ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ

ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ

ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ

“ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. . . . ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.”—ಯೆಹೋ. 1:7-9.

ಉತ್ತರಿಸುವಿರಾ?

ಹನೋಕ ಮತ್ತು ನೋಹ ಯಾವ ರೀತಿಯಲ್ಲಿ ಧೈರ್ಯ ತೋರಿಸಿದರು?

ಪ್ರಾಚೀನ ಸಮಯದಲ್ಲಿ ಕೆಲವು ಸ್ತ್ರೀಯರು ನಂಬಿಕೆ ಮತ್ತು ಧೈರ್ಯದ ವಿಷಯದಲ್ಲಿ ಹೇಗೆ ಉತ್ತಮ ಮಾದರಿಯನ್ನಿಟ್ಟರು?

ಯುವ ಜನರಲ್ಲಿ ಯಾರು ತೋರಿಸಿದ ಧೈರ್ಯ ನಿಮ್ಮ ಮನಸ್ಪರ್ಶಿಸಿತು?

1, 2. (ಎ) ದೈನಂದಿನ ಬದುಕಿನಲ್ಲಿ ಸರಿಯಾದ ವಿಷಯವನ್ನು ಮಾಡಲು ಏನು ಅವಶ್ಯ? (ಬಿ) ಈ ಲೇಖನದಲ್ಲಿ ನಾವೇನನ್ನು ಕಲಿಯುತ್ತೇವೆ?

ಧೈರ್ಯ! ಇದು ಭಯ, ಅಂಜಿಕೆ, ಹೇಡಿತನಕ್ಕೆ ವಿರುದ್ಧವಾದ ಗುಣ. ಧೀರ ವ್ಯಕ್ತಿ ಎಂದಾಕ್ಷಣ ಎದೆಗಾರಿಕೆಯುಳ್ಳ ವೀರ ಎಂಬ ಭಾವನೆ ಬರುವುದು ಸಾಮಾನ್ಯ. ಆದರೆ ದೈನಂದಿನ ಬದುಕಿನಲ್ಲಿ ಸರಿಯಾದ ವಿಷಯವನ್ನು ಮಾಡಲು ಸಹ ಧೈರ್ಯ ಬೇಕು.

2 ಕಡುಸಂಕಟವನ್ನು ಧೈರ್ಯದಿಂದ ನಿಭಾಯಿಸಿದವರ ಉದಾಹರಣೆಗಳು ಬೈಬಲ್‌ನಲ್ಲಿವೆ. ಮಾತ್ರವಲ್ಲ ದಿನನಿತ್ಯ ಎದುರಾಗುವ ಸನ್ನಿವೇಶಗಳಲ್ಲಿ ಧೈರ್ಯ ತೋರಿಸಿದವರ ಉದಾಹರಣೆಗಳೂ ಅದರಲ್ಲಿದೆ. ಅಂಥ ಧೀರ ವ್ಯಕ್ತಿಗಳ ಉದಾಹರಣೆಗಳಿಂದ ನಾವೇನು ಕಲಿಯಬಹುದು? ನಾವು ಹೇಗೆ ಧೈರ್ಯ ತೋರಿಸಬಹುದು?

ಭಕ್ತಿಹೀನ ಜನರಿಗೆ ಧೈರ್ಯದಿಂದ ಸಾರಿದವರು

3. ಭಕ್ತಿಹೀನ ಜನರಿಗೆ ಏನಾಗುವುದೆಂದು ಹನೋಕನು ಪ್ರವಾದಿಸಿದನು?

3 ನೋಹನ ಕಾಲದ ಜಲಪ್ರಳಯಕ್ಕೆ ಮುಂಚೆ ಇದ್ದ ದುಷ್ಟ ಜನರ ಮಧ್ಯದಲ್ಲಿ ಯೆಹೋವ ದೇವರ ಸಾಕ್ಷಿಯಾಗಿ ಜೀವಿಸಲು ಅಪಾರ ಧೈರ್ಯ ಬೇಕಿತ್ತು. ಹಾಗಿದ್ದರೂ “ಆದಾಮನಿಗೆ ಏಳನೆಯ ತಲೆಯವನಾದ ಹನೋಕನು” ದೇವರ ಪ್ರವಾದನೆಯನ್ನು ಸಾರಲು ಭಯಪಟ್ಟು ಹಿಂಜರಿಯಲಿಲ್ಲ. “ಇಗೋ, ಯೆಹೋವನು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ ಎಲ್ಲರ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವುದಕ್ಕೂ ಭಕ್ತಿಹೀನ ಜನರೆಲ್ಲರೂ ಭಕ್ತಿಹೀನವಾದ ರೀತಿಯಲ್ಲಿ ನಡಿಸಿದ ಭಕ್ತಿಹೀನ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಹೀನ ಪಾಪಿಗಳು ಆತನಿಗೆ ವಿರುದ್ಧವಾಗಿ ನುಡಿದ ಆಘಾತಕರ ಸಂಗತಿಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೂ ಬಂದನು” ಎಂದು ಸಾರಿದನು. (ಯೂದ 14, 15) ಹನೋಕನು ಸಾರಿದ ವಿಷಯವನ್ನು ಗಮನಿಸಿ. ಅದು ಈಗಾಗಲೇ ನೆರವೇರಿದೆಯೋ ಎಂಬಂತೆ ಅವನು ಹೇಳಿದನು. ಏಕೆಂದರೆ ದೇವರ ಪ್ರವಾದನೆ ಈಡೇರುವುದೆಂಬ ಅಚಲ ನಂಬಿಕೆ ಅವನಿಗಿತ್ತು. ಅದು ಸುಳ್ಳಾಗಲಿಲ್ಲ, ಭೌಗೋಳಿಕ ಜಲಪ್ರಳಯ ಬಂದು ಎಲ್ಲಾ ಭಕ್ತಿಹೀನ ಮಾನವರನ್ನು ನಿರ್ಮೂಲ ಮಾಡಿತು.

4. ನೋಹ ಯಾವ ಪರಿಸ್ಥಿತಿಯಲ್ಲಿ ದೇವರೊಂದಿಗೆ ಅನೋನ್ಯವಾಗಿ ನಡೆದನು?

4 ಆ ಮಹಾ ಜಲಪ್ರಳಯ ಕ್ರಿ.ಪೂ. 2370ರಲ್ಲಿ ಅಂದರೆ ಹನೋಕ ಮರಣಪಟ್ಟು 650 ವರ್ಷಗಳ ನಂತರ ಬಂತು. ಆ ಸಮಯದಷ್ಟಕ್ಕೆ ಅನೇಕ ಘಟನೆಗಳು ಸಂಭವಿಸಿದ್ದವು. ನೋಹನ ಜನನವಾಗಿತ್ತು. ಅವನಿಗೆ ಮದುವೆಯಾಗಿ ಮಕ್ಕಳಿದ್ದರು ಮತ್ತು ಅವನು ದೊಡ್ಡ ಹಡಗನ್ನು ಕಟ್ಟಿದ್ದನು. ದುಷ್ಟ ದೇವದೂತರು ಮಾನವ ರೂಪ ತಾಳಿ ಸೌಂದರ್ಯವತಿ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಂಡಿದ್ದರು. ಅವರಿಗೆ ಮಹಾಶರೀರಿಗಳು ಜನಿಸಿದ್ದರು. ಮಾನವರ ಕೆಟ್ಟತನ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಇಡೀ ಭೂಮಿ ಹಿಂಸೆ ಪಾತಕಗಳಿಂದ ತುಂಬಿಕೊಂಡಿತ್ತು. (ಆದಿ. 6:1-5, 9, 11) ಅಂಥ ದುರ್ಗಮ ಪರಿಸ್ಥಿತಿಯಲ್ಲೂ ನೋಹ “ದೇವರೊಂದಿಗೆ ಅನ್ಯೋನ್ಯವಾಗಿ ನಡೆದು” ಧೈರ್ಯದಿಂದ “ನೀತಿಯನ್ನು” ಸಾರಿದನು. (2 ಪೇತ್ರ 2:4, 5 ಓದಿ.) ಈ ಕಡೇ ದಿವಸಗಳಲ್ಲಿ ನಮ್ಮಲ್ಲೂ ಅದೇ ರೀತಿಯ ಧೈರ್ಯ ಇರಬೇಕು.

ನಂಬಿಕೆ ಹಾಗೂ ಧೈರ್ಯ ತೋರಿಸಿದವರು

5. ಯಾವ ರೀತಿಯಲ್ಲಿ ಮೋಶೆ ನಂಬಿಕೆ ಹಾಗೂ ಧೈರ್ಯ ತೋರಿಸಿದನು?

5 ನಂಬಿಕೆ ಹಾಗೂ ಧೈರ್ಯ ತೋರಿಸಿದ ಇನ್ನೊಬ್ಬ ಆದರ್ಶ ವ್ಯಕ್ತಿ ಮೋಶೆ. (ಇಬ್ರಿ. 11:24-27) ಕ್ರಿ.ಪೂ. 1513ರಿಂದ 1473ರ ವರೆಗೆ ಅವನು ನಿರ್ವಹಿಸಿದ ದೊಡ್ಡ ನೇಮಕದ ಕುರಿತು ತುಸು ನೋಡೋಣ. ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿ ವಾಗ್ದತ್ತ ದೇಶದತ್ತ ಮುನ್ನಡೆಸಲು ದೇವರು ಅವನನ್ನು ಉಪಯೋಗಿಸಿದನು. ಆ ಭಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮೋಶೆ ಮೊದಮೊದಲು ಹಿಂಜರಿದನಾದರೂ ನಂತರ ಒಪ್ಪಿಕೊಂಡನು. (ವಿಮೋ. 6:12) ಅಣ್ಣ ಆರೋನನೊಂದಿಗೆ ಮತ್ತೆ ಮತ್ತೆ ಕ್ರೂರಿ ಫರೋಹನ ಆಸ್ಥಾನಕ್ಕೆ ಹೋದನು. ಈಜಿಪ್ಟಿನ ದೇವರುಗಳು ಶಕ್ತಿಹೀನ ಎಂದು ರುಜುಪಡಿಸಲಿಕ್ಕಾಗಿಯೂ ಇಸ್ರಾಯೇಲ್ಯರನ್ನು ಕಾಪಾಡಲಿಕ್ಕಾಗಿಯೂ ಯೆಹೋವ ದೇವರು ಹತ್ತು ಬಾಧೆಗಳನ್ನು ತರಲಿದ್ದಾನೆಂದು ಅವರಿಬ್ಬರು ಧೈರ್ಯದಿಂದ ಪ್ರಕಟಿಸಿದರು. (ವಿಮೋ. ಅಧ್ಯಾಯ 7-12) ಮೋಶೆ ಇಂಥ ಧೈರ್ಯ ಹಾಗೂ ನಂಬಿಕೆ ತೋರಿಸಶಕ್ತನಾದದ್ದು ಹೇಗೆ? ದೇವರ ಸಹಾಯಹಸ್ತ ನಮಗಿಂದು ಆಧಾರವಾಗಿರುವಂತೆ ಅಂದು ಮೋಶೆಗೆ ಸಹ ಆಧಾರವಾಗಿತ್ತು.—ಧರ್ಮೋ. 33:27.

6. ವಿಚಾರಣೆಗೆ ಒಳಗಾದಾಗ ಧೈರ್ಯದಿಂದ ಸಾಕ್ಷಿನೀಡುವಂತೆ ಯಾವುದು ನಮಗೆ ಸಹಾಯ ಮಾಡುವುದು?

6 ಮೋಶೆಯಲ್ಲಿ ಇದ್ದಂಥ ಧೈರ್ಯ ನಮ್ಮಲ್ಲೂ ಇರಬೇಕು. ಏಕೆಂದರೆ, “ನನ್ನ ನಿಮಿತ್ತವಾಗಿ ನೀವು ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ಎಳೆದೊಯ್ಯಲ್ಪಡುವಿರಿ; ಇದು ಅವರಿಗೂ ಅನ್ಯಜನಾಂಗಗಳಿಗೂ ಸಾಕ್ಷಿಗಾಗಿರುವುದು. ಆದರೂ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಎಂದು ಚಿಂತಿಸಬೇಡಿರಿ; ನೀವು ಏನು ಮಾತಾಡಬೇಕು ಎಂಬುದು ಆ ಗಳಿಗೆಯಲ್ಲಿ ನಿಮಗೆ ತಿಳಿಯುವುದು; ಏಕೆಂದರೆ ಮಾತಾಡುವವರು ನೀವು ಮಾತ್ರವೇ ಅಲ್ಲ, ನಿಮ್ಮ ತಂದೆಯ ಪವಿತ್ರಾತ್ಮವು ನಿಮ್ಮ ಮೂಲಕ ಮಾತಾಡುತ್ತದೆ” ಎಂದು ಯೇಸು ಹೇಳಿದ್ದಾನೆ. (ಮತ್ತಾ. 10:18-20) ಹೌದು, ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಒಳಪಡಿಸುವಲ್ಲಿ ನಂಬಿಕೆ ಹಾಗೂ ಧೈರ್ಯದಿಂದ ಗೌರವಪೂರ್ವಕವಾಗಿ ಸಾಕ್ಷಿನೀಡಲು ಯೆಹೋವನ ಪವಿತ್ರಾತ್ಮ ನಮಗೆ ಸಹಾಯ ಮಾಡುವುದು.—ಲೂಕ 12:11, 12 ಓದಿ.

7. ಯೆಹೋಶುವ ಧೀರನಾಗಿದ್ದು ತನ್ನ ಕಾರ್ಯಗಳಲ್ಲಿ ಸಫಲನಾಗಲು ಕಾರಣವೇನು?

7 ಮೋಶೆಯ ನಂತರ ಇಸ್ರಾಯೇಲ್ಯರ ಮುಖಂಡನಾದ ಯೆಹೋಶುವ ಧರ್ಮಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ನಂಬಿಕೆ ಹಾಗೂ ಧೈರ್ಯವನ್ನು ಬೆಳೆಸಿಕೊಂಡನು. ಕ್ರಿ.ಪೂ. 1473ರಲ್ಲಿ ಅವನ ನಾಯಕತ್ವದ ಕೆಳಗೆ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಸಿದ್ಧರಾಗಿ ನಿಂತಿದ್ದರು. ದೇವರು ಅವನಿಗೆ “ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು” ಎಂದು ಹೇಳಿದನು. ಧರ್ಮಶಾಸ್ತ್ರದ ಕಟ್ಟಳೆಗಳನ್ನು ಕೈಕೊಂಡು ನಡೆಯುವಲ್ಲಿ ಮಾತ್ರ ಯೆಹೋಶುವ ವಿವೇಕಿಯಾಗಿ ತನ್ನ ಕಾರ್ಯಗಳಲ್ಲಿ ಸಾಫಲ್ಯ ಪಡೆಯುವನು ಎಂದು ದೇವರು ತಿಳಿಸಿದನು. ಮಾತ್ರವಲ್ಲ, “ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ” ಎಂಬ ಆಶ್ವಾಸನೆ ಅವನಿಗೆ ದೊರೆಯಿತು. (ಯೆಹೋ. 1:7-9) ಈ ಮಾತುಗಳು ಅವನಲ್ಲಿ ಎಷ್ಟೊಂದು ಧೈರ್ಯ ತುಂಬಿರಬೇಕಲ್ಲವೇ! ಹೌದು, ಯೆಹೋವ ದೇವರು ಅವನ ಸಂಗಡ ಇದ್ದನು. ಕ್ರಿ.ಪೂ. 1467ರೊಳಗೆ, ಅದೂ ಬರೀ ಆರು ವರ್ಷಗಳಲ್ಲಿ ವಾಗ್ದತ್ತ ದೇಶದ ಬಹುತೇಕ ಭಾಗಗಳನ್ನು ಇಸ್ರಾಯೇಲ್ಯರು ವಶಪಡಿಸಿಕೊಂಡಿದ್ದರು!

ದೇವರು ಮೆಚ್ಚಿದ ಧೀರೆಯರು

8. ರಾಹಾಬಳು ನಂಬಿಕೆ ಹಾಗೂ ಧೈರ್ಯದ ವಿಷಯದಲ್ಲಿ ಆದರ್ಶ ಮಹಿಳೆ ಎಂದು ಏಕೆ ಹೇಳಬಹುದು?

8 ಪ್ರಾಚೀನ ಕಾಲದಿಂದಲೂ ಯೆಹೋವನ ಸೇವೆಯಲ್ಲಿ ಧೈರ್ಯ ತೋರಿಸಿದ ಸ್ತ್ರೀಯರ ಉದಾಹರಣೆಗಳು ಹಲವಾರು ಇವೆ. ಯೆರಿಕೋ ಪಟ್ಟಣದ ರಾಹಬಳನ್ನೇ ತೆಗೆದುಕೊಳ್ಳಿ. ವೇಶ್ಯೆಯಾಗಿದ್ದ ಆಕೆಗೆ ಯೆಹೋವನಲ್ಲಿ ಎಷ್ಟು ನಂಬಿಕೆ ಇತ್ತೆಂದರೆ ಯೆಹೋಶುವನು ಕಳುಹಿಸಿದ್ದ ಇಬ್ಬರು ಗೂಢಚಾರರ ಪ್ರಾಣ ಉಳಿಸಲು ತನ್ನ ಜೀವವನ್ನೇ ಒತ್ತೆಯಿಟ್ಟಳು. ಅವರನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು, ಹುಡುಕಿಕೊಂಡು ಬಂದ ಸೈನಿಕರನ್ನು ಬೇರೆಡೆಗೆ ಕಳುಹಿಸುವ ಮೂಲಕ ಧೈರ್ಯ ತೋರಿಸಿದಳು. ಹಾಗಾಗಿ ಇಸ್ರಾಯೇಲ್ಯರು ಯೆರಿಕೋ ಪಟ್ಟಣವನ್ನು ಆಕ್ರಮಿಸಿದಾಗ ಅವಳನ್ನೂ ಅವಳ ಮನೆಯವರನ್ನೂ ಉಳಿಸಿದರು. ಆಕೆ ತನ್ನ ಕೆಟ್ಟ ವೃತ್ತಿಯನ್ನು ತೊರೆದು ಯೆಹೋವನ ಭಕ್ತೆಯಾದಳು ಮತ್ತು ಮೆಸ್ಸೀಯನ ಪೂರ್ವಜೆಯಾದಳು. (ಯೆಹೋ. 2:1-6; 6:22, 23; ಮತ್ತಾ. 1:1, 5) ನಂಬಿಕೆ ಹಾಗೂ ಧೈರ್ಯಕ್ಕಾಗಿ ಎಂಥ ದೊಡ್ಡ ಉಡುಗೊರೆ!

9. ದೆಬೋರಾ, ಬಾರಾಕ ಮತ್ತು ಯಾಯೇಲ ಯಾವ ರೀತಿಯಲ್ಲಿ ಧೈರ್ಯ ತೋರಿಸಿದರು?

9 ಕ್ರಿ.ಪೂ. 1430ರಲ್ಲಿ ಯೆಹೋಶುವ ಮರಣಪಟ್ಟ ನಂತರ ದೇವರು ಇಸ್ರಾಯೇಲ್ಯರಲ್ಲಿ ನ್ಯಾಯಸ್ಥಾಪಕರನ್ನು ನೇಮಿಸಿದನು. ಕಾನಾನ್ಯ ರಾಜನಾದ ಯಾಬೀನನು 20 ವರ್ಷಗಳ ವರೆಗೆ ಇಸ್ರಾಯೇಲ್ಯರನ್ನು ಪೀಡಿಸುತ್ತಾ ಇದ್ದನು. ಅವನ ವಿರುದ್ಧ ಯುದ್ಧ ಮಾಡುವಂತೆ ದೇವರು ನೀಡಿದ ಆಜ್ಞೆಯನ್ನು ಪ್ರವಾದಿನಿ ದೆಬೋರಾ ನ್ಯಾಯಸ್ಥಾಪಕ ಬಾರಾಕನಿಗೆ ತಿಳಿಸಿದಳು. ಯಾಬೀನನ ಸೇನಾಧಿಪತಿ ಸೀಸೆರನ ವಿರುದ್ಧ ಬಾರಾಕನು ತಾಬೋರ್‌ ಬೆಟ್ಟದಲ್ಲಿ 10,000 ಯುದ್ಧವೀರರನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ 900 ರಥಗಳೊಂದಿಗೆ ಕೀಷೋನ್‌ ಕಣಿವೆ ಬಳಿ ಬಂದಿದ್ದನು. ಇಸ್ರಾಯೇಲ್‌ ಸೈನ್ಯವು ಆ ಕಡೆ ನುಗ್ಗಿತು. ಆಗ ದೇವರು ದಿಢೀರ್‌ ಪ್ರವಾಹ ಬರಮಾಡಿ ಕಾನಾನ್ಯರ ರಥಗಳು ಕೆಸರಿನಲ್ಲಿ ಹೂತುಹೋಗುವಂತೆ ಮಾಡಿದನು. ಬಾರಾಕನ ಕಡೆಯವರು ವಿಜಯಿಗಳಾದರು. “ಸೀಸೆರನ ಸೈನ್ಯದವರೆಲ್ಲಾ ಕತ್ತಿಯಿಂದ ಹತರಾದರು.” ತಪ್ಪಿಸಿಕೊಂಡ ಸೀಸೆರ ಯಾಯೇಲಳ ಗುಡಾರದಲ್ಲಿ ಆಶ್ರಯ ಪಡೆದನು. ನಿದ್ರಾವಶನಾದಾಗ ಆಕೆ ಅವನನ್ನು ಕೊಂದಳು. ದೆಬೋರಳು ಪ್ರವಾದಿಸಿದ ರೀತಿಯಲ್ಲೇ “ಯುದ್ಧಪ್ರಯಾಣದಲ್ಲುಂಟಾಗುವ ಮಾನ” ಯಾಯೇಲಳಿಗೆ ದೊರಕಿತು. ದೆಬೋರಾ, ಬಾರಾಕ ಮತ್ತು ಯಾಯೇಲ ಧೈರ್ಯದಿಂದ ಕಾರ್ಯವೆಸಗಿದ ಕಾರಣ ಇಸ್ರಾಯೇಲ್‌ “ದೇಶದಲ್ಲಿ ನಾಲ್ವತ್ತು ವರುಷ ಸಮಾಧಾನವಿತ್ತು.” (ನ್ಯಾಯ. 4:1-9, 14-22; 5:20, 21, 31) ಇದೇ ರೀತಿಯ ನಂಬಿಕೆ ಮತ್ತು ಧೈರ್ಯವನ್ನು ಹಲವಾರು ದೇವಭಕ್ತ ಸ್ತ್ರೀಪುರುಷರು ತೋರಿಸಿದ್ದಾರೆ.

ನಮ್ಮ ಮಾತು ಧೈರ್ಯ ತುಂಬಬಲ್ಲದು

10. ನಮ್ಮ ಮಾತು ಇತರರಲ್ಲಿ ಧೈರ್ಯ ತುಂಬುತ್ತದೆ ಎನ್ನಲು ಉದಾಹರಣೆ ಕೊಡಿ.

10 ನಾವಾಡುವ ಮಾತು ಸಹೋದರ ಸಹೋದರಿಯರಲ್ಲಿ ಧೈರ್ಯ ತುಂಬಬಲ್ಲದು. ಕ್ರಿ.ಪೂ. 11ನೇ ಶತಮಾನದಲ್ಲಿ ರಾಜ ದಾವೀದ ತನ್ನ ಮಗನಾದ ಸೊಲೊಮೋನನಿಗೆ ಹೇಳಿದ ಧೈರ್ಯ ತುಂಬುವ ಮಾತನ್ನು ಗಮನಿಸಿ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ; ಆತನು ತನ್ನ ಆಲಯದ ಎಲ್ಲಾ ಕೆಲಸವು ತೀರುವ ವರೆಗೂ ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ.” (1 ಪೂರ್ವ. 28:20) ತಂದೆಯ ಮಾತು ಎಷ್ಟು ಸ್ಫೂರ್ತಿ ಕೊಟ್ಟಿತೆಂದರೆ ಸೊಲೊಮೋನ ಯೆರೂಸಲೇಮಿನಲ್ಲಿ ಯೆಹೋವ ದೇವರಿಗಾಗಿ ಭವ್ಯ ಆಲಯವನ್ನು ಕಟ್ಟಿದನು.

11. ಚಿಕ್ಕ ಹುಡುಗಿಯ ಧೈರ್ಯದ ಮಾತು ಒಬ್ಬ ವ್ಯಕ್ತಿಯ ಬದುಕನ್ನೇ ಹೇಗೆ ಬದಲಾಯಿಸಿತು?

11 ಕ್ರಿ.ಪೂ. 10ನೇ ಶತಮಾನದಲ್ಲಿ ಇಸ್ರಾಯೇಲಿನ ಬಾಲಕಿ ನುಡಿದ ಧೈರ್ಯದ ಮಾತು ಕುಷ್ಠರೋಗಿಯೊಬ್ಬನಿಗೆ ವರವಾಯಿತು. ಆಕೆಯನ್ನು ಅರಾಮ್ಯರ ಸೈನ್ಯ ಇಸ್ರಾಯೇಲ್‌ನಿಂದ ಸೆರೆಹಿಡಿದು ತಂದಿತ್ತು. ಆಕೆ ಅವರ ಸೇನಾಧಿಪತಿ ನಾಮಾನನ ಹೆಂಡತಿಯ ಸೇವಕಿಯಾದಳು. ನಾಮಾನನಿಗೆ ಕುಷ್ಠರೋಗವಿತ್ತು. ಆ ಹುಡುಗಿಗೆ ಯೆಹೋವ ದೇವರು ಪ್ರವಾದಿ ಎಲೀಷನ ಮೂಲಕ ನಡೆಸಿದ ಪವಾಡಗಳ ವಿಷಯ ಗೊತ್ತಿತ್ತು. ನಾಮಾನನು ಇಸ್ರಾಯೇಲಿನಲ್ಲಿದ್ದ ಆ ಪ್ರವಾದಿ ಬಳಿ ಹೋಗುವಲ್ಲಿ ಕುಷ್ಠರೋಗ ವಾಸಿಯಾಗುವುದು ಎಂದು ಆಕೆ ತನ್ನ ಯಜಮಾನಿಗೆ ತಿಳಿಸಿದಳು. ಅದರಂತೆ ನಾಮಾನ ಇಸ್ರಾಯೇಲಿಗೆ ಹೋಗಿ ಗುಣಮುಖನಾದನು. ಯೆಹೋವ ದೇವರ ಆರಾಧಕನಾದನು. (2 ಅರ. 5:1-3, 10-17) ಯೆಹೋವ ದೇವರನ್ನು ಪ್ರೀತಿಸುವ ಪುಟ್ಟ ಮಕ್ಕಳೇ, ನೀವೂ ಇಸ್ರಾಯೇಲ್ಯ ಹುಡುಗಿಯಂತೆ ಧೈರ್ಯತೋರಿಸಿರಿ. ಅಧ್ಯಾಪಕರಿಗೂ ಸಹಪಾಠಿಗಳಿಗೂ ಸುವಾರ್ತೆ ಸಾರಲು ಭಯಪಡಬೇಡಿ. ದೇವರು ಧೈರ್ಯವನ್ನು ನಿಮಗೆ ಕೊಟ್ಟೇಕೊಡುವನು.

12. ರಾಜ ಹಿಜ್ಕೀಯನ ಮಾತು ಪ್ರಜೆಗಳ ಮೇಲೆ ಯಾವ ಪ್ರಭಾವ ಬೀರಿತು?

12 ಭರವಸೆಯ ಮಾತು ಅಪಾಯದ ಸಮಯದಲ್ಲೂ ಧೈರ್ಯ ತುಂಬಬಲ್ಲದು. ಕ್ರಿ.ಪೂ. 8ನೇ ಶತಮಾನದಲ್ಲಿ ಅಶ್ಶೂರದವರು ಯೆರೂಸಲೇಮಿನ ವಿರುದ್ಧ ದಂಡೆತ್ತಿ ಬಂದರು. ಆಗ ರಾಜ ಹಿಜ್ಕೀಯ ತನ್ನ ಪ್ರಜೆಗಳನ್ನು ಉದ್ದೇಶಿಸಿ, “ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು. ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿದನು. ಅವನ ಮಾತು ಯೆಹೂದದ ಜನರ ಮೇಲೆ ಯಾವ ಪ್ರಭಾವ ಬೀರಿತು? ಅವರು “ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು” ಎಂದು ಬೈಬಲ್‌ ತಿಳಿಸುತ್ತದೆ. (2 ಪೂರ್ವ. 32:7, 8) ಹಿಂಸೆಯನ್ನು ಎದುರಿಸುವಾಗ ತದ್ರೀತಿಯ ಮಾತುಗಳು ನಮ್ಮ ಹಾಗೂ ಜೊತೆ ಕ್ರೈಸ್ತರ ಧೈರ್ಯವನ್ನು ನೂರ್ಮಡಿಗೊಳಿಸುತ್ತವೆ.

13. ರಾಜ ಅಹಾಬನ ಉಗ್ರಾಣಿಕನಾದ ಓಬದ್ಯನು ಧೈರ್ಯದ ವಿಷಯದಲ್ಲಿ ಹೇಗೆ ಮಾದರಿ ಇಟ್ಟಿದ್ದಾನೆ?

13 ಕೆಲವೊಂದು ಸಂದರ್ಭದಲ್ಲಿ ಮಾತಾಡದೆ ಇರುವುದೇ ಧೈರ್ಯದ ಲಕ್ಷಣ. ಕ್ರಿ.ಪೂ. 10ನೇ ಶತಮಾನದಲ್ಲಿ ರಾಜ ಅಹಾಬನ ಉಗ್ರಾಣಿಕನಾದ ಓಬದ್ಯನು ಧೈರ್ಯದಿಂದ ಯೆಹೋವನ ನೂರುಮಂದಿ ಪ್ರವಾದಿಗಳನ್ನು “ಐವತ್ತೈವತ್ತು ಮಂದಿಯನ್ನಾಗಿ ಗವಿಗಳಲ್ಲಿ” ಅಡಗಿಸಿಟ್ಟನು. ಹೀಗೆ ದುಷ್ಟರಾಣಿ ಈಜೆಬೆಲಳ ಕೈಯಿಂದ ಅವರನ್ನು ತಪ್ಪಿಸಿ ಕಾಪಾಡಿದನು. (1 ಅರ. 18:4) ದೇವಭಯವಿದ್ದ ಓಬದ್ಯನಂತೆ ಇಂದು ಯೆಹೋವನ ಅನೇಕ ನಿಷ್ಠಾವಂತ ಸೇವಕರು ವಿರೋಧಿಗಳಿಗೆ ತಮ್ಮ ಜೊತೆವಿಶ್ವಾಸಿಗಳ ಕುರಿತು ಮಾಹಿತಿಯನ್ನು ಕೊಡದಿರುವ ಮೂಲಕ ಅವರ ಜೀವ ಕಾಪಾಡಿದ್ದಾರೆ.

ಧೀರ ರಾಣಿ ಎಸ್ತೇರ್‌

14, 15. ರಾಣಿ ಎಸ್ತೇರಳು ಯಾವ ರೀತಿಯಲ್ಲಿ ನಂಬಿಕೆ ಮತ್ತು ಧೈರ್ಯವನ್ನು ತೋರಿಸಿದಳು? ಫಲಿತಾಂಶ ಏನಾಯಿತು?

14 ರಾಣಿ ಎಸ್ತೇರಳು ಅಸಾಧಾರಣ ನಂಬಿಕೆ ಮತ್ತು ಧೈರ್ಯವನ್ನು ತೋರಿಸಿದಳು. ಕ್ರಿ.ಪೂ. 5ನೇ ಶತಮಾನದಲ್ಲಿ ದುಷ್ಟ ಹಾಮಾನನು ಪಾರಸಿಯ ಸಾಮ್ರಾಜ್ಯದಿಂದ ಯೆಹೂದ್ಯರೆಲ್ಲರನ್ನೂ ಸಂಹರಿಸಬೇಕೆಂದು ಕುತಂತ್ರ ಹೂಡಿದನು. ಈ ಕೆಟ್ಟ ಸುದ್ದಿ ಯೆಹೂದ್ಯರ ಕಿವಿಗೆ ಬಿದ್ದಾಗ ಅವರೆಲ್ಲರೂ ಶೋಕತಪ್ತರಾಗಿ ಉಪವಾಸ ಮಾಡಿದರು. ಅದಲ್ಲದೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದ್ದಿರಬೇಕು. (ಎಸ್ತೇ. 4:1-3) ರಾಣಿ ಎಸ್ತೇರಳು ಕೂಡ ಬಹಳ ಕಳವಳಗೊಂಡಳು. ಯೆಹೂದ್ಯರನ್ನು ಕೊಲ್ಲುವಂತೆ ಹೊರಡಿಸಲಾದ ರಾಜಶಾಸನದ ಒಂದು ಪ್ರತಿಯನ್ನು ಮೊರ್ದೆಕೈ ಅವಳಿಗೆ ಕಳುಹಿಸಿಕೊಟ್ಟು ಅರಸನ ಮುಂದೆ ಹೋಗಿ ಸಹಾಯಕ್ಕಾಗಿ ಬಿನ್ನೈಸುವಂತೆ ಹೇಳಿದನು. ಆದರೆ ಆಮಂತ್ರಣವಿಲ್ಲದೆ ಅರಸನ ಮುಂದೆ ಹೋಗುವವರು ಮರಣದಂಡನೆಗೆ ಗುರಿಯಾಗುತ್ತಿದ್ದರು.—ಎಸ್ತೇ. 4:4-11.

15 ಆಗ ಮೊರ್ದೆಕೈ ಎಸ್ತೇರಳಿಗೆ ಹೀಗೆ ಹೇಳಿಕಳುಹಿಸಿದನು: ‘ನೀನು ಈಗ ಸುಮ್ಮನಿದ್ದುಬಿಟ್ಟರೆ ಬೇರೆ ಕಡೆಯಿಂದ ಸಹಾಯವೂ ವಿಮೋಚನೆಯೂ ಉಂಟಾದಾವು; ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು.’ ಎಸ್ತೇರಳು ಮೊರ್ದೆಕೈಗೆ ಶೂಷನಿನಲ್ಲಿ ಯೆಹೂದ್ಯರೆಲ್ಲರನ್ನು ಕೂಡಿಸಿ ಎಲ್ಲರೂ ತನಗೋಸ್ಕರ ಉಪವಾಸ ಮಾಡುವಂತೆ ಹೇಳಿಕಳುಹಿಸಿದಳು. “ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ” ಎಂದಳು. (ಎಸ್ತೇ. 4:12-17) ಬಳಿಕ ಎಸ್ತೇರಳು ಧೈರ್ಯದಿಂದ ಹೆಜ್ಜೆಗಳನ್ನು ತೆಗೆದುಕೊಂಡಳು. ದೇವರು ತನ್ನ ಜನರನ್ನು ರಕ್ಷಿಸಿದನೆಂದು ಎಸ್ತೇರಳು ಪುಸ್ತಕ ತಿಳಿಸುತ್ತದೆ. ನಮ್ಮೀ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರಾದ ಬೇರೆ ಕುರಿಗಳು ಕಷ್ಟಪರೀಕ್ಷೆಯ ಸಮಯದಲ್ಲಿ ತದ್ರೀತಿಯ ಧೈರ್ಯವನ್ನು ತೋರಿಸುತ್ತಿದ್ದಾರೆ. “ಪ್ರಾರ್ಥನೆಯನ್ನು ಕೇಳುವ” ಯೆಹೋವನು ಸದಾ ಅವರ ಜೊತೆಯಲ್ಲಿದ್ದಾನೆ.—ಕೀರ್ತನೆ 65:2; 118:6 ಓದಿ.

ಧೈರ್ಯದ ವಿಷಯದಲ್ಲಿ ಯೇಸುವಿನ ಮಾದರಿ

16. ಯೇಸುವಿನ ಮಾದರಿಯಿಂದ ಚಿಕ್ಕ ಮಕ್ಕಳು ಯಾವ ಪಾಠವನ್ನು ಕಲಿಯಬಲ್ಲರು?

16 ಕ್ರಿ.ಶ. ಒಂದನೇ ಶತಮಾನಕ್ಕೆ ಬರುವಾಗ ಧೈರ್ಯದ ವಿಷಯದಲ್ಲಿ ಯೇಸುವಿನ ಅತ್ಯುತ್ತಮ ಮಾದರಿ ನಮಗಿದೆ. ಅವನು 12 ವರ್ಷದವನಾಗಿದ್ದಾಗ ಒಮ್ಮೆ ದೇವಾಲಯದಲ್ಲಿ “ಬೋಧಕರ ಮಧ್ಯೆ ಕುಳಿತುಕೊಂಡು ಅವರಿಗೆ ಕಿವಿಗೊಡುತ್ತಾ ಪ್ರಶ್ನೆಯನ್ನು ಕೇಳುತ್ತಾ” ಇದ್ದನು. ಆಗ “ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರೂ ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಡುತ್ತಾ ಇದ್ದರು.” (ಲೂಕ 2:41-50) ಯೇಸು ಪುಟ್ಟ ಬಾಲಕನಾಗಿದ್ದರೂ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಬೋಧಕರಿಗೆ ಪ್ರಶ್ನೆಗಳನ್ನು ಕೇಳುವಷ್ಟು ನಂಬಿಕೆ ಮತ್ತು ಧೈರ್ಯ ಅವನಲ್ಲಿತ್ತು. ಕ್ರೈಸ್ತ ಸಭೆಯಲ್ಲಿರುವ ಪುಟ್ಟ ಮಕ್ಕಳೇ, ನೀವು ಕೂಡ ಯೇಸುವಿನ ಮಾದರಿಯನ್ನು ಮನಸ್ಸಿನಲ್ಲಿಡಿ. “ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುವುದಕ್ಕೆ” ಸಿಗುವ ಅವಕಾಶಗಳಲ್ಲಿ ಒಂದೂ ಕೈಜಾರದಂತೆ ನೋಡಿಕೊಳ್ಳಿ.—1 ಪೇತ್ರ 3:15.

17. ಧೈರ್ಯದಿಂದಿರುವಂತೆ ಯೇಸು ಶಿಷ್ಯರಿಗೆ ಹೇಳಿದ್ದೇಕೆ? ನಾವು ಯೇಸುವಿನಂತೆ ಏಕೆ ಧೈರ್ಯದಿಂದಿರಬೇಕು?

17 ಧೈರ್ಯದಿಂದಿರುವಂತೆ ಇತರರನ್ನೂ ಯೇಸು ಉತ್ತೇಜಿಸಿದನು. (ಮತ್ತಾ. 9:2, 22) ತನ್ನ ಶಿಷ್ಯರಿಗೆ ಯೇಸು ಹೀಗಂದನು: “ನೋಡಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಚೆದರಿಹೋಗಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗುವ ಗಳಿಗೆಯು ಬರುತ್ತದೆ, ವಾಸ್ತವದಲ್ಲಿ ಅದು ಈಗಾಗಲೇ ಬಂದಿದೆ; ಆದರೂ ನಾನು ಒಂಟಿಯಾಗಿಲ್ಲ, ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ. ನೀವು ನನ್ನ ಮೂಲಕ ಶಾಂತಿಯನ್ನು ಪಡೆದುಕೊಳ್ಳುವಂತೆ ನಾನು ಇದನ್ನೆಲ್ಲ ನಿಮಗೆ ತಿಳಿಸಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವುದು, ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾ. 16:32, 33) ಒಂದನೇ ಶತಮಾನದಲ್ಲಿದ್ದ ಯೇಸುವಿನ ಹಿಂಬಾಲಕರನ್ನು ಈ ಲೋಕ ವಿರೋಧಿಸಿದಂತೆ ನಮ್ಮನ್ನೂ ವಿರೋಧಿಸುತ್ತದೆ. ಎಷ್ಟೇ ವಿರೋಧಿಸಿದರೂ ನಾವಂತೂ ಲೋಕದ ಭಾಗವಾಗಿ ರಾಜಿಮಾಡಿಕೊಳ್ಳುವುದಿಲ್ಲ. ಈ ಲೋಕದಿಂದ ಮಲಿನರಾಗದಿರಲು ನಾವು ದೇವರ ಮಗನ ದಿಟ್ಟ ಮಾದರಿಯನ್ನು ಧ್ಯಾನಿಸಿ ಧೈರ್ಯವನ್ನು ಪಡೆದುಕೊಳ್ಳುತ್ತೇವೆ. ಯೇಸು ಲೋಕವನ್ನು ಜಯಿಸಿದನು. ನಾವೂ ಜಯಿಸಸಾಧ್ಯ.—ಯೋಹಾ. 17:16; ಯಾಕೋ. 1:27.

“ಧೈರ್ಯದಿಂದಿರು!”

18, 19. ಅಪೊಸ್ತಲ ಪೌಲನು ನಂಬಿಕೆ ಮತ್ತು ಧೈರ್ಯವನ್ನು ಯಾವ ರೀತಿಯಲ್ಲಿ ತೋರಿಸಿದನು?

18 ಅಪೊಸ್ತಲ ಪೌಲನು ಅನೇಕಾನೇಕ ಕಷ್ಟಪರೀಕ್ಷೆಗಳನ್ನು ತಾಳಿಕೊಂಡನು. ಒಂದು ಸಂದರ್ಭದಲ್ಲಂತೂ ಯೆರೂಸಲೇಮಿನಲ್ಲಿ ರೋಮನ್‌ ಸೈನಿಕರು ಅವನ ಸಹಾಯಕ್ಕೆ ಬಂದಿರದಿದ್ದರೆ ಯೆಹೂದ್ಯರ ಕೈಯಲ್ಲಿ ಅವನು ಸತ್ತೇ ಹೋಗುತ್ತಿದ್ದನೇನೋ. ಅದೇ ರಾತ್ರಿ “ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು, ‘ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ಕುರಿತು ಕೂಲಂಕಷವಾಗಿ ಸಾಕ್ಷಿಕೊಡುತ್ತಿರುವಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡಬೇಕು’ ಎಂದು ಹೇಳಿದನು.” (ಅ. ಕಾ. 23:11) ಕರ್ತನು ಹೇಳಿದಂತೆ ಪೌಲನು ಮಾಡಿದನು.

19 ‘ಅತ್ಯುತ್ಕೃಷ್ಟರೆಂದು ತೋರಿಸಿಕೊಳ್ಳುವ ಅಪೊಸ್ತಲರು’ ಕೊರಿಂಥದ ಸಭೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದಾಗ ಪೌಲನು ಧೈರ್ಯದಿಂದ ಅವರನ್ನು ಖಂಡಿಸಿದನು. (2 ಕೊರಿಂ. 11:5; 12:11) ಅವರು ಸುಳ್ಳು ಅಪೊಸ್ತಲರಾಗಿದ್ದರು. ಆದರೆ ಪೌಲನಿಗೆ ತನ್ನ ಅಪೊಸ್ತಲತನವನ್ನು ರುಜುಪಡಿಸಲು ಅನೇಕ ಪುರಾವೆಗಳಿದ್ದವು. ಅವನು ಸೆರೆಮನೆ ವಾಸ, ಹೊಡೆತ, ಜೀವಾಪಾಯಕರ ಪ್ರಯಾಣಗಳು, ಕಷ್ಟಗಳು, ಹಸಿವು, ಬಾಯಾರಿಕೆ ಎಲ್ಲವನ್ನೂ ಸಹಿಸಿಕೊಂಡಿದ್ದನು. ಎಷ್ಟೋ ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದನು. ಜೊತೆ ವಿಶ್ವಾಸಿಗಳ ಕುರಿತು ಅತೀವ ಕಾಳಜಿ ಅವನಿಗಿತ್ತು. (2 ಕೊರಿಂಥ 11:23-28 ಓದಿ.) ನಂಬಿಕೆ ಮತ್ತು ಧೈರ್ಯದ ವಿಷಯದಲ್ಲಿ ಎಂಥ ಅತ್ಯುತ್ತಮ ಮಾದರಿ! ಅವನು ದೇವರಿಂದಲೇ ಬಲವನ್ನು ಪಡೆದುಕೊಂಡನೆಂಬುದು ಸ್ಪಷ್ಟ.

20, 21. (ಎ) ಬದುಕಿನ ಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಧೈರ್ಯ ಬೇಕೆನ್ನುವುದಕ್ಕೆ ಒಂದು ಉದಾಹರಣೆ ಕೊಡಿ. (ಬಿ) ಯಾವೆಲ್ಲ ಸನ್ನಿವೇಶಗಳಲ್ಲಿ ನಮಗೆ ಧೈರ್ಯ ಬೇಕಿದೆ? ಯಾವ ವಿಷಯದಲ್ಲಿ ನಮಗೆ ನಿಶ್ಚಯವಿದೆ?

20 ಕ್ರೈಸ್ತರೆಲ್ಲರೂ ಘೋರ ಹಿಂಸೆಯನ್ನು ಎದುರಿಸಲಿಕ್ಕಿಲ್ಲ ನಿಜ. ಆದರೂ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಜಯಿಸಲು ಎಲ್ಲರಿಗೂ ಧೈರ್ಯ ಬೇಕೇ ಬೇಕು. ಬ್ರಸಿಲ್‌ನ ಒಬ್ಬ ತರುಣನ ಉದಾಹರಣೆಯನ್ನು ಗಮನಿಸಿ. ಅವನು ಗೂಂಡಾಗಳ ಗ್ಯಾಂಗ್‌ನಲ್ಲಿ ಸೇರಿಕೊಂಡಿದ್ದನು. ಆದರೆ ಬೈಬಲನ್ನು ಅಧ್ಯಯನ ಮಾಡಿದ ಬಳಿಕ ತನ್ನ ಜೀವನಪಥ ತಪ್ಪು, ಅದನ್ನು ಬದಲಾಯಿಸಬೇಕೆಂದು ಅವನಿಗೆ ಮನವರಿಕೆಯಾಯಿತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಗೂಂಡಾಗಳು ಗ್ಯಾಂಗ್‌ ಬಿಟ್ಟು ಹೋಗುವವರನ್ನು ಕೊಂದು ಹಾಕುತ್ತಿದ್ದರು. ಹಾಗಾಗಿ ಆ ತರುಣ ಯೆಹೋವ ದೇವರಿಗೆ ಪ್ರಾರ್ಥಿಸಿ ನಂತರ ಗ್ಯಾಂಗ್‌ ಲೀಡರ್‌ ಬಳಿ ಹೋಗಿ ಗ್ಯಾಂಗ್‌ ಬಿಡುವ ತನ್ನ ನಿರ್ಧಾರಕ್ಕೆ ಬೈಬಲಿನಿಂದ ಕಾರಣಗಳನ್ನು ತಿಳಿಸಿದ. ಯಾವುದೇ ಜೀವಾಪಾಯದ ಬೆದರಿಕೆಯಿಲ್ಲದೆ ಅವನನ್ನು ಬಿಟ್ಟುಬಿಡಲಾಯಿತು. ಅನಂತರ ಅವನು ರಾಜ್ಯ ಪ್ರಚಾರಕನಾದ.

21 ಸುವಾರ್ತೆಯನ್ನು ಸಾರಲು ಧೈರ್ಯ ಬೇಕು. ಶಾಲೆಗೆ ಹೋಗುವ ಕ್ರೈಸ್ತ ಮಕ್ಕಳಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಧೈರ್ಯ ಬೇಕು. ಅಧಿವೇಶನದ ಎಲ್ಲ ಸೆಷನ್‌ಗಳನ್ನು ಹಾಜರಾಗಲಿಕ್ಕಾಗಿ ರಜೆ ಕೇಳಲು ಕೆಲಸಕ್ಕೆ ಹೋಗುವವರಿಗೆ ಧೈರ್ಯ ಬೇಕು. ಹೀಗೆ ದೈನಂದಿನ ಬದುಕಿನಲ್ಲಿ ಅನೇಕ ವಿಷಯಗಳಲ್ಲಿ ನಾವು ಧೈರ್ಯ ತೋರಿಸಬೇಕು. ಯಾವುದೇ ಸವಾಲನ್ನು ಎದುರಿಸುವಾಗ ನಾವು ‘ನಂಬಿಕೆಯಿಂದ ಮಾಡುವ ಪ್ರಾರ್ಥನೆಯನ್ನು’ ಯೆಹೋವನು ಖಂಡಿತ ಕೇಳುತ್ತಾನೆ. (ಯಾಕೋ. 5:15) ಮಾತ್ರವಲ್ಲ ನಾವು ಸ್ಥಿರಚಿತ್ತರಾಗಿ, ಪೂರ್ಣಧೈರ್ಯದಿಂದಿರಲು ಪವಿತ್ರಾತ್ಮವನ್ನು ಖಂಡಿತ ನೀಡುತ್ತಾನೆ.

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ಹನೋಕನು ಭಕ್ತಿಹೀನ ಜನರಿಗೆ ಸಾರಲು ಹೆದರಲಿಲ್ಲ

[ಪುಟ 12ರಲ್ಲಿರುವ ಚಿತ್ರ]

ಯಾಯೇಲಳು ಧೀರೆಯೂ ಸ್ಥಿರಚಿತ್ತಳೂ ಆಗಿದ್ದಳು