ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ

ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ

ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ

‘ನಾವು ಎಷ್ಟು ನಿಷ್ಠಾವಂತರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ಕಂಡುಬಂದೆವು!’—1 ಥೆಸ. 2:10.

ಈ ಮುಖ್ಯಾಂಶಗಳನ್ನು ಗುರುತಿಸಿ

ದೆಲೀಲಾ, ಅಬ್ಷಾಲೋಮ, ಇಸ್ಕರಿಯೋತ ಯೂದ ದ್ರೋಹಬಗೆದ ಸಂಗತಿಯಿಂದ ನಾವು ಯಾವ ಎಚ್ಚರಿಕೆಯ ಪಾಠಗಳನ್ನು ಕಲಿಯಬಲ್ಲೆವು?

ಯೋನಾತಾನ ಮತ್ತು ಪೇತ್ರ ತೋರಿಸಿದ ನಿಷ್ಠೆಯನ್ನು ನಾವು ಹೇಗೆ ಅನುಕರಿಸಸಾಧ್ಯ?

ಬಾಳಸಂಗಾತಿ ಮತ್ತು ಯೆಹೋವನಿಗೆ ನಾವು ಹೇಗೆ ಕೊನೆವರೆಗೆ ನಿಷ್ಠಾವಂತರಾಗಿರಬಲ್ಲೆವು?

1-3. (1) ನಾವಿಂದು ಕಡೇ ದಿವಸಗಳಲ್ಲಿ ಇದ್ದೇವೆ ಎನ್ನುವುದಕ್ಕೆ ಒಂದು ರುಜುವಾತು ಯಾವುದು? (2) ದ್ರೋಹ ಎಂದರೇನು? (3) ಯಾವ ಮೂರು ಪ್ರಶ್ನೆಗಳಿಗೆ ಉತ್ತರ ನೋಡುವೆವು?

ದೆಲೀಲಾ, ಅಬ್ಷಾಲೋಮ, ಇಸ್ಕರಿಯೋತ ಯೂದ—ಈ ಮೂವರಲ್ಲಿದ್ದ ಸಾಮಾನ್ಯ ಗುಣ ಯಾವುದು? ವಿಶ್ವಾಸದ್ರೋಹ! ದೆಲೀಲಾ ತನ್ನನ್ನು ತುಂಬ ಪ್ರೀತಿಸಿದವನಿಗೆ ಮೋಸಮಾಡಿದಳು. ಅಬ್ಷಾಲೋಮ ತನ್ನ ತಂದೆಗೇ ರಾಜದ್ರೋಹವೆಸಗಿದ. ಇಸ್ಕರಿಯೋತ ಯೂದ ತನ್ನ ಗುರುವಿಗೇ ದ್ರೋಹ ಬಗೆದ. ಈ ಮೂವರು ಬೆನ್ನಿಗೆ ಚೂರಿ ಇರಿಯುವಂಥ ಕೃತ್ಯಗಳನ್ನು ಮಾಡಿ ಇತರರಿಗೆ ತಂದ ನೋವು, ಹಾನಿ ಅಷ್ಟಿಷ್ಟಲ್ಲ! ಆದರೆ ನಾವೇಕೆ ಈ ಬಗ್ಗೆ ಈಗ ಮಾತಾಡುತ್ತಿದ್ದೇವೆ?

2 ನಂಬಿಕೆದ್ರೋಹ ನಮ್ಮೀ ಸಮಯದಲ್ಲಿ ಹೆಚ್ಚಿನವರಲ್ಲಿರುವ ಕೆಟ್ಟ ಚಾಳಿ ಎಂದನ್ನುತ್ತಾರೆ ಲೇಖಕಿಯೊಬ್ಬರು. ಇದು ನಮಗೇನೂ ಆಶ್ಚರ್ಯವಲ್ಲ. ಏಕೆಂದರೆ ಯೇಸು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ’ ನೀಡುವಾಗ “ಅನೇಕರು . . . ಒಬ್ಬರಿಗೊಬ್ಬರು ದ್ರೋಹಮಾಡುವರು” ಎಂದು ತಿಳಿಸಿದನು. (ಮತ್ತಾ. 24:3, 10) “ದ್ರೋಹ” ಎಂದರೆ “ಒಬ್ಬರನ್ನು ನಂಬಿಸಿ ಮೋಸದಿಂದ ಅಥವಾ ಕುತಂತ್ರದಿಂದ ವಿರೋಧಿಗಳ ಕೈಗೊಪ್ಪಿಸುವುದು” ಎನ್ನುತ್ತದೆ ಒಂದು ನಿಘಂಟು. ಇಂಥ ವಿಶ್ವಾಸದ್ರೋಹವು ನಾವಿಂದು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ರುಜುವಾತಾಗಿದೆ. ಜನರು “ನಿಷ್ಠೆಯಿಲ್ಲದವರೂ . . . ದ್ರೋಹಿಗಳೂ” ಆಗಿರುವರೆಂದು ಪೌಲ ಸಹ ಮುಂತಿಳಿಸಿದ್ದನು. (2 ತಿಮೊ. 3:1, 2, 4) ಲೇಖಕರು, ಚಿತ್ರಕಥೆಗಾರರು ವಿಶ್ವಾಸದ್ರೋಹವನ್ನೇ ಮುಖ್ಯ ವಿಷಯವಾಗಿಟ್ಟು ಕಥೆಗಳನ್ನು ಬರೆಯುತ್ತಾರೆ, ಚಲನಚಿತ್ರಗಳನ್ನು ಮಾಡುತ್ತಾರೆ. ಅಂಥ ಕಥೆಗಳಿಗೆ ಕೌತುಕದ, ಪ್ರಣಯಪ್ರೇಮದ ರಂಗು ಹಚ್ಚಿ ಓದುಗರನ್ನು, ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಯಾರಾದರೂ ನಮಗೆ ದ್ರೋಹ ಬಗೆಯುವಲ್ಲಿ ಅದು ಅಪಾರ ನೋವು, ಕಷ್ಟವನ್ನು ತಂದೊಡ್ಡುತ್ತದೆ. ಇಂಥ ವಿಶ್ವಾಸದ್ರೋಹದ ಕೃತ್ಯಗಳು ಕಡೇ ದಿವಸಗಳ ಸೂಚನೆಯಾಗಿದೆ.

3 ನಿಷ್ಠಾವಂತರಲ್ಲದ ವ್ಯಕ್ತಿಗಳ ಕುರಿತು ಬೈಬಲಿನಲ್ಲಿರುವ ಉದಾಹರಣೆಗಳಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ? ಇನ್ನೊಬ್ಬರಿಗೆ ನಿಷ್ಠರಾಗಿ ಉಳಿದ ಯಾರ ಮಾದರಿಗಳು ಅನುಕರಣಯೋಗ್ಯ? ಯಾರಿಗೆ ನಾವು ಅಚಲ ನಿಷ್ಠೆ ತೋರಿಸಬೇಕು? ಉತ್ತರ ನೋಡೋಣ.

ಎಚ್ಚರಿಕೆಯ ಉದಾಹರಣೆಗಳು

4. (1) ದೆಲೀಲಾ ಸಂಸೋನನಿಗೆ ಹೇಗೆ ದ್ರೋಹವೆಸಗಿದಳು? (2) ಅದೇಕೆ ನೀಚಕೃತ್ಯವಾಗಿತ್ತು?

4 ಮೊದಲು ನಾವು ನಯವಂಚಕಿ ದೆಲೀಲಳ ಉದಾಹರಣೆ ನೋಡೋಣ. ದೇವಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಲು ಹೆಜ್ಜೆ ತೆಗೆದುಕೊಳ್ಳಲಿದ್ದ ನ್ಯಾಯಸ್ಥಾಪಕ ಸಂಸೋನ ಅವಳನ್ನು ಪ್ರೇಮಿಸಿದ. ದೆಲೀಲಳಿಗೆ ಸಂಸೋನನ ಮೇಲೆ ನಿಜ ಪ್ರೀತಿ ಇರಲಿಲ್ಲ. ಆಕೆಯಲ್ಲಿ ನಿಷ್ಠೆ ಇರಲಿಲ್ಲ. ಇದು ಫಿಲಿಷ್ಟಿಯರ ಐದು ಮಂದಿ ಪ್ರಭುಗಳಿಗೆ ಗೊತ್ತಿದ್ದಿರಬೇಕು. ಹಾಗಾಗಿ ಅವರು ಸಂಸೋನನನ್ನು ಕೊಲ್ಲುವ ಉದ್ದೇಶದಿಂದ ದೆಲೀಲಳ ಬಳಿ ಹೋಗಿ ದೊಡ್ಡ ಮೊತ್ತದ ಲಂಚ ಕೊಟ್ಟು ಅವನ ಮಹಾಶಕ್ತಿಯ ರಹಸ್ಯವನ್ನು ತಿಳಿದುಕೊಳ್ಳುವಂತೆ ಪುಸಲಾಯಿಸಿದರು. ಹಣದಾಸೆಯಿಂದ ದೆಲೀಲಾ ಅದಕ್ಕೆ ಒಪ್ಪಿ ಅವನ ಮಹಾಶಕ್ತಿಯ ಗುಟ್ಟನ್ನು ರಟ್ಟು ಮಾಡಲು ಕುತಂತ್ರ ಹೂಡಿದಳು. ಆದರೆ ಮೂರು ಬಾರಿ ಅವಳ ಪ್ರಯತ್ನ ಫಲಕಾರಿಯಾಗಲಿಲ್ಲ. ಅಷ್ಟಕ್ಕೆ ಬಿಡದೆ “ಅವನನ್ನು ದಿನ ದಿನವೂ ಮಾತಿನಿಂದ” ಪೀಡಿಸುತ್ತಾ ಇದ್ದಳು. ಎಷ್ಟರಮಟ್ಟಿಗೆಂದರೆ “ಅವನಿಗೆ ಸಾಯುವದು ಒಳ್ಳೇದನ್ನುವಷ್ಟು ಬೇಸರವಾಯಿತು.” ಕೊನೆಗೆ ಅವನು ತನ್ನ ಶಕ್ತಿಯ ಗುಟ್ಟನ್ನು ತಿಳಿಸಿದನು. ಹುಟ್ಟಿನಿಂದ ತಲೆಗೂದಲನ್ನು ಕತ್ತರಿಸಿಲ್ಲ, ಕತ್ತರಿಸಿದರೆ ತನ್ನ ಶಕ್ತಿಯನ್ನೆಲ್ಲಾ ಕಳಕೊಳ್ಳುವೆನೆಂದು ಹೇಳಿದನು. * ಆಗ ಅವಳು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿದ್ರೆ ಬರಿಸಿ ಒಬ್ಬ ಮನುಷ್ಯನಿಂದ ಅವನ ತಲೆಯ ಕೂದಲನ್ನೆಲ್ಲಾ ಬೋಳಿಸಿದಳು. ಬಳಿಕ ವೈರಿಗಳ ಕೈಗೊಪ್ಪಿಸಿದಳು. (ನ್ಯಾಯ. 16:4, 5, 15-21) ನೀಚಕೃತ್ಯ! ಹಣದಾಸೆಯಿಂದ ತನ್ನನ್ನು ಪ್ರೀತಿಸಿದವನಿಗೇ ದ್ರೋಹ!

5. (1) ಅಬ್ಷಾಲೋಮನು ದಾವೀದನಿಗೆ ನಿಷ್ಠೆ ತೋರಿಸಲು ತಪ್ಪಿಹೋದದ್ದು ಯಾವ ರೀತಿಯಲ್ಲಿ? (2) ಅದು ಅವನ ಕುರಿತು ಏನು ತಿಳಿಸುತ್ತದೆ? (3) ಅಹೀತೋಫೆಲನು ದ್ರೋಹವೆಸಗಿದಾಗ ದಾವೀದನಿಗೆ ಹೇಗನಿಸಿತು?

5 ಇನ್ನೊಂದು ಉದಾಹರಣೆ ವಿಶ್ವಾಸದ್ರೋಹಿ ಅಬ್ಷಾಲೋಮನದ್ದು. ಅಧಿಕಾರ ಲಾಲಸೆಯಿಂದ ಅವನು ತನ್ನ ತಂದೆ ದಾವೀದನಿಂದಲೇ ರಾಜ ಪದವಿ ಕಿತ್ತುಕೊಳ್ಳಲು ಪ್ರಯತ್ನಿಸಿದನು. ಅವನು ಮೊದಲು ‘ಎಲ್ಲ ಇಸ್ರಾಯೇಲ್ಯರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು’ ನಟನೆಮಾಡಿದನು. ಅವರಲ್ಲಿ ತನ್ನ ಬಗ್ಗೆ ಒಳ್ಳೇ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಾ, ಪೊಳ್ಳು ವಚನಗಳನ್ನು ಕೊಡುತ್ತಾ ಅವರನ್ನು ಪ್ರೀತಿಸುವ ಸೋಗು ಹಾಕಿದನು. ಅಪ್ಪಿ ಮುದ್ದಿಟ್ಟು ಅವರ ಹಿತಚಿಂತಕನಂತೆ ನಟಿಸಿದನು. (2 ಸಮು. 15:2-6) ದಾವೀದನ ಭರವಸಾರ್ಹ ಸಲಹೆಗಾರ ಅಹೀತೋಫೆಲನನ್ನೂ ಬುಟ್ಟಿಗೆ ಹಾಕಿಕೊಂಡನು. ಇವನು ಸಹ ಅಬ್ಷಾಲೋಮನೊಂದಿಗೆ ಒಳಸಂಚಿನಲ್ಲಿ ಸೇರಿಕೊಂಡು ರಾಜದ್ರೋಹಿಯಾದನು. (2 ಸಮು. 15:31) ಇಂಥ ವಿಶ್ವಾಸದ್ರೋಹದಿಂದ ತನಗಾದ ನೋವು, ಸಂಕಟವನ್ನು 3ನೇ ಮತ್ತು 55ನೇ ಕೀರ್ತನೆಯಲ್ಲಿ ದಾವೀದ ವ್ಯಕ್ತಪಡಿಸಿದ್ದಾನೆ. (ಕೀರ್ತ. 3:1-8; ಕೀರ್ತನೆ 55:12-14 ಓದಿ.) ಅಬ್ಷಾಲೋಮನು ಹೆಬ್ಬಯಕೆಯಿಂದ ಸಂಚುಹೂಡುವ ಮೂಲಕ ಯೆಹೋವನು ನೇಮಿಸಿದ ರಾಜನನ್ನು ಅಸಡ್ಡೆ ಮಾಡಿದನು. ಹೀಗೆ ದೇವರ ಪರಮಾಧಿಕಾರವನ್ನು ತಳ್ಳಿಹಾಕಿದನು. (1 ಪೂರ್ವ. 28:5) ಆದರೆ ಆ ದಂಗೆ ಯಶಸ್ವಿಯಾಗಲಿಲ್ಲ, ನೆಲಕಚ್ಚಿತು. ದಾವೀದನು ಯೆಹೋವನ ಅಭಿಷಿಕ್ತ ರಾಜನಾಗಿ ಆಳ್ವಿಕೆ ಮುಂದುವರಿಸಿದನು.

6. (1) ಯೂದನು ಯೇಸುವಿಗೆ ದ್ರೋಹಮಾಡಿದ್ದು ಹೇಗೆ? (2) ಕೆಲವು ಭಾಷೆಯ ಜನರು ಇಂದು ‘ಯೂದ’ ಎಂಬ ಹೆಸರನ್ನು ಯಾರಿಗೆ ಬಳಸುತ್ತಾರೆ?

6 ವಿಶ್ವಾಸಘಾತುಕ ಇಸ್ಕರಿಯೋತ ಯೂದನು ಕ್ರಿಸ್ತನಿಗೆ ದ್ರೋಹ ಬಗೆದ ಕುರಿತು ಯೋಚಿಸಿ. ಯೇಸು ತನ್ನ 12 ಮಂದಿ ಅಪೊಸ್ತಲರೊಂದಿಗೆ ಕೊನೆಯ ಬಾರಿ ಪಸ್ಕಹಬ್ಬವನ್ನು ಆಚರಿಸುತ್ತಿರುವಾಗ, “ನಿಮ್ಮಲ್ಲಿ ಒಬ್ಬನು ನನಗೆ ನಂಬಿಕೆ ದ್ರೋಹಮಾಡುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದು ಹೇಳಿದನು. (ಮತ್ತಾ. 26:21) ಬಳಿಕ ಅದೇ ರಾತ್ರಿ ಗೆತ್ಸೇಮನೆ ತೋಟದಲ್ಲಿ ಪೇತ್ರ, ಯಾಕೋಬ, ಯೋಹಾನರಿಗೆ ಯೇಸು “ಇಗೋ, ನನಗೆ ದ್ರೋಹಮಾಡುವವನು ಹತ್ತಿರಕ್ಕೆ ಬಂದಿದ್ದಾನೆ” ಎಂದನು. ಆ ಕೂಡಲೆ ಜನರ ಗುಂಪಿನೊಂದಿಗೆ ಬಂದ ಯೂದನು “ನೇರವಾಗಿ ಯೇಸುವಿನ ಬಳಿಗೆ ಹೋಗಿ, ‘ರಬ್ಬೀ ನಮಸ್ಕಾರ’ ಎಂದು ಹೇಳಿ ಅವನಿಗೆ ಕೋಮಲವಾಗಿ ಮುದ್ದಿಟ್ಟನು.” (ಮತ್ತಾ. 26:46-50; ಲೂಕ 22:47, 52) ಹೀಗೆ ಯೂದನು ಯೇಸುವನ್ನು ವೈರಿಗಳಿಗೆ ಹಿಡಿದುಕೊಟ್ಟು ‘ನೀತಿವಂತನ ರಕ್ತಕ್ಕೆ ದ್ರೋಹಬಗೆದನು.’ ಹಣದ ವ್ಯಾಮೋಹವಿದ್ದ ಯೂದ ಇಷ್ಟೆಲ್ಲಾ ಮಾಡಿದ್ದು ಎಷ್ಟು ಹಣಕ್ಕಾಗಿ? ಕೇವಲ 30 ಬೆಳ್ಳಿ ನಾಣ್ಯಗಳಿಗೆ! (ಮತ್ತಾ. 27:3-5) ಸ್ನೇಹದ ಮುಖವಾಡ ಹಾಕಿ ವಂಚಿಸುವವರನ್ನು ಅಂದಿನಿಂದ ಇಂದಿನ ವರೆಗೂ ಕೆಲವು ಭಾಷೆಯ ಜನರು ‘ಯೂದ’ ಎಂಬ ಅಡ್ಡಹೆಸರಿನಿಂದ ಕರೆಯುತ್ತಾರೆ. *

7. (1) ಅಬ್ಷಾಲೋಮ, ಯೂದರಿಂದ ಯಾವ ಪಾಠವನ್ನು ಕಲಿತೆವು? (2) ದೆಲೀಲಾಳಿಂದ ಯಾವ ಪಾಠ ಕಲಿತೆವು?

7 ಈ ಎಚ್ಚರಿಕೆಯ ಉದಾಹರಣೆಗಳಿಂದ ನಾವು ಏನನ್ನು ಕಲಿಯುತ್ತೇವೆ? ಅಬ್ಷಾಲೋಮ ಮತ್ತು ಯೂದ ಯೆಹೋವನ ಅಭಿಷಿಕ್ತರಿಗೆ ದ್ರೋಹ ಬಗೆದದ್ದರಿಂದ ಅವಮಾನಕರ ಮರಣ ಹೊಂದಿದರು. (2 ಸಮು. 18:9, 14-17; ಅ. ಕಾ. 1:18-20) ದೆಲೀಲಾ ಎಂಬ ಹೆಸರು ಕೇಳಿದೊಡನೆ ಮನಸ್ಸಿಗೆ ಬರುವುದು ಪ್ರೀತಿಸುವ ನಟನೆ ಮಾಡಿ ನಂಬಿದವನಿಗೆ ಮೋಸಮಾಡಿದವಳೆಂದೇ. (ಕೀರ್ತ. 119:158) ಹಾಗಾಗಿ ಇಂಥ ಹುಚ್ಚು ಹೆಬ್ಬಯಕೆ ಅಥವಾ ದುರಾಶೆಯ ಛಾಯೆಯೂ ನಮ್ಮಲ್ಲಿರದಂತೆ ನೋಡಿಕೊಳ್ಳುವುದು ತುಂಬ ಪ್ರಾಮುಖ್ಯ! ಇಲ್ಲವಾದರೆ ನಾವು ಯೆಹೋವನ ಅನುಗ್ರಹವನ್ನು ಕಳಕೊಳ್ಳಸಾಧ್ಯವಿದೆ. ನಂಬಿಕೆದ್ರೋಹವನ್ನು ಎಂದೂ ಮಾಡದಂತೆ ಎಚ್ಚರಿಸಲು ಇದಕ್ಕಿಂತ ಬೇರೆ ಉದಾಹರಣೆಗಳು ಬೇಕೇ?

ನಿಷ್ಠರಾಗಿ ಉಳಿದವರ ಮಾದರಿಯನ್ನು ಅನುಕರಿಸಿರಿ

8, 9. (1) ಯೋನಾತಾನನು ದಾವೀದನಿಗೆ ನಿಷ್ಠೆಯಿಂದ ಉಳಿಯುತ್ತೇನೆಂದು ಮಾತುಕೊಟ್ಟದ್ದೇಕೆ? (2) ಯೋನಾತಾನನನ್ನು ನಾವು ಹೇಗೆ ಅನುಕರಿಸಬಲ್ಲೆವು?

8 ಅನೇಕ ನಿಷ್ಠಾವಂತ ವ್ಯಕ್ತಿಗಳ ಮಾದರಿಗಳೂ ಬೈಬಲಿನಲ್ಲಿವೆ. ಅವುಗಳಲ್ಲಿ ಎರಡನ್ನು ಈಗ ನೋಡೋಣ. ಅವರಿಂದ ನಾವು ಯಾವ ಪಾಠ ಕಲಿಯಬಲ್ಲೆವೆಂದೂ ಗಮನಿಸೋಣ. ಮೊದಲು ನಾವು ನೋಡಲಿರುವುದು ದಾವೀದನಿಗೆ ನಿಷ್ಠೆ ತೋರಿಸಿದ ಯೋನಾತಾನನ ಕುರಿತು. ಇವನು ರಾಜ ಸೌಲನ ಹಿರೀ ಮಗ. ತಂದೆಯ ನಂತರ ಇಸ್ರಾಯೇಲಿನ ರಾಜನಾಗಲಿದ್ದವನು. ಆದರೆ ಯೆಹೋವನು ಅವನಿಗೆ ಬದಲಾಗಿ ದಾವೀದನನ್ನು ಇಸ್ರಾಯೇಲಿನ ಮುಂದಿನ ರಾಜನಾಗಿ ಆರಿಸಿಕೊಂಡನು. ಆಗ ಯೋನಾತಾನ ಹೊಟ್ಟೆಕಿಚ್ಚು ಪಟ್ಟು ದಾವೀದನನ್ನು ತನ್ನ ಎದುರಾಳಿಯಂತೆ ವೀಕ್ಷಿಸಲಿಲ್ಲ. ಯೆಹೋವನ ನಿರ್ಣಯವನ್ನು ಮನಃಪೂರ್ವಕವಾಗಿ ಗೌರವಿಸಿದನು. ಅವನ “ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು.” ದಾವೀದನಿಗೆ ನಿಷ್ಠನಾಗಿ ಉಳಿಯುವೆನೆಂದು ಯೋನಾತಾನ ಮಾತುಕೊಟ್ಟನು. ಮಾತ್ರವಲ್ಲ ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟನ್ನು ದಾವೀದನಿಗೆ ಕೊಟ್ಟು ರಾಜಮರ್ಯಾದೆ ತೋರಿಸಿದನು. (1 ಸಮು. 18:1-4) ದಾವೀದನನ್ನು ‘ಬಲಪಡಿಸಲು’ ಯೋನಾತಾನನು ತನ್ನಿಂದ ಆದುದ್ದೆಲ್ಲವನ್ನೂ ಮಾಡಿದನು. ಒಮ್ಮೆ ತನ್ನ ಜೀವವನ್ನೇ ಒತ್ತೆಯಿಟ್ಟು ತಂದೆಯ ಮುಂದೆ ದಾವೀದನ ಪರವಹಿಸಿ ಮಾತಾಡಿದನು. ಪ್ರಾಣಸ್ನೇಹಿತನಿಗೆ ನಿಷ್ಠೆಯಿಂದಿದ್ದ ಯೋನಾತಾನನು, “ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು” ಎಂದು ಹೇಳಿದನು. (1 ಸಮು. 20:30-34; 23:16, 17) ಯೋನಾತಾನ ತೀರಿಕೊಂಡಾಗ ದಾವೀದನು ಎಷ್ಟು ದುಃಖಪಟ್ಟನೆಂದರೆ ತನ್ನ ಶೋಕಗೀತೆಯಲ್ಲಿ ಆ ನೋವು, ಪ್ರೀತಿಯನ್ನು ವ್ಯಕ್ತಪಡಿಸಿದನು.—2 ಸಮು. 1:17, 26.

9 ಯಾರಿಗೆ ನಿಷ್ಠೆ ತೋರಿಸಬೇಕೆಂಬ ವಿಷಯದಲ್ಲಿ ಯೋನಾತಾನನಿಗೆ ಯಾವುದೇ ಗಲಿಬಿಲಿ ಇರಲಿಲ್ಲ. ಪರಮಾಧಿಕಾರಿಯಾದ ಯೆಹೋವನಿಗೆ ಅವನು ನಿಷ್ಠನಾಗಿದ್ದ ಕಾರಣ ಆತನು ಅಭಿಷೇಕಿಸಿದ ದಾವೀದನಿಗೆ ಪೂರ್ಣ ಬೆಂಬಲ ನೀಡಿದನು. ಇದು ನಮಗಿಂದು ಅತ್ಯುತ್ತಮ ಮಾದರಿ. ನಮಗೆ ಸಭೆಯಲ್ಲಿ ವಿಶೇಷ ಸೇವಾಸುಯೋಗ ಸಿಗದಿದ್ದಾಗಲೂ ಮುಂದಾಳತ್ವ ವಹಿಸಲು ನೇಮಿತರಾದ ಸಹೋದರರಿಗೆ ಪೂರ್ಣ ಮನಸ್ಸಿನಿಂದ ಬೆಂಬಲ ನೀಡಬೇಕು.—1 ಥೆಸ. 5:12, 13; ಇಬ್ರಿ. 13:17, 24.

10, 11. (1) ಪೇತ್ರ ಯೇಸುವಿಗೆ ಏಕೆ ನಿಷ್ಠಾವಂತನಾಗಿದ್ದನು? (2) ಪೇತ್ರನನ್ನು ನಾವು ಹೇಗೆ ಅನುಕರಿಸಬಲ್ಲೆವು?

10 ಇನ್ನೊಂದು ಉತ್ತಮ ಮಾದರಿ ಅಪೊಸ್ತಲ ಪೇತ್ರ. ಯೇಸುವಿಗೆ ನಿಷ್ಠಾವಂತನಾಗಿರುವೆನೆಂದು ಅವನು ವಚನವಿತ್ತನು. ಒಮ್ಮೆ ಏನಾಯಿತೆಂದು ಗಮನಿಸಿ. ಕ್ರಿಸ್ತನು ಸ್ವಲ್ಪ ಸಮಯದಲ್ಲೇ ತನ್ನ ದೇಹ ಮತ್ತು ರಕ್ತವನ್ನು ಯಜ್ಞವಾಗಿ ಅರ್ಪಿಸಲಿದ್ದನು. ಆ ಯಜ್ಞದಲ್ಲಿ ನಂಬಿಕೆಯಿಡುವುದರ ಮಹತ್ವವನ್ನು ಸಾಂಕೇತಿಕ ಭಾಷೆಯಲ್ಲಿ ವಿವರಿಸಿದನು. ಆದರೆ ಅವನ ಶಿಷ್ಯರಲ್ಲಿ ಅನೇಕರು ಅದು ಅಸಹನೀಯವಾದ ಮಾತೆಂದು ಹೇಳಿ ಹಿಂಬಾಲಿಸುವುದನ್ನು ಬಿಟ್ಟುಬಿಟ್ಟರು. (ಯೋಹಾ. 6:53-60, 66) ಆಗ ಯೇಸು ತನ್ನ 12 ಮಂದಿ ಅಪೊಸ್ತಲರ ಕಡೆಗೆ ತಿರುಗಿ “ನೀವು ಸಹ ಹೋಗಲು ಬಯಸುವುದಿಲ್ಲ, ಅಲ್ಲವೆ?” ಎಂದು ಕೇಳಿದನು. ಅದಕ್ಕೆ ಪೇತ್ರನು, “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ; ನೀನು ದೇವರ ಪವಿತ್ರನು ಎಂಬುದನ್ನು ನಾವು ನಂಬಿದ್ದೇವೆ ಮತ್ತು ತಿಳಿದುಕೊಂಡಿದ್ದೇವೆ” ಎಂದು ಹೇಳಿದನು. (ಯೋಹಾ. 6:67-69) ಯೇಸು ಹೇಳಿದ ಮಾತುಗಳೇನೂ ಪೇತ್ರನಿಗೆ ಅರ್ಥವಾಗಿರಲಿಲ್ಲ. ಹಾಗಿದ್ದರೂ ದೇವರ ಅಭಿಷಿಕ್ತ ಪುತ್ರನಿಗೆ ನಿಷ್ಠಾವಂತನಾಗಿರಲು ಪೇತ್ರ ನಿಶ್ಚಯಿಸಿದ್ದನು.

11 ಪೇತ್ರನೇನೂ ‘ಯೇಸುವಿನ ಅಭಿಪ್ರಾಯ ತಪ್ಪಾಗಿದೆ, ಸ್ವಲ್ಪ ಸಮಯದ ಬಳಿಕ ಅವನೇ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು’ ಎಂದು ನೆನಸಲಿಲ್ಲ. ಬದಲಿಗೆ ಯೇಸುವಿನಲ್ಲಿ “ನಿತ್ಯಜೀವದ ಮಾತುಗಳು” ಇವೆಯೆಂದು ದೀನತೆಯಿಂದ ಅಂಗೀಕರಿಸಿದನು. ಪೇತ್ರನ ಈ ಮಾದರಿಯನ್ನು ನಾವಿಂದು ಅನುಕರಿಸಬೇಕು. ‘ನಂಬಿಗಸ್ತ ಮನೆವಾರ್ತೆಯಿಂದ’ ಸಿಗುವ ಸಾಹಿತ್ಯದಲ್ಲಿರುವ ಒಂದು ವಿಚಾರ ನಮಗೆ ಅರ್ಥವಾಗದಿದ್ದಲ್ಲಿ ಅಥವಾ ಅದು ನಮ್ಮ ಯೋಚನಾಧಾಟಿಗೆ ಹೊಂದಿಕೆಯಲ್ಲಿ ಇಲ್ಲದಿದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅದನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಪ್ರಯತ್ನ ಹಾಕಬೇಕು. ನಮ್ಮ ಯೋಚನಾಧಾಟಿಗೆ ಸರಿಹೊಂದುವ ಅರ್ಥವಿವರಣೆಯು ಮುಂದೆ ಬರಬಹುದೆಂದು ನಿರೀಕ್ಷಿಸಬಾರದು.ಲೂಕ 12:42 ಓದಿ.

ವಿವಾಹ ಸಂಗಾತಿಗೆ ನಿಷ್ಠೆಯಿಂದಿರಿ

12, 13. (1) ದಾಂಪತ್ಯ ದ್ರೋಹಕ್ಕೆ ಯಾವುದು ಕಾರಣವಾಗಿರಬಲ್ಲದು? (2) ಅಂಥ ಕೃತ್ಯಕ್ಕೆ ವಯಸ್ಸು ವಿನಾಯಿತಿ ನೀಡುವುದಿಲ್ಲ ಏಕೆ?

12 ನಂಬಿಕೆದ್ರೋಹ ಯಾವುದೇ ರೀತಿಯದ್ದಾಗಿರಲಿ ಅದು ನೀಚಕೃತ್ಯವೇ. ಕ್ರೈಸ್ತ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಅದು ಇರಲೇ ಬಾರದು. ಏಕೆಂದರೆ ಅದು ಶಾಂತಿ, ಐಕ್ಯವನ್ನು ಹೊಸಕಿಹಾಕುತ್ತದೆ. ನಮ್ಮ ವಿವಾಹ ಸಂಗಾತಿಗೆ ಮತ್ತು ನಮ್ಮ ದೇವರಿಗೆ ತೋರಿಸುವ ನಿಷ್ಠೆಯಲ್ಲಿ ದೃಢರಾಗಿರುವುದು ಹೇಗೆಂದು ಈಗ ನೋಡೋಣ.

13 ವಿಪರೀತ ವೇದನೆಯನ್ನುಂಟುಮಾಡುವ ದ್ರೋಹಗಳಲ್ಲಿ ವ್ಯಭಿಚಾರ ಒಂದು. ವ್ಯಭಿಚಾರಗೈದ ಪುರುಷ (ಅಥವಾ ಸ್ತ್ರೀ) ತನ್ನ ವಿವಾಹ ಸಂಗಾತಿಗೆ ತೋರಿಸಬೇಕಾದ ನಿಷ್ಠೆಯನ್ನು ಮುರಿದಿದ್ದಾನೆ. ಅವನು (ಆಕೆ) ತನ್ನ ಗಮನ ಮತ್ತು ಪ್ರೀತಿಯನ್ನು ಪರಸ್ತ್ರೀಗೆ (ಅಥವಾ ಪರಪುರುಷನಿಗೆ) ಕೊಟ್ಟಿದ್ದಾನೆ. ನಿರ್ದೋಷಿ ಸಂಗಾತಿ ಇದ್ದಕ್ಕಿದ್ದಂತೆ ಒಂಟಿಯಾಗುತ್ತಾರೆ. ಬಾಳನೌಕೆ ನಡುನೀರಿನಲ್ಲಿ ಸಂತುಲನ ಕಳೆದುಕೊಂಡಂತೆ ಇರುತ್ತದೆ. ಒಂದೊಮ್ಮೆ ಪ್ರೀತಿಯ ಬಂಧದಲ್ಲಿ ಆಪ್ತರಾಗಿದ್ದ ಪತಿಪತ್ನಿಯ ಮಧ್ಯೆ ಇಂಥ ಬಿರುಕು ಉಂಟಾದದ್ದಾದರೂ ಹೇಗೆ? ಇದು ಆರಂಭಗೊಳ್ಳುವುದು ಪತಿಪತ್ನಿ ಪರಸ್ಪರರ ಭಾವನೆಗಳನ್ನು ನಿರ್ಲಕ್ಷಿಸುವಾಗಲೇ. ಸಮಾಜಶಾಸ್ತ್ರದ ಪ್ರೊಫೆಸರರಾದ ಗಾಬ್ರೀಯೆಲ ಟುರ್ನಾಟೂರಿ ಹೇಳುವುದೇನೆಂದರೆ “ಪತಿಪತ್ನಿ ಜೊತೆಯಾಗಿದ್ದರೂ ಆಪ್ತ ಸಂಬಂಧವನ್ನು ಹೊಂದಿರದಿದ್ದಲ್ಲಿ ಅಥವಾ ಬಾಂಧವ್ಯದಲ್ಲಿ ಆಗಾಗ್ಗೆ ಬಿರುಕುಗಳು ಕಾಣಿಸಿಕೊಳ್ಳುವಲ್ಲಿ ದಾಂಪತ್ಯದ್ರೋಹ ಬೇರು ಬಿಡುತ್ತದೆ.” ಮಧ್ಯವಯಸ್ಕರು ಕೂಡ ತಮ್ಮ ಬಾಳಸಂಗಾತಿಯಿಂದ ಬೇರ್ಪಟ್ಟಿರುವ ಪ್ರಸಂಗಗಳಿವೆ. ಉದಾಹರಣೆಗೆ ಪರಸ್ತ್ರೀಯೆಡೆಗೆ ಮೋಹಿತನಾದ 50 ವರ್ಷದ ಪುರುಷನೊಬ್ಬ 25 ವರ್ಷ ತನ್ನೊಂದಿಗೆ ಸಹಬಾಳ್ವೆ ನಡೆಸಿದ ನಂಬಿಗಸ್ತ ಪತ್ನಿಗೆ ವಿಚ್ಛೇದನ ನೀಡಿದನು. ಮಧ್ಯವಯಸ್ಸಿನಲ್ಲಿ ಇದೆಲ್ಲಾ ಸಾಮಾನ್ಯ ಎಂದು ಕೆಲವರು ತಳ್ಳಿಬಿಡಬಹುದು. ಆದರೆ ಇಂಥ ದ್ರೋಹವೆಸಗುವುದಕ್ಕೂ ವಯಸ್ಸಿಗೂ ಸಂಬಂಧವಿಲ್ಲ. ದಾಂಪತ್ಯನಿಷ್ಠೆ ಮುರಿಯುವುದು ಮಹಾ ದ್ರೋಹವೇ. *

14. (1) ದಾಂಪತ್ಯ ದ್ರೋಹದ ಬಗ್ಗೆ ಯೆಹೋವನಿಗೆ ಹೇಗೆ ಅನಿಸುತ್ತದೆ? (2) ದಾಂಪತ್ಯ ದ್ರೋಹದ ವಿಷಯದಲ್ಲಿ ಯೇಸುವಿನ ನೋಟವೇನು?

14 ಬೈಬಲ್‌ ಆಧಾರಿತ ಕಾರಣವಿಲ್ಲದೆ ತಮ್ಮ ವಿವಾಹ ಸಂಗಾತಿಯನ್ನು ಕೈಬಿಡುವವರನ್ನು ನಮ್ಮ ದೇವರಾದ ಯೆಹೋವನು ಹೇಗೆ ವೀಕ್ಷಿಸುತ್ತಾನೆ? ಆತನು ‘ಪತ್ನೀತ್ಯಾಗವನ್ನು [“ವಿವಾಹ ವಿಚ್ಛೇದನವನ್ನು” ಪವಿತ್ರ ಗ್ರಂಥ] ಹಗೆಮಾಡುತ್ತಾನೆ.’ ಸಂಗಾತಿಯನ್ನು ದುರುಪಚರಿಸುವವರನ್ನು ಮತ್ತು ಕೈಬಿಡುವವರನ್ನು ಆತನು ಬಲವಾಗಿ ಖಂಡಿಸಿದ್ದಾನೆ. (ಮಲಾಕಿಯ 2:13-16 ಓದಿ.) ಯೇಸು ತನ್ನ ತಂದೆಯಂತೆ ದಾಂಪತ್ಯದ್ರೋಹವನ್ನು ಹಗೆಮಾಡುತ್ತಾನೆ. ವಿವಾಹ ಸಂಗಾತಿಯನ್ನು ತೊರೆದು, ಅದನ್ನು ಹಗುರವಾಗಿ ನೆನಸುವುದನ್ನು ತಪ್ಪೆಂದು ಯೇಸು ಹೇಳಿದ್ದಾನೆ.—ಮತ್ತಾಯ 19:3-6, 9 ಓದಿ.

15. ದಂಪತಿಗಳು ತಮ್ಮ ಸಂಗಾತಿಯೆಡೆಗಿನ ನಿಷ್ಠೆಯನ್ನು ಹೇಗೆ ಬಲಗೊಳಿಸಬಲ್ಲರು?

15 ಪತಿಪತ್ನಿ ಒಬ್ಬರಿಗೊಬ್ಬರು ಹೇಗೆ ನಿಷ್ಠಾವಂತರಾಗಿರಬಲ್ಲರು? “ನಿನ್ನ ಯೌವನಕಾಲದ ಪತ್ನಿಯಲ್ಲಿ [ಪತಿಯಲ್ಲಿ] ಆನಂದಿಸು,” “ನಿನ್ನ ಪ್ರಿಯಪತ್ನಿಯೊಡನೆ [ಪ್ರಿಯಪತಿಯೊಡನೆ] ಸುಖದಿಂದ ಬದುಕು” ಎನ್ನುತ್ತದೆ ದೇವರ ವಾಕ್ಯ. (ಜ್ಞಾನೋ. 5:18; ಪ್ರಸಂ. 9:9) ದಾಂಪತ್ಯದಲ್ಲಿ ವರ್ಷಗಳು ಕಳೆದಂತೆ ಪತಿಪತ್ನಿ ಇಬ್ಬರೂ ತಮ್ಮ ಶಾರೀರಿಕ ಮತ್ತು ಭಾವನಾತ್ಮಕ ಬಂಧವನ್ನು ಬಲಪಡಿಸಲು ಕೈಲಾದುದ್ದೆಲ್ಲವನ್ನೂ ಮಾಡಬೇಕು. ಅಂದರೆ ಒಬ್ಬರಿಗೊಬ್ಬರು ಕಿವಿಗೊಡಬೇಕು, ಗಮನಕೊಡಬೇಕು. ಒಬ್ಬರಿಗೊಬ್ಬರು ಸಮಯ ಕೊಡಬೇಕು. ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗಬೇಕು. ತಮ್ಮ ವೈವಾಹಿಕ ಬಂಧವನ್ನು ಮತ್ತು ಯೆಹೋವನೊಂದಿಗಿನ ಸಂಬಂಧವನ್ನು ಕಾಪಾಡಲು ಶ್ರಮಿಸಬೇಕು. ಅದಕ್ಕಾಗಿ ಪತಿಪತ್ನಿ ಬೈಬಲನ್ನು ಜೊತೆಯಾಗಿ ಅಧ್ಯಯನ ಮಾಡಬೇಕು, ನಿಯತವಾಗಿ ಕ್ಷೇತ್ರಸೇವೆಯಲ್ಲಿ ಜೊತೆಯಾಗಿ ಭಾಗವಹಿಸಬೇಕು, ಯೆಹೋವನ ಆಶೀರ್ವಾದಕ್ಕಾಗಿ ಜೊತೆಯಾಗಿ ಪ್ರಾರ್ಥಿಸಬೇಕು.

ಯೆಹೋವನಿಗೆ ನಿಷ್ಠರಾಗಿರಿ

16, 17. (1) ಯೆಹೋವನ ಕಡೆಗಿರುವ ನಮ್ಮ ನಿಷ್ಠೆ ಕುಟುಂಬದಲ್ಲಿ ಅಥವಾ ಸಭೆಯಲ್ಲಿ ಹೇಗೆ ಪರೀಕ್ಷೆಗೊಳಗಾಗಬಹುದು? (2) ಬಹಿಷ್ಕೃತ ಸಂಬಂಧಿಕರೊಂದಿಗೆ ಸಹವಾಸಿಸಬಾರದೆಂಬ ಯೆಹೋವನ ಆಜ್ಞೆಗೆ ವಿಧೇಯರಾಗುವುದು ಒಳ್ಳೇ ಫಲಿತಾಂಶ ತರುತ್ತದೆ ಎಂದು ಯಾವ ಅನುಭವ ತೋರಿಸುತ್ತದೆ?

16 ಸಭೆಯ ಸದಸ್ಯರು ಗಂಭೀರ ಪಾಪಗಳನ್ನು ಮಾಡಿದಾಗ ‘ನಂಬಿಕೆಯಲ್ಲಿ ಸ್ವಸ್ಥರಾಗಲಿಕ್ಕಾಗಿ ಅವರನ್ನು ಕಠಿಣವಾಗಿ’ ಖಂಡಿಸಲಾಗಿದೆ. (ತೀತ 1:13) ಕೆಲವರನ್ನು ಅವರ ದುರ್ನಡತೆಯ ಕಾರಣ ಬಹಿಷ್ಕರಿಸಲಾಗಿದೆ. ಈ ಶಿಸ್ತಿನಿಂದ ‘ತರಬೇತಿಹೊಂದಿದವರು’ ಆಧ್ಯಾತ್ಮಿಕವಾಗಿ ಪುನಃಸ್ಥಾಪಿಸಲ್ಪಟ್ಟಿದ್ದಾರೆ. (ಇಬ್ರಿ. 12:11) ನಮ್ಮ ಸಂಬಂಧಿಕನೋ ಆಪ್ತ ಸ್ನೇಹಿತನೋ ಬಹಿಷ್ಕರಿಸಲ್ಪಟ್ಟಿರುವಲ್ಲಿ ಆಗೇನು? ಅಂಥ ಸಂದರ್ಭದಲ್ಲಿ ನಮ್ಮ ನಿಷ್ಠೆ ಪರೀಕ್ಷೆಗೊಳಗಾಗುತ್ತದೆ. ನಾವು ಆ ವ್ಯಕ್ತಿಗೆ ನಿಷ್ಠರಾಗಿರುತ್ತೇವಾ ಅಥವಾ ಯೆಹೋವನಿಗೆ ನಿಷ್ಠರಾಗಿರುತ್ತೇವಾ? ಬಹಿಷ್ಕರಿಸಲ್ಪಟ್ಟಿರುವವನು ಯಾರೇ ಆಗಿರಲಿ ಅವನೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬಾರದೆಂಬ ಯೆಹೋವನ ಆಜ್ಞೆಯನ್ನು ನಾವು ಪಾಲಿಸುತ್ತೇವೋ ಇಲ್ಲವೋ ಎಂದು ಆತನು ಗಮನಿಸುತ್ತಿರುತ್ತಾನೆ.—1 ಕೊರಿಂಥ 5:11-13 ಓದಿ.

17 ಬಹಿಷ್ಕೃತ ಸಂಬಂಧಿಕನೊಂದಿಗೆ ಸಹವಾಸಿಸಬಾರದು ಎಂಬ ಯೆಹೋವನ ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವುದರಿಂದ ಬರುವ ಒಳ್ಳೇ ಫಲಿತಾಂಶಕ್ಕಾಗಿ ಒಂದು ಉದಾಹರಣೆ ಪರಿಗಣಿಸಿ. ಒಬ್ಬ ಯುವಕನನ್ನು ಸಭೆಯಿಂದ ಬಹಿಷ್ಕರಿಸಲಾಗಿತ್ತು. ಅವನು ಬಹಿಷ್ಕೃತನಾಗಿದ್ದ ಹತ್ತು ವರ್ಷಗಳ ಕಾಲ ಅವನ ತಂದೆ, ತಾಯಿ, ಅಣ್ಣ, ಮೂವರು ತಮ್ಮಂದಿರು ‘ಅವನ ಸಹವಾಸವನ್ನು ಬಿಟ್ಟುಬಿಟ್ಟರು.’ ಕುಟುಂಬದ ಚಟುವಟಿಕೆಗಳಲ್ಲಿ ಒಳಗೂಡಲು ಅವನು ಅನೇಕಸಲ ಪ್ರಯತ್ನಿಸಿದನಾದರೂ ಕುಟುಂಬದ ಪ್ರತಿಯೊಬ್ಬರು ಯೆಹೋವನ ಆಜ್ಞೆಗೆ ಬದ್ಧರಾಗಿದ್ದರು. ಅವನೊಂದಿಗೆ ಯಾವುದೇ ಒಡನಾಟ ಮಾಡಲಿಲ್ಲ. ಹತ್ತು ವರ್ಷಗಳ ನಂತರ ಅವನು ಪುನಃಸ್ಥಾಪಿಸಲ್ಪಟ್ಟನು. ಕುಟುಂಬದವರ ಅಚಲ ನಿಲುವೇ ಈ ಹೆಜ್ಜೆ ತಕ್ಕೊಳ್ಳಲು ತನಗೆ ಸಹಾಯಮಾಡಿತು ಎಂದವನು ಹೇಳುತ್ತಾನೆ. ‘ಆ ಸಮಯದಲ್ಲಿ ನಾನು ತಂದೆತಾಯಿ ಅಣ್ಣತಮ್ಮಂದಿರ ಸಹವಾಸಕ್ಕಾಗಿ ಹಾತೊರೆಯುತ್ತಿದ್ದೆ. ರಾತ್ರಿ ಒಬ್ಬಂಟಿಗನಾಗಿ ಇರುವಾಗಲಂತೂ ಅವರ ಒಡನಾಟಕ್ಕಾಗಿ ಮನಸ್ಸು ತವಕಿಸುತ್ತಿತ್ತು. ಅವರು ನನ್ನೊಂದಿಗೆ ಕೊಂಚ ಸಹವಾಸ ಮಾಡಿದ್ದರೂ ಅದರಿಂದ ತೃಪ್ತನಾಗುತ್ತಿದ್ದೆ. ಆದರೆ ಅವರು ಅದಕ್ಕೆ ಸ್ವಲ್ಪವೂ ಅವಕಾಶ ಕೊಡಲಿಲ್ಲ. ಹಾಗಾಗಿ ಅವರೊಂದಿಗಿರಬೇಕೆಂಬ ತುಡಿತವೇ ಯೆಹೋವನೊಂದಿಗಿನ ಸಂಬಂಧವನ್ನು ಪುನಃಸ್ಥಾಪಿಸುವಂತೆ ನನ್ನನ್ನು ಪ್ರಚೋದಿಸಿತು.’ ಬಹಿಷ್ಕೃತ ಸಂಬಂಧಿಕರೊಂದಿಗೆ ಸಹವಾಸಿಸಬಾರದು ಎಂಬ ಯೆಹೋವನ ಆಜ್ಞೆಯನ್ನು ಮೀರುವ ಪ್ರಚೋದನೆ ನಿಮಗಾಗುವಾಗ ಈ ಅನುಭವವನ್ನು ನೆನಪಿಸಿಕೊಳ್ಳಿ.

18. ನಿಷ್ಠೆ ತೋರಿಸುವುದರ ಪ್ರಯೋಜನ ಮತ್ತು ದ್ರೋಹಬಗೆಯುವುದರ ದುಷ್ಪರಿಣಾಮಗಳ ಕುರಿತು ಕಲಿತ ಬಳಿಕ ನೀವೇನು ಮಾಡಲು ನಿಶ್ಚಯಿಸಿದ್ದೀರಿ?

18 ನಾವಿಂದು ಜೀವಿಸುತ್ತಿರುವ ಜಗತ್ತಿನಲ್ಲಿ ನಿಷ್ಠೆ ತೋರಿಸದೆ ದ್ರೋಹಬಗೆಯುವ ಜನರು ತುಂಬಿದ್ದಾರೆ. ಆದರೆ ನಿಷ್ಠರಾಗಿರುವ ಅನೇಕರನ್ನು ನಾವು ಕ್ರೈಸ್ತ ಸಭೆಯಲ್ಲಿ ಕಾಣುತ್ತೇವೆ. ಅವರ ಮಾದರಿಯನ್ನು ನಾವು ಅನುಕರಿಸಬೇಕು. ಅವರ ಜೀವನಶೈಲಿಯೇ ಅವರು ‘ಎಷ್ಟು ನಿಷ್ಠಾವಂತರೂ ನೀತಿವಂತರೂ ನಿರ್ದೋಷಿಗಳೂ’ ಆಗಿದ್ದಾರೆಂದು ತೋರಿಸಿಕೊಡುತ್ತದೆ. (1 ಥೆಸ. 2:10) ನಾವು ಸಹ ದೇವರಿಗೆ ಮತ್ತು ಪರಸ್ಪರರಿಗೆ ನಿಷ್ಠರಾಗಿರಲು ಸಾಧ್ಯವಿರುವುದನ್ನೆಲ್ಲಾ ಮಾಡೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 4 ಸಂಸೋನನು ನಾಜೀರನಾಗಿದ್ದು ಯೆಹೋವನೊಂದಿಗೆ ವಿಶೇಷ ಸಂಬಂಧದಲ್ಲಿದ್ದನು. ಇದು ಅವನಲ್ಲಿದ್ದ ಮಹಾಶಕ್ತಿಗೆ ಕಾರಣವಾಗಿತ್ತೇ ಹೊರತು ಅವನ ಕೂದಲಲ್ಲ. ಉದ್ದ ಕೂದಲು ಯೆಹೋವನೊಂದಿಗೆ ಅವನಿಗಿದ್ದ ವಿಶೇಷ ಸಂಬಂಧಕ್ಕೆ ಗುರುತಾಗಿತ್ತು.

^ ಪ್ಯಾರ. 6 “ಯೂದನ ಮುತ್ತು” ಎಂಬ ಅಭಿವ್ಯಕ್ತಿಯನ್ನು ಕೆಲವು ಭಾಷೆಗಳಲ್ಲಿ ದ್ರೋಹಕೃತ್ಯಕ್ಕೆ ಬಳಸಲಾಗುತ್ತದೆ.

^ ಪ್ಯಾರ. 13 ದಾಂಪತ್ಯ ದ್ರೋಹವನ್ನು ನಿಭಾಯಿಸಲು ಸಹಾಯಕ್ಕಾಗಿ 2010, ಜೂನ್‌ 15ರ ಕಾವಲಿನಬುರುಜು ಪುಟ 29-32ರಲ್ಲಿರುವ “ದಾಂಪತ್ಯ ದ್ರೋಹವನ್ನು ಜಯಿಸುವುದು” ಲೇಖನ ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ದೇವರ ಅಭಿಷಿಕ್ತ ಪುತ್ರನನ್ನು ಇತರರು ತೊರೆದರೂ ಪೇತ್ರನು ಆತನಿಗೆ ನಿಷ್ಠಾವಂತನಾಗಿದ್ದನು