ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣ

ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣ

ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸೋಣ

“ಸುಳ್ಳಾಡಲು ಸಾಧ್ಯವಿಲ್ಲದ ದೇವರು ಅನಾದಿಕಾಲಕ್ಕೆ ಮುಂಚೆಯೇ ವಾಗ್ದಾನಮಾಡಿದ ನಿತ್ಯಜೀವದ ನಿರೀಕ್ಷೆ [ನಮಗಿದೆ].”—ತೀತ 1:2.

ಪುನರವಲೋಕನ

ಅಭಿಷಿಕ್ತರಲ್ಲಿ ಒಬ್ಬನು ಜೀವನಪರ್ಯಂತ ಸಮಗ್ರತೆ ಕಾಪಾಡಿಕೊಂಡಾಗ ಸ್ವರ್ಗದಲ್ಲಿ ಸಂತೋಷವಾಗುತ್ತದೆ ಎಂದು ನಮಗೆ ಹೇಗೆ ಗೊತ್ತು?

ಅಭಿಷಿಕ್ತರ ನಿರೀಕ್ಷೆಯ ನೆರವೇರಿಕೆಯು ಬೇರೆ ಕುರಿಗಳ ನಿರೀಕ್ಷೆಯ ನೆರವೇರಿಕೆಗೆ ಹೇಗೆ ಸಂಬಂಧಿಸಿದೆ?

ನಮ್ಮ ನಿರೀಕ್ಷೆ ನೆರವೇರುವುದನ್ನು ನೋಡಬೇಕಾದರೆ ನಾವು ತೋರಿಸಬೇಕಾದ “ಪವಿತ್ರ ನಡತೆ” ಮತ್ತು “ದೇವಭಕ್ತಿಯ ಕ್ರಿಯೆಗಳು” ಯಾವುವು?

1. ಯೆಹೋವನು ಒದಗಿಸಿರುವ ನಿರೀಕ್ಷೆ ತಾಳಿಕೊಳ್ಳಲು ನಮಗೆ ಹೇಗೆ ಸಹಾಯ ಮಾಡುತ್ತದೆ?

ಯೆಹೋವನು “ನಿರೀಕ್ಷೆಯನ್ನು ಒದಗಿಸುವ ದೇವರು” ಎಂದನು ಅಪೊಸ್ತಲ ಪೌಲ. ಅವನು ಮುಂದುವರಿಸುತ್ತ, ಯೆಹೋವನು ‘ಪವಿತ್ರಾತ್ಮದ ಶಕ್ತಿಯಿಂದ ನಿರೀಕ್ಷೆಯಲ್ಲಿ ಸಮೃದ್ಧಿ ಹೊಂದುವಂತೆ ನಮ್ಮ ನಂಬಿಕೆಯ ಮೂಲಕ ನಮ್ಮಲ್ಲಿ ಎಲ್ಲ ರೀತಿಯ ಆನಂದವನ್ನೂ ಶಾಂತಿಯನ್ನೂ ತುಂಬಿಸಬಲ್ಲನು’ ಎಂದು ಹೇಳಿದನು. (ರೋಮ. 15:13) ನಮ್ಮ ನಿರೀಕ್ಷೆ ನಮ್ಮಲ್ಲಿ ಸಮೃದ್ಧವಾಗಿರುವಲ್ಲಿ ಅಂದರೆ ಹೃದಯದಲ್ಲಿ ಹಚ್ಚಹಸುರಾಗಿರುವಲ್ಲಿ ಯಾವುದೇ ಕಷ್ಟ ಪರಿಸ್ಥಿತಿಯನ್ನು ತಾಳಿಕೊಳ್ಳಲು ಶಕ್ತರಾಗಿರುವೆವು. ಮಾತ್ರವಲ್ಲ ನಮ್ಮ ಹೃದಯದಲ್ಲಿ ಆನಂದ ಮತ್ತು ಶಾಂತಿ ತುಂಬಿರುವುದು. ಅಭಿಷಿಕ್ತ ಕ್ರೈಸ್ತರಿಗೂ ಬೇರೆ ಕುರಿಗಳಿಗೂ ನಿರೀಕ್ಷೆ ಎಂಬುದು ‘ಪ್ರಾಣಕ್ಕೆ ನಿಶ್ಚಯವಾದ, ದೃಢವಾದ ಲಂಗರದಂತಿದೆ.’ (ಇಬ್ರಿ. 6:18, 19) ಕಷ್ಟಗಳೆಂಬ ಬಿರುಗಾಳಿ ರಭಸವಾಗಿ ಬೀಸುವಾಗ ನಾವು ಬಿಗಿಯಾಗಿ ಹಿಡಿದುಕೊಳ್ಳುವ ಆಸರೆಯಂತೆ ನಮ್ಮ ನಿರೀಕ್ಷೆಯಿದೆ. ಸಂಶಯವಾಗಲಿ ನಂಬಿಕೆಯ ಕೊರತೆಯಾಗಲಿ ನಮ್ಮಲ್ಲಿ ಬರದಂತೆ ಅದು ತಡೆಯುತ್ತದೆ.ಇಬ್ರಿಯ 2:1; 6:11 ಓದಿ.

2. (1) ಇಂದು ಕ್ರೈಸ್ತರಿಗೆ ಯಾವ ಎರಡು ನಿರೀಕ್ಷೆಗಳಿವೆ? (2) ಅಭಿಷಿಕ್ತರಿಗಿರುವ ನಿರೀಕ್ಷೆಯ ಬಗ್ಗೆ ‘ಬೇರೆ ಕುರಿಗಳು’ ಏಕೆ ಆಸಕ್ತರಾಗಿದ್ದಾರೆ?

2 ಈ ಅಂತ್ಯಕಾಲದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಕ್ರೈಸ್ತನಿಗೆ ಒಂದು ನಿರೀಕ್ಷೆ ಇದೆ. ಅಭಿಷಿಕ್ತ ಕ್ರೈಸ್ತರ ‘ಚಿಕ್ಕ ಹಿಂಡಿನಲ್ಲಿ’ ಉಳಿದಿರುವ ಸದಸ್ಯರು ಸ್ವರ್ಗದಲ್ಲಿ ಅಮರ ಜೀವನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರು ಕ್ರಿಸ್ತನ ರಾಜ್ಯದಲ್ಲಿ ರಾಜರೂ ಯಾಜಕರೂ ಆಗಲಿರುವರು. (ಲೂಕ 12:32; ಪ್ರಕ. 5:9, 10) ಇವರಿಗಿಂತ ಎಷ್ಟೋ ದೊಡ್ಡ ಸಂಖ್ಯೆಯಲ್ಲಿರುವ “ಬೇರೆ ಕುರಿ”ಗಳ “ಮಹಾ ಸಮೂಹ”ದವರಿಗೆ ಭೂಪರದೈಸಿನಲ್ಲಿ ಜೀವಿಸುವ ನಿರೀಕ್ಷೆಯಿದೆ. ಅಲ್ಲಿ ಮೆಸ್ಸೀಯನ ರಾಜ್ಯದ ಪ್ರಜೆಗಳಾಗಿ ನಿತ್ಯಜೀವವನ್ನು ಪಡೆಯಲಿರುವರು. (ಪ್ರಕ. 7:9, 10; ಯೋಹಾ. 10:16) ಈ ಬೇರೆ ಕುರಿಗಳು ರಕ್ಷಣೆ ಹೊಂದಬೇಕಾದರೆ ಕ್ರಿಸ್ತನ ಅಭಿಷಿಕ್ತ ‘ಸಹೋದರರಿಗೆ’ ಕ್ರಿಯಾಶೀಲ ಬೆಂಬಲ ಕೊಡುತ್ತಾ ಇರಬೇಕು ಎಂಬುದನ್ನು ಎಂದಿಗೂ ಮರೆಯಬಾರದು. (ಮತ್ತಾ. 25:34-40) ಅಭಿಷಿಕ್ತರು ಖಂಡಿತವಾಗಿಯೂ ತಮ್ಮ ಬಹುಮಾನವನ್ನು ಹೊಂದುವರು. ಬೇರೆ ಕುರಿಗಳ ನಿರೀಕ್ಷೆ ನೆರವೇರುವುದು ಸಹ ಅಷ್ಟೇ ನಿಶ್ಚಯ. (ಇಬ್ರಿಯ 11:39, 40 ಓದಿ.) ಮೊದಲಾಗಿ ಅಭಿಷಿಕ್ತರಿಗಿರುವ ನಿರೀಕ್ಷೆಯನ್ನು ನಾವೀಗ ಪರಿಶೀಲಿಸೋಣ.

ಅಭಿಷಿಕ್ತ ಕ್ರೈಸ್ತರ “ಜೀವಕರವಾದ ನಿರೀಕ್ಷೆ”

3, 4. (1) ಅಭಿಷಿಕ್ತ ಕ್ರೈಸ್ತರು “ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು” ಹೇಗೆ ಪಡೆಯುತ್ತಾರೆ? (2) ಆ ಜೀವಕರವಾದ ನಿರೀಕ್ಷೆ ಏನಾಗಿದೆ?

3 ಅಪೊಸ್ತಲ ಪೇತ್ರನು ಅಭಿಷಿಕ್ತ ಕ್ರೈಸ್ತರಿಗೆ ಎರಡು ಪತ್ರಗಳನ್ನು ಬರೆದನು. ಅವನು ಅವರನ್ನು ‘ಆರಿಸಿಕೊಳ್ಳಲ್ಪಟ್ಟವರು’ ಎಂದು ಕರೆದನು. (1 ಪೇತ್ರ 1:2) ಈ ‘ಚಿಕ್ಕ ಹಿಂಡಿಗೆ’ ಕೊಡಲಾಗಿರುವ ಆಶ್ಚರ್ಯಕರ ನಿರೀಕ್ಷೆಯ ಕುರಿತು ಅವನು ಸವಿವರವಾಗಿ ತಿಳಿಸಿದನು. ಮೊದಲನೆಯ ಪತ್ರದಲ್ಲಿ ಅವನು ಹೀಗೆ ಬರೆದನು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ; ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸುವ ಮೂಲಕ ತನ್ನ ಮಹಾ ಕರುಣೆಯಿಂದ ನಮಗೆ ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು ಕೊಟ್ಟನು. ಆ ಹೊಸ ಜನನವು ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆಯೇ ಆಗಿದೆ. ಆ ಬಾಧ್ಯತೆಯು ಸ್ವರ್ಗದಲ್ಲಿ ನಿಮಗೋಸ್ಕರ ಕಾದಿರಿಸಲ್ಪಟ್ಟಿದೆ. ಕೊನೆಯ ಕಾಲಾವಧಿಯಲ್ಲಿ ಪ್ರಕಟಿಸಲ್ಪಡಲು ಸಿದ್ಧವಾಗಿರುವ ರಕ್ಷಣೆಗಾಗಿ ದೇವರು ನಿಮ್ಮನ್ನು ನಂಬಿಕೆಯ ಮೂಲಕ ತನ್ನ ಶಕ್ತಿಯಿಂದ ಕಾಪಾಡುತ್ತಿದ್ದಾನೆ. ನೀವು . . . ಈ ಸಂಗತಿಯಲ್ಲಿ ಬಹಳವಾಗಿ ಹರ್ಷಿಸುವವರಾಗಿದ್ದೀರಿ.”—1 ಪೇತ್ರ 1:3-6.

4 ಸ್ವರ್ಗೀಯ ರಾಜ್ಯ ಸರಕಾರದಲ್ಲಿ ಕ್ರಿಸ್ತನೊಂದಿಗೆ ಆಳ್ವಿಕೆ ನಡೆಸಲಿಕ್ಕಾಗಿ ಯೆಹೋವನು ಆರಿಸಿಕೊಂಡಿರುವ ಪರಿಮಿತ ಸಂಖ್ಯೆಯ ಕ್ರೈಸ್ತರು “ಹೊಸ ಜನನ” ಪಡೆಯುವರು ಅಂದರೆ ಆತ್ಮಜನಿತ ದೇವಪುತ್ರರಾಗುವರು. ಅವರು ಕ್ರಿಸ್ತನೊಂದಿಗೆ ರಾಜರೂ ಯಾಜಕರೂ ಆಗಿ ಸೇವೆಸಲ್ಲಿಸಲು ಪವಿತ್ರಾತ್ಮದಿಂದ ಅಭಿಷೇಕ ಹೊಂದುತ್ತಾರೆ. (ಪ್ರಕ. 20:6) ಈ “ಹೊಸ ಜನನ”ದಿಂದಾಗಿ ಅವರು “ಜೀವಕರವಾದ ನಿರೀಕ್ಷೆ” ಹೊಂದುತ್ತಾರೆ. ಈ ನಿರೀಕ್ಷೆಯನ್ನು ಪೇತ್ರನು, “ಸ್ವರ್ಗದಲ್ಲಿ” ಅವರಿಗಾಗಿ ಕಾದಿರಿಸಲ್ಪಟ್ಟಿರುವ “ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆ” ಎಂದು ಕರೆದಿದ್ದಾನೆ. ಹಾಗಾಗಿ ಅಭಿಷಿಕ್ತರು ತಮ್ಮ ಜೀವಕರವಾದ ನಿರೀಕ್ಷೆಯಲ್ಲಿ “ಬಹಳವಾಗಿ ಹರ್ಷಿಸುವುದರಲ್ಲಿ” ಆಶ್ಚರ್ಯವೇನೂ ಇಲ್ಲ! ಆದರೆ ಈ ನಿರೀಕ್ಷೆಯನ್ನು ಸಿದ್ಧಿಸಿಕೊಳ್ಳಲು ಅವರು ಕೊನೆಯ ವರೆಗೆ ನಂಬಿಗಸ್ತರಾಗಿರಬೇಕು.

5, 6. ತಮ್ಮ ಸ್ವರ್ಗೀಯ ಕರೆಯನ್ನು ಖಚಿತಪಡಿಸಿಕೊಳ್ಳಲು ಅಭಿಷಿಕ್ತ ಕ್ರೈಸ್ತರು ಕೈಲಾದದ್ದನ್ನೆಲ್ಲ ಏಕೆ ಮಾಡಬೇಕು?

5 ಪೇತ್ರನು ತನ್ನ ಎರಡನೆಯ ಪತ್ರದಲ್ಲಿ, “ನಿಮ್ಮ ಕರೆಯುವಿಕೆಯನ್ನು ಮತ್ತು ಆರಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ” ಎಂದು ಅಭಿಷಿಕ್ತ ಕ್ರೈಸ್ತರಿಗೆ ಬುದ್ಧಿ ಹೇಳಿದನು. (2 ಪೇತ್ರ 1:10) ಅವರು ನಂಬಿಕೆ, ದೇವಭಕ್ತಿ, ಸಹೋದರ ಮಮತೆ, ಪ್ರೀತಿಯಲ್ಲಿ ಹೆಚ್ಚುತ್ತಾ ಇರಲು ಪ್ರಯಾಸಪಡಬೇಕೆಂದು ಉತ್ತೇಜಿಸಿದನು. ಏಕೆಂದರೆ ಅವನು ಹೇಳಿದ್ದು: “ಈ ವಿಷಯಗಳು ನಿಮ್ಮಲ್ಲಿದ್ದು ಅತ್ಯಧಿಕವಾಗುವಲ್ಲಿ . . . ನೀವು ನಿಷ್ಕ್ರಿಯರು ಅಥವಾ ನಿಷ್ಫಲರು ಆಗುವುದರಿಂದ ಅವು ನಿಮ್ಮನ್ನು ತಡೆಯುವವು.”2 ಪೇತ್ರ 1:5-8 ಓದಿ.

6 ಪುನರುತ್ಥಿತ ಕ್ರಿಸ್ತನು ಏಷ್ಯಾ ಮೈನರ್‌ನ ಫಿಲದೆಲ್ಫಿಯ ಸಭೆಯ ಆತ್ಮಜನಿತ ಹಿರಿಯರಿಗೆ ಹೀಗಂದನು: “ನನ್ನ ತಾಳ್ಮೆಯ ಕುರಿತಾದ ಮಾತನ್ನು ನೀನು ಕಾಪಾಡಿಕೊಂಡದ್ದರಿಂದ ಭೂಮಿಯಲ್ಲಿ ವಾಸಿಸುತ್ತಿರುವವರ ಮೇಲೆ ಪರೀಕ್ಷೆಯನ್ನು ಬರಮಾಡಲಿಕ್ಕಾಗಿ ಇಡೀ ನಿವಾಸಿತ ಭೂಮಿಯ ಮೇಲೆ ಬರಲಿಕ್ಕಿರುವ ಪರೀಕ್ಷೆಯ ಗಳಿಗೆಯಲ್ಲಿ ನಾನು ನಿನ್ನನ್ನು ಕಾಪಾಡುವೆನು. ನಾನು ಬೇಗನೆ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ತೆಗೆದುಕೊಳ್ಳದಂತೆ ನಿನಗಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಇರು.” (ಪ್ರಕ. 3:10, 11) ಆದರೆ ಅಭಿಷಿಕ್ತ ಕ್ರೈಸ್ತನೊಬ್ಬನು ಅಪನಂಬಿಗಸ್ತನಾಗುವಲ್ಲಿ “ಬಾಡಿಹೋಗದ ಮಹಿಮೆಯ ಕಿರೀಟವನ್ನು” ಪಡೆಯಲಾರನು. ಏಕೆಂದರೆ ಮರಣದ ತನಕ ನಂಬಿಗಸ್ತರಾಗಿರುವವರಿಗೆ ಇದು ವಾಗ್ದಾನಿಸಲ್ಪಟ್ಟಿದೆ.—1 ಪೇತ್ರ 5:4; ಪ್ರಕ. 2:10.

ರಾಜ್ಯಪ್ರವೇಶ

7. ಯೂದನು ತನ್ನ ಪತ್ರದಲ್ಲಿ ಯಾವ ಆಶ್ಚರ್ಯಕರ ನಿರೀಕ್ಷೆಯ ಬಗ್ಗೆ ತಿಳಿಸಿದನು?

7 ಸುಮಾರು ಕ್ರಿ.ಶ. 65ರಲ್ಲಿ ಯೇಸುವಿನ ಮಲತಮ್ಮ ಯೂದನು ತನ್ನ ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಒಂದು ಪತ್ರ ಬರೆದನು. ಅವನು ಅವರನ್ನು ‘ಕರೆಯಲ್ಪಟ್ಟವರು’ ಎಂದು ಕರೆದನು. (ಯೂದ 1; ಇಬ್ರಿಯ 3:1 ಹೋಲಿಸಿ.) ಅವನು ಮುಖ್ಯವಾಗಿ ದೇವರ ಸ್ವರ್ಗೀಯ ರಾಜ್ಯಕ್ಕೆ ಕರೆಯಲ್ಪಟ್ಟಿರುವವರು “ಸಮಾನವಾಗಿ ಹೊಂದಿರುವ” ರಕ್ಷಣೆಯ ಮಹಿಮಾಭರಿತ ನಿರೀಕ್ಷೆಯ ಕುರಿತು ಬರೆಯಲು ಬಯಸಿದ್ದನು. (ಯೂದ 3) ಆದರೆ ಬೇರೆ ಅಗತ್ಯ ವಿಷಯಗಳಿದ್ದ ಕಾರಣ ಅವುಗಳ ಕುರಿತು ಬರೆಯಬೇಕಾಯಿತು. ಹಾಗಿದ್ದರೂ ತನ್ನ ಚಿಕ್ಕ ಪತ್ರದ ಸಮಾಪ್ತಿಯಲ್ಲಿ ಅಭಿಷಿಕ್ತ ಕ್ರೈಸ್ತರಿಗಿರುವ ಅದ್ಭುತಕರ ನಿರೀಕ್ಷೆಯನ್ನು ಸೂಚಿಸಿ ಬರೆದನು. ಅವನಂದದ್ದು: “ಎಡವಿಬೀಳುವುದರಿಂದ ನಿಮ್ಮನ್ನು ಕಾಪಾಡುವುದಕ್ಕೂ ತನ್ನ ಮಹಿಮೆಯ ಸನ್ನಿಧಿಯಲ್ಲಿ ನಿಮ್ಮನ್ನು ಮಹಾ ಆನಂದದೊಂದಿಗೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತನಾಗಿರುವ ನಮ್ಮ ರಕ್ಷಕನಾದ ಏಕಮಾತ್ರ ದೇವರಿಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆಯೂ ಘನತೆಯೂ ಶಕ್ತಿಯೂ ಅಧಿಕಾರವೂ ಗತಕಾಲದಿಂದಲೂ ಇದ್ದಂತೆ ಈಗಲೂ ನಿತ್ಯತೆಗೂ ಇರಲಿ.”—ಯೂದ 24, 25.

8. ಅಭಿಷಿಕ್ತನೊಬ್ಬನು ಸಮಗ್ರತೆ ಕಾಪಾಡಿಕೊಂಡಾಗ ಸ್ವರ್ಗದಲ್ಲಿ ಸಂತೋಷವಾಗುತ್ತದೆ ಎಂದು ಯಾವುದು ಸೂಚಿಸುತ್ತದೆ?

8 ಪ್ರತಿಯೊಬ್ಬ ನಂಬಿಗಸ್ತ ಅಭಿಷಿಕ್ತ ಕ್ರೈಸ್ತನು ತಾನು ಎಡವಿಬಿದ್ದು ನಾಶವಾಗದಂತೆ ದೇವರು ತನ್ನನ್ನು ಕಾಪಾಡಬೇಕೆಂದು ಬಯಸುತ್ತಾನೆ. ಯೇಸು ಕ್ರಿಸ್ತನು ತಮ್ಮನ್ನು ಪರಿಪೂರ್ಣ ಆತ್ಮಜೀವಿಗಳಾಗಿ ಪುನರುತ್ಥಾನಗೊಳಿಸುತ್ತಾನೆ ಮತ್ತು ದೇವರ ಸನ್ನಿಧಾನದಲ್ಲಿ ಹರ್ಷದಿಂದ ತೋರಿಬರುವಂತೆ ಸಾಧ್ಯಮಾಡುತ್ತಾನೆ ಎಂಬ ಬೈಬಲಾಧಾರಿತ ನಿರೀಕ್ಷೆ ಅವರಿಗಿದೆ. ಅಭಿಷಿಕ್ತನೊಬ್ಬನು ಮರಣದ ವರೆಗೆ ನಂಬಿಗಸ್ತನಾಗಿರುವಲ್ಲಿ ಅವನು “ಆತ್ಮಿಕ ದೇಹವಾಗಿ” “ನಿರ್ಲಯಾವಸ್ಥೆಯಲ್ಲಿ . . . ಮಹಿಮೆಯಲ್ಲಿ” ಎಬ್ಬಿಸಲ್ಪಡುವನು. (1 ಕೊರಿಂ. 15:42-44) “ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯದಲ್ಲಿ ಸ್ವರ್ಗದಲ್ಲಿ ಹೆಚ್ಚು ಸಂತೋಷ” ಉಂಟಾಗುತ್ತದಾದರೆ, ಕ್ರಿಸ್ತನ ಆತ್ಮಜನಿತ ಸಹೋದರರಲ್ಲಿ ಒಬ್ಬನು ಸಮಗ್ರತೆಯ ಜೀವನಯಾತ್ರೆಯನ್ನು ಮುಗಿಸಿದಾಗ ಸ್ವರ್ಗದಲ್ಲಿ ಇನ್ನೆಷ್ಟು ಸಂತೋಷವಾಗಲಿಕ್ಕಿಲ್ಲ! (ಲೂಕ 15:7) “ಮಹಾ ಆನಂದ”ದಿಂದ ತಮ್ಮ ಬಹುಮಾನವನ್ನು ಅಭಿಷಿಕ್ತರು ಪಡೆಯುವಾಗ ಅವರೊಂದಿಗೆ ಯೆಹೋವನೂ ಆತನ ನಂಬಿಗಸ್ತ ಆತ್ಮಜೀವಿಗಳೂ ಸಂತೋಷಪಡುವರು.1 ಯೋಹಾನ 3:2 ಓದಿ.

9. (1) ರಾಜ್ಯಕ್ಕೆ ಪ್ರವೇಶವು ಅಭಿಷಿಕ್ತರಿಗೆ “ಧಾರಾಳವಾಗಿ ಒದಗಿಸಲ್ಪಡುವುದು” ಹೇಗೆ? (2) ಈ ನಿರೀಕ್ಷೆಯು ಭೂಮಿಯಲ್ಲಿ ಇನ್ನೂ ಇರುವ ಅಭಿಷಿಕ್ತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

9 ಅಭಿಷಿಕ್ತ ಕ್ರೈಸ್ತರು ನಂಬಿಗಸ್ತರಾಗಿ ಉಳಿದು ತಮಗೆ ಕೊಡಲ್ಪಟ್ಟ ಕರೆಯನ್ನು ಖಚಿತಪಡಿಸಿಕೊಳ್ಳುವುದಾದರೆ, “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ನಿತ್ಯರಾಜ್ಯದೊಳಗೆ ಪ್ರವೇಶವು [ಅವರಿಗೆ] ಧಾರಾಳವಾಗಿ ಒದಗಿಸಲ್ಪಡುವುದು” ಎಂದು ಪೇತ್ರನು ಬರೆದನು. (2 ಪೇತ್ರ 1:10, 11) ಸ್ವರ್ಗೀಯ ರಾಜ್ಯದೊಳಗೆ ಅವರಿಗೆ ಪ್ರವೇಶವು “ಧಾರಾಳವಾಗಿ ಒದಗಿಸಲ್ಪಡುವುದು” ಅಂದರೆ ಅವರು ರಾಜರಾಗಿ ಆಳುವಾಗ ಅವರ ಕ್ರೈಸ್ತ ಗುಣಗಳು ಪ್ರಕಾಶಮಾನವಾಗಿ ತೋರಿಬರುವವು. “ಧಾರಾಳವಾಗಿ ಒದಗಿಸಲ್ಪಡುವುದು” ಎಂಬ ಮಾತು ಜೀವಕ್ಕಾಗಿ ನಡೆಸಿದ ಓಟದಲ್ಲಿ ಪ್ರಯಾಸಪಟ್ಟ ಇವರಿಗೆ ದೊರೆಯುವ ಅತ್ಯುತ್ಕೃಷ್ಟ ದೈವಾನುಗ್ರಹವನ್ನೂ ಸೂಚಿಸಬಹುದು. ಅದರ ಕುರಿತು ಯೋಚಿಸುವಾಗ ತಮ್ಮ ನಂಬಿಗಸ್ತ ಜೀವನಮಾರ್ಗಕ್ಕಾಗಿ ಅವರ ಹೃದಯವು ಹರ್ಷ, ಕೃತಜ್ಞತೆಯಿಂದ ತುಂಬಿತುಳುಕುವುದು. ಈ ಪ್ರತೀಕ್ಷೆಯು ಭೂಮಿಯ ಮೇಲಿರುವ ಅಭಿಷಿಕ್ತರಿಗೆ, ‘ಮುಂದುವರಿಯುವ ಚಟುವಟಿಕೆಗಾಗಿ ಮನಸ್ಸನ್ನು ದೃಢವಾಗಿಸಿಕೊಳ್ಳುವಂತೆ’ ಬಲವನ್ನು ಕೊಡುವುದು ನಿಸ್ಸಂಶಯ.—1 ಪೇತ್ರ 1:13.

ಬೇರೆಕುರಿಗಳ ‘ನಿರೀಕ್ಷೆಗೆ ಆಧಾರ’

10, 11. (1) ಬೇರೆ ಕುರಿಗಳಿಗೆ ಯಾವ ನಿರೀಕ್ಷೆಯಿದೆ? (2) ಭೂನಿರೀಕ್ಷೆಯ ನೆರವೇರಿಕೆಯು ಕ್ರಿಸ್ತನಿಗೆ ಮತ್ತು ‘ದೇವರ ಪುತ್ರರು ಪ್ರಕಟವಾಗುವುದಕ್ಕೆ’ ಹೇಗೆ ಸಂಬಂಧಿಸಿದೆ?

10 ಕ್ರಿಸ್ತನೊಂದಿಗೆ ‘ಜೊತೆ ಬಾಧ್ಯರಾಗುವ’ ಮಹಿಮಾಭರಿತ ನಿರೀಕ್ಷೆಯನ್ನು ದೇವರ ಆತ್ಮಜನಿತ “ಪುತ್ರರು” ಹೊಂದಿದ್ದಾರೆ. ಇದರ ಕುರಿತು ಅಪೊಸ್ತಲ ಪೌಲ ಬರೆದ ಬಳಿಕ ಅಸಂಖ್ಯಾತ ಬೇರೆ ಕುರಿಗಳಿಗೆ ಯೆಹೋವನು ಇಟ್ಟಿರುವ ಆಶ್ಚರ್ಯಕರ ನಿರೀಕ್ಷೆಯ ಬಗ್ಗೆ ಹೇಳಿದನು: “ದೇವರ ಪುತ್ರರು [ಅಭಿಷಿಕ್ತರು] ಪ್ರಕಟವಾಗುವುದಕ್ಕಾಗಿ [ಮಾನವ] ಸೃಷ್ಟಿಯು ಬಹಳ ತವಕದಿಂದ ಎದುರುನೋಡುತ್ತಿದೆ. ಏಕೆಂದರೆ ಸೃಷ್ಟಿಯು ತನ್ನ ಸ್ವಂತ ಇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದಾತನ ಇಚ್ಛೆಯಿಂದಲೇ ನಿರೀಕ್ಷೆಯ ಆಧಾರದಲ್ಲಿ ವ್ಯರ್ಥತ್ವಕ್ಕೆ ಒಳಗಾಯಿತು. ಆ ನಿರೀಕ್ಷೆ ಏನೆಂದರೆ, ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುವುದೇ.”—ರೋಮ. 8:14-21.

11 ಯೆಹೋವನು ವಾಗ್ದತ್ತ ಸಂತತಿಯ ಕುರಿತು ಮುಂತಿಳಿಸಿದಾಗ ‘ನಿರೀಕ್ಷೆಗೆ ಆಧಾರವನ್ನು’ ಕೊಟ್ಟನು. ಆ ಸಂತತಿಯು ‘ಪುರಾತನ ಸರ್ಪದ’ ವಶದಿಂದ ಮಾನವಕುಲವನ್ನು ಬಿಡುಗಡೆ ಮಾಡುವುದೆಂದು ವಾಗ್ದಾನಿಸಿದನು. (ಪ್ರಕ. 12:9; ಆದಿ. 3:15) ಆ ‘ಸಂತತಿಯ’ ಪ್ರಧಾನ ಭಾಗ ಯೇಸು ಕ್ರಿಸ್ತನಾಗಿದ್ದನು. (ಗಲಾ. 3:16) ಭವಿಷ್ಯತ್ತಿನಲ್ಲಿ ಪಾಪ, ಮರಣಗಳ ದಾಸತ್ವದಿಂದ ವಿಮೋಚನೆ ಹೊಂದುವ ಮಾನವಕುಲದ ನಿರೀಕ್ಷೆಯನ್ನು ಯೇಸು ತನ್ನ ಮರಣ ಮತ್ತು ಪುನರುತ್ಥಾನದ ಮೂಲಕ ಇನ್ನೂ ಸ್ಥಿರಗೊಳಿಸಿದನು. ಈ ನಿರೀಕ್ಷೆ ನೆರವೇರುವುದಕ್ಕೂ “ದೇವರ ಪುತ್ರರು ಪ್ರಕಟ”ವಾಗುವುದಕ್ಕೂ ಸಂಬಂಧವಿದೆ. ಮಹಿಮೆಗೇರಿಸಲ್ಪಟ್ಟ ಅಭಿಷಿಕ್ತರು ‘ಸಂತತಿಯ’ ದ್ವಿತೀಯ ಭಾಗವಾಗಿದ್ದಾರೆ. ಅವರು ಸೈತಾನನ ದುಷ್ಟ ಲೋಕವನ್ನು ನಾಶಪಡಿಸುವುದರಲ್ಲಿ ಕ್ರಿಸ್ತನೊಂದಿಗೆ ಭಾಗಿಗಳಾಗುವಾಗ “ಪ್ರಕಟ”ವಾಗುವರು. (ಪ್ರಕ. 2:26, 27) ಇದು ಮಹಾ ಸಂಕಟದಿಂದ ಹೊರಗೆ ಬರುವ ಬೇರೆ ಕುರಿಗಳಿಗೆ ರಕ್ಷಣೆಯನ್ನು ಒದಗಿಸುವುದು.—ಪ್ರಕ. 7:9, 10, 14.

12. ಅಭಿಷಿಕ್ತರ ಪ್ರಕಟವಾಗುವಿಕೆ ಮಾನವಕುಲಕ್ಕೆ ಯಾವ ಮಹಿಮಾಭರಿತ ಪ್ರಯೋಜನಗಳನ್ನು ತರುವುದು?

12 ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಮಾನವ ‘ಸೃಷ್ಟಿಗೆ’ ಸಿಗಲಿರುವ ಉಪಶಮನವೋ ಅಗಾಧ! ಆ ಸಮಯದಲ್ಲಿ ಮಹಿಮೆಗೇರಿಸಲ್ಪಟ್ಟ “ದೇವರ ಪುತ್ರರು” ಕ್ರಿಸ್ತನೊಂದಿಗೆ ಯಾಜಕರಾಗಿ ಸೇವೆ ಮಾಡುವಾಗ ಇನ್ನೂ ಹೆಚ್ಚಾಗಿ “ಪ್ರಕಟ”ವಾಗುವರು. ಮಾನವರು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಪ್ರಯೋಜನಗಳನ್ನು ಹೊಂದುವಂತೆ ಅವರು ಸಹಾಯ ಮಾಡುವರು. ಆಗ ಸ್ವರ್ಗೀಯ ರಾಜ್ಯದ ಪ್ರಜೆಯಾಗಿರುವ ಮಾನವ “ಸೃಷ್ಟಿ” ಪಾಪ, ಮರಣಗಳ ಪರಿಣಾಮಗಳಿಂದ ಮುಕ್ತಿ ಪಡೆಯಲಾರಂಭಿಸುವುದು. ವಿಧೇಯ ಮಾನವರು ಕ್ರಮೇಣ “ನಾಶದ ದಾಸತ್ವದಿಂದ ಬಿಡುಗಡೆ” ಹೊಂದುವರು. ಕ್ರಿಸ್ತನ ಸಾವಿರ ವರುಷಗಳ ಆಳ್ವಿಕೆಯ ಸಮಯದಲ್ಲಿ ಮತ್ತು ಅದರ ಅಂತ್ಯದಲ್ಲಿ ಬರುವ ಕೊನೆಯ ಪರೀಕ್ಷೆಯಲ್ಲಿ ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೆ ಅವರ ಹೆಸರುಗಳು “ಜೀವದ ಸುರುಳಿ”ಯಲ್ಲಿ ಚಿರಸ್ಥಾಯಿಯಾಗಿ ಬರೆಯಲ್ಪಡುವುವು. ಅವರು “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದುವರು. (ಪ್ರಕ. 20:7, 8, 11, 12) ಇದು ಮಹಿಮಾಭರಿತ ನಿರೀಕ್ಷೆಯೇ ಸರಿ!

ನಿರೀಕ್ಷೆಯನ್ನು ಜೀವಂತವಾಗಿಡಿರಿ

13. (1) ನಮಗೆ ನಿರೀಕ್ಷೆ ದೊರೆತಿರುವುದು ಯಾವುದರಿಂದ? (2) ಕ್ರಿಸ್ತನು ಯಾವಾಗ ಪ್ರಕಟವಾಗುವನು?

13 ಪೇತ್ರನು ಬರೆದ ಎರಡು ಪತ್ರಗಳು ಅಭಿಷಿಕ್ತರಿಗೂ ಬೇರೆ ಕುರಿಗಳಿಗೂ ತಮ್ಮ ನಿರೀಕ್ಷೆಯನ್ನು ಜೀವಂತವಾಗಿಡಲು ಸಹಾಯ ಮಾಡುತ್ತವೆ. ಅವರಿಗೆ ಆ ನಿರೀಕ್ಷೆ ದೊರೆತದ್ದು ಅವರ ಕ್ರಿಯೆಗಳಿಂದಲ್ಲ, ಯೆಹೋವನ ಅಪಾತ್ರ ದಯೆಯಿಂದಲೇ ಎಂದು ಅವನು ಸೂಚಿಸಿದನು. ಅವನು ಹೀಗೆ ಬರೆದನು: “ಸ್ವಸ್ಥಚಿತ್ತರಾಗಿರಿ; ಯೇಸು ಕ್ರಿಸ್ತನ ಪ್ರಕಟನೆಯ ಸಮಯದಲ್ಲಿ ನಿಮಗೆ ಸಿಗಲಿರುವ ಅಪಾತ್ರ ದಯೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ಇಡಿರಿ.” (1 ಪೇತ್ರ 1:13) ಕ್ರಿಸ್ತನು ಯಾವಾಗ ಪ್ರಕಟವಾಗುವನು? ತನ್ನ ನಂಬಿಗಸ್ತ ಅನುಯಾಯಿಗಳಿಗೆ ಬಹುಮಾನವನ್ನು ಕೊಡಲು ಮತ್ತು ದುಷ್ಟರ ಮೇಲೆ ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸಲು ಬರುವಾಗ ಪ್ರಕಟವಾಗುವನು.2 ಥೆಸಲೊನೀಕ 1:6-10 ಓದಿ.

14, 15. (1) ನಮ್ಮ ನಿರೀಕ್ಷೆಯನ್ನು ಜೀವಂತವಾಗಿಡಲು ನಾವು ಯಾವುದರ ಮೇಲೆ ಗಮನ ಕೇಂದ್ರೀಕರಿಸಬೇಕು? (2) ಪೇತ್ರನು ಯಾವ ಸಲಹೆ ಕೊಟ್ಟನು?

14 ನಮ್ಮ ನಿರೀಕ್ಷೆಯನ್ನು ಜೀವಂತವಾಗಿಡಲು ನಾವು ನಮ್ಮ ಜೀವನವನ್ನೂ ಗಮನವನ್ನೂ ಬರಲಿರುವ “ಯೆಹೋವನ ದಿನದ” ಮೇಲೆ ಕೇಂದ್ರೀಕರಿಸಬೇಕು. ಆ ದಿನವು ಈಗಿರುವ “ಆಕಾಶ” ಅಂದರೆ ಮಾನವ ಆಳ್ವಿಕೆ ಮತ್ತು “ಭೂಮಿ” ಅಂದರೆ ಈ ದುಷ್ಟ ಮಾನವ ಸಮಾಜ ಹಾಗೂ ಅದರ ‘ಘಟಕಾಂಶಗಳನ್ನು’ ನಾಶ ಮಾಡುವುದು. ಪೇತ್ರನು ಹೀಗಂದನು: “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. . . . ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ. ಆ ದಿನದಲ್ಲಿ ಆಕಾಶವು ಬೆಂಕಿ ಹೊತ್ತಿ ಲಯವಾಗಿ ಹೋಗುವುದು ಮತ್ತು ಘಟಕಾಂಶಗಳು ಅತಿಯಾದ ಉಷ್ಣತೆಯಿಂದ ಕರಗಿಹೋಗುವವು.”—2 ಪೇತ್ರ 3:10-12.

15 ಈಗಿರುವ “ಆಕಾಶ” ಮತ್ತು ‘ಭೂಮಿಯ’ ಸ್ಥಾನದಲ್ಲಿ “ನೂತನ ಆಕಾಶ” [ಕ್ರಿಸ್ತನ ರಾಜ್ಯ ಸರಕಾರ] ಮತ್ತು “ನೂತನ ಭೂಮಿ” [ಹೊಸ ಭೂಸಮಾಜ] ಬರುವುದು. (2 ಪೇತ್ರ 3:13) ಈ ವಾಗ್ದತ್ತ ನೂತನ ಲೋಕವನ್ನು ಎದುರುನೋಡುತ್ತಾ ನಮ್ಮ ನಿರೀಕ್ಷೆಯನ್ನು ಜೀವಂತವಾಗಿಡಲು ಏನು ಮಾಡಬೇಕೆಂದು ಪೇತ್ರನು ನಮಗೆ ನೇರ ಸಲಹೆ ಕೊಟ್ಟಿದ್ದಾನೆ: “ಆದುದರಿಂದ ಪ್ರಿಯರೇ, ನೀವು ಇವುಗಳನ್ನು ಎದುರುನೋಡುತ್ತಿರುವುದರಿಂದ ಕೊನೆಗೆ ಆತನ ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ.”—2 ಪೇತ್ರ 3:14.

ನಮ್ಮ ನಿರೀಕ್ಷೆಗೆ ಹೊಂದಿಕೆಯಲ್ಲಿ ನಡೆಯೋಣ

16, 17. (1) ಯಾವ “ಪವಿತ್ರ ನಡತೆ” ಮತ್ತು ‘ದೇವಭಕ್ತಿಯ ಕ್ರಿಯೆಗಳನ್ನು’ ನಾವು ತೋರಿಸಬೇಕು? (2) ನಮ್ಮ ನಿರೀಕ್ಷೆ ಹೇಗೆ ನೆರವೇರುವುದು?

16 ನಮ್ಮ ನಿರೀಕ್ಷೆಯನ್ನು ಜೀವಂತವಾಗಿ ಇಡುವುದರೊಂದಿಗೆ ಅದಕ್ಕೆ ಹೊಂದಿಕೆಯಲ್ಲಿ ಜೀವಿಸುವುದೂ ಪ್ರಾಮುಖ್ಯ. ನಿರೀಕ್ಷೆಗೆ ಹೊಂದಿಕೆಯಲ್ಲಿ ಜೀವಿಸಬೇಕಾದರೆ ನಾವು ಆಧ್ಯಾತ್ಮಿಕವಾಗಿ ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆ ಎಂಬುದಕ್ಕೆ ಗಮನ ಕೊಡಬೇಕು. ಅಂದರೆ ನಾವು “ಪವಿತ್ರ ನಡತೆ”ಯುಳ್ಳವರಾಗಿರಬೇಕು. ಅದರಲ್ಲಿ ನೈತಿಕವಾಗಿ ಶುದ್ಧರಾಗಿದ್ದು ‘ಅನ್ಯಜನಾಂಗಗಳ ಮಧ್ಯೆ ನಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು’ ಸೇರಿದೆ. (2 ಪೇತ್ರ 3:11; 1 ಪೇತ್ರ 2:12) ‘ನಮ್ಮ ಮಧ್ಯೆ ಪ್ರೀತಿ’ ಇರಬೇಕು. ಲೋಕದೆಲ್ಲೆಡೆಯಿರುವ ಸಹೋದರ ಸಹೋದರಿಯರೊಂದಿಗೆ ಐಕ್ಯದಲ್ಲಿರಲು ಕೈಲಾದದ್ದೆಲ್ಲವನ್ನು ಮಾಡಬೇಕು. ಲೋಕವ್ಯಾಪಕವಾಗಿ ಮಾತ್ರವಲ್ಲ ನಮ್ಮ ಸ್ಥಳೀಯ ಸಭೆಯಲ್ಲಿಯೂ ಇದನ್ನು ಮಾಡಬೇಕು. (ಯೋಹಾ. 13:35) ನಾವು “ದೇವಭಕ್ತಿಯ ಕ್ರಿಯೆಗಳುಳ್ಳವರೂ” ಆಗಿರಬೇಕು. ಇವು ಯೆಹೋವನೊಂದಿಗೆ ನಮಗಿರುವ ಆಪ್ತ ಸಂಬಂಧವನ್ನು ರುಜುಪಡಿಸುವ ಕ್ರಿಯೆಗಳಾಗಿವೆ. ಇದರಲ್ಲಿ ನಮ್ಮ ಪ್ರಾರ್ಥನೆಯ ಗುಣಮಟ್ಟ, ದೈನಂದಿನ ಬೈಬಲ್‌ ವಾಚನ, ಆಳವಾದ ವೈಯಕ್ತಿಕ ಅಧ್ಯಯನ, ಕುಟುಂಬ ಆರಾಧನೆ ಮತ್ತು ‘ರಾಜ್ಯದ ಸುವಾರ್ತೆ’ ಸಾರುವುದರಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವುದು ಸೇರಿದೆ.—ಮತ್ತಾ. 24:14.

17 ಈ ದುಷ್ಟ ವ್ಯವಸ್ಥೆ “ಕರಗಿ” ಹೋಗಲಿದೆ. ಆದುದರಿಂದ ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನು ಮೆಚ್ಚುವ ಮತ್ತು ಆತನಿಂದ ರಕ್ಷಿಸಲ್ಪಡುವ ವ್ಯಕ್ತಿಗಳಾಗಿರಲು ಶ್ರಮಿಸೋಣ. ಆಗ ನಾವು “ಸುಳ್ಳಾಡಲು ಸಾಧ್ಯವಿಲ್ಲದ ದೇವರು ಅನಾದಿಕಾಲಕ್ಕೆ ಮುಂಚೆಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆ” ಕೈಗೂಡುವುದನ್ನು ಕಣ್ಣಾರೆ ನೋಡುವೆವು.—ತೀತ 1:2.

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

ಅಭಿಷಿಕ್ತ ಕ್ರೈಸ್ತರು “ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು” ಪಡೆಯುವರು

[ಪುಟ 24ರಲ್ಲಿರುವ ಚಿತ್ರ]

ನಿಮ್ಮ ಕುಟುಂಬದಲ್ಲಿ ನಿರೀಕ್ಷೆಯನ್ನು ಜೀವಂತವಾಗಿಡಿ