ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನಂತೆ ಎಚ್ಚರವಾಗಿರಿ

ಯೇಸುವಿನಂತೆ ಎಚ್ಚರವಾಗಿರಿ

ಯೇಸುವಿನಂತೆ ಎಚ್ಚರವಾಗಿರಿ

“ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ.”—ಮತ್ತಾ. 26:41.

ಉತ್ತರಿಸುವಿರಾ?

ನಾವು ಎಚ್ಚರವಾಗಿದ್ದೇವೆಂದು ನಮ್ಮ ಪ್ರಾರ್ಥನೆಗಳು ಹೇಗೆ ತೋರಿಸುತ್ತವೆ?

ಯಾವ ವಿಧಗಳಲ್ಲಿ ನಾವು ಶುಶ್ರೂಷೆಯನ್ನು ಪೂರೈಸಲು ಎಚ್ಚರವಾಗಿದ್ದೇವೆಂದು ತೋರಿಸಿಕೊಡಬಲ್ಲೆವು?

ಕಷ್ಟಪರೀಕ್ಷೆಗಳ ಸಮಯದಲ್ಲೂ ಎಚ್ಚರವಾಗಿರುವುದು ಪ್ರಾಮುಖ್ಯವೇಕೆ? ಹೇಗೆ ಎಚ್ಚರವಾಗಿರಬಲ್ಲೆವು?

1, 2. (ಎ) ಎಚ್ಚರದಿಂದಿರುವ ವಿಷಯದಲ್ಲಿ ಯೇಸು ಇಟ್ಟ ಮಾದರಿ ನಮ್ಮಲ್ಲಿ ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತವೆ? (ಬಿ) ಯೇಸುವಿನ ಪರಿಪೂರ್ಣ ಮಾದರಿಯನ್ನು ಅಪರಿಪೂರ್ಣರಾದ ನಾವು ಅನುಕರಿಸಸಾಧ್ಯವೇ? ದೃಷ್ಟಾಂತಿಸಿ.

‘ಯೇಸುವಿನಂತೆ ಎಚ್ಚರವಾಗಿರುವುದಾ? ಅದು ಅಸಾಧ್ಯ. ಯೇಸು ಪರಿಪೂರ್ಣ ವ್ಯಕ್ತಿ.’ ಹೀಗೆಂದು ನೀವು ನೆನಸುತ್ತಿರಬಹುದು. ‘ಅಷ್ಟೇ ಅಲ್ಲ ಸಾವಿರಾರು ವರ್ಷಗಳ ನಂತರದ ಭವಿಷ್ಯತ್ತಿನಲ್ಲಿ ಏನು ನಡೆಯುತ್ತದೆ ಎಂದು ಅವನು ಕೆಲವೊಮ್ಮೆ ತಿಳಿಯಶಕ್ತನಾಗಿದ್ದನು. ಹಾಗಿರುವಲ್ಲಿ ಅವನು ಎಚ್ಚರವಾಗಿರುವ ಅಗತ್ಯವಾದರೂ ಏನಿತ್ತು?’ ಎಂದೂ ನೀವು ಕೇಳಬಹುದು. (ಮತ್ತಾ. 24:37-39; ಇಬ್ರಿ. 4:15) ಈ ಪ್ರಶ್ನೆಗಳಿಗೆ ಮೊದಲು ಉತ್ತರ ತಿಳಿಯೋಣ. ಆಗ ನಾವು ಎಚ್ಚರವಾಗಿರುವುದು ಎಷ್ಟು ಪ್ರಾಮುಖ್ಯ ಹಾಗೂ ತುರ್ತಿನದ್ದು ಎನ್ನುವುದನ್ನು ತಿಳಿಯುವೆವು.

2 ಪರಿಪೂರ್ಣ ವ್ಯಕ್ತಿಯ ಮಾದರಿಯಿಂದ ಅಪರಿಪೂರ್ಣರಾದ ನಾವು ಕಲಿಯಸಾಧ್ಯವೇ? ಖಂಡಿತ! ಒಬ್ಬ ನುರಿತ ವ್ಯಕ್ತಿಯ ಅನುಭವ ಮತ್ತು ಮಾದರಿಯಿಂದ ಅನನುಭವಿಯಾದ ವ್ಯಕ್ತಿ ಕಲಿಯಬಲ್ಲನು. ಉದಾಹರಣೆಗೆ, ಬಿಲ್ಲುವಿದ್ಯೆ ಕಲಿಯಲು ಬಯಸುವ ಒಬ್ಬನನ್ನು ತೆಗೆದುಕೊಳ್ಳಿ. ಆರಂಭದಲ್ಲೇ ಅವನು ಗುರಿಹಲಗೆಗೆ ಗುರಿಯಿಟ್ಟು ಹೊಡೆಯಲಾರ. ಅಷ್ಟೇಕೆ ಬಿಲ್ಲನ್ನು ಸರಿಯಾಗಿ ಹಿಡಿಯುವುದು ಹೇಗೆಂದು ಸಹ ಅವನಿಗೆ ತಿಳಿದಿರುವುದಿಲ್ಲ. ಆದರೆ ತನ್ನ ಗುರು ಮಾಡುವುದನ್ನು ಗಮನಕೊಟ್ಟು ನೋಡಿ ಕಲಿತುಕೊಳ್ಳುತ್ತಾನೆ. ಗುರು ಬಿಲ್ಲನ್ನು ಹಿಡಿಯುವ ರೀತಿ, ನಿಲ್ಲುವ ಭಂಗಿ, ಬೆರಳುಗಳನ್ನು ತಂತಿಯ ಮೇಲಿಡುವ ಶೈಲಿ ಎಲ್ಲವನ್ನೂ ಗಮನಕೊಟ್ಟು ನೋಡುತ್ತಾನೆ. ಅದೇ ರೀತಿ ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ, ತಂತಿಯನ್ನು ಎಷ್ಟು ಎಳೆಯಬೇಕು ಎಂಬ ವಿಷಯದಲ್ಲೂ ಪರಿಣತಿ ಸಾಧಿಸುತ್ತಾನೆ. ಹೀಗೆ ತನ್ನ ಗುರು ಮಾಡುವುದನ್ನು ನೋಡುತ್ತಾ ಕಲಿಯುತ್ತಾ ಕ್ರಮೇಣ ಅವನೂ ಗುರಿಹಲಗೆಗೆ ಚಾಚೂತಪ್ಪದೆ ಗುರಿಯಿಟ್ಟು ಹೊಡೆಯಲು ಕಲಿಯುತ್ತಾನೆ. ಅಂತೆಯೇ ನಾವು ಯೇಸುವಿನ ಸಲಹೆಗಳಿಗೆ ಕಿವಿಗೊಟ್ಟು, ಅವನ ಪರಿಪೂರ್ಣ ಮಾದರಿಯನ್ನು ಅನುಕರಿಸುವುದಾದರೆ ನಮ್ಮ ಕ್ರೈಸ್ತ ಜೀವನದಲ್ಲಿ ಪ್ರಗತಿ ಮಾಡುತ್ತಾ ಮುಂದುವರಿಯುವೆವು.

3. (ಎ) ಯೇಸು ಕೂಡ ಎಚ್ಚರವಾಗಿರುವ ಅಗತ್ಯವಿತ್ತು ಎಂದು ಯಾವುದು ತೋರಿಸುತ್ತದೆ? (ಬಿ) ಈ ಲೇಖನದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

3 ಯೇಸುವಿಗೆ ಎಚ್ಚರವಾಗಿರುವ ಅಗತ್ಯ ನಿಜವಾಗಿಯೂ ಇತ್ತಾ? ಹೌದು. ಉದಾಹರಣೆಗೆ, ತನ್ನ ಭೂಜೀವಿತದ ಕೊನೆಯ ರಾತ್ರಿಯಂದು “ನನ್ನೊಂದಿಗೆ ಎಚ್ಚರವಾಗಿರಿ” ಎಂದು ನಂಬಿಗಸ್ತ ಅಪೊಸ್ತಲರಿಗೆ ಉತ್ತೇಜಿಸಿದನು. ಮಾತ್ರವಲ್ಲದೆ, “ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ” ಎಂದೂ ಹೇಳಿದನು. (ಮತ್ತಾ. 26:38, 41) ಯೇಸು ಎಲ್ಲ ಸಮಯದಲ್ಲಿ ಎಚ್ಚರವಾಗಿದ್ದನಾದರೂ ಆ ಕಠಿಣಕರ ಗಳಿಗೆಯಲ್ಲಿ ಇನ್ನಷ್ಟು ಹೆಚ್ಚು ಎಚ್ಚರವಾಗಿದ್ದು ತನ್ನ ತಂದೆಗೆ ನಿಕಟವಾಗಿ ಉಳಿಯಲು ಬಯಸಿದನು. ತನ್ನ ಹಿಂಬಾಲಕರು ಸಹ ಎಚ್ಚರವಾಗಿರಬೇಕೆಂದು ಬಯಸಿದನು. ಆ ರಾತ್ರಿ ಮಾತ್ರವಲ್ಲ ಮುಂದೆ ಕೂಡ ಅವರು ಎಚ್ಚರವಾಗಿರಬೇಕು ಎಂಬುದು ಅವನಿಗೆ ತಿಳಿದಿತ್ತು. ತನ್ನ ಶಿಷ್ಯರೆಲ್ಲರೂ ಎಚ್ಚರವಾಗಿರಬೇಕೆಂದು ಯೇಸು ಏಕೆ ಬಯಸಿದನು ಎಂಬುದನ್ನು ನಾವೀಗ ಪರಿಗಣಿಸೋಣ. ಅನಂತರ ನಮ್ಮ ದೈನಂದಿನ ಜೀವಿತದ ಮೂರು ಕ್ಷೇತ್ರಗಳಲ್ಲಿ ಯೇಸುವಿನಂತೆ ಹೇಗೆ ಎಚ್ಚರವಾಗಿರಬಲ್ಲೆವು ಎಂಬುದನ್ನು ನೋಡೋಣ.

ಎಚ್ಚರವಾಗಿರುವಂತೆ ಯೇಸು ಏಕೆ ಹೇಳಿದನು?

4. ಕೆಲವು ವಿಷಯ ನಮಗೆ ತಿಳಿಯದೇ ಇರುವುದಕ್ಕೂ ನಾವು ಎಚ್ಚರವಾಗಿರುವುದಕ್ಕೂ ಏನು ಸಂಬಂಧ?

4 ನಾವು ಎಚ್ಚರವಾಗಿರಬೇಕೆಂದು ಯೇಸು ಹೇಳಲು ಕಾರಣವಿತ್ತು. ಕೆಲವೊಂದು ವಿಷಯ ನಮಗೆ ಸ್ಪಷ್ಟವಾಗಿ ತಿಳಿದಿರುವ ಕಾರಣ ನಾವು ಎಚ್ಚರವಾಗಿರಬೇಕು. ಇನ್ನು ಕೆಲವು ವಿಷಯ ನಮಗೆ ತಿಳಿದಿಲ್ಲದ ಕಾರಣ ಎಚ್ಚರವಾಗಿರಬೇಕು. ಭೂಮಿಯಲ್ಲಿದ್ದಾಗ ಯೇಸುವಿಗೆ ಭವಿಷ್ಯತ್ತಿನ ಕುರಿತು ಪ್ರತಿಯೊಂದು ವಿಷಯ ತಿಳಿದಿತ್ತಾ? ಇಲ್ಲ. ಅವನೇ ನಮ್ರತೆಯಿಂದ ಒಪ್ಪಿಕೊಂಡದ್ದು, “ಆ ದಿನ ಮತ್ತು ಗಳಿಗೆಯ ವಿಷಯವಾಗಿ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ.” (ಮತ್ತಾ. 24:36) ದೇವರ ‘ಮಗನಾದ’ ಯೇಸುವಿಗೆ ಈ ದುಷ್ಟ ಲೋಕದ ಅಂತ್ಯ ಯಾವಾಗ ಬರುತ್ತದೆಂದು ಆ ಸಮಯದಲ್ಲಿ ಗೊತ್ತಿರಲಿಲ್ಲ. ನಮ್ಮ ಕುರಿತಾಗಿ ಏನು? ಭವಿಷ್ಯತ್ತಿನ ಕುರಿತು ನಮಗೆಲ್ಲಾ ತಿಳಿದಿದೆಯಾ? ಖಂಡಿತ ಇಲ್ಲ. ಯೆಹೋವನು ತನ್ನ ಮಗನ ಮೂಲಕ ಈ ದುಷ್ಟ ಲೋಕವನ್ನು ಯಾವಾಗ ಅಂತ್ಯಗೊಳಿಸುತ್ತಾನೆಂದು ನಮಗೆ ತಿಳಿದಿಲ್ಲ. ಗೊತ್ತಿರುತ್ತಿದ್ದಲ್ಲಿ ನಾವು ಎಚ್ಚರವಾಗಿರುವ ಅಗತ್ಯವಿರಲಿಲ್ಲ. ಆದರೆ ಯೇಸು ಹೇಳಿದಂತೆ ಅಂತ್ಯವು ಥಟ್ಟನೆ, ಅನಿರೀಕ್ಷಿತವಾಗಿ ಬರುವುದರಿಂದ ನಾವು ಬಹು ಎಚ್ಚರವಾಗಿರಬೇಕು.ಮತ್ತಾಯ 24:43 ಓದಿ.

5, 6. (ಎ) ದೇವರ ರಾಜ್ಯದ ಕುರಿತು ನಮಗಿರುವ ಜ್ಞಾನ ಏನನ್ನು ಮಾಡಲು ಎಚ್ಚರವಾಗಿರುವಂತೆ ನಮ್ಮನ್ನು ಪ್ರಚೋದಿಸಬೇಕು? (ಬಿ) ಸೈತಾನನ ಕುರಿತು ತಿಳಿದಿರುವ ನಾವು ಏಕೆ ಇನ್ನಷ್ಟು ಎಚ್ಚರವಾಗಿರಬೇಕು?

5 ಅದೇ ಸಮಯದಲ್ಲಿ ಭವಿಷ್ಯತ್ತಿನ ಕುರಿತು ಆಗಿನ ಜನರಿಗೆ ತಿಳಿದಿರದ ಅನೇಕ ಅದ್ಭುತಕರ ಸಂಗತಿಗಳು ಯೇಸುವಿಗೆ ತಿಳಿದಿತ್ತು. ನಮಗೆ ಯೇಸುವಿನಷ್ಟು ತಿಳಿದಿಲ್ಲ ನಿಜ. ಆದರೂ ಅವನಿಂದಾಗಿ ದೇವರ ರಾಜ್ಯದ ಕುರಿತು, ಅದು ಸ್ವಲ್ಪದರಲ್ಲೇ ಏನನ್ನು ಸಾಧಿಸಲಿದೆ ಎಂಬುದರ ಕುರಿತು ನಮಗೆ ಬಹಳಷ್ಟು ತಿಳಿದಿದೆ. ಆದರೆ ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ, ಸಾರುತ್ತಿರುವ ಕ್ಷೇತ್ರದಲ್ಲಿ ಇರುವ ಹೆಚ್ಚಿನ ಜನರು ಆಧ್ಯಾತ್ಮಿಕ ಅಂಧಕಾರದಲ್ಲಿದ್ದಾರೆ. ನಮಗೆ ತಿಳಿದಿರುವ ಈ ಅದ್ಭುತಕರ ಸತ್ಯದ ಕುರಿತು ಅವರಿಗೇನೂ ತಿಳಿದಿಲ್ಲ ಅಲ್ಲವೇ? ಹಾಗಾದರೆ ಎಚ್ಚರವಾಗಿರಲು ಇನ್ನೊಂದು ಕಾರಣ ನಮಗೆ ಸಿಕ್ಕಿತು. ಯೇಸುವಿನಂತೆ ನಾವು ಪ್ರತಿಯೊಂದು ಸಂದರ್ಭದಲ್ಲಿ ಜನರಿಗೆ ದೇವರ ರಾಜ್ಯದ ಕುರಿತು ತಿಳಿಸಲು ಎಚ್ಚರವಾಗಿರಬೇಕು. ಪ್ರತಿಯೊಂದು ಸಂದರ್ಭವೂ ಅತ್ಯಮೂಲ್ಯವಾಗಿದೆ. ಏಕೆಂದರೆ ಜನರ ಜೀವ ತುಂಬಾ ಅಪಾಯದಲ್ಲಿದೆ. ಹಾಗಾಗಿ ದೇವರ ರಾಜ್ಯದ ಕುರಿತು ಜನರಿಗೆ ತಿಳಿಸಲು ನಮಗೆ ಸಿಗುವ ಯಾವುದೇ ಸಂದರ್ಭ ಕೈಜಾರಿ ಹೋಗದಂತೆ ನೋಡಿಕೊಳ್ಳೋಣ.—1 ತಿಮೊ. 4:16.

6 ಎಚ್ಚರವಾಗಿರಲು ಯೇಸುವಿಗೆ ಇನ್ನೊಂದು ಕಾರಣವಿತ್ತು. ತನ್ನನ್ನು ಪ್ರಲೋಭಿಸಲು, ಹಿಂಸಿಸಲು ಮತ್ತು ತನ್ನ ಸಮಗ್ರತೆಯನ್ನು ಮುರಿಯಲು ಸೈತಾನನು ಹೊಂಚುಹಾಕುತ್ತಾ ಇದ್ದಾನೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆ ದುಷ್ಟ ವೈರಿ ಯೇಸುವನ್ನು ಪರೀಕ್ಷಿಸಲಿಕ್ಕಾಗಿ “ಇನ್ನೊಂದು ಅನುಕೂಲವಾದ ಸಂದರ್ಭ” ಸಿಗಲೆಂದು ಯಾವಾಗಲೂ ಕಾಯುತ್ತಿದ್ದನು. (ಲೂಕ 4:13) ಆದರೆ ಯೇಸು ಸದಾ ಎಚ್ಚರವಾಗಿದ್ದನು. ಏನೇ ಪರೀಕ್ಷೆ ಬರಲಿ, ಅದು ಪ್ರಲೋಭನೆಯಾಗಿರಲಿ ವಿರೋಧವಾಗಿರಲಿ ಹಿಂಸೆಯಾಗಿರಲಿ ಎದುರಿಸಲು ಸಿದ್ಧನಿದ್ದನು. ನಮ್ಮನ್ನು ಬೀಳಿಸಲಿಕ್ಕಾಗಿ ಸೈತಾನನು ಇಂದು ಕೂಡ ಕಣ್ಣುಮಿಟಿಕಿಸದೆ ಕಾಯುತ್ತಿದ್ದಾನೆ. “ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ” ಎಂದು ಹೊಂಚುಹಾಕುತ್ತಿದ್ದಾನೆ. ಈ ಕಾರಣದಿಂದಲೇ, “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ” ಎಂದು ದೇವರ ವಾಕ್ಯ ಕ್ರೈಸ್ತರೆಲ್ಲರನ್ನು ಉತ್ತೇಜಿಸುತ್ತದೆ. (1 ಪೇತ್ರ 5:8) ಇದನ್ನು ನಾವು ಹೇಗೆ ಮಾಡಬಲ್ಲೆವು?

ಪ್ರಾರ್ಥನೆ ಮಾಡುವುದರಲ್ಲಿ ಎಚ್ಚರವಾಗಿರಿ

7, 8. ಪ್ರಾರ್ಥನೆಯ ಬಗ್ಗೆ ಯೇಸು ಯಾವ ಸಲಹೆ ನೀಡಿದನು? ಯಾವ ಮಾದರಿ ಇಟ್ಟನು?

7 ಆಧ್ಯಾತ್ಮಿಕವಾಗಿ ಎಚ್ಚರವಾಗಿರುವುದಕ್ಕೂ ಪ್ರಾರ್ಥನೆಗೂ ಹತ್ತಿರದ ಸಂಬಂಧವಿದೆ ಎಂದು ಬೈಬಲ್‌ ತೋರಿಸುತ್ತದೆ. (ಕೊಲೊ. 4:2; 1 ಪೇತ್ರ 4:7) ತನ್ನೊಂದಿಗೆ ಎಚ್ಚರವಾಗಿರುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದ ಬಳಿಕ, “ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ” ಎಂದು ತಿಳಿಸಿದನು. (ಮತ್ತಾ. 26:41) ಕೇವಲ ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ ಮಾತ್ರ ಈ ಸಲಹೆಯನ್ನು ಅನ್ವಯಿಸಬೇಕಾ? ಇಲ್ಲ, ಪ್ರತಿನಿತ್ಯ ಈ ಸಲಹೆಯನ್ನು ಗಮನದಲ್ಲಿಟ್ಟು ನಡೆಯಬೇಕು.

8 ಪ್ರಾರ್ಥನೆ ಮಾಡುವುದರಲ್ಲಿ ಯೇಸು ಎದ್ದುಕಾಣುವ ಮಾದರಿಯಾಗಿದ್ದಾನೆ. ಒಮ್ಮೆ ಇಡೀ ರಾತ್ರಿ ಅವನು ದೇವರಿಗೆ ಪ್ರಾರ್ಥನೆ ಮಾಡಿದನು ಎಂಬುದು ನಿಮಗೆ ನೆನಪಿರಬಹುದು. ನಾವೀಗ ಆ ಸಂದರ್ಭವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳೋಣ. (ಲೂಕ 6:12, 13 ಓದಿ.) ಅದು ವಸಂತ ಕಾಲ. ಸಂಜೆಯ ಸಮಯದಲ್ಲಿ ಯೇಸು ಒಂದು ಬೆಟ್ಟಕ್ಕೆ ಹತ್ತಿಹೋದನು. ಮೀನುಗಾರಿಕೆಯ ಪಟ್ಟಣವಾದ ಕಪೆರ್ನೌಮಿನ ಬಳಿ ಇರುವ ಬೆಟ್ಟ ಅದೆಂದು ಕಾಣುತ್ತದೆ. ಅಲ್ಲಿಂದ ಕೆಳಗೆ ನೋಡಿದರೆ ಗಲಿಲಾಯ ಸಮುದ್ರ ಕಾಣಿಸುತ್ತಿತ್ತು. ಸುತ್ತಲೂ ಕತ್ತಲು ಕವಿದಂತೆ ಕಪೆರ್ನೌಮಿನ ಮತ್ತು ಸುತ್ತಲಿನ ಹಳ್ಳಿಗಳ ಮನೆಗಳಲ್ಲಿ ಒಂದೊಂದಾಗಿ ದೀಪ ಉರಿಯುವುದು ಯೇಸುವಿನ ಕಣ್ಣಿಗೆ ಬಿದ್ದಿರಬೇಕು. ಅವನು ಯೆಹೋವನಲ್ಲಿ ಪ್ರಾರ್ಥಿಸಲು ಆರಂಭಿಸುತ್ತಾನೆ. ಪ್ರಾರ್ಥನೆಯಲ್ಲಿ ಎಷ್ಟು ಮುಳುಗಿದ್ದನೆಂದರೆ ನಿಮಿಷಗಳು ಉರುಳಿದವು, ತಾಸುಗಳು ದಾಟಿದವು. ದೂರದ ಮನೆಗಳಲ್ಲಿ ಉರಿಯುತ್ತಿದ್ದ ದೀಪಗಳು ಒಂದೊಂದಾಗಿ ಆರತೊಡಗಿದವು. ಬಾನಲ್ಲಿ ಚಂದ್ರ ಮುಂದೆ ಮುಂದೆ ಚಲಿಸುತ್ತಿದ್ದ. ನಿಶಾಚರ ಪ್ರಾಣಿಗಳ ಶಬ್ದ ಆಗಾಗ ಕತ್ತಲನ್ನು ಭೇದಿಸಿ ಬರುತ್ತಿತ್ತು. ಆದರೆ ಇದಾವುದೂ ಯೇಸುವಿನ ಗಮನಕ್ಕೆ ಬೀಳಲಿಲ್ಲ. ಅವನು ಪ್ರಾರ್ಥನಾ ಮಗ್ನನಾಗಿದ್ದನು. ಹನ್ನೆರಡು ಮಂದಿ ಅಪೊಸ್ತಲರನ್ನು ಆಯ್ಕೆಮಾಡುವ ಒಂದು ದೊಡ್ಡ ನಿರ್ಣಯ ಅವನ ಮುಂದಿತ್ತು. ಹಾಗಾಗಿ ಸಹಾಯಕ್ಕಾಗಿ ಅವನು ಯೆಹೋವನ ಬಳಿ ಪ್ರಾರ್ಥಿಸುತ್ತಿದ್ದನು. ಪ್ರತಿಯೊಬ್ಬ ಶಿಷ್ಯನ ಬಗ್ಗೆ ತನಗಿದ್ದ ಅನಿಸಿಕೆ, ಚಿಂತೆಯನ್ನು ಯೆಹೋವನಿಗೆ ಹೇಳುತ್ತಾ ಆತನ ಮಾರ್ಗದರ್ಶನೆ ಹಾಗೂ ವಿವೇಕಕ್ಕಾಗಿ ಬೇಡಿಕೊಳ್ಳುತ್ತಿದ್ದನು.

9. ಯೇಸು ಇಡೀ ರಾತ್ರಿ ಪ್ರಾರ್ಥಿಸಿದ ವಿಷಯದಿಂದ ನಾವೇನು ಕಲಿಯಬಲ್ಲೆವು?

9 ಯೇಸುವಿನಿಂದ ನಾವು ಕಲಿಯುವ ಪಾಠವೇನು? ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆಯಬೇಕೆಂದಾ? ಇಲ್ಲ. ನಮ್ಮ ಇತಿಮಿತಿ ಯೇಸುವಿಗೆ ಗೊತ್ತು. “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಅವನೇ ಹೇಳಿದ್ದಾನೆ. (ಮತ್ತಾ. 26:41) ಹಾಗಿದ್ದರೂ ನಾವು ಯೇಸುವನ್ನು ಅನುಕರಿಸಬಲ್ಲೆವು. ಉದಾಹರಣೆಗೆ ಕುಟುಂಬ ಸದಸ್ಯರ, ಜೊತೆ ವಿಶ್ವಾಸಿಗಳ ಅಥವಾ ನಮ್ಮ ಆಧ್ಯಾತ್ಮಿಕತೆಯನ್ನು ಬಾಧಿಸುವ ನಿರ್ಣಯವೊಂದನ್ನು ಮಾಡುವ ಮುನ್ನ ನಮ್ಮ ತಂದೆಯಾದ ದೇವರ ಬಳಿ ಪ್ರಾರ್ಥಿಸುತ್ತೇವಾ? ಜೊತೆ ವಿಶ್ವಾಸಿಗಳಿಗಾಗಿಯೂ ಪ್ರಾರ್ಥಿಸುತ್ತೇವಾ? ಪದೇ ಪದೇ ಹೇಳಿದ್ದನ್ನೇ ಹೇಳದೆ ಹೃದಯಾಳದಿಂದ ಪ್ರಾರ್ಥಿಸುತ್ತೇವಾ? ಯೇಸುವಿನ ಪ್ರಾರ್ಥನೆಯಿಂದ ಮತ್ತೊಂದು ಪಾಠವನ್ನೂ ಕಲಿಯುತ್ತೇವೆ. ಅವನು ತನ್ನ ತಂದೆಯೊಂದಿಗೆ ಖಾಸಗಿಯಾಗಿ, ಮನಬಿಚ್ಚಿ ಮಾತಾಡಿದನು. ನಾವು ಕೆಲವೊಮ್ಮೆ ಜೀವನದ ಗಡಿಬಿಡಿ ಜಂಜಾಟಗಳಿಂದ ವೈಯಕ್ತಿಕ ಪ್ರಾರ್ಥನೆ ಮಾಡುವುದನ್ನು ಮರೆತುಬಿಡುವ ಸಾಧ್ಯತೆ ಇದೆ. ಆದರೆ ಹೃದಯಾಳದ ಖಾಸಗಿ ಪ್ರಾರ್ಥನೆಗೆ ಸಾಕಷ್ಟು ಸಮಯವನ್ನು ಮಾಡಿಕೊಳ್ಳುವುದಾದರೆ ಆಧ್ಯಾತ್ಮಿಕವಾಗಿ ಎಚ್ಚರವಾಗಿರುತ್ತೇವೆ. (ಮತ್ತಾ. 6:6, 7) ಆಗ ನಾವು ಯೆಹೋವನಿಗೆ ಆಪ್ತರಾಗುತ್ತೇವೆ, ಆಪ್ತತೆಯನ್ನು ಇನ್ನಷ್ಟು ಬೆಸೆಯಲು ಸದಾ ಹಾತೊರೆಯುತ್ತೇವೆ, ಅದನ್ನು ಮುರಿಯುವಂಥ ಕೆಲಸವನ್ನು ಎಂದಿಗೂ ಮಾಡದಿರುತ್ತೇವೆ.—ಕೀರ್ತ. 25:14.

ಶುಶ್ರೂಷೆಯನ್ನು ಪೂರೈಸಲು ಎಚ್ಚರವಾಗಿರಿ

10. ಸಾಕ್ಷಿಕೊಡಲಿಕ್ಕಾಗಿ ಯೇಸು ಸದಾ ಜಾಗೃತನಾಗಿದ್ದನು ಎಂದು ಯಾವ ಉದಾಹರಣೆ ತೋರಿಸುತ್ತದೆ?

10 ಯೆಹೋವನು ತನಗೆ ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಯೇಸು ಎಚ್ಚರವಾಗಿದ್ದನು. ಕೆಲವು ಕೆಲಸಗಳನ್ನು ಮಾಡುವಾಗ ಪೂರ್ಣ ಗಮನ ಕೊಡದಿದ್ದರೂ ನಡೆಯುತ್ತದೆ. ಮನಸ್ಸು ಅತ್ತಿತ್ತ ಅಲೆದಾಡಿದರೂ ತೊಂದರೆಯಾಗಲಿಕ್ಕಿಲ್ಲ. ಆದರೆ ಹೆಚ್ಚಿನ ಕೆಲಸಗಳನ್ನು ಪೂರ್ಣ ಗಮನ ಕೇಂದ್ರೀಕರಿಸಿ ಅಂದರೆ ಎಚ್ಚರಿಕೆಯಿಂದ ಮಾಡುವ ಅಗತ್ಯವಿರುತ್ತದೆ. ಕ್ರೈಸ್ತ ಶುಶ್ರೂಷೆ ಅಂಥ ಕೆಲಸಗಳಲ್ಲಿ ಒಂದು. ಯೇಸು ಈ ಕೆಲಸವನ್ನು ಪೂರೈಸುವುದರಲ್ಲಿ ಎಚ್ಚರವಾಗಿದ್ದನು. ಪ್ರತಿಯೊಂದು ಸಂದರ್ಭದಲ್ಲೂ ಸುವಾರ್ತೆ ಸಾರಲು ಎದುರು ನೋಡುತ್ತಿದ್ದನು. ಒಂದು ಸಂದರ್ಭವೂ ಕೈಜಾರಿ ಹೋಗದಂತೆ ನೋಡಿಕೊಂಡನು. ಉದಾಹರಣೆಗೆ, ಒಂದು ದಿನ ಅವನೂ ಅವನ ಶಿಷ್ಯರೂ ಬಹಳ ದೂರದ ಕಾಲ್ನಡಿಗೆಯಿಂದ ದಣಿದು ಮಧ್ಯಾಹ್ನ ಸಿಖರ್‌ ಎಂಬ ಪಟ್ಟಣಕ್ಕೆ ಬಂದು ತಲಪಿದರು. ಶಿಷ್ಯರು ಆಹಾರ ಕೊಂಡುಕೊಳ್ಳಲು ಹೋದರು. ಯೇಸು ದಣಿವಾರಿಸಿಕೊಳ್ಳಲು ಪಟ್ಟಣದ ಬಾವಿಯ ಬಳಿ ಕುಳಿತುಕೊಂಡನು. ಅದೇ ಸಮಯದಲ್ಲಿ ಸಾರುವ ಅವಕಾಶ ಸಿಗುವುದೋ ಎಂದು ಗಮನವಿಟ್ಟು ನೋಡುತ್ತಿದ್ದನು. ಸಮಾರ್ಯದವಳಾದ ಒಬ್ಬಾಕೆ ಸ್ತ್ರೀ ನೀರನ್ನು ಸೇದಲಿಕ್ಕಾಗಿ ಅಲ್ಲಿಗೆ ಬಂದಳು. ಯೇಸು ಏನೂ ಮಾತಾಡದೆ ಸುಮ್ಮನಿದ್ದು ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು. ಅದಕ್ಕಾಗಿ ಕಾರಣವನ್ನೂ ಕೊಡಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಆ ಸಂದರ್ಭವನ್ನು ಸಾಕ್ಷಿನೀಡಲು ಉಪಯೋಗಿಸಿ ಆ ಸ್ತ್ರೀಯೊಂದಿಗೆ ಮಾತಾಡಿದನು. ಆಕೆಯನ್ನೂ ಮಾತಿನಲ್ಲಿ ಒಳಗೂಡಿಸಿದನು. ಅತ್ಯುತ್ತಮ ಸಾಕ್ಷಿ ನೀಡಿದನು. ಫಲಿತಾಂಶವಾಗಿ ಆ ಪಟ್ಟಣದ ಅನೇಕರು ಅವನಲ್ಲಿ ನಂಬಿಕೆಯಿಟ್ಟರು. (ಯೋಹಾ. 4:4-26, 39-42) ನಾವು ಯೇಸುವನ್ನು ನಿಕಟವಾಗಿ ಅನುಕರಿಸಲು ಪ್ರಯತ್ನಿಸಬೇಕಲ್ಲವೇ? ಅವನಂತೆ ಎಚ್ಚರವಾಗಿದ್ದು ಪ್ರತಿದಿನ ಭೇಟಿಯಾಗುವ ಜನರಿಗೆ ಸುವಾರ್ತೆಯನ್ನು ತಿಳಿಸಲು ಸಿಗುವ ಒಂದೇ ಒಂದು ಅವಕಾಶವನ್ನು ಬಿಡಬಾರದಲ್ಲವೇ?

11, 12. (ಎ) ಜನರು ತನ್ನ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು? (ಬಿ) ಶುಶ್ರೂಷೆಯಲ್ಲಿ ಯೇಸು ಹೇಗೆ ಸಮತೂಕ ತೋರಿಸಿದನು?

11 ಕೆಲವೊಮ್ಮೆ ಜನರು ಯೇಸುವಿನ ಗಮನ ತಿರುಗಿಸಲು ಪ್ರಯತ್ನಿಸಿದರು. ಒಮ್ಮೆ ಕಪೆರ್ನೌಮಿನಲ್ಲಿ ಯೇಸು ಅದ್ಭುತ ಮಾಡಿ ರೋಗಿಗಳನ್ನು ಗುಣಪಡಿಸಿದಾಗ ಜನರು ಅವನನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕೆಂದು ಯೋಚಿಸಿದರು. ಅವರಿಗೆ ಸದುದ್ದೇಶವೇ ಇತ್ತಾದರೂ ಯೇಸುವಿನ ಸಾರುವ ಕೆಲಸ ಬರೀ ಒಂದೇ ಪಟ್ಟಣಕ್ಕೆ ಸೀಮಿತವಾಗಿರಲಿಲ್ಲ. “ಇಸ್ರಾಯೇಲ್‌ ಮನೆತನದ ತಪ್ಪಿಹೋದ” ಎಲ್ಲ ಕುರಿಗಳ ಬಳಿಗೆ ಅವನು ಹೋಗಬೇಕಿತ್ತು. (ಮತ್ತಾ. 15:24) ಹಾಗಾಗಿ ಅವನು, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು. (ಲೂಕ 4:40-44) ಶುಶ್ರೂಷೆ ಯೇಸುವಿನ ಜೀವನದ ಕೇಂದ್ರಬಿಂದುವಾಗಿತ್ತು. ಆ ಕೆಲಸದಿಂದ ತನ್ನನ್ನು ಯಾರೂ ದೆಸೆತಿರುಗಿಸುವಂತೆ ಅವನು ಬಿಟ್ಟುಕೊಡಲಿಲ್ಲ.

12 ಅದರರ್ಥ ಯೇಸು ಬರೀ ಸಾರುವ ಕೆಲಸದಲ್ಲಿ ಮುಳುಗಿ ಮತಾಂಧನಂತೆ ಅಥವಾ ಸನ್ಯಾಸಿಯಂತೆ ಇದ್ದನೆಂದಾ? ಜನರ ಅಗತ್ಯಗಳ ಕಡೆಗೆ ಸ್ವಲ್ಪವೂ ಚಿಂತೆಯಿಲ್ಲದ ವ್ಯಕ್ತಿಯಾಗಿದ್ದನಾ? ಇಲ್ಲ. ಯೇಸು ಸಮತೂಕ ಇಟ್ಟಿದ್ದನು. ಅವನು ಜೀವನವನ್ನು ಆನಂದಿಸಿದನು, ಸ್ನೇಹಿತರೊಂದಿಗೆ ಸಂತೋಷದಿಂದ ಸಮಯ ಕಳೆದನು. ಕುಟುಂಬಗಳ ಬಗ್ಗೆ ಕಾಳಜಿವಹಿಸಿದನು. ಅವರ ಸಮಸ್ಯೆ, ಅಗತ್ಯಗಳನ್ನು ಅರ್ಥಮಾಡಿಕೊಂಡು ಅನುಕಂಪ ತೋರಿಸಿದನು. ಮಕ್ಕಳಿಗೆ ಸಮಯ ನೀಡಿ ಮಮತೆಯಿಂದ ಮುದ್ದಾಡಿದನು.—ಮಾರ್ಕ 10:13-16 ಓದಿ.

13. ಸುವಾರ್ತೆ ಸಾರುವ ಕೆಲಸದಲ್ಲಿ ಯೇಸುವಿನಂತೆ ನಾವು ಹೇಗೆ ಎಚ್ಚರವಾಗಿಯೂ ಸಮತೂಕದಿಂದಲೂ ಇರಬಲ್ಲೆವು?

13 ನಾವು ಯೇಸುವಿನಂತೆ ಎಚ್ಚರವಾಗಿರಲು ಪ್ರಯತ್ನಿಸುವಾಗ ಸಮತೂಕವನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ಸಾರುವ ಕೆಲಸದಿಂದ ಈ ಲೋಕ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವಂತೆ ಬಿಡಬಾರದು. ಕೆಲವೊಮ್ಮೆ ನಮ್ಮ ಸ್ನೇಹಿತರು, ಸಂಬಂಧಿಕರು ಒಳ್ಳೇ ಉದ್ದೇಶದಿಂದಲೇ ನಾವು ಶುಶ್ರೂಷೆಗೆ ಕಡಿಮೆ ಗಮನಕೊಟ್ಟು ಲೋಕವು ಸಾಮಾನ್ಯವೆಂದು ನೆನಸುವ ಜೀವನವನ್ನು ನಡೆಸುವಂತೆ ಉತ್ತೇಜಿಸಬಹುದು. ನಾವು ಯೇಸುವನ್ನು ಅನುಕರಿಸುವುದಾದರೆ ಶುಶ್ರೂಷೆ ನಮಗೆ ಆಹಾರದಷ್ಟೇ ಪ್ರಾಮುಖ್ಯವಾಗಿರುತ್ತದೆ. (ಯೋಹಾ. 4:34) ಸಾರುವ ಕೆಲಸ ನಮಗೆ ಆಧ್ಯಾತ್ಮಿಕ ಪುಷ್ಟಿನೀಡಿ ಪೋಷಿಸಿ ಆನಂದವನ್ನು ತರುತ್ತದೆ. ಹಾಗಿದ್ದರೂ ನಾವು ಅತಿರೇಕಿಗಳಂತೆ, ಸ್ವನೀತಿವಂತರಂತೆ ಅಥವಾ ಸನ್ಯಾಸಿಯಂತೆ ಇರುವುದಿಲ್ಲ. ಯೇಸುವಿನಂತೆ ನಾವೂ ಆನಂದಿಸುತ್ತಾ ಸಮತೂಕ ಕಾಪಾಡುತ್ತಾ “ಸಂತೋಷದ ದೇವರ” ಸೇವಕರಾಗಿರುತ್ತೇವೆ.—1 ತಿಮೊ. 1:11.

ಕಷ್ಟಪರೀಕ್ಷೆಯ ಸಮಯದಲ್ಲಿ ಎಚ್ಚರವಾಗಿರಿ

14. ಪರೀಕ್ಷೆಯನ್ನು ಎದುರಿಸುವಾಗ ಯಾವ ಸತ್ಯವನ್ನು ಮರೆಯಬಾರದು? ಏಕೆ?

14 ಎಚ್ಚರವಾಗಿರುವಂತೆ ಯೇಸು ಉತ್ತೇಜಿಸಿದ್ದು ಹೆಚ್ಚಾಗಿ ತಾನು ಕಠಿನ ಪರೀಕ್ಷೆಯನ್ನು ಎದುರಿಸುತ್ತಿದ್ದಾಗಲೇ ಎಂದು ನಾವು ಗಮನಿಸಿದೆವು. (ಮಾರ್ಕ 14:37 ಓದಿ.) ಕಷ್ಟಮಯ ಸನ್ನಿವೇಶದಲ್ಲಿ ಇರುವಾಗ ಯೇಸುವಿನ ಮಾದರಿಯನ್ನು ನಾವು ನೆನಪಿಸಿಕೊಳ್ಳಬೇಕು. ಪರೀಕ್ಷೆಯ ಸಮಯದಲ್ಲಿ ಅನೇಕರು ಪ್ರಾಮುಖ್ಯ ಸತ್ಯವೊಂದನ್ನು ಮರೆತುಬಿಡುತ್ತಾರೆ. ಅದನ್ನು ಜ್ಞಾನೋಕ್ತಿ ಪುಸ್ತಕದಲ್ಲಿ ಎರಡು ಬಾರಿ ಹೇಳಲಾಗಿದೆ. “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.” (ಜ್ಞಾನೋ. 14:12; 16:25) ಹೌದು, ನಮ್ಮ ಸ್ವಂತ ಯೋಚನೆಯ ಮೇಲೆ ಅವಲಂಬಿಸುವುದು, ಅದರಲ್ಲೂ ಗಂಭೀರ ಸಮಸ್ಯೆಗಳನ್ನು ಎದುರಿಸುವಾಗ ಹಾಗೆ ಮಾಡುವುದು ಗಂಡಾಂತರಕ್ಕೆ ದೂಡುತ್ತದೆ. ನಮ್ಮ ಪ್ರೀತಿಪಾತ್ರರನ್ನೂ ಕಷ್ಟಕ್ಕೆ ಗುರಿಮಾಡುತ್ತದೆ.

15. ಆರ್ಥಿಕ ಕಷ್ಟವಿರುವಾಗ ಕುಟುಂಬದ ಶಿರಸ್ಸು ಯಾವ ಪ್ರಲೋಭನೆಗೆ ಗುರಿಯಾಗಬಹುದು?

15 ಉದಾಹರಣೆಗೆ, ಒಂದು ಕುಟುಂಬದ ಶಿರಸ್ಸು ಆರ್ಥಿಕವಾಗಿ ಕಷ್ಟಪಡುತ್ತಿರಬಹುದು. “ತನ್ನ ಮನೆವಾರ್ತೆಯ ಸದಸ್ಯರಿಗೆ” ಭೌತಿಕವಾಗಿ ಒದಗಿಸುವುದು ಅವನಿಗೆ ಸವಾಲಾಗಿರಬಹುದು. (1 ತಿಮೊ. 5:8) ಹಾಗಾಗಿ, ಕ್ರೈಸ್ತ ಕೂಟಗಳು, ಕುಟುಂಬ ಆರಾಧನೆ, ಶುಶ್ರೂಷೆ ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಪ್ಪದೆ ಭಾಗವಹಿಸಲು ತಡೆಯಾಗುವ ಉದ್ಯೋಗವನ್ನು ಸ್ವೀಕರಿಸುವ ಪ್ರಲೋಭನೆಗೆ ಅವನು ಗುರಿಯಾಗಬಹುದು. ಇಂಥ ಸಮಯದಲ್ಲಿ ಅವನು ಸ್ವಬುದ್ಧಿಯನ್ನು ಅವಲಂಬಿಸಿದರೆ ಆ ಕೆಲಸವನ್ನು ಸ್ವೀಕರಿಸುವುದು ತಪ್ಪೆಂದು ತೋರಲಿಕ್ಕಿಲ್ಲ. ಅದೇ ತಕ್ಕ “ಸರಳ” ಮಾರ್ಗ ಎಂದು ತೋರಬಹುದು. ಆದರೆ ಇದರಿಂದಾಗಿ ಅವನು ಆಧ್ಯಾತ್ಮಿಕ ಅಸ್ವಸ್ಥತೆಗೆ ತುತ್ತಾಗಿ ಕಟ್ಟಕಡೆಗೆ ಮರಣಮಾರ್ಗಕ್ಕೆ ಬಂದು ತಲಪಬಹುದು. ಹಾಗಾಗಿ ಜ್ಞಾನೋಕ್ತಿ 3:5, 6ರ ಮಾತನ್ನು ಅನ್ವಯಿಸುವುದು ವಿವೇಕಪ್ರದ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂದು ಸೊಲೊಮೋನನು ಆ ವಚನಗಳಲ್ಲಿ ತಿಳಿಸಿದ್ದಾನೆ.

16. (ಎ) ಸ್ವಬುದ್ಧಿಯ ಮೇಲೆ ಆತುಕೊಳ್ಳದೆ ಯೆಹೋವನ ವಿವೇಕದ ಮೇಲೆ ಆತುಕೊಳ್ಳುವ ವಿಷಯದಲ್ಲಿ ಯೇಸು ಯಾವ ಮಾದರಿಯಿಟ್ಟಿದ್ದಾನೆ? (ಬಿ) ಕಷ್ಟದ ಸಮಯದಲ್ಲಿ ಯೆಹೋವನ ಮೇಲೆ ಅವಲಂಬಿಸಿದ ಯೇಸುವಿನ ಮಾದರಿಯನ್ನು ಕುಟುಂಬ ಶಿರಸ್ಸುಗಳು ಹೇಗೆ ಅನುಕರಿಸುತ್ತಿದ್ದಾರೆ?

16 ಯೇಸು ಪ್ರಲೋಭನೆಯನ್ನು ಎದುರಿಸುತ್ತಿದ್ದಾಗ ಸ್ವಬುದ್ಧಿಯ ಮೇಲೆ ಕಿಂಚಿತ್ತೂ ಅವಲಂಬಿಸಲಿಲ್ಲ. ತುಸು ಯೋಚಿಸಿ. ಭೂಮಿಯಲ್ಲಿ ಜೀವಿಸಿದ್ದವರಲ್ಲೇ ಅಪಾರ ವಿವೇಕ ಹೊಂದಿದ್ದ ಅವನು ತನ್ನ ಸ್ವಂತ ವಿವೇಕದ ಮೇಲೆ ಭರವಸೆಯಿಡಲಿಲ್ಲ. ಸೈತಾನನು ಪ್ರಲೋಭಿಸಿದಾಗೆಲ್ಲ “ಎಂದು ಬರೆದಿದೆ” ಎಂಬುದಾಗಿ ಪದೇ ಪದೇ ದೇವರ ವಾಕ್ಯದಿಂದ ಉತ್ತರಿಸಿದನು. (ಮತ್ತಾ. 4:4, 7, 10) ಹೀಗೆ ಪ್ರಲೋಭನೆಯನ್ನು ಎದುರಿಸಲು ತನ್ನ ತಂದೆಯ ವಿವೇಕದ ಮೇಲೆ ಆತುಕೊಳ್ಳುವ ಮೂಲಕ ದೀನಭಾವ ತೋರಿಸಿದನು. ಆದರೆ ಸೈತಾನನಲ್ಲಿ ಆ ಗುಣ ಎಳ್ಳಷ್ಟೂ ಇಲ್ಲ. ಅದವನಿಗೆ ಇಷ್ಟವೂ ಇಲ್ಲ. ನಾವೂ ಯೇಸುವಿನಂತೆಯೇ ಇದ್ದೇವಾ? ಕುಟುಂಬದ ಶಿರಸ್ಸು ಯಾವಾಗಲೂ ಕಠಿಣ ಪರಿಸ್ಥಿತಿಯಲ್ಲಿ ಕೂಡ ದೇವರ ವಾಕ್ಯವು ತನ್ನನ್ನು ಮಾರ್ಗದರ್ಶಿಸುವಂತೆ ಬಿಡುವ ಮೂಲಕ ಯೇಸುವಿನಂತೆ ಎಚ್ಚರವಾಗಿರುತ್ತಾನೆ. ಲೋಕದ ಸುತ್ತಲೂ ಇರುವ ಅನೇಕ ಕುಟುಂಬ ಶಿರಸ್ಸುಗಳು ಇದನ್ನೇ ಮಾಡುತ್ತಿದ್ದಾರೆ. ಅವರು ಭೌತಿಕ ವಿಷಯಗಳಿಗಿಂತಲೂ ದೇವರ ರಾಜ್ಯಕ್ಕೂ ಶುದ್ಧಾರಾಧನೆಗೂ ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟಿದ್ದಾರೆ. ಕುಟುಂಬದ ಕಾಳಜಿವಹಿಸಲಿಕ್ಕಾಗಿ ಇದಕ್ಕಿಂತ ಅತ್ಯುತ್ತಮ ವಿಧ ಬೇರೊಂದಿಲ್ಲ. ಅವರಿದನ್ನು ಮಾಡುವಾಗ ಕುಟುಂಬಕ್ಕೆ ಭೌತಿಕವಾಗಿ ಒದಗಿಸಲು ಮಾಡುವ ಶ್ರಮವನ್ನೂ ಯೆಹೋವನು ಆಶೀರ್ವದಿಸಿ ತನ್ನ ಮಾತಿಗನುಸಾರ ನಡೆಯುತ್ತಾನೆ.—ಮತ್ತಾ. 6:33.

17. ಯೇಸುವಿನಂತೆ ಎಚ್ಚರವಾಗಿರಲು ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ?

17 ಎಚ್ಚರವಾಗಿರುವುದರಲ್ಲಿ ಯೇಸು ಅತ್ಯುತ್ತಮ ಮಾದರಿ ಇಟ್ಟಿದ್ದಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವನ ಮಾದರಿಯನ್ನು ಅನುಸರಿಸುವುದು ನಮಗೆ ಪ್ರಯೋಜನಕಾರಿ ಹಾಗೂ ಜೀವರಕ್ಷಕ. ಒಂದು ವಿಷಯ ಮರೆಯಬೇಡಿ: ನೀವು ಆಧ್ಯಾತ್ಮಿಕವಾಗಿ ನಿದ್ರಿಸುವಂತೆ, ನಂಬಿಕೆಯಲ್ಲಿ ಬಲಹೀನಗೊಳ್ಳುವಂತೆ, ಆರಾಧನೆಯಲ್ಲಿ ಉತ್ಸಾಹ ಕಳೆದುಕೊಳ್ಳುವಂತೆ, ಸಮಗ್ರತೆ ಬಿಟ್ಟುಕೊಡುವಂತೆ ಮಾಡುವುದೇ ಸೈತಾನನ ಗುರಿ. ಅದಕ್ಕಾಗಿ ಶತಪ್ರಯತ್ನ ಮಾಡುತ್ತಾನೆ. (1 ಥೆಸ. 5:6) ನಿಮ್ಮ ಮೇಲೆ ಜಯಸಾಧಿಸುವಂತೆ ಬಿಡಬೇಡಿ! ಯೇಸುವಿನಂತೆ ಎಚ್ಚರವಾಗಿರ್ರಿ. ಮನಬಿಚ್ಚಿ ಪ್ರಾರ್ಥಿಸಲು ಸಮಯ ಮಾಡಿಕೊಳ್ಳಿ. ಶುಶ್ರೂಷೆಯ ಮೇಲೆ ಗಮನ ಕೇಂದ್ರೀಕರಿಸಿ. ಕಷ್ಟಪರೀಕ್ಷೆಗಳು ಬಂದಾಗ ಯೆಹೋವನ ಮೇಲೆ ಆತುಕೊಳ್ಳಿ. ನೀವು ಹೀಗೆ ಮಾಡುವಿರಾ. . . ? ಮಾಡುವಲ್ಲಿ, ನಾಶದ ಕಡೆಗೆ ಸಾಗುತ್ತಿರುವ ಸೈತಾನನ ಲೋಕದಲ್ಲಿಯೂ ನೆಮ್ಮದಿ, ಸಂತೃಪ್ತಿಯ ಜೀವನವನ್ನು ಅನುಭವಿಸಿ ಆನಂದಿಸುವಿರಿ. ನಮ್ಮ ನಾಯಕ ಯೇಸು ಕ್ರಿಸ್ತನು ಸೈತಾನನ ಈ ಲೋಕವನ್ನು ನಾಶಮಾಡಲು ಬರುವಾಗ ನೀವು ಎಚ್ಚರವಾಗಿರುವುದನ್ನೂ ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದನ್ನೂ ಕಾಣುವನು. ನಿಮ್ಮ ನಿಷ್ಠೆಯ ಸೇವೆಗೆ ಬಹುಮಾನ ಕೊಡಲು ಯೆಹೋವನು ಬಹಳವಾಗಿ ಹರ್ಷಿಸುವನು!—ಪ್ರಕ. 16:15.

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ಯೇಸು ಬಾವಿ ಬಳಿ ಸ್ತ್ರೀಗೆ ಸುವಾರ್ತೆ ಸಾರಿದನು. ಪ್ರತಿದಿನ ಸುವಾರ್ತೆ ಸಾರಲು ನೀವು ಹೇಗೆ ಅವಕಾಶ ಮಾಡಿಕೊಳ್ಳುತ್ತೀರಿ?

[ಪುಟ 7ರಲ್ಲಿರುವ ಚಿತ್ರ]

ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಶ್ರಮಿಸುವುದು ನೀವು ಎಚ್ಚರವಾಗಿದ್ದೀರೆಂದು ತೋರಿಸುತ್ತದೆ