ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯ ಅಂದರೇನು?

ದೇವರ ರಾಜ್ಯ ಅಂದರೇನು?

ದೇವರ ವಾಕ್ಯದಿಂದ ಕಲಿಯಿರಿ

ದೇವರ ರಾಜ್ಯ ಅಂದರೇನು?

ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.

1. ದೇವರ ರಾಜ್ಯ ಅಂದರೇನು?

ದೇವರ ರಾಜ್ಯ ಸ್ವರ್ಗದಲ್ಲಿರುವ ಒಂದು ಸರಕಾರ. ಅದು ಭೂಮಿಯಲ್ಲಿರುವ ಎಲ್ಲ ಸರಕಾರಗಳನ್ನು ತೆಗೆದುಹಾಕಿ ಸ್ವರ್ಗದಲ್ಲೂ ಭೂಮಿಯಲ್ಲೂ ದೇವರ ಉದ್ದೇಶವನ್ನು ನೆರವೇರಿಸುವುದು. ಹಾಗಾಗಿ ನಮಗೆ ಅಗತ್ಯವಾಗಿ ಬೇಕಾಗಿರುವ ಒಳ್ಳೇ ಸರಕಾರ ದೇವರ ರಾಜ್ಯವೇ.—ದಾನಿಯೇಲ 2:44; ಮತ್ತಾಯ 6:9, 10 ಓದಿ.

ಒಂದು ರಾಜ್ಯಕ್ಕೆ ಒಬ್ಬ ರಾಜನಿರಲೇಬೇಕು. ಯೆಹೋವನು ತನ್ನ ರಾಜ್ಯಕ್ಕೆ ರಾಜನಾಗಿ ನೇಮಿಸಿರುವುದು ತನ್ನ ಪುತ್ರನಾದ ಯೇಸುವನ್ನು.—ಲೂಕ 1:30-33 ಓದಿ.

2. ಯೇಸು ಒಬ್ಬ ಆದರ್ಶ ರಾಜನೆಂದು ಏಕೆ ಹೇಳಬಹುದು?

ಯೇಸು ಆದರ್ಶ ರಾಜ ಏಕೆಂದರೆ ಆತನು ದಯಾಪರ, ಒಳ್ಳೇದರ ಪರ ದೃಢವಾಗಿ ನಿಲ್ಲುವವ, ಜನರಿಗೆ ಸಹಾಯ ಮಾಡುವಷ್ಟು ಶಕ್ತಿಶಾಲಿ ಆಗಿದ್ದಾನೆ. (ಮತ್ತಾಯ 11:28-30) ಯೇಸು ಪುನರುತ್ಥಾನಗೊಂಡು ಸ್ವರ್ಗಕ್ಕೇರಿ ಹೋದನು. ಅಲ್ಲಿ ಯೆಹೋವನ ಬಲಬದಿಯಲ್ಲಿದ್ದನು. ತನ್ನ ಆಳ್ವಿಕೆ ಆರಂಭಿಸಲು ಕಾಯುತ್ತಿದ್ದನು. (ಇಬ್ರಿಯ 10:12, 13) ಕೊನೆಗೆ ದೇವರು ಆತನಿಗೆ ಸ್ವರ್ಗದಿಂದ ಆಳುವ ಅಧಿಕಾರ ಕೊಟ್ಟನು.—ದಾನಿಯೇಲ 7:13, 14 ಓದಿ.

3. ಯೇಸುವಿನ ಜೊತೆ ಇನ್ಯಾರು ಆಳುವರು?

‘ಭಕ್ತಜನ’ ಇಲ್ಲವೆ ಪವಿತ್ರಜನ ಎಂದು ಕರೆಯಲಾದ ಒಂದು ಗುಂಪು ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವುದು. ಇವರನ್ನು ದೇವರು ಆಯ್ಕೆಮಾಡಿದ್ದಾನೆ. (ದಾನಿಯೇಲ 7:27) ಮೊದಮೊದಲು ಆಯ್ಕೆಯಾದವರು ಯೇಸುವಿನ ನಂಬಿಗಸ್ತ ಅಪೊಸ್ತಲರು ಇಲ್ಲವೆ ಶಿಷ್ಯರು. ನಂಬಿಗಸ್ತ ಸ್ತ್ರೀಪುರುಷರನ್ನು ಪವಿತ್ರ ಜನರಾಗಿರಲು ಯೆಹೋವ ದೇವರು ಇಂದಿನ ವರೆಗೂ ಆಯ್ಕೆಮಾಡುತ್ತಾ ಬಂದಿದ್ದಾನೆ. ಈ ಪವಿತ್ರ ಜನರ ಪುನರುತ್ಥಾನವಾದಾಗ ಅವರಿಗೆ ಯೇಸುವಿನಂತೆ ಆತ್ಮಿಕ ದೇಹವನ್ನು ಕೊಡಲಾಗುತ್ತದೆ.—ಯೋಹಾನ 14:1-3; 1 ಕೊರಿಂಥ 15:42-45 ಓದಿ.

ಸ್ವರ್ಗಕ್ಕೆ ಹೋಗುವ ಇವರ ಸಂಖ್ಯೆ ಎಷ್ಟು? ಯೇಸು ಈ ಗುಂಪನ್ನು ‘ಚಿಕ್ಕ ಹಿಂಡು’ ಎಂದು ಕರೆದನು. (ಲೂಕ 12:32) ಇವರ ಒಟ್ಟು ಸಂಖ್ಯೆ 1,44,000. ಇವರು ಸ್ವರ್ಗದಿಂದ ಯೇಸುವಿನ ಜೊತೆ ಭೂಮಿಯನ್ನು ಆಳುವರು.—ಪ್ರಕಟನೆ 5:9, 10; 14:1 ಓದಿ.

4. ದೇವರ ರಾಜ್ಯ ಯಾವಾಗ ಆಳಲಾರಂಭಿಸಿತು?

1914ರಲ್ಲಿ ಯೇಸು ರಾಜನಾದನು. * ಅದಾದ ಸ್ವಲ್ಪದರಲ್ಲೇ ಆತನು ಸೈತಾನನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ಭೂಮಿಗೆ ದೊಬ್ಬಿದನು. (ಪ್ರಕಟನೆ 12:7-10, 12) ಅಂದಿನಿಂದ ಮಾನವಕುಲದ ಕಷ್ಟತೊಂದರೆಗಳು ಹೆಚ್ಚಾಗಿವೆ. ಯುದ್ಧ, ಭೂಕಂಪ, ಕ್ಷಾಮ, ಸಾಂಕ್ರಾಮಿಕ ರೋಗಗಳು, ನಿಯಮರಾಹಿತ್ಯದ ಕೃತ್ಯಗಳು ಇವೆಲ್ಲ ನಾವೀಗ ಈ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ತೋರಿಸುವ ಸೂಚನೆಯ ಭಾಗವಾಗಿದೆ. (2 ತಿಮೊಥೆಯ 3:1-5) ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆಯಲು ಇಚ್ಛಿಸುವವರೆಲ್ಲರೂ ಅದರ ರಾಜ ಯೇಸುವಿನ ಹಿಂಬಾಲಕರಾಗುವುದು ಹೇಗೆಂದು ಕಲಿಯತಕ್ಕದ್ದು.—ಲೂಕ 21:7, 10, 11, 31, 34, 35 ಓದಿ.

5. ದೇವರ ರಾಜ್ಯ ಏನನ್ನು ಸಾಧಿಸುತ್ತಿದೆ?

ಭೂವ್ಯಾಪಕ ಸಾರುವ ಕೆಲಸದ ಮೂಲಕ ದೇವರ ರಾಜ್ಯ ಈಗಾಗಲೇ ಎಲ್ಲ ಜನಾಂಗಗಳ ಲಕ್ಷಾಂತರ ಜನರು ದೇವರ ಮಾರ್ಗಗಳ ಕುರಿತು ಕಲಿಯುವಂತೆ ಸಹಾಯಮಾಡುತ್ತಿದೆ. (ಮತ್ತಾಯ 24:14) ಈ ರಾಜ್ಯ ಭೂಮಿಯಲ್ಲಿ ಈಗಿರುವ ದುಷ್ಟತನವನ್ನು ನಾಶಮಾಡುವಾಗ ಯೇಸುವಿನ ನಿಷ್ಠಾವಂತ ಪ್ರಜೆಗಳ “ಮಹಾ ಸಮೂಹ”ವನ್ನು ರಕ್ಷಿಸುವುದು.—ಪ್ರಕಟನೆ 7:9, 10, 13-17 ಓದಿ.

ಈ ರಾಜ್ಯ 1,000 ವರ್ಷಗಳ ಅವಧಿಯಲ್ಲಿ ಕ್ರಮೇಣ ಇಡೀ ಭೂಮಿಯನ್ನು ಒಂದು ಪರದೈಸ್‌ ಅಂದರೆ ಸುಂದರ ತೋಟವನ್ನಾಗಿ ಮಾಡುವುದು. ಕೊನೆಗೆ ಯೇಸು ಈ ರಾಜ್ಯವನ್ನು ವಾಪಸ್‌ ತನ್ನ ತಂದೆಗೆ ಒಪ್ಪಿಸುವನು. (1 ಕೊರಿಂಥ 15:24-26) ದೇವರ ರಾಜ್ಯದ ಕುರಿತು ನೀವು ಯಾರಿಗಾದರೂ ಹೇಳಲು ಇಷ್ಟಪಡುತ್ತೀರೊ?—ಕೀರ್ತನೆ 37:10, 11, 29 ಓದಿ. (w11-E 07/01)

ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 8 ಮತ್ತು 9ನ್ನು ನೋಡಿ.

[ಪಾದಟಿಪ್ಪಣಿ]

^ ಪ್ಯಾರ. 13 ಇದನ್ನು ಬೈಬಲ್‌ ಪ್ರವಾದನೆ ಹೇಗೆ ಮುನ್ಸೂಚಿಸಿತ್ತೆಂಬ ವಿವರಗಳಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 215-218 ನೋಡಿ.