ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?

ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?

ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?

“ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ.”—2 ತಿಮೊ. 2:19.

1, 2. (ಎ) ಯೇಸು ಹೇಗಿರಲು ಬಯಸಿದನು? (ಬಿ) ಯಾವ ಪ್ರಶ್ನೆಗಳ ಕುರಿತು ನಾವು ಯೋಚಿಸಬೇಕು?

ಒಮ್ಮೆ ಒಬ್ಬ ಫರಿಸಾಯ ಯೇಸುವಿನ ಬಳಿ ಬಂದು, “ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ ಯಾವುದು?” ಎಂದು ಕೇಳಿದನು. ಅದಕ್ಕೆ ಯೇಸು, “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದು ಉತ್ತರ ಕೊಟ್ಟನು. (ಮತ್ತಾ. 22:35-37) ಯೆಹೋವ ದೇವರ ಮೇಲೆ ಯೇಸುವಿಗೆ ಅಪಾರ ಪ್ರೀತಿಯಿತ್ತು. ಮಾತ್ರವಲ್ಲ, ಅದು ಅವನ ಜೀವನ ರೀತಿಯಲ್ಲಿ ಎದ್ದುಕಾಣುತ್ತಿತ್ತು. ಬದುಕಿನುದ್ದಕ್ಕೂ ಅವನು ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ದೃಷ್ಟಿಯಲ್ಲಿ ಯಾವಾಗಲೂ ಒಳ್ಳೆಯವನಾಗಿರಲು ಬಯಸಿದನು. ಹಾಗಾಗಿ ತನ್ನ ಜೀವನದ ಕೊನೆಯಲ್ಲಿ ‘ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿದ್ದೇನೆ’ ಎಂದು ಹೇಳಶಕ್ತನಾಗಿದ್ದನು.—ಯೋಹಾ. 15:10.

2 ಇಂದು ಅನೇಕರು ದೇವರನ್ನು ಪ್ರೀತಿಸುವುದಾಗಿ ಹೇಳುತ್ತಾರೆ. ಆ ಪಟ್ಟಿಯಲ್ಲಿ ನಾವು ಸಹ ನಮ್ಮನ್ನು ಸೇರಿಸುವುದರಲ್ಲಿ ಸಂದೇಹವಿಲ್ಲ. ಆದರೆ ಕೆಲವೊಂದು ಪ್ರಶ್ನೆಗಳ ಕುರಿತ ಗಂಭೀರ ಚಿಂತನೆ ನಮಗಿರಬೇಕು: ‘ದೇವರಿಗೆ ನಮ್ಮ ಬಗ್ಗೆ ಯಾವ ಅಭಿಪ್ರಾಯವಿದೆ? ನಮ್ಮನ್ನು ತನ್ನವರೆಂದು ಆತನು ಹೇಳುತ್ತಾನಾ? ಆತನ ಅನುಗ್ರಹ ನಮ್ಮ ಮೇಲೆ ಇದೆಯಾ?’ (2 ತಿಮೊ. 2:19) ಸ್ವಲ್ಪ ಯೋಚಿಸಿ, ವಿಶ್ವ ಪರಮಾಧಿಕಾರಿಯೊಂದಿಗೆ ಆಪ್ತರಾಗಿರುವುದು ಸಾಧಾರಣ ವಿಷಯನಾ?

3. ದೇವರು ನಮ್ಮನ್ನು ತನ್ನವರೆಂದು ವೀಕ್ಷಿಸುತ್ತಾನಾ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುವುದೇಕೆ? ಅಂಥ ಆಲೋಚನೆಯಿಂದ ಹೊರಬರಲು ಅವರಿಗೆ ಯಾವುದು ಸಹಾಯಮಾಡುವುದು?

3 ದೇವರನ್ನು ಪ್ರೀತಿಸುವ ಕೆಲವರಿಗೂ, ತಾವು ದೇವರ ಆಪ್ತ ಗೆಳೆಯರಾಗಿರಲು ಸಾಧ್ಯನಾ ಎಂಬ ಪ್ರಶ್ನೆ ಕಾಡುತ್ತದೆ. ತಾವು ಅಯೋಗ್ಯರೆಂಬ ಭಾವನೆ ಇನ್ನು ಕೆಲವರಲ್ಲಿರಬಹುದು. ಹಾಗಾಗಿ ಆತನು ತಮ್ಮನ್ನು ತನ್ನವರೆಂದು ವೀಕ್ಷಿಸುತ್ತಾನಾ ಎಂದು ಅವರು ಯೋಚಿಸಬಹುದು. ನಮ್ಮ ಮನ ನಮ್ಮನ್ನು ಅಯೋಗ್ಯರೆಂದು ಕುಟುಕಿದರೂ ದೇವರು ನಮ್ಮನ್ನು ವೀಕ್ಷಿಸುವ ರೀತಿಯೇ ಬೇರೆ ಎಂದು ತಿಳಿಯುವುದು ಸಂತಸದ ವಿಷಯವಾಗಿದೆ. (1 ಸಮು. 16:7) “ಯಾವನಾದರೂ ದೇವರನ್ನು ಪ್ರೀತಿಸುವುದಾದರೆ ದೇವರು ಅವನನ್ನು ತಿಳಿದುಕೊಂಡಿರುತ್ತಾನೆ” ಎಂದು ಅಪೊಸ್ತಲ ಪೌಲ ತನ್ನ ಕ್ರೈಸ್ತ ಸಹೋದರರಿಗೆ ಹೇಳಿದನು. (1 ಕೊರಿಂ. 8:3) ಹೌದು, ದೇವರು ನಿಮ್ಮನ್ನು ತಿಳಿದುಕೊಳ್ಳಬೇಕಾದರೆ ಮೊದಲು ನಿಮಗೆ ಆತನ ಮೇಲೆ ಪ್ರೀತಿಯಿರಬೇಕು. ಈ ಪ್ರಶ್ನೆಗಳನ್ನು ಗಮನಿಸಿ: ಈ ಪತ್ರಿಕೆಯನ್ನು ನೀವೇಕೆ ಓದುತ್ತಿದ್ದೀರಾ? ನೀವೇಕೆ ಪೂರ್ಣ ಹೃದಯ, ಪೂರ್ಣ ಪ್ರಾಣ, ಪೂರ್ಣ ಮನಸ್ಸಿನಿಂದ ದೇವರ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ದೇವರಿಗೆ ಸಮರ್ಪಿಸಿಕೊಂಡಿರುವ ಹಾಗೂ ದೀಕ್ಷಾಸ್ನಾನ ಪಡೆದಿರುವ ಜನರಲ್ಲಿ ನೀವು ಒಬ್ಬರಾಗಿರುವಲ್ಲಿ, ಆ ಹೆಜ್ಜೆಗಳನ್ನೇಕೆ ನೀವು ತೆಗೆದುಕೊಂಡಿರಿ? ಹೃದಯವನ್ನು ನೋಡುವ ಯೆಹೋವ ದೇವರು ಸಮಸ್ತ ಜನಾಂಗಗಳಿಂದ ಇಷ್ಟವಾದವರನ್ನೇ ಸೆಳೆದುಕೊಳ್ಳುತ್ತಾನೆ. (ಹಗ್ಗಾಯ 2:7; ಯೋಹಾನ 6:44 ಓದಿ.) ಆದ್ದರಿಂದ, ನಿಮ್ಮನ್ನು ಸೆಳೆದಿರುವುದು ಯೆಹೋವನೇ ಎಂಬ ಖಾತ್ರಿ ನಿಮಗಿರಲಿ. ನಂಬಿಗಸ್ತರಾಗಿ ಉಳಿಯುವಲ್ಲಿ ದೇವರು ತಾನು ಸೆಳೆದಿರುವವರನ್ನು ಯಾವತ್ತೂ ತಳ್ಳಿಬಿಡುವುದಿಲ್ಲ. ಅವರು ಆತನಿಗೆ ಅಮೂಲ್ಯರಾಗಿದ್ದಾರೆ. ಆತನಿಗೆ ಅವರ ಮೇಲೆ ಗಾಢ ಪ್ರೀತಿಯಿದೆ.—ಕೀರ್ತ. 94:14.

4. ದೇವರೊಂದಿಗಿನ ಅಮೂಲ್ಯ ಗೆಳೆತನವನ್ನು ನಾವು ಸದಾ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಏಕೆ?

4 ಯೆಹೋವನು ನಮ್ಮನ್ನು ಸೆಳೆದಿದ್ದಾನೆ ಎಂದಾದ ಮೇಲೆ, ನಾವು ನಮ್ಮನ್ನು ಆತನ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು ಶ್ರಮಿಸುವುದು ಅಗತ್ಯ. (ಯೂದ 20, 21 ಓದಿ.) ಏಕೆಂದರೆ, ಒಬ್ಬನು ದೇವರಿಂದ ದೂರ ತೇಲಿ ಹೋಗಸಾಧ್ಯವಿದೆ ಎಂದು ಬೈಬಲ್‌ ಎಚ್ಚರಿಸುತ್ತದೆ. (ಇಬ್ರಿ. 2:1; 3:12, 13) ಉದಾಹರಣೆಗೆ, 2 ತಿಮೊಥೆಯ 2:19ರ ತನ್ನ ಮಾತುಗಳ ಮುಂಚೆ ಪೌಲನು ಹುಮೆನಾಯ ಹಾಗೂ ಪೀಲೇತ ಎಂಬವರ ಕುರಿತು ತಿಳಿಸಿದನು. ಅವರಿಬ್ಬರನ್ನು ಒಂದು ಸಮಯದಲ್ಲಿ ಯೆಹೋವನು ತನ್ನವರೆಂದು ವೀಕ್ಷಿಸಿದ್ದನು. ಆದರೆ ಅದನ್ನು ಗಣ್ಯಮಾಡದೆ ಅವರು ಸತ್ಯಬಿಟ್ಟು ಹೋಗಿದ್ದರು. (2 ತಿಮೊ. 2:16-18) ಗಲಾತ್ಯ ಸಭೆಯಲ್ಲಿ ಸಹ ದೇವರು ತನ್ನವರೆಂದು ವೀಕ್ಷಿಸಿದ್ದ ಕೆಲವರು ಸತ್ಯದ ಬೆಳಕಿನಲ್ಲಿ ಸ್ಥಿರವಾಗಿ ಉಳಿಯಲಿಲ್ಲ. (ಗಲಾ. 4:9) ಆದುದರಿಂದ, ಯೆಹೋವ ದೇವರೊಂದಿಗಿನ ಅಮೂಲ್ಯ ಗೆಳೆತನವನ್ನು ನಾವು ಸದಾ ಜೋಪಾನವಾಗಿ ಕಾಪಾಡಿಕೊಳ್ಳುವುದು ಅತ್ಯಗತ್ಯ.

5. (ಎ) ದೇವರು ನಮ್ಮನ್ನು ತನ್ನವರೆಂದು ವೀಕ್ಷಿಸಬೇಕಾದರೆ, ನಮ್ಮಲ್ಲಿ ಯಾವ ಸದ್ಗುಣಗಳಿರಬೇಕು? (ಬಿ) ಯಾರ ಉದಾಹರಣೆಗಳನ್ನು ನಾವು ಚರ್ಚಿಸಲಿದ್ದೇವೆ?

5 ಯೆಹೋವ ದೇವರು ನಮ್ಮನ್ನು ತನ್ನವರೆಂದು ವೀಕ್ಷಿಸಬೇಕಾದರೆ ನಮ್ಮಲ್ಲಿ ಸದ್ಗುಣಗಳಿರಬೇಕು. (ಕೀರ್ತ. 15:1-5; 1 ಪೇತ್ರ 3:4) ನಂಬಿಕೆ ಹಾಗೂ ದೀನಭಾವ ಅವುಗಳಲ್ಲಿ ಎರಡು. ಈ ಗುಣಗಳಿದ್ದ ಇಬ್ಬರು ವ್ಯಕ್ತಿಗಳ ಉದಾಹರಣೆಯನ್ನು ನಾವೀಗ ನೋಡೋಣ. ಈ ಗುಣಗಳು ಹೇಗೆ ಅವರನ್ನು ದೇವರಿಗೆ ಆಪ್ತರಾಗಿರುವಂತೆ ಮಾಡಿದವು ಎಂದು ತಿಳಿಯೋಣ. ದೇವರಿಗೆ ತಾನು ಆಪ್ತನಾಗಿದ್ದೇನೆಂದು ಅಂದುಕೊಂಡಿದ್ದ ಒಬ್ಬ ಮನುಷ್ಯನ ಕುರಿತು ಸಹ ನಾವು ನೋಡಲಿರುವೆವು. ಆದರೆ, ಅವನಲ್ಲಿ ಅಹಂ ತುಂಬಿದ್ದ ಕಾರಣ ಯೆಹೋವನು ಅವನನ್ನು ತಳ್ಳಿಬಿಟ್ಟನು. ಈ ಉದಾಹರಣೆಗಳಿಂದ ನಾವು ಅನೇಕ ಪಾಠಗಳನ್ನು ಕಲಿಯಲಿದ್ದೇವೆ.

ಅಬ್ರಹಾಮ—ನಂಬಿಕೆಯಿರುವ ಎಲ್ಲರಿಗೆ ತಂದೆ

6. (ಎ) ಯೆಹೋವ ದೇವರ ವಾಗ್ದಾನಗಳಲ್ಲಿ ನಂಬಿಕೆಯಿದ್ದ ಅಬ್ರಹಾಮ ಏನು ಮಾಡಿದನು? (ಬಿ) ದೇವರು ಅಬ್ರಹಾಮನನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದನೆಂದು ವಿವರಿಸಿ.

6 ಅಬ್ರಹಾಮ “ಯೆಹೋವನನ್ನು ನಂಬಿದ” ವ್ಯಕ್ತಿಯಾಗಿದ್ದನು. “ನಂಬಿಕೆಯಿರುವ ಎಲ್ಲರಿಗೆ . . . ತಂದೆ” ಎಂದು ಬೈಬಲ್‌ ಅವನನ್ನು ಕರೆಯುತ್ತದೆ. (ಆದಿ. 15:6; ರೋಮ. 4:11) ದೇವರಲ್ಲಿ ಅಚಲ ನಂಬಿಕೆಯಿದ್ದ ಕಾರಣದಿಂದಲೇ ಅಬ್ರಹಾಮ ತನ್ನ ಮನೆ, ಸುಖ-ಸವಲತ್ತು, ಮಿತ್ರರು, ಹೀಗೆ ಎಲ್ಲವನ್ನೂ ಬಿಟ್ಟು ದೂರದ ದೇಶಕ್ಕೆ ಹೋದನು. (ಆದಿ. 12:1-4; ಇಬ್ರಿ. 11:8-10) ಅದಾಗಿ ಅನೇಕ ವರ್ಷಗಳ ಬಳಿಕವೂ ಅವನ ಆ ನಂಬಿಕೆ ಅಚಲವಾಗಿತ್ತು. ದೇವರ ಆಜ್ಞೆ ಪಾಲಿಸುತ್ತಾ “ಇಸಾಕನನ್ನು ಅರ್ಪಿಸುವಷ್ಟರ ಮಟ್ಟಿಗೆ ತನ್ನ ನಂಬಿಕೆಯನ್ನು” ತೋರಿಸಿದ್ದರಲ್ಲಿ ಇದು ಸಾಬೀತಾಯಿತು. (ಇಬ್ರಿ. 11:17-19) ಯೆಹೋವ ದೇವರ ವಾಗ್ದಾನಗಳಲ್ಲಿ ಅವನಿಗೆ ನಂಬಿಕೆಯಿದ್ದ ಕಾರಣ ದೇವರು ಅವನನ್ನು ಆದುಕೊಂಡನು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅಬ್ರಹಾಮನನ್ನು ದೇವರು ಚೆನ್ನಾಗಿ ತಿಳಿದುಕೊಂಡಿದ್ದನು. (ಆದಿಕಾಂಡ 18:19 ಓದಿ.) ಯೆಹೋವನಿಗೆ ಅಬ್ರಹಾಮನ ಪರಿಚಯವಿದ್ದದ್ದು ಮಾತ್ರವಲ್ಲ, ಅವನನ್ನು ಗೆಳೆಯನಂತೆ ಪ್ರೀತಿಸಿದನು.—ಯಾಕೋ. 2:22, 23.

7. ಯೆಹೋವ ದೇವರ ವಾಗ್ದಾನದ ಬಗ್ಗೆ ಅಬ್ರಹಾಮನಿಗೆ ಯಾವ ಅಭಿಪ್ರಾಯವಿತ್ತು? ಅವನು ತನ್ನ ನಂಬಿಕೆಯನ್ನು ಹೇಗೆ ತೋರಿಸಿಕೊಟ್ಟನು?

7 ಅಬ್ರಹಾಮನ ಸಂತತಿಯವರು “ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು” ಮತ್ತು “ಸಮುದ್ರತೀರದಲ್ಲಿರುವ ಉಸುಬಿನಂತೆ” ಹೆಚ್ಚುವರು ಎಂದು ಯೆಹೋವನು ವಚನವಿತ್ತನು. (ಆದಿ. 22:17, 18) ಈ ವಚನ ಅಬ್ರಹಾಮನ ಜೀವಮಾನದಲ್ಲಿ ನೆರವೇರಲಿಲ್ಲ. ಆದರೂ ಅವನ ಬದುಕಿನುದ್ದಕ್ಕೂ ಯೆಹೋವನ ಮೇಲಿನ ಭರವಸೆ ಹಚ್ಚಹಸುರಾಗಿತ್ತು. ದೇವರು ನುಡಿದರೆ ನೆರವೇರಿಕೆ ಖಂಡಿತ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆ ನಂಬಿಕೆಗನುಸಾರ ಅವನು ಬದುಕಿದನು. (ಇಬ್ರಿಯ 11:13 ಓದಿ.) ಅಬ್ರಹಾಮನಲ್ಲಿದ್ದ ಆ ನಂಬಿಕೆಯನ್ನು ಯೆಹೋವನು ನಮ್ಮಲ್ಲೂ ಕಾಣುವನೋ?

ಯೆಹೋವನನ್ನು ನಿರೀಕ್ಷಿಸುವುದು ನಂಬಿಕೆಯ ಲಕ್ಷಣ

8. ಹೆಚ್ಚಿನವರಲ್ಲಿ ಯಾವ ಆಶೆ ಆಕಾಂಕ್ಷೆ ಇರುತ್ತದೆ?

8 ಆಶೆ ಆಕಾಂಕ್ಷೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಮದುವೆಯಾಗಬೇಕು, ಮಕ್ಕಳಾಗಬೇಕು, ಆರೋಗ್ಯ ಚೆನ್ನಾಗಿರಬೇಕು ಮುಂತಾದ ಆಶೆಗಳು ತಪ್ಪಲ್ಲ. ಆದರೆ ನಾವೆಲ್ಲರೂ ನಾವು ಆಶಿಸುವ ಎಲ್ಲವನ್ನೂ ಪಡೆಯಲಾರೆವು. ಕೆಲವೊಂದು ಆಶೆಗಳು ಕನಸಾಗಿಯೇ ಉಳಿಯಬಹುದು. ಅಂಥ ಸಂದರ್ಭಗಳಲ್ಲಿ ನಾವು ವರ್ತಿಸುವ ವಿಧದಿಂದ ನಮ್ಮ ನಂಬಿಕೆಯ ಬಲ ಎಷ್ಟಿದೆಯೆಂದು ವ್ಯಕ್ತವಾಗುತ್ತದೆ.

9, 10. (ಎ) ಕೆಲವರು ತಮ್ಮ ಆಶೆಯನ್ನು ತಣಿಸಲಿಕ್ಕಾಗಿ ಏನು ಮಾಡಿದ್ದಾರೆ? (ಬಿ) ದೇವರ ವಾಗ್ದಾನಗಳ ನೆರವೇರಿಕೆಯ ಕುರಿತು ನಿಮಗೆ ಏನನಿಸುತ್ತದೆ?

9 ನಮ್ಮ ಆಶೆಗಳನ್ನು ತಣಿಸಲಿಕ್ಕಾಗಿ ದೇವರ ಮಾರ್ಗದರ್ಶನವನ್ನು ಗಾಳಿಗೆ ತೂರುವುದಾದರೆ ಅದು ಮೂರ್ಖತನ. ಮಾತ್ರವಲ್ಲ ನಮ್ಮ ಆಧ್ಯಾತ್ಮಿಕತೆಯ ಪತನ ಕೂಡ. ಉದಾಹರಣೆಗೆ, ಕೆಲವರು ಯೆಹೋವ ದೇವರ ಸಲಹೆಗೆ ವಿರುದ್ಧವಾದ ಔಷಧೋಪಚಾರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬ ಹಾಗೂ ಕೂಟಗಳಿಂದ ತಮ್ಮನ್ನು ದೂರವಾಗಿಸುವಂಥ ಉದ್ಯೋಗವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಪರಿಗಣಿಸಿ: ಸಾಕ್ಷಿಯಲ್ಲದ ವ್ಯಕ್ತಿಯೊಂದಿಗೆ ಪ್ರಣಯ ಆರಂಭಿಸುವುದರ ಕುರಿತೇನು? ಒಬ್ಬನು ಅಂಥ ವಿಷಯಗಳನ್ನು ಮಾಡುತ್ತಿರುವುದಾದರೆ ಅದೇನನ್ನು ತೋರಿಸುತ್ತದೆ? ದೇವರು ಅವನನ್ನು ತನ್ನವನೆಂದು ವೀಕ್ಷಿಸಬೇಕು ಎನ್ನುವ ನಿಜವಾದ ಆಶೆ ಅವನಲ್ಲಿದೆ ಎಂದಾ? ಅಬ್ರಹಾಮನು ದೇವರ ವಾಗ್ದಾನ ನೆರವೇರಲು ತಡವಾಗುತ್ತಿದೆ ಎಂದುಕೊಂಡು ತಾಳ್ಮೆಗೆಟ್ಟು ವರ್ತಿಸಿದ್ದಲ್ಲಿ, ಅವನೆಡೆಗೆ ಯೆಹೋವನ ಮನೋಭಾವ ಹೇಗಿರುತ್ತಿತ್ತು? ಯೆಹೋವನಿಗಾಗಿ ಕಾಯದೆ ತಾನೇ ವಿಷಯಗಳನ್ನು ಕೈಗೆತ್ತಿಕೊಂಡು ಮತ್ತೆ ಒಂದು ಕಡೆ ನೆಲೆಯೂರಲು ಮತ್ತು ದೊಡ್ಡ ಹೆಸರನ್ನು ಮಾಡಲು ಅವನು ಮುಂದಾಗಿದ್ದರೆ ಏನಾಗುತ್ತಿತ್ತು? (ಆದಿಕಾಂಡ 11:4 ಹೋಲಿಸಿ.) ಯೆಹೋವನ ಗೆಳೆಯನಾಗಿ ಉಳಿಯಸಾಧ್ಯವಿತ್ತಾ?

10 ನಿಮಗೆ ಯಾವ ಆಶೆಯಿದೆ? ಯೆಹೋವನು ಕೈದೆರೆದು ನಿಮ್ಮ ಆ ಇಷ್ಟವನ್ನು ನೆರವೇರಿಸುವ ವರೆಗೆ ಕಾಯುವಷ್ಟು ದೊಡ್ಡ ನಂಬಿಕೆ ನಿಮಗಿದೆಯಾ? (ಕೀರ್ತ. 145:16) ಅಬ್ರಹಾಮನ ವಿಷಯದಲ್ಲಾದಂತೆ ದೇವರ ಕೆಲವೊಂದು ವಾಗ್ದಾನಗಳು ನಾವೆಣಿಸುವಷ್ಟು ಬೇಗನೇ ನೆರವೇರಲಾರವು. ಆದರೂ ಅಬ್ರಹಾಮನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಬೆಳೆಸಿಕೊಳ್ಳಬೇಕೆಂದು ಮತ್ತು ಅದಕ್ಕನುಸಾರ ಜೀವಿಸಬೇಕೆಂದು ಯೆಹೋವನು ಎದುರು ನೋಡುತ್ತಾನೆ ಹಾಗೂ ಅದನ್ನು ಗಣ್ಯಮಾಡುತ್ತಾನೆ. ಮಾತ್ರವಲ್ಲ ತಕ್ಕ ಪ್ರತಿಫಲವನ್ನೂ ಕೊಡುತ್ತಾನೆ.—ಇಬ್ರಿ. 11:6.

ದೀನತೆಗೂ ಅಹಂಭಾವಕ್ಕೂ ಅಜಗಜಾಂತರ!

11. ಕೋರಹನಿಗೆ ಯಾವ ಸುಯೋಗಗಳು ಸಿಕ್ಕಿದ್ದಿರಬಹುದು? ಯೆಹೋವ ದೇವರೆಡೆಗೆ ಅವನಿಗೆ ಯಾವ ಮನೋಭಾವವಿತ್ತೆಂದು ಇದು ಸೂಚಿಸುತ್ತದೆ?

11 ಯೆಹೋವನ ಏರ್ಪಾಡಿಗೆ ಹಾಗೂ ನಿರ್ಣಯಗಳಿಗೆ ಗೌರವ ತೋರಿಸಿದ ವಿಧದಲ್ಲಿ ಮೋಶೆಗೂ ಕೋರಹನಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅವರ ವರ್ತನೆಗನುಸಾರ ಯೆಹೋವನು ಪ್ರತಿಕ್ರಿಯಿಸಿದನು. ಕೋರಹನನ್ನು ತೆಗೆದುಕೊಳ್ಳಿ. ಅವನು ಕೆಹಾತ್ಯ ಲೇವ್ಯನಾಗಿದ್ದನು. ಅನೇಕ ಸುಯೋಗಗಳಲ್ಲಿ ಆನಂದಿಸಿದ್ದನು. ಉದಾಹರಣೆಗೆ, ಇಸ್ರಾಯೇಲ್‌ ಜನಾಂಗವನ್ನು ಕೆಂಪು ಸಮುದ್ರದ ಮೂಲಕ ಬಿಡುಗಡೆ ಮಾಡಿದ್ದನ್ನು ಅವನು ಕಣ್ಣಾರೆ ಕಂಡಿರಬಹುದು. ಸೀನಾಯಿಬೆಟ್ಟದಲ್ಲಿ ಇಸ್ರಾಯೇಲ್ಯರು ಪ್ರತಿಭಟನೆಗಿಳಿದಾಗ ಯೆಹೋವನು ನೀಡಿದ ನ್ಯಾಯತೀರ್ಪನ್ನು ಅವನು ಬೆಂಬಲಿಸಿರಬಹುದು. ಒಡಂಬಡಿಕೆಯ ಮಂಜೂಷವನ್ನು ಹೊತ್ತೊಯ್ಯುವ ಕಾರ್ಯದಲ್ಲಿ ಭಾಗಿಯಾಗಿರಬಹುದು. (ವಿಮೋ. 32:26-29; ಅರ. 3:30, 31) ಅನೇಕ ವರ್ಷ ನಿಷ್ಠೆಯಿಂದ ಯೆಹೋವನಿಗೆ ಸೇವೆಸಲ್ಲಿಸಿದ್ದ ಆತನನ್ನು ಇಸ್ರಾಯೇಲ್ಯರು ಗೌರವದಿಂದ ಕಾಣುತ್ತಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ.

12. ಅಹಂಭಾವದ ಕಾರಣ ದೇವರೊಂದಿಗೆ ಕೋರಹನಿಗಿದ್ದ ಗೆಳೆತನಕ್ಕೆ ಏನಾಯಿತು? (ಪುಟ 28ರ ಚಿತ್ರ ನೋಡಿ.)

12 ಆದರೆ ವಾಗ್ದತ್ತ ದೇಶದೆಡೆಗೆ ಸಾಗುತ್ತಿದ್ದಾಗ, ಇಸ್ರಾಯೇಲ್ಯರನ್ನು ಯೆಹೋವನು ನಡೆಸುತ್ತಿದ್ದ ವಿಧ ಯಾಕೋ ಸರಿಯಿಲ್ಲವೆಂದು ಕೋರಹ ಯೋಚಿಸಿದನು. 250 ಮಂದಿ ಮುಖಂಡರ ಗುಂಪು ಕಟ್ಟಿಕೊಂಡು ಅವನು ಬದಲಾವಣೆ ತರಲು ಪ್ರಯತ್ನಿಸಿದನು. ಯೆಹೋವನ ಅನುಗ್ರಹ ತಮ್ಮ ಮೇಲಿದೆ, ಆತನು ಅವರನ್ನು ತನ್ನವರೆಂದು ಹೇಳುತ್ತಾನೆ ಎಂಬ ಊಹೆ ಅವರಿಗೆ ಇದ್ದಿರಬೇಕು. ಹಾಗಾಗಿ ಮೋಶೆ ಆರೋನರ ಬಳಿ ಬಂದು, “ನಿಮ್ಮಿಂದ ಸಾಕಾಯಿತು; ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ” ಎಂದು ಕೇಳಿದರು. (ಅರ. 16:1-3) ಎಂಥ ಅಹಂಭಾವದ ವರ್ತನೆ, ಅತಿಯಾದ ಆತ್ಮವಿಶ್ವಾಸ! “ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು” ಎಂದು ಮೋಶೆ ಅವರಿಗೆ ಹೇಳಿದನು. (ಅರಣ್ಯಕಾಂಡ 16:5 ಓದಿ.) ಮಾರಣೆದಿನ ಕೊನೆಗೊಳ್ಳುವಷ್ಟರಲ್ಲಿ ಕೋರಹ ಹಾಗೂ ಅವನ ಪಕ್ಷವಹಿಸಿದ ಎಲ್ಲರೂ ಸತ್ತಿದ್ದರು.—ಅರ. 16:31-35.

13, 14. ಮೋಶೆ ದೀನ ಸ್ವಭಾವದವನೆಂದು ಯಾವುದು ತೋರಿಸುತ್ತದೆ?

13 ಮೋಶೆ ಕೋರಹನಂತಿರಲಿಲ್ಲ. ಅವನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ” ವ್ಯಕ್ತಿಯಾಗಿದ್ದನು. (ಅರ. 12:3) ಯೆಹೋವನ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ತಾನು ಸಾತ್ವಿಕನು, ನಮ್ರನು ಎಂದು ರುಜುಪಡಿಸಿದನು. (ವಿಮೋ. 7:6; 40:16) ಯೆಹೋವನ ಕಾರ್ಯವಿಧಾನಗಳ ಬಗ್ಗೆ ಅವನು ಆಗಾಗ ಸಂದೇಹ ಎಬ್ಬಿಸಿದ ಬಗ್ಗೆಯಾಗಲಿ ಅವುಗಳನ್ನು ಪಾಲಿಸಲು ಅಸಾಧ್ಯವೆಂದು ಸೊಲ್ಲೆತ್ತಿದ ಕುರಿತಾಗಲಿ ಬೈಬಲಿನಲ್ಲಿ ಯಾವ ಸುಳಿವು ಇಲ್ಲ. ಈ ಉದಾಹರಣೆ ತಕ್ಕೊಳ್ಳಿ. ದೇವದರ್ಶನ ಗುಡಾರದ ನಿರ್ಮಾಣದ ಬಗ್ಗೆ ಚಿಕ್ಕಪುಟ್ಟ ವಿವರಗಳನ್ನೂ ಯೆಹೋವನು ಅವನಿಗೆ ನೀಡಿದ್ದನು. ಗುಡಾರದ ಬಟ್ಟೆಯಲ್ಲಿ ಯಾವ ಬಣ್ಣದ ದಾರ ಬಳಸಬೇಕು, ಎಷ್ಟು ಕುಣಿಕೆಗಳಿರಬೇಕು ಎಂಬೆಲ್ಲ ಸೂಕ್ಷ್ಮ ವಿವರಗಳು ಇದ್ದವು. (ವಿಮೋ. 26:1-6) ಈ ರೀತಿ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ದೇವರ ಸಂಘಟನೆಯಲ್ಲಿರುವ ಮೇಲ್ವಿಚಾರಕರೊಬ್ಬರು ನಿಮಗೆ ನೀಡುವಲ್ಲಿ ಹೇಗಾಗುವುದು? ಕೆಲವೊಮ್ಮೆ ಕಿರಿಕಿರಿ ಆಗುವುದಲ್ಲವೆ? ಆದರೆ ಯೆಹೋವ ದೇವರು ಪರಿಪೂರ್ಣ ಮೇಲ್ವಿಚಾರಕನಾಗಿದ್ದಾನೆ. ತನ್ನ ಸೇವಕರಲ್ಲಿ ಭರವಸೆಯಿಟ್ಟು ಧಾರಳವಾಗಿ ಕೆಲಸಗಳನ್ನು ವಹಿಸಿಕೊಡುತ್ತಾನೆ. ಸೂಕ್ಷ್ಮ ಮಾಹಿತಿ ನೀಡುವಲ್ಲಿ ಸದುದ್ದೇಶ ಇದ್ದೇ ಇರುತ್ತೆ. ಸ್ವಲ್ಪ ಗಮನಿಸಿ. ಯೆಹೋವನು ಇಷ್ಟೊಂದು ವಿವರಗಳನ್ನು ನೀಡುತ್ತಿದ್ದಾನೆಂದು ಮೋಶೆ ಕಿರಿಕಿರಿಗೊಳ್ಳಲಿಲ್ಲ. ನಿಷ್ಪ್ರಯೋಜಕ ವ್ಯಕ್ತಿಯಂತೆ ತನ್ನನ್ನು ಉಪಚರಿಸುತ್ತಿದ್ದಾನೆ, ಸ್ವಾತಂತ್ರ್ಯಕ್ಕಿಂತ ನಿರ್ಬಂಧವೇ ಹೆಚ್ಚಾಯಿತೆಂದು ಭಾವಿಸಲಿಲ್ಲ. “ಯೆಹೋವನು [ತನಗೆ] ಆಜ್ಞಾಪಿಸಿದಂತೆಯೇ” ಕೆಲಸಗಾರರು ಸಕಲವನ್ನೂ ಮಾಡಿಮುಗಿಸುವಂತೆ ನೋಡಿಕೊಂಡನು. (ವಿಮೋ. 39:32) ಎಂತಹ ನಮ್ರತೆ, ದೀನ ಸ್ವಭಾವ! ತಾನು ಮಾಡುತ್ತಿರುವುದು ಯೆಹೋವ ದೇವರ ಕೆಲಸ, ತಾನು ಆತನ ಕೈಯಲ್ಲಿ ಒಂದು ಸಾಧನವಷ್ಟೇ ಎಂದು ಮೋಶೆ ಅರಿತಿದ್ದನು.

14 ಭಾರಿ ನಿರಾಶೆ ಉಂಟಾದ ಸಮಯದಲ್ಲೂ ಮೋಶೆ ದೀನನಾಗಿಯೇ ಇದ್ದನು. ಒಮ್ಮೆ ಜನರ ಗುಣಗುಟ್ಟುವಿಕೆಯನ್ನು ಸಹಿಸದೆ ದೇವರ ಮಹಿಮೆಯನ್ನು ಕಾಪಾಡುವುದರಲ್ಲಿ ಅವನು ವಿಫಲನಾದನು. ಪರಿಣಾಮವಾಗಿ ವಾಗ್ದತ್ತ ದೇಶವನ್ನು ಪ್ರವೇಶಿಸಬಾರದೆಂದು ದೇವರು ಅವನಿಗೆ ಖಡಾಖಂಡಿತವಾಗಿ ಹೇಳಿದನು. (ಅರ. 20:2-12) ವರ್ಷಾನುಗಟ್ಟಲೆ ಮೋಶೆ ಹಾಗೂ ಆರೋನನು ಜನರ ಗುಣುಗುಟ್ಟುವಿಕೆಯನ್ನು ಸಹಿಸಿಕೊಂಡಿದ್ದರು. ಆದರೆ ಕೇವಲ ಈ ಒಂದು ಸಂದರ್ಭದಲ್ಲಿ ಮೋಶೆ ತಪ್ಪು ಮಾಡಿದನು. ಅದಕ್ಕಾಗಿ ಅವನು ಬಹುಕಾಲದಿಂದ ಎದುರು ನೋಡುತ್ತಿದ್ದ ಸುಯೋಗ ಕೈತಪ್ಪಿತು! ಅವನ ಪ್ರತಿಕ್ರಿಯೆ ಹೇಗಿತ್ತು? ನಿರಾಶೆಗೊಂಡದ್ದು ನಿಜ, ಆದರೆ ಯೆಹೋವನ ನಿರ್ಣಯವನ್ನು ದೀನಭಾವದಿಂದ ಒಪ್ಪಿಕೊಂಡನು. ಯೆಹೋವನು ನೀತಿಯ ದೇವರು, ಆತನಲ್ಲಿ ಅನ್ಯಾಯವೆನ್ನುವುದು ಲವಲೇಷವೂ ಇಲ್ಲ ಎಂದು ಮೋಶೆಗೆ ಗೊತ್ತಿತ್ತು. (ಧರ್ಮೋ. 3:25-27; 32:4) ಯೆಹೋವನು ಮೋಶೆಯನ್ನು ತನ್ನವನೆಂದು ವೀಕ್ಷಿಸಿದನೆಂದು ನಾವು ನಿಶ್ಚಯವಾಗಿ ಹೇಳಬಲ್ಲೆವು.ವಿಮೋಚನಕಾಂಡ 33:12, 13 ಓದಿ.

ಯೆಹೋವನಿಗೆ ಅಧೀನರಾಗಲು ದೀನತೆ ಬೇಕು

15. ಕೋರಹನ ದುರಹಂಕಾರದ ವರ್ತನೆಯಿಂದ ನಾವೇನನ್ನು ಕಲಿಯಬಹುದು?

15 ನಮ್ಮ ಮೇಲೆ ಯೆಹೋವನ ಅನುಗ್ರಹ ಇರಬೇಕಾದರೆ ಸಂಘಟನೆಯ ಏರ್ಪಾಡಿನಲ್ಲಿ ಮಾಡಲಾಗುವ ಹೊಂದಾಣಿಕೆಗಳನ್ನು ನಾವು ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಮಾತ್ರವಲ್ಲ, ಸಭೆಯಲ್ಲಿ ಮುಂದಾಳತ್ವ ವಹಿಸಲು ಯೆಹೋವನು ನೇಮಿಸಿರುವವರಿಗೆ ಗೌರವವನ್ನೂ ಕೊಡಬೇಕು. ಸಭೆಯ ಪರವಾಗಿ ಅವರು ಮಾಡುವ ನಿರ್ಣಯಗಳನ್ನು ಹಾಗೂ ಬದಲಾವಣೆಗಳನ್ನು ನಾವು ಹೇಗೆ ವೀಕ್ಷಿಸುತ್ತೇವೆ? ಕೋರಹ ಮತ್ತು ಅವನ ಪಕ್ಷವಹಿಸಿದವರು ಅತಿಯಾದ ಆತ್ಮವಿಶ್ವಾಸ, ಅಹಂಕಾರ ಹಾಗೂ ನಂಬಿಕೆಯಿಲ್ಲದವರಾಗಿ ದೇವರಿಂದ ದೂರ ಸರಿದರು. ಇಸ್ರಾಯೇಲ್ಯರ ಪರವಾಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದವನು ಮೋಶೆಯಾಗಿದ್ದರೂ ಇಡೀ ಜನಾಂಗವನ್ನು ಮಾರ್ಗದರ್ಶಿಸುತ್ತಿದ್ದದ್ದು ಯೆಹೋವ ದೇವರು ಎನ್ನುವುದನ್ನು ಕೋರಹ ಮನಗಾಣಲಿಲ್ಲ. ಆ ವಾಸ್ತವಾಂಶವನ್ನು ಮರೆತ ಅವನು ಕೊನೆಗೆ ದೇವರು ನೇಮಿಸಿದ್ದ ವ್ಯಕ್ತಿಗಳಿಗೆ ನಿಷ್ಠೆಯನ್ನು ತೋರಿಸಲಿಲ್ಲ. ಅವನು ಯೆಹೋವನನ್ನು ನಿರೀಕ್ಷಿಸಿರಬಹುದಿತ್ತು. ತಕ್ಕ ಸಮಯದಲ್ಲಿ ದೇವರು ವಿಷಯಗಳನ್ನು ಸ್ಪಷ್ಟಪಡಿಸುವ ವರೆಗೆ ಕಾಯಬಹುದಿತ್ತು. ಹೊಂದಾಣಿಕೆ ಅವಶ್ಯವಾಗಿದ್ದಲ್ಲಿ ದೇವರೇ ಅದನ್ನು ಖಂಡಿತ ಮಾಡುತ್ತಿದ್ದನು. ಆದರೆ ಕೋರಹ ಅಹಂಕಾರದ ದುರ್ವರ್ತನೆಯಿಂದ ತನ್ನ ಬಹುಕಾಲದ ನಂಬಿಗಸ್ತ ಜೀವನದ ದಾಖಲೆಯನ್ನೇ ಮಣ್ಣುಪಾಲು ಮಾಡಿದನು.

16. ಮೋಶೆಯ ದೀನಭಾವವನ್ನು ಅನುಕರಿಸುವುದು ನಮಗೆ ಯಾವ ರೀತಿಯಲ್ಲಿ ಸಹಾಯಮಾಡುತ್ತದೆ?

16 ಈ ಘಟನೆಯಿಂದ ಸಭಾ ಹಿರಿಯರಿಗೂ ಇತರರಿಗೂ ಎಚ್ಚರಿಕೆಯ ಪಾಠವಿದೆ. ಯೆಹೋವನನ್ನು ನಿರೀಕ್ಷಿಸಿಕೊಂಡಿರಲು ಹಾಗೂ ಮುಂದಾಳತ್ವ ವಹಿಸುವವರ ಮಾರ್ಗದರ್ಶನಗಳನ್ನು ಪಾಲಿಸಲು ದೀನಭಾವ ಅತ್ಯಾವಶ್ಯಕ. ಮೋಶೆಯಂತೆ ನಾವು ದೀನರು, ಸೌಮ್ಯಭಾವದವರು ಆಗಿದ್ದೇವಾ? ಮುಂದಾಳತ್ವ ವಹಿಸುತ್ತಿರುವವರನ್ನು ಯೆಹೋವನೇ ನೇಮಿಸಿದ್ದಾನೆಂದು ಮನಗಾಣುತ್ತೇವಾ? ಅವರು ನೀಡುವ ಮಾರ್ಗದರ್ಶನಗಳಿಗೆ ಅಧೀನತೆ ತೋರಿಸುತ್ತೇವಾ? ನಿರಾಶರಾದಾಗ ನಮ್ಮಲ್ಲೇಳುವ ಭಾವನೆಗಳಿಗೆ ಕಡಿವಾಣ ಹಾಕಿ ಹತೋಟಿಯಲ್ಲಿ ಇಟ್ಟುಕೊಳ್ಳುತ್ತೇವಾ? ಹಾಗಿದ್ದಲ್ಲಿ, ಯೆಹೋವನು ನಮ್ಮನ್ನು ತನ್ನವರೆಂದು ಒಪ್ಪಿಕೊಳ್ಳುತ್ತಾನೆ. ನಾವು ದೀನರೂ ವಿಧೇಯರೂ ಆಗಿದ್ದಲ್ಲಿ ಯೆಹೋವನ ಆಪ್ತ ಗೆಳೆಯರಾಗಿರುತ್ತೇವೆ.

ತನ್ನವರು ಯಾರೆಂದು ಯೆಹೋವನಿಗೆ ತಿಳಿದಿದೆ

17, 18. ಯೆಹೋವನ ಅನುಗ್ರಹ ಸದಾ ನಮ್ಮ ಮೇಲಿರಬೇಕಾದರೆ ನಾವೇನು ಮಾಡಬೇಕು?

17 ಯೆಹೋವನು ಪ್ರೀತಿಸಿದ ಮತ್ತು ಗೆಳೆಯರಾಗುವಂತೆ ಸೆಳೆದ ಜನರ ಮಾದರಿಗಳನ್ನು ಪರ್ಯಾಲೋಚಿಸುವುದರಿಂದ ಪ್ರಯೋಜನವಿದೆ. ಅಬ್ರಹಾಮ ಮತ್ತು ಮೋಶೆ ನಮ್ಮಂತೆ ಅಪರಿಪೂರ್ಣರು. ಕುಂದು ಕೊರತೆ ಅವರಲ್ಲೂ ಇತ್ತು. ಆದರೂ ಯೆಹೋವನು ಅವರನ್ನು ತನ್ನವರೆಂದು ಹೇಳಿದನು. ಕೋರಹನ ಉದಾಹರಣೆ ಅದಕ್ಕೆ ವ್ಯತಿರಿಕ್ತವಾಗಿದೆ. ನಾವು ಯೆಹೋವನಿಂದ ದೂರ ಸರಿಯಸಾಧ್ಯವಿದೆ ಹಾಗೂ ಅವನ ಅನುಗ್ರಹ ಕಳೆದುಕೊಳ್ಳಸಾಧ್ಯವಿದೆ ಎಂದು ಅದು ತೋರಿಸುತ್ತದೆ. ಹಾಗಾಗಿ ನಾವೆಲ್ಲರೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ: ‘ಯೆಹೋವನ ದೃಷ್ಟಿಯಲ್ಲಿ ನಾನು ಯಾವ ರೀತಿಯ ವ್ಯಕ್ತಿಯಾಗಿದ್ದೀನಿ? ಈ ಉದಾಹರಣೆಗಳಿಂದ ಯಾವ ಪಾಠ ಕಲಿಯುತ್ತೀನಿ?’

18 ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ತನ್ನವರಂತೆ ಕಾಣುತ್ತಾನೆ. ನಂಬಿಕೆ, ದೀನತೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳುತ್ತಾ ಆತನೊಂದಿಗಿನ ಸ್ನೇಹವನ್ನು ಇನ್ನಷ್ಟು ಗಾಢಗೊಳಿಸಿ. ನಮ್ಮನ್ನು ಯೆಹೋವನು ತನ್ನವರೆಂದು ಹೇಳುವುದು ಅಪ್ರತಿಮ ಸುಯೋಗ. ಅದು ಈಗ ಸಂತೃಪ್ತಿಯನ್ನು ತರುವುದಲ್ಲದೆ ಭವಿಷ್ಯತ್ತಿನಲ್ಲಿ ನಿರಂತರ ಆಶೀರ್ವಾದಗಳನ್ನೂ ತರುವುದು.—ಕೀರ್ತ. 37:18.

ನೆನಪಿದೆಯೇ?

• ಯೆಹೋವನು ತನ್ನ ನಂಬಿಗಸ್ತರನ್ನು ಹೇಗೆ ವೀಕ್ಷಿಸುತ್ತಾನೆ?

• ಅಬ್ರಹಾಮನಲ್ಲಿದ್ದ ನಂಬಿಕೆಯನ್ನು ನೀವು ಹೇಗೆ ಅನುಕರಿಸಬಲ್ಲಿರಿ?

• ಕೋರಹ ಮತ್ತು ಮೋಶೆಯಿಂದ ಯಾವ ಪಾಠ ಕಲಿಯಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರ]

ಅಬ್ರಹಾಮನಂತೆ ನಮಗೂ ಯೆಹೋವನು ತನ್ನೆಲ್ಲಾ ವಾಗ್ದಾನಗಳನ್ನು ನೆರವೇರಿಸುವನೆಂಬ ನಂಬಿಕೆ ಇದೆಯಾ?

[ಪುಟ 28ರಲ್ಲಿರುವ ಚಿತ್ರ]

ನಿರ್ದೇಶನಗಳಿಗೆ ಅಧೀನನಾಗುವ ದೀನಭಾವ ಕೋರಹನಲ್ಲಿ ಇರಲಿಲ್ಲ

[ಪುಟ 29ರಲ್ಲಿರುವ ಚಿತ್ರ]

ಯೆಹೋವನು ನಿಮ್ಮ ಕುರಿತು ಏನೆಂದು ಹೇಳುತ್ತಾನೆ? ನಿರ್ದೇಶನಗಳನ್ನು ದೀನತೆಯಿಂದ ಪಾಲಿಸುವವರೆಂದಾ?