ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಾಯಕ್ಕೆ ಕತ್ತರಿಬಿದ್ದಾಗ ಜೀವನ ನಡೆಸುವುದು ಹೇಗೆ?

ಆದಾಯಕ್ಕೆ ಕತ್ತರಿಬಿದ್ದಾಗ ಜೀವನ ನಡೆಸುವುದು ಹೇಗೆ?

ಆದಾಯಕ್ಕೆ ಕತ್ತರಿಬಿದ್ದಾಗ ಜೀವನ ನಡೆಸುವುದು ಹೇಗೆ?

ಓಬೇದ್‌ ಎಂಬವನಿಗೆ ಇಬ್ಬರು ಮಕ್ಕಳು. ಆಫ್ರಿಕದ ಒಂದು ದೊಡ್ಡ ನಗರದಲ್ಲಿ ಪಂಚತಾರಾ ಹೋಟೇಲೊಂದರಲ್ಲಿ ಹತ್ತು ವರ್ಷ ಕೆಲಸಮಾಡಿದ್ದ. ಆಗೆಲ್ಲ ಹಣಕಾಸಿನ ಏನೂ ಸಮಸ್ಯೆ ಇರಲಿಲ್ಲ. ಮನೆಗೆ ಬೇಕಾದದ್ದೆಲ್ಲವನ್ನೂ ತಂದುಹಾಕುತ್ತಿದ್ದ. ಆಗಾಗ್ಗೆ ರಜೆಯಲ್ಲಿ ತನ್ನ ಕುಟುಂಬವನ್ನು ಆ ದೇಶದಲ್ಲಿ ಪ್ರವಾಸಕ್ಕೆ ಕರಕೊಂಡು ಹೋಗುತ್ತಿದ್ದ. ಆದರೆ ಹೋಟೆಲ್‌ಗೆ ಬರುವ ಗಿರಾಕಿಗಳು ಕಡಿಮೆಯಾದದ್ದರ ಪರಿಣಾಮವಾಗಿ ಅವನು ಕೆಲಸ ಕಳಕೊಂಡಾಗ ಇವೆಲ್ಲಕ್ಕೂ ತೆರೆಬಿತ್ತು.

ಸ್ಟೀವನ್‌ ಎಂಬಾತ 22 ವರ್ಷಗಳಿಂದ ಒಂದು ದೊಡ್ಡ ಬ್ಯಾಂಕ್‌ನಲ್ಲಿ ಕೆಲಸಮಾಡಿದ್ದ. ಎಕ್ಸಿಕ್ಯುಟಿವ್‌ ಹುದ್ದೆಗೂ ತಲಪಿದ್ದ. ಉದ್ಯೋಗದ ಜೊತೆ ಅನೇಕ ಸೌಕರ್ಯಗಳೂ ಸಿಕ್ಕಿದವು. ದೊಡ್ಡ ಮನೆ, ಆಳುಗಳು, ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳು ಇತ್ಯಾದಿ. ಆದರೆ ಆ ಬ್ಯಾಂಕ್‌ ಉದ್ಯೋಗಿಗಳನ್ನು ಕಡಿಮೆಗೊಳಿಸಿದಾಗ ಸ್ಟೀವನ್‌ನ ಕೆಲಸ ಹೋಯಿತು. “ನನಗೂ ನನ್ನ ಕುಟುಂಬಕ್ಕೂ ನಿಂತ ನೆಲವೇ ಕುಸಿದಂತಾಯಿತು. ನನಗಂತೂ ಹತಾಶೆ, ಕಹಿಭಾವನೆ, ಹೆದರಿಕೆ ಇವೆಲ್ಲ ಮುತ್ತಿಕೊಂಡವು” ಎನ್ನುತ್ತಾನೆ ಸ್ಟೀವನ್‌.

ಇವು ಎಲ್ಲೊ ಒಬ್ಬೊಬ್ಬರ ತಾಪತ್ರಯವಲ್ಲ. ಸ್ಥಿರ ಸಂಬಳವಿದ್ದ ಲಕ್ಷಾಂತರ ಜನರು ನಡಿಯುತ್ತಿರುವ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರಿಗೆ ಇನ್ನೊಂದು ಕೆಲಸವೇನೊ ಸಿಕ್ಕಿದೆಯಾದರೂ ಸಂಬಳ ಕಡಿಮೆ. ಜೊತೆಗೆ ಗಗನಕ್ಕೇರುತ್ತಿರುವ ಬೆಲೆ! ಆರ್ಥಿಕ ಹಿನ್ನಡೆಯ ಬಿಸಿತಟ್ಟಿರದ ದೇಶವೇ ಇಲ್ಲ. ಅಭಿವೃದ್ಧಿಶೀಲ ದೇಶ ಆಗಿರಲಿ ಇಲ್ಲದಿರಲಿ ಯಾವುದೂ ಇದಕ್ಕೆ ಹೊರತಾಗಿಲ್ಲ.

ವ್ಯಾವಹಾರಿಕ ಜ್ಞಾನ ಅಗತ್ಯ

ಆದಾಯ ಕಡಿಮೆಯಾದಾಗ ಅಥವಾ ಆದಾಯವೇ ಇಲ್ಲವಾದಾಗ ನಕಾರಾತ್ಮಕ ಯೋಚನೆಗಳಲ್ಲಿ ನಾವು ಸುಲಭವಾಗಿ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದೆ. ಇಂಥ ಸನ್ನಿವೇಶದಲ್ಲಿ ಸ್ವಲ್ಪ ಚಿಂತೆ, ಹೆದರಿಕೆ ಆಗುವುದು ಸಹಜವೇ. ಆದರೆ “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ” ಎಂದನು ಒಬ್ಬ ವಿವೇಕಿ ಪುರುಷ. (ಜ್ಞಾನೋಕ್ತಿ 24:10) ಆರ್ಥಿಕ ಸಂಕಷ್ಟಗಳ ಸಮಯದಲ್ಲಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಬದಲು ನಾವು “ಸುಜ್ಞಾನ” ಇಲ್ಲವೇ ವ್ಯಾವಹಾರಿಕ ಜ್ಞಾನಕ್ಕಾಗಿ ದೇವರ ವಾಕ್ಯದೆಡೆ ನೋಡಬೇಕು.—ಜ್ಞಾನೋಕ್ತಿ 2:7.

ಬೈಬಲ್‌ ಆರ್ಥಿಕ ಸಲಹೆಸೂಚನೆಗಳ ಕೈಪಿಡಿ ಅಲ್ಲ. ಆದರೆ ಇಂಥ ವಿಷಯಗಳ ಬಗ್ಗೆ ಅದು ಕೊಡುವ ವ್ಯಾವಹಾರಿಕ ಸಲಹೆಗಳು ಜಗದ್ವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಗೆ ಸಹಾಯಮಾಡಿವೆ. ಬೈಬಲ್‌ ಕೊಡುವಂಥ ಕೆಲವು ಮೂಲತತ್ವಗಳನ್ನು ಈಗ ಪರಿಶೀಲಿಸೋಣ.

ಮೊದಲೇ ಯೋಜನೆ ಮಾಡಿ. “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” ಎಂದು ಯೇಸು ಹೇಳಿದ ಮಾತುಗಳು ಲೂಕ 14:28ರಲ್ಲಿವೆ. ಈ ತತ್ವಕ್ಕನುಸಾರ ಒಂದು ಬಜೆಟ್‌ ಮಾಡಿ. ಅದನ್ನು ಮೀರಬೇಡಿ. ಆದರೆ ಇದು ಕಷ್ಟಕರ. ಇದನ್ನು ಓಬೇದ್‌ ಸಹ ಒಪ್ಪಿಕೊಳ್ಳುತ್ತಾನೆ: “ನನ್ನ ಕೆಲಸ ಹೋಗುವ ಮುಂಚೆ ಸೂಪರ್‌ಮಾರ್ಕೆಟ್‌ನಿಂದ ರಾಶಿರಾಶಿ ಸಾಮಾನುಗಳನ್ನು ತರುವ ಅಭ್ಯಾಸ ನಮಗಿತ್ತು. ಅದರಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಅನಗತ್ಯ ಸಾಮಾನುಗಳೇ. ಬೇಕಾಬಿಟ್ಟಿ ಖರ್ಚುಮಾಡಲು ಹಣಕ್ಕೇನೂ ಕಡಿಮೆ ಇರಲಿಲ್ಲ. ನಾವು ಯಾವತ್ತೂ ಬಜೆಟ್‌ ಮಾಡಿರಲೇ ಇಲ್ಲ.” ನಿಮ್ಮ ಬಳಿ ಕಡಿಮೆ ಹಣ ಇದ್ದರೂ ಮೊದಲೇ ಯೋಜನೆ ಮಾಡಿದರೆ ಕುಟುಂಬಕ್ಕೆ ಅಗತ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗುವುದು.

ಜೀವನಶೈಲಿ ಬದಲಾಯಿಸಿ. ಸರಳ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿದ್ದರೂ ಅದು ಅತ್ಯವಶ್ಯ. ಬೈಬಲ್‌ ಜ್ಞಾನೋಕ್ತಿಯೊಂದು ಹೀಗನ್ನುತ್ತದೆ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.” (ಜ್ಞಾನೋಕ್ತಿ 22:3) ಸ್ಟೀವನ್‌ ಹೇಳುವುದು: “ಹಣ ಉಳಿಸಲಿಕ್ಕಾಗಿ ನನ್ನ ಕುಟುಂಬ ನಮ್ಮ ಸ್ವಂತ ಮನೆಗೆ ಸ್ಥಳಾಂತರಿಸಬೇಕಾಯಿತು. ಅದು ಚಿಕ್ಕದ್ದಾಗಿತ್ತು, ಒಳಗಿನ ಕೆಲಸಗಳೆಲ್ಲ ಮುಗಿದಿರಲಿಲ್ಲ. ಕಡಿಮೆ ಖರ್ಚಿನ ಆದರೂ ಗುಣಮಟ್ಟದ ಶಿಕ್ಷಣ ಕೊಡುವ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕಾಯಿತು.”

ಹೊಸ ಜೀವನಶೈಲಿಗೆ ಒಗ್ಗಿಕೊಳ್ಳಬೇಕಾದರೆ ಕುಟುಂಬದೊಳಗೆ ಮುಕ್ತ ಸಂವಾದ ಅತ್ಯಗತ್ಯ. ಒಂದು ಬ್ಯಾಂಕ್‌ನಲ್ಲಿ 9 ವರ್ಷ ದುಡಿದ ಆಸ್ಟಿನ್‌ ಕೆಲಸ ಕಳಕೊಂಡರು. ಅವರನ್ನುವುದು: “ನಾನೂ ನನ್ನ ಪತ್ನಿ ಕೂತು ನಮ್ಮ ಕುಟುಂಬಕ್ಕೆ ನಿಜವಾಗಿ ಅಗತ್ಯವಿದ್ದ ವಸ್ತುಗಳ ಪಟ್ಟಿಮಾಡಿದೆವು. ತುಂಬ ಬೆಲೆಯ ಆಹಾರ ವಸ್ತುಗಳು, ದುಬಾರಿ ರಜಾ ವಿಹಾರಗಳು, ಹೊಸ ಹೊಸ ಬಟ್ಟೆಗಳ ಅನಗತ್ಯ ಖರೀದಿ ಮಾಡುವುದನ್ನು ಪಟ್ಟಿಯಿಂದ ತೆಗೆದುಹಾಕಿದೆವು. ಈ ಎಲ್ಲ ಹೊಂದಾಣಿಕೆಗಳನ್ನು ಮಾಡಲು ನನ್ನ ಕುಟುಂಬ ಸಹಕರಿಸಿದಕ್ಕಾಗಿ ನಾನು ತುಂಬ ಸಂತೋಷಪಡುತ್ತೇನೆ.” ಇಂಥ ಬದಲಾವಣೆಗಳನ್ನು ಏಕೆ ಮಾಡಬೇಕೆಂದು ಎಳೆಯ ಮಕ್ಕಳಿಗೆ ಪೂರ್ತಿ ಅರ್ಥವಾಗದಿರಬಹುದು ನಿಜ. ಆದರೆ ಹೆತ್ತವರಾದ ನೀವು ಅವರಿಗೆ ಅದನ್ನು ಅರ್ಥಮಾಡಿಸಬಲ್ಲಿರಿ.

ಬೇರೆ ಕೆಲಸ ಮಾಡಲು ಸಿದ್ಧರಾಗಿರಿ. ಆಫೀಸ್‌ ಕೆಲಸ ಮಾಡಿ ಅಭ್ಯಾಸ ಆಗಿರುವಲ್ಲಿ ನೀವು ದೈಹಿಕ ಶ್ರಮದ ಕೆಲಸ ಮಾಡಲು ಹೆದರುತ್ತಿರಬಹುದು. “ದೊಡ್ಡ ಸಂಸ್ಥೆಯಲ್ಲಿ ಮ್ಯಾನೇಜರ್‌ ಹುದ್ದೆಗಳಲ್ಲಿದ್ದ ನಾನು ಚಿಕ್ಕಪುಟ್ಟ ಕೆಲಸ ಮಾಡಲು ಅಂಜುತ್ತಿದ್ದೆ” ಎನ್ನುತ್ತಾರೆ ಆಸ್ಟಿನ್‌. ಇದೇನೂ ಅಚ್ಚರಿಯ ಸಂಗತಿಯಲ್ಲ. ಬೈಬಲ್‌ ತಾನೇ ಜ್ಞಾನೋಕ್ತಿ 29:25ರಲ್ಲಿ “ಮನುಷ್ಯನ ಭಯ ಉರುಲು” ಎಂದು ಹೇಳುತ್ತದೆ. ಬೇರೆಯವರು ನಿಮ್ಮ ಬಗ್ಗೆ ಏನು ನೆನಸುವರು ಎಂದು ಯೋಚಿಸುತ್ತಾ ಕೂತರೆ ನಿಮ್ಮ ಕುಟುಂಬಕ್ಕೆ ಊಟ, ಬಟ್ಟೆ ಹೇಗೆ ತಂದುಹಾಕುವಿರಿ? ಆದ್ದರಿಂದ ನಕಾರಾತ್ಮಕ ಯೋಚನೆಯನ್ನು ಜಯಿಸಬೇಕು. ಹೇಗೆ?

ಮುಖ್ಯವಾಗಿ ನಮ್ರತೆ ಇರಬೇಕು. ಹೋಟೆಲ್‌ ಉದ್ಯಮದಲ್ಲಿ ಕೆಲಸ ಕಳಕೊಂಡ ಓಬೇದನನ್ನು ಒಬ್ಬ ಮಾಜಿ ಸಹೋದ್ಯೋಗಿ ತನ್ನ ವಾಹನ ರಿಪೇರಿ ಅಂಗಡಿಯಲ್ಲಿ ಕೆಲಸಮಾಡಲು ಕರೆದಾಗ ಒಪ್ಪಿಕೊಂಡ. ಈ ಕೆಲಸದಲ್ಲಿ ಪೇಂಟ್‌ ಹಾಗೂ ಇತರ ಸಾಮಾನುಗಳನ್ನು ಖರೀದಿಸಲಿಕ್ಕೆಂದು ಓಬೇದ್‌ ಧೂಳುತುಂಬಿದ ರಸ್ತೆಗಳಲ್ಲಿ ತುಂಬ ದೂರ ನಡೆಯಬೇಕಾಗುತ್ತಿತ್ತು. ಅವನನ್ನುವುದು: “ಈ ಕೆಲಸದಲ್ಲಿ ಯಾವುದೇ ಸುಧಾರಣೆಯಾಗುವ ಸೂಚನೆಗಳೇ ಇರಲಿಲ್ಲ. ಆದರೂ ಇದಕ್ಕೆ ಹೊಂದಿಕೊಳ್ಳಲು ನಮ್ರತೆಯೇ ಸಹಾಯಮಾಡಿತು. ಇದರಿಂದ ಸಿಗುತ್ತಿದ್ದ ಸಂಬಳ, ಹಿಂದಿನ ಸಂಬಳದ ಕಾಲು ಭಾಗದಷ್ಟೇ ಆಗಿದ್ದರೂ ಅದು ನನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟಿದೆ.” ಅವನಂತೆಯೇ ನಮ್ರಭಾವವಿದ್ದರೆ ನಿಮಗೂ ಸಹಾಯವಾದೀತು.

ಸಂತೃಪ್ತರಾಗಿರಿ. ಒಬ್ಬ ಸಂತೃಪ್ತ ವ್ಯಕ್ತಿ ಇದ್ದದ್ದರಲ್ಲೇ ಸಂತೋಷಿತನೂ ತೃಪ್ತನೂ ಆಗಿರುತ್ತಾನೆ. ಹಣಕಾಸಿನ ಮುಗ್ಗಟ್ಟಿನಲ್ಲಿರುವ ವ್ಯಕ್ತಿಗೆ ತಾನು ಸಂತೃಪ್ತನಾಗಿರಲು ಹೇಗೆ ತಾನೇ ಸಾಧ್ಯ ಎಂದನಿಸಬಹುದು. ಆದರೆ ಕೊರತೆ-ಕಷ್ಟವನ್ನು ಅನುಭವಿಸಿದ್ದ ಅಪೊಸ್ತಲ ಪೌಲನೆಂಬ ಮಿಷನೆರಿಯ ಮಾತುಗಳನ್ನು ಪರಿಗಣಿಸಿ: “ಎಲ್ಲ ಸನ್ನಿವೇಶಗಳಲ್ಲಿಯೂ ಸಂತುಷ್ಟನಾಗಿರುವುದು ಹೇಗೆಂಬುದನ್ನು ನಾನು ಕಲಿತುಕೊಂಡಿದ್ದೇನೆ. ಆಹಾರದ ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬುದು ನನಗೆ ಗೊತ್ತು.”—ಫಿಲಿಪ್ಪಿ 4:11, 12.

‘ನನ್ನ ಪರಿಸ್ಥಿತಿ ಇದಕ್ಕಿಂತ ಎಷ್ಟೋ ಚೆನ್ನಾಗಿತ್ತು’ ಎಂದು ಕೊರಗುವ ಬದಲು ‘ಈಗಿನ ಬದಲಾಗುತ್ತಿರುವ ಕಾಲದಲ್ಲಿ ನಾನು ಇಷ್ಟಾದರೂ ಚೆನ್ನಾಗಿದ್ದೇನಲ್ಲ. . .’ ಎಂದು ತೃಪ್ತರಾಗಿರಿ. ಹಾಗಾಗಿ “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ ಎಂಬುದಂತೂ ಖಂಡಿತ. ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು” ಎಂದು ಪೌಲನು ದೇವಪ್ರೇರಣೆಯಿಂದ ಕೊಟ್ಟ ಸಲಹೆಯನ್ನು ಪಾಲಿಸುವುದು ನಮಗೇ ಒಳ್ಳೇದು. ಪೌಲನು ಇಲ್ಲಿ ಸೋಮಾರಿತನವನ್ನು ಪ್ರೋತ್ಸಾಹಿಸುತ್ತಿಲ್ಲ ಬದಲಾಗಿ ಶಾರೀರಿಕ ಅಗತ್ಯಗಳನ್ನು ಹೇಗೆ ತಕ್ಕ ಸ್ಥಾನದಲ್ಲಿಡಬೇಕೆಂದು ತೋರಿಸುತ್ತಿದ್ದಾನೆ.—1 ತಿಮೊಥೆಯ 6:6, 8.

ನಿಜ ಸಂತೋಷದ ಮೂಲ

ನಾವು ಬಯಸಿದ್ದೆಲ್ಲವನ್ನು ಕೂಡಿಸಿಡುವುದರಿಂದ ಇಲ್ಲವೇ ಆರಾಮದ, ಸಂಪದ್ಭರಿತ ಬದುಕನ್ನು ಬಾಳುವುದರಿಂದ ನಿಜ ಸಂತೋಷ ದಕ್ಕುವುದಿಲ್ಲ. ಸ್ವತಃ ಯೇಸು ಒಮ್ಮೆ ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” ನಮ್ಮ ಬಳಿ ಏನಿದೆಯೊ ಅದರಿಂದ ಇತರರಿಗೆ ಸಹಾಯಮಾಡುವ ಮೂಲಕ ಹಾಗೂ ಪ್ರೋತ್ಸಾಹದ ಮಾತುಗಳನ್ನಾಡುವ ಮೂಲಕ ನಮಗೆ ಸಂತೋಷತೃಪ್ತಿ ಲಭಿಸುತ್ತದೆ.—ಅಪೊಸ್ತಲರ ಕಾರ್ಯಗಳು 20:35.

ನಮಗೆ ಏನೆಲ್ಲಾ ಬೇಕೆಂದು ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಚೆನ್ನಾಗಿ ತಿಳಿದಿದೆ. ತನ್ನ ವಾಕ್ಯವಾದ ಬೈಬಲಿನ ಮೂಲಕ ವ್ಯಾವಹಾರಿಕ ಸಲಹೆಸೂಚನೆ ಕೊಟ್ಟಿದ್ದಾನೆ. ಇದು ಅನೇಕರಿಗೆ ತಮ್ಮ ಬಾಳನ್ನು ಉತ್ತಮಗೊಳಿಸಲು, ಅನಗತ್ಯ ಚಿಂತೆಯನ್ನು ತೊಲಗಿಸಲು ನೆರವಾಗಿದೆ. ಬೈಬಲಿನ ಸಲಹೆಸೂಚನೆ ಅನ್ವಯಿಸುವುದರಿಂದ ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯಲ್ಲಿ ತಟ್ಟನೆ, ಚಮತ್ಕಾರದಿಂದ ಬದಲಾವಣೆ ಆಗುವುದಿಲ್ಲ ನಿಜ. ಆದರೆ ಯಾರು “ಮೊದಲು [ದೇವರ] ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ” ಇರುತ್ತಾರೊ ಅವರೆಲ್ಲರ ದೈನಂದಿನ ಅಗತ್ಯಗಳನ್ನು ಪೂರೈಸಲಾಗುವುದೆಂದು ಯೇಸು ಆಶ್ವಾಸನೆ ಕೊಟ್ಟನು.—ಮತ್ತಾಯ 6:33. (w12-E 06/01)