ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆ

“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆ

“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆ

“ನೀವು ಬಹಳ ಫಲವನ್ನು ಕೊಡುತ್ತಾ . . . ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.”—ಯೋಹಾ. 15:8.

1, 2. (ಎ) ಇತರರನ್ನು ಪ್ರೋತ್ಸಾಹಿಸಲು ನಮಗೆ ಯಾವ ಅವಕಾಶಗಳಿವೆ? (ಬಿ) ಯೆಹೋವನು ಕೊಡುವ ಯಾವ ಉಡುಗೊರೆ ಆತನ ಸೇವೆಮಾಡುವ ನಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ?

ಈ ಎರಡು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಿ. ಒಬ್ಬ ಯುವ ಸಹೋದರಿ ಯಾವುದೋ ವಿಷಯದಿಂದ ಚಿಂತಿತಳಾಗಿದ್ದಾಳೆ. ಅದನ್ನು ವಯಸ್ಕ ಸಹೋದರಿಯೊಬ್ಬಳು ಗಮನಿಸುತ್ತಾಳೆ. ಈಕೆ ಅವಳೊಂದಿಗೆ ಮಾತಾಡಲು ಸಾಧ್ಯವಾಗುವಂತೆ ಒಟ್ಟಿಗೆ ಕ್ಷೇತ್ರ ಸೇವೆಗೆ ಹೋಗಲು ಏರ್ಪಾಡು ಮಾಡುತ್ತಾಳೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಮಧ್ಯದಲ್ಲಿ ಆ ಯುವ ಸಹೋದರಿ ತನ್ನನ್ನು ಕಾಡುತ್ತಿರುವ ವಿಷಯದ ಕುರಿತು ಮನಬಿಚ್ಚಿ ಹೇಳುತ್ತಾಳೆ. ಆ ಪ್ರೌಢ ಸಹೋದರಿ ಅವಳ ಕಡೆಗೆ ಪ್ರೀತಿಭರಿತ ಕಳಕಳಿ ತೋರಿಸುತ್ತಾಳೆ. ಸಮಯಕ್ಕೆ ಸರಿಯಾಗಿ ಸಿಕ್ಕಿದ ಈ ಸಹಾಯದಿಂದ ಅವಳ ಮನಸ್ಸು ಹಗುರವಾಗುತ್ತದೆ. ಅವಳು ಆ ದಿನ ಸಾಯಂಕಾಲ ಪ್ರಾರ್ಥಿಸುವಾಗ ಇದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳುತ್ತಾಳೆ. ಮತ್ತೊಂದು ಸ್ಥಳದಲ್ಲಿ ಬಹುದೂರ ಪ್ರದೇಶವೊಂದರಲ್ಲಿ ಪಯನೀಯರ್‌ ಸೇವೆ ಮಾಡುತ್ತಿರುವ ಒಂದು ದಂಪತಿ ತಮ್ಮ ಹುಟ್ಟೂರಿಗೆ ಬಂದಿದ್ದಾರೆ. ಒಂದು ಊಟಕ್ಕಾಗಿ ಎಲ್ಲರೂ ಒಟ್ಟುಸೇರಿರುವಾಗ ಈ ದಂಪತಿ ತಮಗೆ ಸಿಕ್ಕಿದ ಅನುಭವಗಳನ್ನು ಉತ್ಸುಕತೆಯಿಂದ ಹಂಚಿಕೊಳ್ಳುತ್ತಾರೆ. ಇದನ್ನು ಒಬ್ಬ ಯುವ ಸಹೋದರನು ಮೌನವಾಗಿ ಕೇಳುತ್ತಿದ್ದಾನೆ. ಕೆಲವು ವರ್ಷಗಳು ಉರುಳಿ ಹೋಗುತ್ತವೆ. ಈಗ ಈ ಯುವ ಸಹೋದರನು ಪಯನೀಯರ್‌ ನೇಮಕ ಪಡೆದುಕೊಂಡು ಬೇರೊಂದು ಊರಿಗೆ ಹೊರಡಲಿದ್ದಾನೆ. ಅವನು ಹೊರಡಲು ಸಿದ್ಧತೆ ಮಾಡುತ್ತಿರುವಾಗ ಆ ದಿನ ಆ ದಂಪತಿ ಹೇಳಿದ ವಿಷಯಗಳು ತಾನೂ ಒಬ್ಬ ಪಯನೀಯರನಾಗುವಂತೆ ಪ್ರೋತ್ಸಾಹಿಸಿದವು ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾನೆ.

2 ಪ್ರಾಯಶಃ ನಿಮ್ಮ ಜೀವನದಲ್ಲೂ ಇಂಥದ್ದೇ ಸಂಗತಿ ನಡೆದಿರಬಹುದು. ಬೇರೆಯವರಿಂದ ನೀವು ಪ್ರೋತ್ಸಾಹ ಪಡೆದಿರಬಹುದು ಅಥವಾ ನಿಮ್ಮಿಂದ ಬೇರೆಯವರು ಪ್ರೋತ್ಸಾಹ ಹೊಂದಿರಬಹುದು. ಒಂದೇ ಒಂದು ಸಂಭಾಷಣೆ ಒಬ್ಬನ ಜೀವನದ ದಿಕ್ಕನ್ನೇ ಬದಲಾಯಿಸುವುದು ಅಪರೂಪವೇ ಸರಿ. ಆದರೂ ಬೇರೆಯವರನ್ನು ಪ್ರೋತ್ಸಾಹಿಸಲು ಮತ್ತು ಬಲಪಡಿಸಲು ನಮಗೆ ಪ್ರತಿ ದಿನ ಅವಕಾಶ ಸಿಗುತ್ತದೆ. ಇತರರಿಗೂ ಪ್ರಯೋಜನ ತರುವ, ದೇವರಿಗೂ ಉಪಯುಕ್ತವಾಗಿರುವ ಉತ್ತಮ ಗುಣಗಳನ್ನು ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯಮಾಡಬಲ್ಲ ಒಂದು ವಿಷಯವಿದ್ದರೆ ಎಷ್ಟು ಒಳ್ಳೇದಿತ್ತು? ಸಂತೋಷಕರವಾಗಿ ಅಂಥ ವಿಷಯವೊಂದಿದೆ. ಅದು ಯೆಹೋವನು ಕೊಡುವ ಪವಿತ್ರಾತ್ಮವೆಂಬ ಉಡುಗೊರೆಯೇ. (ಲೂಕ 11:13) ದೇವರಿಂದ ಬರುವ ಈ ಆತ್ಮವು ನಮ್ಮ ಜೀವನದ ಮೇಲೆ ಪ್ರಭಾವ ಬೀರುವಾಗ ನಮ್ಮಲ್ಲಿ ಅಪೇಕ್ಷಣೀಯ ಗುಣಗಳು ತೋರಿಬರುತ್ತವೆ. ಇವು ಎಲ್ಲ ವಿಧಗಳಲ್ಲೂ ನಾವು ದೇವರಿಗೆ ಅರ್ಪಿಸುವ ಸೇವೆಯನ್ನು ಉತ್ತಮಗೊಳಿಸುತ್ತವೆ. ಹಾಗಾದರೆ ಪವಿತ್ರಾತ್ಮವು ನಿಜಕ್ಕೂ ದೇವರು ಕೊಡುವ ಅದ್ಭುತಕರ ಉಡುಗೊರೆಯೇ!—ಗಲಾತ್ಯ 5:22, 23 ಓದಿ.

3. (ಎ) ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ನಾವು ಬೆಳೆಸಿಕೊಳ್ಳುವುದು ಹೇಗೆ ದೇವರನ್ನು ಮಹಿಮೆಪಡಿಸುತ್ತದೆ? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಿದ್ದೇವೆ?

3 ಪವಿತ್ರಾತ್ಮವನ್ನು ಕೊಡುವಾತನು ಯೆಹೋವನೇ ಆಗಿರುವುದರಿಂದ ಪವಿತ್ರಾತ್ಮದ ಸಹಾಯದಿಂದ ನಮ್ಮಲ್ಲಿ ತೋರಿಕೊಳ್ಳುವ ಗುಣಗಳು ಸ್ವತಃ ಯೆಹೋವ ದೇವರ ವ್ಯಕ್ತಿತ್ವದ ಪ್ರತಿಬಿಂಬವಾಗಿರುತ್ತವೆ. (ಕೊಲೊ. 3:9, 10) ಕ್ರೈಸ್ತರು ದೇವರನ್ನು ಏಕೆ ಅನುಕರಿಸಬೇಕು ಎಂಬುದಕ್ಕೆ ಪ್ರಮುಖ ಕಾರಣವನ್ನು ಕೊಡುತ್ತಾ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ನೀವು ಬಹಳ ಫಲವನ್ನು ಕೊಡುತ್ತಾ . . . ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.” * (ಯೋಹಾ. 15:8) ನಾವು ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳುವಾಗ ಅದು ನಮ್ಮ ಮಾತಿನಲ್ಲೂ ಕ್ರಿಯೆಯಲ್ಲೂ ಸ್ಪಷ್ಟವಾಗಿ ತೋರಿಬರುತ್ತದೆ. ಇದು ನಮ್ಮ ದೇವರಿಗೆ ಮಹಿಮೆಯನ್ನು ತರುತ್ತದೆ. (ಮತ್ತಾ. 5:16) ಪವಿತ್ರಾತ್ಮದಿಂದ ಉಂಟಾಗುವ ಫಲವು ಯಾವ ವಿಧಗಳಲ್ಲಿ ಸೈತಾನನ ಲೋಕದ ಪ್ರವೃತ್ತಿಗಳಿಗಿಂತ ಭಿನ್ನವಾಗಿದೆ? ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದನ್ನು ಮಾಡುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ ಏಕೆ? ಪವಿತ್ರಾತ್ಮದಿಂದ ಉಂಟಾಗುವ ಫಲದ ಮೊದಲ ಮೂರು ಅಂಶಗಳಾದ ಪ್ರೀತಿ, ಆನಂದ ಮತ್ತು ಶಾಂತಿಯನ್ನು ಪರಿಗಣಿಸುವಾಗ ನಾವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವೆವು.

ಉನ್ನತ ಮೂಲತತ್ತ್ವದ ಮೇಲಾಧರಿಸಿದ ಪ್ರೀತಿ

4. ತನ್ನ ಹಿಂಬಾಲಕರು ಯಾವ ರೀತಿಯ ಪ್ರೀತಿಯನ್ನು ತೋರಿಸಬೇಕೆಂದು ಯೇಸು ಕಲಿಸಿದನು?

4 ಪವಿತ್ರಾತ್ಮದಿಂದ ಉಂಟಾಗುವ ಪ್ರೀತಿಗೂ ಈ ಲೋಕದಲ್ಲಿ ಸಾಮಾನ್ಯವಾಗಿರುವ ಪ್ರೀತಿಗೂ ಅಜಗಜಾಂತರವಿದೆ. ಅದು ಹೇಗೆ ಎನ್ನುತ್ತೀರಾ? ಪವಿತ್ರಾತ್ಮದಿಂದ ಉಂಟಾಗುವ ಪ್ರೀತಿ ಒಂದು ಉನ್ನತ ಮೂಲತತ್ತ್ವದ ಮೇಲಾಧರಿಸಿದೆ. ಯೇಸು ಈ ಎರಡು ಪ್ರೀತಿಗಳ ಮಧ್ಯೆಯಿರುವ ವ್ಯತ್ಯಾಸವನ್ನು ಪರ್ವತ ಪ್ರಸಂಗದಲ್ಲಿ ಎತ್ತಿತೋರಿಸಿದನು. (ಮತ್ತಾಯ 5:43-48 ಓದಿ.) ಪಾಪಿಗಳು ಸಹ ಒಳ್ಳೆಯವರಿಗೆ ಒಳ್ಳೆಯವರಾಗಿ ನಡೆದುಕೊಳ್ಳುತ್ತಾರೆ ಎಂದವನು ಹೇಳಿದನು. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ, ಯಾವುದೇ ತ್ಯಾಗ ಒಳಗೂಡಿಲ್ಲ. ಆದರೆ ನಾವು ‘ಸ್ವರ್ಗದಲ್ಲಿರುವ ನಮ್ಮ ತಂದೆಯ ಮಕ್ಕಳಾಗಿರಲು’ ಬಯಸುವಲ್ಲಿ ಖಂಡಿತ ಅವರಿಗಿಂತ ಭಿನ್ನರಾಗಿರಬೇಕು. ನಾವು ಒಳ್ಳೆಯವರಿಗೆ ಒಳ್ಳೆಯವರಾಗಿರುವುದು ಮಾತ್ರ ಸಾಲದು. ಯೆಹೋವನು ಇತರರನ್ನು ಹೇಗೆ ವೀಕ್ಷಿಸುತ್ತಾನೋ ಮತ್ತು ಅವರೊಂದಿಗೆ ಹೇಗೆ ವ್ಯವಹರಿಸುತ್ತಾನೋ ಅದೇ ರೀತಿಯಲ್ಲಿ ನಾವೂ ನಡೆದುಕೊಳ್ಳಬೇಕು. ಆದರೆ ಯೇಸು ನಮ್ಮ ವೈರಿಗಳನ್ನು ಪ್ರೀತಿಸಬೇಕೆಂದು ಆಜ್ಞಾಪಿಸಿರುವುದು ಸ್ವಲ್ಪ ಜಾಸ್ತಿನೇ ಆಯಿತೆಂದು ನೀವು ನೆನಸುತ್ತೀರಾ?

5. ನಮ್ಮನ್ನು ಹಿಂಸಿಸುವವರಿಗೆ ನಾವು ಹೇಗೆ ಪ್ರೀತಿ ತೋರಿಸಬಲ್ಲೆವು?

5 ಬೈಬಲ್‌ನಲ್ಲಿರುವ ಈ ಉದಾಹರಣೆಯನ್ನು ಪರಿಗಣಿಸುವಲ್ಲಿ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಿರಿ. ಪೌಲ ಮತ್ತು ಸೀಲರು ಫಿಲಿಪ್ಪಿಯಲ್ಲಿ ಸಾರುತ್ತಿದ್ದಾಗ ಬಂಧಿಸಲ್ಪಟ್ಟರು. ಅವರಿಗೆ ತುಂಬ ಹೊಡೆದ ಬಳಿಕ ಸೆರೆಮನೆಯ ಒಳಕೋಣೆಗೆ ಹಾಕಿ ಅವರ ಕಾಲುಗಳಿಗೆ ಬೇಡಿಗಳನ್ನು ತೊಡಿಸಲಾಯಿತು. ಸೆರೆಮನೆಯ ಯಜಮಾನನು ಸಹ ಅವರನ್ನು ದುರುಪಚರಿಸಿರಬೇಕು. ಆದರೆ ಒಂದು ಭೂಕಂಪದಿಂದಾಗಿ ಅವರಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಿತು. ‘ಹಾಂ, ಸೆರೆಮನೆಯ ಯಜಮಾನನ ಮೇಲೆ ಸೇಡುತೀರಿಸಿಕೊಳ್ಳಲು ಇದೇ ಸರಿಯಾದ ಸಮಯ’ ಎಂದವರು ನೆನಸಿದರೋ? ಇಲ್ಲ. ಅವರಲ್ಲಿದ್ದ ಸ್ವತ್ಯಾಗ ಪ್ರೀತಿಯಿಂದಾಗಿ ಅವರು ಅವನ ಒಳಿತನ್ನು ಬಯಸುತ್ತಾ ಅವನನ್ನು ಕೇಡಿನಿಂದ ತಪ್ಪಿಸಿದರು. ಈ ಒಳ್ಳೇ ಕ್ರಿಯೆಯಿಂದಾಗಿ ಸೆರೆಮನೆಯ ಯಜಮಾನ ಮತ್ತು ಅವನ ಮನೆಯವರೆಲ್ಲ ಕ್ರೈಸ್ತರಾದರು. (ಅ. ಕಾ. 16:19-34) ತದ್ರೀತಿಯಲ್ಲಿ ಆಧುನಿಕ ದಿನದ ನಮ್ಮ ಸಹೋದರರು ಸಹ ‘ಹಿಂಸಿಸುವವರನ್ನು ಆಶೀರ್ವದಿಸಿದ್ದಾರೆಯೇ’ ಹೊರತು ಅವರಿಗೆ ಯಾವುದೇ ಕೇಡು ಬಗೆದಿಲ್ಲ.—ರೋಮ. 12:14.

6. ನಾವು ಯಾವ ವಿಧಗಳಲ್ಲಿ ನಮ್ಮ ಸಹೋದರರಿಗೆ ಸ್ವತ್ಯಾಗ ಪ್ರೀತಿಯನ್ನು ತೋರಿಸಬಲ್ಲೆವು? (ಪುಟ 21ರಲ್ಲಿರುವ ಚೌಕ ನೋಡಿ.)

6 ಆದರೆ ನಮ್ಮ ಜೊತೆ ವಿಶ್ವಾಸಿಗಳನ್ನು ಪ್ರೀತಿಸುವ ವಿಷಯಕ್ಕೆ ಬರುವಾಗ ನಾವು ಒಂದು ಹೆಜ್ಜೆ ಮುಂದೆ ಹೋಗುತ್ತೇವೆ. ನಾವು “ನಮ್ಮ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಒಪ್ಪಿಸಿಕೊಡುವ ಹಂಗಿನಲ್ಲಿದ್ದೇವೆ.” (1 ಯೋಹಾನ 3:16-18 ಓದಿ.) ನಮ್ಮ ಸಹೋದರರಿಗಾಗಿ ಪ್ರಾಣ ಕೊಡಲು ಸಿದ್ಧರಾಗಿರುವ ನಾವು ಚಿಕ್ಕಪುಟ್ಟ ವಿಷಯಗಳಲ್ಲಿ ಪ್ರೀತಿ ತೋರಿಸಬಾರದೇ? ಉದಾಹರಣೆಗೆ, ನಾವು ಹೇಳಿದ ಅಥವಾ ಮಾಡಿದ ಯಾವುದೋ ವಿಷಯ ನಮ್ಮ ಸಹೋದರನನ್ನು ನೋಯಿಸಿದೆ ಎಂದಿಟ್ಟುಕೊಳ್ಳಿ. ಏನು ಮಾಡುವುದು? ಅವರೊಂದಿಗೆ ಸಮಾಧಾನವಾಗಲಿಕ್ಕಾಗಿ ನಾವೇ ಮುಂದೆ ಹೋಗಿ ಮಾತಾಡುವುದು ಪ್ರೀತಿಯಿದೆಯೆಂದು ತೋರಿಸುತ್ತದೆ. (ಮತ್ತಾ. 5:23, 24) ಒಂದುವೇಳೆ ಬೇರೆಯವರು ನಮ್ಮನ್ನು ನೋಯಿಸಿಬಿಟ್ಟರೆ? ನಾವು ‘ಕ್ಷಮಿಸುವುದಕ್ಕೆ ಸಿದ್ಧರಿದ್ದೇವೋ’ ಅಥವಾ ‘ಇವನಿಗೆ ಸರೀ ಪಾಠ ಕಲಿಸಬೇಕು’ ಎಂದು ನೆನಸುತ್ತೇವೋ? (ಕೀರ್ತ. 86:5, NIBV) ಪವಿತ್ರಾತ್ಮ ನಮ್ಮಲ್ಲಿ ಉಂಟುಮಾಡುವ ಅಪಾರ ಪ್ರೀತಿಯು ಚಿಕ್ಕಪುಟ್ಟ ತಪ್ಪುಗಳನ್ನು ಮುಚ್ಚಿಬಿಡಲು ಮತ್ತು ‘ಯೆಹೋವನು ನಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ’ ನಾವೂ ಇತರರನ್ನು ಉದಾರವಾಗಿ ಕ್ಷಮಿಸಲು ಸಹಾಯಮಾಡುವುದು.—ಕೊಲೊ. 3:13, 14; 1 ಪೇತ್ರ 4:8.

7, 8. (ಎ) ದೇವರ ಮೇಲಣ ಪ್ರೀತಿಗೂ ಜನರ ಮೇಲಣ ಪ್ರೀತಿಗೂ ಯಾವ ಸಂಬಂಧವಿದೆ? (ಬಿ) ಯೆಹೋವನ ಮೇಲಣ ಪ್ರೀತಿಯನ್ನು ನಾವು ಹೇಗೆ ಹೆಚ್ಚಿಸಿಕೊಳ್ಳಸಾಧ್ಯ? (ಕೆಳಗೆ ಕೊಡಲಾಗಿರುವ ಚಿತ್ರವನ್ನು ನೋಡಿ.)

7 ನಾವು ನಮ್ಮ ಸಹೋದರರ ಮೇಲೆ ಇಂಥ ಸ್ವತ್ಯಾಗ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಹೇಗೆ? ದೇವರ ಮೇಲೆ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕವೇ. (ಎಫೆ. 5:1, 2; 1 ಯೋಹಾ. 4:9-11, 20, 21) ನಾವು ಬೈಬಲ್‌ ಓದಲು, ಧ್ಯಾನಮಾಡಲು ಮತ್ತು ಪ್ರಾರ್ಥಿಸಲು ತೆಗೆದುಕೊಳ್ಳುವ ಸಮಯ ಯೆಹೋವನೊಂದಿಗೆ ಏಕಾಂತದಲ್ಲಿ ಕಳೆದ ಸಮಯಕ್ಕೆ ಸಮಾನ. ಇದು ನಮ್ಮನ್ನು ಪ್ರೋತ್ಸಾಹಿಸುವುದಲ್ಲದೆ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ದೇವರ ಮೇಲಣ ಪ್ರೀತಿಯನ್ನು ಹೆಚ್ಚಿಸುತ್ತದೆ. ಆದರೆ ದೇವರಿಗೆ ಸಮೀಪವಾಗಲು ನಾವು ಸಮಯವನ್ನು ಬದಿಗಿಟ್ಟರೆ ಮಾತ್ರ ಇದು ಸಾಧ್ಯ.

8 ದೃಷ್ಟಾಂತಕ್ಕೆ ದಿನದ ಇಂಥ ಸಮಯಕ್ಕೆ ಇಂತಿಷ್ಟು ಸಮಯ ಮಾತ್ರ ದೇವರ ವಾಕ್ಯವನ್ನು ಓದಲು, ಅದರ ಕುರಿತು ಧ್ಯಾನಿಸಲು ಮತ್ತು ಪ್ರಾರ್ಥಿಸಲು ಅವಕಾಶವಿದೆ ಎಂದಿಟ್ಟುಕೊಳ್ಳಿ. ಯೆಹೋವನೊಂದಿಗೆ ವೈಯಕ್ತಿಕವಾಗಿ ಕಳೆಯಬಹುದಾದ ಆ ಸಮಯವನ್ನು ಬೇರೆ ಯಾವುದೇ ವಿಷಯ ಕಬಳಿಸದಂತೆ ನೀವು ತುಂಬ ಜಾಗ್ರತೆ ವಹಿಸುವುದಿಲ್ಲವೆ? ಖಂಡಿತ ಜಾಗ್ರತೆ ವಹಿಸುವಿರಿ. ಆದರೆ ದೇವರಿಗೆ ನೀವು ಪ್ರಾರ್ಥನೆ ಮಾಡುವುದನ್ನು ಯಾರೂ ತಡೆಗಟ್ಟಲಾರರು ಎಂಬುದು ಸತ್ಯ ಸಂಗತಿ ಮತ್ತು ನಮಗೆ ಬೇಕಾದಾಗ ಬೈಬಲನ್ನು ಓದಲು ನಮ್ಮಲ್ಲಿ ಹೆಚ್ಚಿನವರಿಗೆ ಸಾಧ್ಯವಿದೆ. ಆದರೂ ದಿನನಿತ್ಯದ ನಮ್ಮ ಕೆಲಸಕಾರ್ಯಗಳು ದೇವರೊಂದಿಗೆ ಏಕಾಂತತೆಯಲ್ಲಿ ಕಳೆಯಬಹುದಾದ ಸಮಯವನ್ನು ತಿಂದುಹಾಕುವಂತೆ ನಾವು ಬಿಡಬಾರದು. ಯೆಹೋವನಿಗೆ ಸಮೀಪವಾಗಲು ನೀವು ಪ್ರತಿ ದಿನ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಬದಿಗಿರಿಸಲು ಪ್ರಯತ್ನಿಸುತ್ತೀರೋ?

“ಪವಿತ್ರಾತ್ಮದಿಂದ ಉಂಟಾಗುವ ಆನಂದ”

9. ಯಾವುದರ ಹೊರತೂ ಆನಂದದಿಂದಿರಲು ಪವಿತ್ರಾತ್ಮ ನಮಗೆ ಸಹಾಯಮಾಡುತ್ತದೆ?

9 ನಾವು ಕಷ್ಟಗಳನ್ನು ಎದುರಿಸುವಾಗ ಆನಂದವನ್ನು ಕಳೆದುಕೊಳ್ಳುವ ಆವಶ್ಯಕತೆಯಿಲ್ಲ. ಅದು ಹೇಗೆ ಸಾಧ್ಯ ಎನ್ನುತ್ತೀರಾ? ಈ ಆನಂದ ಪವಿತ್ರಾತ್ಮದ ಫಲದ ಒಂದು ಅಂಶವಾಗಿರುವುದರಿಂದ ಇದು ಸಾಧ್ಯ. ಪ್ರತಿಕೂಲ ಹವಾಮಾನದಲ್ಲೂ ಬೆಳೆಯಬಲ್ಲ ಒಂದು ಗಿಡದಂತೆ ಈ ಆನಂದವನ್ನು ಪ್ರತಿಕೂಲ ಸನ್ನಿವೇಶಗಳಲ್ಲೂ ಕಾಪಾಡಿಕೊಳ್ಳಬಲ್ಲೆವು. ಲೋಕವ್ಯಾಪಕವಾಗಿ ದೇವರ ಸೇವಕರಲ್ಲಿ ಅನೇಕರು ‘ಬಹಳ ಸಂಕಟದ ಕೆಳಗೆ ಪವಿತ್ರಾತ್ಮದಿಂದ ಉಂಟಾಗುವ ಆನಂದದಿಂದ ವಾಕ್ಯವನ್ನು ಸ್ವೀಕರಿಸಿದ್ದಾರೆ.’ (1 ಥೆಸ. 1:6) ಇತರರು ವಾಕ್ಯದ ನಿಮಿತ್ತ ಕಷ್ಟಗಳನ್ನೂ ಕೊರತೆಯನ್ನೂ ಅನುಭವಿಸುತ್ತಾರೆ. ಆದರೂ ಅವರು “ಸಂಪೂರ್ಣವಾಗಿ ತಾಳಿಕೊಳ್ಳುವಂತೆ ಮತ್ತು ಆನಂದದಿಂದ ದೀರ್ಘ ಸಹನೆಯುಳ್ಳವರಾಗಿರುವಂತೆ” ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಸಹಾಯಮಾಡುತ್ತಾನೆ. (ಕೊಲೊ. 1:11) ಇಂಥ ಆನಂದಕ್ಕೆ ಯಾವುದು ಮೂಲಕಾರಣ?

10. ನಮ್ಮ ಆನಂದಕ್ಕೆ ಮೂಲಕಾರಣವೇನು?

10 ಇಂದೋ ನಾಳೆಯೋ ಸೈತಾನನ ಲೋಕದ ‘ಅನಿಶ್ಚಿತವಾದ ಐಶ್ವರ್ಯಗಳು’ ಬೀದಿಗೆ ಎಸೆಯಲ್ಪಡಲಿವೆ. ಆದರೆ ಯೆಹೋವನಿಂದ ನಾವು ಪಡೆದುಕೊಂಡಿರುವ ಆಧ್ಯಾತ್ಮಿಕ ಐಶ್ವರ್ಯಗಳಿಗೆ ಶಾಶ್ವತ ಮೌಲ್ಯವಿದೆ. (1 ತಿಮೊ. 6:17; ಮತ್ತಾ. 6:19, 20) ಆತನು ನಮ್ಮ ಮುಂದೆ ಅಂತ್ಯವಿಲ್ಲದ ಜೀವನಕ್ಕೆ ನಡಿಸುವ ಆನಂದದಾಯಕ ಪ್ರತೀಕ್ಷೆಯನ್ನು ಇಟ್ಟಿದ್ದಾನೆ. ಅಷ್ಟುಮಾತ್ರವಲ್ಲ ಲೋಕವ್ಯಾಪಕ ಕ್ರೈಸ್ತ ಸಹೋರತ್ವದ ಭಾಗವಾಗಿರುವ ಸಂತೋಷ ಕೂಡ ನಮ್ಮದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆನಂದವು ದೇವರೊಂದಿಗೆ ನಾವು ಹೊಂದಿರುವ ಸಂಬಂಧದ ಮೇಲೆ ತಳವೂರಿದೆ. ದಾವೀದನು ಒಬ್ಬ ಅಪರಾಧಿಯಂತೆ ತಲೆ ಮರೆಸಿಕೊಂಡು ಬದುಕಬೇಕಾಗಿ ಬಂದರೂ ಯೆಹೋವನನ್ನು ಹಾಡಿಹೊಗಳುತ್ತಾ ಹೇಳಿದ್ದು: “ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವದು. ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು.” (ಕೀರ್ತ. 63:3, 4) ನಮಗೂ ಹಾಗೇ ಅನಿಸುವುದಿಲ್ಲವೆ? ನಾವು ಕಷ್ಟಗಳನ್ನು ಎದುರಿಸುತ್ತಿರುವಾಗಲೂ ಆನಂದದಾಯಕ ಸ್ತುತಿಯು ಹೃದಯದಾಳದಿಂದ ಹೊರಹೊಮ್ಮುತ್ತದೆ.

11. ನಾವು ಯೆಹೋವನಿಗೆ ಆನಂದಭರಿತ ಸೇವೆಯನ್ನು ಸಲ್ಲಿಸುವುದು ಏಕೆ ಪ್ರಾಮುಖ್ಯ?

11 ಅಪೊಸ್ತಲ ಪೌಲನು “ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ” ಎನ್ನುತ್ತಾ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. (ಫಿಲಿ. 4:4) ಕ್ರೈಸ್ತರು ಯೆಹೋವನಿಗೆ ಸಲ್ಲಿಸುವ ಸೇವೆಯನ್ನು ಆನಂದದಿಂದ ಸಲ್ಲಿಸುವುದು ಏಕೆ ಪ್ರಾಮುಖ್ಯ? ಏಕೆಂದರೆ ಸೈತಾನನು ಯೆಹೋವನ ಪರಮಾಧಿಕಾರದ ವಿಷಯದಲ್ಲಿ ಎಬ್ಬಿಸಿರುವ ವಿವಾದಕ್ಕೂ ಇದಕ್ಕೂ ಸಂಬಂಧವಿದೆ. ಯಾವನೂ ದೇವರನ್ನು ಸಂತೋಷದಿಂದ ಸೇವಿಸುವುದಿಲ್ಲ, ಬದಲಿಗೆ ಏನೋ ಮಾಡಬೇಕಲ್ಲ ಎಂದು ಮಾಡುತ್ತಾನೆ ಎಂಬುದು ಸೈತಾನನ ವಾದ. (ಯೋಬ 1:9-11) ಹಾಗಾದರೆ ನಾವು ಯೆಹೋವನನ್ನು ಆನಂದದಿಂದ ಸೇವಿಸದೆ ಬರೇ ಕರ್ತವ್ಯಪ್ರಜ್ಞೆಯಿಂದ ಸೇವಿಸುವುದಾದರೆ ನಮ್ಮ ಸ್ತೋತ್ರಯಜ್ಞ ಸಂಪೂರ್ಣವಾಗಿರುವುದಿಲ್ಲ. ಆದ್ದರಿಂದ ನಾವು ಕೀರ್ತನೆಗಾರನು ಕೊಟ್ಟ ಉತ್ತೇಜನಕ್ಕನುಸಾರ ಕ್ರಿಯೆಗೈಯಲು ಪ್ರಯತ್ನಿಸುತ್ತೇವೆ. ಅವನಂದದ್ದು: “ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.” (ಕೀರ್ತ. 100:2) ಸ್ವಇಷ್ಟದಿಂದ ಸಲ್ಲಿಸಲ್ಪಡುವ ಸಂತೋಷಭರಿತ ಸೇವೆಯು ದೇವರನ್ನು ಘನಪಡಿಸುತ್ತದೆ.

12, 13. ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಲು ನಾವೇನು ಮಾಡಬಲ್ಲೆವು?

12 ಯೆಹೋವನ ಸೇವಕರು ಯಾವಾಗಲೂ ಖುಷಿಖುಷಿಯಿಂದಿರುತ್ತಾರೆ ಎಂದಲ್ಲ, ಕಷ್ಟಗಳು ಬಂದಾಗ ಕೆಲವೊಮ್ಮೆ ನಾವು ನಿರುತ್ತೇಜನಗೊಂಡು ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತೇವೆ. (ಫಿಲಿ. 2:25-30) ಅಂಥ ಸಮಯದಲ್ಲಿ ನಮಗೆ ಯಾವುದು ಸಹಾಯಮಾಡುವುದು? “ಪವಿತ್ರಾತ್ಮಭರಿತರಾಗಿದ್ದು ದೇವರಿಗೆ ಕೀರ್ತನೆಗಳಿಂದಲೂ ಸ್ತುತಿಗೀತೆಗಳಿಂದಲೂ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಇರಿ ಮತ್ತು ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗೀತೆಗಳೊಂದಿಗೂ ಸಂಗೀತದೊಂದಿಗೂ ಹಾಡಿರಿ” ಎಂದು ಎಫೆಸ 5:18, 19 ಹೇಳುತ್ತದೆ. ನಾವು ಆ ಸಲಹೆಯನ್ನು ಹೇಗೆ ಅನ್ವಯಿಸಬಲ್ಲೆವು?

13 ನಕಾರಾತ್ಮಕ ಅನಿಸಿಕೆಗಳು ನಮ್ಮನ್ನು ಕಿತ್ತುತಿನ್ನುವಾಗ ನಾವು ಸಹಾಯಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಬಲ್ಲೆವು ಮತ್ತು ಸ್ತುತಿಗೆ ಯೋಗ್ಯವಾಗಿರುವ ವಿಷಯಗಳ ಕಡೆಗೆ ನಮ್ಮ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಬಲ್ಲೆವು. (ಫಿಲಿಪ್ಪಿ 4:6-9 ಓದಿ.) ರಾಜ್ಯ ಗೀತೆಗಳ ಧ್ವನಿಮುದ್ರಣಗಳು ನುಡಿಸಲ್ಪಡುತ್ತಿರುವಾಗ ಅದರೊಂದಿಗೆ ಮೆಲುಧ್ವನಿಯಲ್ಲಿ ಹಾಡುವುದು ಮನಸ್ಸಿಗೆ ಮುದ ನೀಡುತ್ತದೆ ಮತ್ತು ಸಕಾರಾತ್ಮಕ ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ ಎಂದು ಕೆಲವರು ಕಂಡುಕೊಂಡಿದ್ದಾರೆ. ಒಬ್ಬ ಸಹೋದರನು ಅನೇಕಸಲ ತನ್ನನ್ನು ನಿರುತ್ತೇಜನಗೊಳಿಸಿ ದಂಗುಬಡಿಸಿದಂಥ ಸನ್ನಿವೇಶವನ್ನು ಎದುರಿಸಿದಾಗ ಏನು ಮಾಡಿದನೆಂದು ಹೇಳುತ್ತಾನೆ: “ನಾನು ಯಾವಾಗಲೂ ಮನಬಿಚ್ಚಿ ಪ್ರಾರ್ಥನೆ ಮಾಡುತ್ತಿದ್ದೆ. ಅದರೊಂದಿಗೆ ಕೆಲವು ರಾಜ್ಯ ಗೀತೆಗಳನ್ನು ಸಹ ಬಾಯಿಪಾಠ ಮಾಡಿಕೊಂಡು ಹಾಡುತ್ತಿದ್ದೆ. ಯೆಹೋವನಿಗೆ ಈ ಮಧುರವಾದ ಸ್ತುತಿಗೀತೆಗಳನ್ನು ಜೋರಾಗಿಯೋ ಮನಸ್ಸಿನಲ್ಲೋ ಹಾಡುತ್ತಿದ್ದಾಗ ನನಗೆ ಮನಶ್ಶಾಂತಿ ಸಿಗುತ್ತಿತ್ತು. ಇದೇ ಸಮಯಕ್ಕೆ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕ ಸಹ ಬಿಡುಗಡೆಯಾಯಿತು. ಮುಂದಿನ ವರ್ಷ ನಾನು ಅದನ್ನು ಎರಡು ಸಾರಿ ಓದಿ ಮುಗಿಸಿದೆ. ಅದರಿಂದ ನನಗೆ ತುಂಬ ಉಪಶಮನ ಸಿಕ್ಕಿತು. ಯೆಹೋವನು ನನ್ನ ಈ ಪ್ರಯತ್ನಗಳನ್ನು ಆಶೀರ್ವದಿಸಿದನು.”

“ಶಾಂತಿಯ ಐಕ್ಯಗೊಳಿಸುವ ಬಂಧ”

14. ಪವಿತ್ರಾತ್ಮದಿಂದ ಉಂಟಾಗುವ ಶಾಂತಿಯ ಗಮನಾರ್ಹ ವೈಶಿಷ್ಟ್ಯ ಯಾವುದು?

14 ನಮ್ಮ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ವಿಭಿನ್ನ ಹಿನ್ನೆಲೆಗಳಿಂದ ಬಂದ ಸಹೋದರ ಸಹೋದರಿಯರು ಕ್ರೈಸ್ತ ಸಹವಾಸದಲ್ಲಿ ಅತ್ಯಾನಂದಪಡುತ್ತಾರೆ. ಇದು ದೇವಜನರು ಇಂದು ಆನಂದಿಸುವಂಥ ಶಾಂತಿಯ ಒಂದು ವೈಶಿಷ್ಟ್ಯವಾದ ನಮ್ಮ ಭೌಗೋಳಿಕ ಐಕ್ಯವನ್ನು ಎತ್ತಿತೋರಿಸುತ್ತದೆ. ಪ್ರೇಕ್ಷಕರಿಗಂತೂ ಇದನ್ನು ನೋಡಿ ನಂಬಲಿಕ್ಕೇ ಆಗುವುದಿಲ್ಲ. ಯಾರು ಒಬ್ಬರ ಮೇಲೊಬ್ಬರು ದ್ವೇಷ ಕಟ್ಟಿಕೊಂಡು ಕೇಡುಬಗೆಯುತ್ತಿರಬೇಕಿತ್ತೋ ಅವರೇ ‘ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುತ್ತಿರುವುದನ್ನು’ ನೋಡುವಾಗ ಅವರು ತಮ್ಮ ಕಣ್ಣನ್ನು ತಾವೇ ನಂಬದವರಾಗುತ್ತಾರೆ. (ಎಫೆ. 4:3) ಇಂಥ ಐಕ್ಯವನ್ನು ಸ್ಥಾಪಿಸುವುದು ಸುಲಭವೇನಲ್ಲ. ಇದಕ್ಕಾಗಿ ಅನೇಕರು ಎಷ್ಟು ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದನ್ನು ಪರಿಗಣಿಸುವಾಗ ಇದು ನಿಮಗೆ ಅರ್ಥವಾಗುವುದು.

15, 16. (ಎ) ಪೇತ್ರನ ಹಿನ್ನೆಲೆ ಬಗ್ಗೆ ತಿಳಿಸುವಿರಾ? ಅವನ ಹಿನ್ನೆಲೆ ಅವನಿಗೆ ಒಂದು ಸವಾಲನ್ನು ತಂದೊಡ್ಡಿತು ಹೇಗೆ? (ಬಿ) ಪೇತ್ರನು ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಲು ಯೆಹೋವನು ಹೇಗೆ ಸಹಾಯಮಾಡಿದನು?

15 ಬೇರೆ ಬೇರೆ ಹಿನ್ನೆಲೆಗಳಿಂದ ಬರುವ ಜನರನ್ನು ಐಕ್ಯಗೊಳಿಸುವುದು ಒಂದು ಸವಾಲೇ ಸರಿ. ಇಂಥ ಐಕ್ಯವನ್ನು ಗಳಿಸಲಿಕ್ಕಾಗಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಪ್ರಥಮ ಶತಮಾನದ ಅಪೊಸ್ತಲ ಪೇತ್ರನ ಉದಾಹರಣೆಯಿಂದ ನಾವು ಕಲಿಯಬಲ್ಲೆವು. ಸುನ್ನತಿ ಮಾಡಿಸಿಕೊಂಡಿಲ್ಲದ ಅನ್ಯಜನಾಂಗದವರ ಕಡೆಗೆ ಅವನಿಗೆ ಯಾವ ಮನೋಭಾವವಿತ್ತು ಎಂಬುದನ್ನು ಅವನ ಈ ಮಾತುಗಳಲ್ಲಿ ಗಮನಿಸಿ: “ಒಬ್ಬ ಯೆಹೂದ್ಯನು ಇನ್ನೊಂದು ಕುಲದ ಮನುಷ್ಯನೊಂದಿಗೆ ಹೊಕ್ಕುಬಳಕೆಮಾಡುವುದು ಅಥವಾ ಸಮೀಪಿಸುವುದು ಎಷ್ಟು ಧರ್ಮನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದೇ ಇದೆ; ಆದರೂ ಯಾವನೇ ಮನುಷ್ಯನನ್ನು ಹೊಲೆಯಾದವನು ಅಥವಾ ಅಶುದ್ಧನು ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ.” (ಅ. ಕಾ. 10:24-29; 11:1-3) ಧರ್ಮಶಾಸ್ತ್ರವು ಜೊತೆ ಯೆಹೂದ್ಯರನ್ನು ಮಾತ್ರ ಪ್ರೀತಿಸುವುದನ್ನು ಅವಶ್ಯಪಡಿಸುತ್ತದೆ ಎಂದು ಅಂದಿನ ಹೆಚ್ಚಿನ ಜನರು ನಂಬುತ್ತಿದ್ದರು. ಪೇತ್ರನು ಸಹ ಇದನ್ನೇ ನಂಬುವವನಾಗಿ ಬೆಳೆದಿದ್ದರಿಂದ ಅವನು ಹಾಗೆ ಹೇಳಿರಬೇಕು. ಆದ್ದರಿಂದ ಅನ್ಯಜನಾಂಗದವರನ್ನು ದ್ವೇಷಿಸಬೇಕಾದ ವೈರಿಗಳಾಗಿ ಅವನು ಪರಿಗಣಿಸಿದ್ದಲ್ಲಿ ಅದರಲ್ಲಿ ಯಾವುದೇ ತಪ್ಪು ಇದ್ದ ಹಾಗೆ ಅವನಿಗೆ ತೋರಿರಲಿಕ್ಕಿಲ್ಲ. *

16 ಇಂತೆಲ್ಲಾ ವಿಚಾರಗಳನ್ನು ನಂಬುವವನಾಗಿ ಬೆಳೆದ ಪೇತ್ರನು ಕೊರ್ನೇಲ್ಯನ ಮನೆಯಲ್ಲಿ ಕಾಲಿಟ್ಟಾಗ ಅವನಿಗೆಷ್ಟು ಕಸಿವಿಸಿಯಾಗಿರಬೇಕು? ಈ ಹಿಂದೆ ಅನ್ಯಜನಾಂಗದವರ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದ ಈ ವ್ಯಕ್ತಿ ಅವರೊಂದಿಗೆ ಎಂದಾದರೂ “ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು” “ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ” ಒಂದಾಗುವನೋ? (ಎಫೆ. 4:3, 16) ಹೌದು, ಏಕೆಂದರೆ ಕೇವಲ ಕೆಲವೇ ದಿನಗಳ ಹಿಂದೆ ದೇವರಾತ್ಮವು ಅವನಿಗೆ ಒಂದು ದರ್ಶನವನ್ನು ಕೊಡುವ ಮೂಲಕ ಅವನು ತನ್ನ ಪೂರ್ವಗ್ರಹವನ್ನು ಬಿಟ್ಟು ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತ್ತು. ದೇವರು ಯಾರನ್ನೇ ಆಗಲಿ ಅವರ ಜಾತಿ ಅಥವಾ ರಾಷ್ಟ್ರದ ಮೇಲಾಧರಿಸಿ ಅಳೆಯುವುದಿಲ್ಲ ಎಂದು ಆ ದರ್ಶನದಲ್ಲಿ ಯೆಹೋವನು ಸ್ಪಷ್ಟಪಡಿಸಿದ್ದನು. (ಅ. ಕಾ. 10:10-15) ಈ ಕಾರಣದಿಂದ ಪೇತ್ರನು ಕೊರ್ನೇಲ್ಯನಿಗೆ, “ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ನಿಶ್ಚಯವಾಗಿ ತಿಳಿದದೆ. ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಎಂದು ಹೇಳಲು ಸಾಧ್ಯವಾಯಿತು. (ಅ. ಕಾ. 10:34, 35) ಪೇತ್ರನು ಬದಲಾವಣೆಗಳನ್ನು ಮಾಡಿಕೊಂಡು ‘ಸಹೋದರರ ಇಡೀ ಬಳಗದೊಂದಿಗೆ’ ನಿಜವಾಗಿಯೂ ಐಕ್ಯಗೊಳಿಸಲ್ಪಟ್ಟನು.—1 ಪೇತ್ರ 2:17.

17. ದೇವಜನರು ಆನಂದಿಸುವಂಥ ಶಾಂತಿ ಏಕೆ ಗಮನಾರ್ಹವಾಗಿದೆ?

17 ಎಂಥ ದೊಡ್ಡ ಪರಿವರ್ತನೆ ಅಲ್ಲವೆ? ಆದರೆ ಇದು ಪೇತ್ರನಿಗೆ ಮಾತ್ರ ಸೀಮಿತವಲ್ಲ, ಇಂದು ದೇವಜನರ ಮಧ್ಯೆಯೂ ಅನೇಕರು ಇಂಥದ್ದೇ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. (ಯೆಶಾಯ 2:3, 4 ಓದಿ.) “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದಿರುವ ಲಕ್ಷಾಂತರ ಮಂದಿ ‘ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತಕ್ಕೆ’ ಹೊಂದಿಕೆಯಲ್ಲಿ ಜೀವಿಸುವಂತಾಗಲು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಿಕೊಂಡಿದ್ದಾರೆ. (ಪ್ರಕ. 7:9; ರೋಮ. 12:2) ಇಂಥವರಲ್ಲಿ ಅನೇಕರು ಸೈತಾನನ ಲೋಕದಲ್ಲಿ ವ್ಯಾಪಕವಾಗಿರುವ ವೈರತ್ವ, ವಿರೋಧ, ವಿಭಜನೆಗಳಲ್ಲಿ ಈ ಹಿಂದೆ ಮುಳುಗಿಹೋಗಿದ್ದರು. ಆದರೆ ಅವರು ದೇವರ ವಾಕ್ಯದ ಅಧ್ಯಯನ ಮತ್ತು ಪವಿತ್ರಾತ್ಮದ ಸಹಾಯದ ಮೂಲಕ ‘ಶಾಂತಿಯನ್ನು ಉಂಟುಮಾಡುವ ವಿಷಯಗಳನ್ನು ಬೆನ್ನಟ್ಟಲು’ ಕಲಿತಿದ್ದಾರೆ. (ರೋಮ. 14:19) ಇದರಿಂದ ಸ್ಥಾಪಿತವಾಗುವ ಐಕ್ಯವು ದೇವರಿಗೆ ಮಹಿಮೆಯನ್ನು ತರುತ್ತದೆ.

18, 19. (ಎ) ಸಭೆಯಲ್ಲಿರುವ ಶಾಂತಿ ಮತ್ತು ಐಕ್ಯದ ಯಶಸ್ಸಿಗೆ ನಾವು ವೈಯಕ್ತಿಕವಾಗಿ ಹೇಗೆ ಇಂಬುಕೊಡಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿದ್ದೇವೆ?

18 ದೇವಜನರ ಮಧ್ಯೆ ನೆಲೆಸಿರುವ ಶಾಂತಿ ಮತ್ತು ಐಕ್ಯದ ಯಶಸ್ಸಿಗೆ ನಾವು ವೈಯಕ್ತಿಕವಾಗಿ ಹೇಗೆ ಇಂಬುಕೊಡಬಲ್ಲೆವು? ಅನೇಕ ಸಭೆಗಳಲ್ಲಿ ಬೇರೆ ರಾಜ್ಯದಿಂದ ಬಂದಿರುವ ಬೇರೆ ಭಾಷೆಯನ್ನಾಡುವ ಸಹೋದರ ಸಹೋದರಿಯರಿದ್ದಾರೆ. ಅವರಲ್ಲಿ ಕೆಲವರ ರೀತಿರಿವಾಜು ಬೇರೆಯಾಗಿರಬಹುದು ಮತ್ತು ಅವರು ನಮ್ಮ ಭಾಷೆಯನ್ನು ಚೆನ್ನಾಗಿ ಮಾತಾಡಲಿಕ್ಕಿಲ್ಲ. ನಾವು ಅಂಥವರಿಂದ ದೂರ ಇದ್ದುಬಿಡುತ್ತೇವೋ ಅಥವಾ ಅವರ ಹೆಚ್ಚು ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೋ? ನಾವು ಅವರಿಗೆ ಇನ್ನಷ್ಟು ಹತ್ತಿರವಾಗಬೇಕೆಂದು ದೇವರ ವಾಕ್ಯ ಹೇಳುತ್ತದೆ. ಯೆಹೂದ್ಯರೂ ಅನ್ಯಜನಾಂಗದವರೂ ಸೇರಿದ್ದ ರೋಮ್‌ನ ಸಭೆಗೆ ಬರೆದಾಗ ಪೌಲನು ಹೇಳಿದ್ದು: “ದೇವರಿಗೆ ಮಹಿಮೆ ಸಲ್ಲಿಸುವುದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಕ್ರಿಸ್ತನು ನಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಳ್ಳಿರಿ.” (ರೋಮ. 15:7) ನಿಮ್ಮ ಸಭೆಯಲ್ಲಿರುವವರಲ್ಲಿ ಯಾರ ಹೆಚ್ಚು ಪರಿಚಯ ನಿಮಗಿಲ್ಲ? ಅವರೊಂದಿಗೆ ನೀವು ಹೆಚ್ಚು ಪರಿಚಯ ಮಾಡಿಕೊಳ್ಳಬಲ್ಲಿರಾ?

19 ಪವಿತ್ರಾತ್ಮವು ನಮ್ಮ ಮೇಲೆ ಕೆಲಸಮಾಡುವಂತೆ ನಾವು ಬೇರೆ ಏನನ್ನು ಮಾಡಬಲ್ಲೆವು? ಮುಂದಿನ ಲೇಖನದಲ್ಲಿ ಈ ಪ್ರಶ್ನೆಯನ್ನು ಪರಿಗಣಿಸಲಿದ್ದೇವೆ. ಅದರಲ್ಲಿ ಪವಿತ್ರಾತ್ಮದಿಂದ ಉಂಟಾಗುವ ಫಲದ ಉಳಿದ ಅಂಶಗಳ ಕುರಿತು ಚರ್ಚಿಸಲಿದ್ದೇವೆ.

[ಪಾದಟಿಪ್ಪಣಿಗಳು]

^ ಪ್ಯಾರ. 3 ಯೇಸು ತಿಳಿಸಿದ ಫಲದಲ್ಲಿ “ಪವಿತ್ರಾತ್ಮದಿಂದ ಉಂಟಾಗುವ ಫಲ” ಮಾತ್ರವಲ್ಲದೆ ‘ತುಟಿಗಳ ಫಲವೂ’ ಸೇರಿದೆ. ಇದನ್ನು ಕ್ರೈಸ್ತರು ರಾಜ್ಯದ ಕುರಿತು ಸಾರುವ ಮೂಲಕ ದೇವರಿಗೆ ಅರ್ಪಿಸುತ್ತಾರೆ.—ಇಬ್ರಿ. 13:15.

^ ಪ್ಯಾರ. 15 “ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎನ್ನುತ್ತದೆ ಯಾಜಕಕಾಂಡ 19:18. ಇಲ್ಲಿ ತಿಳಿಸಲ್ಪಟ್ಟಿರುವ ‘ನಿಮ್ಮ ಸ್ವಜನರು’ ಮತ್ತು ‘ನಿಮ್ಮ ನೆರೆಯವರು’ ಎಂಬ ಅಭಿವ್ಯಕ್ತಿಗಳು ಯೆಹೂದ್ಯರಿಗೆ ಮಾತ್ರ ಅನ್ವಯಿಸುತ್ತವೆ ಎಂದು ಯೆಹೂದಿ ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದರು. ಇಸ್ರಾಯೇಲ್ಯರು ಬೇರೆ ಜನಾಂಗದವರಿಂದ ಪ್ರತ್ಯೇಕವಾಗಿರಬೇಕು ಎಂದು ಧರ್ಮಶಾಸ್ತ್ರ ಅವಶ್ಯಪಡಿಸಿತ್ತು. ಆದರೆ ಯೆಹೂದ್ಯೇತರರೆಲ್ಲರೂ ವೈರಿಗಳು ಮತ್ತು ಅವರಲ್ಲಿ ಪ್ರತಿಯೊಬ್ಬನನ್ನು ದ್ವೇಷಿಸಬೇಕು ಎಂಬ ಪ್ರಥಮ ಶತಮಾನದ ಧಾರ್ಮಿಕ ಮುಖಂಡರ ದೃಷ್ಟಿಕೋನವನ್ನು ಧರ್ಮಶಾಸ್ತ್ರ ಬೆಂಬಲಿಸಲಿಲ್ಲ.

ನಿಮ್ಮ ಉತ್ತರವೇನು?

• ನಾವು ನಮ್ಮ ಸಹೋದರರಿಗೆ ಸ್ವತ್ಯಾಗ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?

• ನಾವು ದೇವರಿಗೆ ಆನಂದದಿಂದ ಸೇವೆ ಸಲ್ಲಿಸುವುದು ಏಕೆ ಪ್ರಾಮುಖ್ಯ?

• ಸಭೆಯಲ್ಲಿರುವ ಶಾಂತಿ ಮತ್ತು ಐಕ್ಯದ ಯಶಸ್ಸಿಗೆ ನಾವು ಹೇಗೆ ಇಂಬುಕೊಡಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚೌಕ]

“ಸತ್ಯ ಕ್ರೈಸ್ತರೆಂದರೆ ಅದು ಇವರೇ”

ಪ್ರತಿರೋಧ ಮತ್ತು ಹುತಾತ್ಮತೆಯ ಮಧ್ಯೆ—ನಾಸಿ ಕಾಲದ ಜರ್ಮನ್‌ ಸಾಮ್ರಾಜ್ಯದಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಯೆಹೋವನ ಸಾಕ್ಷಿಗಳನ್ನು ಮೊಟ್ಟಮೊದಲ ಬಾರಿ ನೋಡಿದಾಗ ಏನು ಸಂಭವಿಸಿತು ಎಂಬುದನ್ನು ವಿವರಿಸುವ ಒಬ್ಬ ಯುವ ಯೆಹೂದಿ ಸೆರೆಯಾಳಿನ ವರದಿಯಿದೆ. ಅವನು ಉತ್ತರ ಜರ್ಮನಿಯಲ್ಲಿದ್ದ ಹ್ಯಾಂಬರ್ಗ್‌ ಪಟ್ಟಣದ ನ್ಯೂಯನ್‌ಗ್ಯಾಮ್‌ ಸೆರೆಶಿಬಿರಕ್ಕೆ ಬಂದ ಮೇಲೆ ಇದು ನಡೆಯಿತು:

“ಡಾಕಾವ್‌ನಿಂದ ತರಲ್ಪಟ್ಟ ಯೆಹೂದ್ಯರಲ್ಲಿ ನಾನೂ ಒಬ್ಬ. ನಾವು ಸೆರೆಶಿಬಿರದ ಕೋಣೆಯೊಳಗೆ ಬಂದ ಕೂಡಲೆ ಈಗಾಗಲೇ ಅಲ್ಲಿದ್ದ ಯೆಹೂದ್ಯರು ತಮ್ಮಲ್ಲಿದ್ದ ಎಲ್ಲವನ್ನೂ ಬಚ್ಚಿಟ್ಟುಕೊಂಡರು. ಹೊರಗಿಟ್ಟರೆ ನಮ್ಮೊಂದಿಗೆ ಹಂಚಿಕೊಳ್ಳಬೇಕಲ್ಲ ಅದಕ್ಕೆ. . . . ಸೆರೆಶಿಬಿರಕ್ಕೆ ಹಿಡಿದು ತರಲ್ಪಡುವ ಮುಂಚೆ ನಾವು ಒಬ್ಬರಿಗೊಬ್ಬರು ಸಾಥ್‌ ಕೊಟ್ಟಿದ್ದೆವು. ಆದರೆ ಇಲ್ಲಿ, ಜೀವ-ಮರಣದ ಮಧ್ಯೆ ಹೋರಾಡಲಿಕ್ಕಿರುವಾಗ ಪ್ರತಿಯೊಬ್ಬನಿಗೂ ಅವನದ್ದೇ ಚಿಂತೆ, ಬೇರೆಯವರಿಗೆ ಏನಾದರೆ ನನಗೇನು ಅನ್ನುವ ಮನೋಭಾವ. ಆದರೆ ಬೈಬಲ್‌ ವಿದ್ಯಾರ್ಥಿಗಳು ಎಷ್ಟು ಭಿನ್ನರಾಗಿದ್ದರು! ಆ ಸಮಯದಲ್ಲಿ ಅವರು ಯಾವುದೋ ಪೈಪ್‌ ರಿಪೇರಿ ಕೆಲಸಮಾಡುತ್ತಿದ್ದರು. ಅದು ತುಂಬ ಕಷ್ಟದ ಕೆಲಸ. ವಾತಾವರಣವೂ ತುಂಬ ತಣ್ಣಗಿತ್ತು. ಇದು ಸಾಲದೋ ಎಂಬಂತೆ ಇಡೀ ದಿನ ಅವರು ಮಂಜುಗಡ್ಡೆಯಷ್ಟು ತಣ್ಣಗಿರುವ ನೀರಿನಲ್ಲಿ ನಿಂತು ಕೆಲಸಮಾಡಬೇಕಿತ್ತು. ಇದನ್ನೆಲ್ಲ ಅವರು ಹೇಗೆ ಸಹಿಸಿಕೊಂಡರೋ ದೇವರೇ ಬಲ್ಲ. ಅವರನ್ನು ಕೇಳಿದಾಗ, ಯೆಹೋವನು ತಮಗೆ ಶಕ್ತಿ ಕೊಡುತ್ತಾನೆ ಎಂದು ಹೇಳುತ್ತಿದ್ದರು. ಅವರು ಕೆಲಸದ ನಂತರ ತುಂಬ ಹಸಿವೆಯಿಂದಿದ್ದ ಕಾರಣ ಅವರಿಗೆ ಸಿಕ್ಕಿದ ರೊಟ್ಟಿಯನ್ನು ಪೂರ್ತಿ ತಿನ್ನಬೇಕಿತ್ತು. ಆದರೆ ಅವರು ಏನು ಮಾಡುತ್ತಿದ್ದರು ಗೊತ್ತೆ? ಅವರು ತಮ್ಮೆಲ್ಲರ ಬಳಿಯಿದ್ದ ರೊಟ್ಟಿಯನ್ನು ಒಟ್ಟುಮಾಡಿ, ಅದರಲ್ಲಿ ಅರ್ಧವನ್ನು ತಿಂದು, ಉಳಿದ ಅರ್ಧವನ್ನು ಈಗತಾನೇ ಡಾಕಾವ್‌ನಿಂದ ಬಂದಿದ್ದ ತಮ್ಮ ಧರ್ಮದವರಿಗೆ ಕೊಟ್ಟರು. ಅವರು ತಮ್ಮ ಧರ್ಮದವರನ್ನು ಬರಮಾಡಿಕೊಂಡು ಅವರ ಕೆನ್ನೆಗೆ ಮುದ್ದಿಟ್ಟರು. ಊಟಮಾಡುವ ಮುಂಚೆ ಪ್ರಾರ್ಥನೆ ಮಾಡಿದರು. ಅನಂತರ ಅವರೆಲ್ಲರ ಮುಖದಲ್ಲಿ ಏನೋ ತೃಪ್ತಿ, ಸಂತೋಷ. ತಮ್ಮ ಹೊಟ್ಟೆ ತುಂಬಿತೆಂದು ಅವರು ಹೇಳಿದರು. ಆಗಲೇ ನನಗೆ, ‘ಸತ್ಯ ಕ್ರೈಸ್ತರೆಂದರೆ ಅದು ಇವರೇ’ ಎಂದನಿಸಿತು.”

[ಪುಟ 19ರಲ್ಲಿರುವ ಚಿತ್ರಗಳು]

ನೀವು ದಿನನಿತ್ಯದ ಕೆಲಸಕಾರ್ಯಗಳಲ್ಲೇ ಮುಳುಗಿರುವ ಬದಲು ಯೆಹೋವನ ಸಮೀಪಕ್ಕೆ ಬರಲು ಸಮಯವನ್ನು ಬದಿಗಿರಿಸುತ್ತೀರೋ?