹುದಾ?

ಮಣ್ಣಿನಲ್ಲಿರೋ ಕೆಲವು ಅಂಶಗಳು ಮಾನವ ದೇಹದಲ್ಲೂ ಇದೆ ಅಂತ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದ್ರೆ ಈ ಅಂಶಗಳಿಂದ ಹೇಗೆ ಮನುಷ್ಯನ ರಚನೆ ಆಯ್ತು?

ಜೀವ ಒಂದು ಸರಳ ಪ್ರಕ್ರಿಯೆಯಿಂದ ತನ್ನಿಂದ ತಾನೇ ಶುರುವಾಯ್ತು ಮತ್ತು ಲಕ್ಷಾಂತರ ವರ್ಷ ಕಳಿತಾ ಹೋದಂತೆ ತನ್ನಿಂದ ತಾನೇ ಅದು ಜಟಿಲವಾಯ್ತು ಅನೇಕ ವಿಜ್ಞಾನಿಗಳು ನಂಬ್ತಾರೆ. ಆದ್ರೆ ಜೀವವನ್ನ “ಸರಳ” ಅಂತ ನಾವು ಹೇಳಕ್ಕಾಗಲ್ಲ. ಯಾಕೆಂದ್ರೆ ಏಕಕೋಶ ಜೀವಿಗಳಾದ ಸೂಕ್ಷ್ಮ ಜೀವಿಗಳು ಸಹ ತುಂಬ ಜಟಿಲವಾಗಿರುತ್ತೆ. ಜೀವ ತನ್ನಿಂದ ತಾನೇ ಬಂತು ಅಂತ ಹೇಳಕ್ಕೆ ಇಲ್ಲಿವರೆಗೂ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಇನ್ಮುಂದೆನೂ ಸಿಗಲ್ಲ. ಎಲ್ಲಾ ಜೀವಿಗಳು ತೋರಿಸೋದು ಏನಂದ್ರೆ ಅವುಗಳ ರಚನೆ ನಮ್ಮೆಲ್ಲರಿಗಿಂತ ಬುದ್ಧಿವಂತ ವ್ಯಕ್ತಿಯಿಂದ ಆಗಿದೆ. dರೋಮನ್ನರಿಗೆ 1:20.

ಸುಂದರವಾದ ಸಂಗೀತ ಕೇಳಿಸ್ಕೊಂಡಾಗ, ಒಂದೊಳ್ಳೇ ಚಿತ್ರಕಲೆ ನೋಡ್ದಾಗ, ಜಟಿಲವಾಗಿ ಕೆಲಸ ಮಾಡೋ ಮಷೀನ್‌ ನೋಡ್ದಾಗ, ಇದನ್ನೆಲ್ಲಾ ಯಾರೂ ರಚಿಸಿಲ್ಲ, ಎಲ್ಲಾ ತನ್ನಿಂದ ತಾನೇ ಬಂತು ಅಂತ ನೀವು ಹೇಳ್ತೀರಾ? ಇಲ್ಲ. ಮಾನವ ಶರೀರಕ್ಕೆ ಈ ಎಲ್ಲಾ ವಿಷ್ಯಗಳನ್ನ ಹೋಲಿಸೋದಾದ್ರೆ, ಇವು ತುಂಬ ಸರಳ. ಆದಿಕಾಂಡ ಪುಸ್ತಕದಲ್ಲಿ ಹೇಳೋ ಪ್ರಕಾರ ಭೂಮಿಯಲ್ಲಿರೋ ಎಲ್ಲಾ ಜೀವಿಗಳಲ್ಲಿ ಮನುಷ್ಯರನ್ನ ಮಾತ್ರ ದೇವರಿಗೆ ಹೋಲುವ ರೀತಿಯಲ್ಲಿ ಸೃಷ್ಟಿಸಲಾಗಿದೆ. (ಆದಿಕಾಂಡ 1:26) ಹಾಗಾಗಿ ಮನುಷ್ಯರಲ್ಲೂ ರಚಿಸೋ ಸಾಮರ್ಥ್ಯ ಇದೆ. ಆದ್ರೆ ದೇವರಿಗಿಂತ ಚೆನ್ನಾಗಿ ರಚಿಸೋಕ್ಕೆ ಸಾಧ್ಯ ಇಲ್ಲ ಯಾಕೆಂದ್ರೆ ಸೃಷ್ಟಿಕರ್ತನು ದೇವರು ಮಾತ್ರ.

ಸ್ತ್ರೀಯನ್ನು ಮನುಷ್ಯನ ಪಕ್ಕೆ ಎಲುಬಿಂದ ಬಳಸಿ ಸೃಷ್ಟಿ ಮಾಡಲಾಯ್ತು. ಈ ಕೆಲಸ ದೇವರಿಗೆ ಕಷ್ಟ ಆಗಿರಲಿಲ್ಲ. e ದೇವರು ಸ್ತ್ರೀಯನ್ನು ಬೇರೆ ರೀತಿನೂ ಸೃಷ್ಟಿ ಮಾಡಬಹುದಿತ್ತು. ಆದ್ರೆ ಈ ವಿಧಾನ ಬಳಿಸಿದ್ರಲ್ಲಿ ಒಂದು ವಿಶೇಷತೆ ಇತ್ತು. ಅದೇನೆಂದರೆ ಮನುಷ್ಯ ಮತ್ತು ಸ್ತ್ರೀ ಹತ್ತಿರದ ಸಂಬಂಧವನ್ನು ಬೆಳೆಸ್ಕೊಂಡು “ಒಂದೇ ದೇಹ” ಆಗಬೇಕು ಅನ್ನೋದು ದೇವರ ಆಸೆಯಾಗಿತ್ತು. (ಆದಿಕಾಂಡ 2:24) ಈ ಸೃಷ್ಟಿಯನ್ನ ನೋಡುವಾಗ ದೇವರು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅನ್ನೋದು ಗೊತ್ತಾಗುತ್ತೆ.

ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದನೇ ಇಡೀ ಮಾನವ ಜಾತಿ ಬಂದಿದೆ ಅಂತ ಅನೇಕ ತಜ್ಞರು ಈಗ ನಂಬ್ತಾರೆ. ಹಾಗಾಗಿ ಸೃಷ್ಟಿ ಬಗ್ಗೆ ಬೈಬಲ್‌ನಲ್ಲಿರೋ ವಿಷಯಗಳನ್ನು ನಾವು ನಂಬಬಹುದು.

3. ತಿಳುವಳಿಕೆ ಕೊಡೋ ಮರ ಮತ್ತು ಜೀವದ ಮರ ನಿಜಾನಾ ಅಥವಾ ಸುಳ್ಳಾ.

ಆದಿಕಾಂಡ ಪುಸ್ತಕದಲ್ಲಿ ಹೇಳಿರೋ ಈ ಮರಗಳಿಗೆ ಯಾವುದೇ ವಿಶೇಷ ಶಕ್ತಿ ಇರಲಿಲ್ಲ. ಆದ್ರೆ ಯೆಹೋವ ದೇವರು ಈ ಮರಗಳಿಗೆ ವಿಶೇಷ ಅರ್ಥವನ್ನ ನೀಡಿದ್ರು.

ಇದನ್ನ ಅರ್ಥ ಮಾಡ್ಕೊಳಕ್ಕೆ ಒಂದು ಉದಾಹರಣೆ ನೋಡೋಣ. ಸರ್ಕಾರಕ್ಕೆ ನಾವು ಗೌರವ ತೋರಿಸಬೇಕು ಅಂದ್ರೆ ಸರ್ಕಾರಿ ಅಧಿಕಾರಿಗಳು ಸೇರಿ ಬರೋ ಬಿಲ್ಡಿಂಗ್‌ಗೆ ನಾವು ಗೌರವ ತೋರಿಸಬೇಕು ಅಂತಲ್ಲ. ಬದಲಿಗೆ ಸರ್ಕಾರಕ್ಕೆ ಇರೋ ಅಧಿಕಾರಕ್ಕೆ ನಾವು ಗೌರವ ತೋರಿಸಬೇಕು ಅಂತ ಅರ್ಥ.

ಹಾಗಾದ್ರೆ ಈ ಎರಡು ಮರಗಳು ಏನನ್ನ ಸೂಚಿಸುತ್ತೆ? ಜನ್ರು ಇದ್ರ ಬಗ್ಗೆ ಬೇರೆ-ಬೇರೆ ಅಭಿಪ್ರಾಯಗಳನ್ನ ಕೊಟ್ಟಿದ್ದಾರೆ. ಆದ್ರೆ ಸತ್ಯಾಂಶ ಮಾತ್ರ ಸರಳವಾಗಿದೆ ಮತ್ತು ತುಂಬಾ ಪ್ರಾಮುಖ್ಯವಾಗಿದೆ. ಒಳ್ಳೇದರ, ಕೆಟ್ಟದರ ತಿಳುವಳಿಕೆ ಕೊಡೋ ಮರ ಯಾವುದು ಸರಿ, ಯಾವುದು ತಪ್ಪು ಅನ್ನೋ ವಿಷಯವನ್ನ ನಿರ್ಣಯಿಸುವ ಹಕ್ಕನ್ನು ಸೂಚಿಸ್ತಾ ಇತ್ತು. (ಯೆರೆಮೀಯ 10:23) ಈ ಹಕ್ಕು ಇರೋದು ದೇವರಿಗೆ ಮಾತ್ರ. ಇದೇ ಕಾರಣದಿಂದ ಆದಾಮ ಹವ್ವ ಆ ಮರದ ಹಣ್ಣನ್ನ ಕದ್ದು ತಿಂದಾಗ ಅದೊಂದು ಗಂಭೀರ ತಪ್ಪಾಯ್ತು. ಜೀವದ ಮರ ಶಾಶ್ವತ ಜೀವನವನ್ನ ಸೂಚಿಸ್ತಾ ಇತ್ತು. ಈ ಉಡುಗೊರೆಯನ್ನ ಕೊಡೋಕ್ಕೆ ಸಾಧ್ಯವಾಗೋದು ದೇವರಿಗೆ ಮಾತ್ರ.—ರೋಮನ್ನರಿಗೆ 6:23.

4. ಹಾವು ಮಾತಾಡಿದ್ದು ಕಟ್ಟು ಕಥೆಯಾಗಿದೆ.

ಈ ವಿಷಯವನ್ನ ಅರ್ಥಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ ಆಗಬಹುದು. ಆದ್ರೆ ಏದೆನ್‌ ತೋಟದಲ್ಲಿ ನಿಜವಾಗಲೂ ಏನು ನಡೀತು ಅಂತ ತಿಳ್ಕೊಳೋಕೆ ಬೈಬಲ್‌ ನಮಗೆ ಸಹಾಯ ಮಾಡುತ್ತೆ.

ಹಾವು ಮಾತಾಡೋ ರೀತಿ ಮಾಡಿದ್ದು ಯಾರು? ಏದೆನ್‌ ತೋಟದಲ್ಲಿ ಹಾವು ಮಾತಾಡಿದ್ದನ್ನ ಅರ್ಥಮಾಡ್ಕೊಳ್ಳೋಕೆ ಇಸ್ರಾಯೇಲ್ಯರಿಗೆ ಬೇರೆ ಕಥೆಗಳು ಸಹಾಯ ಮಾಡಿದ್ವು. ಉದಾಹರಣೆಗೆ ಪ್ರಾಣಿಗಳಿಗೆ ಮಾತಾಡೋಕೆ ಆಗಲ್ಲ ಅಂತ ಅವ್ರಿಗೆ ಗೊತ್ತಿತ್ತು. ಆದ್ರೆ ಆತ್ಮ ಜೀವಿಗಳು, ಪ್ರಾಣಿಗಳು ಮಾತಾಡೋ ರೀತಿ ಮಾಡಿದ್ರು. ಮೋಶೆ ಬರೆದ ಬಿಳಾಮನ ಕಥೆಯನ್ನೇ ನೋಡಿ. ದೇವರು ಒಬ್ಬ ದೇವದೂತ ಮೂಲಕ ಬಿಳಾಮನ ಕತ್ತೆ ಮನುಷ್ಯರ ತರ ಮಾತಾಡೋ ರೀತಿಯಲ್ಲಿ ಮಾಡಿದನು.—ಅರಣ್ಯಕಾಂಡ 22:26-31; 2 ಪೇತ್ರ 2:15, 16.

ಕೆಟ್ಟ ಆತ್ಮ ಜೀವಿಗಳಿಗೆ ಅದ್ಭುತಗಳನ್ನ ಮಾಡೋಕಾಗುತ್ತಾ? ಸುಳ್ಳು ದೇವರುಗಳನ್ನು ಆರಾಧಿಸ್ತಿದ್ದ ಮಂತ್ರವಾದಿಗಳು ಕೋಲನ್ನ ನೆಲದ ಮೇಲೆ ಹಾಕಿದಾಗ ದೊಡ್ಡ ಹಾವಾಗಿದ್ದನ್ನ ಮೋಶೆ ನೋಡಿದ. ಈ ಶಕ್ತಿ ಅವ್ರಿಗೆ ಬಂದಿದ್ದು ಕೆಟ್ಟ ಆತ್ಮ ಜೀವಿಗಳಿಂದ.—ವಿಮೋಚನಕಾಂಡ 7:8-12.

ಯೋಬ ಪುಸ್ತಕವನ್ನ ಬರೆದಿದ್ದು ಕೂಡ ಮೋಶೆನೇ. ಈ ಪುಸ್ತಕದಲ್ಲಿ ದೇವರ ಮುಖ್ಯ ವೈರಿಯಾದ ಸೈತಾನ ದೇವಜನರ ನಿಷ್ಠೆಗೆ ಸವಾಲು ಹಾಕಿದ್ರ ಬಗ್ಗೆ ಇದೆ. (ಯೋಬ 1:6-11; 2:4, 5) ಹಾವಿನ ರೂಪದಲ್ಲಿ ಮಾತಾಡಿ ಹವ್ವಳಿಗೆ ಮೋಸ ಮಾಡಿದ ಸೈತಾನ ದೇವಜನರ ನಿಷ್ಠೆಗೂ ಸವಾಲು ಹಾಕಿದ ಅನ್ನೋದನ್ನ ಇಸ್ರಾಯೇಲ್ಯರು ಅರ್ಥಮಾಡ್ಕೊಂಡ್ರು.

ಹಾಗಾದರೆ ಸೈತಾನ ಹಾವು ಮಾತಾಡೋ ತರ ಮಾಡಿದನಾ? ಯೇಸು ಸೈತಾನ ಬಗ್ಗೆ ಏನು ಹೇಳಿದ ಅಂದ್ರೆ, ‘ಅವನು ಸುಳ್ಳು ಹೇಳ್ತಾನೆ.  . . ಸುಳ್ಳನ್ನ ಹುಟ್ಟಿಸಿದವನೇ ಅವನೇ.’ (ಯೋಹಾನ 8:44) ಹಾವಿನ ಮೂಲಕ ಸೈತಾನ ಹವ್ವಳಿಗೆ ಏನು ಹೇಳಿದನೋ ಅದೇ ಅವನು ಹೇಳಿದ ಮೊದಲನೇ ಸುಳ್ಳು. ಹವ್ವ ಮರದ ಹಣ್ಣನ್ನ ತಿನ್ನಬಹುದು ಮತ್ತು ಅವರು “ಖಂಡಿತ ಸಾಯಲ್ಲ” ಅಂತ ಅವನು ಸುಳ್ಳು ಹೇಳಿದ. (ಆದಿಕಾಂಡ 3:4) ಹಾವನ್ನ ಬಳಸಿ ಹವ್ವಳ ಹತ್ರ ಮಾತಾಡಿದ್ದು ಸೈತಾನನೇ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಪ್ರಕಟಣೆ ಪುಸ್ತಕದಲ್ಲಿ ಸೈತಾನನನ್ನ “ಹಳೇ ಹಾವು” ಅಂತ ಕರೆಯಲಾಗಿದೆ.—ಪ್ರಕಟನೆ 1:1; 12:9.

ಹಾವು ಮಾತಾಡ್ತಾ ಇದೆ ಅಂತ ತೋರಿಸೋಕೆ ಒಬ್ಬ ಆತ್ಮ ಜೀವಿಗೆ ಸಾಧ್ಯ ಅನ್ನೋದನ್ನ ನಾವು ಇದ್ರಿಂದ ತಿಳ್ಕೊಳ್ಳಬಹುದು. ಆತ್ಮ ಜೀವಿಗಳಿಗೆ ಇರೋಷ್ಟು ಶಕ್ತಿ ಮನುಷ್ಯರಿಗೆ ಇಲ್ಲ. ಹಾಗಿದ್ರು ಕೈಗೊಂಬೆ ಮಾತಾಡ್ತಿರೋ ರೀತಿಯಲ್ಲಿ ಧ್ವನಿ ಉಪಕರಣಗಳನ್ನ ಮನುಷ್ಯರು ಬಳಸ್ತಾರೆ.

ಏದೆನ್‌ ತೋಟ ಅಸ್ತಿತ್ವದಲ್ಲಿತ್ತು ಅನ್ನೋದಕ್ಕೆ ಬಲವಾದ ಆಧಾರ

ಆದಿಕಾಂಡ ಪುಸ್ತಕದಲ್ಲಿರೋ ವಿಷಯಗಳು ನಿಜ ಅಂತ ನಂಬೋಕೆ ಬಲವಾದ ಆಧಾರಗಳಿವೆ.

ಉದಾಹರಣೆಗೆ ಯೇಸು ಕ್ರಿಸ್ತನನ್ನ “ನಂಬಿಗಸ್ತ ಸತ್ಯ ಸಾಕ್ಷಿ” ಅಂತ ಕರೆಯಲಾಗಿದೆ. (ಪ್ರಕಟನೆ 3:14) ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಯಾವತ್ತೂ ಸುಳ್ಳು ಹೇಳಿಲ್ಲ. ಸತ್ಯವನ್ನ ತಿರುಚಿ ಮಾತಾಡಲಿಲ್ಲ. ಭೂಮಿ ಮೇಲೆ ಯೇಸು ಮನುಷ್ಯನಾಗಿ ಬರೋದಕ್ಕಿಂತ ಮುಂಚೆ ಆತನು ಅಸ್ತಿತ್ವದಲ್ಲಿದ್ದನು. “ಲೋಕ ಹುಟ್ಟೋದಕ್ಕಿಂತ ಮುಂಚೆ” ಯೇಸು ಯೆಹೋವನ ಜೊತೆ ಸ್ವರ್ಗದಲ್ಲಿ ಇದ್ದನು. (ಯೋಹಾನ 17:5) ಭೂಮಿ ಮೇಲೆ ಜೀವ ಶುರುವಾಗುವಾಗ ಯೇಸು ಅಸ್ತಿತ್ವದಲ್ಲಿದ್ದನು ಅಂತ ಇದ್ರಿಂದ ನಮಗೆ ಗೊತ್ತಾಗುತ್ತೆ. ಯೇಸು ಈ ವಿಷಯದ ಬಗ್ಗೆ ಏನಂದನು?

ಆದಾಮ ಹವ್ವರ ಬಗ್ಗೆ ಯೇಸು ಮಾತಾಡಿದಾಗ ಅವ್ರನ್ನ ನೈಜ ವ್ಯಕ್ತಿಗಳಾಗಿ ನೋಡಿದನು. ಮದುವೆ ಬಗ್ಗೆ ಯೆಹೋವ ದೇವರ ಮಟ್ಟವನ್ನ ತಿಳಿಸುವಾಗ ಯೇಸು ಇವ್ರ ಉದಾಹರಣೆಯನ್ನೇ ಬಳಸಿದ್ದನು. (ಮತ್ತಾಯ 19:3-6) ಏದೆನ್‌ ತೋಟ ಆಗ್ಲಿ, ಆದಾಮ ಹವ್ವ ಆಗ್ಲಿ ಅಸ್ತಿತ್ವದಲ್ಲೇ ಇಲ್ಲ ಅಂದಿದ್ರೆ ಯೇಸು ಹೇಳಿದ ಮಾತು ಸುಳ್ಳಾಗಿತ್ತು. ಸತ್ಯ ಏನೆಂದರೆ, ಆದಾಮ ಹವ್ವ ಯೆಹೋವ ದೇವರ ಮಾತನ್ನ ಕೇಳದಿದ್ದಾಗ ಅದನ್ನೆಲ್ಲ ಯೇಸು ಸ್ವರ್ಗದಿಂದ ನೋಡ್ತಾ ಇದ್ದನು. ಹಾಗಾಗಿ ಯೇಸುವಿನ ಮಾತನ್ನ ನಾವು ನಂಬಬಹುದು.

ಗಮನ ಕೊಡಬೇಕಾದ ಇನ್ನೊಂದು ವಿಷಯ ಏನಂದ್ರೆ, ಆದಿಕಾಂಡ ಪುಸ್ತಕದಲ್ಲಿರೋ ವಿಷಯಗಳನ್ನ ಜನ್ರು ನಂಬಲಿಲ್ಲ ಅಂದ್ರೆ ಅವರು ಯೇಸುವನ್ನೂ ನಂಬಲ್ಲ. ಏದೆನ್‌ ತೋಟ ಅಸ್ತಿತ್ವದಲ್ಲಿತ್ತು ಅನ್ನೋದನ್ನ ನಂಬಲಿಲ್ಲ ಅಂದ್ರೆ ಬೈಬಲ್‌ನಲ್ಲಿರೋ ಪ್ರಾಮುಖ್ಯ ಪಾಠಗಳನ್ನ ಮತ್ತು ದೇವರು ಕೊಟ್ಟ ಮಾತನ್ನ ನಂಬೋಕ್ಕೂ ನಮಗೆ ಕಷ್ಟ ಆಗುತ್ತೆ.

[ಪಾದಟಿಪ್ಪಣಿಗಳು]

a ಬೈಬಲಲ್ಲಿ ಯೆಹೋವ ಅನ್ನೋದು ದೇವರ ವೈಯಕ್ತಿಕ ಹೆಸರು.

b ಈ ಹೇಳಿಕೆ ತಪ್ಪಾಗಿದೆ. ಯಾಕೆಂದ್ರೆ, ಯೆಹೋವನು ಭೂಮಿಯನ್ನ ಸೃಷ್ಟಿಸಿದ ನಂತ್ರ “ಅದು ತುಂಬ ಚೆನ್ನಾಗಿತ್ತು” ಅಂತ ಹೇಳಿದನು. (ಆದಿಕಾಂಡ 1:31) ದೇವರು ಸೃಷ್ಟಿಸಿದ ಎಲ್ಲಾ ವಿಷ್ಯಗಳು ಪರಿಪೂರ್ಣವಾಗಿತ್ತು ಅಂತ ಇದ್ರಿಂದ ಗೊತ್ತಾಗುತ್ತೆ. ಅಪರಿಪೂರ್ಣತೆ ತುಂಬ ಸಮಯದ ನಂತ್ರ ಬಂತು.—ಧರ್ಮೋಪದೇಶಕಾಂಡ 32:4, 5.

c ದೇವರು ತಂದ ಜಲಪ್ರಳಯ ಏದೆನ್‌ ತೋಟದ ಅಸ್ತಿತ್ವನೇ ಅಳಿಸಿಹಾಕ್ತು. ಯೆಹೆಜ್ಕೇಲ 31:18ರಲ್ಲಿ ಹೇಳಿರೋ ‘ಏದೆನಿನ ಮರಗಳು’ ಕ್ರಿ.ಪೂ. 7ನೇ ಶತಮಾನದಷ್ಟಕ್ಕೆ ಇಲ್ದೇ ಹೋಗಿದ್ವು. ಹಾಗಾಗಿ ಆ ತೋಟವನ್ನ ಎಷ್ಟೇ ಹುಡುಕಿದ್ರೂ ಅದು ಸಿಗೋ ಸಾಧ್ಯತೆನೇ ಇರಲಿಲ್ಲ.

d ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾದ ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಬ್ರೋಷರ್‌ ನೋಡಿ.

e ತಜ್ಞರು ಕಂಡುಹಿಡಿದಿರೋ ವಿಷಯ ಏನಂದ್ರೆ ಪಕ್ಕೆ ಎಲುಬಿಗೆ ತನ್ನಿಂದ ತಾನೇ ಪುನಃ ಬೆಳೆಯೋ ಸಾಮರ್ಥ್ಯ ಇದೆ.