ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧಾರ್ಮಿಕವಾಗಿ ವಿಭಜಿತಗೊಂಡಿದ್ದರೂ ಸಂತೋಷ ಅಸಾಧ್ಯವಲ್ಲ

ಧಾರ್ಮಿಕವಾಗಿ ವಿಭಜಿತಗೊಂಡಿದ್ದರೂ ಸಂತೋಷ ಅಸಾಧ್ಯವಲ್ಲ

ಧಾರ್ಮಿಕವಾಗಿ ವಿಭಜಿತಗೊಂಡಿದ್ದರೂ ಸಂತೋಷ ಅಸಾಧ್ಯವಲ್ಲ

“ನಿನ್ನ [ಸಂಗಾತಿಯನ್ನು] ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು?”—1 ಕೊರಿಂ. 7:16.

ಉತ್ತರ ಕಂಡುಹಿಡಿಯುವಿರಾ?

ಧಾರ್ಮಿಕವಾಗಿ ವಿಭಜಿತ ಕುಟುಂಬದಲ್ಲಿರುವ ಕ್ರೈಸ್ತರು ಮನೆಯನ್ನು ಶಾಂತಿಧಾಮವಾಗಿಸಲು ಹೇಗೆ ಶ್ರಮಿಸಬಲ್ಲರು?

ಕುಟಂಬ ಸದಸ್ಯರು ಸತ್ಯವನ್ನು ಸ್ವೀಕರಿಸುವಂತೆ ಕ್ರೈಸ್ತನೊಬ್ಬನು ಹೇಗೆ ಸಹಾಯ ಮಾಡಬಹುದು?

ಸತ್ಯದಲ್ಲಿ ಒಬ್ಬರೇ ಇರುವವರಿಗೆ ಸಭೆಯಲ್ಲಿರುವವರು ಹೇಗೆ ಸಹಾಯ ಮಾಡಬಲ್ಲರು?

1. ಒಬ್ಬರು ಸತ್ಯವನ್ನು ಸ್ವೀಕರಿಸುವಾಗ ಕುಟುಂಬದವರು ಹೇಗೆ ಪ್ರತಿಕ್ರಿಯಿಸಬಹುದು?

ಯೇಸು ತನ್ನ ಅಪೊಸ್ತಲರನ್ನು ಸುವಾರ್ತೆ ಸಾರಲು ಕಳುಹಿಸಿದ ಒಂದು ಸಂದರ್ಭದಲ್ಲಿ ಅವರಿಗೆ, “‘ಸ್ವರ್ಗದ ರಾಜ್ಯವು ಸಮೀಪಿಸಿದೆ’ ಎಂದು ಸಾರಿಹೇಳಿರಿ” ಅಂದನು. (ಮತ್ತಾ. 10:1, 7) ಈ ಸುವಾರ್ತೆ ಅದನ್ನು ಸ್ವೀಕರಿಸಿದವರಿಗೆ ಶಾಂತಿ, ಸಂತೋಷವನ್ನು ತರಲಿತ್ತು. ಹಾಗಿದ್ದರೂ ಸಾರುವ ಕೆಲಸವನ್ನು ವಿರೋಧಿಸುವವರು ಅನೇಕರು ಇರುತ್ತಾರೆಂದು ಯೇಸು ಎಚ್ಚರಿಸಿದನು. (ಮತ್ತಾ. 10:16-23) ಅಂಥ ವಿರೋಧವು ಸ್ವಂತ ಕುಟುಂಬದವರಿಂದ ಬಂದಾಗಲಂತೂ ಹೆಚ್ಚು ನೋವನ್ನುಂಟುಮಾಡುತ್ತದೆ.—ಮತ್ತಾಯ 10:34-36 ಓದಿ.

2. ಒಬ್ಬರೇ ಸತ್ಯದಲ್ಲಿರುವವರಿಗೆ ಸಂತೋಷ ಕೈಗೆಟುಕದ ವಿಷಯವಲ್ಲ ಏಕೆ?

2 ಹಾಗಾದರೆ ಸತ್ಯದಲ್ಲಿ ಒಬ್ಬರೇ ಇರುವವರಿಗೆ ಸಂತೋಷ ಕೈಗೆಟುಕುವುದಿಲ್ಲ ಎಂದೋ? ಹಾಗಲ್ಲ. ಕೆಲವು ಕ್ರೈಸ್ತರಿಗೆ ಕುಟುಂಬದವರಿಂದ ತೀವ್ರ ವಿರೋಧ ಇದೆಯಾದರೂ ಎಲ್ಲರಿಗೆ ಹಾಗಿರುವುದಿಲ್ಲ. ವಿರೋಧವಿದ್ದರೂ ಅದು ನಿತ್ಯನಿರಂತರ ಇರಲಿಕ್ಕಿಲ್ಲ. ಸನ್ನಿವೇಶ ಹೇಗೆಯೇ ಇರಲಿ ಕ್ರೈಸ್ತರಾಗಿರುವ ವ್ಯಕ್ತಿಗಳು ಯೋಗ್ಯ ರೀತಿಯಲ್ಲಿ ಪ್ರತಿಕ್ರಿಯಿಸುವಾಗ ಸಂತೋಷ ಕೈಗೆಟುಕುವುದು. ಮಾತ್ರವಲ್ಲ ಯೆಹೋವನು ತನಗೆ ನಿಷ್ಠರಾಗಿ ಉಳಿಯುವವರಿಗೆ ಕಷ್ಟಕರ ಸನ್ನಿವೇಶಗಳಲ್ಲೂ ಸಂತೋಷದಿಂದಿರಲು ಸಹಾಯ ಮಾಡುವನು. ಸ್ವತಃ ಅವರು ಸಹ ಸಂತೋಷದಿಂದ ಇರಲು ಪ್ರಯತ್ನಿಸಬಹುದು. ಹೇಗೆ? (1) ಮನೆಯನ್ನು ಶಾಂತಿಧಾಮವಾಗಿಸಲು ಶ್ರಮಿಸುವ ಮೂಲಕ. (2) ಸತ್ಯವನ್ನು ಸ್ವೀಕರಿಸಲು ಮನೆಯವರಿಗೆ ಸಹಾಯ ಮಾಡಲು ಯಥಾರ್ಥವಾಗಿ ಪ್ರಯತ್ನಿಸುವ ಮೂಲಕ.

ಮನೆಯನ್ನು ಶಾಂತಿಧಾಮವಾಗಿಸಲು ಶ್ರಮಿಸಿರಿ

3. ಧಾರ್ಮಿಕವಾಗಿ ವಿಭಜಿತ ಕುಟುಂಬದಲ್ಲಿರುವ ಕ್ರೈಸ್ತನು ಮನೆ ಶಾಂತಿಯ ನಿವಾಸವಾಗಿರಲು ಏಕೆ ಶ್ರಮಿಸಬೇಕು?

3 ಮನೆಯಲ್ಲಿ ಶಾಂತ ಪರಿಸ್ಥಿತಿಯಿದ್ದಲ್ಲಿ ನೀತಿ ಎಂಬ ಬೀಜವು ಫಲ ಕೊಡುತ್ತದೆ. (ಯಾಕೋಬ 3:18 ಓದಿ.) ಹಾಗಾಗಿ ಮನೆಮಂದಿ ಯೆಹೋವನ ಆರಾಧಕರಾಗಿ ಇಲ್ಲದಿದ್ದರೂ ಮನೆಯು ಶಾಂತಿಯ ನಿವಾಸವಾಗಿರುವಂತೆ ಕ್ರೈಸ್ತನೊಬ್ಬನು ಶ್ರಮಿಸಬೇಕು. ಹೇಗೆ?

4. ಕ್ರೈಸ್ತರು ಹೇಗೆ ಮನಶ್ಶಾಂತಿ ಕಾಪಾಡಿಕೊಳ್ಳಬಲ್ಲರು?

4 ಕ್ರೈಸ್ತರು ಮನಶ್ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಹೃತ್ಪೂರ್ವಕ ಪ್ರಾರ್ಥನೆ ಮಾಡಬೇಕು. ಆಗ ಎಲ್ಲ ಗ್ರಹಿಕೆಯನ್ನು ಮೀರುವ “ದೇವಶಾಂತಿ” ನಮ್ಮಲ್ಲಿ ನೆಲೆಸುವುದು. (ಫಿಲಿ. 4:6, 7) ಯೆಹೋವ ದೇವರ ಕುರಿತ ಜ್ಞಾನ ಪಡೆದುಕೊಳ್ಳುವುದರಿಂದ, ಬೈಬಲ್‌ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಸುಕ್ಷೇಮ ಲಭಿಸುವುದು. (ಯೆಶಾ. 54:13) ಮಾತ್ರವಲ್ಲ ಸಭಾಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಹುರುಪಿನಿಂದ ಭಾಗವಹಿಸುವುದು ಅತ್ಯಗತ್ಯ. ಸತ್ಯದಲ್ಲಿ ಒಬ್ಬರೇ ಇರುವ ಕ್ರೈಸ್ತರು ಸಹ ಆರಾಧನೆಗೆ ಸಂಬಂಧಿಸಿದ ಈ ಚಟುವಟಿಕೆಗಳಲ್ಲಿ ಒಳಗೂಡಲು ಮಾರ್ಗವನ್ನು ಕಂಡುಕೊಳ್ಳುವುದು ಬಹುಮಟ್ಟಿಗೆ ಸಾಧ್ಯ. ಎನ್‌ಸಾ * ಎಂಬಾಕೆಯ ಉದಾಹರಣೆ ತಕ್ಕೊಳ್ಳಿ. ಅವಳು ಸತ್ಯದಲ್ಲಿರುವ ಕಾರಣ ಗಂಡ ಆಕೆಯನ್ನು ತೀವ್ರವಾಗಿ ವಿರೋಧಿಸುತ್ತಾನೆ. ಆದರೂ ಆಕೆ ಮನೆಕೆಲಸಗಳನ್ನೆಲ್ಲಾ ಮುಗಿಸಿ ನಂತರ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ. ಆಕೆ ಹೀಗನ್ನುತ್ತಾಳೆ: “ಸುವಾರ್ತೆ ಸಾರಲು ಪ್ರತಿಬಾರಿ ನಾನು ಪ್ರಯತ್ನ ಮಾಡುವಾಗ ನನಗೆ ಒಳ್ಳೇ ಫಲಿತಾಂಶಗಳು ಸಿಗುತ್ತವೆ. ಯೆಹೋವನು ನನ್ನನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಈ ಆಶೀರ್ವಾದಗಳು ಆಕೆಗೆ ಶಾಂತಿ, ಸಂತೃಪ್ತಿ, ಸಂತೋಷವನ್ನು ತಂದಿವೆ. ನಿಮಗೂ ತರಬಲ್ಲವು.

5. ಒಬ್ಬರೇ ಸತ್ಯದಲ್ಲಿರುವ ಕ್ರೈಸ್ತರು ಹೆಚ್ಚಾಗಿ ಯಾವ ಸವಾಲನ್ನು ಎದುರಿಸುತ್ತಾರೆ? ಅವರಿಗೆ ಯಾವ ಸಹಾಯವಿದೆ?

5 ಸತ್ಯದಲ್ಲಿಲ್ಲದ ಮನೆಮಂದಿಯೊಂದಿಗೆ ಶಾಂತಿಯ ಸಂಬಂಧವನ್ನಿಟ್ಟುಕೊಳ್ಳಲು ಶತಪ್ರಯತ್ನ ಮಾಡಬೇಕು. ಇದು ಅಷ್ಟು ಸುಲಭವಲ್ಲ ನಿಜ. ಕೆಲವೊಮ್ಮೆ ಬೈಬಲಿಗೆ ವಿರುದ್ಧವಾಗಿರುವ ವಿಷಯಗಳನ್ನು ಮಾಡುವಂತೆ ಅವರು ನಮಗೆ ಹೇಳಬಹುದು. ನಾವದಕ್ಕೆ ಒಪ್ಪದೆ ಬೈಬಲ್‌ ಮೂಲತತ್ವಗಳಿಗೆ ಅಂಟಿಕೊಳ್ಳುವಾಗ ಅವರು ಸಿಟ್ಟುಗೊಳ್ಳಬಹುದು. ಆದರೂ ಪ್ರಯತ್ನ ಬಿಡದಿರುವಲ್ಲಿ ಮುಂದೊಂದು ದಿನ ಪರಿಸ್ಥಿತಿ ಸುಧಾರಿಸಸಾಧ್ಯವಿದೆ. ಆದರೆ ಬೈಬಲಿಗೆ ವಿರುದ್ಧವಾಗಿರದ ವಿಷಯಗಳಲ್ಲಿ ನಾವು ಅವರೊಂದಿಗೆ ಸಹಕರಿಸುವುದು ಒಳ್ಳೇದು. ಹೀಗೆ ಅನಾವಶ್ಯಕ ಮನಸ್ತಾಪಗಳನ್ನು ತಪ್ಪಿಸುವೆವು. (ಜ್ಞಾನೋಕ್ತಿ 16:7 ಓದಿ.) ಯಾವುದೇ ಕಷ್ಟವನ್ನು ಎದುರಿಸುವಾಗ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳುವರ್ಗವು ಕೊಡುವ ಪ್ರಕಾಶನಗಳಲ್ಲಿ ಸಲಹೆಗಳನ್ನು ಹುಡುಕುವುದು ಮತ್ತು ಸಭಾ ಹಿರಿಯರ ಬಳಿ ಸಲಹೆ ಕೇಳುವುದು ಬಹಳ ಮುಖ್ಯ.—ಜ್ಞಾನೋ. 11:14.

6, 7. (ಎ) ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುವವರನ್ನು ಕುಟುಂಬದವರು ಏಕೆ ವಿರೋಧಿಸಬಹುದು? (ಬಿ) ಬೈಬಲ್‌ ವಿದ್ಯಾರ್ಥಿ ಅಥವಾ ಸಾಕ್ಷಿಯಾಗಿರುವ ಒಬ್ಬನು ಕುಟುಂಬದಿಂದ ಬರುವ ವಿರೋಧಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?

6 ಮನೆಯನ್ನು ಶಾಂತಿಧಾಮವಾಗಿಸಲು ಪ್ರಯತ್ನಿಸುವಾಗ ಯೆಹೋವನಲ್ಲಿ ಭರವಸೆಯಿಡುವುದು ಅಗತ್ಯ. ಅದರೊಂದಿಗೆ ಕುಟುಂಬದವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯ. (ಜ್ಞಾನೋ. 16:20; 24:3) ಈ ಸಲಹೆ ಹೊಸ ಬೈಬಲ್‌ ವಿದ್ಯಾರ್ಥಿಗಳಿಗೂ ಉಪಯುಕ್ತ. ಕೆಲವು ಬೈಬಲ್‌ ವಿದ್ಯಾರ್ಥಿಗಳನ್ನು ಅವರ ಪತಿ ಅಥವಾ ಪತ್ನಿ ವಿರೋಧಿಸಲಿಕ್ಕಿಲ್ಲ. ಸಂಗಾತಿ ಬೈಬಲ್‌ ಕಲಿಯುವುದರಿಂದ ತಮ್ಮ ಕುಟುಂಬಕ್ಕೇ ಒಳಿತೆಂದು ಅವರು ಒಪ್ಪಬಹುದು. ಆದರೆ ಇನ್ನು ಕೆಲವರು ತುಂಬ ವಿರೋಧಿಸಬಹುದು. ಎಸ್ತೇರ್‌ ಎಂಬಾಕೆಯ ಗಂಡ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಕಲಿಯಲು ಆರಂಭಿಸಿದಾಗ ಅವಳು ಕ್ರೋಧಗೊಂಡಳಂತೆ. ಈಗ ಯೆಹೋವನ ಸಾಕ್ಷಿಯಾಗಿರುವ ಆಕೆ ಹೀಗೆ ಹೇಳುತ್ತಾಳೆ: “ನಾನು ಅವರ ಪತ್ರಿಕೆ ಪುಸ್ತಕಗಳನ್ನು ಬಿಸಾಡಿಬಿಡುತ್ತಿದ್ದೆ. ಕೆಲವೊಮ್ಮೆ ಸುಟ್ಟುಬಿಡುತ್ತಿದ್ದೆ.” ಹಾವರ್ಡ್‌ ಎಂಬಾತ ತನ್ನ ಹೆಂಡತಿ ಬೈಬಲ್‌ ಕಲಿಯುವುದನ್ನು ಮೊದಲು ವಿರೋಧಿಸುತ್ತಿದ್ದ. ಅವನು ಹೇಳುವುದು: “ಹೆಂಡತಿ ಎಲ್ಲಿ ಮರುಳಾಗಿ ಹೊಸ ಧರ್ಮಕ್ಕೇನಾದರೂ ಸೇರಿಕೊಳ್ಳುತ್ತಾಳೋ ಎಂಬ ಹೆದರಿಕೆ ಅನೇಕ ಗಂಡಂದಿರಿಗೆ ಇರುತ್ತದೆ. ಅವಳು ಅಪಾಯದಲ್ಲಿ ಸಿಕ್ಕಿಬಿದ್ದಾಳೆಂಬ ಭಯದಿಂದ ಏನು ಮಾಡಬೇಕೆಂದು ತೋಚದೆ ಸಿಡಿದೇಳುತ್ತಾರೆ.”

7 ಸಂಗಾತಿಯು ವಿರೋಧಿಸುತ್ತಾರೆಂಬ ಕಾರಣಕ್ಕಾಗಿ ಬೈಬಲ್‌ ಅಧ್ಯಯನವನ್ನು ನಿಲ್ಲಿಸಬೇಕಾಗಿಲ್ಲ ಎಂದು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಬೇಕು. ಸೌಮ್ಯಭಾವದಿಂದ ನಡೆದುಕೊಳ್ಳುವ ಮತ್ತು ಸಂಗಾತಿಗೆ ಗೌರವ ಕೊಡುವ ಮೂಲಕ ಪರಿಸ್ಥಿತಿಯನ್ನು ತಿಳಿಯಾಗಿಸಬಹುದೆಂದು ತಿಳಿಹೇಳಬೇಕು. (1 ಪೇತ್ರ 3:15) ಹಾವರ್ಡ್‌ ಹೀಗೆ ಹೇಳುತ್ತಾರೆ: “ನನ್ನ ಹೆಂಡತಿ ಯಾವಾಗಲೂ ಪ್ರಶಾಂತವಾಗಿದ್ದಳು, ಭಾವೋದ್ರೇಕಗೊಳ್ಳಲಿಲ್ಲ. ಅವಳಿಗೆ ನಾನು ಚಿರಋಣಿ.” ಅವನ ಹೆಂಡತಿ ಏನನ್ನುತ್ತಾರೆ ಕೇಳಿ: “ಬೈಬಲ್‌ ಕಲಿಯುವುದನ್ನು ಬಿಟ್ಟುಬಿಡು, ಅವರು ನಿನ್ನ ತಲೆಕೆಡಿಸುತ್ತಿದ್ದಾರೆ ಎಂದು ನನ್ನ ಯಜಮಾನರು ಖಡಕ್ಕಾಗಿ ಹೇಳಿದರು. ನಾನು ವಾದ ಮಾಡಲಿಲ್ಲ. ನೀವು ಹೇಳುವುದು ಸರಿಯಿರಬಹುದೇನೋ. ಆದರೆ ನನಗೆ ಹಾಗೆ ಹೇಳಲಿಕ್ಕೆ ಇದುವರೆಗೆ ಅಂಥದ್ದೇನೂ ಕಾರಣ ಸಿಗಲಿಲ್ಲ. ನೀವೇ ಈ ಪುಸ್ತಕ ಓದಿನೋಡಿ ಎಂದು ಹೇಳಿದೆ. ಅವರು ಓದಿದರು. ನನ್ನ ಅಭಿಪ್ರಾಯವನ್ನು ತಳ್ಳಿಹಾಕಲು ಅವರಿಗೆ ಆಧಾರ ಸಿಗಲಿಲ್ಲ. ಅವರು ಮನಸ್ಸು ಬದಲಾಯಿಸಿಕೊಂಡರು.” ವಿರೋಧವನ್ನು ಎದುರಿಸುತ್ತಿರುವವರು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ ನೀವು ಕೂಟಗಳಿಗೆ ಅಥವಾ ಕ್ಷೇತ್ರ ಸೇವೆಗೆ ಹೋಗುವಾಗ ನಿಮ್ಮ ಸಂಗಾತಿಗೆ ಒಂಟಿತನದ ಭಾವನೆ ಕಾಡಬಹುದು ಅಥವಾ ತಮ್ಮ ಮದುವೆ ಮುರಿದು ಬೀಳುವುದೋ ಎಂದು ಭಯವಾಗಬಹುದು. ಹಾಗಾಗಿ ಸಾಕ್ಷಿಯಾಗಿರುವ ವ್ಯಕ್ತಿ ಅಥವಾ ಬೈಬಲ್‌ ವಿದ್ಯಾರ್ಥಿ ತನ್ನ ಸಂಗಾತಿಯ ಮನದ ದುಗುಡವನ್ನು ದೂರಮಾಡುವಂಥ ರೀತಿಯಲ್ಲಿ ಪ್ರೀತಿಯಿಂದ ಆಶ್ವಾಸನೆ ನೀಡಬೇಕು.

ಸತ್ಯ ಸ್ವೀಕರಿಸಲು ಅವರಿಗೆ ಸಹಾಯಮಾಡಿ

8. ಅವಿಶ್ವಾಸಿ ಸಂಗಾತಿಯಿರುವ ಕ್ರೈಸ್ತರಿಗೆ ಅಪೊಸ್ತಲ ಪೌಲ ಯಾವ ಸಲಹೆ ಕೊಟ್ಟನು?

8 ಸಂಗಾತಿ ಅವಿಶ್ವಾಸಿ ಎಂಬ ಕಾರಣಕ್ಕಾಗಿ ಕ್ರೈಸ್ತರು ಅವರನ್ನು ತೊರೆಯಬಾರದೆಂದು ಅಪೊಸ್ತಲ ಪೌಲ ಬುದ್ಧಿಹೇಳಿದನು. * (1 ಕೊರಿಂಥ 7:12-16 ಓದಿ.) ತನ್ನಾಕೆ ಅಥವಾ ತನ್ನ ಯಜಮಾನರು ಒಂದು ದಿನ ಸತ್ಯವನ್ನು ಸ್ವೀಕರಿಸಬಹುದು ಎಂಬ ನಿರೀಕ್ಷೆ ಹೊಂದಿರುವುದು ಕ್ರೈಸ್ತ ಸಂಗಾತಿಗೆ ಸಂತೋಷದಿಂದಿರಲು ನೆರವಾಗುವುದು. ಅದೇ ಸಮಯದಲ್ಲಿ ಸತ್ಯವನ್ನು ಸ್ವೀಕರಿಸುವಂತೆ ಸಂಗಾತಿಗೆ ಸಹಾಯ ಮಾಡುವಾಗ ಜಾಗ್ರತೆ ವಹಿಸುವ ಅಗತ್ಯವೂ ಇದೆ. ಇದನ್ನು ಕೆಳಗಿನ ಅನುಭವಗಳು ತೋರಿಸುತ್ತವೆ.

9. ಕ್ರೈಸ್ತನೊಬ್ಬನು ತನ್ನ ಕುಟುಂಬದವರಿಗೆ ಬೈಬಲ್‌ ಸತ್ಯವನ್ನು ಪರಿಚಯಿಸುವಾಗ ಯಾವ ಎಚ್ಚರಿಕೆ ವಹಿಸಬೇಕು?

9 ಜೇಸನ್‌ ಎಂಬವರು ಬೈಬಲ್‌ ಸತ್ಯವನ್ನು ಕಲಿಯುವಾಗ ತಮಗಾದ ಸಂಭ್ರಮವನ್ನು ಹೀಗೆ ಹೇಳುತ್ತಾರೆ: “ನಾನು ಕಲಿತದ್ದನ್ನು ಸಿಕ್ಕಿದವರಿಗೆಲ್ಲಾ ಹೇಳಬೇಕೆಂಬ ತವಕವಿತ್ತು!” ಹೌದು, ಬೈಬಲ್‌ ವಿದ್ಯಾರ್ಥಿ ತಾನು ಕಲಿಯುತ್ತಿರುವುದು ಸತ್ಯವೆಂದು ಮನಗಂಡಾಗ ಅವನಿಗೆಷ್ಟು ಸಂತೋಷವಾಗುತ್ತದೆಂದರೆ ಎಲ್ಲ ಸಮಯದಲ್ಲೂ ಅದರ ಬಗ್ಗೆಯೇ ಮಾತಾಡುತ್ತಿರುತ್ತಾನೆ. ತನ್ನ ಮನೆಯವರು ಸಹ ಸತ್ಯವನ್ನು ಕೂಡಲೆ ಸ್ವೀಕರಿಸಬೇಕೆಂದು ನಿರೀಕ್ಷಿಸುತ್ತಾನೆ. ಆದರೆ ಮನೆಯವರು ಅದನ್ನು ಒಪ್ಪಲಿಕ್ಕಿಲ್ಲ. ಜೇಸನ್‌ನ ಹುಮ್ಮಸ್ಸಿಗೆ ಅವನ ಹೆಂಡತಿ ಹೇಗೆ ಪ್ರತಿಕ್ರಿಯಿಸಿದಳು? “ಅವರು ಆ ವಿಷಯ ಮಾತಾಡಲು ಶುರುಮಾಡಿದರೆ ನಿಲ್ಲಿಸುತ್ತಿರಲಿಲ್ಲ. ನನಗೆ ಕೇಳಿ ಕೇಳಿ ಸಾಕಾಗುತ್ತಿತ್ತು” ಎನ್ನುತ್ತಾಳಾಕೆ. ಒಬ್ಬಾಕೆ ಸ್ತ್ರೀ ತನ್ನ ಗಂಡ ಸಾಕ್ಷಿಯಾಗಿ 18 ವರ್ಷಗಳ ಬಳಿಕ ಸತ್ಯ ಕಲಿತಳು. ಆಕೆ ಹೀಗನ್ನುತ್ತಾಳೆ: “ನನಗೆ ಎಲ್ಲವನ್ನು ಒಮ್ಮೆಲೆ ಕಲಿಯುವುದು ಕಷ್ಟ, ಸ್ವಲ್ಪ ಸ್ವಲ್ಪವಾಗಿ ಕಲಿಯುವುದು ಸುಲಭ.” ನಿಮ್ಮ ಬೈಬಲ್‌ ವಿದ್ಯಾರ್ಥಿಯ ಸಂಗಾತಿಗೆ ಬೈಬಲ್‌ ಸತ್ಯವನ್ನು ಕಲಿಯುವ ಮನಸ್ಸಿಲ್ಲದಿರಬಹುದು. ಹಾಗಿದ್ದಲ್ಲಿ ವಿದ್ಯಾರ್ಥಿಯು ತನ್ನ ಸಂಗಾತಿಗೆ ಸಿಟ್ಟೆಬ್ಬಿಸದ ರೀತಿಯಲ್ಲಿ ಬೈಬಲ್‌ ಸತ್ಯವನ್ನು ಹೇಗೆ ತಿಳಿಸಬಹುದೆಂದು ತೋರಿಸಲು ನಿಯತವಾಗಿ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡಿ. ಮೋಶೆ ಹೀಗೆ ಹೇಳಿದನು: “ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ ತಣ್ಣಗಿರುವದು; ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ ಹಿತವಾಗಿರುವದು.” (ಧರ್ಮೋ. 32:2) ಹೌದು, ಬೈಬಲ್‌ ಸತ್ಯದ ಧಾರಾಕಾರ ಸುರಿಮಳೆಗಿಂತ ಹದವಾಗಿ ಬೀಳುವ ಸತ್ಯದ ತುಂತುರು ಹನಿಗಳು ಹೆಚ್ಚು ಕಾರ್ಯಸಾಧಕ.

10-12. (ಎ) ಪತಿ ಸತ್ಯದಲ್ಲಿಲ್ಲದ ಪತ್ನಿಯರಿಗೆ ಅಪೊಸ್ತಲ ಪೇತ್ರ ಯಾವ ಬುದ್ಧಿವಾದ ನೀಡಿದನು? (ಬಿ) 1 ಪೇತ್ರ 3:1, 2ರ ಸಲಹೆಯನ್ನು ಅನ್ವಯಿಸಲು ಒಬ್ಬಾಕೆ ಬೈಬಲ್‌ ವಿದ್ಯಾರ್ಥಿ ಹೇಗೆ ಕಲಿತಳು?

10 ಪತಿ ಸತ್ಯದಲ್ಲಿಲ್ಲದ ಪತ್ನಿಯರಿಗೆ ಅಪೊಸ್ತಲ ಪೇತ್ರ ದೇವಪ್ರೇರಣೆಯಿಂದ ಈ ಸಲಹೆ ಕೊಟ್ಟನು: “ಅದೇ ರೀತಿಯಲ್ಲಿ ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” (1 ಪೇತ್ರ 3:1, 2) ಗಂಡ ನಿರ್ದಯವಾಗಿ ಉಪಚರಿಸಿದರೂ ಕ್ರೈಸ್ತ ಹೆಂಡತಿ ಅವನಿಗೆ ಅಧೀನತೆಯನ್ನೂ ಆಳವಾದ ಗೌರವವನ್ನೂ ತೋರಿಸುವಲ್ಲಿ ಅವನು ಸತ್ಯವನ್ನು ಕಲಿಯಲು ಆಕೆ ದಾರಿ ಮಾಡುವಳು. ಅದೇ ರೀತಿ, ಕ್ರೈಸ್ತ ಗಂಡನು ಹೆಂಡತಿಯಿಂದ ವಿರೋಧವನ್ನು ಎದುರಿಸುತ್ತಿರುವಾಗಲೂ ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಡೆಯುತ್ತಾ ಪ್ರೀತಿಯಿಂದ ಕುಟುಂಬದ ಶಿರಸ್ಸುತನವನ್ನು ನಿರ್ವಹಿಸುವಾಗ ಫಲಿತಾಂಶ ಒಳ್ಳೇದಾಗಬಹುದು.—1 ಪೇತ್ರ 3:7-9.

11 ಪೇತ್ರನ ಸಲಹೆಯನ್ನು ಅನ್ವಯಿಸುವುದರಿಂದ ನಿಜವಾಗಿಯೂ ಪ್ರಯೋಜನವಿದೆ ಎನ್ನುವುದನ್ನು ಇಂದು ಅನೇಕರ ಉದಾಹರಣೆಗಳು ತೋರಿಸುತ್ತವೆ. ಸೆಲ್ಮ ಎಂಬಾಕೆಯ ಉದಾಹರಣೆ ಗಮನಿಸಿ. ಆಕೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಕಲಿಯಲು ಆರಂಭಿಸಿದಾಗ ಆಕೆಯ ಗಂಡ ಸ್ಟೀವ್‌ ಅದನ್ನು ಇಷ್ಟಪಡಲಿಲ್ಲ. ಆತ ಹೀಗನ್ನುತ್ತಾನೆ: “ನನಗೆ ಎಲ್ಲಿಲ್ಲದ ಸಿಟ್ಟು ಬಂತು. ಹೊಸದೇನನ್ನೋ ಕಲಿಯುತ್ತಾ ಅದರ ಹಿಂದೆ ಸಮಯ ವ್ಯಯಿಸುತ್ತಿದ್ದಾಳೆ ಎಂದನಿಸಿತು. ನನ್ನನ್ನೆಲ್ಲಿ ಬಿಟ್ಟು ಹೋಗುತ್ತಾಳೋ ಎಂಬ ಭಯವೂ ಬಂತು.” ಸೆಲ್ಮ ಅನ್ನುವುದು: “ನನ್ನ ಗಂಡನೊಂದಿಗೆ ಬಾಳುವುದು ಸತ್ಯ ತಿಳಿಯುವುದಕ್ಕೆ ಮುಂಚೆಯೂ ಕಷ್ಟವಾಗಿತ್ತು. ಅವರಿಗೆ ಮೂಗಿನ ತುದಿಯಲ್ಲೇ ಕೋಪ. ಯಾವಾಗ ಸಿಡಿದೇಳುತ್ತಾರೊ ಗೊತ್ತಾಗುತ್ತಿರಲಿಲ್ಲ. ನಾನು ಬೈಬಲ್‌ ಕಲಿಯಲು ಆರಂಭಿಸಿದಾಗಲಂತೂ ಅವರ ಕೋಪ ಇನ್ನಷ್ಟು ತೀವ್ರವಾಯಿತು.” ಈ ಪರಿಸ್ಥಿತಿಯನ್ನು ಸುಧಾರಿಸಲು ಯಾವುದು ಸಹಾಯ ಮಾಡಿತು?

12 ಸೆಲ್ಮ ತನ್ನೊಂದಿಗೆ ಅಧ್ಯಯನ ಮಾಡಿದ ಯೆಹೋವನ ಸಾಕ್ಷಿಯಿಂದ ಒಂದು ಒಳ್ಳೇ ಪಾಠ ಕಲಿತಳು. ಆ ಬಗ್ಗೆ ಸೆಲ್ಮ ಹೀಗನ್ನುತ್ತಾಳೆ: “ಒಂದು ದಿನ ಬೈಬಲ್‌ ಅಧ್ಯಯನಕ್ಕೆ ಕೂತುಕೊಳ್ಳಲು ನನಗೆ ಮನಸ್ಸಿರಲಿಲ್ಲ. ಏಕೆಂದರೆ ಹಿಂದಿನ ರಾತ್ರಿ ನನಗೂ ನನ್ನ ಗಂಡನಿಗೂ ಜಗಳವಾಗಿತ್ತು. ನಮ್ಮಿಬ್ಬರ ಮಧ್ಯೆ ವಾಗ್ವಾದ ನಡೆದು ಸ್ಟೀವ್‌ ಕೋಪಗೊಂಡು ನನ್ನನ್ನು ಹೊಡೆದಿದ್ದರು. ನನ್ನ ಮನಸ್ಸು ತೀರಾ ನೊಂದಿತ್ತು. ನನ್ನ ಸ್ಥಿತಿಯ ಬಗ್ಗೆ ನನಗೇ ಮರುಕಹುಟ್ಟಿತು. ಬೈಬಲ್‌ ಅಧ್ಯಯನ ಮಾಡಲು ಬಂದಿದ್ದ ಸಹೋದರಿಗೆ ರಾತ್ರಿ ನಡೆದ ಘಟನೆಯನ್ನೂ ನನ್ನ ಅನಿಸಿಕೆಯನ್ನೂ ಹೇಳಿಕೊಂಡೆ. ಅವರು ನನಗೆ 1 ಕೊರಿಂಥ 13:4-7ನ್ನು ಓದುವಂತೆ ಹೇಳಿದರು. ನಾನು ಆ ವಚನ ಓದಿದ ಬಳಿಕ, ‘ಇಲ್ಲಿ ಹೇಳಿರುವ ಯಾವದನ್ನೂ ಸ್ಟೀವ್‌ ಮಾಡುವುದಿಲ್ಲ. ಈ ರೀತಿ ಪ್ರೀತಿಯಿಂದ ವರ್ತಿಸುವುದೇ ಇಲ್ಲ’ ಎಂದೆ. ಆಗ ಆ ಸಹೋದರಿ ನಾನು ಇನ್ನೊಂದು ದೃಷ್ಟಿಕೋನದಿಂದ ಯೋಚಿಸುವಂತೆ ಮಾಡಿದರು. ‘ನೀನು ಅಂಥ ಪ್ರೀತಿಯನ್ನು ತೋರಿಸಿದ್ದೀಯಾ?’ ಎಂದು ಕೇಳಿದರು. ‘ಅವರ ಜೊತೆ ಬಾಳೋದೇ ಕಷ್ಟ, ಅಂಥದರಲ್ಲಿ ಇಂಥ ಪ್ರೀತಿಯನ್ನು ತೋರಿಸುವುದು ಹೇಗೆ?’ ಎಂದೆ ನಾನು. ಆಗ ಮೃದುಸ್ವರದಿಂದ ಅವರು, ‘ಸೆಲ್ಮ, ನಿಮ್ಮಿಬ್ಬರಲ್ಲಿ ಕ್ರಿಸ್ತನಂತಿರಲು ಪ್ರಯತ್ನಿಸುತ್ತಿರುವವರು ಯಾರು? ಅವರಾ ನೀನಾ?’ ಎಂದು ಕೇಳಿದರು. ಇದನ್ನು ಕೇಳಿದೊಡನೆ ಅವರು ಹೇಳಬಯಸಿದ್ದು ನನಗೆ ಅರ್ಥವಾಯಿತು. ನನ್ನನ್ನೇ ನಾನು ಬದಲಾಯಿಸಿಕೊಳ್ಳುವ ಅಗತ್ಯವಿದೆಯೆಂದು ಗ್ರಹಿಸಿದೆ. ಸ್ಟೀವ್‌ ಜೊತೆ ಹೆಚ್ಚು ಪ್ರೀತಿಯಿಂದ ವರ್ತಿಸಲು ಸಹಾಯ ಮಾಡೆಂದು ಯೆಹೋವನಿಗೆ ಪ್ರಾರ್ಥಿಸಿದೆ. ಮೆಲ್ಲಮೆಲ್ಲನೆ ಪರಿಸ್ಥಿತಿ ಬದಲಾಯಿತು.” 17 ವರ್ಷಗಳ ನಂತರ ಸ್ಟೀವ್‌ ಸತ್ಯ ಸ್ವೀಕರಿಸಿದರು.

ಇತರರು ಸಹಾಯ ಮಾಡುವ ವಿಧ

13, 14. ಧಾರ್ಮಿಕವಾಗಿ ವಿಭಜಿತ ಕುಟುಂಬದಲ್ಲಿರುವ ಕ್ರೈಸ್ತರಿಗೆ ಸಭೆಯಲ್ಲಿರುವವರು ಹೇಗೆ ಸಹಾಯ ಮಾಡಬಹುದು?

13 ಮಳೆಯ ಹನಿಗಳು ನೆಲವನ್ನು ತೋಯಿಸಿ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುವಂತೆ ಸಭೆಯಲ್ಲಿರುವವರು ಸತ್ಯದಲ್ಲಿ ಒಬ್ಬರೇ ಇರುವವರಿಗೆ ಚೈತನ್ಯ ನೀಡಿ ಸಂತೋಷದಲ್ಲಿರುವಂತೆ ನೆರವಾಗಬಲ್ಲರು. ಬ್ರಸೀಲ್‌ನ ಎಲ್ವೀನ ಎಂಬಾಕೆ ಹೀಗನ್ನುತ್ತಾಳೆ: “ಸಹೋದರ ಸಹೋದರಿಯರು ತೋರಿಸಿದ ಪ್ರೀತಿಯೇ ನಾನು ಸತ್ಯದಲ್ಲಿ ಸ್ಥಿರವಾಗಿ ನಿಲ್ಲಲು ಸಹಾಯ ಮಾಡಿತು.”

14 ಸಭೆಯಲ್ಲಿರುವವರು ತೋರಿಸುವ ಕಳಕಳಿ ಮತ್ತು ದಯಾಭಾವ ಅವಿಶ್ವಾಸಿಗಳ ಹೃದಯವನ್ನೂ ಬದಲಾಯಿಸಬಲ್ಲದು. ನೈಜಿರೀಯದಲ್ಲಿ ಒಬ್ಬಾಕೆಯು ಸಾಕ್ಷಿಯಾಗಿ 13 ವರ್ಷಗಳ ನಂತರ ಆಕೆಯ ಗಂಡ ಸತ್ಯ ಸ್ವೀಕರಿಸಿದರು. ಆತ ಹೀಗನ್ನುತ್ತಾರೆ: “ನಾನು ಒಮ್ಮೆ ಒಬ್ಬ ಸಾಕ್ಷಿಯೊಂದಿಗೆ ಅವನ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯದಾರಿಯಲ್ಲಿ ವಾಹನ ನಿಂತುಹೋಯಿತು. ಅವನು ಪಕ್ಕದ ಹಳ್ಳಿಯಲ್ಲಿದ್ದ ಸಾಕ್ಷಿಗಳನ್ನು ಸಂಪರ್ಕಿಸಿದನು. ಅವರು ನಮಗೆ ಆ ರಾತ್ರಿ ತಮ್ಮ ಮನೆಯಲ್ಲಿ ಉಳುಕೊಳ್ಳುವಂತೆ ಹೇಳಿದರು. ಎಷ್ಟೋ ವರ್ಷಗಳಿಂದ ನಮ್ಮ ಪರಿಚಯವಿದ್ದವರಂತೆ ಅವರು ನಮ್ಮನ್ನು ಉಪಚರಿಸಿದರು. ನನ್ನ ಹೆಂಡತಿ ಹೇಳುತ್ತಿದ್ದ ಕ್ರೈಸ್ತ ಪ್ರೀತಿ ಏನೆಂಬುದು ಆಗ ನನಗೆ ತಿಳಿದುಬಂತು.” ಇಂಗ್ಲೆಂಡ್‌ನ ಒಬ್ಬನು ಸಾಕ್ಷಿಯಾಗಿ 18 ವರ್ಷಗಳ ಬಳಿಕ ಅವನ ಹೆಂಡತಿ ಸತ್ಯ ಸ್ವೀಕರಿಸಿದಳು. ಆಕೆ ಹೀಗನ್ನುತ್ತಾಳೆ: “ಸಾಕ್ಷಿಗಳು ನನ್ನ ಗಂಡನೊಂದಿಗೆ ನನ್ನನ್ನೂ ಊಟಕ್ಕೆ ಆಮಂತ್ರಿಸುತ್ತಿದ್ದರು. ನನಗೆ ಮುಜುಗರವಾಗದಂತೆ ನೋಡಿಕೊಳ್ಳುತ್ತಿದ್ದರು.” * ಇಂಗ್ಲೆಂಡ್‌ನಲ್ಲಿ ಈಗ ಸಾಕ್ಷಿಯಾಗಿರುವ ಒಬ್ಬ ಪತಿ ಹೀಗನ್ನುತ್ತಾನೆ: “ಸಹೋದರ ಸಹೋದರಿಯರು ನಮ್ಮನ್ನು ಭೇಟಿಮಾಡುತ್ತಿದ್ದರು ಅಥವಾ ನಮ್ಮನ್ನು ಅವರ ಮನೆಗೆ ಆಮಂತ್ರಿಸುತ್ತಿದ್ದರು. ಸಾಕ್ಷಿಗಳು ಪ್ರೀತಿ ಕಾಳಜಿಯುಳ್ಳ ಜನರೆಂದು ನಾನು ಕಂಡುಕೊಂಡೆ. ನಾನೊಮ್ಮೆ ಆಸ್ಪತ್ರೆಯಲ್ಲಿದ್ದಾಗ ಅನೇಕರು ನನ್ನನ್ನು ನೋಡಲು ಬಂದಿದ್ದರು. ಆಗಂತೂ ಅವರ ಪ್ರೀತಿ ಕಾಳಜಿ ಇನ್ನಷ್ಟು ಸ್ಪಷ್ಟವಾಯಿತು.” ಸತ್ಯದಲ್ಲಿ ಒಬ್ಬರೇ ಇರುವವರ ಕುಟುಂಬದವರಿಗೆ ಕಾಳಜಿ ತೋರಿಸಲು ನೀವು ಕೂಡ ಸಂದರ್ಭವನ್ನು ಹುಡುಕುತ್ತೀರಾ?

15, 16. ಕುಟುಂಬದಲ್ಲಿರುವವರು ಸತ್ಯವನ್ನು ಸ್ವೀಕರಿಸದಿದ್ದಾಗಲೂ ಕ್ರೈಸ್ತನೊಬ್ಬನು ಸಂತೋಷದಿಂದಿರಲು ಯಾವುದು ಸಹಾಯ ಮಾಡುತ್ತದೆ?

15 ಕೆಲವೊಮ್ಮೆ ಕ್ರೈಸ್ತನೊಬ್ಬನು ಎಷ್ಟೇ ವರ್ಷಗಳಿಂದ ಸದ್ವರ್ತನೆ ತೋರಿಸಿದರೂ ಜಾಣ್ಮೆಯಿಂದ ಸಾಕ್ಷಿಕೊಡಲು ಪ್ರಯತ್ನಿಸಿದರೂ ಅವನ ಅವಿಶ್ವಾಸಿ ಸಂಗಾತಿ, ಮಕ್ಕಳು, ಹೆತ್ತವರು ಅಥವಾ ಸಂಬಂಧಿಕರು ಸತ್ಯವನ್ನು ಸ್ವೀಕರಿಸಲಿಕ್ಕಿಲ್ಲ. ಕೆಲವರು ಆಸಕ್ತಿಯನ್ನೇ ತೋರಿಸದಿರಬಹುದು ಅಥವಾ ವಿರೋಧಿಸುತ್ತಲೇ ಇರಬಹುದು. (ಮತ್ತಾ. 10:35-37) ಹಾಗಿದ್ದರೂ ಕ್ರೈಸ್ತ ಗುಣಗಳನ್ನು ತೋರಿಸುತ್ತಾ ಇರುವುದು ವ್ಯರ್ಥವಲ್ಲ. ಒಂದಲ್ಲ ಒಂದು ದಿನ ಅದರಿಂದ ಒಳ್ಳೇ ಫಲಿತಾಂಶ ಸಿಗಬಹುದು. ಈ ಮುಂಚೆ ಅವಿಶ್ವಾಸಿಯಾಗಿದ್ದ ಪತಿ ಏನು ಹೇಳುತ್ತಾರೆಂದು ಗಮನಿಸಿ: “ಸೊಗಸಾದ ಗುಣಗಳನ್ನು ಕ್ರೈಸ್ತ ಸಂಗಾತಿ ತೋರಿಸುವಾಗ ಅದು ಸತ್ಯದಲ್ಲಿಲ್ಲದ ಸಂಗಾತಿಯ ಹೃದಮನದ ಮೇಲೆ ಎಂಥ ಪ್ರಭಾವ ಬೀರುತ್ತಿರುತ್ತದೆ ಎಂಬುದು ನಿಮಗೆ ತಿಳಿಯದು. ಹಾಗಾಗಿ ಏನೇ ಆದರೂ ಪ್ರಯತ್ನವನ್ನೆಂದೂ ಬಿಟ್ಟುಬಿಡಬೇಡಿ.”

16 ಕುಟುಂಬ ಸದಸ್ಯರು ಸತ್ಯವನ್ನು ಸ್ವೀಕರಿಸದಿದ್ದರೂ ಕ್ರೈಸ್ತನೊಬ್ಬನು ಸಂತೋಷದಿಂದ ಇರಸಾಧ್ಯವಿದೆ. ಒಬ್ಬಾಕೆ ಸಹೋದರಿ 21 ವರ್ಷಗಳ ಸತತ ಪ್ರಯತ್ನ ಮಾಡಿದ ಬಳಿಕವೂ ಆಕೆಯ ಗಂಡ ಸತ್ಯವನ್ನು ಸ್ವೀಕರಿಸಲಿಲ್ಲ. ಆಕೆ ಏನು ಹೇಳುತ್ತಾಳೆಂದರೆ, “ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವ ಮೂಲಕ, ಆತನಿಗೆ ನಿಷ್ಠಳಾಗಿ ಉಳಿಯುವ ಮೂಲಕ, ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಶ್ರಮಿಸುವ ಮೂಲಕ ನನ್ನ ಸಂತೋಷವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ವೈಯಕ್ತಿಕ ಅಧ್ಯಯನ, ಕ್ರೈಸ್ತ ಕೂಟಗಳಿಗೆ ಹೋಗುವುದು, ಕ್ಷೇತ್ರ ಸೇವೆ, ಸಭೆಯಲ್ಲಿ ಇತರರಿಗೆ ಸಹಾಯ ಮಾಡುವುದು ಈ ಎಲ್ಲ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಾನು ಕಾರ್ಯಮಗ್ನಳಾಗಿರುತ್ತೇನೆ. ಇದು ಯೆಹೋವನಿಗೆ ಆಪ್ತಳಾಗಿರಲು, ನನ್ನ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಲು ಸಹಾಯ ಮಾಡಿದೆ.”—ಜ್ಞಾನೋ. 4:23.

ಪ್ರಯತ್ನ ಬಿಟ್ಟುಬಿಡಬೇಡಿ!

17, 18. ಧಾರ್ಮಿಕವಾಗಿ ವಿಭಜಿತ ಕುಟುಂಬದಲ್ಲಿದ್ದರೂ ಕ್ರೈಸ್ತನೊಬ್ಬನು ಆಶಾವಾದಿಯಾಗಿರಲು ಹೇಗೆ ಸಾಧ್ಯ?

17 ಧಾರ್ಮಿಕವಾಗಿ ವಿಭಜಿತ ಕುಟುಂಬದಲ್ಲಿರುವ ನಂಬಿಗಸ್ತ ಕ್ರೈಸ್ತರೇ, ಪ್ರಯತ್ನವನ್ನು ಎಂದಿಗೂ ಬಿಟ್ಟುಬಿಡಬೇಡಿ. “ಯೆಹೋವನು . . . ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ” ಎನ್ನುವುದನ್ನು ನೆನಪಿನಲ್ಲಿಡಿ. (1 ಸಮು. 12:22) ನೀವು ಆತನಿಗೆ ಅಂಟಿಕೊಂಡಿರುವ ತನಕ ಆತನು ನಿಮ್ಮೊಂದಿಗಿರುವನು. (2 ಪೂರ್ವಕಾಲವೃತ್ತಾಂತ 15:2 ಓದಿ.) ಹಾಗಾಗಿ ‘ಯೆಹೋವನಲ್ಲಿ ಸಂತೋಷಿಸಿರಿ.’ ‘ನಿಮ್ಮ ಭೂಯಾತ್ರೆಯ ಚಿಂತೆಯನ್ನು ಆತನಿಗೆ ವಹಿಸಿಬಿಟ್ಟು ಭರವಸದಿಂದಿರಿ.’ (ಕೀರ್ತ. 37:4, 5) “ಪಟ್ಟುಹಿಡಿದು ಪ್ರಾರ್ಥಿಸಿರಿ.” ಯಾವುದೇ ರೀತಿಯ ಕಷ್ಟವನ್ನು ಸಹಿಸಿಕೊಳ್ಳಲು ಸ್ವರ್ಗದಲ್ಲಿರುವ ನಮ್ಮ ಪ್ರೀತಿಯ ತಂದೆಯಾದ ದೇವರು ಸಹಾಯ ಮಾಡಶಕ್ತನು ಎಂಬ ನಂಬಿಕೆ ನಿಮಗಿರಲಿ.—ರೋಮ. 12:12.

18 ಮನೆಯನ್ನು ಶಾಂತಿಧಾಮವಾಗಿಸಲು ಶ್ರಮಿಸುವಾಗ ಪವಿತ್ರಾತ್ಮದ ಸಹಾಯಕ್ಕಾಗಿ ಯೆಹೋವನಿಗೆ ಬಿನ್ನೈಸಿರಿ. (ಇಬ್ರಿ. 12:14) ನೀವು ಹೀಗೆ ಕುಟುಂಬದಲ್ಲಿ ಶಾಂತಿಯ ವಾತಾವರಣ ಸೃಷ್ಟಿಸುವಲ್ಲಿ ಅದು ಸತ್ಯದಲ್ಲಿಲ್ಲದ ಮನೆಮಂದಿಯ ಮೇಲೆ ಒಳ್ಳೇ ಪ್ರಭಾವ ಬೀರಬಲ್ಲದು. ನೀವೂ ಸಂತೋಷವನ್ನು ಅನುಭವಿಸಬಲ್ಲಿರಿ. ‘ಎಲ್ಲವನ್ನು ದೇವರ ಮಹಿಮೆಗಾಗಿ ಮಾಡುವಾಗ’ ಮನಶ್ಶಾಂತಿಯೂ ನಿಮಗಿರುವುದು. (1 ಕೊರಿಂ. 10:31) ನಿಮ್ಮ ಈ ಪ್ರಯತ್ನದಲ್ಲಿ ಸಭೆಯಲ್ಲಿರುವ ನಿಮ್ಮ ಸಹೋದರ ಸಹೋದರಿಯರ ಪ್ರೀತಿಯ ಬೆಂಬಲ ನಿಮಗಿದೆ ಎಂಬ ಖಾತ್ರಿ ಇರಲಿ!

[ಪಾದಟಿಪ್ಪಣಿಗಳು]

^ ಪ್ಯಾರ. 4 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 8 ಅತಿರೇಕ ಪರಿಸ್ಥಿತಿಗಳಲ್ಲಿ ಕಾನೂನುಬದ್ಧ ಪ್ರತ್ಯೇಕವಾಸದ ಕುರಿತು ಪೌಲನು ಇಲ್ಲಿ ಮಾತಾಡುತ್ತಿಲ್ಲ. ಅದು ಪ್ರತಿಯೊಬ್ಬರು ವೈಯಕ್ತಿಕವಾಗಿ ಮಾಡಬೇಕಾದ ಗಂಭೀರ ನಿರ್ಣಯವಾಗಿದೆ. “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 251-253 ನೋಡಿ.

^ ಪ್ಯಾರ. 14 ಸತ್ಯದಲ್ಲಿ ಇಲ್ಲದವರೊಂದಿಗೆ ಊಟ ಮಾಡುವುದನ್ನು ಬೈಬಲ್‌ ನಿಷೇಧಿಸುವುದಿಲ್ಲ.—1 ಕೊರಿಂ. 10:27.

[ಅಧ್ಯಯನ ಪ್ರಶ್ನೆಗಳು]

[ಪುಟ 28ರಲ್ಲಿರುವ ಚಿತ್ರ]

ಸಮಯ ಸೂಕ್ತವಾಗಿರುವಾಗ ನಿಮ್ಮ ನಂಬಿಕೆಗಳನ್ನು ವಿವರಿಸಿ

[ಪುಟ 29ರಲ್ಲಿರುವ ಚಿತ್ರ]

ಸತ್ಯದಲ್ಲಿ ಇಲ್ಲದವರಿಗೆ ಪರಿಗಣನೆ ತೋರಿಸಿ