ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದು’

‘ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದು’

‘ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದು’

“ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.” ​—⁠ಮತ್ತಾ. 25:⁠13.

ಉತ್ತರಿಸುವಿರಾ?

ಅಂತ್ಯ ಬರುವ ದಿನವಾಗಲಿ ಗಳಿಗೆಯಾಗಲಿ ತಿಳಿಯದಿರುವುದರಿಂದ ನಮಗೆ ಯಾವ ಪ್ರಯೋಜನಗಳಿವೆ?

ಅಭಿಷಿಕ್ತರು ಹೇಗೆ ಸದಾ ಎಚ್ಚರದಿಂದಿದ್ದರು?

ಕ್ರಿಸ್ತನ ಬರೋಣಕ್ಕೆ ನಾವು ಸಿದ್ಧರಿದ್ದೇವೆಂದು ಯಾವ ವಿಧಗಳಲ್ಲಿ ತೋರಿಸಬಲ್ಲೆವು?

1-3. (1) ಯಾವ ಸನ್ನಿವೇಶಗಳು ಯೇಸುವಿನ ಎರಡು ದೃಷ್ಟಾಂತಗಳಲ್ಲಿರುವ ಪಾಠವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಲ್ಲವು? (2) ಯಾವ ಪ್ರಶ್ನೆಗಳಿಗೆ ನಾವು ಉತ್ತರ ತಿಳಿಯಬೇಕಿದೆ?

ಗಣ್ಯ ಅಧಿಕಾರಿ ಒಬ್ಬರು ಪ್ರಾಮುಖ್ಯ ಕೂಟವೊಂದಕ್ಕೆ ಹೋಗಲಿಕ್ಕಾಗಿ ಕಾರ್‌ ತರಲು ನಿಮಗೆ ಹೇಳುತ್ತಾರೆ ಎಂದಿಟ್ಟುಕೊಳ್ಳಿ. ನೀವು ಇನ್ನೇನು ಕಾರ್‌ ತಕ್ಕೊಂಡು ಅವರಿದ್ದಲ್ಲಿಗೆ ಹೋಗಬೇಕು. ಕಾರ್‌ನಲ್ಲಿ ಇಂಧನ ತುಂಬಿಸಿಲ್ಲವೆಂದು ಆಗ ನಿಮಗೆ ನೆನಪಾಗುತ್ತದೆ. ತಕ್ಷಣ ಬಂಕ್‌ಗೆ ಧಾವಿಸುತ್ತೀರಿ. ಇತ್ತ ಅಧಿಕಾರಿ ಬಂದು ನಿಮಗಾಗಿ ಹುಡುಕುತ್ತಾರೆ. ಆದರೆ ನೀವಿನ್ನೂ ಬಂದಿಲ್ಲ. ಅವರಿಗೆ ಅವಸರವಾಗಿ ಹೋಗಲೇಬೇಕು. ಬೇರೆ ಕಾರ್‌ ಮಾಡಿಕೊಂಡು ಹೊರಟುಹೋಗುತ್ತಾರೆ. ನೀವು ಬಂದು ನೋಡುತ್ತೀರಿ, ಅಧಿಕಾರಿ ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಆಗ ನಿಮಗೆ ಹೇಗನಿಸುತ್ತದೆ?

2 ಈಗ ನೀವೇ ಒಬ್ಬ ಅಧಿಕಾರಿ ಎಂದು ನೆನಸಿ. ಊರಿಗೆಲ್ಲೊ ಹೋಗಬೇಕಾಗಿದೆ. ಆಗ ಮೂವರು ವ್ಯಕ್ತಿಗಳನ್ನು ಆರಿಸಿ ಬಹುಮುಖ್ಯ ಕೆಲಸವನ್ನು ವಹಿಸಿಕೊಟ್ಟು ಏನೇನು ಮಾಡಬೇಕೆಂದು ವಿವರಿಸುತ್ತೀರಿ. ಅವರದನ್ನು ಮಾಡಲು ಒಪ್ಪುತ್ತಾರೆ ಕೂಡ. ಊರಿಂದ ಬಂದ ಮೇಲೆ ನೀವು ವಿಚಾರಿಸುವಾಗ ಕೊಟ್ಟ ಕೆಲಸವನ್ನು ಇಬ್ಬರು ಮಾತ್ರ ಸರಿಯಾಗಿ ಮಾಡಿರುತ್ತಾರೆ. ಮೂರನೆಯವನು ಅದನ್ನು ಮಾಡದಿರುವುದಕ್ಕೆ ನೆವಗಳನ್ನು ಕೊಡುತ್ತಾನೆ. ನಿಜ ಹೇಳಬೇಕೆಂದರೆ, ಅವನು ಕೆಲಸಕ್ಕೆ ಕೈಹಾಕುವ ಪ್ರಯತ್ನವನ್ನೂ ಮಾಡಿರುವುದಿಲ್ಲ. ನಿಮಗೆ ಹೇಗನಿಸುತ್ತದೆ?

3 ಈ ಎರಡೂ ಸನ್ನಿವೇಶಗಳು ಯೇಸು ಹೇಳಿದ ಕನ್ಯೆಯರ ಮತ್ತು ತಲಾಂತುಗಳ ದೃಷ್ಟಾಂತಗಳನ್ನು ಹೋಲುತ್ತವೆ. ಈ ಎರಡು ದೃಷ್ಟಾಂತಗಳು ಅಂತ್ಯಕಾಲದ ಕುರಿತಾಗಿದ್ದು, ಆಗ ಕೆಲವು ಅಭಿಷಿಕ್ತ ಕ್ರೈಸ್ತರು ಏಕೆ ನಂಬಿಗಸ್ತರೂ ವಿವೇಚನೆಯುಳ್ಳವರೂ ಆಗಿರುತ್ತಾರೆ, ಇನ್ನು ಕೆಲವರು ಏಕೆ ಆಗಿರುವುದಿಲ್ಲವೆಂದು ತೋರಿಸುತ್ತವೆ. * (ಮತ್ತಾ. 25:​1-30) ಯೇಸು ಆ ದೃಷ್ಟಾಂತಗಳ ಪಾಠವನ್ನು ಒತ್ತಿಹೇಳುತ್ತಾ “ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ” ಎಂದು ಹೇಳಿದನು. ಸೈತಾನನ ಲೋಕವನ್ನು ತಾನು ನಾಶಮಾಡುವ ನಿರ್ದಿಷ್ಟ ಸಮಯ ತನ್ನ ಶಿಷ್ಯರಿಗೆ ತಿಳಿದಿಲ್ಲ ಎಂದು ಯೇಸು ಹೇಳುತ್ತಿದ್ದನು. (ಮತ್ತಾ. 25:13) ಹಾಗಾಗಿ ನಾವಿಂದು “ಎಚ್ಚರವಾಗಿ” ಇರಬೇಕು. ಸದಾ ಎಚ್ಚರವಾಗಿ ಇರುವುದರಿಂದ ನಮಗೆ ಯಾವ ಪ್ರಯೋಜನಗಳಿವೆ? ಯಾರು ಸದಾ ಎಚ್ಚರದಿಂದಿದ್ದರು? ನಾವು ಎಚ್ಚರದಿಂದಿರಲು ಏನು ಮಾಡಬೇಕು?

ಎಚ್ಚರದಿಂದಿರುವುದರ ಪ್ರಯೋಜನಗಳು

4. ಎಚ್ಚರದಿಂದಿರಲು ಅಂತ್ಯ ಬರುವ ನಿರ್ದಿಷ್ಟ ಸಮಯ ಗೊತ್ತಿರಬೇಕೆಂದಿಲ್ಲ ಏಕೆ?

4 ಕೆಲವೊಮ್ಮೆ ಗಂಟೆ ಎಷ್ಟಾಯಿತೆಂದು ನೋಡುತ್ತಿರುವುದು ತುಂಬ ಆವಶ್ಯ. ಉದಾಹರಣೆಗೆ, ಡಾಕ್ಟರ್‌ ಬಳಿ ನಿರ್ದಿಷ್ಟ ಸಮಯಕ್ಕೆ ಹೋಗಲಿಕ್ಕಿರುವುದಾದರೆ, ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುವವರಾದರೆ, ಬಸ್ಸು ಅಥವಾ ರೈಲಿನಲ್ಲಿ ಹೋಗಲಿಕ್ಕಿದ್ದರೆ ಸಮಯಕ್ಕೆ ಸರಿಯಾಗಿ ಅಲ್ಲಿರಲು ಆಗಾಗ್ಗೆ ಗಡಿಯಾರ ನೋಡುವುದು ಸಹಜ. ಆದರೆ ಬೆಂಕಿಯನ್ನು ಆರಿಸುವಾಗ, ವಿಪತ್ತು ಸಂಭವಿಸಿದ ಬಳಿಕ ಜನರ ಜೀವ ಕಾಪಾಡುತ್ತಿರುವಾಗ ಗಡಿಯಾರ ನೋಡುತ್ತಾ ಇರುವುದು ಕೆಲಸಕ್ಕೆ ಅಡ್ಡಿ ಮಾತ್ರವಲ್ಲ ಅಪಾಯಕರ ಕೂಡ. ಇಂಥ ಸಂದರ್ಭಗಳಲ್ಲಿ ಗಡಿಯಾರ ನೋಡುವುದಕ್ಕಿಂತ ಮಾಡುತ್ತಿರುವ ಕೆಲಸವೇ ಮುಖ್ಯ. ಅದೇ ರೀತಿ ನಮ್ಮ ಸಾರುವ ಕಾರ್ಯವು ಜೀವಸಂರಕ್ಷಣೆಯ ಕೆಲಸ. ಜನರು ರಕ್ಷಣೆ ಪಡೆಯಲು ಯೆಹೋವನು ಮಾಡಿರುವ ಏರ್ಪಾಡುಗಳ ಕಡೆಗೆ ಅದು ಕೈತೋರಿಸುತ್ತದೆ. ಈ ಲೋಕದ ಅಂತ್ಯ ತುಂಬ ಹತ್ತಿರವಿರುವುದರಿಂದ ಸಾರುವ ಕೆಲಸ ಇಂದು ಅತಿ ಜರೂರಿಯದ್ದಾಗಿದೆ. ಈ ಸಮಯದಲ್ಲಿ ಎಚ್ಚರದಿಂದಿರಲು ಮತ್ತು ಯೆಹೋವನು ನಮ್ಮಿಂದ ಬಯಸುವುದನ್ನು ಮಾಡಲು ಅಂತ್ಯ ಯಾವಾಗ ಬರುತ್ತದೆ ಎಂದು ತಿಳಿದಿರುವ ಅವಶ್ಯವಿಲ್ಲ. ಹಾಗೆ ಗೊತ್ತಿಲ್ಲದೆ ಇರುವುದರಿಂದ ನಮಗೇ ಪ್ರಯೋಜನವಿದೆ. ಏನಿಲ್ಲಾಂದ್ರೂ ಐದು ಪ್ರಯೋಜನಗಳಿವೆ.

5. ಆ ದಿನ ಮತ್ತು ಗಳಿಗೆ ಗೊತ್ತಿಲ್ಲದಿರುವುದು ನಮ್ಮ ಹೃದಯದಲ್ಲಿ ಏನಿದೆಯೆಂದು ತೋರಿಸಲು ಹೇಗೆ ಸಹಾಯ ಮಾಡುತ್ತದೆ?

5 ಮೊದಲನೇದಾಗಿ, ಅಂತ್ಯ ಬರುವ ಸಮಯ ಗೊತ್ತಿಲ್ಲದಿರುವುದರಿಂದ ನಮ್ಮ ಹೃದಯದಲ್ಲಿ ನಿಜವಾಗಿಯೂ ಏನಿದೆ ಎಂದು ತೋರಿಸಿಕೊಡಲು ಆಗುತ್ತದೆ. ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿರುವುದರಿಂದ ಆತನಿಗೆ ನಿಷ್ಠರಾಗಿರುವ ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ. ಹೀಗೆ ಆತನು ನಮಗೆ ಗೌರವ ತೋರಿಸುತ್ತಿದ್ದಾನೆ. ಈ ಲೋಕದ ಅಂತ್ಯವನ್ನು ಪಾರಾಗುವ ಆಶೆ ನಮಗಿದೆ ನಿಜ. ಆದರೂ ನಾವು ಯೆಹೋವನ ಸೇವೆ ಮಾಡುತ್ತಿರುವುದು ಶಾಶ್ವತ ಜೀವನ ಪಡೆಯಬೇಕೆಂಬ ಒಂದೇ ಉದ್ದೇಶದಿಂದ ಅಲ್ಲ. ಬದಲಾಗಿ ನಮಗೆ ಆತನ ಮೇಲೆ ಪ್ರೀತಿ ಇರುವುದರಿಂದಲೇ. (ಕೀರ್ತನೆ 37:4 ಓದಿ.) ಆತನ ಚಿತ್ತವನ್ನು ಮಾಡಲು ನಾವು ಸಂತೋಷಿಸುತ್ತೇವೆ. ಏಕೆಂದರೆ ಆತನು ನಮ್ಮ ಒಳ್ಳೇದಕ್ಕಾಗಿಯೇ ಬೋಧಿಸುತ್ತಿದ್ದಾನೆ. (ಯೆಶಾ. 48:17) ಆತನ ಆಜ್ಞೆಗಳು ಭಾರವಾದವುಗಳೆಂದು ನಮಗೆ ಅನಿಸುವುದಿಲ್ಲ.​—⁠1 ಯೋಹಾ. 5:⁠3.

6. (1) ದೇವರ ಮೇಲಿನ ಪ್ರೀತಿಯಿಂದ ನಾವು ಸೇವೆಮಾಡುವಾಗ ಆತನಿಗೆ ಹೇಗನಿಸುತ್ತದೆ? (2) ಏಕೆ?

6 ಎರಡನೇದಾಗಿ, ಆ ದಿನವಾಗಲಿ ಗಳಿಗೆಯಾಗಲಿ ನಮಗೆ ತಿಳಿಯದಿರುವುದರಿಂದ ಯೆಹೋವನ ಹೃದಯವನ್ನು ಸಂತೋಷಪಡಿಸುವ ಅವಕಾಶ ನಮಗಿದೆ. ಯೆಹೋವನ ಸೇವೆಯನ್ನು ಆತನ ಮೇಲಿನ ಪ್ರೀತಿಯಿಂದ ಮಾಡುವಾಗ ಸೈತಾನನ ಆಧಾರರಹಿತ ಕೆಣಕು ನುಡಿಗಳಿಗೆ ಉತ್ತರ ಕೊಡಲು ಯೆಹೋವನಿಗೆ ನಾವು ನೆರವಾಗುತ್ತೇವೆ. ಅಂತ್ಯ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕಾಗಿಯೋ ಬಹುಮಾನ ಪಡೆಯಬೇಕು ಎಂಬ ಉದ್ದೇಶದಿಂದಲೋ ನಾವು ಸೇವೆ ಮಾಡುತ್ತಿಲ್ಲವೆಂದು ರುಜುಪಡಿಸುತ್ತೇವೆ. (ಯೋಬ 2: 4, 5; ಜ್ಞಾನೋಕ್ತಿ 27:11 ಓದಿ.) ಸೈತಾನನಿಂದ ಉಂಟಾಗಿರುವ ಕಷ್ಟನೋವುಗಳನ್ನು ಅನುಭವಿಸಿರುವುದರಿಂದ ಅವನ ದುಷ್ಟ ಆಳ್ವಿಕೆಯನ್ನು ನಿರಾಕರಿಸುತ್ತೇವೆ ಮತ್ತು ಯೆಹೋವನ ಪರಮಾಧಿಕಾರದ ಪಕ್ಷದಲ್ಲಿ ನಿಲ್ಲಲು ಹರ್ಷಿಸುತ್ತೇವೆ.

7. ಸ್ವತ್ಯಾಗದ ಜೀವನ ನಡೆಸುವುದು ಮುಖ್ಯವೆಂದು ನೀವೇಕೆ ನೆನಸುತ್ತೀರಿ?

7 ಮೂರನೇದಾಗಿ, ಅಂತ್ಯ ಬರುವ ನಿರ್ದಿಷ್ಟ ತಾರೀಖು ತಿಳಿಯದಿರುವುದರಿಂದ ನಾವು ಸ್ವತ್ಯಾಗದ ಜೀವನ ನಡೆಸಲು ಸಾಧ್ಯವಾಗುತ್ತದೆ. ದೇವರನ್ನು ತಿಳಿಯದವರು ಸಹ ಈ ಲೋಕಕ್ಕೆ ಉಳಿಗಾಲವಿಲ್ಲ ಎಂದು ನಂಬುತ್ತಾರೆ. ಏನಾದರೂ ದೊಡ್ಡ ವಿಪತ್ತು ಬಡಿದು ಎಲ್ಲ ಒಮ್ಮೆಲೆ ಕೊಚ್ಚಿಕೊಂಡು ಹೋಗುತ್ತದೆ ಎಂಬ ಭಯ ಅವರಿಗೆ. ಹಾಗಾಗಿ “ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ” ಎನ್ನುತ್ತಾರೆ. (1 ಕೊರಿಂ. 15:32) ಆದರೆ ಅಂಥ ಭಯ ನಮಗಿಲ್ಲ. ಹಾಗಂತ ಜನರ ಪಾಡು ಹೇಗಾದರೂ ಇರಲಿ ಎಂದು ಅವರಿಂದ ಪ್ರತ್ಯೇಕಿಸಿಕೊಳ್ಳುವುದಿಲ್ಲ. ಏಕೆಂದರೆ ನಾವು ನಮ್ಮ ಬಗ್ಗೆ ಮಾತ್ರ ಚಿಂತಿಸುವುದಿಲ್ಲ. (ಜ್ಞಾನೋ. 18:⁠1) ಯೇಸು ಹೇಳಿದಂತೆ ನಾವು ನಮ್ಮನ್ನೇ ನಿರಾಕರಿಸಿಕೊಳ್ಳುತ್ತೇವೆ. ನಮ್ಮ ಸಮಯ, ಶಕ್ತಿ, ಸಂಪನ್ಮೂಲಗಳನ್ನು ಸುವಾರ್ತೆ ಸಾರುವುದರಲ್ಲಿ ಉದಾರವಾಗಿ ಉಪಯೋಗಿಸುತ್ತೇವೆ. (ಮತ್ತಾಯ 16:24 ಓದಿ.) ಹೀಗೆ ದೇವರ ಸೇವೆ ಮಾಡುವುದು ಅದರಲ್ಲೂ ಆತನನ್ನು ತಿಳಿಯುವಂತೆ ಪರರಿಗೆ ಸಹಾಯ ಮಾಡುವುದು ನಮಗೆ ಅಪಾರ ಆನಂದ ತರುತ್ತದೆ.

8. ನಾವು ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ಸಂಪೂರ್ಣವಾಗಿ ಅವಲಂಬಿಸಬೇಕೆಂದು ಬೈಬಲಿನ ಯಾವ ಉದಾಹರಣೆ ತೋರಿಸುತ್ತದೆ?

8 ನಾಲ್ಕನೇದಾಗಿ, ಆ ದಿನವಾಗಲಿ ಗಳಿಗೆಯಾಗಲಿ ನಮಗೆ ತಿಳಿಯದೇ ಇರುವುದು ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸಲು, ಆತನ ವಾಕ್ಯವನ್ನು ನಮ್ಮ ಜೀವನದಲ್ಲಿ ಶ್ರದ್ಧೆಯಿಂದ ಅನ್ವಯಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಅಪರಿಪೂರ್ಣರಾದ ಕಾರಣ ಸುಲಭವಾಗಿ ಸ್ವಂತ ಬುದ್ಧಿಯನ್ನು ನೆಚ್ಚಿಕೊಳ್ಳುತ್ತೇವೆ. ಆದರೆ ಪೌಲನು ಎಲ್ಲ ಕ್ರೈಸ್ತರಿಗೆ ಈ ಎಚ್ಚರಿಕೆ ಕೊಟ್ಟನು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ.” ಯೆಹೋಶುವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ಕರೆದೊಯ್ಯುವುದಕ್ಕೆ ಸ್ವಲ್ಪ ಮುಂಚೆ ಇಪ್ಪತ್ತಮೂರು ಸಾವಿರ ಮಂದಿ ಯೆಹೋವನ ಅನುಗ್ರಹವನ್ನು ಕಳಕೊಂಡರು. “ಈ ವಿಷಯಗಳು” ಲೋಕದ “ಅಂತ್ಯವನ್ನು ಸಮೀಪಿಸಿರುವ ನಮಗೆ . . . ಎಚ್ಚರಿಕೆ ನೀಡಲಿಕ್ಕಾಗಿ” ಬರೆಯಲ್ಪಟ್ಟಿವೆ ಎಂದು ಪೌಲ ಹೇಳಿದನು.​—⁠1 ಕೊರಿಂ. 10:​8, 11, 12.

9. (1) ಕಷ್ಟಪರೀಕ್ಷೆಗಳು ಹೇಗೆ ನಮ್ಮನ್ನು ಪರಿಷ್ಕರಿಸುತ್ತವೆ? (2) ಹೇಗೆ ನಮ್ಮನ್ನು ದೇವರಿಗೆ ಹೆಚ್ಚು ಆಪ್ತರನ್ನಾಗಿ ಮಾಡುತ್ತವೆ?

9 ಐದನೇದಾಗಿ, ಅಂತ್ಯ ಬರುವ ಸಮಯ ನಮಗೆ ಗೊತ್ತಿಲ್ಲದಿರುವುದು ಎದುರಾಗುವ ಸಂಕಷ್ಟಗಳಿಂದ ಒಳ್ಳೇ ಪಾಠಗಳನ್ನು ಕಲಿತು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಅನುವು ಮಾಡುತ್ತದೆ. (ಕೀರ್ತನೆ 119:71 ಓದಿ.) ಈ ವ್ಯವಸ್ಥೆಯ ಕಡೇ ದಿವಸಗಳು ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಾಗಿವೆ.’ (2 ತಿಮೊ. 3:​1-5) ಸೈತಾನನ ಲೋಕದಲ್ಲಿ ಅನೇಕರು ನಮ್ಮನ್ನು ದ್ವೇಷಿಸುವ ಕಾರಣ ನಾವು ನಮ್ಮ ನಂಬಿಕೆಗಾಗಿ ಹಿಂಸೆಗೆ ಗುರಿಯಾಗಲೂಬಹುದು. (ಯೋಹಾ. 15:19; 16:⁠2) ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಂಥ ಸಮಯದಲ್ಲಿ ನಮ್ಮನ್ನು ತಗ್ಗಿಸಿಕೊಂಡು ದೇವರ ಮಾರ್ಗದರ್ಶನವನ್ನು ಹುಡುಕುವುದಾದರೆ ನಮ್ಮ ನಂಬಿಕೆ ಪರಿಷ್ಕೃತವಾಗುತ್ತದೆ. ಪುಟಹಾಕಿದ ಚಿನ್ನದಂತೆ ಶುದ್ಧವಾಗುತ್ತದೆ. ಕಷ್ಟಸಂಕಷ್ಟ, ಪರೀಕ್ಷೆಗಳು ಬಂದಾಗ ಯೆಹೋವನ ಮೇಲೆ ನಮಗಿರುವ ನಂಬಿಕೆ ಶಿಥಿಲಗೊಳ್ಳುವುದಿಲ್ಲ. ಬದಲಿಗೆ ಆತನೊಂದಿಗಿನ ನಮ್ಮ ಸ್ನೇಹ ನಾವೆಣಿಸಿದ್ದಕ್ಕಿಂತ ಹೆಚ್ಚು ಬಲಗೊಳ್ಳುತ್ತದೆ.​—⁠ಯಾಕೋ. 1:​2-4; 4:⁠8.

10. ಸಮಯ ಬೇಗನೆ ಜಾರಿದಂತೆ ಯಾವಾಗ ಅನಿಸುವುದು?

10 ಕೆಲಸದಲ್ಲಿ ನಿರತರಾಗಿದ್ದರೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ಏನೂ ಕೆಲಸ ಮಾಡದೆ ಗಡಿಯಾರದ ಮೇಲೆ ಕಣ್ಣಾಡಿಸುತ್ತಿದ್ದರೆ ಸಮಯ ಆಮೆಗತಿಯಲ್ಲಿ ಸಾಗಿದಂತೆ ಅನಿಸುವುದು. ಅದೇ ರೀತಿ ಯೆಹೋವನು ಕೊಟ್ಟ ರೋಮಾಂಚಕ ಕೆಲಸದಲ್ಲಿ ಮುಳುಗಿರುವುದಾದರೆ ನಾವು ಎಣಿಸಿದ್ದಕ್ಕಿಂತ ಬೇಗನೆ ಅಂತ್ಯ ಬಂದಂತೆ ತೋರುವುದು. ಈ ಸಂಬಂಧದಲ್ಲಿ ಹೆಚ್ಚಿನ ಅಭಿಷಿಕ್ತ ಕ್ರೈಸ್ತರು ನಮಗೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಯೇಸು 1914ರಲ್ಲಿ ರಾಜನಾಗಿ ಪಟ್ಟಕ್ಕೇರಿದಾಗ ಏನಾಯಿತೆಂದು ನಾವೀಗ ಚುಟುಕಾಗಿ ಪರಿಗಣಿಸೋಣ. ಹೇಗೆ ಕೆಲವು ಅಭಿಷಿಕ್ತರು ಎಚ್ಚರದಿಂದ ಉಳಿದರು, ಇನ್ನು ಕೆಲವರು ಉಳಿಯಲಿಲ್ಲ ಎನ್ನುವುದನ್ನೂ ನೋಡೋಣ.

ಸಿದ್ಧರಾಗಿದ್ದೇವೆಂದು ಅಭಿಷಿಕ್ತರು ತೋರಿಸಿಕೊಟ್ಟರು

11. ಇಸವಿ 1914ರ ನಂತರ ಕರ್ತನು ತಡಮಾಡುತ್ತಿದ್ದಾನೆಂದು ಕೆಲವು ಅಭಿಷಿಕ್ತರು ನೆನಸಿದ್ದೇಕೆ?

11 ಕನ್ಯೆಯರ ಮತ್ತು ತಲಾಂತುಗಳ ದೃಷ್ಟಾಂತಗಳನ್ನು ನೆನಪಿಸಿಕೊಳ್ಳಿ. ಒಂದುವೇಳೆ ಆ ಕನ್ಯೆಯರಿಗೆ ಮದುಮಗ ಬರುವ ಸಮಯ ಮತ್ತು ಆಳುಗಳಿಗೆ ಯಜಮಾನನು ಬರುವ ಸಮಯ ಗೊತ್ತಿದ್ದರೆ ಎಚ್ಚರದಿಂದಿರಬೇಕಾದ ಅಗತ್ಯವಿರಲಿಲ್ಲ. ಆದರೆ ಅದು ಅವರಿಗೆ ತಿಳಿಯದಿದ್ದ ಕಾರಣ ಎಚ್ಚರವಾಗಿರಬೇಕಿತ್ತು. ಅಭಿಷಿಕ್ತರಿಗೆ ಅನೇಕ ವರ್ಷಗಳ ಮುಂಚೆಯೇ 1914 ತುಂಬ ವಿಶೇಷವಾದ ವರ್ಷವೆಂದು ತಿಳಿದಿತ್ತು. ಆದರೆ ಆಗ ಏನು ಸಂಭವಿಸುವುದೆಂದು ಅವರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಅವರು ನಿರೀಕ್ಷಿಸಿದಂತೆ ವಿಷಯಗಳು ನಡೆಯದಿದ್ದಾಗ ಯೇಸು ತಡಮಾಡುತ್ತಿದ್ದಾನೇನೋ ಎಂದು ಅವರಿಗೆ ಅನಿಸಿತು. ಒಬ್ಬ ಸಹೋದರರು ತಮ್ಮ ನೆನಪನ್ನು ಹೀಗೆ ಹಂಚಿಕೊಳ್ಳುತ್ತಾರೆ: “ನಮ್ಮಲ್ಲಿ ಕೆಲವರು [1914ರ] ಅಕ್ಟೋಬರ್‌ನ ಮೊದಲನೇ ವಾರದಲ್ಲಿ ಸೀದಾ ಸ್ವರ್ಗಕ್ಕೆ ಹೋಗುತ್ತೇವೆಂದು ನಂಬಿದ್ದೆವು.”

12. ನಂಬಿಗಸ್ತರೂ ವಿವೇಚನೆಯುಳ್ಳವರೂ ಆಗಿದ್ದೇವೆಂದು ಅಭಿಷಿಕ್ತರು ಹೇಗೆ ತೋರಿಸಿಕೊಟ್ಟರು?

12 ಅಂತ್ಯ ಬರುತ್ತದೆಂದು ತವಕದಿಂದ ಎದುರುನೋಡಿದವರಿಗೆ ಅದು ಬರದೇ ಹೋದಾಗ ಎಷ್ಟು ನಿರಾಶೆ ಆಗಿದ್ದಿರಬೇಕೆಂದು ಸ್ವಲ್ಪ ಯೋಚಿಸಿ! ಅದೂ ಅಲ್ಲದೆ ಒಂದನೇ ಮಹಾಯುದ್ಧ ನಡೆಯುತ್ತಿದ್ದ ಕಾರಣ ಅವರು ವಿರೋಧವನ್ನೂ ಎದುರಿಸುತ್ತಿದ್ದರು. ಸಾರುವ ಕೆಲಸ ಹೆಚ್ಚುಕಡಿಮೆ ನಿಂತು ಹೋಗುವ ಸ್ಥಿತಿಗೆ ತಲಪಿತ್ತು. ಆದರೆ ಅವರನ್ನು ಎಚ್ಚರಗೊಳಿಸಲು 1919ರಲ್ಲಿ ಒಂದು ಕೂಗು ಕೇಳಿ ಬಂತು! ಯೇಸು ಆಧ್ಯಾತ್ಮಿಕ ಆಲಯವನ್ನು ಪರೀಕ್ಷಿಸಲು ಬಂದಿದ್ದನು. ಆ ಪರೀಕ್ಷೆಯಲ್ಲಿ ಕೆಲವು ಅಭಿಷಿಕ್ತರು ಅನುತ್ತೀರ್ಣರಾದರು. ಹಾಗಾಗಿ ಅವರು ಯಜಮಾನನಿಗಾಗಿ “ವ್ಯಾಪಾರ” ನಡೆಸುವ ಅಂದರೆ ಯೇಸುವಿನ ಕೆಲಸಗಾರರಾಗಿರುವ ಸೌಭಾಗ್ಯವನ್ನು ಕಳಕೊಂಡರು. (ಮತ್ತಾ. 25:16) ಒಂದರ್ಥದಲ್ಲಿ ಅವರು ಆ ಬುದ್ಧಿಹೀನ ಕನ್ಯೆಯರಂತೆ ಇದ್ದು ಆಧ್ಯಾತ್ಮಿಕ ಎಣ್ಣೆಯನ್ನು ತುಂಬಿಸುವುದರಲ್ಲಿ ಜಾಗ್ರತೆವಹಿಸಲಿಲ್ಲ. ಜೊತೆಗೆ ಆ ಮೈಗಳ್ಳ ಆಳಿನಂತಿದ್ದು ದೇವರ ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಿರಲಿಲ್ಲ. ಆದರೆ ಹೆಚ್ಚಿನವರು ಯುದ್ಧದ ಸಂದಿಗ್ಧ ವರ್ಷಗಳಲ್ಲೂ ಯಜಮಾನನಾದ ಯೇಸುವಿಗೆ ಅಚಲ ನಿಷ್ಠೆ ತೋರಿಸಿದರು. ಆತನ ಸೇವೆ ಮಾಡುವ ಉತ್ಕಟ ಇಚ್ಛೆ ಅವರಿಗಿತ್ತು.

13. (1) ಇಸವಿ 1914ರ ಬಳಿಕ ಅಭಿಷಿಕ್ತರಿಗೆ ಯಾವ ಮನೋಭಾವವಿತ್ತು? (2) ಇಂದು ಅವರ ಮನೋಭಾವ ಹೇಗಿದೆ?

13 ಇಸವಿ 1914ರ ಬಳಿಕ ದ ವಾಚ್‌ಟವರ್‌ ಈ ಹೇಳಿಕೆ ನೀಡಿದ್ದು ಗಮನಾರ್ಹ: “ಸಹೋದರರೇ, ದೇವರ ಕಡೆಗೆ ಸರಿಯಾದ ಮನೋಭಾವ ಇಟ್ಟುಕೊಂಡಿದ್ದ ನಮಗೆ ಆತನ ಯಾವುದೇ ಏರ್ಪಾಡುಗಳ ಸಂಬಂಧದಲ್ಲಿ ನಿರಾಶೆಯಾಗಿಲ್ಲ. ನಮ್ಮ ಸ್ವಂತ ಆಸೆಆಕಾಂಕ್ಷೆ ಈಡೇರಬೇಕೆಂದು ನಾವು ಹಾರೈಸಲಿಲ್ಲ. ಹಾಗಾಗಿ 1914ರ ಅಕ್ಟೋಬರ್‌ನಲ್ಲಿ ಏನಾಗಬೇಕೆಂದು ನಾವು ನಿರೀಕ್ಷಿಸಿದ್ದೆವೋ ಅದು ತಪ್ಪೆಂದು ತಿಳಿದುಬಂದಾಗ ಕರ್ತನು ನಮಗಾಗಿ ತನ್ನ ಯೋಜನೆಯನ್ನು ಬದಲಾಯಿಸದೇ ಇದ್ದದ್ದಕ್ಕಾಗಿ ಹರ್ಷಿಸಿದೆವು. ಆತನು ಹಾಗೆ ಮಾಡಬೇಕೆಂದು ನಾವು ಆಶಿಸಲೂ ಇಲ್ಲ. ಆತನ ಯೋಜನೆ ಮತ್ತು ಉದ್ದೇಶಗಳನ್ನು ನಾವು ಗ್ರಹಿಸಲು ಶಕ್ತರಾಗಬೇಕೆನ್ನುವುದೇ ನಮ್ಮ ಆಶಯವಾಗಿತ್ತು.” ಇದೇ ದೀನತೆ ಮತ್ತು ಭಕ್ತಿ ಇವತ್ತಿಗೂ ಕರ್ತನ ಅಭಿಷಿಕ್ತರಲ್ಲಿ ಎದ್ದುಕಾಣುತ್ತಿದೆ. ತಮಗೆ ದೇವಪ್ರೇರಣೆ ಆಗಿದೆ ಎಂದು ಅವರು ಹೇಳಿಕೊಳ್ಳುವುದಿಲ್ಲ. ಯೇಸು ವಹಿಸಿದ್ದ ಕೆಲಸವನ್ನು ಭೂಮಿಯ ಮೇಲೆ ಮಾಡುವುದೊಂದೇ ಅವರ ಬಯಕೆಯಾಗಿದೆ. ಹೀಗೆ ಎಚ್ಚರದಿಂದ ಉಳಿದಿರುವ ಅಭಿಷಿಕ್ತರ ಹುರುಪಿನ ಮಾದರಿಯನ್ನು ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯುಳ್ಳ ‘ಬೇರೆ ಕುರಿಗಳ’ “ಮಹಾ ಸಮೂಹವು” ಇಂದು ಅನುಕರಿಸುತ್ತಿದೆ.​—⁠ಪ್ರಕ. 7:9; ಯೋಹಾ. 10:⁠16.

ಸಿದ್ಧರಾಗಿದ್ದೇವೆಂದು ತೋರಿಸಿಕೊಡುವ ವಿಧ

14. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ ವಿಧೇಯರಾಗುವುದು ನಮಗೆ ಹೇಗೆ ಸಂರಕ್ಷಣೆಯಾಗಿದೆ?

14 ದೇವರು ತನ್ನ ಜನರಿಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸಲು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳುವರ್ಗವನ್ನು ನೇಮಿಸಿದ್ದಾನೆ. ದೇವರ ವಾಕ್ಯ ಮತ್ತು ಪವಿತ್ರಾತ್ಮದಿಂದ ಹೇಗೆ ಪ್ರಯೋಜನ ಪಡೆಯಬೇಕೆಂದು ಇವರು ಮಹಾ ಸಮೂಹದವರಿಗೆ ಕಲಿಸುತ್ತಿದ್ದಾರೆ. ಈ ಮಹಾ ಸಮೂಹದವರು ಅಭಿಷಿಕ್ತ ಕ್ರೈಸ್ತರಂತೆ ಎಚ್ಚರವಾಗಿದ್ದು ಆಳುವರ್ಗ ಕಲಿಸುವ ವಿಷಯಗಳಿಗೆ ವಿಧೇಯರಾಗುತ್ತಾರೆ. ಇದು ಒಂದರ್ಥದಲ್ಲಿ ಅವರು ದೀಪಗಳಲ್ಲಿ ಎಣ್ಣೆಯನ್ನು ಭರ್ತಿಮಾಡುತ್ತಿರುವಂತೆ ಇದೆ. (ಕೀರ್ತನೆ 119:130; ಯೋಹಾನ 16:13 ಓದಿ.) ಪರಿಣಾಮವಾಗಿ ಅವರು ಬಲಹೊಂದಿ ತೀವ್ರ ಸಂಕಷ್ಟಗಳ ಮಧ್ಯೆಯೂ ನಂಬಿಗಸ್ತರಾಗಿ ಉಳಿದಿದ್ದಾರೆ. ಕ್ರಿಸ್ತನ ಹಿಂದಿರುಗುವಿಕೆಗಾಗಿ ತಾವು ಸಿದ್ಧರಾಗಿದ್ದೇವೆಂದು ತೋರಿಸಿದ್ದಾರೆ. ಉದಾಹರಣೆಗೆ, ನಾಸೀ ಸೆರೆಶಿಬಿರದಲ್ಲಿದ್ದ ಸಹೋದರರ ಬಳಿ ಒಂದೇ ಒಂದು ಬೈಬಲ್‌ ಇತ್ತು. ಆದ್ದರಿಂದ ಹೆಚ್ಚು ಆಧ್ಯಾತ್ಮಿಕ ಆಹಾರ ಒದಗಿಸುವಂತೆ ಅವರು ದೇವರಲ್ಲಿ ಪ್ರಾರ್ಥಿಸಿದರು. ಸ್ವಲ್ಪದರಲ್ಲೇ ಅವರಿಗೆ, ಆಗಷ್ಟೇ ಸೆರೆಗೆ ಹಾಕಲ್ಪಟ್ಟ ಸಹೋದರನು ತನ್ನ ಕೃತಕವಾದ ಮರದ ಕಾಲಿನೊಳಗೆ ಕಾವಲಿನಬುರುಜು ಪತ್ರಿಕೆಯ ಕೆಲವು ಹೊಸ ಸಂಚಿಕೆಗಳನ್ನು ಇಟ್ಟುಕೊಂಡು ಬಂದಿದ್ದಾನೆಂದು ಗೊತ್ತಾಯಿತು. ಆ ಸೆರೆಶಿಬಿರದಿಂದ ಬದುಕುಳಿದವರಲ್ಲಿ ಅರ್ನಸ್ಟ್‌ ವಾವರ್‌ ಎಂಬ ಅಭಿಷಿಕ್ತ ಸಹೋದರರು ಒಬ್ಬರು. ಅವರು ಹೀಗೆ ಹೇಳಿದರು: “ನಾವು ಆ ಲೇಖನಗಳಲ್ಲಿ ಓದಿದ ಬಲವರ್ಧಕ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಯೆಹೋವನು ನಮಗೆ ಅದ್ಭುತವಾಗಿ ಸಹಾಯ ಮಾಡಿದನು.” ಅವರು ಮುಂದುವರಿಸಿ ಅಂದದ್ದು: “ಇಂದು ಆಧ್ಯಾತ್ಮಿಕ ಆಹಾರವನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದೇವೆ. ಆದರೆ ಅದಕ್ಕಾಗಿ ನಾವು ಕೃತಜ್ಞತೆ ತೋರಿಸುತ್ತೇವಾ? ಯೆಹೋವನಲ್ಲಿ ಭರವಸೆಯಿಡುವ, ನಿಷ್ಠರಾಗಿ ಉಳಿಯುವ ಮತ್ತು ಆತನ ಮೇಜಿನಲ್ಲಿ ಉಣ್ಣುವ ಎಲ್ಲರಿಗೂ ಆತನು ಅಪಾರ ಆಶೀರ್ವಾದಗಳನ್ನು ಕೊಡುತ್ತಾನೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ.”

15, 16. (1) ಒಂದು ದಂಪತಿ ಕ್ರೈಸ್ತ ಸೇವೆಯಲ್ಲಿ ತೋರಿಸಿದ ಹುರುಪಿಗೆ ಯಾವ ಪ್ರತಿಫಲ ಸಿಕ್ಕಿತು? (2) ಇಂಥ ಅನುಭವಗಳಿಂದ ಏನು ಕಲಿಯುತ್ತೀರಿ?

15 ಬೇರೆ ಕುರಿಗಳು ಕ್ರಿಸ್ತನ ಸಹೋದರರಿಗೆ ಪೂರ್ಣ ಬೆಂಬಲ ಕೊಡುತ್ತಾ ಸಾರುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದಾರೆ. (ಮತ್ತಾ. 25:40) ಅವರು ತಲಾಂತುಗಳ ದೃಷ್ಟಾಂತದಲ್ಲಿದ್ದ ಕೆಟ್ಟವನೂ ಮೈಗಳ್ಳನೂ ಆಗಿದ್ದ ಆಳಿನಂತಿರದೆ ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಲಿಕ್ಕಾಗಿ ತ್ಯಾಗಗಳನ್ನು ಮಾಡಲು, ಶ್ರಮಪಟ್ಟು ಕೆಲಸಮಾಡಲು ಸಿದ್ಧರಿದ್ದಾರೆ. ಜಾನ್‌ ಮತ್ತು ಅವರ ಪತ್ನಿ ಮಸಾಕೊ ಇದಕ್ಕೊಂದು ಉದಾಹರಣೆ. ಕೀನ್ಯದಲ್ಲಿ ಚೈನೀಸ್‌ ಮಾತಾಡುವ ಜನರಿಗೆ ಸಾರಲು ಸಹಾಯ ನೀಡುವಂತೆ ಅವರನ್ನು ಕೇಳಿಕೊಳ್ಳಲಾಯಿತು. ಮೊದಲು ಅವರಿಗೆ ಹೋಗಬೇಕೋ ಬೇಡವೋ ಎಂಬ ಗೊಂದಲವಿತ್ತು. ಆದರೆ ಅವರು ಪ್ರಾರ್ಥಿಸಿ ತಮ್ಮ ಸನ್ನಿವೇಶವನ್ನು ಪರಿಶೀಲಿಸಿ ಬಳಿಕ ಅಲ್ಲಿಗೆ ಹೋಗಲು ನಿರ್ಧರಿಸಿದರು.

16 ಹುರುಪಿನಿಂದ ಸೇವೆಯಲ್ಲಿ ತೊಡಗಿಸಿಕೊಂಡ ಅವರಿಗೆ ಯೆಹೋವನು ಹೇರಳ ಆಶೀರ್ವಾದಗಳನ್ನು ಕೊಟ್ಟನು. “ಅಲ್ಲಿ ಸೇವೆ ಮಾಡುವುದರಿಂದ ನಮಗೆ ತುಂಬ ಸಂತೋಷ ಸಿಕ್ಕಿದೆ” ಎಂದರವರು. ಏಳು ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದರು. ಬಳಿಕ ಅನೇಕ ಸ್ವಾರಸ್ಯಕರ ಅನುಭವಗಳನ್ನು ತಮ್ಮದಾಗಿಸಿಕೊಂಡರು. ಅವರು ಮತ್ತೂ ಹೇಳಿದ್ದು: “ಇಲ್ಲಿಗೆ ನೇಮಿಸಿದ್ದಕ್ಕಾಗಿ ನಾವು ಯೆಹೋವನಿಗೆ ಕೃತಜ್ಞತೆ ಹೇಳದ ದಿನವೇ ಇಲ್ಲ.” ಇದೇ ರೀತಿ ಬಹು ಮಂದಿ ಸಹೋದರ ಸಹೋದರಿಯರು ಅಂತ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ದೇವರ ಸೇವೆಯಲ್ಲಿ ನಿರತರಾಗಿದ್ದಾರೆ. ಗಿಲ್ಯಡ್‌ ಪದವೀಧರರಾಗಿ ಮಿಷನರಿ ಸೇವೆ ಮಾಡುತ್ತಿರುವ ಸಾವಿರಾರು ಮಂದಿಯ ಕುರಿತು ಯೋಚಿಸಿ. ಅವರ ಈ ವಿಶೇಷ ಸೇವೆಯ ನಸುನೋಟ ಪಡೆಯಲು 2001, ಅಕ್ಟೋಬರ್‌ 15ರ ಕಾವಲಿನಬುರುಜುವಿನಲ್ಲಿ ಮೂಡಿಬಂದ “ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ!” ಎಂಬ ಲೇಖನ ಓದಿ. ಮಿಷನರಿ ಸೇವೆಯಲ್ಲಿ ಒಂದು ದಿನ ಹೇಗಿರುತ್ತದೆಂಬ ಆಸಕ್ತಿಕರ ವಿಷಯವನ್ನು ಓದುತ್ತಿದ್ದಂತೆ ನೀವು ದೇವರ ಸೇವೆಯನ್ನು ಹೆಚ್ಚು ಮಾಡಬಹುದಾದ ವಿಧಗಳ ಕುರಿತು ಯೋಚಿಸಿ. ನಿಮ್ಮ ಸೇವೆ ದೇವರಿಗೆ ಸ್ತುತಿಯನ್ನೂ ಸ್ವತಃ ನಿಮಗೆ ಅತ್ಯಧಿಕ ಸಂತೋಷವನ್ನೂ ತರುವುದು.

ನೀವು ಕೂಡ ಎಚ್ಚರದಿಂದಿರಿ

17. ಆ ದಿನವಾಗಲಿ ಗಳಿಗೆಯಾಗಲಿ ಗೊತ್ತಿಲ್ಲದಿರುವುದು ಹೇಗೆ ನಮಗೆ ಆಶೀರ್ವಾದವಾಗಿದೆ?

17 ಈ ಲೋಕ ಅಂತ್ಯಗೊಳ್ಳುವ ದಿನವಾಗಲಿ ಗಳಿಗೆಯಾಗಲಿ ಗೊತ್ತಿಲ್ಲದಿರುವುದು ನಮ್ಮನ್ನು ನಿರಾಶೆಗೊಳಿಸಿಲ್ಲ. ಹಾಗೆ ಗೊತ್ತಿಲ್ಲದಿರುವುದು ನಮಗೆ ಒಂದು ಆಶೀರ್ವಾದವೇ. ನಮ್ಮ ಪ್ರೀತಿಯ ತಂದೆಯಾದ ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಮಗ್ನರಾಗಿದ್ದು ಆತನಿಗೆ ಇನ್ನಷ್ಟು ಆಪ್ತರಾಗಿದ್ದೇವೆ. ನೇಗಿಲ ಮೇಲೆ ಕೈಯಿಟ್ಟ ನಾವು ಗಮನವನ್ನು ಬೇರೆಡೆ ಹರಿಯಲು ಬಿಡದಿದ್ದರಿಂದ ಯೆಹೋವನ ಸೇವೆಯಲ್ಲಿ ಸಂತೋಷವೆಂಬ ಫಲವನ್ನು ಪುಷ್ಕಳವಾಗಿ ಕೊಯ್ಯುತ್ತಿದ್ದೇವೆ.​—⁠ಲೂಕ 9:⁠62.

18. ದೇವರ ಸೇವೆಯಲ್ಲಿ ನಾವೇಕೆ ನಂಬಿಗಸ್ತರಾಗಿ ಉಳಿಯಬೇಕು?

18 ದೇವರ ನ್ಯಾಯತೀರ್ಪಿನ ದಿನ ವೇಗವಾಗಿ ಧಾವಿಸಿ ಬರುತ್ತಿದೆ. ಈ ಕಡೇ ದಿವಸಗಳಲ್ಲಿ ಯೆಹೋವನೂ ಯೇಸುವೂ ನಮ್ಮ ಮೇಲೆ ಭರವಸೆಯಿಟ್ಟು ರೋಮಾಂಚಕ ಕೆಲಸವನ್ನು ಮಾಡಲು ಕೊಟ್ಟಿದ್ದಾರೆ. ನಮ್ಮಲ್ಲಿ ಯಾರೊಬ್ಬರೂ ಅವರನ್ನು ನಿರಾಶೆಗೊಳಿಸದಿರೋಣ. ಅವರಿಬ್ಬರು ನಮ್ಮ ಮೇಲಿಟ್ಟಿರುವ ಭರವಸೆಗಾಗಿ ಮನದಾಳದಿಂದ ಕೃತಜ್ಞರಾಗಿರೋಣ!​—⁠1 ತಿಮೊಥೆಯ 1:12 ಓದಿ.

19. ನಾವು ಸಿದ್ಧರಾಗಿದ್ದೇವೆಂದು ಹೇಗೆ ತೋರಿಸಿಕೊಡಬಲ್ಲೆವು?

19 ನಮ್ಮ ನಿರೀಕ್ಷೆ ಸ್ವರ್ಗದ್ದಾಗಿರಲಿ ಭೂಪರದೈಸಿನಲ್ಲಿ ಜೀವಿಸುವುದಾಗಿರಲಿ ನಾವು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ದೇವದತ್ತ ನೇಮಕವನ್ನು ನಂಬಿಗಸ್ತಿಕೆಯಿಂದ ಮಾಡಲು ದೃಢನಿಶ್ಚಯದಿಂದ ಇರೋಣ. ಯೆಹೋವನ ದಿನ ಬರುವ ನಿರ್ದಿಷ್ಟ ದಿನವಾಗಲಿ ಗಳಿಗೆಯಾಗಲಿ ನಮಗೆ ಇನ್ನೂ ತಿಳಿದಿಲ್ಲ. ಅದನ್ನು ತಿಳಿಯುವ ಆವಶ್ಯಕತೆಯೂ ಇಲ್ಲ. ನಾವು ಸದಾ ಸಿದ್ಧರೆಂದು ತೋರಿಸಿಕೊಡಲು ನಮ್ಮಿಂದ ಸಾಧ್ಯ, ಅದನ್ನು ತೋರಿಸಿಕೊಡುವೆವು ಸಹ. (ಮತ್ತಾ. 24:​36, 44) ಎಲ್ಲಿಯ ವರೆಗೆ ನಾವು ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟು ಆತನ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡುತ್ತಾ ಇರುತ್ತೇವೋ ಅಲ್ಲಿಯ ವರೆಗೆ ನಾವು ಆಶಾಭಂಗ ಪಡುವುದೇ ಇಲ್ಲ.​—⁠ರೋಮ. 10:⁠11.

[ಪಾದಟಿಪ್ಪಣಿ]

^ ಪ್ಯಾರ. 3 2004, ಮಾರ್ಚ್‌ 1ರ ಕಾವಲಿನಬುರುಜು ಪುಟ 14-18 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರ]

ಎಂಥದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿರಲಿ ಆಧ್ಯಾತ್ಮಿಕ ಆಹಾರ ಪಡೆಯಲು ಪ್ರಯತ್ನಿಸಿ

[ಪುಟ 27ರಲ್ಲಿರುವ ಚಿತ್ರ]

ಕ್ರೈಸ್ತ ಚಟುವಟಿಕೆಗಳಲ್ಲಿ ಮುಳುಗಿರುವುದಾದರೆ ಸಮಯ ಹೋಗೋದೇ ಗೊತ್ತಾಗುವುದಿಲ್ಲ