ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?

ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?

ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?

“ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ . . . ಆಗಿದೆ.”—ಇಬ್ರಿ. 4:12.

1. ನಾವಿಂದು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಸಾಧ್ಯವಿದೆ? ಅದನ್ನು ಮಾಡುವುದು ಹೇಳಿದಷ್ಟು ಸುಲಭವಲ್ಲವೇಕೆ?

ನಾವು ಯೆಹೋವನಿಗೆ ವಿಧೇಯರಾಗುವಲ್ಲಿ ಮತ್ತು ಆತನ ಸಂಘಟನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಲ್ಲಿ ದೇವರ ವಿಶ್ರಾಂತಿಯಲ್ಲಿ ಸೇರಸಾಧ್ಯವೆಂದು ಹಿಂದಿನ ಲೇಖನದಲ್ಲಿ ಕಲಿತೆವು. ಆದರೆ ಇದನ್ನು ಮಾಡುವುದು ಹೇಳಿದಷ್ಟು ಸುಲಭವಲ್ಲ ನಿಜ. ಉದಾಹರಣೆಗೆ, ನಮಗೆ ಇಷ್ಟವಿರುವ ಯಾವುದಾದರೂ ಒಂದು ಸಂಗತಿಯು ಯೆಹೋವನಿಗೆ ಮೆಚ್ಚಿಕೆಯಾಗಿಲ್ಲವೆಂದು ಕಲಿಯುವಾಗ ಅದಕ್ಕೆ ತಕ್ಷಣ ವಿಧೇಯತೆ ತೋರಿಸಲು ಕೆಲವೊಮ್ಮೆ ಕಷ್ಟವೆನಿಸಬಹುದು. ಒಂದುವೇಳೆ ನಮಗೆ ಹಾಗನಿಸುವಲ್ಲಿ, ‘ವಿಧೇಯತೆ ತೋರಿಸಲು ಸಿದ್ಧರಾಗಿರುವ’ ವಿಷಯದಲ್ಲಿ ನಾವು ಇನ್ನೂ ಪ್ರಗತಿಮಾಡಬೇಕಿದೆ ಎಂದರ್ಥ. (ಯಾಕೋ. 3:17) ಎಲ್ಲ ಸಮಯಗಳಲ್ಲಿ ವಿಧೇಯರಾಗಿರಲು ನಾವು ನಿಜವಾಗಿಯೂ ಸಿದ್ಧರಿದ್ದೇವೆ ಎಂಬದನ್ನು ತೋರಿಸಲು ನಮಗೆ ಅವಕಾಶವಿರುವ ಕೆಲವು ಸನ್ನಿವೇಶಗಳನ್ನು ಈ ಲೇಖನದಲ್ಲಿ ನೋಡಲಿರುವೆವು.

2, 3. ನಾವು ಯೆಹೋವನನ್ನು ಮೆಚ್ಚಿಸಬೇಕಾದರೆ ಏನು ಮಾಡುತ್ತಿರಬೇಕು?

2 ಬೈಬಲಾಧಾರಿತ ಸಲಹೆಗಳಿಗೆ ನೀವು ಸಿದ್ಧಮನಸ್ಸಿನಿಂದ ವಿಧೇಯತೆ ತೋರಿಸುತ್ತೀರೋ? ಈ ಬಗ್ಗೆ ಯೋಚಿಸಿ: ಯೆಹೋವನು ತನ್ನ ಸಂಘಟನೆಯೊಳಗೆ ತರುವ ಜನರು “ಸಮಸ್ತಜನಾಂಗಗಳ ಇಷ್ಟವಸ್ತುಗಳು” ಆಗಿದ್ದಾರೆಂದು ಬೈಬಲ್‌ ಹೇಳುತ್ತದೆ. (ಹಗ್ಗಾ. 2:7) ಅದರರ್ಥ ದೇವರು ಯಾರನ್ನು ಆರಿಸಿಕೊಳ್ಳುತ್ತಾನೋ ಅವರು ಆತನಿಗೆ ಅಮೂಲ್ಯರಾಗಿರುತ್ತಾರೆ. ಏಕೆಂದರೆ ಅವರು ಒಳ್ಳೆಯದನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ಅನೇಕರು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದ ಹೊಸದರಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿದ್ದೆವು ನಿಜ. ಆದರೆ ದೇವರ ಹಾಗೂ ಆತನ ಪ್ರಿಯ ಪುತ್ರನ ಮೇಲಣ ಪ್ರೀತಿಯಿಂದಾಗಿ ದೇವರಿಗೆ ಸಂಪೂರ್ಣವಾಗಿ ಮೆಚ್ಚಿಕೆಯಾಗುವಂಥ ರೀತಿಯಲ್ಲಿ ನಮ್ಮ ಮನೋಭಾವ ಹಾಗೂ ಹವ್ಯಾಸಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆವು. ಹಾಗೆ ಮಾಡಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆವು ಹಾಗೂ ಕಠಿಣ ಪ್ರಯತ್ನ ಮಾಡಿದೆವು. ಅನಂತರ ನಾವು ದೀಕ್ಷಾಸ್ನಾನ ಪಡೆದು ದೇವರ ಅನುಗ್ರಹಕ್ಕೆ ಪಾತ್ರರಾದೆವು.—ಕೊಲೊಸ್ಸೆ 1:9, 10 ಓದಿ.

3 ಆದರೆ ಅಪರಿಪೂರ್ಣತೆಯ ವಿರುದ್ಧ ನಮ್ಮ ಹೋರಾಟವು ದೀಕ್ಷಾಸ್ನಾನದೊಂದಿಗೆ ಕೊನೆಗೊಳ್ಳಲಿಲ್ಲ. ತದನಂತರವೂ ಅದು ಮುಂದುವರಿಯಿತು ಹಾಗೂ ನಾವು ಅಪರಿಪೂರ್ಣರಾಗಿರುವ ತನಕ ಮುಂದುವರಿಯುತ್ತಲೇ ಇರುವುದು. ಆದರೆ ನಾವು ಆ ಹೋರಾಟದಲ್ಲಿ ಬಿಟ್ಟುಕೊಡದೆ ಯೆಹೋವನನ್ನು ಮೆಚ್ಚಿಸಲು ನಮ್ಮ ಕೈಲಾದದ್ದನ್ನೆಲ್ಲ ಮಾಡುವಲ್ಲಿ ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವುದಾಗಿ ಆತನು ಮಾತುಕೊಟ್ಟಿದ್ದಾನೆ.

ಸಲಹೆ ಕೊಡಲ್ಪಟ್ಟಾಗ

4. ನಾವು ಬೈಬಲಾಧಾರಿತ ಸಲಹೆಯನ್ನು ಯಾವ ಮೂರು ವಿಧಗಳಲ್ಲಿ ಪಡೆಯಬಹುದು?

4 ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕಾದರೆ ನಾವು ಮೊದಲು ಆ ನ್ಯೂನತೆಗಳನ್ನು ಗುರುತಿಸಬೇಕು. ರಾಜ್ಯ ಸಭಾಗೃಹದಲ್ಲಿ ಕೊಡಲ್ಪಡುವ ಆತ್ಮಾವಲೋಕನ ಮಾಡುವಂತೆ ಪ್ರೇರಿಸುವ ಭಾಷಣ ಅಥವಾ ನಮ್ಮ ಪ್ರಕಾಶನಗಳಲ್ಲಿ ಬರುವ ಆಲೋಚನಾಪ್ರೇರಕ ಲೇಖನವೊಂದು ನಮ್ಮಲ್ಲಿರುವ ಗಂಭೀರ ದೋಷವನ್ನು ತೋರಿಸಿಕೊಡಬಹುದು. ಒಂದುವೇಳೆ ನಾವು ಭಾಷಣದಲ್ಲಿ ತಿಳಿಸಲಾದ ಅಂಶವನ್ನು ಗ್ರಹಿಸಲು ಅಥವಾ ಲಿಖಿತರೂಪದಲ್ಲಿ ಬಂದ ಸಲಹೆಯನ್ನು ಅನ್ವಯಿಸಿಕೊಳ್ಳಲು ತಪ್ಪಿಹೋಗುವಲ್ಲಿ ಯೆಹೋವನು ಜೊತೆ ಕ್ರೈಸ್ತನನ್ನು ಉಪಯೋಗಿಸಿ ಆ ದೋಷವನ್ನು ನಮ್ಮ ಗಮನಕ್ಕೆ ತರಬಹುದು.—ಗಲಾತ್ಯ 6:1 ಓದಿ.

5. ನಮಗೆ ಸಲಹೆ ಕೊಡಲ್ಪಟ್ಟಾಗ ನಾವು ಕೆಲವೊಮ್ಮೆ ಯಾವ ವಿಧಗಳಲ್ಲಿ ಪ್ರತಿಕ್ರಿಯಿಸುತ್ತೇವೆ? ಕ್ರೈಸ್ತ ಕುರುಬರು ನಮಗೆ ಸಹಾಯಮಾಡುವ ವಿಷಯದಲ್ಲಿ ಪ್ರಯತ್ನಸಡಿಲಿಸಬಾರದೇಕೆ?

5 ಅಪರಿಪೂರ್ಣ ಮಾನವನು ಕೊಡುವ ಸಲಹೆಯನ್ನು ಸ್ವೀಕರಿಸುವುದು ಅಷ್ಟು ಸುಲಭವಲ್ಲ, ಅವನದನ್ನು ಎಷ್ಟೇ ಜಾಣ್ಮೆ ಹಾಗೂ ಪ್ರೀತಿಯಿಂದ ಕೊಟ್ಟರೂ ಸರಿಯೇ. ಆದರೆ ‘ಸೌಮ್ಯಭಾವದಿಂದ ನಮ್ಮನ್ನು ಸರಿಹೊಂದಿಸಲು ಪ್ರಯತ್ನಿಸುವಂತೆ’ ಯೆಹೋವನು ಆಧ್ಯಾತ್ಮಿಕ ಅರ್ಹತೆಯುಳ್ಳವರಿಗೆ ಆಜ್ಞೆಕೊಟ್ಟಿದ್ದಾನೆಂದು ಗಲಾತ್ಯ 6:1 ತೋರಿಸುತ್ತದೆ. ನಾವು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಲ್ಲಿ ನಾವು ದೇವರಿಗೆ ತುಂಬ “ಇಷ್ಟ” ಅಂದರೆ ಅಮೂಲ್ಯರು ಆಗುತ್ತೇವೆ. ವಿಚಿತ್ರ ಸಂಗತಿಯೇನೆಂದರೆ, ನಾವು ಪ್ರಾರ್ಥನೆಗಳಲ್ಲಿ ಅಪರಿಪೂರ್ಣರೆಂಬದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಬೇರೆಯವರು ನಮ್ಮ ದೌರ್ಬಲ್ಯವನ್ನು ನಮ್ಮ ಗಮನಕ್ಕೆ ತರುವಲ್ಲಿ ನಾವು ಕೆಲವೊಮ್ಮೆ ನಮ್ಮನ್ನೇ ಸರ್ಮಥಿಸಿಕೊಳ್ಳಲು ಪ್ರಯತ್ನಿಸುತ್ತೇವೆ, ಸಮಸ್ಯೆಯ ಗಂಭೀರತೆಯನ್ನು ತೇಲಿಸಿಬಿಡುತ್ತೇವೆ, ಸಲಹೆಗಾರನ ಹೇತುವನ್ನು ಪ್ರಶ್ನಿಸುತ್ತೇವೆ ಅಥವಾ ಅವನು ಸಲಹೆ ಕೊಟ್ಟ ವಿಧದ ಬಗ್ಗೆ ಆಕ್ಷೇಪವೆತ್ತುತ್ತೇವೆ. (2 ಅರ. 5:11) ಅದರಲ್ಲೂ ನಮಗೆ ಕೊಡಲ್ಪಡುವ ಸಲಹೆಯು ಸೂಕ್ಷ್ಮ ವಿಷಯಕ್ಕೆ ಸಂಬಂಧಪಟ್ಟಿರುವಲ್ಲಿ ಉದಾಹರಣೆಗೆ, ಮನೆಮಂದಿಯೊಬ್ಬರ ನಡವಳಿಕೆ, ನಮ್ಮ ಉಡುಪು ಮತ್ತು ಹೊರತೋರಿಕೆ, ವೈಯಕ್ತಿಕ ಶುಚಿತ್ವ ಅಥವಾ ನಾವು ತುಂಬ ಆನಂದಿಸುವ ವಿನೋದವಿಹಾರವನ್ನು ಯೆಹೋವನು ದ್ವೇಷಿಸುತ್ತಾನೆ ಎಂಬದರ ಬಗ್ಗೆ ಆಗಿರುವಲ್ಲಿ ನಾವು ಕಟುವಾಗಿ ಪ್ರತಿಕ್ರಿಯಿಸಿಬಿಡಬಹುದು. ಇದು ನಮಗೂ ನಮ್ಮ ಸಹಾಯಕ್ಕೆ ಬಂದ ಸಹೋದರನಿಗೂ ಬೇಸರವನ್ನುಂಟುಮಾಡಬಹುದು. ಆದರೆ ನಾವು ತಣ್ಣಗಾದ ಮೇಲೆ ನಮ್ಮ ಒಳಿತಿಗಾಗಿಯೇ ಅವನು ಸಲಹೆ ಕೊಟ್ಟನೆಂದು ಒಪ್ಪಿಕೊಳ್ಳುತ್ತೇವೆ.

6. ದೇವರ ವಾಕ್ಯ “ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ” ಹೇಗೆ ತೋರಿಸಿಕೊಡುತ್ತದೆ?

6 ಈ ಲೇಖನದ ಮುಖ್ಯ ವಚನವು ದೇವರ ವಾಕ್ಯ ‘ಪ್ರಬಲವಾದದ್ದು’ ಎಂಬದನ್ನು ನಮಗೆ ನೆನಪುಹುಟ್ಟಿಸುತ್ತದೆ. ಹೌದು, ಜನರ ಜೀವನಗಳನ್ನು ಬದಲಾಯಿಸುವಷ್ಟರ ಮಟ್ಟಿಗಿನ ಶಕ್ತಿ ದೇವರ ವಾಕ್ಯಕ್ಕಿದೆ. ದೀಕ್ಷಾಸ್ನಾನದ ಮೊದಲು ಬದಲಾವಣೆಗಳನ್ನು ಮಾಡಲು ಅದು ನಮಗೆ ಸಹಾಯಮಾಡಿದಂತೆಯೇ ದೀಕ್ಷಾಸ್ನಾನದ ನಂತರವೂ ಬದಲಾವಣೆಗಳನ್ನು ಮಾಡಲು ಸಹಾಯಮಾಡಬಲ್ಲದು. ದೇವರ ವಾಕ್ಯವು “ಪ್ರಾಣಮನಸ್ಸುಗಳನ್ನು ಮತ್ತು ಕೀಲುಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ” ಎಂದು ಸಹ ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ ತಿಳಿಸಿದನು. (ಇಬ್ರಿ. 4:12) ಬೇರೆ ಮಾತುಗಳಲ್ಲಿ ಹೇಳುವುದಾದರೆ ದೇವರು ನಮ್ಮಿಂದ ಅಪೇಕ್ಷಿಸುವ ವಿಷಯಗಳನ್ನು ಬೈಬಲಿನಿಂದ ಸ್ಪಷ್ಟವಾಗಿ ಅರ್ಥಮಾಡಿಕೊಂಡ ನಂತರ ನಾವು ಅದಕ್ಕೆ ಪ್ರತಿಕ್ರಿಯಿಸುವ ವಿಧವು ನಮ್ಮ ಅಂತರಂಗಕ್ಕೆ ಕನ್ನಡಿಹಿಡಿದಂತಿರುವುದು. ನಾವು ಹೊರಗೆ (“ಪ್ರಾಣ”) ಎಂಥವರಾಗಿ ತೋರಿಸಿಕೊಳ್ಳುತ್ತೇವೆ ಮತ್ತು ನಮ್ಮ ನಿಜಸ್ವರೂಪ (“ಮನಸ್ಸು”) ಎಂಥದ್ದಾಗಿದೆ ಎಂಬದರ ನಡುವೆ ಕೆಲವೊಮ್ಮೆ ವ್ಯತ್ಯಾಸ ತೋರಿಬರುತ್ತದೋ? (ಮತ್ತಾಯ 23:27, 28 ಓದಿ.) ಈ ಕೆಳಗಿನ ಸನ್ನಿವೇಶಗಳಲ್ಲಿ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬದನ್ನು ಪರಿಗಣಿಸಿ.

ಯೆಹೋವನ ಸಂಘಟನೆಯೊಂದಿಗೆ ಸಾಗಿರಿ

7, 8. (ಎ) ಕೆಲವು ಯೆಹೂದಿ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸಲು ಬಯಸಿದ್ದೇಕೆ? (ಬಿ) ಆದರೆ ಅವರು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈಯುತ್ತಿದ್ದರೆಂದು ಹೇಗೆ ಹೇಳಸಾಧ್ಯ?

7 ನಮ್ಮಲ್ಲಿ ಅನೇಕರು ಜ್ಞಾನೋಕ್ತಿ 4:18ರಲ್ಲಿರುವ ಮಾತುಗಳನ್ನು ಬಾಯಿಪಾಠವಾಗಿ ಹೇಳಬಹುದು. ಅದನ್ನುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ಅದರರ್ಥ ಸಮಯಸಂದಂತೆ ನಮ್ಮ ನಡವಳಿಕೆ ಹಾಗೂ ದೇವರ ಉದ್ದೇಶದ ಕುರಿತ ನಮ್ಮ ತಿಳಿವಳಿಕೆ ಪ್ರಗತಿ ಹೊಂದುತ್ತಿರುತ್ತದೆ.

8 ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ ಯೇಸುವಿನ ಮರಣದ ನಂತರವೂ ಅನೇಕ ಯೆಹೂದಿ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುತ್ತಿದ್ದರು. (ಅ. ಕಾ. 21:20) ಕ್ರೈಸ್ತರು ಇನ್ನು ಧರ್ಮಶಾಸ್ತ್ರದ ಕೆಳಗಿಲ್ಲವೆಂಬದನ್ನು ಪೌಲನು ಜಾಣ್ಮೆಯಿಂದ ವಿವರಿಸಿದರೂ ಅನೇಕರು ಅವನ ದೇವಪ್ರೇರಿತ ತರ್ಕವನ್ನು ತಳ್ಳಿಹಾಕಿದರು. (ಕೊಲೊ. 2:13-15) ಪ್ರಾಯಶಃ ಧರ್ಮಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸುವಲ್ಲಿ ಯೆಹೂದಿ ಧರ್ಮಪಾಲಕರಿಂದ ಬರುತ್ತಿದ್ದ ಹಿಂಸೆಯಿಂದ ತಪ್ಪಿಸಿಕೊಳ್ಳಬಹುದೆಂದು ಅವರು ನೆನಸಿದ್ದರು. ಆದರೆ, ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದ ವಿಷಯವಂತೂ ಸ್ಪಷ್ಟ. ಅವರು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈಯುವಲ್ಲಿ ದೇವರ ವಿಶ್ರಾಂತಿಯಲ್ಲಿ ಸೇರಲಾರರು. * (ಇಬ್ರಿ. 4:1, 2, 6; ಇಬ್ರಿಯ 4:11 ಓದಿ.) ಅವರು ದೇವರ ಅನುಗ್ರಹ ಪಡೆಯಬೇಕಾದರೆ ಆತನು ತಮ್ಮನ್ನು ಭಿನ್ನ ರೀತಿಯಲ್ಲಿ ಮಾರ್ಗದರ್ಶಿಸುತ್ತಿದ್ದಾನೆಂಬದನ್ನು ಒಪ್ಪಿಕೊಳ್ಳಬೇಕಿತ್ತು.

9. ಶಾಸ್ತ್ರವಚನಗಳ ತಿಳಿವಳಿಕೆಯಲ್ಲಿ ಹೊಂದಾಣಿಕೆ ಮಾಡಲ್ಪಟ್ಟಾಗ ನಮ್ಮ ಮನೋಭಾವ ಹೇಗಿರಬೇಕು?

9 ಆಧುನಿಕ ಸಮಯಗಳಲ್ಲಿ ಕೆಲವು ಬೈಬಲ್‌ ಬೋಧನೆಗಳ ಬಗೆಗಿನ ನಮ್ಮ ತಿಳಿವಳಿಕೆಯನ್ನು ಪರಿಷ್ಕರಿಸಲಾಯಿತು. ಇಂಥ ಬದಲಾವಣೆಯು ನಮ್ಮನ್ನು ಕಿರಿಕಿರಿಗೊಳಿಸಬಾರದು. ಬದಲಾಗಿ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ ಮೇಲೆ ನಮಗಿರುವ ಭರವಸೆಯನ್ನು ಹೆಚ್ಚಿಸಬೇಕು. ಆ ‘ಆಳನ್ನು’ ಪ್ರತಿನಿಧಿಸುವ ಸದಸ್ಯರು ಸತ್ಯದ ನಿರ್ದಿಷ್ಟ ಅಂಶದ ಸಂಬಂಧದಲ್ಲಿ ಈಗಾಗಲೇ ಇರುವ ದೃಷ್ಟಿಕೋನವನ್ನು ಸ್ಪಷ್ಟೀಕರಿಸುವ ಅಥವಾ ಪರಿಷ್ಕರಿಸುವ ಆವಶ್ಯಕತೆಯನ್ನು ಮನಗಾಣುವಲ್ಲಿ ಅಂಥ ಹೊಂದಾಣಿಕೆಯನ್ನು ಮಾಡಲು ಹಿಂದೆಸರಿಯುವುದಿಲ್ಲ. ಹೀಗೆ ಹೊಂದಾಣಿಕೆಗಳನ್ನು ಮಾಡುವಲ್ಲಿ ಕೆಲವರು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ ಬಗ್ಗೆ ಹೀನಾಯವಾದ ಮಾತುಗಳನ್ನಾಡುವರು ಎಂಬದು ಅವರಿಗೆ ತಿಳಿದಿದೆ. ಆದರೆ ಅದು ಅವರಿಗೆ ಪ್ರಾಮುಖ್ಯವಲ್ಲ. ದೇವರ ಉದ್ದೇಶದೊಂದಿಗೆ ಸಹಕರಿಸುವುದೇ ಅವರಿಗೆ ಹೆಚ್ಚು ಪ್ರಾಮುಖ್ಯವಾಗಿದೆ. ಶಾಸ್ತ್ರವಚನಗಳ ನಮ್ಮ ತಿಳಿವಳಿಕೆಯಲ್ಲಿ ಹೊಂದಾಣಿಕೆ ಮಾಡಲ್ಪಟ್ಟಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?ಲೂಕ 5:39 ಓದಿ.

10, 11. ಸುವಾರ್ತೆಯನ್ನು ಸಾರುವ ಹೊಸ ವಿಧಾನಗಳನ್ನು ಪರಿಚಯಿಸಲಾದಾಗ ಕೆಲವರು ಪ್ರತಿಕ್ರಿಯಿಸಿದ ರೀತಿಯಿಂದ ಯಾವ ಪಾಠಗಳನ್ನು ಕಲಿಯಬಲ್ಲೆವು?

10 ನಾವೀಗ ಮತ್ತೊಂದು ಉದಾಹರಣೆಯನ್ನು ಪರಿಗಣಿಸೋಣ. 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಅತ್ಯುತ್ತಮ ಸಾರ್ವಜನಿಕ ಭಾಷಣಕರ್ತರಾಗಿದ್ದ ಕೆಲವು ಬೈಬಲ್‌ ವಿದ್ಯಾರ್ಥಿಗಳು ತಾವು ಒಳ್ಳೆಯ ರೀತಿಯಲ್ಲಿ ಭಾಷಣಗಳನ್ನು ತಯಾರಿಸಿ ಕೊಡುವ ಮೂಲಕ ಸಾರುವ ನೇಮಕವನ್ನು ಚೆನ್ನಾಗಿ ಪೂರೈಸಬಹುದೆಂದು ನೆನಸಿದ್ದರು. ತುಂಬ ಜನರ ಮುಂದೆ ಮಾತಾಡುವುದು ಅವರಿಗೆ ಖುಷಿ ಕೊಡುತ್ತಿತ್ತು ಹಾಗೂ ಕೆಲವರು ಕೇಳುಗರ ಹೊಗಳಿಕೆಯ ಮಾತುಗಳನ್ನು ಇಷ್ಟಪಡುತ್ತಿದ್ದರು. ಆದರೆ ಸಾರ್ವಜನಿಕ ಭಾಷಣಗಳನ್ನು ಕೊಡುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆಂಬದು ಆತನ ಜನರಿಗೆ ಸಮಯಾನಂತರ ಸ್ಪಷ್ಟವಾಗಿ ತಿಳಿದುಬಂತು. ಅವರು ಮನೆಯಿಂದ ಮನೆಗೆ ಹಾಗೂ ಇತರ ವಿಧಾನಗಳಲ್ಲಿ ಸಾರಬೇಕೆಂಬದು ಆತನ ಇಚ್ಛೆಯಾಗಿತ್ತು. ಆದರೆ ಕೆಲವು ನುರಿತ ಭಾಷಣಕರ್ತರಿಗೆ ಅದನ್ನು ಮಾಡಲು ಇಷ್ಟವಿರಲಿಲ್ಲ. ಹೊರನೋಟಕ್ಕೆ ಅವರು ಆಧ್ಯಾತ್ಮಿಕ ವ್ಯಕ್ತಿಗಳಂತೆ ಹಾಗೂ ಯೆಹೋವನಿಗೆ ನಿಷ್ಠಾವಂತರಾಗಿರುವವರಂತೆ ತೋರಿಬರುತ್ತಿದ್ದರು. ಆದರೆ ಸಾರುವ ಕೆಲಸದ ವಿಷಯದಲ್ಲಿ ದೇವರ ಚಿತ್ತ ಸ್ಪಷ್ಟವಾದಾಗ ಅವರ ನಿಜ ಯೋಚನೆಗಳು ಹಾಗೂ ಇರಾದೆಗಳು ಬಯಲಾದವು. ಯೆಹೋವನಿಗೆ ಅವರ ಬಗ್ಗೆ ಹೇಗನಿಸಿತು? ಆತನು ಅವರನ್ನು ಮೆಚ್ಚಲಿಲ್ಲ. ಅವರು ಸಂಘಟನೆಯನ್ನು ಬಿಟ್ಟುಹೋದರು.—ಮತ್ತಾ. 10:1-6; ಅ. ಕಾ. 5:42; 20:20.

11 ಇದರರ್ಥ ಸಂಘಟನೆಗೆ ನಿಷ್ಠರಾಗಿ ಉಳಿದವರೆಲ್ಲರಿಗೂ ಸಾರ್ವಜನಿಕವಾಗಿ ಸಾರುವುದು ಸುಲಭದ ಕೆಲಸವಾಗಿತ್ತೆಂದಲ್ಲ. ಅನೇಕರಿಗೆ ಆರಂಭದಲ್ಲಿ ಅದು ಕಷ್ಟಕರವಾಗಿತ್ತು. ಆದರೂ ಅವರು ವಿಧೇಯರಾಗಿದ್ದರು. ಸಮಯಸಂದಂತೆ ಅವರು ಭಯವನ್ನು ಮೆಟ್ಟಿನಿಂತರು ಹಾಗೂ ಯೆಹೋವನು ಅವರನ್ನು ಹೇರಳವಾಗಿ ಆಶೀರ್ವದಿಸಿದನು. ನೀವು ಇದುವರೆಗೆ ಪ್ರಯತ್ನಿಸಿರದ ವಿಧಾನವೊಂದರಲ್ಲಿ ಸಾರುವಂತೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ನಿಮಗೆ ಹೇಳುವಲ್ಲಿ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಆ ವಿಧಾನವು ಕಷ್ಟಕರವೆಂದು ಕಂಡರೂ ಆಳು ವರ್ಗದ ಮಾತಿಗೆ ವಿಧೇಯರಾಗುವಿರೋ?

ಪ್ರಿಯ ವ್ಯಕ್ತಿ ಯೆಹೋವನನ್ನು ತೊರೆಯುವಾಗ

12, 13. (ಎ) ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನು ಬಹಿಷ್ಕಾರಮಾಡಬೇಕೆಂದು ಯೆಹೋವನು ಹೇಳಿರುವುದೇಕೆ? (ಬಿ) ಕೆಲವು ಕ್ರೈಸ್ತ ಹೆತ್ತವರು ಯಾವ ಪರೀಕ್ಷೆಯನ್ನು ಎದುರಿಸುತ್ತಾರೆ? ಯಾವುದು ಆ ಪರೀಕ್ಷೆಯನ್ನು ಕಷ್ಟವಾಗಿಸುತ್ತದೆ?

12 ದೇವರನ್ನು ಮೆಚ್ಚಿಸಬೇಕಾದರೆ ಶಾರೀರಿಕವಾಗಿಯೂ ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಶುದ್ಧರಾಗಿರಬೇಕೆಂಬ ಆಜ್ಞೆಯನ್ನು ಪಾಲಿಸಬೇಕೆಂಬದನ್ನು ನಾವೆಲ್ಲರೂ ನಿಸ್ಸಂಶಯವಾಗಿ ಒಪ್ಪುತ್ತೇವೆ. (ತೀತ 2:14 ಓದಿ.) ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದಕ್ಕೆ ವಿಧೇಯತೆ ತೋರಿಸಲು ಕಷ್ಟವಾಗಬಹುದು. ಉದಾಹರಣೆಗೆ, ಆದರ್ಶ ಕ್ರೈಸ್ತ ದಂಪತಿಯ ಒಬ್ಬನೇ ಮಗ ಸತ್ಯವನ್ನು ಬಿಟ್ಟುಹೋಗುತ್ತಾನೆಂದು ನೆನಸಿ. ಆ ಯುವ ವ್ಯಕ್ತಿ ಯೆಹೋವನೊಂದಿಗಿನ ಹಾಗೂ ದೇವಭಕ್ತ ಹೆತ್ತವರೊಂದಿಗಿನ ವೈಯಕ್ತಿಕ ಸಂಬಂಧವನ್ನು ತೊರೆದು ‘ಪಾಪದ ತಾತ್ಕಾಲಿಕ ಸುಖಾನುಭವವನ್ನು’ ಆಶಿಸಿದ ಕಾರಣ ಅವನನ್ನು ಬಹಿಷ್ಕಾರ ಮಾಡಲಾಗುತ್ತದೆ.—ಇಬ್ರಿ. 11:25.

13 ಆಗ ಹೆತ್ತವರ ಮನಸ್ಸು ನುಚ್ಚುನೂರಾಗುತ್ತದೆ! ಆದರೆ “ಸಹೋದರನೆನಿಸಿಕೊಂಡವನು ಜಾರನಾಗಲಿ ಲೋಭಿಯಾಗಲಿ ವಿಗ್ರಹಾರಾಧಕನಾಗಲಿ ದೂಷಕನಾಗಲಿ ಕುಡುಕನಾಗಲಿ ಸುಲುಕೊಳ್ಳುವವನಾಗಲಿ ಆಗಿರುವಲ್ಲಿ ಅವನ ಸಹವಾಸವನ್ನು ಬಿಟ್ಟುಬಿಡಿರಿ, ಅಂಥವನೊಂದಿಗೆ ಊಟವನ್ನೂ ಮಾಡಬೇಡಿ” ಎಂದು ಬಹಿಷ್ಕಾರಮಾಡಲ್ಪಟ್ಟಿರುವ ವ್ಯಕ್ತಿಗಳ ಬಗ್ಗೆ ಬೈಬಲ್‌ ಹೇಳುವುದನ್ನು ಹೆತ್ತವರು ಚೆನ್ನಾಗಿ ಬಲ್ಲರು. (1 ಕೊರಿಂ. 5:11, 13) ಅಲ್ಲದೆ ಈ ವಚನದಲ್ಲಿ “ಸಹೋದರನೆನಿಸಿಕೊಂಡವನು” ಎಂದು ಹೇಳುವಾಗ ಅದರಲ್ಲಿ ತಮ್ಮ ಜೊತೆ ವಾಸಿಸದ ಕುಟುಂಬ ಸದಸ್ಯರು ಸಹ ಒಳಗೂಡುತ್ತಾರೆ ಎಂದು ಅವರಿಗೆ ತಿಳಿದಿದೆ. ಆದರೆ ಅವರು ತಮ್ಮ ಮಗನನ್ನು ತುಂಬ ಪ್ರೀತಿಸುತ್ತಾರೆ! ಇದರಿಂದಾಗಿ ಅವರು ಈ ರೀತಿಯಲ್ಲೆಲ್ಲ ತರ್ಕಿಸಬಹುದು: ‘ನಮ್ಮ ಮಗನೊಂದಿಗಿನ ಸಹವಾಸವನ್ನು ತೀರ ಸೀಮಿತಗೊಳಿಸುವಲ್ಲಿ ಯೆಹೋವನ ಬಳಿ ಹಿಂದಿರುಗಲು ನಾವು ಅವನಿಗೆ ಹೇಗೆ ತಾನೇ ಸಹಾಯಮಾಡಸಾಧ್ಯ? ಅವನಿಗೆ ಸಹಾಯ ಮಾಡಬೇಕಾದರೆ ಅವನೊಂದಿಗೆ ಸಹವಾಸ ಮಾಡಲೇಬೇಕಲ್ಲವೆ?’ *

14, 15. ಬಹಿಷ್ಕರಿಸಲ್ಪಟ್ಟ ಮಕ್ಕಳೊಂದಿಗೆ ಮಾತಾಡುವ ವಿಷಯದಲ್ಲಿ ಹೆತ್ತವರು ಏನನ್ನು ನೆನಪಿನಲ್ಲಿಡಬೇಕು?

14 ಅಂಥ ಹೆತ್ತವರ ಕಷ್ಟ ನೋಡುವಾಗ ನಮಗೂ ತುಂಬ ದುಃಖವಾಗುತ್ತದೆ. ಎಷ್ಟೆಂದರೂ ಅವರ ಮಗನಿಗೆ ತನ್ನ ಮಾರ್ಗಕ್ರಮವನ್ನು ಸರಿಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ ಅವನು ತನ್ನ ಹೆತ್ತವರೊಂದಿಗಿನ ಹಾಗೂ ಜೊತೆವಿಶ್ವಾಸಿಗಳೊಂದಿಗಿನ ಆಪ್ತ ಸಹವಾಸದಲ್ಲಿ ಆನಂದಿಸುವ ಬದಲು ಅಕ್ರೈಸ್ತ ಜೀವನಶೈಲಿಯನ್ನು ಮುಂದುವರಿಸುವ ಆಯ್ಕೆಮಾಡಿದನು. ಏನೂ ಮಾಡಲಾಗದ ಸ್ಥಿತಿ ಹೆತ್ತವರದ್ದು. ಅವರ ಈ ನಿಸ್ಸಹಾಯಕ ಸ್ಥಿತಿ ನಮಗೂ ಅರ್ಥವಾಗುತ್ತದೆ!

15 ಆದರೆ ಆ ಪ್ರಿಯ ಹೆತ್ತವರು ಈಗೇನು ಮಾಡುವರು? ಯೆಹೋವನ ಸ್ಪಷ್ಟ ಮಾರ್ಗದರ್ಶನಕ್ಕೆ ವಿಧೇಯರಾಗುವರೋ? ಅಥವಾ ಬಹಿಷ್ಕರಿಸಲ್ಪಟ್ಟ ಮಗನೊಂದಿಗೆ ಕ್ರಮವಾಗಿ ಸಹವಾಸಮಾಡಿಕೊಂಡು ಅದನ್ನು “ಅತ್ಯಾವಶ್ಯಕ ಕುಟುಂಬ ವ್ಯವಹಾರ” ಎಂದು ಸಮರ್ಥಿಸುವರೋ? ಅವರು ನಿರ್ಣಯಮಾಡುವ ಮೊದಲು ಆ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಎಂಬದನ್ನು ಪರಿಗಣಿಸಲು ತಪ್ಪಬಾರದು. ಆತನ ಉದ್ದೇಶ, ಸಂಘಟನೆಯನ್ನು ಶುದ್ಧವಾಗಿಡುವುದು ಹಾಗೂ ಸಾಧ್ಯವಿರುವಲ್ಲಿ ಸರಿದಾರಿಗೆ ಹಿಂತೆರಳುವಂತೆ ತಪ್ಪಿತಸ್ಥನನ್ನು ಪ್ರೇರಿಸುವುದೇ ಆಗಿದೆ. ಯೆಹೋವನ ಈ ಉದ್ದೇಶವನ್ನು ಕ್ರೈಸ್ತ ಹೆತ್ತವರು ಹೇಗೆ ಬೆಂಬಲಿಸಬಲ್ಲರು?

16, 17. ಆರೋನನ ಉದಾಹರಣೆಯಿಂದ ನಾವೇನನ್ನು ಕಲಿಯಬಲ್ಲೆವು?

16 ಮೋಶೆಯ ಅಣ್ಣನಾದ ಆರೋನನು ತನ್ನಿಬ್ಬರು ಪುತ್ರರಿಂದಾಗಿ ಕಷ್ಟಕರ ಸನ್ನಿವೇಶವನ್ನು ಎದುರಿಸಿದನು. ಅವನ ಮಕ್ಕಳಾದ ನಾದಾಬ್‌, ಅಬೀಹು ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಧೂಪವನ್ನು ಸಮರ್ಪಿಸಿ ಆತನಿಂದ ಹತರಾದಾಗ ಆರೋನನಿಗೆ ಹೇಗನಿಸಿದ್ದಿರಬಹುದು ಎಂಬದನ್ನು ಊಹಿಸಿ ನೋಡಿ. ಅವನ ಮಕ್ಕಳು ಸತ್ತುಹೋಗಿದ್ದರಿಂದ ಅವರೊಂದಿಗೆ ಮಾತಾಡುವ ಸವಾಲು ಅವನಿಗೆ ಎದುರಾಗಲಿಲ್ಲ ನಿಜ. ಆದರೆ ಅದಕ್ಕಿಂತಲೂ ಕಷ್ಟಕರವಾದ ಸವಾಲೊಂದು ಅವನಿಗೆ ಎದುರಾಯಿತು. ಆರೋನನಿಗೂ ಅವನ ನಂಬಿಗಸ್ತ ಪುತ್ರರಿಗೂ ಯೆಹೋವನು ಈ ಆದೇಶ ಕೊಟ್ಟನು: “[ಶೋಕಸೂಚಕವಾಗಿ] ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸತ್ತೀರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾದೀತು.” (ಯಾಜ. 10:1-6) ಹೇಳಿದಂಥ ವಿಷಯ ಸ್ಪಷ್ಟ. ಕುಟುಂಬದ ಅಪನಂಬಿಗಸ್ತ ಸದಸ್ಯರ ಮೇಲಿರುವ ಪ್ರೀತಿಗಿಂತ ಯೆಹೋವನ ಮೇಲಿರುವ ಪ್ರೀತಿ ಬಲವಾಗಿರಬೇಕು.

17 ಇಂದು ತನ್ನ ನಿಯಮಗಳನ್ನು ಉಲ್ಲಂಘಿಸುವವರನ್ನು ಯೆಹೋವನು ತಕ್ಷಣ ಕೊಂದುಬಿಡುವುದಿಲ್ಲ. ತಮ್ಮ ತಪ್ಪು ಮಾರ್ಗವನ್ನು ಬಿಟ್ಟು ಹಿಂದಿರುಗಿ ಬರುವಂತೆ ಪ್ರೀತಿಯಿಂದ ಸದವಕಾಶ ಕೊಡುತ್ತಾನೆ. ಒಂದುವೇಳೆ ಹೆತ್ತವರು ತನ್ನ ಆಜ್ಞೆಗೆ ಅವಿಧೇಯರಾಗಿ ಬಹಿಷ್ಕರಿಸಲ್ಪಟ್ಟ ಮಗನೊಂದಿಗೆ ಅಥವಾ ಮಗಳೊಂದಿಗೆ ಅನಾವಶ್ಯಕವಾಗಿ ಸಹವಾಸಮಾಡುವಲ್ಲಿ ಯೆಹೋವನಿಗೆ ಹೇಗನಿಸಬಹುದು?

18, 19. ಬಹಿಷ್ಕೃತರ ವಿಷಯದಲ್ಲಿ ಯೆಹೋವನು ಕೊಡುವ ನಿರ್ದೇಶನಗಳನ್ನು ಪಾಲಿಸುವಲ್ಲಿ ಕುಟುಂಬ ಸದಸ್ಯರು ಯಾವ ಆಶೀರ್ವಾದಗಳನ್ನು ಹೊಂದುವರು?

18 ಈ ಹಿಂದೆ ಬಹಿಷ್ಕರಿಸಲ್ಪಟ್ಟ ಅನೇಕರು ಸ್ನೇಹಿತರ ಹಾಗೂ ಕುಟುಂಬ ಸದಸ್ಯರ ದೃಢನಿಲುವೇ ತಮಗೆ ಸರಿಯಾದ ಮಾರ್ಗಕ್ಕೆ ಬರಲು ಸಹಾಯಮಾಡಿತೆಂಬದನ್ನು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ಒಬ್ಬಾಕೆ ಯುವತಿಯ ಪುನಃಸ್ಥಾಪನೆಗೆ ಶಿಫಾರಸ್ಸು ಮಾಡಿದ ಹಿರಿಯರು ಆಕೆ ತನ್ನ ಜೀವನವನ್ನು ಶುದ್ಧಗೊಳಿಸಲು “ಒಂದು ಕಾರಣ ಬಹಿಷ್ಕಾರದ ಏರ್ಪಾಡಿನ ಕಡೆಗೆ ಆಕೆಯ ಅಣ್ಣನಿಗಿದ್ದ ಗೌರವವೇ” ಎಂದು ಬರೆದರು. ಆಕೆ ಹೇಳಿದ್ದು: “ಶಾಸ್ತ್ರಾಧಾರಿತ ಮಾರ್ಗದರ್ಶನಗಳಿಗೆ ಅಣ್ಣ ನಂಬಿಗಸ್ತಿಕೆಯಿಂದ ಅಂಟಿಕೊಂಡದ್ದು ತನಗೆ ಹಿಂದಿರುಗಲು ಸಹಾಯಮಾಡಿತು.”

19 ಹಾಗಾದರೆ ನಾವೇನು ಮಾಡಬೇಕಾಗಿದೆ? ನಾವು ಅಪರಿಪೂರ್ಣರಾಗಿರುವುದರಿಂದ ಶಾಸ್ತ್ರಾಧಾರಿತ ಸಲಹೆಗಳ ವಿರುದ್ಧ ದಂಗೆ ಏಳುವ ಪ್ರವೃತ್ತಿ ನಮ್ಮಲ್ಲಿದೆ. ನಾವು ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಯೆಹೋವನು ನಮಗೆ ಹೇಳುವುದೆಲ್ಲವೂ ನಮ್ಮ ಒಳಿತಿಗಾಗಿಯೇ ಎಂಬದನ್ನು ನಾವು ದೃಢವಾಗಿ ನಂಬಬೇಕು.

‘ದೇವರ ವಾಕ್ಯವು ಸಜೀವವಾದದ್ದು’

20. ಇಬ್ರಿಯ 4:12ನ್ನು ನಾವು ಯಾವ ಎರಡು ವಿಧಗಳಲ್ಲಿ ಅನ್ವಯಿಸಬಹುದು? (ಪಾದಟಿಪ್ಪಣಿಯನ್ನೂ ನೋಡಿ.)

20 ಪೌಲನು ‘ದೇವರ ವಾಕ್ಯವು ಸಜೀವವಾದದ್ದು’ ಎಂದು ಬರೆಯುವಾಗ ಅವನು ನಿರ್ದಿಷ್ಟವಾಗಿ ದೇವರ ಲಿಖಿತ ವಾಕ್ಯವಾದ ಬೈಬಲಿಗೆ ಸೂಚಿಸುತ್ತಿರಲಿಲ್ಲ. * ಅವನು ದೇವರ ವಾಗ್ದಾನದ ಮಾತಿಗೆ ಸೂಚಿಸುತ್ತಿದ್ದನೆಂದು ಆ ವಚನದ ಪೂರ್ವಾಪರವು ತೋರಿಸುತ್ತದೆ. ದೇವರು ವಾಗ್ದಾನ ಮಾಡಿ ನಂತರ ಅದನ್ನು ಮರೆಯುವವನಲ್ಲ ಎಂದು ಪೌಲನು ಹೇಳುತ್ತಿದ್ದಾನೆ. ಇದನ್ನು ಯೆಹೋವನು ಪ್ರವಾದಿ ಯೆಶಾಯನ ಮೂಲಕ ಹೀಗೆ ದೃಢಪಡಿಸಿದನು: “ನನ್ನ . . . ಮಾತು . . . ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾ. 55:11) ಆದ್ದರಿಂದ ನಾವು ನೆನಸಿದ ಸಮಯದಲ್ಲಿ ದೇವರ ಉದ್ದೇಶ ನೆರವೇರದಿರುವಾಗ ನಾವು ತಾಳ್ಮೆಗೆಡಬಾರದು. ಯೆಹೋವನು ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ “ಕೆಲಸಮಾಡುತ್ತಾ ಇದ್ದಾನೆ.”—ಯೋಹಾ. 5:17.

21. ‘ಮಹಾ ಸಮೂಹದ’ ನಂಬಿಗಸ್ತ ವೃದ್ಧ ಸದಸ್ಯರಿಗೆ ಇಬ್ರಿಯ 4:12 ಪ್ರೋತ್ಸಾಹನೀಯವಾಗಿರುವುದು ಹೇಗೆ?

21 ‘ಮಹಾ ಸಮೂಹದ’ ನಂಬಿಗಸ್ತ ವೃದ್ಧ ಸದಸ್ಯರು ದಶಕಗಳಿಂದ ಯೆಹೋವನನ್ನು ಸೇವಿಸುತ್ತಿದ್ದಾರೆ. (ಪ್ರಕ. 7:9) ತಾವು ಈ ವಿಷಯಗಳ ವ್ಯವಸ್ಥೆಯಲ್ಲಿ ವೃದ್ಧರಾಗುತ್ತೇವೆಂದು ಅನೇಕರು ನೆನಸಿರಲಿಕ್ಕಿಲ್ಲ. ಹಾಗಿದ್ದರೂ ಅವರು ನಿರುತ್ತೇಜನಗೊಳ್ಳಲಿಲ್ಲ. (ಕೀರ್ತ. 92:14) ದೇವರ ವಾಗ್ದಾನದ ಮಾತು ನಿರ್ಜೀವವಾದದ್ದಲ್ಲ, ಸಜೀವವಾದದ್ದು ಮತ್ತು ಯೆಹೋವನು ಅದನ್ನು ಪೂರೈಸಲು ಕೆಲಸಮಾಡುತ್ತಿದ್ದಾನೆಂಬದು ಅವರಿಗೆ ಗೊತ್ತಿದೆ. ದೇವರಿಗೆ ತನ್ನ ಉದ್ದೇಶ ತುಂಬ ಪ್ರಾಮುಖ್ಯವಾಗಿರುವುದರಿಂದ ನಮಗೂ ಅದು ಪ್ರಾಮುಖ್ಯವಾಗಿದೆ ಎಂದು ತೋರಿಸಿಕೊಡುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ. ವಿಶ್ರಾಂತಿಯ ಈ ಏಳನೆಯ ದಿನದಲ್ಲಿ ತನ್ನ ಉದ್ದೇಶವನ್ನು ಪೂರೈಸುವುದರಿಂದ ಯೆಹೋವನನ್ನು ಯಾವುದೂ ತಡೆಯಲಾರದು. ತನ್ನ ಜನರು ಒಂದು ಗುಂಪಾಗಿ ತನ್ನ ಉದ್ದೇಶದೊಂದಿಗೆ ಸಹಕರಿಸುವರು ಎಂಬದು ಆತನಿಗೆ ಗೊತ್ತಿದೆ. ವೈಯಕ್ತಿಕವಾಗಿ ನಿಮ್ಮ ಕುರಿತೇನು? ನೀವು ದೇವರ ವಿಶ್ರಾಂತಿಯಲ್ಲಿ ಸೇರಿದ್ದೀರೋ?

[ಪಾದಟಿಪ್ಪಣಿಗಳು]

^ ಪ್ಯಾರ. 8 ಕೆಲವು ಯೆಹೂದಿ ಮುಖಂಡರು ಮೋಶೆಯ ಧರ್ಮಶಾಸ್ತ್ರವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಆದರೆ ಯೇಸು ಭೂಮಿಗೆ ಬಂದಾಗ ಅವನೇ ಮೆಸ್ಸೀಯನೆಂದು ಅವರು ಒಪ್ಪಿಕೊಳ್ಳಲಿಲ್ಲ. ಅವರು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈದರು.

^ ಪ್ಯಾರ. 20 ಇಂದು ದೇವರು ನಮ್ಮೊಂದಿಗೆ ತನ್ನ ಲಿಖಿತ ವಾಕ್ಯದ ಮೂಲಕ ಮಾತಾಡುತ್ತಾನೆ. ಅದು ನಮ್ಮ ಜೀವನದ ಮೇಲೆ ಪರಿಣಾಮಬೀರುವಷ್ಟು ಪ್ರಬಲವಾದದ್ದಾಗಿದೆ. ಹಾಗಾದರೆ ಇಬ್ರಿಯ 4:12ರಲ್ಲಿರುವ ಪೌಲನ ಮಾತುಗಳು ವಿಶಾಲಾರ್ಥದಲ್ಲಿ ಬೈಬಲಿಗೂ ಅನ್ವಯಿಸುತ್ತವೆ.

ಲೇಖನದ ಉದ್ದೇಶವನ್ನು ಗ್ರಹಿಸಿದ್ದೀರೋ?

• ನಾವಿಂದು ದೇವರ ವಿಶ್ರಾಂತಿಯಲ್ಲಿ ಸೇರಬೇಕಾದರೆ ಏನು ಮಾಡಬೇಕು?

• ದೇವರ ಉದ್ದೇಶಕ್ಕೂ ನಾವು ಶಾಸ್ತ್ರಾಧಾರಿತ ಸಲಹೆಯನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುವುದಕ್ಕೂ ಯಾವ ನಂಟಿದೆ?

• ಯಾವ ಕ್ಷೇತ್ರಗಳಲ್ಲಿ ಶಾಸ್ತ್ರಾಧಾರಿತ ಮಾರ್ಗದರ್ಶನಕ್ಕೆ ವಿಧೇಯತೆ ತೋರಿಸುವುದು ಕಷ್ಟವಾದೀತು? ಆದರೆ ಆಗಲೂ ವಿಧೇಯತೆ ತೋರಿಸುವುದು ಅಗತ್ಯವೇಕೆ?

ಇಬ್ರಿಯ 4:12ನ್ನು ಯಾವ ಎರಡು ವಿಧಗಳಲ್ಲಿ ಅನ್ವಯಿಸಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 31ರಲ್ಲಿರುವ ಚಿತ್ರ]

ಹೆತ್ತವರ ಮನಸ್ಸು ನುಚ್ಚುನೂರಾಗುತ್ತದೆ!