ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು

ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು

ಅವರ ನಂಬಿಕೆಯನ್ನು ಅನುಕರಿಸಿರಿ

ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು

ಶಿಲೋವಿನ ಜನರ ರೋದನ ಸಮುವೇಲನ ಎದೆ ಕರಗಿಸಿತ್ತು. ಇಡೀ ಪಟ್ಟಣದಲ್ಲಿ ಕಣ್ಣೀರ ಹೊಳೆ ಹರಿಯುತ್ತಿದೆಯೋ ಎಂಬಂತಿತ್ತು. ತಂದೆ, ಗಂಡ, ಪುತ್ರ, ಅಣ್ಣತಮ್ಮ ಇನ್ನು ಮನೆಗೆ ಹಿಂದಿರುಗುವುದಿಲ್ಲ ಎಂಬ ಸುದ್ದಿ ಕೇಳಿ ಹೆಂಗಸರ-ಮಕ್ಕಳ ಗೋಳಾಟ ಎಷ್ಟೊಂದು ಮನೆಗಳಿಂದ ಕೇಳಿಬರುತ್ತಿತ್ತೋ? ಯಾಕೆಂದರೆ ವೃತ್ತಾಂತ ತಿಳಿಸುವ ಪ್ರಕಾರ ಫಿಲಿಷ್ಟಿಯರೊಂದಿಗಿನ ಒಂದು ಯುದ್ಧದಲ್ಲಿ 4,000 ಇಸ್ರಾಯೇಲ್ಯ ಸೈನಿಕರು ಸಂಹಾರಗೊಂಡ ಬೆನ್ನಿಗೆ ಇನ್ನೊಂದು ಯುದ್ಧದಲ್ಲಿ ಸುಮಾರು 30,000 ಸೈನಿಕರ ಸಂಹಾರವಾಗಿ ಇಸ್ರಾಯೇಲ್ಯರು ದೊಡ್ಡ ಸೋಲುಂಡಿದ್ದರು.—1 ಸಮುವೇಲ 4:1, 2, 10.

ಇದು ಇಸ್ರಾಯೇಲ್ಯರ ಮೇಲೆ ಬಂದ ದುರಂತಗಳ ಸರಮಾಲೆಯ ಒಂದು ಭಾಗ ಅಷ್ಟೆ. ಮಹಾಯಾಜಕ ಏಲಿಯ ದುಷ್ಟ ಪುತ್ರರಾದ ಹೊಫ್ನಿಫೀನೆಹಾಸರು ಪವಿತ್ರ ಒಡಂಬಡಿಕೆಯ ಮಂಜೂಷವನ್ನು ಶಿಲೋವಿನಿಂದ ಹೊರಗೆ ತೆಗೆದುಕೊಂಡು ಹೋಗಿದ್ದರು. ಹೆಚ್ಚಾಗಿ ಈ ಮಂಜೂಷ ದೇವರ ಗುಡಾರ ಅಂದರೆ ಡೇರೆಯಂಥ ಆಲಯದ ಅತಿ ಪವಿತ್ರ ಸ್ಥಳದಲ್ಲಿತ್ತು. ಈ ಅಮೂಲ್ಯ ಪೆಟ್ಟಿಗೆ ದೇವರ ಸಾನಿಧ್ಯದ ಸಂಕೇತವಾಗಿತ್ತು. ಇದು ಯುದ್ಧದಲ್ಲಿ ಜಯ ದೊರಕಿಸುವ ತಾಯಿತಿಯಂತಿದೆ ಎಂಬ ಮೂಢ ಯೋಚನೆಯಿಂದ ಜನರು ಅದನ್ನು ಯುದ್ಧ ನಡೆಯುತ್ತಿದ್ದಲ್ಲಿಗೆ ತೆಗೆದುಕೊಂಡು ಹೋದರು. ಆದರೆ ಅದನ್ನು ಫಿಲಿಷ್ಟಿಯರು ವಶಪಡಿಸಿಕೊಂಡು ಹೊಫ್ನಿಫೀನೆಹಾಸರನ್ನು ಹತಿಸಿಬಿಟ್ಟರು.—1 ಸಮುವೇಲ 4:3-11.

ದೇವರ ಗುಡಾರವೂ ಅದರಲ್ಲಿದ್ದ ಮಂಜೂಷವೂ ಅನೇಕ ಶತಮಾನಗಳಿಂದ ಶಿಲೋವಿಗೆ ಗೌರವದ ಮೆರುಗು ತಂದಿತ್ತು. ಈಗ ಆ ಮಂಜೂಷವೇ ಅಲ್ಲಿರಲಿಲ್ಲ. ಅದು ಫಿಲಿಷ್ಟಿಯರ ವಶವಾದ ಸುದ್ದಿ ತಿಳಿದು 98 ವರ್ಷದ ಏಲಿ ಕೂತಲ್ಲಿಂದ ಹಿಂದಕ್ಕೆ ಬಿದ್ದು ಮೃತಪಟ್ಟನು. ಅದೇ ದಿನ ವಿಧವೆಯಾದ ಅವನ ಸೊಸೆಯೂ ಮಗುವನ್ನು ಹೆತ್ತು ಪ್ರಾಣಬಿಟ್ಟಳು. ಮಂಜೂಷ ಕಳಕೊಂಡದ್ದಕ್ಕಾಗಿ, ‘ಮಹಿಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತು’ ಎಂದಳಾಕೆ ಸಾಯುವ ಮುಂಚೆ. ಹೌದು, ಶಿಲೋ ಇನ್ನೆಂದಿಗೂ ಮುಂಚಿನಂತಿರದು.—1 ಸಮುವೇಲ 4:12-22.

ಇಂಥ ನಿರಾಶೆಗಳನ್ನು ಸಮುವೇಲನು ನಿಭಾಯಿಸಿದ್ದು ಹೇಗೆ? ಯೆಹೋವನ ಸಂರಕ್ಷಣೆ, ಅನುಗ್ರಹವನ್ನು ಕಳಕೊಂಡಿದ್ದ ಆ ಜನರಿಗೆ ಸಹಾಯಮಾಡಲು ತನ್ನ ಮುಂದಿದ್ದ ಸವಾಲನ್ನು ಎದುರಿಸಲು ಅವನ ನಂಬಿಕೆ ಸಾಧ್ಯಗೊಳಿಸಿತೋ? ಇಂದು ಕೆಲವೊಮ್ಮೆ ನಮ್ಮ ನಂಬಿಕೆಗೆ ಸಡ್ಡೊಡ್ಡುವ ಸಂಕಷ್ಟಗಳನ್ನೂ ನಿರಾಶೆಗಳನ್ನೂ ನಾವೆಲ್ಲರೂ ಎದುರಿಸುತ್ತೇವೆ. ಆದ್ದರಿಂದ ಸಮುವೇಲನಿಂದ ಏನು ಕಲಿಯಬಹುದೆಂದು ನಾವೀಗ ನೋಡೋಣ.

ಅವನು ‘ನೀತಿಯನ್ನು ನಡಿಸಿದನು’

ಬೈಬಲಿನ ಈ ದಾಖಲೆ ಈಗ ಸಮುವೇಲನ ವಿಷಯವನ್ನು ಬಿಟ್ಟು ಪವಿತ್ರ ಮಂಜೂಷದ ಜಾಡನ್ನು ಹಿಡಿಯುತ್ತಾ ಅದನ್ನು ಕಸಿದೊಯ್ದ ಫಿಲಿಷ್ಟಿಯರು ಯಾವ ಕಷ್ಟ ಅನುಭವಿಸಿದರು, ಅವರದನ್ನು ಹೇಗೆ ಹಿಂದಿರುಗಿಸಲೇ ಬೇಕಾಯಿತು ಎಂಬುದನ್ನು ತಿಳಿಸುತ್ತದೆ. ಸಮುವೇಲನ ಬಗ್ಗೆ ಪುನಃ ನಾವು ಓದುವುದು ಸುಮಾರು 20 ವರ್ಷಗಳಾದ ಬಳಿಕವೇ. (1 ಸಮುವೇಲ 7:2) ಆ ವರ್ಷಗಳಲ್ಲಿ ಸಮುವೇಲನು ಏನು ಮಾಡುತ್ತಿದ್ದನು? ಅದನ್ನು ಬೈಬಲೇ ಹೇಳುತ್ತದೆ.

ಆ 20 ವರ್ಷಗಳ ಅವಧಿ ಆರಂಭವಾಗುವ ಮುಂಚೆ “ಸಮುವೇಲನು ಇಸ್ರಾಯೇಲ್ಯರೆಲ್ಲರಿಗೆ ದೈವೋತ್ತರಗಳನ್ನು ತಿಳಿಸುತ್ತಿದ್ದನು [ತಿಳಿಸುತ್ತಾ ಇದ್ದನು, NW ]” ಎನ್ನುತ್ತದೆ ವೃತ್ತಾಂತ. (1 ಸಮುವೇಲ 4:1) ಆ ಅವಧಿಯ ನಂತರ ಸಮುವೇಲನು ಇಸ್ರಾಯೇಲಿನ ಮೂರು ಪಟ್ಟಣಗಳನ್ನು ಪ್ರತಿವರ್ಷ ಸುತ್ತುವ ರೂಢಿಮಾಡಿ ಅಲ್ಲಿದ್ದ ವ್ಯಾಜ್ಯಗಳನ್ನು ತೀರಿಸುತ್ತಾ ಪ್ರಶ್ನೆಗಳನ್ನು ಉತ್ತರಿಸುತ್ತಾ ಇದ್ದನು. ಆಮೇಲೆ ತನ್ನ ಊರಾದ ರಾಮಕ್ಕೆ ಹಿಂದಿರುಗುತ್ತಿದ್ದನೆಂದು ವೃತ್ತಾಂತ ಹೇಳುತ್ತದೆ. (1 ಸಮುವೇಲ 7:15-17) ಹೀಗೆ ಸಮುವೇಲನು ಸದಾ ಕಾರ್ಯಮಗ್ನನಾಗಿದ್ದನು ಹಾಗೂ ಆ 20 ವರ್ಷಗಳ ಅವಧಿಯಲ್ಲಿ ಅವನಿಗೆ ಮಾಡಲು ತುಂಬ ಕೆಲಸಗಳಿದ್ದವು ಎಂಬುದರಲ್ಲಿ ಸಂಶಯವಿಲ್ಲ.

ಏಲಿಯ ಪುತ್ರರ ಅನೈತಿಕತೆ ಮತ್ತು ಭ್ರಷ್ಟಾಚಾರ ಯೆಹೋವನ ಮೇಲೆ ಜನರಿಗಿದ್ದ ನಂಬಿಕೆಯನ್ನು ಕುಂದಿಸಿತು. ಇದರ ಪರಿಣಾಮವಾಗಿಯೊ ಏನೋ ಅನೇಕರು ವಿಗ್ರಹಾರಾಧಕರೂ ಆದರು. 20 ವರ್ಷಗಳ ಶ್ರಮದ ನಂತರ ಸಮುವೇಲನು ಜನರಿಗೆ ಈ ಸಂದೇಶ ಕೊಟ್ಟನು: “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವದಾದರೆ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್‌ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ; ಆಗ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು.”—1 ಸಮುವೇಲ 7:3.

ಫಿಲಿಷ್ಟಿಯರು ಇಸ್ರಾಯೇಲ್ಯರಿಗೆ ಬಹಳ ಕಾಟ ಕೊಡುತ್ತಿದ್ದರು. ಇಸ್ರಾಯೇಲ್ಯ ಸೈನ್ಯವನ್ನು ಅವರು ಸಂಪೂರ್ಣ ಸೋಲಿಸಿದ್ದರಿಂದ ದೇವಜನರಾಗಿದ್ದ ಈ ಇಸ್ರಾಯೇಲ್ಯರನ್ನು ಯಾವ ಭಯವೂ ಇಲ್ಲದೆ ಶೋಷಿಸುತ್ತಿದ್ದರು. ಇಸ್ರಾಯೇಲ್ಯರು ಯೆಹೋವನೆಡೆಗೆ ತಿರುಗಿಕೊಂಡರೆ ಮಾತ್ರ ಇಂಥ ಕಷ್ಟಗಳಿಂದ ಪಾರಾಗಲು ಸಾಧ್ಯ ಎಂದನು ಸಮುವೇಲನು. ಹಾಗೆ ಮಾಡಲು ಅವರು ಸಿದ್ಧರಿದ್ದರೋ? ಹೌದು, ಅವರು ತಮ್ಮಲ್ಲಿದ್ದ ವಿಗ್ರಹಗಳನ್ನೆಲ್ಲ ತೆಗೆದುಹಾಕಿ ‘ಯೆಹೋವನೊಬ್ಬನನ್ನೇ ಸೇವಿಸತೊಡಗಿದಾಗ’ ಸಮುವೇಲನು ಸಂತೋಷಗೊಂಡನು. ಅವನು ಯೆರೂಸಲೇಮಿನ ಉತ್ತರಕ್ಕಿರುವ ಪರ್ವತ ಪ್ರದೇಶವಾಗಿದ್ದ ಮಿಚ್ಪೆಯಲ್ಲಿ ಸೇರಿಬರುವಂತೆ ಜನರಿಗೆ ಕರೆಕೊಟ್ಟನು. ಜನರು ಸೇರಿಬಂದರು, ಉಪವಾಸ ಮಾಡಿದರು, ವಿಗ್ರಹಾರಾಧನೆಗೆ ಸಂಬಂಧಪಟ್ಟ ತಮ್ಮ ಅನೇಕ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು.—1 ಸಮುವೇಲ 7:4-6.

ಇಸ್ರಾಯೇಲ್ಯರ ದೊಡ್ಡ ಸಭೆಸೇರಿದ್ದರ ಬಗ್ಗೆ ಫಿಲಿಷ್ಟಿಯರು ತಿಳಿದಾಗ ಇದೇ ಸರಿಯಾದ ಸಮಯ ಅಂದುಕೊಂಡು ಯೆಹೋವನ ಈ ಆರಾಧಕರ ಹುಟ್ಟಡಗಿಸಬೇಕೆಂದು ಮಿಚ್ಪೆಗೆ ತಮ್ಮ ಸೈನ್ಯವನ್ನು ಕಳುಹಿಸಿದರು. ಇಸ್ರಾಯೇಲ್ಯರಿಗೆ ತಮ್ಮ ಮೇಲೆರಗಲಿರುವ ಈ ಅಪಾಯದ ಬಗ್ಗೆ ಸುದ್ದಿ ಸಿಕ್ಕಿತು. ಭಯಗೊಂಡ ಜನರು ಸಮುವೇಲನನ್ನು ತಮಗಾಗಿ ಪ್ರಾರ್ಥಿಸುವಂತೆ ಕೇಳಿಕೊಂಡರು. ಸಮುವೇಲನು ಪ್ರಾರ್ಥಿಸಿದನು, ಒಂದು ಯಜ್ಞವನ್ನೂ ಅರ್ಪಿಸಿದನು. ಈ ಪವಿತ್ರ ಸಮಾರಂಭದ ಸಮಯದಲ್ಲಿ ಫಿಲಿಷ್ಟಿಯರ ಸೈನ್ಯ ಮಿಚ್ಪೆಯನ್ನು ಸಮೀಪಿಸಿತು. ಆಗ ಯೆಹೋವನು ಸಮುವೇಲನ ಪ್ರಾರ್ಥನೆಯನ್ನು ಉತ್ತರಿಸಿದನು. ‘ದೊಡ್ಡಶಬ್ದದ ಗುಡುಗನ್ನು’ (NIBV) ಬರಮಾಡಿ ಒಂದರ್ಥದಲ್ಲಿ ಕ್ರೋಧದಿಂದ ಅಬ್ಬರಿಸಿದನು.—1 ಸಮುವೇಲ 7:7-10.

ಆ ಫಿಲಿಷ್ಟಿಯರು ಗುಡುಗಿನ ಆರ್ಭಟಕ್ಕೆ ಬೆಚ್ಚಿಬಿದ್ದು ಓಡಿ ಅಮ್ಮನ ಹಿಂದೆ ಅಡಗಿಕೊಳ್ಳುವ ಪುಟ್ಟ ಮಕ್ಕಳಂತಿದ್ದರೆಂದು ನಾವು ಎಣಿಸಬೇಕೋ? ಖಂಡಿತ ಇಲ್ಲ. ಅವರು ಯುದ್ಧ ಮಾಡಿ ಮಾಡಿ ಗಟ್ಟಿಗಡುಸಾಗಿದ್ದ ಸೈನಿಕರಾಗಿದ್ದರು. ಇಂಥವರು ಕಳವಳಗೊಳ್ಳಬೇಕಾದರೆ ಆ ಗುಡುಗು ಈ ವರೆಗೆ ಅವರು ಕೇಳಿರದಂಥ ಗುಡುಗಾಗಿದ್ದಿರಬೇಕು. ಆ ಗುಡುಗಿನ ಶಬ್ದ ಅಸಾಮಾನ್ಯವಾಗಿ ಗಟ್ಟಿಯಾಗಿತ್ತೇ? ಅಥವಾ ಅದು ಶುಭ್ರ ಆಕಾಶದಿಂದ ಬಂದಿತ್ತೇ? ಅಥವಾ ಪರ್ವತಗಳೆಡೆಯಿಂದ ಮಾರ್ದನಿಸಿ ಕಳವಳ ಉಂಟುಮಾಡಿತ್ತೇ? ಅದು ಎಲ್ಲಿಂದಲೇ ಬಂದಿದ್ದಿರಲಿ ಫಿಲಿಷ್ಟಿಯರ ಜಂಘಾಬಲವೇ ಉಡುಗಿಹೋಯಿತು. ಅವರೆಷ್ಟು ಗಲಿಬಿಲಿಗೊಂಡರೆಂದರೆ ಹುಲಿಗಳಂತೆ ಮುನ್ನುಗ್ಗಿದವರು ಇಲಿಗಳಂತೆ ಓಡಿಬಿಟ್ಟರು. ಮಿಚ್ಪೆಯಿಂದ ನುಗ್ಗಿಬಂದ ಇಸ್ರಾಯೇಲ್ಯ ಪುರುಷರು ಅವರನ್ನು ಸೋಲಿಸಿ ಯೆರೂಸಲೇಮಿನ ನೈಋತ್ಯಕ್ಕೆ ಮೈಲುಗಟ್ಟಳೆ ದೂರದವರೆಗೆ ಅಟ್ಟಿಸಿಕೊಂಡು ಹೋದರು.—1 ಸಮುವೇಲ 7:11.

ದೇವಜನರಿಗೆ ಈ ಯುದ್ಧ ಒಂದು ಮಹತ್ವದ ತಿರುಗುಬಿಂದು. ಅಂದಿನಿಂದ ಹಿಡಿದು, ಸಮುವೇಲನು ನ್ಯಾಯಾಧಿಪತಿಯಾಗಿದ್ದಷ್ಟು ಕಾಲವೆಲ್ಲ ಫಿಲಿಷ್ಟಿಯರು ಹಿಮ್ಮೆಟ್ಟುತ್ತಾ ಹೋದರು. ಒಂದರ ನಂತರ ಒಂದರಂತೆ ಪಟ್ಟಣಗಳು ಪುನಃ ದೇವಜನರ ಕೈವಶವಾದವು.—1 ಸಮುವೇಲ 7:13, 14.

ಅನೇಕ ಶತಕಗಳ ನಂತರ ಅಪೊಸ್ತಲ ಪೌಲನು ಸಮುವೇಲನನ್ನು ‘ನೀತಿಯನ್ನು ನಡಿಸಿದ’ ನಂಬಿಗಸ್ತ ಇಸ್ರಾಯೇಲ್ಯ ನ್ಯಾಯಾಧಿಪತಿಗಳ, ಪ್ರವಾದಿಗಳ ಪಟ್ಟಿಯಲ್ಲಿ ಸೇರಿಸಿದನು. (ಇಬ್ರಿಯ 11:32, 33, ಸತ್ಯವೇದವು) ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು, ಒಳ್ಳೇದನ್ನು ಮಾಡಲು ಸಮುವೇಲನು ಜನರಿಗೆ ಸಹಾಯಮಾಡಿದನು ಖಂಡಿತ. ತಾಳ್ಮೆಯಿಂದ ಯೆಹೋವನ ಮೇಲೆ ಆತುಕೊಂಡ ಕಾರಣ ನೀತಿಯ ಕೃತ್ಯಗಳನ್ನು ನಡೆಸಿದನು. ಎಷ್ಟೇ ನಿರಾಶೆಗಳು ಎದುರಾದರೂ ತನ್ನ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಹೋದನು. ಅಲ್ಲದೆ ಕೃತಜ್ಞತಾಭಾವವನ್ನೂ ತೋರಿಸಿದನು. ಮಿಚ್ಪೆಯಲ್ಲಿ ಜಯ ದೊರಕಿದ ನಂತರ ಯೆಹೋವನ ಸಹಾಯಹಸ್ತದ ನೆನಪಿಗಾಗಿ ಒಂದು ಸ್ಮಾರಕ ಸ್ತಂಭವನ್ನು ನಿಲ್ಲಿಸಿದನು.—1 ಸಮುವೇಲ 7:12.

ನೀವೂ ‘ನೀತಿಯನ್ನು ನಡಿಸಲು’ ಬಯಸುತ್ತೀರೋ? ಹೌದಾದರೆ ಸಮುವೇಲನ ತಾಳ್ಮೆ, ದೀನತೆ, ಕೃತಜ್ಞತಾಭಾವವನ್ನು ನೀವೂ ಕಲಿತುಕೊಳ್ಳುವುದು ಒಳ್ಳೇದು. ಇಂಥ ಗುಣಗಳು ನಮ್ಮಲ್ಲಿ ಯಾರಿಗೆ ತಾನೇ ಬೇಡ? ಸಮುವೇಲನು ತನ್ನ ಎಳೆಯ ಪ್ರಾಯದಲ್ಲಿ ಈ ಗುಣಗಳನ್ನು ಬೆಳೆಸಿಕೊಂಡದ್ದು ಒಳ್ಳೇದಾಯಿತು. ಅವನ ಇಳಿವಯಸ್ಸಿನಲ್ಲಿ ಅತೀವ ನಿರಾಶೆಗಳನ್ನು ನಿಭಾಯಿಸಲು ಅವು ನೆರವಾದವು.

“ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ”

ತರುವಾಯ ನಾವು ಸಮುವೇಲನ ಬಗ್ಗೆ ಓದುವುದು ಅವನು ಮುದುಕನಾಗಿದ್ದಾಗ. ಈ ಸಮಯದೊಳಗೆ ಅವನಿಗೆ ಯೋವೇಲ್‌ ಮತ್ತು ಅಬೀಯ ಎಂಬ ವಯಸ್ಕ ಪುತ್ರರಿದ್ದರು. ನ್ಯಾಯತೀರಿಸುವ ಕೆಲಸದಲ್ಲಿ ತನಗೆ ನೆರವಾಗಲಿಕ್ಕಾಗಿ ಸಮುವೇಲನು ಇವರಿಗೆ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಟ್ಟಿದ್ದನು. ಆದರೆ ದುಃಖದ ಸಂಗತಿಯೆಂದರೆ ಸಮುವೇಲ ತನ್ನ ಮಕ್ಕಳ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಯಿತು. ಸಮುವೇಲನು ಪ್ರಾಮಾಣಿಕನೂ ನೀತಿವಂತನೂ ಆಗಿದ್ದನಾದರೂ ಅವನ ಪುತ್ರರು ನ್ಯಾಯವನ್ನು ತಿರುಚುತ್ತಾ, ಲಂಚ ತೆಗೆದುಕೊಳ್ಳುತ್ತಾ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರು.—1 ಸಮುವೇಲ 8:1-3.

ಒಂದು ದಿನ ಇಸ್ರಾಯೇಲಿನ ಹಿರೀಪುರುಷರು ವೃದ್ಧ ಪ್ರವಾದಿ ಸಮುವೇಲನ ಬಳಿ ಬಂದು, “ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ” ಎಂದು ದೂರಿಟ್ಟರು. (1 ಸಮುವೇಲ 8:4, 5) ಇದು ಸಮುವೇಲನಿಗೆ ಗೊತ್ತಿತ್ತೇ? ಬೈಬಲ್‌ ಹೇಳುವುದಿಲ್ಲ. ಆದರೆ ಖಂಡಿತವಾಗಿಯೂ ಸಮುವೇಲನು ಏಲಿಯಂತೆ ಕರ್ತವ್ಯಚ್ಯುತ ತಂದೆಯಾಗಿರಲಿಲ್ಲ. ಏಲಿ ತನ್ನ ಪುತ್ರರನ್ನು ತಿದ್ದದೇ ಇದ್ದದ್ದಕ್ಕಾಗಿ ಮತ್ತು ದೇವರಿಗಿಂತ ಅವರನ್ನೇ ಹೆಚ್ಚು ಗೌರವಿಸಿದ್ದಕ್ಕಾಗಿ ಯೆಹೋವನು ಏಲಿಯನ್ನು ಖಂಡಿಸಿದ್ದನು, ಶಿಕ್ಷಿಸಿದ್ದನು. (1 ಸಮುವೇಲ 2:27-29) ಸಮುವೇಲನಲ್ಲಿ ಇಂಥ ತಪ್ಪು ಯೆಹೋವನಿಗೆ ಎಂದೂ ಸಿಕ್ಕಿರಲಿಲ್ಲ.

ತನ್ನ ಈ ಪುತ್ರರ ದುಷ್ಟ ನಡತೆಯ ಬಗ್ಗೆ ತಿಳಿದು ಬಂದಾಗ ಸಮುವೇಲನಿಗಾದ ಅಪಾರ ನೋವು, ನಾಚಿಕೆ, ನಿರಾಶೆಯ ಬಗ್ಗೆ ಬೈಬಲ್‌ ತಿಳಿಸುವುದಿಲ್ಲ. ಅವನ ಭಾವನೆಗಳನ್ನು ಇಂದು ಅನೇಕ ಹೆತ್ತವರು ಅರ್ಥಮಾಡಿಕೊಳ್ಳಬಲ್ಲರು. ಯಾಕೆಂದರೆ ಇಂದಿನ ಕಠಿನಕಾಲದಲ್ಲಿ ಮಕ್ಕಳು ಹೆತ್ತವರ ಅಧಿಕಾರ, ಶಿಸ್ತನ್ನು ಧಿಕ್ಕರಿಸಿ ನಡೆಯುವುದು ಸರ್ವಸಾಮಾನ್ಯ. (2 ತಿಮೊಥೆಯ 3:1-5) ಇಂಥ ನೋವನ್ನು ಅನುಭವಿಸುತ್ತಿರುವ ಹೆತ್ತವರು ಸಮುವೇಲನ ಉದಾಹರಣೆಯಿಂದ ಸ್ವಲ್ಪ ಮಟ್ಟಿಗಿನ ಸಾಂತ್ವನ, ಮಾರ್ಗದರ್ಶನ ಪಡೆಯಬಲ್ಲರು. ಮಕ್ಕಳ ಅಪನಂಬಿಕೆಯ ಕೃತ್ಯಗಳಿಂದಾಗಿ ಸಮುವೇಲನ ನಂಬಿಗಸ್ತ ಜೀವನಪಥವು ಸ್ವಲ್ಪವೂ ವಿಚಲಿತಗೊಳ್ಳಲಿಲ್ಲ. ಹೆತ್ತವರ ಮಾತುಗಳಾಗಲಿ, ಶಿಸ್ತಾಗಲಿ ಮಕ್ಕಳ ಹೃದಯವನ್ನು ಒಂದುವೇಳೆ ಮುಟ್ಟದಿದ್ದರೂ ಅವರ ಉತ್ತಮ ಮಾದರಿಯು ಮಕ್ಕಳ ಹೃದಯವನ್ನು ಮುಟ್ಟಬಹುದೆಂದು ನೆನಪಿಡಿ. ಅಲ್ಲದೆ ಸಮುವೇಲನು ಮಾಡಿದಂತೆ, ಹೆತ್ತವರಿಗೆ ತಮ್ಮ ತಂದೆಯಾದ ಯೆಹೋವನಿಗೆ ಮಹಿಮೆ ತರುವಂಥ ಸದವಕಾಶ ಯಾವಾಗಲೂ ಇದೆ.

“ನಮಗೂ ಒಬ್ಬ ಅರಸನನ್ನು ನೇಮಿಸು”

ಸಮುವೇಲನ ಪುತ್ರರ ದುರಾಶೆ, ಸ್ವಾರ್ಥಪರತೆ ಅವರು ಎಣಿಸಿರದಂಥ ಪರಿಣಾಮವನ್ನು ತಂದೊಡ್ಡಿತು. ಅದೇನೆಂದರೆ ಇಸ್ರಾಯೇಲಿನ ಹಿರೀಪುರುಷರು ಸಮುವೇಲನ ಬಳಿ ಒಬ್ಬ ರಾಜನಿಗಾಗಿ ಕೇಳಿಕೊಂಡದ್ದೇ. ಅವರಂದದ್ದು: “ಬೇರೆ ಎಲ್ಲಾ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸು; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ.” ಈ ಬೇಡಿಕೆಯಿಂದಾಗಿ ಜನರು ತನ್ನನ್ನು ತಿರಸ್ಕರಿಸಿದಂತೆ ಸಮುವೇಲನಿಗೆ ಅನಿಸಿತೋ? ಎಷ್ಟೆಂದರೂ ದಶಕಗಳಿಂದ ಸಮುವೇಲನು ಯೆಹೋವನ ಪರವಾಗಿ ಆ ಜನರಿಗೆ ನ್ಯಾಯತೀರಿಸುತ್ತಿದ್ದನು. ಆದರೆ ಈಗ ಅವರಿಗೆ ನ್ಯಾಯತೀರಿಸಲು ಸಮುವೇಲನಂಥ ಬರೇ ಒಬ್ಬ ಪ್ರವಾದಿ ಅಲ್ಲ, ಒಬ್ಬ ರಾಜ ಬೇಕಾಗಿದ್ದ. ಸುತ್ತಮುತ್ತಲಿದ್ದ ಜನಾಂಗಗಳಿಗೆ ರಾಜರಿದ್ದರಲ್ಲಾ, ಹಾಗಾಗಿ ಇಸ್ರಾಯೇಲ್ಯರಿಗೂ ರಾಜ ಬೇಕಾಗಿದ್ದ! ಸಮುವೇಲನ ಪ್ರತಿಕ್ರಿಯೆ ಏನಾಗಿತ್ತು? ಇದು ಅವನ ದೃಷ್ಟಿಯಲ್ಲಿ “ಕೆಟ್ಟದ್ದಾಗಿ ಕಾಣಿಸಿತು” (NIBV) ಎನ್ನುತ್ತದೆ ಬೈಬಲ್‌.—1 ಸಮುವೇಲ 8:5, 6.

ಈ ವಿಷಯವನ್ನು ಸಮುವೇಲನು ಪ್ರಾರ್ಥನೆಯ ಮೂಲಕ ಯೆಹೋವನ ಮುಂದಿಟ್ಟಾಗ ಯೆಹೋವನು ಏನು ಹೇಳಿದನೆಂದು ಗಮನಿಸಿ: “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ.” ಈ ಮಾತುಗಳು ಸಮುವೇಲನ ಮನಸ್ಸಿಗೆ ಎಷ್ಟು ತಂಪೆರಚಿರಬೇಕು! ಹಾಗಿದ್ದರೂ ಜನರ ಬೇಡಿಕೆ ಸರ್ವಶಕ್ತ ದೇವರಿಗೆ ಎಂಥ ಅವಮಾನ ತಂದಿತ್ತು! ಒಬ್ಬ ಅರಸನಿದ್ದಲ್ಲಿ ಜನರಿಗೆ ಕಷ್ಟ ಬರುವುದೆಂದು ಇಸ್ರಾಯೇಲ್ಯರನ್ನು ಎಚ್ಚರಿಸುವಂತೆ ಯೆಹೋವನು ಸಮುವೇಲನಿಗೆ ಹೇಳಿದನು. ಸಮುವೇಲನು ಇದನ್ನು ಹೇಳಿದರೂ ಜನರು “ಅದಿರಲಿ; ನಮಗೆ ಅರಸನನ್ನು ಕೊಡು” ಎಂದು ಹಠಹಿಡಿದರು. ಯೆಹೋವನ ಮಾತನ್ನು ಯಾವತ್ತೂ ಮೀರದ ಸಮುವೇಲನು ಯೆಹೋವನು ಆಯ್ದುಕೊಂಡವನನ್ನು ರಾಜನನ್ನಾಗಿ ಅಭಿಷೇಕಿಸಿದನು.—1 ಸಮುವೇಲ 8:7-19.

ಆದರೆ ಸಮುವೇಲನು ಯೆಹೋವನಿಗೆ ವಿಧೇಯನಾದದ್ದು ಮುನಿಸಿನಿಂದಲೋ ಅಥವಾ ಕಾಟಾಚಾರದಿಂದಲೋ? ನಿರಾಶೆ ಅವನ ಮನದಲ್ಲಿ ಕಹಿಭಾವನೆಯ ಬೀಜ ಬಿತ್ತಿ ಹೆಮ್ಮರವಾಗುವಂತೆ ಅವನು ಬಿಟ್ಟುಕೊಟ್ಟನೋ? ಇನ್ಯಾರಾದರೂ ಸಮುವೇಲನ ಸ್ಥಾನದಲ್ಲಿ ಇದ್ದಿದ್ದರೆ ಖಂಡಿತ ಹಾಗೆ ಮಾಡುತ್ತಿದ್ದರು, ಆದರೆ ಸಮುವೇಲನು ಹಾಗೆ ಮಾಡಲಿಲ್ಲ. ಸೌಲನನ್ನು ರಾಜನನ್ನಾಗಿ ಅಭಿಷೇಕಿಸಿದನು. ಅವನನ್ನು ಆಯ್ಕೆ ಮಾಡಿದವನು ಯೆಹೋವನೇ ಎಂದು ಅಂಗೀಕರಿಸಿದನು. ಅವನು ಸೌಲನಿಗೆ ಮುದ್ದಿಟ್ಟು ಹೀಗೆ ಹೊಸ ಅರಸನನ್ನು ಸ್ವಾಗತಿಸಿ ತನ್ನ ಅಧೀನತೆಯನ್ನು ವ್ಯಕ್ತಪಡಿಸಿದನು. ನಂತರ ಜನರಿಗೆ ಹೀಗಂದನು: “ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ.”—1 ಸಮುವೇಲ 10:1, 24.

ಯೆಹೋವನ ಆಯ್ಕೆಯಾಗಿದ್ದ ಸೌಲನಲ್ಲಿ ಸಮುವೇಲನು ಒಳ್ಳೇದನ್ನೇ ನೋಡಿದನು, ಕೆಟ್ಟದ್ದನ್ನಲ್ಲ. ತನ್ನ ವಿಷಯದಲ್ಲೂ ಸಮುವೇಲನು ಚಂಚಲ ಮನಸ್ಸಿನ ಇಸ್ರಾಯೇಲ್ಯರ ಅಂಗೀಕಾರ ಪಡೆಯುವ ಬದಲು ದೇವರಿಗೆ ಸಮಗ್ರತೆ ತೋರಿಸುವ ಉತ್ತಮ ದಾಖಲೆಯನ್ನಿಟ್ಟನು. (1 ಸಮುವೇಲ 12:1-4) ದೇವಜನರಿಗೆ ಆಧ್ಯಾತ್ಮಿಕ ಅಪಾಯಗಳು ಎದುರಾದಾಗ ಬುದ್ಧಿವಾದ ನೀಡುತ್ತಾ, ಯೆಹೋವನಿಗೆ ನಂಬಿಗಸ್ತರಾಗಿ ಇರುವಂತೆ ಪ್ರೋತ್ಸಾಹಿಸುತ್ತಾ ತನ್ನ ನೇಮಕವನ್ನು ನಂಬಿಗಸ್ತಿಕೆಯಿಂದ ಮಾಡಿದನು. ಅವನ ಬುದ್ಧಿವಾದ ಜನರ ಹೃದಯವನ್ನು ತಲಪಿತು. ಅವನು ತಮ್ಮ ಪರವಾಗಿ ದೇವರನ್ನು ಪ್ರಾರ್ಥಿಸುವಂತೆ ಅವರು ಬೇಡಿಕೊಂಡರು. ಆಗ ಸಮುವೇಲನು ಈ ಮನಮುಟ್ಟುವ ಉತ್ತರವನ್ನು ಕೊಟ್ಟನು: “ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ ಆತನ ಉತ್ತಮನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು.”—1 ಸಮುವೇಲ 12:21-24.

ಯಾವುದೋ ಒಂದು ಸ್ಥಾನ ಅಥವಾ ವಿಶೇಷ ಗೌರವಕ್ಕೆ ನಿಮ್ಮ ಬದಲು ಬೇರೊಬ್ಬರು ಆಯ್ಕೆಯಾದಾಗ ನಿಮಗೆ ನಿರಾಶೆಯಾಗಿದೆಯೋ? ಸಮುವೇಲನ ಮಾದರಿ ನಮಗೆ ನೆನಪಿಗೆ ತರುತ್ತದೇನೆಂದರೆ ಹೊಟ್ಟೆಕಿಚ್ಚು ಅಥವಾ ಅಸಮಾಧಾನ ಹೃದಯದಲ್ಲಿ ಬೇರೂರುವಂತೆ ನಾವೆಂದೂ ಬಿಡಬಾರದು. ಯಾಕೆಂದರೆ ದೇವರ ಸೇವೆಯಲ್ಲಿ ಪ್ರತಿಯೊಬ್ಬ ನಂಬಿಗಸ್ತ ಸೇವಕನಿಗೂ ಪ್ರತಿಫಲದಾಯಕ ಹಾಗೂ ತೃಪ್ತಿಕರವಾದ ತುಂಬಾ ಕೆಲಸವಿದೆ.

‘ನೀನು ಸೌಲನಿಗೋಸ್ಕರ ಎಷ್ಟರ ವರೆಗೆ ದುಃಖಿಸುತ್ತಿರುವಿ?’

ಸಮುವೇಲನು ಸೌಲನಲ್ಲಿ ಒಳ್ಳೇದನ್ನು ನೋಡಲು ಕಾರಣವಿತ್ತು. ಏಕೆಂದರೆ ಸೌಲ ಅಸಾಮಾನ್ಯ ವ್ಯಕ್ತಿಯಾಗಿದ್ದ. ಸುಂದರನೂ ನೀಳಕಾಯನೂ ಆಗಿದ್ದ ಅವನು ಧೈರ್ಯಶಾಲಿ, ಜಾಣನೂ ಆಗಿದ್ದರೂ ಮೊದಮೊದಲು ವಿನಮ್ರ, ನಿರಹಂಕಾರಿ ಆಗಿದ್ದ. (1 ಸಮುವೇಲ 10:22, 23, 27) ಇಂಥ ಗುಣಗಳ ಜೊತೆಗೆ ಇಚ್ಛಾಸ್ವಾತಂತ್ರ್ಯವೆಂಬ ಅಮೂಲ್ಯ ವರವೂ ಅವನಿಗಿತ್ತು. ಅಂದರೆ ಅವನು ತನ್ನ ಜೀವನಮಾರ್ಗವನ್ನು ತಾನೇ ಆರಿಸಿಕೊಂಡು, ಸ್ವತಃ ನಿರ್ಣಯಗಳನ್ನು ಮಾಡಬಹುದಿತ್ತು. (ಧರ್ಮೋಪದೇಶಕಾಂಡ 30:19) ಈ ವರವನ್ನು ಅವನು ಸರಿಯಾಗಿ ಬಳಸಿದನೋ?

ವ್ಯಕ್ತಿಯೊಬ್ಬನಲ್ಲಿ ಅಧಿಕಾರದ ಕಾವೇರುವಾಗ ಅವನಿಂದ ಕರಗಿಹೋಗಬಲ್ಲ ಮೊದಲ ಗುಣ ನಮ್ರತೆ. ಸೌಲನು ಕೂಡ ಸ್ವಲ್ಪ ಸಮಯದಲ್ಲೇ ಅಹಂಕಾರಿಯಾದ. ಯೆಹೋವನು ಸಮುವೇಲನ ಮೂಲಕ ಕೊಟ್ಟ ಆದೇಶಗಳಿಗೆ ಅವನು ಬೇಕೆಂದೇ ಅವಿಧೇಯನಾದ. ಒಮ್ಮೆಯಂತೂ ಸೌಲನು ತಾಳ್ಮೆ ಕಳೆದುಕೊಂಡು ಸಮುವೇಲನು ಮಾತ್ರ ಅರ್ಪಿಸಬೇಕಾಗಿದ್ದ ಯಜ್ಞವನ್ನು ತಾನೇ ಅರ್ಪಿಸಿದ. ಅದಕ್ಕಾಗಿ ಅವನಿಗೆ ಸಮುವೇಲನು ಕಟುವಾದ ತಿದ್ದುಪಾಟನ್ನು ನೀಡಬೇಕಾಗಿ ಬಂತು. ಅಷ್ಟೇ ಅಲ್ಲದೆ ಅರಸುತನ ಸೌಲನ ಮನೆತನದಲ್ಲಿ ನಿಲ್ಲುವುದಿಲ್ಲವೆಂದೂ ಮುಂತಿಳಿಸಿದನು. ಸಮುವೇಲನು ಕೊಟ್ಟ ಶಿಸ್ತಿನಿಂದ ಪಾಠ ಕಲಿತುಕೊಳ್ಳುವ ಬದಲು ಸೌಲನು ಇನ್ನಷ್ಟು ಹೆಚ್ಚು ಅವಿಧೇಯತೆಯ ಕೃತ್ಯಗಳನ್ನು ಮಾಡಿದ.—1 ಸಮುವೇಲ 13:8, 9, 13, 14.

ಒಮ್ಮೆ ಯೆಹೋವನು ಸೌಲನಿಗೆ ಶತ್ರುಗಳಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡುವಂತೆ ಸಮುವೇಲನ ಮೂಲಕ ತಿಳಿಸಿದನು. ಅಮಾಲೇಕ್ಯರ ದುಷ್ಟ ಅರಸ ಅಗಾಗನನ್ನು ಕೊಲ್ಲುವಂತೆಯೂ ಎಲ್ಲವನ್ನು ನಾಶಮಾಡುವಂತೆಯೂ ಯೆಹೋವನು ಆದೇಶ ನೀಡಿದ್ದನು. ಆದರೆ ಸೌಲ ಅಗಾಗನನ್ನು ಕೊಲ್ಲಲಿಲ್ಲ, ಕೊಳ್ಳೆಯಲ್ಲಿದ್ದ ಒಳ್ಳೊಳ್ಳೆ ವಸ್ತುಗಳನ್ನೂ ನಾಶಮಾಡಲಿಲ್ಲ. ಅವನ ಈ ತಪ್ಪನ್ನು ಸಮುವೇಲನು ತಿದ್ದಲು ಬಂದಾಗ ಸೌಲನು ಎಷ್ಟು ಬದಲಾಗಿದ್ದನೆಂಬುದು ಬಯಲಾಯಿತು. ಅವನು ನಮ್ರತೆಯಿಂದ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಅದನ್ನು ತೇಲಿಸಿಬಿಟ್ಟನು, ನೆಪಗಳನ್ನು ಕೊಟ್ಟನು, ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡನು, ನುಣುಚಿಕೊಳ್ಳಲು ಪ್ರಯತ್ನಿಸಿದನು ಮತ್ತು ತನ್ನ ತಪ್ಪನ್ನು ಜನರ ಮೇಲೆ ಹೊರಿಸಲು ಯತ್ನಿಸಿದನು. ಸಮುವೇಲನು ಕೊಟ್ಟ ಶಿಸ್ತನ್ನು ನಗಣ್ಯ ಮಾಡುತ್ತಾ ಕೊಳ್ಳೆಯಲ್ಲಿದ್ದ ವಸ್ತುಗಳನ್ನು ಯೆಹೋವನಿಗೆ ಯಜ್ಞಾರ್ಪಿಸಲಿಕ್ಕಾಗಿ ತಂದೆನೆಂದು ಹೇಳಿದಾಗ ಸಮುವೇಲನು “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ” ಎಂಬ ಸುಪರಿಚಿತ ಮಾತುಗಳನ್ನು ನುಡಿದನು. ಅಲ್ಲದೆ ಧೈರ್ಯದಿಂದ ಸೌಲನನ್ನು ಖಂಡಿಸಿ ಯೆಹೋವನ ಈ ತೀರ್ಮಾನದ ಬಗ್ಗೆ ತಿಳಿಸಿದನು: ಅರಸುತನವು ಸೌಲನಿಂದ ಕೀಳಲ್ಪಟ್ಟು ಇನ್ನೊಬ್ಬ ಸಮರ್ಥ ವ್ಯಕ್ತಿಗೆ ನೀಡಲಾಗುವುದು.—1 ಸಮುವೇಲ 15:1-33.

ಸೌಲನ ಈ ಎಲ್ಲ ತಪ್ಪುಗಳಿಂದಾಗಿ ಸಮುವೇಲನು ತುಂಬ ನೊಂದುಕೊಂಡನು. ಆ ವಿಷಯವನ್ನು ಇಡೀ ರಾತ್ರಿ ಯೆಹೋವನ ಮುಂದೆ ತೋಡಿಕೊಂಡನು. ಸೌಲನಿಗಾಗಿ ದುಃಖಿಸುತ್ತಿದ್ದನು ಸಹ. ಏಕೆಂದರೆ ಸಮುವೇಲನು ಸೌಲನಲ್ಲಿದ್ದ ಒಳ್ಳೇ ಗುಣಗಳನ್ನೂ ಸಾಮರ್ಥ್ಯವನ್ನೂ ಮುನ್ನೋಡಿದ್ದನು. ಈಗ ಆ ಎಲ್ಲ ನಿರೀಕ್ಷೆಗಳು ನುಚ್ಚುನೂರಾಗಿದ್ದವು. ಸೌಲನು ಮುಂಚಿನಂತಿರಲಿಲ್ಲ, ಬದಲಾಗಿದ್ದನು. ಅವನು ತನ್ನ ಸದ್ಗುಣಗಳನ್ನೆಲ್ಲ ಗಾಳಿಗೆ ತೂರಿ ಯೆಹೋವನಿಗೆ ತಿರುಗಿಬಿದ್ದನು. ಆದ್ದರಿಂದ ಸಮುವೇಲನು ಸೌಲನನ್ನು ಇನ್ನೆಂದಿಗೂ ನೋಡಲು ಬಯಸಲಿಲ್ಲ. ಸಮಯಾನಂತರ ಯೆಹೋವನು ಸಮುವೇಲನ ದೃಷ್ಟಿಕೋನವನ್ನು ಸೌಮ್ಯವಾಗಿ ತಿದ್ದುತ್ತಾ ಅಂದದ್ದು: “ನಾನು ಸೌಲನನ್ನು ಇಸ್ರಾಯೇಲ್ಯರ ಅರಸನಾಗಿರುವದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲಾ; ನೀನು ಅವನಿಗೋಸ್ಕರ ಎಷ್ಟರ ವರೆಗೆ ದುಃಖಿಸುತ್ತಿರುವಿ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ.”—1 ಸಮುವೇಲ 15:34, 35; 16:1.

ಯೆಹೋವನ ಉದ್ದೇಶವು ಸ್ಥಿರ ನಿಷ್ಠೆಯಿಲ್ಲದ ಅಪರಿಪೂರ್ಣ ಮಾನವರ ಮೇಲೆ ಹೊಂದಿಕೊಂಡಿಲ್ಲ. ಒಬ್ಬನು ಅಪನಂಬಿಗಸ್ತಿಕೆ ತೋರಿಸಿದರೆ ಯೆಹೋವನು ತನ್ನ ಕೆಲಸವನ್ನು ಮುಂದುವರಿಸಲು ಇನ್ನೊಬ್ಬನನ್ನು ಆರಿಸಿಕೊಳ್ಳುವನು. ಆದ್ದರಿಂದ ವೃದ್ಧ ಸಮುವೇಲನು ಸೌಲನಿಗಾಗಿ ದುಃಖಿಸುವುದನ್ನು ಬಿಟ್ಟುಬಿಟ್ಟನು. ಯೆಹೋವನ ನಿರ್ದೇಶನಕ್ಕನುಸಾರ ಸಮುವೇಲನು ಬೇತ್ಲೆಹೇಮಿನಲ್ಲಿದ್ದ ಇಷಯನ ಮನೆಗೆ ಹೋದನು. ಅಲ್ಲಿ ಇಷಯನ ಹಲವು ಸ್ಫುರದ್ರೂಪಿ ಪುತ್ರರನ್ನು ಸಂಧಿಸಿದನು. ಆದರೆ ಯೆಹೋವನು ಅವನಿಗೆ ಮೊದಲೇ ನೆನಪಿಸಿದ್ದು: “ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; . . . ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಕೊನೆಗೆ ಸಮುವೇಲನು ಇಷಯನ ಕಿರೀಮಗನನ್ನು ಭೇಟಿಯಾದನು. ಇವನೇ ಯೆಹೋವನ ಆಯ್ಕೆಯಾಗಿದ್ದ ದಾವೀದ!

ಸೌಲನ ಸ್ಥಾನಕ್ಕೆ ದಾವೀದನನ್ನು ಆಯ್ಕೆಮಾಡುವ ನಿರ್ಣಯ ಎಷ್ಟು ಸರಿಯಾಗಿತ್ತೆಂದು ಸಮುವೇಲನು ಇನ್ನಷ್ಟು ಸ್ಪಷ್ಟವಾಗಿ ಕಂಡದ್ದು ತನ್ನ ಜೀವಿತಾವಧಿಯ ಕೊನೇ ವರ್ಷಗಳಲ್ಲಿ. ಸೌಲನ ಹೊಟ್ಟೆಕಿಚ್ಚು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಾವೀದನನ್ನು ಕೊಲ್ಲಲೂ ಪ್ರಯತ್ನಿಸಿದ. ಅಲ್ಲದೆ ಧರ್ಮಭ್ರಷ್ಟನೂ ಆದ. ದಾವೀದನಾದರೋ ಧೈರ್ಯ, ಸಮಗ್ರತೆ, ನಂಬಿಕೆ, ನಿಷ್ಠೆಯಂಥ ಸೊಗಸಾದ ಗುಣಗಳನ್ನು ತೋರಿಸಿದನು. ಸಮುವೇಲನ ಕೊನೆಗಾಲ ಸಮೀಪಿಸುತ್ತಿದ್ದಂತೆ ಅವನ ನಂಬಿಕೆ ಇನ್ನಷ್ಟು ಬಲವಾಯಿತು. ಎಷ್ಟೇ ದೊಡ್ಡ ನಿರಾಶದಾಯಕ ಸಮಸ್ಯೆ ಅಥವಾ ಸನ್ನಿವೇಶವನ್ನಾಗಲಿ ಯೆಹೋವನು ಹೋಗಲಾಡಿಸಬಲ್ಲನು, ಅದನ್ನು ಆಶೀರ್ವಾದದಾಯಕವನ್ನಾಗಿಯೂ ಮಾಡಶಕ್ತನು ಎಂದವನು ತಿಳಿದುಕೊಂಡನು. ಕೊನೆಗೆ ಸಮುವೇಲನು ತೀರಿಕೊಂಡಾಗ ಹೆಚ್ಚುಕಡಿಮೆ ಒಂದು ಶತಕದಷ್ಟು ದೀರ್ಘ ಬದುಕಿನ ಗಮನಾರ್ಹ ದಾಖಲೆಯನ್ನು ಬಿಟ್ಟುಹೋದನು. ಈ ನಂಬಿಗಸ್ತ ಪುರುಷನ ಸಾವಿಗಾಗಿ ಇಡೀ ಇಸ್ರಾಯೇಲೇ ಶೋಕಿಸಿದರಲ್ಲಿ ಅಚ್ಚರಿಯಿಲ್ಲ! ಇಂದು ಕೂಡ, ‘ಸಮುವೇಲನ ನಂಬಿಕೆಯನ್ನು ನಾನು ಅನುಕರಿಸುವೆನೋ?’ ಎಂದು ಯೆಹೋವನ ಸೇವಕರು ಕೇಳಿಕೊಳ್ಳುವುದು ಒಳ್ಳೇದು. (w11-E 01/01)

[ಪುಟ 17ರಲ್ಲಿರುವ ಚಿತ್ರ]

ತನ್ನ ಜನರು ಭಾರೀ ನಷ್ಟ, ನಿರಾಶೆಯನ್ನು ಸಹಿಸುವಂತೆ ನೆರವಾಗಲು ಸಮುವೇಲನು ಹೇಗೆ ಶಕ್ತನಾದನು?

[ಪುಟ 18ರಲ್ಲಿರುವ ಚಿತ್ರ]

ತನ್ನ ಪುತ್ರರು ಕೆಟ್ಟಹಾದಿ ಹಿಡಿದಿದ್ದಾರೆಂಬ ನಿರಾಶೆಯನ್ನು ಸಮುವೇಲ ಹೇಗೆ ನಿಭಾಯಿಸಿದನು?