ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಯೇ ನಿಮ್ಮ ಮುಖ್ಯ ಗುರಿಯಾಗಿರಲಿ

ಯೆಹೋವನ ಸೇವೆಯೇ ನಿಮ್ಮ ಮುಖ್ಯ ಗುರಿಯಾಗಿರಲಿ

ಯೆಹೋವನ ಸೇವೆಯೇ ನಿಮ್ಮ ಮುಖ್ಯ ಗುರಿಯಾಗಿರಲಿ

“ನನ್ನ ಬಾಯಿ ನಿನ್ನ ನೀತಿಯನ್ನೂ ರಕ್ಷಣೆಯನ್ನೂ ಹಗಲೆಲ್ಲಾ ವರ್ಣಿಸುತ್ತಿರುವದು.”—ಕೀರ್ತ. 71:15.

ಉತ್ತರಿಸುವಿರಾ?

ನೋಹ, ಮೋಶೆ, ಯೆರೆಮೀಯ ಮತ್ತು ಪೌಲನು ದೇವರ ಸೇವೆಗೆ ಆದ್ಯತೆ ಕೊಟ್ಟದ್ದೇಕೆ?

ನಿಮ್ಮ ಜೀವನದಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕೆಂದು ನಿರ್ಣಯಿಸಲು ಯಾವುದು ಸಹಾಯ ಮಾಡುವುದು?

ಯೆಹೋವನ ಸೇವೆಗೆ ಆದ್ಯತೆ ಕೊಡಲು ನೀವೇಕೆ ನಿರ್ಣಯಿಸಿದ್ದೀರಿ?

1, 2. (1) ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದೆಂದರೆ ನಾವಾತನಿಗೆ ಏನು ಹೇಳಿದಂತೆ? (2) ನೋಹ, ಮೋಶೆ, ಯೆರೆಮೀಯ, ಪೌಲ ಯಾವುದಕ್ಕೆ ಆದ್ಯತೆ ಕೊಟ್ಟರು ಎಂದು ತಿಳಿದುಕೊಳ್ಳುವುದರಿಂದ ನಮಗೇನು ಪ್ರಯೋಜನ?

ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದುವುದು ಯೇಸುವನ್ನು ಹಿಂಬಾಲಿಸುವವರು ತಮ್ಮ ಜೀವನದಲ್ಲಿ ಮಾಡುವ ಅತಿ ಗಂಭೀರ ನಿರ್ಣಯವಾಗಿದೆ. ಏಕೆಂದರೆ ಅದು ದೇವರಿಗೆ ಅವರು ‘ಯೆಹೋವನೇ ಇನ್ನು ಮುಂದೆ ನೀನೇ ನನ್ನ ಧಣಿ. ನಾನು ನಿನ್ನ ಸೇವಕ. ನನ್ನ ಸಮಯವನ್ನು ಯಾವುದಕ್ಕಾಗಿ ಉಪಯೋಗಿಸಬೇಕು, ಜೀವನದಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕು, ನನ್ನ ಶಕ್ತಿ-ಸಂಪತ್ತು, ಕೌಶಲಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನೀನೇ ನಿರ್ಣಯಿಸು’ ಎಂದು ಹೇಳುವಂತಿದೆ.

2 ನೀವು ಸಮರ್ಪಣೆ ಮಾಡಿಕೊಂಡಿರುವ ಕ್ರೈಸ್ತರಾಗಿರುವಲ್ಲಿ ಯೆಹೋವನಿಗೆ ಇದೇ ರೀತಿ ಮಾತುಕೊಟ್ಟಿದ್ದೀರಿ. ಈ ನಿರ್ಣಯ ಮಾಡಿರುವುದಕ್ಕಾಗಿ ನಿಮ್ಮನ್ನು ಮೆಚ್ಚಲೇಬೇಕು. ಏಕೆಂದರೆ ನೀವು ವಿವೇಚನೆಯಿಂದ ಸರಿಯಾದ ನಿರ್ಣಯವನ್ನೇ ಮಾಡಿದ್ದೀರಿ. ಯೆಹೋವನನ್ನು ನೀವು ಧಣಿಯಾಗಿ ಸ್ವೀಕರಿಸಿರುವುದರಿಂದ ಈಗ ನೀವು ನಿಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತೀರಿ? ಹೇಗೆ ಉಪಯೋಗಿಸಬೇಕು ಎನ್ನುವುದನ್ನು ನೋಹ, ಮೋಶೆ, ಯೆರೆಮೀಯ, ಅಪೊಸ್ತಲ ಪೌಲನ ಉದಾಹರಣೆಗಳಿಂದ ಕಲಿಯೋಣ. ಇವರೆಲ್ಲರೂ ಪೂರ್ಣಪ್ರಾಣದಿಂದ ದೇವರ ಸೇವೆ ಮಾಡಿದರು. ನಾವಿರುವಂಥದ್ದೇ ಪರಿಸ್ಥಿತಿಯಲ್ಲಿದ್ದರು. ಅವರು ಮಾಡಿದ ನಿರ್ಣಯಗಳು ಯಾವುದಕ್ಕೆ ಅವರು ಆದ್ಯತೆ ಕೊಟ್ಟರೆಂದು ತೋರಿಸುತ್ತವೆ. ಇದು ನಾವು ನಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎಂದು ಪರೀಕ್ಷಿಸಿಕೊಳ್ಳಲು ನೆರವಾಗುತ್ತದೆ.—ಮತ್ತಾ. 28:19, 20; 2 ತಿಮೊ. 3:1.

ಜಲಪ್ರಳಯ ಬರುವ ಮುಂಚೆ

3. ನಾವು ಜೀವಿಸುತ್ತಿರುವ ಕಾಲವು ಯಾವ ರೀತಿಯಲ್ಲಿ ನೋಹನ ಕಾಲದಂತೆಯೇ ಇದೆ?

3 ನೋಹನ ಕಾಲವನ್ನು ನಮ್ಮ ಕಾಲಕ್ಕೆ ಹೋಲಿಸುತ್ತಾ ಯೇಸು ಹೇಳಿದ್ದು: “ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು. ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ . . . ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.” (ಮತ್ತಾ. 24:37-39) ಇಂದು ಕೂಡ ಹೆಚ್ಚಿನ ಜನರು ದೈನಂದಿನ ಚಟುವಟಿಕೆಗಳಲ್ಲೇ ಮುಳುಗಿಹೋಗಿದ್ದಾರೆ. ದೇವಜನರು ಕೊಡುತ್ತಿರುವ ಎಚ್ಚರಿಕೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತುರ್ತಿನ ಸಮಯದಲ್ಲಿ ಜೀವಿಸುತ್ತಿದ್ದೇವೆ ಎನ್ನುವುದನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಿಲ್ಲ. ಬೇಗನೆ ದೇವರು ದುಷ್ಟಜನರನ್ನು ನಾಶಮಾಡುತ್ತಾನೆ ಎಂಬ ವಿಷಯ ಅವರಿಗೆ ಹುಚ್ಚುಮಾತಾಗಿದೆ. ನೋಹನ ಕಾಲದಲ್ಲೂ ಜನರು ಹೀಗಿದ್ದರು. (2 ಪೇತ್ರ 3:3-7) ಅಂಥ ಜನರ ಮಧ್ಯೆ ಇದ್ದಾಗಲೂ ನೋಹನು ತನ್ನ ಸಮಯವನ್ನು ಯಾವುದಕ್ಕಾಗಿ ಉಪಯೋಗಿಸಿದನು?

4. (1) ನೋಹನು ದೇವರಿಂದ ನೇಮಕ ಪಡೆದ ನಂತರ ಸಮಯವನ್ನು ಯಾವುದಕ್ಕಾಗಿ ಉಪಯೋಗಿಸಿದನು? (2) ಹಾಗೆ ಉಪಯೋಗಿಸಲು ಕಾರಣವೇನು?

4 ದೇವರು ತಾನು ಮುಂದೆ ಮಾಡಲಿರುವುದನ್ನು ನೋಹನಿಗೆ ತಿಳಿಸಿ ದೊಡ್ಡ ನಾವೆ ಕಟ್ಟುವ ನೇಮಕವನ್ನು ಕೊಟ್ಟಾಗ ಅವನು ತನ್ನ ಸಮಯವನ್ನು ಆ ಕೆಲಸಕ್ಕಾಗಿ ಉಪಯೋಗಿಸಿದನು. (ಆದಿ. 6:13, 14, 22) ಮಾತ್ರವಲ್ಲ ಯೆಹೋವನು ಜಲಪ್ರಳಯ ತರಲಿದ್ದಾನೆ ಎಂದು ಜನರಿಗೆ ಸಾರಿಹೇಳಿದನು. ನೋಹನು ‘ನೀತಿಯನ್ನು ಸಾರುವವನಾಗಿದ್ದನು’ ಎಂದು ಅಪೊಸ್ತಲ ಪೇತ್ರ ಬರೆದನು. ಏಕೆಂದರೆ ಅವರು ಜೀವಿಸುತ್ತಿದ್ದ ಪರಿಸ್ಥಿತಿ ಅತಿ ತುರ್ತಿನದ್ದಾಗಿತ್ತು ಎಂದು ಜನರಿಗೆ ಮನವರಿಕೆ ಮಾಡಲು ನೋಹ ತುಂಬ ಶ್ರಮಪಟ್ಟನು. (2 ಪೇತ್ರ 2:5 ಓದಿ.) ಇಂಥ ಸಂದರ್ಭದಲ್ಲಿ ನೋಹ ಮತ್ತವನ ಪರಿವಾರದವರು ವ್ಯಾಪಾರ ವಹಿವಾಟುಗಳನ್ನು ನಡೆಸಲು, ದೊಡ್ಡಸ್ತಿಕೆ ಗಳಿಸಲು, ಆರಾಮದಾಯಕ ಜೀವನದಲ್ಲಿ ನೆಲೆಕಾಣಲು ಪ್ರಯತ್ನಿಸಿದ್ದರೆ ಅದು ಸೂಕ್ತವಾಗಿರುತ್ತಿತ್ತಾ? ಇಲ್ಲ ಅಲ್ಲವೆ? ಮುಂದೆ ಸಂಭವಿಸಲಿರುವ ವಿಷಯಗಳು ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿದ್ದರಿಂದ ಅವರು ಬೇರೆ ವಿಷಯಗಳ ಕಡೆಗೆ ಗಮನವೇ ಕೊಡಲಿಲ್ಲ.

ಈಜಿಪ್ಟ್‌ನ ರಾಜಕುಮಾರನೊಬ್ಬ ಮಾಡಿದ ಆಯ್ಕೆ

5, 6. (1) ಮೋಶೆಗೆ “ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ ಉಪದೇಶ” ಕೊಡಲಾದದ್ದು ಯಾವ ಕಾರಣಕ್ಕಾಗಿರಬಹುದು? (2) ಮೋಶೆ ಈಜಿಪ್ಟಿನ ಭವ್ಯ ಪ್ರತೀಕ್ಷೆಗಳನ್ನೇಕೆ ನಿರಾಕರಿಸಿದನು?

5 ಈಗ ಮೋಶೆಯ ಕುರಿತು ನೋಡೋಣ. ಫರೋಹನ ಮಗಳ ಸಾಕುಮಗನಾದ ಮೋಶೆ ಬೆಳೆದದ್ದು ಈಜಿಪ್ಟ್‌ನ ಅರಮನೆಯಲ್ಲಿ. ಈ ರಾಜಕುಮಾರನು ಯುವಕನಾಗಿದ್ದಾಗ “ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ ಉಪದೇಶಹೊಂದಿದನು.” (ಅ. ಕಾ. 7:22; ವಿಮೋ. 2:9, 10) ಅಂಥ ಶಿಕ್ಷಣ ಕೊಡಲಾದದ್ದು ಅವನನ್ನು ಮುಂದೆ ಫರೋಹನ ಆಸ್ಥಾನದಲ್ಲಿ ಭವ್ಯ ಸ್ಥಾನ ಪಡೆಯಲು ಅರ್ಹನನ್ನಾಗಿ ಮಾಡಲಿಕ್ಕಾಗಿಯೇ. ತುಸು ಯೋಚಿಸಿ. ಆ ಕಾಲದಲ್ಲಿ ಅತೀ ಶಕ್ತಿಶಾಲಿ ಸಾಮ್ರಾಜ್ಯವಾಗಿದ್ದ ಈಜಿಪ್ಟ್‌ನಲ್ಲಿ ಉನ್ನತ ಅಧಿಕಾರದಲ್ಲಿದ್ದು ಸಕಲ ಸವಲತ್ತು, ಸ್ಥಾನಮಾನ, ಸುಖಭೋಗದಲ್ಲಿ ಆನಂದಿಸುವ ಅವಕಾಶ ಅವನ ಮುಂದಿತ್ತು. ಆದರೆ ಇವುಗಳನ್ನು ಪಡೆಯುವುದು ಮೋಶೆಯ ಗುರಿಯಾಗಿತ್ತೇ?

6 ಮೋಶೆಗೆ ಎಳೆವಯಸ್ಸಿನಲ್ಲಿ ಅವನ ನಿಜವಾದ ಹೆತ್ತವರು ಉತ್ತಮ ತರಬೇತಿ ಕೊಟ್ಟಿದ್ದರು. ಹಾಗಾಗಿ ತನ್ನ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಯೆಹೋವನು ಮಾಡಿದ ವಾಗ್ದಾನಗಳ ಕುರಿತು ಅವನಿಗೆ ತಿಳಿದಿತ್ತು. ಆ ವಾಗ್ದಾನಗಳಲ್ಲಿ ಅವನು ನಂಬಿಕೆಯಿಟ್ಟನು. ತನ್ನ ಭವಿಷ್ಯತ್ತು ಹಾಗೂ ತಾನು ಯೆಹೋವ ದೇವರಿಗೆ ತೋರಿಸಬೇಕಾದ ನಿಷ್ಠೆಯ ಕುರಿತು ಅವನು ಗಂಭೀರವಾಗಿ ಯೋಚಿಸಿರಬೇಕು. ಅವನಿಗೆ ಈಜಿಪ್ಟಿನ ಐಷಾರಾಮಿ ಜೀವನದಲ್ಲಿ ಆನಂದಿಸುವ ಅಥವಾ ಇಸ್ರಾಯೇಲ್ಯ ದಾಸನಾಗಿ ಜೀವಿಸುವ ಆಯ್ಕೆಯಿತ್ತು. ಮೋಶೆ ಯಾವುದನ್ನು ಆಯ್ಕೆ ಮಾಡಿದನು? “ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು.” (ಇಬ್ರಿಯ 11:24-26 ಓದಿ.) ಅಂದಿನಿಂದ ಯೆಹೋವನು ಬಯಸಿದ್ದನ್ನು ಮಾಡಲು ಮೋಶೆ ತನ್ನ ಜೀವನವನ್ನು ಮುಡುಪಾಗಿಟ್ಟನು. (ವಿಮೋ. 3:2, 6-10) ಮೋಶೆಗೆ ದೇವರ ವಾಗ್ದಾನಗಳಲ್ಲಿದ್ದ ನಂಬಿಕೆ ಹೀಗೆ ಮಾಡಲು ಪ್ರಚೋದಿಸಿತು. ಈಜಿಪ್ಟಿನ ಸುಖಭೋಗ ತಾತ್ಕಾಲಿಕ ಎಂದು ಗ್ರಹಿಸಿದನು. ಅದು ಸರಿಯಾಗಿತ್ತು. ಯೆಹೋವನು ಹತ್ತುಬಾಧೆಗಳನ್ನು ತಂದಾಗ ಈಜಿಪ್ಟ್‌ ತತ್ತರಿಸಿಹೋಯಿತು. ಯೆಹೋವನಿಗೆ ಸಮರ್ಪಿಸಿಕೊಂಡಿರುವ ನಮಗೆ ಮೋಶೆ ಮಾಡಿದ ನಿರ್ಣಯದಿಂದ ಯಾವ ಪಾಠವಿದೆ? ಈ ಲೋಕದಲ್ಲಿ ಜೀವನವೃತ್ತಿಯನ್ನೇ ಅವಲಂಬಿಸುವ ಮತ್ತು ಸುಖಭೋಗಗಳ ಮೇಲೆ ಕಣ್ಣಿಡುವ ಬದಲು ಯೆಹೋವನ ಮೇಲೆ, ಆತನ ಸೇವೆ ಮಾಡುವುದರ ಮೇಲೆ ದೃಷ್ಟಿನೆಡೋಣ.

ಮುಂದೇನಾಗಲಿದೆ ಎಂದು ತಿಳಿದಿದ್ದ ಯೆರೆಮೀಯ

7. ಯೆರೆಮೀಯನ ಪರಿಸ್ಥಿತಿ ಹೇಗೆ ನಮ್ಮ ಪರಿಸ್ಥಿತಿಯಂತಿತ್ತು?

7 ಜೀವನದಲ್ಲಿ ದೇವರ ಸೇವೆಗೆ ಆದ್ಯತೆ ಕೊಟ್ಟ ಇನ್ನೊಬ್ಬ ವ್ಯಕ್ತಿ ಯೆರೆಮೀಯ. ಯೆಹೋವನು ಅವನನ್ನು ಪ್ರವಾದಿಯನ್ನಾಗಿ ನೇಮಿಸಿ ಧ್ರರ್ಮಭ್ರಷ್ಟ ಯೆರೂಸಲೇಮ್‌ ಹಾಗೂ ಯೆಹೂದದ ಮೇಲೆ ತಾನು ತರಲಿರುವ ನ್ಯಾಯತೀರ್ಪನ್ನು ಸಾರಿಹೇಳುವಂತೆ ಆಜ್ಞಾಪಿಸಿದನು. ಯೆರೆಮೀಯನು ಕೂಡ ಒಂದರ್ಥದಲ್ಲಿ “ಕಟ್ಟಕಡೆಯ ದಿನಗಳಲ್ಲಿ” ಜೀವಿಸುತ್ತಿದ್ದನು. (ಯೆರೆ. 23:19, 20) ದೇವರು ನಾಶನ ತರುತ್ತಾನೆ ಎಂಬ ವಿಷಯದಲ್ಲಿ ಯೆರೆಮೀಯನಿಗೆ ಕಿಂಚಿತ್ತೂ ಸಂದೇಹವಿರಲಿಲ್ಲ.

8, 9. (1) ಬಾರೂಕನನ್ನು ದೇವರು ಏಕೆ ತಿದ್ದಿದನು? (2) ಏನನ್ನು ಮನಸ್ಸಿನಲ್ಲಿಟ್ಟು ನಾವು ಯೋಜನೆಗಳನ್ನು ಮಾಡಬೇಕು?

8 ಯೆರೆಮೀಯನಿಗೆ ಆ ದೃಢನಂಬಿಕೆ ಇದ್ದದ್ದರಿಂದ ನಾಶವಾಗಲಿದ್ದ ಆ ಲೋಕದಲ್ಲಿ ಬದುಕನ್ನು ಸ್ಥಿರಗೊಳಿಸಲು ಸಮಯ ವ್ಯಯಿಸಲಿಲ್ಲ. ಅಂಥ ಜೀವನದ ಬೆನ್ನು ಹತ್ತುವುದರಲ್ಲಿ ಯಾವ ಅರ್ಥವೂ ಪ್ರಯೋಜನವೂ ಇರಲಿಲ್ಲ. ಆದರೆ ಅವನ ಲೇಖಕನಾದ ಬಾರೂಕನ ಮನೋಭಾವ ಬದಲಾಗತೊಡಗಿತು. ಆದ್ದರಿಂದ ದೇವರು ಅವನನ್ನು ಯೆರೆಮೀಯನ ಮೂಲಕ ಹೀಗೆ ತಿದ್ದಿದನು: “ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆ ಮಾಡುವೆನು. ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು.”—ಯೆರೆ. 45:4, 5.

9 ಬಾರೂಕನು ನಿರೀಕ್ಷಿಸುತ್ತಿದ್ದ “ಮಹಾಪದವಿ” ಏನೆಂದು ನಮಗೆ ಖಚಿತವಾಗಿ ತಿಳಿದಿಲ್ಲ. * ಆದರೆ ಅವನು ಏನನ್ನು ನಿರೀಕ್ಷಿಸುತ್ತಿದ್ದನೋ ಆ ವಿಷಯ ಕ್ಷಣಿಕವಾದದ್ದಾಗಿತ್ತು. ಅಂಥೆಲ್ಲ ವಿಷಯಗಳು ಕ್ರಿ.ಪೂ. 607ರಲ್ಲಿ ಯೆರೂಸಲೇಮ್‌ ಬಾಬೆಲಿನ ಕೈವಶವಾದಾಗ ನಾಶವಾದವು. ನಾವಿದರಿಂದ ಏನು ಕಲಿಯುತ್ತೇವೆ? ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ನಾವು ಭವಿಷ್ಯತ್ತಿನ ಕುರಿತು ಸ್ವಲ್ಪಮಟ್ಟಿಗೆ ಯೋಜನೆ ಮಾಡಬೇಕಾಗುತ್ತದೆ ನಿಜ. (ಜ್ಞಾನೋ. 6:6-11) ಆದರೆ ನಮ್ಮ ಸಮಯ, ಶಕ್ತಿಯನ್ನೆಲ್ಲಾ ಕ್ಷಣಿಕವಾದ ವಿಷಯಗಳಿಗಾಗಿಯೇ ವ್ಯಯಿಸುವಲ್ಲಿ ಅದು ಮೂರ್ಖತನವಾಗಿರುವುದು. ಯೆಹೋವನ ಸಂಘಟನೆಯು ರಾಜ್ಯ ಸಭಾಗೃಹಗಳ, ಬ್ರಾಂಚ್‌ ಆಫೀಸುಗಳ ನಿರ್ಮಾಣಕಾರ್ಯ ಮತ್ತು ದೇವರ ಸೇವೆಗೆ ಸಂಬಂಧಿಸಿದ ಇನ್ನಿತರ ಯೋಜನೆಗಳನ್ನು ಮಾಡುತ್ತದೆ ನಿಜ. ಆದರೆ ಇವು ಕ್ಷಣಿಕವಲ್ಲ. ಏಕೆಂದರೆ ಇವು ದೇವರ ರಾಜ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ವೃದ್ಧಿಗಾಗಿ ಮಾಡುವ ಕೆಲಸಗಳಾಗಿವೆ. ಯೆಹೋವನ ಸಮರ್ಪಿತ ಸೇವಕರು ಸಹ ಯೋಜನೆಗಳನ್ನು ಮಾಡುವಾಗ ದೇವರ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ಕೊಡುವುದು ಅತ್ಯುತ್ತಮ. ನಿಮ್ಮ ಕುರಿತೇನು? ನೀವು “ಮೊದಲು [ಯೆಹೋವನ] ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ” ಇದ್ದೀರಿ ಎಂಬ ಖಾತ್ರಿ ನಿಮಗಿದೆಯಾ?—ಮತ್ತಾ. 6:33.

“ಅವುಗಳನ್ನು ಕಸವೆಂದೆಣಿಸುತ್ತೇನೆ”

10, 11. (1) ಕ್ರೈಸ್ತನಾಗುವ ಮುಂಚೆ ಪೌಲನ ದೃಷ್ಟಿ ಯಾವುದರ ಮೇಲೆ ನೆಟ್ಟಿತ್ತು? (2) ಅನಂತರ ಅವನ ಗುರಿ ಏಕೆ ಬದಲಾಯಿತು?

10 ನಾವೀಗ ಪೌಲನ ಉದಾಹರಣೆಯನ್ನು ಗಮನಿಸೋಣ. ಯೆಹೂದಿ ಮತದವನಾಗಿದ್ದ ಪೌಲ ಆ ಕಾಲದ ಸುಪ್ರಸಿದ್ಧ ಶಿಕ್ಷಕನೊಬ್ಬನಿಂದ ಧರ್ಮಶಾಸ್ತ್ರವನ್ನು ಕಲಿತಿದ್ದನು. ಯೆಹೂದಿ ಮಹಾ ಯಾಜಕನಿಂದ ಅಧಿಕಾರ ಪಡೆದಿದ್ದನು. ಯೆಹೂದಿಮತದಲ್ಲಿ ತನ್ನ ಸಮಕಾಲೀನರಿಗಿಂತ ಹೆಚ್ಚು ಪ್ರಗತಿ ಮಾಡುತ್ತಿದ್ದನು. ಇದೆಲ್ಲವನ್ನು ನೋಡುವಾಗ ಉಜ್ವಲ ಭವಿಷ್ಯತ್ತು ಅವನಿಗಿರುವಂತೆ ತೋರಿತು. (ಅ. ಕಾ. 9:1, 2; 22:3; 26:10; ಗಲಾ. 1:13, 14) ಆದರೆ ಯೆಹೋವ ದೇವರು ಯೆಹೂದಿ ಜನಾಂಗವನ್ನು ತ್ಯಜಿಸಿದ್ದಾನೆ ಎಂದು ಪೌಲನಿಗೆ ತಿಳಿದುಬಂದಾಗ ಅವನ ಜೀವನವೇ ಬದಲಾಯಿತು.

11 ತನಗಿದ್ದ ಭವ್ಯ ಅವಕಾಶ ಯೆಹೋವನ ದೃಷ್ಟಿಯಲ್ಲಿ ಏನೂ ಅಲ್ಲ, ಅದು ಕೇವಲ ಕ್ಷಣಿಕ ಎಂದು ಪೌಲ ಮನಗಂಡನು. (ಮತ್ತಾ. 24:2) ಎಷ್ಟರ ಮಟ್ಟಿಗೆಂದರೆ ದೇವರ ಉದ್ದೇಶಗಳ ಕುರಿತಾದ ಹೊಸ ತಿಳಿವಳಿಕೆ, ಸುವಾರ್ತೆ ಸಾರುವ ಸುಯೋಗಕ್ಕೆ ಹೋಲಿಸುವಾಗ ತಾನು ಗಳಿಸಬಹುದಿದ್ದ ಸ್ಥಾನಮಾನಗಳು “ಕಸ” ಸಮಾನ ಎಂದು ಸ್ವತಃ ಫರಿಸಾಯನಾಗಿದ್ದ ಪೌಲ ಹೇಳಿದನು. ಹಾಗಾಗಿ ಯೆಹೂದಿ ಮತಾಭಿಮಾನಿಯಾಗಿ ತನಗಿದ್ದ ಎಲ್ಲ ಗುರಿಗಳನ್ನು ತೊರೆದುಬಿಟ್ಟು ತನ್ನ ಜೀವನವನ್ನು ದೇವರ ರಾಜ್ಯದ ಸುವಾರ್ತೆ ಸಾರಲು ಮುಡುಪಾಗಿಟ್ಟನು.ಫಿಲಿಪ್ಪಿ 3:4-8, 15 ಓದಿ; ಅ. ಕಾ. 9:15.

ನೀವು ಯಾವುದಕ್ಕೆ ಆದ್ಯತೆ ಕೊಡುತ್ತೀರಿ?

12. ದೀಕ್ಷಾಸ್ನಾನದ ನಂತರ ಯೇಸು ತನ್ನ ಜೀವಿತವನ್ನು ಯಾವುದಕ್ಕಾಗಿ ಅರ್ಪಿಸಿಕೊಂಡನು?

12 ನೋಹ, ಮೋಶೆ, ಯೆರೆಮೀಯ, ಪೌಲ ಹಾಗೂ ಇನ್ನಿತರ ದೇವಭಕ್ತರು ತಮ್ಮ ಹೆಚ್ಚಿನ ಸಮಯ ಶಕ್ತಿಯನ್ನು ದೇವರ ಸೇವೆಗಾಗಿಯೇ ಅರ್ಪಿಸಿದರು. ಇವರೆಲ್ಲರ ಮಾದರಿಯೊಂದಿಗೆ ಯೇಸುವಿನ ಅತ್ಯುತ್ತಮ ಮಾದರಿಯೂ ನಮಗಿದೆ. (1 ಪೇತ್ರ 2:21) ಯೇಸು ದೀಕ್ಷಾಸ್ನಾನ ಪಡೆದ ನಂತರ ಸುವಾರ್ತೆ ಸಾರಲು ಹಾಗೂ ದೇವರ ನಾಮಕ್ಕೆ ಮಹಿಮೆ ತರುವ ಕೆಲಸಗಳನ್ನು ಮಾಡಲು ತನ್ನನ್ನೇ ನೀಡಿಕೊಂಡನು. ಅಂತೆಯೇ ಯೆಹೋವ ದೇವರನ್ನು ತನ್ನ ಧಣಿಯಾಗಿ ಸ್ವೀಕರಿಸುವ ಪ್ರತಿಯೊಬ್ಬ ಕ್ರೈಸ್ತನು ತನ್ನ ಜೀವಿತದಲ್ಲಿ ಆತನ ಸೇವೆ ಮಾಡುವುದಕ್ಕೆ ಆದ್ಯತೆ ಕೊಡಬೇಕು. ನಿಮ್ಮ ಆದ್ಯತೆ ಸಹ ಇದೇ ಆಗಿದೆಯಾ? ಹಾಗಿರುವಲ್ಲಿ ನಿಮ್ಮ ಭೌತಿಕ ಅಗತ್ಯಗಳನ್ನು ಪೂರೈಸುತ್ತಾ ದೇವರ ಸೇವೆಯನ್ನು ಹೇಗೆ ಹೆಚ್ಚು ಮಾಡಬಲ್ಲಿರಿ?ಕೀರ್ತನೆ 71:15; 145:2 ಓದಿ.

13, 14. (1) ಎಲ್ಲ ಸಮರ್ಪಿತ ಕ್ರೈಸ್ತರು ಏನು ಮಾಡುವುದರ ಕುರಿತು ಯೋಚಿಸಬೇಕು? (2) ದೇವಜನರು ಯಾವ ಸಂತೃಪ್ತಿಯನ್ನು ಅನುಭವಿಸಸಾಧ್ಯವಿದೆ?

13 ಅನೇಕ ವರ್ಷಗಳಿಂದ ಯೆಹೋವನ ಸಂಘಟನೆ ನಾವು ಪಯನೀಯರ್‌ ಸೇವೆ ಮಾಡುವುದರ ಬಗ್ಗೆ ಪ್ರಾರ್ಥಿಸಿ ಯೋಚಿಸುವಂತೆ ಉತ್ತೇಜಿಸುತ್ತಿದೆ. ಆದರೆ ಯೆಹೋವನ ನಂಬಿಗಸ್ತ ಸೇವಕರಲ್ಲಿ ಕೆಲವರಿಗೆ ತಮ್ಮ ಸನ್ನಿವೇಶಗಳಿಂದಾಗಿ ತಿಂಗಳಿಗೆ ಸರಾಸರಿ 70 ತಾಸು ಸೇವೆಯಲ್ಲಿ ಕಳೆಯುವುದು ಕಷ್ಟವಾಗಿರಬಹುದು. ಅದಕ್ಕಾಗಿ ಅವರು ವ್ಯಥೆ ಪಡಬೇಕಾಗಿಲ್ಲ. (1 ತಿಮೊ. 5:8) ಆದರೆ ನಿಮ್ಮ ಕುರಿತೇನು? ಪಯನೀಯರ್‌ ಸೇವೆ ನಿಮ್ಮಿಂದ ಮಾಡಲು ಆಗದಿರುವ ವಿಷಯವೋ?

14 ಇದೇ ವರ್ಷ ಮಾರ್ಚ್‌ ತಿಂಗಳಲ್ಲಿ ಅನೇಕ ಸಾಕ್ಷಿಗಳು ಆಕ್ಸಿಲಿಯರಿ ಪಯನೀಯರ್‌ ಸೇವೆಯಲ್ಲಿ ಆನಂದಿಸಿದರು. ಯೇಸುವಿನ ಮರಣದ ಸ್ಮರಣೆಯ ಆ ಸಮಯಾವಧಿಯಲ್ಲಿ 30 ಅಥವಾ 50 ತಾಸುಗಳನ್ನು ಮಾಡುವ ಆಯ್ಕೆಯಿತ್ತು. (ಕೀರ್ತ. 110:3) ಲಕ್ಷಗಟ್ಟಲೆ ಸಾಕ್ಷಿಗಳು ಈ ಸೇವೆಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಸಭೆಯಲ್ಲಿ ನವೋಲ್ಲಾಸ ತುಂಬಿತ್ತು. ಹಾಗಾದರೆ ನಿಮ್ಮ ಕೆಲಸಕಾರ್ಯಗಳನ್ನು ಹೊಂದಿಸಿಕೊಂಡು ಇನ್ನೂ ಹೆಚ್ಚು ಬಾರಿ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ಪ್ರಯತ್ನಿಸಬಹುದಲ್ಲವೇ? ಆಗ ಪ್ರತಿ ದಿನದ ಕೊನೆಯಲ್ಲಿ ನೀವು ಸಂತೃಪ್ತಭಾವದಿಂದ “ಯೆಹೋವನೇ, ನಾನಿವತ್ತು ನನ್ನಿಂದ ಸಾಧ್ಯವಾದಷ್ಟು ನಿನ್ನ ಸೇವೆ ಮಾಡಿದ್ದೇನೆ” ಎಂದು ಹೇಳಬಲ್ಲಿರಿ.

15. ಶಾಲೆಯಲ್ಲಿ ಓದುತ್ತಿರುವ ಯುವ ಕ್ರೈಸ್ತರ ಗುರಿ ಏನಾಗಿರಬೇಕು?

15 ನೀವು ವಿದ್ಯಾಭ್ಯಾಸ ಮುಗಿಸುವ ಹಂತದಲ್ಲಿರುವ ಯುವಕ್ರೈಸ್ತರೋ? ಹಾಗಿರುವಲ್ಲಿ ನಿಮಗೆ ಉತ್ತಮ ಆರೋಗ್ಯವಿರುತ್ತದೆ. ಜವಾಬ್ದಾರಿಯೂ ಕಡಿಮೆಯಿರುತ್ತದೆ. ಹಾಗಾಗಿ ನೀವು ರೆಗ್ಯುಲರ್‌ ಪಯನೀಯರ್‌ ಸೇವೆ ಆರಂಭಿಸುವುದರ ಕುರಿತು ಯೋಚಿಸಬಹುದಲ್ಲಾ? ನೀವು ಉನ್ನತ ಶಿಕ್ಷಣಕ್ಕೆ ಹೋಗುವಂತೆ ಹಾಗೂ ಒಂದು ಜೀವನವೃತ್ತಿಯನ್ನು ಕಂಡುಕೊಳ್ಳುವಂತೆ ನಿಮ್ಮ ಶಿಕ್ಷಕರು ಉತ್ತೇಜಿಸುತ್ತಾರೆ ನಿಜ. ಆದರೆ ಅವರು ಭರವಸೆ ಇಟ್ಟಿರುವುದು ಬೇಗನೆ ನಾಶವಾಗಲಿರುವ ಈ ಲೋಕದ ಸಾಮಾಜಿಕ ಹಾಗೂ ಹಣಕಾಸು ವ್ಯವಸ್ಥೆಯ ಮೇಲೆ. ಅದಕ್ಕೆ ಬದಲಾಗಿ ಪೂರ್ಣ ಸಮಯದ ಸೇವೆಯನ್ನು ನಿಮ್ಮ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳುವುದಾದರೆ ನಿತ್ಯನಿರಂತರಕ್ಕೂ ಪ್ರಯೋಜನ ಹೊಂದುವಿರಿ. ನೀವು ಯೇಸುವಿನ ಪರಿಪೂರ್ಣ ಮಾದರಿಯನ್ನು ಅನುಕರಿಸುತ್ತಿರುವಿರಿ. ಸಂತೋಷಭರಿತರಾಗಿರುವಿರಿ. ಅದು ನಿಮಗೆ ಸಂರಕ್ಷಣೆಯಾಗಿದ್ದು ನಿಮ್ಮ ಸಮರ್ಪಣೆಗನುಸಾರ ಜೀವಿಸುತ್ತಿದ್ದೀರಿ ಎನ್ನುವುದಕ್ಕೆ ರುಜುವಾತಾಗಿರುವುದು.—ಮತ್ತಾ. 6:19-21; 1 ತಿಮೊ. 6:9-12.

16, 17. ಕ್ರೈಸ್ತರಾದ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

16 ಅನೇಕ ಕ್ರೈಸ್ತರು ತಮ್ಮ ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲಿಕ್ಕಾಗಿ ತುಂಬ ಸಮಯ ದುಡಿಯುತ್ತಾರೆ. ಆದರೆ ಕೆಲವರು ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಐಹಿಕ ಕೆಲಸಕ್ಕೆ ಕೊಡುತ್ತಾರೆ. (1 ತಿಮೊ. 6:8) ಇಂದಿನ ವಾಣಿಜ್ಯ ಲೋಕವು ತಾನು ಹೊರತರುವ ಹೊಸ ಹೊಸ ವಿನ್ಯಾಸದ ವಸ್ತುಗಳು ಇಲ್ಲದೆ ನಾವು ಸಂತೋಷವಾಗಿರಲು ಸಾಧ್ಯವಿಲ್ಲ ಎಂಬಂತೆ ಬಿಂಬಿಸುತ್ತದೆ. ಆದರೆ ಕ್ರೈಸ್ತರಾದ ನಾವು ನಮ್ಮ ಜೀವನವನ್ನು ಸೈತಾನನ ಲೋಕ ನಿಯಂತ್ರಿಸುವಂತೆ ಬಿಡಬಾರದು. (1 ಯೋಹಾ. 2:15-17) ಉದ್ಯೋಗದಿಂದ ನಿವೃತ್ತರಾಗಿರುವವರ ಕುರಿತೇನು? ಅವರು ಯೆಹೋವನ ಸೇವೆಗೆ ಆದ್ಯತೆ ಕೊಡುತ್ತಾ ತಮ್ಮ ಸಮಯವನ್ನು ಪಯನೀಯರ್‌ ಸೇವೆಯಲ್ಲಿ ಕಳೆಯುವುದಕ್ಕಿಂತ ಉತ್ತಮ ವಿಷಯ ಇನ್ಯಾವುದಿದೆ?

17 ಯೆಹೋವನ ಸಮರ್ಪಿತ ಸೇವಕರೆಲ್ಲರು ಹೀಗೆ ಕೇಳಿಕೊಳ್ಳಬೇಕು: ನನ್ನ ಜೀವನದ ಮುಖ್ಯ ಗುರಿ ಏನು? ದೇವರ ಸೇವೆಗೆ ನಾನು ಆದ್ಯತೆ ಕೊಡುತ್ತಿದ್ದೇನಾ? ಯೇಸುವಿಗಿದ್ದ ಸ್ವತ್ಯಾಗದ ಮನೋಭಾವ ನನ್ನಲ್ಲಿದೆಯಾ? ಯೇಸುವಿನ ಸಲಹೆಗಳಿಗೆ ಕಿವಿಗೊಟ್ಟು ಆತನನ್ನು ಸತತವಾಗಿ ಹಿಂಬಾಲಿಸುತ್ತಿದ್ದೇನಾ? ಸುವಾರ್ತೆ ಸಾರುವುದಕ್ಕೆ ಅಥವಾ ಇನ್ನಿತರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೆಚ್ಚು ಸಮಯ ಕೊಡಲು ನನ್ನ ಕೆಲಸಕಾರ್ಯಗಳನ್ನು ಹೊಂದಿಸಿಕೊಳ್ಳಲು ಸಾಧ್ಯವೇ? ನನ್ನ ಸನ್ನಿವೇಶದಿಂದಾಗಿ ಸೇವೆಯನ್ನು ಹೆಚ್ಚುಮಾಡಲು ಸದ್ಯಕ್ಕೆ ಸಾಧ್ಯವಿಲ್ಲದಿದ್ದಲ್ಲಿ ಬೇರೆ ವಿಧಗಳಲ್ಲಿ ಯೆಹೋವನಿಗಾಗಿ ನನ್ನ ಸಮಯ ಶಕ್ತಿ ನೀಡುವುದನ್ನು ಮುಂದುವರಿಸುತ್ತಿದ್ದೇನಾ?

“ಉದ್ದೇಶಿಸಿ ಕ್ರಿಯೆಗೈಯುವಂತೆ” ಸಹಾಯ

18, 19. (1) ಯಾವ ವಿಷಯದ ಕುರಿತು ನಾವು ಪ್ರಾರ್ಥಿಸಬಹುದು? (2) ಅಂಥ ಪ್ರಾರ್ಥನೆಯನ್ನು ಯೆಹೋವನು ಮೆಚ್ಚುತ್ತಾನೆಂದು ನಮಗೆ ಹೇಗೆ ಗೊತ್ತು?

18 ಯೆಹೋವನ ಜನರು ಆತನ ಸೇವೆಯಲ್ಲಿ ತೋರಿಸುವ ಹುರುಪನ್ನು ನೋಡುವಾಗ ಸಂತೋಷವಾಗುತ್ತದೆ. ಆದರೆ ಕೆಲವರಿಗೆ ಪಯನೀಯರ್‌ ಸೇವೆ ಮಾಡಲು ಅವಕಾಶವಿದ್ದರೂ ಮಾಡುವ ಬಯಕೆ ಇಲ್ಲದಿರಬಹುದು ಅಥವಾ ಸೇವೆ ಮಾಡಲು ತಮ್ಮಲ್ಲಿ ಕೌಶಲವಿಲ್ಲ ಎಂಬ ಭಾವನೆ ಇರಬಹುದು. (ವಿಮೋ. 4:10; ಯೆರೆ. 1:6) ನಿಮಗೂ ಹೀಗನಿಸುತ್ತದಾ? ಹಾಗಿರುವಲ್ಲಿ ಇದರ ಕುರಿತು ಯೆಹೋವನಲ್ಲಿ ಪ್ರಾರ್ಥಿಸಿರಿ. ಏಕೆಂದರೆ ಪೌಲ ಹೇಳಿದಂತೆ ಯೆಹೋವ ದೇವರು “ತನ್ನ ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ” ನಿಮ್ಮಲ್ಲಿ ಕಾರ್ಯನಡಿಸುತ್ತಾನೆ. (ಫಿಲಿ. 2:13) ಹಾಗಾಗಿ ಹೆಚ್ಚು ಸೇವೆಮಾಡುವ ಬಯಕೆಯನ್ನೂ ಸಾಮರ್ಥ್ಯವನ್ನೂ ದಯಪಾಲಿಸುವಂತೆ ಯೆಹೋವನ ಹತ್ತಿರ ಬೇಡಿಕೊಳ್ಳಿ.—2 ಪೇತ್ರ 3:9, 11.

19 ನೋಹ, ಮೋಶೆ, ಯೆರೆಮೀಯ, ಪೌಲ, ಯೇಸು ಇವರೆಲ್ಲರೂ ದೇವಭಕ್ತ ಜನರಾಗಿದ್ದರು. ಇವರೆಲ್ಲರೂ ಎಚ್ಚರಿಕೆಯ ಸಂದೇಶ ಸಾರಲು ತಮ್ಮ ಸಮಯ ಶಕ್ತಿ ವ್ಯಯಿಸಿದರು. ಯಾವುದೂ ತಮ್ಮ ಗಮನವನ್ನು ಆ ಕೆಲಸದಿಂದ ಬೇರೆಡೆಗೆ ಸೆಳೆಯಲು ಅವರು ಬಿಡಲಿಲ್ಲ. ಈ ದುಷ್ಟ ಲೋಕದ ಅಂತ್ಯ ತುಂಬ ಹತ್ತಿರದಲ್ಲಿರುವುದರಿಂದ ಯೆಹೋವನಿಗೆ ಸಮರ್ಪಿಸಿಕೊಂಡಿರುವ ನಾವೆಲ್ಲರೂ ಈ ನಂಬಿಗಸ್ತರ ಮಾದರಿಯನ್ನು ಅನುಕರಿಸಲು ನಮ್ಮಿಂದಾದುದೆಲ್ಲವನ್ನು ಮಾಡೋಣ. (ಮತ್ತಾ. 24:42; 2 ತಿಮೊ. 2:15) ಆಗ ಯೆಹೋವ ದೇವರು ನಮ್ಮನ್ನು ಮೆಚ್ಚುವನು. ಆತನ ಅನುಗ್ರಹ ನಮ್ಮ ಮೇಲಿರುವುದು.ಮಲಾಕಿಯ 3:10 ಓದಿ.

[ಪಾದಟಿಪ್ಪಣಿ]

^ ಪ್ಯಾರ. 9 2008, ಅಕ್ಟೋಬರ್‌ 15ರ ಕಾವಲಿನಬುರುಜು ಪುಟ 8, 9 ಪ್ಯಾರ 7-9 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ನೋಹನು ಎಚ್ಚರಿಸಿದಾಗ ಜನರು ಕಿವಿಗೊಡಲೇ ಇಲ್ಲ

[ಪುಟ 24ರಲ್ಲಿರುವ ಚಿತ್ರ]

ರೆಗ್ಯುಲರ್‌ ಪಯನೀಯರ್‌ ಸೇವೆ ಆರಂಭಿಸುವ ಕುರಿತು ನೀವು ಗಂಭೀರವಾಗಿ ಯೋಚಿಸಿದ್ದೀರಾ?