ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜೊತೆವಿಶ್ವಾಸಿಗಳನ್ನು ಎಂದೂ ತೊರೆಯದಿರಿ

ನಿಮ್ಮ ಜೊತೆವಿಶ್ವಾಸಿಗಳನ್ನು ಎಂದೂ ತೊರೆಯದಿರಿ

ನಿಮ್ಮ ಜೊತೆವಿಶ್ವಾಸಿಗಳನ್ನು ಎಂದೂ ತೊರೆಯದಿರಿ

“ವಾಣಿಜ್ಯ ಲೋಕದ ಥಳುಕಿಗೆ ನಾವು ಮಾರುಹೋಗಿದ್ದೆವು. ಹೇರಳ ಧನೈಶ್ವರ್ಯ ಸಂಪಾದಿಸಿದ್ದೆವು. ನಾವು ಸತ್ಯದಲ್ಲೇ ಬೆಳೆದವರಾಗಿದ್ದರೂ 10 ವರ್ಷಗಳ ವರೆಗೆ ಯೆಹೋವನಿಂದ ದೂರ ತೇಲಿಹೋಗಿದ್ದೆವು. ಹಿಂತಿರುಗಿ ಬರಲು ನಮ್ಮಲ್ಲಿ ಆಧ್ಯಾತ್ಮಿಕ ಬಲ ಇರಲಿಲ್ಲ” ಎನ್ನುತ್ತಾರೆ ಜಾನ್‌ ಮತ್ತು ಅವನ ಪತ್ನಿ ಟೀನಾ. *

ಮರೆಕ್‌ ಎಂಬ ಸಹೋದರನು ನೆನಪಿಸಿಕೊಳ್ಳುವುದು: “ಪೋಲೆಂಡ್‌ನಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಾಗುತ್ತಿದ್ದ ಬದಲಾವಣೆಗಳಿಂದಾಗಿ ನನಗೆ ಸಿಗುತ್ತಿದ್ದ ಯಾವ ಕೆಲಸವೂ ಹೆಚ್ಚು ಸಮಯ ಉಳಿಯುತ್ತಿರಲಿಲ್ಲ, ನಾನು ಹತಾಶನಾದೆ. ಸ್ವಂತ ಉದ್ಯಮ ಪ್ರಾರಂಭಿಸೋಣವೆಂದರೆ ನನಗಷ್ಟು ಚಾಲಾಕುತನ ಇರಲಿಲ್ಲ, ಹೆದರಿಕೆಯಾಗುತ್ತಿತ್ತು. ಕೊನೆಗೆ ಹೇಗೋ ಒಂದು ಉದ್ಯಮ ಪ್ರಾರಂಭಿಸಿದೆ. ಇದರಿಂದ ಮನೆಯವರನ್ನೂ ಚೆನ್ನಾಗಿ ನೋಡಿಕೊಳ್ಳಬಹುದು, ನನ್ನ ಆಧ್ಯಾತ್ಮಿಕತೆಗೂ ಏನೂ ಧಕ್ಕೆಯಾಗದು ಎಂದು ನೆನಸಿದೆ. ಆದರೆ ಹಾಗೆ ನೆನಸಿದ್ದು ಎಷ್ಟು ತಪ್ಪೆಂದು ಸಮಯ ಸಂದಂತೆ ನನಗೆ ತಿಳಿಯಿತು.”

ನಿರುದ್ಯೋಗ ಸಮಸ್ಯೆ ಒಂದೇಸಮನೆ ಹೆಚ್ಚುತ್ತಿರುವ ಮತ್ತು ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಜಗತ್ತಿನಲ್ಲಿ ಕೆಲವರು ಹತಾಶರಾಗಿ ಅವಿವೇಕಯುತ ನಿರ್ಣಯಗಳನ್ನು ಮಾಡುತ್ತಾರೆ. ಅಧಿಕಾವಧಿ ಕೆಲಸ ಮಾಡಲು, ಎರಡೆರಡು ಉದ್ಯೋಗಗಳನ್ನು ಕೈಗೆತ್ತಿಕೊಳ್ಳಲು ಅಥವಾ ಅನುಭವ ಇಲ್ಲದಿದ್ದರೂ ಸ್ವಂತ ಉದ್ಯಮ ಆರಂಭಿಸಲು ಅನೇಕ ಸಹೋದರರು ನಿರ್ಣಯಿಸಿದ್ದಾರೆ. ಹೆಚ್ಚಿಗೆ ದುಡಿದರೆ ಕುಟುಂಬದ ಪೋಷಣೆಗೆ ಸಹಾಯವಾದೀತು, ಆಧ್ಯಾತ್ಮಿಕವಾಗಿಯೂ ಏನೂ ಹಾನಿಯಾಗದು ಎಂಬುದು ಅವರ ಊಹೆ. ಆದರೆ ಮುಂಗಾಣದ ಘಟನೆಗಳು ಮತ್ತು ಆರ್ಥಿಕ ಅಸ್ಥಿರತೆಯು ಸದುದ್ದೇಶದಿಂದ ಮಾಡಿದ ಯೋಜನೆಗಳನ್ನೂ ತಲೆಕೆಳಗೆ ಮಾಡಿಬಿಡಬಹುದು. ಫಲಿತಾಂಶವಾಗಿ ಕೆಲವರು ಲೋಭದ ಪಾಶಕ್ಕೆ ಬಿದ್ದು, ಭೌತಿಕ ವಿಷಯಗಳಿಗಾಗಿ ಆಧ್ಯಾತ್ಮಿಕ ವಿಷಯಗಳನ್ನು ಬಲಿಕೊಟ್ಟಿದ್ದಾರೆ.—ಪ್ರಸಂ. 9:11, 12.

ಇನ್ನೂ ಕೆಲವು ಸಹೋದರ ಸಹೋದರಿಯರು ಎಷ್ಟರಮಟ್ಟಿಗೆ ಲೌಕಿಕ ವಿಷಯಗಳ ಹಿಂದೆಬಿದ್ದಿದ್ದಾರೆಂದರೆ, ವೈಯಕ್ತಿಕ ಅಧ್ಯಯನಕ್ಕಾಗಲಿ ಕೂಟಗಳಿಗಾಗಲಿ ಶುಶ್ರೂಷೆಗಾಗಲಿ ಅವರಿಗೆ ಸಮಯವೇ ಇಲ್ಲ. ಇಂಥ ಔದಾಸೀನ್ಯವು ಅವರಿಗೆ ಆಧ್ಯಾತ್ಮಿಕ ಹಾನಿಯನ್ನು ಉಂಟುಮಾಡಿ, ಯೆಹೋವನೊಂದಿಗಿನ ಅವರ ಸಂಬಂಧವನ್ನು ಹಾಳುಮಾಡುವುದು. ಮಾತ್ರವಲ್ಲ ಅವರು ಇನ್ನೊಂದು ಪ್ರಾಮುಖ್ಯ ಸಂಬಂಧವನ್ನು ಅಂದರೆ ‘ನಂಬಿಕೆಯಲ್ಲಿ ಸಂಬಂಧಿಕರಂತೆ ಇರುವವರೊಂದಿಗಿನ’ ಸುಸಂಬಂಧವನ್ನೂ ತೊರೆದುಬಿಡಬಹುದು. (ಗಲಾ. 6:10) ಕೆಲವರು ಕ್ರಮೇಣ ಕ್ರೈಸ್ತ ಸಹೋದರ ಬಳಗದಿಂದಲೇ ದೂರಹೋಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸೋಣ.

ಜೊತೆವಿಶ್ವಾಸಿಗಳೆಡೆಗೆ ನಮಗಿರುವ ಹೊಣೆ

ಸಹೋದರ ಸಹೋದರಿಯರಾದ ನಮಗೆ ಪರಸ್ಪರ ಪ್ರೀತಿ ತೋರಿಸಲು ಅನೇಕ ಅವಕಾಶಗಳಿವೆ. (ರೋಮ. 13:8) ಸಹಾಯಕ್ಕಾಗಿ ‘ಅಂಗಲಾಚುವ ಬಡವರು’ ನಿಮ್ಮ ಸಭೆಯಲ್ಲಿರಬಹುದು. (ಯೋಬ 29:12) ಕೆಲವರ ಬಳಿ ಜೀವನ ನಡೆಸಲು ಬೇಕಾದ ಮೂಲಭೂತ ವಸ್ತುಗಳೇ ಇಲ್ಲದಿರಬಹುದು. ಇಂಥ ಸನ್ನಿವೇಶಗಳಿಂದ ನಮಗೆ ಒದಗುವ ಸದವಕಾಶದ ಬಗ್ಗೆ ಅಪೊಸ್ತಲ ಯೋಹಾನನು ನೆನಪುಹುಟ್ಟಿಸುತ್ತಾನೆ. “ಜೀವನಾಧಾರಕ್ಕಾಗಿ ಈ ಲೋಕದ ಸಂಪತ್ತನ್ನು ಹೊಂದಿರುವ ಯಾವನಾದರೂ ತನ್ನ ಸಹೋದರನು ಕೊರತೆಯಲ್ಲಿರುವುದನ್ನು ನೋಡಿದಾಗ್ಯೂ ಕೋಮಲ ಸಹಾನುಭೂತಿಯ ದ್ವಾರವನ್ನು ಅವನಿಗೆ ಮುಚ್ಚಿಬಿಡುವುದಾದರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ?”—1 ಯೋಹಾ. 3:17.

ಅಂಥವರ ಅಗತ್ಯಗಳಿಗೆ ಗಮನಕೊಟ್ಟು ನೀವು ಉದಾರ ಸಹಾಯ ಮಾಡಿರಬಹುದು. ಆದರೆ ಸಹೋದರ ಬಳಗದಲ್ಲಿ ನಾವು ವಹಿಸುವ ಆಸಕ್ತಿ ಆರ್ಥಿಕ ಬೆಂಬಲಕ್ಕೆ ಮಾತ್ರ ಸೀಮಿತವಾಗಿಲ್ಲ. ಕೆಲವರು ಸಹಾಯಕ್ಕಾಗಿ ಮೊರೆಯಿಡುತ್ತಿರಬಹುದು ಏಕೆಂದರೆ ಅವರನ್ನು ಒಂಟಿತನ ಕಾಡುತ್ತಿರಬಹುದು ಅಥವಾ ಅವರು ನಿರುತ್ತೇಜನಗೊಂಡಿರಬಹುದು. ಅವರಿಗೆ ತಾವು ಅಯೋಗ್ಯರೆಂಬ ಭಾವನೆಯಿರಬಹುದು, ಅವರು ಗಂಭೀರ ಅಸ್ವಸ್ಥತೆಯಿಂದ ನರಳುತ್ತಿರಬಹುದು, ಆತ್ಮೀಯರನ್ನು ಮರಣದಲ್ಲಿ ಕಳೆದುಕೊಂಡಿರಬಹುದು. ಇಂಥವರಿಗೆ ನಾವು ಉತ್ತೇಜನ ನೀಡಬಹುದಾದ ಒಂದು ವಿಧ, ಅವರು ಮಾತಾಡುವಾಗ ಕಿವಿಗೊಟ್ಟು ಕೇಳಿ ಅವರೊಂದಿಗೆ ಮಾತಾಡುವುದೇ. ಹೀಗೆ ನಾವು ಅವರ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಗತ್ಯಗಳಿಗೆ ಸ್ಪಂದಿಸಸಾಧ್ಯ. (1 ಥೆಸ. 5:14) ಇದು ಅನೇಕವೇಳೆ ನಮ್ಮ ಸಹೋದರರೊಂದಿಗಿನ ಪ್ರೀತಿಯ ಬಂಧವನ್ನು ಬಲಗೊಳಿಸುತ್ತದೆ.

ವಿಶೇಷವಾಗಿ ಹಿರಿಯರು ಪರಾನುಭೂತಿಯಿಂದ ಕಿವಿಗೊಡುವ, ಪರಿಗಣನೆ ತೋರಿಸುವ ಹಾಗೂ ಪ್ರೀತಿಪರ ಶಾಸ್ತ್ರೀಯ ಸಲಹೆಯನ್ನು ಕೊಡುವ ಸ್ಥಾನದಲ್ಲಿದ್ದಾರೆ. (ಅ. ಕಾ. 20:28) ಹೀಗೆ ತನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗೆ “ಕೋಮಲ ಮಮತೆ” ತೋರಿಸಿದ ಅಪೊಸ್ತಲ ಪೌಲನನ್ನು ಸಭೆಯ ಹಿರಿಯರು ಅನುಕರಿಸುತ್ತಾರೆ.—1 ಥೆಸ. 2:7, 8.

ಒಂದುವೇಳೆ ಒಬ್ಬ ಕ್ರೈಸ್ತನು ಮಂದೆಯಿಂದ ದೂರ ಸರಿಯುವಲ್ಲಿ ಜೊತೆ ವಿಶ್ವಾಸಿಗಳೆಡೆಗೆ ತನಗಿರುವ ಹೊಣೆಯನ್ನು ಪೂರೈಸಲಾದೀತೆ? ಭೌತಿಕ ವಿಷಯಗಳ ಹಿಂದೆ ಹೋಗುವ ಪ್ರಲೋಭನೆಗೆ ಮೇಲ್ವಿಚಾರಕರೂ ಬಲಿಯಾಗುವ ಸಂಭಾವ್ಯತೆ ಇದೆ. ಒಬ್ಬ ಕ್ರೈಸ್ತನು ಇಂಥ ಪ್ರಲೋಭನೆಗೆ ಒಳಗಾಗುವಲ್ಲಿ ಆಗೇನು?

ಜೀವನದ ಚಿಂತೆಗಳಲ್ಲಿ ಮುಳುಗಿಹೋಗಿರುವಲ್ಲಿ

ಈ ಮುಂಚೆ ಗಮನಿಸಿದಂತೆ ನಮ್ಮ ಕುಟುಂಬದ ಮೂಲಭೂತ ಶಾರೀರಿಕ ಆವಶ್ಯಕತೆಗಳನ್ನು ಪೂರೈಸಲು ಗಾಣದೆತ್ತಿನಂತೆ ದುಡಿಯುವುದು ಚಿಂತೆ, ವ್ಯಾಕುಲತೆಗಳನ್ನು ಹುಟ್ಟುಹಾಕುತ್ತದೆ. ಮಾತ್ರವಲ್ಲ ಆಧ್ಯಾತ್ಮಿಕ ಮೌಲ್ಯದ ಕಡೆಗೆ ನಮಗಿರುವ ನೋಟವನ್ನು ಮಬ್ಬುಗೊಳಿಸುತ್ತದೆ. (ಮತ್ತಾ. 13:22) ಪ್ರಾರಂಭದಲ್ಲಿ ತಿಳಿಸಲಾದ ಮರೆಕ್‌ ವಿವರಿಸುವುದು: “ಉದ್ಯಮದಲ್ಲಿ ಪೂರ್ತಿ ನಷ್ಟವಾದಾಗ ನಾನು ಹೊರ ದೇಶದಲ್ಲಿ ಒಳ್ಳೇ ಸಂಬಳ ಸಿಗುವ ಕೆಲಸವನ್ನು ಹುಡುಕಲು ನಿರ್ಣಯಿಸಿದೆ. ಮೂರು ತಿಂಗಳಿಗೆಂದು ಅಲ್ಲಿಗೆ ಹೋದೆ ಆದರೆ ಅದು ಆರು ತಿಂಗಳಾಯಿತು ಮತ್ತೆ ಹೀಗೆ ತಿಂಗಳುಗಳು ಕೂಡುತ್ತಲೇ ಹೋದವು. ಮನೆಗೆ ಬಂದು ಹೋಗಲು ಹೆಚ್ಚು ರಜೆ ಕೂಡ ಸಿಗುತ್ತಿರಲಿಲ್ಲ. ಇದರಿಂದ ಸಾಕ್ಷಿಯಲ್ಲದ ನನ್ನ ಹೆಂಡತಿ ಭಾವನಾತ್ಮಕವಾಗಿ ನರಳಿದಳು.”

ಇದರಿಂದ ಬಾಧಿತರಾದವರು ಕುಟುಂಬದವರು ಮಾತ್ರವಲ್ಲ. ಮರೇಕ್‌ ಮುಂದುವರಿಸುತ್ತಾ ಹೇಳಿದ್ದು: “ನಾನು ಸುಡುಬಿಸಿಲಿನಲ್ಲಿ ಗಂಟೆಗಟ್ಟಲೆ ಕೆಲಸಮಾಡಬೇಕಿತ್ತು, ಮಾತ್ರವಲ್ಲ ಇತರರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದ ಒರಟು ಜನರ ಮಧ್ಯೆ ಜೀವಿಸಬೇಕಾಯಿತು. ಅವರು ದರೋಡೆಕೋರರಂತೆ ವರ್ತಿಸುತ್ತಿದ್ದರು. ನಾನು ತುಂಬ ಖಿನ್ನನಾದೆ ಹಾಗೂ ಇತರರು ನನ್ನನ್ನು ದಬಾಯಿಸುತ್ತಿದ್ದಂತೆ ನನಗನಿಸಿತು. ನನ್ನ ಬಗ್ಗೆ ಕಾಳಜಿವಹಿಸಲಿಕ್ಕೂ ಸಮಯವಿರಲಿಲ್ಲ. ಹಾಗಾಗಿ ಇತರರ ಸೇವೆ ಮಾಡುವ ನನ್ನ ಸಾಮರ್ಥ್ಯವನ್ನು ನಾನೇ ಸಂಶಯಿಸತೊಡಗಿದೆ.”

ಮರೇಕ್‌ ತೆಗೆದುಕೊಂಡ ನಿರ್ಣಯದ ದುಃಖಕರ ಫಲಿತಾಂಶಗಳು ತುಸು ಆಲೋಚಿಸಿ ನೋಡುವಂತೆ ನಮ್ಮನ್ನು ಪ್ರಚೋದಿಸಬೇಕು. ಹೊರದೇಶಕ್ಕೆ ಹೋಗುವುದರಿಂದ ನಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಬಹುದೆಂದು ತೋರಿದರೂ ಅದು ಬೇರೆ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲವೇ? ಉದಾಹರಣೆಗೆ, ನಮ್ಮ ಕುಟುಂಬದ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಹಿತಕ್ಷೇಮದ ಕುರಿತೇನು? ಆ ರೀತಿ ಪರದೇಶಕ್ಕೆ ಹೋಗುವುದು ಸಭೆಯವರೊಂದಿಗಿನ ನಮ್ಮ ಬಂಧವನ್ನು ಮುರಿಯುವುದಿಲ್ಲವೇ? ಜೊತೆವಿಶ್ವಾಸಿಗಳ ಸೇವೆಮಾಡುವ ಸುಯೋಗವನ್ನು ನಮ್ಮಿಂದ ಕಸಿದುಕೊಳ್ಳುವುದಿಲ್ಲವೇ?—1 ತಿಮೊ. 3:2-5.

ಆದರೆ ಒಬ್ಬ ವ್ಯಕ್ತಿ ಪರದೇಶಕ್ಕೆ ಹೋಗಿ ದುಡಿದರೆ ಮಾತ್ರ ಐಹಿಕ ಕೆಲಸಗಳಲ್ಲಿ ಮುಳುಗಿಹೋಗುವುದಿಲ್ಲ. ಜಾನ್‌ ಹಾಗೂ ಟೀನಾರ ವಿಷಯವನ್ನು ಪರಿಗಣಿಸಿ. “ಎಲ್ಲವೂ ತಿಳಿಯದೇ ಪ್ರಾರಂಭವಾಯಿತು. ಮದುವೆಯಾದ ಹೊಸದರಲ್ಲಿ ನಾವು ಒಂದೊಳ್ಳೇ ಸ್ಥಳದಲ್ಲಿ ಹಾಟ್‌ಡಾಗ್‌ನ ಅಂಗಡಿಯನ್ನು ತೆರೆದೆವು. ಸಿಕ್ಕಾಪಟ್ಟೆ ಲಾಭ ಸಿಗುತ್ತಿದ್ದರಿಂದ ನಾವು ನಮ್ಮ ಅಂಗಡಿಯನ್ನು ಸ್ವಲ್ಪ ದೊಡ್ಡದು ಮಾಡಿದೆವು. ಆದರೆ ನಮಗೆ ಸಮಯ ಸ್ವಲ್ಪವೇ ಇದ್ದದ್ದರಿಂದ ನಾವು ಕ್ರೈಸ್ತ ಕೂಟಗಳನ್ನು ತಪ್ಪಿಸಿಕೊಳ್ಳುತ್ತಿದ್ದೆವು. ಅನಂತರ ನಾನು ಪಯನೀಯರಿಂಗ್‌ ಹಾಗೂ ಶುಶ್ರೂಷಾ ಸೇವಕನಾಗಿ ಸೇವೆಮಾಡುವುದನ್ನು ನಿಲ್ಲಿಸಿಬಿಟ್ಟೆ. ನಾವು ಹೆಚ್ಚೆಚ್ಚು ಆದಾಯವನ್ನು ಗಳಿಸುತ್ತಿದ್ದ ಭರಾಟೆಯಲ್ಲಿ ದೊಡ್ಡದೊಂದು ಅಂಗಡಿಯನ್ನು ತೆರೆದೆವು ಹಾಗೂ ಸಾಕ್ಷಿಯಲ್ಲದ ಒಬ್ಬ ವ್ಯಕ್ತಿಯೊಂದಿಗೆ ಸಹಭಾಗಿತ್ವದಲ್ಲಿ ಕೆಲಸಮಾಡಿದೆವು. ತದನಂತರ ನಾನು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ಮೌಲ್ಯದ ಕರಾರುಗಳಿಗೆ ಸಹಿಹಾಕಿದೆ. ನಾನು ಮನೆಯಲ್ಲಿರುವುದು ಅಪರೂಪವಾಯಿತು. ಹೆಂಡತಿ ಮಗಳೊಂದಿಗಿನ ನನ್ನ ಸಂಬಂಧ ಕ್ಷೀಣಿಸುತ್ತಾ ಹೋಯಿತು. ಚೆನ್ನಾಗಿ ನಡಿಯುತ್ತಿದ್ದ ನಮ್ಮ ವ್ಯಾಪಾರದಲ್ಲಿ ನಾವೆಷ್ಟು ಮುಳುಗಿಹೋಗಿದ್ದೇವೆಂದರೆ ಕ್ರಮೇಣ ಯೆಹೋವನ ಸೇವೆಯನ್ನೇ ಬಿಟ್ಟುಬಿಟ್ಟೆವು. ಸಭೆಯ ಒಡನಾಟವನ್ನೇ ಬಿಟ್ಟುಬಿಟ್ಟಿದ್ದರಿಂದ ನಾವು ನಮ್ಮ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪವೂ ಯೋಚಿಸುತ್ತಿರಲಿಲ್ಲ.”

ಇದರಿಂದ ನಾವು ಯಾವ ಪಾಠ ಕಲಿಯಬಲ್ಲೆವು? ಕ್ರೈಸ್ತನೊಬ್ಬನು ತನ್ನದೇ ಆದ ಸುಭದ್ರ ಜೀವನವನ್ನು ಕಟ್ಟಲು ಆಶಿಸುವಲ್ಲಿ ಅವನು ಸ್ವಸಂತೃಪ್ತನಾಗಿ ತನ್ನ ‘ಮೇಲಂಗಿಯನ್ನೇ’ ಅಂದರೆ ತನ್ನ ಕ್ರೈಸ್ತ ಗುರುತನ್ನೇ ಕಳೆದುಕೊಳ್ಳುವನು. (ಪ್ರಕ. 16:15) ಇದು ನಾವು ಈ ಹಿಂದೆ ಯಾರಿಗೆ ಸಹಾಯಮಾಡುತ್ತಿದ್ದೆವೋ ಆ ನಮ್ಮ ಸಹೋದರರಿಂದಲೂ ನಮ್ಮನ್ನು ದೂರಮಾಡುತ್ತದೆ.

ಪ್ರಾಮಾಣಿಕವಾಗಿ ಪರೀಕ್ಷಿಸಿ ನೋಡಿ

‘ನನ್ನ ವಿಷಯದಲ್ಲಿ ಹಾಗೆ ಆಗಲಿಕ್ಕೆ ನಾನೆಂದೂ ಬಿಡುವುದಿಲ್ಲ’ ಎಂದು ನಾವೆಣಿಸಬಹುದು. ಆದರೆ ಜೀವನ ನಡೆಸಲು ನಿಜವಾಗಿಯೂ ಏನು ಅಗತ್ಯವಿದೆ ಎಂಬದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. “ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು. ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು” ಎಂದು ಬರೆದನು ಪೌಲನು. (1 ತಿಮೊ. 6:7, 8) ಜೀವನಮಟ್ಟವು ದೇಶದಿಂದ ದೇಶಕ್ಕೆ ಬದಲಾಗುತ್ತದೆ ನಿಜ. ಶ್ರೀಮಂತ ದೇಶದಲ್ಲಿ ಸಾಧಾರಣವೆನಿಸುವ ಜೀವನರೀತಿಯು ಹಿಂದುಳಿದ ದೇಶಗಳಲ್ಲಿ ಐಷಾರಾಮದ ಜೀವನರೀತಿಯಾಗಿ ಪರಿಗಣಿಸಲ್ಪಡಬಹುದು.

ನಾವು ಜೀವಿಸುವಂಥ ದೇಶದ ಜೀವನಮಟ್ಟ ಯಾವುದೇ ರೀತಿಯದ್ದಾಗಿರಲಿ ಪೌಲನ ಈ ಮುಂದಿನ ಮಾತುಗಳನ್ನು ಗಮನದಲ್ಲಿಡಿ: “ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ; ಇವು ಅವರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ.” (1 ತಿಮೊ. 6:9) ಬೇಟೆಗೆ ಬಲಿಯಾಗಲಿರುವ ಪ್ರಾಣಿಯ ಕಣ್ಣಿಗೆ ಬೀಳದಂತೆ ಉರ್ಲನ್ನು ಹಾಕಿಡಲಾಗುತ್ತದೆ. ಆ ಪ್ರಾಣಿಯು ತನಗರಿವಿಲ್ಲದೇ ಅದರಲ್ಲಿ ಸಿಕ್ಕಿಬೀಳುತ್ತದೆ. ನಾವು “ಹಾನಿಕರವಾದ ಆಶೆಗಳ” ಉರ್ಲಿಗೆ ಸಿಕ್ಕಿಬೀಳುವುದನ್ನು ಹೇಗೆ ತಪ್ಪಿಸಬಹುದು?

ಆದ್ಯತೆಗಳನ್ನಿಡುವ ಮೂಲಕ ನಾವು ಯೆಹೋವನ ಸೇವೆಗಾಗಿ ಹಾಗೂ ವೈಯಕ್ತಿಕ ಅಧ್ಯಯನಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಸಾಧ್ಯ. ಕ್ರೈಸ್ತನೊಬ್ಬನು ಇಂಥ ಪ್ರಾರ್ಥನಾಪೂರ್ವಕ ಅಧ್ಯಯನ ಮಾಡುವಲ್ಲಿ ‘ಪೂರ್ಣ ಸಮರ್ಥನಾಗಿ ಸಂಪೂರ್ಣವಾಗಿ ಸನ್ನದ್ಧನಾಗಿ’ ಇತರರಿಗೆ ನೆರವು ನೀಡಲು ಶಕ್ತನಾಗುವನು.—2 ತಿಮೊ. 2:15; 3:17.

ಕೆಲವು ವರ್ಷಗಳ ವರೆಗೆ ಪ್ರೀತಿಪರ ಹಿರಿಯರು ಜಾನ್‌ಗೆ ಆಧ್ಯಾತ್ಮಿಕವಾಗಿ ಪ್ರಗತಿಹೊಂದಲು ಸಹಾಯಮಾಡಿದರು ಹಾಗೂ ಅವನನ್ನು ಉತ್ತೇಜಿಸಿದರು. ಜಾನ್‌ ದೊಡ್ಡ ಬದಲಾವಣೆಗಳನ್ನು ಮಾಡಿದನು. ಜಾನ್‌ ಹೇಳಿದ್ದು: “ಒಮ್ಮೆ ಹಿರಿಯರು ನನ್ನೊಂದಿಗೆ ಮಾತಾಡುತ್ತಿರುವಾಗ ಬಹಳ ಐಶ್ವರ್ಯವಂತನಾಗಿದ್ದ ಒಬ್ಬ ಯುವಕನ ಕುರಿತ ಬೈಬಲ್‌ ಉದಾಹರಣೆಯನ್ನು ತಿಳಿಸಿದರು. ಆ ಯುವ ವ್ಯಕ್ತಿ ನಿತ್ಯಜೀವವನ್ನು ಪಡೆಯಲು ಬಯಸಿದನಾದರೂ ತನ್ನ ಭೌತಿಕ ಆಸ್ತಿಯನ್ನು ತೊರೆಯಲು ಸಿದ್ಧನಿರಲಿಲ್ಲ. ಈ ಉದಾಹರಣೆಯನ್ನು ತಿಳಿಸಿದ ಬಳಿಕ ಹಿರಿಯರು ಜಾಣ್ಮೆಯಿಂದ ಅದರಲ್ಲಿರುವ ಮಾಹಿತಿ ನನಗೆ ಅನ್ವಯವಾಗುತ್ತದೋ ಎಂದು ಕೇಳಿದರು. ಅದರಿಂದ ನಿಜವಾಗಿಯೂ ನನ್ನ ಕಣ್ತೆರೆಯಿತು!”—ಜ್ಞಾನೋ. 11:28; ಮಾರ್ಕ 10:17-22.

ಜಾನ್‌ ತನ್ನ ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ ನೋಡಿದನು ಹಾಗೂ ತಾನು ಮಾಡುತ್ತಿದ್ದ ಆ ದೊಡ್ಡ ವ್ಯಾಪಾರವನ್ನು ಬಿಟ್ಟುಬಿಟ್ಟನು. ಎರಡೇ ವರ್ಷಗಳಲ್ಲಿ ಅವನು ಹಾಗೂ ಅವನ ಕುಟುಂಬದವರು ಆಧ್ಯಾತ್ಮಿಕವಾಗಿ ಚೇತರಿಸಿಕೊಂಡರು. ಅವನು ಈಗ ಹಿರಿಯನಾಗಿ ತನ್ನ ಸಹೋದರರ ಸೇವೆಮಾಡುತ್ತಿದ್ದಾನೆ. ಜಾನ್‌ ಹೇಳುವುದು: “ನನ್ನ ಸಹೋದರರು ಆಧ್ಯಾತ್ಮಿಕ ವಿಷಯಗಳನ್ನೂ ತೊರೆಯುವಷ್ಟರ ಮಟ್ಟಿಗೆ ತಮ್ಮ ಬಿಸಿನೆಸ್‌ನಲ್ಲಿ ಮುಳುಗುವಾಗ ನಾನು ನನ್ನ ಸ್ವಂತ ಉದಾಹರಣೆಯನ್ನು ಉಪಯೋಗಿಸಿ ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದೆ ಜೊತೆಯಾಗುವುದು ಎಷ್ಟು ಅವಿವೇಕಯುತ ಎಂಬುದನ್ನು ತಿಳಿಸುತ್ತೇನೆ. ಆಕರ್ಷಕ ಅವಕಾಶ ಸಿಕ್ಕಾಗ ಅದನ್ನು ಪ್ರತಿರೋಧಿಸುವುದಾಗಲಿ ಅಪ್ರಾಮಾಣಿಕ ವಿಷಯಗಳಿಂದ ದೂರವಿರುವುದಾಗಲಿ ಅಷ್ಟು ಸುಲಭವಲ್ಲ.”—2 ಕೊರಿಂ. 6:14.

ಮರೇಕ್‌ ಸಹ ಒಳ್ಳೇ ಪಾಠವನ್ನು ಕಲಿತನು ಆದರೆ ಕಹಿ ಅನುಭವದಿಂದ. ವಿದೇಶದಲ್ಲಿ ಸಿಗುತ್ತಿದ್ದ ಒಳ್ಳೇ ಸಂಬಳದಿಂದ ಅವನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಯಿತೇನೋ ನಿಜ. ಆದರೆ ಯೆಹೋವನೊಂದಿಗಿನ ಹಾಗೂ ಜೊತೆ ಸಹೋದರರೊಂದಿಗಿನ ಅವನ ಸಂಬಂಧಕ್ಕೆ ಧಕ್ಕೆಯುಂಟಾಯಿತು. ಹಾಗಾಗಿ ಅವನು ತನ್ನ ಆದ್ಯತೆಗಳಲ್ಲಿ ಬದಲಾವಣೆಗಳನ್ನು ಮಾಡತೊಡಗಿದನು. “ಹಲವಾರು ವರ್ಷಗಳಿಂದ ನನ್ನ ಪರಿಸ್ಥಿತಿ ‘ಮಹಾಪದವಿಯನ್ನು ನಿರೀಕ್ಷಿಸುತ್ತಿದ್ದ’ ಪುರಾತನ ಕಾಲದ ಬಾರೂಕನಂತೆ ಇತ್ತು. ಕೊನೆಗೆ ನಾನು ನನ್ನ ಚಿಂತೆಗಳನ್ನು ಯೆಹೋವನಿಗೆ ತಿಳಿಸುತ್ತಾ ಆತನ ಬಳಿ ಹೃದಯಬಿಚ್ಚಿ ಪ್ರಾರ್ಥಿಸಿದೆ. ಈಗ ಆಧ್ಯಾತ್ಮಿಕ ಸಮತೋಲನವನ್ನು ಪುನಃ ಪಡೆದಿರುವ ಅನಿಸಿಕೆ ನನಗಾಗುತ್ತಿದೆ.” (ಯೆರೆ. 45:1-5) ಮರೇಕ್‌ ಈಗ “ಒಳ್ಳೇ ಕಾರ್ಯವನ್ನು” ಮಾಡಲು ಅಂದರೆ ಸಭೆಯ ಮೇಲ್ವಿಚಾರಕನಾಗುವ ಅರ್ಹತೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾನೆ.—1 ತಿಮೊ. 3:1.

ಒಳ್ಳೇ ಸಂಬಳ ಸಿಗುವಂಥ ಕೆಲಸವನ್ನು ಹುಡುಕಿಕೊಂಡು ಯಾರು ಪರದೇಶಕ್ಕೆ ಹೋಗಲು ಯೋಚಿಸುತ್ತಿದ್ದಾರೋ ಅವರಿಗೆ ಮರೇಕ್‌ ಈ ಎಚ್ಚರಿಕೆ ನೀಡುತ್ತಾನೆ: “ಹೊರದೇಶದಲ್ಲಿರುವಾಗ ಈ ದುಷ್ಟ ಲೋಕದ ಪಾಶಗಳಿಗೆ ತುಂಬ ಸುಲಭವಾಗಿ ಬಲಿಬೀಳುತ್ತೇವೆ. ಅಲ್ಲಿನ ಭಾಷೆ ಅಷ್ಟು ಗೊತ್ತಿರದಿರುವುದು ಇತರರೊಂದಿಗೆ ಸಂಭಾಷಿಸಲು ಅಡ್ಡಿಯಾಗಿರುತ್ತದೆ. ನೀವು ದುಡ್ಡಿನೊಂದಿಗೆ ಮನೆಗೆ ಹಿಂದಿರುಗಬಹುದೇನೋ ನಿಜ. ಆದರೆ ಆಧ್ಯಾತ್ಮಿಕವಾಗಿ ನೀವು ಗಾಯಗೊಂಡಿರುವಿರಿ. ಅದು ವಾಸಿಯಾಗಲು ತುಂಬ ಸಮಯ ಹಿಡಿಯುತ್ತದೆ.”

ಐಹಿಕ ಕೆಲಸ ಹಾಗೂ ಸಹೋದರರೆಡೆಗೆ ನಮಗಿರುವ ಹೊಣೆ ಇವೆರಡರ ಮಧ್ಯೆ ಸಮತೋಲನವನ್ನು ಕಾಪಾಡುವುದು ಯೆಹೋವನನ್ನು ಮೆಚ್ಚಿಸಲು ನಮಗೆ ನೆರವಾಗುವುದು. ಅಲ್ಲದೆ, ವಿವೇಕಯುತ ನಿರ್ಣಯ ಮಾಡುವಂತೆ ಇತರರನ್ನು ಪ್ರಚೋದಿಸಲು ನಾವು ಜೀವಂತ ಮಾದರಿಗಳಾಗಿರುವೆವು. ಕುಗ್ಗಿಹೋದವರಿಗೆ ಬೆಂಬಲ, ಸಹಾನುಭೂತಿ ಹಾಗೂ ಸಹೋದರ ಸಹೋದರಿಯರ ಒಳ್ಳೇ ಮಾದರಿಯ ಅವಶ್ಯವಿರುತ್ತದೆ. ಸಭೆಯ ಹಿರಿಯರು ಹಾಗೂ ಇತರ ಪ್ರೌಢ ವ್ಯಕ್ತಿಗಳು ತಮ್ಮ ಜೊತೆ ವಿಶ್ವಾಸಿಗಳಿಗೆ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಜೀವನದ ಚಿಂತೆಗಳಲ್ಲಿ ಮುಳುಗಿಹೋಗದಿರಲು ಸಹಾಯಮಾಡಬಹುದು.—ಇಬ್ರಿ. 13:7.

ನಾವೆಂದೂ ನಮ್ಮ ಐಹಿಕ ಕೆಲಸಗಳಲ್ಲಿ ಮುಳುಗಿಹೋಗಿ ನಮ್ಮ ಜೊತೆ ವಿಶ್ವಾಸಿಗಳನ್ನು ತೊರೆಯದಿರೋಣ. (ಫಿಲಿ. 1:10) ಅದಕ್ಕೆ ಬದಲಾಗಿ ನಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಪ್ರಥಮ ಸ್ಥಾನ ಕೊಟ್ಟು ‘ದೇವರ ವಿಷಯದಲ್ಲಿ ಐಶ್ವರ್ಯವಂತರಾಗೋಣ.’—ಲೂಕ 12:21.

[ಪಾದಟಿಪ್ಪಣಿ]

^ ಪ್ಯಾರ. 2 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 21ರಲ್ಲಿರುವ ಚಿತ್ರಗಳು]

ನಿಮ್ಮ ಉದ್ಯೋಗವು ಕೂಟಗಳಿಗೆ ಹಾಜರಾಗಲು ಅಡ್ಡಿಯನ್ನುಂಟುಮಾಡುತ್ತದೋ?

[ಪುಟ 23ರಲ್ಲಿರುವ ಚಿತ್ರಗಳು]

ನಿಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗೆ ಸಹಾಯಮಾಡುವ ಸದವಕಾಶಗಳನ್ನು ನೀವು ಮಾನ್ಯಮಾಡುತ್ತೀರೋ?