ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನರಂಜನೆ ಪರೀಕ್ಷಿಸಿ ಆಯ್ಕೆ ಮಾಡಿ

ಮನರಂಜನೆ ಪರೀಕ್ಷಿಸಿ ಆಯ್ಕೆ ಮಾಡಿ

ಮನರಂಜನೆ ಪರೀಕ್ಷಿಸಿ ಆಯ್ಕೆ ಮಾಡಿ

“ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಇರಿ.”—ಎಫೆ. 5:10.

1, 2. (ಎ) ನಾವು ಹರ್ಷಾನಂದದಿಂದ ಬದುಕಬೇಕೆನ್ನುವುದು ದೇವರ ಇಚ್ಛೆಯೆಂದು ಬೈಬಲ್‌ ಹೇಗೆ ಸೂಚಿಸುತ್ತದೆ? (ಬಿ) ಬಿಡುವಿನ ಸಮಯದಲ್ಲಿ ಆನಂದಿಸುವುದು ಸಹ ದೇವರ ಅನುಗ್ರಹವಾದದ್ದರಿಂದ ಆ ಸಮಯವನ್ನು ನಾವು ಹೇಗೆ ಬಳಸಬೇಕು?

ನಾವು ಕೇವಲ ಬದುಕಬೇಕೆಂದಲ್ಲ, ಹರ್ಷಾನಂದದಿಂದ ಬದುಕಬೇಕೆನ್ನುವುದು ಯೆಹೋವನ ಇಚ್ಛೆ ಎಂದು ಸೂಚಿಸುವ ಅನೇಕ ವಾಕ್ಯಗಳನ್ನು ನಾವು ಬೈಬಲಿನ ಉದ್ದಕ್ಕೂ ಕಾಣಬಹುದು. ಉದಾಹರಣೆಗೆ, ಕೀರ್ತನೆ 104:14, 15 ಯೆಹೋವ ದೇವರ ಕುರಿತು ಹೀಗನ್ನುತ್ತದೆ: “ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ; ಅವರು ಭೂವ್ಯವಸಾಯಮಾಡಿ ಆಹಾರವನ್ನೂ ಹೃದಯಾನಂದಕರವಾದ ದ್ರಾಕ್ಷಾರಸವನ್ನೂ ಮುಖಕ್ಕೆ ಕಾಂತಿಯನ್ನುಂಟುಮಾಡುವ ಎಣ್ಣೆಯನ್ನೂ ಪ್ರಾಣಾಧಾರವಾದ ರೊಟ್ಟಿಯನ್ನೂ ಸಂಪಾದಿಸಿಕೊಳ್ಳುತ್ತಾರೆ.” ನಮ್ಮ ಜೀವಪೋಷಣೆಗೆ ಬೇಕಾದ ಆಹಾರ, ಎಣ್ಣೆ, ದ್ರಾಕ್ಷಾಮದ್ಯ ಮುಂತಾದವುಗಳನ್ನು ನಾವು ಈ ಭೂಮಿಯ ಹುಟ್ಟುವಳಿಯಲ್ಲಿ ಪಡೆದುಕೊಳ್ಳುವಂತೆ ಯೆಹೋವನು ಮಾಡುತ್ತಾನೆ ಎಂದು ಈ ವಚನ ತಿಳಿಸುತ್ತದೆ. ಮಾತ್ರವಲ್ಲ ದ್ರಾಕ್ಷಾಮದ್ಯ “ಹೃದಯಾನಂದಕರ” ಎಂದೂ ತಿಳಿಸುತ್ತದೆ. ಜೀವಿಸಲು ದ್ರಾಕ್ಷಾಮದ್ಯ ಅತ್ಯಾವಶ್ಯಕವೇನಲ್ಲ. ಆದರೂ ನಮ್ಮ ಆನಂದಕ್ಕಾಗಿ ದೇವರದನ್ನು ಕೊಟ್ಟಿದ್ದಾನೆ. (ಪ್ರಸಂ. 9:7; 10:19) ಹೌದು, ನಾವು ಸಂತೋಷದಿಂದ ಇರಬೇಕು ಮತ್ತು ನಮ್ಮ “ಹೃದಯ” ಆನಂದದಿಂದ ತುಂಬಿರಬೇಕು ಎನ್ನುವುದು ಯೆಹೋವ ದೇವರ ಇಚ್ಛೆ.—ಅ. ಕಾ. 14:16, 17.

2 ಹಾಗಾಗಿ, ನಾವು ಕೆಲವೊಮ್ಮೆ “ಹೊಲದ ಲಿಲಿಹೂವು,” “ಆಕಾಶದ ಪಕ್ಷಿ” ಇವುಗಳನ್ನು ಗಮನಿಸಲು ಅಥವಾ ಮನರಂಜಿಸುವ ಇತರ ಚಟುವಟಿಕೆಗಳಲ್ಲಿ ಆನಂದಿಸಲು ಸಮಯ ತೆಗೆದುಕೊಂಡರೆ ಅದರಲ್ಲೇನೂ ತಪ್ಪಿಲ್ಲ. (ಮತ್ತಾ. 6:26, 28; ಕೀರ್ತ. 8:3, 4) ಏಕೆಂದರೆ, ಆರೋಗ್ಯಪೂರ್ಣವಾದ ಆನಂದಮಯ ಜೀವನ “ದೇವರ ಅನುಗ್ರಹ.” (ಪ್ರಸಂ. 3:12, 13) ದೇವರ ಆ ಅನುಗ್ರಹದಲ್ಲಿ ಬಿಡುವಿನ ಸಮಯದಲ್ಲಿ ಆನಂದಿಸುವುದು ಸಹ ಸೇರಿದೆ. ಹಾಗಾಗಿ ನಾವು ಆ ಸಮಯವನ್ನು ದೇವರಿಗೆ ಮೆಚ್ಚಿಕೆಯಾಗುವಂಥ ರೀತಿಯಲ್ಲಿ ಬಳಸಬೇಕು.

ಮನರಂಜನೆಯಲ್ಲಿ ವೈವಿಧ್ಯ ಹಾಗೂ ಮೇರೆ

3. ಜನರು ಬೇರೆ ಬೇರೆ ರೀತಿಯ ಮನರಂಜನೆಯನ್ನು ಇಷ್ಟಪಡುವುದೇಕೆ?

3 ವೈವಿಧ್ಯಮಯ ಮನರಂಜನೆಯಿದ್ದರೂ ಎಲ್ಲವನ್ನೂ ಆರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮನರಂಜನೆಯ ವಿಷಯದಲ್ಲಿ ಸಮತೋಲನ ನೋಟವಿರುವವರು ಮನಗಂಡಿದ್ದಾರೆ. ಯಾಕೆ? ಉತ್ತರಕ್ಕಾಗಿ ಮನರಂಜನೆಯನ್ನು ಆಹಾರದೊಂದಿಗೆ ಹೋಲಿಸುವ. ಜಗತ್ತಿನ ಎಲ್ಲಾ ಕಡೆ ಒಂದೇ ರೀತಿಯ ಅಡುಗೆ ಸ್ವಾದಿಷ್ಟ ಆಹಾರವೆಂದು ಪ್ರಸಿದ್ಧವಾಗಿರುವುದಿಲ್ಲ. ಒಂದು ಪ್ರದೇಶದ ಜನರು ತುಂಬಾ ಇಷ್ಟಪಡುವ ಅಡುಗೆಯನ್ನು ಇನ್ನೊಂದು ಪ್ರದೇಶದ ಜನರು ನೋಡಿದಾಕ್ಷಣ ಮೂಗುಮುರಿಯಬಹುದು. ಅದೇರೀತಿಯಲ್ಲಿ ಜಗತ್ತಿನ ಒಂದು ಭಾಗದಲ್ಲಿರುವ ಕ್ರೈಸ್ತರು ಇಷ್ಟಪಡುವ ಮನರಂಜನೆ ಮತ್ತೊಂದು ಭಾಗದಲ್ಲಿರುವ ಕ್ರೈಸ್ತರಿಗೆ ಖುಷಿ ನೀಡಬೇಕೆಂದಿಲ್ಲ. ಒಂದೇ ಪ್ರದೇಶದಲ್ಲಿ ವಾಸಿಸುತ್ತಿರುವ ಕ್ರೈಸ್ತರೊಳಗೂ ಈ ಭಿನ್ನತೆ ಕಾಣಬಹುದು. ಉದಾಹರಣೆಗೆ, ವಿಶ್ರಾಂತಿ ಸಮಯದಲ್ಲಿ ಆರಾಮವಾಗಿ ಪುಸ್ತಕ ಓದುವುದನ್ನು ಒಬ್ಬರು ಇಷ್ಟಪಟ್ಟರೆ ಅದೇ ವಿಷಯ ಮತ್ತೊಬ್ಬರಿಗೆ ಬೋರ್‌ ಹೊಡೆಸಬಹುದು. ಸೈಕಲ್‌/ಬೈಕ್‌ನಲ್ಲಿ ವಿಹಾರ ಹೋಗುವುದು ಒಬ್ಬರಿಗೆ ಚೈತನ್ಯದಾಯಕ ಆಗಿರುವುದಾದರೆ ಮತ್ತೊಬ್ಬರಿಗೆ ಆಯಾಸಕರ ಆಗಿರಬಹುದು. ಬಗೆಬಗೆಯ ಅಡುಗೆಯಲ್ಲಿ ಜನರು ತಾವಿಷ್ಟಪಡುವುದನ್ನು ಹೇಗೆ ಆರಿಸಿಕೊಳ್ಳುತ್ತಾರೋ ಹಾಗೆಯೇ ವೈವಿಧ್ಯಮಯ ಮನರಂಜನೆಯಲ್ಲಿ ತಮಗಿಷ್ಟವಾದದ್ದನ್ನು ಆರಿಸಿಕೊಳ್ಳಬಹುದು.—ರೋಮ. 14:2-4.

4. ಯಾಕೆ ನಾವು ಮನರಂಜನೆಯ ವಿಷಯದಲ್ಲಿ ಒಂದು ಮೇರೆಯನ್ನು ಸ್ಥಾಪಿಸಬೇಕು? ದೃಷ್ಟಾಂತ ಕೊಟ್ಟು ವಿವರಿಸಿ.

4 ವೈವಿಧ್ಯಮಯ ಮನರಂಜನೆಯಲ್ಲಿ ಇಷ್ಟವಾದದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದ್ದರೂ ಎಲ್ಲವನ್ನೂ ನಾವು ಆರಿಸಿಕೊಳ್ಳಲು ಆಗುವುದಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ನಾವು ಮತ್ತೆ ಆಹಾರದ ದೃಷ್ಟಾಂತವನ್ನು ತೆಗೆದುಕೊಳ್ಳೋಣ. ಬಗೆಬಗೆಯ ಆಹಾರವನ್ನು ತಿನ್ನಲು ನಮಗಿಷ್ಟವಾದರೂ ಹಳಸಿದ್ದನ್ನು ನಾವು ತಿನ್ನುವುದಿಲ್ಲ. ಅದು ಆರೋಗ್ಯಕ್ಕೆ ಒಳ್ಳೇದಲ್ಲ. ಅದೇರೀತಿ ನಮ್ಮ ಕಣ್ಮುಂದೆ ಬಗೆಬಗೆಯ ಮನರಂಜನೆ ಇರಬಹುದು. ಆದರೆ ಪ್ರಾಣಕ್ಕೆ ಕುತ್ತುತರುವ, ಹಿಂಸಾರೂಪದ ಅಥವಾ ನೈತಿಕವಾಗಿ ಕೊಳೆತುನಾರುವ ವಿನೋದಗಳನ್ನು ನಾವು ಆರಿಸಿಕೊಳ್ಳುವುದಿಲ್ಲ. ಅಂಥ ಮನರಂಜನೆಯನ್ನು ಆರಿಸಿಕೊಂಡರೆ ಬೈಬಲ್‌ ಮೂಲತತ್ವಗಳನ್ನು ಕಡೆಗಣಿಸಿದಂತಾಗುವುದು. ಅಲ್ಲದೆ ನಮ್ಮ ಆಧ್ಯಾತ್ಮಿಕ ಹಾಗೂ ಶಾರೀರಿಕ ಆರೋಗ್ಯಕ್ಕೂ ಒಳ್ಳೇದಲ್ಲ. ಆದ್ದರಿಂದ ಮನರಂಜನೆಯ ವಿಷಯದಲ್ಲಿ ನಾವು ಒಂದು ಮೇರೆಯನ್ನು ಸ್ಥಾಪಿಸಬೇಕು. ನಾವು ಆರಿಸಿಕೊಳ್ಳುವ ಮನರಂಜನೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೇದಾಗಿರಬೇಕು ಹಾಗೂ ನಮಗೆ ಪ್ರಯೋಜನ ತರುವಂಥದ್ದಾಗಿರಬೇಕು. (ಎಫೆ. 5:10) ಅಂಥ ಮನರಂಜನೆಯನ್ನು ಆರಿಸಿಕೊಳ್ಳುವುದು ಹೇಗೆ?

5. ನಾವು ಆರಿಸಿಕೊಳ್ಳುವ ಮನರಂಜನೆ ದೇವರ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿದೆ ಎಂದು ಹೇಗೆ ಖಾತ್ರಿ ಮಾಡಿಕೊಳ್ಳಬಹುದು?

5 ನಾವು ಆರಿಸಿಕೊಳ್ಳುವ ಮನರಂಜನೆ ಯೆಹೋವ ದೇವರಿಗೆ ಮೆಚ್ಚಿಕೆಯಾಗಿರಬೇಕಾದರೆ ಹಾಗೂ ನಮಗೆ ಪ್ರಯೋಜನ ತರುವಂಥದ್ದಾಗಿರಬೇಕಾದರೆ, ಅದು ದೇವರ ವಾಕ್ಯದಲ್ಲಿರುವ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿರಬೇಕು. (ಕೀರ್ತ. 86:11) ಅಂಥ ಮನರಂಜನೆಯನ್ನು ಆಯ್ಕೆ ಮಾಡಲು ಯಾವುದು, ಯಾವಾಗ, ಯಾರು ಎಂಬ ಮೂರು ಪ್ರಶ್ನೆಗಳ ಚೆಕ್‌ಲಿಸ್ಟ್‌ ನಿಮಗೆ ನೆರವಾಗುವುದು. ಹೇಗೆಂದು ಒಂದೊಂದಾಗಿ ಪರಿಗಣಿಸೋಣ.

ಯಾವುದು?

6. ಯಾವ ರೀತಿಯ ಮನರಂಜನೆಯನ್ನು ನಾವು ತಿರಸ್ಕರಿಸಬೇಕು? ಮತ್ತು ಏಕೆ?

6 ಮನರಂಜನೆಯನ್ನು ಆರಿಸಿಕೊಳ್ಳುವ ಮೊದಲು ಈ ಪ್ರಶ್ನೆ ಕೇಳಿಕೊಳ್ಳಿ, ಯಾವುದು? ಅಂದರೆ ‘ನಾನು ಆರಿಸಿಕೊಳ್ಳುವ ಮನರಂಜನೆಯಲ್ಲಿ ಯಾವ ವಿಷಯಗಳಿವೆ?’ ಹೀಗೆ ಕೇಳಿಕೊಳ್ಳುವುದು ಮುಖ್ಯ. ಏಕೆಂದರೆ, ಎರಡು ವರ್ಗದ ಮನರಂಜನೆ ಇದೆ. ಮೊದಲ ವರ್ಗವನ್ನು ನಾವು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ. ಎರಡನೆಯ ವರ್ಗ ನಮ್ಮ ಆಯ್ಕೆಗೆ ಬಿಟ್ಟದ್ದಾಗಿದೆ. ಈಗ ಮೊದಲ ವರ್ಗವನ್ನು ತೆಗೆದುಕೊಳ್ಳೋಣ. ಈ ದುಷ್ಟ ಲೋಕದಲ್ಲಿರುವ ಬಹುತೇಕ ಮನರಂಜನೆಗಳು ಬೈಬಲ್‌ ಮೂಲತತ್ವಗಳಿಗೆ ಅಥವಾ ದೇವರ ನಿಯಮಗಳಿಗೆ ತದ್ವಿರುದ್ಧವಾದ ವಿಷಯಗಳನ್ನು ಹೊಂದಿವೆ. (1 ಯೋಹಾ. 5:19) ಅಂಥ ಎಲ್ಲಾ ಮನರಂಜನೆಗಳನ್ನು ನಿಜ ಕ್ರೈಸ್ತರು ತಿರಸ್ಕರಿಸುತ್ತಾರೆ. ಅವುಗಳಲ್ಲಿ ಪೈಶಾಚಿಕ ವಿಷಯ, ಸಲಿಂಗಕಾಮ, ಅಶ್ಲೀಲತೆ, ಕ್ರೌರ್ಯ ಮುಂತಾದ ಕೆಟ್ಟ ಕೆಟ್ಟ ಅನೈತಿಕ ವಿಷಯಗಳು ತುಂಬಿಕೊಂಡಿರುತ್ತವೆ. ಮತ್ತೊಬ್ಬರನ್ನು ಪೀಡಿಸಿ ಪರಮಾನಂದ ಕಂಡುಕೊಳ್ಳುವಂಥ ನೀಚ ಸಂಗತಿಗಳು ಇರುತ್ತವೆ. (1 ಕೊರಿಂ. 6:9, 10; ಪ್ರಕಟನೆ 21:8 ಓದಿ.) ನಾವು ಒಬ್ಬರೇ ಇರಲಿ ಅಥವಾ ಇತರರೊಂದಿಗಿರಲಿ, ಅಂಥ ವಿಷಯಗಳ ಹತ್ತಿರವೂ ಸುಳಿಯದಿರುವ ಮೂಲಕ “ಕೆಟ್ಟದ್ದನ್ನು” ಹೇಸುತ್ತೇವೆ ಎಂದು ತೋರಿಸುತ್ತೇವೆ. ಹೀಗೆ ದೇವಜನರೆಂದು ರುಜುಪಡಿಸುತ್ತೇವೆ.—ರೋಮ. 12:9; 1 ಯೋಹಾ. 1:5, 6.

7, 8. ಒಂದು ಮನರಂಜನೆಯ ಗುಣಮಟ್ಟವನ್ನು ನಾವು ಹೇಗೆ ಪರಿಶೀಲಿಸಬಹುದು? ಉದಾಹರಣೆ ಕೊಡಿ.

7 ಎರಡನೇ ವರ್ಗದ ಮನರಂಜನೆ ದೇವರ ವಾಕ್ಯ ನೇರವಾಗಿ ಖಂಡಿಸುವಂಥ ವಿಷಯಗಳನ್ನು ಹೊಂದಿರುವುದಿಲ್ಲ. ಆದ್ದರಿಂದ, ಅಂಥ ಮನರಂಜನೆಯನ್ನು ಆರಿಸಿಕೊಳ್ಳುವ ಮುಂಚೆ ಅದು ಯೆಹೋವನ ದೃಷ್ಟಿಯಲ್ಲಿ ಸರಿಯಾಗಿರುವಂಥ ವಿಷಯಗಳನ್ನೇ ಹೊಂದಿದೆಯಾ ಎಂದು ನಾವು ಪರೀಕ್ಷಿಸಬೇಕು. (ಜ್ಞಾನೋ. 4:10, 11) ಅನಂತರ ನಮ್ಮ ಮನಸ್ಸಾಕ್ಷಿಗೆ ಘಾಸಿಯಾಗದಂಥ ರೀತಿಯ ಆಯ್ಕೆ ಮಾಡಬೇಕು. (ಗಲಾ. 6:5; 1 ತಿಮೊ. 1:19) ಆ ರೀತಿಯ ಆಯ್ಕೆಯನ್ನು ಹೇಗೆ ಮಾಡಬಲ್ಲೆವು? ಸ್ವಲ್ಪ ಯೋಚಿಸಿ: ಒಂದು ಹೊಸ ಬಗೆಯ ಅಡುಗೆಯನ್ನು ಉಣ್ಣುವ ಮೊದಲು ಯಾವ ಯಾವ ಪದಾರ್ಥಗಳನ್ನು ಬಳಸಿದ್ದಾರೆಂದು ತಿಳಿದುಕೊಳ್ಳಲು ನಾವು ಇಷ್ಟಪಡುತ್ತೇವೆ. ಅದೇ ರೀತಿಯಲ್ಲಿ, ಒಂದು ಮನರಂಜನೆಯನ್ನು ಆಯ್ಕೆ ಮಾಡುವ ಮೊದಲು ಅದರಲ್ಲಿ ಯಾವ ಯಾವ ವಿಷಯಗಳು ಒಳಗೂಡಿವೆ ಎಂದು ನಾವು ಪರೀಕ್ಷಿಸಬೇಕು.—ಎಫೆ. 5:17.

8 ಉದಾಹರಣೆಗೆ, ಆಟೋಟದಲ್ಲಿ ನಿಮಗೆ ಭಾರಿ ಆಸಕ್ತಿ ಇರಬಹುದು. ಹೆಚ್ಚಿನವರಲ್ಲಿ ಇದು ಸಹಜ. ಕ್ರೀಡೆ ಮನರಂಜನೆ ಒದಗಿಸುತ್ತದಲ್ಲದೆ ರೋಮಾಂಚನವನ್ನೂ ನೀಡುತ್ತದೆ. ಆದರೆ, ಸ್ಪರ್ಧಾ ಪ್ರವೃತ್ತಿ ತೀವ್ರವಾಗಿರುವ, ಜೀವಾಪಾಯ ಒಡ್ಡುವ, ಶಾರೀರಿಕ ಹಾನಿ ತರುವ, ಹುಚ್ಚೆಬ್ಬಿಸುವ, ದೇಶಾಭಿಮಾನ ಅಥವಾ ಇಂಥ ಇನ್ನಿತರ ವಿಷಯಗಳು ತುಂಬಿರುವ ಕ್ರೀಡೆಯೆಡೆಗೆ ನೀವು ಆಕರ್ಷಿತರಾಗಿದ್ದಲ್ಲಿ ಆಗೇನು? ಸೂಕ್ಷ್ಮ ಪರಿಶೀಲನೆಯ ನಂತರ ನಿಮ್ಮ ಆಲೋಚನೆಗಳು ಯೆಹೋವ ದೇವರ ಆಲೋಚನೆಗಳೊಂದಿಗೆ ಮತ್ತು ನಾವು ಸಾರುವ ಶಾಂತಿಭರಿತ ಸಂದೇಶದೊಂದಿಗೆ ತಾಳೆಯಾಗುತ್ತಿಲ್ಲ ಎಂಬ ನಿರ್ಧಾರಕ್ಕೆ ನೀವು ಬರಬಹುದು. (ಯೆಶಾ. 61:1; ಗಲಾ. 5:19-21) ನೀವು ಆರಿಸಿಕೊಳ್ಳುವ ಮನರಂಜನೆ ಯೆಹೋವ ದೇವರನ್ನು ಪ್ರಸನ್ನಗೊಳಿಸುವಂಥ ವಿಷಯಗಳಿಂದ ಕೂಡಿರುವಲ್ಲಿ ಅದು ನಿಮ್ಮಲ್ಲಿ ಚೈತನ್ಯ ತುಂಬಿ ಪ್ರಯೋಜನ ತರುವುದು.—ಗಲಾ. 5:22, 23; ಫಿಲಿಪ್ಪಿ 4:8 ಓದಿ.

ಯಾವಾಗ?

9. ‘ನಾನು ಯಾವಾಗ ಮನರಂಜನೆಯಲ್ಲಿ ಸಮಯ ಕಳೆಯುತ್ತೇನೆ?’ ಎಂಬ ಪ್ರಶ್ನೆಗೆ ನಮ್ಮ ಉತ್ತರವು ಏನನ್ನು ಬಯಲುಪಡಿಸುತ್ತದೆ?

9 ನೀವು ಕೇಳಿಕೊಳ್ಳಬೇಕಾದ ಎರಡನೇ ಪ್ರಶ್ನೆ, ಯಾವಾಗ? ಅಂದರೆ ‘ನಾನು ಯಾವಾಗ ಮನರಂಜನೆಯಲ್ಲಿ ಸಮಯ ಕಳೆಯುತ್ತೇನೆ? ಮತ್ತು ಎಷ್ಟು ಸಮಯ?’ ಯಾವುದು? ಎಂಬ ಮೊದಲ ಪ್ರಶ್ನೆಗೆ ನಾವು ನೀಡುವ ಉತ್ತರ ನಮ್ಮ ಇರಾದೆಗಳನ್ನು ಬಯಲುಪಡಿಸುತ್ತದೆ. ನಾವು ಯಾವುದನ್ನು ಇಷ್ಟಪಡುತ್ತೇವೆ, ಯಾವುದನ್ನು ಹೇಸುತ್ತೇವೆ ಎಂದು ತೋರಿಸಿಕೊಡುತ್ತದೆ. ಆದರೆ, ಯಾವಾಗ? ಎಂಬ ಎರಡನೇ ಪ್ರಶ್ನೆಗೆ ನಮ್ಮ ಉತ್ತರ ನಾವು ಜೀವನದಲ್ಲಿ ಯಾವುದಕ್ಕೆ ಆದ್ಯತೆ ಕೊಡುತ್ತೇವೆ, ಯಾವುದಕ್ಕೆ ಕೊಡುವುದಿಲ್ಲ ಎಂದು ತೋರಿಸುತ್ತದೆ. ಹಾಗಾದರೆ, ಮನರಂಜನೆಯೊಂದಕ್ಕೆ ನಾವೆಷ್ಟು ಪ್ರಾಮುಖ್ಯ ನೀಡಬೇಕು ಎಂದು ನಿರ್ಧರಿಸುವುದು ಹೇಗೆ?

10, 11. ಮನರಂಜನೆಯಲ್ಲಿ ಎಷ್ಟು ಸಮಯ ವ್ಯಯಿಸಬೇಕು ಎನ್ನುವುದನ್ನು ನಿರ್ಧರಿಸಲು ಮತ್ತಾಯ 6:33ರಲ್ಲಿರುವ ಯೇಸುವಿನ ಮಾತುಗಳು ನಮಗೆ ಹೇಗೆ ನೆರವಾಗುತ್ತವೆ?

10 ಯೇಸು ಹೀಗೆ ಹೇಳಿದನು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಆದ್ದರಿಂದ, ಜೀವನದಲ್ಲಿ ನಾವು ಯೆಹೋವ ದೇವರ ಮೇಲೆ ಗಾಢ ಪ್ರೀತಿ ತೋರಿಸುವುದಕ್ಕೆ ಆದ್ಯತೆ ನೀಡಬೇಕು. ಅದಕ್ಕಾಗಿ ನಾವು ಯೇಸುವಿನ ಈ ಬುದ್ಧಿವಾದವನ್ನು ಪಾಲಿಸಬೇಕು: “ಮೊದಲು [ದೇವರ] ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” (ಮತ್ತಾ. 6:33) ಯೇಸುವಿನ ಈ ಮಾತುಗಳು, ನಮ್ಮ ಜೀವನದಲ್ಲಿ ಮನರಂಜನೆಗೆ ಎಷ್ಟು ಪ್ರಾಮುಖ್ಯ ನೀಡಬೇಕು ಮತ್ತು ಎಷ್ಟು ಸಮಯ ವ್ಯಯಿಸಬೇಕು ಎಂದು ನಿರ್ಧರಿಸಲು ನೆರವಾಗುವವು. ಹೇಗೆ?

11 ಯೇಸು ನಮಗೆ ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ’ ಎಂದು ಹೇಳಿದ್ದನೆಂದು ಗಮನಿಸಿ. ನಾವು ‘ರಾಜ್ಯವನ್ನು ಮಾತ್ರ ಹುಡುಕುತ್ತಾ ಇರಬೇಕೆಂದು’ ಅವನು ಹೇಳಲಿಲ್ಲ. ಜೀವನದಲ್ಲಿ ನಾವು ರಾಜ್ಯವನ್ನು ಹುಡುಕುವುದರೊಂದಿಗೆ ಇತರ ಅನೇಕ ವಿಷಯಗಳು ನಮಗೆ ಅವಶ್ಯವೆಂದು ಅವನಿಗೆ ಗೊತ್ತಿತ್ತು. ವಸತಿ, ಆಹಾರ, ಬಟ್ಟೆಬರೆ, ಮೂಲಭೂತ ಶಿಕ್ಷಣ, ಉದ್ಯೋಗ, ಮನರಂಜನೆ ಹೀಗೆ ಆ ಇತರ ವಿಷಯಗಳ ಪಟ್ಟಿ ಉದ್ದವಾಗುತ್ತದೆ. ಇಷ್ಟೆಲ್ಲಾ ವಿಷಯಗಳನ್ನು ಪಡೆಯಲು ನಾವು ಶ್ರಮಿಸಬೇಕಾದರೂ ಒಂದನ್ನು ಮಾತ್ರ ಮೊದಲು ಹುಡುಕಬೇಕು. ಅದುವೇ ದೇವರ ರಾಜ್ಯ. (1 ಕೊರಿಂ. 7:29-31) ಈ ಸತ್ಯ ಏನು ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ? ದೇವರ ರಾಜ್ಯಕ್ಕೆ ಆದ್ಯತೆ ಕೊಡಲು ಅಡಚಣೆಯಾಗದಂಥ ರೀತಿಯಲ್ಲಿ ನಾವು ಇತರ ವಿಷಯಗಳನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದಲ್ಲವೇ? ಅಂದರೆ ನಾವು ಆಯ್ಕೆ ಮಾಡುವ ಮನರಂಜನೆ ಸಹ ದೇವರ ರಾಜ್ಯವನ್ನು ಪ್ರಥಮ ಸ್ಥಾನದಲ್ಲಿಡಲು ನಮಗೆ ನೆರವು ನೀಡುವಂಥದ್ದಾಗಿರಬೇಕು. ಅಂಥ ಮನರಂಜನೆಯಿಂದ ನಮಗೆ ಪ್ರಯೋಜನವಾಗುತ್ತದೆ.

12. ಮನರಂಜನೆಯನ್ನು ಆಯ್ಕೆ ಮಾಡುವಾಗ ಲೂಕ 14:28ರಲ್ಲಿರುವ ಮೂಲತತ್ವವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?

12 ಮನರಂಜನೆಯನ್ನು ಆರಿಸಿಕೊಳ್ಳುವ ಮುಂಚೆಯೇ ಅದಕ್ಕೆ ಎಷ್ಟು ಸಮಯ ವ್ಯಯಿಸಬೇಕಾಗುತ್ತದೆ ಎಂಬ ಲೆಕ್ಕಾಚಾರ ಮಾಡಿನೋಡುವುದು ಒಳಿತು. (ಲೂಕ 14:28) ಬೇರೆ ವಿಷಯಗಳಂತೆ ಮನರಂಜನೆ ಸಹ ನಮ್ಮ ಸಮಯವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ, ಮನರಂಜನೆಯೊಂದಕ್ಕೆ ಎಷ್ಟು ಸಮಯ ವ್ಯಯಿಸಬೇಕು ಎಂದು ನಾವು ಮೊದಲೇ ತೀರ್ಮಾನಿಸಬೇಕು. ಬೈಬಲ್‌ ಓದಿ ಅಧ್ಯಯನ ಮಾಡಲು, ಕುಟುಂಬ ಆರಾಧನೆಯಲ್ಲಿ ಭಾಗವಹಿಸಲು, ಕೂಟಗಳಿಗೆ ಹಾಜರಾಗಲು, ಸುವಾರ್ತೆ ಸಾರಲು ನಾವು ಸಮಯವನ್ನು ಮೀಸಲಾಗಿಡಬೇಕಾಗುತ್ತದೆ. ನಮ್ಮ ಮನರಂಜನೆ ಇಂಥ ಪ್ರಾಮುಖ್ಯ ವಿಷಯಗಳನ್ನು ಮಾಡದಂತೆ ಅಡಚಣೆಯೊಡ್ಡಿ ನಮ್ಮ ಅಮೂಲ್ಯ ಸಮಯವನ್ನು ಕಸಿದುಕೊಳ್ಳದಂತೆ ನಾವು ಜಾಗ್ರತೆ ವಹಿಸಬೇಕು. (ಮಾರ್ಕ 8:36) ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾಡಲು ನಮ್ಮಲ್ಲಿ ಚೈತನ್ಯ ತುಂಬುವ ಮನರಂಜನೆಯಾಗಿದ್ದಲ್ಲಿ ಅದಕ್ಕೆ ಸಮಯ ವ್ಯಯಿಸುವುದು ಪ್ರಯೋಜನಕರ.

ಯಾರು?

13. ‘ನಾನು ಯಾರೊಂದಿಗೆ ಮನರಂಜನೆಯ ಸಮಯವನ್ನು ಕಳೆಯುತ್ತೇನೆ?’ ಎಂಬ ಪ್ರಶ್ನೆಯನ್ನು ಪರಿಗಣಿಸುವುದು ಪ್ರಾಮುಖ್ಯವೇಕೆ?

13 ನಿಮ್ಮನ್ನೇ ಕೇಳಿಕೊಳ್ಳಬೇಕಾದ ಮೂರನೇ ಪ್ರಶ್ನೆ, ಯಾರು? ಅಂದರೆ ‘ನಾನು ಯಾರೊಂದಿಗೆ ಮನರಂಜನೆಯ ಸಮಯವನ್ನು ಕಳೆಯುತ್ತೇನೆ?’ ಈ ಪ್ರಶ್ನೆಯನ್ನು ಪರಿಗಣಿಸುವುದು ಬಹಳ ಪ್ರಾಮುಖ್ಯ. ಯಾಕೆಂದರೆ, ನಮ್ಮ ಜೊತೆಗಾರರು ಮನರಂಜನೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಲ್ಲರು. ಉದಾಹರಣೆಗೆ, ಆಪ್ತ ಗೆಳೆಯರೊಂದಿಗೆ ಮಾಡಿದ ಊಟದ ಸವಿ ಹೆಚ್ಚು. ಹಾಗೆಯೇ ಒಳ್ಳೆಯ ಜನರೊಂದಿಗೆ ಮನರಂಜನೆಯ ಸಮಯವನ್ನು ಕಳೆಯುವಾಗ ಹರ್ಷೊಲ್ಲಾಸ ಹೆಚ್ಚು. ಹಾಗಾಗಿ ನಾವು ಮತ್ತು ನಮ್ಮ ಯುವಜನರು ಮನರಂಜನೆಯ ಸಮಯವನ್ನು ಇತರರೊಂದಿಗೆ ಜೊತೆಗೂಡಿ ಸವಿಯಲು ಬಯಸುತ್ತೇವೆ. ಆದರೆ, ನಮ್ಮ ಮನರಂಜನೆ ಪ್ರಯೋಜನ ತರಬೇಕಾದರೆ, ನಾವು ಯಾರನ್ನು ಜೊತೆಗಾರರಾಗಿ ಆರಿಸಿಕೊಳ್ಳಬೇಕು, ಯಾರನ್ನು ಆರಿಸಿಕೊಳ್ಳಬಾರದು ಎಂದು ಮೊದಲೇ ನಿರ್ಧರಿಸುವುದು ಉತ್ತಮ.—2 ಪೂರ್ವ. 19:2; ಜ್ಞಾನೋಕ್ತಿ 13:20 ಓದಿ; ಯಾಕೋ. 4:4.

14, 15. (ಎ) ಆಪ್ತ ಗೆಳೆಯರನ್ನು ಆರಿಸಿಕೊಳ್ಳುವ ವಿಷಯದಲ್ಲಿ ಯೇಸು ಯಾವ ಮಾದರಿ ಇಟ್ಟಿದ್ದಾನೆ? (ಬಿ) ಗೆಳೆಯರನ್ನು ಆರಿಸಿಕೊಳ್ಳುವ ಮೊದಲು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

14 ಈ ನಿಟ್ಟಿನಲ್ಲಿ ಯೇಸುವಿನ ಮಾದರಿ ತುಂಬಾ ಸಹಾಯ ಮಾಡುತ್ತದೆ. ಮನುಷ್ಯ ಸೃಷ್ಟಿಯಾದ ಸಮಯದಿಂದಲೂ ಯೇಸುವಿಗೆ ಮಾನವಕುಲವೆಂದರೆ ಅಗಾಧ ಪ್ರೀತಿ. (ಜ್ಞಾನೋ. 8:31) ಭೂಮಿಯಲ್ಲಿ ಜೀವಿಸಿದ್ದಾಗಲೂ ಎಲ್ಲಾ ರೀತಿಯ ಜನರೆಡೆಗೆ ಅವನು ಅನುಕಂಪ ತೋರಿಸಿದನು. (ಮತ್ತಾ. 15:29-37) ಹಾಗಿದ್ದರೂ, ಸ್ನೇಹಭಾವದಿಂದ ಇರುವುದಕ್ಕೂ ಮತ್ತು ಆಪ್ತ ಸ್ನೇಹಿತನಾಗಿರುವುದಕ್ಕೂ ವ್ಯತ್ಯಾಸವಿದೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಅವನು ಎಲ್ಲರಿಗೆ ಸ್ನೇಹಭಾವ ತೋರಿಸಿದರೂ ಅವರೆಲ್ಲರನ್ನೂ ಆಪ್ತ ಸ್ನೇಹಿತರಾಗಿ ಮಾಡಿಕೊಳ್ಳಲಿಲ್ಲ. ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಮಾತಾಡುತ್ತಿದ್ದಾಗ ಅವನು ಹೇಳಿದ್ದನ್ನು ಗಮನಿಸಿ: “ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು.” (ಯೋಹಾ. 15:14; ಯೋಹಾನ 13:27, 30 ಸಹ ನೋಡಿ.) ಎಲ್ಲರನ್ನಲ್ಲ ತನ್ನನ್ನು ನಂಬಿಗಸ್ತಿಕೆಯಿಂದ ಹಿಂಬಾಲಿಸಿ ಯೆಹೋವ ದೇವರಿಗೆ ಸೇವೆಸಲ್ಲಿಸಿದವರನ್ನು ಮಾತ್ರ ಅವನು ಆಪ್ತ ಗೆಳೆಯರನ್ನಾಗಿ ಮಾಡಿಕೊಂಡನು ಎಂದು ಇದರಿಂದ ಸ್ಪಷ್ಟವಾಗುತ್ತದೆ.

15 ಒಬ್ಬರನ್ನು ಆಪ್ತ ಗೆಳೆಯರನ್ನಾಗಿ ಆಯ್ಕೆ ಮಾಡುವ ಮೊದಲು ಯೇಸು ಹೇಳಿದ ಮೇಲಿನ ಮಾತುಗಳನ್ನು ನೆನಪಿಸಿಕೊಳ್ಳುವುದು ವಿವೇಕವಾಗಿರುವುದು. ಈ ಮುಂದಿನ ಪ್ರಶ್ನೆಗಳನ್ನು ಅವಲೋಕಿಸಿ: ‘ಯೆಹೋವ ದೇವರ ಮತ್ತು ಯೇಸುವಿನ ಆಜ್ಞೆಗಳನ್ನು ಪಾಲಿಸುತ್ತಿದ್ದಾನೆಂದು ಆ ವ್ಯಕ್ತಿಯ ನಡೆನುಡಿ ತೋರಿಸುತ್ತದಾ? ನನ್ನಂತೆಯೇ ಅವನು ಸಹ ಬೈಬಲಿನ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಮೈಗೂಡಿಸಿಕೊಂಡಿದ್ದಾನಾ? ಅವನ ಸಹವಾಸ ದೇವರ ರಾಜ್ಯವನ್ನು ಪ್ರಥಮ ಸ್ಥಾನದಲ್ಲಿಡಲು ಹಾಗೂ ದೇವರಿಗೆ ನಿಷ್ಠೆಯಿಂದಿರಲು ನನಗೆ ಸ್ಫೂರ್ತಿ ನೀಡುತ್ತದಾ?’ ಉತ್ತರ ‘ಹೌದು’ ಎಂದಾಗಿರುವಲ್ಲಿ, ಮನರಂಜನೆಯಲ್ಲಿ ಉಲ್ಲಾಸಿಸಲು ನಿಮಗೊಬ್ಬ ಉತ್ತಮ ಗೆಳೆಯ ಸಿಕ್ಕಿದ್ದಾನೆ!—ಕೀರ್ತನೆ 119:63 ಓದಿ; 2 ಕೊರಿಂ. 6:14; 2 ತಿಮೊ. 2:22.

ಪರೀಕ್ಷಿಸಿ ನೋಡಿ!

16. ಮನರಂಜನೆಯ ಕುರಿತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

16 ಮನರಂಜನೆಯ ಕುರಿತು ಮೂರು ಅಂಶಗಳನ್ನು ನಾವು ಚರ್ಚಿಸಿದೆವು. ಅದರ ಗುಣಮಟ್ಟ, ವ್ಯಯವಾಗುವ ಸಮಯ ಮತ್ತು ನಮ್ಮ ಜೊತೆಗಾರರು. ನಮ್ಮ ಮನರಂಜನೆ ಪ್ರಯೋಜನ ತರಬೇಕಾದರೆ ಈ ಮೂರೂ ಅಂಶಗಳಲ್ಲೂ ಅದು ಬೈಬಲ್‌ನ ಮೂಲತತ್ವಗಳಿಗೆ ಪೂರ್ಣ ಹೊಂದಿಕೆಯಲ್ಲಿರಬೇಕು. ಆದಕಾರಣ, ಮನರಂಜನೆಯನ್ನು ಆರಿಸಿಕೊಳ್ಳುವಾಗ ಅದನ್ನು ಒರೆಹಚ್ಚಿ ನೋಡಬೇಕು. ಗುಣಮಟ್ಟ ಕಂಡುಹಿಡಿಯಲು ಹೀಗೆ ಕೇಳಿಕೊಳ್ಳೋಣ: ‘ನಾನು ಆರಿಸಿಕೊಳ್ಳುವ ಮನರಂಜನೆಯಲ್ಲಿ ಯಾವ ವಿಷಯಗಳಿವೆ? ಚೈತನ್ಯ ತುಂಬುವಂಥ ವಿಷಯಗಳಾ ಅಥವಾ ಕೆಟ್ಟ ವಿಷಯಗಳಾ?’ (ಜ್ಞಾನೋ. 4:20-27) ವ್ಯಯವಾಗುವ ಸಮಯ ಎಷ್ಟೆಂದು ತಿಳಿದುಕೊಳ್ಳೋಣ: ‘ನಾನೆಷ್ಟು ಸಮಯ ಕಳೆಯಲಿದ್ದೇನೆ? ಅಷ್ಟು ಸಮಯ ಕಳೆಯುವುದರಿಂದ ಪ್ರಯೋಜನವಿದೆಯಾ?’ (1 ತಿಮೊ. 4:8) ಜೊತೆಗಾರರ ವಿಷಯವಾಗಿ ದೃಢ ನಿರ್ಧಾರ ತೆಗೆದುಕೊಳ್ಳೋಣ: ‘ಜೊತೆಗೂಡುವವರು ಹೇಗಿದ್ದಾರೆ? ಒಳ್ಳೆಯವರಾ ಕೆಟ್ಟವರಾ?’—ಪ್ರಸಂ. 9:18; 1 ಕೊರಿಂ. 15:33.

17, 18. (ಎ) ನಾವಾರಿಸಿಕೊಳ್ಳುವ ಮನರಂಜನೆ ಬೈಬಲಿನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿದೆಯಾ ಇಲ್ಲವಾ ಎಂದು ನಾವು ಹೇಗೆ ಪರೀಕ್ಷಿಸಬಹುದು? (ಬಿ) ಮನರಂಜನೆಯನ್ನು ಆಯ್ಕೆ ಮಾಡುವ ವಿಷಯದಲ್ಲಿ ನಿಮ್ಮ ದೃಢಸಂಕಲ್ಪ ಏನಾಗಿದೆ?

17 ನಾವಾರಿಸಿಕೊಳ್ಳುವ ಮನರಂಜನೆ ಮೇಲಿನ ಯಾವುದಾದರೂ ಒಂದು ಅಂಶದಲ್ಲಿ ಬೈಬಲಿನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ಇಲ್ಲದಿದ್ದರೂ ಅದು ಪರೀಕ್ಷೆಯಲ್ಲಿ ಸೋತಂತೆ. ಮೂರು ಅಂಶಗಳಲ್ಲೂ ಅದು ಬೈಬಲಿನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿದ್ದರೆ ಯೆಹೋವ ದೇವರನ್ನು ಮಹಿಮೆಪಡಿಸುತ್ತದೆ ಮತ್ತು ನಮಗೆ ಪ್ರಯೋಜನ ತರುತ್ತದೆ.—ಕೀರ್ತ. 119:33-35.

18 ಆದ್ದರಿಂದ ಮನರಂಜನೆಯನ್ನು ಆಯ್ಕೆ ಮಾಡುವಾಗ ಸರಿಯಾದ ನಿರ್ಣಯ ಮಾಡೋಣ. ಸರಿಯಾದ ಮನರಂಜನೆಯನ್ನು, ಸರಿಯಾದ ಸಮಯದಲ್ಲಿ, ಸರಿಯಾದ ಜನರೊಂದಿಗೆ ಸವಿದು ಹರ್ಷಿಸೋಣ. ಹೌದು, ನಾವೆಲ್ಲರೂ ಬೈಬಲ್‌ ನೀಡುವ ಈ ಸಲಹೆಯನ್ನು ಮನಃಪೂರ್ವಕವಾಗಿ ಪಾಲಿಸೋಣ: “ನೀವು ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.”—1 ಕೊರಿಂ. 10:31.

ವಿವರಿಸುವಿರಾ?

ಮನರಂಜನೆಯ ವಿಷಯದಲ್ಲಿ ಕೆಳಗಿನ ವಚನಗಳಲ್ಲಿರುವ ಮೂಲತತ್ವಗಳನ್ನು ಹೇಗೆ ಅನ್ವಯಿಸುವಿರಿ?

ಫಿಲಿಪ್ಪಿ 4:8.

ಮತ್ತಾಯ 6:33.

ಜ್ಞಾನೋಕ್ತಿ 13:20.

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಯಾವುದು

[ಪುಟ 10ರಲ್ಲಿರುವ ಚಿತ್ರ]

ಯಾವಾಗ

[ಪುಟ 10ರಲ್ಲಿರುವ ಚಿತ್ರ]

ಗೆಳೆಯರನ್ನು ಮತ್ತು ಮನರಂಜನೆಯನ್ನು ಆಯ್ಕೆ ಮಾಡಲು ಯೇಸುವಿನ ಮಾದರಿ ಹೇಗೆ ನೆರವಾಗುತ್ತದೆ?

[ಪುಟ 12ರಲ್ಲಿರುವ ಚಿತ್ರ]

ಯಾರು