ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

“ಅವರು ನನ್ನ ಜೊತೆ ಗೌರವದಿಂದ ನಡೆದುಕೊಂಡರು”—ಗ್ವಾಡಲೂಪೆ ಬಿಲ್ಯಾರಯಾಲ್‌

ಜನನ: 1964

ದೇಶ: ಮೆಕ್ಸಿಕೊ

ಹಿಂದೆ: ಅನೈತಿಕ ಜೀವನ

ಹಿನ್ನೆಲೆ: ನಾವು ಏಳು ಜನ ಮಕ್ಕಳು. ನಾನು ಮೆಕ್ಸಿಕೋದ ಸೊನೋರದಲ್ಲಿ ಇರೋ ಹರ್ಮೋಸಿಲ್ಲೋ ಅನ್ನೋ ಊರಲ್ಲಿ ಬೆಳೆದೆ. ಅಲ್ಲಿ ಬರೀ ಬಡವರೇ ಇದ್ರು. ಅಪ್ಪ ತೀರಿಕೊಂಡಿದ್ರಿಂದ ನಮ್ಮನ್ನ ನೋಡ್ಕೊಳ್ಳೋಕೆ ಅಮ್ಮ ಕೆಲಸಕ್ಕೆ ಹೋಗಬೇಕಾಯ್ತು. ನಾನಾಗ ಇನ್ನೂ ಚಿಕ್ಕವನಿದ್ದೆ. ಒಂದು ಚಪ್ಪಲಿ ತಗೊಳ್ಳುವಷ್ಟು ದುಡ್ಡು ನಮ್ಮತ್ರ ಇರಲಿಲ್ಲ. ಬಡತನ ಕಿತ್ತು ತಿನ್ನುತ್ತಿತ್ತು. ಅದಕ್ಕೆ ಚಿಕ್ಕ ವಯಸ್ಸಲ್ಲೇ ನಾನು ಕೆಲಸಕ್ಕೆ ಹೋಗೋಕೆ ಶುರುಮಾಡಿದೆ. ಎಂಟು ಜನ ಒಂದು ಚಿಕ್ಕ ಗುಡಿಸಲಿನಲ್ಲಿ ಇದ್ವಿ. ಅಲ್ಲಿದ್ದ ಹೆಚ್ಚಿನವರ ಗತಿನೂ ಇದೇ ಆಗಿತ್ತು.

ಹಗಲೊತ್ತು ಅಮ್ಮ ಕೆಲಸಕ್ಕೆ ಹೋಗ್ತಿದ್ರಿಂದ ನಮ್ಮನ್ನ ನೋಡ್ಕೊಳ್ಳೋಕೆ ಯಾರೂ ಇರಲಿಲ್ಲ. ನನಗೆ 6 ವರ್ಷ ಇದ್ದಾಗ 15 ವರ್ಷದ ಒಬ್ಬ ಹುಡುಗ ನನ್ನನ್ನ ಲೈಂಗಿಕವಾಗಿ ದುರುಪಯೋಗಿಸಿದ. ಸ್ವಲ್ಪ ಸಮಯದ ತನಕ ಇದು ಹಾಗೆ ಮುಂದುವರಿಯಿತು. ಹಾಗಾಗಿ ಒಬ್ಬ ಗಂಡಸಿಗೆ ಇನ್ನೊಂದು ಗಂಡಸಿನ ಮೇಲೆ ಆಕರ್ಷಣೆ ಆಗೋದು ಸರ್ವೇಸಾಮಾನ್ಯ. ಅದರಿಂದ ತಪ್ಪೇನಿಲ್ಲ ಅಂತ ಅಂದ್ಕೊಂಡೆ. ಇದರ ಬಗ್ಗೆ ನಾನು ಡಾಕ್ಟರ್ಸ್‌ ಹತ್ತಿರ, ಪಾದ್ರಿಗಳ ಹತ್ತಿರ ಮಾತಾಡಿದಾಗ ‘ಹಾಗೆ ಅನಿಸುವುದರಲ್ಲಿ ತಪ್ಪೇನಿಲ್ಲ, ಇದೆಲ್ಲ ಸಹಜ’ ಅಂತ ಹೇಳಿದರು.

14 ವರ್ಷ ಆದಾಗ ಒಬ್ಬ ಸಲಿಂಗಕಾಮಿಯಾಗಿ ಜೀವನ ಮಾಡೋಕೆ ತೀರ್ಮಾನ ಮಾಡಿದೆ. ಹೀಗೆ 11 ವರ್ಷ ಬೇರೆಬೇರೆ ಗಂಡಸರ ಜೊತೆ ಸಂಬಂಧ ಇಟ್ಟುಕೊಂಡೆ. ಸ್ವಲ್ಪ ಸಮಯ ಆದ್ಮೇಲೆ ಹೇರ್‌ ಸ್ಟೈಲಿಸ್ಟ್‌ ಕೋರ್ಸ್‌ ಮಾಡಿ ಒಂದು ಬ್ಯೂಟಿ ಪಾರ್ಲರ್‌ ಇಟ್ಟುಕೊಂಡೆ. ಆದರೆ ನನ್ನ ಜೀವನದಲ್ಲಿ ಖುಷಿನೇ ಇರ್ಲಿಲ್ಲ. ಕಷ್ಟ ಇತ್ತು, ನಂಬಿದವರೆಲ್ಲ ನನಗೆ ಮೋಸ ಮಾಡಿದ್ರು. ನಾನು ತಪ್ಪು ಮಾಡುತ್ತಿದ್ದೀನಿ ಅಂತ ಅನಿಸುತ್ತಿತ್ತು. ‘ಈ ಲೋಕದಲ್ಲಿ ನಂಬೋ ತರ ಒಳ್ಳೆ ಜನ ಯಾರಾದರೂ ಇದ್ದಾರಾ?’ ಅಂತ ನನ್ನನ್ನೇ ಕೇಳಿಕೊಳ್ತಿದ್ದೆ.

ನನ್ನ ಅಕ್ಕ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತು ದೀಕ್ಷಾಸ್ನಾನ ತಗೊಂಡಿದ್ದಳು. ಕಲಿತದ್ದನ್ನೆಲ್ಲ ನನ್ನ ಹತ್ತಿರ ಹೇಳ್ತಿದ್ದಳು. ಆದ್ರೆ ನಾನು ಅದಕ್ಕೆ ಕಿವಿನೇ ಕೊಡುತ್ತಿರಲಿಲ್ಲ. ನನ್ನ ಅಕ್ಕನನ್ನ ನೋಡುವಾಗೆಲ್ಲ ‘ಇವರ ಲೈಫ್‌ ಎಷ್ಟು ಚೆನ್ನಾಗಿದೆಯಲ್ಲ’ ಅಂತ ಯೋಚಿಸ್ತಿದ್ದೆ. ನನ್ನ ಅಕ್ಕ ಮತ್ತು ಭಾವ ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ದಯೆಯಿಂದ ನಡ್ಕೊಳ್ತಿದ್ರು. ಸ್ವಲ್ಪ ಸಮಯ ಆದ ಮೇಲೆ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರುಮಾಡಿದೆ. ಆದರೆ ಮೊದಲು ನನಗಷ್ಟೇನೂ ಆಸಕ್ತಿ ಇರಲಿಲ್ಲ. ಹೋಗ್ತಾ ಹೋಗ್ತಾ ನಾನು ಬದಲಾಗಿಬಿಟ್ಟೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌: ಒಂದುಸಲ ಸಾಕ್ಷಿಗಳು ನನ್ನನ್ನ ಕೂಟಕ್ಕೆ ಕರೆದರು. ಅಲ್ಲಿಗೆ ಹೋದಾಗ ನನಗೆ ತುಂಬ ಖುಷಿ ಆಯ್ತು. ಯಾವಾಗಲೂ ಜನ ನನ್ನನ್ನ ಗೇಲಿ ಮಾಡ್ತಿದ್ರು. ಆದರೆ ಸಾಕ್ಷಿಗಳು ಹಾಗೆ ಮಾಡದೆ ನನ್ನನ್ನ ಪ್ರೀತಿಯಿಂದ ಬರಮಾಡಿಕೊಂಡರು. ನನಗೆ ಗೌರವ ಕೊಟ್ರು, ಆ ತರ ನನಗೆ ಯಾರೂ ಗೌರವ ಕೊಟ್ಟಿರಲಿಲ್ಲ.

ಒಮ್ಮೆ ನಾನು ಸಮ್ಮೇಳನಕ್ಕೆ ಹೋದೆ. ಅಲ್ಲಿದ್ದವರನ್ನ ನೋಡಿದಾಗ ‘ಇವರೆಲ್ಲ ನನ್ನ ಅಕ್ಕನ ತರಾನೇ ಒಳ್ಳೇಯವರು, ಪ್ರಾಮಾಣಿಕರು’ ಅಂತ ಅನಿಸ್ತು. ನಂಬೋ ತರ ಒಳ್ಳೇ ಜನರು ಎಲ್ಲಾದ್ರೂ ಸಿಕ್ತಾರಾ ಅಂತ ನನಗೆ ಬಂದ ಪ್ರಶ್ನೆಗೆ ಉತ್ತರ ಸಿಕ್ಕಿದ ಹಾಗಿತ್ತು. ಅವರ ಮಧ್ಯೆ ಇದ್ದ ಪ್ರೀತಿ ಮತ್ತು ಐಕ್ಯತೆ ನನಗೆ ಸಕ್ಕತ್‌ ಇಷ್ಟ ಆಯ್ತು. ಎಲ್ಲ ಪ್ರಶ್ನೆಗಳಿಗೂ ಬೈಬಲಿಂದಾನೇ ಉತ್ತರ ಕೊಡ್ತಿದ್ರು. ಇವರೆಲ್ಲ ಇಷ್ಟು ಒಳ್ಳೆಯವರಾಗಿರೋಕೆ ಬೈಬಲೇ ಕಾರಣ ಅಂತ ಅರ್ಥಮಾಡ್ಕೊಂಡೆ. ನಾನೂ ಇವರ ತರ ಆಗಬೇಕಂದ್ರೆ ನನ್ನ ಜೀವನದಲ್ಲಿ ತುಂಬ ಬದಲಾವಣೆಗಳನ್ನ ಮಾಡ್ಕೊಬೇಕು ಅಂತ ಗೊತ್ತಾಯ್ತು.

ನಾನು ಪೂರ್ತಿಯಾಗಿ ಬದಲಾಗಬೇಕಿತ್ತು. ಯಾಕಂದ್ರೆ ನಾನು ಹುಡುಗಿ ತರ ಜೀವನ ಮಾಡ್ತಿದ್ದೆ. ನನ್ನ ಮಾತು, ಹಾವಭಾವ, ಬಟ್ಟೆ, ಹೇರ್‌ ಸ್ಟೈಲ್‌, ಫ್ರೆಂಡ್ಸ್‌ಗಳನ್ನೆಲ್ಲ ಬದಲಾಯಿಸಬೇಕಿತ್ತು. ಫ್ರೆಂಡ್ಸ್‌ ನನ್ನ ಹತ್ತಿರ ‘ಯಾಕೆ ಹೀಗೆಲ್ಲ ಮಾಡ್ತಿದ್ದೀಯ? ನೀನು ಈಗಲೇ ಚೆನ್ನಾಗಿದ್ದೀಯಾ. ಬದಲಾಗೋ ಅವಶ್ಯಕತೆ ಏನಿಲ್ಲ. ಮೊದಲು ಬೈಬಲ್‌ ಕಲಿಯೋದನ್ನ ನಿಲ್ಲಿಸು’ ಅಂತ ಅಣಕಿಸುತ್ತಿದ್ರು. ಇದನ್ನೆಲ್ಲ ನಾನು ಹೇಗೋ ನಿಭಾಯಿಸಿದೆ. ಆದ್ರೆ ಅನೈತಿಕ ಜೀವನ ರೀತಿಯನ್ನು ಬಿಡೋಕೆ ಕಷ್ಟ ಆಯ್ತು.

ಆದರೆ ಬದಲಾವಣೆ ಮಾಡೋಕೆ ಆಗುತ್ತೆ ಅಂತ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ 1 ಕೊರಿಂಥ 6:9-11ರಲ್ಲಿರೋ ಮಾತು ನನಗೆ ಧೈರ್ಯ ತುಂಬಿತು. ಅಲ್ಲಿ ಹೀಗಿದೆ: “ಕೆಟ್ಟವರು ದೇವರ ಆಳ್ವಿಕೆಯಲ್ಲಿ ಇರಲ್ಲ ಅಂತ ನಿಮಗೆ ಗೊತ್ತಿಲ್ವಾ? ಮೋಸ ಹೋಗಬೇಡಿ. ಲೈಂಗಿಕ ಅನೈತಿಕತೆ ಮಾಡುವವರು, ಮೂರ್ತಿಗಳನ್ನ ಆರಾಧಿಸುವವರು, ವ್ಯಭಿಚಾರಿಗಳು, ಸಲಿಂಗಕಾಮಿಗಳು . . . ದೇವರ ಆಳ್ವಿಕೆಯಲ್ಲಿ ಇರಲ್ಲ. ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ.” ಒಂದನೇ ಶತಮಾನದ ಕ್ರೈಸ್ತರಿಗೆ ಯೆಹೋವ ದೇವರು ಹೇಗೆ ಸಹಾಯ ಮಾಡಿದರೋ ಅದೇ ತರ ನನಗೂ ಸಹಾಯ ಮಾಡಿದ್ರು. ಬದಲಾವಣೆ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಅದಕ್ಕೆ ತುಂಬ ವರ್ಷಗಳು ಹಿಡಿಯಿತು. ನನಗೆ ಸಿಕ್ಕ ಮಾರ್ಗದರ್ಶನ, ಸಾಕ್ಷಿಗಳು ತೋರಿಸಿದ ಪ್ರೀತಿ ಕಾಳಜಿಯಿಂದ ತುಂಬ ಸಹಾಯ ಆಯ್ತು.

ಸಿಕ್ಕಿದ ಪ್ರಯೋಜನಗಳು: ಈಗ ನಾನು ಹುಡುಗಿ ತರ ಅಲ್ಲ ಹುಡುಗನ ತರ ಜೀವನ ಮಾಡ್ತಿದ್ದೀನಿ. ನನಗೆ ಮದುವೆ ಆಯ್ತು, ನಾನು ಮತ್ತು ನನ್ನ ಹೆಂಡತಿ ನಮ್ಮ ಮಗನನ್ನ ಯೆಹೋವ ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ಬದುಕೋಕೆ ಕಲಿಸ್ತಾ ಇದ್ದೀವಿ. ನಾನೀಗ ಮುಂಚಿನ ತರ ಇಲ್ಲ, ಬದಲಾಗಿದ್ದೀನಿ. ಯೆಹೋವನ ಜೊತೆ ಒಂದು ಒಳ್ಳೆ ಫ್ರೆಂಡ್‌ಶಿಪ್‌ ಇಟ್ಟುಕೊಂಡಿದ್ದೀನಿ. ಆತನ ಸೇವೆಯನ್ನು ಎಂಜಾಯ್‌ ಮಾಡ್ತಾ ಈಗ ಹಿರಿಯನಾಗಿದ್ದೀನಿ. ದೇವರ ವಾಕ್ಯದಲ್ಲಿರೋ ಸತ್ಯದ ಬಗ್ಗೆ ತುಂಬ ಜನರಿಗೆ ಹೇಳೋಕ್ಕಾಗಿದೆ. ಜೀವನದಲ್ಲಿ ನಾನು ಮಾಡಿರೋ ಬದಲಾವಣೆಗಳನ್ನು ನೋಡಿ ಅಮ್ಮನಿಗೆ ತುಂಬ ಖುಷಿ ಆಯ್ತು. ಎಷ್ಟರ ಮಟ್ಟಿಗಂದ್ರೆ ಅವರು ಬೈಬಲ್‌ ಕಲಿಯೋಕೆ ಶುರುಮಾಡಿ, ದೀಕ್ಷಾಸ್ನಾನವನ್ನೂ ತಗೊಂಡ್ರು. ಅಷ್ಟೇ ಅಲ್ಲ ಅನೈತಿಕ ಜೀವನ ನಡೆಸುತ್ತಿದ್ದ ನನ್ನ ತಂಗಿನೂ ಸಾಕ್ಷಿಯಾದಳು.

ಬದಲಾಗಬೇಡ ಅಂತ ಹೇಳಿದ ಫ್ರೆಂಡ್ಸೇ ‘ನೀನು ಬದಲಾಗಿದ್ದು ಒಳ್ಳೇದಾಯ್ತು’ ಅಂತ ಈಗ ಹೇಳ್ತಾರೆ. ಸತ್ಯ ಕಲಿತಿದ್ದಕ್ಕೆ ಈ ಬದಲಾವಣೆಗಳೆಲ್ಲ ಮಾಡೋಕಾಯ್ತು. ಡಾಕ್ಟರ್ಸ್‌ ಹತ್ತಿರ ಸಲಹೆ ಕೇಳಿದಾಗ ಅವರು ನನ್ನನ್ನ ತಪ್ಪು ದಾರಿಗೆ ನಡೆಸಿಬಿಟ್ಟರು. ನನಗೆ ಏನೂ ಯೋಗ್ಯತೆ ಇಲ್ಲ ಅಂದ್ರೂ ಯೆಹೋವ ದೇವರು ನನ್ನನ್ನು ನೋಡಿ ನನಗೆ ಸಹಾಯ ಮಾಡಿದರು, ತಾಳ್ಮೆ ತೋರಿಸಿದರು. ಪ್ರೀತಿ ಸ್ವರೂಪಿಯಾದ ಯೆಹೋವ ದೇವರು ನನ್ನನ್ನು ಗಮನಿಸಿದ್ರು, ನಾನು ಬದಲಾಗಬೇಕಂತ ಆಸೆಪಟ್ಟರು. ಇದನ್ನ ನೋಡಿದಾಗ ಬದಲಾಗಲೇಬೇಕು ಅನ್ನೋ ಛಲ ಬಂತು.