ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’

‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’

‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’

“ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:21.

ಇದರ ಕುರಿತು ಧ್ಯಾನಿಸಿ

ದೇವರು ಪವಿತ್ರಾತ್ಮದ ಮೂಲಕ ತನ್ನ ಸಂದೇಶವನ್ನು ಬೈಬಲ್‌ ಬರಹಗಾರರಿಗೆ ಯಾವ ರೀತಿಯಲ್ಲಿ ತಿಳಿಯಪಡಿಸಿದನು?

ಬೈಬಲ್‌ ದೇವಪ್ರೇರಣೆಯಿಂದ ಬರೆಯಲಾಗಿದೆ ಎಂದು ನಂಬಲು ನಮಗೆ ಯಾವ ಪುರಾವೆಗಳಿವೆ?

ದೇವರ ವಾಕ್ಯಕ್ಕಾಗಿ ಗಣ್ಯತೆಯನ್ನು ಕಾಪಾಡಿಕೊಳ್ಳಲು ಪ್ರತಿದಿನ ನಾವೇನು ಮಾಡಬಹುದು?

1. ದೇವರ ವಾಕ್ಯವಾದ ಬೈಬಲ್‌ ನಮಗೇಕೆ ಬೇಕು?

ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ? ನಾವು ಯಾಕಾಗಿ ಇಲ್ಲಿದ್ದೇವೆ? ಮುಂದೆ ನಮಗೇನಾಗುತ್ತದೆ? ಜಗತ್ತಿನಲ್ಲಿ ಇಷ್ಟೊಂದು ಕಷ್ಟನೋವುಗಳು ಏಕಿವೆ? ಸತ್ತ ಮೇಲೆ ನಮಗೆ ಏನಾಗುತ್ತದೆ? ಇಂಥ ಪ್ರಶ್ನೆಗಳು ಜಗತ್ತಿನ ಸುತ್ತ ಹಲವಾರು ಜನರನ್ನು ಕಾಡುತ್ತಿವೆ. ದೇವರ ವಾಕ್ಯವಾದ ಬೈಬಲ್‌ ಇಲ್ಲದೆ ಹೋಗಿದ್ದರೆ ಈ ಪ್ರಶ್ನೆಗಳಿಗಾಗಲಿ ಇತರ ಪ್ರಮುಖ ಪ್ರಶ್ನೆಗಳಿಗಾಗಲಿ ಉತ್ತರ ತಿಳಿಯುತ್ತಿರಲಿಲ್ಲ. ಮಾತ್ರವಲ್ಲ, ಜೀವನದಲ್ಲಿ ಮಾರ್ಗದರ್ಶನವಿಲ್ಲದೆ ಕೇವಲ ಅನುಭವದಿಂದ ಪಾಠ ಕಲಿಯುತ್ತಾ ಮುಂದಡಿ ಇಡುತ್ತಿದ್ದೆವು. ಅನುಭವ ಒಂದನ್ನೇ ನೆಚ್ಚಿಕೊಳ್ಳಬೇಕಾಗಿದ್ದಲ್ಲಿ ‘ಯೆಹೋವನ ಧರ್ಮಶಾಸ್ತ್ರದ’ ಬಗ್ಗೆ ಕೀರ್ತನೆಗಾರನಿಗಿದ್ದ ಭಾವನೆ ನಮ್ಮಲ್ಲೆಂದೂ ಹೊಮ್ಮುತ್ತಿರಲಿಲ್ಲ.ಕೀರ್ತನೆ 19:7 ಓದಿ.

2. ದೇವರು ಕೊಟ್ಟಿರುವ ಉಡುಗೊರೆಗಾಗಿ ನಮ್ಮ ಗಣ್ಯತೆ ಕಡಿಮೆಯಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು?

2 ದುಃಖಕರ ವಿಷಯವೇನೆಂದರೆ ಕೆಲವರಿಗೆ ಬೈಬಲ್‌ ಮೇಲೆ ಮೊದಲಿದ್ದ ಪ್ರೀತಿ ಈಗ ಇಲ್ಲ. (ಪ್ರಕಟನೆ 2:4 ಹೋಲಿಸಿ.) ಅಂಥವರು ಯೆಹೋವನಿಗೆ ಮೆಚ್ಚಿಗೆಯಾಗುವಂಥ ರೀತಿಯಲ್ಲಿ ನಡೆಯುವುದನ್ನು ಬಿಟ್ಟುಬಿಟ್ಟಿದ್ದಾರೆ. (ಯೆಶಾ. 30:21) ಆದರೆ ನಾವು ಅವರಂತೆ ಆಗಬೇಕೆಂದಿಲ್ಲ. ಬೈಬಲ್‌ ಹಾಗೂ ಅದರ ಬೋಧನೆಗಳ ಕಡೆಗೆ ಗಣ್ಯತೆ ಕಡಿಮೆಯಾಗದಂತೆ ನಾವು ನೋಡಿಕೊಳ್ಳಲು ಸಾಧ್ಯವಿದೆ. ಹಾಗೆ ನೋಡಿಕೊಳ್ಳಬೇಕು ಸಹ. ಬೈಬಲ್‌ ನಮ್ಮ ಸೃಷ್ಟಿಕರ್ತನು ಕೊಟ್ಟಿರುವ ಪ್ರೀತಿಯ ಉಡುಗೊರೆಯಾಗಿದೆ. (ಯಾಕೋ. 1:17) ‘ದೇವರ ವಾಕ್ಯದ’ ಮೇಲಿರುವ ಗಣ್ಯತೆಯನ್ನು ಗಾಢಗೊಳಿಸಲು ನಾವೇನು ಮಾಡಬೇಕು? ಬೈಬಲನ್ನು ಬರೆಯಲು ದೇವರು ಮನುಷ್ಯರನ್ನು ಹೇಗೆ ಪ್ರೇರಿಸಿದನು ಎಂಬುದರ ಕುರಿತು ಆಳವಾಗಿ ಯೋಚಿಸಬೇಕು. ಬೈಬಲ್‌ ದೇವಪ್ರೇರಣೆಯಿಂದಲೇ ಬರೆಯಲ್ಪಟ್ಟದ್ದೆಂದು ನಂಬಲು ಬೆಟ್ಟದಷ್ಟು ಪುರಾವೆಗಳಿವೆ. ಕೆಲವನ್ನು ನಾವೀಗ ಪರಿಶೀಲಿಸೋಣ. ದೇವರ ವಾಕ್ಯವನ್ನು ದಿನಂಪ್ರತಿ ಓದಲು, ಅದರಲ್ಲಿರುವ ಸಲಹೆಗಳನ್ನು ಅನ್ವಯಿಸಲು ಇದು ನಮಗೆ ಸ್ಫೂರ್ತಿ ನೀಡುವುದು.—ಇಬ್ರಿ. 4:12.

‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’—ಹೇಗೆ?

3. ಪ್ರವಾದಿಗಳು ಮತ್ತು ಬೈಬಲ್‌ ಬರಹಗಾರರು ‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’ ಎಂಬುದರ ಅರ್ಥವೇನು?

3 ಬೈಬಲನ್ನು ಒಟ್ಟು 1,610 ವರ್ಷಗಳ ಅವಧಿಯಲ್ಲಿ (ಕ್ರಿ.ಪೂ. 1513ರಿಂದ ಕ್ರಿ.ಶ. 98) ಬರೆಯಲಾಯಿತು. ಸುಮಾರು 40 ಪುರುಷರು ಅದನ್ನು ಬರೆದರು. ಇವರಲ್ಲಿ ಕೆಲವರು ‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟ’ ಪ್ರವಾದಿಗಳಾಗಿದ್ದರು. (2 ಪೇತ್ರ 1:20, 21 ಓದಿ.) ಈ ವಚನದಲ್ಲಿ “ಮಾರ್ಗದರ್ಶಿಸಲ್ಪಟ್ಟು” ಎಂಬುದಕ್ಕಿರುವ ಗ್ರೀಕ್‌ ಪದವು “ಒಯ್ಯು ಅಥವಾ ಮತ್ತೊಂದು ಕಡೆ ಸಾಗಿಸು” ಎಂಬರ್ಥ ಕೊಡುತ್ತದೆ. ಮಾತ್ರವಲ್ಲದೆ, ಆ ಪದವನ್ನು “ಯಾವುದಾದರೂ ಒಂದರ ಸಹಾಯದಿಂದ ಚಲಿಸಲ್ಪಡು, ಸಾಗಿಸಲ್ಪಡು, ಚಲಿಸಲ್ಪಡುವಂತೆ ಬಿಟ್ಟುಕೊಡು ಹೀಗೆ ಬೇರೆ ಬೇರೆ ರೀತಿಯಲ್ಲೂ ಅನುವಾದಿಸಬಹುದು.” * ಅಪೊಸ್ತಲರ ಕಾರ್ಯಗಳು 27:15ರಲ್ಲಿ ಅದೇ ಪದವನ್ನು ಗಾಳಿಯಿಂದ ಹಡಗು ಒಂದು ದಿಕ್ಕಿನತ್ತ ಚಲಿಸುವುದಕ್ಕೆ ಅಥವಾ ತಳ್ಳಲ್ಪಡುವುದಕ್ಕೆ ಸೂಚಿಸಲು ಬಳಸಲಾಗಿದೆ. ಹಾಗಾಗಿ ಪ್ರವಾದಿಗಳು ಮತ್ತು ಬೈಬಲ್‌ ಬರಹಗಾರರು ‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’ ಎಂದು ಹೇಳುವಾಗ, ಅದರರ್ಥ ದೇವರು ತನ್ನ ಕಾರ್ಯಕಾರಿ ಶಕ್ತಿಯ ಮೂಲಕ ಅವರೊಂದಿಗೆ ಮಾತಾಡಿದನು, ಅವರನ್ನು ಪ್ರೇರಿಸಿದನು ಮತ್ತು ಅವರನ್ನು ಮಾರ್ಗದರ್ಶಿಸಿದನು ಎಂದಾಗಿದೆ. ಆದುದರಿಂದ ಬೈಬಲ್‌ ಬರಹಗಾರರು ತಮ್ಮ ಆಲೋಚನೆಗಳನ್ನಲ್ಲ ದೇವರ ಆಲೋಚನೆಗಳನ್ನು ಬರೆದರು. ಕೆಲವೊಮ್ಮೆ ಪ್ರವಾದಿಗಳಿಗೂ ಬೈಬಲ್‌ ಬರಹಗಾರರಿಗೂ ತಾವು ಮುನ್ನುಡಿದ ಅಥವಾ ಬರೆಯುತ್ತಿದ್ದ ವಿಷಯಗಳ ಅರ್ಥ ಕೂಡ ತಿಳಿದಿರಲಿಲ್ಲ. (ದಾನಿ. 12:8, 9) “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ” ಎನ್ನುವುದು ಸತ್ಯ. ಮಾನವನ ಅಭಿಪ್ರಾಯಗಳ ನೆರಳು ಕೂಡ ಬೈಬಲಿನಲ್ಲಿಲ್ಲ.—2 ತಿಮೊ. 3:16.

4-6. ಯೆಹೋವನು ತನ್ನ ಸಂದೇಶವನ್ನು ಬೈಬಲ್‌ ಬರಹಗಾರರಿಗೆ ಯಾವ ರೀತಿಯಲ್ಲಿ ತಿಳಿಯಪಡಿಸಿದನು? ದೃಷ್ಟಾಂತಿಸಿ.

4 ಆದರೆ ದೇವರು ಪವಿತ್ರಾತ್ಮದ ಮೂಲಕ ತನ್ನ ಸಂದೇಶವನ್ನು ಬೈಬಲ್‌ ಬರಹಗಾರರಿಗೆ ಯಾವ ರೀತಿಯಲ್ಲಿ ತಿಳಿಯಪಡಿಸಿದನು? ಬರೆಯತಕ್ಕ ಒಂದೊಂದು ಪದಗಳನ್ನೂ ಆತನೇ ಹೇಳಿದನೋ? ಅಥವಾ ಕೇವಲ ವಿಚಾರಗಳನ್ನು ತಿಳಿಸಿ ಅವರದನ್ನು ತಮ್ಮ ಸ್ವಂತ ವಾಕ್ಯಗಳಲ್ಲಿ ವ್ಯಕ್ತಪಡಿಸುವಂತೆ ಬಿಟ್ಟನೋ? ಅದನ್ನು ಅರ್ಥಮಾಡಿಕೊಳ್ಳಲು ಕಂಪನಿಯ ಮಾಲೀಕನೊಬ್ಬನು ಹೇಗೆ ಪತ್ರ ಬರೆಯುತ್ತಾನೆ ಎಂದು ನೋಡೋಣ. ಪತ್ರದಲ್ಲಿ ನಿರ್ದಿಷ್ಟ ಪದ, ವಾಕ್ಯಗಳಿರಬೇಕಾದ ಸಂದರ್ಭದಲ್ಲಿ ಅವನೇ ಖುದ್ದಾಗಿ ಅದನ್ನು ಬರೆಯುತ್ತಾನೆ ಅಥವಾ ತನ್ನ ಸೆಕ್ರೆಟರಿಗೆ ಪ್ರತಿಯೊಂದು ಪದಗಳನ್ನು ಹೇಳಿ ಬರೆಸುತ್ತಾನೆ. ಬಳಿಕ ಸೆಕ್ರೆಟರಿ ಅದನ್ನು ಟೈಪ್‌ ಮಾಡಿ ಮಾಲೀಕನಿಗೆ ಕೊಟ್ಟಾಗ ಅವನು ತನ್ನ ಸಹಿ ಹಾಕುತ್ತಾನೆ. ಬೇರೆ ಸಂದರ್ಭಗಳಲ್ಲಿ ಮುಖ್ಯ ವಿಷಯವನ್ನಷ್ಟೇ ತಿಳಿಸುತ್ತಾನೆ. ಆಗ ಸೆಕ್ರೆಟರಿ ತನ್ನದೇ ಶೈಲಿಯಲ್ಲಿ ಅಥವಾ ತನ್ನ ಸ್ವಂತ ಪದಗಳನ್ನು ಹಾಕಿ ಟೈಪ್‌ ಮಾಡುತ್ತಾಳೆ. ಅಗತ್ಯವಿದ್ದರೆ ಮಾಲೀಕನು ತಿದ್ದುಪಡಿಗಳನ್ನು ಮಾಡಿಸಿ ಕೊನೆಯಲ್ಲಿ ಪತ್ರಕ್ಕೆ ತನ್ನ ಸಹಿಯನ್ನು ಹಾಕುತ್ತಾನೆ. ಆ ಪತ್ರವನ್ನು ಪಡೆದುಕೊಳ್ಳುವ ವ್ಯಕ್ತಿ ಅದು ಯಾರಿಂದ ಬಂದದ್ದೆಂದು ವೀಕ್ಷಿಸುತ್ತಾನೆ? ಕಂಪನಿಯ ಮಾಲೀಕನಿಂದಲೇ.

5 ಅದೇ ರೀತಿಯಲ್ಲಿ ಬೈಬಲಿನ ಕೆಲವು ಭಾಗಗಳು “ದೇವರ ಕೈಯಿಂದ” ಬರೆದದ್ದಾಗಿವೆ. (ವಿಮೋ. 31:18) ನಿರ್ದಿಷ್ಟ ಪದಗಳನ್ನೇ ಉಪಯೋಗಿಸಬೇಕಾಗಿದ್ದಾಗ ಯೆಹೋವನು ಅದನ್ನು ಬರಹಗಾರರಿಗೆ ಹೇಳಿ ಬರೆಯಿಸಿದನು. ಉದಾಹರಣೆಗೆ ವಿಮೋಚನಕಾಂಡ 34:27 ಹೀಗನ್ನುತ್ತದೆ: “ಯೆಹೋವನು ಮೋಶೆಗೆ—ನೀನು ಈ ವಾಕ್ಯಗಳನ್ನು ಬರೆ. ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ನಿಬಂಧನಮಾಡಿದ್ದೇನೆ ಎಂದು ಹೇಳಿದನು.” ಪ್ರವಾದಿ ಯೆರೆಮೀಯನಿಗೂ ಯೆಹೋವನು ಹಾಗೆಯೇ ಹೇಳಿದನು: “ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ಗ್ರಂಥವಾಗಿ ಬರೆ.”—ಯೆರೆ. 30:2.

6 ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಯೆಹೋವನು ಬರಹಗಾರರಿಗೆ ಬರೆಯಬೇಕಾದ ಪ್ರತಿಯೊಂದು ಪದವನ್ನು ಹೇಳಲಿಲ್ಲ. ವಿಚಾರಗಳನ್ನಷ್ಟೇ ಅವರ ಹೃದಮನದಲ್ಲಿ ಹಾಕಿದನು. ಬರಹಗಾರರು ತಮ್ಮದೇ ಪದಗಳಲ್ಲಿ ಆ ವಿಚಾರಗಳನ್ನು ವ್ಯಕ್ತಪಡಿಸುವಂತೆ ಅನುಮತಿಸಿದನು. ಉದಾಹರಣೆಗೆ “ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು” ಎಂದು ಪ್ರಸಂಗಿ 12:10 ಹೇಳುತ್ತದೆ. ಸುವಾರ್ತಾ ಪುಸ್ತಕದ ಲೇಖಕ ಲೂಕನು ವಿಷಯಗಳನ್ನು “ತರ್ಕಬದ್ಧವಾದ ಕ್ರಮದಲ್ಲಿ” ಬರೆಯಲಿಕ್ಕಾಗಿ “ಆರಂಭದಿಂದ ಎಲ್ಲ ಸಂಗತಿಗಳನ್ನು ನಿಷ್ಕೃಷ್ಟವಾಗಿ ಪತ್ತೆಹಚ್ಚಿ”ದನು. (ಲೂಕ 1:3, 4) ದೇವರು ಪವಿತ್ರಾತ್ಮವನ್ನು ಬಳಸುತ್ತಾ ತನ್ನ ಸಂದೇಶಕ್ಕೆ ಮಾನವ ಅಪರಿಪೂರ್ಣತೆ ಸೋಕದಂತೆ ನೋಡಿಕೊಂಡನು.

7. ಬೈಬಲನ್ನು ಬರೆಯಲು ದೇವರು ಮಾನವರನ್ನು ಉಪಯೋಗಿಸಿದ್ದು ಆತನು ಮಹಾ ವಿವೇಕಿ ಎಂದು ಹೇಗೆ ತೋರಿಸುತ್ತದೆ?

7 ಬೈಬಲನ್ನು ಬರೆಯಲು ಯೆಹೋವನು ಮಾನವರನ್ನು ಉಪಯೋಗಿಸಿದ್ದು ಆತನು ಮಹಾ ವಿವೇಕಿ ಎಂದು ತೋರಿಸುತ್ತದೆ. ಬೈಬಲಿನಲ್ಲಿರುವ ಪದಗಳು, ವಾಕ್ಯಗಳು ಮಾಹಿತಿಯನ್ನು ತಿಳಿಯಪಡಿಸುವುದಷ್ಟೇ ಅಲ್ಲ ಭಾವನೆಗಳನ್ನೂ ವ್ಯಕ್ತಪಡಿಸುತ್ತವೆ. ಒಂದುವೇಳೆ ದೇವದೂತರ ಮೂಲಕ ಯೆಹೋವನು ಬೈಬಲನ್ನು ಬರೆಸಿದ್ದರೆ ಹೇಗಿರುತ್ತಿತ್ತು? ಭಯ, ದುಃಖ, ನಿರಾಶೆಯಂಥ ಮಾನವ ಸಹಜ ಭಾವನೆಗಳನ್ನು ತುಂಬಲು ಅವರಿಂದ ಆಗುತ್ತಿತ್ತೇ? ತನ್ನ ಸಂದೇಶವನ್ನು ಅಪರಿಪೂರ್ಣ ಮಾನವರು ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸುವಂತೆ ಅನುಮತಿಸುವ ಮೂಲಕ ದೇವರು ಆ ಸಂದೇಶಕ್ಕೆ ಪ್ರೀತಿವಾತ್ಸಲ್ಯ, ವೈವಿಧ್ಯದ ಕಂಪು ಬೆರೆಸಿದ್ದಾನೆ. ಮಾತ್ರವಲ್ಲ ನಮ್ಮ ಅನಿಸಿಕೆ ಭಾವನೆಗಳನ್ನು ಪ್ರತಿಬಿಂಬಿಸುವಂಥ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾನೆ!

ಪುರಾವೆಗಳನ್ನು ಮನಸ್ಸಿನಲ್ಲಿಡಿ

8. ಬೇರೆಲ್ಲ ಧರ್ಮಗ್ರಂಥಗಳಿಗಿಂತ ಬೈಬಲ್‌ ವಿಶಿಷ್ಟವೆಂದು ಏಕೆ ಹೇಳಸಾಧ್ಯ?

8 ಬೈಬಲ್‌ ದೇವಪ್ರೇರಿತ ಎನ್ನುವುದಕ್ಕೆ ಹೇರಳ ಪುರಾವೆಗಳಿವೆ. ಒಂದು ಪುರಾವೆ ಏನೆಂದರೆ, ದೇವರನ್ನು ಚೆನ್ನಾಗಿ ತಿಳಿದುಕೊಳ್ಳಲು ಬೈಬಲ್‌ ನಮಗೆ ಸಹಾಯ ಮಾಡುತ್ತದೆ. ಬೇರೆ ಯಾವ ಧರ್ಮಗ್ರಂಥವೂ ದೇವರ ಬಗ್ಗೆ ಅಷ್ಟೊಂದು ವಿವರಗಳನ್ನು ಕೊಡುವುದಿಲ್ಲ. ಉದಾಹರಣೆಗೆ, ಹಿಂದೂ ವೇದಗಳ ಭಾಗವಾಗಿರುವ ಉಪನಿಷತ್ತುಗಳಲ್ಲಿ ವಿಧಿಸಂಸ್ಕಾರಗಳ ಬಗ್ಗೆ ಮತ್ತು ಸಿದ್ಧಾಂತಗಳ ಬಗ್ಗೆ ತಿಳಿಸಲಾಗಿದೆ. ರಾಮಾಯಣ ಮತ್ತು ಮಹಾಭಾರತ ಪುರಾಣ ಕಥೆಗಳಾಗಿವೆ. ಮಹಾಭಾರತದ ಒಂದು ಭಾಗವಾಗಿರುವ ಭಗವದ್ಗೀತೆಯಲ್ಲಿ ನೈತಿಕ ನಿಯಮಗಳಿವೆ. ಬೌದ್ಧ ಧರ್ಮಗ್ರಂಥವಾದ ತ್ರಿಪಿಟಕದ (ಮೂರು ಸಂಗ್ರಹಗಳು) ಒಂದು ಸಂಪುಟವು ಮುಖ್ಯವಾಗಿ ಸಂನ್ಯಾಸಿ-ಸಂನ್ಯಾಸಿನಿಯರು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿಸುತ್ತದೆ. ಇನ್ನೊಂದು ಸಂಪುಟವು ಬೌದ್ಧ ಸಿದ್ಧಾಂತಗಳ ಕುರಿತಾಗಿದೆ. ಮೂರನೆಯ ಸಂಪುಟದಲ್ಲಿ ಬುದ್ಧನ ಬೋಧನೆಗಳಿವೆ. ಬುದ್ಧನು ತಾನು ದೇವರೆಂದು ಹೇಳಿಕೊಳ್ಳಲಿಲ್ಲ. ದೇವರ ಕುರಿತು ಅವನು ಹೇಳಿದ್ದೂ ತೀರ ಕಡಿಮೆ. ಕನ್‌ಫ್ಯೂಷಿಯನ್‌ ಮತದ ಪುಸ್ತಕಗಳು ಪ್ರಾಚೀನ ಘಟನೆ, ನೈತಿಕ ರೀತಿನಿಯಮ, ಮಂತ್ರವಿದ್ಯೆ ಮತ್ತು ಗೀತೆಗಳ ಸಂಗ್ರಹವಾಗಿವೆ. ಇಸ್ಲಾಮ್‌ ಧರ್ಮಗ್ರಂಥವು ಒಬ್ಬನೇ ದೇವರಿದ್ದಾನೆಂದು ಮತ್ತು ಸರ್ವಜ್ಞಾನಿಯಾದ ಆತ ಮುಂದಾಗುವುದನ್ನೆಲ್ಲ ಬಲ್ಲನು ಎಂದು ಕಲಿಸುತ್ತದೆ. ದೇವರ ಹೆಸರು ಯೆಹೋವ ಎಂದು ಬೈಬಲ್‌ನಲ್ಲಿ ಸಾವಿರಾರು ಬಾರಿ ಇರುವುದಾದರೂ ಇಸ್ಲಾಮ್‌ ಧರ್ಮಗ್ರಂಥದಲ್ಲಿ ಅದು ಒಂದು ಸಾರಿಯೂ ಕಾಣಸಿಗುವುದಿಲ್ಲ.

9, 10. ಬೈಬಲಿನಿಂದ ದೇವರ ಕುರಿತು ನಾವು ಏನು ಕಲಿಯಬಲ್ಲೆವು?

9 ಬಹುತೇಕ ಧರ್ಮಗ್ರಂಥಗಳು ದೇವರ ಬಗ್ಗೆ ನಮಗೆ ತಿಳಿಸುವುದು ತೀರ ಕಡಿಮೆ. ಆದರೆ ಬೈಬಲ್‌ ಹಾಗಲ್ಲ. ಯೆಹೋವ ದೇವರ ಬಗ್ಗೆ ಮತ್ತು ಆತನ ಕ್ರಿಯೆಗಳ ಬಗ್ಗೆ ತಿಳಿಯಲು ಅದು ನಮಗೆ ಸಹಾಯ ಮಾಡುತ್ತದೆ. ಆತನ ಗುಣಗಳ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಆತನು ಸರ್ವಶಕ್ತನೂ ವಿವೇಕಿಯೂ ನ್ಯಾಯವಂತನೂ ಆಗಿದ್ದಾನೆ ಎನ್ನುವುದನ್ನು ಮಾತ್ರವಲ್ಲ ನಮ್ಮನ್ನು ಪ್ರೀತಿಸುವ ದೇವರು ಎಂದು ತೋರಿಸಿಕೊಡುತ್ತದೆ. (ಯೋಹಾನ 3:16; 1 ಯೋಹಾನ 4:19 ಓದಿ.) “ದೇವರು ಪಕ್ಷಪಾತಿಯಲ್ಲ . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಎಂದು ಸಹ ಬೈಬಲ್‌ ಹೇಳುತ್ತದೆ. (ಅ. ಕಾ. 10:34, 35) ಬೈಬಲ್‌ ನಾನಾ ಭಾಷೆಗಳಲ್ಲಿ ಲಭ್ಯವಿರುವುದು ದೇವರು ನಿಷ್ಪಕ್ಷಪಾತಿ ಎನ್ನುವುದಕ್ಕೆ ರುಜುವಾತಾಗಿದೆ. ಜಗತ್ತಿನಲ್ಲಿ ಸುಮಾರು 6,700 ಭಾಷೆಗಳಿವೆ ಮತ್ತು ಅವುಗಳಲ್ಲಿ ಸುಮಾರು 100 ಭಾಷೆಗಳು ಪ್ರಪಂಚದ 90 ಪ್ರತಿಶತ ಜನರು ಮಾತಾಡುವ ಭಾಷೆಗಳಾಗಿವೆ ಎಂದು ಬಹುಭಾಷಾ ಪಂಡಿತರು ಹೇಳುತ್ತಾರೆ. ಹಾಗಿದ್ದರೂ ಇಡೀ ಬೈಬಲ್‌ ಅಥವಾ ಅದರ ಭಾಗಗಳು 2,400ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಅಂದರೆ ಪ್ರಪಂಚದಲ್ಲಿ ಹೆಚ್ಚುಕಡಿಮೆ ಪ್ರತಿಯೊಬ್ಬರು ಇಡೀ ಬೈಬಲನ್ನು ಅಥವಾ ಅದರ ಕೆಲವು ಭಾಗಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಸಾಧ್ಯವಿದೆ.

10 “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಎಂದನು ಯೇಸು. (ಯೋಹಾ. 5:17) ‘ಯುಗಯುಗಾಂತರಗಳಲ್ಲಿಯೂ ಯೆಹೋವನೇ ದೇವರು’ ಎಂದು ಸಹ ಬೈಬಲ್‌ ಹೇಳುತ್ತದೆ. ಹೀಗಿರುವಾಗ ಯೆಹೋವನು ಮಾಡಿರುವ ಎಷ್ಟೋ ಕೆಲಸಗಳ ಕುರಿತು ಯೋಚಿಸಿ! (ಕೀರ್ತ. 90:2) ಆತನು ಹಿಂದೆ ಮಾಡಿದ, ಈಗ ಮಾಡುತ್ತಿರುವ, ಮುಂದೆ ಮಾಡಲಿರುವ ಸಕಲವನ್ನು ನಮಗೆ ತಿಳಿಸುವುದು ಬೈಬಲ್‌ ಒಂದೇ. ಆತನು ಮೆಚ್ಚುವ, ಮೆಚ್ಚದಿರುವ ವಿಷಯಗಳ ಕುರಿತು ಮತ್ತು ಆತನಿಗೆ ಆಪ್ತರಾಗುವುದು ಹೇಗೆಂಬುದರ ಕುರಿತು ತಿಳಿಸುವುದು ಕೂಡ ಬೈಬಲ್‌ ಮಾತ್ರವೇ. (ಯಾಕೋ. 4:8) ಹಾಗಾಗಿ ವೈಯಕ್ತಿಕ ಅಭಿರುಚಿಗಳಾಗಲಿ ಕೆಲಸಕಾರ್ಯಗಳಾಗಲಿ ಚಿಂತೆಗಳಾಗಲಿ ನಮ್ಮನ್ನು ದೇವರಿಂದ ದೂರಮಾಡುವಂತೆ ಎಂದಿಗೂ ಬಿಡದಿರೋಣ.

11. ಬೈಬಲಿನಿಂದ ಯಾವ ವಿವೇಕಯುತ ಸಲಹೆಗಳನ್ನು ನಾವು ಪಡೆಯುತ್ತೇವೆ?

11 ಬೈಬಲ್‌ ವಿವೇಕದ ಭಂಡಾರ. ಆ ವಿವೇಕ ಭರವಸಾರ್ಹ. ಇದು ಸಹ ಬೈಬಲಿನ ಗ್ರಂಥಕರ್ತ ಮಹೋನ್ನತ ದೇವರೇ ಹೊರತು ಮಾನವನಲ್ಲ ಎಂದು ತೋರಿಸುತ್ತದೆ. ಅಪೊಸ್ತಲ ಪೌಲ ಹೀಗೆ ಕೇಳಿದನು: “ಯೆಹೋವನಿಗೆ ಉಪದೇಶಮಾಡುವಂತೆ ಆತನ ಮನಸ್ಸನ್ನು ಯಾರು ತಿಳಿದಿರುತ್ತಾನೆ?” (1 ಕೊರಿಂ. 2:16) ಈ ವಚನವು ಪ್ರವಾದಿ ಯೆಶಾಯನು ತನ್ನ ಕಾಲದ ಜನರಿಗೆ ಕೇಳಿದ ವಿಷಯದ ಮೇಲೆ ಆಧರಿತವಾಗಿದೆ. ಅವನು ಹೀಗೆ ಕೇಳಿದ್ದನು: “ಯೆಹೋವನ ಆತ್ಮಕ್ಕೆ ಯಾವನು ವಿಧಿಯನ್ನು ನೇಮಿಸಿದನು? ಯಾವನು ಆಲೋಚನಾಕರ್ತನಾಗಿ ಆತನಿಗೆ ಉಪದೇಶಿಸಿದನು?” (ಯೆಶಾ. 40:13) ಉತ್ತರ ಸ್ಪಷ್ಟ. ಯೆಹೋವನಿಗೆ ಉಪದೇಶಿಸಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಬೈಬಲಿನ ಸಲಹೆಯನ್ನು ಅನ್ವಯಿಸುವುದರಿಂದ ನೂರಕ್ಕೆ ನೂರರಷ್ಟು ಒಳ್ಳೇ ಫಲಿತಾಂಶ ಪಡೆಯಸಾಧ್ಯ. ವಿವಾಹ, ಮಕ್ಕಳು, ಮನರಂಜನೆ, ಸಹವಾಸ, ಶ್ರಮಶೀಲತೆ, ಪ್ರಾಮಾಣಿಕತೆ, ನೈತಿಕತೆ ಹೀಗೆ ಯಾವುದೇ ವಿಷಯದಲ್ಲಿ ಬೈಬಲ್‌ ಕೊಡುವ ಸಲಹೆಯನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ಖಂಡಿತ. ಕೆಟ್ಟ ಸಲಹೆಯನ್ನು ಅದೆಂದೂ ಕೊಡದು. ಆದರೆ ಮನುಷ್ಯರು ಪ್ರತಿಬಾರಿ ಯಶಸ್ವಿಕರ ಸಲಹೆಯನ್ನು ಕೊಡುವಷ್ಟು ವಿವೇಕಿಗಳಲ್ಲ. (ಯೆರೆ. 10:23) ಒಮ್ಮೆ ಅವರು ಕೊಟ್ಟ ಸಲಹೆಯಲ್ಲಿ ದೋಷ ಕಂಡುಬಂದೊಡನೆ ತಿದ್ದುಪಡಿ ಮಾಡುತ್ತಾರೆ ಅಥವಾ ಆ ಸಲಹೆ ಈಗ ಉಚಿತವಲ್ಲವೆಂದು ಬದಲಾಯಿಸುತ್ತಾರೆ. ಹೌದು ಬೈಬಲ್‌ ಹೇಳುವಂತೆ “ಮನುಷ್ಯನ ಯೋಚನೆಗಳು ಉಸಿರೇ.”—ಕೀರ್ತ. 94:11.

12. ಬೈಬಲನ್ನು ನಾಶಗೊಳಿಸಲು ಜನರು ಹೇಗೆಲ್ಲ ಪ್ರಯತ್ನಿಸಿದರು?

12 ಬೈಬಲ್‌ ನಮಗೆ ದೇವರು ಕೊಟ್ಟ ಉಡುಗೊರೆ ಎಂಬುದಕ್ಕೆ ಇತಿಹಾಸ ಕೂಡ ಪುರಾವೆ ಕೊಡುತ್ತದೆ. ಬೈಬಲನ್ನು ನಾಶಪಡಿಸಲು ಅನೇಕರು ಪ್ರಯತ್ನಿಸಿದರು. ಕ್ರಿ.ಪೂ. 168ರಲ್ಲಿ ಸಿರಿಯದ ರಾಜ ನಾಲ್ಕನೇ ಆ್ಯಂಟಿಯೊಕಸ್‌ ಆಗ ಇದ್ದ ಎಲ್ಲ ಧರ್ಮಶಾಸ್ತ್ರ ಗ್ರಂಥಗಳನ್ನು ಹುಡುಕಿ ಸಟ್ಟುಹಾಕುವಂತೆ ಜನರಿಗೆ ಕಟ್ಟಳೆಯಿತ್ತನು. ಕ್ರಿ.ಶ. 303ರಲ್ಲಿ ರೋಮ್‌ ಚಕ್ರವರ್ತಿ ಡಯಕ್ಲೀಷನ್‌ ಕ್ರೈಸ್ತರು ಆರಾಧನೆಗಾಗಿ ಸೇರಿಬರುತ್ತಿದ್ದ ಕಟ್ಟಡಗಳನ್ನು ನಾಶಪಡಿಸಿ ಅವರ ಬೈಬಲ್‌ಗಳನ್ನು ಸುಟ್ಟುಹಾಕುವಂತೆ ಆಜ್ಞೆ ಹೊರಡಿಸಿದನು. ಆ ಆಜ್ಞೆಗನುಸಾರ ಸುಮಾರು ಹತ್ತು ವರ್ಷಗಳ ವರೆಗೆ ಬೈಬಲ್‌ಗಳನ್ನು ನಾಶಪಡಿಸಲಾಯಿತು. 11ನೇ ಶತಮಾನದ ನಂತರ ಅನೇಕ ಪೋಪ್‌ಗಳು ಜನಸಾಮಾನ್ಯರ ಭಾಷೆಗಳಲ್ಲಿ ಬೈಬಲ್‌ ಭಾಷಾಂತರವಾಗುವುದನ್ನು ನಿಲ್ಲಿಸಲು ಶತಪ್ರಯತ್ನ ಮಾಡಿದರು. ಏಕೆಂದರೆ ಜನರು ಬೈಬಲಿನಲ್ಲಿರುವ ವಿಷಯಗಳ ಜ್ಞಾನ ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ. ಬೈಬಲನ್ನು ಇಲ್ಲದಂತೆ ಮಾಡಲು ಸೈತಾನನು ಮತ್ತು ಅವನ ಜನರು ಮಾಡಿದ ಸರ್ವಪ್ರಯತ್ನಗಳ ಹೊರತೂ ಇಂದು ಬೈಬಲ್‌ ಎಲ್ಲರ ಕೈಸೇರುತ್ತಿದೆ. ಮಾನವಕುಲಕ್ಕೆ ತಾನು ಕೊಟ್ಟ ಉಡುಗೊರೆಯನ್ನು ಯಾರೂ ನಾಶಗೊಳಿಸದಂತೆ ಯೆಹೋವನು ನೋಡಿಕೊಂಡಿದ್ದಾನೆ.

ಅನೇಕರಿಗೆ ಮನಗಾಣಿಸಿದ ಪುರಾವೆ

13. ದೇವರೇ ಬೈಬಲಿನ ಗ್ರಂಥಕರ್ತ ಎನ್ನುವುದಕ್ಕೆ ಬೇರೆ ಯಾವ ಸಾಕ್ಷ್ಯಗಳಿವೆ?

13 ದೇವಪ್ರೇರಣೆಯಿಂದಲೇ ಬೈಬಲ್‌ ಬರೆಯಲ್ಪಟ್ಟದ್ದೆಂದು ನಂಬಲು ಇತರ ಸಾಕ್ಷ್ಯಗಳೂ ಇವೆ. ಕೆಲವೆಂದರೆ ಆಂತರಿಕ ಸಾಮರಸ್ಯ, ವೈಜ್ಞಾನಿಕ ನಿಷ್ಕೃಷ್ಟತೆ, ಪ್ರವಾದನೆಗಳ ನೆರವೇರಿಕೆ, ಮುಚ್ಚುಮರೆಯಿಲ್ಲದೆ ವಿಷಯಗಳನ್ನು ತಿಳಿಸಿರುವ ಬಗೆ, ಜನರ ಬದುಕನ್ನು ಬದಲಾಯಿಸಲು ಅದಕ್ಕಿರುವ ಶಕ್ತಿ, ಐತಿಹಾಸಿಕ ನಿಖರತೆ ಇತ್ಯಾದಿ. ಮಾತ್ರವಲ್ಲ ಪ್ಯಾರ 1ರಲ್ಲಿರುವ ಪ್ರಶ್ನೆಗಳಿಗೂ ಬೈಬಲ್‌ ತೃಪ್ತಿಕರ ಉತ್ತರಗಳನ್ನು ಕೊಡುತ್ತದೆ. ಬೈಬಲಿನ ಗ್ರಂಥಕರ್ತನು ದೇವರೆಂದು ತಮಗೆ ಯಾವುದು ಮನಗಾಣಿಸಿತೆಂಬ ಬಗ್ಗೆ ಕೆಲವರು ಏನು ಹೇಳುತ್ತಾರೆಂದು ನೋಡೋಣ.

14-16. (1) ಬೈಬಲ್‌ ದೇವಪ್ರೇರಣೆಯಿಂದ ಬರೆದ ಗ್ರಂಥವೆಂದು ಒಬ್ಬ ಮುಸ್ಲಿಮ್‌, ಒಬ್ಬ ಹಿಂದೂ ಮತ್ತು ಒಬ್ಬ ಆಜ್ಞೇಯತಾವಾದಿಗೆ ಯಾವುದು ಮನಗಾಣಿಸಿತು? (2) ಬೈಬಲಿನ ಗ್ರಂಥಕರ್ತನು ದೇವರೆಂದು ಮನಗಾಣಿಸಲು ಯಾವ ಪುರಾವೆಯನ್ನು ನೀವು ಕ್ಷೇತ್ರಸೇವೆಯಲ್ಲಿ ಉಪಯೋಗಿಸುವಿರಿ?

14 ಮಧ್ಯ ಪ್ರಾಚ್ಯ ದೇಶದಲ್ಲಿ ಹುಟ್ಟಿಬೆಳೆದ ಅನ್ವರ್‌ * ಒಬ್ಬ ಮುಸ್ಮಿಮ್‌. ಸ್ವಲ್ಪ ಸಮಯ ಉತ್ತರ ಅಮೆರಿಕದಲ್ಲಿ ವಾಸವಿದ್ದಾಗ ಯೆಹೋವನ ಸಾಕ್ಷಿಗಳು ಅವನ ಮನೆಗೆ ಭೇಟಿ ಕೊಟ್ಟರು. ಆ ಸಂದರ್ಭವನ್ನು ಅನ್ವರ್‌ ವಿವರಿಸುತ್ತಾನೆ: “ಆಗ ನನಗೆ ಕ್ರೈಸ್ತ ಧರ್ಮದ ಬಗ್ಗೆ ಒಳ್ಳೇ ಅಭಿಪ್ರಾಯ ಇರಲಿಲ್ಲ.” ಏಕೆಂದರೆ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರು ನಡೆಸಿದ ರಕ್ತಪಾತದ ಬಗ್ಗೆ ಕೇಳಿಸಿಕೊಂಡಿದ್ದೆ. “ಹಾಗಿದ್ದರೂ ಕುತೂಹಲ ಸ್ವಭಾವದವನಾದ ನಾನು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡೆ.” ಅನ್ವರ್‌ ಸ್ವದೇಶಕ್ಕೆ ಹಿಂತಿರುಗಿದ ಕಾರಣ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕ ಕಡಿದುಹೋಯಿತು. ಕೆಲವು ವರ್ಷಗಳ ನಂತರ ಆತ ಯೂರೋಪ್‌ಗೆ ಹೋದಾಗ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಅಧ್ಯಯನವನ್ನು ಮುಂದುವರಿಸಿದನು. ಅವನು ಯಾವ ನಿರ್ಣಯಕ್ಕೆ ಬಂದನು? “ಬೈಬಲ್‌ ಪ್ರವಾದನೆಗಳ ನೆರವೇರಿಕೆ, ಬೈಬಲಿನಲ್ಲಿ ಆರಂಭದಿಂದ ಕೊನೆ ವರೆಗೆ ತಿಳಿಸುವ ವಿಷಯಗಳು ಒಂದಕ್ಕೊಂದು ಸರಿಹೊಂದುವುದು, ಒಂಚೂರು ವಿರೋಧೋಕ್ತಿ ಇಲ್ಲದಿರುವುದು, ಯೆಹೋವನ ಆರಾಧಕರ ಮಧ್ಯೆಯಿರುವ ಪ್ರೀತಿ ಇವೆಲ್ಲವನ್ನು ನೋಡಿ ಬೈಬಲ್‌ ನಿಜವಾಗಿಯೂ ದೇವರ ವಾಕ್ಯ ಎಂದು ನನಗೆ ಮನವರಿಕೆ ಆಯಿತು” ಎನ್ನುತ್ತಾನೆ ಅನ್ವರ್‌. 1998ರಲ್ಲಿ ಅನ್ವರ್‌ ದೀಕ್ಷಾಸ್ನಾನ ಹೊಂದಿದನು.

15 ಹದಿನಾರು ವರ್ಷದ ಆಶಾ ಹಿಂದೂ ಹುಡುಗಿ. “ದೇವಸ್ಥಾನಕ್ಕೆ ಹೋದಾಗ ಅಥವಾ ಕಷ್ಟ ಬಂದಾಗ ಮಾತ್ರ ನಾನು ದೇವರಿಗೆ ಕೈಮುಗಿಯುತ್ತಿದ್ದೆ. ಸುಖಸಂತೋಷ ಇರುವಾಗ ದೇವರ ಯೋಚನೆ ಕೂಡ ಬರುತ್ತಿರಲಿಲ್ಲ. ಒಮ್ಮೆ ಯೆಹೋವನ ಸಾಕ್ಷಿಗಳು ನಮ್ಮ ಮನೆಯ ಕದವನ್ನು ತಟ್ಟಿದರು. ಅಂದಿನಿಂದ ನನ್ನ ಬದುಕು ಹೊಸ ತಿರುವು ಪಡೆದುಕೊಂಡಿತು” ಎಂದು ಹೇಳುತ್ತಾಳೆ ಆಶಾ. ಬೈಬಲ್‌ ಅಧ್ಯಯನ ಮಾಡಿದಾಗ ದೇವರು ತನ್ನ ಸ್ನೇಹಿತನೆಂದು ಅವಳು ತಿಳಿದುಕೊಂಡಳು. ಬೈಬಲ್‌ ದೇವಪ್ರೇರಣೆಯಿಂದಲೇ ಬರೆಯಲ್ಪಟ್ಟಿದೆ ಎಂದು ಯಾವುದು ಅವಳಿಗೆ ಮನಗಾಣಿಸಿತು? ಅವಳೇ ಉತ್ತರಿಸುತ್ತಾಳೆ: “ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೂ ಬೈಬಲಿನಲ್ಲಿ ಉತ್ತರವಿತ್ತು. ದೇವರನ್ನು ನೋಡದೆಯೇ ಆತನಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಬೈಬಲ್‌ ಸಹಾಯ ಮಾಡಿತು. ದೇವಸ್ಥಾನಕ್ಕೆ ಹೋಗಿ ವಿಗ್ರಹದ ಮುಂದೆ ನಾನು ನಮಸ್ಕರಿಸಬೇಕಾಗಿಲ್ಲ ಎಂದು ತಿಳಿದೆ.”

16 ಪೌಲಾ ಕ್ಯಾಥೋಲಿಕಳಾಗಿದ್ದರೂ ಹದಿವಯಸ್ಸಿನಲ್ಲಿ ಅವಳು ಆಜ್ಞೇಯತಾವಾದಿ ಆದಳು. ಅಂದರೆ ದೇವರು ಅಸ್ತಿತ್ವದಲ್ಲಿದ್ದಾನೋ ಇಲ್ಲವೋ ಎನ್ನುವುದು ಗ್ರಹಿಕೆಗೆ ಮೀರಿದ ವಿಷಯವೆಂದು ಅನಿಸತೊಡಗಿತು. ಮುಂದೇನಾಯಿತೆಂದು ಆಕೆ ಹೇಳುತ್ತಾಳೆ. “ಹಿಪ್ಪಿ ಜೀವನಶೈಲಿ ಆಗ ತುಂಬ ಖ್ಯಾತವಾಗಿತ್ತು. ನನ್ನ ಒಬ್ಬ ಸ್ನೇಹಿತ ಸಹ ಆ ಜೀವನಶೈಲಿ ರೂಢಿಸಿಕೊಂಡಿದ್ದ. ಕೆಲವು ತಿಂಗಳುಗಳ ನಂತರ ಅವನನ್ನು ನೋಡಿದಾಗ ಅವನ ತೋರಿಕೆ ಪೂರ್ತಿ ಬದಲಾಗಿತ್ತು. ಅವನು ನೀಟಾಗಿ ಶೇವ್‌ ಮಾಡಿ, ಕೂದಲನ್ನು ಕತ್ತರಿಸಿದ್ದ. ಮಾತ್ರವಲ್ಲ ಸಂತೋಷದಿಂದ ಇದ್ದ. ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ, ‘ನಿಂಗೇನಾಯ್ತು, ಇಷ್ಟು ದಿನ ಎಲ್ಲಿ ಹೋಗಿದ್ದೆ?’ ಎಂದು ಕೇಳಿದೆ. ಅದಕ್ಕವನು ಯೆಹೋವನ ಸಾಕ್ಷಿಗಳಿಂದ ಬೈಬಲನ್ನು ಕಲಿಯುತ್ತಿದ್ದೇನೆಂದು ಹೇಳಿ ನನಗೆ ಸಾಕ್ಷಿಕೊಟ್ಟ.” ಒಬ್ಬರ ಜೀವನವನ್ನು ಬದಲಾಯಿಸುವಷ್ಟು ಶಕ್ತಿ ಬೈಬಲ್‌ ಸತ್ಯಕ್ಕಿರುವುದನ್ನು ನೋಡಿ ಪೌಲಾ ಕೂಡ ಬೈಬಲನ್ನು ಕಲಿಯುವ ಮನಸ್ಸು ಮಾಡಿದಳು. ಬೈಬಲ್‌ ನಿಜವಾಗಿಯೂ ದೇವರ ಪ್ರೇರಣೆಯಿಂದ ಬರೆಯಲ್ಪಟ್ಟ ಗ್ರಂಥವೆಂದು ನಂಬಿದಳು.

“ನಿನ್ನ ವಾಕ್ಯವು ನನ್ನ ಕಾಲಿಗೆ ದೀಪ”

17. ಪ್ರತಿದಿನವೂ ಬೈಬಲನ್ನು ಓದಿ ಧ್ಯಾನಿಸುವುದರಿಂದ ನೀವು ಹೇಗೆ ಪ್ರಯೋಜನ ಹೊಂದುವಿರಿ?

17 ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಕೊಟ್ಟಿರುವ ಒಂದು ಅದ್ಭುತಕರ ಉಡುಗೊರೆ ಬೈಬಲ್‌. ಪ್ರತಿದಿನವೂ ಅದನ್ನು ಓದಿ ಆನಂದಿಸಿರಿ. ಆಗ ಬೈಬಲ್‌ ಮತ್ತು ಅದರ ಗ್ರಂಥಕರ್ತನ ಮೇಲೆ ನಿಮ್ಮ ಪ್ರೀತಿ ಹೆಚ್ಚಾಗುವುದು. (ಕೀರ್ತ. 1:1, 2) ಬೈಬಲನ್ನು ಪ್ರತಿಬಾರಿ ಓದುವ ಮುಂಚೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪವಿತ್ರಾತ್ಮವನ್ನು ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥಿಸಿರಿ. (ಲೂಕ 11:13) ಬೈಬಲಿನಲ್ಲಿ ದೇವರ ಆಲೋಚನೆಗಳು ಅಡಕವಾಗಿವೆ. ಅದನ್ನು ಓದಿ ಧ್ಯಾನಿಸುವಾಗ ದೇವರ ಆಲೋಚನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ.

18. ಬೈಬಲಿನಿಂದ ಕಲಿಯುತ್ತಾ ಇರಲು ನೀವೇಕೆ ಬಯಸುತ್ತೀರಿ?

18 ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಹೆಚ್ಚೆಚ್ಚು ಪಡೆದುಕೊಳ್ಳುತ್ತಾ ಹೋದಂತೆ ನೀವು ಕಲಿಯುವ ವಿಷಯಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುತ್ತಾ ಇರಿ. (ಕೀರ್ತನೆ 119:105 ಓದಿ.) ಬೈಬಲನ್ನು ಕನ್ನಡಿಯಂತೆ ಬಳಸಿ. ಬದಲಾವಣೆ ಮಾಡಿಕೊಳ್ಳುವ ಅಗತ್ಯವನ್ನು ಕಾಣುವಲ್ಲಿ ಕೂಡಲೆ ಮಾಡಿರಿ. (ಯಾಕೋ. 1:23-25) ನಿಮ್ಮ ನಂಬಿಕೆಗಳನ್ನು ಸಮರ್ಥಿಸಲು ಮತ್ತು ದೀನಜನರ ಹೃದಯದಲ್ಲಿರುವ ಸುಳ್ಳುಬೋಧನೆಗಳನ್ನು ತೆಗೆದುಹಾಕಲು ದೇವರ ವಾಕ್ಯವನ್ನು ಕತ್ತಿಯಂತೆ ಉಪಯೋಗಿಸಿರಿ. (ಎಫೆ. 6:17) ಹೀಗೆ ಮಾಡುವಾಗ, ಪ್ರವಾದಿಗಳು ಮತ್ತು ಇತರ ಬೈಬಲ್‌ ಬರಹಗಾರರು ‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟದ್ದಕ್ಕಾಗಿ’ ಕೃತಜ್ಞರಾಗಿರಿ.

[ಪಾದಟಿಪ್ಪಣಿಗಳು]

^ ಪ್ಯಾರ. 3 ಎ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದ ನ್ಯೂ ಟೆಸ್ಟಮೆಂಟ್‌ ಆ್ಯಂಡ್‌ ಅದರ್‌ ಅರ್ಲಿ ಕ್ರಿಶ್ಚಿಯನ್‌ ಲಿಟ್ರೇಚರ್‌.

^ ಪ್ಯಾರ. 14 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರತಿದಿನವೂ ಬೈಬಲ್‌ ಓದಿ. ಆಗ ಅದರ ಗ್ರಂಥಕರ್ತನಾದ ಯೆಹೋವನ ಮೇಲೆ ನಿಮ್ಮ ಪ್ರೀತಿ ಹೆಚ್ಚುವುದು

[ಪುಟ 26ರಲ್ಲಿರುವ ಚಿತ್ರ]

ಪತ್ರವು ಯಾರಿಂದ ಬಂದದ್ದೆಂದು ಅದರಲ್ಲಿರುವ ಸಹಿಯಿಂದ ಗೊತ್ತಾಗುತ್ತದೆ