ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವೇಕಿಗಳಾಗಿದ್ದು “ಕುಶಲ ಮಾರ್ಗದರ್ಶನೆ” ಹುಡುಕಿರಿ

ವಿವೇಕಿಗಳಾಗಿದ್ದು “ಕುಶಲ ಮಾರ್ಗದರ್ಶನೆ” ಹುಡುಕಿರಿ

ವಿವೇಕಿಗಳಾಗಿದ್ದು “ಕುಶಲ ಮಾರ್ಗದರ್ಶನೆ” ಹುಡುಕಿರಿ

ಜೀವನವೆಂಬುದು ಸಮುದ್ರಯಾನ ಇದ್ದಂತೆ. ಈ ಪಯಣವನ್ನು ಯಶಸ್ವಿಗೊಳಿಸಲು ವಿವೇಕ ಅಗತ್ಯ. ಆದರೆ ಜೀವನದ ಉಬ್ಬರವಿಳಿತಗಳನ್ನು ಎದುರಿಸಲು ಮಾನವ ವಿವೇಕವು ಹೆಚ್ಚೇನೂ ಸಹಾಯ ನೀಡಿಲ್ಲ. ಅನೇಕರ ಬಾಳು ಸಂಕಷ್ಟಗಳ ಬಿರುಗಾಳಿಗೆ ಸಿಲುಕಿ ಹಡಗೊಡೆತಕ್ಕೆ ಒಳಗಾಗಿದೆ. (ಕೀರ್ತ. 107:23, 27) ಈ ಹೋಲಿಕೆ ಸೂಕ್ತವೇಕೆ?

ಪ್ರಾಚೀನ ಕಾಲದಲ್ಲಿ ಸಮುದ್ರಯಾನ ಒಂದು ಸವಾಲಾಗಿತ್ತು. ಅದಕ್ಕೆ ಅನುಭವ ಬೇಕಿತ್ತು. ಅನುಭವಸ್ಥ ನಾವಿಕನಿಂದ, ಚುಕ್ಕಾಣಿಗನಿಂದ ಕಲಿಯಬೇಕಾದ ಕಲೆ ಅದಾಗಿತ್ತು. (ಅ. ಕಾ. 27:9-11) ಚುಕ್ಕಾಣಿಗನ ಮಹತ್ವದ ಪಾತ್ರಕ್ಕೆ ಒತ್ತುಕೊಡಲು ಪುರಾತನ ವರ್ಣಚಿತ್ರಗಳಲ್ಲಿ ಅವನನ್ನು ಇತರರಿಗಿಂತ ಎದ್ದು ಕಾಣುವಂಥ ರೀತಿಯಲ್ಲಿ ಚಿತ್ರಿಸಲಾಗಿದೆ. ವಿಶಾಲ ಕಡಲಲ್ಲಿ ಅಪಾಯಗಳನ್ನು ದಕ್ಷತೆಯಿಂದ ನಿಭಾಯಿಸಲು ನಾವಿಕರು ನಕ್ಷತ್ರ, ಗಾಳಿಯ ದಿಕ್ಕು ಮತ್ತಿತರ ವಿಚಾರಗಳನ್ನು ಅಧ್ಯಯನ ಮಾಡುತ್ತಿದ್ದರು. ಬೈಬಲ್‌ ನಿರ್ದಿಷ್ಟ ಸ್ಥಳದ ನಾವಿಕರನ್ನು “ವಿವೇಕಿಗಳು” ಎಂದು ವರ್ಣಿಸಿದ್ದುಂಟು.—ಯೆಹೆ. 27:8.

ಪ್ರಾಚೀನಕಾಲದಲ್ಲಿ ಸಮುದ್ರಯಾನ ಪ್ರಯಾಸಕರವಾಗಿದ್ದಂತೆ ಇಂದು ಜೀವನದ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟಕರವಾಗಿ ಕಾಣಬಹುದು. ಆದರೆ ನಮಗೆ ಯಾವ ಸಹಾಯವಿದೆ?

“ಕುಶಲ ಮಾರ್ಗದರ್ಶನೆ” ಪಡೆಯುವ ವಿಧ

ಜೀವನವನ್ನು ಸಮುದ್ರಯಾನಕ್ಕೆ ಹೋಲಿಸಿರುವುದನ್ನು ಮನಸ್ಸಿನಲ್ಲಿಟ್ಟು ಬೈಬಲಿನ ಈ ಸತ್ಯವನ್ನು ಪರಿಗಣಿಸಿ: “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯುಳ್ಳವನಾಗುವನು [ಕುಶಲ ಮಾರ್ಗದರ್ಶನೆ ಪಡೆಯುವನು, NW].” (ಜ್ಞಾನೋ. 1:5, 6) ಉಚಿತಾಲೋಚನೆ ಅಥವಾ ಕುಶಲ ಮಾರ್ಗದರ್ಶನೆಗೆ ಮೂಲ ಹೀಬ್ರುವಿನಲ್ಲಿ ಬಳಸಿರುವ ಪದವು ಪ್ರಾಚೀನ ಹಡಗಿನಲ್ಲಿದ್ದ ಕಮಾಂಡರ್‌ನ ಕಾರ್ಯವೈಖರಿಯನ್ನು ವರ್ಣಿಸುವ ಪದವಾಗಿದೆ. ಹಡಗನ್ನು ಕೌಶಲ್ಯದಿಂದ ಮಾರ್ಗದರ್ಶಿಸಲು, ಮುನ್ನಡೆಸಲು ಅವನಿಗಿರುವ ದಕ್ಷತೆಯನ್ನು ಅದು ಸೂಚಿಸುತ್ತದೆ.

“ಕುಶಲ ಮಾರ್ಗದರ್ಶನೆ” ಕೈಗೆಟುಕದ ವಿಷಯವಲ್ಲ. ಪ್ರಯತ್ನ ಹಾಕಿದರೆ ಸಿಕ್ಕೇ ಸಿಗುತ್ತದೆ. ಅದರ ಸಹಾಯದಿಂದ ಜೀವನವೆಂಬ ಕಡಲಲ್ಲಿ ಯಶಸ್ವಿಯಾಗಿ ಮುಂದೆ ಸಾಗಲು ಕಲಿಯಬಲ್ಲೆವು. ಜ್ಞಾನೋಕ್ತಿ ತಿಳಿಸುವಂತೆ “ಜ್ಞಾನ” “ಬುದ್ಧಿ” “ವಿವೇಕ”ವನ್ನು ಉಪಯೋಗಿಸಿ ಕೆಲಸ ಮಾಡಬೇಕು. (ಜ್ಞಾನೋ. 1:2-6; 2:1-9) ಅದೇ ಸಮಯದಲ್ಲಿ ದೈವಿಕ ಮಾರ್ಗದರ್ಶನ ಕೋರುವುದು ಅತ್ಯಗತ್ಯ. ಏಕೆಂದರೆ ನಮ್ಮ ಬಾಳನೌಕೆಯ ದಿಕ್ಕು ತಪ್ಪಿಸಿ ಮೋಸಗೊಳಿಸುವ ದುಷ್ಟರಿದ್ದಾರೆ.—ಜ್ಞಾನೋ. 12:5.

ಹಾಗಾಗಿ ನಾವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಆ ಮೂಲಕ ಯೆಹೋವನ ಕುರಿತು ಮತ್ತು ಆತನನ್ನು ಪೂರ್ಣವಾಗಿ ಪ್ರತಿಬಿಂಬಿಸಿದ ಯೇಸು ಕ್ರಿಸ್ತನ ಕುರಿತು ಅಮೂಲ್ಯ ಜ್ಞಾನ ಪಡೆದುಕೊಳ್ಳುವೆವು. (ಯೋಹಾ. 14:9) ಕ್ರೈಸ್ತ ಕೂಟಗಳಿಂದಲೂ ವಿವೇಕಯುತ ಬುದ್ಧಿವಾದ ಪಡೆಯಸಾಧ್ಯ. ಜೊತೆಗೆ ಹೆತ್ತವರ ಮತ್ತು ಇತರರ ಅನುಭವದಿಂದಲೂ ನಾವು ಕಲಿಯಸಾಧ್ಯವಿದೆ.—ಜ್ಞಾನೋ. 23:22.

ಮುಂದಾಲೋಚನೆಮಾಡಿ

ಸಂಕಷ್ಟಗಳ ಅಲೆಗಳಿಗೆ ಸಿಲುಕಿರುವಾಗಲಂತೂ ನಮಗೆ “ಕುಶಲ ಮಾರ್ಗದರ್ಶನೆ” ಬಹಳ ಅಗತ್ಯ. ಜಟಿಲ ಸನ್ನಿವೇಶಗಳಲ್ಲಿರುವಾಗ ಯಾವ ಹೆಜ್ಜೆ ತಕ್ಕೊಳ್ಳಬೇಕೆಂದು ಸಂಶಯವಿರುವಲ್ಲಿ ನಾವು ಯಾವ ಕ್ರಿಯೆಯನ್ನೂ ಕೈಗೊಳ್ಳದೆ ಸ್ತಬ್ಧರಾಗಿಬಿಡುವೆವು. ಆಗ ಪರಿಣಾಮ ವಿಪತ್ಕಾರಕವಾಗಬಹುದು.—ಯಾಕೋ. 1:5, 6.

“ಕುಶಲ ಮಾರ್ಗದರ್ಶನೆ” ಎಂಬುದಕ್ಕೆ ಮೂಲ ಹೀಬ್ರು ಭಾಷೆಯಲ್ಲಿ ಬಳಸಿರುವ ಪದವನ್ನು ಯುದ್ಧಸಂಬಂಧದಲ್ಲಿ ಕೂಡ ಉಪಯೋಗಿಸಲಾಗಿದೆ. “ಮಂತ್ರಾಲೋಚನೆಯಿಂದ [ಕುಶಲ ಮಾರ್ಗದರ್ಶನೆಯಿಂದ, NW] ಯುದ್ಧವನ್ನು ನಡಿಸು; ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವದು.”—ಜ್ಞಾನೋ. 20:18; 24:6.

ರಣರಂಗದಲ್ಲಿ ಸೈನ್ಯವನ್ನು ಸಂಘಟಿಸುವ ಯುದ್ಧಕಲಾನಿಪುಣನು ಬರಬಹುದಾದ ಅಪಾಯವನ್ನು ಮುಂಗಾಣುತ್ತಾನೆ. ಹಾಗೆಯೇ ನಾವು ನಮ್ಮ ಆಧ್ಯಾತ್ಮಿಕತೆಗೆ ಬರಬಹುದಾದ ಅಪಾಯಗಳನ್ನು ಮುಂದಾಗಿಯೇ ತಿಳಿಯಬೇಕು. (ಜ್ಞಾನೋ. 22:3) ಉದಾಹರಣೆಗೆ, ಹೊಸ ಉದ್ಯೋಗ ಅಥವಾ ಬಡತಿಯನ್ನು ಸ್ವೀಕರಿಸುವ ನಿರ್ಣಯ ಮಾಡಲಿಕ್ಕಿದೆಯೆಂದು ನೆನಸಿ. ಅಂಥ ಸಂದರ್ಭದಲ್ಲಿ ವೇತನ, ಕೆಲಸಕ್ಕೆ ಹೋಗಿಬರಲು ತಗಲುವ ಸಮಯ ಇತ್ಯಾದಿಯ ಬಗ್ಗೆ ಯೋಚಿಸುವುದು ಸಹಜ. ಆದರೆ ಅದರೊಟ್ಟಿಗೆ, ‘ಆ ಕೆಲಸ ಬೈಬಲ್‌ ಮೂಲತತ್ವಗಳೊಂದಿಗೆ ಹೊಂದಿಕೆಯಲ್ಲಿದೆಯೇ? ಕೆಲಸದ ಅವಧಿ ಅಥವಾ ಶಿಫ್ಟ್‌ಗಳು ಕ್ರೈಸ್ತ ಚಟುವಟಿಕೆಗಳಿಗೆ ತಡೆಯಾಗುತ್ತವಾ?’ ಎನ್ನುವುದನ್ನು ಕೂಡ ಮುಂದಾಲೋಚಿಸಿ.—ಲೂಕ 14:28-30.

ಯೆಹೋವನ ಸಾಕ್ಷಿಯಾಗಿರುವ ಲೋರೆಟ ಎಂಬಾಕೆ ಒಳ್ಳೇ ಉದ್ಯೋಗದಲ್ಲಿದ್ದಳು. ಆಕೆ ಕೆಲಸಮಾಡುತ್ತಿದ್ದ ಕಂಪನಿ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದಾಗ ಉನ್ನತ ಹುದ್ದೆಯ ಅವಕಾಶ ಲೋರೆಟಳಿಗೆ ಒಲಿದು ಬಂತು. ಕಂಪನಿಯ ಡೈರೆಕ್ಟರರು ಆಕೆಗೆ, “ಇಂಥ ಸುವರ್ಣಾವಕಾಶ ಜೀವಮಾನದಲ್ಲಿ ಮತ್ತೆ ಸಿಗಲ್ಲ. ಕೂಟಗಳ ಬಗ್ಗೆ ಏನೂ ಯೋಚನೆ ಮಾಡಬೇಡಿ. ನಿಮ್ಮ ಕಿಂಗ್‌ಡಮ್‌ ಹಾಲ್‌ ಹತ್ತಿರದಲ್ಲೇ ಇದೆ. ಅದನ್ನು ಕೂಡ ತಿಳಿದುಕೊಂಡು ಬಂದಿದ್ದೇವೆ” ಎಂದು ಹೇಳಿದರು. ಲೋರೆಟ ಏನು ಮಾಡಿದಳು? ಆಕೆಗೆ ತನ್ನ ಜೀವನವನ್ನು ಸರಳ ಮಾಡಿ ದೇವರ ಸೇವೆ ಹೆಚ್ಚು ಮಾಡಬೇಕೆನ್ನುವ ಆಶೆಯಿತ್ತು. ಹಾಗಾಗಿ ಲೋರೆಟ ಮುಂದಾಲೋಚಿಸಿ, ಬಡತಿ ಸ್ವೀಕರಿಸಿದರೆ ಕ್ರೈಸ್ತ ಚಟುವಟಿಕೆಗಳಿಗೆ ಹೆಚ್ಚು ಸಮಯ ಕೊಡಲಾಗದೆಂದು ತಿಳಿದುಕೊಂಡಳು. ಆದ್ದರಿಂದ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟಳು. ‘ನಿನ್ನಂಥ ಕೆಲಸಗಾರಳು ಕಂಪನಿಯನ್ನು ಬಿಟ್ಟುಹೋಗುವುದು ನಮಗೆ ದೊಡ್ಡ ನಷ್ಟ’ ಎಂದು ಡೈರೆಕ್ಟರರಲ್ಲಿ ಒಬ್ಬರು ಆಕೆಗೆ ಹೇಳಿದರು. ಆದರೂ ತನ್ನ ನಿರ್ಣಯವನ್ನು ಆಕೆ ಬದಲಾಯಿಸಲಿಲ್ಲ. ಈಗ ರೆಗ್ಯುಲರ್‌ ಪಯನೀಯರ್‌ ಸೇವೆಯಲ್ಲಿ ಸುಮಾರು 20 ವರ್ಷಗಳನ್ನು ಕಳೆದಿರುವ ಆಕೆ ದೇವರ ವಾಕ್ಯದಲ್ಲಿರುವ ‘ಕುಶಲ ಮಾರ್ಗದರ್ಶನೆಗನುಸಾರ’ ಮುಂದಾಲೋಚನೆಯಿಂದ ಕ್ರಿಯೆಗೈದ ಕಾರಣವೇ ಒಳ್ಳೇ ಫಲಿತಾಂಶಗಳು ಸಿಕ್ಕಿವೆಯೆಂದು ಮನಗಂಡಿದ್ದಾಳೆ. ಹೀಗೆ ಯೆಹೋವನಿಗೆ ಹೆಚ್ಚು ಆಪ್ತಳಾಗಲು ಆಕೆಗೆ ಸಾಧ್ಯವಾಯಿತು. ಮಾತ್ರವಲ್ಲ ಬೈಬಲ್‌ ಸತ್ಯವನ್ನು ಸ್ವೀಕರಿಸುವಂತೆ ಅನೇಕರಿಗೆ ಸಹಾಯ ಮಾಡಿದ ಸಂತೃಪ್ತಿ ಆಕೆಗಿದೆ.

ಕುಟುಂಬಕ್ಕೆ “ಕುಶಲ ಮಾರ್ಗದರ್ಶನೆ” ಅತ್ಯಗತ್ಯ. ಮಕ್ಕಳನ್ನು ಬೆಳೆಸುವುದು ಒಂದು ಸುದೀರ್ಘ ಕೆಲಸ. ಆಧ್ಯಾತ್ಮಿಕ ಅಥವಾ ಭೌತಿಕ ವಿಷಯಗಳಲ್ಲಿ ಹೆತ್ತವರು ಮಾಡುವ ನಿರ್ಣಯಗಳು ಮನೆಮಂದಿಯೆಲ್ಲರ ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ. (ಜ್ಞಾನೋ. 22:6) ಹಾಗಾಗಿ ಕ್ರೈಸ್ತ ಹೆತ್ತವರು ಹೀಗೆ ಕೇಳಿಕೊಳ್ಳಬೇಕು: ‘ನಮ್ಮ ಸಂಭಾಷಣೆ ಮತ್ತು ಮಾದರಿಯ ಮೂಲಕ ಮಕ್ಕಳಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಲಿಸುತ್ತಿದ್ದೇವಾ? ಈ ಮೂಲಕ ವಯಸ್ಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ವಿವೇಚನೆಯಿಂದ ನಿಭಾಯಿಸಲು ಅವರನ್ನು ಸಿದ್ಧಗೊಳಿಸುತ್ತಿದ್ದೇವಾ? ಸರಳ ಜೀವನ ನಡೆಸುವುದರಲ್ಲಿ ಸಂತೃಪ್ತಿ ಕಾಣುವಂತೆ, ಕ್ರೈಸ್ತ ಶುಶ್ರೂಷೆಯ ಮೇಲೆ ಗಮನ ನೆಡುವಂತೆ ನಮ್ಮ ಜೀವನಶೈಲಿ ಮಕ್ಕಳಿಗೆ ಸಹಾಯ ಮಾಡುತ್ತಿದೆಯಾ?’—1 ತಿಮೊ. 6:6-10, 18, 19.

ಲೋಕದ ಜನರಿಡುವ ಪ್ರಾಪಂಚಿಕ ಅಥವಾ ಸಾಮಾಜಿಕ ಗುರಿಗಳಿಂದ ನಿಜವಾದ ಯಶಸ್ಸು ದಕ್ಕಲಾರದು. ರಾಜ ಸೊಲೊಮೋನ ಈ ಸತ್ಯವನ್ನು ಅರಿತಿದ್ದನು. ಆದ್ದರಿಂದ ಅವನು ದೇವಪ್ರೇರಣೆಯಿಂದ ಹೀಗೆ ಬರೆದನು: “ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು.” (ಪ್ರಸಂ. 8:12) ಈ ಮಾತುಗಳು, ದೇವರ ವಾಕ್ಯದ ಮೇಲೆ ಆಧರಿತವಾದ ಮತ್ತು ಅದಕ್ಕೆ ಹೊಂದಿಕೆಯಲ್ಲಿರುವ ‘ಕುಶಲ ಮಾರ್ಗದರ್ಶನೆಯನ್ನು’ ಹುಡುಕುವುದು ಎಷ್ಟೊಂದು ವಿವೇಕಯುತ ಎನ್ನುವುದನ್ನು ಎತ್ತಿತೋರಿಸುತ್ತದೆ.—2 ತಿಮೊ. 3:16, 17.

[ಪುಟ 30ರಲ್ಲಿರುವ ಚಿತ್ರ]

ಚುಕ್ಕಾಣಿಗನ ಮಹತ್ವದ ಪಾತ್ರಕ್ಕೆ ಒತ್ತುಕೊಡಲು ಹೆಚ್ಚಾಗಿ ಅವನನ್ನು ಇತರ ನಾವಿಕರಿಗಿಂತ ಎದ್ದು ಕಾಣುವಂಥ ರೀತಿಯಲ್ಲಿ ಚಿತ್ರಿಸಲಾಗುತ್ತಿತ್ತು

[ಕೃಪೆ]

Su concessione del Ministero per i Beni e le Attività Culturali. ಈ ಚಿತ್ರವನ್ನು ಯಾವುದೇ ವಿಧದಲ್ಲಿ ನಕಲು ಮಾಡುವಂತಿಲ್ಲ.