ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿದು ನಡಿಸುತ್ತೇನೆ’

‘ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿದು ನಡಿಸುತ್ತೇನೆ’

ದೇವರ ಸಮೀಪಕ್ಕೆ ಬನ್ನಿರಿ

‘ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿದು ನಡಿಸುತ್ತೇನೆ’

ತಂದೆ ತನ್ನ ಪುಟ್ಟ ಮಗನಿಗೆ “ಕೈ ಹಿಡ್ಕೋ” ಎನ್ನುತ್ತಾ ಗಿಜಿಗುಟ್ಟುವ ರಸ್ತೆ ದಾಟಲು ಅನುವಾಗುತ್ತಾನೆ. ತಂದೆಯ ಹಸ್ತ ಆ ಪುಟಾಣಿ ಕೈಯನ್ನು ಗಟ್ಟಿಯಾಗಿ ಹಿಡಿದಾಗ ಬಾಲಕನ ಹೆದರಿಕೆ ಹೋಗಿ ಸುರಕ್ಷಿತ ಭಾವನೆ ಮೂಡುತ್ತೆ. ಅಂತೆಯೇ ಬವಣೆ ತುಂಬಿರುವ ಬದುಕಿನ ಹಾದಿಯಲ್ಲಿ ನಮ್ಮ ಕೈಹಿಡಿದು ನಡೆಸುವವರೊಬ್ಬರಿದ್ದರೆ ಎಷ್ಟು ಚೆನ್ನ! ಅಂಥವರೊಬ್ಬರಿದ್ದಾರೆಂದು ದೇವಪ್ರವಾದಿ ಯೆಶಾಯನು ತಿಳಿಸುತ್ತಾನೆ.—ಯೆಶಾಯ 41:10, 13 ಓದಿ.

ಆ ಮಾತುಗಳನ್ನು ಪ್ರವಾದಿ ಯೆಶಾಯ ಪ್ರಾಚೀನ ಇಸ್ರೇಲಿಗಳಿಗೆ ಬರೆದನು. ಇವರನ್ನು ದೇವರು ತನ್ನ ಸ್ವಕೀಯಜನರೆಂದು ಆಯ್ದುಕೊಂಡಿದ್ದನು. ಆದರೂ ಅವರ ಸುತ್ತಮುತ್ತ ತುಂಬ ಶತ್ರುಗಳಿದ್ದರು. (ವಿಮೋಚನಕಾಂಡ 19:5) ಹಾಗೆಂದು ಇಸ್ರೇಲಿಗಳು ಹೆದರಬೇಕಾಗಿತ್ತೇ? ಯೆಹೋವ ದೇವರು ಯೆಶಾಯನ ಮೂಲಕ ಅವರಿಗೆ ಧೈರ್ಯ ತುಂಬಿಸುವ ಒಂದು ಸಂದೇಶವನ್ನು ರವಾನಿಸಿದನು. ಆ ಮಾತುಗಳನ್ನು ನಾವೀಗ ಅವಲೋಕಿಸೋಣ. ಅವು ಇಂದಿರುವ ದೇವಜನರಿಗೂ ಸಾಂತ್ವನ ಕೊಡುತ್ತವೆ.—ರೋಮನ್ನರಿಗೆ 15:4.

“ನೀನಂತು ಹೆದರಬೇಡ” ಎಂದು ಯೆಹೋವನು ಅಭಯ ನೀಡುತ್ತಾನೆ. (ವಚನ 10) ಅದು ಪೊಳ್ಳು ಭರವಸೆಯಲ್ಲ. ಏಕೆಂದರೆ “ನಾನೇ ನಿನ್ನೊಂದಿಗಿದ್ದೇನೆ” ಎಂದು ಕಾರಣವನ್ನೂ ಕೊಡುತ್ತಾನೆ. ಎಲ್ಲೋ ದೂರದಲ್ಲಿದ್ದು ಕಷ್ಟಕಾಲದಲ್ಲಿ ಓಡೋಡಿ ಬಂದು ಸಹಾಯ ಮಾಡುತ್ತೇನೆಂದು ಆತ ಹೇಳುತ್ತಿಲ್ಲ. ಸದಾ ನಿಮ್ಮೊಂದಿಗೇ ಇದ್ದು ಸಹಾಯ ನೀಡುತ್ತೇನೆಂದು ತಿಳಿಸುತ್ತಿದ್ದಾನೆ. ಇದು ನೆಮ್ಮದಿ ನೀಡುವ ವಿಚಾರವಲ್ಲವೇ?

“ದಿಗ್ಭ್ರಮೆಗೊಳ್ಳದಿರು” ಎನ್ನುತ್ತಾ ಯೆಹೋವನು ಮತ್ತೂ ಭರವಸೆ ನೀಡುತ್ತಾನೆ. (ವಚನ 10) ಇಲ್ಲಿ ಬಳಸಲಾಗಿರುವ ಹೀಬ್ರು ಭಾಷೆಯ ಕ್ರಿಯಾಪದ “ಯಾವ ದಿಕ್ಕಿನಿಂದ ಅಪಾಯ ಬರುವುದೋ ಎಂದು ಸುತ್ತಲೂ ನೋಡುತ್ತಿರುವುದನ್ನು” ಸೂಚಿಸುತ್ತದೆ. ತನ್ನ ಜನರು ಯಾಕೆ ಹೆದರುವ ಅಗತ್ಯವಿಲ್ಲವೆಂದು ಹೇಳುತ್ತಾ ಯೆಹೋವನು ಅನ್ನುವುದು: “ನಾನೇ ನಿನ್ನ ದೇವರು.” ಇದಕ್ಕಿಂತ ಹೆಚ್ಚಿನ ಭರವಸೆ ಬೇಕೇ? ಯೆಹೋವ ದೇವರು “ಪರಾತ್ಪರ,” “ಸರ್ವಶಕ್ತ.” (ಕೀರ್ತನೆ 91:1) ಇಂಥ ದೇವರು ಇಸ್ರೇಲಿಗಳ ಜತೆಗಿದ್ದಾಗ ಅವರು ಭಯಪಡುವುದಕ್ಕೆ ಕಾರಣವಾದರೂ ಇದೆಯೇ?

ಇಂದಿರುವ ಯೆಹೋವನ ಆರಾಧಕರ ಬಗ್ಗೆ ಏನು? ಅವರು ಭಯಪಡಬೇಕೇ? “ನನ್ನ . . . ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ” ಎಂದು ದೇವರು ಮಾತುಕೊಡುತ್ತಾನೆ. (ವಚನ 10) ‘ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿದು ನಡಿಸುತ್ತೇನೆ’ ಎಂದು ಹೇಳುತ್ತಾನೆ. (ವಚನ 13) “ಈ ಎರಡು ವಚನಗಳಿಂದ ಅಪ್ಪ ಮತ್ತು ಮಗುವಿನ ಚಿತ್ರಣ ಕಣ್ಮುಂದೆ ಮೂಡುತ್ತದೆ. . . . [ತಂದೆ] ತನ್ನ ಮಗುವನ್ನು ಅಪಾಯದಿಂದ ರಕ್ಷಿಸಲು ಜೊತೆಗಿದ್ದೇನೆಂದು ಹೇಳುವುದಷ್ಟೇ ಅಲ್ಲ ಸದಾ ಜೊತೆಗಿರುತ್ತಾನೆ. ತನ್ನಿಂದ ದೂರ ಎಲ್ಲೂ ಹೋಗದಂತೆ ನೋಡಿಕೊಳ್ಳುತ್ತಾನೆ” ಎನ್ನುತ್ತದೆ ಒಂದು ಪುಸ್ತಕ. ಹಾಗೇ ತನ್ನ ಜನರು ತನ್ನಿಂದ ಬೇರೆಯಾಗುವಂತೆ ಯೆಹೋವನು ಎಂದೂ ಬಿಡನು. ಅವರ ಬದುಕಲ್ಲಿ ಕಷ್ಟದ ಕಾರ್ಗತ್ತಲು ಕವಿದಾಗಲಂತೂ ಹತ್ತಿರದಲ್ಲೇ ಇರುವನು.—ಇಬ್ರಿಯ 13:5, 6.

ಯೆಶಾಯನ ಮಾತುಗಳಿಂದ ಇಂದಿರುವ ಯೆಹೋವನ ಆರಾಧಕರು ಕೂಡ ಅಪಾರ ಸಾಂತ್ವನ ಪಡೆದುಕೊಳ್ಳುತ್ತಾರೆ. “ನಿಭಾಯಿಸಲು ಕಷ್ಟಕರವಾದ [ಈ] ಕಠಿನಕಾಲದಲ್ಲಿ” ನಮಗೆ ಕೆಲವೊಮ್ಮೆ ಜೀವನದ ಜಂಜಾಟಗಳಡಿ ಹೂತುಹೋದ ಅನುಭವವಾಗಬಹುದು. (2 ತಿಮೊಥೆಯ 3:1) ನಾವು ಆ ಕಷ್ಟಕೋಟಲೆಗಳನ್ನು ಒಬ್ಬರೇ ಎದುರಿಸಬೇಕಾಗಿಲ್ಲ. ನಮ್ಮ ಕೈಹಿಡಿದು ನಡೆಸಲು ಯೆಹೋವನು ನಮ್ಮೊಂದಿಗಿದ್ದಾನೆ. ಯಾವುದೇ ಹಿಂಜರಿಕೆಯಿಲ್ಲದೆ ಅಪ್ಪನ ಮೇಲೆ ಪೂರ್ಣ ಭರವಸೆಯಿಡುವ ಮಗುವಿನಂತೆ ನಾವೂ ಸರ್ವಶಕ್ತನ ಕೈಹಿಡಿದು ನಡೆಯೋಣ. ಸರಿಯಾದ ಮಾರ್ಗದಲ್ಲಿ ನಮ್ಮನ್ನು ನಡೆಸಿ, ಕಷ್ಟಕಾಲದಲ್ಲಿ ನೆರವಾಗುತ್ತಾನೆಂಬ ಪೂರ್ಣ ಭರವಸೆ ಇಡೋಣ.—ಕೀರ್ತನೆ 63:7, 8. (w12-E 01/01)