ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಯನ್ನು ಪೂರ್ಣ ಗಂಭೀರತೆಯಿಂದ ಮಾಡಿರಿ

ಯೆಹೋವನ ಸೇವೆಯನ್ನು ಪೂರ್ಣ ಗಂಭೀರತೆಯಿಂದ ಮಾಡಿರಿ

ಯೆಹೋವನ ಸೇವೆಯನ್ನು ಪೂರ್ಣ ಗಂಭೀರತೆಯಿಂದ ಮಾಡಿರಿ

“ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, . . . ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.”—ಫಿಲಿ. 4:8.

1, 2. ಲೋಕದಲ್ಲಿ ಅನೇಕರಿಗೆ ಜೀವನದ ಬಗ್ಗೆ ಕ್ಷುಲ್ಲಕ ನೋಟ ಏಕಿದೆ? ಈಗ ಯಾವ ಪ್ರಶ್ನೆಗಳು ಏಳುತ್ತವೆ?

ಮಾನವ ಇತಿಹಾಸದಲ್ಲೇ ಅತೀ ಕಷ್ಟಕರವಾದ ಹಾಗೂ ವಿಪತ್ಕಾರಕ ಸಮಯಾವಧಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಯೆಹೋವನೊಂದಿಗೆ ಅತ್ಯಾಪ್ತ ಸಂಬಂಧವಿರದ ಜನರಿಗೆ ‘ನಿಭಾಯಿಸಲು ಕಷ್ಟಕರವಾದ ಈ ಕಠಿನಕಾಲಗಳನ್ನು’ ಎದುರಿಸುವುದು ಅಸಾಧ್ಯವೇ ಸರಿ. (2 ತಿಮೊ. 3:1-5) ಅಂಥವರು ಕೇವಲ ತಮ್ಮ ಸ್ವಂತ ಬಲದಿಂದ ದಿನಗಳನ್ನೇನೋ ದೂಡುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ನಿಭಾಯಿಸಲು ಅವರಿಂದಾಗುತ್ತಿಲ್ಲ. ಅನೇಕರು ತಮ್ಮ ಬದುಕಿನ ಶೋಚನೀಯ ಸ್ಥಿತಿಯನ್ನು ಮರೆಯಲು ಹೊಸ ಹೊಸ ಮನೋರಂಜನೆಗಳ ಮೊರೆಹೋಗುತ್ತಾರೆ.

2 ಒತ್ತಡಗಳನ್ನು ನಿಭಾಯಿಸಲು ಜನರು ಹೆಚ್ಚಾಗಿ ಭೋಗಾಸಕ್ತ ಜೀವನಕ್ಕೆ ಪ್ರಥಮ ಸ್ಥಾನ ಕೊಡುತ್ತಾರೆ. ಜಾಗರೂಕತೆ ವಹಿಸದಿದ್ದಲ್ಲಿ ಕ್ರೈಸ್ತರೂ ಸುಲಭವಾಗಿ ಇಂಥ ಜೀವನರೀತಿಗೆ ಬಲಿಬೀಳಬಹುದು. ನಾವು ಅದರಿಂದ ಹೇಗೆ ದೂರವಿರಸಾಧ್ಯ? ಇದರರ್ಥ ನಾವು ಯಾವಾಗಲೂ ಗಂಭೀರವಾಗಿರಬೇಕು, ಸ್ವಲ್ಪವೂ ಮೋಜು ಮಾಡಬಾರದು ಎಂದೋ? ಸುಖಸಂತೋಷ ಹಾಗೂ ಜವಾಬ್ದಾರಿಗಳ ನಡುವೆ ನಾವು ಸಮತೂಕವನ್ನು ಕಾಪಾಡಿಕೊಳ್ಳುವುದು ಹೇಗೆ? ನಾವು ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಾದರೂ ಅದು ವೈಪರೀತ್ಯಕ್ಕೆ ಹೋಗದಂತೆ ಯಾವ ಬೈಬಲ್‌ ಮೂಲತತ್ತ್ವಗಳು ನಮ್ಮನ್ನು ಮಾರ್ಗದರ್ಶಿಸಬೇಕು?

ಭೋಗಪ್ರಿಯ ಲೋಕದಲ್ಲಿ ಗಂಭೀರತೆ

3, 4. ಗಂಭೀರವಾಗಿರಬೇಕಾದ ಅಗತ್ಯವನ್ನು ಮನಗಾಣಲು ಬೈಬಲ್‌ ನಮಗೆ ಹೇಗೆ ಸಹಾಯಮಾಡುತ್ತದೆ?

3 ಈ ಲೋಕ ‘ಭೋಗವನ್ನು ಪ್ರೀತಿಸುವುದಕ್ಕೆ’ ವಿಪರೀತ ಮಹತ್ವ ಕೊಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. (2 ತಿಮೊ. 3:4) ಇದು ನಮ್ಮ ಆಧ್ಯಾತ್ಮಿಕತೆಗೆ ಧಕ್ಕೆಯನ್ನುಂಟುಮಾಡಬಲ್ಲದು. (ಜ್ಞಾನೋ. 21:17) ಸಕಾರಣದಿಂದಲೇ ತಿಮೊಥೆಯ ಹಾಗೂ ತೀತನಿಗೆ ಅಪೊಸ್ತಲ ಪೌಲನು ಬರೆದ ಪತ್ರದಲ್ಲಿ ಗಂಭೀರತೆಯ ಕುರಿತ ಸಲಹೆಯೂ ಇದೆ. ನಾವದನ್ನು ಅನ್ವಯಿಸಿಕೊಳ್ಳುವಲ್ಲಿ ಜೀವನದ ಕುರಿತು ಲೋಕಕ್ಕಿರುವ ಕ್ಷುಲ್ಲಕ ನೋಟದಿಂದ ಪ್ರಭಾವಿತರಾಗೆವು.—1 ತಿಮೊಥೆಯ 2:1, 2; ತೀತ 2:2-8 ಓದಿ.

4 ಜೀವನವನ್ನು ಗಂಭೀರವಾಗಿ ಪರಿಗಣಿಸಲಿಕ್ಕಾಗಿ ಕೆಲವೊಮ್ಮೆ ಸುಖಭೋಗಗಳನ್ನು ತೊರೆಯಬೇಕಾಗಬಹುದು. ಇದರ ಮೌಲ್ಯವನ್ನು ಸೊಲೊಮೋನನು ಶತಮಾನಗಳ ಮುಂಚೆಯೇ ಬರೆದನು. (ಪ್ರಸಂ. 3:4; 7:2-4) ಜೀವನ ತುಂಬ ಅಲ್ಪಾವಧಿಯದ್ದು, ಆದಕಾರಣ ರಕ್ಷಣೆಯನ್ನು ಪಡೆಯಲು ನಾವು ‘ಶಕ್ತಿಯುತವಾಗಿ ಪ್ರಯಾಸಪಡಬೇಕು.’ (ಲೂಕ 13:24) ಈ ನಿಟ್ಟಿನಲ್ಲಿ ‘ಗಂಭೀರವಾದ ಚಿಂತನೆಗೆ ಅರ್ಹವಾಗಿರುವ’ ಎಲ್ಲ ವಿಷಯಗಳನ್ನು ನಾವು ಪರಿಗಣಿಸುತ್ತಿರಬೇಕು. (ಫಿಲಿ. 4:8, 9) ಅಂದರೆ ಕ್ರೈಸ್ತ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಜಾಗರೂಕ ಗಮನಕೊಡಬೇಕು.

5. ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಜೀವನದ ಒಂದು ಕ್ಷೇತ್ರ ಯಾವುದು?

5 ಉದಾಹರಣೆಗೆ, ಕ್ರೈಸ್ತರು ಯೆಹೋವನನ್ನೂ ಯೇಸುವನ್ನೂ ಅನುಕರಿಸುತ್ತಾ ಕಷ್ಟಪಟ್ಟು ಕೆಲಸಮಾಡಬೇಕಾದ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ಯೋಹಾ. 5:17) ಫಲಿತಾಂಶವಾಗಿ, ಕೆಲಸದ ಸ್ಥಳದಲ್ಲಿನ ಒಳ್ಳೇ ನಡತೆ ಮತ್ತು ವಿಶ್ವಾಸಾರ್ಹತೆಗಾಗಿ ಅವರನ್ನು ಅನೇಕವೇಳೆ ಪ್ರಶಂಸಿಸಲಾಗಿದೆ. ತಮ್ಮ ಕುಟುಂಬವನ್ನು ನೋಡಿಕೊಳ್ಳಲಿಕ್ಕಾಗಿ ಮುಖ್ಯವಾಗಿ ಕುಟುಂಬದ ಶಿರಸ್ಸುಗಳು ಕಷ್ಟಪಟ್ಟು ಕೆಲಸಮಾಡುತ್ತಾರೆ. ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸದಿರುವುದು ‘ನಂಬಿಕೆಯನ್ನು ನಿರಾಕರಿಸುವುದಕ್ಕೆ’ ಅಂದರೆ, ಯೆಹೋವನನ್ನೇ ನಿರಾಕರಿಸುವುದಕ್ಕೆ ಸಮ.—1 ತಿಮೊ. 5:8.

ನಮ್ಮ ಆರಾಧನೆಯ ಬಗ್ಗೆ ಗಂಭೀರವಾದ ಜೊತೆಗೆ ಹರ್ಷಕರ ನೋಟ

6. ನಾವು ಯೆಹೋವನ ಆರಾಧನೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳಬೇಕು?

6 ಯೆಹೋವನೆಂದೂ ಸತ್ಯಾರಾಧನೆಯನ್ನು ಲಘುವಾಗಿ ತೆಗೆದುಕೊಂಡಿಲ್ಲ. ಉದಾಹರಣೆಗೆ, ಇಸ್ರಾಯೇಲ್ಯರು ಯೆಹೋವನ ಆರಾಧನೆಯಿಂದ ವಿಮುಖರಾದಾಗ ವಿಪತ್ಕಾರಕ ಫಲಿತಾಂಶಗಳನ್ನು ಅನುಭವಿಸಿದರು. (ಯೆಹೋ. 23:12, 13) ಒಂದನೆಯ ಶತಮಾನದಲ್ಲಿ, ಭ್ರಷ್ಟ ಬೋಧನೆಗಳು ಮತ್ತು ಆಲೋಚನಾ ರೀತಿಗಳು ಸತ್ಯಾರಾಧನೆಯಲ್ಲಿ ನುಸುಳದಂತೆ ನೋಡಿಕೊಳ್ಳಲಿಕ್ಕಾಗಿ ಕ್ರಿಸ್ತನ ಹಿಂಬಾಲಕರು ಕಠಿನ ಹೋರಾಟ ಮಾಡಬೇಕಾಗಿತ್ತು. (2 ಯೋಹಾ. 7-11; ಪ್ರಕ. 2:14-16) ಇಂದು ಸಹ ನಿಜ ಕ್ರೈಸ್ತರು ತಮ್ಮ ಆರಾಧನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.—1 ತಿಮೊ. 6:20.

7. ಪೌಲನು ತನ್ನ ಶುಶ್ರೂಷೆಗೆ ಹೇಗೆ ತಯಾರಿಮಾಡಿದನು?

7 ನಮ್ಮ ಶುಶ್ರೂಷೆಯು ಆನಂದದ ಮೂಲ. ಆದರೆ ಆ ಆನಂದವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಶುಶ್ರೂಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾ ಮುಂಚಿತವಾಗಿ ತಯಾರಿಮಾಡಬೇಕು. ಪೌಲನು ತಾನು ಯಾರಿಗೆ ಬೋಧಿಸಿದನೋ ಅವರನ್ನು ಗಣನೆಗೆ ತೆಗೆದುಕೊಂಡ ರೀತಿಯನ್ನು ವಿವರಿಸುತ್ತಾ ಹೀಗೆ ಬರೆದನು: “ನಾನು ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು. ಆದರೆ ನಾನು ಇತರರೊಂದಿಗೆ ಸುವಾರ್ತೆಯಲ್ಲಿ ಪಾಲುಗಾರನಾಗಲಿಕ್ಕಾಗಿ ಎಲ್ಲವನ್ನೂ ಸುವಾರ್ತೆಗೋಸ್ಕರವೇ ಮಾಡುತ್ತೇನೆ.” (1 ಕೊರಿಂ. 9:22, 23) ಜನರಿಗೆ ಆಧ್ಯಾತ್ಮಿಕ ಸಹಾಯ ನೀಡುವುದರಲ್ಲಿ ಪೌಲನು ಅಪಾರ ಸಂತಸವನ್ನು ಕಂಡುಕೊಂಡನು. ತನ್ನ ಕೇಳುಗರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವುದರ ಕುರಿತು ಅವನು ಗಂಭೀರವಾಗಿ ಆಲೋಚಿಸಿದನು. ಹೀಗೆ ಯೆಹೋವನನ್ನು ಆರಾಧಿಸಲು ಅವರಿಗೆ ಉತ್ತೇಜನ ಹಾಗೂ ಪ್ರೇರಣೆ ನೀಡಲು ಶಕ್ತನಾದನು.

8. (ಎ) ನಾವು ಬೋಧಿಸುವ ಜನರೆಡೆಗೆ ನಮಗೆ ಯಾವ ಮನೋಭಾವವಿರಬೇಕು? (ಬಿ) ಬೈಬಲ್‌ ಅಧ್ಯಯನ ನಡೆಸುವುದು ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳಲು ಹೇಗೆ ಸಹಾಯಮಾಡುತ್ತದೆ?

8 ಪೌಲನು ತನ್ನ ಶುಶ್ರೂಷೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡನು? ಯೆಹೋವನಿಗೂ ಸತ್ಯದ ಸಂದೇಶಕ್ಕೆ ಕಿವಿಗೊಡುವವರಿಗೂ “ದಾಸನಾಗಿ” ಕೆಲಸಮಾಡಲು ಅವನು ಸಿದ್ಧನಿದ್ದನು. (ರೋಮ. 12:11; 1 ಕೊರಿಂ. 9:19) ಮನೆ ಬೈಬಲ್‌ ಅಧ್ಯಯನದಲ್ಲಾಗಲಿ, ಕ್ರೈಸ್ತ ಕೂಟದಲ್ಲಾಗಲಿ, ಕುಟುಂಬ ಆರಾಧನೆಯಲ್ಲಾಗಲಿ ದೇವರ ವಾಕ್ಯವನ್ನು ಇತರರಿಗೆ ಬೋಧಿಸುವ ಜವಾಬ್ದಾರಿ ನಮಗಿದೆ. ಆದರೆ ನಾವು ಬೋಧಿಸುತ್ತಿರುವ ಜನರೆಡೆಗೆ ನಮಗಿರುವ ಜವಾಬ್ದಾರಿಯನ್ನು ನಾವು ಅರಿತಿದ್ದೇವೋ? ಕ್ರಮವಾಗಿ ಬೈಬಲ್‌ ಅಧ್ಯಯನ ನಡೆಸುವುದು ಒಂದು ದೊಡ್ಡ ಹೊರೆ ಎಂಬದಾಗಿ ನಮಗನಿಸಬಹುದು. ನಾವು ನಮ್ಮ ವೈಯಕ್ತಿಕ ಚಟುವಟಿಕೆಗಳಿಗೆ ವ್ಯಯಿಸುತ್ತಿದ್ದ ಸಮಯವನ್ನು ಇತರರಿಗಾಗಿ ಬದಿಗಿರಿಸಬೇಕಾಗುತ್ತದೆ ಎಂಬುದೇನೋ ನಿಜ. ಆದರೆ ಅದು, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಹೇಳಿದ ಮಾತುಗಳಿಗೆ ಹೊಂದಿಕೆಯಲ್ಲಿದೆ ಅಲ್ಲವೇ? (ಅ. ಕಾ. 20:35) ರಕ್ಷಣೆಯ ಮಾರ್ಗವನ್ನು ಇತರರಿಗೆ ವೈಯಕ್ತಿಕವಾಗಿ ಬೋಧಿಸುವಾಗ ಸಿಗುವ ಸಂತೋಷ ಬೇರೆ ಯಾವ ಕೆಲಸದಲ್ಲೂ ಸಿಗದು.

9, 10. (ಎ) ಗಂಭೀರವಾಗಿರುವುದರ ಅರ್ಥ ವಿನೋದವಿಹಾರಗಳಲ್ಲಿ ಒಳಗೂಡಲೇಬಾರದು ಎಂದೋ? ವಿವರಿಸಿ. (ಬಿ) ಇತರರಿಗೆ ಪ್ರೋತ್ಸಾಹದ ಚಿಲುಮೆಯೂ ಸುಲಭವಾಗಿ ಸಮೀಪಿಸಸಾಧ್ಯವಿರುವವನೂ ಆಗಿರುವಂತೆ ಒಬ್ಬ ಹಿರಿಯನಿಗೆ ಯಾವುದು ಸಹಾಯಮಾಡುತ್ತದೆ?

9 ಗಂಭೀರವಾಗಿರುವುದರ ಅರ್ಥ ನಾವು ವಿನೋದವಿಹಾರಗಳಲ್ಲಿ ಒಳಗೂಡಲೇಬಾರದು, ಇತರರೊಂದಿಗೆ ಹಾಯಾಗಿ ಸಮಯಕಳೆಯಲೇಬಾರದು ಎಂದಲ್ಲ. ಈ ವಿಷಯದಲ್ಲಿ ಯೇಸು ಪರಿಪೂರ್ಣ ಮಾದರಿಯನ್ನಿಟ್ಟನು. ಅವನು ಯಾವಾಗಲೂ ಬೋಧಿಸುವುದರಲ್ಲೇ ನಿರತನಾಗಿರದೆ ಇತರರೊಂದಿಗೆ ಸಂತೋಷಿಸಲು, ಸುಸಂಬಂಧ ಬೆಸೆಯಲು ಸಮಯ ಮಾಡಿಕೊಂಡನು. (ಲೂಕ 5:27-29; ಯೋಹಾ. 12:1, 2) ಗಂಭೀರವಾಗಿರುವುದರ ಅರ್ಥ ನಾವು ಯಾವಾಗಲೂ ಗಂಟುಮೋರೆ ಹಾಕಿಕೊಂಡಿರಬೇಕೆಂದೂ ಅಲ್ಲ. ಒಂದುವೇಳೆ ಯೇಸು ತೀರ ಕಟ್ಟುನಿಟ್ಟಿನವನೂ ಗಂಭೀರ ಸ್ವಭಾವದವನೂ ಆಗಿರುತ್ತಿದ್ದಲ್ಲಿ, ಜನರು ಖಂಡಿತ ಅವನ ಹತ್ತಿರವೂ ಸುಳಿಯುತ್ತಿರಲಿಲ್ಲ. ಆದರೆ ಅವನ ಬಳಿ ಮಕ್ಕಳು ಸಹ ಯಾವುದೇ ಅಂಜಿಕೆಯಿಲ್ಲದೆ ಹೋಗುತ್ತಿದ್ದರು. (ಮಾರ್ಕ 10:13-16) ಯೇಸುವಿನ ಸಮತೂಕದ ನೋಟವನ್ನು ನಾವು ಹೇಗೆ ಅನುಕರಿಸಬಲ್ಲೆವು?

10 ಒಬ್ಬ ಹಿರಿಯನ ಕುರಿತು ಸಹೋದರನೊಬ್ಬನು ಹೇಳಿದ್ದು: “ಅವರು ಸ್ವತಃ ತಮ್ಮಿಂದ ಹೆಚ್ಚನ್ನು ನಿರೀಕ್ಷಿಸುತ್ತಾರೆ. ಆದರೆ ಇತರರಿಂದ ಎಂದೂ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ.” ನಿಮ್ಮ ಬಗ್ಗೆಯೂ ಹೀಗೆ ಹೇಳಸಾಧ್ಯವೋ? ಇತರರಿಂದ ನ್ಯಾಯಸಮ್ಮತ ವಿಷಯಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ. ಉದಾಹರಣೆಗೆ, ಹೆತ್ತವರು ತಮ್ಮ ಮಕ್ಕಳಿಗೆ ನ್ಯಾಯಸಮ್ಮತ ಗುರಿಗಳನ್ನಿಟ್ಟು ಅವುಗಳನ್ನು ತಲಪುವಂತೆ ಸಹಾಯಮಾಡುವಾಗ ಮಕ್ಕಳು ಅದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಅಂತೆಯೇ, ಹಿರಿಯರು ಸಭೆಯಲ್ಲಿರುವವರಿಗೆ ಆಧ್ಯಾತ್ಮಿಕವಾಗಿ ಪ್ರಗತಿಮಾಡುವಂತೆ ಉತ್ತೇಜಿಸಿ ಅದನ್ನು ಸಾಧಿಸುವ ಬಗ್ಗೆ ತಕ್ಕ ಸಲಹೆಗಳನ್ನು ಕೊಡಬಹುದು. ತನ್ನ ಬಗ್ಗೆ ಸಮತೂಕದ ನೋಟ ಹೊಂದಿರುವ ಹಿರಿಯನು ಪ್ರೋತ್ಸಾಹದ ಚಿಲುಮೆಯಾಗಿರುತ್ತಾನೆ. ಮಾತ್ರವಲ್ಲ ಇತರರು ಅವನನ್ನು ಸುಲಭವಾಗಿ ಸಮೀಪಿಸಸಾಧ್ಯವಿದೆ. (ರೋಮ. 12:3) ಒಬ್ಬಾಕೆ ಸಹೋದರಿ ಹೇಳಿದ್ದು: “ಹಿರಿಯರು ಎಲ್ಲವನ್ನೂ ತಮಾಷೆಯಾಗಿ ಪರಿಗಣಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಅವರು ಯಾವಾಗಲೂ ಗಂಭೀರವಾಗಿರುವಲ್ಲಿ ಅವರೊಂದಿಗೆ ಮಾತಾಡಲು ಕಷ್ಟವಾಗುತ್ತದೆ.” ಕೆಲವು ಹಿರಿಯರು “ತುಂಬ ಗಂಭೀರ ಸ್ವಭಾವದವರಾಗಿರುವುದರಿಂದ ಅವರನ್ನು ನೋಡುವಾಗಲೇ ಭಯವಾಗುತ್ತದೆ” ಎಂದು ಇನ್ನೊಬ್ಬಳು ಸಹೋದರಿ ಹೇಳಿದಳು. ‘ಸಂತೋಷದ ದೇವರಾಗಿರುವ’ ಯೆಹೋವನ ಆರಾಧನೆಯ ಬಗ್ಗೆ ಆತನ ಎಲ್ಲ ಆರಾಧಕರಿಗೆ ಇರಬೇಕಾದ ಸಂತೋಷಭರಿತ ನೋಟವನ್ನು ಕುಂದಿಸಲು ಹಿರಿಯರೆಂದೂ ಬಯಸರು.—1 ತಿಮೊ. 1:11.

ಸಭೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಿರಿ

11. ಸಭೆಯಲ್ಲಿ ಸೇವಾಸುಯೋಗಗಳಿಗೆ ‘ಎಟುಕಿಸಿಕೊಳ್ಳುವುದರ’ ಅರ್ಥವೇನು?

11 ಪೌಲನು ಸಭೆಯಲ್ಲಿರುವವರನ್ನು ಹೆಚ್ಚಿನ ಜವಾಬ್ದಾರಿಗಳಿಗೆ ಅರ್ಹರಾಗಲು ಪ್ರಯತ್ನಿಸುವಂತೆ ಉತ್ತೇಜಿಸಿದನು. ಆದರೆ ಇದರರ್ಥ ಅವನು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ತೃಪ್ತಿಪಡಿಸಿಕೊಳ್ಳುವಂತೆ ಇತರರನ್ನು ಉತ್ತೇಜಿಸಿದನೆಂದಲ್ಲ. ಬದಲಾಗಿ ಅವನು ಬರೆದದ್ದು: “ಯಾವನಾದರೂ ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ.” (1 ತಿಮೊ. 3:1, 4) ಕ್ರೈಸ್ತಪುರುಷರು ಸೇವಾಸುಯೋಗಗಳಿಗೆ ‘ಎಟುಕಿಸಿಕೊಳ್ಳಬೇಕಾದರೆ’ ತಮ್ಮ ಸಹೋದರರ ಸೇವೆಮಾಡಲಿಕ್ಕಾಗಿ ಅಗತ್ಯವಿರುವ ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳಲು ಶ್ರಮಿಸುವ ತೀವ್ರ ಅಪೇಕ್ಷೆಯನ್ನು ಹೊಂದಿರಬೇಕು. ಸಹೋದರನೊಬ್ಬನು ದೀಕ್ಷಾಸ್ನಾನ ಪಡೆದು ಕಡಿಮೆಪಕ್ಷ ಒಂದು ವರ್ಷವಾಗಿದ್ದು, 1 ತಿಮೊಥೆಯ 3:8-13ರಲ್ಲಿ ಶುಶ್ರೂಷಾ ಸೇವಕರಿಗಾಗಿ ತಿಳಿಸಲಾಗಿರುವ ಅರ್ಹತೆಗಳನ್ನು ಅವನು ತಕ್ಕಮಟ್ಟಿಗೆ ಹೊಂದಿರುವಲ್ಲಿ ಅವನನ್ನು ಆ ನೇಮಕಕ್ಕೆ ಶಿಫಾರಸ್ಸು ಮಾಡಬಹುದಾಗಿದೆ. 8 ನೇ ವಚನ ನಿರ್ದಿಷ್ಟವಾಗಿ ಏನು ಹೇಳುತ್ತದೆಂದು ಗಮನಿಸಿ: “ಶುಶ್ರೂಷಾ ಸೇವಕರು ಸಹ ಗಂಭೀರ ವ್ಯಕ್ತಿಗಳಾಗಿರಬೇಕು.”

12, 13. ಯುವ ಸಹೋದರರು ಜವಾಬ್ದಾರಿಗಳಿಗಾಗಿ ಎಟುಕಿಸಿಕೊಳ್ಳಬಹುದಾದ ಮಾರ್ಗಗಳನ್ನು ವಿವರಿಸಿ.

12 ನೀವು ಹದಿವಯಸ್ಸಿನ ಕೊನೆಯಲ್ಲಿದ್ದು ಯೆಹೋವನ ಆರಾಧನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ದೀಕ್ಷಾಸ್ನಾನ ಪಡೆದ ಸಹೋದರರಾಗಿದ್ದೀರೋ? ಹಾಗಿದ್ದಲ್ಲಿ ಸೇವಾಸುಯೋಗಗಳಿಗಾಗಿ ಎಟುಕಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಒಂದು, ಶುಶ್ರೂಷೆಯಲ್ಲಿ ನಿಮ್ಮ ವೈಯಕ್ತಿಕ ಪಾಲನ್ನು ಹೆಚ್ಚಿಸುವುದೇ. ಕ್ಷೇತ್ರ ಸೇವೆಯಲ್ಲಿ ಎಲ್ಲಾ ವಯಸ್ಸಿನ ಸಹೋದರರೊಂದಿಗೆ ಕೆಲಸಮಾಡಲು ನಿಮಗೆ ಖುಷಿಯಾಗುತ್ತದೋ? ಒಂದು ಬೈಬಲ್‌ ಅಧ್ಯಯನ ನಡೆಸಲಿಕ್ಕಾಗಿ ಆಸಕ್ತ ವ್ಯಕ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೀರೋ? ನೀವು ಬೈಬಲ್‌ ಅಧ್ಯಯನವನ್ನು ನಡೆಸುವಾಗ ಕ್ರೈಸ್ತ ಕೂಟಗಳಲ್ಲಿ ಕೊಡಲಾಗುವ ಸಲಹೆಗಳನ್ನು ಅನ್ವಯಿಸಿಕೊಳ್ಳುವಲ್ಲಿ ನಿಮ್ಮ ಬೋಧನಾ ಸಾಮರ್ಥ್ಯ ಉತ್ತಮಗೊಳ್ಳುವುದು. ಮಾತ್ರವಲ್ಲ ಯೆಹೋವನ ಮಾರ್ಗಗಳ ಕುರಿತು ಕಲಿಯುತ್ತಿರುವ ವ್ಯಕ್ತಿಯ ಕಡೆಗೆ ಅನುಕಂಪವನ್ನು ಬೆಳೆಸಿಕೊಳ್ಳುವಿರಿ. ನಿಮ್ಮ ವಿದ್ಯಾರ್ಥಿ ತನ್ನ ಜೀವನದಲ್ಲಿ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯನ್ನು ಮನಗಾಣುವಾಗ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ನೀವು ಅವನಿಗೆ ತಾಳ್ಮೆ ಹಾಗೂ ಜಾಣ್ಮೆಯಿಂದ ಸಹಾಯಮಾಡಲು ಕಲಿಯುವಿರಿ.

13 ಯುವ ಸಹೋದರರಾದ ನೀವು ಸಭೆಯಲ್ಲಿರುವ ವೃದ್ಧರಿಗೆ ಸಹಾಯಮಾಡಲು ನಿಮ್ಮನ್ನೇ ನೀಡಿಕೊಳ್ಳಬಹುದು. ರಾಜ್ಯ ಸಭಾಗೃಹವನ್ನು ಶುದ್ಧವಾಗಿಯೂ ನೀಟಾಗಿಯೂ ಇಡುವುದರಲ್ಲೂ ಸಹಾಯ ಮಾಡಬಹುದು. ಸಾಧ್ಯವಿರುವ ಎಲ್ಲಾ ವಿಧಗಳಲ್ಲಿ ನೆರವು ನೀಡಲು ನೀವು ತೋರಿಸುವ ಸಿದ್ಧಮನಸ್ಸು ನೀವು ಶುಶ್ರೂಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಪುರಾವೆಯಾಗಿದೆ. ತಿಮೊಥೆಯನಂತೆ ನೀವು ಸಹ ಸಭೆಯ ಅಗತ್ಯಗಳ ಬಗ್ಗೆ ಯಥಾರ್ಥವಾಗಿ ಚಿಂತಿಸಲು ಕಲಿಯಬಲ್ಲಿರಿ.—ಫಿಲಿಪ್ಪಿ 2:19-22 ಓದಿ.

14. ಸಭೆಯಲ್ಲಿ ಸೇವೆಮಾಡಲು ಯುವ ಸಹೋದರರು ‘ಯೋಗ್ಯರಾಗಿದ್ದಾರೋ ಎಂದು ಪರೀಕ್ಷಿಸಲ್ಪಡುವುದು’ ಹೇಗೆ?

14 ‘ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿಹೋಗಲು’ ಹಾಗೂ ‘ನೀತಿ, ನಂಬಿಕೆ, ಪ್ರೀತಿ ಮತ್ತು ಶಾಂತಿಯೊಂದಿಗೆ’ ಇತರ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಸಹೋದರರಿಗೆ ಕೆಲಸಗಳನ್ನು ನೇಮಿಸುವುದರತ್ತ ಹಿರಿಯರು ಗಮನಕೊಡಬೇಕು. (2 ತಿಮೊ. 2:22) ಅವರಿಗೆ ಸಭೆಯಲ್ಲಿ ಕೆಲಸಗಳನ್ನು ನೇಮಿಸುವಾಗ ಜವಾಬ್ದಾರಿಗಳನ್ನು ಹೊರಲು ಅವರು ‘ಯೋಗ್ಯರಾಗಿದ್ದಾರೋ ಎಂದು ಪರೀಕ್ಷಿಸಲ್ಪಡುತ್ತಾರೆ.’ ಹೀಗೆ ಅವರ “ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 3:10; 4:15.

ಸಭೆಯಲ್ಲಿ ಹಾಗೂ ಕುಟುಂಬದಲ್ಲಿ ಗಂಭೀರತೆ

15. ಒಂದನೇ ತಿಮೊಥೆಯ 5:1, 2ಕ್ಕನುಸಾರ ಇತರರೊಂದಿಗೆ ವ್ಯವಹರಿಸುವಾಗ ನಾವು ಗಂಭೀರತೆಯನ್ನು ಹೇಗೆ ತೋರಿಸಬಲ್ಲೆವು?

15 ಗಂಭೀರತೆಯಲ್ಲಿ ಸಹೋದರ ಸಹೋದರಿಯರಿಗೆ ಘನಮಾನ ಸಲ್ಲಿಸುವುದೂ ಸೇರಿದೆ. ಪೌಲನು ತಿಮೊಥೆಯನಿಗೆ ಕೊಟ್ಟ ಸಲಹೆಯಲ್ಲಿ ಇತರರಿಗೆ ಗೌರವ ಕೊಡುವುದರ ಮಹತ್ವವನ್ನು ಒತ್ತಿಹೇಳಿದನು. (1 ತಿಮೊಥೆಯ 5:1, 2 ಓದಿ.) ಇದನ್ನು ಮುಖ್ಯವಾಗಿ ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವಾಗ ಗಮನದಲ್ಲಿಡಬೇಕು. ಈ ವಿಷಯದಲ್ಲಿ ಯೋಬನ ಮಾದರಿಯು ಅನುಕರಣೆಗೆ ಯೋಗ್ಯ. ಅವನು ಸ್ತ್ರೀಯರನ್ನು ಅದರಲ್ಲೂ ತನ್ನ ಬಾಳಸಂಗಾತಿಯನ್ನು ಗೌರವಭಾವದಿಂದ ಕಾಣುತ್ತಿದ್ದನು. ಪರಸ್ತ್ರೀಯನ್ನು ಕಾಮಾಸಕ್ತಿಯಿಂದ ನೋಡದಿರಲು ಅವನು ಪ್ರಜ್ಞಾಪೂರ್ವಕ ಪ್ರಯತ್ನಮಾಡಿದನು. (ಯೋಬ 31:1) ನಮ್ಮ ಸಹೋದರ ಸಹೋದರಿಯರ ವಿಷಯದಲ್ಲಿ ನಾವು ಗಂಭೀರವಾಗಿರುವಲ್ಲಿ ಅವರೊಂದಿಗೆ ಚೆಲ್ಲಾಟವಾಡುವುದಿಲ್ಲ ಅಥವಾ ಒಬ್ಬ ಸಹೋದರನಿಗೋ ಸಹೋದರಿಗೋ ನಮ್ಮೊಂದಿಗಿರಲು ಮುಜುಗರವಾಗುವಂತೆ ನಡಕೊಳ್ಳುವುದಿಲ್ಲ. ವಿಶೇಷವಾಗಿ ಮದುವೆಯಾಗಬೇಕೆಂಬ ಉದ್ದೇಶದಿಂದ ಒಡನಾಟಮಾಡುತ್ತಿರುವವರು ಪರಸ್ಪರರನ್ನು ಗೌರವಭಾವದಿಂದ ಕಾಣಬೇಕು. ಗಂಭೀರ ಕ್ರೈಸ್ತನು ವಿರುದ್ಧ ಲಿಂಗದ ವ್ಯಕ್ತಿಯ ಭಾವನೆಗಳೊಂದಿಗೆ ಎಂದಿಗೂ ಆಟವಾಡುವುದಿಲ್ಲ.—ಜ್ಞಾನೋ. 12:22.

16. ಗಂಡ ಅಥವಾ ತಂದೆಯ ಪಾತ್ರದ ಬಗ್ಗೆ ಈ ಲೋಕಕ್ಕಿರುವ ನೋಟಕ್ಕೂ ಬೈಬಲಿನ ನೋಟಕ್ಕೂ ಯಾವ ವ್ಯತ್ಯಾಸವಿದೆ?

16 ಕುಟುಂಬವೃತ್ತದಲ್ಲಿ ನಮಗೆ ದೇವರು ಕೊಟ್ಟಿರುವ ಪಾತ್ರಗಳ ವಿಷಯದಲ್ಲೂ ನಾವು ಗಂಭೀರ ನೋಟವನ್ನು ಕಾಪಾಡಿಕೊಳ್ಳಬೇಕು. ಸೈತಾನನ ಲೋಕವು ಗಂಡ ಅಥವಾ ತಂದೆಯ ಪಾತ್ರವನ್ನು ಅಪಹಾಸ್ಯಕ್ಕೀಡುಮಾಡಿದೆ. ಮನೋರಂಜನಾ ಜಗತ್ತು ಕುಟುಂಬದ ಶಿರಸ್ಸನ್ನು ಗೇಲಿಮಾಡುವುದರಲ್ಲಿ ಅಥವಾ ಕೀಳಾಗಿ ಬಿಂಬಿಸುವುದರಲ್ಲಿ ಬಹಳ ಖುಷಿಪಡುತ್ತದೆ. ಆದರೆ ಬೈಬಲ್‌, ಗಂಡನು “ಹೆಂಡತಿಗೆ ಶಿರಸ್ಸಾಗಿದ್ದಾನೆ” ಎಂದು ತಿಳಿಸುವ ಮೂಲಕ ಗಂಡಂದಿರಿಗೆ ಮಹತ್ತರ ಜವಾಬ್ದಾರಿಯಿದೆಯೆಂದು ಹೇಳುತ್ತದೆ.—ಎಫೆ. 5:23; 1 ಕೊರಿಂ. 11:3.

17. ಕುಟುಂಬ ಆರಾಧನೆಯಲ್ಲಿ ನಮ್ಮ ಭಾಗವಹಿಸುವಿಕೆಯು ನಾವು ನಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂಬುದನ್ನು ಹೇಗೆ ತೋರಿಸಿಕೊಡುತ್ತದೆಂದು ವಿವರಿಸಿ.

17 ಒಬ್ಬ ಗಂಡನು ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸುತ್ತಿರಬಹುದು. ಆದರೆ ಅವನು ಕುಟುಂಬಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡದಿರುವಲ್ಲಿ ಅವನಲ್ಲಿ ವಿವೇಚನೆಯ ಹಾಗೂ ವಿವೇಕದ ಕೊರತೆಯಿದೆ ಎಂದರ್ಥ. (ಧರ್ಮೋ. 6:6, 7) ಹಾಗಾಗಿಯೇ ಕುಟುಂಬದ ಶಿರಸ್ಸಾಗಿರುವ ಒಬ್ಬ ಸಹೋದರನು ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಪಡೆಯಲು ಅಪೇಕ್ಷಿಸುವಲ್ಲಿ “ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನೂ ಪೂರ್ಣ ಗಂಭೀರತೆಯೊಂದಿಗೆ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡವನೂ ಆಗಿರಬೇಕು” ಎಂದು 1 ತಿಮೊಥೆಯ 3:4 ಹೇಳುತ್ತದೆ. ಈ ಸಂಬಂಧದಲ್ಲಿ ಹೀಗೆ ಕೇಳಿಕೊಳ್ಳಿ, ‘ಪ್ರತಿವಾರ ಕುಟುಂಬ ಆರಾಧನೆಯನ್ನು ನಡೆಸಲು ನಾನು ಸಮಯವನ್ನು ಬದಿಗಿರಿಸುತ್ತಿದ್ದೇನೋ?’ ಕೆಲವು ಕ್ರೈಸ್ತ ಹೆಂಡತಿಯರು, ಆಧ್ಯಾತ್ಮಿಕವಾಗಿ ಮುಂದಾಳುತ್ವ ತೆಗೆದುಕೊಳ್ಳುವಂತೆ ತಮ್ಮ ಗಂಡಂದಿರನ್ನು ಕಾಡಿಬೇಡಬೇಕಾಗುತ್ತದೆ. ಗಂಡಂದಿರು ತಮಗಿರುವ ಈ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ ಕ್ರೈಸ್ತ ಹೆಂಡತಿಯೂ ಕುಟುಂಬ ಆರಾಧನೆಯ ಏರ್ಪಾಡನ್ನು ಬೆಂಬಲಿಸಬೇಕು ಹಾಗೂ ಅದನ್ನು ಯಶಸ್ವಿಗೊಳಿಸಲು ತನ್ನ ಗಂಡನೊಂದಿಗೆ ಸಹಕರಿಸಬೇಕು.

18. ಮಕ್ಕಳು ಗಂಭೀರವಾಗಿರಲು ಹೇಗೆ ಕಲಿಯಬಹುದು?

18 ಮಕ್ಕಳು ಸಹ ತಮ್ಮ ಜೀವನವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಉತ್ತೇಜಿಸಲಾಗಿದೆ. (ಪ್ರಸಂ. 12:1) ಚಿಕ್ಕ ಮಕ್ಕಳು ಕಷ್ಟಪಟ್ಟು ಕೆಲಸಮಾಡಲು ಕಲಿಯುವುದರಲ್ಲಿ ತಪ್ಪೇನಿಲ್ಲ. ಅವರು ತಮ್ಮ ವಯಸ್ಸು, ಸಾಮರ್ಥ್ಯಕ್ಕೆ ತಕ್ಕಂತೆ ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಬಹುದು. (ಪ್ರಲಾ. 3:27) ರಾಜ ದಾವೀದನು ಚಿಕ್ಕವನಿದ್ದಾಗಲೇ ಒಳ್ಳೇ ಕುರುಬನಾಗಿರಲು ಕಲಿತನು. ಅವನು ಸಂಗೀತವನ್ನು ನುಡಿಸಲು ಹಾಗೂ ರಚಿಸಲು ಸಹ ಕಲಿತನು. ಈ ಕೌಶಲಗಳಿಂದಾಗಿ ಇಸ್ರಾಯೇಲಿನ ಅರಸನ ಬಳಿ ಕೆಲಸ ಮಾಡುವ ಅವಕಾಶ ಅವನಿಗೆ ಸಿಕ್ಕಿತು. (1 ಸಮು. 16:11, 12, 18-21) ದಾವೀದನು ಚಿಕ್ಕವನಾಗಿದ್ದಾಗ ನಲಿದಾಡಿದ್ದು ಮಾತ್ರವಲ್ಲ ಅತ್ಯಮೂಲ್ಯ ಕೌಶಲಗಳನ್ನೂ ಕಲಿತನು. ತರುವಾಯ ಅವುಗಳನ್ನು ಯೆಹೋವನನ್ನು ಸ್ತುತಿಸಲು ಉಪಯೋಗಿಸಿದನು. ಕುರುಬನಾಗಿ ಅವನಿಗಿದ್ದ ಕೌಶಲವು ಇಸ್ರಾಯೇಲ್‌ ಜನಾಂಗವನ್ನು ತಾಳ್ಮೆಯಿಂದ ಮುನ್ನಡೆಸಲು ಅವನಿಗೆ ಸಹಾಯಮಾಡಿತು. ಯೌವನಸ್ಥರೇ, ನಿಮ್ಮ ಸೃಷ್ಟಿಕರ್ತನ ಸೇವೆಮಾಡಲು ಹಾಗೂ ಮುಂದೆ ಸಿಗಬಹುದಾದ ಜವಾಬ್ದಾರಿಗಳಿಗಾಗಿ ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಲು ಯಾವೆಲ್ಲ ಉಪಯುಕ್ತ ಕೌಶಲಗಳನ್ನು ನೀವು ಕಲಿಯುತ್ತಿದ್ದೀರಿ?

ಸಮತೂಕದ ನೋಟವನ್ನು ಕಾಪಾಡಿಕೊಳ್ಳಿರಿ

19, 20. ನಿಮ್ಮ ವಿಷಯದಲ್ಲಿ ಹಾಗೂ ನಿಮ್ಮ ಆರಾಧನೆಯ ವಿಷಯದಲ್ಲಿ ಯಾವ ಸಮತೂಕದ ನೋಟವನ್ನು ಕಾಪಾಡಿಕೊಳ್ಳಲು ದೃಢತೀರ್ಮಾನ ಮಾಡಿದ್ದೀರಿ?

19 ನಾವು ತೀರ ಗಂಭೀರವಾಗಿರದೆ ನಮ್ಮ ಬಗ್ಗೆಯೇ ಸಮತೂಕದ ನೋಟವನ್ನು ಹೊಂದಲು ಸಾಧ್ಯವಿದೆ. ನಾವ್ಯಾರೂ ‘ಅತಿಯಾಗಿ ನೀತಿವಂತರಾಗಿರಲು’ ಬಯಸುವುದಿಲ್ಲ. (ಪ್ರಸಂ. 7:16, NIBV) ಮನೆಯಲ್ಲಿ, ಕೆಲಸದಲ್ಲಿ ಇಲ್ಲವೆ ನಮ್ಮ ಸಹೋದರ ಸಹೋದರಿಯರೊಂದಿಗೆ ವ್ಯವಹರಿಸುವಾಗ ಸ್ವಲ್ಪ ತಮಾಷೆ ಅಥವಾ ವಿನೋದವು ಉದ್ವಿಗ್ನ ಪರಿಸ್ಥಿತಿಯನ್ನೂ ತಿಳಿಯಾಗಿಸುತ್ತದೆ. ಕುಟುಂಬದ ಸದಸ್ಯರು ಸಹ, ನೆಮ್ಮದಿಯ ಬೀಡಾಗಿರಬೇಕಾದ ತಮ್ಮ ಮನೆಯ ಶಾಂತಿ ಭಂಗಮಾಡುವಷ್ಟರಮಟ್ಟಿಗೆ ಗಂಭೀರವಾಗಿರದಂತೆ ಎಚ್ಚರವಹಿಸಬೇಕು. ಸಭೆಯಲ್ಲಿ ಎಲ್ಲರೂ ನಗಲು ಹಾಗೂ ಒಬ್ಬರೊಂದಿಗೊಬ್ಬರು ಆನಂದಿಸಲು ಕಲಿಯಬೇಕು. ಅದೇ ಸಮಯದಲ್ಲಿ ನಮ್ಮ ಸಂಭಾಷಣೆ ಮತ್ತು ಬೋಧನಾ ವಿಧಾನ ಭಕ್ತಿವರ್ಧಕವೂ ಸಕಾರಾತ್ಮಕವೂ ಆಗಿರಬೇಕು.—2 ಕೊರಿಂ. 13:10; ಎಫೆ. 4:29.

20 ನಾವು ಜೀವಿಸುತ್ತಿರುವ ಈ ಲೋಕದಲ್ಲಿ ಜನರು ಯೆಹೋವನನ್ನು ಅಥವಾ ಆತನ ನಿಯಮಗಳನ್ನು ಕಿಂಚಿತ್ತೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಯೆಹೋವನ ಜನರಾದರೋ ಆತನಿಗೆ ವಿಧೇಯತೆ ಹಾಗೂ ನಿಷ್ಠೆ ತೋರಿಸುವುದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಯೆಹೋವನನ್ನು “ಪೂರ್ಣ ಗಂಭೀರತೆಯೊಂದಿಗೆ” ಆರಾಧಿಸುತ್ತಿರುವ ಜನಸಮೂಹದ ಭಾಗವಾಗಿರುವುದು ಎಷ್ಟೊಂದು ಹರ್ಷಕರ! ಹಾಗಾದರೆ ನಮ್ಮ ಜೀವನ ಹಾಗೂ ಆರಾಧನೆಯ ವಿಷಯದಲ್ಲಿ ಗಂಭೀರವಾದ ನೋಟವನ್ನು ಕಾಪಾಡಿಕೊಳ್ಳುವ ದೃಢತೀರ್ಮಾನ ಮಾಡೋಣ.

ನಿಮ್ಮ ಉತ್ತರವೇನು?

• ಜೀವನದ ಬಗ್ಗೆ ಈ ಲೋಕಕ್ಕಿರುವ ಕ್ಷುಲ್ಲಕ ನೋಟವನ್ನು ನಾವು ಏಕೆ ಪ್ರತಿರೋಧಿಸಬೇಕು?

• ನಮ್ಮ ಶುಶ್ರೂಷೆಯ ಸಂಬಂಧದಲ್ಲಿ ನಾವು ಹೇಗೆ ಹರ್ಷಕರವಾಗಿಯೂ ಗಂಭೀರವಾಗಿಯೂ ಇರಬಹುದು?

• ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ನಮಗಿರುವ ನೋಟ ನಾವು ಗಂಭೀರವಾಗಿದ್ದೇವೋ ಇಲ್ಲವೋ ಎನ್ನುವುದನ್ನು ಹೇಗೆ ತೋರಿಸುತ್ತದೆ?

• ನಮ್ಮ ಸಹೋದರರಿಗೂ ಕುಟುಂಬದ ಸದಸ್ಯರಿಗೂ ಗೌರವ ತೋರಿಸುವುದು ಏಕೆ ಗಂಭೀರವಾದ ವಿಷಯವೆಂದು ವಿವರಿಸಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರಗಳು]

ಗಂಡನು ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ತನ್ನ ಕುಟುಂಬದ ಆರೈಕೆ ಮಾಡಬೇಕು