ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸ್ಪಷ್ಟ ಎಚ್ಚರಿಕೆಗಳಿಗೆ ಕಿವಿಗೊಡುತ್ತೀರೋ?

ಯೆಹೋವನ ಸ್ಪಷ್ಟ ಎಚ್ಚರಿಕೆಗಳಿಗೆ ಕಿವಿಗೊಡುತ್ತೀರೋ?

ಯೆಹೋವನ ಸ್ಪಷ್ಟ ಎಚ್ಚರಿಕೆಗಳಿಗೆ ಕಿವಿಗೊಡುತ್ತೀರೋ?

“ಇದೇ ಮಾರ್ಗ, ಇದರಲ್ಲೇ ನಡೆಯಿರಿ.”—ಯೆಶಾ. 30:21.

1, 2. ಸೈತಾನನು ಏನು ಮಾಡುವ ಪಣತೊಟ್ಟಿದ್ದಾನೆ? ದೇವರ ವಾಕ್ಯ ನಮಗೆ ಹೇಗೆ ಸಹಾಯಮಾಡುತ್ತದೆ?

ತಪ್ಪಾದ ದಿಕ್ಕನ್ನು ತೋರಿಸುವ ಸೂಚನಾಫಲಕವು ದಾರಿತಪ್ಪಿಸುತ್ತದಷ್ಟೇ ಅಲ್ಲ ಅಪಾಯಕರವೂ ಆಗಿದೆ. ನೆನಸಿ, ನಿಮ್ಮ ಸ್ನೇಹಿತನು ನಿಮ್ಮನ್ನು ಎಚ್ಚರಿಸುತ್ತಾ, ಅಜಾಗರೂಕ ಪ್ರಯಾಣಿಕರನ್ನು ದಾರಿತಪ್ಪಿಸಲೆಂದೇ ದುಷ್ಟ ವ್ಯಕ್ತಿಯೊಬ್ಬನು ಸೂಚನಾಫಲಕವನ್ನು ತಿದ್ದಿದ್ದಾನೆಂದು ಹೇಳುತ್ತಾನೆ. ನೀವು ಅವನ ಎಚ್ಚರಿಕೆಗೆ ಕಿವಿಗೊಡುವುದಿಲ್ಲವೇ?

2 ಸೈತಾನನು ನಮ್ಮ ದುಷ್ಟ ವೈರಿಯಾಗಿದ್ದಾನೆ. ಅವನು ನಮ್ಮನ್ನು ತಪ್ಪುದಾರಿಗೆ ನಡಿಸುವ ಪಣತೊಟ್ಟಿದ್ದಾನೆ. (ಪ್ರಕ. 12:9) ಹಿಂದಿನ ಲೇಖನದಲ್ಲಿ ಚರ್ಚಿಸಿದ ಎಲ್ಲ ಕೆಟ್ಟ ಪ್ರಭಾವಗಳ ಮೂಲನು ಅವನೇ. ನಿತ್ಯಜೀವಕ್ಕೆ ನಡಿಸುವ ಮಾರ್ಗದಿಂದ ನಮ್ಮನ್ನು ದಾರಿತಪ್ಪಿಸುವುದೇ ಅವನ ಗುರಿ. (ಮತ್ತಾ. 7:13, 14) ಆದರೆ ನಮ್ಮನ್ನು ದಾರಿತಪ್ಪಿಸಲು ಸೈತಾನನು ಉಪಯೋಗಿಸುವ ರಸ್ತೆಫಲಕಗಳ ವಿಷಯದಲ್ಲಿ ನಮ್ಮ ಪ್ರೀತಿಯ ದೇವರು ಎಚ್ಚರಿಕೆ ಕೊಡುತ್ತಾನೆ. ನಾವೀಗ ಸೈತಾನನ ಇನ್ನು ಮೂರು ಕೆಟ್ಟ ಪ್ರಭಾವಗಳನ್ನು ಹಾಗೂ ಅವುಗಳಿಗೆ ಬಲಿಯಾಗದಿರಲು ದೇವರ ವಾಕ್ಯ ನಮಗೆ ನೆರವು ನೀಡುವ ವಿಧವನ್ನು ಪರಿಗಣಿಸೋಣ. ಆತನ ಎಚ್ಚರಿಕೆಗಳನ್ನು ಓದುವಾಗ, ಯೆಹೋವನೇ ನಮ್ಮ ಹಿಂದಿದ್ದು ಸರಿಯಾದ ಮಾರ್ಗದೆಡೆಗೆ ಕೈತೋರಿಸುತ್ತಾ “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎನ್ನುತ್ತಿರುವ ದೃಶ್ಯವನ್ನು ನಾವು ಕಲ್ಪಿಸಿಕೊಳ್ಳಬಹುದು. (ಯೆಶಾ. 30:21) ಯೆಹೋವನ ಸ್ಪಷ್ಟ ಎಚ್ಚರಿಕೆಗಳನ್ನು ಪರಿಶೀಲಿಸುವಾಗ ಅವುಗಳಿಗೆ ಕಿವಿಗೊಡಬೇಕೆಂಬ ನಮ್ಮ ಸಂಕಲ್ಪವು ಇನ್ನೂ ದೃಢವಾಗುವುದು.

‘ಸುಳ್ಳು ಬೋಧಕರನ್ನು’ ಹಿಂಬಾಲಿಸಬೇಡಿ

3, 4. (ಎ) ಸುಳ್ಳು ಬೋಧಕರು ಬತ್ತಿಹೋದ ಬಾವಿಗಳಂತಿರುವುದು ಹೇಗೆ? (ಬಿ) ಸುಳ್ಳು ಬೋಧಕರು ಹೆಚ್ಚಾಗಿ ಎಲ್ಲಿಂದ ಏಳುತ್ತಾರೆ? ಅವರ ಉದ್ದೇಶವೇನು?

3 ನೀವು ಬಂಜರು ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದೀರೆಂದು ಊಹಿಸಿಕೊಳ್ಳಿ. ನಿಮಗೆ ತುಂಬ ಬಾಯಾರಿಕೆಯಾಗಿದೆ. ದೂರದಲ್ಲಿ ಒಂದು ಬಾವಿಯಿರುವುದು ನಿಮಗೆ ಕಾಣಿಸುತ್ತದೆ. ನೀರು ಸಿಗಬಹುದೆಂಬ ಆಸೆಯಿಂದ ನೀವಲ್ಲಿಗೆ ಹೋಗುತ್ತೀರಿ. ಹತ್ತಿರ ಹೋಗಿ ನೋಡಿದರೆ ಅದು ಒಣಗಿದ ಬಾವಿ! ನೀವಾಗ ತುಂಬ ನಿರಾಶರಾಗುತ್ತೀರಿ ಅಲ್ಲವೇ? ಸುಳ್ಳು ಬೋಧಕರು ಸಹ ಬತ್ತಿಹೋದ ಬಾವಿಗಳಂತಿದ್ದಾರೆ. ಯಾರೆಲ್ಲ ಸತ್ಯವೆಂಬ ನೀರಿಗಾಗಿ ಅವರ ಬಳಿ ಹೋಗುತ್ತಾರೋ ಅವರಿಗೆ ಆಶಾಭಂಗ ಖಂಡಿತ. ಈ ಸುಳ್ಳು ಬೋಧಕರ ವಿಷಯವಾಗಿ ಯೆಹೋವನು ಅಪೊಸ್ತಲ ಪೌಲ ಹಾಗೂ ಪೇತ್ರನ ಮುಖಾಂತರ ನಮಗೆ ಎಚ್ಚರಿಕೆಗಳನ್ನು ಕೊಟ್ಟಿದ್ದಾನೆ. (ಅ. ಕಾರ್ಯಗಳು 20:29, 30; 2 ಪೇತ್ರ 2:1-3 ಓದಿ.) ಆ ಸುಳ್ಳು ಬೋಧಕರು ಯಾರಾಗಿದ್ದಾರೆ? ಅವರ ಮೂಲ ಹಾಗೂ ಅವರು ಕೆಲಸ ಸಾಧಿಸುವ ವಿಧವನ್ನು ಪೌಲ ಮತ್ತು ಪೇತ್ರನ ದೇವಪ್ರೇರಿತ ವಾಕ್ಯಗಳಿಂದ ನಾವು ತಿಳಿದುಕೊಳ್ಳಸಾಧ್ಯವಿದೆ.

4 ಎಫೆಸ ಸಭೆಯ ಹಿರಿಯರಿಗೆ ಪೌಲನು, ‘ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡುವರೆಂದು’ ಹೇಳಿದನು. ಜೊತೆ ಕ್ರೈಸ್ತರನ್ನು ಸಂಬೋಧಿಸುತ್ತಾ ಪೇತ್ರನು, “ನಿಮ್ಮಲ್ಲಿಯೂ ಸುಳ್ಳು ಬೋಧಕರು ಏಳುವರು” ಎಂದು ಬರೆದನು. ಹಾಗಾದರೆ ಸುಳ್ಳು ಬೋಧಕರು ಸಭೆಯೊಳಗಿಂದಲೂ ಏಳಸಾಧ್ಯ. ಅಂಥವರು ಧರ್ಮಭ್ರಷ್ಟರಾಗಿದ್ದಾರೆ. * ಅವರ ಉದ್ದೇಶವೇನು? ಒಂದೊಮ್ಮೆ ಪ್ರೀತಿಸುತ್ತಿದ್ದ ಸಂಘಟನೆಯನ್ನು ಬಿಟ್ಟು ಹೋಗುವುದರಲ್ಲಷ್ಟೇ ಅವರು ತೃಪ್ತರಾಗುವುದಿಲ್ಲ. ಪೌಲನು ಹೇಳಿದಂತೆ ‘ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವುದೇ’ ಅವರ ಗುರಿಯಾಗಿದೆ. ಪೌಲನು ತಿಳಿಸಿದ ಆ ಶಿಷ್ಯರು ಯೇಸು ಕ್ರಿಸ್ತನ ಶಿಷ್ಯರಾಗಿದ್ದಾರೆ. ಧರ್ಮಭ್ರಷ್ಟರು ಸಭೆಯ ಹೊರಗಿನಿಂದ ಶಿಷ್ಯರನ್ನು ಕೂಡಿಸಿಕೊಳ್ಳುವುದಿಲ್ಲ. ಬದಲಾಗಿ ಸಭೆಯೊಳಗಿನ ಶಿಷ್ಯರನ್ನು ತಮ್ಮೊಂದಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ. ‘ಹಸಿದಿರುವ ತೋಳಗಳಂತೆ’ ಈ ಸುಳ್ಳು ಬೋಧಕರು ಸಭೆಯ ಭರವಸಾರ್ಹ ಸದಸ್ಯರ ನಂಬಿಕೆಯನ್ನು ಧ್ವಂಸಗೊಳಿಸಿ ಸತ್ಯದ ಮಾರ್ಗದಿಂದ ಅವರನ್ನು ದೂರ ಕೊಂಡೊಯ್ಯುವ ಮೂಲಕ ಅವರನ್ನು ನುಂಗಿಹಾಕುತ್ತಾರೆ.—ಮತ್ತಾ. 7:15; 2 ತಿಮೊ. 2:18.

5. ಸುಳ್ಳು ಬೋಧಕರು ಯಾವ ವಿಧಾನಗಳನ್ನು ಉಪಯೋಗಿಸುತ್ತಾರೆ?

5 ಸುಳ್ಳು ಬೋಧಕರು ಹೇಗೆ ತಮ್ಮ ಕೆಲಸ ಸಾಧಿಸುತ್ತಾರೆ? ಅವರು ವಂಚನಾತ್ಮಕ ವಿಧಗಳಲ್ಲಿ ಕಾರ್ಯನಡೆಸುತ್ತಾರೆ. ಧರ್ಮಭ್ರಷ್ಟರು ಭ್ರಷ್ಟ ವಿಚಾರಧಾರೆಗಳನ್ನು ‘ರಹಸ್ಯವಾಗಿ ಒಳತರುತ್ತಾರೆ.’ ಕಳ್ಳಸಾಗಣೆಗಾರರು ರಹಸ್ಯವಾಗಿ ಕಾರ್ಯನಡೆಸುವಂತೆ ಇವರು ಕುತಂತ್ರದಿಂದ ಗುಟ್ಟಾಗಿ ಧರ್ಮಭ್ರಷ್ಟ ವಿಚಾರಗಳನ್ನು ಒಳತರುತ್ತಾರೆ. ಖೋಟಾ ಕಾಗದಪತ್ರಗಳನ್ನು ಸೃಷ್ಟಿಸುವವನು ಹೇಗೆ ಚಾಣಾಕ್ಷತನದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾನೋ ಹಾಗೆಯೇ ಧರ್ಮಭ್ರಷ್ಟರು ತಾವು ಸೃಷ್ಟಿಸಿದ ವಿಚಾರಧಾರೆಗಳನ್ನು ಸತ್ಯವೆಂಬಂತೆ ಪ್ರಸ್ತುತಪಡಿಸಲು ‘ಕೃತಕ ಮಾತುಗಳನ್ನು’ ಅಥವಾ ಸುಳ್ಳು ತರ್ಕಗಳನ್ನು ಉಪಯೋಗಿಸುತ್ತಾರೆ. ತಮ್ಮ ಅಭಿಪ್ರಾಯಗಳಿಗೆ ಸರಿಹೊಂದುವ ರೀತಿಯಲ್ಲಿ ‘ಶಾಸ್ತ್ರಗ್ರಂಥದ ಭಾಗಗಳನ್ನು ತಿರುಚಿ’ ‘ವಂಚನಾತ್ಮಕ ಬೋಧನೆಗಳನ್ನು’ ಹಬ್ಬಿಸುತ್ತಾರೆ. (2 ಪೇತ್ರ 2:1, 3, 13; 3:16) ಖಂಡಿತವಾಗಿಯೂ ಧರ್ಮಭ್ರಷ್ಟರಿಗೆ ನಮ್ಮ ಹಿತಕ್ಷೇಮದ ಬಗ್ಗೆ ಚಿಂತೆಯಿಲ್ಲ. ಅವರನ್ನು ಹಿಂಬಾಲಿಸುವಲ್ಲಿ, ನಾವು ನಿತ್ಯಜೀವದ ಹಾದಿಯಿಂದ ದಾರಿತಪ್ಪುವೆವು ನಿಶ್ಚಯ.

6. ಸುಳ್ಳು ಬೋಧಕರ ವಿಷಯದಲ್ಲಿ ಬೈಬಲ್‌ ಯಾವ ಸ್ಪಷ್ಟ ಸಲಹೆ ಕೊಡುತ್ತದೆ?

6 ಸುಳ್ಳು ಬೋಧಕರಿಂದ ನಾವು ನಮ್ಮನ್ನೇ ಹೇಗೆ ರಕ್ಷಿಸಿಕೊಳ್ಳಬಲ್ಲೆವು? ಆ ಬಗ್ಗೆ ಬೈಬಲ್‌ ನಮಗೆ ಸ್ಪಷ್ಟ ಸಲಹೆ ಕೊಡುತ್ತದೆ. (ರೋಮನ್ನರಿಗೆ 16:17; 2 ಯೋಹಾನ 9-11 ಓದಿ.) “ಅವರಿಂದ ದೂರವಿರಿ” ಎನ್ನುತ್ತದೆ ದೇವರ ವಾಕ್ಯ. ಎಷ್ಟೊಂದು ಸ್ಪಷ್ಟ ಈ ಪ್ರೇರಿತ ಸಲಹೆ! ಉದಾಹರಣೆಗೆ, ಮಾರಣಾಂತಿಕವಾದ ಸೋಂಕು ರೋಗವಿರುವ ಒಬ್ಬ ವ್ಯಕ್ತಿಯಿಂದ ದೂರವಿರಿ ಎಂದು ವೈದ್ಯನು ನಿಮಗೆ ಹೇಳುತ್ತಾನೆಂದಿಟ್ಟುಕೊಳ್ಳಿ. ವೈದ್ಯನು ಏಕೆ ಹಾಗೆ ಹೇಳಿದ್ದಾನೆಂಬದು ನಿಮಗೆ ತಿಳಿದಿದೆ ಮತ್ತು ಅವನು ಕೊಟ್ಟ ಎಚ್ಚರಿಕೆಯನ್ನು ನೀವು ಕಟ್ಟುನಿಟ್ಟಾಗಿ ಪಾಲಿಸುತ್ತೀರಿ. ಬೈಬಲ್‌ ಹೇಳುವಂತೆ ಧರ್ಮಭ್ರಷ್ಟರು ‘ಮಾನಸಿಕವಾಗಿ ರೋಗಹಿಡಿದವರಾಗಿದ್ದಾರೆ.’ ಇವರು ತಮ್ಮ ಸುಳ್ಳು ಬೋಧನೆಗಳ ಮೂಲಕ ಆ ರೋಗವನ್ನು ಇತರರಿಗೂ ಹಬ್ಬಿಸಲೆತ್ನಿಸುತ್ತಾರೆ. (1 ತಿಮೊ. 6:3, 4) ಇಂಥವರ ಸಹವಾಸ ಮಾಡಬಾರದೆಂದು ಮಹಾ ವೈದ್ಯನಾಗಿರುವ ಯೆಹೋವನು ನಮಗೆ ಹೇಳುತ್ತಾನೆ. ಆತನು ಏಕೆ ಹಾಗೆ ಹೇಳುತ್ತಾನೆಂದು ನಮಗೆ ತಿಳಿದಿದೆ. ಆದರೆ ಆತನ ಎಚ್ಚರಿಕೆಗೆ ಎಲ್ಲ ವಿಧಗಳಲ್ಲಿ ಕಿವಿಗೊಡಲು ನಾವು ದೃಢಸಂಕಲ್ಪ ಮಾಡಿದ್ದೇವೋ?

7, 8. (ಎ) ನಾವು ಸುಳ್ಳು ಬೋಧಕರಿಂದ ಹೇಗೆ ದೂರವಿರಬಲ್ಲೆವು? (ಬಿ) ಸುಳ್ಳು ಬೋಧಕರಿಂದ ದೂರವಿರಲು ನೀವು ದೃಢತೀರ್ಮಾನ ಮಾಡಿರುವುದೇಕೆ?

7 ನಾವು ಸುಳ್ಳು ಬೋಧಕರಿಂದ ಹೇಗೆ ದೂರವಿರಬಲ್ಲೆವು? ನಾವು ಅವರನ್ನು ನಮ್ಮ ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಅವರಿಗೆ ವಂದನೆ ಕೂಡ ಹೇಳುವುದಿಲ್ಲ. ಅಲ್ಲದೆ ಅವರ ಸಾಹಿತ್ಯವನ್ನು ಓದುವುದಿಲ್ಲ, ಅವರ ವಿಚಾರಧಾರೆಗಳಿರುವ ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸುವುದಿಲ್ಲ. ಅವರ ವೆಬ್‌ ಸೈಟ್‌ಗಳನ್ನು ನೋಡುವುದಿಲ್ಲ ಅಥವಾ ಅದರಲ್ಲಿ ನಮ್ಮ ಅಭಿಪ್ರಾಯಗಳನ್ನು ನೀಡುವುದಿಲ್ಲ. ನಾವು ಅಂಥ ದೃಢನಿಲುವನ್ನು ತೆಗೆದುಕೊಳ್ಳುವುದೇಕೆ? ಪ್ರೀತಿಯ ನಿಮಿತ್ತ. ನಾವು ‘ಸತ್ಯದ ದೇವರನ್ನು’ ಪ್ರೀತಿಸುವುದರಿಂದ ಆತನ ಸತ್ಯದ ವಾಕ್ಯಕ್ಕೆ ವಿರುದ್ಧವಾಗಿರುವ ಧರ್ಮಭ್ರಷ್ಟರ ವಕ್ರಬೋಧನೆಗಳಿಗೆ ಕಿವಿಗೊಡುವುದಿಲ್ಲ. (ಕೀರ್ತ. 31:5; ಯೋಹಾ. 17:17) ಅಲ್ಲದೆ, ನಾವು ಯೆಹೋವನ ಸಂಘಟನೆಯನ್ನೂ ಪ್ರೀತಿಸುತ್ತೇವೆ. ಏಕೆಂದರೆ ಯೆಹೋವನ ಹೆಸರು, ಆ ಹೆಸರಿನ ಅರ್ಥ, ಭೂಮಿಗಾಗಿ ದೇವರ ಉದ್ದೇಶ, ಸತ್ತವರ ಸ್ಥಿತಿ, ಪುನರುತ್ಥಾನದ ನಿರೀಕ್ಷೆ ಮುಂತಾದ ವಿಷಯಗಳ ಕುರಿತ ಆಶ್ಚರ್ಯಕರ ಸತ್ಯಗಳನ್ನು ನಾವು ಕಲಿತದ್ದು ಆ ಸಂಘಟನೆಯ ಮೂಲಕವೇ. ಇಂಥ ಅತ್ಯಮೂಲ್ಯ ಸತ್ಯಗಳನ್ನು ಮೊದಲ ಬಾರಿಗೆ ಕಲಿತಾಗ ನಿಮಗೆ ಹೇಗೆ ಅನಿಸಿತೆಂಬದು ನೆನಪಿದೆಯೋ? ಸುಳ್ಳು ಬೋಧಕರ ಸುಳ್ಳು ಬೋಧನೆಗಳನ್ನು ಕೇಳಿ ನಿಮಗೆ ಅತ್ಯಮೂಲ್ಯ ಸತ್ಯಗಳನ್ನು ಕಲಿಸಿದ ಸಂಘಟನೆಯನ್ನು ಬಿಟ್ಟುಹೋಗುವುದೇಕೆ?—ಯೋಹಾ. 6:66-69.

8 ಸುಳ್ಳು ಬೋಧಕರು ಏನೇ ಹೇಳಿದರೂ ಸರಿಯೇ ನಾವು ಅವರನ್ನು ಹಿಂಬಾಲಿಸುವುದಿಲ್ಲ. ಬತ್ತಿಹೋದ ಬಾವಿಯಂತಿರುವ ಅವರ ಬಳಿ ಹೋಗಿ ನಾವು ನಿರಾಶರಾಗುವುದು ಅಥವಾ ಮೋಸಹೋಗುವುದು ಬೇಡ. ಅದಕ್ಕೆ ಬದಲು ಯೆಹೋವನಿಗೆ ಮತ್ತು ದೀರ್ಘಕಾಲದಿಂದಲೂ ದೇವರ ಪ್ರೇರಿತ ವಾಕ್ಯದಿಂದ ಶುದ್ಧ ಹಾಗೂ ಚೈತನ್ಯದಾಯಕ ನೀರನ್ನು ಕೊಟ್ಟು ನಮ್ಮ ದಾಹವನ್ನು ತಣಿಸುತ್ತ ಬಂದಿರುವ ಆತನ ಸಂಘಟನೆಗೆ ನಿಷ್ಠರಾಗಿ ಉಳಿಯುವ ದೃಢತೀರ್ಮಾನ ಮಾಡೋಣ.—ಯೆಶಾ. 55:1-3; ಮತ್ತಾ. 24:45-47.

‘ಸುಳ್ಳು ಕಥೆಗಳಿಗೆ’ ಕಿವಿಗೊಡಬೇಡಿ

9, 10. ‘ಸುಳ್ಳು ಕಥೆಗಳ’ ವಿಷಯದಲ್ಲಿ ಪೌಲನು ತಿಮೊಥೆಯನಿಗೆ ಯಾವ ಎಚ್ಚರಿಕೆ ಕೊಟ್ಟನು? ಏನನ್ನು ಮನಸ್ಸಿನಲ್ಲಿಟ್ಟು ಪೌಲನು ಆ ಎಚ್ಚರಿಕೆ ಕೊಟ್ಟಿದ್ದಿರಬಹುದು? (ಪಾದಟಿಪ್ಪಣಿಯನ್ನೂ ನೋಡಿ.)

9 ರಸ್ತೆಯ ಸೂಚನಾಫಲಕ ತಿದ್ದಲಾಗಿರುವುದನ್ನು ಮತ್ತು ಅದು ತಪ್ಪಾದ ದಿಕ್ಕನ್ನು ಸೂಚಿಸುತ್ತಿರುವುದನ್ನು ಕೆಲವೊಮ್ಮೆ ಸುಲಭವಾಗಿ ಪತ್ತೆಹಚ್ಚಬಹುದು. ಇನ್ನಿತರ ಸಮಯಗಳಲ್ಲಾದರೊ ಅದು ಕಷ್ಟಕರ. ಸೈತಾನನ ಕೆಟ್ಟ ಪ್ರಭಾವಗಳ ವಿಷಯದಲ್ಲೂ ಈ ಮಾತು ಸತ್ಯ. ಜಾಗರೂಕರಾಗಿರದಿದ್ದಲ್ಲಿ ಅವುಗಳಿಂದ ನಾವು ದಾರಿತಪ್ಪುವ ಸಾಧ್ಯತೆಯಿದೆ. ಸೈತಾನನ ಕೃತ್ರಿಮ ತಂತ್ರಗಳಲ್ಲಿ ಒಂದಾದ ‘ಸುಳ್ಳು ಕಥೆಗಳ’ ವಿಷಯದಲ್ಲಿ ಅಪೊಸ್ತಲ ಪೌಲನು ನಮ್ಮನ್ನು ಎಚ್ಚರಿಸುತ್ತಾನೆ. (1 ತಿಮೊಥೆಯ 1:3, 4 ಓದಿ.) ಈ ಸುಳ್ಳು ಕಥೆಗಳು ಯಾವುವು? ನಾವು ಹೇಗೆ ಅವುಗಳಿಗೆ ಕಿವಿಗೊಡದಿರಬಹುದು? ನಿತ್ಯಜೀವದ ಮಾರ್ಗದಲ್ಲಿ ಉಳಿಯಲು ನಾವು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಗತ್ಯ.

10 ಸುಳ್ಳು ಕಥೆಗಳ ಕುರಿತ ಪೌಲನ ಎಚ್ಚರಿಕೆಯು ಅವನು ಕ್ರೈಸ್ತ ಹಿರಿಯನಾದ ತಿಮೊಥೆಯನಿಗೆ ಬರೆದ ಪ್ರಥಮ ಪತ್ರದಲ್ಲಿದೆ. ಪೌಲನು ತಿಮೊಥೆಯನಿಗೆ ಸಭೆಯನ್ನು ಶುದ್ಧವಾಗಿಡುವಂತೆ ಮತ್ತು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಸಹೋದರ ಸಹೋದರಿಯರಿಗೆ ಸಹಾಯಮಾಡುವಂತೆ ಹೇಳಿದನು. (1 ತಿಮೊ. 1:18, 19) ‘ಸುಳ್ಳು ಕಥೆಗಳು’ ಎಂಬದಕ್ಕೆ ಪೌಲನು ಉಪಯೋಗಿಸಿದ ಗ್ರೀಕ್‌ ಪದವು ಕಟ್ಟುಕಥೆ, ಪುರಾಣ ಕಥೆ ಅಥವಾ ಸುಳ್ಳು ಸಿದ್ಧಾಂತಗಳಿಗೆ ಸೂಚಿಸುತ್ತದೆ. ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯಕ್ಕನುಸಾರ ಆ ಪದವು “ನಿಜತ್ವದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿರದ (ಧಾರ್ಮಿಕ) ಕಥೆಯನ್ನು” ಸೂಚಿಸುತ್ತದೆ. ಕೌತುಕಭರಿತ ಕಟ್ಟುಕಥೆಗಳು ಮತ್ತು ಕಾಲ್ಪನಿಕ ದಂತಕಥೆಗಳಿಂದ ಹುಟ್ಟಿಕೊಂಡ ಧಾರ್ಮಿಕ ಸುಳ್ಳುಗಳನ್ನು ಮನಸ್ಸಿನಲ್ಲಿಟ್ಟು ಪೌಲನು ಹಾಗೆ ಬರೆದಿರಬಹುದು. * ಇಂಥ ಕಥೆಗಳು ಕೇವಲ “ಸಂಶೋಧನೆಗಾಗಿ ಪ್ರಶ್ನೆಗಳನ್ನು ಎಬ್ಬಿಸುತ್ತವೆ.” ಅಂದರೆ ನಿಷ್ಪ್ರಯೋಜಕ ಸಂಶೋಧನೆಗೆ ನಡೆಸುವ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಇಂಥ ಸುಳ್ಳು ಕಥೆಗಳು ಮಹಾವಂಚಕನಾದ ಸೈತಾನನ ಕುತಂತ್ರಗಳಲ್ಲಿ ಒಂದು. ಅವನು ಧಾರ್ಮಿಕ ಸುಳ್ಳುಗಳನ್ನು ಮತ್ತು ಅಧಾರ್ಮಿಕ ಮಿಥ್ಯೆಗಳನ್ನು ಉಪಯೋಗಿಸಿ ಅಜಾಗರೂಕ ಜನರನ್ನು ದಾರಿತಪ್ಪಿಸುತ್ತಾನೆ. ಆದ್ದರಿಂದಲೇ ‘ಸುಳ್ಳು ಕಥೆಗಳಿಗೆ ಲಕ್ಷ್ಯಕೊಡಬೇಡಿ’ ಎಂದು ಪೌಲನು ಸ್ಪಷ್ಟ ಸಲಹೆ ಕೊಡುತ್ತಾನೆ.

11. ಜನರನ್ನು ದಾರಿತಪ್ಪಿಸುವುದರಲ್ಲಿ ಸೈತಾನನು ಸುಳ್ಳು ಧರ್ಮವನ್ನು ಚಾಣಾಕ್ಷತನದಿಂದ ಹೇಗೆ ಉಪಯೋಗಿಸಿದ್ದಾನೆ? ನಾವು ದಾರಿತಪ್ಪದಿರಲು ಯಾವ ಎಚ್ಚರಿಕೆಗೆ ಕಿವಿಗೊಡಬೇಕು?

11 ಅಜಾಗರೂಕರನ್ನು ದಾರಿತಪ್ಪಿಸುವ ಕೆಲವು ಸುಳ್ಳು ಕಥೆಗಳು ಯಾವುವು? ‘ಸುಳ್ಳು ಕಥೆಗಳು’ ಎಂಬ ಅಭಿವ್ಯಕ್ತಿಯು ‘ಸತ್ಯದಿಂದ ನಮ್ಮನ್ನು ತಿರುಗಿಸುವ’ ಯಾವುದೇ ಧಾರ್ಮಿಕ ಸುಳ್ಳು ಅಥವಾ ಕಟ್ಟುಕಥೆಗಳಿಗೆ ಅನ್ವಯವಾಗುತ್ತದೆ. (2 ತಿಮೊ. 4:3, 4) “ಬೆಳಕಿನ ದೂತನೆಂದು” ತೋರಿಸಿಕೊಳ್ಳಲು ವೇಷಹಾಕಿಕೊಂಡಿರುವ ಸೈತಾನನು ಜನರನ್ನು ದಾರಿತಪ್ಪಿಸಲು ಸುಳ್ಳು ಧರ್ಮವನ್ನು ಚಾಣಾಕ್ಷತನದಿಂದ ಉಪಯೋಗಿಸಿದ್ದಾನೆ. (2 ಕೊರಿಂ. 11:14) ಕ್ರೈಸ್ತತ್ವದ ಸೋಗಿನಲ್ಲಿ ಕ್ರೈಸ್ತಪ್ರಪಂಚವು ಕಟ್ಟುಕಥೆ ಹಾಗೂ ಸುಳ್ಳು ಸಿದ್ಧಾಂತಗಳಿಂದ ತುಂಬಿರುವ ತ್ರಯೈಕ್ಯ, ನರಕಾಗ್ನಿ ಮತ್ತು ಆತ್ಮದ ಅಮರತ್ವಗಳಂತಹ ಬೋಧನೆಗಳನ್ನು ಕಲಿಸುತ್ತದೆ. ಮಾತ್ರವಲ್ಲ, ಕ್ರಿಸ್‌ಮಸ್‌ ಹಾಗೂ ಈಸ್ಟರ್‌ಗಳಂಥ ಹಬ್ಬಗಳನ್ನೂ ಪ್ರವರ್ಧಿಸುತ್ತದೆ. ಮೇಲ್ನೋಟಕ್ಕೆ ಈ ಪದ್ಧತಿಗಳಲ್ಲಿ ಯಾವುದೇ ತಪ್ಪಿಲ್ಲದಂತೆ ತೋರಿದರೂ ವಾಸ್ತವದಲ್ಲಿ ಅವು ಪುರಾಣ ಮತ್ತು ವಿಧರ್ಮಿ ಆಚಾರಗಳಿಂದ ಬಂದದ್ದಾಗಿವೆ. ಸುಳ್ಳು ಧರ್ಮದಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳುವಂತೆ ಮತ್ತು ‘ಅಶುದ್ಧವಾದುದನ್ನು ಮುಟ್ಟುವುದನ್ನು ಬಿಟ್ಟುಬಿಡುವಂತೆ’ ಬೈಬಲ್‌ ಕೊಡುವ ಎಚ್ಚರಿಕೆಗೆ ನಾವು ಕಿವಿಗೊಡುವಲ್ಲಿ ಸುಳ್ಳು ಕಥೆಗಳಿಂದ ದಾರಿತಪ್ಪೆವು.—2 ಕೊರಿಂ. 6:14-17.

12, 13. (ಎ) ಸೈತಾನನು ಯಾವ ಸುಳ್ಳುಗಳನ್ನು ಹಬ್ಬಿಸಿದ್ದಾನೆ? ಆದರೆ ಸತ್ಯಾಂಶಗಳೇನು? (ಬಿ) ಸೈತಾನನ ಸುಳ್ಳು ಕಥೆಗಳಿಂದ ದಾರಿತಪ್ಪದಿರಲು ನಾವೇನು ಮಾಡಬೇಕು?

12 ಸೈತಾನನು ಇತರ ಸುಳ್ಳುಗಳನ್ನೂ ಹಬ್ಬಿಸಿದ್ದಾನೆ. ನಾವು ಅಜಾಗರೂಕರಾಗಿರುವಲ್ಲಿ ಅವು ನಮ್ಮನ್ನು ದಾರಿತಪ್ಪಿಸಬಲ್ಲವು. ಕೆಲವು ಉದಾಹರಣೆಗಳನ್ನು ಪರಿಗಣಿಸಿ. ನಿಮಗೆ ಇಷ್ಟಬಂದಂತೆ ಮಾಡಿ; ಸರಿ ಯಾವುದು ತಪ್ಪು ಯಾವುದು ಎಂಬದನ್ನು ನಿರ್ಣಯಿಸುವ ಸಾಮರ್ಥ್ಯ ನಿಮಗಿದೆ. ಮನೋರಂಜನಾ ಜಗತ್ತು ಮತ್ತು ಸಮೂಹ ಮಾಧ್ಯಮಗಳಲ್ಲಿ ಇದೇ ಅಭಿಪ್ರಾಯವನ್ನು ಪ್ರವರ್ಧಿಸಲಾಗುತ್ತಿದೆ. ಇಂಥ ತಪ್ಪಾದ ನೋಟವು ದೇವರ ನೈತಿಕ ಮಟ್ಟಗಳನ್ನೆಲ್ಲಾ ಮುರಿಯುವಂತೆ ನಮ್ಮ ಮೇಲೆ ಒತ್ತಡಹೇರುತ್ತದೆ. ಸತ್ಯಾಂಶವೇನೆಂದರೆ, ನೈತಿಕ ಮಾರ್ಗದರ್ಶನ ನಮಗೆ ತೀರಾ ಅಗತ್ಯ ಮತ್ತು ದೇವರು ಮಾತ್ರವೇ ಆ ನಮ್ಮ ಅಗತ್ಯವನ್ನು ಪೂರೈಸಶಕ್ತನು. (ಯೆರೆ. 10:23) ಭೂಮಿಯಲ್ಲಿ ನಡೆಯುತ್ತಿರುವ ಸಂಗತಿಗಳನ್ನು ದೇವರೆಂದೂ ಬದಲಾಯಿಸನು. ಇಂಥ ಮನೋಭಾವದಿಂದಾಗಿ ಜನರು ಕೇವಲ ಇಂದಿನ ಬಗ್ಗೆ ಮಾತ್ರ ಯೋಚಿಸುತ್ತಾರೆ. ಭವಿಷ್ಯದ ಬಗ್ಗೆಯಾಗಲಿ ದೇವರನ್ನು ಮೆಚ್ಚಿಸುವುದರ ಬಗ್ಗೆಯಾಗಲಿ ಅವರಿಗೆ ಚಿಂತೆಯೇ ಇಲ್ಲ. ಈ ಮನೋಭಾವದಿಂದ ಪ್ರಭಾವಿಸಲ್ಪಡುವಲ್ಲಿ ನಾವು ದೇವರ ಸೇವೆಯಲ್ಲಿ “ನಿಷ್ಕ್ರಿಯರು ಅಥವಾ ನಿಷ್ಫಲರು” ಆಗಿಬಿಡುವೆವು. (2 ಪೇತ್ರ 1:8) ನಿಜತ್ವವೇನೆಂದರೆ, ಯೆಹೋವನ ದಿನವು ಧಾವಿಸಿ ಬರುತ್ತಿದೆ. ಆದ್ದರಿಂದ ನಾವದಕ್ಕಾಗಿ ಕಾದುಕೊಂಡಿರಬೇಕಾಗಿದೆ. (ಮತ್ತಾ. 24:44) ದೇವರು ನಿಮ್ಮ ಬಗ್ಗೆ ವೈಯಕ್ತಿಕವಾಗಿ ಚಿಂತಿಸುವುದಿಲ್ಲ. ಸೈತಾನನು ಹಬ್ಬಿಸುವ ಈ ಸುಳ್ಳನ್ನು ನಂಬುವಲ್ಲಿ, ದೇವರ ಪ್ರೀತಿಗೆ ನಾವೆಂದೂ ಪಾತ್ರರಾಗಸಾಧ್ಯವಿಲ್ಲವೆಂಬ ಭಾವನೆ ನಮ್ಮಲ್ಲಿ ಬರಸಾಧ್ಯ. ಆಗ ಯೆಹೋವನ ಸೇವೆಮಾಡುವುದನ್ನೇ ನಾವು ನಿಲ್ಲಿಸಿಬಿಡಸಾಧ್ಯವಿದೆ. ನಿಜ ಸಂಗತಿಯೇನೆಂದರೆ, ಯೆಹೋವನು ತನ್ನ ಆರಾಧಕರಲ್ಲಿ ಪ್ರತಿಯೊಬ್ಬರನ್ನೂ ಪ್ರೀತಿಸುತ್ತಾನೆ, ಅಮೂಲ್ಯವೆಂದೆಣಿಸುತ್ತಾನೆ.—ಮತ್ತಾ. 10:29-31.

13 ಸೈತಾನನ ಲೋಕದ ಯೋಚನಾಧಾಟಿ ಮತ್ತು ಪ್ರವೃತ್ತಿಗಳು ಮೇಲ್ನೋಟಕ್ಕೆ ಸರಿಯೆಂಬಂತೆ ಕಾಣಬಹುದಾದ ಕಾರಣ ನಾವು ಜಾಗರೂಕರಾಗಿರತಕ್ಕದ್ದು. ಸೈತಾನನು ಜನರನ್ನು ವಂಚಿಸುವುದರಲ್ಲಿ ಪ್ರವೀಣನು ಎಂಬದನ್ನು ಮರೆಯದಿರಿ. ಸೈತಾನನು “ಚಾತುರ್ಯದಿಂದ ಕಲ್ಪಿಸಿದ ಸುಳ್ಳು ಕಥೆಗಳನ್ನು” ನಾವು ನಂಬಿ ದಾರಿತಪ್ಪದಿರಬೇಕಾದರೆ ದೇವರ ವಾಕ್ಯದಲ್ಲಿರುವ ಸಲಹೆ ಮತ್ತು ಮರುಜ್ಞಾಪನಗಳಿಗೆ ಕಿವಿಗೊಡಲೇಬೇಕು.—2 ಪೇತ್ರ 1:16.

“ಸೈತಾನನನ್ನು” ಹಿಂಬಾಲಿಸಬೇಡಿ

14. ಯುವಪ್ರಾಯದ ಕೆಲವು ವಿಧವೆಯರಿಗೆ ಪೌಲನು ಯಾವ ಎಚ್ಚರಿಕೆ ಕೊಟ್ಟನು? ಅವನ ಮಾತುಗಳನ್ನು ನಾವೆಲ್ಲರೂ ಹೃದಯಕ್ಕೆ ತೆಗೆದುಕೊಳ್ಳುವುದು ಅವಶ್ಯವೇಕೆ?

14 ಊಹಿಸಿ, ಒಂದು ರಸ್ತೆಫಲಕದ ಮೇಲೆ “ಸೈತಾನನನ್ನು ಹಿಂಬಾಲಿಸಲು ದಾರಿ” ಎಂದು ಬರೆದಿದೆ. ನಮ್ಮಲ್ಲಿ ಯಾರೂ ಆ ದಾರಿಯಲ್ಲಿ ಸಾಗಲು ಇಷ್ಟಪಡುವುದಿಲ್ಲ ಅಲ್ಲವೇ? ಆದರೆ ಸಮರ್ಪಿತ ಕ್ರೈಸ್ತರು ಸಹ ‘ಸೈತಾನನನ್ನು ಹಿಂಬಾಲಿಸುವಂತೆ ದಾರಿತಪ್ಪಿಸಲ್ಪಡಸಾಧ್ಯವಿರುವ’ ಅನೇಕ ವಿಧಗಳ ಬಗ್ಗೆ ಪೌಲನು ಎಚ್ಚರಿಸುತ್ತಾನೆ. (1 ತಿಮೊಥೆಯ 5:11-15 ಓದಿ.) ಆ ಮಾತುಗಳನ್ನು ಪೌಲನು “ಯುವಪ್ರಾಯದ ವಿಧವೆಯರನ್ನು” ಸಂಬೋಧಿಸಿ ಹೇಳಿರುವುದಾದರೂ ಅವುಗಳಲ್ಲಿರುವ ಮೂಲತತ್ತ್ವಗಳು ನಮ್ಮೆಲ್ಲರಿಗೂ ಅನ್ವಯವಾಗುತ್ತವೆ. ಪ್ರಥಮ ಶತಮಾನದಲ್ಲಿದ್ದ ಆ ಕ್ರೈಸ್ತ ಸ್ತ್ರೀಯರು ತಾವು ಸೈತಾನನನ್ನು ಹಿಂಬಾಲಿಸುತ್ತಿದ್ದೇವೆಂದು ನೆನಸಿರಲಿಕ್ಕಿಲ್ಲ. ಆದರೆ ಅವರ ಕ್ರಿಯೆಗಳು ಅವರು ಅದನ್ನೇ ಮಾಡುತ್ತಿದ್ದಾರೆಂಬದನ್ನು ತೋರಿಸಿಕೊಟ್ಟವು. ನಮಗರಿವಿಲ್ಲದೆಯೂ ಸೈತಾನನನ್ನು ಹಿಂಬಾಲಿಸುವುದನ್ನು ನಾವು ಹೇಗೆ ತಡೆಯಬಹುದು? ನಾವೀಗ, ಹಾನಿಕರ ಹರಟೆಮಾತಿನ ಸಂಬಂಧದಲ್ಲಿ ಪೌಲನು ಕೊಟ್ಟ ಎಚ್ಚರಿಕೆಯನ್ನು ಪರಿಗಣಿಸೋಣ.

15. ಸೈತಾನನ ಗುರಿಯೇನು? ಸೈತಾನನ ಕುತಂತ್ರಗಳನ್ನು ಪೌಲನು ಹೇಗೆ ಗುರುತಿಸಿದ್ದಾನೆ?

15 ಸುವಾರ್ತೆ ಸಾರುವುದನ್ನು ನಿಲ್ಲಿಸುವಂತೆ ಮಾಡುವ ಮೂಲಕ ನಮ್ಮ ನಂಬಿಕೆಯ ಸ್ವರವನ್ನಡಗಿಸುವದೇ ಸೈತಾನನ ಗುರಿ. (ಪ್ರಕ. 12:17) ಅದಕ್ಕಾಗಿ, ಸಮಯವನ್ನು ಹಾಳುಮಾಡುವ ಇಲ್ಲವೆ ನಮ್ಮೊಳಗೆ ಒಡಕನ್ನುಂಟುಮಾಡುವ ಚಟುವಟಿಕೆಗಳಲ್ಲಿ ನಮ್ಮನ್ನು ಒಳಗೂಡಿಸಲು ಅವನು ಪ್ರಯತ್ನಿಸುತ್ತಾನೆ. ಈ ಸಂಬಂಧದಲ್ಲಿ ಸೈತಾನನು ಉಪಯೋಗಿಸುವ ಕುತಂತ್ರಗಳಲ್ಲಿ ಕೆಲವನ್ನು ಪೌಲನು ತಿಳಿಸಿದ್ದಾನೆ. ‘ತಿರುಗಾಡುತ್ತ ಸೋಮಾರಿಗಳಾಗಿರುವುದು’: ಈ ತಂತ್ರಜ್ಞಾನ ಯುಗದಲ್ಲಿ ನಮ್ಮ ಹಾಗೂ ಇತರರ ಸಮಯವನ್ನು ಹಾಳುಮಾಡುವುದು ಅತಿ ಸುಲಭ. ಅನಾವಶ್ಯಕ ಇಲ್ಲವೆ ಸುಳ್ಳು ಸುದ್ದಿಯಿರುವ ಇ-ಮೇಲ್‌ಗಳನ್ನು ಮತ್ತು ಮೊಬೈಲ್‌ ಸಂದೇಶಗಳನ್ನು ಓದುವುದರಲ್ಲೂ ಕಳುಹಿಸುವುದರಲ್ಲೂ ಕಾಲಹರಣ ಮಾಡುವುದು ಇದಕ್ಕೊಂದು ಉದಾಹರಣೆ. ‘ಹರಟೆಮಾತಾಡುವುದು’: ಹಾನಿಕರ ಹರಟೆಮಾತು ಚಾಡಿಮಾತಿಗೆ ತಿರುಗಿ ಜಗಳಗಳಲ್ಲಿ ಪರ್ಯಾವಸಾನಗೊಳ್ಳುತ್ತದೆ. (ಜ್ಞಾನೋ. 26:20) ಚಾಡಿಕೋರರಿಗೆ ತಿಳಿದಿರಲಿ ತಿಳಿಯದಿರಲಿ ಒಂದು ಮಾತಂತೂ ಸತ್ಯ, ಅವರು ಪಿಶಾಚನಾದ ಸೈತಾನನನ್ನು ಅನುಕರಿಸುತ್ತಿದ್ದಾರೆ. * ‘ಬೇರೆಯವರ ವಿಷಯಗಳಲ್ಲಿ ತಲೆಹಾಕುವುದು’: ಇತರರು ತಮ್ಮ ವೈಯಕ್ತಿಕ ವಿಚಾರಗಳನ್ನು ಹೀಗೀಗೆ ನಿರ್ವಹಿಸಬೇಕೆಂದು ಹೇಳುವ ಹಕ್ಕು ನಮಗಿಲ್ಲ. ಈ ಎಲ್ಲ ಅಪಾಯಕಾರಿಯಾದಂಥ ವ್ಯರ್ಥ ವಿಷಯಗಳಲ್ಲಿ ನಾವು ಒಳಗೂಡುವಲ್ಲಿ ಅವು ನಮ್ಮನ್ನು ರಾಜ್ಯದ ಕುರಿತು ಸಾರುವ ದೇವದತ್ತ ಕೆಲಸದಿಂದ ಅಪಕರ್ಷಿಸುತ್ತವೆ. ಯೆಹೋವನ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಾವು ನಿಲ್ಲಿಸುವಲ್ಲಿ ಸೈತಾನನನ್ನು ಹಿಂಬಾಲಿಸಲಾರಂಭಿಸಿದ್ದೇವೆ ಎಂದರ್ಥ. ಸೈತಾನನ ಪಕ್ಷದಲ್ಲಿರುವಲ್ಲಿ ಯೆಹೋವನ ವಿರೋಧಿಗಳಾಗಿದ್ದೇವೆ ಎಂದರ್ಥ. ಯಾವ ಪಕ್ಷದಲ್ಲಿರಲು ಬಯಸುತ್ತೇವೆಂಬ ಬಗ್ಗೆ ನಾವೆಲ್ಲರೂ ಆಯ್ಕೆಮಾಡಬೇಕಿದೆ.—ಮತ್ತಾ. 12:30.

16. ಯಾವ ಬುದ್ಧಿವಾದಕ್ಕೆ ಕಿವಿಗೊಡುವುದು ‘ಸೈತಾನನನ್ನು ಹಿಂಬಾಲಿಸದಂತೆ’ ನಮಗೆ ಸಹಾಯಮಾಡುವುದು?

16 ನಾವು ಬೈಬಲಿನ ಬುದ್ಧಿವಾದಕ್ಕೆ ಕಿವಿಗೊಡುವಲ್ಲಿ ಸೈತಾನನನ್ನು ಹಿಂಬಾಲಿಸೆವು. ಪೌಲನ ಕೆಲವು ವಿವೇಕಯುತ ಸಲಹೆಗಳನ್ನು ಪರಿಗಣಿಸೋಣ. “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿರಿ.” (1 ಕೊರಿಂ. 15:58) ರಾಜ್ಯ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರುವಲ್ಲಿ ಕಾಲಹರಣ ಮತ್ತು ಸೋಮಾರಿತನದಿಂದ ಉಂಟಾಗುವ ಅಪಾಯ ನಮಗೆ ತಟ್ಟದು. (ಮತ್ತಾ. 6:33) “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ.” (ಎಫೆ. 4:29) ಹಾನಿಕರ ಹರಟೆಮಾತುಗಳಿಗೆ ಕಿವಿಗೊಡದಿರಲು ಹಾಗೂ ಅಂಥ ಮಾತುಗಳನ್ನು ಹಬ್ಬಿಸದಿರಲು ದೃಢತೀರ್ಮಾನ ಮಾಡೋಣ. * ಜೊತೆ ವಿಶ್ವಾಸಿಗಳೆಡೆಗೆ ಭರವಸೆ ಮತ್ತು ಗೌರವವನ್ನು ಬೆಳೆಸಿಕೊಳ್ಳೋಣ. ಆಗ ನಮ್ಮ ಮಾತುಗಳು ಇತರರನ್ನು ಕಟ್ಟುವಂತಿರುತ್ತವೆಯೇ ವಿನಾ ಕೆಡವುವಂತಿರುವುದಿಲ್ಲ. “ಸ್ವಂತ ಕಾರ್ಯವನ್ನೇ ಮಾಡಿಕೊಂಡಿರುವುದನ್ನು . . . ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ.” (1 ಥೆಸ. 4:11) ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸೋಣ. ಅದೇ ಸಮಯದಲ್ಲಿ ಅವರ ಖಾಸಗಿ ವಿಚಾರಗಳಲ್ಲಿ ಮೂಗುತೂರಿಸದಿರೋಣ. ಹೀಗೆ ಅವರನ್ನು ಗೌರವಿಸೋಣ. ಇತರರು ಸ್ವತಃ ನಿರ್ಣಯಮಾಡಬೇಕಾಗಿರುವ ವಿಷಯಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರದಿರೋಣ.—ಗಲಾ. 6:5.

17. (ಎ) ನಾವು ಯಾವುದನ್ನೆಲ್ಲಾ ಹಿಂಬಾಲಿಸಬಾರದೆಂಬ ಬಗ್ಗೆ ಯೆಹೋವನು ಏಕೆ ಎಚ್ಚರಿಕೆ ಕೊಡುತ್ತಾನೆ? (ಬಿ) ನಾವು ಆರಿಸಿಕೊಳ್ಳಬೇಕೆಂದು ಆತನು ಬಯಸುವ ದಾರಿಯ ಸಂಬಂಧದಲ್ಲಿ ನಿಮ್ಮ ದೃಢನಿರ್ಧಾರವೇನು?

17 ನಾವು ಯಾವುದನ್ನೆಲ್ಲ ಹಿಂಬಾಲಿಸಬಾರದು ಎನ್ನುವುದನ್ನು ಯೆಹೋವನು ನಮಗೆ ಸ್ಪಷ್ಟವಾಗಿ ತಿಳಿಸುತ್ತಿರುವುದಕ್ಕಾಗಿ ನಾವೆಷ್ಟು ಕೃತಜ್ಞರು! ಈ ಲೇಖನದಲ್ಲೂ ಹಿಂದಿನ ಲೇಖನದಲ್ಲೂ ಚರ್ಚಿಸಲಾದ ಎಚ್ಚರಿಕೆಗಳನ್ನು ಯೆಹೋವನು ನಮ್ಮ ಮೇಲಿರುವ ಪ್ರೀತಿಯಿಂದ ಕೊಟ್ಟಿದ್ದಾನೆ ಎನ್ನುವುದನ್ನು ಮರೆಯದಿರಿ. ಸೈತಾನನ ದಾರಿತಪ್ಪಿಸುವ ರಸ್ತೆಫಲಕಗಳನ್ನು ಅನುಸರಿಸುವುದರಿಂದ ಆಗುವ ಅಸಂತೋಷ, ದುಃಖವನ್ನು ನಾವು ಅನುಭವಿಸಬಾರದೆಂಬದೇ ಯೆಹೋವನ ಅಪೇಕ್ಷೆ. ನಾವು ಆರಿಸಿಕೊಳ್ಳಬೇಕೆಂದು ಆತನು ಬಯಸುವ ದಾರಿಯು ಬಿಕ್ಕಟ್ಟಾಗಿರುವುದಾದರೂ ಅದು ಅತ್ಯುತ್ತಮ ಗಮ್ಯಸ್ಥಾನಕ್ಕೆ ಅಂದರೆ ನಿತ್ಯಜೀವಕ್ಕೆ ನಡೆಸುತ್ತದೆ. (ಮತ್ತಾ. 7:14) “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂಬ ಯೆಹೋವನ ಬುದ್ಧಿವಾದವನ್ನು ಪಾಲಿಸಲು ನಾವು ಮಾಡಿರುವ ದೃಢನಿರ್ಧಾರದಿಂದ ಎಂದೂ ಹಿಂದೆಸರಿಯದಿರೋಣ.—ಯೆಶಾ. 30:21.

[ಪಾದಟಿಪ್ಪಣಿಗಳು]

^ ಪ್ಯಾರ. 4 ಸತ್ಯಾರಾಧನೆಯ ವಿರುದ್ಧ ದಂಗೆಯೆದ್ದು ಅದನ್ನು ತೊರೆಯುವುದೇ “ಧರ್ಮಭ್ರಷ್ಟತೆ” ಆಗಿದೆ.

^ ಪ್ಯಾರ. 10 ಕೆಲವು ಜನರು ಬೈಬಲಿನ ಭಾಗವೆಂದು ಪರಿಗಣಿಸುವ ಟೊಬಿತ ಅಥವಾ ಟೊಬಾಯಸನ ಪುಸ್ತಕವು ಪೌಲನ ದಿನಗಳಲ್ಲಿ ಪ್ರಚಲಿತವಾಗಿದ್ದ ಸುಳ್ಳು ಕಥೆಗಳಿಗೆ ಒಂದು ಉದಾಹರಣೆಯಾಗಿದೆ. ಅದು ಸುಮಾರು ಕ್ರಿ. ಪೂ. ಮೂರನೇ ಶತಮಾನದಲ್ಲಿ ಬರೆಯಲ್ಪಟ್ಟಿತು. ಆ ಪುಸ್ತಕವು ಸುಳ್ಳು ನಂಬಿಕೆಗಳು ಮತ್ತು ಇಂದ್ರಜಾಲದ ಕಥೆಗಳಿಂದಲೇ ತುಂಬಿಕೊಂಡಿದೆ. ಅದು ಅಸಂಭವವಾದ ಸಂಗತಿಗಳನ್ನು ನಿಜವೆಂಬಂತೆ ವರ್ಣಿಸುತ್ತದೆ.—ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌, ಸಂಪುಟ 1, ಪುಟ 122 ನೋಡಿ.

^ ಪ್ಯಾರ. 15 “ಪಿಶಾಚ” ಎಂಬದಕ್ಕಿರುವ ಗ್ರೀಕ್‌ ಪದ ಡಯಾಬೊಲಾಸ್‌ ಆಗಿದ್ದು, “ಚಾಡಿಕೋರ” ಎಂಬರ್ಥವನ್ನು ಕೊಡುತ್ತದೆ. ಈ ಪದವನ್ನು ಮಹಾ ಚಾಡಿಕೋರನಾದ ಸೈತಾನನ ಇನ್ನೊಂದು ಬಿರುದಾಗಿ ಉಪಯೋಗಿಸಲಾಗುತ್ತದೆ.—ಯೋಹಾ. 8:44; ಪ್ರಕ. 12:9, 10.

^ ಪ್ಯಾರ. 16 “ಗರಿಗಳು ಗಾಳಿಪಾಲಾದಂತೆ” ಎಂಬ ಚೌಕ ನೋಡಿ.

ನಿಮ್ಮ ಉತ್ತರವೇನು?

ಈ ಕೆಳಗಿನ ವಚನಗಳಲ್ಲಿರುವ ಎಚ್ಚರಿಕೆಗಳನ್ನು ನೀವು ಹೇಗೆ ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಬಲ್ಲಿರಿ?

2 ಪೇತ್ರ 2:1-3

1 ತಿಮೊಥೆಯ 1:3, 4

1 ತಿಮೊಥೆಯ 5:11-15

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚೌಕ/ಚಿತ್ರಗಳು]

ಗರಿಗಳು ಗಾಳಿಪಾಲಾದಂತೆ

ಹಾನಿಕರ ಹರಟೆಮಾತುಗಳನ್ನು ಹರಡಿಸುವುದರ ಪರಿಣಾಮಗಳನ್ನು ಯೆಹೂದಿ ಕಥೆಯೊಂದು ಚೆನ್ನಾಗಿ ದೃಷ್ಟಾಂತಿಸುತ್ತದೆ. ಆ ಕಥೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗುವುದಾದರೂ ಅದರ ತಿರುಳು ಇಲ್ಲಿದೆ.

ಪಟ್ಟಣದಲ್ಲಿರುವ ಪಂಡಿತನೊಬ್ಬನ ಬಗ್ಗೆ ಒಬ್ಬ ವ್ಯಕ್ತಿಯು ಇಲ್ಲಸಲ್ಲದ್ದನ್ನು ಹೇಳುತ್ತಾ ತಿರುಗುತ್ತಿದ್ದ. ಆದರೆ ಸಮಯಾನಂತರ ಆ ಕೇಡಿಗ ಬುದ್ಧಿಯ ಹರಟೆಮಲ್ಲನಿಗೆ ತಾನು ಮಾಡಿದ್ದು ತಪ್ಪೆಂದು ಅರಿವಾಗಿ ಕ್ಷಮೆ ಯಾಚಿಸಲೆಂದು ಆ ಪಂಡಿತನ ಬಳಿ ಹೋದ. ತನ್ನಿಂದಾದ ತಪ್ಪಿಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ಧನೆಂದು ಹೇಳಿದ. ಆಗ ಆ ಪಂಡಿತನು ಅವನಿಗೆ ಗರಿಗಳ ಒಂದು ದಿಂಬನ್ನು ಹರಿದು ಅದರೊಳಗಿರುವ ಗರಿಗಳನ್ನೆಲ್ಲ ಗಾಳಿಗೆ ತೂರುವಂತೆ ಹೇಳಿದನು. ಆ ವ್ಯಕ್ತಿಗೆ ಪಂಡಿತನು ಯಾಕೆ ಹೀಗೆ ಹೇಳಿದನೆಂಬದು ಅರ್ಥವಾಗದಿದ್ದರೂ ಅವನು ಹೇಳಿದಂತೆ ಮಾಡಿ ಹಿಂತಿರುಗಿ ಬಂದು,

“ಸ್ವಾಮಿ, ಈಗ ನನ್ನನ್ನು ಕ್ಷಮಿಸುವಿರಾ?” ಎಂದ.

ಆಗ ಆ ಪಂಡಿತನು, “ಮೊದಲು ಹೋಗಿ ನೀನು ಗಾಳಿಗೆ ತೂರಿದ ಆ ಎಲ್ಲ ಗರಿಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದ.

ಅದಕ್ಕವನು, “ಅದು ಹೇಗೆ ಸಾಧ್ಯ ಸ್ವಾಮಿ! ಅವೆಲ್ಲ ಗಾಳಿಯಲ್ಲಿ ಹಾರಿಕೊಂಡು ಹೋಗಿರುತ್ತವಲ್ಲ” ಅಂದ.

ಆಗ ಆ ಪಂಡಿತನು, “ನಿನ್ನ ಮಾತುಗಳಿಂದಾದ ಹಾನಿಯನ್ನು ಸರಿಪಡಿಸುವುದೂ ಅಷ್ಟೇ ಅಸಾಧ್ಯ” ಎಂದು ಹೇಳಿದ.

ಇದರಲ್ಲಿರುವ ಪಾಠ ಸ್ಪಷ್ಟ: ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಮಾತಿನಂತೆ ಒಮ್ಮೆ ಆಡಿದ ಮಾತನ್ನು ಹಿಂದೆಗೆದುಕೊಳ್ಳಲಾಗದು. ಹರಟೆಮಾತಿನಿಂದ ಮನಸ್ಸಿಗಾಗುವ ಗಾಯ ಮಾಸದು. ಹಾಗಾದರೆ ಹರಟೆಮಾತಾಡುವ ಮುನ್ನ ನಾವು ಒಂದರ್ಥದಲ್ಲಿ ಗರಿಗಳನ್ನು ಗಾಳಿಗೆ ತೂರಲಿದ್ದೇವೆ ಎಂಬದನ್ನು ನೆನಪಿನಲ್ಲಿಡಬೇಕು.

[ಪುಟ 16ರಲ್ಲಿರುವ ಚಿತ್ರ]

ಕೆಲವರು ಧರ್ಮಭ್ರಷ್ಟರನ್ನು ಹೇಗೆ ಮನೆಯೊಳಗೆ ಸೇರಿಸಿಕೊಂಡಾರು?