ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರನ್ನು ಗೌರವಿಸಲು ಮಕ್ಕಳಿಗೆ ಕಲಿಸಿರಿ

ಇತರರನ್ನು ಗೌರವಿಸಲು ಮಕ್ಕಳಿಗೆ ಕಲಿಸಿರಿ

ಇತರರನ್ನು ಗೌರವಿಸಲು ಮಕ್ಕಳಿಗೆ ಕಲಿಸಿರಿ

“ನಡೆನುಡಿಯಲ್ಲಿ ನಯವಿನಯವಿದ್ದರೆ ಏನನ್ನಾದರೂ ಸಾಧಿಸಬಹುದು” ಎನ್ನುತ್ತಾರೆ ಬಲ್ಲವರು. ಆದಕಾರಣ ಯಾರು ಇತರರೆಡೆಗೆ ದಯಾಭರಿತ ಸದ್ವರ್ತನೆ ತೋರಿಸುತ್ತಾರೋ ಅವರನ್ನು ಜನರು ಸಹ ದಯೆಯಿಂದ ಒಲುಮೆಯಿಂದ ಪರಿಗಣಿಸುತ್ತಾರೆ.

ಸಭ್ಯವರ್ತನೆ ತೋರಿಸುವ ಯುವಜನರನ್ನು ಕಾಣುವುದು ಅದೆಷ್ಟು ಉಲ್ಲಾಸಕರ! ವಿವಿಧ ಪ್ರಾಯದ ಪ್ರಚಾರಕರೊಂದಿಗೆ ಮನೆಮನೆಯ ಸೌವಾರ್ತಿಕ ಸೇವೆ ಮಾಡುವ ಹಾಂಡ್ಯುರಸ್‌ ದೇಶದ ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಹೇಳುವುದು: “ಸುಶಿಕ್ಷಿತರೂ ಗೌರವಪರರೂ ಆದ ಮಕ್ಕಳ ಮಾತುಗಳು ನನ್ನ ಮಾತುಗಳಿಗಿಂತ ಮನೆಯವರ ಮೇಲೆ ಹೆಚ್ಚು ಪ್ರಭಾವ ಬೀರುವುದನ್ನು ನಾನು ಅನೇಕವೇಳೆ ಕಂಡಿದ್ದೇನೆ.”

ಅಗೌರವ ತೋರಿಸುವ ಪ್ರವೃತ್ತಿಯು ಹೆಚ್ಚಾಗುತ್ತಾ ಇರುವ ಈ ಕಾಲದಲ್ಲಿ ಇತರರನ್ನು ಉಪಚರಿಸುವುದು ಹೇಗೆಂದು ತಿಳಿಯುವುದು ವ್ಯಾವಹಾರಿಕವೂ ಪ್ರಯೋಜನಕಾರಿಯೂ ಆಗಿದೆ. ಅದಲ್ಲದೆ “ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲಿಯೇ ನಡೆದುಕೊಳ್ಳಿರಿ” ಎಂದು ಬೈಬಲ್‌ ನಮಗೆ ಬೋಧಿಸುತ್ತದೆ. (ಫಿಲಿ. 1:27; 2 ತಿಮೊ. 3:1-5) ಆದ್ದರಿಂದ ನಮ್ಮ ಮಕ್ಕಳು ಇತರರಿಗೆ ಗೌರವ ತೋರಿಸುವಂತೆ ನಾವು ಕಲಿಸುವುದು ಪ್ರಾಮುಖ್ಯ. ಮಕ್ಕಳು ಬರೇ ಬಾಹ್ಯರೀತಿಯ ವಿನಯದಿಂದಲ್ಲ, ನಿಜವಾಗಿ ಗೌರವತೋರಿಸುವವರಾಗಿ ನಡೆಯುವಂತೆ ನಾವು ಹೇಗೆ ಕಲಿಸಬಹುದು? *

ಸದ್ವರ್ತನೆಯ ಕಲಿಕೆ ಮಾದರಿಯಿಂದ

ತಾವು ಕಣ್ಣಾರೆಕಾಣುವ ಮಾದರಿಗಳನ್ನು ಅನುಕರಿಸುವ ಮೂಲಕ ಮಕ್ಕಳು ಕಲಿಯುತ್ತಾರೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳಲ್ಲಿ ಸದ್ವರ್ತನೆಯನ್ನು ಬೇರೂರಿಸುವ ಪ್ರಮುಖ ವಿಧಾನ ಸ್ವತಃ ತಮ್ಮ ಒಳ್ಳೇ ಮಾದರಿಯಿಂದ. (ಧರ್ಮೋ. 6:6, 7) ವಿನಯಶೀಲತೆಯ ಕುರಿತು ನಿಮ್ಮ ಮಕ್ಕಳೊಂದಿಗೆ ವಿವೇಚಿಸಿ ಮಾತಾಡುವುದು ಮುಖ್ಯ, ಆದರೆ ಬರೇ ಮಾತಾಡುವುದೊಂದೇ ಸಾಲದು. ಆ ಬಗ್ಗೆ ಆಗಾಗ್ಗೆ ನೆನಪುಹುಟ್ಟಿಸುತ್ತಾ ಒಳ್ಳೇ ಮಾದರಿಯನ್ನಿಡುವುದೂ ಅತ್ಯಾವಶ್ಯಕ.

ಪೋಲ * ಎಂಬ ಹುಡುಗಿಯ ಉದಾಹರಣೆಯನ್ನು ಗಮನಿಸಿ. ಒಂಟಿಹೆತ್ತವಳಿದ್ದ ಕ್ರೈಸ್ತ ಕುಟುಂಬದಲ್ಲಿ ಅವಳು ಬೆಳೆದಳು. ಎಲ್ಲರಿಗೆ ಗೌರವ ತೋರಿಸುವ ಸದ್ಗುಣ ಅವಳಲ್ಲಿದೆ. ಕಾರಣ? ಅವಳನ್ನುವುದು: “ಮಮ್ಮಿ ಒಳ್ಳೇ ಮಾದರಿಯಿಟ್ಟರು. ಆದ್ದರಿಂದ ಗೌರವ ತೋರಿಸುವುದು ಮಕ್ಕಳಾದ ನಮ್ಮಲ್ಲಿ ಸಹಜವಾಗಿ ಬಂತು.” ವಾಲ್ಟರ್‌ ಎಂಬ ಕ್ರೈಸ್ತನ ಪತ್ನಿ ಅವಿಶ್ವಾಸಿ. ಹಾಗಿದ್ದರೂ ತನ್ನ ಗಂಡುಮಕ್ಕಳು ಅವರ ತಾಯಿಗೆ ಗೌರವ ತೋರಿಸುವಂತೆ ಅವನು ಕಲಿಸಿದನು. “ನನ್ನ ಹೆಂಡತಿಯ ಬಗ್ಗೆ ನಾನೆಂದೂ ಕೀಳಾಗಿ ಮಾತಾಡುತ್ತಿರಲಿಲ್ಲ. ಹೀಗೆ ಮಕ್ಕಳು ತಮ್ಮ ತಾಯಿಗೆ ಮರ್ಯಾದೆ ತೋರಿಸುವಂತೆ ಕಲಿಸಿದ್ದು ನನ್ನ ಮಾದರಿಯಿಂದಲೇ” ಎನ್ನುತ್ತಾನವನು. ವಾಲ್ಟರ್‌ ತನ್ನ ಮಕ್ಕಳಿಗೆ ದೇವರ ವಾಕ್ಯದಿಂದ ಕಲಿಸುವುದನ್ನು ಮುಂದುವರಿಸಿ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿದನು. ಅವರಲ್ಲಿ ಒಬ್ಬನು ಈಗ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾನೆ, ಇನ್ನೊಬ್ಬನು ಪಯನೀಯರನಾಗಿದ್ದಾನೆ. ಇಬ್ಬರೂ ಹುಡುಗರು ತಮ್ಮ ಹೆತ್ತವರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ.

“ದೇವರು ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ” ಎಂದು ಬೈಬಲ್‌ ಅನ್ನುತ್ತದೆ. (1 ಕೊರಿಂ. 14:33) ಯೆಹೋವನು ಮಾಡುವ ಪ್ರತಿಯೊಂದು ವಿಷಯವು ಕ್ರಮಬದ್ಧವಾಗಿದೆ. ಈ ದೈವಿಕ ಗುಣವನ್ನು ಕ್ರೈಸ್ತರು ಅನುಕರಿಸುತ್ತಾ ತಮ್ಮ ಮನೆಯಲ್ಲಿರುವ ವಸ್ತುಗಳನ್ನು ಒಪ್ಪಓರಣವಾಗಿಡಬೇಕು. ಕೆಲವು ಹೆತ್ತವರು ತಮ್ಮ ಮಕ್ಕಳು ಶಾಲೆಗೆ ಹೋಗುವ ಮುಂಚೆ ತಮ್ಮ ತಮ್ಮ ಹಾಸಿಗೆಯನ್ನು ಮಡಚಿಡಲು, ಬಟ್ಟೆಬರೆಗಳನ್ನು ಅದರದರ ಸ್ಥಳದಲ್ಲಿ ನೀಟಾಗಿಡಲು ಮತ್ತು ಮನೆಗೆಲಸದಲ್ಲಿ ಸಹಾಯಮಾಡಲು ತರಬೇತಿ ನೀಡಿದ್ದಾರೆ. ಮನೆಯಲ್ಲಿ ಬೇರೆಲ್ಲಾ ವಿಷಯಗಳು ಓರಣವಾಗಿಯೂ ಶುಚಿಯಾಗಿಯೂ ಇರುವುದನ್ನು ಮಕ್ಕಳು ಕಾಣುವಾಗ ತಮ್ಮ ಸ್ವಂತ ಕೋಣೆಗಳನ್ನು ಹಾಗೂ ವಸ್ತುಗಳನ್ನು ನೀಟಾಗಿಡಲು ಕಲಿಯುತ್ತಾರೆ.

ಶಾಲೆಯಲ್ಲಿ ಕಲಿಯುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಮಕ್ಕಳ ವೀಕ್ಷಣೆಯೇನು? ಶಿಕ್ಷಕರು ಕಲಿಸುವ ವಿಷಯಗಳಿಗೆ ಅವರು ಗಣ್ಯತೆ ತೋರಿಸುತ್ತಾರೋ? ಹೆತ್ತವರಾದ ನೀವು ಶಿಕ್ಷಕರಿಗೆ ಕೃತಜ್ಞತೆ ಹೇಳುತ್ತೀರೋ? ನೀವು ತೋರಿಸುವ ಮನೋಭಾವವನ್ನೇ ನಿಮ್ಮ ಮಕ್ಕಳು ಸಹ ತಮ್ಮ ಶಾಲಾಗೆಲಸ ಹಾಗೂ ಶಿಕ್ಷಕರ ಕಡೆಗೆ ತೋರಿಸಲು ಕಲಿಯುತ್ತಾರೆ. ಮಕ್ಕಳು ತಮ್ಮ ಶಿಕ್ಷಕರಿಗೆ ‘ಥ್ಯಾಂಕ್ಸ್‌’ ಹೇಳುವ ರೂಢಿಯನ್ನು ಕಲಿಸಿರಿ. ಶಿಕ್ಷಕರು, ವೈದ್ಯರು, ಅಂಗಡಿಯವರು, ಹೀಗೆ ಯಾರೇ ಆಗಿರಲಿ ಅವರು ಸಲ್ಲಿಸುವ ಸೇವೆಗಾಗಿ ಕೃತಜ್ಞತೆಯನ್ನು ತೋರಿಸುವುದು ಗೌರವ ತೋರಿಸುವ ಅತ್ಯುತ್ತಮ ವಿಧಾನ. (ಲೂಕ 17:15, 16) ವಿನಯಶೀಲತೆ ಮತ್ತು ಸದ್ವರ್ತನೆಯಿಂದಾಗಿ ತಮ್ಮ ಸಹಪಾಠಿಗಳ ನಡುವೆ ಎದ್ದುಕಾಣುವ ಯುವ ಕ್ರೈಸ್ತರು ಪ್ರಶಂಸಾರ್ಹರು.

ಸದ್ವರ್ತನೆಯ ವಿಷಯದಲ್ಲಿ ಕ್ರೈಸ್ತ ಸಭೆಯ ಸದಸ್ಯರು ಒಳ್ಳೇ ಮಾದರಿಯನ್ನಿಡಬೇಕು. ಕ್ರೈಸ್ತ ಸಭೆಯಲ್ಲಿರುವ ಯುವಜನರು “ದಯವಿಟ್ಟು,” “ಧನ್ಯವಾದ” ಎಂದು ಹೇಳುವ ಮೂಲಕ ವಿನಯಶೀಲತೆ ತೋರಿಸುವುದನ್ನು ಕಾಣುವುದು ಎಷ್ಟೊಂದು ಸಂತೋಷ! ಕೂಟಗಳಲ್ಲಿ ಕೊಡಲಾಗುವ ಉಪದೇಶಕ್ಕೆ ಗಮನಕೊಡುವ ಮೂಲಕ ವಯಸ್ಕರು ಯೆಹೋವನಿಗೆ ಗೌರವ ತೋರಿಸುವಾಗ ಯುವಜನರು ಕೂಡ ಅವರನ್ನು ಅನುಕರಿಸಲು ಉತ್ತೇಜಿಸಲ್ಪಡುತ್ತಾರೆ. ರಾಜ್ಯ ಸಭಾಗೃಹದಲ್ಲಿ ಸದ್ವರ್ತನೆಯ ಉತ್ತಮ ಮಾದರಿಯನ್ನು ನೋಡುವ ಮಕ್ಕಳು ತಮ್ಮ ನೆರೆಯವರನ್ನು ಗೌರವಿಸಲು ಕಲಿಯುತ್ತಾರೆ. ಉದಾಹರಣೆಗಾಗಿ, ನಾಲ್ಕು ವರ್ಷದ ಆ್ಯಂಡ್ರು ವಯಸ್ಕರನ್ನು ದಾಟಿಹೋಗುವಾಗ “ದಯವಿಟ್ಟು ಸ್ವಲ್ಪ ದಾರಿಬಿಡಿ” ಎಂದು ವಿನಯದಿಂದ ಹೇಳಲು ಈವಾಗಲೇ ಕಲಿತಿದ್ದಾನೆ.

ಸದ್ವರ್ತನೆಯ ವಿಷಯದಲ್ಲಿ ಮಕ್ಕಳಿಂದ ಏನನ್ನು ನಿರೀಕ್ಷಿಸಲಾಗುತ್ತದೆ ಎಂದು ಅವರು ತಿಳಿಯುವಂತೆ ಹೆತ್ತವರು ಇನ್ನೇನು ಮಾಡಸಾಧ್ಯವಿದೆ? ದೇವರ ವಾಕ್ಯದಲ್ಲಿರುವ ಅನೇಕ ಉದಾಹರಣೆಗಳಿಂದ ಕಲಿಯುವ ಪಾಠಗಳನ್ನು ಮಕ್ಕಳೊಂದಿಗೆ ಅಧ್ಯಯನಮಾಡಲು ಸಮಯ ತಕ್ಕೊಳ್ಳಬೇಕು.—ರೋಮ. 15:4.

ಬೈಬಲ್‌ ಮಾದರಿಗಳಿಂದ ಕಲಿಸಿ

ಸಮುವೇಲನ ತಾಯಿಯು ತನ್ನ ಮಗನಿಗೆ, ಮಹಾ ಯಾಜಕ ಏಲಿಗೆ ನಮಸ್ಕರಿಸಿ ಗೌರವಿಸುವುದನ್ನು ಬಾಲ್ಯದಿಂದಲೇ ಕಲಿಸಿದ್ದಿರಬೇಕು. ಅವಳು ಸಮುವೇಲನನ್ನು ಗುಡಾರಕ್ಕೆ ಕರೆತಂದಾಗ ಅವನಿಗೆ ಬಹುಶಃ ಮೂರು ಅಥವಾ ನಾಲ್ಕು ವರ್ಷ. (1 ಸಮು. 1:28) “ನಮಸ್ಕಾರ” ಎಂದು ಹೇಳಿ ವಂದಿಸುವುದನ್ನು ನೀವು ನಿಮ್ಮ ಚಿಕ್ಕಮಕ್ಕಳಿಗೆ ಕಲಿಸುತ್ತಿದ್ದೀರೋ? ಅಥವಾ ನಿಮ್ಮ ಸ್ಥಳೀಯ ವಾಡಿಕೆಯ ಪ್ರಕಾರ ವಂದಿಸುವುದನ್ನು ಕಲಿಸಬಹುದೋ? ಹೀಗೆ ಬಾಲಕ ಸಮುವೇಲನಂತೆ ನಿಮ್ಮ ಮಕ್ಕಳು ಕೂಡ ‘ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರರಾಗಸಾಧ್ಯವಿದೆ.’—1 ಸಮು. 2:26.

ಗೌರವ ಮತ್ತು ಅಗೌರವದ ನಡುವೆ ವ್ಯತ್ಯಾಸವನ್ನು ಎತ್ತಿತೋರಿಸಲು ಬೈಬಲ್‌ ವೃತ್ತಾಂತಗಳನ್ನು ಉಪಯೋಗಿಸಬಹುದಲ್ಲವೆ? ಉದಾಹರಣೆಗೆ, ಇಸ್ರಾಯೇಲಿನ ಅಪನಂಬಿಗಸ್ತ ರಾಜ ಅಹಜ್ಯನು ಪ್ರವಾದಿ ಎಲೀಯನನ್ನು ನೋಡಬೇಕಿದ್ದಾಗ ಅವನನ್ನು ಕರೆತರಲು “ಪಂಚಾಶದಧಿಪತಿಯನ್ನು ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು.” ಪ್ರವಾದಿಯು ತನ್ನೊಂದಿಗೆ ಬರಬೇಕೆಂದು ಆ ಅಧಿಕಾರಿ ದರ್ಪದಿಂದ ಅಪ್ಪಣೆಕೊಟ್ಟನು. ದೇವರ ಪ್ರತಿನಿಧಿಯಾದ ಆ ಪ್ರವಾದಿಯೊಂದಿಗೆ ಮಾತಾಡುವ ವಿಧ ಅದಾಗಿರಲಿಲ್ಲ. ಎಲೀಯನು ಹೇಗೆ ಉತ್ತರಿಸಿದನು? “ನಾನು ದೇವರ ಮನುಷ್ಯನಾಗಿರುವದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ ಅಂದನು.” ಹಾಗೆಯೇ ಆಯಿತು. “ಆಕಾಶದಿಂದ ಬೆಂಕಿಬಿದ್ದು ಅವನನ್ನೂ ಅವನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.”—2 ಅರ. 1:9, 10.

ಎಲೀಯನನ್ನು ಕರೆತರಲು ಇನ್ನೊಬ್ಬ ಅಧಿಕಾರಿಯನ್ನು ಐವತ್ತು ಸಿಪಾಯಿಗಳೊಂದಿಗೆ ಕಳುಹಿಸಲಾಯಿತು. ಅವನು ಕೂಡ ಎಲೀಯನು ತನ್ನೊಂದಿಗೆ ಬರಬೇಕೆಂದು ದರ್ಪದಿಂದ ಆಜ್ಞೆಕೊಟ್ಟನು. ಪುನಃ ಒಮ್ಮೆ ಆಕಾಶದಿಂದ ಬೆಂಕಿಬಿದ್ದು ಅವರನ್ನು ದಹಿಸಿಬಿಟ್ಟಿತು. ಆಮೇಲೆ ಮೂರನೇ ಅಧಿಕಾರಿ ಐವತ್ತು ಮಂದಿ ಸಿಪಾಯಿಗಳೊಂದಿಗೆ ಎಲೀಯನ ಬಳಿಗೆ ಬಂದನು. ಇವನು ಎಲೀಯನಿಗೆ ಗೌರವ ತೋರಿಸಿದನು. ಎಲೀಯನಿಗೆ ಅಪ್ಪಣೆಕೊಡುವ ಬದಲು ಅವನು ಎಲೀಯನ ಮುಂದೆ ಮೊಣಕಾಲೂರಿ, “ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ. ಆಕಾಶದಿಂದ ಬೆಂಕಿಬಿದ್ದು ಮುಂಚೆ ಬಂದ ಇಬ್ಬರು ಪಂಚಾಶದಧಿಪತಿಗಳನ್ನೂ ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲಾ; ನನ್ನ ಪ್ರಾಣವಾದರೋ ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದೆಂದು ಎಣಿಸಲ್ಪಡಲಿ ಎಂದು ಬೇಡಿಕೊಂಡನು.” ಭಯಭರಿತನಾಗಿದ್ದರೂ ಅಷ್ಟು ಗೌರವದಿಂದ ಮಾತಾಡಿದ ಈ ವ್ಯಕ್ತಿಯ ಮೇಲೆ ದೇವರ ಪ್ರವಾದಿಯು ಬೆಂಕಿಯನ್ನು ಬರಮಾಡುವನೋ? ಹಾಗೆ ಯೋಚಿಸುವುದೂ ಅಸಾಧ್ಯ! ಯೆಹೋವನ ದೂತನಾದರೋ ಎಲೀಯನು ಈ ಅಧಿಕಾರಿಯೊಂದಿಗೆ ಹೋಗುವಂತೆ ಹೇಳಿದನು. (2 ಅರ. 1:11-15) ಇದು ಗೌರವ ತೋರಿಸುವ ಮಹತ್ವವನ್ನು ಒತ್ತಿಹೇಳುತ್ತದಲ್ಲವೇ?

ರೋಮನ್‌ ಸೈನಿಕರು ಅಪೊಸ್ತಲ ಪೌಲನನ್ನು ದೇವಾಲಯದ ಬಳಿ ದಸ್ತಗಿರಿಮಾಡಿದಾಗ ತನಗೆ ಮಾತಾಡಲು ಹಕ್ಕಿದೆಯೆಂದು ಅವನು ಪ್ರತಿಪಾದಿಸಲಿಲ್ಲ. ಬದಲಾಗಿ ಅಧಿಕಾರಿಗೆ “ನಾನು ನಿನಗೆ ಒಂದು ವಿಷಯವನ್ನು ಹೇಳುವಂತೆ ಅನುಮತಿಸುವಿಯೊ?” ಎಂದು ಗೌರವಪೂರ್ವಕವಾಗಿ ಕೇಳಿದನು. ಫಲಿತಾಂಶವಾಗಿ ಪೌಲನಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ಕೊಡಲಾಯಿತು.—ಅ. ಕಾ. 21:37-40.

ಯೇಸುವಿನ ಉದಾಹರಣೆಯನ್ನು ತಕ್ಕೊಳ್ಳಿ. ಅವನು ವಿಚಾರಣೆಗೊಳಗಾದಾಗ ಅವನ ಮುಖಕ್ಕೆ ಹೊಡೆಯಲಾಯಿತು. ಅದಕ್ಕೆ ಸೂಕ್ತರೀತಿಯಲ್ಲಿ ಹೇಗೆ ಅಸಮ್ಮತಿ ಸೂಚಿಸುವುದೆಂದು ಅವನಿಗೆ ತಿಳಿದಿತ್ತು. ಅವನಂದದ್ದು: “ನಾನು ತಪ್ಪಾಗಿ ಮಾತಾಡಿದ್ದರೆ ಆ ತಪ್ಪಿನ ವಿಷಯದಲ್ಲಿ ಸಾಕ್ಷಿಹೇಳು; ಆದರೆ ಸರಿಯಾಗಿ ಮಾತಾಡಿದ್ದರೆ ನೀನು ಯಾಕೆ ನನ್ನನ್ನು ಹೊಡೆಯುತ್ತೀ?” ಯೇಸು ಮಾತಾಡಿದ ರೀತಿಯಲ್ಲಿ ಯಾರೂ ಯಾವುದೇ ತಪ್ಪನ್ನು ಕಾಣಸಾಧ್ಯವಿರಲಿಲ್ಲ.—ಯೋಹಾ. 18:22, 23.

ನಾವು ಕಠಿನ ತಿದ್ದುಪಾಟಿಗೆ ಹೇಗೆ ಪ್ರತಿಕ್ರಿಯಿಸಬೇಕು ಹಾಗೂ ಹಿಂದೆ ಮಾಡಿದ ಕೆಲವು ತಪ್ಪು ಅಥವಾ ನಿರ್ಲಕ್ಷ್ಯಭಾವವನ್ನು ಗೌರವಪೂರ್ವಕವಾಗಿ ಹೇಗೆ ಒಪ್ಪಿಕೊಳ್ಳಬೇಕು ಎಂಬುದಕ್ಕೆ ಸಹ ದೇವರ ವಾಕ್ಯವು ಕೆಲವು ಉದಾಹರಣೆಗಳನ್ನು ಕೊಡುತ್ತದೆ. (ಆದಿ. 41:9-13; ಅ. ಕಾ. 8:20-24) ಉದಾಹರಣೆಗೆ, ತನ್ನ ಗಂಡನಾದ ನಾಬಾಲನು ದಾವೀದನನ್ನು ಅವಮಾನಕರವಾಗಿ ಉಪಚರಿಸಿದ್ದಕ್ಕಾಗಿ ಅಬೀಗೈಲಳು ಕ್ಷಮೆಯಾಚಿಸಿದಳು. ಜೊತೆಗೆ ಕಾಣಿಕೆಯ ರೂಪದಲ್ಲಿ ಸಮೃದ್ಧ ಆಹಾರವನ್ನೂ ದಾವೀದನಿಗೆ ಒದಗಿಸಿಕೊಟ್ಟಳು. ಅಬೀಗೈಲಳು ಮಾಡಿದ ವಿಷಯದಿಂದ ದಾವೀದನು ಎಷ್ಟು ಪ್ರಭಾವಿತನಾದನೆಂದರೆ ನಾಬಾಲನ ಮರಣದ ನಂತರ ಆಕೆಯನ್ನು ತನ್ನ ಪತ್ನಿಯನ್ನಾಗಿ ಮಾಡಿದನು.—1 ಸಮು. 25:23-41.

ಹೀಗೆ ಕಷ್ಟಕರ ಸನ್ನಿವೇಶಗಳಲ್ಲಿ ಅಥವಾ ಕೇವಲ ಸದ್ವರ್ತನೆಯನ್ನು ತೋರಿಸುವಾಗಲೂ ಗೌರವದಿಂದ ಪ್ರತಿಕ್ರಿಯಿಸುವಂತೆ ಮಕ್ಕಳಿಗೆ ಕಲಿಸಿರಿ. ಈ ರೀತಿಯಲ್ಲಿ ‘ನಮ್ಮ ಬೆಳಕು ಜನರ ಮುಂದೆ ಪ್ರಕಾಶಿಸುವಂತೆ ಮಾಡುವುದರಿಂದ ಸ್ವರ್ಗದಲ್ಲಿರುವ ನಮ್ಮ ತಂದೆಗೆ ಮಹಿಮೆ ಸಲ್ಲುವುದು.’—ಮತ್ತಾ. 5:16.

[ಪಾದಟಿಪ್ಪಣಿಗಳು]

^ ಪ್ಯಾರ. 4 ಪ್ರಾಯಸ್ಥರಿಗೆ ಗೌರವ ತೋರಿಸುವುದಕ್ಕೂ ಕೆಟ್ಟಹೇತುಗಳಿರುವ ವಯಸ್ಕರಿಗೆ ಕಿವಿಗೊಡುವುದಕ್ಕೂ ಇರುವ ವ್ಯತ್ಯಾಸವನ್ನು ಕಾಣಲು ಮಕ್ಕಳಿಗೆ ಸಹಾಯಮಾಡುವ ಅಗತ್ಯ ಹೆತ್ತವರಿಗಿದೆ. ಕುಟುಂಬ ಸಂತೋಷದ ರಹಸ್ಯ ಅಧ್ಯಾಯ 5, ಪ್ಯಾರ 24-26 ನೋಡಿ.

^ ಪ್ಯಾರ. 7 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.