ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು”

“ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು”

ದೇವರ ಸಮೀಪಕ್ಕೆ ಬನ್ನಿರಿ

“ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು”

ನೆನಪುಗಳು ಕೆಲವೊಮ್ಮೆ ವರದಂತಿವೆ. ಆತ್ಮೀಯರೊಂದಿಗೆ ಕಳೆದಂಥ ಮಧುರ ಕ್ಷಣಗಳನ್ನು ಮೆಲುಕುಹಾಕುವಾಗೆಲ್ಲ ಮನಸ್ಸು ಪ್ರಫುಲ್ಲವಾಗುತ್ತದೆ. ಇನ್ನೂ ಕೆಲವೊಮ್ಮೆ ನೆನಪುಗಳು ಶಾಪದಂತಿವೆ. ಜೀವನದಲ್ಲಿ ನಡೆದ ಕಹಿ ಘಟನೆಗಳ ನೆನಪುಗಳು ಮಾಸದೆ ಕಾಡುತ್ತಿರುತ್ತವೆ. ಅಂಥ ನೆನಪುಗಳು ನಿಮ್ಮನ್ನೂ ಕಾಡುತ್ತಿವೆಯೇ? ಹಾಗಿದ್ದಲ್ಲಿ, ‘ಹೃದಯಹಿಂಡುವ ಈ ನೆನಪುಗಳು ಯಾವತ್ತೂ ಮನಸ್ಸಿಗೆ ಬರಬಾರದಪ್ಪಾ’ ಎಂದು ನೀವು ಆಶಿಸಿರಬಹುದು. ಆದರೆ ಅದು ಸಾಧ್ಯವೇ? ಮನಸ್ಸಿಗೆ ಮುದನೀಡುವ ಉತ್ತರ ಪ್ರವಾದಿ ಯೆಶಾಯನ ಮಾತುಗಳಲ್ಲಿವೆ.—ಯೆಶಾಯ 65:17 ಓದಿ.

ಕಹಿ ನೆನಪುಗಳಿಗೆ ಕಾರಣವಾಗುವ ಸಂಗತಿಗಳನ್ನೇ ಯೆಹೋವನು ಕಿತ್ತೆಸೆಯಲು ಉದ್ದೇಶಿಸಿದ್ದಾನೆ. ಹೇಗೆ? ದುಷ್ಟತನ, ಕಷ್ಟಕಾರ್ಪಣ್ಯಗಳಿರುವ ಈ ಲೋಕವನ್ನು ತೆಗೆದುಹಾಕಿ ಉತ್ತಮ ಪರಿಸ್ಥಿತಿಗಳಿರುವ ಲೋಕವೊಂದನ್ನು ತರುವ ಮೂಲಕವೇ. “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು” ಎಂದು ಯೆಹೋವನು ಯೆಶಾಯನ ಮೂಲಕ ಮಾತು ಕೊಟ್ಟಿದ್ದಾನೆ. ನಾವು ಈ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ಹೃದಯದಲ್ಲಿ ಭರವಸೆ ತುಂಬಿತುಳುಕುವುದು.

ನೂತನಾಕಾಶಮಂಡಲ ಅಂದರೇನು? ಬೈಬಲ್‌ ಎರಡು ಸುಳಿವುಗಳನ್ನು ಕೊಡುತ್ತದೆ. ನೂತನಾಕಾಶಮಂಡಲ (ಇಲ್ಲವೆ ನೂತನ ಆಕಾಶ) ಎಂಬ ಪದವನ್ನು ಇನ್ನಿಬ್ಬರು ಬೈಬಲ್‌ ಲೇಖಕರು ಬಳಸಿರುವುದೇ ಮೊದಲ ಸುಳಿವು. ಅವರದನ್ನು ಭೂಮಿ ಮೇಲಾಗುವ ಮಹತ್ತರ ಬದಲಾವಣೆಗಳ ಸಂಬಂಧದಲ್ಲಿ ಬಳಸಿದ್ದಾರೆ. (2 ಪೇತ್ರ 3:13; ಪ್ರಕಟನೆ 21:1-4) ಎರಡನೆಯದ್ದು, ಬೈಬಲಿನಲ್ಲಿ ‘ಆಕಾಶ’ ಎಂಬ ಪದವನ್ನು ಆಡಳಿತ ಇಲ್ಲವೆ ಸರಕಾರವನ್ನು ಸೂಚಿಸಲು ಕೆಲವೊಮ್ಮೆ ಬಳಸಲಾಗಿದೆ. (ಯೆಶಾಯ 14:4, 12; ದಾನಿಯೇಲ 4:25, 26) ಹಾಗಾದರೆ ನೂತನಾಕಾಶಮಂಡಲ ಅಂದರೆ ಒಂದು ಹೊಸ ಸರಕಾರ. ಭೂಮಿ ಮೇಲೆ ಒಳ್ಳೇ ಪರಿಸ್ಥಿತಿಗಳನ್ನು ಸ್ಥಾಪಿಸಲು ಶಕ್ತವಾಗಿರುವ ಒಂದು ಸರಕಾರ. ಅಂಥ ಸಾಮರ್ಥ್ಯವಿರುವ ಏಕೈಕ ಸರಕಾರ ದೇವರ ರಾಜ್ಯವೇ. ಯೇಸು ಕಲಿಸಿಕೊಟ್ಟ ಪ್ರಾರ್ಥನೆಯಲ್ಲಿ ಈ ರಾಜ್ಯದ ಬಗ್ಗೆಯೇ ಹೇಳಿದನು. ಸ್ವರ್ಗದಿಂದ ಆಡಳಿತ ನಡೆಸುವ ಈ ರಾಜ್ಯ ಭೂಮ್ಯಾದ್ಯಂತ ದೇವರ ಉದ್ದೇಶವನ್ನು ಪೂರೈಸುವುದು.—ಮತ್ತಾಯ 6:9, 10.

ನೂತನಭೂಮಂಡಲ ಅಂದರೇನು? ಸರಿಯಾದ ತೀರ್ಮಾನಕ್ಕೆ ಬರಲು ನೆರವಾಗುವ ಎರಡು ಬೈಬಲ್‌ ಅಂಶಗಳನ್ನು ಗಮನಿಸಿ. ಮೊದಲನೇದಾಗಿ ಬೈಬಲಿನಲ್ಲಿ ಭೂಮಂಡಲ ಎಂಬ ಪದ ಕೆಲವೊಮ್ಮೆ ಭೂಗ್ರಹವನ್ನಲ್ಲ ಜನರನ್ನು ಸೂಚಿಸುತ್ತದೆ. (ಮೀಕ 1:2) ಎರಡನೇದಾಗಿ ದೇವರಿಗೆ ನಿಷ್ಠರಾಗಿ ಉಳಿಯುವ ಮಾನವರು ದೇವರ ರಾಜ್ಯದ ಆಳಿಕೆಯಡಿ ಧರ್ಮಜ್ಞಾನ ಅಥವಾ ದೇವರ ಮಟ್ಟಗಳನ್ನು ಕಲಿಯುವರೆಂದೂ, ನೀತಿಯುತ ಪರಿಸ್ಥಿತಿ ಇಡೀ ಭೂಮಿಯನ್ನು ಪಸರಿಸುವುದೆಂದೂ ಬೈಬಲ್‌ ಮುಂತಿಳಿಸಿದೆ. (ಯೆಶಾಯ 26:9) ಹಾಗಾಗಿ ನೂತನಭೂಮಂಡಲ ಅಂದರೆ ದೇವರ ಆಡಳಿತಕ್ಕೆ ಅಧೀನರಾಗಿ ಆತನ ನೀತಿಯುತ ಮಟ್ಟಗಳಿಗೆ ತಕ್ಕಂತೆ ಜೀವಿಸುವ ಜನರಿಂದ ತುಂಬಿರುವ ಸಮಾಜ ಆಗಿದೆ.

ಕಹಿ ನೆನಪುಗಳಿಗೆ ಕಾರಣವಾಗುವ ಸಂಗತಿಗಳನ್ನೇ ಯೆಹೋವನು ಹೇಗೆ ಕಿತ್ತೆಸೆಯುತ್ತಾನೆಂದು ನಿಮಗೆ ಈಗ ಅರ್ಥವಾಗಿರಬಹುದಲ್ಲವೇ? ಬಲುಬೇಗನೆ ಯೆಹೋವನು ನೂತನಾಕಾಶಮಂಡಲ ಹಾಗೂ ನೂತನಭೂಮಂಡಲ ಕುರಿತ ತನ್ನ ವಾಗ್ದಾನವನ್ನು ಪೂರ್ತಿಯಾಗಿ ನೆರವೇರಿಸುವನು. ಕೆಟ್ಟತನವೇ ಇಲ್ಲದ ಹೊಸ ಲೋಕವನ್ನು ಸ್ಥಾಪಿಸುವನು. * ಆ ಹೊಸ ಲೋಕದಲ್ಲಿ ನೋವುತುಂಬಿದ ನೆನಪುಗಳಿಗೆ ಕಾರಣವಾಗಿರುವ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಕಷ್ಟಕಾರ್ಪಣ್ಯಗಳು ಇಲ್ಲದಿರುವವು. ನಂಬಿಗಸ್ತ ಮಾನವರು ಬದುಕನ್ನು ಪೂರ್ಣವಾಗಿ ಆನಂದಿಸುವರು. ನಿನ್ನೆಯ ನೆನಪುಗಳು ಸದಾ ಸವಿ ನೆನಪುಗಳೇ ಆಗಿರುವವು.

‘ಇದೆಲ್ಲ ಸರಿ, ಆದರೆ ಈಗ ನನ್ನ ಮನಸ್ಸನ್ನು ಕಾಡುತ್ತಿರುವ ಕಹಿ ನೆನಪುಗಳ ಬಗ್ಗೆ ಏನು?’ ಎಂದು ನೀವು ಯೋಚಿಸುತ್ತಿರಬಹುದು. ಯೆಶಾಯನ ಮೂಲಕ ಯೆಹೋವನು ಇನ್ನೇನು ಹೇಳಿದ್ದಾನೆಂದು ಕೇಳಿ: “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” ಈ ಹಳೇ ಲೋಕದಲ್ಲಿ ನಾವು ಅನುಭವಿಸಿರುವ ಯಾವುದೇ ನೋವಿನ ನೆನಪು ಅಲ್ಲಿ ಕ್ರಮೇಣ ಮಾಸಿಹೋಗುವುದು. ಮುಂದೆ ಹೀಗೆ ಆಗಲಿದೆ ಎಂದು ಕೇಳುವಾಗ ನಿಮಗೆ ಹೇಗನಿಸುತ್ತದೆ? ಮನಸ್ಸು ಪುಳಕಿತವಾಗುತ್ತದಾ? ಹಾಗಿದ್ದಲ್ಲಿ, ಇಂಥ ಉಜ್ವಲ ಭವಿಷ್ಯತ್ತಿನ ಬಗ್ಗೆ ಮಾತುಕೊಟ್ಟಿರುವ ದೇವರಿಗೆ ಹೇಗೆ ಇನ್ನಷ್ಟು ಹತ್ತಿರವಾಗಬಹುದೆಂದು ನೀವೇಕೆ ತಿಳಿದುಕೊಳ್ಳಬಾರದು? (w12-E 03/01)

[ಪಾದಟಿಪ್ಪಣಿ]

^ ಪ್ಯಾರ. 7 ದೇವರ ರಾಜ್ಯ ಹಾಗೂ ಅದೇನನ್ನು ಸಾಧಿಸಲಿದೆ ಎಂಬದರ ಕುರಿತ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 3, 8, 9ನೇ ಅಧ್ಯಾಯಗಳನ್ನು ಓದಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.