ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತಿಪತಿಗಳಾಗಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಿ

ಸತಿಪತಿಗಳಾಗಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಿ

ಸುಖ ಸಂಸಾರಕ್ಕೆ ಸೂತ್ರಗಳು

ಸತಿಪತಿಗಳಾಗಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಿ

ಫ್ರೆಡ್ರಿಕ್‌ *: “ಮದುವೆಯಾದ ಹೊಸದರಲ್ಲಿ ನಾವಿಬ್ಬರೂ ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡಬೇಕೆಂದು ತುಂಬ ಶಿಸ್ತಿನಿಂದ ಕೂತುಕೊಳ್ಳುತ್ತಿದ್ದೆ. ಹಾಗೆಯೇ ಲಿಡ್ಯ ಕೂಡ ಅಧ್ಯಯನದ ಸಮಯದಲ್ಲಿ ಪೂರ್ತಿ ಗಮನ ಕೊಡಬೇಕೆಂದು ನೆನಸಿದೆ. ಆದರೆ ಅವಳಿಗದು ಕಷ್ಟ ಆಗುತ್ತಿತ್ತು. ನಾನು ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಬರೀ ‘ಹೌದು,’ ‘ಇಲ್ಲ’ ಅಂತ ಉತ್ತರ ಕೊಡುತ್ತಿದ್ದಳು. ಬೈಬಲ್‌ ಅಧ್ಯಯನದಲ್ಲಿ ಕೊಡಬೇಕಾದ ರೀತಿಯ ಉತ್ತರಗಳನ್ನು ಆಕೆ ಕೊಡುತ್ತಿರಲಿಲ್ಲ.”

ಲಿಡ್ಯ: “ಮದುವೆಯಾದಾಗ ನನಗೆ 18 ವಯಸ್ಸು. ನಾವು ತಪ್ಪದೇ ಬೈಬಲ್‌ ಅಧ್ಯಯನ ಮಾಡುತ್ತಿದ್ದೆವು. ಆದರೆ ಆ ಸಮಯದಲ್ಲೇ ಫ್ರೆಡ್ರಿಕ್‌ ನನ್ನೆಲ್ಲ ತಪ್ಪುಗಳನ್ನು ಎತ್ತಿ ಆಡುತ್ತಿದ್ದರು. ಪತ್ನಿಯಾಗಿ ನಾನು ಎಲ್ಲೆಲ್ಲಿ ಏನೇನು ಸುಧಾರಣೆ ಮಾಡಬೇಕೆಂದು ಭಾಷಣ ಬಿಗಿಯುತ್ತಿದ್ದರು. ತುಂಬ ಬೇಜಾರಾಗುತ್ತಿತ್ತು. ತುಂಬ ನೊಂದುಕೊಳ್ಳುತ್ತಿದ್ದೆ.”

ನಿಮಗೆ ಏನನಿಸುತ್ತದೆ? ಈ ದಂಪತಿಯ ಸಮಸ್ಯೆ ಏನು? ಅವರ ಉದ್ದೇಶ ಒಳ್ಳೇದಿತ್ತು. ಇಬ್ಬರಿಗೂ ದೇವರ ಮೇಲೆ ಪ್ರೀತಿಯಿದೆ. ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡುವುದು ಅಗತ್ಯವೆಂದೂ ತಿಳಿದಿದೆ. ಆದರೆ ಅದರಿಂದ ಅವರಿಬ್ಬರು ಹತ್ತಿರವಾಗುವ ಬದಲು ದೂರ ಸರಿಯುತ್ತಿದ್ದರೆಂದು ತೋರುತ್ತದೆ. ಇಬ್ಬರೂ ಸೇರಿ ಅಧ್ಯಯನ ಮಾಡುತ್ತಿದ್ದರೂ ಸತಿಪತಿಗಳಾಗಿ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಲು ಆಗುತ್ತಿರಲಿಲ್ಲ.

ಆಧ್ಯಾತ್ಮಿಕತೆ ಅಂದರೇನು? ಗಂಡಹೆಂಡತಿ ಅದನ್ನು ಏಕೆ ಬೆಳೆಸಿಕೊಳ್ಳಬೇಕು? ಅವರಿಗೆ ಎದುರಾಗಬಹುದಾದ ಸವಾಲುಗಳೇನು? ಅವುಗಳನ್ನು ಹೇಗೆ ಜಯಿಸಬಲ್ಲರು?

ಆಧ್ಯಾತ್ಮಿಕತೆ ಅಂದರೇನು?

“ಆಧ್ಯಾತ್ಮಿಕತೆ” ಎಂಬ ಪದವನ್ನು ಬೈಬಲಿನಲ್ಲಿ ಒಬ್ಬ ವ್ಯಕ್ತಿಯ ಮನೋಭಾವ, ಜೀವನ ಮಾರ್ಗಕ್ಕೆ ಸೂಚಿಸಲು ಬಳಸಲಾಗಿದೆ. (ಯೂದ 18, 19) ಆಧ್ಯಾತ್ಮಿಕ ವ್ಯಕ್ತಿ ಹಾಗೂ ಪ್ರಾಪಂಚಿಕ ವ್ಯಕ್ತಿಯ ಮನೋಭಾವದಲ್ಲಿನ ವ್ಯತ್ಯಾಸವನ್ನು ಬೈಬಲ್‌ ಲೇಖಕನಾದ ಪೌಲನು ಎತ್ತಿ ತೋರಿಸುತ್ತಾನೆ. ಪ್ರಾಪಂಚಿಕ ಭಾವದವರು ತಮ್ಮ ಬಗ್ಗೆಯೇ ಚಿಂತಿಸುತ್ತಾರೆ. ತಮಗೆ ಸರಿಯೆಂದು ತೋಚಿದ್ದನ್ನು ಮಾತ್ರ ಮಾಡುತ್ತಾರೆಯೇ ವಿನಃ ದೇವರ ಮಟ್ಟಗಳಿಗನುಸಾರ ಜೀವಿಸಲು ಇಚ್ಛಿಸುವುದಿಲ್ಲ ಎಂದು ಪೌಲನ ಮಾತುಗಳಿಂದ ಗೊತ್ತಾಗುತ್ತದೆ.—1 ಕೊರಿಂಥ 2:14; ಗಲಾತ್ಯ 5:19, 20.

ಆಧ್ಯಾತ್ಮಿಕ ಮನೋಭಾವದವರಾದರೊ ದೇವರ ಮಟ್ಟಗಳಿಗೆ ಮಹತ್ವ ಕೊಡುತ್ತಾರೆ. ಯೆಹೋವ ದೇವರನ್ನು ತಮ್ಮ ಸ್ನೇಹಿತನೆಂದು ಎಣಿಸುತ್ತಾರೆ. ಆತನ ಗುಣಗಳನ್ನು ಮೈಗೂಡಿಸಿಕೊಳ್ಳಲು ಯತ್ನಿಸುತ್ತಾರೆ. (ಎಫೆಸ 5:1) ಹಾಗಾಗಿ ಇತರರೊಂದಿಗಿನ ಅವರ ವ್ಯವಹಾರಗಳಲ್ಲಿ ಪ್ರೀತಿ, ದಯೆ, ಸೌಮ್ಯತೆ ತೋರಿಬರುತ್ತದೆ. (ವಿಮೋಚನಕಾಂಡ 34:6) ದೇವರಿಗೆ ವಿಧೇಯರಾಗುವುದು ಸುಲಭವಿಲ್ಲದಿರುವಾಗಲೂ ವಿಧೇಯರಾಗುತ್ತಾರೆ. (ಕೀರ್ತನೆ 15:1, 4) “ನನಗೆ ಗೊತ್ತಿರುವ ಮಟ್ಟಿಗೆ, ಒಬ್ಬ ಆಧ್ಯಾತ್ಮಿಕ ವ್ಯಕ್ತಿಗೆ ದೇವರೊಂದಿಗಿನ ಸ್ನೇಹ ತುಂಬ ಮುಖ್ಯ. ಆದ್ದರಿಂದ ತನ್ನ ನಡೆನುಡಿ ಆ ಸ್ನೇಹದ ಮೇಲೆ ಯಾವ ಪರಿಣಾಮ ಬೀರುವುದೆಂಬುದರ ಬಗ್ಗೆ ಸದಾ ಯೋಚಿಸುತ್ತಾನೆ” ಎನ್ನುತ್ತಾರೆ 35 ವರ್ಷಗಳಿಂದ ಸುಖೀ ದಾಂಪತ್ಯ ನಡೆಸುತ್ತಿರುವ ಕೆನಡದ ನಿವಾಸಿ ಡ್ಯಾರೆನ್‌. ಅವರ ಪತ್ನಿ ಜೇನ್‌ ಹೀಗೆ ಧ್ವನಿಗೂಡಿಸುತ್ತಾರೆ: “ಆಧ್ಯಾತ್ಮಿಕ ಸ್ತ್ರೀಯೊಬ್ಬಳು ದೇವರ ಪವಿತ್ರಾತ್ಮದ ಫಲವನ್ನು ತೋರಿಸಲು ದಿನನಿತ್ಯವೂ ಪ್ರಯಾಸಪಡಬೇಕು ಎಂದು ನನಗನಿಸುತ್ತದೆ.”—ಗಲಾತ್ಯ 5:22, 23.

ಆಧ್ಯಾತ್ಮಿಕತೆ ಬೆಳೆಸಿಕೊಳ್ಳಲು ಒಬ್ಬ ವ್ಯಕ್ತಿ ವಿವಾಹಿತನಾಗಿರಲೇ ಬೇಕೆಂದಿಲ್ಲ ನಿಜ. ಏಕೆಂದರೆ ದೇವರ ಕುರಿತು ಕಲಿಯುವ ಹಾಗೂ ಆತನನ್ನು ಅನುಕರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ಎಂದು ಬೈಬಲ್‌ ತೋರಿಸುತ್ತದೆ.—ಅಪೊಸ್ತಲರ ಕಾರ್ಯಗಳು 17:26, 27.

ಸತಿಪತಿಗಳಾಗಿ ಒಟ್ಟಿಗೆ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಬೇಕು ಏಕೆ?

ವಿವಾಹ ಸಂಗಾತಿಗಳು ಏಕೆ ಒಟ್ಟುಸೇರಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಬೇಕು? ಒಂದೇ ತೋಟದಲ್ಲಿ ಕೆಲಸಮಾಡುವ ಇಬ್ಬರು ತೋಟಗಾರರ ದೃಷ್ಟಾಂತ ಗಮನಿಸಿ. ಇಬ್ಬರಿಗೂ ತರಕಾರಿ ಬೆಳೆಸುವ ಆಸೆ. ಆದರೆ ಯಾವಾಗ ಬೀಜ ಬಿತ್ತಬೇಕೆಂಬ ವಿಷಯದಲ್ಲಿ ಒಮ್ಮತವಿಲ್ಲ. ಒಬ್ಬನು ಗೊಬ್ಬರ ಹಾಕಬೇಕೆಂದು ಅನ್ನುತ್ತಿದ್ದರೆ ಇನ್ನೊಬ್ಬನು ಅಗತ್ಯವಿಲ್ಲ ಅನ್ನುತ್ತಾನೆ. ಒಬ್ಬನು ತೋಟದಲ್ಲಿ ಪ್ರತಿದಿನ ಬೆವರು ಸುರಿಸಿ ದುಡಿಯುತ್ತಾನೆ, ಇನ್ನೊಬ್ಬ ಕೈಕಟ್ಟಿ ಕೂರುತ್ತಾನೆ. ಹೀಗೆ ಮಾಡಿದರೆ ತೋಟದ ಗತಿ ಏನಾಗಬೇಕು? ಅಲ್ಪಸ್ವಲ್ಪ ತರಕಾರಿ ಸಿಗಬಹುದೇನೋ ನಿಜ. ಆದರೆ ಇಬ್ಬರೂ ಸೇರಿ ದುಡಿದರೆ ಎಷ್ಟೋ ಹೆಚ್ಚು ಸಿಗುವುದಲ್ಲವೇ?

ಗಂಡಹೆಂಡತಿ ಆ ತೋಟಗಾರರಂತೆ ಇದ್ದಾರೆ. ಒಬ್ಬರು ಮಾತ್ರ ಆಧ್ಯಾತ್ಮಿಕತೆ ಬೆಳೆಸಿಕೊಂಡರೂ ಅವರ ಸಂಬಂಧ ಉತ್ತಮಗೊಳ್ಳುತ್ತದೆ ನಿಜ. (1 ಪೇತ್ರ 3:1, 2) ಆದರೆ ಇಬ್ಬರೂ ಒಮ್ಮತಕ್ಕೆ ಬಂದು ದೇವರ ಮಟ್ಟಗಳಿಗನುಸಾರ ಬದುಕಿದರೆ, ದೇವರ ಸೇವೆ ಮಾಡಲು ಒಬ್ಬರಿಗೊಬ್ಬರು ಆಧಾರವಾಗಿ ನಿಂತರೆ ಹೆಚ್ಚು ಉತ್ತಮವಲ್ಲವೇ? ಬುದ್ಧಿವಂತ ರಾಜ ಸೊಲೊಮೋನನು “ಒಬ್ಬನಿಗಿಂತ ಇಬ್ಬರು ಲೇಸು” ಎಂದು ಹೇಳಿದನು. ಏಕೆಂದರೆ “ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.”—ಪ್ರಸಂಗಿ 4:9, 10.

ನಿಮ್ಮ ಬಾಳಸಂಗಾತಿಯೊಟ್ಟಿಗೆ ಸೇರಿ ಆಧ್ಯಾತ್ಮಿಕತೆ ಹೆಚ್ಚಿಸಲು ನಿಮಗೇನೊ ಆಸೆಯಿರಬಹುದು. ಆದರೆ ಆ ಆಸೆ ಇದ್ದರೆ ಮಾತ್ರ ಸಾಲದು ಅಲ್ಲವೇ? ನಿಮ್ಮಿಬ್ಬರಿಗೂ ಎದುರಾಗಬಲ್ಲ ಎರಡು ಸವಾಲುಗಳನ್ನೂ ಅವುಗಳನ್ನು ಹೇಗೆ ಜಯಿಸುವುದೆಂದೂ ತಿಳಿದುಕೊಳ್ಳಿ.

ಸವಾಲು 1: ನಮಗೆ ಸಮಯವೇ ಸಿಗುವುದಿಲ್ಲ. ಇತ್ತೀಚೆಗೆ ಮದುವೆಯಾಗಿರುವ ಸುಮನಾ ಎಂಬಾಕೆ ಹೇಳುವುದು: “ಕೆಲಸದ ಸ್ಥಳದಿಂದ ನನ್ನನ್ನು ಕರಕೊಂಡು ಹೋಗಲು ನನ್ನ ಯಜಮಾನರು ಬರುವಾಗ ಗಂಟೆ 7 ಆಗುತ್ತದೆ. ಮನೆಗೆ ಬಂದಾಗ ಒಂದು ರಾಶಿ ಕೆಲಸ ಬಿದ್ದಿರುತ್ತದೆ. ದೇಹ-ಮನಸ್ಸುಗಳ ನಡುವೆ ಸಂಘರ್ಷ ನಡೆಯುತ್ತದೆ. ಸ್ವಲ್ಪ ಸಮಯ ಇಬ್ಬರೂ ಸೇರಿ ದೇವರ ಬಗ್ಗೆ ಕಲಿಯಬೇಕೆಂದು ಮನಸ್ಸು ಹೇಳುತ್ತದೆ. ಆದರೆ ದಣಿದಿರುವ ದೇಹಕ್ಕೆ ಮಲಗಿದ್ರೆ ಸಾಕು ಅಂತ ಅನಿಸುತ್ತಿರುತ್ತದೆ.”

ಪರಿಹಾರ: ಹೊಂದಾಣಿಕೆ ಮಾಡಿ, ಸಹಕರಿಸಿ. ಸುಮನಾ ಹೇಳುವುದು: “ಕೆಲಸಕ್ಕೆ ಹೋಗುವ ಮುಂಚೆಯೇ ಬೈಬಲಿನ ಒಂದು ಭಾಗ ಓದಿ, ಚರ್ಚಿಸಲು ಸಾಧ್ಯವಾಗುವಂತೆ ಸ್ವಲ್ಪ ಬೇಗ ಏಳಲಾರಂಭಿಸಿದೆವು. ಅವರು ಮನೆಕೆಲಸದಲ್ಲೂ ಸಹಾಯ ಮಾಡುತ್ತಾರೆ. ಹಾಗಾಗಿ ಅವರ ಜೊತೆ ಕೂರಲು ನನಗೆ ಸಮಯ ಸಿಗುತ್ತದೆ.” ಈ ಹೆಚ್ಚಿನ ಪ್ರಯತ್ನ ಮಾಡುವುದರ ಪ್ರಯೋಜನ? ಸುಮನಾಳ ಗಂಡ ಸುಶಾಂತ್‌ ಹೇಳುವುದು: “ನಾನೂ ಸುಮನಾ ಸೇರಿ ನಿಯಮಿತವಾಗಿ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವಾಗೆಲ್ಲ, ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಿದ್ದನ್ನು, ಚಿಂತೆಗಳು ಕಡಿಮೆಯಾದದ್ದನ್ನು ನೋಡಿದ್ದೇನೆ.”

ಪರಸ್ಪರ ಮಾತಾಡುವುದಕ್ಕಲ್ಲದೆ ಪ್ರತಿ ದಿನ ಒಟ್ಟಿಗೆ ಪ್ರಾರ್ಥನೆ ಮಾಡಲಿಕ್ಕೂ ಕೆಲ ನಿಮಿಷ ತೆಗೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಏನು ಸಹಾಯ? ಮದುವೆಯಾಗಿ 16 ವರ್ಷಗಳಾಗಿರುವ ರಾಜೇಶ್‌ ಹೇಳುವುದು: “ಸ್ವಲ್ಪ ಸಮಯದ ಹಿಂದೆ ನಮ್ಮಿಬ್ಬರ ಮಧ್ಯೆ ಒಂದು ಸಮಸ್ಯೆ ಎದ್ದಿತು. ಆದರೆ ಪ್ರತಿ ರಾತ್ರಿ ಇಬ್ಬರೂ ಒಟ್ಟಿಗೆ ಪ್ರಾರ್ಥನೆ ಮಾಡಿ, ದೇವರಲ್ಲಿ ನಮ್ಮ ಮನಸ್ಸನ್ನು ತೋಡಿಕೊಂಡೆವು. ಜೊತೆಯಾಗಿ ಪ್ರಾರ್ಥನೆ ಮಾಡಿದ್ದರಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು, ನಮ್ಮ ವಿವಾಹದಲ್ಲಿ ಆನಂದ ಮರಳಿಪಡೆಯಲು ಸಾಧ್ಯವಾಯಿತೆಂದು ನನಗನಿಸುತ್ತದೆ.”

ಪ್ರಯತ್ನಿಸಿ ನೋಡಿ: ದಿನದ ಕೆಲಸಕಾರ್ಯಗಳೆಲ್ಲ ಮುಗಿದ ಮೇಲೆ ಕೆಲ ನಿಮಿಷ ತೆಗೆದುಕೊಂಡು, ಆ ದಿನ ನಿಮ್ಮಿಬ್ಬರಿಗೂ ಆದ ಒಳ್ಳೇ ವಿಷಯಗಳ ಕುರಿತು, ದೇವರಿಗೆ ಕೃತಜ್ಞತೆ ಸಲ್ಲಿಸಬಹುದಾದ ವಿಷಯಗಳ ಕುರಿತು ಮಾತಾಡಿ. ಅಲ್ಲದೆ, ಎದುರಾದ ಸವಾಲುಗಳ ಕುರಿತು ಮಾತಾಡಿ. ಅದರಲ್ಲೂ ದೇವರ ಸಹಾಯ ಬೇಕಾಗಿರುವ ಸವಾಲುಗಳ ಬಗ್ಗೆ ಮಾತಾಡಿ. ಆದರೆ ಎಚ್ಚರವಹಿಸಿ: ಇಬ್ಬರೂ ಸೇರಿ ಪ್ರಾರ್ಥನೆ ಮಾಡುವಾಗ ನಿಮ್ಮ ಸಂಗಾತಿಯ ತಪ್ಪುಗಳನ್ನು ಎತ್ತಿ ಆಡಲು ಇದನ್ನೇ ಅವಕಾಶವಾಗಿ ಬಳಸಬೇಡಿ. ನೀವಿಬ್ಬರೂ ಸೇರಿ ಸುಧಾರಣೆ ಮಾಡಬೇಕಾದ ವಿಷಯಗಳ ಬಗ್ಗೆ ಮಾತ್ರ ಪ್ರಾರ್ಥಿಸಿ. ಪ್ರಾರ್ಥನೆಯಲ್ಲಿ ಮಾಡಿದ ವಿನಂತಿಗಳಿಗೆ ತಕ್ಕಂತೆ ಮರುದಿನದಿಂದ ಕ್ರಿಯೆಗೈಯಿರಿ.

ಸವಾಲು 2: ನಾವಿಬ್ಬರೂ ಒಂದೇ ತರ ಇಲ್ಲ. “ಒಂದು ಕಡೆ ಕೂತು, ಪುಸ್ತಕ ಓದುವುದು ನನ್ನಿಂದಾಗದ ಕೆಲಸ” ಎನ್ನುತ್ತಾನೆ ಟೋನಿ. ಅವನ ಹೆಂಡತಿ ನಟಾಲಿ ಹೇಳುವುದು: “ನನಗೆ ಓದುವುದೆಂದರೆ ತುಂಬ ಇಷ್ಟ. ನಾನು ಕಲಿತ ಸಂಗತಿಗಳ ಬಗ್ಗೆ ಬೇರೆಯವರೊಟ್ಟಿಗೆ ಮಾತಾಡುವುದೂ ತುಂಬ ಇಷ್ಟ. ಆದರೆ ಬೈಬಲ್‌ ವಿಷಯಗಳ ಬಗ್ಗೆ ನನ್ನೊಟ್ಟಿಗೆ ಚರ್ಚಿಸಲು ಟೋನಿ ಸ್ವಲ್ಪ ಹಿಂಜರಿಯುತ್ತಾರೆ ಎಂದು ನನಗೆ ಒಮ್ಮೊಮ್ಮೆ ಅನಿಸುತ್ತದೆ.”

ಪರಿಹಾರ: ಬೆಂಬಲ ಕೊಡಿ. ಪೈಪೋಟಿ ಬೇಡ, ತಪ್ಪು ಹುಡುಕುವುದೂ ಬೇಡ. ನಿಮ್ಮ ಸಂಗಾತಿಯ ಉತ್ತಮ ಗುಣಗಳು, ಸಾಮರ್ಥ್ಯಗಳಿಗೆ ಪೂರಕವಾಗಿರಿ, ಪ್ರೋತ್ಸಾಹಿಸಿರಿ. ಟೋನಿ ಹೇಳುವುದು: “ಬೈಬಲ್‌ ವಿಷಯಗಳ ಬಗ್ಗೆ ಮಾತಾಡಲು ನನ್ನ ಪತ್ನಿಗಿದ್ದ ಉತ್ಸಾಹ ಸ್ವಲ್ಪ ಅತಿ ಅನಿಸುತ್ತಿತ್ತು. ಆದ್ದರಿಂದ ಹಿಂದೆಲ್ಲ ಆಕೆಯೊಟ್ಟಿಗೆ ಆಧ್ಯಾತ್ಮಿಕ ವಿಷಯಗಳ ಕುರಿತು ಮಾತಾಡಲು ಹಿಂದೇಟು ಹಾಕುತ್ತಿದ್ದೆ. ಆದರೆ ನಟಾಲಿ ನನಗೆ ತುಂಬ ಬೆಂಬಲ ಕೊಡುತ್ತಾಳೆ. ಈಗಂತೂ ನನಗೆ ಹೆದರುವ ಅಗತ್ಯವಿಲ್ಲವೆಂದು ಅನಿಸುತ್ತದೆ, ನಾವು ಆಧ್ಯಾತ್ಮಿಕ ವಿಷಯಗಳನ್ನು ಆಗಾಗ್ಗೆ ಚರ್ಚಿಸುತ್ತೇವೆ. ಅದನ್ನು ತುಂಬ ಆನಂದಿಸುತ್ತೇನೆ. ಇದರಿಂದಾಗಿ ನಾವಿಬ್ಬರೂ ಯಾವುದೇ ಬಿಗುಪಿಲ್ಲದೆ ಆರಾಮವಾಗಿ ಸಮಾಧಾನದಿಂದ ಇರಲು ಸಹಾಯವಾಗಿದೆ.”

ಒಟ್ಟಿಗೆ ಬೈಬಲ್‌ ಓದಲು, ಅಧ್ಯಯನಮಾಡಲು ಪ್ರತಿ ವಾರ ನಿಯಮಿತವಾಗಿ ಸಮಯ ಬದಿಗಿರಿಸುವುದು ತಮ್ಮ ವೈವಾಹಿಕ ಜೀವನವನ್ನು ಉತ್ತಮಗೊಳಿಸುತ್ತದೆಂದು ಅನೇಕ ದಂಪತಿಗಳು ಕಂಡುಕೊಂಡಿದ್ದಾರೆ. ಇಲ್ಲಿಯೂ ಎಚ್ಚರವಹಿಸಬೇಕಾದ ಒಂದು ವಿಷಯ: ಬುದ್ಧಿವಾದದ ಮಾತುಗಳನ್ನು ನಿಮ್ಮ ಸಂಗಾತಿಗಲ್ಲ ನಿಮಗೇ ಅನ್ವಯಿಸಿಕೊಳ್ಳಿ. (ಗಲಾತ್ಯ 6:4) ನಿಮ್ಮ ವೈವಾಹಿಕ ಸಮಸ್ಯೆಗಳನ್ನು ಬೇರೆ ಸಮಯದಲ್ಲಿ ಚರ್ಚಿಸಿ. ಅಧ್ಯಯನದ ಸಮಯದಲ್ಲಿ ಬೇಡ. ಏಕೆ?

ಕುಟುಂಬದ ಜೊತೆ ಊಟಕ್ಕಾಗಿ ಕೂತಿದ್ದೀರೆಂದು ನೆನಸಿ. ಆಗ ನೀವು ಕೀವುಗಟ್ಟಿರುವ ಒಂದು ಹುಣ್ಣನ್ನು ಶುಚಿಗೊಳಿಸಿ, ಪಟ್ಟಿಕಟ್ಟಲು ಶುರುಮಾಡುವಿರಾ? ಹಾಗೆ ಮಾಡಿದರೆ ಅಲ್ಲಿದ್ದವರಿಗೆ ಊಟಮಾಡಲು ಮನಸ್ಸಾಗಲಿಕ್ಕಿಲ್ಲ. ದೇವರ ಚಿತ್ತದ ಕುರಿತು ಕಲಿಯುವುದನ್ನು, ಆ ಚಿತ್ತದಂತೆ ನಡೆಯುವುದನ್ನು ಯೇಸು ಊಟಮಾಡುವುದಕ್ಕೆ ಹೋಲಿಸಿದನು. (ಮತ್ತಾಯ 4:4; ಯೋಹಾನ 4:34) ನೀವು ಬೈಬಲ್‌ ಅಧ್ಯಯನಕ್ಕಾಗಿ ಕೂತಾಗಲೆಲ್ಲ ಮನಸ್ಸಿಗಾಗಿರುವ ಗಾಯಗಳ ಕುರಿತು ಮಾತಾಡಲಾರಂಭಿಸಿದರೆ, ನಿಮ್ಮ ಸಂಗಾತಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚಿಸಲು ಮನಸ್ಸಾಗಲಿಕ್ಕಿಲ್ಲ. ಸಮಸ್ಯೆಗಳ ಬಗ್ಗೆ ನೀವು ಮಾತಾಡಬೇಕು ಖಂಡಿತ. ಆದರೆ ಅದಕ್ಕೆಂದು ಸಮಯ ಬದಿಗಿರಿಸಿ ಆ ಸಮಯದಲ್ಲಿ ಮಾತಾಡಿ.—ಜ್ಞಾನೋಕ್ತಿ 10:19; 15:23.

ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿಯಲ್ಲಿ ನೀವು ತುಂಬ ಮೆಚ್ಚುವಂಥ ಎರಡು ಮೂರು ಗುಣಗಳನ್ನು ಬರೆದಿಡಿ. ಮುಂದಿನ ಸಲ ಆ ಗುಣಗಳಿಗೆ ಸಂಬಂಧಪಟ್ಟ ಆಧ್ಯಾತ್ಮಿಕ ವಿಷಯಗಳ ಚರ್ಚೆಯ ಸಮಯದಲ್ಲಿ, ಅವರು ಆ ಗುಣಗಳನ್ನು ತೋರಿಸುವ ವಿಧಗಳನ್ನು ನೀವೆಷ್ಟು ಮಾನ್ಯಮಾಡುತ್ತೀರೆಂದು ಹೇಳಿ.

ಬಿತ್ತಿದ್ದನ್ನೇ ಕೊಯ್ಯುವಿರಿ

ನೀವಿಬ್ಬರೂ ಒಟ್ಟಿಗೆ ಆಧ್ಯಾತ್ಮಿಕತೆಯನ್ನು ಬಿತ್ತಿದರೆ ಇಲ್ಲವೆ ಬೆಳೆಸಿಕೊಂಡರೆ, ನಿಮ್ಮ ವಿವಾಹಜೀವನದಲ್ಲಿ ಹೆಚ್ಚಿನ ಸಂತೋಷ-ಸಮಾಧಾನ ಕೊಯ್ಯುವಿರಿ. “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು” ಎಂಬ ಖಾತ್ರಿಯನ್ನು ದೇವರ ವಾಕ್ಯವೇ ಕೊಡುತ್ತದೆ.—ಗಲಾತ್ಯ 6:7.

ಬೈಬಲಿನ ಆ ಸೂತ್ರ ಎಷ್ಟು ಸತ್ಯವೆಂಬದನ್ನು ಈ ಲೇಖನದ ಆರಂಭದಲ್ಲಿ ತಿಳಿಸಲಾದ ಫ್ರೆಡ್ರಿಕ್‌ ಮತ್ತು ಲಿಡ್ಯ ತಿಳಿದುಕೊಂಡರು. ಅವರ ಸಂಸಾರ ನೌಕೆಯ ಪಯಣಕ್ಕೆ ಈಗ 45 ವರ್ಷ ದಾಟಿದೆ. ತಮ್ಮ ಆಧ್ಯಾತ್ಮಿಕತೆ ಹೆಚ್ಚಿಸಲು ಪಟ್ಟುಹಿಡಿದಿದ್ದರಿಂದ ಅವರಿಗೆ ಪ್ರತಿಫಲ ಸಿಕ್ಕಿದೆ. “ನಮ್ಮಿಬ್ಬರ ಮಧ್ಯೆ ಸರಿಯಾಗಿ ಸಂವಾದ ನಡೆಯದಿರುವುದಕ್ಕೆ ಹೆಂಡತಿಯನ್ನು ದೂರುತ್ತಿದ್ದೆ. ಆದರೆ ಕೆಲವೊಂದು ವಿಷಯಗಳಲ್ಲಿ ನಾನೂ ಸುಧಾರಣೆ ಮಾಡಿಕೊಳ್ಳಬೇಕೆಂದು ಸಮಯ ದಾಟಿದಂತೆ ಅರಿತುಕೊಂಡೆ” ಎನ್ನುತ್ತಾನೆ ಫ್ರೆಡ್ರಿಕ್‌. ಲಿಡ್ಯ ಹೇಳುವುದು: “ಕಷ್ಟಕರ ಸಮಯಗಳನ್ನು ದಾಟಿಬರಲು ನೆರವಾದ ಸಂಗತಿ ನಮ್ಮಿಬ್ಬರಿಗೂ ಯೆಹೋವ ದೇವರ ಮೇಲಿದ್ದ ಪ್ರೀತಿಯೇ. ಈ ಎಲ್ಲ ವರ್ಷಗಳಲ್ಲಿ ನಾವು ನಿಯಮಿತವಾಗಿ ಒಟ್ಟಿಗೆ ಬೈಬಲ್‌ ಅಧ್ಯಯನ, ಪ್ರಾರ್ಥನೆ ಮಾಡಿದ್ದೇವೆ. ಫ್ರೆಡ್ರಿಕ್‌ ಕ್ರೈಸ್ತ ಗುಣಗಳನ್ನು ತೋರಿಸಲು ಮಾಡುವ ಪ್ರಯತ್ನ ನೋಡುವಾಗ ನಾನವರನ್ನು ಪ್ರೀತಿಸಲು ಹೆಚ್ಚು ಸುಲಭವಾಗುತ್ತದೆ.” (w11-E 11/01)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

ನಿಮ್ಮನ್ನೇ ಕೇಳಿಕೊಳ್ಳಿ...

▪ ನಾವಿಬ್ಬರೂ ಒಟ್ಟಿಗೆ ಪ್ರಾರ್ಥನೆಮಾಡಿ ಎಷ್ಟು ಸಮಯ ಆಯಿತು?

▪ ನನ್ನ ಸಂಗಾತಿ ಆಧ್ಯಾತ್ಮಿಕ ವಿಷಯಗಳ ಕುರಿತು ಹಿಂಜರಿಕೆಯಿಲ್ಲದೆ ನನ್ನೊಟ್ಟಿಗೆ ಚರ್ಚಿಸಲು ಹೇಗೆ ಪ್ರೋತ್ಸಾಹಿಸಬಲ್ಲೆ?