ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುವಾರ್ತೆ ಸಾರಲು ನನ್ನಿಂದ ಆಗುತ್ತದಾ?

ಸುವಾರ್ತೆ ಸಾರಲು ನನ್ನಿಂದ ಆಗುತ್ತದಾ?

ಸುವಾರ್ತೆ ಸಾರಲು ನನ್ನಿಂದ ಆಗುತ್ತದಾ?

ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ ನಮ್ಮ ಅನೇಕ ಸಹೋದರ ಸಹೋದರಿಯರು ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾರೆ. ಲೋಕದ ಸುತ್ತಲೂ ಇಂಥ ಅನೇಕರ ಉದಾಹರಣೆಗಳನ್ನು ನೋಡಬಹುದು. ಲಿತ್ಯುಏನಿಯದ ರಾಜಧಾನಿ ವಿಲ್ನಿಯಸ್‌ನಲ್ಲಿ ವಾಸಿಸುವ ಡಾಲ್ಯ ಎಂಬವರ ಮಾದರಿಯನ್ನು ನಾವೀಗ ನೋಡೋಣ.

ಡಾಲ್ಯ ಮೂವತ್ತರ ಹರೆಯದಲ್ಲಿರುವ ಸಹೋದರಿ. ಹುಟ್ಟಿನಿಂದಲೇ ಮಿದುಳಿನ ಲಕ್ವದಿಂದ ಬಳಲುತ್ತಿದ್ದಾಳೆ. ಆ ರೋಗದ ಕಾರಣ ನಡೆದಾಡಲು, ಕೆಲಸಮಾಡಲು ಅಶಕ್ತಳು. ಮಾತು ಕೂಡ ತುಂಬ ಅಸ್ಪಷ್ಟ. ಮನೆಮಂದಿಯನ್ನು ಬಿಟ್ಟರೆ ಬೇರೆ ಯಾರಿಗೂ ಅಷ್ಟಾಗಿ ಅರ್ಥವಾಗುವುದಿಲ್ಲ. ಅವಳನ್ನು ತಾಯಿ ಗಲಿನ ನೋಡಿಕೊಳ್ಳುತ್ತಾರೆ. ತನ್ನ ಜೀವನ ಕಷ್ಟಕಾರ್ಪಣ್ಯಗಳಿಂದ ತುಂಬಿದ್ದರೂ ಡಾಲ್ಯ ತನ್ನ ಸ್ಥಿತಿಗಾಗಿ ಕೊರಗದೆ ತನ್ನಿಂದಾಗುವುದನ್ನು ಸಂತೋಷದಿಂದ ಮಾಡುತ್ತಾಳೆ. ಇದು ಹೇಗೆ ಸಾಧ್ಯ?

ಗಲಿನ ಹೀಗೆ ಹೇಳುತ್ತಾರೆ: “1999ರಲ್ಲಿ ನನ್ನ ಹತ್ತಿರದ ಸಂಬಂಧಿಯಾದ ಅಪೊಲೊನಿಯ ನಮ್ಮ ಮನೆಗೆ ಬಂದಳು. ಯೆಹೋವನ ಸಾಕ್ಷಿಯಾಗಿದ್ದ ಅವಳಿಗೆ ಬೈಬಲಿನ ಒಳ್ಳೇ ಜ್ಞಾನವಿತ್ತು. ಡಾಲ್ಯ ಅವಳಿಗೆ ಅನೇಕ ಪ್ರಶ್ನೆಗಳನ್ನು ಕೇಳಿದಳು. ಸ್ವಲ್ಪದರಲ್ಲೇ ಬೈಬಲ್‌ ಕಲಿಯಲು ಆರಂಭಿಸಿದಳು. ಡಾಲ್ಯಳ ಮಾತು ಅಪೊಲೊನಿಯಳಿಗೆ ಅರ್ಥವಾಗದಿದ್ದಾಗ ನಾನದನ್ನು ವಿವರಿಸಿ ಹೇಳುವ ಸಲುವಾಗಿ ಕೆಲವೊಮ್ಮೆ ಅಧ್ಯಯನಕ್ಕೆ ಕುಳಿತುಕೊಳ್ಳುತ್ತಿದ್ದೆ. ಡಾಲ್ಯ ಕಲಿಯುತ್ತಿದ್ದ ಪ್ರತಿಯೊಂದು ವಿಷಯ ಅವಳಲ್ಲಿ ಹೆಚ್ಚೆಚ್ಚು ಸಂತೋಷವನ್ನು ಮೂಡಿಸುತ್ತಿದ್ದದನ್ನು ನಾನು ಗಮನಿಸಿದೆ. ಹಾಗಾಗಿ ನಾನೂ ಬೈಬಲ್‌ ಅಧ್ಯಯನ ಸ್ವೀಕರಿಸಿದೆ.”

ಬೈಬಲನ್ನು ಹೆಚ್ಚೆಚ್ಚು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಒಂದು ಪ್ರಶ್ನೆ ಡಾಲ್ಯಳನ್ನು ಕಾಡತೊಡಗಿತು. ಒಂದು ದಿನ ಅವಳದನ್ನು ಅಪೊಲೊನಿಯಳಲ್ಲಿ ಕೇಳಿಯೇ ಬಿಟ್ಟಳು. “ನಡೆಯಲು ಅಶಕ್ತ ಸ್ಥಿತಿಯಲ್ಲಿರುವ ನನ್ನಂಥವಳು ಸಾರಲು ಆಗುತ್ತದಾ?” (ಮತ್ತಾ. 28:19, 20) ಅದಕ್ಕವಳು “ಭಯಪಡಬೇಡ, ಯೆಹೋವನು ಸಹಾಯ ಮಾಡುತ್ತಾನೆ” ಎಂದು ಧೈರ್ಯ ತುಂಬಿದಳು. ಹೌದು, ಯೆಹೋವನು ಸಹಾಯ ಮಾಡಿದನು.

ಡಾಲ್ಯ ಈಗ ಅನೇಕ ವಿಧಗಳಲ್ಲಿ ಸುವಾರ್ತೆ ಸಾರುತ್ತಾಳೆ. ಪತ್ರದ ಮೂಲಕ ಸಾಕ್ಷಿನೀಡುತ್ತಾಳೆ. ಇದಕ್ಕೆ ಕ್ರೈಸ್ತ ಸಹೋದರಿಯರು ಅವಳಿಗೆ ನೆರವಾಗುತ್ತಾರೆ. ಪತ್ರದಲ್ಲಿ ಏನು ಬರೆಯಬೇಕೆಂದು ಡಾಲ್ಯ ಸಹೋದರಿಯರಿಗೆ ತಿಳಿಸುತ್ತಾಳೆ. ಅವರದನ್ನು ಬರೆದು ಕಳುಹಿಸುತ್ತಾರೆ. ಮೊಬೈಲ್‌ನಲ್ಲಿ ಬೈಬಲ್‌ ಸಂದೇಶವನ್ನು ಕಳುಹಿಸುವ ಮೂಲಕವೂ ಡಾಲ್ಯ ಸಾಕ್ಷಿನೀಡುತ್ತಾಳೆ. ಹವಾಮಾನ ಉತ್ತಮವಾಗಿರುವಾಗ ಸಭೆಯವರು ಅವಳನ್ನು ಹತ್ತಿರದ ಪಾರ್ಕ್‌ ಅಥವಾ ಬೀದಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆಕೆ ಜನರೊಂದಿಗೆ ಬೈಬಲ್‌ ಸಂದೇಶ ಹಂಚಿಕೊಳ್ಳುತ್ತಾಳೆ.

ಡಾಲ್ಯ ಮತ್ತವಳ ತಾಯಿ ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಯೆಹೋವನಿಗೆ ಸಮರ್ಪಿಸಿಕೊಂಡು 2004ರ ನವೆಂಬರ್‌ನಲ್ಲಿ ದೀಕ್ಷಾಸ್ನಾನ ಪಡೆದರು. ಇಸವಿ 2008ರ ಸೆಪ್ಟೆಂಬರ್‌ನಲ್ಲಿ ವಿಲ್ನಿಯಸ್‌ನಲ್ಲಿ ಪೋಲಿಷ್‌ ಭಾಷೆಯ ಗುಂಪು ಆರಂಭವಾಯಿತು. ಹೆಚ್ಚು ರಾಜ್ಯ ಪ್ರಚಾರಕರ ಅಗತ್ಯವಿದ್ದ ಕಾರಣ ಡಾಲ್ಯ ಮತ್ತವಳ ತಾಯಿ ಆ ಗುಂಪಿನೊಂದಿಗೆ ಜೊತೆಗೂಡಿದರು. ಕೆಲವೊಮ್ಮೆ ತಿಂಗಳ ಕೊನೇ ತನಕ ಸೇವೆಗೆ ಹೋಗಲು ಆಗದಿದ್ದಾಗ ಡಾಲ್ಯ ಬಹಳ ಬೇಸರಪಡುತ್ತಾಳೆ. “ಅಂಥ ಸಮಯದಲ್ಲಿ ನಾನು ಯೆಹೋವನಿಗೆ ಮೊರೆಯಿಡುತ್ತೇನೆ. ಆಗ ಯಾರಾದರೊಬ್ಬರು ‘ನನ್ನೊಂದಿಗೆ ಸೇವೆಗೆ ಬನ್ನಿ’ ಎಂದು ನನ್ನನ್ನು ಕರೆಯುತ್ತಾರೆ” ಎಂದವಳು ಹೇಳುತ್ತಾಳೆ. ಗಂಭೀರ ಅಸ್ವಸ್ಥತೆಯಿರುವ ನಮ್ಮ ಪ್ರಿಯ ಸಹೋದರಿ ಡಾಲ್ಯಗೆ ತನ್ನ ಸ್ಥಿತಿಯ ಕುರಿತು ಹೇಗನಿಸುತ್ತದೆ? ಅವಳ ಲವಲವಿಕೆಯನ್ನು ಗಮನಿಸಿ: “ರೋಗ ನನ್ನ ದೇಹವನ್ನು ನಿಷ್ಕ್ರಿಯೆಗೊಳಿಸಿದೆ, ಮನಸ್ಸನ್ನಲ್ಲ. ಯೆಹೋವ ದೇವರ ಕುರಿತು ಇತರರಿಗೆ ತಿಳಿಸಲು ಶಕ್ತಳಾಗಿರುವುದಕ್ಕೆ ನಾನು ಬಹಳ ಸಂತೋಷಪಡುತ್ತೇನೆ.”