ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನನ್ನ ಪಾಲು

ಯೆಹೋವನು ನನ್ನ ಪಾಲು

ಯೆಹೋವನು ನನ್ನ ಪಾಲು

“ಇಸ್ರಾಯೇಲ್ಯರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಸ್ವಾಸ್ತ್ಯವಾಗಿಯೂ ಇದ್ದೇನೆ.” —ಅರ. 18:20.

1, 2. (ಎ) ದೇಶವನ್ನು ಹಂಚಲಾದ ಸಮಯದಲ್ಲಿ ಲೇವಿಯ ಕುಲದವರಿಗೆ ಏನಾಯಿತು? (ಬಿ) ಲೇವಿಯರಿಗೆ ಯೆಹೋವನು ಯಾವ ಭರವಸೆಯಿತ್ತನು?

ಇಸ್ರಾಯೇಲ್ಯರು ವಾಗ್ದತ್ತ ದೇಶದ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡ ನಂತರ ಅವರ ನಾಯಕನಾದ ಯೆಹೋಶುವ ಚೀಟುಹಾಕಿ ದೇಶವನ್ನು ಹಂಚಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡನು. ಅವನಿಗೆ ಮಹಾಯಾಜಕ ಎಲ್ಲಾಜಾರ ಹಾಗೂ ಕುಲಾಧಿಪತಿಗಳು ನೆರವಾದರು. (ಅರ. 34:13-29) ಎಲ್ಲಾ ಕುಲಗಳಿಗೆ ಸ್ವಾಸ್ತ್ಯವನ್ನು ಹಂಚಲಾಯಿತಾದರೂ ಲೇವಿಯ ಕುಲದವರಿಗೆ ಮಾತ್ರ ಸ್ವಾಸ್ತ್ಯ ಸಿಗಲಿಲ್ಲ. (ಯೆಹೋ. 14:1-5) ಲೇವಿಯರಿಗೆ ಏಕೆ ವಾಗ್ದತ್ತ ದೇಶದಲ್ಲಿ ಪಾಲು ಸಿಗಲಿಲ್ಲ? ಅವರನ್ನು ಮರೆತುಬಿಡಲಾಯಿತೇ?

2 ಇದಕ್ಕೆ ಉತ್ತರ ಯೆಹೋವನು ಲೇವಿಯರಿಗೆ ಹೇಳಿದ ಮಾತಿನಲ್ಲಿದೆ. ತಾನು ಅವರನ್ನು ಕೈಬಿಟ್ಟಿಲ್ಲವೆಂದು ಭರವಸೆ ನೀಡುತ್ತಾ ಯೆಹೋವನು ಲೇವಿಯರಿಗೆ ಹೀಗೆ ಹೇಳುತ್ತಾನೆ: “ಇಸ್ರಾಯೇಲ್ಯರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಸ್ವಾಸ್ತ್ಯವಾಗಿಯೂ ಇದ್ದೇನೆ.” (ಅರ. 18:20) ನಾನೇ ನಿನಗೆ ಪಾಲು ಎಂದು ಯೆಹೋವನು ಹೇಳಿದಾಗ ಆತನು ಕೊಟ್ಟ ಭರವಸೆಯನ್ನು ಗಮನಿಸಿ. ಇದೇ ಮಾತನ್ನು ಯೆಹೋವನು ನಿಮಗೆ ಹೇಳಿದ್ದರೆ ಹೇಗನಿಸುತ್ತಿತ್ತು? ‘ನನ್ನಂಥವರಿಗೆ ಯೆಹೋವನು ಇಂಥ ಮಾತನ್ನು ಹೇಳುವನೋ’ ಎಂದು ಹುಬ್ಬೇರಿಸುವಿರಿ ಅಲ್ಲವೇ? ‘ಅಪರಿಪೂರ್ಣರಾಗಿರುವ ನಮಗೆ ಯೆಹೋವನು ಪಾಲಾಗಿರಲು ಸಾಧ್ಯವೇ?’ ಎಂಬ ಪ್ರಶ್ನೆ ಕೂಡ ನಿಮ್ಮಲ್ಲಿ ಸುಳಿಯಬಹುದು. ಹೌದು, ಇವು ಪ್ರಾಮುಖ್ಯ ಪ್ರಶ್ನೆಗಳಾಗಿವೆ. ಏಕೆಂದರೆ ಇವುಗಳ ಉತ್ತರದಿಂದ ನಮಗೂ ನಮ್ಮ ನೆಚ್ಚಿನವರಿಗೂ ಪ್ರಯೋಜನವಿದೆ. ಆದ್ದರಿಂದ, ನಾನೇ ನಿನ್ನ ಪಾಲು ಎಂದು ಯೆಹೋವನು ಹೇಳಿದ್ದರ ಅರ್ಥ ಏನಾಗಿತ್ತೆಂದು ನೋಡೋಣ. ಅದು, ಯೆಹೋವನು ಹೇಗೆ ಇಂದು ಕ್ರೈಸ್ತರ ಪಾಲು ಆಗಿರುವನು ಎಂದು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಇನ್ನು ಸೂಕ್ಷ್ಮವಾಗಿ ಹೇಳುವುದಾದರೆ, ನಮಗೆ ಸ್ವರ್ಗದ ನಿರೀಕ್ಷೆಯಿರಲಿ ಭೂ ನಿರೀಕ್ಷೆಯಿರಲಿ ಯೆಹೋವನು ಹೇಗೆ ನಮ್ಮ ಪಾಲು ಆಗಿರಸಾಧ್ಯವೆಂದು ತಿಳಿಯಲು ಸಹಾಯ ಮಾಡುತ್ತದೆ.

ಲೇವಿಯರನ್ನು ಯೆಹೋವನು ಪೋಷಿಸಿದನು

3. ಲೇವಿಯ ಕುಲದವರು ಯಾಜಕರಾಗಿ ಸೇವೆಸಲ್ಲಿಸಲು ಪ್ರತ್ಯೇಕಿಸಲ್ಪಟ್ಟದ್ದು ಹೇಗೆ?

3 ಯೆಹೋವನು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಒದಗಿಸುವ ಮುಂಚೆ ಕುಟುಂಬದ ಶಿರಸ್ಸುಗಳು ಯಾಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಧರ್ಮಶಾಸ್ತ್ರ ಕೊಟ್ಟ ನಂತರ ಆತನು ಲೇವಿಯ ಕುಲದವರಲ್ಲಿ ಕೆಲವರನ್ನು ಯಾಜಕ ಸೇವೆಗೆ ಮೀಸಲಾಗಿರುವಂತೆ ಆರಿಸಿಕೊಂಡನು. ಈ ಬದಲಾವಣೆಗೆ ಕಾರಣ? ಯೆಹೋವನು ಈಜಿಪ್ಟ್‌ ಜನರ ಚೊಚ್ಚಲ ಮಕ್ಕಳನ್ನು ಹತಿಸಿದಾಗ ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ತನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡನು. ಅಂದರೆ ಆ ಚೊಚ್ಚಲ ಮಕ್ಕಳು ಆತನಿಗೆ ಸೇರಿದವರಾದರು. ಬಳಿಕ ದೇವರು ಒಂದು ಅಪೂರ್ವ ಹೊಂದಾಣಿಕೆ ಮಾಡಿದನು. “ನಾನು ಇಸ್ರಾಯೇಲ್ಯರಲ್ಲಿ ಚೊಚ್ಚಲಾದ ಗಂಡಸರಿಗೆ ಬದಲಾಗಿ ಲೇವಿಯರನ್ನೇ ತೆಗೆದುಕೊಂಡಿದ್ದೇನೆಂದು” ತಿಳಿಸಿದನು. ಇಸ್ರಾಯೇಲ್ಯರ ಚೊಚ್ಚಲ ಮಕ್ಕಳ ಸಂಖ್ಯೆಯನ್ನು ಲೆಕ್ಕಿಸಿದಾಗ ಲೇವಿಯರ ಸಂಖ್ಯೆಗಿಂತ ಅಧಿಕವಾಗಿತ್ತು. ಈ ಹೆಚ್ಚಳವನ್ನು ಈಡು ಕೊಟ್ಟು ಸರಿದೂಗಿಸಲಾಯಿತು. (ಅರ. 3:11-13, 41, 46, 47) ಹೀಗೆ ಇಸ್ರಾಯೇಲ್ಯರ ಚೊಚ್ಚಲ ಮಕ್ಕಳಿಗೆ ಬದಲಾಗಿ ಲೇವಿಯ ಕುಲದವರು ಯಾಜಕ ಸೇವೆಗೆ ಮೀಸಲಾದರು.

4, 5. (ಎ) ಯೆಹೋವನು ಲೇವಿಯರ ಪಾಲು ಆಗಿದ್ದದ್ದು ಯಾವ ಅರ್ಥದಲ್ಲಿ? (ಬಿ) ದೇವರು ಲೇವಿಯರನ್ನು ಪೋಷಿಸಿದ್ದು ಹೇಗೆ?

4 ಯಾಜಕ ಸೇವೆಗೆ ಮೀಸಲಾಗಿದ್ದ ಲೇವಿಯರಿಗೆ ಹೇಗೆ ಯೆಹೋವನೇ ಪಾಲು ಆಗಿದ್ದನು? ಆತನು ಅವರಿಗೆ ದೇಶದಲ್ಲಿ ಪಾಲು ಕೊಡುವ ಬದಲು ಅದಕ್ಕಿಂತಲೂ ಮಹತ್ತಾದ ಒಂದು ಅಮೂಲ್ಯ ಕೆಲಸವನ್ನು ಕೊಟ್ಟನು. ಬೈಬಲ್‌ ಹೇಳುವಂತೆ “ಯೆಹೋವನ ಯಾಜಕ ಸೇವೆಯೇ ಅವರ ಸ್ವಾಸ್ತ್ಯ” ಆಗಿತ್ತು. (ಯೆಹೋ. 18:7) ಈ ಯಾಜಕ ಸೇವೆ ಅವರನ್ನು ನಿರ್ಗತಿಕರನ್ನಾಗಿ ಮಾಡಲಿಲ್ಲವೆಂದು ಅರಣ್ಯಕಾಂಡ 18:20ರ ಪೂರ್ವಾಪರ ವಚನಗಳು ತೋರಿಸುತ್ತವೆ. (ಅರಣ್ಯಕಾಂಡ 18:19, 21, 24 ಓದಿ.) ಆ ವಚನಗಳು ತಿಳಿಸುವಂತೆ, “ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವದಕ್ಕಾಗಿ ಇಸ್ರಾಯೇಲ್ಯರಿಂದ [ಸಕಲಪದಾರ್ಥಗಳ] ಹತ್ತನೆಯ ಪಾಲನ್ನು” ಲೇವಿಯರು ಪಡೆದುಕೊಳ್ಳುತ್ತಿದ್ದರು. ಇಸ್ರಾಯೇಲ್ಯರ ಬೆಳೆಯಲ್ಲಿ ಹಾಗೂ ಅವರ ಸಾಕುಪ್ರಾಣಿಗಳ ಮರಿಗಳಲ್ಲಿ ಹತ್ತರಲ್ಲೊಂದು ಭಾಗ ಲೇವಿಯರಿಗೆ ಸಿಗುತ್ತಿತ್ತು. ಅದೇ ರೀತಿ ಲೇವಿಯರು ತಮಗೆ ದೊರೆತದ್ದರಲ್ಲಿ ಹತ್ತನೆಯ ಒಂದು ಪಾಲನ್ನು ತಮ್ಮಲ್ಲಿ ಯಾಜಕ ಸೇವೆಮಾಡುವವರಿಗೆ ಕೊಡಬೇಕಿತ್ತು. ಅದು “ಉತ್ತಮಭಾಗ” ಆಗಿರಬೇಕಿತ್ತು. (ಅರ. 18:25-29) ಅಷ್ಟೇ ಅಲ್ಲ, ಇಸ್ರಾಯೇಲ್ಯರು ಕಾಣಿಕೆಯಾಗಿ ತರುತ್ತಿದ್ದ “ದೇವರ ವಸ್ತುಗಳೆಲ್ಲಾ” ಯಾಜಕರಿಗೆ ಸೇರುತ್ತಿದ್ದವು. ಆದ್ದರಿಂದ ಯೆಹೋವನು ಖಂಡಿತ ತಮ್ಮನ್ನು ಪೋಷಿಸುವನೆಂದು ಯಾಜಕ ವರ್ಗದವರು ಭರವಸೆಯಿಂದ ಇರಸಾಧ್ಯವಿತ್ತು.

5 ಇಸ್ರಾಯೇಲ್ಯರು ಇನ್ನೊಂದು ವಿಧದಲ್ಲೂ ದಶಮಭಾಗವನ್ನು ಪ್ರತ್ಯೇಕಿಸಿ ಇಡಬೇಕಿತ್ತೆಂದು ಮೋಶೆಯ ಧರ್ಮಶಾಸ್ತ್ರದಿಂದ ವ್ಯಕ್ತವಾಗುತ್ತದೆ. ಇಸ್ರಾಯೇಲ್ಯ ಕುಟುಂಬಗಳು ಪ್ರತಿವರ್ಷ ದೇವಾರಾಧನೆಗಾಗಿ ಮಹಾಸಭೆಯಾಗಿ ಕೂಡಿಬರುವಾಗ ಅನ್ನಪಾನ ಸೇವಿಸಿ ಸಂತೋಷದಿಂದಿರಲಿಕ್ಕಾಗಿ ಆ ಭಾಗವನ್ನು ಉಪಯೋಗಿಸುತ್ತಿದ್ದರು. (ಧರ್ಮೋ. 14:22-27) ಈ ದಶಮಭಾಗದಿಂದ ಇನ್ನೊಂದು ಪ್ರಯೋಜನವೂ ಇತ್ತು. ಇಸ್ರಾಯೇಲ್ಯರು ಪ್ರತಿ ಏಳನೇ ವರ್ಷವನ್ನು ಸಬ್ಬತ್‌ ವರ್ಷವಾಗಿ ಆಚರಿಸುತ್ತಿದ್ದರು. ಆ ಏಳು ವರ್ಷಗಳ ಅವಧಿಯ ಪ್ರತಿ ಮೂರನೇ ಮತ್ತು ಆರನೇ ವರ್ಷದ ಕೊನೆಯಲ್ಲಿ ಇಸ್ರಾಯೇಲ್ಯರು ಆ ದಶಮಭಾಗವನ್ನು ಬಡವರಿಗಾಗಿಯೂ ಲೇವಿಯರಿಗಾಗಿಯೂ ಕೊಡುತ್ತಿದ್ದರು. ಅಂದಹಾಗೆ ಲೇವಿಯರಿಗೆ ಏಕೆ? ಇಸ್ರಾಯೇಲಿನಲ್ಲಿ ಲೇವಿಯರಿಗೆ ಸ್ವಾಸ್ತ್ಯ ಸಿಗದಿದ್ದರಿಂದಲೇ.—ಧರ್ಮೋ. 14:28, 29.

6. ಲೇವಿಯರಿಗೆ ಇಸ್ರಾಯೇಲಿನಲ್ಲಿ ಯಾವುದೇ ಸ್ವಾಸ್ತ್ಯ ಸಿಗದಿದ್ದರೂ ಎಲ್ಲಿ ವಾಸಿಸಿದ್ದರು?

6 ದೇಶದಲ್ಲಿ ಯಾವುದೇ ಸ್ವಾಸ್ತ್ಯ ಪಡೆಯದ ಲೇವಿಯರು ಎಲ್ಲಿ ವಾಸಿಸಿದರು? ದೇವರು ಸ್ಥಳ ಒದಗಿಸಿದ್ದನು. ಆರು ಆಶ್ರಯನಗರಗಳನ್ನೂ ಸೇರಿಸಿ ಒಟ್ಟು 48 ಊರುಗಳನ್ನೂ ಅದರ ಸುತ್ತಲಿನ ಹುಲ್ಲುಗಾವಲು ಪ್ರದೇಶಗಳನ್ನೂ ಕೊಟ್ಟನು. (ಅರ. 35:6-8) ಹೌದು, ಲೇವಿಯರಿಗೆ ತಂಗಲು ಸ್ಥಳ ಒದಗಿಸಲಾಗಿತ್ತು. ಅವರು ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸದಿದ್ದಾಗ ಅಲ್ಲಿ ತಂಗುತ್ತಿದ್ದರು. ಹೀಗೆ, ತನ್ನ ಸೇವೆಗಾಗಿ ತಮ್ಮನ್ನೇ ಮುಡುಪಾಗಿಟ್ಟವರಿಗೆ ಯೆಹೋವನು ಎಲ್ಲಾ ರೀತಿಯಲ್ಲೂ ಒದಗಿಸಿದ್ದನು. ಯೆಹೋವನು ತಮ್ಮ ಪಾಲು ಎಂದು ಲೇವಿಯರು ಹೇಗೆ ತೋರಿಸಿಕೊಡಸಾಧ್ಯವಿತ್ತು? ತಮ್ಮ ಅಗತ್ಯಗಳನ್ನು ಪೂರೈಸಲು ಯೆಹೋವನಿಗೆ ಮನಸ್ಸಿದೆ ಹಾಗೂ ಸಾಮರ್ಥ್ಯವಿದೆ ಎಂದು ಭರವಸೆಯಿಡುವ ಮೂಲಕವೇ.

7. ಯೆಹೋವನು ತಮ್ಮ ಪಾಲು ಆಗಿರಲು ಲೇವಿಯರು ಏನು ಮಾಡಬೇಕಿತ್ತು?

7 ದಶಮಭಾಗ ಕೊಡದವರಿಗೆ ಧರ್ಮಶಾಸ್ತ್ರದಲ್ಲಿ ಯಾವುದೇ ಶಿಕ್ಷೆ ವಿಧಿಸಿರಲಿಲ್ಲ. ಒಂದುವೇಳೆ ಇಸ್ರಾಯೇಲ್ಯರು ದಶಮಭಾಗ ಕೊಡುವ ವಿಷಯದಲ್ಲಿ ಅಲಕ್ಷ್ಯತೋರಿಸಿದ್ದಲ್ಲಿ ಯಾಜಕರ ಹಾಗೂ ಲೇವಿಯರ ಬದುಕು ಕಷ್ಟಕ್ಕೀಡಾಗುತ್ತಿತ್ತು. ನೆಹೆಮೀಯನ ಕಾಲದಲ್ಲಿ ಹೀಗೆ ಆಯಿತು. ಇಸ್ರಾಯೇಲ್ಯರು ದಶಮಭಾಗ ಕೊಡದಿದ್ದರಿಂದ ಲೇವಿಯರು ತಮ್ಮ ಯಾಜಕ ಸೇವೆ ಬಿಟ್ಟು ಹೊಲಗಳಲ್ಲಿ ಕೆಲಸಮಾಡುವ ಅನಿವಾರ್ಯತೆ ಎದುರಾಯಿತು. (ನೆಹೆಮೀಯ 13:10 ಓದಿ.) ಹಾಗಾದರೆ ಯೆಹೋವನ ಧರ್ಮಶಾಸ್ತ್ರವನ್ನು ಇಸ್ರಾಯೇಲ್ಯರು ಪಾಲಿಸಿದ್ದಲ್ಲಿ ಮಾತ್ರ ಲೇವಿಯರಿಗೆ ತಮ್ಮನ್ನು ಪೋಷಿಸಿಕೊಳ್ಳಲು ಆಗುತ್ತಿತ್ತು. ಅದೇ ಸಮಯದಲ್ಲಿ ಯಾಜಕರೂ ಲೇವಿಯರೂ ಯೆಹೋವನು ತಮಗೆ ಬೇಕಾದುದ್ದನ್ನು ಕೊಟ್ಟೇ ಕೊಡುತ್ತಾನೆಂದು ಭರವಸೆ ಇಡಬೇಕಿತ್ತು.

ಯೆಹೋವನೇ ತಮ್ಮ ಪಾಲು ಎಂದೆಣಿಸಿದ ವ್ಯಕ್ತಿಗಳು

8. ಆಸಾಫನೆಂಬ ಲೇವಿಯನು ಏಕೆ ಗೊಂದಲಕ್ಕೀಡಾದನು?

8 ಯೆಹೋವನು ಇಡೀ ಲೇವಿಯ ಕುಲದವ  ಪಾಲು ಆಗಿದ್ದರೂ ಅವರಲ್ಲಿ ಕೆಲವರು “ಯೆಹೋವನೇ ನನ್ನ ಪಾಲು” ಎಂದು ವ್ಯಕ್ತಿಗತವಾಗಿ ಹೇಳಿದ್ದು ಗಮನಾರ್ಹ. ಹೀಗೆ ದೇವರ ಮೇಲೆ ತಮಗೆ ಭಕ್ತಿ, ಭರವಸೆ ಇರುವುದನ್ನು ತೋರಿಸಿಕೊಟ್ಟರು. (ಪ್ರಲಾ. 3:24) ಇಂಥ ಒಬ್ಬ ಲೇವಿಯನ ಕುರಿತು ಈಗ ನೋಡೋಣ. ಗಾಯಕನೂ ಗೀತೆರಚಕನೂ ಆಗಿದ್ದ ಅವನು ರಾಜ ದಾವೀದನ ಸಮಯದಲ್ಲಿ ಮುಖ್ಯ ಗಾಯಕನಾಗಿದ್ದ ಆಸಾಫನ ಮನೆತನದವನು ಆಗಿದ್ದಿರಬೇಕು. ಇವನನ್ನು ಸಹ ಆಸಾಫನೆಂಬ ಹೆಸರಿನಿಂದಲೇ ಕರೆಯಲಾಗುತ್ತದೆ. (1 ಪೂರ್ವ. 6:31-43) ತನ್ನ ಸುತ್ತಮುತ್ತಲಿದ್ದ ದುಷ್ಟರ ಏಳಿಗೆ ಕಂಡು ಈ ಆಸಾಫನು ಅಸೂಯೆಪಟ್ಟು ಉರಿಗೊಂಡನು ಎಂದು 73ನೇ ಕೀರ್ತನೆಯಲ್ಲಿ ಓದುತ್ತೇವೆ. ಅವನಿಗೆ ಎಷ್ಟು ಬೇಸರವಾಗಿತ್ತೆಂದರೆ “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ” ಎಂದು ಹೇಳಿದನು. ತನಗಿದ್ದ ಸೇವಾಸೌಭಾಗ್ಯವನ್ನು ಹಾಗೂ ಯೆಹೋವನು ತನ್ನ ಪಾಲು ಆಗಿದ್ದಾನೆ ಎಂಬದನ್ನು ಅವನು ಆ ಸಮಯಕ್ಕೆ ಮರೆತುಹೋಗಿರಬೇಕು. “ದೇವಾಲಯಕ್ಕೆ” ಹೋಗುವ ವರೆಗೆ ಅವನು ಆಧ್ಯಾತ್ಮಿಕವಾಗಿ ಗೊಂದಲಕ್ಕೀಡಾಗಿದ್ದನು.—ಕೀರ್ತ. 73:2, 3, 12, 13, 17.

9, 10. ದೇವರೇ ತನ್ನ ಶಾಶ್ವತವಾದ ಪಾಲು ಎಂದು ಆಸಾಫನು ಹೇಳಸಾಧ್ಯವಿತ್ತೇಕೆ?

9 ಆಸಾಫನು ದೇವಾಲಯದಲ್ಲಿ ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ವೀಕ್ಷಿಸಲಾರಂಭಿಸಿದನು. ಆಸಾಫನಿಗಾದ ಅನಿಸಿಕೆ ನಿಮಗೂ ಆಗಿದೆಯೇ? ಆಧ್ಯಾತ್ಮಿಕ ಸುಯೋಗಗಳ ಕಡೆಗಿನ ನಿಮ್ಮ ಗಮನ ಸ್ವಲ್ಪ ಸಮಯಕ್ಕೆ ಭೌತಿಕ ವಿಷಯಗಳೆಡೆಗೆ ತಿರುಗಿದೆಯೇ? ಹಾಗಾಗಿದ್ದಲ್ಲಿ ದೇವರ ವಾಕ್ಯವನ್ನು ಅಧ್ಯಯನ ಮಾಡುವ ಹಾಗೂ ಕ್ರೈಸ್ತ ಕೂಟಗಳಿಗೆ ಹೋಗುವ ಮೂಲಕ ನೀವು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಆರಂಭಿಸಿರಬಹುದು. ಆಲಯದಲ್ಲಿ ಆಸಾಫನು ದುಷ್ಟರ ಅಂತ್ಯಾವಸ್ಥೆ ಏನೆಂದು ಅರಿತುಕೊಂಡನು. ದೇವರ ಸೇವಕನಾಗಿರುವ ತನಗೆ ಯಾವೆಲ್ಲ ಆಶೀರ್ವಾದಗಳಿವೆ ಎಂದು ಯೋಚಿಸಿದನು. ಯೆಹೋವನು ಖಂಡಿತ ತನ್ನ ಬಲಗೈ ಹಿಡಿದು ಮುನ್ನಡೆಸುವನು ಎಂಬ ಭರವಸೆ ಅವನಿಗೆ ಬಂತು. “ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವದಿಲ್ಲ” ಎಂದು ದೃಢವಿಶ್ವಾಸದಿಂದ ಯೆಹೋವನಿಗೆ ಹೇಳಿದನು. (ಕೀರ್ತ. 73:23, 25) ಆಮೇಲೆ ದೇವರೇ ತನ್ನ ಪಾಲು ಎಂದು ತಿಳಿಸಿದನು. (ಕೀರ್ತನೆ 73:26 ಓದಿ.) “ತನುಮನಗಳು ಕ್ಷಯಿಸಿದರೂ . . . ನನ್ನ ಶಾಶ್ವತವಾದ ಪಾಲೂ ದೇವರೇ” ಎಂದು ಬರೆದನು. ಯೆಹೋವನು ತನ್ನನ್ನು ಒಬ್ಬ ಸ್ನೇಹಿತನಂತೆ ನೆನಪಿಸಿಕೊಳ್ಳುವನು ಹಾಗೂ ತನ್ನ ನಂಬಿಗಸ್ತ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂಬ ಭರವಸೆ ಅವನಿಗಿತ್ತು. (ಪ್ರಸಂ. 7:1) ಇದು ಆಸಾಫನ ಮನಸ್ಸಿಗೆ ನೆಮ್ಮದಿ ನೀಡಿತು. ಅವನು ಹಾಡಿದ್ದು: “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.”—ಕೀರ್ತ. 73:28.

10 ಆಸಾಫನು ಯಾವ ಅರ್ಥದಲ್ಲಿ ದೇವರು ತನ್ನ ಪಾಲು ಆಗಿದ್ದಾನೆಂದು ಹೇಳಿದನು? ಲೇವಿಯನಾದ ತನಗೆ ಸಿಗುತ್ತಿದ್ದ ಭೌತಿಕ ಒದಗಿಸುವಿಕೆಗಳನ್ನು ಮಾತ್ರ ಮನಸ್ಸಿನಲ್ಲಿಟ್ಟು ಅವನು ಮಾತಾಡುತ್ತಿರಲಿಲ್ಲ. ಅದಕ್ಕಿಂತಲೂ ಮುಖ್ಯವಾದ ಒಂದು ವಿಷಯದ ಬಗ್ಗೆ ಅಂದರೆ ಯೆಹೋವನ ಸೇವೆಮಾಡುವ ತನ್ನ ಸುಯೋಗ ಹಾಗೂ ಸರ್ವೋನ್ನತನಾದ ಆತನ ಜೊತೆಗೆ ತನಗಿರುವ ಸ್ನೇಹಸಂಬಂಧದ ಬಗ್ಗೆ ಮಾತಾಡುತ್ತಿದ್ದನು. (ಯಾಕೋ. 2:21-23) ಈ ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಆಸಾಫನು ಯೆಹೋವನಲ್ಲಿ ನಂಬಿಕೆ, ಭರವಸೆ ಇಡಬೇಕಿತ್ತು. ಯೆಹೋವನಿಗೆ ವಿಧೇಯನಾಗುವಲ್ಲಿ ತನ್ನ ಮುಂದಿನ ದಿನಗಳು ಆಶೀರ್ವಾದಗಳಿಂದ ಕೂಡಿರುವವು ಎಂಬ ಪೂರ್ಣ ಭರವಸೆ ಅವನಲ್ಲಿರಬೇಕಿತ್ತು. ಯೆಹೋವನು ನಿಮ್ಮನ್ನೂ ಅದೇ ರೀತಿಯಲ್ಲಿ ಆಶೀರ್ವದಿಸುವನೆಂಬ ಭರವಸೆ ನಿಮಗಿರಲಿ.

11. ಯೆರೆಮೀಯನಿಗೆ ಯಾವ ಪ್ರಶ್ನೆಯಿತ್ತು? ಅದಕ್ಕೆ ಹೇಗೆ ಉತ್ತರ ದೊರೆಯಿತು?

11 “ಯೆಹೋವನೇ ನನ್ನ ಪಾಲು” ಎಂದು ಹೇಳಿದ ಮತ್ತೊಬ್ಬ ಲೇವಿಯನು ಪ್ರವಾದಿ ಯೆರೆಮೀಯನಾಗಿದ್ದನು. ಯಾವ ಅರ್ಥದಲ್ಲಿ ಅವನು ಹಾಗೆ ಹೇಳಿದನೆಂದು ನೋಡೋಣ. ಯೆರೆಮೀಯನು ಯೆರೂಸಲೇಮಿನ ಹತ್ತಿರದಲ್ಲಿದ್ದ ಲೇವಿಯರ ಪಟ್ಟಣವಾದ ಅನಾತೋತ್‌ ಎಂಬಲ್ಲಿ ವಾಸಿಸುತ್ತಿದ್ದನು. (ಯೆರೆ. 1:1) ಒಮ್ಮೆ ಯೆರೆಮೀಯನು ತುಂಬ ವ್ಯಸನಗೊಂಡನು. ನೀತಿವಂತರು ಕಷ್ಟವನ್ನು ಅನುಭವಿಸುತ್ತಿದ್ದರೆ ದುಷ್ಟರು ಮಾತ್ರ ಯಾಕೆ ಇಷ್ಟೊಂದು ಏಳಿಗೆ ಹೊಂದುತ್ತಿದ್ದಾರೆಂಬ ಪ್ರಶ್ನೆ ಅವನನ್ನು ಕಾಡಿತು. (ಯೆರೆ. 12:1) ಯೆರೂಸಲೇಮ್‌ ಹಾಗೂ ಯೂದಾಯದಲ್ಲಿ ನಡೆಯುತ್ತಿದ್ದ ಕೆಟ್ಟಕಾರ್ಯಗಳನ್ನು ನೋಡಿದ ಮೇಲಂತೂ ದೇವರೊಂದಿಗೆ “ವ್ಯಾಜ್ಯ” ಮಾಡುವ ಮನಸ್ಸು ಅವನಿಗಾಯಿತು. ಆದರೆ ಯೆಹೋವನು ಧರ್ಮಸ್ವರೂಪನೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವನು ಯೆರೆಮೀಯನ ಪ್ರಶ್ನೆಗೆ ಉತ್ತರವಾಗಿ ಆ ಕೆಟ್ಟ ಜನರಿಗೆ ನಾಶನವಾಗುವುದೆಂದು ಪ್ರವಾದಿಸುವಂತೆ ಆಜ್ಞಾಪಿಸಿದನು ಮಾತ್ರವಲ್ಲ ಅವನು ನುಡಿದ ಪ್ರವಾದನೆಯನ್ನು ನೆರವೇರಿಸಿದನು. ಯೆಹೋವನ ಎಚ್ಚರಿಕೆಗೆ ಕಿವಿಗೊಟ್ಟು ಆತನಿಗೆ ವಿಧೇಯರಾದವರೆಲ್ಲ ಬದುಕುಳಿದರು. ಆದರೆ ಏಳಿಗೆ ಹೊಂದುತ್ತಿದ್ದ ದುಷ್ಟರು ಎಚ್ಚರಿಕೆಗೆ ಕಿವಿಗೊಡದೆ ನಾಶವಾದರು.—ಯೆರೆ. 21:9.

12, 13. (ಎ) “ಯೆಹೋವನೇ ನನ್ನ ಪಾಲು” ಎಂದು ಯೆರೆಮೀಯನು ಹೇಳಲು ಕಾರಣವೇನು? ಅವನಲ್ಲಿ ಯಾವ ಒಳ್ಳೇ ಮನೋಭಾವವಿತ್ತು? (ಬಿ) ಇಸ್ರಾಯೇಲಿನ ಎಲ್ಲ ಕುಲಗಳವರು ಕಾಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿತ್ತು ಏಕೆ?

12 ವಿನಾಶದ ಬರಸಿಡಿಲಿನಿಂದ ನಿರ್ಜನವಾಗಿ ಹಾಳುಬಿದ್ದಿದ್ದ ತನ್ನ ಸ್ವದೇಶವನ್ನು ನೋಡಿದಾಗ ಯೆರೆಮೀಯನಿಗೆ ಅಂಧಕಾರದಲ್ಲಿ ನಡೆಯುತ್ತಿರುವಂತೆ ಭಾಸವಾಯಿತು. “[ಯೆಹೋವನು] ಕಾರ್ಗತ್ತಲಲ್ಲಿ ನನ್ನನ್ನು ಇರಿಸಿದ್ದಾನೆ; ಬಹುಕಾಲದ ಹಿಂದೆ ಸತ್ತವರಂತಿದ್ದೇನೆ” ಎಂದು ಅವನು ಹೇಳಿದನು. (ಪ್ರಲಾ. 1:1, 16; 3:6) ಈ ಹಿಂದೆಯೇ ಯೆರೆಮೀಯನು ಧರ್ಮಭ್ರಷ್ಟ ಇಸ್ರಾಯೇಲ್‌ ಜನಾಂಗವನ್ನು ತಮ್ಮ ತಂದೆಯಾದ ಯೆಹೋವ ದೇವರ ಬಳಿ ಹಿಂದಿರುಗುವಂತೆ ಕೇಳಿಕೊಂಡಿದ್ದನು. ಆದರೆ ಅವರ ಕೆಟ್ಟತನ ಎಷ್ಟಿತ್ತೆಂದರೆ ಯೆಹೋವನು ಯೆರೂಸಲೇಮನ್ನೂ ಯೂದಾಯವನ್ನೂ ನಾಶಮಾಡಬೇಕಾಯಿತು. ಯೆರೆಮೀಯನು ಆ ಜನರಂತೆ ತಪ್ಪುಮಾಡಿರದಿದ್ದರೂ ಅವರ ನಾಶನ ಅವನಿಗೆ ವೇದನೆ ತಂದಿತು. ಇಷ್ಟೆಲ್ಲ ನೋವಿದ್ದಾಗಲೂ ದೇವರ ಕರುಣೆಯನ್ನು ಅವನು ಮರೆಯಲಿಲ್ಲ. “ನಾವು ಉಳಿದಿರುವದು ಯೆಹೋವನ ಕರುಣೆ” ಎಂದು ಹೇಳಿದನು. ಹೌದು, ಆತನ ಕರುಣೆ “ದಿನದಿನವು ಹೊಸಹೊಸದಾಗಿ” ತೋರಿಬರುತ್ತದೆ. ಈ ಸಂದರ್ಭದಲ್ಲೇ ಯೆರೆಮೀಯನು “ಯೆಹೋವನೇ ನನ್ನ ಪಾಲು” ಎಂದು ಹೇಳಿದನು. ಹೀಗೆ ಯೆರೆಮೀಯನು ಯೆಹೋವನ ಪ್ರವಾದಿಯಾಗಿ ಸೇವೆ ಮುಂದುವರಿಸಿದನು.—ಪ್ರಲಾಪಗಳು 3:22-24 ಓದಿ.

13 ಎಪ್ಪತ್ತು ವರ್ಷಗಳ ವರೆಗೆ ಇಸ್ರಾಯೇಲ್ಯರ ಸ್ವದೇಶ ನಿರ್ಜನವಾಗಿ ಪಾಳುಬೀಳಲಿತ್ತು. (ಯೆರೆ. 25:11) ಆದರೆ “ಯೆಹೋವನೇ ನನ್ನ ಪಾಲು” ಎಂಬ ಯೆರೆಮೀಯನ ಮಾತುಗಳು ಅವನಿಗೆ ದೇವರ ಕರುಣೆಯಲ್ಲಿ ಭರವಸೆಯಿತ್ತೆಂದು ತೋರಿಸುತ್ತವೆ. ಅವನ ಈ ಭರವಸೆಯು ಯೆಹೋವನು ಕ್ರಿಯೆ ಕೈಗೊಳ್ಳುವ ವರೆಗೂ ಕಾಯುತ್ತಾ ನಿರೀಕ್ಷಿಸುವಂತೆ ಪ್ರೇರಿಸಿತು. ಇಸ್ರಾಯೇಲಿನ ಎಲ್ಲ ಕುಲಗಳವರು ತಮ್ಮ ಸ್ವಾಸ್ತ್ಯವನ್ನು ಕಳಕೊಂಡಿದ್ದ ಕಾರಣ ಪ್ರವಾದಿಗಿದ್ದಂಥ ಅದೇ ಮನೋಭಾವವನ್ನು ಅವರೂ ಬೆಳೆಸಿಕೊಳ್ಳಬೇಕಿತ್ತು. ಯೆಹೋವನಲ್ಲಿ ಮಾತ್ರ ಅವರು ನಿರೀಕ್ಷೆ ಇಡಸಾಧ್ಯವಿತ್ತು. ಎಪ್ಪತ್ತು ವರ್ಷಗಳ ನಂತರ ಇಸ್ರಾಯೇಲ್ಯರು ತಮ್ಮ ಸ್ವದೇಶಕ್ಕೆ ಹಿಂತೆರಳುವಂತೆ ಯೆಹೋವನು ಮಾಡಿದನು. ಅವರು ಆತನಿಗೆ ಸೇವೆಸಲ್ಲಿಸುವ ಸುಯೋಗದಲ್ಲಿ ಮುಂದುವರಿದರು.—2 ಪೂರ್ವ. 36:20-23.

“ಯೆಹೋವನೇ ನನ್ನ ಪಾಲು” ಎಂದು ಇತರರೂ ಹೇಳಸಾಧ್ಯ

14, 15. ಲೇವಿಯರಲ್ಲದೆ ಬೇರೆ ಯಾರು ಸಹ ಯೆಹೋವನನ್ನು ತನ್ನ ಪಾಲು ಎಂದೆಣಿಸಿದನು? ಏಕೆ?

14 ನಾವೀಗ ಗಮನಿಸಿದಂತೆ ಆಸಾಫ, ಯೆರೆಮೀಯ ಇಬ್ಬರೂ ಲೇವಿಯ ಕುಲದವರಾಗಿದ್ದರು. ಇದರರ್ಥ “ಯೆಹೋವನೇ ನನ್ನ ಪಾಲು” ಎಂದು ಬೇರೆಯವರು ಹೇಳಸಾಧ್ಯವಿಲ್ಲ ಎಂದಲ್ಲ. ತರುಣ ದಾವೀದನೊಮ್ಮೆ “ನೀನೇ ನನ್ನ ಶರಣನೂ ಜೀವಲೋಕದಲ್ಲಿ ನನ್ನ ಪಾಲೂ” ಎಂದು ದೇವರ ಕುರಿತು ಹೇಳಿದನು. (ಕೀರ್ತನೆ 142: ಮೇಲ್ಬರಹ, 1, 5 ಓದಿ.) ಆ ಕೀರ್ತನೆಯನ್ನು ದಾವೀದನೇನೂ ಅರಮನೆಯಲ್ಲಿ ಕುಳಿತು ರಚಿಸಲಿಲ್ಲ. ಅರಮನೆ ಬಿಡಿ ಆ ಸಮಯದಲ್ಲಿ ಅವನು ಸಾಧಾರಣ ಮನೆಯಲ್ಲೂ ಇರಲಿಲ್ಲ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಗವಿಯಲ್ಲಿ ಅವಿತುಕೊಂಡಿದ್ದನು. ಹೀಗೆ ಎರಡು ಸಂದರ್ಭಗಳಲ್ಲಿ ಅವನು ಗವಿಗಳಲ್ಲಿ ಅವಿತು ಜೀವ ಉಳಿಸಿಕೊಂಡಿದ್ದನು. ಒಮ್ಮೆ ಅದುಲಾಮ್‌ಗೆ ಸಮೀಪವಿದ್ದ ಗವಿಯಲ್ಲಿ ಮತ್ತೊಮ್ಮೆ ಏಂಗೆದಿ ಎಂಬಲ್ಲಿನ ಗವಿಯಲ್ಲಿ. ಇವೆರಡರಲ್ಲಿ ಯಾವುದೋ ಒಂದು ಗವಿಯಲ್ಲಿದ್ದಾಗ ಅವನು 142ನೇ ಕೀರ್ತನೆಯನ್ನು ರಚಿಸಿದ್ದಿರಬೇಕು.

15 ಅಂದರೆ ಅವನು ರಾಜ ಸೌಲನ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಆ ಕೀರ್ತನೆಯನ್ನು ರಚಿಸಿದನು. ದಾವೀದನ ಮೇಲೆ ದ್ವೇಷ ಮಸೆಯುತ್ತಿದ್ದ ಸೌಲನು ಅವನನ್ನು ಕೊಲ್ಲಲು ಹವಣಿಸುತ್ತಿದ್ದನು. ಜೀವರಕ್ಷಣೆಗಾಗಿ ದಾವೀದ ದುರ್ಗಮವಾದ ಗವಿಯಲ್ಲಿ ಅವಿತುಕೊಂಡಿದ್ದನು. (1 ಸಮು. 22:1, 4) ಇಂಥ ನಿರ್ಜನ ಸ್ಥಳದಲ್ಲಿ ತನ್ನನ್ನು ಕಾಪಾಡಲು ಯಾವ ಸ್ನೇಹಿತನೂ ಹತ್ತಿರವಿಲ್ಲ ಎಂದು ಅವನಿಗೆ ಅನಿಸಿದ್ದಿರಬೇಕು. (ಕೀರ್ತ. 142:4) ಅವನು ದೇವರಿಗೆ ಮೊರೆಯಿಟ್ಟದ್ದು ಆ ಸಂದರ್ಭದಲ್ಲೇ.

16, 17. (ಎ) ದಾವೀದನು ತನ್ನ ಸಹಾಯಕ್ಕೆ ಯಾರೂ ಇಲ್ಲವೆಂದು ನೆನಸಲು ಕಾರಣಗಳೇನು? (ಬಿ) ದಾವೀದನು ಸಹಾಯಕ್ಕಾಗಿ ಯಾರಲ್ಲಿ ಸಂಪೂರ್ಣ ಭರವಸೆಯಿಟ್ಟನು?

16 ದಾವೀದನು 142ನೇ ಕೀರ್ತನೆಯನ್ನು ರಚಿಸುವ ಮುಂಚೆಯೇ ಮಹಾಯಾಜಕ ಅಹೀಮೆಲೆಕನ ಸಾವಿನ ಸುದ್ದಿ ತಲುಪಿರಬೇಕು. ದಾವೀದನು ಸೌಲನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾನೆಂದು ತಿಳಿಯದ ಅಹೀಮೆಲೆಕನು ಪಲಾಯನಕ್ಕೆ ಸಹಾಯಮಾಡಿದ್ದನು. ಆದರೆ ರಾಜ ಸೌಲನು ಮತ್ಸರದಿಂದ ಅಹೀಮೆಲೆಕನನ್ನೂ ಅವನ ಕುಟುಂಬದವರನ್ನೂ ಕೊಂದನು. (1 ಸಮು. 22:11, 18, 19) ಅವರ ಮರಣಕ್ಕೆ ತಾನೇ ಹೊಣೆಯೆಂದು ದಾವೀದನು ಕೊರಗಿದನು. ತನ್ನಿಂದಲೇ ಅವರಿಗೆ ಈ ಗತಿ ಬಂತೆಂದು ವ್ಯಥೆಪಟ್ಟನು. ದಾವೀದನ ಸನ್ನಿವೇಶದಲ್ಲಿ ನೀವು ಇದ್ದಿದ್ದರೆ ನಿಮಗೂ ಹಾಗೆ ಅನಿಸುತ್ತಿತ್ತಲ್ಲವೇ? ದಾವೀದನ ಸಂಕಷ್ಟಗಳು ಅಷ್ಟಕ್ಕೆ ನಿಲ್ಲಲಿಲ್ಲ. ಸೌಲನು ಅವನನ್ನು ಕೊಲ್ಲಲು ಹುಡುಕುತ್ತಲೇ ಇದ್ದನು. ಇದರಿಂದ ದಾವೀದನಿಗೆ ನೆಮ್ಮದಿಯೇ ಇರಲಿಲ್ಲ.

17 ಅಹೀಮೆಲೆಕನ ಸಾವಿನ ಸುದ್ದಿ ತಲುಪಿದ ಬೆನ್ನಲ್ಲೇ ಪ್ರವಾದಿ ಸಮುವೇಲನ ಮರಣದ ಸುದ್ದಿ ದಾವೀದನಿಗೆ ತಲುಪಿತು. (1 ಸಮು. 25:1) ತನ್ನನ್ನು ರಾಜನಾಗಿ ಅಭಿಷೇಕಿಸಿದ ಸಮುವೇಲನು ಸಹ ಸಾವನ್ನಪ್ಪಿದ್ದು ನಿಜಕ್ಕೂ ಅವನಿಗೆ ಆಘಾತವಾಗಿತ್ತು. ತನಗಿನ್ನು ಸಹಾಯಕರೇ ಇಲ್ಲ ಎಂದು ದಾವೀದ ದಿಕ್ಕು ತೋಚದೆ ಕಂಗಾಲಾದನು. ಆದರೆ ಯೆಹೋವನು ಖಂಡಿತ ಸಹಾಯಮಾಡುವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ನಿಜ, ಲೇವಿಯರಿಗಿದ್ದಂಥ ಸುಯೋಗಗಳು ದಾವೀದನಿಗೆ ಇರಲಿಲ್ಲ. ಆದರೆ ಬೇರೊಂದು ಸೇವಾಸುಯೋಗ ಅವನಿಗಿತ್ತು. ದೇವಜನರ ರಾಜನಾಗಲು ಅಭಿಷೇಕಿಸಲ್ಪಟ್ಟಿದ್ದನು. (1 ಸಮು. 16:1, 13) ಹಾಗಾಗಿ, ದಾವೀದನು ತನ್ನ ಹೃದಯಬಿಚ್ಚಿ ಯೆಹೋವನಿಗೆ ಪ್ರಾರ್ಥಿಸಿದನು ಹಾಗೂ ಆತನಲ್ಲಿ ಸಂಪೂರ್ಣ ಭರವಸೆಯಿಟ್ಟನು. ಯೆಹೋವನನ್ನು ನೀವೂ ಆಶ್ರಯವನ್ನಾಗಿ ಮಾಡಿಕೊಳ್ಳಿ. ಆತನ ಸೇವೆಯಲ್ಲಿ ಮುಂದುವರಿಯುವಾಗ ಆತನೇ ನಿಮ್ಮ ಪಾಲು ಆಗಿರಲಿ.

18. ನಾವು ಈ ಲೇಖನದಲ್ಲಿ ನೋಡಿದ ವ್ಯಕ್ತಿಗಳು ಯೆಹೋವನನ್ನು ತಮ್ಮ ಪಾಲು ಎಂದು ಹೇಳಿದ್ದು ಯಾವ ಅರ್ಥದಲ್ಲಿ?

18 ನಾವು ಈ ವರೆಗೆ ನೋಡಿದ ಯೆಹೋವನ ಸೇವಕರು ಆತನನ್ನು ತಮ್ಮ ಪಾಲು ಎಂದು ಹೇಳಿದ್ದು ಯಾವ ಅರ್ಥದಲ್ಲಿ? ಅವರೆಲ್ಲ ಆತನ ಸೇವೆಯಲ್ಲಿ ನೇಮಕವನ್ನು ಪಡೆದಿದ್ದರು. ಅಲ್ಲದೆ ಯೆಹೋವನು ತಮ್ಮನ್ನು ನೋಡಿಕೊಳ್ಳುವನು ಎಂಬ ಪೂರ್ಣ ಭರವಸೆ ಅವರಿಗಿತ್ತು. ಲೇವಿಯರಲ್ಲದೆ ದಾವೀದನಂಥ ಇಸ್ರಾಯೇಲಿನ ಇತರ ಕುಲದವರು ಸಹ ಯೆಹೋವನು ತಮ್ಮ ಪಾಲು ಎಂದು ಹೇಳಿದರು. ಅವರಂತೆ ನಾವು ಹೇಗೆ ಯೆಹೋವನು ನಮ್ಮ ಪಾಲು ಎಂದು ಹೇಳಬಹುದು? ಮುಂದಿನ ಲೇಖನದಲ್ಲಿ ಚರ್ಚಿಸೋಣ.

ನಿಮ್ಮ ಉತ್ತರವೇನು?

• ಯಾವ ಅರ್ಥದಲ್ಲಿ ಲೇವಿಯರಿಗೆ ಯೆಹೋವನು ಪಾಲು ಆಗಿದ್ದನು?

• ಯೆಹೋವನು ತಮ್ಮ ಪಾಲು ಎಂದು ತೋರಿಸಿಕೊಡಲು ಆಸಾಫ, ಯೆರೆಮೀಯ, ದಾವೀದ ಏನು ಮಾಡಿದರು?

• ಯೆಹೋವನು ನಿಮ್ಮ ಪಾಲು ಆಗಿರಬೇಕಾದರೆ ನಿಮ್ಮಲ್ಲಿ ಯಾವ ಮನೋಭಾವ ಇರಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಲೇವಿಯ ಕುಲದವರಿಗೆ ವಾಗ್ದತ್ತ ದೇಶದಲ್ಲಿ ಯಾವುದೇ ಸ್ವಾಸ್ತ್ಯ ಸಿಗಲಿಲ್ಲ. ಯೆಹೋವನೇ ಅವರ ಪಾಲು ಆಗಿದ್ದನು. ಅಂದರೆ ಆತನ ಸೇವೆಮಾಡುವ ಮಹಾ ಸುಯೋಗ ಅವರದ್ದಾಗಿತ್ತು

[ಪುಟ 7ರಲ್ಲಿರುವ ಚಿತ್ರ]

ಯಾವ ಅರ್ಥದಲ್ಲಿ ಯಾಜಕರಿಗೂ ಲೇವಿಯರಿಗೂ ಯೆಹೋವನು ಪಾಲು ಆಗಿದ್ದನು?

[ಪುಟ 9ರಲ್ಲಿರುವ ಚಿತ್ರ]

ಯೆಹೋವನು ಸದಾ ತನ್ನ ಪಾಲು ಎಂದು ಹೇಳುವಂತೆ ಆಸಾಫನಿಗೆ ಯಾವುದು ಸಹಾಯಮಾಡಿತು?