ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತ ನಿಜವಾಗಿಯೂ ಯಾರು?

ಯೇಸು ಕ್ರಿಸ್ತ ನಿಜವಾಗಿಯೂ ಯಾರು?

ಯೇಸು ಕ್ರಿಸ್ತ ನಿಜವಾಗಿಯೂ ಯಾರು?

“ಅವನು ಯೆರೂಸಲೇಮನ್ನು ಪ್ರವೇಶಿಸಿದಾಗ, ಪಟ್ಟಣದಾದ್ಯಂತ ಗದ್ದಲ ಉಂಟಾಗಿ ‘ಇವನು ಯಾರು?’ ಎಂದು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಜನರು, ‘ಇವನು ಪ್ರವಾದಿಯಾದ ಯೇಸು; ಗಲಿಲಾಯದ ನಜರೇತಿನವನು’ ಎಂದು ಹೇಳುತ್ತಿದ್ದರು.” —ಮತ್ತಾಯ 21:10, 11.

ಕ್ರಿ.ಶ. 33ರ ವಸಂತಕಾಲದ ಆ ದಿನದಂದು ಯೇಸು ಕ್ರಿಸ್ತನು * ಯೆರೂಸಲೇಮನ್ನು ಪ್ರವೇಶಿಸಿದಾಗ ಅಲ್ಲಿ ಯಾಕೆ ಗದ್ದಲ ಉಂಟಾಯಿತು? ಆ ಪಟ್ಟಣದ ಹೆಚ್ಚಿನ ಜನರು ಯೇಸುವಿನ ಬಗ್ಗೆ, ಆತ ಮಾಡಿದ ಅದ್ಭುತಕಾರ್ಯಗಳ ಬಗ್ಗೆ ಕೇಳಿದ್ದರು. ಅಲ್ಲದೆ ಆತನ ಬಗ್ಗೆ ಇತರರಿಗೆ ಹೇಳುತ್ತಾ ಇದ್ದರು. (ಯೋಹಾನ 12:17-19) ಆದರೆ ಆ ಜನರು ತಮ್ಮೊಂದಿಗಿದ್ದ ಆ ಮನುಷ್ಯನ ಪ್ರಭಾವ ಮುಂದೆ ಇಡೀ ಲೋಕದಲ್ಲಿ ಹರಡಿ ಶತಮಾನಗಳನ್ನು ಹಾದು ನಮ್ಮೀ ದಿನಗಳನ್ನು ತಲಪುವುದೆಂದು ನೆನಸಿರಲಿಕ್ಕಿಲ್ಲ!

ಯೇಸು ಮಾನವ ಇತಿಹಾಸವನ್ನು ಎಷ್ಟು ಪ್ರಭಾವಿಸಿದ್ದನೆಂಬದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:

▪ ಜಗತ್ತಿನ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿರುವ ಕ್ಯಾಲೆಂಡರ್‌ ಯೇಸು ಹುಟ್ಟಿದ್ದನೆಂದು ನೆನಸಲಾಗುವ ವರ್ಷದ ಮೇಲೆ ಆಧರಿತವಾಗಿದೆ.

▪ ಜಗತ್ತಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಂದರೆ ಸುಮಾರು 200 ಕೋಟಿಯಷ್ಟು ಜನರು ತಮ್ಮನ್ನು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ.

▪ ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಸದಸ್ಯರುಳ್ಳ ಇಸ್ಲಾಂ ಧರ್ಮ ಯೇಸು ಒಬ್ಬ ಮಹಾನ್‌ ಪ್ರವಾದಿ ಎಂದು ಕಲಿಸುತ್ತದೆ.

▪ ಯೇಸುವಿನ ವಿವೇಕದ ನುಡಿಮುತ್ತುಗಳು ಪ್ರತಿನಿತ್ಯ ಸಂಭಾಷಣೆಯಲ್ಲಿ ಹಲವಾರು ವಿಧದಲ್ಲಿ ಬಳಸಲ್ಪಡುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ:

‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನೂ ತೋರಿಸು.’ಮತ್ತಾಯ 5:39.

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ.”ಮತ್ತಾಯ 5:37.

‘ದಾನ ಮಾಡುವಾಗ ನಿನ್ನ ಬಲಗೈ ಮಾಡುತ್ತಿರುವುದು ನಿನ್ನ ಎಡಗೈಗೆ ತಿಳಿಯದಿರಲಿ.’ಮತ್ತಾಯ 6:3.

‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು.’ಮತ್ತಾಯ 22:39.

‘ಜನರು ನಿಮಗೆ ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ನೀವು ಸಹ ಅವರಿಗೆ ಮಾಡಿ.’ಮತ್ತಾಯ 7:12.

“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”ಅ. ಕಾರ್ಯಗಳು 20:35.

ಯೇಸು ಮಾನವ ಇತಿಹಾಸವನ್ನೇ ಪ್ರಭಾವಿಸಿದ್ದಾನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆತನ ಕುರಿತು ಜನರಲ್ಲಿ ವಿಭಿನ್ನ ವಿಚಾರಗಳೂ ನಂಬಿಕೆಗಳೂ ಇವೆ. ಆದ್ದರಿಂದ ‘ಯೇಸು ಕ್ರಿಸ್ತ ನಿಜವಾಗಿಯೂ ಯಾರು?’ ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೆ ಬರಬಹುದು. ಯೇಸು ಎಲ್ಲಿಂದ ಬಂದನು? ಹೇಗೆ ಜೀವಿಸಿದನು? ಏಕೆ ಸತ್ತನು? ಎಂಬದನ್ನು ಬೈಬಲ್‌ ಮಾತ್ರವೇ ತಿಳಿಸುತ್ತದೆ. ಆತನ ಕುರಿತ ಸತ್ಯವನ್ನು ತಿಳಿದುಕೊಂಡಾಗ ಅದು ನಿಮ್ಮ ಜೀವನವನ್ನು ಇಂದೂ ಭವಿಷ್ಯದಲ್ಲೂ ಪ್ರಭಾವಿಸಬಲ್ಲದು. (w11-E 04/01)

[ಪಾದಟಿಪ್ಪಣಿ]

^ ಪ್ಯಾರ. 3 ನಜರೇತಿನ ಈ ಪ್ರವಾದಿಯ ವೈಯಕ್ತಿಕ ಹೆಸರಾದ “ಯೇಸು” ಎಂಬುದರ ಅರ್ಥ “ರಕ್ಷಣೆ ಯೆಹೋವನಿಂದ” ಎಂದಾಗಿದೆ. “ಕ್ರಿಸ್ತ” ಎಂಬುದು ಆತನ ಪದವಿಯನ್ನು ಸೂಚಿಸುತ್ತದೆ. ಅದರರ್ಥ “ಅಭಿಷಿಕ್ತ” ಎಂದಾಗಿದ್ದು, ಯೇಸು ಒಂದು ವಿಶೇಷ ಸ್ಥಾನಕ್ಕಾಗಿ ದೇವರಿಂದ ಅಭಿಷಿಕ್ತನಾದವನು ಅಥವಾ ನೇಮಕಗೊಂಡವನು ಎಂಬುದನ್ನು ಸೂಚಿಸುತ್ತದೆ.