ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

“ನನಗೀಗ ಬಿಡುಗಡೆ ಸಿಕ್ಕಿದೆ”—ಅಬಾ ಡನ್‌ಸೋ

ಜನನ: 1938

ದೇಶ: ಬೆನಿನ್‌

ಹಿಂದೆ: ವಿಗ್ರಹಾರಾಧನೆ ಮಾಡುತ್ತಿದ್ದರು

ಹಿನ್ನೆಲೆ: ನಾನು ಸೋಚಹೂವಿಯಲ್ಲಿ ಹುಟ್ಟಿ ಬೆಳೆದೆ. ನಮ್ಮ ಊರಿನ ಪಕ್ಕ ಒಂದು ದೊಡ್ಡ ಕೆರೆ ಇತ್ತು. ನಮ್ಮ ಊರಿನವರು ಮೀನು, ಪಶು, ಆಡು, ಕುರಿ, ಹಂದಿ ಮತ್ತು ಪಕ್ಷಿಗಳನ್ನ ಸಾಕುತ್ತಿದ್ದರು. ನಮ್ಮ ಊರಲ್ಲಿ ರಸ್ತೆ ಇಲ್ಲದೆ ಇರೋದ್ರಿಂದ ಜನರು ಓಡಾಡಕ್ಕೆ ದೋಣಿ ಮತ್ತು ತೆಪ್ಪವನ್ನ ಬಳಸುತ್ತಿದ್ದರು. ಸಾಮಾನ್ಯವಾಗಿ ಅಲ್ಲಿನವರು ಮರ ಮತ್ತು ಹುಲ್ಲನ್ನ ಬಳಸಿ ಮನೆ ಕಟ್ಟುತ್ತಿದ್ದರು. ಆದರೆ ಕೆಲವರು ಇಟ್ಟಿಗೆಗಳನ್ನ ಬಳಸಿ ಮನೆ ಕಟ್ಟುತ್ತಿದ್ದರು. ನಮ್ಮ ಊರಲ್ಲಿ ಹೆಚ್ಚಿನವರು ಬಡವರಾಗಿದ್ದರೂ ಪಟ್ಟಣಗಳಲ್ಲಿ ನಡೆಯುವಷ್ಟು ಅಪರಾಧಗಳು ಇಲ್ಲಿ ನಡೆಯುತ್ತಿರಲಿಲ್ಲ.

ನಾನು ಚಿಕ್ಕವಳಾಗಿದ್ದಾಗ ಅಪ್ಪ, ನನ್ನನ್ನ ಮತ್ತು ಅಕ್ಕನನ್ನ ಫೇಟಿಶ್‌ ಕಾನ್ವೆಂಟಿಗೆ ಸೇರಿಸಿದ್ರು. ಅಲ್ಲಿ ಮಾಟಮಂತ್ರವನ್ನ, ಅಲ್ಲಿನ ಸಂಸ್ಕೃತಿಯನ್ನ ಕಲಿಸುತ್ತಿದ್ದರು. ದೊಡ್ಡವಳಾದ ಮೇಲೆ ಯೆರೊಬಾ ಸಂಸ್ಕೃತಿಯ ಡುಡುವಾ (ಅಡುಡುವಾ) ದೇವರನ್ನ ಆರಾಧನೆ ಮಾಡಕ್ಕೆ ಶುರುಮಾಡಿದೆ. ಆ ದೇವರಿಗೋಸ್ಕರ ಒಂದು ಗುಡಿ ಕಟ್ಟಿದೆ. ಅಲ್ಲಿ ಸುವರ್ಣ ಗೆಡ್ಡೆ, ತಾಳೆ ಎಣ್ಣೆ, ಒಂದು ಜಾತಿಯ ಬಸವನ ಹುಳು, ಕೋಳಿ, ಪಾರಿವಾಳ ಮತ್ತು ಬೇರೆ ಪ್ರಾಣಿಗಳನ್ನ ಅರ್ಪಿಸುತ್ತಿದ್ದೆ. ಇದಕ್ಕೆಲ್ಲ ತುಂಬ ಖರ್ಚು ಆಗುತ್ತಿದ್ದರೂ ಇದನ್ನೆಲ್ಲಾ ಅರ್ಪಿಸುತ್ತಿದ್ದೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌: ಬೈಬಲ್‌ ಕಲಿಯಕ್ಕೆ ಶುರುಮಾಡಿದಾಗ ಯೆಹೋವನೊಬ್ಬನೇ ಸತ್ಯ ದೇವರು ಮತ್ತು ಆತನು ವಿಗ್ರಹಾರಾಧನೆಯನ್ನ ಇಷ್ಟಪಡೋದಿಲ್ಲ ಅಂತ ಕಲಿತುಕೊಂಡೆ. (ವಿಮೋಚನಕಾಂಡ 20:4, 5; 1 ಕೊರಿಂಥ 10:14) ಅದಕ್ಕೇ ವಿಗ್ರಹಗಳನ್ನ ಮತ್ತು ವಿಗ್ರಹಾರಾಧನೆಗೆ ಸಂಬಂಧಪಟ್ಟ ಎಲ್ಲವನ್ನ ಎಸೆದುಬಿಟ್ಟೆ. ಭವಿಷ್ಯ ಹೇಳೋರ ಹತ್ತಿರ ಹೋಗೋದನ್ನ ನಿಲ್ಲಿಸಿಬಿಟ್ಟೆ. ಶವಸಂಸ್ಕಾರಕ್ಕೆ ಸಂಬಂಧಪಟ್ಟ ಆಚರಣೆಗಳನ್ನ ಮತ್ತು ವಿಗ್ರಹಾರಾಧನೆಗೆ ಸಂಬಂಧಪಟ್ಟ ಆಚಾರವಿಚಾರಗಳನ್ನ ನಿಲ್ಲಿಸಿಬಿಟ್ಟೆ.

60 ವರ್ಷ ದಾಟಿದ ನನಗೆ ಈ ಬದಲಾವಣೆಗಳನ್ನ ಮಾಡಿಕೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ. ನನ್ನ ಸ್ನೇಹಿತರಿಂದ, ಸಂಬಂಧಿಕರಿಂದ ಮತ್ತು ಅಕ್ಕಪಕ್ಕದ ಮನೆಯವರಿಂದ ತುಂಬ ವಿರೋಧ ಇತ್ತು. ಅವರು ನಂಗೆ ಗೇಲಿನೂ ಮಾಡುತ್ತಿದ್ದರು. ಆದರೆ ಸರಿಯಾಗಿರೋದನ್ನ ಮಾಡಕ್ಕೆ ಬೇಕಾದ ಬಲಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆ. ಜ್ಞಾನೋಕ್ತಿ 18:10ರಲ್ಲಿ ಇರುವ ಮಾತು ನಂಗೆ ತುಂಬ ಸಾಂತ್ವನ ಕೊಟ್ಟಿತು. ಅಲ್ಲಿ ಹೀಗಿದೆ, “ಯೆಹೋವನ ಹೆಸ್ರು ಬಲವಾದ ಕೋಟೆ. ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.”

ಅಷ್ಟೇ ಅಲ್ಲ, ಈ ತರ ಬದಲಾವಣೆ ಮಾಡಿಕೊಳ್ಳೋಕೆ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹಾಜರಾಗಿದ್ದೂ ಸಹಾಯ ಮಾಡಿತು. ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತೀವಿ ಅಂತ ಬರೀ ಬಾಯಿ ಮಾತಲ್ಲಿ ಹೇಳುತ್ತಿರಲಿಲ್ಲ ಬದಲಿಗೆ ನಡತೆಯಲ್ಲಿ ತೋರಿಸುತ್ತಿದ್ದರು. ಬೈಬಲಿನಲ್ಲಿರೋ ನೀತಿ ನಿಯಮಗಳನ್ನ ತಮ್ಮಿಂದಾದಷ್ಟು ಪಾಲಿಸೋಕೆ ಅವರು ಪ್ರಯತ್ನ ಮಾಡುತ್ತಿರುವುದನ್ನ ನೋಡಿ ನಂಗೆ ತುಂಬ ಖುಷಿ ಆಯಿತು. ಅವರ ನಡೆನುಡಿ ನೋಡಿದಾಗ ಇವರು ಸತ್ಯ ಧರ್ಮವನ್ನ ಪಾಲಿಸುತ್ತಿರೋರು ಅಂತ ಮನದಟ್ಟಾಯಿತು.

ಸಿಕ್ಕಿದ ಪ್ರಯೋಜನಗಳು: ಬೈಬಲ್‌ ತತ್ವಗಳನ್ನ ನಾನು ಜೀವನದಲ್ಲಿ ಪಾಲಿಸಿದ್ದರಿಂದ ಮಕ್ಕಳ ಜೊತೆ ಖುಷಿ ಖುಷಿಯಾಗಿದ್ದೀನಿ. ನನ್ನ ತಲೆಯಿಂದ ಒಂದು ದೊಡ್ಡ ಭಾರ ಇಳಿಸಿದಷ್ಟು ಸಮಾಧಾನ ಆಗಿದೆ. ನನ್ನ ದುಡ್ಡನ್ನೆಲ್ಲಾ ಆ ಜೀವ ಇಲ್ಲದ ವಿಗ್ರಹಗಳ ಆರಾಧನೆಗೆ ಸುರೀತಿದ್ದೆ. ಆದರೆ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಈಗ ನಾನು ಯೆಹೋವನನ್ನು ಆರಾಧಿಸುತ್ತಾ ಇದ್ದೀನಿ. ಆತನು ನನ್ನ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾನೆ. (ಪ್ರಕಟನೆ 21:3, 4) ನನಗೀಗ ಬಿಡುಗಡೆ ಸಿಕ್ಕಿದೆ. ಈಗ ನಾನು ವಿಗ್ರಹಗಳಿಗೆ ದಾಸಿ ಅಲ್ಲ, ಯೆಹೋವನಿಗೆ ದಾಸಿ ಆಗಿದ್ದೀನಿ! ಯೆಹೋವ ದೇವರ ಕೈಯಲ್ಲಿ ನಾನೀಗ ಸುರಕ್ಷಿತವಾಗಿದ್ದೀನಿ.

“ನಾನು ಬಾಲ್ಯದಲ್ಲೇ ದೇವರನ್ನ ಹುಡುಕಲು ಶುರುಮಾಡಿದ್ದೆ”—ಶಿನ್‌ಜಿ ಸ್ಯಾತೋ

ಜನನ: 1951

ದೇಶ: ಜಪಾನ್‌

ಹಿಂದೆ: ಷಿಂಟೋ ಪೂಜಾರಿ

ಹಿನ್ನೆಲೆ: ನಾನು ಜಪಾನಿನ ಫುಕುವೊಕಾ ಅನ್ನೋ ಊರಿನಲ್ಲಿ ಬೆಳೆದೆ. ನನ್ನ ಅಪ್ಪಅಮ್ಮನಿಗೆ ದೇವರ ಮೇಲೆ ತುಂಬ ಭಕ್ತಿ ಇತ್ತು. ನಾವು ಷಿಂಟೋ ದೇವರುಗಳನ್ನ ಆರಾಧಿಸುತ್ತಿದ್ವಿ. ನಾನು ಚಿಕ್ಕವನಿದ್ದಾಗ ಮುಂದೆ ನನ್ನ ಜೀವನ ಚೆನ್ನಾಗಿರಬೇಕು, ಕಷ್ಟದಲ್ಲಿರೋರಿಗೆ ಸಹಾಯ ಮಾಡಬೇಕು ಅಂತ ಇಷ್ಟಪಡ್ತಿದ್ದೆ. ಒಂದು ಸಲ ನಾನು ಸ್ಕೂಲಿನಲ್ಲಿದ್ದಾಗ ನಮ್ಮ ಟೀಚರ್‌, ‘ನೀವು ದೊಡ್ಡವರಾದ ಮೇಲೆ ಏನಾಗಬೇಕು ಅಂತ ಇಷ್ಟಪಡ್ತೀರಾ?’ ಅಂತ ಕೇಳಿದ್ರು. ಕೆಲವರೆಲ್ಲ ಇದಾಗಬೇಕು ಅದಾಗಬೇಕು, ವಿಜ್ಞಾನಿಗಳಾಗಬೇಕು ಅಂತ ತಮ್ಮ ಗುರಿಗಳನ್ನ ಹೇಳಿಕೊಳ್ಳುತ್ತಿದ್ದರು. ಆದರೆ ನಾನು ‘ದೇವರ ಸೇವಕನಾಗಬೇಕು’ ಅಂತ ಹೇಳಿದಾಗ ಕ್ಲಾಸಿನಲ್ಲಿ ಇದ್ದವರೆಲ್ಲ ನಗಾಡಿದ್ರು.

ಹೈಸ್ಕೂಲ್‌ ಆದಮೇಲೆ ನಾನು ಧರ್ಮಗುರುಗಳು ಆಗೋಕೆ ತರಬೇತಿ ಕೊಡುವ ಶಾಲೆಗೆ ಸೇರಿಕೊಂಡೆ. ನಾನಲ್ಲಿ ಇದ್ದಾಗ ಒಬ್ಬ ಷಿಂಟೋ ಪೂಜಾರಿ ಅವರ ಬಿಡುವಿನ ಸಮಯದಲ್ಲಿ ಕಪ್ಪು ಬೈಂಡ್‌ ಇರೋ ಒಂದು ಪುಸ್ತಕವನ್ನ ಓದುತ್ತಿದ್ದರು. ಒಂದಿನ ಅವರು ನಂಗೆ, ‘ನಾನೇನು ಓದುತ್ತಿದ್ದೀನಿ ಅಂತ ಗೊತ್ತಾ?’ ಅಂತ ಕೇಳಿದ್ರು. ಅದರ ಬೈಂಡ್‌ ನೋಡಿ ನಾನು ‘ಬೈಬಲ್‌’ ಅಂತ ಹೇಳಿದೆ. ಅದಕ್ಕೆ ಅವರು ನಂಗೆ, ‘ಯಾರೆಲ್ಲಾ ಷಿಂಟೋ ಪೂಜಾರಿ ಆಗಬೇಕು ಅಂತಿದ್ದಾರೋ ಅವರೆಲ್ಲಾ ಈ ಪುಸ್ತಕವನ್ನ ಓದಲೇಬೇಕು’ ಅಂತ ಹೇಳಿದ್ರು.

ಆಗಲೇ ನಾನು ಹೊರಗೆ ಹೋಗಿ ಒಂದು ಬೈಬಲನ್ನ ತಗೊಂಡೆ. ಆ ಬೈಬಲನ್ನ ನನ್ನ ಲೈಬ್ರರಿಯಲ್ಲಿ ಕಾಣೋ ತರ ಜೋಪಾನವಾಗಿ ಇಟ್ಟಿದ್ದೆ. ನಂದೇ ಓದಕ್ಕೆ ತುಂಬ ಇರುತ್ತಿತ್ತು ಅದಕ್ಕೆ ಬೈಬಲ್‌ ಓದಕ್ಕೆ ಸಮಯನೇ ಸಿಗುತ್ತಿರಲಿಲ್ಲ. ನನ್ನ ತರಬೇತಿ ಮುಗಿದ ಮೇಲೆ ಕೊನೆಗೂ ಷಿಂಟೋ ಪೂಜಾರಿಯಾದೆ. ನನ್ನ ಬಾಲ್ಯದ ಕನಸು ನನಸಾಯಿತು.

ನಾನು ಷಿಂಟೋ ಪೂಜಾರಿಯಾಗಿ ಏನೇನೋ ಮಾಡಬೇಕು ಅಂತ ಕನಸು ಕಂಡಿದ್ದೆ. ಆದರೆ ನಾನು ಅಂದುಕೊಂಡಿದ್ದೇ ಬೇರೆ, ಇಲ್ಲಿ ನಡೀತಾ ಇರೋದೇ ಬೇರೆ ಅಂತ ಆಮೇಲೆ ನಂಗೆ ಗೊತ್ತಾಯಿತು. ಹೆಚ್ಚಿನ ಪೂಜಾರಿಗಳಿಗೆ ಜನರ ಮೇಲೆ ಪ್ರೀತಿನೂ ಇರಲಿಲ್ಲ, ದೇವರ ಮೇಲೆ ನಂಬಿಕೆನೂ ಇರಲಿಲ್ಲ. ನನ್ನ ಗುರು ಒಬ್ಬರು, ‘ನೀನು ಜೀವನದಲ್ಲಿ ಉದ್ಧಾರ ಆಗಬೇಕು ಅಂದರೆ ದೇವರ ವಿಷಯ ಬಿಟ್ಟು ಬೇರೆ ಏನಾದ್ರೂ ಮಾತಾಡು’ ಅಂದರು.

ಇದನ್ನೆಲ್ಲಾ ನೋಡಿ ನಂಗೆ ಷಿಂಟೋ ಧರ್ಮದ ಬಗ್ಗೆ ತುಂಬ ಬೇಜಾರಾಯಿತು. ನಾನು ಅಲ್ಲಿ ಕೆಲಸನೂ ಮಾಡ್ತಿದ್ದೆ ಅದೇ ಸಮಯದಲ್ಲಿ ಯಾವ ಧರ್ಮದಲ್ಲಿ ಸತ್ಯ ಇದೆ ಅಂತ ಹುಡುಕುತ್ತಾ ಇದ್ದೆ. ಆದರೆ ನಂಗೆ ಸತ್ಯ ಎಲ್ಲೂ ಸಿಗಲಿಲ್ಲ. ಧರ್ಮಗಳ ಬಗ್ಗೆ ಎಷ್ಟು ತಿಳಿದುಕೊಳ್ಳುತ್ತಾ ಇದ್ದೆನೋ ಅಷ್ಟೇ ಬೇಜಾರಾಗ್ತಿತ್ತು. ಯಾವ ಧರ್ಮದಲ್ಲೂ ಸತ್ಯ ಇಲ್ಲ ಅಂತ ಅನಿಸಿಬಿಡ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌: 1988ರಲ್ಲಿ ಬೌದ್ಧ ಧರ್ಮದಲ್ಲಿದ್ದ ಒಬ್ಬ ವ್ಯಕ್ತಿ ಬೈಬಲ್‌ ಓದಕ್ಕೆ ನಂಗೆ ಪ್ರೋತ್ಸಾಹಿಸಿದರು. ಆಗ ನಂಗೆ, ಹಿಂದೆ ‘ಬೈಬಲ್‌ ಓದು’ ಅಂತ ಷಿಂಟೋ ಪೂಜಾರಿಯೊಬ್ಬರು ಹೇಳಿದ ಮಾತು ನೆನಪಾಯಿತು. ಅವತ್ತಿಂದ ನಾನು ಬೈಬಲ್‌ ಓದಕ್ಕೆ ಶುರುಮಾಡಿದೆ. ಬೈಬಲ್‌ ಓದುತ್ತಾ ಹೋದಂತೆ ಅದರಲ್ಲಿದ್ದ ವಿಷಯಗಳು ನಂಗೆ ಇಷ್ಟ ಆಯಿತು. ಕೆಲವೊಮ್ಮೆ ರಾತ್ರಿಯಿಂದ ಬೆಳಗಾಗೋ ತನಕ ಓದುತ್ತಿದ್ದೆ.

ಬೈಬಲ್‌ ಓದಿದಾಗ ಅದರಲ್ಲಿರೋ ದೇವರಿಗೆ ಪ್ರಾರ್ಥನೆ ಮಾಡಬೇಕು ಅಂತ ನಂಗೆ ಗೊತ್ತಾಯಿತು. ಹಾಗಾಗಿ ನಾನು ಮತ್ತಾಯ 6:9-13ರಲ್ಲಿ ಯೇಸು ಕಲಿಸಿದ ಪ್ರಾರ್ಥನೆಯನ್ನ ಮಾಡಕ್ಕೆ ಶುರುಮಾಡಿದೆ. ಷಿಂಟೋ ದೇವಾಲಯದಲ್ಲಿ ಕೆಲಸ ಮಾಡ್ತಿದ್ದಾಗ ಎರಡು ತಾಸಿಗೊಮ್ಮೆ ಪ್ರಾರ್ಥನೆ ಮಾಡುತ್ತಿದ್ದೆ.

ಬೈಬಲ್‌ ಓದುತ್ತಿದ್ದಂತೆ ನಂಗೆ ತುಂಬ ಪ್ರಶ್ನೆಗಳು ಬಂದವು. ನಂಗೆ ಯೆಹೋವನ ಸಾಕ್ಷಿಗಳ ಪರಿಚಯ ಇತ್ತು. ಹೇಗಂದ್ರೆ ಹಿಂದೆ ಅವರು ನನ್ನ ಹೆಂಡತಿಯನ್ನ ಭೇಟಿಯಾಗಿದ್ರು. ನಾನು ಒಬ್ಬ ಯೆಹೋವನ ಸಾಕ್ಷಿ ಹತ್ತಿರ ತುಂಬ ಪ್ರಶ್ನೆಗಳನ್ನ ಕೇಳಿದೆ. ಅವರು ಅದಕ್ಕೆಲ್ಲಾ ಬೈಬಲ್‌ನಿಂದ ಉತ್ತರ ಕೊಟ್ಟರು. ಅಷ್ಟೇ ಅಲ್ಲ ನಂಗೆ ಒಂದು ಬೈಬಲ್‌ ಸ್ಟಡಿಗಾಗಿ ಏರ್ಪಾಡು ಮಾಡಿದ್ರು.

ಸ್ವಲ್ಪದರಲ್ಲೇ ನಾನು ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋಗೋಕೆ ಶುರುಮಾಡಿದೆ. ಅಲ್ಲಿ ಹೋದ ಮೇಲೆ ಹಿಂದೆ ನಾನು ಅವರಲ್ಲಿ ಕೆಲವರ ಜೊತೆ ತುಂಬ ಒರಟಾಗಿ ನಡೆದುಕೊಂಡಿದ್ದು ನೆನಪಾಯಿತು. ಆದರೂ ಅವರು ನನ್ನನ್ನ ತುಂಬ ಪ್ರೀತಿಯಿಂದ ಸ್ವಾಗತಿಸಿದ್ರು.

ಗಂಡ ತನ್ನ ಹೆಂಡತಿ ಮಕ್ಕಳನ್ನ ಪ್ರೀತಿಸಬೇಕು, ಗೌರವಿಸಬೇಕು ಅಂತ ನಾನು ಕೂಟದಲ್ಲಿ ಕಲಿತೆ. ನಾನು ದೇವಾಲಯದ ಕೆಲಸದಲ್ಲಿ ಎಷ್ಟರಮಟ್ಟಿಗೆ ಬ್ಯುಸಿಯಾಗಿರುತ್ತಿದ್ದೆ ಅಂದರೆ ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಒಂಚೂರು ಸಮಯ ಕೊಡುತ್ತಿರಲಿಲ್ಲ. ಜನರು ದೇವಾಲಯದಲ್ಲಿ ಬಂದು ತಮ್ಮ ಕಷ್ಟಗಳನ್ನ ಹೇಳೋದನ್ನ ಕೇಳಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಹೆಂಡತಿಗೆ ನನ್ನ ಹತ್ತಿರ ಏನು ಹೇಳಬೇಕಾಗಿತ್ತೋ ಅದನ್ನ ಯಾವತ್ತೂ ಕೇಳಿಸಿಕೊಳ್ಳುತ್ತಿರಲಿಲ್ಲ.

ಬೈಬಲ್‌ ಸ್ಟಡಿ ಮಾಡ್ತಾ ಮಾಡ್ತಾ ನಾನು ದೇವರ ಬಗ್ಗೆ ತುಂಬ ವಿಷಯಗಳನ್ನ ಕಲಿತೆ. ಅದು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಸಹಾಯ ಮಾಡಿತು. ರೋಮನ್ನರಿಗೆ 10:13 ನಂಗೆ ಇಷ್ಟವಾದ ವಚನಗಳಲ್ಲಿ ಒಂದು. ಅದರಲ್ಲಿ ಹೀಗೆ ಹೇಳುತ್ತೆ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.” ನಾನು ಚಿಕ್ಕವನಿಂದನೇ ದೇವರನ್ನ ಹುಡುಕುತ್ತಿದ್ದೆ. ಕೊನೆಗೂ ಆತನು ನಂಗೆ ಸಿಕ್ಕಿದನು!

‘ಇನ್ನು ಮೇಲೆ ನಾನು ಇಲ್ಲಿ ಇರಬಾರದು’ ಅಂತ ಅನಿಸೋಕೆ ಶುರುವಾಯಿತು. ಆದರೆ ಈ ಷಿಂಟೋ ಧರ್ಮವನ್ನ ಬಿಟ್ಟು ಹೋದರೆ ‘ಬೇರೆಯವರು ನನ್ನ ಬಗ್ಗೆ ಏನಂದುಕೊಳ್ಳುತ್ತಾರೆ’ ಅನ್ನೋ ಯೋಚನೆನೂ ಕಾಡ್ತಿತ್ತು. ‘ಸತ್ಯ ದೇವರು ಯಾವಾಗ ಸಿಗ್ತಾರೋ ಆಗ ನಾನು ಬೇರೆದನ್ನೆಲ್ಲಾ ಬಿಟ್ಟುಬಿಡುತ್ತೀನಿ’ ಅಂತ ತೀರ್ಮಾನ ಮಾಡಿದ್ದೆ. ಹಾಗಾಗಿ 1989ರಲ್ಲಿ ಷಿಂಟೋ ಧರ್ಮವನ್ನ ಬಿಟ್ಟೆ ಮತ್ತು ಯೆಹೋವನ ಆರಾಧಕನಾದೆ.

ಷಿಂಟೋ ಧರ್ಮವನ್ನ ಬಿಟ್ಟುಬರೋದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಗುರುಗಳು ಇದನ್ನ ಬಿಟ್ಟು ಹೋಗಬೇಡ ಅಂತ ತುಂಬ ಒತ್ತಡ ಹಾಕಿದ್ರು, ಕೋಪ ಮಾಡಿಕೊಂಡ್ರು. ಅಷ್ಟೇ ಅಲ್ಲ ‘ನನ್ನ ಅಪ್ಪಅಮ್ಮನ ಹತ್ತಿರ ಈ ವಿಷಯ ಹೇಗೆ ಹೇಳೋದಪ್ಪಾ’ ಅನ್ನೋದೂ ಒಂದು ದೊಡ್ಡ ಚಿಂತೆಯಾಗಿತ್ತು. ಈ ವಿಷಯದ ಬಗ್ಗೆ ಮಾತಾಡಕ್ಕೆ ಮನೆಗೆ ಹೋಗುತ್ತಿರುವಾಗ ನಂಗೆ ಎಷ್ಟು ಭಯ ಆಯಿತು ಅಂದರೆ ನನ್ನ ಎದೆ ಢವಢವ ಅಂತ ಹೊಡೆದುಕೊಳ್ಳುತ್ತಿತ್ತು, ಕಾಲು ಗಡಗಡ ಅಂತ ನಡುಗುತ್ತಿತ್ತು. ದಾರಿ ಮಧ್ಯದಲ್ಲಿ ಅದೆಷ್ಟು ಸಾರಿ ನಿಂತು ದೇವರಿಗೆ ಪ್ರಾರ್ಥನೆ ಮಾಡಿದ್ನೋ ನಂಗೆ ನೆನಪೇ ಇಲ್ಲ!

ಮನೆಗೆ ಬಂದು ಸುಮಾರು ತಾಸುಗಳಾದ್ರೂ ಅಪ್ಪಅಮ್ಮ ಹತ್ತಿರ ಈ ವಿಷಯ ಹೇಳಕ್ಕೆ ತುಂಬ ಕಷ್ಟ ಆಯಿತು. ಕೊನೆಗೂ ತುಂಬ ಪ್ರಾರ್ಥನೆ ಮಾಡಿದ ಮೇಲೆ ನನ್ನ ನಂಬಿಕೆಯ ಬಗ್ಗೆ ಅಪ್ಪನ ಹತ್ತಿರ ಹೇಳಿದೆ. ‘ನಾನು ಷಿಂಟೋ ಧರ್ಮ ಬಿಡುತ್ತಾ ಇದ್ದೀನಿ, ಯಾಕಂದ್ರೆ ಸತ್ಯ ಧರ್ಮ ಯಾವುದು ಅಂತ ನಂಗೆ ಈಗ ಗೊತ್ತಾಗಿದೆ’ ಅಂತ ಹೇಳಿದೆ. ಆಗ ಅವರಿಗೆ ತುಂಬ ಶಾಕ್‌ ಆಯಿತು, ಬೇಜಾರಾಯಿತು. ನನ್ನ ಸಂಬಂಧಿಕರು ನನ್ನ ಯೋಚನೆಯನ್ನ ಬದಲಾಯಿಸಕ್ಕೆ ನೋಡಿದ್ರು. ಕುಟುಂಬದವರನ್ನ ನೋಯಿಸಕ್ಕೆ ನಂಗೆ ಇಷ್ಟ ಇರಲಿಲ್ಲ. ಆದರೆ ಅದೆಲ್ಲದಕ್ಕಿಂತ, ಯೆಹೋವನ ಸೇವೆ ಮಾಡೋದು ತುಂಬ ಪ್ರಾಮುಖ್ಯ ಅಂತ ನಂಗೆ ಗೊತ್ತಿತ್ತು. ಸ್ವಲ್ಪ ಸಮಯ ಆದಮೇಲೆ ನನ್ನ ಕುಟುಂಬದವರು ನನ್ನ ತೀರ್ಮಾನವನ್ನ ಒಪ್ಪಿಕೊಂಡರು.

ನಾನು ಷಿಂಟೋ ದೇವಾಲಯಕ್ಕೆ ಹೋಗೋದನ್ನ ಬಿಟ್ಟಿದ್ದರೂ ಅಲ್ಲಿನ ನೆನಪುಗಳು ಇನ್ನೂ ಕಾಡುತ್ತಿತ್ತು. ಎಷ್ಟರ ಮಟ್ಟಿಗೆ ಅದು ನನ್ನ ಮನಸ್ಸಿನಲ್ಲಿತ್ತು ಅಂದರೆ ಎಲ್ಲಿ ನೋಡಿದ್ರೂ ಆ ವಿಷಯಗಳೇ ನೆನಪಿಗೆ ಬರುತ್ತಿತ್ತು.

ಈ ನೆನಪುಗಳಿಂದ ಹೊರಗೆ ಬರಕ್ಕೆ ನಂಗೆ ಎರಡು ವಿಷಯಗಳು ಸಹಾಯ ಮಾಡಿದ್ವು. ಮೊದಲನೇದು, ನನ್ನ ಮನೆಯಲ್ಲಿದ್ದ ಷಿಂಟೋ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ, ಚಿತ್ರಗಳನ್ನ ಮತ್ತು ಬೆಲೆಬಾಳುವ ವಸ್ತುಗಳನ್ನ ಹುಡುಕಿ ಅದನ್ನೆಲ್ಲಾ ಸುಟ್ಟುಬಿಟ್ಟೆ. ಎರಡನೇದು, ಸಾಧ್ಯವಾದಷ್ಟು ಯೆಹೋವನ ಸಾಕ್ಷಿಗಳ ಜೊತೆ ಇರುತ್ತಿದ್ದೆ. ಹೀಗೆ ಮಾಡಿದ್ರಿಂದ ನಂಗೆ ಹಳೇ ವಿಷಯಗಳನ್ನ ಮರೆಯಕ್ಕೆ ಆಯಿತು.

ಸಿಕ್ಕಿದ ಪ್ರಯೋಜನಗಳು: ನಾನು ನನ್ನ ಹೆಂಡತಿ ಮಕ್ಕಳಿಗೆ ಸಮಯ ಕೊಡ್ತಿರಲಿಲ್ಲ. ಅದರಿಂದ ಅವರಿಗೆ ತುಂಬ ಬೇಜಾರು ಆಗುತ್ತಿತ್ತು. ಬೈಬಲ್‌ ಹೇಳೋ ಪ್ರಕಾರ ನಾನು ಅವರ ಜೊತೆ ಸಮಯ ಕಳೆಯೋಕೆ ಶುರುಮಾಡಿದಾಗ ನಾವು ಒಬ್ಬರಿಗೊಬ್ಬರು ತುಂಬ ಹತ್ತಿರ ಆದ್ವಿ. ನನ್ನ ಹೆಂಡತಿ ಕೂಡ ಸತ್ಯಕ್ಕೆ ಬಂದಳು. ಈಗ ನನ್ನ ಮಗ, ಮಗಳು, ಅಳಿಯ ಎಲ್ಲರೂ ಸೇರಿ ಯೆಹೋವನನ್ನು ಆರಾಧಿಸುತ್ತಿದ್ದೀವಿ.

ನಂಗೆ ಚಿಕ್ಕವಯಸ್ಸಿನಿಂದ ದೇವರ ಸೇವೆ ಮಾಡಬೇಕು, ಬೇರೆಯವರಿಗೆ ಸಹಾಯ ಮಾಡಬೇಕು ಅಂತ ತುಂಬ ಆಸೆ ಇತ್ತು. ನನ್ನ ಆ ಕನಸು ಈಗ ನನಸಾಗಿದೆ. ಅದಕ್ಕೆ ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ!

“ಏನೋ ಕಳೆದುಕೊಂಡಿದ್ದೀನಿ ಅಂತ ಅನಿಸುತ್ತಿತ್ತು”—ಲಿನೆಟ್‌ ಹೌಟಿನ್‌

ಜನನ: 1958

ದೇಶ: ದಕ್ಷಿಣ ಆಫ್ರಿಕ

ಹಿಂದೆ: ಯಾರೂ ಇಲ್ಲ ಅನ್ನೋ ಭಾವನೆ

ಹಿನ್ನೆಲೆ: ಜಾಸ್ತಿ ಹಿಂಸಾಕೃತ್ಯ ಇಲ್ಲದಿರೋ ಜರ್ಮಿಸ್ಟನ್‌ ಅನ್ನೋ ಊರಲ್ಲಿ ನಾನು ಹುಟ್ಟಿ ಬೆಳೆದೆ. ನಾನು ಹುಟ್ಟಿದಾಗ ಅಪ್ಪಅಮ್ಮನಿಗೆ ನನ್ನನ್ನ ನೋಡಿಕೊಳ್ಳೋಕೆ ಆಗಲ್ಲ ಅನಿಸಿತು. ಅದಕ್ಕೆ ನಾನು ಹುಟ್ಟಿದ 14 ದಿನಕ್ಕೇ ನನ್ನನ್ನ ಬೇರೆಯವರಿಗೆ ಕೊಟ್ಟರು. ನನ್ನನ್ನ ದತ್ತು ತಗೊಂಡಿದ್ದ ಅಪ್ಪಅಮ್ಮ ತುಂಬ ಒಳ್ಳೆಯವರು. ನನ್ನನ್ನ ತುಂಬ ಪ್ರೀತಿಸುತ್ತಿದ್ದರು. ಆದರೂ ಇವರು ನನ್ನ ಸ್ವಂತ ಅಪ್ಪ ಅಮ್ಮ ಅಲ್ಲ ಅಂತ ಗೊತ್ತಾದಾಗ ನನ್ನ ಹೃದಯಾನೇ ಒಡೆದು ಹೋಯಿತು. ನನಗೆ ಯಾರೂ ಇಲ್ಲ ಅಂತ ಅನಿಸಿಬಿಡ್ತು. ಇವರು ನನ್ನನ್ನ ಅರ್ಥಮಾಡಿಕೊಳ್ಳಲ್ಲ, ನಾನು ಇಲ್ಲಿ ಇರಬೇಕಾದವಳಲ್ಲ ಅಂತ ಅನಿಸಿತು.

ನನಗೆ 16 ವರ್ಷ ಆದಾಗಿನಿಂದ ಪಬ್‌ಗೆ ಹೋಗೋಕೆ ಶುರುಮಾಡಿದೆ. ಅಲ್ಲಿ ನಾನು ಕುಡೀತಾ, ಡ್ಯಾನ್ಸ್‌ ಮಾಡ್ತಾ ಫ್ರೆಂಡ್ಸ್‌ ಜೊತೆ ಸಮಯ ಕಳೆಯುತ್ತಿದ್ದೆ. 17 ವರ್ಷ ಆದಾಗ ಸಿಗರೇಟ್‌ ಸೇದೋಕೆ ಶುರುಮಾಡಿದೆ. ಸಿಗರೇಟ್‌ನ ಜಾಹೀರಾತು ಮಾಡೋ ಹುಡುಗಿಯರು ತೆಳ್ಳಗೆ ಇರುತ್ತಿದ್ದರು. ನಾನೂ ಅವರ ತರ ಆಗಬೇಕು ಅಂತ ಇಷ್ಟಪಟ್ಟೆ. ನನಗೆ 19 ವರ್ಷ ಆದಾಗ ಜೊಹಾನ್ಸ್‌ಬರ್ಗ್‌ನಲ್ಲಿ ಕೆಲಸ ಮಾಡೋಕೆ ಶುರುಮಾಡಿದೆ. ನನ್ನ ಫ್ರೆಂಡ್ಸ್‌ ಒಳ್ಳೆಯವರಾಗಿರಲಿಲ್ಲ. ಕೆಟ್ಟಕೆಟ್ಟ ಮಾತು ಕಲಿತೆ. ತುಂಬ ಸಿಗರೇಟ್‌ ಸೇದುತ್ತಾ ಇದ್ದೆ, ಸಿಕ್ಕಾಪಟ್ಟೆ ಕುಡಿಯುತ್ತಾ ಇದ್ದೆ.

ನಾನು ಫುಟ್‌ಬಾಲ್‌ ಆಡ್ತಿದ್ದೆ. ಇನ್ನೂ ಬೇರೆಬೇರೆ ಆಟಗಳನ್ನೂ ಆಡುತ್ತಿದ್ದೆ. ಕಷ್ಟಪಟ್ಟು ಕೆಲಸ ಮಾಡ್ತಿದ್ದೆ ಅದಕ್ಕೆ ‘ಕಂಪ್ಯೂಟರ್‌ ಕೆಲಸವನ್ನ ಚೆನ್ನಾಗಿ ಮಾಡ್ತಾಳೆ’ ಅಂತ ಎಲ್ಲರೂ ಹೇಳುತ್ತಿದ್ದರು. ನನಗೆ ಒಳ್ಳೇ ಸಂಬಳ ಸಿಗುತ್ತಿತ್ತು. ಬೇರೆಯವರೆಲ್ಲ ‘ನಾನು ಒಳ್ಳೇ ಸಾಧನೆ ಮಾಡಿದ್ದೀನಿ’ ಅಂತ ಅಂದುಕೊಳ್ಳುತ್ತಿದ್ದರು. ನಿಜ ಹೇಳಬೇಕಂದ್ರೆ ನಾನು ಖುಷಿಯಾಗಿರಲಿಲ್ಲ, ಏನೋ ಕಳೆದುಕೊಂಡಿದ್ದೀನಿ ಅಂತ ಅನಿಸುತ್ತಿತ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌: ಯೆಹೋವ ದೇವರು ನಮ್ಮನ್ನ ಎಷ್ಟು ಪ್ರೀತಿಸುತ್ತಾನೆ ಅಂತ ನನಗೆ ಬೈಬಲ್‌ ಕಲಿತಾಗ ಗೊತ್ತಾಯಿತು. ಬೈಬಲ್‌, ಆತನು ನಮಗೆ ಕೊಟ್ಟಿರೋ ಒಂದು ಒಳ್ಳೇ ಗಿಫ್ಟ್‌ ಅಂತ ನಾನು ಅರ್ಥಮಾಡಿಕೊಂಡೆ. ಅದು ನಮ್ಮನ್ನ ಒಳ್ಳೇ ದಾರಿಯಲ್ಲಿ ನಡೆಸೋಕೆ ಆತನು ಬರೆದ ಒಂದು ಪತ್ರದ ತರ ಇದೆ. (ಯೆಶಾಯ 48:17, 18) ಯೆಹೋವ ನನ್ನನ್ನ ಪ್ರೀತಿಸಬೇಕಾದ್ರೆ ನಾನು ದೊಡ್ಡ ಬದಲಾವಣೆಗಳನ್ನ ಮಾಡಿಕೊಳ್ಳಬೇಕು ಅಂತ ನನಗೆ ಗೊತ್ತಾಯಿತು.

ನಾನು ಮಾಡಬೇಕಿದ್ದ ಒಂದು ಬದಲಾವಣೆ, ಹಳೇ ಸ್ನೇಹಿತರ ಸಹವಾಸ ಬಿಟ್ಟುಬಿಡಬೇಕಿತ್ತು. ಜ್ಞಾನೋಕ್ತಿ 13:20 ಹೀಗೆ ಹೇಳುತ್ತೆ: “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.” ಈ ವಚನದ ಬಗ್ಗೆ ನಾನು ತುಂಬ ಯೋಚನೆ ಮಾಡಿದೆ. ಆಮೇಲೆ ನಾನು ಹಳೇ ಸ್ನೇಹಿತರನ್ನ ಬಿಟ್ಟೆ, ಸಭೆಯಲ್ಲಿ ಹೊಸ ಸ್ನೇಹಿತರನ್ನ ಮಾಡಿಕೊಂಡೆ.

ನಂಗೆ ಸಿಗರೇಟ್‌ ಸೇದೋ ಚಟ ಇದ್ದಿದ್ದರಿಂದ ಅದನ್ನ ಬಿಡೋಕೆ ತುಂಬ ಕಷ್ಟ ಆಗಿತ್ತು. ಇದನ್ನ ಬಿಡೋಕೆ ಪ್ರಯತ್ನ ಮಾಡುತ್ತಿರುವಾಗ ಇನ್ನೊಂದು ದೊಡ್ಡ ಸಮಸ್ಯೆ ಬಂತು. ಸಿಗರೇಟ್‌ ಸೇದೋದನ್ನ ಬಿಡುತ್ತಾ ಇದ್ದಾಗ ನನ್ನ ತೂಕ ಸುಮಾರು 13ವರೆ ಕೆಜಿ ಜಾಸ್ತಿ ಆಯ್ತು. ಹೀಗಾದಾಗ ನನಗೆ ತುಂಬ ಬೇಜಾರ್‌ ಆಯ್ತು. ನನ್ನ ತೂಕ ಕಡಿಮೆ ಮಾಡಕ್ಕೆ ಸುಮಾರು 10 ವರ್ಷ ಹಿಡಿಯಿತು. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ನಾನು ಈ ಚಟದಿಂದ ಹೊರಗೆ ಬರಬೇಕು ಅಂತ ತೀರ್ಮಾನ ಮಾಡಿ ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ಆತನು ನನಗೆ ಸಹಾಯ ಮಾಡಿದನು.

ಸಿಕ್ಕಿದ ಪ್ರಯೋಜನಗಳು: ನಾನೀಗ ಖುಷಿಯಾಗಿದ್ದೀನಿ, ಆರೋಗ್ಯವಾಗಿದ್ದೀನಿ. ಆಸ್ತಿ-ಪಾಸ್ತಿ ಮಾಡೋದ್ರಲ್ಲಿ ಏನೂ ಸಂತೋಷ ಇಲ್ಲ ಅಂತ ನನಗೀಗ ಗೊತ್ತಾಗಿದೆ. ಬೇರೆಯವರಿಗೆ ಬೈಬಲ್‌ ಸತ್ಯಗಳನ್ನ ಕಲಿಸುತ್ತಾ ಇದ್ದೀನಿ. ಹಿಂದೆ ನನ್ನ ಜೊತೆ ಕೆಲಸ ಮಾಡುತ್ತಿದ್ದ 3 ಜನರಿಗೆ ಬೈಬಲ್‌ ಸ್ಟಡಿ ಮಾಡಿದ್ದೀನಿ. ಅವರು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ನಾನು ಮತ್ತು ನನ್ನ ಗಂಡ ಖುಷಿಯಾಗಿ ಯೆಹೋವನ ಸೇವೆಯನ್ನ ಮಾಡ್ತಾ ಇದ್ದೀವಿ. ನನ್ನನ್ನ ದತ್ತು ತಗೊಂಡಿರೋ ಅಪ್ಪ-ಅಮ್ಮ ಜೀವಂತವಾಗಿ ಇದ್ದಾಗಲೇ ಹೊಸ ಲೋಕದಲ್ಲಿ ಸತ್ತವರು ಎದ್ದು ಬರುತ್ತಾರೆ ಅನ್ನೋ ವಿಷಯ ತಿಳಿಸಿದ್ದೆ.

ಯೆಹೋವನ ಬಗ್ಗೆ ತಿಳಿದುಕೊಂಡಿದ್ದರಿಂದ ‘ನನಗೆ ಈಗ ಯಾರೂ ಇಲ್ಲ’ ಅನ್ನೋ ಭಾವನೆ ಇಲ್ಲ. ನನ್ನನ್ನ ನಿಜವಾಗಲೂ ಪ್ರೀತಿಸೋ ಸ್ನೇಹಿತರು ಸಿಕ್ಕಿದ್ದಾರೆ. ಅವರಲ್ಲಿ ಅಪ್ಪಂದಿರು, ಅಮ್ಮಂದಿರು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇದ್ದಾರೆ.—ಮಾರ್ಕ 10:29, 30.

[ಚಿತ್ರ]

ಯೆಹೋವನ ಸಾಕ್ಷಿಗಳು ಒಬ್ಬರನ್ನೊಬ್ಬರು ಪ್ರೀತಿಸುತ್ತೀವಿ ಅಂತ ಬರೀ ಬಾಯಿ ಮಾತಲ್ಲಿ ಹೇಳುತ್ತಿರಲಿಲ್ಲ ಬದಲಿಗೆ ನಡತೆಯಲ್ಲಿ ತೋರಿಸುತ್ತಿದ್ದರು

[ಚಿತ್ರ]

ನಾನು ಹಿಂದೆ ಹೋಗುತ್ತಿದ್ದ ಷಿಂಟೋ ದೇವಾಲಯ