ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಹೇಗೆ ಜೀವಿಸಿದನು?

ಯೇಸು ಹೇಗೆ ಜೀವಿಸಿದನು?

ಯೇಸು ಹೇಗೆ ಜೀವಿಸಿದನು?

“ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ.”—ಯೋಹಾನ 4:34.

ಯೇಸು ಈ ಮಾತುಗಳನ್ನಾಡಿದ ಸನ್ನಿವೇಶವು ಆತನ ಜೀವನದಲ್ಲಿ ಯಾವುದು ಮುಖ್ಯವಾಗಿತ್ತು ಎಂಬುದನ್ನು ತೋರಿಸುತ್ತದೆ. ಆತನೂ ಆತನ ಶಿಷ್ಯರೂ ಇಡೀ ಬೆಳಗ್ಗೆ ಸಮಾರ್ಯದ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಿಸಿದ್ದರು. (ಯೋಹಾನ 4:6) ಮಧ್ಯಾಹ್ನವಾಗುವಷ್ಟರಲ್ಲಿ ಆತನಿಗೆ ಹಸಿವೆ ಆಗಿದ್ದಿರಬೇಕೆಂದು ನೆನಸಿ ಆತನ ಶಿಷ್ಯರು ಸ್ವಲ್ಪ ಆಹಾರ ತಂದುಕೊಟ್ಟರು. (ಯೋಹಾನ 4:31-33) ಆಗ ಯೇಸು ಹೇಳಿದ ಮಾತುಗಳಲ್ಲಿ ಆತನು ತನ್ನ ಜೀವನದ ಉದ್ದೇಶವನ್ನು ತಿಳಿಯಪಡಿಸಿದನು. ತಿನ್ನುವುದಕ್ಕಿಂತ ದೇವರ ಕೆಲಸಮಾಡುವುದೇ ಆತನಿಗೆ ಹೆಚ್ಚು ಮುಖ್ಯವಾಗಿತ್ತು. ಆತನು ದೇವರ ಚಿತ್ತವನ್ನು ಮಾಡಲಿಕ್ಕಾಗಿಯೇ ಜೀವಿಸಿದನು ಮತ್ತು ಇದನ್ನು ತನ್ನ ಮಾತು ಹಾಗೂ ಕ್ರಿಯೆಯಲ್ಲಿ ತೋರಿಸಿದನು. ಆ ಚಿತ್ತದಲ್ಲಿ ಏನೇನು ಸೇರಿತ್ತು?

ದೇವರ ರಾಜ್ಯದ ಕುರಿತು ಸಾರಿದನು ಮತ್ತು ಬೋಧಿಸಿದನು. ಯೇಸುವಿನ ಜೀವನಕಾರ್ಯವನ್ನು ವಿವರಿಸುತ್ತಾ ಬೈಬಲ್‌ ಹೀಗನ್ನುತ್ತದೆ: “ಅವನು ಗಲಿಲಾಯದಾದ್ಯಂತ ಸಂಚರಿಸಿ . . . ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ . . . ಬಂದನು.” (ಮತ್ತಾಯ 4:23) ದೇವರ ರಾಜ್ಯದ ಬಗ್ಗೆ ಯೇಸು ಜನರಿಗೆ ಸಾರಿದ್ದು ಇಲ್ಲವೇ ಘೋಷಿಸಿದ್ದಷ್ಟೇ ಅಲ್ಲ, ಅವರಿಗೆ ಬೋಧಿಸಿದನು ಸಹ. ಅಂದರೆ ಆತನು ಕಲಿಸಿದನು, ವಿವರಿಸಿದನು, ತರ್ಕಬದ್ಧ ಮಾತುಗಳ ಮೂಲಕ ಮನದಟ್ಟು ಮಾಡಿಸಿದನು. ದೇವರ ರಾಜ್ಯ ಆತನ ಸಂದೇಶದ ಮುಖ್ಯ ವಿಷಯ ಆಗಿತ್ತು.

ಯೇಸು ತನ್ನ ಶುಶ್ರೂಷೆಯ ಸಮಯದಾದ್ಯಂತ ತನ್ನ ಕೇಳುಗರಿಗೆ ದೇವರ ರಾಜ್ಯವೆಂದರೇನು, ಅದೇನು ಮಾಡಲಿದೆ ಎಂಬದನ್ನು ಕಲಿಸಿದನು. ಆ ರಾಜ್ಯದ ಕುರಿತು ಮುಂದೆ ಕೊಡಲಾಗಿರುವ ಸತ್ಯಗಳನ್ನೂ ಅದರ ಜೊತೆಗೆ ಆ ವಿಷಯದ ಬಗ್ಗೆ ಯೇಸು ಹೇಳಿದ ಮಾತುಗಳನ್ನು ತಿಳಿಸುವ ಬೈಬಲ್‌ ವಚನಗಳನ್ನೂ ಗಮನಿಸಿ.

▪ ದೇವರ ರಾಜ್ಯವು ಸ್ವರ್ಗದಲ್ಲಿರುವ ಒಂದು ಸರಕಾರವಾಗಿದೆ. ಯೆಹೋವ ದೇವರು ಯೇಸುವನ್ನು ಅದರ ರಾಜನಾಗಿ ನೇಮಿಸಿದ್ದಾನೆ.—ಮತ್ತಾಯ 4:17; ಯೋಹಾನ 18:36.

▪ ಆ ರಾಜ್ಯವು ದೇವರ ನಾಮವನ್ನು ಪವಿತ್ರೀಕರಿಸುವುದು ಮತ್ತು ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವಂತೆ ಭೂಮಿಯ ಮೇಲೂ ನೆರವೇರುವಂತೆ ಮಾಡುವುದು.—ಮತ್ತಾಯ 6:9, 10.

▪ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಇಡೀ ಭೂಮಿಯು ಒಂದು ಸುಂದರ ಪರದೈಸ್‌ ಇಲ್ಲವೆ ಉದ್ಯಾನವನವಾಗಿ ಮಾರ್ಪಡುವುದು.—ಲೂಕ 23:42, 43.

▪ ದೇವರ ರಾಜ್ಯವು ಬೇಗನೆ ಬರಲಿದೆ, ಭೂಮಿಗಾಗಿ ದೇವರ ಉದ್ದೇಶವನ್ನು ಪೂರೈಸಲಿದೆ. *ಮತ್ತಾಯ 24:3, 7-12.

ಮಹತ್ಕಾರ್ಯಗಳನ್ನು ನಡೆಸಿದನು. ಯೇಸು ಮುಖ್ಯವಾಗಿ “ಬೋಧಕನು” ಎಂದು ಪ್ರಸಿದ್ಧನಾಗಿದ್ದನು. (ಯೋಹಾನ 13:13) ಮೂರುವರೆ ವರ್ಷಕಾಲದ ಆತನ ಶುಶ್ರೂಷೆಯಲ್ಲಿ ಆತನು ಹಲವಾರು ಮಹತ್ಕಾರ್ಯಗಳನ್ನೂ ನಡೆಸಿದನು. ಇವು ಕಡಿಮೆಪಕ್ಷ ಎರಡು ಉದ್ದೇಶಗಳನ್ನು ಸಾಧಿಸಿದವು. ಮೊದಲನೆಯದಾಗಿ, ಆತನು ನಿಜವಾಗಿಯೂ ದೇವರಿಂದ ಕಳುಹಿಸಲ್ಪಟ್ಟವನೆಂದು ಸಾಬೀತುಪಡಿಸಲು ಅವು ಸಹಾಯಮಾಡಿದವು. (ಮತ್ತಾಯ 11:2-6) ಎರಡನೆಯದಾಗಿ ಅವು, ದೇವರ ರಾಜ್ಯದ ರಾಜನಾಗಿ ಆತನು ಭವಿಷ್ಯದಲ್ಲಿ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಮಾಡಲಿರುವ ಸಂಗತಿಗಳ ಮುನ್ನೋಟ ಕೊಟ್ಟವು. ಆತನು ನಡೆಸಿದ ಕೆಲವು ಮಹತ್ಕಾರ್ಯಗಳಿಗೆ ಗಮನಕೊಡಿ.

▪ ಬಿರುಗಾಳಿಯೆದ್ದ ಸಮುದ್ರವನ್ನೂ ಪ್ರಚಂಡ ಗಾಳಿಯನ್ನೂ ಶಾಂತಗೊಳಿಸಿದನು.—ಮಾರ್ಕ 4:39-41.

▪ ಅಸ್ವಸ್ಥರನ್ನು ಗುಣಪಡಿಸಿದನು. ಕುರುಡರನ್ನು, ಕಿವುಡರನ್ನು, ಕುಂಟರನ್ನು ವಾಸಿಮಾಡಿದನು.—ಲೂಕ 7:21, 22.

▪ ಆಹಾರವನ್ನು ಚಮತ್ಕಾರದಿಂದ ಹೆಚ್ಚಿಸಿ, ಹಸಿದಿದ್ದ ಜನಸಂದಣಿಗಳಿಗೆ ಉಣಿಸಿದನು.—ಮತ್ತಾಯ 14:17-21; 15:34-38.

▪ ಕಡಿಮೆಪಕ್ಷ ಮೂರು ಸಂದರ್ಭಗಳಲ್ಲಿ ಮೃತರನ್ನು ಜೀವಂತಗೊಳಿಸಿದನು.—ಲೂಕ 7:11-15; 8:41-55; ಯೋಹಾನ 11:38-44.

ಇಷ್ಟು ಶಕ್ತಿಶಾಲಿಯಾಗಿರುವ ರಾಜನ ಆಳ್ವಿಕೆಯಡಿ ಜೀವನವು ಎಷ್ಟು ಉತ್ತಮವಾಗಿರುವುದೆಂದು ಸ್ವಲ್ಪ ಊಹಿಸಿ!

ಯೆಹೋವ ದೇವರ ವ್ಯಕ್ತಿತ್ವವನ್ನು ಪ್ರಕಟಪಡಿಸಿದನು. ಯೆಹೋವನ ಬಗ್ಗೆ ಇತರರಿಗೆ ಬೋಧಿಸುವ ವಿಷಯದಲ್ಲಿ, ಯೇಸು ಕ್ರಿಸ್ತನೆಂದು ಪ್ರಸಿದ್ಧನಾದ ದೇವರ ಸ್ವಂತ ಮಗನಿಗಿಂತ ಹೆಚ್ಚು ಅರ್ಹನಾದವನು ಬೇರಾರೂ ಇಲ್ಲ. ಏಕೆಂದರೆ “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾದ ಯೇಸು ಬೇರಾವ ದೇವದೂತನಿಗಿಂತಲೂ ಎಷ್ಟೋ ಹೆಚ್ಚು ಸಮಯ ಯೆಹೋವನೊಂದಿಗೆ ಸ್ವರ್ಗದಲ್ಲಿ ಜೀವಿಸಿದ್ದನು. (ಕೊಲೊಸ್ಸೆ 1:15) ತನ್ನ ತಂದೆಯಾದ ದೇವರ ಯೋಚನಾಧಾಟಿ, ಚಿತ್ತ, ಮಟ್ಟ ಹಾಗೂ ಮಾರ್ಗಗಳ ಕುರಿತು ತಿಳಿಯಲು ಆತನಿಗೆ ಎಷ್ಟೊಂದು ಅವಕಾಶಗಳಿದ್ದವೆಂದು ಯೋಚಿಸಿ.

ಹೀಗಿರುವುದರಿಂದಲೇ ಯೇಸು, “ಮಗನು ಯಾರೆಂಬುದು ತಂದೆಯ ಹೊರತು ಯಾವನಿಗೂ ತಿಳಿದಿಲ್ಲ; ತಂದೆಯು ಯಾರೆಂಬುದು ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾವನಿಗೂ ತಿಳಿದಿರುವುದಿಲ್ಲ” ಎಂದು ಸರಿಯಾಗಿಯೇ ಹೇಳಿದನು. (ಲೂಕ 10:22) ತನ್ನ ತಂದೆ ಯಾವ ರೀತಿಯ ವ್ಯಕ್ತಿ ಎಂಬುದನ್ನು ಯೇಸು ಭೂಮಿಯ ಮೇಲೆ ಮನುಷ್ಯನಾಗಿದ್ದಾಗ ಸಿದ್ಧಮನಸ್ಸಿನಿಂದ, ಉತ್ಸುಕತೆಯಿಂದ ತಿಳಿಯಪಡಿಸಿದನು. ಸ್ವರ್ಗದಲ್ಲಿ ಪರಮೋನ್ನತ ದೇವರ ಸಮಕ್ಷಮದಲ್ಲಿದ್ದು ತಾನು ನೇರವಾಗಿ ಕಲಿತಂಥ ವಿಷಯಗಳ ಆಧಾರದ ಮೇಲೆ ಬೋಧಿಸಿದನು. ಹಾಗಾಗಿ ಆತನು ಹೇಳಿದಂಥ ವಿಷಯಗಳು ಅಪೂರ್ವವಾಗಿದ್ದವು.—ಯೋಹಾನ 8:28.

ಯೇಸು ತನ್ನ ತಂದೆಯ ವ್ಯಕ್ತಿತ್ವದ ಬಗ್ಗೆ ಪ್ರಕಟಪಡಿಸಿದ ರೀತಿಯನ್ನು ದೃಷ್ಟಾಂತಿಸಲು ಎಲೆಕ್ಟ್ರಿಕ್‌ ಟ್ರಾನ್ಸ್‌ಫಾರ್ಮರ್‌ನ ಉದಾಹರಣೆ ತೆಗೆದುಕೊಳ್ಳಿ. ಈ ಸಲಕರಣೆಯು ಹೈ-ವೊಲ್ಟೇಜ್‌ ವಿದ್ಯುಚ್ಛಕ್ತಿಯನ್ನು ಲೋ-ವೊಲ್ಟೇಜ್‌ಗೆ ಇಳಿಸಿ, ಸಾಮಾನ್ಯ ಬಳಕೆದಾರನಿಗೆ ಬಳಸಲು ಸೂಕ್ತವಾದದ್ದಾಗಿ ಮಾಡುತ್ತದೆ. ಹಾಗೆಯೇ, ಯೇಸು ತಾನು ಸ್ವರ್ಗದಲ್ಲಿ ತಂದೆಯ ಕುರಿತು ಕಲಿತದ್ದನ್ನು ಭೂಮಿ ಮೇಲಿರುವ ನಮ್ರ ಮಾನವರು ಗ್ರಹಿಸಲು ಮತ್ತು ಅನ್ವಯಿಸಲು ಸುಲಭಸಾಧ್ಯವಾದ ವಿಧಗಳಲ್ಲಿ ಹೇಳಿಕೊಟ್ಟನು.

ಯೇಸು ತನ್ನ ತಂದೆಯನ್ನು ಪ್ರಕಟಪಡಿಸಿದ ಈ ಎರಡು ಪ್ರಮುಖ ವಿಧಗಳನ್ನು ಗಮನಿಸಿ:

▪ ಯೇಸು ತನ್ನ ಬೋಧನೆಯಲ್ಲಿ ಯೆಹೋವನ ಕುರಿತು ಅಂದರೆ ಆತನ ನಾಮ, ಉದ್ದೇಶ, ಮಾರ್ಗಗಳ ಕುರಿತು ಸತ್ಯವನ್ನು ಪ್ರಕಟಿಸಿದನು.—ಯೋಹಾನ 3:16; 17:6, 26.

▪ ಯೇಸು ತನ್ನ ಕ್ರಿಯೆಗಳ ಮೂಲಕ ಯೆಹೋವನ ವ್ಯಕ್ತಿತ್ವದ ಅನೇಕ ಸುಂದರ ಅಂಶಗಳನ್ನು ಪ್ರಕಟಪಡಿಸಿದನು. ಆತನು ತನ್ನ ತಂದೆಯ ಗುಣಗಳನ್ನು ಎಷ್ಟು ಪರಿಪೂರ್ಣವಾಗಿ ತೋರಿಸಿದನೆಂದರೆ ಆತನು ನಿಜವಾಗಿ ಹೀಗನ್ನಸಾಧ್ಯವಿತ್ತು: ‘ನನ್ನ ತಂದೆ ಎಂಥವನೆಂದು ನಿಮಗೆ ಗೊತ್ತಾಗಬೇಕಾ? ನನ್ನನ್ನೇ ನೋಡಿ.’—ಯೋಹಾನ 5:19; 14:9.

ಯೇಸು ಜೀವಿಸಿದ ರೀತಿಯನ್ನು ನೋಡಿ ನಾವು ತಲೆದೂಗುತ್ತೇವೆ. ಆತನು ಯಾವ ಕಾರಣಕ್ಕಾಗಿ ಸತ್ತನು ಎಂಬುದನ್ನೂ ನಾವು ಪರಿಶೀಲಿಸಿ, ಕಲಿತ ಸಂಗತಿಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈದರೆ ಅಪರಿಮಿತ ಪ್ರಯೋಜನಹೊಂದಬಲ್ಲೆವು. (w11-E 04/01)

[ಪಾದಟಿಪ್ಪಣಿ]

^ ಪ್ಯಾರ. 9 ದೇವರ ರಾಜ್ಯದ ಕುರಿತು ಮತ್ತು ಅದು ಬೇಗನೆ ಬರಲಿದೆಯೆಂದು ನಮಗೆ ಹೇಗೆ ಗೊತ್ತು ಎಂಬದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ “ದೇವರ ರಾಜ್ಯ ಎಂದರೇನು?” ಎಂಬ 8ನೇ ಅಧ್ಯಾಯ ಮತ್ತು “ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೊ?” ಎಂಬ 9ನೇ ಅಧ್ಯಾಯ ನೋಡಿ.