ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾಂಪತ್ಯವೆಂಬ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತೀರೋ?

ದಾಂಪತ್ಯವೆಂಬ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತೀರೋ?

ದಾಂಪತ್ಯವೆಂಬ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತೀರೋ?

“ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು ಅನುಗ್ರಹಿಸಲಿ.”—ರೂತ. 1:9.

ಉತ್ತರ ಹುಡುಕಿ

ವಿವಾಹವೆಂಬ ಉಡುಗೊರೆಯನ್ನು ಪ್ರಾಚೀನ ಕಾಲದ ದೇವಸೇವಕರು ಗಣ್ಯಮಾಡಿದರೆಂದು ಹೇಗೆ ಹೇಳಸಾಧ್ಯ?

ನಾವು ಯಾರನ್ನು ಬಾಳಸಂಗಾತಿಯಾಗಿ ಆರಿಸಿಕೊಳ್ಳುವೆವು ಎಂಬ ವಿಷಯದಲ್ಲಿ ಯೆಹೋವನು ಆಸಕ್ತನಾಗಿದ್ದಾನೆಂದು ಹೇಗೆ ಗೊತ್ತು?

ದಾಂಪತ್ಯದ ಕುರಿತು ಬೈಬಲ್‌ ಕೊಡುವ ಸಲಹೆಗಳಲ್ಲಿ ಯಾವುದನ್ನು ಅನ್ವಯಿಸಿಕೊಳ್ಳಲು ನೀವು ಇಷ್ಟಪಡುತ್ತೀರಿ?

1. ಬಾಳಸಂಗಾತಿಯನ್ನು ಪಡೆದಾಗ ಆದಾಮನ ಪ್ರತಿಕ್ರಿಯೆ ಹೇಗಿತ್ತು?

“ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.” (ಆದಿ. 2:23) ಬಾಳಸಂಗಾತಿಯನ್ನು ಪಡೆದುಕೊಂಡಾಗ ಆದಾಮ ಎಷ್ಟೊಂದು ಸಂತೋಷಗೊಂಡನೆಂದರೆ ಅವನ ಬಾಯಿಂದ ಮೇಲಿನ ಮಾತುಗಳು ಕಾವ್ಯ ರೂಪದಲ್ಲಿ ಹೊರಹೊಮ್ಮಿದವು. ಯೆಹೋವ ದೇವರು ಅವನಿಗೆ ಗಾಢನಿದ್ರೆ ಬರಮಾಡಿ ಅವನ ಪಕ್ಕೆಲುಬನ್ನು ತೆಗೆದು ಸುಂದರ ಸ್ತ್ರೀಯನ್ನು ಸೃಷ್ಟಿಸಿ ಸಂಗಾತಿಯಾಗಿ ಕೊಟ್ಟನು. ಆದಾಮ ಆಕೆಯನ್ನು ಹವ್ವ ಎಂದು ಕರೆದನು. ಹೀಗೆ ದೇವರು ಅವರಿಬ್ಬರನ್ನು ಮಧುರ ದಾಂಪತ್ಯದಲ್ಲಿ ಜೊತೆಗೂಡಿಸಿದನು. ಆದಾಮನ ಪಕ್ಕೆಲುಬಿನಿಂದ ಹವ್ವ ಸೃಷ್ಟಿಯಾಗಿದ್ದ ಕಾರಣ ಅವರಿಬ್ಬರ ನಡುವಿನ ಆಪ್ತತೆ ಇಂದಿನ ಪತಿಪತ್ನಿಯರಲ್ಲಿರುವ ಆಪ್ತತೆಗಿಂತ ಎಷ್ಟೋ ಗಾಢವಾಗಿತ್ತು.

2. ಗಂಡುಹೆಣ್ಣಿನಲ್ಲಿ ಪ್ರೇಮಾನುರಾಗದ ಸಾಮರ್ಥ್ಯ ಏಕಿದೆ?

2 ಮಹಾ ವಿವೇಕಿಯಾದ ಯೆಹೋವನು ಗಂಡುಹೆಣ್ಣಿನಲ್ಲಿ ಪ್ರೇಮಾನುರಾಗದ ಸಾಮರ್ಥ್ಯವನ್ನು ಇಟ್ಟಿದ್ದಾನೆ. ಗಂಡುಹೆಣ್ಣಿನಲ್ಲಿ ಅನ್ಯೋನ್ಯ ಭಾವ ಹೆಚ್ಚಿ ಅವರಿಬ್ಬರು ಆಪ್ತರಾಗುವುದು ಈ ಕಾರಣದಿಂದಲೇ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ ಹೇಳುವ ಪ್ರಕಾರ, ವೈವಾಹಿಕ ಜೀವನಕ್ಕೆ ಕಾಲಿಡುವ ಗಂಡುಹೆಣ್ಣಿನಲ್ಲಿ ಪ್ರೀತಿ ಶಾಶ್ವತವಾಗಿ ಇರಬೇಕೆಂಬ ಆಶೆಆಕಾಂಕ್ಷೆಗಳು ಸಹಜ. ಯೆಹೋವನ ಜನರಲ್ಲಿ ಅನೇಕಾನೇಕ ಮಂದಿ ತಮ್ಮ ವೈವಾಹಿಕ ಜೀವನದಲ್ಲಿ ಅಂಥ ಬಾಳುವ ಪ್ರೀತಿಯನ್ನು ಅನುಭವಿಸುತ್ತಿದ್ದಾರೆ.

ದಾಂಪತ್ಯವೆಂಬ ಕೊಡುಗೆಯನ್ನು ಗೌರವಿಸಿದವರು

3. ಇಸಾಕನಿಗೆ ಹೆಣ್ಣು ತರಲು ಅಬ್ರಹಾಮ ಏನು ಮಾಡಿದನು?

3 ದೇವಭಕ್ತ ಅಬ್ರಹಾಮನಿಗೆ ದಾಂಪತ್ಯದ ಬಗ್ಗೆ ಗಣ್ಯತೆ ಇತ್ತು. ಹಾಗಾಗಿಯೇ ಇಸಾಕನಿಗೆ ಹೆಣ್ಣು ತರಲು ತನ್ನ ಹಿರೀ ಸೇವಕನನ್ನು ಮೆಸಪಟೇಮ್ಯಕ್ಕೆ ಕಳುಹಿಸಿದನು. ಆ ಸೇವಕನ ಪ್ರಾರ್ಥನೆ ಒಳ್ಳೆಯ ಫಲಿತಾಂಶ ಕೊಟ್ಟಿತು. ದೇವಭಕ್ತೆ ರೆಬೆಕ್ಕ ಇಸಾಕನ ಪ್ರಿಯ ಮಡದಿಯಾದಳು. ಅಬ್ರಹಾಮನ ಸಂತಾನವನ್ನು ಹೆಚ್ಚಿಸುವ ಕುರಿತು ಯೆಹೋವ ದೇವರು ಮಾಡಿದ ವಾಗ್ದಾನದ ನೆರವೇರಿಕೆಯಲ್ಲಿ ಪಾತ್ರವಹಿಸಿದಳು. (ಆದಿ. 22:18; 24:12-14, 67) ನೆರವು ಯಾಚಿಸದ ಒಬ್ಬರಿಗೆ ಜೋಡಿಹುಡುಕಲು ಸ್ವಇಚ್ಛೆಯಿಂದ ನಾವೇ ಮುಂದಾಗಬೇಕು ಎಂದು ಈ ವೃತ್ತಾಂತ ಸೂಚಿಸುವುದಿಲ್ಲ. ಈಗಿನ ಕಾಲದಲ್ಲಿ ಅನೇಕರು ತಮ್ಮ ಜೋಡಿಯನ್ನು ತಾವೇ ಹುಡುಕಿಕೊಳ್ಳಲು ಇಷ್ಟಪಡುತ್ತಾರೆ. ವಿವಾಹವನ್ನು ದೇವರು ಸ್ವರ್ಗದಲ್ಲೇನೂ ನಿಶ್ಚಯಿಸಿರುವುದಿಲ್ಲ ನಿಜ. ಆದರೆ ತಕ್ಕ ಸಂಗಾತಿಯನ್ನು ಕಂಡುಕೊಳ್ಳಲು ಹಾಗೂ ದಾಂಪತ್ಯ ಜೀವನವನ್ನು ಯಶಸ್ವಿಗೊಳಿಸಲು ಸಹಾಯವನ್ನು ಬೇಡಿಕೊಳ್ಳುವವರಿಗೆ ಆತನು ಪವಿತ್ರಾತ್ಮದ ಮಾರ್ಗದರ್ಶನೆ ನೀಡುವನು.—ಗಲಾ. 5:18, 25.

4, 5. ಶೂಲಮ್‌ನ ತರುಣಿ ಹಾಗೂ ಕುರುಬ ಹುಡುಗ ಒಬ್ಬರನ್ನೊಬ್ಬರು ಬಹಳವಾಗಿ ಪ್ರೀತಿಸುತ್ತಿದ್ದರು ಎಂದು ಹೇಗೆ ಗೊತ್ತಾಗುತ್ತದೆ?

4 ಇನ್ನೊಂದು ಉದಾಹರಣೆ ಪ್ರಾಚೀನ ಇಸ್ರೇಲಿನ ಶೂಲಮ್‌ ಊರಿನ ಸುಂದರ ತರುಣಿ. ರಾಜ ಸೊಲೊಮೋನನ ಅನೇಕ ಪತ್ನಿಯರಲ್ಲಿ ಒಬ್ಬಳಾಗುವಂತೆ ತನ್ನನ್ನು ಒತ್ತಾಯಿಸಬಾರದೆಂದು ಆಕೆ ಗೆಳತಿಯರಿಗೆ ತಾಕೀತು ಮಾಡಿದಳು. “ಯೆರೂಸಲೇಮಿನ ಸ್ತ್ರೀಯರೇ, ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ” ಎಂದಳು. (ಪರಮ. 8:4) ಏಕೆಂದರೆ, ಈಗಾಗಲೇ ಆಕೆ ಕುರಿಕಾಯುವ ತರುಣನಿಗೆ ತನ್ನ ಮನಸ್ಸನ್ನು ಕೊಟ್ಟುಬಿಟ್ಟಿದ್ದಳು. “ನಾನು ಬೈಲಿನ ನೆಲಸಂಪಿಗೆ, ತಗ್ಗಿನ ತಾವರೆ” ಎಂದು ಆಕೆ ವಿನೀತಳಾಗಿ ಹೇಳಿದಳು. ಅದಕ್ಕವಳ ಇನಿಯ, “ನನ್ನ ಪ್ರಿಯಳು ಮುಳ್ಳುಗಳ ಮಧ್ಯದಲ್ಲಿನ ತಾವರೆಯಂತೆ ಸ್ತ್ರೀಯರಲ್ಲಿ ಶ್ರೇಷ್ಠಳು” ಎಂದನು. (ಪರಮ. 2:1, 2) ಹೌದು, ಅವರು ಒಬ್ಬರನ್ನೊಬ್ಬರು ಉಸಿರಿಗೆ ಉಸಿರಾಗಿ ಪ್ರೀತಿಸುತ್ತಿದ್ದರು.

5 ಶೂಲಮ್‌ ಊರಿನ ತರುಣಿ ಹಾಗೂ ಆ ಕುರುಬನಿಗೆ ಮುಖ್ಯವಾಗಿ ದೇವರ ಮೇಲೆ ಬಹಳ ಪ್ರೀತಿ ಇತ್ತು. ಅದು ಅವರ ವಿವಾಹಬಂಧವನ್ನು ಖಂಡಿತ ಬಲಪಡಿಸಲಿತ್ತು. ಆ ತರುಣಿ ತನ್ನ ಪ್ರಿಯಕರನಿಗೆ ಹೇಳಿದ ಮಾತನ್ನು ಗಮನಿಸಿ: “ನಿನ್ನ ಹೃದಯದ ಮೇಲೆ, ನಿನ್ನ ಕೈಯಲ್ಲಿ, ನನ್ನನ್ನು ಮುದ್ರೆಯನ್ನಾಗಿ ಧರಿಸಿಕೋ. ಪ್ರೀತಿಯು ಮರಣದಷ್ಟು ಬಲವಾಗಿದೆ, [ಪ್ರೀತಿದ್ರೋಹದಿಂದ ಹುಟ್ಟುವ] ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು. ಜಲದ ರಾಶಿಗಳೂ ಪ್ರೀತಿಯನ್ನು ನಂದಿಸಲಾರವು, ಪ್ರವಾಹಗಳಿಗೂ ಅದನ್ನು ಮುಣುಗಿಸಲು ಶಕ್ತಿಯಿಲ್ಲ. ಒಬ್ಬನು ತನ್ನ ಮನೆಮಾರನ್ನೆಲ್ಲಾ ಕೊಟ್ಟು ಪ್ರೀತಿಯನ್ನು ಪಡೆಯಲು ಯತ್ನಿಸಿದರೆ ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.” (ಪರಮ. 8:6, 7) ದೇವಭಕ್ತ ಪತಿಪತ್ನಿಯರ ಮಧ್ಯೆ ಕೂಡ ಅಷ್ಟೇ ಗಾಢ ಪ್ರೀತಿಯಿರಬೇಕು ಮತ್ತು ಅವರು ಪರಸ್ಪರ ಬದ್ಧರಾಗಿರಬೇಕು.

ನೀವು ಮಾಡುವ ಆಯ್ಕೆಯಲ್ಲಿ ದೇವರು ಆಸಕ್ತನಾಗಿದ್ದಾನೆ

6, 7. ನಾವು ಯಾರನ್ನು ಮದುವೆಯಾಗಲು ಇಷ್ಟಪಡುತ್ತೇವೆ ಎಂಬ ವಿಚಾರದಲ್ಲಿ ಯೆಹೋವನಿಗೆ ಆಸಕ್ತಿಯಿದೆ ಎನ್ನಲು ಕಾರಣವೇನು?

6 ನೀವು ಯಾರನ್ನು ಮದುವೆಯಾಗಲು ಇಷ್ಟಪಡುತ್ತೀರಿ ಎನ್ನುವುದರಲ್ಲಿ ಯೆಹೋವನು ಬಹಳ ಆಸಕ್ತನಾಗಿದ್ದಾನೆ. ಉದಾಹರಣೆಗೆ ಕಾನಾನ್‌ ದೇಶದ ಜನರ ಬಗ್ಗೆ ಇಸ್ರಾಯೇಲ್ಯರಿಗೆ ಈ ಆಜ್ಞೆ ಕೊಡಲಾಗಿತ್ತು, “ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.” (ಧರ್ಮೋ. 7:3, 4) ಯಾಜಕನಾದ ಎಜ್ರ ನೂರಾರು ವರ್ಷಗಳ ನಂತರ ಹೀಗೆ ಹೇಳಿದನು, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆಮಾಡಿಕೊಂಡು ಇಸ್ರಾಯೇಲ್ಯರ ಅಪರಾಧವನ್ನು ಹೆಚ್ಚಿಸಿದ್ದೀರಿ.” (ಎಜ್ರ 10:10) ಕ್ರೈಸ್ತರಿಗೆ ಅಪೊಸ್ತಲ ಪೌಲ ಕೊಟ್ಟ ಬುದ್ಧಿವಾದವೇನೆಂದರೆ “ಗಂಡನು ಜೀವದಿಂದಿರುವ ವರೆಗೆ ಹೆಂಡತಿಯು ಅವನಿಗೆ ಬದ್ಧಳಾಗಿದ್ದಾಳೆ. ಅವಳ ಗಂಡನು ಸಾಯುವುದಾದರೆ ಅವಳು ತನಗೆ ಬೇಕಾದವನನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ; ಆದರೆ ಕರ್ತನಲ್ಲಿರುವವನನ್ನು ಮಾತ್ರ.”1 ಕೊರಿಂ. 7:39.

7 ಯೆಹೋವ ದೇವರಿಗೆ ಬದುಕನ್ನು ಸಮರ್ಪಿಸಿರುವ ಒಬ್ಬ ವ್ಯಕ್ತಿ ಸತ್ಯದಲ್ಲಿ ಇಲ್ಲದವರನ್ನು ಮದುವೆಯಾಗುವಲ್ಲಿ ಅದು ಅವಿಧೇಯ ಕೃತ್ಯವಾಗಿದೆ. ಎಜ್ರನ ಕಾಲದಲ್ಲಿದ್ದ ಇಸ್ರಾಯೇಲ್ಯರು “ಅನ್ಯಜನರ ಹೆಣ್ಣುಗಳನ್ನು ಮದುವೆ” ಮಾಡಿಕೊಂಡದ್ದು ಅವಿಧೇಯತೆ ಆಗಿತ್ತು. ಅದೇ ರೀತಿ ಇಂದು, ಬೈಬಲ್‌ನ ಸ್ಪಷ್ಟ ಮಾರ್ಗದರ್ಶನೆಗಳನ್ನು ಗಾಳಿಗೆ ತೂರಿ ಕರ್ತನಲ್ಲಿ ಇಲ್ಲದವರನ್ನು ಮದುವೆಯಾಗಲು ಇಲ್ಲಸಲ್ಲದ ನೆವ ನೀಡುವುದು ತಪ್ಪಾಗಿದೆ. (ಎಜ್ರ 10:10; 2 ಕೊರಿಂ. 6:14, 15) ಸತ್ಯದಲ್ಲಿಲ್ಲದ ವ್ಯಕ್ತಿಯನ್ನು ವಿವಾಹವಾಗುವ ಕ್ರೈಸ್ತರು ಆದರ್ಶಪ್ರಾಯರಲ್ಲ. ಯೆಹೋವ ದೇವರು ಕೊಟ್ಟಿರುವ ದಾಂಪತ್ಯವೆಂಬ ಕೊಡುಗೆಗಾಗಿ ಗಣ್ಯತೆ ಅವರಿಗಿಲ್ಲ. ದೀಕ್ಷಾಸ್ನಾನದ ನಂತರ ಆ ರೀತಿ ಮದುವೆ ಮಾಡಿಕೊಳ್ಳುವವರು ದೇವಜನರು ಆನಂದಿಸುವ ಕೆಲವು ಸುಯೋಗಗಳನ್ನು ಕಳಕೊಳ್ಳಬಹುದು. ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತ ‘ಯೆಹೋವನೇ, ಗೊತ್ತಿದ್ದು ತಪ್ಪು ಮಾಡಿದೆ. ಆದರೂ ನನ್ನನ್ನು ಆಶೀರ್ವದಿಸು’ ಎಂದು ಬೇಡಿ ಆಶೀರ್ವಾದಗಳನ್ನು ನಿರೀಕ್ಷಿಸುವುದು ನ್ಯಾಯವಲ್ಲ.

ನಮ್ಮ ಸಂತಸಕ್ಕೆ ಏನು ಅಗತ್ಯವೆಂದು ದೇವರಿಗೆ ಗೊತ್ತು

8. ವಿವಾಹದ ಕುರಿತಾಗಿ ದೇವರ ಮಾರ್ಗದರ್ಶನೆಗಳನ್ನು ಪಾಲಿಸುವುದು ಏಕೆ ಅತ್ಯಗತ್ಯ?

8 ಒಂದು ಯಂತ್ರ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ತಯಾರಕನಿಗೆ ಚೆನ್ನಾಗಿ ತಿಳಿದಿರುತ್ತದೆ. ಅದರ ಬಿಡಿಭಾಗಗಳನ್ನು ಜೋಡಿಸುವುದು ಹೇಗೆಂಬ ವಿವರಗಳನ್ನು ಆತನು ನೀಡಬಲ್ಲನು. ಆ ನಿರ್ದೇಶನಗಳನ್ನು ಕಡೆಗಣಿಸಿ ನಮ್ಮಿಷ್ಟದಂತೆ ಜೋಡಿಸಲು ಹೋದರೆ ಫಲಿತಾಂಶ? ಭೀಕರವಾಗಿರಬಲ್ಲದು. ದಾಂಪತ್ಯ ಜೀವನ ಮಧುರವಾಗಿರಬೇಕು ಎಂಬ ನಮ್ಮ ಆಶೆ ಈಡೇರಬೇಕಾದರೆ ಏನು ಮಾಡಬೇಕು? ವಿವಾಹದ ನಿರ್ಮಾಪಕನಾದ ಯೆಹೋವ ದೇವರ ಮಾರ್ಗದರ್ಶನೆಗಳನ್ನು ಪಾಲಿಸುವುದು ಅತ್ಯಗತ್ಯ.

9. ಒಬ್ಬಂಟಿ ಭಾವನೆ ಹಾಗೂ ವಿವಾಹ ಚೌಕಟ್ಟಿನಲ್ಲಿರುವ ಆನಂದ ಯೆಹೋವನಿಗೆ ತಿಳಿದಿದೆ ಎಂದು ಹೇಗೆ ಹೇಳುತ್ತೀರಿ?

9 ಮಾನವರ ಹಾಗೂ ವಿವಾಹದ ಬಗ್ಗೆ ನಮ್ಮ ತಂದೆಯಾದ ಯೆಹೋವ ದೇವರಿಗೆ ತಿಳಿದಿರದ ವಿಷಯ ಒಂದೂ ಇಲ್ಲ. “ಬಹುಸಂತಾನವುಳ್ಳವರಾಗಿ” ಹೆಚ್ಚುವಂತೆ ಮಾನವರಲ್ಲಿ ಲೈಂಗಿಕ ಆಕರ್ಷಣೆ ಇಟ್ಟವನು ಆತನೇ. (ಆದಿ. 1:28) ನಮ್ಮಲ್ಲೇಳುವ ಒಬ್ಬಂಟಿ ಭಾವನೆ ಏನೆಂದು ಆತನಿಗೆ ಚೆನ್ನಾಗಿ ಅರ್ಥವಾಗುತ್ತದೆ. ಆದಾಮನಿಗೆ ಜೊತೆಗಾರ್ತಿಯನ್ನು ಉಂಟುಮಾಡುವ ಮೊದಲು “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು” ಎಂದು ಆತನು ಹೇಳಿರುವ ಮಾತಿನಿಂದ ಇದು ಸ್ಪಷ್ಟವಾಗುತ್ತದೆ. (ಆದಿ. 2:18) ವಿವಾಹದ ಚೌಕಟ್ಟಿನೊಳಗೆ ಪತಿಪತ್ನಿ ಅನುಭವಿಸುವ ಆನಂದದ ಕುರಿತು ಸಹ ಸಂಪೂರ್ಣ ಅರಿವು ಆತನಿಗಿದೆ.ಜ್ಞಾನೋಕ್ತಿ 5:15-18 ಓದಿ.

10. ಲೈಂಗಿಕ ವಿಚಾರದಲ್ಲಿ ಕ್ರೈಸ್ತ ದಂಪತಿಗಳು ಏನನ್ನು ಮನಸ್ಸಿನಲ್ಲಿಡಬೇಕು?

10 ಇಡೀ ಮಾನವಕುಲ ಆದಾಮನಿಂದ ಪಾಪ ಹಾಗೂ ಅಪರಿಪೂರ್ಣತೆಯನ್ನು ಪಡೆದಿರುವ ಕಾರಣ ಇಂದು ಪರಿಪೂರ್ಣ ಕೌಟುಂಬಿಕ ಜೀವನ ಅಸಾಧ್ಯ. ಆದರೆ ಬೈಬಲಿನ ಮಾರ್ಗದರ್ಶನೆಗಳನ್ನು ಪಾಲಿಸುವಲ್ಲಿ ಯೆಹೋವನ ಜನರ ದಾಂಪತ್ಯ ಜೀವನ ಮಧುರವಾಗಿರಬಲ್ಲದು. ಉದಾಹರಣೆಗೆ, ಗಂಡಹೆಂಡತಿಯ ನಡುವಿನ ಲೈಂಗಿಕತೆಯ ಬಗ್ಗೆ ಪೌಲ ನೀಡಿರುವ ಸ್ಪಷ್ಟ ಸಲಹೆಗಳನ್ನು ಗಮನಿಸಿ. (1 ಕೊರಿಂಥ 7:1-5 ಓದಿ.) ದಂಪತಿಗಳು ಮಕ್ಕಳನ್ನು ಪಡೆದುಕೊಳ್ಳುವ ಉದ್ದೇಶಕ್ಕಾಗಿ ಮಾತ್ರವೇ ಲೈಂಗಿಕ ಸಂಪರ್ಕದಲ್ಲಿ ಒಳಗೂಡಬೇಕೆಂದು ಬೈಬಲ್‌ ಹೇಳುವುದಿಲ್ಲ. ಆ ಆಪ್ತತೆಯ ಕ್ಷಣಗಳು ಶಾರೀರಿಕ ಹಾಗೂ ಭಾವನಾತ್ಮಕ ಅಗತ್ಯಗಳನ್ನು ಪೂರೈಸುತ್ತವೆ. ಆದರೆ ವಿಕೃತರೂಪದ ಚಟಗಳು ದೇವರಿಗೆ ಅಸಹ್ಯ. ಹಾಗಾಗಿ ಕ್ರೈಸ್ತ ಪತಿಪತ್ನಿಯರು ಬದುಕಿನ ಈ ಅಪೂರ್ವ ಸನ್ನಿವೇಶದಲ್ಲಿ ತುಂಬಾ ಕೋಮಲವಾಗಿಯೂ ಪ್ರೀತಿಯಿಂದಲೂ ನಡೆದುಕೊಳ್ಳಬೇಕು. ಯೆಹೋವನನ್ನು ಅಪ್ರಸನ್ನಗೊಳಿಸುವ ವರ್ತನೆಗಳನ್ನು ತೊರೆಯಬೇಕು.

11. ಯೆಹೋವನ ಮಾರ್ಗವನ್ನು ನಿಷ್ಠೆಯಿಂದ ಪಾಲಿಸಿದ್ದಕ್ಕಾಗಿ ರೂತಳಿಗೆ ಯಾವ ಆಶೀರ್ವಾದ ಸಿಕ್ಕಿತು?

11 ದಾಂಪತ್ಯ ಬದುಕಿನಲ್ಲಿ ಸಂತಸದ ಅಲೆ ತೇಲಿಬರಬೇಕೇ ವಿನಾ ನೋವೆಂಬ ಸುನಾಮಿ ಅಲೆ ಬೀಸಬಾರದು. ವಿಶೇಷವಾಗಿ ಕ್ರೈಸ್ತ ಮನೆಗಳು ಶಾಂತಿ-ನೆಮ್ಮದಿಯ ಬೀಡಾಗಿರಬೇಕು. ಸುಮಾರು 3,000 ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ತುಸು ಅವಲೋಕಿಸಿ. ಮೋವಾಬ್‌ ದೇಶದಿಂದ ಯೆಹೂದ ದೇಶದೆಡೆಗೆ ವಿಧವೆಯರಾದ ನೊವೊಮಿ, ಆಕೆಯ ಇಬ್ಬರು ಸೊಸೆಯಂದಿರು ಹೆಜ್ಜೆಹಾಕುತ್ತಿದ್ದಾರೆ. ತರುಣಿಯರಾದ ರೂತ್‌ ಹಾಗೂ ಓರ್ಫಾ ತಮ್ಮ ಊರಿಗೆ ಹಿಂತಿರುಗಿ ಸ್ವಜನರೊಂದಿಗೆ ಜೀವಿಸುವಂತೆ ಇಳಿವಯಸ್ಸಿನ ನೊವೊಮಿ ಅವರನ್ನು ಒತ್ತಾಯಿಸುತ್ತಾಳೆ. ಆದರೆ ಮೋವಾಬ್‌ ದೇಶದವಳಾದ ರೂತ್‌ ಅದಕ್ಕೊಪ್ಪುವುದಿಲ್ಲ. ಸತ್ಯ ದೇವರಾದ ಯೆಹೋವನನ್ನು ಆರಾಧಿಸಲು ಇಷ್ಟಪಟ್ಟ ಆಕೆ ನೊವೊಮಿಯನ್ನು ಬಿಟ್ಟು ಅಗಲುವುದಿಲ್ಲ. ಆಕೆಯ ನಿಷ್ಠೆಗೆ ತಲೆದೂಗಿದ ಹಿರೀ ವಯಸ್ಸಿನ ಬೋವಜ “ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‌ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ” ಎಂದು ಆಕೆಯನ್ನು ಹಾರೈಸುತ್ತಾನೆ. (ರೂತ. 1:9; 2:12) ವಿವಾಹ ದೇವರ ಕೊಡುಗೆ ಎಂದರಿತು ಗೌರವಿಸಿದ ರೂತ್‌ ಯೆಹೋವನ ಆರಾಧಕನಾದ ಪ್ರಾಯಸ್ಥ ಬೋವಜನನ್ನು ವರಿಸುತ್ತಾಳೆ. ದೇವರ ಹೊಸಲೋಕದಲ್ಲಿ ಆಕೆ ಪುನರುತ್ಥಾನವಾಗಿ ಬರುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಯೇಸು ಕ್ರಿಸ್ತನ ಪೂರ್ವಜೆಯಾದ ವಿಷಯ ತಿಳಿಯುವಾಗ ಆಕೆಯ ಮನವೆಷ್ಟು ಪುಳಕಗೊಳ್ಳುವುದು. (ಮತ್ತಾ. 1:1, 5, 6; ಲೂಕ 3:23, 32) ಯೆಹೋವನ ಮಾರ್ಗವನ್ನು ನಿಷ್ಠೆಯಿಂದ ಪಾಲಿಸಿದ್ದಕ್ಕಾಗಿ ಅಪೂರ್ವ ಆಶೀರ್ವಾದ ಆಕೆಗೆ ಸಿಕ್ಕಿತು.

ಯಶಸ್ವೀ ವಿವಾಹಕ್ಕೆ ಅತ್ಯುತ್ತಮ ಸಲಹೆಗಳು

12. ಯಶಸ್ವೀ ವಿವಾಹಕ್ಕೆ ಅತ್ಯುತ್ತಮ ಸಲಹೆಗಳು ಎಲ್ಲಿ ಸಿಗುತ್ತವೆ?

12 ವಿವಾಹ ಯಶಸ್ವಿಯಾಗಲು ನಾವೇನು ಅರಿತಿರಬೇಕೆಂದು ವಿವಾಹದ ನಿರ್ಮಾಪಕ ತಿಳಿಸುತ್ತಾನೆ. ಆತನಷ್ಟು ತಿಳಿದಿರುವ ಮತ್ತೊಬ್ಬ ವ್ಯಕ್ತಿ ಇಲ್ಲವೇ ಇಲ್ಲ. ಬೈಬಲ್‌ ಸಲಹೆ ಯಾವತ್ತೂ ತಪ್ಪಾಗುವುದಿಲ್ಲ. ಅದರಲ್ಲಿರುವ ಅತ್ಯುತ್ತಮ ಸಲಹೆ ಬೇರೆಲ್ಲೂ ಸಿಗುವುದಿಲ್ಲ. ಹಾಗಾಗಿ ಮದುವೆ ಕುರಿತು ಸಲಹೆ ನೀಡುವವರು ಬೈಬಲ್‌ ಮಾರ್ಗದರ್ಶನೆಗಳನ್ನೇ ಉಪಯೋಗಿಸಬೇಕು. ಅಪೊಸ್ತಲ ಪೌಲ ಪವಿತ್ರಾತ್ಮ ಪ್ರೇರಿತನಾಗಿ ನೀಡಿದ ಸಲಹೆಯನ್ನೇ ತೆಗೆದುಕೊಳ್ಳಿ. “ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಅದೇ ಸಮಯದಲ್ಲಿ, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.” (ಎಫೆ. 5:33) ಪ್ರೌಢ ಕ್ರೈಸ್ತರಿಗೆ ಬೈಬಲಿನಲ್ಲಿರುವ ಈ ಸ್ಫುಟವಾದ ಸಲಹೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು. ಆದರೆ ಪ್ರಶ್ನೆಯೇನೆಂದರೆ, ಅದನ್ನವರು ಅನ್ವಯಿಸಿಕೊಳ್ಳುವರೇ? ದೇವರ ಅನುಗ್ರಹವಾಗಿರುವ ವಿವಾಹದ ಕಡೆಗೆ ಅವರಿಗೆ ನಿಜವಾದ ಗೌರವವಿರುವುದಾದರೆ ಅನ್ವಯಿಸಿಕೊಳ್ಳುವರು. *

13. ಒಂದನೇ ಪೇತ್ರ 3:7ರಲ್ಲಿರುವ ಸಲಹೆಯನ್ನು ಗಂಡನು ಪಾಲಿಸದಿದ್ದಲ್ಲಿ ಫಲಿತಾಂಶ ಏನಾಗಬಹುದು?

13 ಕ್ರೈಸ್ತ ಗಂಡ ತನ್ನ ಹೆಂಡತಿಯೊಂದಿಗೆ ಸದಾ ಪ್ರೀತಿಯಿಂದ ನಡಕೊಳ್ಳಬೇಕು. ಅಪೊಸ್ತಲ ಪೇತ್ರ ಹೇಳಿರುವ ಮಾತನ್ನು ಗಮನಿಸಿ, “ಗಂಡಂದಿರೇ, ನೀವು ಅದೇ ರೀತಿಯಲ್ಲಿ ಅವರೊಂದಿಗೆ ಜ್ಞಾನಾನುಸಾರವಾಗಿ ಬಾಳುವೆ ಮಾಡಿರಿ; ದುರ್ಬಲ ಪಾತ್ರೆಗೋ ಎಂಬಂತೆ ಸ್ತ್ರೀಯರಿಗೆ ಗೌರವವನ್ನು ಸಲ್ಲಿಸಿರಿ, ಏಕೆಂದರೆ ಅವರೊಂದಿಗೆ ನೀವು ಸಹ ಜೀವದ ಅಪಾರ ಅನುಗ್ರಹಕ್ಕೆ ಬಾಧ್ಯರಾಗಿದ್ದೀರಿ. ಹೀಗೆ ಮಾಡುವುದಾದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದಿಲ್ಲ.” (1 ಪೇತ್ರ 3:7) ಯೆಹೋವನ ಸಲಹೆಯನ್ನು ಗಂಡನು ಪಾಲಿಸದಿದ್ದಲ್ಲಿ ಅವನು ಮಾಡುವ ಪ್ರಾರ್ಥನೆಗೆ ಅಡ್ಡಿಯಾಗಬಹುದು. ಪತಿಪತ್ನಿಯ ಆಧ್ಯಾತ್ಮಿಕತೆ ಕುಂದಿಹೋಗಬಹುದು. ದಾಂಪತ್ಯದಲ್ಲಿ ಒತ್ತಡ, ವಾಗ್ಯುದ್ಧ, ನಿಷ್ಠುರ ಇತ್ಯಾದಿ ತಲೆದೋರಬಹುದು.

14. ಅಕ್ಕರೆಯ ಪತ್ನಿ ಕುಟುಂಬಕ್ಕೆ ಹೇಗೆ ಒಳಿತನ್ನು ಮಾಡುತ್ತಾಳೆ?

14 ಪತ್ನಿಯೊಬ್ಬಳು ಯೆಹೋವನ ವಾಕ್ಯ ಮತ್ತು ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರ ನಡೆಯುವಲ್ಲಿ ತನ್ನ ಮನೆ ಸಂತೋಷ-ಸಮಾಧಾನದ ಬೀಡಾಗಿರುವಂತೆ ನೋಡಿಕೊಳ್ಳಬಲ್ಲಳು. ದೇವಭಯವುಳ್ಳ ಗಂಡನು ಹೆಂಡತಿಯನ್ನು ಪ್ರೀತಿಸಿ ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಆರೈಕೆ ಮಾಡೇ ಮಾಡುತ್ತಾನೆ. ಅವನ ಪ್ರೀತಿಯನ್ನು ಅಪೇಕ್ಷಿಸುವ ಹೆಂಡತಿ ಕೂಡ ಸದ್ಗುಣಗಳನ್ನು ತೋರಿಸುತ್ತಾಳೆ. ಹೀಗೆ ಗಂಡನ ಪ್ರೀತಿಯನ್ನು ಗೆಲ್ಲುತ್ತಾಳೆ. “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು” ಎನ್ನುತ್ತದೆ ಜ್ಞಾನೋಕ್ತಿ 14:1. ಜ್ಞಾನವಂತೆಯಾದ ಅಕ್ಕರೆಯ ಪತ್ನಿ ತನ್ನ ಕುಟುಂಬದ ಯಶಸ್ಸಿಗೆ, ಸಂತೋಷಕ್ಕೆ ಪ್ರೀತಿಯಿಂದ ನೆರವಾಗುತ್ತಾಳೆ. ಮಾತ್ರವಲ್ಲ ವಿವಾಹವೆಂಬ ದೇವರ ಕೊಡುಗೆಯನ್ನು ನಿಜಕ್ಕೂ ಗಣ್ಯಮಾಡುತ್ತೇನೆಂದು ತೋರಿಸುತ್ತಾಳೆ.

15. ಎಫೆಸ 5:22-25ರಲ್ಲಿ ಯಾವ ಸಲಹೆಯನ್ನು ಕೊಡಲಾಗಿದೆ?

15 ಸಭೆಯನ್ನು ಜೋಕೆ ಮಾಡುವುದರಲ್ಲಿ ಯೇಸುವಿಟ್ಟ ಮಾದರಿಯನ್ನು ಪತಿಪತ್ನಿ ಇಬ್ಬರೂ ಪಾಲಿಸುವಲ್ಲಿ ದೇವರು ಕೊಟ್ಟ ದಾಂಪತ್ಯವೆಂಬ ಕೊಡುಗೆಗೆ ಗೌರವ ತೋರಿಸುತ್ತಾರೆ. (ಎಫೆಸ 5:22-25 ಓದಿ.) ಪರಸ್ಪರ ಯಥಾರ್ಥವಾಗಿ ಪ್ರೀತಿಸುವ ದಂಪತಿಗಳು ಅಹಂಭಾವ, ಮೌನ ಉಪಚಾರ ಮುಂತಾದ ಅಕ್ರೈಸ್ತ ಗುಣಗಳು ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸುವಂತೆ ಅನುಮತಿಸುವುದಿಲ್ಲ. ಇಂಥ ದಂಪತಿಗಳನ್ನು ಯೆಹೋವನು ಅಪಾರವಾಗಿ ಆಶೀರ್ವದಿಸುತ್ತಾನೆ.

ಯಾವ ಮನುಷ್ಯನೂ ಅಗಲಿಸದಿರಲಿ

16. ಕೆಲವು ಕ್ರೈಸ್ತರು ಅವಿವಾಹಿತರಾಗಿ ಉಳಿಯುವುದೇಕೆ?

16 ಯೆಹೋವನ ಸೇವಕರಲ್ಲಿ ಹೆಚ್ಚಿನವರಿಗೆ ಮದುವೆಯಾಗುವ ಕನಸು ಇರುತ್ತದೆ. ಆದರೆ ಕೆಲವರು ತಮಗೂ ದೇವರಿಗೂ ಮೆಚ್ಚಿಗೆಯಾಗುವ ಸಂಗಾತಿ ಸಿಗದ ಕಾರಣ ಅವಿವಾಹಿತರಾಗಿ ಉಳಿಯುತ್ತಾರೆ. ಇನ್ನಿತರರು ಅವಿವಾಹಿತರಾಗಿ ಉಳಿಯುವ ನಿರ್ಧಾರ ಮಾಡಿರುತ್ತಾರೆ. ಹಾಗಾಗಿ ಅವರು ಹೆಚ್ಚಿನ ಸಮಯವನ್ನು ಯೆಹೋವನ ಸೇವೆಗೆ ಅರ್ಪಿಸುತ್ತಾರೆ. ಆದರೂ ಅವಿವಾಹಿತ ಸ್ಥಿತಿಯನ್ನು ಯೆಹೋವನಿಟ್ಟಿರುವ ಮೇರೆಯೊಳಗೆ ಆನಂದಿಸಬೇಕು.—ಮತ್ತಾ. 19:10-12; 1 ಕೊರಿಂ. 7:1, 6, 7, 17.

17. (1) ಮದುವೆಯ ವಿಷಯದಲ್ಲಿ ಯೇಸು ಹೇಳಿದ ಯಾವ ಮಾತನ್ನು ನಾವು ಮನಸ್ಸಿನಲ್ಲಿಡಬೇಕು? (2) ಮತ್ತೊಬ್ಬರ ಸಂಗಾತಿಯನ್ನು ಆಶಿಸುವ ಕ್ರೈಸ್ತನೊಬ್ಬನು ತನ್ನನ್ನು ಸರಿಪಡಿಸಿಕೊಳ್ಳಲು ಕೂಡಲೆ ಯಾವ ಕ್ರಮ ತಕ್ಕೊಳ್ಳಬೇಕು?

17 ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ನಾವೆಲ್ಲರೂ ಯೇಸುವಿನ ಈ ಮಾತನ್ನು ಮನಸ್ಸಿನಲ್ಲಿಡಬೇಕು: “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ? ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:4-6) ಮತ್ತೊಬ್ಬರ ಸಂಗಾತಿಯನ್ನು ಆಶಿಸುವುದು ಪಾಪ. (ಧರ್ಮೋ. 5:21) ಅಂಥ ಅಶುದ್ಧ ಆಶೆಯನ್ನು ಮನಸ್ಸಿನಲ್ಲಿ ಬೆಳೆಸಿಕೊಂಡಿರುವ ಕ್ರೈಸ್ತರು ಕೂಡಲೆ ಅದನ್ನು ಬೇರು ಸಮೇತ ಕಿತ್ತೆಸೆಯಬೇಕು. ಸ್ವಾರ್ಥ ಬಯಕೆ ಬೆಳೆಯಲು ಬಿಟ್ಟದ್ದರಿಂದ ಅದನ್ನು ಕಿತ್ತೆಸೆಯುವುದು ಭಾವನಾತ್ಮಕ ನೋವನ್ನು ಉಂಟುಮಾಡಬಹುದು. ಆದರೂ ತಕ್ಷಣ ಕ್ರಿಯೆಗೈಯಲು ಹಿಂಜರಿಯಬಾರದು. (ಮತ್ತಾ. 5:27-30) ವಂಚಕ ಹೃದಯದ ಪಾಪಪೂರ್ಣ ಆಶೆ ಚಿಗುರೊಡೆಯುವ ಮುನ್ನವೇ ಆ ದುರಾಲೋಚನೆಯನ್ನು ಕಿತ್ತೆಸೆಯುವುದು ಬಹು ಪ್ರಾಮುಖ್ಯ.—ಯೆರೆ. 17:9.

18. ವಿವಾಹವೆಂಬ ದೇವರ ಉಡುಗೊರೆಯ ಬಗ್ಗೆ ನಮಗೆ ಯಾವ ಮನೋಭಾವ ಇರಬೇಕು?

18 ಯೆಹೋವ ದೇವರ ಕುರಿತಾಗಲಿ ಆತನ ಉಡುಗೊರೆಯಾದ ದಾಂಪತ್ಯದ ಕುರಿತಾಗಲಿ ಏನೂ ತಿಳಿದಿರದ ಅನೇಕರು ವಿವಾಹ ಬಂಧಕ್ಕೆ ಒಂದಿಷ್ಟು ಗೌರವ ತೋರಿಸುತ್ತಾರೆ. ಹಾಗಿರುವಾಗ ‘ಸಂತೋಷದ ದೇವರಾದ’ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿರುವ ನಾವು ಹೇಗಿರಬೇಕು? ಆತನ ಎಲ್ಲ ಒದಗಿಸುವಿಕೆಗಳಲ್ಲಿ ಹರ್ಷಿಸಿ ವಿವಾಹವೆಂಬ ಉಡುಗೊರೆಯನ್ನು ಗಣ್ಯಮಾಡುತ್ತೇವೆ, ಗೌರವಿಸುತ್ತೇವೆ ಎಂದು ತೋರಿಸಬೇಕಲ್ಲವೇ?—1 ತಿಮೊ. 1:11.

[ಪಾದಟಿಪ್ಪಣಿ]

^ ಪ್ಯಾರ. 12 ವಿವಾಹ ಕುರಿತ ಹೆಚ್ಚಿನ ವಿವರಗಳಿಗಾಗಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ 10 ಮತ್ತು 11ನೇ ಅಧ್ಯಾಯ ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸುಖೀ ದಾಂಪತ್ಯ ಯೆಹೋವ ದೇವರಿಗೆ ಮಹಿಮೆಯನ್ನೂ ಮನೆಮಂದಿಗೆಲ್ಲ ಅಪಾರ ಸಂತೋಷವನ್ನೂ ತರುತ್ತದೆ

[ಪುಟ 5ರಲ್ಲಿರುವ ಚಿತ್ರ]

ದಾಂಪತ್ಯವೆಂಬ ದೇವರ ಕೊಡುಗೆಗಾಗಿ ರೂತಳಲ್ಲಿ ಗಣ್ಯತೆ ಇತ್ತು

[ಪುಟ 7ರಲ್ಲಿರುವ ಚಿತ್ರ]

ದಾಂಪತ್ಯವೆಂಬ ಯೆಹೋವನ ಕೊಡುಗೆಗಾಗಿ ನೀವು ಗಣ್ಯತೆ ತೋರಿಸುತ್ತಿದ್ದೀರಾ?