ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು

ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು

ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು

“ನಿಮ್ಮ ದೇವರು ದೇವಾಧಿದೇವನೂ ರಾಜರ ಒಡೆಯನೂ ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆಂಬದು ನಿಶ್ಚಯ.”—ದಾನಿ. 2:47.

ಉತ್ತರಿಸುವಿರಾ?

ಭವಿಷ್ಯತ್ತಿನ ಕುರಿತು ಯಾವ ವಿವರಗಳನ್ನು ಯೆಹೋವನು ನಮಗೆ ತಿಳಿಸಿದ್ದಾನೆ?

ಕಾಡುಮೃಗದ ಆರು ತಲೆಗಳು ಯಾವ ಸಾಮ್ರಾಜ್ಯಗಳನ್ನು ಪ್ರತಿನಿಧಿಸುತ್ತವೆ?

ಕಾಡುಮೃಗಕ್ಕೂ ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ಪ್ರತಿಮೆಗೂ ಯಾವ ರೀತಿಯಲ್ಲಿ ಸಂಬಂಧವಿದೆ?

1, 2. (1) ಯಾವ ಪ್ರಶ್ನೆಗೆ ದೇವರು ನಮಗೆ ಉತ್ತರ ತಿಳಿಸಿದ್ದಾನೆ? (2) ಅದಕ್ಕೆ ಕಾರಣವೇನು?

ದೇವರ ರಾಜ್ಯ ಮಾನವ ಆಳ್ವಿಕೆಯನ್ನು ಕೊನೆಗಾಣಿಸುವ ಸಮಯದಲ್ಲಿ ಯಾವ ಸರಕಾರಗಳು ಆಧಿಪತ್ಯ ನಡೆಸುತ್ತಾ ಮೆರೆಯುತ್ತಿರುವವು? “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರಾದ ಯೆಹೋವನು ಉತ್ತರವನ್ನು ನಮಗೆ ತಿಳಿಸಿದ್ದಾನೆ. ಪ್ರವಾದಿ ದಾನಿಯೇಲ ಹಾಗೂ ಅಪೊಸ್ತಲ ಯೋಹಾನ ದಾಖಲಿಸಿರುವ ವಿಷಯಗಳು ಆ ಸರಕಾರಗಳನ್ನು ಗುರುತಿಸಲು ನೆರವಾಗುತ್ತವೆ.

2 ದಾನಿಯೇಲ ಮತ್ತು ಯೋಹಾನನಿಗೆ ದರ್ಶನದಲ್ಲಿ ಹಲವಾರು ಮೃಗಗಳು ಒಂದರ ನಂತರ ಒಂದರಂತೆ ಧಾವಿಸಿ ಬರುವುದನ್ನು ಯೆಹೋವನು ತೋರಿಸಿದನು. ರಾಜ ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ಲೋಹದ ದೊಡ್ಡ ಪ್ರತಿಮೆ ಏನನ್ನು ಸೂಚಿಸುತ್ತದೆ ಎನ್ನುವುದನ್ನು ಸಹ ದೇವರು ದಾನಿಯೇಲನಿಗೆ ತಿಳಿಸಿದನು. ಆ ಎಲ್ಲ ವಿಷಯಗಳನ್ನು ನಮ್ಮ ಪ್ರಯೋಜನಕ್ಕಾಗಿ ಯೆಹೋವನು ಬೈಬಲಿನಲ್ಲಿ ದಾಖಲಿಸಿ ಸಂರಕ್ಷಿಸಿದ್ದಾನೆ. (ರೋಮ. 15:4) ಹೀಗೆ, ಆತನ ಸರಕಾರ ಬಲು ಶೀಘ್ರದಲ್ಲಿ ಮಾನವ ಸರಕಾರಗಳನ್ನು ನಿರ್ನಾಮ ಮಾಡುವುದು ಎಂಬ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಪುಷ್ಟೀಕರಿಸುತ್ತಾನೆ.—ದಾನಿ. 2:44.

3. (1) ಬೈಬಲಿನ ಪ್ರವಾದನೆಗಳನ್ನು ಅರ್ಥಮಾಡಿಕೊಳ್ಳಲು ನಾವು ಯಾವುದನ್ನು ತಿಳಿದುಕೊಳ್ಳಲೇಬೇಕು? (2) ಏಕೆ?

3 ದಾನಿಯೇಲ ಹಾಗೂ ಯೋಹಾನ ತಿಳಿಸಿದ ಪ್ರವಾದನೆಗಳು ಎಂಟು ರಾಜರನ್ನು ಅಥವಾ ಮಾನವ ಆಳ್ವಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಯಾವುದರ ನಂತರ ಯಾವ ಆಳ್ವಿಕೆ ಬರುವುದು ಎಂಬುದನ್ನು ತಿಳಿಯಪಡಿಸುತ್ತವೆ. ಆದರೆ ಈ ಪ್ರವಾದನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದರೆ ಬೈಬಲಿನ ಮೊತ್ತಮೊದಲ ಪ್ರವಾದನೆಯ ಅರ್ಥವನ್ನು ನಾವು ತಿಳಿದುಕೊಳ್ಳಲೇಬೇಕು. ಏಕೆಂದರೆ ಈ ಪ್ರವಾದನೆಯ ಸುತ್ತವೇ ಇತರ ಎಲ್ಲ ಪ್ರವಾದನೆಗಳು ಹೆಣೆದುಕೊಂಡಿವೆ.

ಸರ್ಪದ ಸಂತಾನ ಮತ್ತು ಕಾಡುಮೃಗ

4. (1) ಸ್ತ್ರೀಯ ಸಂತತಿಯಲ್ಲಿ ಯಾರೆಲ್ಲ ಸೇರಿದ್ದಾರೆ? (2) ಆ ಸಂತತಿ ಏನು ಮಾಡುವುದು?

4 ಏದೆನಿನಲ್ಲಿ ದಂಗೆ ಉಂಟಾದ ಕೂಡಲೆ ದೇವರು ಒಂದು ಪ್ರವಾದನೆಯನ್ನು ತಿಳಿಸುತ್ತಾ ಒಬ್ಬ ‘ಸ್ತ್ರೀಯು’ ಒಂದು “ಸಂತಾನ”ವನ್ನು ಅಂದರೆ “ಸಂತತಿ”ಯನ್ನು ಹಡೆಯುವಳು ಎಂದು ಹೇಳಿದನು. * (ಆದಿಕಾಂಡ 3:15 ಓದಿ.) ಆ ಸಂತತಿಯು ಸರ್ಪದ ಅಂದರೆ ಸೈತಾನನ ತಲೆಯನ್ನು ಜಜ್ಜುವುದು. ಸ್ತ್ರೀಯ ಈ ಸಂತತಿಯ ಕುರಿತು ಯೆಹೋವನು ವಿವರಗಳನ್ನು ಹಂತಹಂತವಾಗಿ ತಿಳಿಯಪಡಿಸಿದನು. ಆ ಸಂತತಿ ಅಬ್ರಹಾಮನ ವಂಶದಲ್ಲಿ ಬರುವುದೆಂದು, ಇಸ್ರಾಯೇಲ್‌ ಜನಾಂಗದ ಭಾಗವಾಗಿರುವುದೆಂದು, ಯೆಹೂದ ಕುಲದಿಂದ ಬರುವುದೆಂದು, ರಾಜ ದಾವೀದನ ವಂಶಜನೆಂದು ತಿಳಿಸಿದನು. (ಆದಿ. 22:15-18; 49:10; ಕೀರ್ತ. 89:3, 4; ಲೂಕ 1:30-33) ಈ ಸಂತತಿಯ ಪ್ರಧಾನ ಭಾಗ ಯೇಸು ಕ್ರಿಸ್ತ. (ಗಲಾ. 3:16) ದ್ವಿತೀಯ ಭಾಗ ಕ್ರೈಸ್ತ ಸಭೆಯ ಸದಸ್ಯರಾಗಿರುವ ಅಭಿಷಿಕ್ತರು. (ಗಲಾ. 3:26-29) ಪ್ರಧಾನ ಭಾಗವಾದ ಯೇಸು ಮತ್ತು ದ್ವಿತೀಯ ಭಾಗವಾದ ಅಭಿಷಿಕ್ತರು ಒಟ್ಟುಗೂಡಿ ದೇವರ ಸರಕಾರ ರಚನೆಯಾಗುತ್ತದೆ. ಸೈತಾನನ ತಲೆಯನ್ನು ಜಜ್ಜಲು ಈ ಸರ್ಕಾರವನ್ನೇ ಯೆಹೋವನು ಸಾಧನವಾಗಿ ಉಪಯೋಗಿಸುವನು.—ಲೂಕ 12:32; ರೋಮ. 16:20.

5, 6. (1) ದಾನಿಯೇಲ ಮತ್ತು ಯೋಹಾನ ಎಷ್ಟು ಸಾಮ್ರಾಜ್ಯಗಳ ಕುರಿತು ದರ್ಶನ ಪಡೆದರು? (2) ಪ್ರಕಟನೆ ಪುಸ್ತಕ ತಿಳಿಸುವ ಮೃಗದ ತಲೆಗಳು ಏನನ್ನು ಸೂಚಿಸುತ್ತವೆ?

5 ಏದೆನ್‌ ತೋಟದಲ್ಲಿ ದೇವರು ತಿಳಿಸಿದ ಮೊದಲ ಭವಿಷ್ಯವಾಣಿ ಸೈತಾನನಿಗೂ ಒಂದು “ಸಂತಾನ” ಇರುವುದೆಂದು ಸೂಚಿಸಿತು. ಆ ಸಂತಾನ ಸ್ತ್ರೀಯ ಸಂತತಿಯ ಮೇಲೆ ಹಗೆ ಅಥವಾ ದ್ವೇಷ ಕಾರುವುದೆಂದು ಸಹ ತಿಳಿಸಿತು. ಸರ್ಪದ ಸಂತಾನ ಯಾರಾಗಿದ್ದಾರೆ? ಸೈತಾನನಂತೆ ದೇವರನ್ನೂ ದೇವಜನರನ್ನೂ ದ್ವೇಷಿಸುವ ಎಲ್ಲರು ಸರ್ಪದ ಸಂತಾನವಾಗಿದ್ದಾರೆ. ಮಾನವ ಚರಿತ್ರೆಯುದ್ದಕ್ಕೂ ಸೈತಾನನು ರಾಜಕೀಯ ಶಕ್ತಿ ಅಥವಾ ಸಾಮ್ರಾಜ್ಯಗಳ ರೂಪದಲ್ಲಿ ತನ್ನ ಸಂತಾನವನ್ನು ಸಂಘಟಿಸಿದ್ದಾನೆ. (ಲೂಕ 4:5, 6) ಅವುಗಳಲ್ಲಿ ಕೆಲವು ಸಾಮ್ರಾಜ್ಯಗಳು ದೇವಜನರೊಂದಿಗೆ ಅಂದರೆ ಇಸ್ರಾಯೇಲ್‌ ಜನಾಂಗ ಅಥವಾ ಅಭಿಷಿಕ್ತ ಕ್ರೈಸ್ತ ಸಭೆಯ ವಿರುದ್ಧ ನೇರವಾಗಿ ದ್ವೇಷಕಾರಿವೆ. ಈ ವಿಷಯ ತುಂಬಾ ಗಮನಾರ್ಹ. ಏಕೆಂದರೆ ಪ್ರಪಂಚದಲ್ಲಿ ಲೋಕಶಕ್ತಿಯಾಗಿ ಅನೇಕಾನೇಕ ಸಾಮ್ರಾಜ್ಯಗಳು ಮೆರೆದಿದ್ದರೂ ದಾನಿಯೇಲ ಹಾಗೂ ಯೋಹಾನ ಕಂಡ ದರ್ಶನಗಳಲ್ಲಿ ಕೇವಲ ಎಂಟು ಸಾಮ್ರಾಜ್ಯಗಳ ವಿವರಗಳು ಮಾತ್ರ ಏಕಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ.

6 ಕ್ರಿಸ್ತ ಶಕ 96ರ ಸುಮಾರಿಗೆ ಅಪೊಸ್ತಲ ಯೋಹಾನನು ಯೇಸು ಕ್ರಿಸ್ತನಿಂದ ಭವಿಷ್ಯದ ಕುರಿತಾದ ಹಲವು ವಿಸ್ಮಯಕಾರಿ ದರ್ಶನಗಳನ್ನು ಪಡೆದುಕೊಂಡನು. (ಪ್ರಕ. 1:1) ಅವನು ಕಂಡ ಒಂದು ದರ್ಶನದಲ್ಲಿ ಪಿಶಾಚನನ್ನು ಪ್ರತಿನಿಧಿಸುವ ಘಟಸರ್ಪ ಸಮುದ್ರ ತೀರದಲ್ಲಿ ನಿಂತಿತ್ತು. (ಪ್ರಕಟನೆ 13:1, 2 ಓದಿ.) ಮಾತ್ರವಲ್ಲ, ಏಳು ತಲೆಗಳಿದ್ದ ವಿಲಕ್ಷಣ ಮೃಗವೊಂದು ಸಮುದ್ರದೊಳಗಿಂದ ಏರಿಬಂತು ಮತ್ತು ಅದಕ್ಕೆ ಸೈತಾನ ಮಹಾ ಅಧಿಕಾರ ಕೊಟ್ಟನು. ಅನಂತರ ಕಡುಗೆಂಪು ಬಣ್ಣದ ಮತ್ತೊಂದು ಮೃಗವನ್ನು ಸಹ ಯೋಹಾನ ಕಾಣುತ್ತಾನೆ. ಅದು ಪ್ರಕಟನೆ 13:1 ತಿಳಿಸುವ ಮೃಗದ ವಿಗ್ರಹವಾಗಿದ್ದು ಅದಕ್ಕೂ ಏಳು ತಲೆಗಳು ಇದ್ದವು. ಆ ಏಳು ತಲೆಗಳು “ಏಳು ಮಂದಿ ರಾಜರು” ಅಥವಾ ಏಳು ಸರಕಾರಗಳು ಎಂದು ದೇವದೂತನೊಬ್ಬನು ಯೋಹಾನನಿಗೆ ತಿಳಿಸಿದನು. (ಪ್ರಕ. 13:14, 15; 17:3, 9, 10) ಯೋಹಾನನು ಪ್ರಕಟನೆ ಪುಸ್ತಕವನ್ನು ಬರೆದ ವೇಳೆಗೆ ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದರು. ಒಬ್ಬನು ಆಧಿಪತ್ಯ ನಡೆಸುತ್ತಿದ್ದನು, ಮತ್ತೊಬ್ಬನು ಇನ್ನೂ ಆಧಿಪತ್ಯಕ್ಕೆ ಬಂದಿರಲಿಲ್ಲ. ಈ ಸರಕಾರಗಳು ಅಥವಾ ಲೋಕಶಕ್ತಿಗಳು ಯಾವುವು? ಪ್ರಕಟನೆ 13:1ರಲ್ಲಿ ತಿಳಿಸಲಾಗಿರುವ ಮೃಗದ ಪ್ರತಿಯೊಂದು ತಲೆಯ ಕುರಿತು ನಾವೀಗ ನೋಡೋಣ. ಅದರೊಂದಿಗೆ ಆ ಕೆಲವು ಲೋಕಶಕ್ತಿಗಳ ಬಗ್ಗೆ ದಾನಿಯೇಲ ನೀಡಿರುವ ಸೂಕ್ಷ್ಮ ವಿವರಗಳನ್ನು ಸಹ ನೋಡಲಿರುವೆವು. ಕೆಲವು ಲೋಕಶಕ್ತಿಗಳು ಉದಯಿಸುವ ನೂರಾರು ವರ್ಷಗಳ ಮೊದಲೇ ಅವುಗಳ ಬಗ್ಗೆ ಅವನು ವಿವರಗಳನ್ನು ನೀಡಿದ್ದನು.

ಈಜಿಪ್ಟ್‌ ಮತ್ತು ಅಶ್ಶೂರ—ಮೊದಲ ಎರಡು ತಲೆಗಳು

7. (1) ಮೃಗದ ಮೊದಲ ತಲೆ ಯಾವ ಸಾಮ್ರಾಜ್ಯವನ್ನು ಪ್ರತಿನಿಧಿಸಿತು? (2) ಏಕೆಂದು ವಿವರಿಸಿ.

7 ಮೃಗದ ಮೊದಲ ತಲೆ ಈಜಿಪ್ಟ್‌ ಸಾಮ್ರಾಜ್ಯವನ್ನು ಸೂಚಿಸುತ್ತದೆ. ಏಕೆಂದರೆ, ದೇವಜನರ ವಿರುದ್ಧ ಹಗೆತನ ತೋರಿಸಿದ ಮೊದಲ ದೊಡ್ಡ ಸಾಮ್ರಾಜ್ಯ ಅದಾಗಿತ್ತು. ಸ್ತ್ರೀಯ ಸಂತತಿ ಅಬ್ರಹಾಮನ ವಂಶದಲ್ಲಿ ಹುಟ್ಟಿಬರುವುದೆಂದು ದೇವರು ತಿಳಿಸಿದ್ದನು. ಅಬ್ರಹಾಮನ ವಂಶಜರಾದ ಇಸ್ರಾಯೇಲ್ಯರು ಈಜಿಪ್ಟ್‌ ದೇಶದಲ್ಲಿ ಬಹುಸಂಖ್ಯೆಯಲ್ಲಿ ಹೆಚ್ಚಿದರು. ಆದರೆ ಆ ಜನರ ಮೇಲೆ ಈಜಿಪ್ಟ್‌ ದಬ್ಬಾಳಿಕೆ ನಡೆಸಿತು. ಸಂತತಿ ಹುಟ್ಟುವ ಮೊದಲೇ ದೇವಜನರನ್ನು ಅಳಿಸಿಹಾಕಲು ಸೈತಾನ ಕುತಂತ್ರ ಹೂಡಿದನು. ಹೇಗೆ ಗೊತ್ತೆ? ಇಸ್ರಾಯೇಲ್ಯರಿಗೆ ಹುಟ್ಟುವ ಎಲ್ಲಾ ಗಂಡುಕೂಸುಗಳನ್ನು ಸಾಯಿಸುವಂತೆ ಫರೋಹನ ಮನಸ್ಸನ್ನು ಪ್ರೇರೇಪಿಸಿದನು. ಆದರೆ ಆ ಪ್ರಯತ್ನ ಕೈಗೂಡಲಿಲ್ಲ. ಯೆಹೋವ ದೇವರು ಇಸ್ರಾಯೇಲ್ಯರನ್ನು ಈಜಿಪ್ಟ್‌ನ ಗುಲಾಮಗಿರಿಯಿಂದ ಬಿಡಿಸಿ ಕಾಪಾಡಿದನು. (ವಿಮೋ. 1:15-20; 14:13) ವಾಗ್ದತ್ತ ದೇಶದಲ್ಲಿ ಸ್ವತಂತ್ರ ಜನಾಂಗವಾಗಿ ನೆಲೆಯೂರುವಂತೆ ನೋಡಿಕೊಂಡನು.

8. (1) ಮೃಗದ ಎರಡನೇ ತಲೆ ಯಾವ ರಾಷ್ಟ್ರವನ್ನು ಪ್ರತಿನಿಧಿಸಿತು? (2) ಆ ರಾಷ್ಟ್ರ ಯಾವ ಪ್ರಯತ್ನ ಮಾಡಿತು?

8 ಮೃಗದ ಎರಡನೇ ತಲೆ ಅಶ್ಶೂರ ರಾಷ್ಟ್ರವನ್ನು ಪ್ರತಿನಿಧಿಸಿತು. ಆ ಮಹಾ ಸಾಮ್ರಾಜ್ಯ ಸಹ ದೇವಜನರನ್ನು ನಿರ್ನಾಮ ಮಾಡಲು ಪ್ರಯತ್ನಿಸಿತು. ವಿಗ್ರಹಾರಾಧನೆ ಮಾಡಿ ತನಗೆ ಅವಿಧೇಯರಾದ ಹತ್ತುಕುಲಗಳ ಇಸ್ರಾಯೇಲ್‌ ರಾಜ್ಯವನ್ನು ಶಿಕ್ಷಿಸಲು ಯೆಹೋವನು ಅಶ್ಶೂರವನ್ನು ಬಳಸಿದನು. ಆದರೆ ಆ ದೇಶ ಮುಂದೆ ಯೆರೂಸಲೇಮ್‌ ಮೇಲೂ ಆಕ್ರಮಣ ಮಾಡಿತು. ಯೇಸು ಜನಿಸಲಿದ್ದ ರಾಜಮನೆತನವನ್ನು ಅಳಿಸಿಹಾಕುವುದು ಸೈತಾನನ ಗುರಿಯಾಗಿತ್ತೆಂದು ಕಾಣುತ್ತದೆ. ಏಕೆಂದರೆ, ಆ ಆಕ್ರಮಣ ಯೆಹೋವನ ಉದ್ದೇಶವಾಗಿರಲಿಲ್ಲ. ಹಾಗಾಗಿ ಅವನು ಅಶ್ಶೂರ್ಯ ಸೈನ್ಯವನ್ನು ನಾಶಮಾಡಿ ತನ್ನ ಜನರನ್ನು ಸಂರಕ್ಷಿಸಿದನು.—2 ಅರ. 19:32-35; ಯೆಶಾ. 10:5, 6, 12-15.

ಬಾಬೆಲ್‌—ಮೂರನೇ ತಲೆ

9, 10. (1) ಬಾಬೆಲಿನವರು ಏನು ಮಾಡುವಂತೆ ಯೆಹೋವನು ಅನುಮತಿಸಿದನು? (2) ದೇವಾರಾಧನೆ ಹಾಗೂ ಮೆಸ್ಸೀಯನ ಕುರಿತ ಪ್ರವಾದನೆ ನೆರವೇರಬೇಕಾದರೆ ಯಾವ ಸಂಗತಿಗಳು ಘಟಿಸಬೇಕಿತ್ತು?

9 ಯೋಹಾನನು ದರ್ಶನದಲ್ಲಿ ನೋಡಿದ ಮೃಗದ ಮೂರನೇ ತಲೆ ಬಾಬೆಲ್‌ ಸಾಮ್ರಾಜ್ಯವನ್ನು ಪ್ರತಿನಿಧಿಸಿತು. ಯೆರೂಸಲೇಮನ್ನು ಸೋಲಿಸಿ ತನ್ನ ಜನರನ್ನು ಸೆರೆ ಹಿಡಿದುಕೊಂಡು ಹೋಗುವಂತೆ ಯೆಹೋವನು ಆ ಸಾಮ್ರಾಜ್ಯವನ್ನು ಅನುಮತಿಸಿದನು. ಇಸ್ರಾಯೇಲ್ಯರು ತನ್ನ ಮಾತನ್ನು ಮೀರಿ ನಡೆದರೆ ಆ ರೀತಿಯ ಅವಮಾನಕರ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆಂದು ಯೆಹೋವನು ಮೊದಲೇ ಎಚ್ಚರಿಸಿದ್ದನು. (2 ಅರ. 20:16-18) ಮಾತ್ರವಲ್ಲ, ಇಸ್ರಾಯೇಲ್ಯರ ಯಾವ ಅರಸನೂ ಇನ್ನು ಮುಂದೆ “ಯೆಹೋವನ ಸಿಂಹಾಸನದಲ್ಲಿ” ಕುಳಿತು ಯೆರೂಸಲೇಮಿನಿಂದ ಆಳ್ವಿಕೆ ನಡೆಸುವುದಿಲ್ಲ ಎಂದು ಸಹ ಹೇಳಿದನು. (1 ಪೂರ್ವ. 29:23) ಆದರೆ ದಾವೀದ ರಾಜನ ವಂಶದಲ್ಲಿ ಹುಟ್ಟುವ ಹಾಗೂ ನಿಜವಾಗಿಯೂ ರಾಜ್ಯಕ್ಕೆ “ಬಾಧ್ಯ”ನಾಗಿರುವ ಒಬ್ಬನು ಮುಂದೆ ಆ ಅಧಿಕಾರವನ್ನು ಪಡೆದುಕೊಳ್ಳುವನು ಎಂದು ವಚನ ಕೊಟ್ಟನು.—ಯೆಹೆ. 21:25-27.

10 ಆ ಬಾಧ್ಯಸ್ಥನು ಅಂದರೆ ಮೆಸ್ಸೀಯನಾಗಿ ಅಭಿಷೇಕಗೊಂಡವನು ಆಗಮಿಸುವ ಸಮಯದಲ್ಲಿ ಯೆಹೂದ್ಯರು ಯೆರೂಸಲೇಮಿನ ಆಲಯದಲ್ಲಿ ದೇವಾರಾಧನೆ ಮಾಡುತ್ತಿರುವರೆಂದು ಇನ್ನೊಂದು ಪ್ರವಾದನೆ ಸೂಚಿಸಿತು. (ದಾನಿ. 9:24-27) ಇಸ್ರಾಯೇಲ್ಯರು ಬಾಬೆಲಿನ ಸೆರೆಯಾಳುಗಳಾಗುವ ಎಷ್ಟೋ ವರ್ಷಗಳ ಮೊದಲೇ ಮತ್ತೊಂದು ಪ್ರವಾದನೆ ಮೆಸ್ಸೀಯನು ಬೇತ್ಲೆಹೇಮ್‌ನಲ್ಲಿ ಹುಟ್ಟುತ್ತಾನೆಂದು ತಿಳಿಸಿತು. (ಮೀಕ 5:2) ಈ ಎರಡೂ ಪ್ರವಾದನೆಗಳು ನೆರವೇರಬೇಕಾದರೆ ಬಾಬೆಲಿನ ಸೆರೆಯಾಳುಗಳಾಗಿದ್ದ ಯೆಹೂದ್ಯರು ಬಿಡುಗಡೆ ಹೊಂದಿ ತಾಯ್ನಾಡಿಗೆ ಮರಳಿ ಆಲಯವನ್ನು ಪುನಃ ಕಟ್ಟಬೇಕಿತ್ತು. ಆದರೆ ಅದು ಸುಲಭದ ಮಾತಾಗಿರಲಿಲ್ಲ. ಒಮ್ಮೆ ಸೆರೆ ಹಿಡಿದವರನ್ನು ಬಾಬೆಲ್‌ ಯಾವತ್ತೂ ಬಿಡುಗಡೆ ಮಾಡುತ್ತಿರಲಿಲ್ಲ. ಹಾಗಾದರೆ ದೇವಜನರು ಬಿಡುಗಡೆ ಹೊಂದಲು ಸಾಧ್ಯವಿತ್ತೇ? ಉತ್ತರವನ್ನು ಯೆಹೋವ ದೇವರು ಪ್ರವಾದಿಗಳ ಮೂಲಕ ತಿಳಿಸಿದನು.—ಆಮೋ. 3:7.

11. ಬಾಬೆಲ್‌ ಸಾಮ್ರಾಜ್ಯವನ್ನು ಯಾವ ವಿಭಿನ್ನ ರೀತಿಯಲ್ಲಿ ಚಿತ್ರಿಸಲಾಗಿದೆ? (ಪಾದಟಿಪ್ಪಣಿ ನೋಡಿ.)

11 ಬಾಬೆಲಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ದಾನಿಯೇಲನೂ ಒಬ್ಬನು. (ದಾನಿ. 1:1-6) ಬಾಬೆಲಿನ ನಂತರ ಯಾವ ಲೋಕಶಕ್ತಿಗಳು ಅಧಿಕಾರಕ್ಕೆ ಬರುವವೆಂದು ಯೆಹೋವನು ಪ್ರವಾದಿ ದಾನಿಯೇಲನ ಮೂಲಕ ತಿಳಿಯಪಡಿಸಿದನು. ಆ ಲೋಕಶಕ್ತಿಗಳಿಗೆ ಬೇರೆ ಬೇರೆ ಹೋಲಿಕೆ ನೀಡಿ ರಹಸ್ಯವನ್ನು ಬಿಡಿಸಿಟ್ಟನು. ಉದಾಹರಣೆಗೆ, ಬಾಬೆಲಿನ ರಾಜ ನೆಬೂಕದ್ನೆಚ್ಚರನಿಗೆ ಕನಸು ಬೀಳುವಂತೆ ಮಾಡಿ ಬೇರೆ ಬೇರೆ ಲೋಹಗಳಿಂದ ಮಾಡಲಾದ ದೊಡ್ಡ ಪ್ರತಿಮೆಯನ್ನು ಕನಸಿನಲ್ಲಿ ತೋರಿಸಿದನು. (ದಾನಿಯೇಲ 2:1, 19, 31-38 ಓದಿ.) ಆ ಪ್ರತಿಮೆಯ ಬಂಗಾರದ ತಲೆ ಬಾಬೆಲ್‌ ಸಾಮ್ರಾಜ್ಯವನ್ನೂ * ಬೆಳ್ಳಿಯ ಎದೆತೋಳುಗಳು ಬಾಬೆಲಿನ ನಂತರ ಬರಲಿದ್ದ ಲೋಕಶಕ್ತಿಯನ್ನೂ ಸೂಚಿಸುತ್ತದೆಂದು ಯೆಹೋವನು ದಾನಿಯೇಲನ ಮೂಲಕ ತಿಳಿಯಪಡಿಸಿದನು. ಬಾಬೆಲಿನ ನಂತರ ಯಾವ ಲೋಕಶಕ್ತಿ ಬರಲಿತ್ತು? ದೇವಜನರ ವಿಚಾರದಲ್ಲಿ ಅದು ಏನು ಮಾಡಿತು?

ಮೇದ್ಯ-ಪಾರಸೀಯ—ನಾಲ್ಕನೇ ತಲೆ

12, 13. (1) ಬಾಬೆಲಿನ ಸೋಲಿನ ಕುರಿತು ಯೆಹೋವನು ಯಾವ ಪ್ರವಾದನೆ ತಿಳಿಸಿದನು? (2) ಮೇದ್ಯ-ಪಾರಸೀಯವನ್ನು ಮೃಗದ ನಾಲ್ಕನೇ ತಲೆಯಾಗಿ ವರ್ಣಿಸಿರುವುದು ಏಕೆ ಸೂಕ್ತವಾಗಿದೆ?

12 ಯಾವ ಲೋಕಶಕ್ತಿ ಬಾಬೆಲನ್ನು ಸೋಲಿಸುತ್ತದೆ ಎನ್ನುವುದನ್ನು ದಾನಿಯೇಲ ಬದುಕಿದ್ದ ನೂರಕ್ಕೂ ಹೆಚ್ಚು ವರ್ಷಗಳಿಗಿಂತ ಮುಂಚೆಯೇ ಯೆಹೋವ ದೇವರು ಪ್ರವಾದಿ ಯೆಶಾಯನ ಮೂಲಕ ತಿಳಿಸಿದನು. ಆ ಸಾಮ್ರಾಜ್ಯವನ್ನು ಯಾವ ರೀತಿಯಲ್ಲಿ ಸೋಲಿಸಲಾಗುತ್ತದೆ ಎಂಬ ನಿರ್ದಿಷ್ಟ ವಿವರಗಳನ್ನು ಸಹ ನೀಡಿದನು. ಅಲ್ಲದೆ ಅದನ್ನು ಸೋಲಿಸುವ ಅರಸನ ಹೆಸರನ್ನೂ ತಿಳಿಯಪಡಿಸಿದನು. ಅವನೇ ಪಾರಸೀಯನಾದ ಕೋರೆಷ. (ಯೆಶಾ. 44:28–45:2) ಮೇದ್ಯ-ಪಾರಸೀಯ ಲೋಕ ಶಕ್ತಿಯ ಕುರಿತು ದಾನಿಯೇಲ ಇನ್ನೂ ಎರಡು ದರ್ಶನಗಳನ್ನು ಪಡೆದುಕೊಂಡನು. ಒಂದು ದರ್ಶನವು ಆ ಸಾಮ್ರಾಜ್ಯವನ್ನು ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿರುವ ಕರಡಿಯಾಗಿ ಚಿತ್ರಿಸಿತು. “ಬಹು ಮಾಂಸವನ್ನು ತಿನ್ನು” ಎಂದು ಅದಕ್ಕೆ ಹೇಳಲಾಯಿತು. (ದಾನಿ. 7:5) ಇನ್ನೊಂದು ದರ್ಶನ ಈ ಉಭಯ ಲೋಕಶಕ್ತಿಯನ್ನು ಎರಡು ಕೊಂಬಿನ ಟಗರಾಗಿ ಚಿತ್ರಿಸಿತು.—ದಾನಿ. 8:3, 20.

13 ಬಾಬೆಲನ್ನು ಸೋಲಿಸಿ ಇಸ್ರಾಯೇಲ್ಯರನ್ನು ತಾಯ್ನಾಡಿಗೆ ಮರಳಿ ಕರೆತರುವ ಪ್ರವಾದನೆಯನ್ನು ಈಡೇರಿಸಲು ಯೆಹೋವನು ಮೇದ್ಯ-ಪಾರಸೀಯ ಸಾಮ್ರಾಜ್ಯವನ್ನು ಬಳಸಿದನು. (2 ಪೂರ್ವ. 36:22, 23) ಆದರೆ ಈ ಸಾಮ್ರಾಜ್ಯ ನಂತರ ದೇವಜನರನ್ನು ನಿರ್ನಾಮ ಮಾಡಲು ಮುಂದಾಯಿತು. ಪಾರಸೀಯದ ಪ್ರಧಾನಮಂತ್ರಿ ಹಾಮಾನ ಹೂಡಿದ್ದ ಒಳಸಂಚನ್ನು ಎಸ್ತೇರಳು ಪುಸ್ತಕ ವಿವರಿಸುತ್ತದೆ. ಪಾರಸೀಯ ಸಾಮ್ರಾಜ್ಯದ ಉದ್ದಗಲಕ್ಕೂ ನೆಲೆಸಿದ್ದ ಯೆಹೂದ್ಯರನ್ನು ಮುಗಿಸಿಬಿಡಲು ಅವನು ಕಾರ್ಯಯೋಜನೆ ಸಿದ್ಧಪಡಿಸಿ ಜನಾಂಗೀಯ ಹತ್ಯೆಗೆ ತಾರೀಖನ್ನು ಕೂಡ ನಿಗದಿಪಡಿಸಿದ್ದನು. ಆದರೆ ಯೆಹೋವನು ಮಧ್ಯೆ ಪ್ರವೇಶಿಸಿ ತನ್ನ ಜನರು ಸೈತಾನನ ಸಂತಾನದ ಕಡುದ್ವೇಷಕ್ಕೆ ಬಲಿಯಾಗದಂತೆ ಕಾಪಾಡಿದನು. (ಎಸ್ತೇ. 1:1-3; 3:8, 9; 8:3, 9-14) ಪ್ರಕಟನೆ ಪುಸ್ತಕದಲ್ಲಿ ಮೇದ್ಯ-ಪಾರಸೀಯವನ್ನು ಮೃಗದ ನಾಲ್ಕನೇ ತಲೆಯಾಗಿ ವರ್ಣಿಸಿರುವುದು ಸೂಕ್ತವಾಗಿಯೇ ಇದೆ.

ಗ್ರೀಸ್‌—ಐದನೇ ತಲೆ

14, 15. ಗ್ರೀಸ್‌ ಸಾಮ್ರಾಜ್ಯದ ಬಗ್ಗೆ ಯೆಹೋವನು ಯಾವ ವಿವರಗಳನ್ನು ತಿಳಿಸಿದನು?

14 ಪ್ರಕಟನೆ ಪುಸ್ತಕ ತಿಳಿಸುವ ಕಾಡುಮೃಗದ ಐದನೇ ತಲೆ ಗ್ರೀಸ್‌ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತದೆ. ರಾಜ ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ದೊಡ್ಡ ಪ್ರತಿಮೆಯ ತಾಮ್ರದ ಹೊಟ್ಟೆಸೊಂಟ ಈ ಲೋಕಶಕ್ತಿಯನ್ನೇ ಸೂಚಿಸುತ್ತದೆ. ದಾನಿಯೇಲ ಪಡೆದುಕೊಂಡ ಬೇರೆ ಎರಡು ದರ್ಶನಗಳು ಈ ಸಾಮ್ರಾಜ್ಯದ ಕುರಿತು ಹೆಚ್ಚಿನ ವಿವರಗಳನ್ನು ನೀಡಿದವು. ಮಾತ್ರವಲ್ಲ ಅದರ ಮಹಾ ಚಕ್ರವರ್ತಿಯ ಬಗ್ಗೆ ಸಹ ತಿಳಿಸಿದವು.

15 ದಾನಿಯೇಲ ಕಂಡ ಒಂದು ದರ್ಶನದಲ್ಲಿ ಗ್ರೀಸ್‌ ಸಾಮ್ರಾಜ್ಯವನ್ನು ನಾಲ್ಕು ರೆಕ್ಕೆಗಳಿದ್ದ ಚಿರತೆಯಂತೆ ಚಿತ್ರಿಸಲಾಗಿತ್ತು. ಆ ಸಾಮ್ರಾಜ್ಯ ಕ್ಷಿಪ್ರ ವೇಗದಲ್ಲಿ ತನ್ನ ಭೂಪ್ರದೇಶವನ್ನು ವಿಸ್ತರಿಸುತ್ತದೆ ಎನ್ನುವುದನ್ನು ಇದು ಸೂಚಿಸಿತು. (ದಾನಿ. 7:6) ಇನ್ನೊಂದು ದರ್ಶನದಲ್ಲಿ ದೊಡ್ಡ ಕೊಂಬಿನ ಹೋತವೊಂದು ಎರಡು ಕೊಂಬಿನ ಟಗರನ್ನು (ಮೇದ್ಯ-ಪಾರಸೀಯ) ದಿಢೀರಾಗಿ ಕೊಲ್ಲುವುದನ್ನು ಅವನು ಕಂಡನು. ಹೋತ ಗ್ರೀಸನ್ನು ಸೂಚಿಸುತ್ತದೆಂದು, ದೊಡ್ಡ ಕೊಂಬು ಅದರ ರಾಜರಲ್ಲಿ ಒಬ್ಬನನ್ನು ಸೂಚಿಸುತ್ತದೆಂದು ಯೆಹೋವನು ದಾನಿಯೇಲನಿಗೆ ತಿಳಿಸಿದನು. ಹೋತದ ದೊಡ್ಡ ಕೊಂಬು ಮುರಿದು ಆ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದವು ಎಂದು ದಾನಿಯೇಲ ಮುಂದೆ ವಿವರಿಸಿದನು. ಗ್ರೀಸ್‌ ಲೋಕಶಕ್ತಿಯಾಗಿ ಉದ್ಭವಿಸುವ ಸುಮಾರು ಇನ್ನೂರು ವರ್ಷಗಳ ಮೊದಲೇ ಈ ಪ್ರವಾದನೆ ಬರೆಯಲ್ಪಟ್ಟಿದ್ದರೂ ಈ ವಿವರ ಚಾಚೂತಪ್ಪದೆ ನೆರವೇರಿತು. ಹೋತದ ದೊಡ್ಡ ಕೊಂಬು ಗ್ರೀಸ್‌ನ ಚಕ್ರವರ್ತಿ ಮಹಾ ಅಲೆಗ್ಸಾಂಡರನಾಗಿದ್ದನು. ಅವನು ಮೇದ್ಯ-ಪಾರಸೀಯರ ವಿರುದ್ಧ ದಂಡೆತ್ತಿ ಹೋಗಿ ಆ ಸಾಮ್ರಾಜ್ಯವನ್ನು ಮಣಿಸಿದನು. ಪರಾಕ್ರಮಿ ಎಂದು ಖ್ಯಾತಿ ಪಡೆದಿದ್ದ ಅಲೆಗ್ಸಾಂಡರ್‌ ಕೇವಲ 32 ಪ್ರಾಯದಲ್ಲಿ ದಿಢೀರ್‌ ಮರಣಕ್ಕೆ ತುತ್ತಾದಾಗ ಗ್ರೀಸ್‌ನ ದೊಡ್ಡ ಕೊಂಬು ಮುರಿಯಿತು. ಅನಂತರ ಆ ಸಾಮ್ರಾಜ್ಯ ಅವನ ನಾಲ್ಕು ಸೇನಾಪತಿಗಳ ನಡುವೆ ಹಂಚಿಹೋಯಿತು.ದಾನಿಯೇಲ 8:20-22 ಓದಿ.

16. ನಾಲ್ಕನೆಯ ಆ್ಯಂಟಿಯಾಕಸ್‌ ಏನು ಮಾಡಿದನು?

16 ಪಾರಸೀಯವನ್ನು ಸೋಲಿಸಿದ ಗ್ರೀಸ್‌ ಸಾಮ್ರಾಜ್ಯವು ನಂತರ ದೇವಜನರ ನಾಡನ್ನು ಆಳಿತು. ಆ ಕಾಲದಷ್ಟಕ್ಕೆ ಯೆಹೂದ್ಯರು ವಾಗ್ದತ್ತ ದೇಶಕ್ಕೆ ಹಿಂದಿರುಗಿ ಬಂದು ಯೆರೂಸಲೇಮಿನ ಆಲಯವನ್ನು ಪುನಃ ಕಟ್ಟಿದ್ದರು. ಅವರು ಆಗಲೂ ದೇವಜನರಾಗಿದ್ದರು ಮತ್ತು ಆಲಯ ಅವರ ಆರಾಧನೆಯ ಕೇಂದ್ರಸ್ಥಾನವಾಗಿತ್ತು. ಆದರೆ ಕಾಡುಮೃಗದ ಐದನೇ ತಲೆಯಾಗಿದ್ದ ಗ್ರೀಸ್‌ ಕ್ರಿ.ಪೂ. ಎರಡನೇ ಶತಮಾನದಲ್ಲಿ ದೇವಜನರ ಮೇಲೆ ದಂಡೆತ್ತಿ ಹೋಗುವ ಮೂಲಕ ದ್ವೇಷಕಾರಿತು. ಅಲೆಗ್ಸಾಂಡರ್‌ನ ನಂತರ ನಾಲ್ಕಾಗಿ ಹಂಚಿಹೋಗಿದ್ದ ಗ್ರೀಸ್‌ ಸಾಮ್ರಾಜ್ಯದಲ್ಲಿ ತಲೆಯೆತ್ತಿದ ನಾಲ್ಕನೆಯ ಆ್ಯಂಟಿಯಾಕಸ್‌ ಎಂಬವನು ಯೆರೂಸಲೇಮಿನ ಆಲಯದಲ್ಲಿ ವಿಧರ್ಮಿ ಬಲಿಪೀಠವನ್ನು ನಿರ್ಮಿಸಿದನು. ಯೆಹೂದ್ಯರ ಧಾರ್ಮಿಕ ಆಚಾರಗಳನ್ನು ಅನುಸರಿಸುವವರನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಕಟ್ಟಳೆ ವಿಧಿಸಿದನು. ದೇವಜನರ ವಿರುದ್ಧ ಸೈತಾನನ ಸಂತಾನದ ಹಗೆ ಎಷ್ಟಿತ್ತೆಂದು ಗಮನಿಸಿ! ಆದರೆ ಗ್ರೀಸ್‌ನ ಅಟ್ಟಹಾಸ ಹೆಚ್ಚು ಸಮಯ ಮುಂದುವರಿಯಲಿಲ್ಲ. ಬೇರೊಂದು ಲೋಕಶಕ್ತಿ ಉದಯವಾಯಿತು. ಕಾಡುಮೃಗದ ಆರನೇ ತಲೆಯಾಗಿ ಯಾವ ಸಾಮ್ರಾಜ್ಯ ಬಂತು?

ರೋಮ್‌—“ಭಯಂಕರ, ಹೆದರಿಸುವಂಥ” ಆರನೇ ತಲೆ

17. ಆದಿಕಾಂಡ 3:15ರ ಪ್ರವಾದನೆಯನ್ನು ನೆರವೇರಿಸುವುದರಲ್ಲಿ ಆರನೇ ತಲೆ ಯಾವ ಪ್ರಧಾನ ಪಾತ್ರ ವಹಿಸಿತು?

17 ಕಾಡುಮೃಗದ ಬಗ್ಗೆ ಯೋಹಾನನು ದರ್ಶನ ಪಡೆದುಕೊಂಡಾಗ ರೋಮ್‌ ಲೋಕಶಕ್ತಿಯಾಗಿ ವಿಜೃಂಭಿಸುತ್ತಿತ್ತು. (ಪ್ರಕ. 17:10) ಈ ಆರನೇ ತಲೆ ಆದಿಕಾಂಡ 3:15ರ ಪ್ರವಾದನೆಯನ್ನು ನೆರವೇರಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿತು. ಸೈತಾನನು ರೋಮ್‌ ಸಾಮ್ರಾಜ್ಯದ ಆಡಳಿತಾಧಿಕಾರಿಗಳನ್ನು ಬಳಸಿ ವಾಗ್ದತ್ತ ಸಂತತಿಯ “ಹಿಮ್ಮಡಿಯನ್ನು” ಕಚ್ಚಿದನು. ಹೇಗೆ? ಯೇಸುವಿನ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಮರಣದಂಡನೆ ವಿಧಿಸುವ ಮೂಲಕ. (ಮತ್ತಾ. 27:26) ಆದರೆ ಹಿಮ್ಮಡಿ ಗಾಯ ಬೇಗನೆ ಗುಣವಾಯಿತು. ಯೆಹೋವನು ಯೇಸುವನ್ನು ಪುನರುತ್ಥಾನ ಮಾಡಿದನು.

18. (1) ಯೆಹೋವನು ಯಾವ ಹೊಸ ಜನಾಂಗವನ್ನು ಆರಿಸಿಕೊಂಡನು? (2) ಯಾವ ಕಾರಣಕ್ಕಾಗಿ? (3) ಸೈತಾನನ ಸಂತಾನ ಯಾವ ರೀತಿಯಲ್ಲಿ ಸ್ತ್ರೀಯ ಸಂತತಿಯ ಮೇಲೆ ಹಗೆ ಕಾರುವುದನ್ನು ಮುಂದುವರಿಸಿತು?

18 ಯೇಸುವಿಗೆ ಮರಣದಂಡನೆ ವಿಧಿಸಲು ಕುಯುಕ್ತಿ ನಡೆಸಿ ರೋಮ್‌ಗೆ ನೆರವಾದವರು ಬೇರೆ ಯಾರೂ ಅಲ್ಲ. ಇಸ್ರಾಯೇಲಿನ ಧರ್ಮಗುರುಗಳೇ. ಹೆಚ್ಚುಕಡಿಮೆ ಇಡೀ ಇಸ್ರಾಯೇಲ್‌ ಜನಾಂಗವೇ ಯೇಸುವನ್ನು ಮೆಸ್ಸೀಯನೆಂದು ಸ್ವೀಕರಿಸದೆ ನಿರಾಕರಿಸಿತು. ಹಾಗಾಗಿ ಸ್ವಕೀಯ ಜನರಾಗಿದ್ದ ಆ ಜನಾಂಗವನ್ನು ಯೆಹೋವನು ಪರಿತ್ಯಜಿಸಿದನು. (ಮತ್ತಾ. 23:38; ಅ. ಕಾ. 2:22, 23) ಅದರ ಬದಲು ಹೊಸ ಜನಾಂಗವಾಗಿ “ದೇವರ ಇಸ್ರಾಯೇಲ್ಯ”ರನ್ನು ಆರಿಸಿಕೊಂಡನು. (ಗಲಾ. 3:26-29; 6:16) ಅಭಿಷಿಕ್ತ ಕ್ರೈಸ್ತರ ಸಭೆಯಾಗಿದ್ದ ಆ ಹೊಸ ಜನಾಂಗದಲ್ಲಿ ಯೆಹೂದ್ಯರು ಮತ್ತು ಅನ್ಯಜನಾಂಗದವರು ಇದ್ದರು. (ಎಫೆ. 2:11-18) ಯೇಸುವಿನ ಮರಣ ಹಾಗೂ ಪುನರುತ್ಥಾನದ ನಂತರವೂ ಸೈತಾನನ ಸಂತಾನ ಸ್ತ್ರೀಯ ಸಂತತಿಯ ಮೇಲೆ ಹಗೆ ಕಾರುವುದನ್ನು ಮುಂದುವರಿಸಿತು. ಸಂತತಿಯ ದ್ವಿತೀಯ ಭಾಗವಾಗಿದ್ದ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಅಳಿಸಿಹಾಕಲು ರೋಮ್‌ ಹಲವಾರು ಬಾರಿ ಪ್ರಯತ್ನಿಸಿತು. *

19. (1) ಆರನೇ ಲೋಕಶಕ್ತಿಯನ್ನು ದಾನಿಯೇಲ ಹೇಗೆ ವರ್ಣಿಸಿದನು? (2) ಇನ್ನೊಂದು ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಿದ್ದೇವೆ?

19 ರಾಜ ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ದೊಡ್ಡ ಪ್ರತಿಮೆಯ ಕಬ್ಬಿಣದ ಕಾಲುಗಳು ರೋಮ್‌ ಸಾಮ್ರಾಜ್ಯವನ್ನು ಸೂಚಿಸಿದವು. (ದಾನಿ. 2:33) ದಾನಿಯೇಲ ಕಂಡ ಮತ್ತೊಂದು ದರ್ಶನ ರೋಮ್‌ ಸಾಮ್ರಾಜ್ಯವನ್ನು ಮಾತ್ರವಲ್ಲ ಅದರೊಳಗಿಂದ ಉದಯಿಸುವ ಮತ್ತೊಂದು ಲೋಕಶಕ್ತಿಯ ಕುರಿತು ವಿವರಿಸಿತು. (ದಾನಿಯೇಲ 7:7, 8 ಓದಿ.) ನೂರಾರು ವರ್ಷಗಳ ವರೆಗೆ ಶತ್ರುಗಳಿಗೆ ರೋಮ್‌ ಸಾಮ್ರಾಜ್ಯ “ಭಯಂಕರ, ಹೆದರಿಸುವಂಥದು, ಅಧಿಕಬಲವುಳ್ಳದ್ದು” ಆಗಿತ್ತು. ಆದರೆ ಕ್ರಮೇಣ ಆ ಸಾಮ್ರಾಜ್ಯದೊಳಗಿಂದ “ಹತ್ತು ಕೊಂಬು”ಗಳು ಮೊಳೆಯುತ್ತವೆ ಹಾಗೂ ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆತು ವಿಜಯಮಾನವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರವಾದನೆ ತಿಳಿಸಿತು. ಈ ಹತ್ತು ಕೊಂಬುಗಳು ಯಾವುದನ್ನು ಸೂಚಿಸುತ್ತವೆ? ಚಿಕ್ಕ ಕೊಂಬು ಯಾವುದನ್ನು ಪ್ರತಿನಿಧಿಸುತ್ತದೆ? ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ದೊಡ್ಡ ಪ್ರತಿಮೆಯ ಯಾವ ಅಂಗ ಈ ಚಿಕ್ಕ ಕೊಂಬನ್ನು ಪ್ರತಿನಿಧಿಸುತ್ತದೆ? ಈ ಪ್ರಶ್ನೆಗಳಿಗೆ ಪುಟ 14ರಲ್ಲಿರುವ ಲೇಖನ ಉತ್ತರ ನೀಡುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 4 ಸ್ತ್ರೀಯು ಯೆಹೋವನ ಸ್ವರ್ಗೀಯ ಸಂಘಟನೆಯನ್ನು ಸೂಚಿಸುತ್ತದೆ. ಸ್ವರ್ಗೀಯ ಜೀವಿಗಳಿಂದ ಕೂಡಿರುವ ಈ ಸಂಘಟನೆಯನ್ನು ಯೆಹೋವನ ಪತ್ನಿ ಎಂದು ಬೈಬಲ್‌ ವರ್ಣಿಸುತ್ತದೆ.—ಯೆಶಾ. 54:1; ಗಲಾ. 4:26; ಪ್ರಕ. 12:1, 2.

^ ಪ್ಯಾರ. 11 ದಾನಿಯೇಲ ಪುಸ್ತಕದಲ್ಲಿ ಬಾಬೆಲನ್ನು ಪ್ರತಿಮೆಯ ಬಂಗಾರದ ತಲೆಯಾಗಿಯೂ ಪ್ರಕಟನೆ ಪುಸ್ತಕದಲ್ಲಿ ಕಾಡುಮೃಗದ ಮೂರನೇ ತಲೆಯಾಗಿಯೂ ಚಿತ್ರಿಸಲಾಗಿದೆ. ಪುಟ 12-13ರಲ್ಲಿರುವ ಚಾರ್ಟ್‌ ನೋಡಿ.

^ ಪ್ಯಾರ. 18 ರೋಮ್‌ ಕ್ರಿ. ಶ. 70ರಲ್ಲಿ ಯೆರೂಸಲೇಮನ್ನು ನಾಶಮಾಡಿದರೂ ಆ ಘಟನೆ ಆದಿಕಾಂಡ 3:15ರ ನೆರವೇರಿಕೆಯ ಭಾಗವಲ್ಲ. ಏಕೆಂದರೆ, ಆ ಸಮಯದಷ್ಟಕ್ಕೆ ಇಸ್ರಾಯೇಲ್ಯರು ದೇವಜನರಾಗಿರಲಿಲ್ಲ.

[ಅಧ್ಯಯನ ಪ್ರಶ್ನೆಗಳು]