ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ಪ-ಮಗ ಗೆಳೆಯರಾಗಿರಲು ಸಾಧ್ಯವೇ?

ಅಪ್ಪ-ಮಗ ಗೆಳೆಯರಾಗಿರಲು ಸಾಧ್ಯವೇ?

ಅಪ್ಪ-ಮಗ ಗೆಳೆಯರಾಗಿರಲು ಸಾಧ್ಯವೇ?

“ಪಪ್ಪಾ, ಇಷ್ಟೊಂದು ವಿಷಯ ನಿಮಗೆ ಹೇಗೆ ಗೊತ್ತು?” ಎಂದು ನಿಮ್ಮ ಪೋರ ಕೇಳಿದಾಗ ನಿಮ್ಮ ಹೃದಯ ಹಿಗ್ಗಿರಬೇಕಲ್ಲವೇ? ಅಪ್ಪನಾಗಿರಲು ಹೆಮ್ಮೆ ಅನಿಸಿರಬೇಕಲ್ಲವೇ? ಆದರೆ ನಿಮ್ಮ ಮಗ ನಿಮ್ಮನ್ನು ಮೆಚ್ಚುವದಷ್ಟೇ ಅಲ್ಲ ನಿಮ್ಮ ಬುದ್ಧಿಮಾತಿನಂತೆ ನಡೆದು ಅವನಿಗೆ ಒಳಿತಾದಾಗ ನಿಮ್ಮ ಹೃದಯ ಹಿರಿಹಿರಿ ಹಿಗ್ಗಿರಬಹುದು. *ಜ್ಞಾನೋಕ್ತಿ 23:15, 24.

ವರ್ಷಗಳು ಉರುಳಿದಂತೆ ಮಗನಿಗೆ ನಿಮ್ಮ ಮೇಲಿರುವ ಅಭಿಮಾನ ಹೆಚ್ಚಾಗಿದೆಯಾ? ಅಥವಾ ದೊಡ್ಡವನಾಗುತ್ತಾ ಹೋದಂತೆ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತಾ ಇದೆಯಾ? ತರುಣಾವಸ್ಥೆಗೆ ಕಾಲಿಡುತ್ತಿರುವ ನಿಮ್ಮ ಮಗನೊಂದಿಗೆ ಹೇಗೆ ಆಪ್ತ ಗೆಳೆಯರಾಗಿ ಉಳಿಯಬಲ್ಲಿರಿ? ತಂದೆಗಳೇ, ಇದು ಸುಲಭವಲ್ಲ. ಕೆಲವು ಅಡೆತಡೆಗಳಿವೆ. ಅವನ್ನು ನೋಡೋಣ . . .

ಮೂರು ಮುಖ್ಯ ತಡೆಗಳು

1. ಸಮಯವಿಲ್ಲ: ಅನೇಕ ದೇಶಗಳಲ್ಲಿ ಮನೆಗೆ ದುಡಿದು ತಂದು ಹಾಕುವುದು ಹೆಚ್ಚಾಗಿ ಅಪ್ಪಂದಿರೇ. ಹೆಚ್ಚಿನವರು ಇಡೀ ದಿನ ಕೆಲಸ ಮಾಡಿ ರಾತ್ರಿ ಮನೆಗೆ ತಡವಾಗಿ ಬರಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ತಂದೆಯಂದಿರು ಮಕ್ಕಳೊಂದಿಗೆ ಕಳೆಯುವ ಸಮಯ ತೀರ ಕೊಂಚ. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಗನುಸಾರ ಅಲ್ಲಿನ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ಕಳೆಯುವ ಸಮಯ ದಿನಕ್ಕೆ 12 ನಿಮಿಷಕ್ಕಿಂತಲೂ ಕಡಿಮೆ.

ಯೋಚಿಸಿ ನೋಡಿ: ನಿಮ್ಮ ಹುಡುಗನೊಂದಿಗೆ ಎಷ್ಟು ಸಮಯ ಕಳೆಯುತ್ತೀರಿ? ನೀವು ಅವನೊಟ್ಟಿಗೆ ದಿನಾ ಎಷ್ಟು ಸಮಯ ಕಳೆಯುತ್ತೀರಿ ಎಂದು ಒಂದೆರಡು ವಾರ ಬರೆದಿಡಬಾರದೇಕೆ? ಈ ದಾಖಲೆ ನೋಡಿದಾಗ ನೀವು ಸಾಕಷ್ಟು ಸಮಯ ಕಳೆಯುತ್ತಿಲ್ಲವೆಂದು ಅರಿವಾಗಿ ನಿಮಗೇ ದಂಗಾಗಬಹುದು!

2. ಒಳ್ಳೇ ಮಾದರಿ ಇಲ್ಲ: ಕೆಲವು ತಂದೆಯಂದಿರಿಗೆ ತಮ್ಮ ತಂದೆಗಳೊಟ್ಟಿಗೆ ಆಪ್ತ ಬಾಂಧವ್ಯ ಇರಲಿಲ್ಲ. ಫ್ರಾನ್ಸ್‌ನಲ್ಲಿರುವ ಝಾನ್‌-ಮರೀ ಎಂಬವರು “ನಾನೂ ಅಪ್ಪ ಮಾತಾಡಿದ್ದೇ ಅಪರೂಪ” ಎಂದು ಹೇಳುತ್ತಾರೆ. ಇದರಿಂದ ಝಾನ್‌-ಮರೀ ಮೇಲಾದ ಪ್ರಭಾವ? “ನನಗೂ ನನ್ನ ಹುಡುಗರನ್ನು ಸರಿಯಾಗಿ ಮಾತಾಡಿಸಲಿಕ್ಕೆ ಬರುವುದಿಲ್ಲ. ಇಂಥೆಲ್ಲ ಸಮಸ್ಯೆ ಬರುತ್ತೆ ಅಂತ ನಾನು ನೆನಸಿಯೇ ಇರಲಿಲ್ಲ.” ಬೇರೆ ಕೆಲವರ ವಿಷಯದಲ್ಲಿ ಗಮನಿಸಿದರೆ ಅವರಿಗೆ ತಮ್ಮ ತಂದೆಯ ಒಳ್ಳೇ ಪರಿಚಯ ಇದ್ದರೂ ಒಳ್ಳೇ ಸಂಬಂಧ ಇರಲ್ಲ. ಫಿಲಿಪ್‌ (43) ಹೇಳುವುದು: “ಅಪ್ಪನಿಗೆ ನನ್ನ ಮೇಲೆ ಪ್ರೀತಿ ಇದ್ದರೂ ಅದನ್ನು ತೋರಿಸಲು ಕಷ್ಟವಾಗುತ್ತಿತ್ತು. ನನಗೂ ಅದೇ ಸಮಸ್ಯೆ. ನನ್ನ ಮಗನ ಮೇಲಿರುವ ಪ್ರೀತಿ ತೋರಿಸಲು ಕಷ್ಟವಾಗುತ್ತಿದೆ. ಆದರೂ ನಾನು ತುಂಬ ಪ್ರಯತ್ನ ಮಾಡುತ್ತಿದ್ದೇನೆ.”

ಯೋಚಿಸಿ ನೋಡಿ: ನಿಮ್ಮ ತಂದೆ ನಿಮ್ಮ ಜೊತೆ ನಡೆದುಕೊಂಡಂತೆ ನಿಮ್ಮ ಮಗನ ಜೊತೆ ನಡೆದುಕೊಳ್ಳುತ್ತೀರಾ? ನಿಮ್ಮ ತಂದೆ ತರಾನೇ ಮಾಡುತ್ತಿದ್ದೀರೆಂದು ಅನಿಸಿದೆಯಾ? ಅವರ ಯಾವ ಒಳ್ಳೇ/ಕೆಟ್ಟ ರೂಢಿಗಳನ್ನು ಅನುಸರಿಸುತ್ತಿದ್ದೀರಿ?

3. ಸಮಾಜ ಸಮ್ಮತಿಸುವುದಿಲ್ಲ: ಕೆಲವು ಸಂಸ್ಕೃತಿಗಳಲ್ಲಿ ಮಕ್ಕಳ ಲಾಲನೆಪಾಲನೆಯ ಹೊಣೆ ತಂದೆಗೆ ಇರುವುದಿಲ್ಲ. ಪಾಶ್ಚಿಮಾತ್ಯ ಯೂರೋಪ್‌ ದೇಶವೊಂದರಲ್ಲಿ ಬೆಳೆದ ಲೂಕಾ ಎಂಬವರ ಹೇಳಿಕೆ: “ಮಕ್ಕಳನ್ನು ನೋಡಿಕೊಳ್ಳುವುದು ಹೆಂಡತಿ ಕೆಲಸ ಎಂಬುದು ನನ್ನ ಊರಿನ ಜನರ ಅಭಿಪ್ರಾಯ.” ತಂದೆಗಳು ತುಂಬ ‘ಸ್ಟ್ರಿಕ್ಟ್‌’ ಇರಬೇಕು, ಹೆಚ್ಚು ಸಲಿಗೆ ಕೊಡಬಾರದೆಂದು ಬೇರೆ ಸಂಸ್ಕೃತಿಗಳಲ್ಲಿ ಹೇಳಲಾಗುತ್ತದೆ. ಜಾರ್ಜ್‌ ಆಫ್ರಿಕ ಮೂಲದವರು. ಅವರನ್ನುವುದು “ನನ್ನ ಸಂಸ್ಕೃತಿಯಲ್ಲಿ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ಆಟ ಆಡಲ್ಲ. ತಮ್ಮ ಅಧಿಕಾರ ಕಡಿಮೆ ಆಗಿಬಿಡುತ್ತೆ ಅನ್ನೋ ಭಯ. ಆದ್ದರಿಂದ ನನಗೂ ಮಗನೊಂದಿಗೆ ನಕ್ಕುನಲಿಯುವುದು ಸ್ವಲ್ಪ ಕಷ್ಟಾನೇ.”

ಯೋಚಿಸಿ ನೋಡಿ: ನಿಮ್ಮ ಸಂಸ್ಕೃತಿಯಲ್ಲಿ ತಂದೆಯ ಪಾತ್ರ ಏನು? ಮಕ್ಕಳನ್ನು ಬೆಳೆಸುವುದು ಹೆಂಡತಿಯ ಕೆಲಸವೆಂದು ಜನ ಅನ್ನುತ್ತಾರಾ? ತಂದೆಯಂದಿರು ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ತೋರಿಸುವಂತೆ ಪ್ರೋತ್ಸಾಹಿಸುತ್ತಾರಾ? ಹಾಗೆ ಮಾಡಬಾರದೆಂದು ಹೇಳುತ್ತಾರಾ?

ತಂದೆಯಾಗಿರುವ ನಿಮ್ಮ ಮುಂದೆ ಈ ತಡೆಗಳಿರುವಲ್ಲಿ ಅವನ್ನು ಹೇಗೆ ತೆಗೆದುಹಾಕಬಲ್ಲಿರಿ? ತಿಳಿದುಕೊಳ್ಳಬೇಕಾ? ಮುಂದೆ ಇದೆ ಉಪಯುಕ್ತ ಸಲಹೆ.

ಮಗ ದೊಡ್ಡವನಾಗುವ ವರೆಗೆ ಕಾಯಬೇಡಿ

ಅಪ್ಪ ತರಾನೇ ಮಾಡಬೇಕು ಎಂಬ ಗಂಡುಮಕ್ಕಳ ಆಸೆ ಅವರಿಗೆ ಹುಟ್ಟಿನಿಂದಲೇ ಬಂದಂತೆ ಕಾಣುತ್ತದೆ. ಆ ಎಳೇ ಮನಸ್ಸಿನ ಆಸೆಯನ್ನು ಪೋಷಿಸಿ. ಅದನ್ನು ಹೇಗೆ ಮಾಡಬಲ್ಲಿರಿ? ನಿಮ್ಮ ಮಗನೊಟ್ಟಿಗೆ ಸಮಯ ಕಳೆಯಲು ಏನು ಮಾಡಬಲ್ಲಿರಿ?

ನಿಮ್ಮ ದೈನಂದಿನ ಕೆಲಸಗಳಲ್ಲಿ ಸಾಧ್ಯವಿರುವಾಗೆಲ್ಲ ಮಗನನ್ನೂ ಶಾಮೀಲು ಮಾಡಿ. ನೀವು ಏನಾದರೂ ಮನೆಕೆಲಸ ಮಾಡುತ್ತಿದ್ದರೆ ಅವನ ಕೈಯಲ್ಲಿ ಒಂದು ಚಿಕ್ಕ ಪೊರಕೆ ಅಥವಾ ಚಿಕ್ಕ ಗುದ್ದಲಿ ಕೊಟ್ಟು ಸಹಾಯ ಮಾಡುವಂತೆ ಹೇಳಿ. ಅವನ ‘ಹೀರೋ’ ಆಗಿರುವ ನಿಮ್ಮ ಜೊತೆ ಜೊತೆ ಕೆಲಸಮಾಡಲು ಅವನಿಗೆ ತುಂಬ ಖುಷಿಯಾಗುವುದು. ಕೆಲಸ ಮುಗಿಸಲು ಸ್ವಲ್ಪ ತಡವಾಗಬಹುದು ನಿಜ. ಆದರೆ ನಿಮ್ಮಿಬ್ಬರ ಬಾಂಧವ್ಯ ಗಟ್ಟಿಯಾಗುತ್ತದೆ. ದುಡಿಮೆಯ ಸಂಬಂಧದಲ್ಲಿ ಅವನಿಗೆ ಒಂದು ನೀತಿ ಕಲಿಸಿಕೊಟ್ಟ ಹಾಗೆಯೂ ಆಗುತ್ತದೆ. ಇದು ಹೊಸ ವಿಚಾರವೇನಲ್ಲ. ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಕ್ಕಳನ್ನೂ ಒಳಗೂಡಿಸಬೇಕು, ಇಂಥ ಸಂದರ್ಭಗಳಲ್ಲಿ ಅವರೊಂದಿಗೆ ಮನಬಿಚ್ಚಿ ಮಾತಾಡಬೇಕು, ಕಲಿಸಬೇಕು ಎಂದು ಬೈಬಲ್‌ ಸಾವಿರಾರು ವರ್ಷಗಳ ಹಿಂದೆಯೇ ಅಪ್ಪಂದಿರಿಗೆ ಪ್ರೋತ್ಸಾಹ ನೀಡಿತ್ತು. (ಧರ್ಮೋಪದೇಶಕಾಂಡ 6:6-9) ಇದು ನಮ್ಮ ದಿನಕ್ಕೂ ಅನ್ವಯಿಸುವ ಉತ್ತಮ ಉಪದೇಶ.

ಕೆಲಸ ಮಾತ್ರವಲ್ಲ ನಿಮ್ಮ ಮಗನೊಟ್ಟಿಗೆ ಆಟವಾಡಲು ಸಹ ಸಮಯ ಮಾಡಿಕೊಳ್ಳಿ. ಆಟೋಟದಿಂದ ಮೋಜುಮಸ್ತಿ ಜೊತೆಗೆ ಮಕ್ಕಳಿಗೆ ಬೇರೆ ಪ್ರಯೋಜನಗಳೂ ಇವೆ. ಅಪ್ಪಂದಿರು ತಮ್ಮ ಎಳೇ ಮಕ್ಕಳೊಂದಿಗೆ ಆಟವಾಡುವಾಗ ಹೊಸ ಹೊಸ ವಿಷಯಗಳನ್ನು ಮಾಡಿ ನೋಡಲು ಮಕ್ಕಳಲ್ಲಿ ಧೈರ್ಯ ತುಂಬಿಸುತ್ತಾರೆ ಎಂದು ಸಂಶೋಧನೆಗಳು ತೋರಿಸುತ್ತವೆ.

ತಂದೆ-ಮಗ ಒಟ್ಟಿಗೆ ಆಟವಾಡುವುದರಿಂದ ಮತ್ತೊಂದು ದೊಡ್ಡ ಪ್ರಯೋಜನವೂ ಇದೆ. “ಒಬ್ಬ ಹುಡುಗನು ತಂದೆಯೊಂದಿಗೆ ಮುಕ್ತವಾಗಿ ಸಂವಾದಿಸುವುದು ಆಡವಾಡುವ ಸಮಯದಲ್ಲೇ” ಎನ್ನುತ್ತಾರೆ ಮೀಶೆಲ್‌ ಫೀಜ್‌ ಎಂಬ ಸಂಶೋಧಕ. ಮಗನನ್ನು ತಂದೆ ಎಷ್ಟು ಪ್ರೀತಿಸುತ್ತಾನೆಂದು ಆಟವಾಡುವಾಗ ಮಾತು ಹಾಗೂ ಕ್ರಿಯೆಯಲ್ಲಿ ತೋರಿಸಬಹುದು. ಇದರಿಂದ ಮಗನೂ ಪ್ರೀತಿ ತೋರಿಸಲು ಕಲಿಯುತ್ತಾನೆ. ಜರ್ಮನಿಯಲ್ಲಿ ವಾಸವಾಗಿರುವ ಆ್ಯಂದ್ರೆ ಎಂಬವರ ಅನುಭವ ಕೇಳಿ: “ನನ್ನ ಮಗ ಇನ್ನೂ ಚಿಕ್ಕವನಿದ್ದಾಗ ನಾವಿಬ್ಬರೂ ಸೇರಿ ಆಟವಾಡುತ್ತಿದ್ದೆವು. ನಾನವನನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದೆ. ಅವನೂ ಅದನ್ನೇ ಮಾಡಲು ಕಲಿತುಕೊಂಡ.”

ಅಪ್ಪ-ಮಗನ ಬಾಂಧವ್ಯ ಬಲಗೊಳಿಸಲು ಇರುವ ಇನ್ನೊಂದು ಅವಕಾಶ ಮಲಗುವ ಸಮಯ. ಪ್ರತಿರಾತ್ರಿ ಒಂದು ಕಥೆ ಓದಿ ಹೇಳಿ. ಅವನು ಆ ದಿನವಿಡೀ ಏನಾಯಿತೆಂದು ಹೇಳುವಾಗ ಕಿವಿಗೊಡಿ. ನೀವು ಹೀಗೆ ಮಾಡಿದರೆ ನಿಮ್ಮ ಮಗ ದೊಡ್ಡವನಾದ ಮೇಲೂ ತನ್ನ ಮನಸ್ಸಿನಲ್ಲಿರುವುದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವನು.

ಇಬ್ಬರಿಗೂ ಇಷ್ಟವಾದ ವಿಷಯಗಳನ್ನು ಮಾಡಿ

ಕೆಲವು ತಂದೆಗಳು ಹದಿವಯಸ್ಸಿನ ಮಗನ ಹತ್ತಿರ ಮಾತಾಡಲು ಹೋದರೂ ಮಗ ಒಳ್ಳೇ ಪ್ರತಿಕ್ರಿಯೆ ತೋರಿಸದಿರಬಹುದು. ಏನಾದರೂ ಕೇಳಿದರೆ ಸರಿಯಾಗಿ ಉತ್ತರ ಕೊಡದಿರಬಹುದು. ‘ಇವನಿಗೆ ನನ್ನ ಜೊತೆ ಮಾತಾಡಲು ಮನಸ್ಸಿಲ್ಲ’ ಎಂದು ತಕ್ಷಣ ತೀರ್ಮಾನಿಸಬೇಡಿ. ನೀವು ಅವನೊಂದಿಗೆ ಮಾತಾಡುವ ವಿಧವನ್ನು ಬದಲಾಯಿಸಿದರೆ ಬಹುಶಃ ಅವನು ಚೆನ್ನಾಗಿ ಮಾತಾಡಬಹುದು.

ಫ್ರಾನ್ಸ್‌ನಲ್ಲಿರುವ ಜಾಕ್‌ಗೆ ತಮ್ಮ ಮಗ ಜೆರೋಮ್‌ನೊಟ್ಟಿಗೆ ಮಾತಾಡಲು ಕೆಲವೊಮ್ಮೆ ಕಷ್ಟವಾಗುತ್ತಿತ್ತು. ಅವನನ್ನು ಹಿಡಿದು ನಿಲ್ಲಿಸಿ ಮಾತಾಡುವ ಬದಲು ತಮ್ಮ ವಿಧಾನವನ್ನು ಬದಲಾಯಿಸಿದರು—ಅವನೊಂದಿಗೆ ಕಾಲ್ಚೆಂಡಾಟ ಆಡಿದರು. ಪರಿಣಾಮ? “ಓಡಿ-ಆಡಿ ಸುಸ್ತಾದ ಮೇಲೆ ಸ್ವಲ್ಪ ಹೊತ್ತು ಹುಲ್ಲಿನ ಮೇಲೆ ಕೂತುಕೊಳ್ಳುತ್ತಿದ್ದೆವು. ನನ್ನ ಮಗ ಹೆಚ್ಚಾಗಿ ಅಂಥ ಸಮಯದಲ್ಲಿ ಮನಬಿಚ್ಚಿ ಮಾತಾಡುತ್ತಿದ್ದ. ನಾವಿಬ್ಬರೂ ಒಟ್ಟಿಗಿದ್ದದ್ದು, ಬೇರಾರೂ ನಮ್ಮೊಟ್ಟಿಗೆ ಇಲ್ಲದಿದ್ದದ್ದು ನಮ್ಮಿಬ್ಬರ ಮಧ್ಯೆ ಅತ್ಯಾಪ್ತ ಬಂಧ ಬೆಳೆಯಿತು” ಎನ್ನುತ್ತಾರೆ ಜಾಕ್‌.

ನಿಮ್ಮ ಮಗನಿಗೆ ಆಟೋಟ ಇಷ್ಟವಿಲ್ಲದಿದ್ದರೆ? ನಕ್ಷತ್ರಗಳನ್ನು ನೋಡುತ್ತಾ ಆ್ಯಂದ್ರೆ ತನ್ನ ಮಗನೊಂದಿಗೆ ತಾಸುಗಟ್ಟಲೆ ಕೂತುಕೊಳ್ಳುತ್ತಿದ್ದರು. ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅವರಂದದ್ದು: “ರಾತ್ರಿಯ ತಂಗಾಳಿಯಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಂಡು, ಕೈಯಲ್ಲಿ ಚಹಾ ಕಪ್‌ ಹಿಡ್ಕೊಂಡು, ಆರಾಮಕುರ್ಚಿಗಳಲ್ಲಿ ಕೂತು ಆಕಾಶ ನೋಡುತ್ತಿದ್ದೆವು. ಆ ಮಿನುಗುವ ನಕ್ಷತ್ರಗಳನ್ನು ಸೃಷ್ಟಿಸಿದಾತನ ಬಗ್ಗೆ ಮಾತಾಡುತ್ತಿದ್ದೆವು. ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತಾಡುತ್ತಿದ್ದೆವು. ನಾವು ಮಾತಾಡದ ವಿಷಯವೇ ಇರಲಿಲ್ಲ!”—ಯೆಶಾಯ 40:25, 26.

ನಿಮ್ಮ ಮಗನಿಗೆ ಇಷ್ಟವಿರುವ ವಿಷಯಗಳು ನಿಮಗೆ ಇಷ್ಟವಿಲ್ಲದಿದ್ದರೆ? ಆಗ ನಿಮಗೆ ಇಷ್ಟವಾದ ವಿಷಯಗಳನ್ನು ಬದಿಗಿಡಬೇಕು. (ಫಿಲಿಪ್ಪಿ 2:4) ದಕ್ಷಿಣ ಆಫ್ರಿಕದಲ್ಲಿರುವ ಈಯನ್‌ ಇದನ್ನೇ ಮಾಡಿದರು. “ನನಗೆ ಕ್ರೀಡೆಗಳು ಬಲು ಇಷ್ಟ. ಆದರೆ ನನ್ನ ಮಗ ವಾನ್‌ಗೆ ಏರೋಪ್ಲೇನು ಕಂಪ್ಯೂಟರ್‌ ಎಂದರೆ ಪಂಚಪ್ರಾಣ. ಆದ್ದರಿಂದ ನಾನೂ ಅವುಗಳಲ್ಲಿ ಆಸಕ್ತಿ ಬೆಳೆಸಿಕೊಂಡೆ. ಅವನನ್ನು ಏರ್‌ ಶೋಗಳಿಗೆ ಕೊಂಡೊಯ್ಯುತ್ತಿದ್ದೆ. ಕಂಪ್ಯೂಟರ್‌ನಲ್ಲಿ ಅವನೊಂದಿಗೆ ಏರೋಪ್ಲೇನ್‌ ಆಟಗಳನ್ನು ಆಡುತ್ತಿದ್ದೆ. ಅವನು ಇಷ್ಟಪಡುವ ವಿಷಯಗಳಲ್ಲಿ ನಾನೂ ಸೇರಿಕೊಂಡದ್ದರಿಂದ ವಾನ್‌ ನನ್ನೊಂದಿಗೆ ಹೆಚ್ಚು ಮನಬಿಚ್ಚಿ ಮಾತಾಡುತ್ತಿದ್ದ” ಎನ್ನುತ್ತಾರೆ ಈಯನ್‌.

ಮಗನ ಆತ್ಮವಿಶ್ವಾಸ ಹೆಚ್ಚಿಸಿ

ನಿಮ್ಮ ಪುಟ್ಟ ಒಂದು ಹೊಸ ಕೌಶಲ ಕಲಿತು “ನೋಡಿ ಪಪ್ಪಾ, ನೋಡಿ” ಅಂತ ಏನಾದರೂ ಮಾಡಿತೋರಿಸಿದ್ದಾನಾ? ಈಗ ಬೆಳೆದು ದೊಡ್ಡವನಾಗಿರುವಲ್ಲಿ ಇದೇ ರೀತಿ ನಿಮ್ಮ ಮೆಚ್ಚುಗೆ ಬಯಸಿ ಬರುತ್ತಾನಾ? ಇರಲಿಕ್ಕಿಲ್ಲ. ಆದರೆ ಅವನೊಬ್ಬ ಆತ್ಮವಿಶ್ವಾಸವುಳ್ಳ ವ್ಯಕ್ತಿಯಾಗಿ ಬೆಳೆಯಬೇಕಾದರೆ ನಿಮ್ಮ ಮೆಚ್ಚುಗೆ ಖಂಡಿತ ಬೇಕು.

ಯೆಹೋವ ದೇವರು ತನ್ನ ಒಬ್ಬ ಮಗನಾದ ಯೇಸುವಿನೊಂದಿಗೆ ವ್ಯವಹರಿಸಿದ ರೀತಿಯನ್ನು ಗಮನಿಸಿ. ಅವನು ಭೂಮಿ ಮೇಲೆ ಒಂದು ವಿಶೇಷ ಕಾರ್ಯದಲ್ಲಿ ತೊಡಗಲಿದ್ದಾಗ ದೇವರು “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಬಹಿರಂಗವಾಗಿ ತನಗಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದನು. (ಮತ್ತಾಯ 3:17; 5:48) ನಿಮ್ಮ ಮಗನನ್ನು ತಿದ್ದುವ, ಅವನಿಗೆ ಕಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ನಿಜ. (ಎಫೆಸ 6:4) ಆದರೆ ಅವನು ಏನಾದರೂ ಒಳ್ಳೇದು ಮಾಡಿದಾಗ, ಹೇಳಿದಾಗ ಶಾಭಾಷ್‌ ಹೇಳಲೂ ಮುಂದಾಗುತ್ತೀರಾ?

ಮಕ್ಕಳಿಗೆ ಶಾಭಾಷ್‌ ಹೇಳುವುದು, ಮಮಕಾರ ತೋರಿಸುವುದೆಂದರೆ ಕೆಲವು ಗಂಡಸರಿಗೆ ತುಂಬ ಕಷ್ಟ. ಏಕೆಂದರೆ ಇವರ ಹೆತ್ತವರು ಇವರ ಸಾಧನೆಗಳಿಗಿಂತ ತಪ್ಪುಗಳನ್ನೇ ಎತ್ತಿ ಆಡಿದವರಾಗಿರಬೇಕು. ನೀವು ಇಂಥ ಕುಟುಂಬದಲ್ಲಿ ಬೆಳೆದಿದ್ದರೂ ನಿಮ್ಮ ಮಗನ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ವಿಶೇಷ ಪ್ರಯತ್ನಮಾಡಿ. ನೀವೇನು ಮಾಡಬಹುದು? ಹಿಂದೆ ತಿಳಿಸಿದ ಲೂಕಾ ಮನೆಗೆಲಸಗಳನ್ನು ತನ್ನ 15 ವರ್ಷದ ಮಗ ಮಾನ್ವೆಲ್‌ನೊಂದಿಗೆ ಸೇರಿ ಮಾಡುತ್ತಾರೆ. “ನೀನೇ ಮಾಡು ಎಂದು ಕೆಲವೊಮ್ಮೆ ಒಂದು ಕೆಲಸವನ್ನು ಮಾನ್ವೆಲ್‌ಗೆ ಕೊಡುತ್ತೇನೆ. ಬೇಕಿದ್ದರೆ ಸಹಾಯ ಮಾಡುತ್ತೇನೆ ಎಂದೂ ಹೇಳುತ್ತೇನೆ. ಹೆಚ್ಚಾಗಿ ಕೆಲಸವನ್ನು ಅವನೊಬ್ಬನೇ ಮುಗಿಸಿಬಿಡುತ್ತಾನೆ. ಆಗ ಅವನಿಗೆ ತುಂಬ ಸಂತೋಷವಾಗುತ್ತದೆ. ಅವನ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ನಾನೂ ಅವನಿಗೆ ಶಾಭಾಷ್‌ ಅಂತೇನೆ. ಕೆಲವೊಮ್ಮೆ ಅವನೆಣಿಸಿದಷ್ಟು ಚೆನ್ನಾಗಿ ಮಾಡದಿದ್ದರೆ ಅವನು ಮಾಡಿದ ಪ್ರಯತ್ನಕ್ಕಾಗಿ ಅವನನ್ನು ಶ್ಲಾಘಿಸುತ್ತೇನೆ” ಎನ್ನುತ್ತಾರೆ ಲೂಕಾ.

ನಿಮ್ಮ ಮಗ ಜೀವನದಲ್ಲಿ ದೊಡ್ಡ ಗುರಿಗಳನ್ನು ಮುಟ್ಟಲೂ ಸಹಾಯಮಾಡುವ ಮೂಲಕ ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ ನೀವು ಬಯಸಿದಷ್ಟು ಬೇಗನೆ ಆ ಗುರಿಗಳನ್ನು ಅವನು ಮುಟ್ಟದಿದ್ದರೆ? ಅಥವಾ ನಿಮ್ಮ ಮನಸ್ಸಿನಲ್ಲಿರುವ ಗುರಿಗಳಿಗಿಂತ ಬೇರೆಯೇ ಆದ ಆದರೆ ತಪ್ಪಾಗಿರದ ಗುರಿಗಳನ್ನು ಅವನು ಆಯ್ಕೆಮಾಡಿದರೆ? ಸ್ವಲ್ಪ ಹೊಂದಿಸಿಕೊಳ್ಳಿ. ಮುಂಚೆ ತಿಳಿಸಲಾದ ಜಾಕ್‌ ಹೇಳುವುದು: “ಮುಟ್ಟಸಾಧ್ಯವಿರುವ ಗುರಿಗಳನ್ನಿಡಲು ನನ್ನ ಮಗನಿಗೆ ಸಹಾಯಮಾಡುತ್ತೇನೆ. ಆ ಗುರಿಗಳು ಏನಾಗಿರಬೇಕೆಂದು ನಾನು ತೀರ್ಮಾನಿಸುವುದಿಲ್ಲ. ಅವನೇ ತೀರ್ಮಾನಿಸಬೇಕು. ಆ ಗುರಿಗಳನ್ನು ತನ್ನದೇ ಆದ ವೇಗದಲ್ಲಿ ಮುಟ್ಟಲು ಬಿಡುತ್ತೇನೆ.” ನಿಮ್ಮ ಮಗನ ಅಭಿಪ್ರಾಯಗಳಿಗೆ ಕಿವಿಗೊಟ್ಟು, ಅವನ ಸಾಮರ್ಥ್ಯಗಳನ್ನು ಪ್ರಶಂಸಿಸಿ, ಸೋಲುಗಳನ್ನು ಮೆಟ್ಟಿನಿಲ್ಲಲು ಹುರಿದುಂಬಿಸಿದರೆ ಅವನು ತನ್ನ ಗುರಿಗಳನ್ನು ಮುಟ್ಟುವುದು ಖಾತ್ರಿ.

ನಿಮ್ಮಿಬ್ಬರ ಸಂಬಂಧದಲ್ಲಿ ಏರುಪೇರಾಗುವುದು ಸಹಜ. ಆದರೆ ತನ್ನ ಒಳಿತನ್ನು ಬಯಸುವ ವ್ಯಕ್ತಿಯಿಂದ ನಿಮ್ಮ ಮಗ ಹೇಗೆ ತಾನೇ ದೂರವಿರಬಲ್ಲ ಹೇಳಿ . . . ಜೀವನದುದ್ದಕ್ಕೂ ನಿಮ್ಮ ಆಪ್ತ ಗೆಳೆಯನಾಗಿರಲು ಬಯಸುವನು. (w11-E 11/01)

[ಪಾದಟಿಪ್ಪಣಿ]

^ ಪ್ಯಾರ. 2 ಈ ಲೇಖನ ಅಪ್ಪ-ಮಗನ ಆಪ್ತ ಬಾಂಧವ್ಯದ ಕುರಿತು ಮಾತಾಡುತ್ತದಾದರೂ ಈ ಸೂತ್ರಗಳು ಅಪ್ಪ-ಮಗಳ ಸಂಬಂಧಕ್ಕೂ ಅನ್ವಯಿಸುತ್ತವೆ.