ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸೇವೆಯಿಂದ ನಾವು ಕಲಿತ “ಗುಟ್ಟು”

ದೇವರ ಸೇವೆಯಿಂದ ನಾವು ಕಲಿತ “ಗುಟ್ಟು”

ಜೀವನ ಕಥೆ

ದೇವರ ಸೇವೆಯಿಂದ ನಾವು ಕಲಿತ “ಗುಟ್ಟು”

ಒಲಿವರ್‌ ರಾಂಡ್ರಿಯಮುರ ಹೇಳಿದಂತೆ

“ಆಹಾರದ ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬುದು ನನಗೆ ಗೊತ್ತು. ಎಲ್ಲ ವಿಷಯಗಳಲ್ಲಿ ಮತ್ತು ಎಲ್ಲ ಸನ್ನಿವೇಶಗಳಲ್ಲಿ ಸಂತೃಪ್ತನಾಗಿರುವುದು ಹೇಗೆ, ಹಸಿದವನಾಗಿರುವುದು ಹೇಗೆ . . . ಎಂಬುದರ ಗುಟ್ಟು ನನಗೆ ತಿಳಿದಿದೆ. ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿ. 4:12, 13.

ಅಪೊಸ್ತಲ ಪೌಲನ ಮೇಲಿನ ಮಾತುಗಳು ನನಗೂ ನನ್ನಾಕೆ ಊಲಿಗೂ ಎಷ್ಟೋ ವರ್ಷಗಳಿಂದ ತುಂಬ ಉತ್ತೇಜನ ಕೊಡುತ್ತಾ ಇವೆ. ಮಡಗಾಸ್ಕರ್‌ ದ್ವೀಪ ದೇಶದಲ್ಲಿ ಸೇವೆಮಾಡುತ್ತಿರುವ ನಾವು ಪೌಲನಂತೆ ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ‘ಗುಟ್ಟನ್ನು’ ತಿಳಿದುಕೊಂಡಿದ್ದೇವೆ.

ಇಸವಿ 1982ರಲ್ಲಿ ಊಲಿಯ ತಾಯಿ ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಕಲಿಯಲು ಪ್ರಾರಂಭಿಸಿದರು. ಆಗ ನನ್ನ ಮತ್ತು ಊಲಿಯ ನಿಶ್ಚಿತಾರ್ಥವಾಗಿತ್ತು. ನಾನು ಸಹ ಬೈಬಲ್‌ ಕಲಿಯತೊಡಗಿದೆ. ಅನಂತರ ಊಲಿ ಜೊತೆಸೇರಿದಳು. 1983ರಲ್ಲಿ ನಮ್ಮ ಮದುವೆಯಾಯಿತು. 1985ರಲ್ಲಿ ದೀಕ್ಷಾಸ್ನಾನ ಪಡೆದು ಆಕ್ಸಿಲಿಯರಿ ಪಯನೀಯರ್‌ ಸೇವೆ ಆರಂಭಿಸಿದೆವು. 1986ರ ಜುಲೈ ತಿಂಗಳಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆಗೆ ಇಳಿದೆವು.

1987ರ ಸೆಪ್ಟೆಂಬರ್‌ನಲ್ಲಿ ನಾವು ವಿಶೇಷ ಪಯನೀಯರರಾಗಿ ನೇಮಕಗೊಂಡೆವು. ನಮ್ಮ ಮೊದಲ ನೇಮಕ ಮಡಗಾಸ್ಕರ್‌ನ ವಾಯುವ್ಯಕ್ಕಿರುವ ಒಂದು ಚಿಕ್ಕ ಪಟ್ಟಣ. ಅಲ್ಲಿ ಸಭೆ ಇರಲಿಲ್ಲ. ಮಡಗಾಸ್ಕರ್‌ ದ್ವೀಪದಲ್ಲಿ ಸುಮಾರು 18 ಬುಡಕಟ್ಟು ಜನಾಂಗದವರಿದ್ದಾರೆ. ಅವರೊಳಗೆ ಅನೇಕ ಗೋತ್ರಗಳಿವೆ. ಹಾಗಾಗಿ ಭಿನ್ನ ವಿಭಿನ್ನ ಪದ್ಧತಿ, ಆಚರಣೆಗಳು ಸಾಮಾನ್ಯ. ಅಲ್ಲಿನ ಅಧಿಕೃತ ಭಾಷೆ ಮಲಗಾಸಿ. ಆದರೆ ಜನರು ಮಾತಾಡುವ ಶೈಲಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಆದ್ದರಿಂದ ನಮಗೆ ನೇಮಕವಾದ ಪಟ್ಟಣದಲ್ಲಿ ಮಾತಾಡುತ್ತಿದ್ದ ಭಾಷಾಶೈಲಿಯನ್ನು ಕಲಿಯಲು ಪ್ರಾರಂಭಿಸಿದೆವು. ಅಲ್ಲಿನ ಜನರಲ್ಲಿ ಒಬ್ಬರಾಗಲು ಮತ್ತು ಸುವಾರ್ತೆ ಸಾರಲು ಇದು ಸಹಾಯ ಮಾಡಿತು.

ಮೊದಮೊದಲು ಪ್ರತಿ ಭಾನುವಾರವೂ ನಾನು ಸಾರ್ವಜನಿಕ ಭಾಷಣ ಕೊಡುತ್ತಿದ್ದೆ. ಊಲಿ ಚಪ್ಪಾಳೆ ಹೊಡೆಯುತ್ತಿದ್ದಳು. ಕೂಟದಲ್ಲಿ ಹಾಜರಿರುತ್ತಿದ್ದದ್ದು ನಾವಿಬ್ಬರೇ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಎಲ್ಲ ಭಾಗಗಳನ್ನು ನಡೆಸುತ್ತಿದ್ದೆವು. ಊಲಿ ತನ್ನೊಂದಿಗೆ ಸಹಾಯಕಿ ಇರುವಂತೆ ಕಲ್ಪಿಸಿಕೊಂಡು ಭಾಷಣ ನಿರ್ವಹಿಸುತ್ತಿದ್ದಳು. ಸರ್ಕಿಟ್‌ ಮೇಲ್ವಿಚಾರಕರು ಭೇಟಿಯಿತ್ತಾಗ, ಕೂಟಗಳನ್ನು ನಡೆಸುವ ವಿಧದಲ್ಲಿ ಬದಲಾವಣೆ ಮಾಡುವಂತೆ ಸಲಹೆ ಕೊಟ್ಟರು. ಅದು ನಮ್ಮ ಭಾರವನ್ನು ಇಳಿಸಿತು.

ನಾವಿದ್ದ ಸ್ಥಳದಲ್ಲಿ ಅಂಚೆ ಸರಿಯಾದ ಸಮಯಕ್ಕೆ ತಲುಪುತ್ತಿರಲಿಲ್ಲ. ತಿಂಗಳ ಸಂಭಾವನೆ ಯಾವಾಗ ಕೈಸೇರುತ್ತದೆಂದು ಹೇಳಲಾಗುತ್ತಿರಲಿಲ್ಲ. ಹೀಗಾಗಿ “ಕೊರತೆ” ಇದ್ದಾಗಲೂ ಬದುಕುವುದು ಹೇಗೆಂದು ಕಲಿತೆವು. ಒಮ್ಮೆ ಸುಮಾರು 130 ಕಿ.ಮೀ. ದೂರದಲ್ಲಿ ನಡೆಯಲಿದ್ದ ಸರ್ಕಿಟ್‌ ಸಮ್ಮೇಳನಕ್ಕೆ ಹೋಗಲು ನಮ್ಮ ಬಳಿ ಬಸ್ಸಿಗೆ ಹಣವಿರಲಿಲ್ಲ. ಒಬ್ಬ ಸಹೋದರರು ಹೇಳಿದ್ದ ಮಾತು ಆಗ ನೆನಪಾಯಿತು. “ನಿಮ್ಮ ಸಮಸ್ಯೆಗಳನ್ನು ಯೆಹೋವನಿಗೆ ಹೇಳಿ. ಖಂಡಿತ ಆತನು ಸಹಾಯ ಮಾಡುತ್ತಾನೆ. ನೀವು ಮಾಡುತ್ತಿರುವುದು ಆತನ ಕೆಲಸ ಅಲ್ವಾ” ಎಂದಿದ್ದರು. ನಾವು ಯೆಹೋವನಲ್ಲಿ ಪ್ರಾರ್ಥಿಸಿದ ಬಳಿಕ ಸಮ್ಮೇಳನಕ್ಕೆ ನಡೆದುಕೊಂಡೇ ಹೋಗಲು ನಿರ್ಣಯಿಸಿದೆವು. ನಾವಿನ್ನೇನು ಮನೆಯಿಂದ ಹೊರಡಬೇಕೆನ್ನುವಷ್ಟರಲ್ಲಿ ಒಬ್ಬ ಸಹೋದರರು ನಮ್ಮನ್ನು ನೋಡಲು ಬಂದರು. ಅನಿರೀಕ್ಷಿತವಾಗಿ ಬಂದ ಅವರು ನಮ್ಮ ಕೈಯಲ್ಲಿ ಕಾಸಿಟ್ಟರು. ಬಸ್‌ ಚಾರ್ಜ್‌ಗೆ ಎಷ್ಟು ಬೇಕೋ ಅಷ್ಟು ಹಣ ಈಗ ನಮ್ಮ ಕೈಯಲ್ಲಿತ್ತು!

ಸರ್ಕಿಟ್‌ ಸೇವೆ

1991ರ ಫೆಬ್ರವರಿಯಲ್ಲಿ ನನ್ನನ್ನು ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಅಷ್ಟರಲ್ಲಿ ನಮ್ಮ ಗುಂಪಿನಲ್ಲಿ 9 ಮಂದಿ ಪ್ರಚಾರಕರಿದ್ದರು. ಅವರಲ್ಲಿ ಮೂವರ ದೀಕ್ಷಾಸ್ನಾನವಾಗಿತ್ತು. ಕೂಟಗಳ ಹಾಜರಿ 50ಕ್ಕೆ ಏರಿತ್ತು. ಸರ್ಕಿಟ್‌ ಸೇವೆಗಾಗಿ ತರಬೇತಿ ಪಡೆದ ನಂತರ ನನ್ನನ್ನು ಮಡಗಾಸ್ಕರ್‌ನ ರಾಜಧಾನಿ ಅಂಟನಾನಾರಿವೊಗೆ ನೇಮಿಸಲಾಯಿತು. 1993ರಲ್ಲಿ ಪೂರ್ವ ಮಡಗಾಸ್ಕರ್‌ಗೆ ನೇಮಕಗೊಂಡೆವು. ಇಲ್ಲಿನ ಜೀವನಕ್ಕೂ ನಗರ ಜೀವನಕ್ಕೂ ಅಜಗಜಾಂತರ.

ಸಭೆಗಳನ್ನೂ ದೂರದೂರದ ಗುಂಪುಗಳನ್ನೂ ಭೇಟಿಮಾಡಲು ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಒಮ್ಮೊಮ್ಮೆ 145 ಕಿ.ಮೀ. ದೂರ ಕ್ರಮಿಸಬೇಕಿತ್ತು. ದಟ್ಟ ಕಾಡಿನ ಮಧ್ಯೆ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯಬೇಕಿತ್ತು. ಹಾಗಾಗಿ ಆದಷ್ಟು ಕಡಿಮೆ ಸಾಮಾನನ್ನು ಕೊಂಡೊಯ್ಯುತ್ತಿದ್ದೆವು. ಆ ಸಮಯದಲ್ಲಿ ಕೆಲವೊಮ್ಮೆ ಸಾರ್ವಜನಿಕ ಭಾಷಣದಲ್ಲಿ ಸ್ಲೈಡ್‌ ಪ್ರದರ್ಶನ ಇರುತ್ತಿತ್ತು. ಅಂಥ ಸಂದರ್ಭಗಳಲ್ಲಿ ನಮ್ಮ ಪ್ರಯಾಣ ಭಾರವಾಗುತ್ತಿತ್ತು. ಸ್ಲೈಡ್‌ ಪ್ರೊಜೆಕ್ಟರನ್ನು ಊಲಿ ಹೊತ್ತುಕೊಳ್ಳುತ್ತಿದ್ದಳು, ನಾನು 12-ವೋಲ್ಟ್‌ ಕಾರ್‌ ಬ್ಯಾಟರಿ ಹೊರುತ್ತಿದ್ದೆ.

ದಿನಕ್ಕೆ ಸುಮಾರು 40 ಕಿ.ಮೀ. ನಡೆಯುತ್ತಿದ್ದೆವು. ಬೆಟ್ಟಗಳನ್ನು ಹತ್ತಿ ಇಳಿದು ನದಿಗಳನ್ನು ದಾಟಿ ಕೆಸರಿನಲ್ಲಿ ಕಾಲೆಳೆದುಕೊಂಡು ಸಾಗುತ್ತಿದ್ದೆವು. ಕೆಲವೊಂದು ರಾತ್ರಿ ರಸ್ತೆ ಬದಿಯಲ್ಲೇ ಮಲಗಬೇಕಾದ ಪರಿಸ್ಥಿತಿಯೂ ಇತ್ತು. ಆದರೆ ಹೆಚ್ಚಾಗಿ ಯಾವುದಾದರೂ ಹಳ್ಳಿಯಲ್ಲಿ ಯಾರ ಮನೆಯಲ್ಲಾದರೂ ಜಾಗ ಕೇಳಿ ರಾತ್ರಿ ಕಳೆಯುತ್ತಿದ್ದೆವು. ಹಾಗೆ ತಂಗಿದಾಗೆಲ್ಲ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. ಮನೆಯವರಿಂದ ನನ್ನಾಕೆ ಪಾತ್ರೆ ಕೇಳಿ ಪಡೆದು ಅಡುಗೆಗೆ ಹತ್ತಿರದ ನದಿಯಿಂದ ನೀರು ತರುತ್ತಿದ್ದಳು. ಅಷ್ಟರಲ್ಲಿ ನಾನು ಕೊಡಲಿ ಪಡೆದು ಕಟ್ಟಿಗೆ ಕಡಿದು ಇಟ್ಟಿರುತ್ತಿದ್ದೆ. ಅಪರೂಪಕ್ಕೊಮ್ಮೆ ಕೋಳಿ ಖರೀದಿಸುತ್ತಿದ್ದೆವು. ನಾವೇ ಅದನ್ನು ಕೊಯ್ದು ಅಡುಗೆ ಮಾಡುತ್ತಿದ್ದೆವು. ಇದಕ್ಕೆಲ್ಲ ತುಂಬ ಸಮಯ ತಗಲುತ್ತಿತ್ತು.

ಊಟದ ನಂತರ ಸ್ನಾನಕ್ಕಾಗಿ ನದಿಯಿಂದ ನೀರು ತರುತ್ತಿದ್ದೆವು. ಕೆಲವೊಮ್ಮೆ ಅಡುಗೆಮನೆಯಲ್ಲಿ ಮಲಗಬೇಕಾಗುತ್ತಿತ್ತು. ಮಳೆಗೆ ಛಾವಣಿ ಸೋರುತ್ತಿದ್ದರೆ ಗೋಡೆಗೆ ಒರಗಿಕೊಂಡು ನಿದ್ರಿಸುತ್ತಿದ್ದೆವು.

ತಂಗಲು ಜಾಗ ಕೊಟ್ಟ ಮನೆಯವರಿಗೆ ಕೃತಜ್ಞತೆ ಸಲ್ಲಿಸಿ ದೇವರ ರಾಜ್ಯದ ಕುರಿತು ಸಾಕ್ಷಿ ನೀಡಲು ಮರೆಯುತ್ತಿರಲಿಲ್ಲ. ಪ್ರಯಾಣ ಎಷ್ಟೇ ಕಷ್ಟವಾಗಿದ್ದರೂ ಸಭೆ ತಲುಪಿದಾಗ ಸಹೋದರ ಸಹೋದರಿಯರು ತೋರಿಸುವ ಪ್ರೀತಿ ಎಲ್ಲವನ್ನು ಮರೆಸುತ್ತಿತ್ತು. ಅವರು ತೋರಿಸುವ ಅತಿಥಿಸತ್ಕಾರ, ನಮ್ಮ ಭೇಟಿಗಾಗಿ ಅವರಲ್ಲಿ ಹೊಮ್ಮುತ್ತಿದ್ದ ಕೃತಜ್ಞತೆ ಇದನ್ನೆಲ್ಲ ನೋಡುವಾಗ ಹೃದಯ ತುಂಬಿಬರುತ್ತಿತ್ತು.

ಸಹೋದರರ ಮನೆಯಲ್ಲಿ ತಂಗಿದಾಗ ಮನೆಕೆಲಸದಲ್ಲಿ ನಾವೂ ಸಹಾಯ ಮಾಡುತ್ತಿದ್ದೆವು. ಇದರಿಂದ ನಮ್ಮೊಂದಿಗೆ ಸೇವೆಗೆ ಬರಲು ಅವರಿಗೆ ಅನುಕೂಲವಾಗುತ್ತಿತ್ತು. ಭರ್ಜರಿ ಊಟವನ್ನಾಗಲಿ ಸೌಕರ್ಯಗಳನ್ನಾಗಲಿ ಬಯಸಿ ಸಹೋದರರಿಗೆ ಹೊರೆಯಾಗಿರಲು ನಾವು ಇಷ್ಟಪಡಲಿಲ್ಲ.

ದೂರ ದೂರದಲ್ಲಿದ್ದ ಸಹೋದರರ ಭೇಟಿ

ದೂರದಲ್ಲಿದ್ದ ಸಹೋದರರ ಗುಂಪುಗಳನ್ನು ಭೇಟಿಮಾಡುವುದು ತುಂಬ ಸಂತೋಷ ತರುತ್ತಿತ್ತು. ಅವರು ನಮ್ಮೊಂದಿಗೆ ಎಷ್ಟು ಸೇವೆಮಾಡಲು ಯೋಜಿಸುತ್ತಿದ್ದರೆಂದರೆ ನಮಗೆ ‘ತುಸು ದಣಿವಾರಿಸಿಕೊಳ್ಳಲೂ’ ಸಮಯ ಸಿಗುತ್ತಿರಲಿಲ್ಲ! (ಮಾರ್ಕ 6:31) ಒಮ್ಮೆ ಒಬ್ಬ ಸಹೋದರ ಮತ್ತು ಅವರ ಪತ್ನಿ ತಮ್ಮ 40 ಬೈಬಲ್‌ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಬರುವಂತೆ ಏರ್ಪಾಡು ಮಾಡಿದರು. ಬೈಬಲ್‌ ಅಧ್ಯಯನ ಮಾಡುವಾಗ ನಾವು ಜೊತೆಸೇರಬೇಕೆಂದು ಕೇಳಿಕೊಂಡರು. ಇಪ್ಪತ್ತು ಬೈಬಲ್‌ ಅಧ್ಯಯನಕ್ಕೆ ಸಹೋದರಿಯನ್ನು ಊಲಿ ಜೊತೆಗೂಡಿದರೆ ಉಳಿದ ಇಪ್ಪತ್ತಕ್ಕೆ ನಾನು ಸಹೋದರನನ್ನು ಜೊತೆಗೂಡಿದೆ. ಬೈಬಲ್‌ ಅಧ್ಯಯನ ಒಂದರ ನಂತರ ಒಂದು ಸಾಗುತ್ತಾ ಇತ್ತು. ಕೂಟಕ್ಕಷ್ಟೇ ನಾವು ಬಿಡುವು ಮಾಡಿಕೊಂಡು ಕೂಟದ ನಂತರ ಪುನಃ ಮುಂದುವರಿಸಿದೆವು. ಈ ರೀತಿ ಕಾರ್ಯನಿರತರಾಗಿರುತ್ತಿದ್ದ ನಮಗೆ ರಾತ್ರಿ 8 ಗಂಟೆಯ ನಂತರವಷ್ಟೇ ಬಿಡುವು ಸಿಗುತ್ತಿತ್ತು.

ಇನ್ನೊಂದು ಗುಂಪನ್ನು ಭೇಟಿಮಾಡಿದಾಗ ಪಕ್ಕದ ಹಳ್ಳಿಯಲ್ಲಿ ಸಾರಲು ಏರ್ಪಾಡು ಮಾಡಲಾಗಿತ್ತು. ನಾವೆಲ್ಲರೂ ಬೆಳಗ್ಗೆ 8 ಗಂಟೆಗೆ ಹೊರಟೆವು. ಕಾಡಿನಲ್ಲಿ ತುಂಬ ದೂರ ನಡೆಯಬೇಕಿದ್ದ ಕಾರಣ ಹಳೆಯ ಬಟ್ಟೆ ಧರಿಸಿದ್ದೆವು. ಮಧ್ಯಾಹ್ನದಷ್ಟಕ್ಕೆ ಹಳ್ಳಿ ತಲುಪಿ ಶುದ್ಧ ಬಟ್ಟೆಗಳನ್ನು ಧರಿಸಿ ಸುವಾರ್ತೆ ಸಾರಲು ತೊಡಗಿದೆವು. ಮನೆಗಳು ಕಡಿಮೆಯಿದ್ದು ಪ್ರಚಾರಕರು ಹೆಚ್ಚಿದ್ದ ಕಾರಣ ಅರ್ಧ ಗಂಟೆಯಲ್ಲೇ ಸೇವೆ ಮುಗಿಯಿತು. ಅಲ್ಲಿಂದ ಇನ್ನೊಂದು ಹಳ್ಳಿಗೆ ನಡೆದೆವು. ಅಲ್ಲಿಯೂ ಅರ್ಧ ಗಂಟೆಯಲ್ಲಿ ಸೇವೆ ಮುಗಿದಾಗ ವಾಪಸ್ಸು ದೀರ್ಘ ಪ್ರಯಾಣ ಬೆಳೆಸಿದೆವು. ಹೀಗೆ ದೀರ್ಘಪ್ರಯಾಣ ಮಾಡಿ ಕೇವಲ ಒಂದು ತಾಸು ಸೇವೆ ಮಾಡುವುದು ಮೊದಮೊದಲು ನಮಗೆ ಬೇಸರ ಉಂಟುಮಾಡಿತ್ತು. ಆದರೆ ಅಲ್ಲಿನ ಸಹೋದರರು ಬೇಸರಪಡಲಿಲ್ಲ. ಅವರ ಹುರುಪು ಕುಂದಲಿಲ್ಲ.

ಇನ್ನೊಂದು ಗುಂಪು ಟವಿರನಾಂಬೂ ಎಂಬ ಪಟ್ಟಣದ ಹತ್ತಿರ ಬೆಟ್ಟದ ತುದಿಯಲ್ಲಿತ್ತು. ಅಲ್ಲಿ ಒಬ್ಬ ಸಹೋದರನ ಕುಟುಂಬ ಒಂದೇ ಕೋಣೆಯಿದ್ದ ಮನೆಯಲ್ಲಿ ವಾಸಿಸುತ್ತಿತ್ತು. ಮನೆಯ ಪಕ್ಕದಲ್ಲೇ ಕೂಟ ನಡೆಸುವ ಸ್ಥಳವಿತ್ತು. ನಾವು ಬಂದ ಸುದ್ದಿ ಸುತ್ತಮುತ್ತಲಿನ ಸಹೋದರರಿಗೆ ರವಾನೆಯಾದದ್ದು ತುಂಬ ಸ್ವಾರಸ್ಯಕರ. ಆ ಸಹೋದರನು ಜೋರಾಗಿ “ಸಹೋದರರೇ!” ಎಂದು ಕೂಗಿದನು. ಪಕ್ಕದ ಬೆಟ್ಟದಿಂದ “ಓ!” ಎಂಬ ಧ್ವನಿ ಕೇಳಿತು. “ಸರ್ಕಿಟ್‌ ಮೇಲ್ವಿಚಾರಕರು ಬಂದಿದ್ದಾರೆ!” ಈ ಸಹೋದರನ ಕೂಗು. “ಹೌದಾ. . . !” ಎಂಬ ಮರುಉತ್ತರ. ಹೀಗೆ ಸಂದೇಶ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟ ಎಂದು ದೂರ ದೂರಕ್ಕೆ ರವಾನೆಯಾಯಿತು. ಒಡನೆ ಕೂಟದ ಸ್ಥಳಕ್ಕೆ ಜನರು ಸೇರಲಾರಂಭಿಸಿದರು. ಆ ದಿನ ಕೂಟದ ಹಾಜರಿ 100ಕ್ಕೂ ಹೆಚ್ಚಿತ್ತು.

ಪ್ರಯಾಣದ ಪ್ರಯಾಸ

1996ರಲ್ಲಿ ನಾವು ಅಂಟನಾನಾರಿವೊದ ಹತ್ತಿರದ ಮಧ್ಯ ಮಲೆನಾಡು ಪ್ರದೇಶಕ್ಕೆ ನೇಮಕಗೊಂಡೆವು. ಅಲ್ಲಿ ಎದುರಿಸಿದ ಸವಾಲುಗಳು ಬೇರೆಯೇ ಆಗಿದ್ದವು. ಹೊರವಲಯದ ಪ್ರದೇಶಕ್ಕೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಒಮ್ಮೆ ಅಂಟನಾನಾರಿವೊದಿಂದ 240 ಕಿ.ಮೀ. ದೂರದ ಬೆಯಂಕಾನಾ (ಬೇಸಾಕೇ) ಎಂಬಲ್ಲಿದ್ದ ಗುಂಪನ್ನು ಭೇಟಿಮಾಡಬೇಕಿತ್ತು. ಆ ದಾರಿಯಾಗಿ ಹೋಗುತ್ತಿದ್ದ ಟ್ರಕ್‌ನ ಚಾಲಕನೊಂದಿಗೆ ಮಾತಾಡಿ ಅದರಲ್ಲಿ ನಮ್ಮ ಪ್ರಯಾಣ ಆರಂಭಿಸಿದೆವು. ಆ ಚಿಕ್ಕ ಟ್ರಕ್‌ನಲ್ಲಿ ಆಗಲೇ ಹೆಚ್ಚುಕಡಿಮೆ 30 ಪ್ರಯಾಣಿಕರಿದ್ದರು. ಒಳಗೆ, ಮೇಲೆ ಜನ ತುಂಬಿದ್ದರಲ್ಲದೆ ಹಿಂದೆ ಕೂಡ ನೇತಾಡುತ್ತಿದ್ದರು.

ಯಾವಾಗಲೂ ಆಗುವಂತೆ ಮಧ್ಯೆ ಟ್ರಕ್‌ ಕೆಟ್ಟುನಿಂತಿತು. ಬೇರೆ ದಾರಿಯಿಲ್ಲದೆ ನಡಿಗೆ ಆರಂಭಿಸಿದೆವು. ಕೆಲವು ತಾಸುಗಳ ನಂತರ ದೊಡ್ಡ ಟ್ರಕ್ಕೊಂದು ಆ ದಾರಿಯಾಗಿ ಬಂತು. ಸರಕು ಮತ್ತು ಜನರಿಂದ ಕಿಕ್ಕಿರಿದಿದ್ದರೂ ಚಾಲಕ ವಾಹನ ನಿಲ್ಲಿಸಿದ. ಕಾಲಿಡುವಷ್ಟು ಮಾತ್ರ ಜಾಗವಿತ್ತು. ನಿಂತುಕೊಂಡೇ ಪ್ರಯಾಣಿಸಿದೆವು. ನದಿಯ ಹತ್ತಿರ ಬಂದಾಗ ನಾವೆಲ್ಲ ಕೆಳಗೆ ಇಳಿಯಬೇಕಾಯಿತು. ಸೇತುವೆಯ ರಿಪೇರಿ ಕೆಲಸವಾಗುತ್ತಿದ್ದರಿಂದ ಟ್ರಕ್‌ ಮುಂದೆ ಹೋಗಲಿಲ್ಲ. ಮತ್ತೆ ನಾವಲ್ಲಿಂದ ಕಾಲ್ನಡಿಗೆ ಆರಂಭಿಸಿದೆವು. ಅಂತೂ ಇಂತೂ ಕೊನೆಗೆ ಒಂದು ಚಿಕ್ಕ ಹಳ್ಳಿಗೆ ತಲುಪಿದೆವು. ಅಲ್ಲಿ ಕೆಲವು ವಿಶೇಷ ಪಯನೀಯರರಿದ್ದರು. ಅವರನ್ನು ಭೇಟಿಮಾಡಲು ಯೋಜಿಸಿರಲಿಲ್ಲವಾದರೂ ಸೇತುವೆ ರಿಪೇರಿ ಕೆಲಸ ಮುಗಿಯುವ ವರೆಗೂ ಅವರೊಂದಿಗಿದ್ದು ಸುವಾರ್ತೆ ಸಾರಿದೆವು.

ಒಂದು ವಾರ ಕಾದ ನಂತರ ವಾಹನವೊಂದು ಬಂತು. ಪ್ರಯಾಣ ಮುಂದುವರಿಸಿದೆವು. ರಸ್ತೆಗಳ ತುಂಬ ಹೊಂಡಗಳಿದ್ದವು. ಕೆಲವೊಂದು ಕಡೆ ಮೊಣಕಾಲಿನಷ್ಟು ನೀರಿದ್ದದರಿಂದ ಕೆಳಗಿಳಿದು ವಾಹನವನ್ನು ದೂಡಬೇಕಾಯಿತು. ತಳ್ಳುವಾಗ ಎಡವಿ ಬಿದ್ದದ್ದೂ ಉಂಟು. ಹಾಗೂ ಹೀಗೂ ಮುಂಜಾನೆ ಇನ್ನೂ ನಸುಕಿರುವಾಗಲೇ ಒಂದು ಚಿಕ್ಕ ಹಳ್ಳಿಗೆ ಬಂದಿಳಿದೆವು. ಅಲ್ಲಿಂದ ಒಳದಾರಿ ಹಿಡಿದು ಬತ್ತದ ಗದ್ದೆಗಳಲ್ಲಿ ಮತ್ತು ಸೊಂಟದವರೆಗಿದ್ದ ಕೆಸರು ನೀರಿನಲ್ಲಿ ನಡೆಯುತ್ತಾ ಬೆಯಂಕಾನಾ ಕಡೆಗೆ ಸಾಗಿದೆವು.

ಬತ್ತದ ಗದ್ದೆಯಲ್ಲಿ ಕೆಲವು ಜನರು ಕೆಲಸ ಮಾಡುತ್ತಿದ್ದರು. ಆ ಊರು ನಮಗೆ ಹೊಸದಾದ್ದರಿಂದ ಅವರಿಗೆ ಸುವಾರ್ತೆ ತಿಳಿಸಿ ಸಾಕ್ಷಿಗಳ ಬಗ್ಗೆ ವಿಚಾರಿಸೋಣವೆಂದು ಅಂದುಕೊಂಡೆವು. ಹತ್ತಿರ ಹೋಗಿ ಮಾತಾಡಿದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ! ಅವರೇ ನಮ್ಮ ಸಹೋದರರಾಗಿದ್ದರು!

ಪೂರ್ಣ ಸಮಯದ ಸೇವೆಗಿಳಿಯಲು ಇತರರಿಗೆ ಸ್ಫೂರ್ತಿ

ಈ ಎಲ್ಲ ವರ್ಷಗಳಲ್ಲಿ ನಾವು ಸಹೋದರ ಸಹೋದರಿಯರನ್ನು ಪೂರ್ಣ ಸಮಯದ ಸೇವೆ ಮಾಡುವಂತೆ ಉತ್ತೇಜಿಸಿದೆವು. ಅದರ ಒಳ್ಳೇ ಫಲಿತಾಂಶ ನೋಡುವಾಗ ಮನ ಆನಂದದಿಂದ ಹಿಗ್ಗುತ್ತದೆ. ಒಂದು ಸಭೆಯಲ್ಲಿ 9 ರೆಗ್ಯುಲರ್‌ ಪಯನೀಯರರಿದ್ದರು. ಪ್ರತಿಯೊಬ್ಬ ಪಯನೀಯರರು ಇನ್ನೂ ಒಬ್ಬೊಬ್ಬ ಹೊಸ ಪಯನೀಯರರನ್ನು ಸೃಷ್ಟಿಸುವಂತೆ ಭೇಟಿಯ ಸಮಯದಲ್ಲಿ ಹುರಿದುಂಬಿಸಿದೆವು. ಆರು ತಿಂಗಳ ನಂತರ ಆ ಸಭೆಗೆ ಭೇಟಿಯಿತ್ತಾಗ ಪಯನೀಯರರ ಸಂಖ್ಯೆ 22ಕ್ಕೆ ಏರಿತ್ತು. ಇಬ್ಬರು ಪಯನೀಯರ್‌ ಸಹೋದರಿಯರು ತಮ್ಮ ತಂದೆಯರನ್ನು ಪಯನೀಯರ್‌ ಸೇವೆಗಿಳಿಯುವಂತೆ ಪ್ರೋತ್ಸಾಹಿಸಿ ಯಶಸ್ವಿಯಾದರು. ಸಭಾ ಹಿರಿಯರಾಗಿದ್ದ ಆ ಸಹೋದರರು ಇನ್ನೊಬ್ಬ ಹಿರಿಯನನ್ನು ಉತ್ತೇಜಿಸಿದರು. ಫಲಿತಾಂಶವಾಗಿ ಮೂವರೂ ಹಿರಿಯರು ರೆಗ್ಯುಲರ್‌ ಪಯನೀಯರರಾದರು. ಸ್ವಲ್ಪ ಸಮಯದಲ್ಲೇ ಮೂರನೆಯವರು ವಿಶೇಷ ಪಯನೀಯರ್‌ ನೇಮಕ ಪಡೆದರು. ತದನಂತರ ಪತ್ನಿಯೊಂದಿಗೆ ಸರ್ಕಿಟ್‌ ಸೇವೆಯನ್ನು ಆರಂಭಿಸಿದರು. ಇನ್ನಿಬ್ಬರು ಹಿರಿಯರಲ್ಲಿ ಒಬ್ಬರು ಸರ್ಕಿಟ್‌ ಸೇವೆ ಮಾಡುತ್ತಿದ್ದಾರೆ. ಮತ್ತೊಬ್ಬರು ರಾಜ್ಯ ಸಭಾಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಯೆಹೋವನ ಸಹಾಯವಿಲ್ಲದಿದ್ದರೆ ನಾವು ಏನನ್ನೂ ಮಾಡಸಾಧ್ಯವಿರಲಿಲ್ಲ. ಆತನ ಬೆಂಬಲಕ್ಕಾಗಿ ನಾವು ಕೃತಜ್ಞತೆ ಹೇಳದ ದಿನವೇ ಇಲ್ಲ. ಕೆಲವೊಮ್ಮೆ ನಾವು ಬಳಲಿದ್ದೆವು. ಅಸ್ವಸ್ಥರಾಗಿದ್ದೆವು. ಆದರೆ ಸೇವೆಯ ಫಲಿತಾಂಶಗಳನ್ನು ನೆನಸುವಾಗ ಸಾರ್ಥಕತೆಯ ಭಾವನೆ ಮೂಡುತ್ತದೆ. ಯೆಹೋವನು ತನ್ನ ಕೆಲಸವನ್ನು ಪ್ರಗತಿಪಥದಲ್ಲಿ ನಡೆಸುತ್ತಾ ಇದ್ದಾನೆ. ಅದರಲ್ಲಿ ಒಂದು ಚಿಕ್ಕ ಪಾಲನ್ನು ಮಾಡುವ ಸುಯೋಗ ನಮಗೆ ಸಿಕ್ಕಿರುವುದಕ್ಕಾಗಿ ನಾವು ಹರ್ಷಿಸುತ್ತೇವೆ. ಈಗ ವಿಶೇಷ ಪಯನೀಯರರಾಗಿ ಸೇವೆ ಸಲ್ಲಿಸುತ್ತಿರುವ ನಾವು ‘ಶಕ್ತಿಯನ್ನು ಕೊಡುವಾತನಾದ’ ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ‘ಗುಟ್ಟನ್ನು’ ತಿಳಿದುಕೊಂಡಿದ್ದೇವೆ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ‘ಗುಟ್ಟನ್ನು’ ತಿಳಿದುಕೊಂಡಿದ್ದೇವೆ

[ಪುಟ 4ರಲ್ಲಿರುವ ಭೂಪಟ/ಚಿತ್ರಗಳು]

ಮಡಗಾಸ್ಕರ್‌ ಪ್ರಪಂಚದ ನಾಲ್ಕನೇ ದೊಡ್ಡ ದ್ವೀಪ. ಕೆಂಪು ಮಣ್ಣಿರುವ ಈ ದ್ವೀಪ ‘ವಿಶಾಲ ಕೆಂಪು ದ್ವೀಪ’ ಎಂದೇ ಖ್ಯಾತವಾಗಿದೆ. ಇಲ್ಲಿನ ಜೀವಪ್ರಭೇದಗಳು ವೈವಿಧ್ಯಮಯ

[ಪುಟ 5ರಲ್ಲಿರುವ ಚಿತ್ರ]

ಪ್ರಯಾಸಕರ ಪ್ರಯಾಣ ದೊಡ್ಡ ಸವಾಲಾಗಿತ್ತು

[ಪುಟ 5ರಲ್ಲಿರುವ ಚಿತ್ರ]

ಪ್ರಚಾರಕರೊಂದಿಗೆ ಬೈಬಲ್‌ ಅಧ್ಯಯನಗಳಲ್ಲಿ ಆನಂದಿಸಿದೆವು