ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ”

“ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ”

“ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ”

“ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ.”—1 ಪೇತ್ರ 5:2.

1. ಪೇತ್ರನು ತನ್ನ ಮೊದಲ ಪತ್ರವನ್ನು ಬರೆದಾಗ ಕ್ರೈಸ್ತರು ಯಾವ ಸನ್ನಿವೇಶವನ್ನು ಎದುರಿಸುತ್ತಿದ್ದರು?

ಸಾಮ್ರಾಟ ನೀರೊ ರೋಮ್‌ನಲ್ಲಿದ್ದ ಕ್ರೈಸ್ತರ ವಿರುದ್ಧ ಹಿಂಸೆಯನ್ನು ಚಿತಾಯಿಸುವ ಸ್ವಲ್ಪ ಸಮಯದ ಮುಂಚೆ ಅಪೊಸ್ತಲ ಪೇತ್ರನು ತನ್ನ ಮೊದಲನೇ ಪತ್ರವನ್ನು ಬರೆದನು. ಅವನು ತನ್ನ ಜೊತೆ ವಿಶ್ವಾಸಿಗಳನ್ನು ಬಲಪಡಿಸಲು ಬಯಸಿದನು. ಏಕೆಂದರೆ, ಪಿಶಾಚನು ಕ್ರೈಸ್ತರನ್ನು ನುಂಗಲಿಕ್ಕಾಗಿ ಹುಡುಕುತ್ತಾ ‘ತಿರುಗುತ್ತಿದ್ದನು.’ ಅವನನ್ನು ಎದುರಿಸಿ ದೃಢವಾಗಿ ನಿಲ್ಲಬೇಕಾದರೆ ಕ್ರೈಸ್ತರು ‘ಸ್ವಸ್ಥಚಿತ್ತರಾಗಿರಬೇಕಿತ್ತು’ ಹಾಗೂ ‘ದೇವರ ಪ್ರಬಲವಾದ ಹಸ್ತದ ಕೆಳಗೆ ತಮ್ಮನ್ನು ತಗ್ಗಿಸಿಕೊಳ್ಳಬೇಕಿತ್ತು.’ (1 ಪೇತ್ರ 5:6, 8) ಅಲ್ಲದೆ ಅವರು ಒಗ್ಗಟ್ಟಿನಿಂದಿರಬೇಕಿತ್ತು. “ಒಬ್ಬರಿಗೊಬ್ಬರು ಕಚ್ಚಾಡುತ್ತಾ ಒಬ್ಬರನ್ನೊಬ್ಬರು ನುಂಗುತ್ತಾ” ಇರಬಾರದಿತ್ತು. ಏಕೆಂದರೆ, ಹಾಗೆ ಮಾಡುವಲ್ಲಿ ಅವರು ‘ಒಬ್ಬರಿಂದೊಬ್ಬರು ನಾಶವಾಗಲಿದ್ದರು.’—ಗಲಾ. 5:15.

2, 3. ನಾವು ಯಾರ ವಿರುದ್ಧ ಹೋರಾಡಬೇಕಾಗಿದೆ? ಈ ಲೇಖನಮಾಲೆಯಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

2 ಇಂದು ನಾವೂ ತದ್ರೀತಿಯ ಸನ್ನಿವೇಶದಲ್ಲಿದ್ದೇವೆ. ಪಿಶಾಚನು ನಮ್ಮನ್ನು ನುಂಗಲು ಹೊಂಚುಹಾಕುತ್ತಿದ್ದಾನೆ. (ಪ್ರಕ. 12:12) ಹಾಗೂ ‘ಲೋಕದ ಆರಂಭದಿಂದ ಇಂದಿನ ವರೆಗೆ ಸಂಭವಿಸಿರದ ಮಹಾ ಸಂಕಟವನ್ನು’ ನಾವು ಎದುರಿಸಲಿಕ್ಕಿದೆ. (ಮತ್ತಾ. 24:21) ಪ್ರಥಮ ಶತಮಾನದ ಕ್ರೈಸ್ತರು ತಮ್ಮೊಳಗೆ ಕಚ್ಚಾಡಿಕೊಳ್ಳದಂತೆ ಹೇಗೆ ಜಾಗ್ರತೆವಹಿಸಬೇಕಿತ್ತೋ ಹಾಗೇ ನಾವೂ ಜಾಗ್ರತೆವಹಿಸಬೇಕು. ಅದಕ್ಕಾಗಿ ಕೆಲವೊಮ್ಮೆ ನಮಗೆ ಅರ್ಹ ಹಿರೀಪುರುಷರ ನೆರವು ಬೇಕಾಗುತ್ತದೆ.

3 ಹಿರಿಯರು ‘ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು’ ಪರಿಪಾಲಿಸುವ ಸುಯೋಗದ ಕಡೆಗೆ ತಮಗಿರುವ ಗಣ್ಯತೆಯನ್ನು ಹೇಗೆ ಹೆಚ್ಚಿಸಬಹುದೆಂಬುದನ್ನು ನಾವೀಗ ಪರಿಗಣಿಸೋಣ. (1 ಪೇತ್ರ 5:2) ತದನಂತರ, ಪರಿಪಾಲನೆಯ ಕೆಲಸವನ್ನು ಮಾಡುವ ಯೋಗ್ಯ ವಿಧವನ್ನು ನಾವು ಪರಿಶೀಲಿಸಲಿರುವೆವು. ಮುಂದಿನ ಲೇಖನದಲ್ಲಿ, ‘ಪ್ರಯಾಸಪಟ್ಟು ಕೆಲಸಮಾಡುತ್ತಾ ಮೇಲ್ವಿಚಾರಣೆ ಮಾಡುವವರನ್ನು’ ಸಭೆಯಲ್ಲಿರುವವರು ಹೇಗೆ ‘ಮಾನ್ಯಮಾಡಬಹುದು’ ಎನ್ನುವುದನ್ನು ಕಲಿಯುವೆವು. (1 ಥೆಸ. 5:12) ಈ ಎಲ್ಲ ವಿಷಯಗಳ ಪರಿಗಣನೆಯು ನಾವು ಹೋರಾಟ ಮಾಡಲಿಕ್ಕಿರುವುದು ಪ್ರಧಾನ ವೈರಿಯ ವಿರುದ್ಧ ಎನ್ನುವುದನ್ನು ಮನಗಾಣುತ್ತಾ ಅವನ ವಿರುದ್ಧ ದೃಢವಾಗಿ ನಿಲ್ಲಲು ನಮಗೆ ಸಹಾಯಮಾಡುವುದು.—ಎಫೆ. 6:12.

ದೇವರ ಮಂದೆಯನ್ನು ಪರಿಪಾಲಿಸಿರಿ

4, 5. ಹಿರೀಪುರುಷರು ಮಂದೆಯನ್ನು ಹೇಗೆ ವೀಕ್ಷಿಸಬೇಕು? ದೃಷ್ಟಾಂತಿಸಿ.

4 ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ಮಂದೆಯ ಕಡೆಗೆ ದೇವರಿಗಿರುವ ನೋಟವನ್ನು ಹೊಂದಿರುವಂತೆ ಪ್ರಥಮ ಶತಮಾನದ ಹಿರೀಪುರುಷರನ್ನು ಪೇತ್ರನು ಉತ್ತೇಜಿಸಿದನು. (1 ಪೇತ್ರ 5:1, 2 ಓದಿ.) ಪೇತ್ರನನ್ನು ಸಭೆಯ ಸ್ತಂಭವಾಗಿ ಪರಿಗಣಿಸಲಾಗುತ್ತಿತ್ತಾದರೂ ಅವನು ಹಿರಿಯರೊಂದಿಗೆ ಗತ್ತಿನಿಂದ ಮಾತಾಡಲಿಲ್ಲ. ಬದಲಾಗಿ ಅವರು ಜೊತೆ ಹಿರಿಯರು ಎಂಬುದನ್ನು ಮನಸ್ಸಿನಲ್ಲಿಟ್ಟು ಬುದ್ಧಿವಾದ ಕೊಟ್ಟನು. (ಗಲಾ. 2:9) ಪೇತ್ರನಿಗಿದ್ದಂಥ ಅದೇ ಮನೋಭಾವದೊಂದಿಗೆ ಇಂದು ಆಡಳಿತ ಮಂಡಲಿ ಸಭಾ ಹಿರಿಯರಿಗೆ ದೇವರ ಮಂದೆಯನ್ನು ಪರಿಪಾಲಿಸುವ ಭಾರಿ ಜವಾಬ್ದಾರಿಯನ್ನು ಪೂರೈಸಲು ಶ್ರಮಿಸುವಂತೆ ಬುದ್ಧಿವಾದ ಕೊಡುತ್ತದೆ.

5 ಹಿರೀಪುರುಷರು ‘ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಬೇಕು’ ಎಂಬದಾಗಿ ಅಪೊಸ್ತಲನು ಬರೆದನು. ಮಂದೆಯು ಯೆಹೋವನಿಗೂ ಯೇಸು ಕ್ರಿಸ್ತನಿಗೂ ಸೇರಿದ್ದು ಎಂಬುದನ್ನು ಅವರು ಮನಗಾಣುವುದು ಬಹಳ ಪ್ರಾಮುಖ್ಯ. ಹಿರಿಯರು ದೇವರ ಕುರಿಗಳನ್ನು ನೋಡಿಕೊಳ್ಳುವ ವಿಷಯದಲ್ಲಿ ಲೆಕ್ಕ ಒಪ್ಪಿಸಬೇಕಾಗಿದೆ. ನಿಮ್ಮ ಆಪ್ತ ಸ್ನೇಹಿತನು ನಿಮ್ಮ ಬಳಿ ಬಂದು ತಾನಿಲ್ಲದಿರುವಾಗ ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ಕೇಳುತ್ತಾನೆಂದು ನೆನಸಿ. ಆಗ ನೀವು ಆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಕೊಡುವುದಿಲ್ಲವೇ? ಅವರಲ್ಲಿ ಯಾರಾದರೊಬ್ಬರು ಅಸ್ವಸ್ಥರಾಗುವಲ್ಲಿ ವೈದ್ಯರ ಬಳಿ ತೋರಿಸುವುದಿಲ್ಲವೇ? ಅದೇ ರೀತಿಯಲ್ಲಿ ಸಭಾ ಹಿರಿಯರು, ‘ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸಬೇಕು.’ (ಅ. ಕಾ. 20:28) ಪ್ರತಿಯೊಂದು ಕುರಿಯೂ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತದಿಂದ ಕೊಂಡುಕೊಳ್ಳಲ್ಪಟ್ಟಿದೆ ಎನ್ನುವುದನ್ನು ಅವರು ಮನಸ್ಸಿನಲ್ಲಿಡುತ್ತಾರೆ. ಮಂದೆಯ ವಿಷಯದಲ್ಲಿ ಲೆಕ್ಕ ಒಪ್ಪಿಸಬೇಕಾಗಿರುವ ಹಿರಿಯರು ಅದನ್ನು ಪೋಷಿಸುತ್ತಾರೆ, ಸಂರಕ್ಷಿಸುತ್ತಾರೆ ಹಾಗೂ ಅದರ ಆರೈಕೆ ಮಾಡುತ್ತಾರೆ.

6. ಪ್ರಾಚೀನ ಸಮಯಗಳಲ್ಲಿ ಕುರುಬರಿಗೆ ಯಾವ ಜವಾಬ್ದಾರಿಯಿತ್ತು?

6 ಪ್ರಾಚೀನ ಸಮಯಗಳಲ್ಲಿ ಕುರುಬರಿಗಿದ್ದ ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಿ. ಅವರು ಕುರಿಮಂದೆಯನ್ನು ನೋಡಿಕೊಳ್ಳಲಿಕ್ಕಾಗಿ ಹಗಲಲ್ಲಿ ಬಿಸಿಲನ್ನೂ ಇರುಳಲ್ಲಿ ಚಳಿಯನ್ನೂ ಸಹಿಸಿಕೊಳ್ಳುತ್ತಿದ್ದರು. (ಆದಿ. 31:40) ಕುರಿಗಳಿಗಾಗಿ ತಮ್ಮ ಪ್ರಾಣವನ್ನು ಕೊಡಲೂ ಅವರು ಸಿದ್ಧರಿದ್ದರು. ಕುರುಬನಾಗಿದ್ದ ಬಾಲಕ ದಾವೀದನು ತನ್ನ ಮಂದೆಯ ಕುರಿಗಳು ಸಿಂಹ, ಕರಡಿ ಹಾಗೂ ಇನ್ನಿತರ ಕಾಡು ಮೃಗಗಳ ಬಾಯಿಗೆ ತುತ್ತಾಗದಂತೆ ರಕ್ಷಿಸಿದನು. ಈ ವಿಷಯದಲ್ಲಿ ದಾವೀದನು ಅಂದದ್ದು: “ಅದನ್ನು ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.” (1 ಸಮು. 17:34, 35) ಎಂಥ ಎದೆಗಾರಿಕೆ! ಕಾಡು ಮೃಗದ ಬಾಯಿಗೆ ಅವನೇ ಆಹಾರವಾಗುವ ಸಾಧ್ಯತೆಯಿತ್ತು! ಆದಾಗ್ಯೂ, ಕುರಿಯನ್ನು ಕಾಪಾಡಲು ಅವನು ಹಿಂದೆಸರಿಯಲಿಲ್ಲ.

7. ಸಾಂಕೇತಿಕವಾಗಿ ಹಿರಿಯರು ಕುರಿಯನ್ನು ಸೈತಾನನ ಬಾಯಿಂದ ಹೇಗೆ ಕಸಿದುಕೊಳ್ಳಬೇಕಾಗಬಹುದು?

7 ಇಂದು ಪಿಶಾಚನ ಸಿಂಹಸದೃಶ ಆಕ್ರಮಣಗಳ ವಿಷಯದಲ್ಲಿ ಹಿರಿಯರು ಎಚ್ಚರವಹಿಸಬೇಕು. ಅದಕ್ಕಾಗಿ ಹಿರಿಯರಿಗೆ ಧೈರ್ಯದ ಅಗತ್ಯವಿದೆ. ಏಕೆಂದರೆ ಅವರು ಸಾಂಕೇತಿಕವಾಗಿ ಪಿಶಾಚನ ಬಾಯಿಂದ ಕುರಿಯನ್ನು ಕಸಿದುಕೊಳ್ಳಬೇಕಾಗಬಹುದು. ಬಹುಶಃ ಆ ಸಿಂಹದ ಗದ್ದಹಿಡಿದು ಕುರಿಯನ್ನು ರಕ್ಷಿಸಬೇಕಾಗಬಹುದು. ಸೈತಾನನ ಪಾಶಗಳಿಂದ ಪ್ರಲೋಭಿಸಲ್ಪಟ್ಟು ಎಚ್ಚರವಾಗಿರಲು ತಪ್ಪಿದ ಸಹೋದರರಿಗೆ ಅವರು ಸಹಾಯ ಮಾಡಬೇಕಾಗಬಹುದು. (ಯೂದ 22, 23 ಓದಿ.) ಆದರೆ ಹಿರಿಯರು ಇದನ್ನು ಯೆಹೋವನ ಸಹಾಯವಿಲ್ಲದೆ ಯಶಸ್ವಿಯಾಗಿ ಮಾಡಲಾರರು. ಅವರು ಗಾಯಗೊಂಡ ಕುರಿಯನ್ನು ಕೋಮಲವಾಗಿ ಉಪಚರಿಸುತ್ತಾರೆ, ದೇವರ ವಾಕ್ಯದ ಹಿತವಾದ ಎಣ್ಣೆಯನ್ನು ಹಚ್ಚಿ ಗಾಯವನ್ನು ಕಟ್ಟುತ್ತಾರೆ.

8. ಹಿರಿಯರು ಮಂದೆಯನ್ನು ಎಲ್ಲಿಗೆ ಮುನ್ನಡೆಸುವರು? ಹೇಗೆ?

8 ಕುರುಬನು ತನ್ನ ಮಂದೆಯನ್ನು ಹುಲುಸಾಗಿ ಬೆಳೆದಿರುವ ಹುಲ್ಲುಗಾವಲಿಗೂ ನೀರಿರುವ ಜಾಗಕ್ಕೂ ಮುನ್ನಡೆಸುತ್ತಿದ್ದನು. ಅದೇ ರೀತಿಯಲ್ಲಿ ಹಿರಿಯರು ಮಂದೆಯನ್ನು ಸಭೆಯೆಡೆಗೆ ನಿರ್ದೇಶಿಸುತ್ತಾರೆ. ಅಲ್ಲಿ ಮಂದೆಗೆ ‘ತಕ್ಕ ಸಮಯಕ್ಕೆ ಆಹಾರ’ ಸಿಗುತ್ತದೆ. ಮಾತ್ರವಲ್ಲ ತೃಪ್ತಿಯಾಗುವಷ್ಟು ಆಹಾರವನ್ನು ಅಲ್ಲಿ ಸೇವಿಸಬಹುದು. ಆದ್ದರಿಂದಲೇ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಹಿರಿಯರು ಮಂದೆಯನ್ನು ಉತ್ತೇಜಿಸುತ್ತಾರೆ. (ಮತ್ತಾ. 24:45) ಆಧ್ಯಾತ್ಮಿಕವಾಗಿ ಅಸ್ವಸ್ಥರಾದವರು ದೇವರ ವಾಕ್ಯದ ಪೋಷಣೆಯನ್ನು ತೆಗೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಹಿರಿಯರು ಹೆಚ್ಚಿನ ಸಮಯವನ್ನು ವ್ಯಯಿಸಬೇಕಾದೀತು. ಮಂದೆಯಿಂದ ದೂರಸರಿದ ಕುರಿಯೊಂದು ಮಂದೆಗೆ ಮರಳಿಬರಲು ಪ್ರಯತ್ನಿಸುತ್ತಿರಬಹುದು. ಅಂಥ ಸಂದರ್ಭಗಳಲ್ಲಿ ಹಿರಿಯರು ತಮ್ಮ ಆ ಸಹೋದರನನ್ನು ಬೆದರಿಸದೆ, ಬೈಬಲ್‌ ಮೂಲತತ್ತ್ವಗಳನ್ನು ಪ್ರೀತಿಯಿಂದ ವಿವರಿಸುವರು. ಹಾಗೂ ಅವುಗಳನ್ನು ಜೀವನದಲ್ಲಿ ಹೇಗೆ ಅಳವಡಿಸಬಹುದೆಂದು ಅವನಿಗೆ ತೋರಿಸಿಕೊಡುವರು.

9, 10. ಆಧ್ಯಾತ್ಮಿಕವಾಗಿ ಅಸ್ವಸ್ಥರಾದವರ ಆರೈಕೆಯನ್ನು ಹಿರಿಯರು ಹೇಗೆ ಮಾಡಬೇಕು?

9 ಅಸ್ವಸ್ಥರಾದಾಗ ನೀವು ಯಾವ ರೀತಿಯ ವೈದ್ಯರ ಬಳಿ ಹೋಗಲು ಬಯಸುವಿರಿ? ನಿಮ್ಮ ಸಮಸ್ಯೆಯನ್ನು ಪೂರ್ತಿ ಕೇಳಿಸಿಕೊಳ್ಳದೆ ನೋಡಿದಾಕ್ಷಣ ಔಷಧಿ ಕೊಟ್ಟು ಕಳುಹಿಸಿಬಿಡುವವನ ಬಳಿಯೋ? ಅಥವಾ ನೀವು ಹೇಳುವುದನ್ನೆಲ್ಲಾ ಕೇಳಿ, ನಿಮ್ಮ ಅಸ್ವಸ್ಥತೆಗೆ ಕಾರಣವನ್ನು ತಿಳಿಸಿ ಔಷಧಿ ಕೊಡುವವನ ಬಳಿಯೋ?

10 ಹಾಗೆಯೇ ಹಿರಿಯರು ಆಧ್ಯಾತ್ಮಿಕವಾಗಿ ಅಸ್ವಸ್ಥನಾದ ವ್ಯಕ್ತಿಗೆ ಕಿವಿಗೊಟ್ಟು, ಗಾಯ ಗುಣವಾಗಲು ಸಹಾಯಮಾಡುತ್ತಾರೆ. ಹೀಗೆ ಸಾಂಕೇತಿಕವಾಗಿ ‘ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚುತ್ತಾರೆ.’ (ಯಾಕೋಬ 5:14, 15 ಓದಿ.) ಗಿಲ್ಯಾದಿನ ಔಷಧದಂತೆಯೇ ದೇವರ ವಾಕ್ಯವು ಅಸ್ವಸ್ಥನನ್ನು ಗುಣಪಡಿಸಬಲ್ಲದು. (ಯೆರೆ. 8:22; ಯೆಹೆ. 34:16) ಆಧ್ಯಾತ್ಮಿಕವಾಗಿ ಅಸ್ಥಿರನಾದವನು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವಲ್ಲಿ ಸಮತೋಲನವನ್ನು ಮರಳಿಪಡೆಯುವನು. ಹೌದು, ಅಸ್ವಸ್ಥ ವ್ಯಕ್ತಿಯ ಚಿಂತೆಗಳಿಗೆ ಕಿವಿಗೊಟ್ಟು ಅವನೊಂದಿಗೆ ಪ್ರಾರ್ಥಿಸುವಾಗ ಹಿರಿಯರು ಹೆಚ್ಚಿನ ಒಳಿತನ್ನು ಸಾಧಿಸಬಲ್ಲರು.

ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ

11. ದೇವರ ಮಂದೆಯನ್ನು ಇಚ್ಛಾಪೂರ್ವಕವಾಗಿ ಪರಿಪಾಲಿಸುವಂತೆ ಹಿರಿಯರನ್ನು ಯಾವುದು ಪ್ರೇರಿಸುತ್ತದೆ?

11 ಪೇತ್ರನು ತದನಂತರ ಹಿರೀಪುರುಷರಿಗೆ ಪರಿಪಾಲನೆಯ ಕೆಲಸವನ್ನು ಹೇಗೆ ಮಾಡಬೇಕು, ಹೇಗೆ ಮಾಡಬಾರದು ಎಂಬದನ್ನು ತಿಳಿಸಿದನು. ಹಿರಿಯರು ದೇವರ ಮಂದೆಯನ್ನು “ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ” ಪರಿಪಾಲಿಸಬೇಕು. ತಮ್ಮ ಸಹೋದರರ ಸೇವೆಯನ್ನು ಇಚ್ಛಾಪೂರ್ವಕವಾಗಿ ಮಾಡಲು ಹಿರಿಯರನ್ನು ಯಾವುದು ಪ್ರೇರಿಸುತ್ತದೆ? ಯೇಸುವಿನ ಕುರಿಗಳನ್ನು ಮೇಯಿಸಲು ಹಾಗೂ ಪಾಲಿಸಲು ಪೇತ್ರನನ್ನು ಯಾವುದು ಪ್ರೇರಿಸಿತು? ಕರ್ತನ ಮೇಲೆ ಅವನಿಗಿದ್ದ ಪ್ರೀತಿ ಹಾಗೂ ಮಮತೆಯೇ. (ಯೋಹಾ. 21:15-17) ಹಿರಿಯರಲ್ಲೂ ಅಂಥ ಪ್ರೀತಿಯಿದೆ. ಆದ್ದರಿಂದಲೇ ಅವರು ‘ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತವನಿಗಾಗಿ ಜೀವಿಸುತ್ತಾರೆ.’ (2 ಕೊರಿಂ. 5:14, 15) ಈ ಪ್ರೀತಿಯೊಂದಿಗೆ ದೇವರ ಮತ್ತು ಸಹೋದರರ ಮೇಲಿನ ಪ್ರೀತಿಯು ಮಂದೆಯ ಆರೈಕೆ ಮಾಡುವಂತೆ ಹಿರಿಯರನ್ನು ಪ್ರೇರಿಸುತ್ತದೆ. ಆ ಕಾರಣದಿಂದಲೇ ಅವರು ತಮ್ಮ ಶಕ್ತಿ, ಸಂಪನ್ಮೂಲ ಹಾಗೂ ಸಮಯವನ್ನು ಸಹೋದರರಿಗಾಗಿ ಅರ್ಪಿಸುತ್ತಾರೆ. (ಮತ್ತಾ. 22:37-39) ಅವರು ತಮ್ಮನ್ನೇ ನೀಡಿಕೊಳ್ಳುತ್ತಾರೆ; ಒಲ್ಲದ ಮನಸ್ಸಿನಿಂದಲ್ಲ, ಇಚ್ಛಾಪೂರ್ವಕವಾಗಿ.

12. ಅಪೊಸ್ತಲ ಪೌಲನು ಎಷ್ಟರಮಟ್ಟಿಗೆ ತನ್ನನ್ನೇ ನೀಡಿಕೊಂಡನು?

12 ಹಿರಿಯರು ಎಷ್ಟರಮಟ್ಟಿಗೆ ತಮ್ಮನ್ನೇ ನೀಡಿಕೊಳ್ಳಬೇಕು? ಕುರಿಗಳನ್ನು ನೋಡಿಕೊಳ್ಳುವ ವಿಷಯದಲ್ಲಿ ಯೇಸುವನ್ನು ಅನುಕರಿಸಿದ ಅಪೊಸ್ತಲ ಪೌಲನನ್ನು ಅವರು ಅನುಕರಿಸುತ್ತಾರೆ. (1 ಕೊರಿಂ. 11:1) ಪೌಲನಿಗೂ ಅವನ ಸಂಗಡಿಗರಿಗೂ ಥೆಸಲೊನೀಕದ ಸಹೋದರರ ಕಡೆಗೆ ಕೋಮಲ ಮಮತೆಯಿತ್ತು. ಆದ್ದರಿಂದ ಅವರು ಆ ಸಹೋದರರಿಗೆ ‘ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ತಮ್ಮ ಸ್ವಂತ ಪ್ರಾಣಗಳನ್ನೇ ಕೊಡುವುದಕ್ಕೂ’ ಸಂತೋಷಿಸಿದರು. “ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ” ಅವರ ಮಧ್ಯೆ ವಾತ್ಸಲ್ಯದಿಂದ ನಡೆದುಕೊಂಡರು. (1 ಥೆಸ. 2:7, 8) ಹಾಲುಣಿಸುವ ತಾಯಿಗೆ ತನ್ನ ಮಗುವಿನ ಕಡೆಗೆ ಯಾವ ಭಾವನೆಗಳಿರುತ್ತವೆ ಎಂಬದು ಪೌಲನಿಗೆ ಗೊತ್ತಿತ್ತು. ಮಗುವಿಗಾಗಿ ಆಕೆ ಏನು ಬೇಕಾದರೂ ಮಾಡಲು ಸಿದ್ಧಳಿರುವಳು. ಅದಕ್ಕೆ ಹಾಲುಣಿಸಲು ಮಧ್ಯರಾತ್ರಿ ಏಳಬೇಕಾಗಿ ಬಂದರೂ ಆಕೆ ಬೇಸರಿಸಳು.

13. ಹಿರಿಯರು ಯಾವ ಸಮತೋಲನ ಕಾಪಾಡಿಕೊಳ್ಳಬೇಕು?

13 ಪರಿಪಾಲನೆಯ ಜವಾಬ್ದಾರಿಗಳು ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆ ಹಿರಿಯರು ಸಮತೋಲನ ಕಾಪಾಡಿಕೊಳ್ಳಬೇಕು. (1 ತಿಮೊ. 5:8) ಹಿರಿಯರು ಸಭೆಯೊಂದಿಗೆ ಕಳೆಯುವ ಸಮಯ ಬಹುಮೂಲ್ಯವಾದದ್ದು. ಏಕೆಂದರೆ ಅವರು ತಮ್ಮ ಕುಟುಂಬದೊಂದಿಗೆ ಕಳೆಯಬಹುದಾಗಿದ್ದ ಸಮಯವನ್ನು ಸಭೆಗಾಗಿ ವಿನಿಯೋಗಿಸುತ್ತಿದ್ದಾರೆ. ಹಿರಿಯರು ತಮ್ಮ ಎರಡೂ ಜವಾಬ್ದಾರಿಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಬಹುದಾದ ಒಂದು ವಿಧವು ತಾವು ಕುಟುಂಬ ಆರಾಧನೆಯ ಸಂಜೆಯನ್ನು ನಡೆಸುವಾಗ ಇತರರನ್ನೂ ಆಮಂತ್ರಿಸುವುದೇ. ಜಪಾನಿನಲ್ಲಿನ ಮೆಸಾನ್ಯೋ ಎಂಬ ಹಿರಿಯನು ಅವಿವಾಹಿತರನ್ನು ಹಾಗೂ ಯಾರ ತಂದೆಯಂದಿರು ಸತ್ಯದಲ್ಲಿಲ್ಲವೋ ಅಂಥವರ ಕುಟುಂಬಗಳನ್ನು ಅನೇಕ ವರ್ಷಗಳಿಂದ ತನ್ನ ಕುಟುಂಬ ಅಧ್ಯಯನಕ್ಕೆ ಆಮಂತ್ರಿಸುತ್ತಿದ್ದನು. ಅವರಲ್ಲಿ ಕೆಲವರು ಕಾಲಾನಂತರ ಹಿರಿಯರಾದರು ಮತ್ತು ಮೆಸಾನ್ಯೋನ ಉತ್ತಮ ಮಾದರಿಯನ್ನು ಅನುಕರಿಸಲಾರಂಭಿಸಿದರು.

ಅಪ್ರಾಮಾಣಿಕ ಲಾಭಕ್ಕಾಗಿ ಅಲ್ಲ, ಸಿದ್ಧಮನಸ್ಸಿನಿಂದ ಪರಿಪಾಲನೆ ಮಾಡಿರಿ

14, 15. ‘ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯ’ ವಿರುದ್ಧ ಹಿರಿಯರು ಏಕೆ ಎಚ್ಚರವಾಗಿರಬೇಕು? ಈ ವಿಷಯದಲ್ಲಿ ಅವರು ಪೌಲನನ್ನು ಹೇಗೆ ಅನುಕರಿಸಬಲ್ಲರು?

14 “ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ” ಮಂದೆಯನ್ನು ಪರಿಪಾಲಿಸಿರಿ ಎಂದೂ ಪೇತ್ರನು ಹಿರಿಯರನ್ನು ಉತ್ತೇಜಿಸಿದನು. ಹಿರಿಯರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಬಹಳ ಸಮಯ ಕೊಡಬೇಕಾಗುತ್ತದಾದರೂ ಅವರು ಅದಕ್ಕಾಗಿ ಸಂಬಳವನ್ನು ನಿರೀಕ್ಷಿಸುವುದಿಲ್ಲ. “ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದ” ಮಂದೆಯನ್ನು ಪರಿಪಾಲಿಸುವ ಅಪಾಯದ ಕುರಿತು ತನ್ನ ಜೊತೆ ಹಿರೀಪುರುಷರಿಗೆ ಎಚ್ಚರಿಕೆ ನೀಡುವ ಅಗತ್ಯವನ್ನು ಪೇತ್ರನು ಮನಗಂಡನು. ಇಂದು ‘ಮಹಾ ಬಾಬೆಲಿನ’ ಧಾರ್ಮಿಕ ನಾಯಕರುಗಳು ಭೋಗಾಸಕ್ತ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕೈಕೆಳಗಿರುವ ಅನೇಕ ಜನರಾದರೋ ಬಡತನದಲ್ಲೇ ಜೀವನ ಸವೆಯಿಸುತ್ತಿದ್ದಾರೆ. ಇದು, ಈ ನಾಯಕರು ಪೇತ್ರನ ಬುದ್ಧಿವಾದವನ್ನು ಪಾಲಿಸುತ್ತಿಲ್ಲವೆಂದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. (ಪ್ರಕ. 18:2, 3) ಸಕಾರಣದಿಂದಲೇ ಇಂದಿರುವ ಹಿರಿಯರು ಆ ವಿಷಯದಲ್ಲಿ ಎಚ್ಚರದಿಂದಿರಬೇಕು.

15 ಕ್ರೈಸ್ತ ಹಿರಿಯರಿಗೆ ಪೌಲನು ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾನೆ. ಅಪೊಸ್ತಲನಾಗಿದ್ದ ಪೌಲನು ಥೆಸಲೊನೀಕದ ಕ್ರೈಸ್ತರ ಮೇಲೆ “ಅತಿ ಖರ್ಚಿನ ಭಾರವನ್ನು” ಹೊರಿಸಬಹುದಿತ್ತಾದರೂ ಅವನು “ಉಚಿತವಾಗಿ ಯಾರ ಬಳಿಯೂ ಊಟಮಾಡಲಿಲ್ಲ.” ಬದಲಾಗಿ, ‘ಹಗಲೂರಾತ್ರಿ ಕಷ್ಟದಿಂದಲೂ ಪರಿಶ್ರಮದಿಂದಲೂ ಕೆಲಸಮಾಡಿದನು.’ (2 ಥೆಸ. 3:8) ಈ ವಿಷಯದಲ್ಲಿ ಪ್ರಸ್ತುತ ದಿನಗಳ ಅನೇಕ ಹಿರಿಯರು ಹಾಗೂ ಸಂಚರಣ ಕೆಲಸದಲ್ಲಿರುವವರು ಸಹ ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾರೆ. ಅವರು ಜೊತೆ ವಿಶ್ವಾಸಿಗಳಿಂದ ಅತಿಥಿಸತ್ಕಾರವನ್ನು ಸ್ವೀಕರಿಸುವುದಾದರೂ ಯಾರ ಮೇಲೂ “ಅತಿ ಖರ್ಚಿನ ಭಾರವನ್ನು” ಹಾಕುವುದಿಲ್ಲ.—1 ಥೆಸ. 2:9.

16. “ಸಿದ್ಧಮನಸ್ಸಿನಿಂದ” ಮಂದೆಯನ್ನು ಪರಿಪಾಲಿಸುವುದರ ಅರ್ಥವೇನು?

16 ಹಿರಿಯರು “ಸಿದ್ಧಮನಸ್ಸಿನಿಂದ” ಮಂದೆಯನ್ನು ಪರಿಪಾಲಿಸುತ್ತಾರೆ. ಮಂದೆಗೆ ಸಹಾಯ ನೀಡಲು ಅವರು ತೋರಿಸುವ ಸ್ವತ್ಯಾಗದ ಮನೋಭಾವದಲ್ಲಿ ಅವರ ಸಿದ್ಧಮನಸ್ಸು ತೋರಿಬರುತ್ತದೆ. ಇದರರ್ಥ, ಪ್ರೀತಿಪರ ಹಿರಿಯರು ಯೆಹೋವನ ಸೇವೆಮಾಡುವಂತೆ ಮಂದೆಯ ಮೇಲೆ ಒತ್ತಡಹೇರುತ್ತಾರೆಂದಲ್ಲ. ಇಲ್ಲವೆ, ಸ್ಪರ್ಧಾತ್ಮಕ ಮನೋಭಾವದಿಂದ ದೇವರ ಸೇವೆಮಾಡುವಂತೆ ಇತರರನ್ನು ಉತ್ತೇಜಿಸುತ್ತಾರೆಂದಲ್ಲ. (ಗಲಾ. 5:26) ಪ್ರತಿಯೊಂದು ಕುರಿಯೂ ಭಿನ್ನ ಎಂಬುದನ್ನು ಹಿರಿಯರು ಅರ್ಥಮಾಡಿಕೊಳ್ಳುತ್ತಾರೆ. ಸಂತೋಷದಿಂದ ಯೆಹೋವನ ಸೇವೆಮಾಡುವಂತೆ ತಮ್ಮ ಸಹೋದರರಿಗೆ ನೆರವು ನೀಡಲು ಅವರು ಸಿದ್ಧಮನಸ್ಸುಳ್ಳವರಾಗಿದ್ದಾರೆ.

ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ

17, 18. (ಎ) ದೀನತೆಯ ಕುರಿತ ಯೇಸುವಿನ ಬೋಧನೆಯನ್ನು ಗ್ರಹಿಸಲು ಅಪೊಸ್ತಲರಿಗೆ ಕೆಲವೊಮ್ಮೆ ಕಷ್ಟವಾಯಿತೇಕೆ? (ಬಿ) ತದ್ರೀತಿಯ ಯಾವ ಸನ್ನಿವೇಶ ನಮಗೆ ಎದುರಾಗಬಹುದು?

17 ನಾವು ಈಗಾಗಲೇ ಚರ್ಚಿಸಿರುವಂತೆ, ತಾವು ಪರಿಪಾಲಿಸುತ್ತಿರುವ ಮಂದೆಯು ತಮ್ಮ ಸ್ವಂತದ್ದಲ್ಲ, ದೇವರದ್ದು ಎನ್ನುವುದನ್ನು ಹಿರಿಯರು ಯಾವಾಗಲೂ ಮನಸ್ಸಿನಲ್ಲಿಡಬೇಕು. ‘ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡದಿರಲು’ ಅವರು ಜಾಗ್ರತೆವಹಿಸುತ್ತಾರೆ. (1 ಪೇತ್ರ 5:3 ಓದಿ.) ಕೆಲವೊಮ್ಮೆ ಯೇಸುವಿನ ಅಪೊಸ್ತಲರು ತಪ್ಪಾದ ಹೇತುಗಳನ್ನು ಹೊಂದಿದ್ದರು. ಅನ್ಯಜನಾಂಗಗಳನ್ನು ಆಳುವವರಂತೆಯೇ ಅಧಿಕಾರಯುತ ಸ್ಥಾನವನ್ನು ಹೊಂದಲು ಅವರು ಬಯಸಿದರು.—ಮಾರ್ಕ 10:42-45 ಓದಿ.

18 ಇಂದು, “ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ” ಸಹೋದರರು ತಮಗೆ ನಿಜವಾಗಿಯೂ ಯಾವ ಹೇತುಗಳಿವೆ ಎಂದು ಸ್ವಪರೀಕ್ಷೆ ಮಾಡಿಕೊಳ್ಳಬೇಕು. (1 ತಿಮೊ. 3:1) ಈಗಾಗಲೇ ಹಿರಿಯರಾಗಿರುವವರು ಸಹ, ಅಪೊಸ್ತಲರಲ್ಲಿದ್ದಂತೆ ಅಧಿಕಾರ ಅಥವಾ ಪ್ರಸಿದ್ಧಿಯನ್ನು ಪಡೆಯುವ ಹೆಬ್ಬಯಕೆ ತಮ್ಮಲ್ಲಿದೆಯೋ ಎಂಬದನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಬೇಕು. ಈ ವಿಷಯದಲ್ಲಿ ಅಪೊಸ್ತಲರಿಗೇ ಸಮಸ್ಯೆಯಿದ್ದಿರುವಲ್ಲಿ, ಹಿರಿಯರು ಸಹ ಇತರರ ಮೇಲೆ ಅಧಿಕಾರ ಚಲಾಯಿಸುವ ಲೋಕದ ಮನೋಭಾವ ತಮ್ಮೊಳಗೆ ನುಸುಳದಂತೆ ನೋಡಿಕೊಳ್ಳಲು ಪ್ರಯಾಸಪಡಬೇಕಲ್ಲವೇ?

19. ಮಂದೆಯನ್ನು ರಕ್ಷಿಸಲಿಕ್ಕಾಗಿ ಕ್ರಮಕೈಗೊಳ್ಳುವಾಗ ಹಿರಿಯರು ಏನನ್ನು ನೆನಪಿನಲ್ಲಿಡಬೇಕು?

19 ಕೆಲವೊಮ್ಮೆ ಹಿರಿಯರು ದೃಢವಾದ ಹೆಜ್ಜೆ ತೆಗೆದುಕೊಳ್ಳಬೇಕಾಗಬಹುದು. ಉದಾಹರಣೆಗೆ “ಕ್ರೂರವಾದ ತೋಳಗಳು” ಬಂದಾಗ ಅವುಗಳಿಂದ ಮಂದೆಯನ್ನು ರಕ್ಷಿಸಲು ಅವರು ಹಾಗೆ ಮಾಡಬೇಕಾದೀತು. (ಅ. ಕಾ. 20:28-30) ಪೌಲನು ತೀತನಿಗೆ, “ಪೂರ್ಣ ಅಧಿಕಾರದೊಂದಿಗೆ ಬುದ್ಧಿಹೇಳುತ್ತಾ ಖಂಡಿಸುತ್ತಾ ಇರು” ಎಂದು ಹೇಳಿದನು. (ತೀತ 2:15) ಆದರೂ ಅಂಥ ಕ್ರಮಕೈಗೊಳ್ಳಬೇಕಾದಾಗಲೂ ಒಳಗೂಡಿರುವ ವ್ಯಕ್ತಿಯೊಂದಿಗೆ ಹಿರಿಯರು ಗೌರವದಿಂದ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಹೃದಯಗಳನ್ನು ತಲುಪುವುದರಲ್ಲಿ ಮತ್ತು ಸರಿಯಾದ ದಾರಿಯಲ್ಲಿ ನಡೆಯುವಂತೆ ಒಬ್ಬನನ್ನು ಪ್ರೇರಿಸುವುದರಲ್ಲಿ ನಿಷ್ಠುರವಾಗಿ ಟೀಕಿಸುವುದಕ್ಕಿಂತ ಕೋಮಲವಾಗಿ ವಿಚಾರಗಳನ್ನು ಮನಗಾಣಿಸುವುದೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಅವರು ಗ್ರಹಿಸುವರು.

20. ಅತ್ಯುತ್ತಮ ಮಾದರಿಯನ್ನಿಡುವುದರಲ್ಲಿ ಹಿರಿಯರು ಹೇಗೆ ಯೇಸುವನ್ನು ಅನುಕರಿಸಬಹುದು?

20 ಕ್ರಿಸ್ತನ ಅತ್ಯುತ್ತಮ ಮಾದರಿಯು ಮಂದೆಯನ್ನು ಪ್ರೀತಿಸುವಂತೆ ಹಿರಿಯರಿಗೆ ಸ್ಫೂರ್ತಿಯಾಗಿದೆ. (ಯೋಹಾ. 13:12-15) ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಅವನು ತನ್ನ ಶಿಷ್ಯರಿಗೆ ಹೇಗೆ ಕಲಿಸಿದನು ಎನ್ನುವುದನ್ನು ಓದುವಾಗ ನಮ್ಮ ಹೃದಯ ಹುರಿದುಂಬಿಸಲ್ಪಡುತ್ತದೆ. ದೀನತೆಯ ವಿಷಯದಲ್ಲಿ ಅವನಿಟ್ಟ ಮಾದರಿಯು ಶಿಷ್ಯರ ಹೃದಯಗಳನ್ನು ಸ್ಪರ್ಶಿಸಿತು. ‘ದೀನಮನಸ್ಸಿನಿಂದ ಇತರರನ್ನು ತಮಗಿಂತಲೂ ಶ್ರೇಷ್ಠರೆಂದು ಎಣಿಸುವ’ ಮಾರ್ಗಕ್ರಮವನ್ನು ಅನುಸರಿಸುವಂತೆ ಅವರನ್ನು ಪ್ರೇರಿಸಿತು. (ಫಿಲಿ. 2:3) ಅಂತೆಯೇ ಇಂದು ಹಿರಿಯರೂ ಯೇಸುವಿನ ಮಾದರಿಯನ್ನು ಅನುಸರಿಸಲು ಪ್ರೇರಿಸಲ್ಪಟ್ಟಿದ್ದಾರೆ. ಹೀಗೆ ಅವರೂ ‘ಮಂದೆಗೆ ಮಾದರಿಗಳಾಗಿರಲು’ ಬಯಸುತ್ತಾರೆ.

21. ಹಿರಿಯರು ಯಾವ ಪ್ರತಿಫಲವನ್ನು ಎದುರುನೋಡಬಹುದು?

21 ಪೇತ್ರನು ಹಿರೀಪುರುಷರಿಗೆ ಕೊಟ್ಟ ಬುದ್ಧಿವಾದವನ್ನು ಭವಿಷ್ಯತ್ತಿನ ಒಂದು ವಾಗ್ದಾನದ ಬಗ್ಗೆ ತಿಳಿಸುತ್ತಾ ಕೊನೆಗೊಳಿಸಿದನು. (1 ಪೇತ್ರ 5:4 ಓದಿ.) ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಅಭಿಷಿಕ್ತ ಮೇಲ್ವಿಚಾರಕರು ‘ಬಾಡಿಹೋಗದ ಮಹಿಮೆಯ ಕಿರೀಟವನ್ನು ಹೊಂದುವರು.’ ‘ಬೇರೆ ಕುರಿಗಳ’ ಉಪಕುರುಬರು ‘ಮುಖ್ಯ ಕುರುಬನ’ ಆಳ್ವಿಕೆಯ ಕೆಳಗೆ ಭೂಮಿಯಲ್ಲಿ ದೇವರ ಮಂದೆಯನ್ನು ಪರಿಪಾಲಿಸುವ ಸುಯೋಗವನ್ನು ಹೊಂದುವರು. (ಯೋಹಾ. 10:16) ಮುಂದಾಳುತ್ವ ವಹಿಸಲು ನೇಮಿತರಾದವರಿಗೆ ಸಭೆಯ ಸದಸ್ಯರು ಯಾವ ವಿಧಗಳಲ್ಲಿ ಬೆಂಬಲ ನೀಡಬಹುದು? ಇದನ್ನು ಮುಂದಿನ ಲೇಖನ ಚರ್ಚಿಸುವುದು.

ಪುನರವಲೋಕನಕ್ಕಾಗಿ

• ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸುವಂತೆ ಪೇತ್ರನು ಜೊತೆ ಹಿರಿಯರಿಗೆ ಬುದ್ಧಿವಾದ ನೀಡಿದ್ದು ಸೂಕ್ತವಾಗಿತ್ತೇಕೆ?

• ಆಧ್ಯಾತ್ಮಿಕವಾಗಿ ಅಸ್ವಸ್ಥರಾದವರನ್ನು ಹಿರಿಯರು ಹೇಗೆ ಪರಿಪಾಲಿಸಬೇಕು?

• ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸುವಂತೆ ಹಿರಿಯರನ್ನು ಯಾವುದು ಪ್ರೇರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಪ್ರಾಚೀನ ಕಾಲದ ಕುರುಬರಂತೆಯೇ ಇಂದು ಹಿರಿಯರು ತಮ್ಮ ವಶಕ್ಕೆ ಕೊಡಲ್ಪಟ್ಟಿರುವ “ಕುರಿಗಳನ್ನು” ಸಂರಕ್ಷಿಸಬೇಕು