ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲರಿಗೂ ಅತ್ಯಗತ್ಯವಾದ ಸುವಾರ್ತೆ

ಎಲ್ಲರಿಗೂ ಅತ್ಯಗತ್ಯವಾದ ಸುವಾರ್ತೆ

ಎಲ್ಲರಿಗೂ ಅತ್ಯಗತ್ಯವಾದ ಸುವಾರ್ತೆ

‘ವಾಸ್ತವದಲ್ಲಿ ಸುವಾರ್ತೆಯು ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ.’—ರೋಮ. 1:16.

1, 2. ನೀವು “ರಾಜ್ಯದ ಸುವಾರ್ತೆಯನ್ನು” ಏಕೆ ಸಾರುತ್ತೀರಿ? ಸುವಾರ್ತೆಯ ಯಾವ ಅಂಶಗಳನ್ನು ನೀವು ಒತ್ತಿಹೇಳುತ್ತೀರಿ?

‘ಪ್ರತಿದಿನ ಸುವಾರ್ತೆ ಸಾರುವುದರಲ್ಲಿ ನಾನು ತುಂಬ ಹರ್ಷಿಸುತ್ತೇನೆ.’ ಈ ರೀತಿಯ ಅನಿಸಿಕೆ ನಿಮಗೂ ಆಗಿರಬಹುದು. ಯೆಹೋವನ ನಿಷ್ಠಾವಂತ ಸಾಕ್ಷಿಯಾಗಿರುವ ನಿಮಗೆ ‘ರಾಜ್ಯದ ಸುವಾರ್ತೆಯನ್ನು’ ಸಾರುವುದು ಎಷ್ಟು ಪ್ರಾಮುಖ್ಯ ಎಂಬುದು ಖಂಡಿತ ತಿಳಿದಿರುತ್ತದೆ. ಈ ಕುರಿತ ಯೇಸುವಿನ ಪ್ರವಾದನೆ ನಿಮಗೆ ಬಾಯಿಪಾಠವಾಗಿರಲೂಬಹುದು.—ಮತ್ತಾ. 24:14.

2 ನೀವು “ರಾಜ್ಯದ ಸುವಾರ್ತೆಯನ್ನು” ಸಾರುವಾಗ ವಾಸ್ತವದಲ್ಲಿ ಯೇಸು ಆರಂಭಿಸಿದ ಕೆಲಸವನ್ನು ಮುಂದುವರಿಸುತ್ತಿದ್ದೀರಿ. (ಲೂಕ 4:43 ಓದಿ.) ನೀವು ಸಾರುವಾಗ ಹೆಚ್ಚಾಗಿ, ದೇವರು ಬಲುಬೇಗನೆ ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲಿರುವನು ಎಂಬ ಅಂಶದ ಬಗ್ಗೆ ಮಾತಾಡುತ್ತಿರಬಹುದು. ‘ಮಹಾಸಂಕಟದಲ್ಲಿ’ ಆತನು ಎಲ್ಲ ಸುಳ್ಳು ಧರ್ಮಗಳನ್ನು ಕೊನೆಗಾಣಿಸುವನು ಮತ್ತು ಭೂಮಿಯ ಮೇಲಿಂದ ದುಷ್ಟತನವನ್ನು ನಿರ್ಮೂಲಮಾಡುವನು ಎಂಬದನ್ನು ನೀವು ತಿಳಿಸುತ್ತಿರಬಹುದು. (ಮತ್ತಾ. 24:21) ಅಥವಾ ದೇವರ ರಾಜ್ಯವು ಭೂಮಿಯ ಮೇಲೆ ಪರದೈಸನ್ನು ಪುನಃಸ್ಥಾಪಿಸುವುದು, ಹೀಗೆ ಎಲ್ಲೆಡೆಯೂ ಶಾಂತಿ, ಸಂತೋಷ ತುಂಬಿತುಳುಕುವುದು ಎನ್ನುವುದನ್ನೂ ನೀವು ಹೇಳುತ್ತಿರಬಹುದು. ಈ ‘ರಾಜ್ಯದ ಸುವಾರ್ತೆಯು’ ವಾಸ್ತವದಲ್ಲಿ, ‘“ನಿನ್ನ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುವವು” ಎಂದು ಅಬ್ರಹಾಮನಿಗೆ ಈ ಮೊದಲೇ ತಿಳಿಯಪಡಿಸಲಾದ ಸುವಾರ್ತೆಯ’ ಭಾಗವಾಗಿದೆ.—ಗಲಾ. 3:8.

3. ರೋಮನ್ನರಿಗೆ ಪುಸ್ತಕದಲ್ಲಿ ಅಪೊಸ್ತಲ ಪೌಲನು ಸುವಾರ್ತೆಗೆ ಹೆಚ್ಚು ಒತ್ತುಕೊಟ್ಟಿದ್ದಾನೆಂದು ನಾವು ಹೇಗೆ ಹೇಳಸಾಧ್ಯ?

3 ಹಾಗಾದರೆ ಜನರಿಗೆ ಅಗತ್ಯವಿರುವ ಸುವಾರ್ತೆಯ ಮುಖ್ಯ ಅಂಶಕ್ಕೆ ನಾವೇನಾದರೂ ಕಡಿಮೆ ಗಮನಕೊಡುತ್ತಿದ್ದೇವೋ? ಮೂಲ ಗ್ರೀಕ್‌ ಶಾಸ್ತ್ರಗ್ರಂಥಕ್ಕನುಸಾರ ಅಪೊಸ್ತಲ ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ “ರಾಜ್ಯ” ಎಂಬ ಪದವನ್ನು ಕೇವಲ ಒಮ್ಮೆ ಮಾತ್ರ ಬಳಸಿದ್ದಾನೆ. ಆದರೆ “ಸುವಾರ್ತೆ” ಎಂಬ ಪದವನ್ನು 12 ಬಾರಿ ಉಪಯೋಗಿಸಿದ್ದಾನೆ. (ರೋಮನ್ನರಿಗೆ 14:17 ಓದಿ.) ಪೌಲನು ಆ ಪುಸ್ತಕದಲ್ಲಿ ಸುವಾರ್ತೆಯ ಯಾವ ಅಂಶದ ಬಗ್ಗೆ ಆಗಾಗ್ಗೆ ಮಾತಾಡುತ್ತಿದ್ದನು? ಆ ನಿರ್ದಿಷ್ಟ ಸುವಾರ್ತೆಯು ಪ್ರಾಮುಖ್ಯವೇಕೆ? ಹಾಗೂ ನಮ್ಮ ಟೆರಿಟೊರಿಯಲ್ಲಿರುವ ಜನರಿಗೆ “ದೇವರ ಸುವಾರ್ತೆಯನ್ನು” ಸಾರುವಾಗ ಅದನ್ನು ನಾವೇಕೆ ಮನಸ್ಸಿನಲ್ಲಿಡಬೇಕು?—ಮಾರ್ಕ 1:14; ರೋಮ. 15:16; 1 ಥೆಸ. 2:2.

ರೋಮ್‌ನ ಕ್ರೈಸ್ತರಿಗೆ ಅಗತ್ಯವಾಗಿದ್ದ ಜ್ಞಾನ

4. ಪೌಲನು ರೋಮ್‌ನಲ್ಲಿ ಮೊದಲ ಬಾರಿ ಸೆರೆಯಾಗಿದ್ದಾಗ ಯಾವುದರ ಕುರಿತು ಸಾರಿದನು?

4 ಪೌಲನು ರೋಮ್‌ನಲ್ಲಿ ಮೊದಲ ಬಾರಿ ಸೆರೆಯಾಗಿದ್ದಾಗ ಬರೆದ ವಿಷಯಗಳನ್ನು ಪರಿಗಣಿಸುವುದು ಬೋಧಪ್ರದ. ನಾವು ಓದುವಂತೆ, ಅವನು ತನ್ನನ್ನು ಭೇಟಿಮಾಡಲು ಬಂದ ಅನೇಕ ಯೆಹೂದ್ಯರಿಗೆ ‘(1) ದೇವರ ರಾಜ್ಯದ ಕುರಿತು ಕೂಲಂಕಷವಾಗಿ ಸಾಕ್ಷಿನೀಡಿದನು ಮತ್ತು (2) ಯೇಸುವಿನ ಕುರಿತಾಗಿ ಅವರನ್ನು ಒಡಂಬಡಿಸಿದನು.’ ಫಲಿತಾಂಶ? “ಅವನು ಹೇಳಿದ ವಿಷಯಗಳನ್ನು ಕೆಲವರು ನಂಬಲಾರಂಭಿಸಿದರು; ಇತರರು ನಂಬದೆ ಹೋದರು.” ತರುವಾಯ ಪೌಲನು ‘ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಂಡು ಅವರಿಗೆ (1) ದೇವರ ರಾಜ್ಯದ ಕುರಿತು ಸಾರುತ್ತಿದ್ದನು ಮತ್ತು (2) ಕರ್ತನಾದ ಯೇಸು ಕ್ರಿಸ್ತನ ಕುರಿತು ಬೋಧಿಸುತ್ತಿದ್ದನು.’ (ಅ. ಕಾ. 28:17, 23-31) ಪೌಲನು ಖಂಡಿತ ದೇವರ ರಾಜ್ಯಕ್ಕೆ ಗಮನಕೊಟ್ಟನು. ಆದರೆ ಅವನು ಬೇರೆ ಏನನ್ನು ಒತ್ತಿಹೇಳಿದನು? ದೇವರ ರಾಜ್ಯದ ಕೇಂದ್ರಬಿಂದುವನ್ನು ಅಂದರೆ ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರವನ್ನೇ.

5. ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ ಯಾವ ಅಗತ್ಯವನ್ನು ತಿಳಿಸಿದನು?

5 ಎಲ್ಲ ಜನರು ಯೇಸುವಿನ ಕುರಿತು ತಿಳಿದು ಅವನಲ್ಲಿ ನಂಬಿಕೆಯನ್ನಿಡುವುದು ಅಗತ್ಯ. ರೋಮನ್ನರಿಗೆ ಬರೆದ ಪತ್ರದಲ್ಲಿ ಪೌಲನು ಆ ಅಗತ್ಯದ ಬಗ್ಗೆ ತಿಳಿಸಿದನು. ಆರಂಭದಲ್ಲಿ ಪೌಲನು, ‘ದೇವರ ಮಗನ ಕುರಿತಾದ ಸುವಾರ್ತೆಯ ಸಂಬಂಧದಲ್ಲಿ ತಾನು ಯಾರಿಗೆ ಶ್ರದ್ಧೆಯಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದನೊ ಆ ದೇವರ’ ಬಗ್ಗೆ ಬರೆದನು. ಅವನು ಕೂಡಿಸಿದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವುದಿಲ್ಲ; ವಾಸ್ತವದಲ್ಲಿ, ಅದು . . . ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ.” ತದನಂತರ ಪೌಲನು ‘ತಾನು ಸಾರುವ ಸುವಾರ್ತೆಗನುಸಾರ ದೇವರು ಕ್ರಿಸ್ತ ಯೇಸುವಿನ ಮೂಲಕ ಮಾನವಕುಲದ ಗುಪ್ತ ವಿಚಾರಗಳನ್ನು ತೀರ್ಪುಮಾಡುವ’ ಸಮಯದ ಬಗ್ಗೆ ಪ್ರಸ್ತಾಪಿಸಿದನು. ಬಳಿಕ ಅವನಂದದ್ದು: “ನಾನು ಯೆರೂಸಲೇಮಿನಿಂದ ಆರಂಭಿಸಿ ಇಲ್ಲುರಿಕ ಸೀಮೆಯಷ್ಟು ದೂರದ ವರೆಗಿನ ಕ್ಷೇತ್ರದಲ್ಲಿ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೂಲಂಕಷವಾಗಿ ಸಾರಿಹೇಳಿದ್ದೇನೆ.” * (ರೋಮ. 1:9, 16; 2:16; 15:19) ಪೌಲನು ರೋಮನ್ನರಿಗೆ ಯೇಸು ಕ್ರಿಸ್ತನ ಕುರಿತು ಒತ್ತಿಹೇಳಿದ್ದು ಏಕಿರಬಹುದು?

6, 7. ರೋಮ್‌ ಸಭೆಯ ಆರಂಭ ಮತ್ತು ಅದರ ಸದಸ್ಯರ ಬಗ್ಗೆ ನಾವೇನು ಹೇಳಬಹುದು?

6 ರೋಮ್‌ನಲ್ಲಿದ್ದ ಸಭೆ ಹೇಗೆ ಆರಂಭವಾಯಿತೆಂದು ನಮಗೆ ತಿಳಿದಿಲ್ಲ. ಕ್ರಿ.ಶ. 33ರ ಪಂಚಾಶತ್ತಮದಂದು ಉಪಸ್ಥಿತರಿದ್ದ ಯೆಹೂದ್ಯರು ಅಥವಾ ಯೆಹೂದಿ ಮತಾವಲಂಬಿಗಳು ಕ್ರೈಸ್ತರಾಗಿ ರೋಮ್‌ಗೆ ಹಿಂತೆರಳಿದರೋ? (ಅ. ಕಾ. 2:10) ಇಲ್ಲವೆ ಕ್ರೈಸ್ತ ವರ್ತಕರು ಅಥವಾ ಪ್ರವಾಸಿಗರು ರೋಮ್‌ನಲ್ಲಿ ಸತ್ಯವನ್ನು ಪಸರಿಸಿದರೋ? ಹೇಗೂ ಇರಲಿ ಸುಮಾರು ಕ್ರಿ.ಶ. 56ರಷ್ಟಕ್ಕೆ ಅಂದರೆ ಪೌಲನು ರೋಮನ್ನರಿಗೆ ಪತ್ರವನ್ನು ಬರೆಯುವಷ್ಟರಲ್ಲಿ ಆ ಸಭೆ ಸ್ಥಾಪಿಸಲ್ಪಟ್ಟು ತುಂಬ ಸಮಯವಾಗಿತ್ತು. (ರೋಮ. 1:8) ಆ ಸಭೆಯಲ್ಲಿದ್ದವರು ಯಾವೆಲ್ಲ ಹಿನ್ನೆಲೆಗಳಿಂದ ಬಂದವರಾಗಿದ್ದರು?

7 ಕೆಲವರು ಯೆಹೂದಿ ಹಿನ್ನೆಲೆಗಳಿಂದ ಬಂದವರಾಗಿದ್ದರು. ಪೌಲನು ವಂದನೆಗಳನ್ನು ಹೇಳುವಾಗ ಆಂದ್ರೋನಿಕನನ್ನೂ ಯೂನ್ಯನನ್ನೂ ‘ನನ್ನ ಸಂಬಂಧಿಕರು’ ಎಂದನು. ಬಹುಶಃ ಅವರು ಜೊತೆ ಯೆಹೂದ್ಯರಾಗಿದ್ದು ಅವನ ಸಂಬಂಧಿಕರಾಗಿದ್ದಿರಬೇಕು. ರೋಮ್‌ನಲ್ಲಿ ಡೇರೆಮಾಡುವ ವೃತ್ತಿಯವರಾಗಿದ್ದ ಅಕ್ವಿಲ ಮತ್ತವನ ಹೆಂಡತಿ ಪ್ರಿಸ್ಕಿಲ್ಲ ಕೂಡ ಯೆಹೂದ್ಯರಾಗಿದ್ದರು. (ರೋಮ. 4:1; 9:3, 4; 16:3, 7; ಅ. ಕಾ. 18:2) ಆದರೆ ಪೌಲನು ಯಾರಿಗೆ ವಂದನೆಗಳನ್ನು ಕಳುಹಿಸಿದನೋ ಅವರಲ್ಲಿ ಅನೇಕ ಸಹೋದರ ಸಹೋದರಿಯರು ಪ್ರಾಯಶಃ ಅನ್ಯಜನರಾಗಿದ್ದರು. ಕೆಲವರು “ಕೈಸರನ ಮನೆಯವರು” ಆಗಿದ್ದಿರಬಹುದು ಅಂದರೆ ಕೈಸರನ ದಾಸರು ಅಥವಾ ಕಿರಿಯ ಅಧಿಕಾರಿಗಳಾಗಿದ್ದಿರಬಹುದು.—ಫಿಲಿ. 4:22; ರೋಮ. 1:6; 11:13.

8. ರೋಮ್‌ನಲ್ಲಿದ್ದವರು ಯಾವ ದುಃಸ್ಥಿತಿಯಲ್ಲಿದ್ದರು?

8 ರೋಮ್‌ನಲ್ಲಿದ್ದ ಪ್ರತಿ ಕ್ರೈಸ್ತನು ದುಃಸ್ಥಿತಿಯಲ್ಲಿದ್ದನು. ನಾವೂ ಅದೇ ಸ್ಥಿತಿಯಲ್ಲಿದ್ದೇವೆ. ಪೌಲನು ಅದನ್ನು ಹೀಗೆ ತಿಳಿಸಿದನು: “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ.” (ರೋಮ. 3:23) ಹಾಗಾಗಿ ಪೌಲನು ಈ ಪತ್ರವನ್ನು ಯಾರಿಗೆ ಬರೆದನೋ ಅವರೆಲ್ಲರೂ ತಾವು ಪಾಪಿಗಳೆಂಬದನ್ನು ಮನಗಾಣಬೇಕಿತ್ತು ಮತ್ತು ಆ ಸ್ಥಿತಿಯಿಂದ ಹೊರಬರಲು ದೇವರ ಮಾಧ್ಯಮದಲ್ಲಿ ನಂಬಿಕೆಯಿಡಬೇಕಿತ್ತು.

ಪಾಪಿಗಳೆಂದು ಮನಗಾಣಬೇಕು

9. ಸುವಾರ್ತೆಯಿಂದ ಉಂಟಾಗುವ ಯಾವ ಫಲಿತಾಂಶದ ಕಡೆಗೆ ಪೌಲನು ಗಮನಸೆಳೆದನು?

9 ರೋಮನ್ನರಿಗೆ ಬರೆದ ಪತ್ರದ ಆರಂಭದಲ್ಲಿ ಪೌಲನು ತಾನು ಆಗಾಗ್ಗೆ ಉಲ್ಲೇಖಿಸಿದ ಆ ಸುವಾರ್ತೆಯಿಂದ ಉಂಟಾಗುವ ಆಶ್ಚರ್ಯಕರ ಫಲಿತಾಂಶವನ್ನು ಒತ್ತಿಹೇಳಿದನು. ಅವನಂದದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವುದಿಲ್ಲ; ವಾಸ್ತವದಲ್ಲಿ, ಅದು ಮೊದಲು ಯೆಹೂದ್ಯರಿಗೂ ಅನಂತರ ಗ್ರೀಕರಿಗೂ ಹೀಗೆ ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ.” ಹೌದು, ರಕ್ಷಣೆ ಸಾಧ್ಯವಿತ್ತು. ಆದರೆ ಹಬಕ್ಕೂಕ 2:4ರಲ್ಲಿರುವ ಅಗಾಧ ಸತ್ಯಕ್ಕನುಸಾರ ನಂಬಿಕೆ ಅಗತ್ಯವಾಗಿತ್ತು. ಅದನ್ನುವುದು: “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.” (ರೋಮ. 1:16, 17; ಗಲಾ. 3:11; ಇಬ್ರಿ. 10:38) ಹಾಗಾದರೆ ರಕ್ಷಣೆಗೆ ನಡಿಸುವ ಸುವಾರ್ತೆಯು, “ಎಲ್ಲರೂ ಪಾಪಮಾಡಿದ್ದಾರೆ” ಎಂಬ ವಾಸ್ತವಾಂಶಕ್ಕೆ ಹೇಗೆ ಸಂಬಂಧಿಸಿದೆ?

10, 11. ರೋಮನ್ನರಿಗೆ 3:23ರಲ್ಲಿ ತಿಳಿಸಲಾದ ವಿಷಯ ಕೆಲವರಿಗೆ ಅಪರಿಚಿತವೇನಲ್ಲ ಏಕೆ? ಇನ್ನು ಕೆಲವರಿಗೆ ಅದು ಅಪರಿಚಿತವೇಕೆ?

10 ಒಬ್ಬನು ಜೀವರಕ್ಷಕ ನಂಬಿಕೆಯನ್ನು ಬೆಳೆಸಿಕೊಳ್ಳುವ ಮುನ್ನ ತಾನು ಪಾಪಿ ಎಂಬುದನ್ನು ಅಂಗೀಕರಿಸಬೇಕು. ಚಿಕ್ಕಂದಿನಿಂದಲೇ ದೇವರಲ್ಲಿ ನಂಬಿಕೆಯಿಟ್ಟವರಿಗೆ ಮತ್ತು ಬೈಬಲಿನ ಬಗ್ಗೆ ಸ್ವಲ್ಪ ಪರಿಚಯವಿರುವವರಿಗೆ ತಾವು ಪಾಪಿಗಳೆಂಬ ಸಂಗತಿ ಅಪರಿಚಿತವೇನಲ್ಲ. (ಪ್ರಸಂಗಿ 7:20 ಓದಿ.) “ಎಲ್ಲರೂ ಪಾಪಮಾಡಿದ್ದಾರೆ” ಎಂಬ ಪೌಲನ ಮಾತನ್ನು ಅವರು ಒಪ್ಪಲಿ ಒಪ್ಪದಿರಲಿ ಅದರ ಅರ್ಥ ಅವರಿಗೆ ಸ್ವಲ್ಪಮಟ್ಟಿಗಾದರೂ ತಿಳಿದಿರುತ್ತದೆ. (ರೋಮ. 3:23) ಆದರೆ ನಾವು ಶುಶ್ರೂಷೆಯಲ್ಲಿ ಭೇಟಿಯಾಗುವ ಅಧಿಕಾಂಶ ಜನರಿಗೆ ಆ ವಾಕ್ಯದ ಅರ್ಥವೇ ತಿಳಿದಿಲ್ಲ.

11 ಕೆಲವು ದೇಶಗಳಲ್ಲಿ ಸಾಧಾರಣವಾಗಿ ಜನರಿಗೆ ತಾವು ಹುಟ್ಟಿನಿಂದಲೇ ಪಾಪಿಗಳು ಅಂದರೆ ಪಾಪವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ ಎನ್ನುವುದು ತಿಳಿದಿರಲಿಕ್ಕಿಲ್ಲ. ಹಾಗಿದ್ದರೂ ತಾವು ತಪ್ಪುಮಾಡುತ್ತೇವೆ, ತಮ್ಮಲ್ಲಿ ಕೆಟ್ಟಗುಣಗಳಿವೆ ಮತ್ತು ತಾವು ಕೆಲವೊಮ್ಮೆ ಕೆಟ್ಟದ್ದನ್ನು ಮಾಡಿದ್ದೇವೆ ಎಂಬುದು ಅವರಿಗೆ ಗೊತ್ತಿದೆ. ಇತರರು ಕೂಡ ತಮ್ಮ ಹಾಗೆ ಇದ್ದಾರೆ ಎಂಬದೂ ಅವರಿಗೆ ತಿಳಿದಿದೆ. ಹಾಗಿದ್ದರೂ ತಮ್ಮ ಹಿನ್ನೆಲೆಯ ಕಾರಣ, ತಾವಾಗಲಿ ಇತರರಾಗಲಿ ಏಕೆ ಅಂಥ ಸ್ಥಿತಿಯಲ್ಲಿದ್ದೇವೆಂಬುದು ಅವರಿಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ. ಕೆಲವು ಭಾಷೆಗಳಲ್ಲಿ ಒಬ್ಬನನ್ನು ಪಾಪಿ ಎಂದು ಕರೆದರೆ ಅವನು ಅಪರಾಧಿ ಅಥವಾ ನಿಯಮ ಉಲ್ಲಂಘನೆ ಮಾಡಿದವನು ಎಂದಷ್ಟೇ ಜನರು ನೆನಸುತ್ತಾರೆ. ನಿಸ್ಸಂಶಯವಾಗಿ ಅಂಥ ವಾತಾವರಣದಲ್ಲಿ ಬೆಳೆದ ವ್ಯಕ್ತಿಯೊಬ್ಬನು ತಾನು ಪೌಲನು ಹೇಳಿದ ಅರ್ಥದಲ್ಲಿ ಪಾಪಿಯೆಂದು ನೆನಸಲಿಕ್ಕಿಲ್ಲ.

12. ಎಲ್ಲರೂ ಪಾಪಿಗಳೆಂಬುದನ್ನು ಅನೇಕರು ನಂಬುವುದಿಲ್ಲವೇಕೆ?

12 ಕ್ರೈಸ್ತಪ್ರಪಂಚದ ದೇಶಗಳಲ್ಲೂ ಹೆಚ್ಚಿನವರು ತಾವು ಪಾಪಿಗಳೆಂಬ ವಿಷಯವನ್ನು ನಂಬುವುದಿಲ್ಲ. ಏಕೆ? ಅವರು ಆಗಾಗ್ಗೆ ಚರ್ಚಿಗೆ ಹೋಗುತ್ತಾರಾದರೂ ಆದಾಮಹವ್ವರ ಕುರಿತ ಬೈಬಲ್‌ ವೃತ್ತಾಂತವನ್ನು ಕೇವಲ ಕಟ್ಟುಕಥೆಯಾಗಿ ವೀಕ್ಷಿಸುತ್ತಾರೆ. ಇತರರು ನಾಸ್ತಿಕವಾದಿಗಳ ಅಥವಾ ಆಜ್ಞೇಯತಾವಾದಿಗಳ ಮಧ್ಯೆ ಬೆಳೆದವರಾಗಿದ್ದಾರೆ. ಅವರು ದೇವರ ಅಸ್ತಿತ್ವವನ್ನೇ ಸಂಶಯಿಸುವುದರಿಂದ ಸರ್ವೋನ್ನತನು ಮಾನವರಿಗೆ ನೈತಿಕ ಮಟ್ಟಗಳನ್ನು ಇಟ್ಟಿದ್ದಾನೆ ಎಂದಾಗಲಿ ಆ ಮಟ್ಟಗಳಿಗನುಸಾರ ಜೀವಿಸದಿರುವುದು ಪಾಪವೆಂದಾಗಲಿ ಅವರಿಗೆ ತಿಳಿದಿಲ್ಲ. ಅವರು ಒಂದರ್ಥದಲ್ಲಿ, ‘ಲೋಕದಲ್ಲಿ ನಿರೀಕ್ಷೆಯಿಲ್ಲದೆಯೂ ದೇವರಿಲ್ಲದೆಯೂ’ ಇರುವ ಜನರೆಂದು ಪೌಲನು ಒಂದನೇ ಶತಮಾನದಲ್ಲಿ ಯಾರನ್ನು ವರ್ಣಿಸಿದನೋ ಅವರಂತಿದ್ದಾರೆ.—ಎಫೆ. 2:12.

13, 14. (ಎ) ದೇವರ ಅಸ್ತಿತ್ವವನ್ನು ಮತ್ತು ತಾವು ಪಾಪಿಗಳೆನ್ನುವುದನ್ನು ನಂಬದಿರುವವರು ಯಾವುದೇ ನೆಪವನ್ನು ಕೊಡಸಾಧ್ಯವಿಲ್ಲ ಏಕೆ? (ಬಿ) ಇಂಥ ಅಪನಂಬಿಕೆ ಅನೇಕರನ್ನು ಎಲ್ಲಿಗೆ ನಡೆಸಿದೆ?

13 ಆದರೆ ಪಾಪಿಗಳೆಂಬದನ್ನು ಮನಗಾಣದಿರಲು ಯಾರೂ ತಮ್ಮ ಹಿನ್ನಲೆಗಳನ್ನು ನೆಪವಾಗಿ ಕೊಡಸಾಧ್ಯವಿಲ್ಲ ಎಂಬುದಕ್ಕೆ ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ ಎರಡು ಕಾರಣಗಳನ್ನು ಕೊಡುತ್ತಾನೆ. ಒಂದನೇ ಕಾರಣ, ಸೃಷ್ಟಿಯು ತಾನೇ ಸೃಷ್ಟಿಕರ್ತನಿದ್ದಾನೆಂಬುದಕ್ಕೆ ಸಾಕ್ಷ್ಯನೀಡುತ್ತದೆ. (ರೋಮನ್ನರಿಗೆ 1:19, 20 ಓದಿ.) ಇದು ಪೌಲನು ರೋಮ್‌ನಲ್ಲಿರುವಾಗ ಇಬ್ರಿಯರಿಗೆ ಬರೆದ ವಿಷಯಕ್ಕೆ ಸರಿಹೊಂದುತ್ತದೆ. ಅವನು ಬರೆದದ್ದು: “ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.” (ಇಬ್ರಿ. 3:4) ಈ ತರ್ಕವು ಇಡೀ ವಿಶ್ವವನ್ನು ಸೃಷ್ಟಿಸಿದ ಇಲ್ಲವೆ ಅಸ್ತಿತ್ವಕ್ಕೆ ತಂದ ಸೃಷ್ಟಿಕರ್ತನೊಬ್ಬನು ಇದ್ದಾನೆ ಎಂಬದನ್ನು ಸೂಚಿಸುತ್ತದೆ.

14 ಆದ್ದರಿಂದ ಪುರಾತನ ಇಸ್ರಾಯೇಲ್ಯರನ್ನೂ ಸೇರಿಸಿ ನಿರ್ಜೀವ ವಿಗ್ರಹಗಳನ್ನು ಆರಾಧಿಸುವವರೆಲ್ಲರೂ “ಯಾವುದೇ ನೆಪವನ್ನು ಕೊಡಲಾರದೆ ಇದ್ದಾರೆ” ಎಂದು ರೋಮನ್ನರಿಗೆ ಬರೆಯಲು ಪೌಲನಿಗೆ ಬಲವಾದ ಕಾರಣಗಳಿದ್ದವು. ಸ್ತ್ರೀಪುರುಷರ ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಲೈಂಗಿಕ ಅನೈತಿಕತೆಯನ್ನು ನಡೆಸುವವರ ವಿಷಯದಲ್ಲೂ ಇದನ್ನೇ ಹೇಳಸಾಧ್ಯ. (ರೋಮ. 1:22-27) ಪೌಲನು ಸೂಕ್ತವಾಗಿಯೇ ಕೊನೆಯಲ್ಲಿ ಹೀಗಂದನು: “ಯೆಹೂದ್ಯರಾಗಿರಲಿ ಗ್ರೀಕರಾಗಿರಲಿ ಎಲ್ಲರೂ ಪಾಪದ ಕೆಳಗಿದ್ದಾರೆ.”—ರೋಮ. 3:9.

‘ಸಾಕ್ಷಿಗಾರ’

15. ಯಾರಿಗೆಲ್ಲ ಮನಸ್ಸಾಕ್ಷಿ ಇದೆ? ಪರಿಣಾಮವೇನು?

15 ಜನರು ತಾವು ಪಾಪಿಗಳೆಂಬದನ್ನು ಏಕೆ ಮನಗಾಣಬೇಕು ಮತ್ತು ಆ ದುಃಸ್ಥಿತಿಯಿಂದ ಹೊರಬರಲು ದಾರಿ ಏಕೆ ಅಗತ್ಯವಿದೆ ಎಂಬದಕ್ಕೆ ರೋಮನ್ನರಿಗೆ ಪುಸ್ತಕ ಇನ್ನೊಂದು ಕಾರಣವನ್ನು ಕೊಡುತ್ತದೆ. ದೇವರು ಪುರಾತನ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳ ಕುರಿತು ಪೌಲನು ಬರೆದದ್ದು: “ಧರ್ಮಶಾಸ್ತ್ರವಿದ್ದು ಪಾಪಮಾಡಿದವರೆಲ್ಲರು ಧರ್ಮಶಾಸ್ತ್ರದಿಂದ ತೀರ್ಪುಮಾಡಲ್ಪಡುವರು.” (ರೋಮ. 2:12) ದೇವರ ಈ ನಿಯಮವನ್ನು ತಿಳಿಯದ ಅನ್ಯಜನಾಂಗಗಳ ಜನರು ಅನೇಕವೇಳೆ ‘ಸ್ವಾಭಾವಿಕವಾಗಿಯೇ ಧರ್ಮಶಾಸ್ತ್ರದಲ್ಲಿರುವ ವಿಷಯಗಳನ್ನು ಮಾಡುತ್ತಾರೆ’ ಎಂದು ಪೌಲನು ತನ್ನ ತರ್ಕವನ್ನು ಮುಂದುವರಿಸುತ್ತಾ ಹೇಳಿದನು. ಅಂಥ ಜನರು ಸಹ ನಿಷಿದ್ಧ ಸಂಭೋಗ, ಕೊಲೆ, ಕಳ್ಳತನವನ್ನೆಲ್ಲ ಮಾಡದಿರಲು ಕಾರಣವೇನು? ಅವರಿಗೆ ಮನಸ್ಸಾಕ್ಷಿ ಇರುವುದರಿಂದಲೇ ಎಂದನು ಪೌಲನು.—ರೋಮನ್ನರಿಗೆ 2:14, 15 ಓದಿ.

16. ಮನಸ್ಸಾಕ್ಷಿಯಿದ್ದ ಮಾತ್ರಕ್ಕೆ ಪಾಪವನ್ನು ಮಾಡಸಾಧ್ಯವಿಲ್ಲವೆಂದು ಹೇಳಲಾಗದು ಏಕೆ?

16 ಹಾಗಿದ್ದರೂ ಆತ್ಮಸಾಕ್ಷಿಯಂತೆ ಕೆಲಸಮಾಡುವ ಮನಸ್ಸಾಕ್ಷಿಯಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿ ಅದು ಹೇಳಿದಂತೆ ಕೇಳುತ್ತಾನೆಂದು ಹೇಳಲಾಗದು. ಪ್ರಾಚೀನ ಇಸ್ರಾಯೇಲ್ಯರ ಉದಾಹರಣೆ ಇದನ್ನು ತೋರಿಸುತ್ತದೆ. ಅವರಿಗೆ ದೇವದತ್ತ ಮನಸ್ಸಾಕ್ಷಿಯಿತ್ತು. ಮಾತ್ರವಲ್ಲ ಕಳ್ಳತನ, ವ್ಯಭಿಚಾರ ಮಾಡಬಾರದೆಂಬ ದೇವರ ನಿಯಮಗಳೂ ಇದ್ದವು. ಆದರೂ ಅವರು ಪದೇ ಪದೇ ತಮ್ಮ ಮನಸ್ಸಾಕ್ಷಿಯನ್ನೂ ಯೆಹೋವನ ಧರ್ಮಶಾಸ್ತ್ರವನ್ನೂ ಉಲ್ಲಂಘಿಸಿದರು. (ರೋಮ. 2:21-23) ಹಾಗಾಗಿ ಅವರು ಎರಡರಷ್ಟು ದೋಷಿಗಳಾಗಿದ್ದರು. ಹೀಗೆ ದೇವರ ಮಟ್ಟಗಳನ್ನು ಪಾಲಿಸದಿದ್ದರಿಂದ, ಆತನ ಚಿತ್ತವನ್ನು ಮಾಡದಿದ್ದರಿಂದ ಅವರು ಪಾಪಿಗಳಾಗಿದ್ದರು. ಇದು ನಿರ್ಮಾಣಿಕನೊಂದಿಗೆ ಅವರಿಗಿದ್ದ ಸುಸಂಬಂಧವನ್ನು ಹಾಳುಮಾಡಿತು.—ಯಾಜ. 19:11; 20:10; ರೋಮ. 3:20.

17. ರೋಮನ್ನರಿಗೆ ಪುಸ್ತಕದಲ್ಲಿ ನಾವು ಯಾವ ಉತ್ತೇಜನವನ್ನು ಕಂಡುಕೊಳ್ಳುತ್ತೇವೆ?

17 ರೋಮನ್ನರಿಗೆ ಪುಸ್ತಕದಿಂದ ನಾವೀಗಾಗಲೇ ಪರಿಗಣಿಸಿದ ವಿಷಯಗಳು, ಸರ್ವಶಕ್ತನ ಮುಂದೆ ಮಾನವರೆಲ್ಲರೂ, ನಾವು ಸಹ ಕರಾಳ ಸ್ಥಿತಿಯಲ್ಲಿದ್ದೇವೆಂಬ ಚಿತ್ರಣವನ್ನು ಕೊಡಬಹುದು. ಆದರೆ ಪೌಲನು ವಿಷಯವನ್ನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಕೀರ್ತನೆ 32:1, 2ರಲ್ಲಿರುವ ದಾವೀದನ ಮಾತುಗಳನ್ನು ಉದ್ಧರಿಸುತ್ತಾ ಅಪೊಸ್ತಲನು ಬರೆದದ್ದು: “ಯಾರ ಅಧರ್ಮದ ಕೃತ್ಯಗಳು ಮನ್ನಿಸಲ್ಪಟ್ಟಿವೆಯೋ ಮತ್ತು ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರು ಸಂತೋಷಿತರು; ಯಾವನ ಪಾಪವನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲವೋ ಆ ಮನುಷ್ಯನು ಸಂತೋಷಿತನು.” (ರೋಮ. 4:7, 8) ಹೌದು, ಪಾಪಗಳ ಕ್ಷಮೆಗಾಗಿ ದೇವರು ನ್ಯಾಯಬದ್ಧವಾದ ಮಾರ್ಗವೊಂದನ್ನು ತೆರೆದಿದ್ದಾನೆ.

ಯೇಸುವಿನ ಮೇಲೆ ಕೇಂದ್ರಿತವಾದ ಸುವಾರ್ತೆ

18, 19. (ಎ) ಪೌಲನು ರೋಮನ್ನರಿಗೆ ಪುಸ್ತಕದಲ್ಲಿ ಸುವಾರ್ತೆಯ ಯಾವ ಅಂಶದ ಮೇಲೆ ಗಮನ ಕೇಂದ್ರೀಕರಿಸಿದನು? (ಬಿ) ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆಯಲು ನಾವೇನನ್ನು ಮನಗಾಣಬೇಕು?

18 ‘ಅದು ನಿಜವಾಗಿಯೂ ಸುವಾರ್ತೆಯೇ!’ ಎಂದು ನೀವು ಉದ್ಗರಿಸಬಹುದು. ಹೌದು, ಅದು ನಿಜಕ್ಕೂ ಸುವಾರ್ತೆಯೇ. ಇದು, ಪೌಲನು ರೋಮನ್ನರಿಗೆ ಪುಸ್ತಕದಲ್ಲಿ ಸುವಾರ್ತೆ ಬಗ್ಗೆ ಒತ್ತಿಹೇಳಿದ ಅಂಶವನ್ನು ಪುನಃ ನಮ್ಮ ಮನಸ್ಸಿಗೆ ತರುತ್ತದೆ. ಈ ಮುಂಚೆ ತಿಳಿಸಲಾದಂತೆ ಅವನಂದದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವುದಿಲ್ಲ; ವಾಸ್ತವದಲ್ಲಿ, ಅದು . . . ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ.”—ರೋಮ. 1:15, 16.

19 ಆ ಸುವಾರ್ತೆಯು ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸುವಿನ ಪಾತ್ರದ ಮೇಲೆ ಕೇಂದ್ರಿತವಾಗಿದೆ. ‘ಸುವಾರ್ತೆಗನುಸಾರ ದೇವರು ಕ್ರಿಸ್ತ ಯೇಸುವಿನ ಮೂಲಕ ಮಾನವಕುಲದ ಗುಪ್ತ ವಿಚಾರಗಳನ್ನು ತೀರ್ಪುಮಾಡುವ ದಿನವನ್ನು’ ಪೌಲನು ಎದುರುನೋಡಸಾಧ್ಯವಿತ್ತು. (ರೋಮ. 2:16) ಇದರರ್ಥ ಅವನು “ಕ್ರಿಸ್ತನ ಮತ್ತು ದೇವರ ರಾಜ್ಯದ” ಇಲ್ಲವೆ ದೇವರು ತನ್ನ ರಾಜ್ಯದ ಮೂಲಕ ಮಾಡಲಿರುವ ವಿಷಯಗಳ ಮಹತ್ವವನ್ನು ಕಡಿಮೆ ಮಾಡಿದನೆಂದಲ್ಲ. (ಎಫೆ. 5:5) ಬದಲಾಗಿ ದೇವರ ರಾಜ್ಯದ ಕೆಳಗೆ ಜೀವಿಸಲು ಮತ್ತು ಆಶೀರ್ವಾದಗಳನ್ನು ಪಡೆಯಲು (1) ದೇವರ ದೃಷ್ಟಿಯಲ್ಲಿ ಪಾಪಿಗಳಾಗಿದ್ದೇವೆ ಎಂಬದನ್ನು ಮತ್ತು (2) ಪಾಪಗಳ ಕ್ಷಮೆಗಾಗಿ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಅಗತ್ಯವಿದೆ ಎಂಬದನ್ನು ನಾವು ಮನಗಾಣಲೇಬೇಕು ಎಂದು ತೋರಿಸಿಕೊಟ್ಟನು. ಒಬ್ಬನು ದೇವರ ಉದ್ದೇಶದ ಈ ಅಂಶಗಳನ್ನು ಅರ್ಥಮಾಡಿಕೊಂಡು ಸ್ವೀಕರಿಸುವಾಗ ಮತ್ತು ಅದು ತನಗೆ ಕೊಡುವ ನಿರೀಕ್ಷೆಯನ್ನು ತಿಳಿದಾಗ ಅವನು ಸೂಕ್ತವಾಗಿಯೇ ಹೀಗೆ ಉದ್ಗರಿಸುವನು: “ಹೌದು, ಅದು ನಿಜವಾಗಿಯೂ ಸುವಾರ್ತೆಯೇ!”

20, 21. ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ರೋಮನ್ನರಿಗೆ ಪುಸ್ತಕದಲ್ಲಿ ಒತ್ತಿಹೇಳಲಾಗಿರುವ ಸುವಾರ್ತೆಯನ್ನು ನಾವೇಕೆ ಮನಸ್ಸಿನಲ್ಲಿಡಬೇಕು? ಆಗ ಯಾವ ಫಲಿತಾಂಶ ಸಿಗಸಾಧ್ಯ?

20 ನಾವು ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ಸುವಾರ್ತೆಯ ಆ ಅಂಶವನ್ನು ನಿಶ್ಚಯವಾಗಿಯೂ ಮನಸ್ಸಿನಲ್ಲಿಡಬೇಕು. ಯೇಸುವಿಗೆ ಸೂಚಿಸುತ್ತಾ ಪೌಲನು ಯೆಶಾಯನ ಮಾತುಗಳನ್ನು ಉದ್ಧರಿಸಿ ಅಂದದ್ದು: “ಅವನಲ್ಲಿ ನಂಬಿಕೆಯಿಡುವ ಯಾವನೂ ಆಶಾಭಂಗಪಡುವುದಿಲ್ಲ.” (ರೋಮ. 10:11; ಯೆಶಾ. 28:16) ಪಾಪದ ಕುರಿತು ಬೈಬಲ್‌ ತಿಳಿಸುವ ವಿಷಯ ತಿಳಿದಿರುವವರಿಗೆ ಯೇಸುವಿನ ಕುರಿತ ಮುಖ್ಯ ಸಂದೇಶವು ಅಪರಿಚಿತವೇನಲ್ಲ. ಬೇರೆಯವರಿಗಾದರೋ ಈ ಸಂದೇಶ ಹೊಸ ವಿಷಯವಾಗಿರಬಹುದು. ಅವರಿಗೆ ಆ ಬಗ್ಗೆ ಸ್ವಲ್ಪವೂ ತಿಳಿದಿರಲಿಕ್ಕಿಲ್ಲ ಅಥವಾ ಅವರ ಸಮುದಾಯದಲ್ಲಿ ಅಂಥ ನಂಬಿಕೆಯುಳ್ಳವರು ಯಾರೂ ಇರಲಿಕ್ಕಿಲ್ಲ. ಅಂಥವರು ದೇವರ ಅಸ್ತಿತ್ವವನ್ನು ನಂಬಿ, ಬೈಬಲಿನ ಮೇಲೆ ಭರವಸೆಯನ್ನಿಡಲಾರಂಭಿಸುವಾಗ ನಾವು ಅವರಿಗೆ ಯೇಸುವಿನ ಪಾತ್ರವನ್ನು ವಿವರಿಸಬೇಕು. ರೋಮನ್ನರಿಗೆ ಪುಸ್ತಕದ 5ನೇ ಅಧ್ಯಾಯವು ಸುವಾರ್ತೆಯ ಈ ಅಂಶವನ್ನು ಹೇಗೆ ವಿಕಸಿಸುತ್ತದೆ ಎಂಬುದನ್ನು ಮುಂದಿನ ಲೇಖನ ಚರ್ಚಿಸುತ್ತದೆ. ಆ ಅಧ್ಯಯನವು ಶುಶ್ರೂಷೆಯಲ್ಲಿ ನಿಮಗೆ ಖಂಡಿತ ಪ್ರಯೋಜನಕರವಾಗಿರುವುದು.

21 ‘ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾದ’ ಸುವಾರ್ತೆಯನ್ನು ರೋಮನ್ನರಿಗೆ ಪುಸ್ತಕದಲ್ಲಿ ಪದೇ ಪದೇ ಉಲ್ಲೇಖಿಸಲಾಗಿದೆ. ಈ ಸುವಾರ್ತೆಯನ್ನು ಪ್ರಾಮಾಣಿಕ ಹೃದಯದ ಜನರು ಅರ್ಥಮಾಡಿಕೊಳ್ಳುವಂತೆ ನೆರವು ನೀಡುವುದು ಪ್ರತಿಫಲದಾಯಕವೇ ಸರಿ. (ರೋಮ. 1:16) ಅದಕ್ಕಿಂತಲೂ ಹೆಚ್ಚಾಗಿ ರೋಮನ್ನರಿಗೆ 10:15ರಲ್ಲಿರುವ ಪೌಲನ ಮಾತುಗಳನ್ನು ಇತರರೂ ಸಮ್ಮತಿಸುವುದನ್ನು ನಾವು ನೋಡುವೆವು. ಅವನಂದದ್ದು: “ಒಳ್ಳೇ ವಿಷಯಗಳ ಕುರಿತಾದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟು ಅಂದ!”—ಯೆಶಾ. 52:7.

[ಪಾದಟಿಪ್ಪಣಿ]

^ ಪ್ಯಾರ. 5 ತದ್ರೀತಿಯ ಅಭಿವ್ಯಕ್ತಿಗಳು ಇತರ ಪ್ರೇರಿತ ಪುಸ್ತಕಗಳಲ್ಲೂ ಇವೆ.—ಮಾರ್ಕ 1:1; ಅ. ಕಾ. 5:42; 1 ಕೊರಿಂ. 9:12; ಫಿಲಿ. 1:27.

ನಿಮಗೆ ಜ್ಞಾಪಕವಿದೆಯೊ?

• ರೋಮನ್ನರಿಗೆ ಪುಸ್ತಕವು ಸುವಾರ್ತೆಯ ಯಾವ ಅಂಶವನ್ನು ಒತ್ತಿಹೇಳುತ್ತದೆ?

• ಯಾವ ನಿಜತ್ವವನ್ನು ಅರ್ಥಮಾಡಿಕೊಳ್ಳುವಂತೆ ನಾವು ಇತರರಿಗೆ ಸಹಾಯ ಮಾಡಬೇಕು?

• “ಕ್ರಿಸ್ತನ ಕುರಿತಾದ ಸುವಾರ್ತೆ” ನಮಗೂ ಇತರರಿಗೂ ಹೇಗೆ ಆಶೀರ್ವಾದಗಳನ್ನು ತರುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ರೋಮನ್ನರಿಗೆ ಪುಸ್ತಕದಲ್ಲಿ ಒತ್ತಿಹೇಳಲಾಗಿರುವ ಸುವಾರ್ತೆಯು ದೇವರ ಉದ್ದೇಶದಲ್ಲಿ ಯೇಸುವಿನ ಮಹತ್ವದ ಪಾತ್ರವನ್ನು ಒಳಗೊಂಡಿದೆ

[ಪುಟ 9ರಲ್ಲಿರುವ ಚಿತ್ರ]

ನಾವೆಲ್ಲರೂ ಪಾಪವೆಂಬ ಮಾರಕ ದೋಷದೊಂದಿಗೆ ಹುಟ್ಟಿದ್ದೇವೆ!