ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನನನ್ನು ಸೃಷ್ಟಿಸಿದ್ದು ದೇವರೋ?

ಸೈತಾನನನ್ನು ಸೃಷ್ಟಿಸಿದ್ದು ದೇವರೋ?

ನಮ್ಮ ಓದುಗರ ಪ್ರಶ್ನೆ

ಸೈತಾನನನ್ನು ಸೃಷ್ಟಿಸಿದ್ದು ದೇವರೋ?

▪ ದೇವರು ‘ಸಮಸ್ತವನ್ನು ಸೃಷ್ಟಿಸಿದನು’ ಎಂದು ಬೈಬಲ್‌ ಹೇಳುವುದರಿಂದ ಸೈತಾನನನ್ನು ಕೂಡ ದೇವರೇ ಸೃಷ್ಟಿಸಿರಬೇಕು ಎಂದು ಕೆಲವರು ನೆನಸುತ್ತಾರೆ. (ಎಫೆಸ 3:9; ಪ್ರಕಟನೆ 4:11) ಆದರೆ ದೇವರು ಅವನನ್ನು ಸೃಷ್ಟಿಸಲಿಲ್ಲವೆಂದು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ.

ಯೆಹೋವನು ಸೃಷ್ಟಿಸಿದ ದೇವದೂತರಲ್ಲಿ ಒಬ್ಬನು ಕಾಲಾನಂತರ ಸೈತಾನನಾಗಿ ಪರಿಣಮಿಸಿದನು. ದೇವರ ಮುಖ್ಯ ವೈರಿಯಾದ ಈತ ಸೃಷ್ಟಿಯಾದಾಗ ಹೇಗಿದ್ದನೋ ಅದು ಸೃಷ್ಟಿಕರ್ತನಾದ ಯೆಹೋವನ ಕುರಿತು ಬೈಬಲ್‌ ಏನನ್ನುತ್ತದೋ ಅದಕ್ಕೆ ಹೊಂದಿಕೆಯಲ್ಲಿದೆ. ದೇವರ ಕುರಿತು ಬೈಬಲ್‌ ಹೇಳುವುದು: “ಆತನ ಕಾರ್ಯವು ಸಂಪೂರ್ಣವಾದದ್ದು. ಆತನ ಮಾರ್ಗಗಳೆಲ್ಲ ನ್ಯಾಯವಾಗಿವೆ. ಆತನು ನ್ಯಾಯವಂತನು ನಂಬಿಗಸ್ತನಾದ ದೇವರು, ನೀತಿವಂತನೂ ಯಥಾರ್ಥನೂ ಆದ ದೇವರು.” (ಧರ್ಮೋಪದೇಶಕಾಂಡ 32:3-5, NIBV) ಈ ಮಾತುಗಳಿಂದ, ಸೈತಾನನು ಆರಂಭದಲ್ಲಿ ಪರಿಪೂರ್ಣನೂ ನೀತಿವಂತನೂ ಆದ ದೇವಪುತ್ರನಾಗಿದ್ದನೆಂದು ನಮಗೆ ತಿಳಿದುಬರುತ್ತದೆ. ಯೋಹಾನ 8:44ರಲ್ಲಿ ಯೇಸು ಸೈತಾನನ ಬಗ್ಗೆ ಹೇಳುತ್ತಾ ಅವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ” ಅಂದನು. ಸೈತಾನನು ಒಂದು ಕಾಲದಲ್ಲಿ ಸತ್ಯವಂತನೂ ದೋಷರಹಿತನೂ ಆಗಿದ್ದನೆಂದು ಇದು ಸೂಚಿಸುತ್ತದೆ.

ಆದರೆ ಯೆಹೋವನು ಸೃಷ್ಟಿಸಿದ ಬುದ್ಧಿಶಕ್ತಿಯುಳ್ಳ ಇತರ ಜೀವಿಗಳಿಗೆ ಇದ್ದಂತೆ ಸೈತಾನನಾಗಿ ಪರಿಣಮಿಸಿದ ಈ ದೇವದೂತನಿಗೂ ಸರಿಯಾದದ್ದನ್ನು ಅಥವಾ ತಪ್ಪಾದದ್ದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿತ್ತು. ದೇವರನ್ನು ವಿರೋಧಿಸುವ ಆಯ್ಕೆ ಮಾಡುವ ಮೂಲಕ ಹಾಗೂ ಮೊದಲ ಮಾನವ ದಂಪತಿಯನ್ನು ದೇವರ ವಿರುದ್ಧ ಎತ್ತಿಕಟ್ಟಿ ತನ್ನ ಪಕ್ಷವಹಿಸುವಂತೆ ಮಾಡುವ ಮೂಲಕ ಅವನು ತನ್ನನ್ನೇ ಸೈತಾನನನ್ನಾಗಿ ಮಾಡಿಕೊಂಡ. ಸೈತಾನ ಅಂದರೆ ವಿರೋಧಕ ಎಂದರ್ಥ.—ಆದಿಕಾಂಡ 3:1-5.

ಈ ದುಷ್ಟ ದೇವದೂತ ತನ್ನನ್ನು ಪಿಶಾಚನನ್ನಾಗಿಯೂ ಮಾಡಿಕೊಂಡ. ಪಿಶಾಚ ಅಂದರೆ ನಿಂದಕ ಎಂದರ್ಥ. ನಿರ್ಮಾಣಿಕನು ಕೊಟ್ಟ ಒಂದು ಸ್ಪಷ್ಟ ನಿಯಮಕ್ಕೆ ಹವ್ವಳು ಅವಿಧೇಯಳಾಗುವಂತೆ ಪ್ರೇರಿಸಿದ್ದು ಈ ಸೈತಾನನೇ. ಅದಕ್ಕಾಗಿ ಅವನು ಸರ್ಪವನ್ನು ಬಳಸಿ ಕುತಂತ್ರದಿಂದ ಸುಳ್ಳುಗಳನ್ನು ಹೇಳಿ ಅವಳನ್ನು ವಂಚಿಸಿದನು. ಆದ್ದರಿಂದಲೇ ಯೇಸು ಅವನನ್ನು “ಸುಳ್ಳಿಗೆ ತಂದೆ” ಎಂದು ಕರೆದನು.—ಯೋಹಾನ 8:44.

ಆದರೆ ಅವನಲ್ಲಿ ಯಾವುದೇ ದೌರ್ಬಲ್ಯಗಳಾಗಲಿ ಯಾವುದೇ ಹೊರಗಿನ ದುಷ್ಪ್ರಭಾವವಾಗಲಿ ಇಲ್ಲದಿರುವಾಗ ಈ ಪರಿಪೂರ್ಣ ದೇವದೂತನಲ್ಲಿ ಕೆಟ್ಟ ಪ್ರವೃತ್ತಿ ಬಂದದ್ದು ಹೇಗೆ? ದೇವರಿಗೆ ಮಾತ್ರ ಸಲ್ಲತಕ್ಕ ಆರಾಧನೆ ತನಗೂ ಸಿಗಬೇಕೆಂಬ ದುರಾಸೆ ಅವನಲ್ಲಿ ಹುಟ್ಟಿತು ಎಂಬುದು ಸ್ಪಷ್ಟ. ಮುಂದೆ ಯೆಹೋವನ ಆಳ್ವಿಕೆಯ ಬದಲಿಗೆ ತನ್ನ ಆಳ್ವಿಕೆಯ ಕೆಳಗೆ ಮಾನವರೆಲ್ಲರನ್ನು ತರುವ ಸಾಧ್ಯತೆಯನ್ನು ಅವನು ನೋಡಿದನು. ಆ ದುರಾಲೋಚನೆಯನ್ನು ಕಿತ್ತೆಸೆಯುವ ಬದಲು ಅದರ ಕುರಿತೇ ಯೋಚಿಸುತ್ತಾ ಕೊನೆಗೆ ದುಷ್ಕೃತ್ಯಕ್ಕೆ ಕೈಹಾಕಿದನು. ಈ ಪ್ರಕ್ರಿಯೆಯನ್ನು ಬೈಬಲಿನ ಯಾಕೋಬ ಪುಸ್ತಕದಲ್ಲಿ ವರ್ಣಿಸಲಾಗಿದೆ: “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”—ಯಾಕೋಬ 1:14, 15; 1 ತಿಮೊಥೆಯ 3:6.

ದೃಷ್ಟಾಂತಕ್ಕಾಗಿ, ಒಬ್ಬ ಅಕೌಂಟೆಂಟ್‌ಗೆ ಕಂಪೆನಿಯ ಲೆಕ್ಕಪತ್ರಗಳನ್ನು ತಿರುಚಿಹಾಕಿ ಹಣ ನುಂಗಿಹಾಕುವ ಆಲೋಚನೆ ಬರುತ್ತದೆಂದು ನೆನಸಿ. ಒಂದೋ ಅವನು ಆ ವಿಚಾರವನ್ನು ಆ ಕ್ಷಣವೇ ಮನಸ್ಸಿನಿಂದ ಕಿತ್ತುಹಾಕಬಹುದು ಇಲ್ಲವೆ ಅದರ ಕುರಿತೇ ಯೋಚಿಸುತ್ತಾ ಇರಬಹುದು. ಯೋಚಿಸುತ್ತಾ ಇರುವಲ್ಲಿ ಅದು ಅವನಿಗೆ ಒಳ್ಳೇದೆಂದು ಕಂಡು ಕೊನೆಗೆ ಅದನ್ನು ಮಾಡಿಯೇ ಬಿಡುವ ಸಂಭಾವ್ಯತೆ ಇದೆ. ಒಂದುವೇಳೆ ಅವನು ಹಣ ನುಂಗಿದ್ದಲ್ಲಿ ತನ್ನನ್ನೇ ಒಬ್ಬ ಕಳ್ಳನನ್ನಾಗಿ ಮಾಡಿಕೊಳ್ಳುತ್ತಾನೆ ಖಂಡಿತ. ತನ್ನ ಅಪರಾಧದ ಬಗ್ಗೆ ಸುಳ್ಳು ಹೇಳುವಲ್ಲಿ ಸುಳ್ಳುಗಾರನೂ ಆಗುತ್ತಾನೆ. ಅಂತೆಯೇ ದೇವರು ಸೃಷ್ಟಿಸಿದ ಆ ದೇವದೂತನೂ ತಪ್ಪಾದ ಆಸೆಗಳನ್ನು ಬೆಳೆಸಿಕೊಂಡು ಅವಕ್ಕನುಗುಣವಾದ ಕೃತ್ಯವೆಸಗಿದ ಮೂಲಕ ತನ್ನ ಇಚ್ಛಾಸ್ವಾತಂತ್ರ್ಯವನ್ನು ತನ್ನ ತಂದೆಯಾದ ದೇವರಿಗೆ ಮೋಸಮಾಡಲು ಹಾಗೂ ಆತನ ವಿರುದ್ಧ ದಂಗೆಯೇಳಲು ಬಳಸಿದ. ಹೀಗೆ ತನ್ನನ್ನೇ ಪಿಶಾಚನಾದ ಸೈತಾನನನ್ನಾಗಿ ಮಾಡಿಕೊಂಡ.

ದೇವರು ಸಕಾಲದಲ್ಲಿ ಸೈತಾನನನ್ನು ನಾಶಮಾಡಲಿದ್ದಾನೆಂಬುದು ಸಂತೋಷದ ವಿಷಯ. (ರೋಮನ್ನರಿಗೆ 16:20) ಈ ಮಧ್ಯೆ ಯೆಹೋವ ದೇವರ ಆರಾಧಕರಿಗೆ ಸೈತಾನನ ಕುತಂತ್ರಗಳ ಬಗ್ಗೆ ಬೈಬಲಿನ ಮೂಲಕ ಮಾಹಿತಿ ಕೊಡಲಾಗಿದೆ ಹಾಗೂ ಅವನ ತಂತ್ರೋಪಾಯಗಳ ವಿರುದ್ಧ ಸಂರಕ್ಷಣೆಯನ್ನೂ ಒದಗಿಸಲಾಗಿದೆ. (2 ಕೊರಿಂಥ 2:11; ಎಫೆಸ 6:11) ಆದ್ದರಿಂದ “ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.”—ಯಾಕೋಬ 4:7. (w11-E 03/01)

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರ]

ಪರಿಪೂರ್ಣ ದೇವದೂತನು ದೇವರಿಗೆ ವಿರುದ್ಧ ಕೃತ್ಯವೆಸಗಿ ತನ್ನನ್ನೇ ಸೈತಾನನನ್ನಾಗಿ ಮಾಡಿಕೊಂಡನು