ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾ ತಾ ನ ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ

ನಾ ತಾ ನ ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ

ನಾ ತಾ ನ ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ

ಅಧಿಕಾರದಲ್ಲಿರುವ ವ್ಯಕ್ತಿಯ ತಪ್ಪನ್ನು ತೋರಿಸಿಕೊಟ್ಟು, ತಿದ್ದಿಕೊಳ್ಳುವಂತೆ ಮನಗಾಣಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಅವನು ತನ್ನ ತಪ್ಪನ್ನು ಮುಚ್ಚಿಡುವ ಸಲುವಾಗಿ ಒಬ್ಬನನ್ನು ಕೊಲ್ಲಿಸಿದ್ದಾನೆ ಎಂದು ತಿಳಿದಿರುವಲ್ಲಿ ಅದು ಇನ್ನಷ್ಟು ಕಷ್ಟಕರ.

ಪುರಾತನ ಇಸ್ರಾಯೇಲಿನ ರಾಜ ದಾವೀದ ಬತ್ಷೆಬೆಯೊಂದಿಗೆ ವ್ಯಭಿಚಾರಗೈಯುತ್ತಾನೆ. ಆಕೆ ಗರ್ಭಿಣಿಯೆಂದು ತಿಳಿದಾಗ ಆ ಘೋರ ಪಾಪವನ್ನು ಮುಚ್ಚಿಹಾಕಲು ಆಕೆಯ ಗಂಡನನ್ನು ಕೊಲ್ಲಿಸಿ ಆಕೆಯನ್ನು ತನ್ನ ಪತ್ನಿಯಾಗಿ ತೆಗೆದುಕೊಳ್ಳುತ್ತಾನೆ. ಅವನ ಈ ಇಬ್ಬಗೆಯ ಜೀವನ ಕೆಲವು ತಿಂಗಳು ಮುಂದುವರಿಯುತ್ತದೆ. ಈ ಮಧ್ಯೆ ತನ್ನ ರಾಜ್ಯಭಾರವನ್ನೂ ನಡೆಸುತ್ತಾ ಇರುತ್ತಾನೆ. ಆದರೆ ಅವನ ಪಾಪವು ಯೆಹೋವನ ದೃಷ್ಟಿಗೆ ಮರೆಯಾಗಲೂ ಇಲ್ಲ, ಮುಚ್ಚಿಹೋಗಲೂ ಇಲ್ಲ. ಅವನ ಪಾಪದ ಗಂಭೀರತೆಯನ್ನು ತೋರಿಸಿ ಕೊಡುವಂತೆ ಯೆಹೋವನು ತನ್ನ ಪ್ರವಾದಿಯಾದ ನಾತಾನನನ್ನು ಅವನ ಬಳಿಗೆ ಕಳುಹಿಸುತ್ತಾನೆ.

ಈ ಕಷ್ಟಕರ ನೇಮಕ ನಿಮಗೆ ಕೊಡಲ್ಪಡುತ್ತಿದ್ದಲ್ಲಿ ಹೇಗನಿಸುತ್ತಿತ್ತು . . . ? ಯೆಹೋವನ ಕಡೆಗೂ ದೈವಿಕ ಮಟ್ಟಗಳ ಕಡೆಗೂ ಇದ್ದ ನಿಷ್ಠೆ ದಾವೀದನ ಪಾಪಗಳನ್ನು ತಿಳಿಯಪಡಿಸುವಂತೆ ನಾತಾನನಲ್ಲಿ ಧೈರ್ಯ ತುಂಬಿತು. ದಾವೀದನ ತಪ್ಪನ್ನು ತಿಳಿಸಿ ಪಶ್ಚಾತ್ತಾಪಪಡುವ ಅಗತ್ಯವಿದೆ ಎಂದು ನಾತಾನನು ಅವನಿಗೆ ಹೇಗೆ ಮನಗಾಣಿಸಿದನು?

ಜಾಣ್ಮೆಯ ಶಿಕ್ಷಕ

ಅದನ್ನು ತಿಳಿಯಲು 2 ಸಮುವೇಲ 12:1-25ನ್ನು ಓದಿ. ಓದುತ್ತಿರುವಾಗ ನಿಮ್ಮನ್ನು ನಾತಾನನ ಸ್ಥಾನದಲ್ಲಿಟ್ಟು ಕಲ್ಪಿಸಿಕೊಳ್ಳಿ. ಅವನು ದಾವೀದನಿಗೆ ಒಂದು ಕಥೆಯನ್ನು ಹೇಳುತ್ತಾನೆ: “ಒಂದು ಊರಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಇನ್ನೊಬ್ಬನು ಬಡವನು. ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು. ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅವನು ಅದನ್ನು ಕೊಂಡುಕೊಂಡು ಸಾಕುತ್ತಿದ್ದನು. ಅದು ದೊಡ್ಡದಾಗುವವರೆಗೆ ಮಗಳಂತೆ ಅವನ ಸಂಗಡಲೂ ಅವನ ಮಕ್ಕಳ ಸಂಗಡಲೂ ಇದ್ದುಕೊಂಡು ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು; ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆಮಾಡುತ್ತಿತ್ತು. ಒಂದು ದಿವಸ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು.”—2 ಸಮು. 12:1-4.

ಒಂದೊಮ್ಮೆ ಕುರುಬನಾಗಿದ್ದ ದಾವೀದ ಈ ಕಥೆಯನ್ನು ನಿಜವೆಂದೇ ನಂಬಿದ್ದಿರಬೇಕು. ಈ ಕುರಿತು ಒಬ್ಬ ವ್ಯಾಖ್ಯಾನಕಾರ ಹೀಗೆ ಹೇಳುತ್ತಾನೆ: “ಸಾಮಾನ್ಯವಾಗಿ ಯಾರಿಗಾದರೂ ಅನ್ಯಾಯ ಸಂಭವಿಸಿದಾಗ ಪರಿಹಾರ ಕೊಡಿಸುವ ಸಲುವಾಗಿ ದಾವೀದನ ಬಳಿಗೆ ಬಂದು ವಿಷಯ ತಿಳಿಸುವ ಪರಿಪಾಠ ನಾತಾನನಿಗೆ ಇದ್ದಿರಬೇಕು. ಅದೇ ರೀತಿ ಈಗಲೂ ಬಂದಿದ್ದಾನೆಂದು ದಾವೀದ ಭಾವಿಸಿದ್ದಿರಬೇಕು.” ಇದು ನಿಜವಾಗಿದ್ದರೂ ಈ ಸಂದರ್ಭದಲ್ಲಿ ರಾಜ ದಾವೀದನ ಬಳಿ ಮಾತಾಡಲು ನಾತಾನನಿಗೆ ತುಂಬಾ ಧೈರ್ಯ ಬೇಕಿತ್ತು. ಅಷ್ಟೇ ಅಲ್ಲ ಇದು ದೇವರ ಕಡೆಗೆ ಅವನಿಗಿದ್ದ ನಿಷ್ಠೆಯ ಪರೀಕ್ಷೆಯೂ ಆಗಿತ್ತು. ನಾತಾನನು ಕಥೆ ಮುಗಿಸಿದಾಗ “ಯೆಹೋವನಾಣೆ, ಆ ಮನುಷ್ಯನು ಸಾಯಲೇ ಬೇಕು” ಎಂದು ದಾವೀದನು ಕೋಪಾರೋಷದಿಂದ ಗುಡುಗಿದನು. ತಕ್ಷಣವೇ ನಾತಾನನ ಬಾಯಿಂದ ಅಲಗು ನೆಟ್ಟಂತೆ ಮಾತು ಹೊರಟಿತು: “ಆ ಮನುಷ್ಯನು ನೀನೇ”!—2 ಸಮು. 12:5-7.

ನಾತಾನನು ತಪ್ಪನ್ನು ಮನಗಾಣಿಸಲು ಕಥೆಯನ್ನು ಹೇಳಿದ್ದೇಕೆ? ಅನುರಾಗದ ಅನುಬಂಧದಲ್ಲಿ ಮುಳುಗಿರುವವನಿಗೆ ಅವನ ತಪ್ಪನ್ನು ಮನಗಾಣಿಸುವುದಾಗಲಿ ಸರಿಯಾಗಿ ಯೋಚಿಸುವಂತೆ ಮಾಡುವುದಾಗಲಿ ಸುಲಭವಲ್ಲ. ಸಾಮಾನ್ಯವಾಗಿ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುವುದು ಮಾನವ ಗುಣ. ಆದರೆ ನಾತಾನನ ಕಥೆ ದಾವೀದನು ತನಗರಿವಿಲ್ಲದೆ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿತು. ಕಥೆಯಲ್ಲಿದ್ದ ಆ ಮನುಷ್ಯನು ಮಾಡಿದ್ದು ತೀರ ಕೆಟ್ಟದ್ದಾಗಿತ್ತೆಂದು ದಾವೀದನು ಕೂಡಲೆ ಪ್ರತಿಕ್ರಿಯಿಸಿದನು. ಈ ಪ್ರತಿಕ್ರಿಯೆಯ ನಂತರವೇ “ಆ ಮನುಷ್ಯನು ನೀನೇ” ಎಂದು ನಾತಾನನು ಬಯಲುಪಡಿಸಿದನು. ಇದರಿಂದ ದಾವೀದನಿಗೆ ತನ್ನ ಪಾಪದ ಗಂಭೀರತೆಯನ್ನು ಮನಗಾಣಲು ಸಾಧ್ಯವಾಯಿತು. ಸರಿಯಾಗಿ ಯೋಚಿಸಲು ಅವನಿಗೆ ಈ ಕಥೆ ಸಹಾಯಮಾಡಿತು. ಬತ್ಷೆಬೆಯೊಂದಿಗಿನ ತನ್ನ ಕೆಟ್ಟ ಕೃತ್ಯದ ಮೂಲಕ ತಾನು ಯೆಹೋವನನ್ನು ‘ತಿರಸ್ಕರಿಸಿದ್ದೇನೆ’ ಎಂದು ಅವನು ಒಪ್ಪಿಕೊಂಡನು. ತಿದ್ದುಪಾಟನ್ನು ಸ್ವೀಕರಿಸಿದನು.—2 ಸಮು. 12:9-14; ಕೀರ್ತ. 51, ಮೇಲ್ಬರಹ.

ಇದರಿಂದ ನಮಗೇನು ಪಾಠ? ಬೈಬಲ್‌ ಬೋಧಕರ ಗುರಿ ಕೇಳುಗರು ಸರಿಯಾದ ನಿರ್ಣಯಕ್ಕೆ ಬರುವಂತೆ ಸಹಾಯ ಮಾಡುವುದೇ ಆಗಿರಬೇಕು. ನಾತಾನನಿಗೆ ದಾವೀದನ ಕಡೆಗೆ ಗೌರವವಿತ್ತು. ಹಾಗಾಗಿ ಅವನೊಂದಿಗೆ ಜಾಣ್ಮೆಯಿಂದ ಮಾತಾಡಿದನು. ದಾವೀದ ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವ ವ್ಯಕ್ತಿ ಎಂದು ನಾತಾನನಿಗೆ ತಿಳಿದಿತ್ತು. ದಾವೀದನಲ್ಲಿದ್ದ ಈ ಗುಣಗಳನ್ನು ಪ್ರವಾದಿ ಆ ಕಥೆಯ ಮೂಲಕ ಬಡಿದೆಬ್ಬಿಸಿದನು. ದೇವಭಯವುಳ್ಳ ಜನರು ಯೆಹೋವನ ನೋಟವನ್ನು ತಿಳಿಯುವಂತೆ ನಾವೂ ಸಹಾಯ ಮಾಡಸಾಧ್ಯವಿದೆ. ಹೇಗೆ? ಸಾಮಾನ್ಯವಾಗಿ ಜನರಿಗೆ ಸರಿತಪ್ಪಿನ ಕುರಿತಾದ ಪ್ರಜ್ಞೆಯಿರುತ್ತದೆ. ಅವರ ಆ ಪ್ರಜ್ಞೆಯನ್ನೇ ಬಡಿದೆಬ್ಬಿಸುತ್ತಾ ದೇವರ ನೋಟವನ್ನು ತಿಳಿಸಲು ಪ್ರಯತ್ನಿಸಬಹುದು. ಆದರೆ ಹಾಗೆ ಮಾಡುವಾಗ ನಾವು ಶ್ರೇಷ್ಠರೆಂಬಂತೆ ತೋರಿಸಿಕೊಳ್ಳದಂತೆ ಜಾಗ್ರತೆವಹಿಸಬೇಕು. ಸರಿತಪ್ಪನ್ನು ನಮ್ಮ ಸ್ವಂತ ಅಭಿಪ್ರಾಯದ ಮೇಲಲ್ಲ, ಬೈಬಲಿನ ಆಧಾರದ ಮೇಲೆ ನಿರ್ಧರಿಸಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ದೇವರ ಕಡೆಗಿನ ನಿಷ್ಠೆಯೇ ನಾತಾನನಿಗೆ ರಾಜ ದಾವೀದನನ್ನು ತಿದ್ದಲು ಧೈರ್ಯ ನೀಡಿತು. (2 ಸಮು. 12:1) ಅಂತೆಯೇ ಯೆಹೋವನ ಕಡೆಗಿರುವ ನಮ್ಮ ನಿಷ್ಠೆ ಆತನ ನೀತಿಯ ಮೂಲತತ್ವಗಳಿಗೆ ಅಂಟಿಕೊಳ್ಳಲು ನಮಗೆ ಧೈರ್ಯ ಕೊಡುತ್ತದೆ.

ಶುದ್ಧಾರಾಧನೆಯ ಸಮರ್ಥಕ

ದಾವೀದ, ನಾತಾನ ಆಪ್ತ ಸ್ನೇಹಿತರಾಗಿದ್ದರೆಂದು ವ್ಯಕ್ತವಾಗುತ್ತದೆ. ಏಕೆಂದರೆ ದಾವೀದನು ತನ್ನೊಬ್ಬ ಮಗನಿಗೆ ನಾತಾನನೆಂದು ಹೆಸರಿಟ್ಟಿದ್ದನು. (1 ಪೂರ್ವ. 3:1, 5) ನಾತಾನನ ಕುರಿತು ಬೈಬಲ್‌ನಲ್ಲಿರುವ ಮೊದಲ ಉಲ್ಲೇಖದಲ್ಲಿ ಅವನು ದಾವೀದನೊಂದಿಗಿರುವ ಬಗ್ಗೆ ನಾವು ಓದುತ್ತೇವೆ. ಅವರಿಬ್ಬರಿಗೂ ಯೆಹೋವನ ಮೇಲೆ ಪ್ರೀತಿಯಿತ್ತು. ನಾತಾನನ ನ್ಯಾಯತೀರ್ಮಾನದಲ್ಲಿ ರಾಜ ದಾವೀದನಿಗೆ ಭರವಸೆಯಿತ್ತು. ಆದ್ದರಿಂದಲೇ ಯೆಹೋವನಿಗಾಗಿ ಆಲಯ ಕಟ್ಟಬೇಕೆಂಬ ತನ್ನ ಮನದಾಸೆಯನ್ನು ನಾತಾನನಿಗೆ ತಿಳಿಸಿದನು. “ನೋಡು, ನಾನು ದೇವದಾರುಮರದ ಮನೆಯಲ್ಲಿ ವಾಸವಾಗಿದ್ದೇನೆ; ದೇವರ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ.” ಅದಕ್ಕೆ ನಾತಾನನು “ಆಗಲಿ ಮನಸ್ಸಿದ್ದಂತೆ ಮಾಡು, ಯೆಹೋವನು ನಿನ್ನ ಸಂಗಡ ಇರುತ್ತಾನೆ” ಅಂದನು.—2 ಸಮು. 7:2, 3.

ಭೂಮಿಯಲ್ಲಿ ಶುದ್ಧಾರಾಧನೆಯ ಕೇಂದ್ರವಾಗಿ ಮೊತ್ತಮೊದಲ ಬಾರಿ ಆಲಯವನ್ನು ಕಟ್ಟುವ ದಾವೀದನ ಯೋಜನೆಯನ್ನು ಯೆಹೋವನ ನಂಬಿಗಸ್ತ ಆರಾಧಕನಾದ ನಾತಾನನು ಹುರುಪಿನಿಂದ ಬೆಂಬಲಿಸಿದನು. ನಾತಾನನು ವ್ಯಕ್ತಪಡಿಸಿದ ಈ ಅಭಿಪ್ರಾಯವು ಅವನ ಸ್ವಂತದ್ದಾಗಿತ್ತು. ಆದರೆ ಯೆಹೋವನ ಅಭಿಪ್ರಾಯ ಬೇರೆಯೇ ಆಗಿತ್ತು. ಆ ರಾತ್ರಿ ದೇವರು ತನ್ನ ಅಭಿಪ್ರಾಯವನ್ನು ಪ್ರವಾದಿಗೆ ತಿಳಿಸಿದನು. ಅದೇನೆಂದರೆ, ಆಲಯವನ್ನು ದಾವೀದನಲ್ಲ, ಅವನ ಪುತ್ರರಲ್ಲಿ ಒಬ್ಬನು ಕಟ್ಟುವನು. ಈ ಮಾತನ್ನು ನಾತಾನನು ದಾವೀದನಿಗೆ ತಿಳಿಸಿದನು. ಆದರೆ ಅದರೊಂದಿಗೆ ದೇವರು ದಾವೀದನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಲಿದ್ದಾನೆ ಮತ್ತು ಅವನ ಸಿಂಹಾಸನವನ್ನು ‘ನಿರಂತರವಾಗಿ ಸ್ಥಿರಪಡಿಸಲಿದ್ದಾನೆ’ ಎಂಬುದಾಗಿಯೂ ತಿಳಿಸಿದನು.—2 ಸಮು. 7:4-16.

ದೇವಾಲಯವನ್ನು ಕಟ್ಟುವ ವಿಷಯದಲ್ಲಿ ನಾತಾನನ ಅಭಿಪ್ರಾಯ ಒಂದಾಗಿದ್ದರೆ ದೇವರ ಆಲೋಚನೆ ಬೇರೆಯೇ ಆಗಿತ್ತು. ಆದರೆ ಈ ನಮ್ರ ಪ್ರವಾದಿ ಸ್ವಲ್ಪವೂ ಗುಣುಗುಟ್ಟದೆ ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಿ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದನು. ಎಂಥ ಉತ್ತಮ ಮಾದರಿ! ದೇವರು ಯಾವುದೇ ವಿಧದಲ್ಲಿ ನಮ್ಮನ್ನು ಸರಿಪಡಿಸುವಾಗ ನಾವು ನಾತಾನನಂತೆ ಅದನ್ನು ಸ್ವೀಕರಿಸಬೇಕು. ಯೆಹೋವನು ತದನಂತರವೂ ನಾತಾನನನ್ನು ಪ್ರವಾದಿಯಾಗಿ ಉಪಯೋಗಿಸಿದ್ದು ಅವನಿಗೆ ಆತನ ಅನುಗ್ರಹವಿತ್ತೆಂದು ತೋರಿಸುತ್ತದೆ. ದೇವಾಲಯದಲ್ಲಿ ನಾಲ್ಕು ಸಾವಿರ ಸಂಗೀತಗಾರರನ್ನು ನೇಮಿಸುವಂತೆ ದಾವೀದನನ್ನು ನಿರ್ದೇಶಿಸಲು ಸಹ ಯೆಹೋವನು ನಾತಾನನನ್ನು ಮತ್ತು ರಾಜದರ್ಶಿಯಾದ ಗಾದನನ್ನು ಉಪಯೋಗಿಸಿದನು.—1 ಪೂರ್ವ. 23:1-5; 2 ಪೂರ್ವ. 29:25.

ರಾಜತ್ವದ ಸಮರ್ಥಕ

ದಾವೀದನ ನಂತರ ಸೊಲೊಮೋನನೇ ಪಟ್ಟಕ್ಕೇರಬೇಕೆಂಬುದು ನಾತಾನನಿಗೆ ತಿಳಿದಿತ್ತು. ದಾವೀದನು ವೃದ್ಧನಾಗಿ ಬಲಗುಂದಿದ ಸಮಯದಲ್ಲಿ ಅದೋನೀಯನು ಅವನ ಸಿಂಹಾಸನವನ್ನು ವಶಪಡಿಸಿಕೊಳ್ಳಲು ಹೂಡಿದ ಸಂಚು ನಾತಾನನಿಗೆ ತಿಳಿದುಬಂದಾಗ ಅವನು ಕೂಡಲೆ ಕಾರ್ಯಪ್ರವೃತ್ತನಾದನು. ಈ ಸಂದರ್ಭದಲ್ಲೂ ಅವನ ಜಾಣ್ಮೆ ಹಾಗೂ ನಿಷ್ಠೆ ಎದ್ದುಕಾಣುತ್ತದೆ. ಮೊದಲಾಗಿ ಅವನು ಬತ್ಷೆಬೆಯ ಬಳಿಗೆ ಹೋಗಿ ಸೊಲೊಮೋನನನ್ನು ರಾಜನಾಗಿ ಮಾಡುವೆನೆಂದು ದಾವೀದನು ಮಾಡಿದ ಪ್ರಮಾಣವನ್ನು ಅವನಿಗೆ ನೆನಪಿಸುವಂತೆ ಹೇಳಿದನು. ಅನಂತರ ನಾತಾನನೇ ದಾವೀದನ ಬಳಿಗೆ ಹೋಗಿ ಉತ್ತರಾಧಿಕಾರಿ ಆಗುವಂತೆ ಅದೋನೀಯನಿಗೆ ಅವನು ಅಪ್ಪಣೆಕೊಟ್ಟಿದ್ದಾನೋ ಎಂದು ಕೇಳಿದನು. ಸನ್ನಿವೇಶದ ಗಂಭೀರತೆಯನ್ನು ಅರಿತು ವೃದ್ಧ ದಾವೀದನು ಸೊಲೊಮೋನನನ್ನು ಅಭಿಷೇಕಿಸಿ ಅರಸನಾಗಿ ಘೋಷಿಸುವಂತೆ ನಾತಾನನಿಗೂ ಇತರ ನಿಷ್ಠಾವಂತ ಸೇವಕರಿಗೂ ಆಜ್ಞಾಪಿಸಿದನು. ಹೀಗೆ ಅದೋನೀಯನ ಸಂಚು ಮಣ್ಣುಮುಕ್ಕಿತು.—1 ಅರ. 1:5-53.

ವಿನಮ್ರ ಇತಿಹಾಸಗಾರ

1 ಸಮುವೇಲ 25ರಿಂದ 31ನೇ ಅಧ್ಯಾಯವನ್ನೂ 2 ಸಮುವೇಲ ಪುಸ್ತಕವನ್ನೂ ನಾತಾನ ಹಾಗೂ ಗಾದ್‌ ಬರೆದರೆಂದು ನಂಬಲಾಗುತ್ತದೆ. ಈ ಪುಸ್ತಕಗಳಲ್ಲಿರುವ ಪ್ರೇರಿತ ಐತಿಹಾಸಿಕ ದಾಖಲೆಯ ಕುರಿತು ಹೀಗೆ ಹೇಳಲಾಗಿದೆ: “ದಾವೀದನ ಪೂರ್ವೋತ್ತರ ಚರಿತ್ರೆಯೂ ಅವನ ಆಳಿಕೆ, ಪರಾಕ್ರಮ, ಅವನಿಗೂ ಇಸ್ರಾಯೇಲ್ಯರಿಗೂ ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತವೂ ದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದರ್ಶಿಯಾದ ಗಾದ ಇವರ ಚರಿತ್ರೆಗಳಲ್ಲಿ ಬರೆದಿರುತ್ತವೆ.” (1 ಪೂರ್ವ. 29:29, 30) “ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆ” ಕುರಿತಾಗಿಯೂ ನಾತಾನನು ಬರೆದನು ಎಂದು ಬೈಬಲ್‌ ತಿಳಿಸುತ್ತದೆ. (2 ಪೂರ್ವ. 9:29) ಅಂದರೆ ದಾವೀದನ ಮರಣಾನಂತರವೂ ನಾತಾನನು ರಾಜನ ಆಸ್ಥಾನದಲ್ಲಿ ಸೇವೆ ಮಾಡುತ್ತಿದ್ದಿರಬೇಕು.

ನಾತಾನನ ಬಗ್ಗೆ ನಮಗೆ ತಿಳಿದಿರುವುದೆಲ್ಲವೂ ಸ್ವತಃ ಅವನು ಬರೆದ ಮಾತುಗಳಿಂದಲೇ. ಹಾಗಿದ್ದರೂ ಕೆಲವು ವಿಷಯಗಳಲ್ಲಿ ಅವನು ತಳೆದಿರುವ ಮೌನ ಅವನ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ. ನಾತಾನನು ವಿನಮ್ರ ಇತಿಹಾಸಗಾರನಾಗಿದ್ದನು. ಪ್ರಖ್ಯಾತಿಯನ್ನು ಅವನೆಂದೂ ಬಯಸಲಿಲ್ಲ. ಅವನ ಕುರಿತಾದ ವೈಯಕ್ತಿಕ ಮಾಹಿತಿಯನ್ನಾಗಲಿ ಅವನ ಕುಟುಂಬದ ಕುರಿತಾದ ಮಾಹಿತಿಯನ್ನಾಗಲಿ ನಾವು ಬೈಬಲಿನಲ್ಲಿ ಕಂಡುಕೊಳ್ಳುವುದಿಲ್ಲ ಎಂದು ಒಂದು ಬೈಬಲ್‌ ನಿಘಂಟು ತಿಳಿಸುತ್ತದೆ. ಅವನ ವಂಶಾವಳಿಯ ಬಗ್ಗೆಯಾಗಲಿ ವೈಯಕ್ತಿಕ ಜೀವನದ ಬಗ್ಗೆಯಾಗಲಿ ನಮಗೇನೂ ತಿಳಿದಿಲ್ಲ.

ಯೆಹೋವನ ಕಡೆಗಿನ ನಿಷ್ಠೆಯಿಂದ ಪ್ರಚೋದಿತನು

ನಾತಾನನ ಬಗ್ಗೆ ಬೈಬಲ್‌ ಕೊಡುವ ಮಾಹಿತಿಯ ತುಣುಕುಗಳಿಂದ ಅವನು ನಮ್ರನು, ದೈವಿಕ ಏರ್ಪಾಡುಗಳ ಸಮರ್ಥಕನು ಎಂಬುದು ಸ್ಪಷ್ಟ. ಯೆಹೋವ ದೇವರು ಅವನಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡಿದ್ದನು. ನಾತಾನನಲ್ಲಿದ್ದ ಒಳ್ಳೇ ಗುಣಗಳ ಕುರಿತು ಧ್ಯಾನಿಸಿ. ಅವನಿಗೆ ದೇವರ ಕಡೆಗಿದ್ದ ನಿಷ್ಠೆ, ದೈವಿಕ ಏರ್ಪಾಡುಗಳಿಗಾಗಿದ್ದ ಆಳವಾದ ಗಣ್ಯತೆಯನ್ನು ಅನುಕರಿಸಲು ಪ್ರಯತ್ನಿಸಿ.

ನಿಮಗಿಂದು ವ್ಯಭಿಚಾರಗೈದ ರಾಜರನ್ನು ತಿದ್ದುವ ಅಥವಾ ಸಂಚುಗಳನ್ನು ನಿಷ್ಫಲಗೊಳಿಸುವ ನೇಮಕ ಸಿಗಲಿಕ್ಕಿಲ್ಲ. ಆದರೆ ನೀವು ದೇವರಿಗೆ ನಿಷ್ಠರಾಗಿದ್ದು ಆತನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯಬೇಕಿದೆ. ನೀವದನ್ನು ದೇವರ ಸಹಾಯದಿಂದ ಮಾಡಬಲ್ಲಿರಿ. ಸತ್ಯವನ್ನು ಧೈರ್ಯ ಮತ್ತು ಜಾಣ್ಮೆಯಿಂದ ಬೋಧಿಸಬಲ್ಲಿರಿ. ಸತ್ಯಾರಾಧನೆಯನ್ನು ಸಮರ್ಥಿಸಬಲ್ಲಿರಿ.

[ಪುಟ 25ರಲ್ಲಿರುವ ಚಿತ್ರ]

ರಾಜ್ಯಾಧಿಕಾರವು ನೇಮಿತ ವ್ಯಕ್ತಿಗೆ ಸಿಗುವಂತೆ ಮಾಡಲು ನಾತಾನನು ಬತ್ಷೆಬೆಯೊಂದಿಗೆ ಜಾಣ್ಮೆಯಿಂದ ಮಾತಾಡಿದನು