ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ಬಳಿ ಹಿಂದಿರುಗಿ ಬರುತ್ತೇನೆ’

‘ನಿನ್ನ ಬಳಿ ಹಿಂದಿರುಗಿ ಬರುತ್ತೇನೆ’

ದೇವರ ಸಮೀಪಕ್ಕೆ ಬನ್ನಿರಿ

‘ನಿನ್ನ ಬಳಿ ಹಿಂದಿರುಗಿ ಬರುತ್ತೇನೆ’

ಹಿಂದೊಮ್ಮೆ ನೀವು ಯೆಹೋವನ ಸೇವೆಮಾಡಿದವರಾ? ಪುನಃ ಆತನ ಸೇವೆಮಾಡಬೇಕೆಂಬ ಆಸೆ ಇದ್ದರೂ ಯೆಹೋವನು ಮತ್ತೆ ಸ್ವೀಕರಿಸಲಿಕ್ಕಿಲ್ಲ ಎಂಬ ಅಳುಕು ನಿಮಗಿರಬಹುದು. ದಯವಿಟ್ಟು ಈ ಲೇಖನವನ್ನೂ ಮುಂದಿನ ಲೇಖನವನ್ನೂ ಓದಿ. ಇವನ್ನು ನಿಮಗಾಗಿಯೇ ತಯಾರಿಸಲಾಗಿವೆ.

“ನಿನ್ನ ಮನನೋಯಿಸಿದಕ್ಕಾಗಿ ಕ್ಷಮಿಸಪ್ಪಾ, ನಿನ್ನ ಬಳಿ ಹಿಂದಿರುಗಿ ಬರುವೆ. ದಯಮಾಡಿ ನನ್ನನ್ನು ಸೇರಿಸಿಕೊ ಅಂತ ಯೆಹೋವನಲ್ಲಿ ಅಂಗಲಾಚಿದೆ.” ಸತ್ಯದಲ್ಲಿ ಬೆಳೆದಿದ್ದರೂ ಯೆಹೋವನಿಂದ ದೂರ ಸರಿದಿದ್ದ ಸ್ತ್ರೀಯೊಬ್ಬಳ ಮಾತು ಇದು. ಆಕೆಯ ಮಾತುಗಳನ್ನು ಓದಿ ‘ಒಂದೊಮ್ಮೆ ತನ್ನ ಸೇವೆಮಾಡುತ್ತಿದ್ದವರ ಬಗ್ಗೆ ದೇವರಿಗೆ ಹೇಗನಿಸುತ್ತದೆ? ಆತನಿಗೆ ಅವರ ನೆನಪಿದೆಯಾ? ಅವರು ಮರಳಿ ತನ್ನ ಬಳಿ ಬರಬೇಕೆಂದು ಬಯಸುತ್ತಾನಾ?’ ಎಂಬೆಲ್ಲ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಏಳಬಹುದು. ಉತ್ತರ ತಿಳಿಯಲು ಯೆರೆಮೀಯನ ಮಾತುಗಳನ್ನು ಪರಿಶೀಲಿಸಿ. ಆ ಉತ್ತರಗಳು ಖಂಡಿತ ನಿಮ್ಮ ಮನಸ್ಸಿಗೆ ತಂಪೆರಚುವವು.ಯೆರೆಮೀಯ 31:18-20 ಓದಿ.

ಯೆರೆಮೀಯನು ಈ ಮಾತುಗಳನ್ನು ಹೇಳಿದ ಸನ್ನಿವೇಶದ ಬಗ್ಗೆ ಯೋಚಿಸಿ. ಅವನ ಕಾಲಕ್ಕಿಂತ ದಶಕಗಳ ಹಿಂದೆ ಅಂದರೆ ಕ್ರಿ.ಪೂ. 740ರಲ್ಲಿ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯವನ್ನು * ಅಶ್ಶೂರ್ಯರು ಸೆರೆ ಒಯ್ಯುವಂತೆ ಯೆಹೋವನು ಬಿಟ್ಟನು. ಇದು ಇಸ್ರಾಯೇಲ್ಯರಿಗೆ ಕೊಟ್ಟ ಶಿಕ್ಷೆಯಾಗಿತ್ತು. ಏಕೆಂದರೆ ದೇವರ ಪ್ರವಾದಿಗಳು ಪದೇ ಪದೇ ಕೊಡುತ್ತಿದ್ದ ಎಚ್ಚರಿಕೆಗಳನ್ನು ಅವರು ಕಿವಿಗೆಹಾಕಿಕೊಳ್ಳದೆ ಗಂಭೀರ ಪಾಪಗಳನ್ನು ಮಾಡುತ್ತಲೇ ಇದ್ದರು. (2 ಅರಸುಗಳು 17:5-18) ದೇವರಿಂದ ಬೇರ್ಪಟ್ಟ ಸ್ಥಿತಿಯಿಂದಾಗಿ ಮತ್ತು ಸ್ವದೇಶದಿಂದ ದೂರದ ಸ್ಥಳದಲ್ಲಿ ಸೆರೆಯಾಳುಗಳಾಗಿ ಅನುಭವಿಸಿದ ಕಷ್ಟಗಳಿಂದಾಗಿ ಇಸ್ರಾಯೇಲ್ಯರ ಮನೋಭಾವ ಬದಲಾಯಿತೇ? ಯೆಹೋವನು ಅವರನ್ನು ಪೂರ್ತಿ ಮರೆತೇ ಬಿಟ್ಟನೇ? ಅವರನ್ನು ಪುನಃ ತನ್ನವರಾಗಿ ಸ್ವೀಕರಿಸಿದನೇ?

“ಪಶ್ಚಾತ್ತಾಪಪಟ್ಟೆನು”

ಸೆರೆಯಲ್ಲಿದ್ದಾಗ ಆ ಜನರಿಗೆ ತಮ್ಮ ತಪ್ಪಿನ ಅರಿವಾಯಿತು. ಪಶ್ಚಾತ್ತಾಪಪಟ್ಟರು. ಅವರ ಮನದಾಳದ ಪರಿತಾಪ ಯೆಹೋವನ ದೃಷ್ಟಿಗೆ ಮರೆಯಾಗಲಿಲ್ಲ. ಹಾಗಾಗಿಯೇ ಆತನು ಅವರ ಪರಿತಾಪ, ಭಾವನೆಗಳನ್ನು ಮಾತುಗಳಲ್ಲಿ ವರ್ಣಿಸಿದ್ದಾನೆ. ಅವರನ್ನು ಸಮೂಹವಾಗಿ ‘ಎಫ್ರಾಯಿಮ್‌’ ಎಂದು ಕರೆಯುತ್ತಾ ಹೇಳಿದ ಮಾತನ್ನು ಕೇಳಿ.

“ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವದನ್ನು ಕೇಳೇ ಕೇಳಿದ್ದೇನೆ” ಅನ್ನುತ್ತಾನೆ ಯೆಹೋವ. (ವಚನ 18) ಇಸ್ರಾಯೇಲ್ಯರು ತಮ್ಮ ಪಾಪಗಳ ಫಲ ಅನುಭವಿಸುತ್ತಾ ಗೋಳಾಡುವುದನ್ನು ಯೆಹೋವನು ಕೇಳಿದನು. ತನ್ನ ಮೇಲೇ ಕಷ್ಟಗಳನ್ನು ಬರಮಾಡಿಕೊಂಡು ಹಿಂದೆ ತನಗಿದ್ದ ಸಂತೋಷದ ಬದುಕನ್ನು ನೆನಸುತ್ತಾ ವಿಷಾದದಿಂದ ತಲೆಯಾಡಿಸುವ ದಾರಿತಪ್ಪಿದ ಹುಡುಗನಂತೆ ಅವರಿದ್ದಾರೆ. (ಲೂಕ 15:11-17) ಅವರೇನೆಂದು ಪ್ರಲಾಪಿಸಿದರು?

“ನೀನು ನನ್ನನ್ನು ಶಿಕ್ಷಿಸಿದ್ದೀ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆ.” (ವಚನ 18) ಶಿಕ್ಷೆಗೆ ತಾವು ಅರ್ಹರೆಂದು ಆ ಜನರು ಒಪ್ಪಿಕೊಂಡರು. ಯಾಕಂದರೆ ಅವರು ಪಳಗದ ಹೋರಿಯಂತೆ ಇದ್ದರು. ಈ ಉಪಮಾಲಂಕಾರವನ್ನು ವಿವರಿಸುತ್ತಾ ಒಂದು ಪರಾಮರ್ಶ ಕೃತಿ ಹೇಳುವುದು: “ಒಂದು ಎತ್ತು ನೊಗವನ್ನು ತಪ್ಪಾದ ದಿಕ್ಕಿಗೆ ಎಳೆಯದಿದ್ದರೆ ಅದಕ್ಕೆ ಚುಚ್ಚುಗೋಲಿನಿಂದ ತಿವಿಯುವ ಅಗತ್ಯ ಬರುವುದಿಲ್ಲ.” ಹಾಗೆಯೇ ಇಸ್ರಾಯೇಲ್ಯರು ತಪ್ಪುಮಾಡದಿದ್ದರೆ ಶಿಕ್ಷೆ ಅನುಭವಿಸಬೇಕಾಗಿರಲಿಲ್ಲ.

“ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ.” (ವಚನ 18) ನೊಂದ ಮನಸ್ಸುಳ್ಳವರಾಗಿ ಅವರೀಗ ಯೆಹೋವನಿಗೆ ಮೊರೆಯಿಡುತ್ತಾರೆ. ಅವರು ಪಾಪ ಮಾಡಿ ದಾರಿತಪ್ಪಿದ್ದರು. ಈಗ ವಾಪಸ್ಸು ಆತನ ಅನುಗ್ರಹದ ಹಾದಿಗೆ ಬರಲು ಸಹಾಯ ಬೇಡಿಕೊಂಡರು. ಒಂದು ಬೈಬಲ್‌ ತರ್ಜುಮೆ ಹೀಗನ್ನುತ್ತದೆ: “ನಾನು ನಿನ್ನಲ್ಲಿಗೆ ಹಿಂದಿರುಗಿಬರುತ್ತೇನೆ. ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.”—ಪರಿಶುದ್ಧ ಬೈಬಲ್‌. *

“ಪಶ್ಚಾತ್ತಾಪಪಟ್ಟೆನು . . . ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.” (ವಚನ 19) ಜನರು ತಾವು ಮಾಡಿದ ಪಾಪಕ್ಕಾಗಿ ತುಂಬ ಪರಿತಪಿಸಿದರು. ತಮ್ಮ ತಪ್ಪೊಪ್ಪಿಕೊಂಡರು. ಅವರಿಗೆ ತುಂಬ ಅವಮಾನವೆನಿಸಿತು, ದುಃಖವೆನಿಸಿತು.—ಲೂಕ 15:18, 19, 21.

ಇಸ್ರಾಯೇಲ್ಯರು ತಮ್ಮ ತಪ್ಪಿಗಾಗಿ ನೊಂದು, ಪಶ್ಚಾತ್ತಾಪಪಟ್ಟು ಪಾಪಗಳನ್ನು ದೇವರಿಗೆ ಅರಿಕೆಮಾಡಿದರು. ತಮ್ಮ ಕೆಟ್ಟ ಹಾದಿಯನ್ನು ತೊರೆದರು. ಅವರ ಪಶ್ಚಾತ್ತಾಪ ನೋಡಿ ದೇವರ ಮನಕರಗಿತೊ? ತನ್ನ ಬಳಿ ಪುನಃ ಸೇರಿಸಿಕೊಂಡನೊ?

“ಅವನನ್ನು ಕರುಣಿಸೇ ಕರುಣಿಸುವೆನು”

ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ವಿಶೇಷ ಒಲವಿತ್ತು. ಆತನಂದದ್ದು: “ನಾನು ಇಸ್ರಾಯೇಲಿಗೆ ತಂದೆ, ಎಫ್ರಾಯೀಮು ನನ್ನ ಹಿರಿಯ ಮಗನಲ್ಲವೆ.” (ಯೆರೆಮೀಯ 31:9) ಮನಸಾರೆ ಪರಿತಪಿಸಿರುವ ಮಗ ಹಿಂದಿರುಗಿ ಬರಬೇಕೆಂದಿರುವಾಗ ಪ್ರೀತಿಯ ತಂದೆ ತಡೆಯಲಾರನಲ್ಲವೇ? ಯೆಹೋವನಿಗೆ ತನ್ನ ಜನರ ಮೇಲಿದ್ದ ಪಿತೃವಾತ್ಸಲ್ಯವನ್ನು ಆತನು ಹೇಗೆ ವ್ಯಕ್ತಪಡಿಸಿದನೆಂದು ಗಮನಿಸಿ.

“ಎಫ್ರಾಯೀಮು ನನಗೆ ಪ್ರಿಯಪುತ್ರನೋ, ಮುದ್ದುಮಗುವೋ, ಏನೋ? ಅವನ ಹೆಸರೆತ್ತಿದಾಗೆಲ್ಲಾ [“ವಿರೋಧವಾಗಿ ಮಾತಾಡಿದಂದಿನಿಂದ,” ಪವಿತ್ರ ಗ್ರಂಥ ಭಾಷಾಂತರ] ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ.” (ವಚನ 20) ಎಂಥ ಕೋಮಲ ಮಮತೆಯ ಮಾತು! ದೇವರು ಪ್ರೀತಿಯ ಹೊನಲನ್ನೇ ಹರಿಸುವ ತಂದೆ. ಆದರೆ ಅದೇ ಸಮಯ ಕಟ್ಟುನಿಟ್ಟಿನವ. ಅದಕ್ಕೇ ತನ್ನ ಮಕ್ಕಳ ‘ವಿರೋಧವಾಗಿ ಮಾತಾಡಿದನು’ ಅಂದರೆ ಅವರ ಪಾಪಕೃತ್ಯಗಳ ಬಗ್ಗೆ ಆಗಾಗ್ಗೆ ಎಚ್ಚರಿಸಿದನು. ಆದರೆ ಅವರು ಹಠಹಿಡಿದು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳದಿದ್ದಾಗ ಸೆರೆಗೆ ಒಯ್ಯಲ್ಪಡುವಂತೆ ಬಿಟ್ಟನು. ಇನ್ನೊಂದು ಮಾತಿನಲ್ಲಿ ತನ್ನಿಂದ ಬೇರ್ಪಡುವಂತೆ ಬಿಟ್ಟನು. ಹಾಗೆ ಶಿಕ್ಷಿಸಬೇಕಾಗಿ ಬಂದರೂ ಅವರನ್ನು ಮರೆತುಬಿಡಲಿಲ್ಲ. ಮರೆಯಲು ಆತನಿಂದ ಸಾಧ್ಯವೇ ಇಲ್ಲ. ಪ್ರೀತಿಯಿರುವ ತಂದೆ ಯಾವತ್ತೂ ತನ್ನ ಮಕ್ಕಳನ್ನು ಮರೆಯುವುದಿಲ್ಲ. ಇಸ್ರಾಯೇಲ್ಯರು ಮನಃಪೂರ್ವಕವಾಗಿ ಪಶ್ಚಾತ್ತಾಪಪಟ್ಟದ್ದನ್ನು ನೋಡಿ ತಂದೆಯಾದ ಯೆಹೋವನಿಗೆ ಹೇಗನಿಸಿತು?

“ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ; ಅವನನ್ನು ಕರುಣಿಸೇ ಕರುಣಿಸುವೆನು.” (ವಚನ 20) ಇಸ್ರಾಯೇಲ್ಯರ ಹೃತ್ಪೂರ್ವಕ ಪಶ್ಚಾತ್ತಾಪ ನೋಡಿ ಯೆಹೋವನು ಅವರಿಗಾಗಿ ಹಂಬಲಿಸಿದನು. ಅವರು ಯಾವಾಗ ತನ್ನ ಬಳಿ ಹಿಂದಿರುಗಿ ಬರುವರೊ ಎಂದು ಹಾತೊರೆದನು. ದಾರಿತಪ್ಪಿದ ಮಗನ ಸಾಮ್ಯದಲ್ಲಿನ ತಂದೆಯ ಹಾಗೆ ಯೆಹೋವನು ಕನಿಕರಪಟ್ಟು ತನ್ನ ಮಕ್ಕಳನ್ನು ಪುನಃ ತನ್ನ ತೆಕ್ಕೆಗೆ ಸೇರಿಸಲು ತುದಿಗಾಲಲ್ಲಿ ನಿಂತಿದ್ದನು.—ಲೂಕ 15:20.

‘ಯೆಹೋವನ ಬಳಿ ಹಿಂದಿರುಗಿ ಬಂದಾಗ ನನ್ನನ್ನು ಸೇರಿಸಿಕೊಂಡನು’

ಯೆರೆಮೀಯ 31:18-20ರಲ್ಲಿರುವ ಮಾತುಗಳು ನಮಗೆ ಯೆಹೋವನ ಕೋಮಲ ಮಮತೆ ಹಾಗೂ ಕರುಣೆಯ ಬಗ್ಗೆ ಹೆಚ್ಚನ್ನು ತಿಳಿಸುತ್ತವೆ. ಹಿಂದೊಮ್ಮೆ ತನ್ನ ಸೇವೆಮಾಡಿದವರನ್ನು ದೇವರು ಮರೆಯುವುದಿಲ್ಲ. ಅಂಥವರು ಆತನ ಬಳಿಗೆ ಹಿಂದಿರುಗಲು ಮನಸ್ಸುಮಾಡಿದರೆ? ಅವರನ್ನು ಕ್ಷಮಿಸುತ್ತಾನೆ. (ಕೀರ್ತನೆ 86:5) ಹೃತ್ಪೂರ್ವಕವಾಗಿ ಪಶ್ಚಾತ್ತಾಪಪಡುವಲ್ಲಿ ಆತನೆಂದೂ ಅವರನ್ನು ದೂರ ತಳ್ಳುವುದಿಲ್ಲ. (ಕೀರ್ತನೆ 51:17) ಸಂತೋಷದಿಂದ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವನು.—ಲೂಕ 15:22-24.

ಆರಂಭದಲ್ಲಿ ತಿಳಿಸಲಾದ ಸ್ತ್ರೀಯು ಯೆಹೋವನ ಬಳಿ ಹಿಂದಿರುಗಿ ಬರಲು ಸ್ವತಃ ಹೆಜ್ಜೆ ತೆಗೆದುಕೊಂಡಳು. ಯೆಹೋವನ ಸಾಕ್ಷಿಗಳ ಸ್ಥಳೀಯ ರಾಜ್ಯ ಸಭಾಗೃಹಕ್ಕೆ ಹೋದಳು. “ಅಯೋಗ್ಯಳೆಂಬ ಭಾವನೆ ನನ್ನನ್ನು ಕಾಡುತ್ತಿತ್ತು” ಎಂದಾಕೆ ನೆನಪಿಸಿಕೊಳ್ಳುತ್ತಾಳೆ. ತನ್ನಲ್ಲಿದ್ದ ಈ ನಕಾರಾತ್ಮಕ ಭಾವನೆಗಳನ್ನು ಆಕೆ ಮೆಟ್ಟಿನಿಲ್ಲಬೇಕಾಯಿತು. ಸಭೆಯ ಹಿರಿಯರು ಆಕೆಗೆ ಪ್ರೋತ್ಸಾಹ ಕೊಟ್ಟು, ಪುನಃ ಆಧ್ಯಾತ್ಮಿಕವಾಗಿ ಬಲಗೊಳ್ಳಲು ಸಹಾಯಮಾಡಿದರು. ತುಂಬು ಹೃದಯದ ಕೃತಜ್ಞತೆಯಿಂದ ಆಕೆ ಹೇಳಿದ್ದು: “ನಾನು ಯೆಹೋವನ ಬಳಿ ಹಿಂದಿರುಗಿ ಬಂದಾಗ ಆತನು ನನ್ನನ್ನು ಸೇರಿಸಿಕೊಂಡದ್ದಕ್ಕಾಗಿ ನನ್ನ ಹೃದಯ ಉಕ್ಕಿ ಬರುತ್ತದೆ!”

ನೀವು ಪುನಃ ಯೆಹೋವನ ಸೇವೆಮಾಡಲು ಇಚ್ಛಿಸುತ್ತೀರಾ? ಹಾಗಿದ್ದರೆ ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಗೆ ಬರುವಂತೆ ನಿಮ್ಮನ್ನು ಆಮಂತ್ರಿಸುತ್ತೇವೆ. ನೆನಪಿಡಿ, ಪಶ್ಚಾತ್ತಾಪಪಟ್ಟವರು ‘ನಿನ್ನ ಬಳಿ ಹಿಂದಿರುಗಿ ಬರುತ್ತೇನೆ’ ಎಂದು ಯೆಹೋವನಿಗೆ ಮೊರೆಯಿಡುವಾಗ ಆತನು ಕರುಣೆಯಿಂದ ಅವರನ್ನು ಕೈದೆರೆದು ಸ್ವಾಗತಿಸುತ್ತಾನೆ. (w12-E 04/01)

[ಪಾದಟಿಪ್ಪಣಿಗಳು]

^ ಪ್ಯಾರ. 5 ಶತಮಾನಗಳ ಹಿಂದೆ ಕ್ರಿ.ಪೂ. 997ರಲ್ಲಿ ಇಸ್ರಾಯೇಲ್ಯರನ್ನು ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು. ದಕ್ಷಿಣದ ಎರಡು ಕುಲಗಳ ಯೆಹೂದ ರಾಜ್ಯ ಮತ್ತು ಉತ್ತರದ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯ. ಇಸ್ರಾಯೇಲ್‌ ರಾಜ್ಯವನ್ನು ಎಫ್ರಾಯೀಮ್‌ ಎಂದೂ ಕರೆಯಲಾಗುತ್ತಿತ್ತು ಏಕೆಂದರೆ ಅದು ಆ ರಾಜ್ಯದ ಪ್ರಮುಖ ಕುಲವಾಗಿತ್ತು.

^ ಪ್ಯಾರ. 10 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.