ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರದೈಸಿನಲ್ಲಿ ಶಾಶ್ವತ ಜೀವನ ಬೇಸರ ಹಿಡಿಸುವುದೋ?

ಪರದೈಸಿನಲ್ಲಿ ಶಾಶ್ವತ ಜೀವನ ಬೇಸರ ಹಿಡಿಸುವುದೋ?

ನಮ್ಮ ಓದುಗರ ಪ್ರಶ್ನೆ

ಪರದೈಸಿನಲ್ಲಿ ಶಾಶ್ವತ ಜೀವನ ಬೇಸರ ಹಿಡಿಸುವುದೋ?

▪ ಭೂಮಿಯ ಮೇಲೆ ಪರದೈಸಿನಲ್ಲಿ ಅಂದರೆ ಸುಂದರವಾದ ಉದ್ಯಾನವನದಲ್ಲಿ ಶಾಶ್ವತವಾಗಿ ಬದುಕಸಾಧ್ಯವಿದೆ ಎಂಬ ನಿರೀಕ್ಷೆಯನ್ನು ಬೈಬಲ್‌ ನಮಗೆ ಕೊಡುತ್ತದೆ. (ಕೀರ್ತನೆ 37:29; ಲೂಕ 23:43) ಪರಿಪೂರ್ಣ ಪರಿಸರದಲ್ಲಿ ಅಂತ್ಯವಿಲ್ಲದ ಬದುಕು ಬೇಸರ ಹುಟ್ಟಿಸುವುದೋ?

ಇದೊಂದು ಒಳ್ಳೇ ಪ್ರಶ್ನೆಯೇ. ದೀರ್ಘಕಾಲಿಕ ಬೇಸರದಿಂದ ಒಬ್ಬ ವ್ಯಕ್ತಿ ಕಳವಳ, ಖಿನ್ನತೆಗೆ ತುತ್ತಾಗಬಹುದು ಮತ್ತು ಅಪಾಯಕರ ಕೆಲಸಗಳಿಗೆ ಕೈಹಾಕಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ತಮ್ಮ ಜೀವನಕ್ಕೆ ಉದ್ದೇಶವೇ ಇಲ್ಲವೆಂದೆಣಿಸುವ ಅಥವಾ ನಿತ್ಯದ ದಿನಚರಿಯಿಂದ ಬೇಸತ್ತ ಜನರಿಗೆ ಜೀವನ ಬೇಜಾರು ಎಂದನಿಸುತ್ತದೆ. ಆದರೆ ಪರದೈಸಿನಲ್ಲಿರುವವರ ಜೀವನ ಉದ್ದೇಶರಹಿತವಾಗಿರುವುದೋ? ನಿತ್ಯದ ದಿನಚರಿ ಬೇಸರ ಹುಟ್ಟಿಸುವುದೋ?

ಶಾಶ್ವತ ಜೀವನವನ್ನು ನೀಡುತ್ತೇನೆಂದು ಹೇಳಿದವನು ಬೈಬಲಿನ ಕರ್ತೃ ಯೆಹೋವ ದೇವರೆಂಬುದನ್ನು ಮೊದಲಾಗಿ ಗಮನಿಸಿ. (ಯೋಹಾನ 3:16; 2 ತಿಮೊಥೆಯ 3:16) ಆ ದೇವರ ಅತಿ ದೊಡ್ಡ ಗುಣ ಪ್ರೀತಿಯಾಗಿದೆ. (1 ಯೋಹಾನ 4:8) ಯೆಹೋವನು ನಮ್ಮನ್ನು ತುಂಬ ಪ್ರೀತಿಸುತ್ತಾನೆ ಮತ್ತು ನಾವೀಗ ಅನುಭವಿಸುತ್ತಿರುವ ಎಲ್ಲ ಒಳ್ಳೇ ಸಂಗತಿಗಳನ್ನು ಕೊಟ್ಟಿರುವಾತನು ಆತನೇ.—ಯಾಕೋಬ 1:17.

ನಾವು ಸಂತೋಷವಾಗಿರಬೇಕಾದರೆ ಉದ್ದೇಶಭರಿತ ಕೆಲಸ ಅಗತ್ಯವೆಂದು ನಮ್ಮ ನಿರ್ಮಾಣಿಕನಿಗೆ ಗೊತ್ತು. (ಕೀರ್ತನೆ 139:14-16; ಪ್ರಸಂಗಿ 3:12) ಪರದೈಸಿನಲ್ಲಿ ಜನರು ಯಂತ್ರಮಾನವರಂತೆ ಕೆಲಸಮಾಡುವುದಿಲ್ಲ. ಅವರು ಮಾಡುವ ಕೆಲಸ ಅವರಿಗೂ ಅವರು ಪ್ರೀತಿಸುವ ಜನರಿಗೂ ಪ್ರಯೋಜನ ತರುವುದು. (ಯೆಶಾಯ 65:22-24) ನಿಮಗೆ ಆಸಕ್ತಿಕರವೂ ಸವಾಲಿನದ್ದೂ ಆಗಿರುವ ಕೆಲಸ ಯಾವಾಗಲೂ ಇದ್ದರೆ ಜೀವನ ಬೇಸರ ಹಿಡಿಸುವುದೋ?

ಪರದೈಸಿನಲ್ಲಿ ಜೀವಿಸಲು ಯೆಹೋವ ದೇವರು ಎಲ್ಲರಿಗೂ ಅನುಮತಿ ಕೊಡುವುದಿಲ್ಲ ಎಂಬುದನ್ನೂ ಗಮನಿಸಿ. ಆತನು ತನ್ನ ಮಗನಾದ ಯೇಸುವನ್ನು ಅನುಕರಿಸುವವರಿಗೆ ಮಾತ್ರ ಶಾಶ್ವತ ಜೀವನವೆಂಬ ಉಡುಗೊರೆಯನ್ನು ಕೊಡುವನು. (ಯೋಹಾನ 17:3) ಯೇಸು ಭೂಮಿಯಲ್ಲಿದ್ದಾಗ ತನ್ನ ತಂದೆಯ ಚಿತ್ತವನ್ನು ಸಂತೋಷದಿಂದ ಮಾಡಿದ ವ್ಯಕ್ತಿಯಾಗಿದ್ದನು. ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಿಂದಲೇ ಬಾಳುವ ಸಂತೋಷ ಸಿಗುವುದು ಎಂಬದನ್ನು ಯೇಸು ತನ್ನ ನಡೆನುಡಿಯ ಮೂಲಕ ಹಿಂಬಾಲಕರಿಗೆ ಕಲಿಸಿದನು. (ಅ. ಕಾರ್ಯಗಳು 20:35) ಪುನಃಸ್ಥಾಪನೆಗೊಳ್ಳುವ ಪರದೈಸಿನಲ್ಲಿರುವವರೆಲ್ಲರೂ ದೇವರ ಮೇಲೆ ಪ್ರೀತಿ ಮತ್ತು ನೆರೆಯವರ ಮೇಲೆ ಪ್ರೀತಿ ಎಂಬ ಎರಡು ಅತಿ ದೊಡ್ಡ ಆಜ್ಞೆಗಳಿಗನುಸಾರ ಜೀವಿಸುವರು. (ಮತ್ತಾಯ 22:36-40) ನಿಮ್ಮನ್ನೂ ಪ್ರೀತಿಸುವ ತಮ್ಮ ಕೆಲಸವನ್ನೂ ಪ್ರೀತಿಸುವ ನಿಸ್ವಾರ್ಥ ಜನರು ನಿಮ್ಮ ಸುತ್ತಮುತ್ತಲಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ! ಅಂಥ ಜನರ ಸಹವಾಸ ನಿಮಗೆ ಬೇಸರ ಹಿಡಿಸುವುದೆಂದು ನೆನಸುತ್ತೀರೋ?

ಪರದೈಸಿನ ಜೀವನದಲ್ಲಿ ಇನ್ನೇನು ಇರುವುದು? ಪ್ರತಿದಿನ ನಾವು ನಮ್ಮ ನಿರ್ಮಾಣಿಕನ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಲಿಯಲಿದ್ದೇವೆ. ಯೆಹೋವನ ಸೃಷ್ಟಿಕಾರ್ಯಗಳ ಬಗ್ಗೆ ಸಂಶೋಧಕರು ಈಗಾಗಲೇ ಎಷ್ಟೋ ಗಮನಾರ್ಹ ಸಂಗತಿಗಳನ್ನು ಬೆಳಕಿಗೆ ತಂದಿದ್ದಾರೆ. (ರೋಮನ್ನರಿಗೆ 1:20) ಆದರೆ ಅವೆಲ್ಲವೂ ಬರೇ ಸಾಸಿವೆಕಾಳಿನಷ್ಟೆ ಎನ್ನಬಹುದು. ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ದೇವಭಕ್ತ ಯೋಬನು ದೇವರ ಸೃಷ್ಟಿಕಾರ್ಯಗಳ ಬಗ್ಗೆ ತನಗೆ ತಿಳಿದಿದ್ದ ಸಂಗತಿಗಳನ್ನು ನೆನಪಿಸಿಕೊಂಡು ಈ ತೀರ್ಮಾನಕ್ಕೆ ಬಂದನು: “ಆಹಾ, ಈ ಅದ್ಭುತಗಳು [ದೇವರ] ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?” (ಯೋಬ 26:14) ಈ ಮಾತುಗಳು ಇಂದಿಗೂ ಸತ್ಯವಾಗಿವೆ ಅಲ್ಲವೇ?

ನಾವೆಷ್ಟೇ ವರ್ಷ ಬದುಕಿದರೂ ಯೆಹೋವ ದೇವರ ಬಗ್ಗೆ, ಆತನ ಕಾರ್ಯಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ದೇವರು ನಮ್ಮ ಹೃದಯದಲ್ಲಿ ಅನಂತಕಾಲ ಜೀವಿಸುವ ಇಚ್ಛೆಯನ್ನು ಇಟ್ಟಿದ್ದಾನೆಂದು ಬೈಬಲ್‌ ಹೇಳುತ್ತದೆ. ಆದರೆ ನಾವು ‘ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಗ್ರಹಿಸಲಾರೆವೆಂದೂ’ ಅದು ಹೇಳುತ್ತದೆ. (ಪ್ರಸಂಗಿ 3:10, 11) ನಿಮ್ಮ ನಿರ್ಮಾಣಿಕನ ಬಗ್ಗೆ ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾ ಕಲಿಯುತ್ತಾ ನಿಮಗೆ ಬೇಸರ ಹಿಡಿಯುವುದೆಂದು ನೆನಸುತ್ತೀರಾ?

ಇಂದು ಕೂಡ, ಬೇರೆಯವರಿಗೆ ಪ್ರಯೋಜನ ತರುವಂಥ ಹಾಗೂ ದೇವರಿಗೆ ಮಹಿಮೆ ತರುವಂಥ ಕೆಲಸಗಳಲ್ಲೇ ತಲ್ಲೀನರಾಗಿರುವ ಜನರಿಗೆ ಜೀವನ ಬೇಸರವೆಂದು ಅನಿಸುವುದು ತೀರ ಅಪರೂಪ. ಅಂಥ ಕೆಲಸಗಳಲ್ಲೇ ನಾವು ಕೂಡ ಕಾರ್ಯಮಗ್ನರಾಗಿದ್ದರೆ ನಮಗೂ ಜೀವನ ಬೇಜಾರು ಎಂದನಿಸಲಾರದು, ಶಾಶ್ವತವಾಗಿ ಜೀವಿಸುವಾಗಲೂ ಹಾಗನಿಸದು. (w11-E 05/01)

[ಪುಟ 22ರಲ್ಲಿರುವ ಚಿತ್ರ ಕೃಪೆ]

ಭೂಮಿ: Image Science and Analysis Laboratory, NASA-Johnson Space Center; ಗ್ಯಾಲಕ್ಸಿ: The Hubble Heritage Team (AURA/STScI/NASA)