ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮೆಚ್ಚಿಗೆಯನ್ನು ಗಳಿಸುವುದೇ ನಿತ್ಯಜೀವದ ಹಾದಿ

ದೇವರ ಮೆಚ್ಚಿಗೆಯನ್ನು ಗಳಿಸುವುದೇ ನಿತ್ಯಜೀವದ ಹಾದಿ

ದೇವರ ಮೆಚ್ಚಿಗೆಯನ್ನು ಗಳಿಸುವುದೇ ನಿತ್ಯಜೀವದ ಹಾದಿ

“ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ; ನಿನ್ನ ದಯವು [“ಮೆಚ್ಚಿಗೆಯು,” NW] ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವದು.”—ಕೀರ್ತ. 5:11.

1, 2. ಚಾರೆಪ್ತದ ವಿಧವೆಯ ಬಳಿ ಎಲೀಯನು ಏನನ್ನು ಕೇಳಿದನು? ಆಕೆಗೆ ಯಾವ ಆಶ್ವಾಸನೆಯನ್ನೂ ಕೊಟ್ಟನು?

ಚಾರೆಪ್ತದ ಆ ವಿಧವೆ ಮತ್ತು ಆಕೆಯ ಮಗ ತುಂಬ ಹಸಿದಿದ್ದರು, ಹಾಗೆಯೇ ದೇವರ ಪ್ರವಾದಿಯಾದ ಎಲೀಯನು ಸಹ. ಆಕೆ ಅಡಿಗೆಗಾಗಿ ಕಟ್ಟಿಗೆಯನ್ನು ಕೂಡಿಸುತ್ತಿದ್ದಾಗ ಎಲೀಯನು ತನಗಾಗಿ ನೀರನ್ನೂ ರೊಟ್ಟಿಯನ್ನೂ ತರುವಂತೆ ಆಕೆಗೆ ಹೇಳಿದನು. ಅವನಿಗೆ ಕುಡಿಯಲು ನೀರನ್ನು ಕೊಡಲು ಆಕೆ ಸಿದ್ಧಳಿದ್ದಳು, ಆದರೆ ಆಹಾರಕ್ಕಾಗಿ ಅವಳ ಬಳಿಯಿದ್ದದ್ದು “ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ” ಮಾತ್ರ. ಆದ್ದರಿಂದ ಪ್ರವಾದಿಗೆ ಕೊಡಲು ತನ್ನ ಬಳಿ ಏನೂ ಇಲ್ಲವೆಂದು ಆಕೆಗನಿಸಿತು ಮತ್ತು ಅದನ್ನೇ ಪ್ರವಾದಿಗೆ ತಿಳಿಸಿದಳು.—1 ಅರ. 17:8-12.

2 “ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ” ಎಂದು ಪಟ್ಟುಹಿಡಿದನು ಎಲೀಯ. “ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಾಯೇಲ್‌ ದೇವರಾದ ಯೆಹೋವನು ನಿನಗೆ—ನಾನು ದೇಶಕ್ಕೆ ಮಳೆಯನ್ನು ಕಳುಹಿಸುವ ವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ.”—1 ಅರ. 17:13, 14.

3. ಯಾವ ಮಹತ್ವದ ಪ್ರಶ್ನೆಯು ನಮ್ಮೆಲ್ಲರ ಮುಂದಿದೆ?

3 ಈಗ ಆ ವಿಧವೆಗೆ ತನ್ನ ಬಳಿಯಿದ್ದ ಸ್ವಲ್ಪವೇ ಆಹಾರದಲ್ಲಿ ಪ್ರವಾದಿಗೆ ಪಾಲುಕೊಡಬೇಕೊ ಬೇಡವೊ ಎಂದು ನಿರ್ಣಯಿಸುವುದು ಮಾತ್ರವಲ್ಲ ಅದಕ್ಕಿಂತ ಹೆಚ್ಚು ಮಹತ್ವದ ನಿರ್ಣಯವನ್ನು ಮಾಡಲಿಕ್ಕಿತ್ತು. ತನ್ನನ್ನೂ ತನ್ನ ಮಗನನ್ನೂ ಕಾಪಾಡುವಂತೆ ಅವಳು ಯೆಹೋವನಲ್ಲಿ ಭರವಸೆಯಿಡುವಳೊ? ಇಲ್ಲವೆ ದೇವರ ಮೆಚ್ಚಿಗೆ ಮತ್ತು ಸ್ನೇಹವನ್ನು ಗಳಿಸುವುದಕ್ಕಿಂತ ಶಾರೀರಿಕ ಅಗತ್ಯವನ್ನು ಆಕೆ ಪ್ರಥಮವಾಗಿ ಇಡುವಳೊ? ತದ್ರೀತಿಯ ಪ್ರಶ್ನೆ ನಮ್ಮೆಲ್ಲರ ಮುಂದೆಯೂ ಇದೆ. ಭೌತಿಕ ಭದ್ರತೆಯನ್ನು ಹುಡುಕುವುದಕ್ಕಿಂತ ಯೆಹೋವನ ಮೆಚ್ಚಿಗೆಯನ್ನು ಗಳಿಸಲು ನಾವು ಹೆಚ್ಚು ಚಿಂತಿತರಾಗಿದ್ದೇವೊ? ದೇವರ ಮೇಲೆ ಭರವಸೆಯಿಡಲು ಹಾಗೂ ಆತನನ್ನು ಸೇವಿಸಲು ನಮಗೆ ಸಕಾರಣವಿದೆ. ಅಲ್ಲದೆ ಆತನ ಮೆಚ್ಚಿಗೆಯನ್ನು ಕೋರಲು ಹಾಗೂ ಗಳಿಸಲು ನಾವು ತಕ್ಕೊಳ್ಳಬಲ್ಲ ಹೆಜ್ಜೆಗಳೂ ಇವೆ.

‘ನೀನು ಆರಾಧನೆಗೆ ಯೋಗ್ಯನು’

4. ಯೆಹೋವನು ನಮ್ಮ ಆರಾಧನೆಗೆ ಯೋಗ್ಯನು ಏಕೆ?

4 ಮನುಷ್ಯರೆಲ್ಲರು ತನ್ನನ್ನು ಸ್ವೀಕರಣೀಯವಾಗಿ ಸೇವಿಸಬೇಕೆಂದು ಅಪೇಕ್ಷಿಸಲು ಯೆಹೋವನಿಗೆ ಹಕ್ಕಿದೆ. ಆ ನಿಜತ್ವವನ್ನು ಆತನ ಸ್ವರ್ಗೀಯ ಸೇವಕರ ಗುಂಪೊಂದು ಒಮ್ಮತದಿಂದ ದೃಢಪಡಿಸುತ್ತಾ, “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು” ಎಂದು ಹೇಳಿತು. (ಪ್ರಕ. 4:11) ಯೆಹೋವನು ಸಮಸ್ತವನ್ನೂ ಸೃಷ್ಟಿಸಿದಾತನು. ಆದುದರಿಂದ ನಮ್ಮ ಆರಾಧನೆಗೆ ಯೋಗ್ಯನು.

5. ದೇವರು ತೋರಿಸಿದ ಪ್ರೀತಿಯು ಆತನ ಸೇವೆಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು ಏಕೆ?

5 ಯೆಹೋವನನ್ನು ಸೇವಿಸಲು ನಮಗಿರುವ ಇನ್ನೊಂದು ಕಾರಣವು ಆತನ ಅಪ್ರತಿಮ ಪ್ರೀತಿಯೇ. “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು” ಎಂದು ಬೈಬಲ್‌ ಹೇಳುತ್ತದೆ. (ಆದಿ. 1:27) ದೇವರು ಮನುಷ್ಯನಿಗೆ ಆಲೋಚಿಸಲು ಮತ್ತು ನಿರ್ಣಯಗಳನ್ನು ಮಾಡಲು ಸಾಮರ್ಥ್ಯವನ್ನು ಕೊಟ್ಟಿರುವುದರಿಂದ ಮನುಷ್ಯನು ತನ್ನ ನಿರ್ಣಯವನ್ನು ತಾನೇ ಮಾಡಲು ಸ್ವತಂತ್ರನು. ನಮಗೆ ಜೀವವನ್ನು ಕೊಟ್ಟ ಮೂಲಕ ಯೆಹೋವನು ಮಾನವಕುಲದ ತಂದೆಯಾದನು. (ಲೂಕ 3:38) ಒಳ್ಳೆಯ ತಂದೆಯಂತೆ ಆತನು ತನ್ನ ಪುತ್ರಪುತ್ರಿಯರು ಜೀವನವನ್ನು ಆನಂದಿಸಲಿಕ್ಕಾಗಿ ಎಲ್ಲವನ್ನೂ ಒದಗಿಸಿದ್ದಾನೆ. ನಮಗಾಗಿ ಭೂಗ್ರಹವು ಸಮೃದ್ಧವಾದ ಆಹಾರವನ್ನು ಉತ್ಪಾದಿಸುವಂತೆ ಹಾಗೂ ನಾವು ಸುಂದರವಾದ ಸೃಷ್ಟಿ ಸೌಂದರ್ಯದಲ್ಲಿ ಆನಂದಿಸುವಂತೆ ಆತನು “ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ” ಹಾಗೂ “ಮಳೆಸುರಿಸುತ್ತಾನೆ.”—ಮತ್ತಾ. 5:45.

6, 7. (ಎ) ಆದಾಮನು ತನ್ನ ವಂಶಜರೆಲ್ಲರಿಗೆ ಯಾವ ಹಾನಿ ತಂದನು? (ಬಿ) ದೇವರ ಮೆಚ್ಚಿಗೆಯನ್ನು ಪಡೆಯಲು ಬಯಸುವವರಿಗೆ ಕ್ರಿಸ್ತನ ಯಜ್ಞವು ಏನು ಮಾಡಲಿದೆ?

6 ಪಾಪದ ಭೀಕರ ಪರಿಣಾಮಗಳಿಂದಲೂ ಯೆಹೋವನು ನಮ್ಮನ್ನು ರಕ್ಷಿಸಿದ್ದಾನೆ. ಆದಾಮನು ಪಾಪಮಾಡುವ ಮೂಲಕ ಜೂಜುಗಾರನಂಥಾದನು. ಹೇಗೆಂದರೆ ಅವನು ಜೂಜಾಟವಾಡಲು ತನ್ನ ಸ್ವಂತ ಕುಟುಂಬದಿಂದಲೇ ಕದ್ದುಕೊಂಡು ಅವರ ಮೇಲೆ ಹಾನಿಯನ್ನು ತಂದನು. ಯೆಹೋವನ ವಿರುದ್ಧ ದಂಗೆಯೆದ್ದ ಮೂಲಕ ಆದಾಮನು ತನ್ನ ಮಕ್ಕಳಿಂದ ನಿತ್ಯ ಸಂತೋಷದ ಪ್ರತೀಕ್ಷೆಯನ್ನು ಕದ್ದುಕೊಂಡನು. ಅವನ ಸ್ವಾರ್ಥಪರತೆಯು ಮಾನವಕುಲವನ್ನು ಅಪರಿಪೂರ್ಣತೆಯೆಂಬ ಕ್ರೂರ ಯಜಮಾನನ ದಾಸತ್ವದ ಕೆಳಗೆ ತಂದಿತು. ಹೀಗೆ ಮಾನವರೆಲ್ಲರೂ ಅಸ್ವಸ್ಥತೆಗೆ, ದುಃಖಕ್ಕೆ ಕಟ್ಟಕಡೆಗೆ ಮರಣಕ್ಕೆ ಗುರಿಯಾಗಬೇಕಾಯಿತು. ಒಬ್ಬ ದಾಸನನ್ನು ದಾಸತ್ವದಿಂದ ಬಿಡುಗಡೆಮಾಡಲು ಹಣಪಾವತಿ ಮಾಡುವ ಅಗತ್ಯವಿದೆ. ಅಂತೆಯೇ ಪಾಪದ ದಾಸ್ಯದ ಭೀಕರ ಪರಿಣಾಮಗಳಿಂದ ನಮ್ಮನ್ನು ರಕ್ಷಿಸಲು ಯೆಹೋವನು ಬೆಲೆ ತೆತ್ತಿದ್ದಾನೆ. (ರೋಮನ್ನರಿಗೆ 5:21 ಓದಿ.) ತಂದೆಯ ಚಿತ್ತಕ್ಕನುಸಾರ ಕ್ರಿಯೆಗೈಯುತ್ತಾ ಯೇಸು ಕ್ರಿಸ್ತನು “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ” ಕೊಟ್ಟನು. (ಮತ್ತಾ. 20:28) ಶೀಘ್ರದಲ್ಲೇ ಆ ವಿಮೋಚನಾ ಯಜ್ಞದ ಬೆಲೆಯ ಪೂರ್ಣ ಪ್ರಯೋಜನಗಳು ದೇವರ ಮೆಚ್ಚಿಗೆಯನ್ನು ಪಡೆದವರಿಗೆ ನೀಡಲಾಗುವವು.

7 ನಾವು ಸಂತೋಷವುಳ್ಳ ಉದ್ದೇಶಭರಿತ ಜೀವನವನ್ನು ಹೊಂದಲಿಕ್ಕಾಗಿ ನಮಗೆ ಬೇಕಾದ ಎಲ್ಲವನ್ನು ನಮ್ಮ ಸೃಷ್ಟಿಕರ್ತ ಯೆಹೋವನು ಒದಗಿಸಿದ್ದಾನೆ. ನಾವು ಆತನ ಮೆಚ್ಚಿಗೆಯನ್ನು ಪಡೆಯುವಲ್ಲಿ, ಮಾನವಕುಲಕ್ಕೆ ಮಾಡಲಾದ ಸಮಸ್ತ ಹಾನಿಯನ್ನು ಆತನು ಹೇಗೆ ತೆಗೆದುಹಾಕುವನು ಎಂಬುದನ್ನು ನೋಡಶಕ್ತರಾಗುವೆವು. ‘ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ತಾನು ಹೇಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ’ ಎಂಬುದನ್ನು ವೈಯಕ್ತಿಕ ರೀತಿಯಲ್ಲಿ ಯೆಹೋವನು ನಮಗೆ ತೋರಿಸುತ್ತಾ ಇರುವನು.—ಇಬ್ರಿ. 11:6.

“ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು”

8. ದೇವರ ಸೇವೆಮಾಡುವ ವಿಷಯದಲ್ಲಿ ಯೆಶಾಯನ ಅನುಭವವು ನಮಗೇನನ್ನು ಕಲಿಸುತ್ತದೆ?

8 ದೇವರ ಮೆಚ್ಚಿಗೆಯನ್ನು ಗಳಿಸುವುದರಲ್ಲಿ ನಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಯೋಗ್ಯವಾಗಿ ಉಪಯೋಗಿಸುವುದು ಒಳಗೂಡಿದೆ. ಏಕೆಂದರೆ ಯೆಹೋವನು ತನ್ನನ್ನು ಸೇವಿಸಬೇಕೆಂದು ಯಾರನ್ನೂ ಒತ್ತಾಯಿಸುವುದಿಲ್ಲ. ಯೆಶಾಯನ ಸಮಯದಲ್ಲಿ ಯೆಹೋವನು, “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?” ಎಂದು ಕೇಳಿದನು. ಹೀಗೆ ನಿರ್ಣಯಮಾಡಲು ಪ್ರವಾದಿಗಿದ್ದ ಹಕ್ಕನ್ನು ಅಂಗೀಕರಿಸುವ ಮೂಲಕ ಯೆಹೋವನು ಅವನನ್ನು ಘನಪಡಿಸಿದನು. ಯೆಶಾಯನು ಉತ್ತರಿಸುತ್ತಾ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಪ್ರತಿವರ್ತನೆ ತೋರಿಸಿದಾಗ ಅವನಿಗಾದ ಸಂತೃಪ್ತಿಯನ್ನು ಊಹಿಸಿಕೊಳ್ಳಿ!—ಯೆಶಾ. 6:8.

9, 10. (ಎ) ನಾವು ದೇವರನ್ನು ಯಾವ ಮನೋಭಾವದಿಂದ ಸೇವಿಸಬೇಕು? (ಬಿ) ನಾವು ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವುದು ಸೂಕ್ತವೇಕೆ?

9 ದೇವರ ಸೇವೆಯನ್ನು ಮಾಡಲು ಇಲ್ಲವೆ ಮಾಡದೇ ಇರಲು ಮನುಷ್ಯರು ಸ್ವತಂತ್ರರು. ನಾವು ಸ್ವಇಷ್ಟದಿಂದ ಆತನನ್ನು ಸೇವಿಸುವಂತೆ ಯೆಹೋವನು ಬಯಸುತ್ತಾನೆ. (ಯೆಹೋಶುವ 24:15 ಓದಿ) ಯೆಹೋವನನ್ನು ಒಲ್ಲದ ಮನಸ್ಸಿನಿಂದ ಆರಾಧಿಸುವ ಯಾವನನ್ನೂ ಆತನು ಮೆಚ್ಚಲಾರನು. ಅಲ್ಲದೆ ಮನುಷ್ಯರನ್ನು ಮೆಚ್ಚಿಸಲು ಮಾತ್ರ ಬಯಸುವ ಜನರ ಭಕ್ತಿಯನ್ನು ಕೂಡ ಆತನು ಸ್ವೀಕರಿಸುವುದಿಲ್ಲ. (ಕೊಲೊ. 3:22) ಲೌಕಿಕ ಅಭಿರುಚಿಗಳು ನಮ್ಮ ಆರಾಧನೆಗೆ ಅಡ್ಡಬರುವಂತೆ ನಾವು ಬಿಡಬಾರದು; ಹಾಗೆ ಬಿಡುವಲ್ಲಿ ಪವಿತ್ರ ಸೇವೆಯನ್ನು “ಸಂಪೂರ್ಣಮನಸ್ಸಿನಿಂದ” ಸಲ್ಲಿಸಲಾರೆವು ಮತ್ತು ದೇವರ ಮೆಚ್ಚಿಗೆಯನ್ನು ಪಡೆಯಲಾರೆವು. (ಕೀರ್ತ. 119:2) ಆತನನ್ನು ಪೂರ್ಣಪ್ರಾಣದಿಂದ ಸೇವಿಸುವುದು ನಮ್ಮ ಹಿತಕ್ಕಾಗಿಯೇ ಇದೆ ಎಂಬುದು ಯೆಹೋವನಿಗೆ ತಿಳಿದಿದೆ. ಮೋಶೆಯು ಇಸ್ರಾಯೇಲ್ಯರನ್ನು ಪ್ರೇರೇಪಿಸುತ್ತಾ ‘ತಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿ ಆತನನ್ನು ಹೊಂದಿಕೊಂಡೇ ಇರುವ’ ಮೂಲಕ ಜೀವವನ್ನೇ ಆದುಕೊಳ್ಳುವಂತೆ ಹೇಳಿದನು.—ಧರ್ಮೋ. 30:19, 20.

10 ಪುರಾತನ ಇಸ್ರಾಯೇಲಿನ ಅರಸ ದಾವೀದನು ಯೆಹೋವನಿಗೆ ಹಾಡಿದ್ದು: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧವಸ್ತ್ರಭೂಷಿತರಾದ ನಿನ್ನ ಯುವಕಸೈನಿಕರು ಉದಯಕಾಲದ ಇಬ್ಬನಿಯಂತಿರುವರು.” (ಕೀರ್ತ. 110:3) ಇಂದು ಅನೇಕ ಜನರು ಆರ್ಥಿಕ ಭದ್ರತೆ ಮತ್ತು ಐಷಾರಾಮಕ್ಕಾಗಿಯೇ ಜೀವಿಸುತ್ತಾರೆ. ಯೆಹೋವನನ್ನು ಪ್ರೀತಿಸುವವರಿಗಾದರೋ ಅವರ ಪವಿತ್ರ ಸೇವೆಯೇ ಎಲ್ಲದಕ್ಕಿಂತಲೂ ಪ್ರಾಮುಖ್ಯ. ಸುವಾರ್ತೆ ಸಾರುವುದರಲ್ಲಿ ಅವರಿಗಿರುವ ಹುರುಪು ಅವರು ಯಾವುದಕ್ಕೆ ಆದ್ಯತೆ ಕೊಡುತ್ತಿದ್ದಾರೆಂಬುದಕ್ಕೆ ಸಾಕ್ಷ್ಯ. ತಮ್ಮ ದಿನನಿತ್ಯದ ಅಗತ್ಯಗಳನ್ನು ಒದಗಿಸಲು ಯೆಹೋವನಿಗಿರುವ ಸಾಮರ್ಥ್ಯದಲ್ಲಿ ಅವರಿಗೆ ಪೂರ್ಣ ಭರವಸೆಯಿದೆ.—ಮತ್ತಾ. 6:33, 34.

ದೇವರಿಗೆ ಸ್ವೀಕೃತವಾಗುವ ಯಜ್ಞಗಳು

11. ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವ ಮೂಲಕ ಇಸ್ರಾಯೇಲ್ಯರು ಯಾವ ಪ್ರಯೋಜನಗಳನ್ನು ಪಡೆಯಸಾಧ್ಯವಿತ್ತು?

11 ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ದೇವಜನರು ಆತನ ಮೆಚ್ಚಿಗೆಯನ್ನು ಗಳಿಸುವುದಕ್ಕೋಸ್ಕರ ಸ್ವೀಕೃತವಾದ ಯಜ್ಞಗಳನ್ನು ಅರ್ಪಿಸಿದರು. “ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು” ಎಂದು ಹೇಳುತ್ತದೆ ಯಾಜಕಕಾಂಡ 19:5. ಬೈಬಲಿನ ಅದೇ ಪುಸ್ತಕದಲ್ಲಿ ನಾವು ಓದುವುದು: “ನೀವು ಕೃತಜ್ಞತೆಯನ್ನು ತೋರಿಸುವದಕ್ಕಾಗಿ ಯೆಹೋವನಿಗೆ ಮಾಡುವ ಯಜ್ಞವನ್ನು ಮೆಚ್ಚಿಗೆಯಾದ ರೀತಿಯಲ್ಲೇ ಸಮರ್ಪಿಸಬೇಕು.” (ಯಾಜ. 22:29) ಇಸ್ರಾಯೇಲ್ಯರು ಯೆಹೋವನ ಯಜ್ಞವೇದಿಯ ಮೇಲೆ ಯೋಗ್ಯವಾದ ಪ್ರಾಣಿಯಜ್ಞಗಳನ್ನು ಅರ್ಪಿಸಿದಾಗ ಅದರಿಂದ ಹೊರಟ ಹೊಗೆಯು ಸತ್ಯದೇವರಿಗೆ ‘ಸುವಾಸನೆಯಂತಿತ್ತು.’ (ಯಾಜ. 1:9, 13) ತನ್ನ ಜನರು ಯಜ್ಞದ ಮೂಲಕ ನೀಡಿದ ಪ್ರೀತಿಯ ಅಭಿವ್ಯಕ್ತಿಗಳನ್ನು ಆತನು ಮೆಚ್ಚಿ ಸ್ವೀಕರಿಸಿದನು. (ಆದಿ. 8:21) ಧರ್ಮಶಾಸ್ತ್ರದ ಈ ವೈಶಿಷ್ಟ್ಯಗಳಲ್ಲಿ ಇಂದು ಅನ್ವಯಿಸುವ ಒಂದು ಮೂಲತತ್ತ್ವವನ್ನು ನಾವು ಕಾಣುತ್ತೇವೆ. ಅದೇನೆಂದರೆ ಸ್ವೀಕೃತವಾದ ಯಜ್ಞಗಳನ್ನು ಯಾರು ಅರ್ಪಿಸುತ್ತಾರೋ ಅವರು ಯೆಹೋವನ ಮೆಚ್ಚಿಗೆಯನ್ನು ಪಡೆಯುವರು. ಹಾಗಾದರೆ ಆತನು ಸ್ವೀಕರಿಸುವ ಯಜ್ಞಗಳು ಯಾವುವು? ನಮ್ಮ ಜೀವನದ ಎರಡು ಕ್ಷೇತ್ರಗಳನ್ನು ಪರಿಗಣಿಸಿರಿ. ಅವು ಯಾವುವೆಂದರೆ ನಮ್ಮ ನಡವಳಿಕೆ ಹಾಗೂ ನಮ್ಮ ಮಾತುಗಳು.

12. ಯಾವ ದುರಭ್ಯಾಸಗಳು ‘ನಮ್ಮ ದೇಹದ ಯಜ್ಞವನ್ನು’ ದೇವರಿಗೆ ಅಸಹ್ಯಕರವಾಗಿ ಮಾಡುತ್ತವೆ?

12 ರೋಮನ್ನರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಬರೆದದ್ದು: “ನೀವು ನಿಮ್ಮ ದೇಹಗಳನ್ನು ಸಜೀವವಾಗಿಯೂ ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಇರುವ ಯಜ್ಞವಾಗಿ ಅರ್ಪಿಸಿರಿ; ಇದೇ ನೀವು ವಿವೇಚನಾಶಕ್ತಿಯೊಂದಿಗೆ ಅರ್ಪಿಸುವ ಪವಿತ್ರ ಸೇವೆಯಾಗಿದೆ.” (ರೋಮ. 12:1) ದೇವರ ಮೆಚ್ಚಿಗೆಯನ್ನು ಗಳಿಸಬೇಕಾದರೆ ವ್ಯಕ್ತಿಯೊಬ್ಬನು ತನ್ನ ದೇಹವನ್ನು ದೇವರಿಗೆ ಸ್ವೀಕೃತವಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ಅವನು ತಂಬಾಕು, ಅಡಿಕೆ, ನಿಷಿದ್ಧ ಅಮಲೌಷಧ ಅಥವಾ ಮದ್ಯಪಾನದ ದುರುಪಯೋಗ ಮುಂತಾದವುಗಳಿಂದ ತನ್ನನ್ನು ಮಲಿನಪಡಿಸಿಕೊಂಡಿದ್ದರೆ ಅವನ ಅರ್ಪಣೆಗೆ ಯಾವ ಬೆಲೆಯೂ ಇರದು. (2 ಕೊರಿಂ. 7:1) ಅದಲ್ಲದೆ ‘ಜಾರತ್ವವನ್ನು ರೂಢಿಮಾಡಿಕೊಂಡಿರುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುತ್ತಾನಾದ್ದರಿಂದ’ ಯಾವುದೇ ರೀತಿಯ ಅನೈತಿಕ ನಡವಳಿಕೆಯು ಅವನ ಯಜ್ಞವನ್ನು ಯೆಹೋವನಿಗೆ ಅಸಹ್ಯಕರವಾಗಿ ಮಾಡುತ್ತದೆ. (1 ಕೊರಿಂ. 6:18) ದೇವರ ಮೆಚ್ಚಿಗೆಯನ್ನು ಪಡೆಯಬೇಕಾದರೆ ವ್ಯಕ್ತಿಯು ತನ್ನ ‘ಎಲ್ಲ ನಡವಳಿಕೆಯಲ್ಲಿ ಪವಿತ್ರನಾಗಿರಬೇಕು.’—1 ಪೇತ್ರ 1:14-16.

13. ನಾವು ಯೆಹೋವನನ್ನು ಸ್ತುತಿಸುವುದು ಏಕೆ ಯುಕ್ತವಾಗಿದೆ?

13 ದೇವರನ್ನು ಸಂತೋಷಪಡಿಸುವ ಇನ್ನೊಂದು ಯಜ್ಞವು ಯಾವುದೆಂದರೆ ನಮ್ಮ ಮಾತುಗಳೇ. ಯೆಹೋವನನ್ನು ಪ್ರೀತಿಸುವವರು ಯಾವಾಗಲೂ ಆತನ ಕುರಿತಾಗಿ ಬಹಿರಂಗವಾಗಿಯೂ ಮನೆಯ ಏಕಾಂತದಲ್ಲೂ ಒಳ್ಳೇದನ್ನೇ ಮಾತಾಡಿದ್ದಾರೆ. (ಕೀರ್ತನೆ 34:1-3 ಓದಿ.) ದಯವಿಟ್ಟು ಕೀರ್ತನೆಗಳು 148-150 ಓದಿರಿ. ಈ ಮೂರು ಕೀರ್ತನೆಗಳು ಯೆಹೋವನನ್ನು ಸ್ತುತಿಸಲು ನಮ್ಮನ್ನು ಎಷ್ಟು ಬಾರಿ ಪ್ರೋತ್ಸಾಹಿಸುತ್ತವೆ ಎಂದು ಗಮನಿಸಿರಿ. ನಿಜವಾಗಿಯೂ “ಯಥಾರ್ಥಚಿತ್ತರು ಆತನನ್ನು ಸ್ತುತಿಸುವದು ಯುಕ್ತವಾಗಿದೆ.” (ಕೀರ್ತ. 33:1) ಅಲ್ಲದೆ ನಮ್ಮ ಮಾದರಿಯಾದ ಯೇಸು ಕ್ರಿಸ್ತನು ಸಹ ಸುವಾರ್ತೆಯನ್ನು ಸಾರುವ ಮೂಲಕ ದೇವರನ್ನು ಸ್ತುತಿಸುವ ಮಹತ್ವವನ್ನು ಒತ್ತಿಹೇಳಿದನು.—ಲೂಕ 4:18, 43, 44.

14, 15. ಯಾವ ರೀತಿಯ ಯಜ್ಞಗಳನ್ನು ಅರ್ಪಿಸುವಂತೆ ಹೋಶೇಯನು ಇಸ್ರಾಯೇಲ್ಯರನ್ನು ಪ್ರೇರೇಪಿಸಿದನು? ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

14 ಹುರುಪಿನಿಂದ ಸಾರುವ ಮೂಲಕ ನಾವು ಯೆಹೋವನ ಮೇಲೆ ನಮಗಿರುವ ಪ್ರೀತಿಗೆ ಹಾಗೂ ಆತನ ಮೆಚ್ಚಿಗೆಯನ್ನು ಪಡೆಯಲು ನಮಗಿರುವ ಅಪೇಕ್ಷೆಗೆ ಪುರಾವೆ ನೀಡುತ್ತೇವೆ. ಉದಾಹರಣೆಗೆ, ಸುಳ್ಳು ಆರಾಧನೆಯನ್ನು ಅನುಸರಿಸಿ ಯೆಹೋವನ ಮೆಚ್ಚಿಗೆಯನ್ನು ಕಳಕೊಂಡ ಇಸ್ರಾಯೇಲ್ಯರಿಗೆ ಪ್ರವಾದಿ ಹೋಶೇಯನು ಹೇಗೆ ಬುದ್ಧಿ ಹೇಳಿದನೆಂದು ಪರಿಗಣಿಸಿ. (ಹೋಶೇ. 13:1-3) “[ಯೆಹೋವನೇ] ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ [ನಮ್ಮಲ್ಲಿನ] ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ [ಎಳೇ] ಹೋರಿಗಳನ್ನು ಅರ್ಪಿಸುವೆವು” ಎಂದು ಯಾಚಿಸುವಂತೆ ಹೋಶೇಯನು ಅವರಿಗೆ ಹೇಳಿದನು.—ಹೋಶೇ. 14:1, 2.

15 ಇಸ್ರಾಯೇಲ್ಯನೊಬ್ಬನು ಯೆಹೋವನಿಗೆ ಅರ್ಪಿಸಸಾಧ್ಯವಿದ್ದ ಪ್ರಾಣಿಗಳಲ್ಲಿ ಹೋರಿಯು ಅತಿ ದುಬಾರಿಯಾಗಿತ್ತು. ಆದ್ದರಿಂದಲೇ ‘ನಮ್ಮ ಸ್ತೋತ್ರಗಳೆಂಬ ಎಳೇ ಹೋರಿಗಳು,’ ಸತ್ಯದೇವರ ಸ್ತುತಿಗಾಗಿ ಆಡಲ್ಪಡುವ ಯಥಾರ್ಥ ಹಾಗೂ ಮುಂದಾಲೋಚಿಸಿದ ಮಾತುಗಳಿಗೆ ಸೂಚಿಸುತ್ತವೆ. ಅಂಥ ಯಜ್ಞಗಳನ್ನು ಅರ್ಪಿಸುತ್ತಿದ್ದವರಿಗೆ ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಆತನಂದದ್ದು: “ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು.” (ಹೋಶೇ. 14:4) ಅಂಥ ಸ್ತೋತ್ರಯಜ್ಞಗಳನ್ನು ಯಾರು ಅರ್ಪಿಸುತ್ತಾರೋ ಅವರಿಗೆ ಯೆಹೋವನು ತನ್ನ ಕ್ಷಮೆ, ಮೆಚ್ಚಿಗೆ ಮತ್ತು ಸ್ನೇಹವನ್ನು ದಯಪಾಲಿಸಿದನು.

16, 17. ಯೆಹೋವನಲ್ಲಿನ ನಂಬಿಕೆ ವ್ಯಕ್ತಿಯೊಬ್ಬನನ್ನು ಸುವಾರ್ತೆ ಸಾರುವಂತೆ ಪ್ರಚೋದಿಸುವಾಗ ಆತನು ಅವನ ಸ್ತೋತ್ರವನ್ನು ಹೇಗೆ ಸ್ವೀಕರಿಸುತ್ತಾನೆ?

16 ಯೆಹೋವನನ್ನು ಬಹಿರಂಗವಾಗಿ ಸ್ತುತಿಸುವುದು ಯಾವಾಗಲೂ ಸತ್ಯಾರಾಧನೆಯ ಒಂದು ಪ್ರಮುಖ ಭಾಗವಾಗಿತ್ತು. ಸತ್ಯದೇವರನ್ನು ಘನಪಡಿಸುವುದು ಕೀರ್ತನೆಗಾರನಿಗೆ ಎಷ್ಟು ಮಹತ್ವದ್ದಾಗಿತ್ತೆಂದರೆ, “ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿಸಮರ್ಪಣೆಗಳನ್ನು ದಯವಿಟ್ಟು ಅಂಗೀಕರಿಸು” ಎಂದು ಅವನು ದೇವರಿಗೆ ಮೊರೆಯಿಟ್ಟನು. (ಕೀರ್ತ. 119:108) ಇಂದಿನ ಕುರಿತೇನು? ಇಂದಿರುವ ದೊಡ್ಡ ಜನಸಮೂಹದ ಕುರಿತು ಮಾತಾಡುತ್ತಾ ಯೆಶಾಯನು ಪ್ರವಾದಿಸಿದ್ದು: “[ಅವರು] ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು . . . [ದೇವರ] ಯಜ್ಞವೇದಿಯ ಮೇಲೆ [ಅವರ ಕಾಣಿಕೆಗಳು] ಸಮರ್ಪಕವಾಗಿ ಒಯ್ಯಲ್ಪಡುವವು.” (ಯೆಶಾ. 60:6, 7) ಈ ಪ್ರವಾದನೆಯ ನೆರವೇರಿಕೆಯಲ್ಲಿ ಲಕ್ಷಾಂತರ ಜನರು “[ದೇವರ] ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು” ಅರ್ಪಿಸುತ್ತಾರೆ.—ಇಬ್ರಿ. 13:15.

17 ನಿಮ್ಮ ಕುರಿತೇನು? ನೀವು ದೇವರಿಗೆ ಸ್ವೀಕೃತವಾದ ಯಜ್ಞಗಳನ್ನು ಅರ್ಪಿಸುತ್ತಿದ್ದೀರೊ? ಇಲ್ಲವೆಂದಾದರೆ ನೀವು ಬೇಕಾದ ಬದಲಾವಣೆಗಳನ್ನು ಮಾಡಿ ಯೆಹೋವನನ್ನು ಬಹಿರಂಗವಾಗಿ ಸ್ತುತಿಸಲು ಆರಂಭಿಸುವಿರೊ? ಸುವಾರ್ತೆ ಸಾರಲು ಆರಂಭಿಸುವಂತೆ ನಂಬಿಕೆಯು ನಿಮ್ಮನ್ನು ಪ್ರಚೋದಿಸುವಾಗ ನಿಮ್ಮ ಅರ್ಪಣೆಯು ಯೆಹೋವನಿಗೆ ‘ಎಳೇ ಹೋರಿಗಳ ಯಜ್ಞಕ್ಕಿಂತ ಬಹು ಪ್ರಿಯವಾಗಿರುವುದು.’ (ಕೀರ್ತನೆ 69:30, 31 ಓದಿ.) ನಿಮ್ಮ ಸ್ತೋತ್ರಯಜ್ಞದ ‘ಸುವಾಸನೆಯು’ ಯೆಹೋವನನ್ನು ಮುಟ್ಟುವುದು ಹಾಗೂ ಆತನು ತನ್ನ ಮೆಚ್ಚಿಗೆಯನ್ನು ನಿಮಗೆ ದಯಪಾಲಿಸುವನು ಎಂಬ ಆಶ್ವಾಸನೆ ನಿಮಗಿರಲಿ. (ಯೆಹೆ. 20:41) ಆಗ ನೀವು ಅನುಭವಿಸುವ ಸಂತೋಷಕ್ಕೆ ಸರಿಸಾಟಿಯೇ ಇಲ್ಲ!

‘ನೀತಿವಂತನನ್ನು ಆಶೀರ್ವದಿಸುವವನು ಯೆಹೋವನೇ’

18, 19. (ಎ) ದೇವರ ಸೇವೆ ಮಾಡುವುದನ್ನು ಇಂದು ಅನೇಕ ಜನರು ಹೇಗೆ ವೀಕ್ಷಿಸುತ್ತಾರೆ? (ಬಿ) ದೇವರ ಮೆಚ್ಚಿಗೆ ಕಳಕೊಳ್ಳುವುದರ ಫಲಿತಾಂಶವೇನು?

18 ಮಲಾಕಿಯನ ಸಮಯದಲ್ಲಿ ಕೆಲವರು ಮಾಡಿದಂಥ ತಪ್ಪು ತೀರ್ಮಾನವನ್ನೇ ಇಂದು ಅನೇಕ ಜನರು ಮಾಡುತ್ತಾರೆ. “ದೇವರನ್ನು ಸೇವಿಸುವದು ವ್ಯರ್ಥ; ನಾವು ಆತನ ನಿಯಮವನ್ನು ಅನುಸರಿಸಿ . . . ಲಾಭವೇನು” ಎನ್ನುತ್ತಾರವರು. (ಮಲಾ. 3:14) ಪ್ರಾಪಂಚಿಕತೆಯ ಅಭಿಲಾಷೆಗಳಿಂದ ನಡೆಸಲ್ಪಟ್ಟವರಾಗಿ ಅವರು, ದೇವರಿಗೆ ತನ್ನ ಉದ್ದೇಶವನ್ನು ಪೂರೈಸಸಾಧ್ಯವಿಲ್ಲವೆಂದೂ ಆತನ ನಿಯಮಗಳು ಈಗ ವ್ಯಾವಹಾರಿಕವಲ್ಲವೆಂದೂ ವೀಕ್ಷಿಸುತ್ತಾರೆ. ಸುವಾರ್ತೆ ಸಾರುವುದು ಅವರ ದೃಷ್ಟಿಯಲ್ಲಿ ನಿಷ್ಪ್ರಯೋಜಕವೂ ಚಿಟ್ಟುಹಿಡಿಸುವಂಥದ್ದೂ ಆಗಿದೆ.

19 ಅಂಥ ಮನೋಭಾವಗಳು ಏದೆನ್‌ ತೋಟದಲ್ಲಿ ಆರಂಭಿಸಿದವು. ಯೆಹೋವನು ಕೊಟ್ಟ ಆಶ್ಚರ್ಯಕರ ಜೀವನದ ನಿಜಬೆಲೆಯನ್ನು ದುರ್ಲಕ್ಷಿಸುವಂತೆಯೂ ಮತ್ತು ಆತನ ಮೆಚ್ಚಿಗೆಯನ್ನು ಅಸಡ್ಡೆ ಮಾಡುವಂತೆಯೂ ಹವ್ವಳನ್ನು ಪ್ರೇರೇಪಿಸಿದವನು ಸೈತಾನನೇ ಆಗಿದ್ದನು. ದೇವರ ಚಿತ್ತವನ್ನು ಮಾಡುವುದು ನಿಷ್ಪ್ರಯೋಜಕ ಎಂದು ನಂಬುವಂತೆ ಸೈತಾನನು ಇಂದು ಕೂಡ ಜನರನ್ನು ಪ್ರೇರೇಪಿಸುತ್ತಿದ್ದಾನೆ. ಆದರೂ ದೇವರ ಮೆಚ್ಚಿಗೆಯನ್ನು ಕಳಕೊಂಡದ್ದರಿಂದ ತಾವು ಜೀವವನ್ನೇ ಕಳಕೊಂಡೆವು ಎಂಬುದನ್ನು ಆದಾಮಹವ್ವರು ಕಟ್ಟಕಡೆಗೆ ಅರಿತುಕೊಂಡರು. ಇಂದು ಅವರ ಕೆಟ್ಟ ಮಾದರಿಯನ್ನು ಅನುಸರಿಸುವವರು ಸಹ ಅದೇ ಕಹಿಸತ್ಯವನ್ನು ಶೀಘ್ರದಲ್ಲೇ ಅನುಭವಿಸುವರು.—ಆದಿ. 3:1-7, 17-19.

20, 21. (ಎ) ಚಾರೆಪ್ತದ ವಿಧವೆಯು ಏನು ಮಾಡಿದಳು? ಅವಳಿಗೆ ಯಾವ ಪ್ರತಿಫಲ ಸಿಕ್ಕಿತು? (ಬಿ) ಚಾರೆಪ್ತದ ವಿಧವೆಯನ್ನು ನಾವು ಹೇಗೆ ಅನುಕರಿಸಬೇಕು? ಏಕೆ?

20 ಆದಾಮಹವ್ವರ ವಿಷಾದಕರ ಅಂತ್ಯವನ್ನೂ ಆರಂಭದಲ್ಲಿ ತಿಳಿಸಲಾದ ಚಾರೆಪ್ತದ ವಿಧವೆ ಮತ್ತು ಎಲೀಯನಿಗೆ ದೊರೆತ ಫಲಿತಾಂಶವನ್ನೂ ಈಗ ಹೋಲಿಸಿರಿ. ಎಲೀಯನ ಉತ್ತೇಜಕ ಮಾತುಗಳನ್ನು ಕೇಳಿದ ಮೇಲೆ ಆ ಸ್ತ್ರೀಯು ತನ್ನಲ್ಲಿ ಸ್ವಲ್ಪವೇ ಹಿಟ್ಟಿದ್ದರೂ ಅದರಿಂದ ರೊಟ್ಟಿಯನ್ನು ಮಾಡಿ ಮೊದಲು ಪ್ರವಾದಿಗೆ ಕೊಟ್ಟಳು. ಆಗ ಯೆಹೋವನು ಎಲೀಯನ ಮೂಲಕ ಕೊಟ್ಟ ವಚನವನ್ನು ಈಡೇರಿಸಿದನು. ವೃತ್ತಾಂತವು ತಿಳಿಸುವುದು: “ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳ ವರೆಗೆ ಊಟಮಾಡಿದರು. ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.”—1 ಅರ. 17:15, 16.

21 ಇಂದಿರುವ ಕೋಟಿಗಟ್ಟಲೆ ಜನರಲ್ಲಿ ಚಾರೆಪ್ತದ ವಿಧವೆಯು ಮಾಡಿದ ಆ ನಿರ್ಣಯವನ್ನು ಮಾಡಲಿಚ್ಛಿಸುವವರು ಕೇವಲ ಕೊಂಚ ಮಂದಿಯೇ. ಆಕೆಯು ತನ್ನ ಸಂಪೂರ್ಣ ಭರವಸೆಯನ್ನು ಸಂರಕ್ಷಕನಾದ ದೇವರಲ್ಲಿಟ್ಟಳು ಮತ್ತು ಆತನು ಅವಳನ್ನು ಆಶಾಭಂಗಗೊಳಿಸಲಿಲ್ಲ. ಇದು ಮತ್ತು ಬೈಬಲಿನ ಇತರ ವೃತ್ತಾಂತಗಳು ಯೆಹೋವನು ನಮ್ಮ ಭರವಸೆಗೆ ಸಂಪೂರ್ಣ ಅರ್ಹನು ಎಂಬುದನ್ನು ದೃಢೀಕರಿಸುತ್ತವೆ. (ಯೆಹೋಶುವ 21:43-45; 23:14 ಓದಿ.) ತನ್ನ ಮೆಚ್ಚಿಗೆಯನ್ನು ಪಡೆದವರನ್ನು ಯೆಹೋವನೆಂದೂ ತ್ಯಜಿಸನು ಎಂಬುದಕ್ಕೆ ಆಧುನಿಕ ದಿನದ ಯೆಹೋವನ ಸಾಕ್ಷಿಗಳ ಜೀವಿತಗಳೇ ಇನ್ನಷ್ಟು ಹೆಚ್ಚು ಸಾಕ್ಷ್ಯ.—ಕೀರ್ತ. 34:6, 7, 17-19. *

22. ನಾವು ದೇವರ ಮೆಚ್ಚಿಗೆಯನ್ನು ತಡಮಾಡದೆ ಪಡೆಯುವುದು ಏಕೆ ಜರೂರಿ?

22 “ಸರ್ವಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲರ ಮೇಲೆ” ದೇವರ ನ್ಯಾಯತೀರ್ಪಿನ ದಿನವು ಸನ್ನಿಹಿತವಾಗಿದೆ. (ಲೂಕ 21:34, 35) ಅದರಿಂದ ಯಾರೂ ತಪ್ಪಿಸಿಕೊಳ್ಳಲಾರರು. ದೇವರ ನೇಮಿತ ನ್ಯಾಯಾಧಿಪತಿಯು, “ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ ಬನ್ನಿರಿ; ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ” ಎಂದು ಹೇಳುವುದನ್ನು ಕೇಳಿಸಿಕೊಳ್ಳುವ ಸೌಭಾಗ್ಯವನ್ನು ತುಸು ಊಹಿಸಿರಿ! ಅದಕ್ಕೆ ಎಷ್ಟೇ ಐಶ್ವರ್ಯವಾಗಲಿ ಎಷ್ಟೇ ಸುಖಭೋಗವಾಗಲಿ ಎಷ್ಟುಮಾತ್ರಕ್ಕೂ ಸಾಟಿಯಲ್ಲ. (ಮತ್ತಾ. 25:34) ಹೌದು, ‘ಯೆಹೋವನೇ ನೀತಿವಂತನನ್ನು ಆಶೀರ್ವದಿಸುವವನು; ಆತನ ಮೆಚ್ಚಿಗೆಯು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವದು.’ (ಕೀರ್ತ. 5:11) ಹೀಗಿರಲಾಗಿ ನಾವು ಸದಾ ದೇವರ ಮೆಚ್ಚಿಗೆಯನ್ನೇ ಪಡೆಯಲು ಬಯಸಬೇಕಲ್ಲವೆ?

[ಪಾದಟಿಪ್ಪಣಿ]

^ ಪ್ಯಾರ. 21 ಕಾವಲಿನಬುರುಜು 2005, ಮಾರ್ಚ್‌ 15, ಪುಟ 13, ಪ್ಯಾರ 15 ಮತ್ತು 1997, ಆಗಸ್ಟ್‌ 1, ಪುಟ 20-25 ನೋಡಿ.

ನಿಮಗೆ ನೆನಪಿದೆಯೇ?

• ಯೆಹೋವನು ನಮ್ಮ ಹೃತ್ಪೂರ್ವಕ ಆರಾಧನೆಗೆ ಅರ್ಹನು ಏಕೆ?

• ಯೆಹೋವನು ಇಂದು ಯಾವ ಯಜ್ಞಗಳನ್ನು ಸ್ವೀಕರಿಸುತ್ತಾನೆ?

• “ನಮ್ಮ ಸ್ತೋತ್ರಗಳೆಂಬ [ಎಳೇ] ಹೋರಿಗಳು”ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? ಅವನ್ನು ನಾವು ಯೆಹೋವನಿಗೆ ಏಕೆ ಅರ್ಪಿಸಬೇಕು?

• ನಾವು ದೇವರ ಮೆಚ್ಚಿಗೆಯನ್ನು ಪಡೆಯಲು ಬಯಸಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ದೇವರ ಪ್ರವಾದಿಯು ಒಬ್ಬಾಕೆ ಬಡ ವಿಧವೆಯ ಮುಂದಿಟ್ಟ ನಿರ್ಣಯ ಯಾವುದು?

[ಪುಟ 15ರಲ್ಲಿರುವ ಚಿತ್ರ]

ಯೆಹೋವನಿಗೆ ಸ್ತೋತ್ರಯಜ್ಞವನ್ನು ಅರ್ಪಿಸುವ ಮೂಲಕ ನಾವು ಯಾವ ಪ್ರಯೋಜನ ಪಡೆಯುತ್ತೇವೆ?

[ಪುಟ 17ರಲ್ಲಿರುವ ಚಿತ್ರ]

ಯೆಹೋವನಲ್ಲಿ ನಿಮ್ಮ ನಿಜ ಭರವಸೆಯು ಎಂದೂ ಆಶಾಭಂಗಕ್ಕೆ ನಡೆಸದು