ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?

ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?

ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?

ಇಡೀಭೂಮಿಯಲ್ಲಿ ಎಷ್ಟು ಕ್ರೈಸ್ತರಿದ್ದಾರೆ? ಅಟ್ಲಾಸ್‌ ಆಫ್‌ ಗ್ಲೋಬಲ್‌ ಕ್ರಿಸ್ಟಿಯಾನಿಟಿ ಅನ್ನೋ ಪುಸ್ತಕದ ಪ್ರಕಾರ 2010ರಲ್ಲಿ ಇಡೀ ಭೂಮಿಯಲ್ಲಿ ಸುಮಾರು 230 ಕೋಟಿಯಷ್ಟು ಕ್ರೈಸ್ತರಿದ್ರು. ಅಷ್ಟೇ ಅಲ್ಲ, ಲೋಕವ್ಯಾಪಕವಾಗಿ ಕ್ರೈಸ್ತರಲ್ಲಿ 41, 000ಕ್ಕಿಂತ ಹೆಚ್ಚು ಪಂಗಡಗಳಿವೆ. ಪ್ರತಿಯೊಂದಕ್ಕೂ ಅವರದ್ದೇ ಆದ ನಂಬಿಕೆಗಳು ಮತ್ತು ನಿಯಮಗಳು ಇವೆ ಅಂತ ಆ ಪುಸ್ತಕ ಹೇಳುತ್ತೆ. “ಕ್ರೈಸ್ತ” ಧರ್ಮದಲ್ಲೇ ಇಷ್ಟೊಂದು ಪಂಗಡಗಳು ಇರೋದನ್ನ ನೋಡಿ, ‘ಇವರಲ್ಲಿ ನಿಜ ಕ್ರೈಸ್ತರು ಯಾರು’ ಅನ್ನೋ ಜನರಿಗೆ ಗೊಂದಲ ಇದೆ. ಅಷ್ಟೇ ಅಲ್ಲ, ‘ಕ್ರೈಸ್ತರು ಅಂತ ಹೇಳಿಕೊಳ್ಳೋರೆಲ್ಲ ನಿಜವಾಗ್ಲೂ ಕ್ರೈಸ್ತರಾ?‘ ಅಂತ ಅವರು ಯೋಚಿಸುತ್ತಾರೆ.

ಇದನ್ನ ಅರ್ಥಮಾಡಿಕೊಳ್ಳೋಕೆ ಒಂದು ಉದಾಹರಣೆಯನ್ನ ನೋಡೋಣ. ಬೇರೆ ದೇಶಕ್ಕೆ ಹೋಗುವ ವ್ಯಕ್ತಿ ತಾನು ಯಾವ ದೇಶದವನು ಅಂತ ಗಡಿ ಭಾಗದಲ್ಲಿರುವ ಅಧಿಕಾರಿಗೆ ತಿಳಿಸಬೇಕು. ಅದಕ್ಕಾಗಿ ತನ್ನ ಗುರುತಿನ ಚೀಟಿಯನ್ನ ಅಥವಾ ಪಾಸ್‌ಪೋರ್ಟ್‌ನ್ನ ತೋರಿಸಬೇಕು. ಅದೇ ರೀತಿಯಲ್ಲಿ ಒಬ್ಬ ಕ್ರೈಸ್ತ ಬರೀ ಬಾಯಿಮಾತಲ್ಲಿ ತಾನು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀನಿ ಅಂತ ಹೇಳಿದ್ರೆ ಸಾಕಾಗಲ್ಲ. ಬದಲಿಗೆ ಅವನು ಒಬ್ಬ ಕ್ರೈಸ್ತನಾಗಿದ್ದಾನೆ ಅಂತ ತನ್ನ ನಡೆನುಡಿಯಲ್ಲಿ ತೋರಿಸಬೇಕು.

ಯೇಸು ಸತ್ತು ಸುಮಾರು 10 ವರ್ಷಗಳಾದ ಮೇಲೆ ಅಂದರೆ ಕ್ರಿಸ್ತಶಕ 44ರ ನಂತರ ಮೊದಲ ಬಾರಿಗೆ “ಕ್ರೈಸ್ತರು” ಅನ್ನೋ ಹೆಸರು ಬಂತು. ಇದರ ಬಗ್ಗೆ ಲೂಕ ಹೀಗೆ ಹೇಳುತ್ತಾನೆ: “ಶಿಷ್ಯರನ್ನ ‘ಕ್ರೈಸ್ತರು’ ಅಂತ ಮೊದಮೊದಲು ಕರೆದಿದ್ದು ಅಂತಿಯೋಕ್ಯದಲ್ಲೇ. ದೇವರೇ ಅವ್ರಿಗೆ ಈ ಹೆಸ್ರನ್ನ ಕೊಟ್ಟನು.” (ಅಪೊಸ್ತಲರ ಕಾರ್ಯ 11:26) ಯೇಸು ಕ್ರಿಸ್ತನ ಶಿಷ್ಯರನ್ನೇ ಕ್ರೈಸ್ತರು ಅಂತ ಕರೆದಿದ್ದು ಅನ್ನೋದನ್ನ ಮರೆಯಬೇಡಿ. ಹಾಗಾದ್ರೆ ಒಬ್ಬ ವ್ಯಕ್ತಿ ಯೇಸು ಕ್ರಿಸ್ತನ ಶಿಷ್ಯನಾಗಬೇಕಾದ್ರೆ ಏನು ಮಾಡಬೇಕು? ದ ನ್ಯೂ ಇಂಟರ್‌ನ್ಯಾಷನಲ್‌ ಡಿಕ್ಷನರಿ ಆಫ್‌ ನ್ಯೂ ಟೆಸ್ಟಮೆಂಟ್‌ ಥಿಯಾಲಜಿ ಹೀಗೆ ಹೇಳುತ್ತೆ: “ಒಬ್ಬ ವ್ಯಕ್ತಿ ಕ್ರೈಸ್ತನಾಗಬೇಕಾದ್ರೆ ತನ್ನ ಜೀವನಪೂರ್ತಿ ಯೇಸುವಿನ ಮಾದರಿಯನ್ನ ಅನುಕರಿಸಬೇಕು ಮತ್ತು ಆತನು ಹೇಳಿದ ಹಾಗೇ ತನ್ನ ಜೀವನವನ್ನ ನಡೆಸಬೇಕು.” ಅಂದರೆ ಅವನು ಯಾವುದೇ ಸ್ವಾರ್ಥದಿಂದಲ್ಲ, ಪೂರ್ಣ ಮನಸ್ಸಿನಿಂದ ಯೇಸು ಕಲಿಸಿದ್ದನ್ನ ತನ್ನ ಜೀವನದಲ್ಲಿ ಪಾಲಿಸಬೇಕು.

ಇಷ್ಟೆಲ್ಲಾ ಕ್ರೈಸ್ತ ಪಂಗಡಗಳಿರೋದ್ರಿಂದ ಇವರಲ್ಲಿ ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ? ಇವರನ್ನ ಕಂಡುಹಿಡಿಯಲಿಕ್ಕೆ ಯೇಸು ಯಾವ ಗುರುತುಗಳನ್ನ ಕೊಟ್ಟನು? ಈ ಪ್ರಶ್ನೆಗಳಿಗೆ ಉತ್ತರವನ್ನ ನಾವು ಬೈಬಲಿನಿಂದ ನೋಡೋಣ. ಮುಂದಿನ ಲೇಖನಗಳಲ್ಲಿ, ನಿಜ ಕ್ರೈಸ್ತರನ್ನ ಗುರುತಿಸಲಿಕ್ಕೆ ಯೇಸು ನಮಗೆ ಸಹಾಯ ಮಾಡಿದ 5 ವಿಷಯಗಳನ್ನ ನೋಡೋಣ. ಒಂದನೇ ಶತಮಾನದ ಕ್ರೈಸ್ತರು ಈ ಗುರುತುಗಳನ್ನ ಹೇಗೆ ತೋರಿಸಿದರು ಅಂತ ನೋಡೋಣ. ಅಷ್ಟೇ ಅಲ್ಲ, ಈ ಗುರುತುಗಳ ಸಹಾಯದಿಂದ ಈಗಿನ ಕಾಲದಲ್ಲಿರುವ ನಿಜ ಕ್ರೈಸ್ತರು ಯಾರು ಅಂತ ಕಂಡುಹಿಡಿಯೋಣ.