ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ

ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ

ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿ

“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.”​—⁠ಕೀರ್ತ. 46:⁠1.

ಉತ್ತರಿಸಿ

ಸಂಕಷ್ಟದಲ್ಲಿರುವಾಗ ನೋವಿನಲ್ಲಿ ಮುಳುಗಿಹೋಗದಿರಲು ನಾವೇನು ಮಾಡಬೇಕು?

ಧೈರ್ಯದಿಂದಿರಲು ನಮಗೆ ಯಾವ ಕಾರಣಗಳಿವೆ?

ಸಂಕಷ್ಟಗಳನ್ನು ನಿಭಾಯಿಸಲು ಯೆಹೋವನು ಯಾವೆಲ್ಲ ಸಹಾಯಗಳನ್ನು ನೀಡಿದ್ದಾನೆ?

1, 2. (1) ಅನೇಕರು ಎಂಥ ಸಂಕಷ್ಟಗಳನ್ನು ಎದುರಿಸಿದ್ದಾರೆ? (2) ದೇವಸೇವಕರ ಇಚ್ಛೆ ಏನಾಗಿದೆ?

ಕಷ್ಟನೋವುಗಳೇ ತುಂಬಿರುವ ಕಾಲವಿದು. ನಾನಾ ರೀತಿಯ ವಿಪತ್ತುಗಳು ಇಡೀ ಭೂಮಿಯನ್ನು ನಲುಗಿಸಿವೆ. ಭೂಕಂಪ, ಸುನಾಮಿ, ಅಗ್ನಿದುರಂತ, ನೆರೆಹಾವಳಿ, ಜ್ವಾಲಾಮುಖಿ, ಸುಂಟರಗಾಳಿ, ತೂಫಾನು, ಚಂಡಮಾರುತಗಳು ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ. ಇವು ಸಾಲದೋ ಎಂಬಂತೆ ಕೌಟುಂಬಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಅನೇಕರನ್ನು ಭಯ, ಕಣ್ಣೀರಲ್ಲಿ ಮುಳುಗಿಸಿವೆ. “ಕಾಲವೂ ಪ್ರಾಪ್ತಿಯೂ [“ಮುಂಗಾಣದ ಘಟನೆಯೂ” NW]” ನಮಗೆ ಯಾರಿಗೂ ತಪ್ಪಿದ್ದಲ್ಲ ಎನ್ನುವ ಮಾತು ನಿಜಕ್ಕೂ ಸತ್ಯ.​—⁠ಪ್ರಸಂ. 9:⁠11.

2 ಅಂಥ ಮನಗುಂದಿಸುವ ಪರಿಸ್ಥಿತಿಗಳನ್ನು ದೇವಸೇವಕರು ಒಳ್ಳೇ ರೀತಿಯಲ್ಲಿ ನಿಭಾಯಿಸಿದ್ದಾರೆ. ವೈಯಕ್ತಿಕವಾಗಿ ನಮ್ಮ ಬಗ್ಗೆ ಏನು? ಈ ವ್ಯವಸ್ಥೆಗೆ ಅಂತ್ಯ ಅತಿ ಹತ್ತಿರವಾಗುತ್ತಿದ್ದಂತೆ ಒಂದಲ್ಲ ಒಂದು ಕಷ್ಟ ಬರಬಹುದು. ಏನೇ ಬರಲಿ ಅದನ್ನು ನಿಭಾಯಿಸಲು ನಮ್ಮಲ್ಲಿ ಒಬ್ಬೊಬ್ಬರೂ ತಯಾರಿರಬೇಕು. ಸಂಕಷ್ಟದ ಅಲೆ ಅಪ್ಪಳಿಸಿದಾಗ ದುಃಖದಲ್ಲಿ ಕೊಚ್ಚಿಹೋಗದೆ ಈಜಿ ಜಯಿಸುವುದು ಹೇಗೆ? ಅದಕ್ಕಾಗಿ ನಮಗೆ ಯಾವ ಸಹಾಯವಿದೆ?

ಧೃತಿಗೆಡದೆ ಸಂಕಷ್ಟಗಳನ್ನು ನಿಭಾಯಿಸಿದವರಿಂದ ಪಾಠ

3. ರೋಮನ್ನರಿಗೆ 15:4 ತಿಳಿಸುವಂತೆ ಮನಕುಗ್ಗಿಸುವ ಪರಿಸ್ಥಿತಿಗಳಲ್ಲಿ ನಾವು ಹೇಗೆ ಸಾಂತ್ವನ ಪಡೆಯಬಲ್ಲೆವು?

3 ಹಿಂದೆಂದಿಗಿಂತಲೂ ಅಧಿಕ ಕಷ್ಟನೋವುಗಳು ಇಂದು ಜನರನ್ನು ಬಾಧಿಸುತ್ತಿವೆ. ಆದರೆ ಸಂಕಷ್ಟಗಳು ಮನುಜನಿಗೆ ಹೊಸತೇನಲ್ಲ. ಪ್ರಾಚೀನ ಕಾಲದಲ್ಲೂ ಅನೇಕ ತರದ ಕಷ್ಟಗಳನ್ನು ದೇವಸೇವಕರು ಅನುಭವಿಸಿದ್ದರು. ಅವರು ಎದೆಗುಂದಲಿಲ್ಲ. ಧೈರ್ಯದಿಂದ ನಿಭಾಯಿಸಿದರು. ಅವರಲ್ಲಿ ಕೆಲವರಿಂದ ನಾವೇನು ಕಲಿಯಬಲ್ಲೆವೆಂದು ನೋಡೋಣ.​—⁠ರೋಮ. 15:⁠4.

4. (1) ಎಂಥೆಲ್ಲಾ ಕಷ್ಟಗಳನ್ನು ದಾವೀದ ಅನುಭವಿಸಿದ? (2) ಅವುಗಳನ್ನು ನಿಭಾಯಿಸಲು ಯಾವುದು ಅವನಿಗೆ ಸಹಾಯಮಾಡಿತು?

4 ದಾವೀದನ ಉದಾಹರಣೆ ಗಮನಿಸಿ. ಅರಸನ ಕೋಪತಾಪಕ್ಕೆ ಗುರಿಯಾಗಿ ಅನೇಕ ಕಷ್ಟಗಳನ್ನು ಸಹಿಸಿಕೊಂಡನು. ವೈರಿಗಳ ಆಕ್ರಮಣಗಳನ್ನು ಎದುರಿಸಿದನು. ಒಮ್ಮೆ ಅವನ ಹೆಂಡತಿಯರನ್ನು ಶತ್ರುಗಳು ಸೆರೆ ಒಯ್ದಿದ್ದರು. ಸೈನಿಕರು, ಅಷ್ಟೇಕೆ ಸ್ವಂತ ಕುಟುಂಬದವರು, ಸ್ನೇಹಿತರು ಸಹ ನಂಬಿಕೆ ದ್ರೋಹ ಮಾಡಿದರು. ಮಾನಸಿಕವಾಗಿ ಕುಗ್ಗಿ ಹೋದದ್ದೂ ಉಂಟು. (1 ಸಮು. 18:​8, 9; 30:​1-5; 2 ಸಮು. 17:​1-3; 24:​15, 17; ಕೀರ್ತ. 38:​4-8) ಇಂಥೆಲ್ಲಾ ಕಷ್ಟಗಳಿಂದ ದಾವೀದನೆಷ್ಟು ನರಳಿದನೆಂದು ಬೈಬಲ್‌ ತಿಳಿಸುತ್ತದೆ. ಆದರೆ ಅವನು ಆಧ್ಯಾತ್ಮಿಕವಾಗಿ ಕುಂದಿಹೋಗಲಿಲ್ಲ. ದೇವರಲ್ಲಿ ಪೂರ್ಣ ನಂಬಿಕೆ ಇತ್ತು ಅವನಿಗೆ. “ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?” ಎಂದನವನು.​—⁠ಕೀರ್ತ. 27:1; ಕೀರ್ತನೆ 27:​5, 10 ಓದಿ.

5. ಕಷ್ಟಗಳನ್ನು ನಿಭಾಯಿಸಲು ಅಬ್ರಹಾಮ ಮತ್ತು ಸಾರಳಿಗೆ ಯಾವುದು ಸಹಾಯ ಮಾಡಿತು?

5 ಅಬ್ರಹಾಮ ಮತ್ತು ಸಾರ ತಮ್ಮ ಜೀವಮಾನದ ಬಹುಮಟ್ಟಿಗಿನ ಸಮಯವನ್ನು ಅಪರಿಚಿತ ನಾಡುಗಳಲ್ಲಿ ಕಳೆಯಬೇಕಾಯಿತು. ಅದೂ ಡೇರೆಗಳಲ್ಲಿ. ಅವರ ಬಾಳು ಹೂವಿನ ಹಾದಿಯಾಗಿರಲಿಲ್ಲ. ತಂಗಲು ಹೋಗಿದ್ದ ದೇಶದಲ್ಲಿ ಘೋರ ಕ್ಷಾಮವಿತ್ತು. ಅದರ ಬಿಸಿ ಇವರಿಗೂ ತಟ್ಟಿತು. ಸುತ್ತಣ ರಾಷ್ಟ್ರಗಳಿಂದ ಅಪಾಯಗಳೂ ಎದುರಾದವು. ಆದರೂ ಧೃತಿಗೆಡಲಿಲ್ಲ. ಎಲ್ಲವನ್ನೂ ತಾಳಿಕೊಂಡರು. (ಆದಿ. 12:10; 14:​14-16) ಇಷ್ಟನ್ನೆಲ್ಲ ತಾಳಿಕೊಳ್ಳಲು ಹೇಗೆ ಸಾಧ್ಯವಾಯಿತು? ದೇವರ ವಾಕ್ಯ ಉತ್ತರ ನೀಡುತ್ತದೆ. ಅಬ್ರಹಾಮ “ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.” (ಇಬ್ರಿ. 11:​8-10) ಹೌದು, ಗಂಡಹೆಂಡತಿ ಇಬ್ಬರೂ ಮುಂದೆ ಸಿಗಲಿದ್ದ ಆಶೀರ್ವಾದಗಳನ್ನು ಸದಾ ಮನಸ್ಸಿನಲ್ಲಿಟ್ಟರು. ಕಷ್ಟಗಳಿಂದ ಬೇಸತ್ತು ವ್ಯಥೆಯಿಂದ ಕುಗ್ಗಿಹೋಗಲಿಲ್ಲ.

6. ನಾವು ಹೇಗೆ ಯೋಬನನ್ನು ಅನುಕರಿಸಬಲ್ಲೆವು?

6 ವಿಪರೀತ ಕಷ್ಟನಷ್ಟಗಳನ್ನು ಅನುಭವಿಸಿ ನೋವಿನಲ್ಲಿ ನೊಂದುಬೆಂದವನು ಯೋಬ. ತನಗೆ ಒಂದರ ಮೇಲೆ ಒಂದು ಕಷ್ಟಗಳೇ ಬರುತ್ತಿವೆ ಎಂಬಂತೆ ತೋರಿದಾಗ ಅವನಿಗೆ ಎಷ್ಟು ದುಃಖ ಹತಾಶೆ ಆಗಿರಬೇಕೆಂದು ಊಹಿಸಿ. (ಯೋಬ 3:​3, 11) ಇಷ್ಟೊಂದು ಕಷ್ಟಗಳು ತನಗೆ ಬರಲು ಕಾರಣವೇನೆಂದು ಕೂಡ ಅವನಿಗೆ ಗೊತ್ತಿರಲಿಲ್ಲ. ಆದರೂ ಎದೆಗುಂದಲಿಲ್ಲ. ತನ್ನ ಸಮಗ್ರತೆಯನ್ನಾಗಲಿ ದೇವರಲ್ಲಿದ್ದ ನಂಬಿಕೆಯನ್ನಾಗಲಿ ಬಿಟ್ಟುಕೊಡಲಿಲ್ಲ. (ಯೋಬ 27:5 ಓದಿ.) ಎಂಥ ಅತ್ಯುತ್ತಮ ಮಾದರಿ ನಮಗೆ!

7. (1) ದೇವರ ಸೇವೆ ಮಾಡುವಾಗ ಪೌಲ ಅನುಭವಿಸಿದ ಕೆಲವು ಕಷ್ಟಗಳು ಯಾವುವು? (2) ಯಾವುದು ಅವನಲ್ಲಿ ಧೈರ್ಯ ತುಂಬಿತು?

7 ಅಪೊಸ್ತಲ ಪೌಲನ ಉದಾಹರಣೆಯನ್ನೂ ಗಮನಿಸಿ. ‘ನಗರದಲ್ಲಿ, ಅರಣ್ಯದಲ್ಲಿ, ಸಮುದ್ರದಲ್ಲಿ ಅಪಾಯಗಳನ್ನು’ ಅವನು ಎದುರಿಸಿದನು. ಕೆಲವೊಮ್ಮೆ ‘ಹಸಿವೆಬಾಯಾರಿಕೆಗಳು, ಚಳಿ ಮತ್ತು ಬೆತ್ತಲೆ ಸ್ಥಿತಿಯಲ್ಲಿ’ ಅವನಿದ್ದ. ‘ಒಂದು ರಾತ್ರಿ ಮತ್ತು ಒಂದು ಹಗಲನ್ನು ಆಳವಾದ ನೀರಿನಲ್ಲಿ ಕಳೆದ.’ ಹೀಗಾದದ್ದು ಸಮುದ್ರದಲ್ಲಿ ಹಡಗೊಡೆತಕ್ಕೆ ಒಳಗಾದ ಸಂದರ್ಭಗಳಲ್ಲಿ ಒಮ್ಮೆ ಇರಬೇಕು. (2 ಕೊರಿಂ. 11:​23-27) ದೇವರ ಸೇವೆ ಮಾಡುವಾಗ ಅವನು ಮರಣವನ್ನು ಎದುರಿಸಬೇಕಾಯಿತು. ಆದರೂ ಅವನಲ್ಲಿದ್ದ ಮನೋಭಾವವನ್ನು ಗಮನಿಸಿ: “ಇದು ನಾವು ನಮ್ಮ ಮೇಲಲ್ಲ, ಸತ್ತವರನ್ನು ಎಬ್ಬಿಸುವಂಥ ದೇವರ ಮೇಲೆ ಭರವಸೆಯಿಡುವಂತೆ ಸಂಭವಿಸಿತು. ಮರಣದಂಥ ದೊಡ್ಡ ಸಂಗತಿಯಿಂದ ಆತನು ನಮ್ಮನ್ನು ಕಾಪಾಡಿದನು ಮತ್ತು ಕಾಪಾಡುವನು.” (2 ಕೊರಿಂ. 1:​8-10) ಪೌಲ ಅನುಭವಿಸಿದಷ್ಟು ಸಂಕಷ್ಟಗಳನ್ನು ನಮ್ಮಲ್ಲಿ ಅನೇಕರು ಅನುಭವಿಸಿರಲಿಕ್ಕಿಲ್ಲ. ಆದರೂ ನಮಗೆದುರಾದ ಕಷ್ಟಗಳಲ್ಲೇ ತುಂಬ ನೋವನ್ನು ಅನುಭವಿಸಿರಬಹುದು. ಇಂಥ ಸಂದರ್ಭಗಳಲ್ಲಿ ಪೌಲನ ಧೀರ ಮಾದರಿ ನಮ್ಮನ್ನು ಸಂತೈಸುತ್ತದೆ.

ನಕಾರಾತ್ಮಕ ಭಾವನೆಗಳಲ್ಲಿ ಮುಳುಗಿಹೋಗಬೇಡಿ

8. ಇಂದಿರುವ ಸಮಸ್ಯೆಗಳು ನಮ್ಮನ್ನು ಹೇಗೆ ಬಾಧಿಸಬಹುದು? ಉದಾಹರಣೆ ಕೊಡಿ.

8 ವಿಪತ್ತುಗಳು, ಸಮಸ್ಯೆಗಳು, ಒತ್ತಡಗಳೇ ತುಂಬಿರುವ ಈ ಜಗತ್ತಿನಲ್ಲಿ ಜನರು ಕಷ್ಟನೋವುಗಳಿಂದ ದಿಕ್ಕೆಟ್ಟು ಹೋಗಿದ್ದಾರೆ. ಕ್ರೈಸ್ತರು ಸಹ ಇಂಥ ಕಷ್ಟಗಳಿಂದ ಹೊರತಲ್ಲ. ಲ್ಯಾನೀ * ಎಂಬಾಕೆಯ ಉದಾಹರಣೆ ಗಮನಿಸಿ. ಆಸ್ಟ್ರೇಲಿಯದಲ್ಲಿ ತನ್ನ ಪತಿಯೊಂದಿಗೆ ಪೂರ್ಣ ಸಮಯದ ಸೇವೆಯಲ್ಲಿ ಆನಂದಿಸುತ್ತಿದ್ದಳು. ತನಗೆ ಸ್ತನ ಕ್ಯಾನ್ಸರ್‌ ಇದೆಯೆಂದು ತಿಳಿದು ಬಂದಾಗ ಆಕೆಗೆ ಸಿಡಿಲು ಬಡಿದಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತನ್ನ ನೋವನ್ನು ತೋಡಿಕೊಳ್ಳುತ್ತಾ “ಚಿಕಿತ್ಸೆ ನನ್ನ ದೇಹಸ್ಥಿತಿಯನ್ನು ಇನ್ನೂ ಹದಗೆಡಿಸಿತು. ಆತ್ಮಗೌರವವನ್ನೇ ಕಳಕೊಂಡೆ” ಎಂದು ಹೇಳಿದಳು. ಜೊತೆಗೆ ಆಕೆ ತನ್ನ ಗಂಡನ ಆರೈಕೆಯನ್ನೂ ಮಾಡಬೇಕಿತ್ತು. ಏಕೆಂದರೆ ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದುವೇಳೆ ಅಂಥ ಪರಿಸ್ಥಿತಿ ನಮಗೆ ಬಂದರೆ ಏನು ಮಾಡಬೇಕು?

9, 10. (1) ಸೈತಾನನು ಏನು ಮಾಡುವಂತೆ ನಾವು ಬಿಡಬಾರದು? (2) ಅಪೊಸ್ತಲರ ಕಾರ್ಯಗಳು 14:22ರಲ್ಲಿ ತಿಳಿಸಲಾಗಿರುವ “ಅನೇಕ ಸಂಕಟಗಳನ್ನು” ನಾವು ಹೇಗೆ ನಿಭಾಯಿಸಬಲ್ಲೆವು?

9 ನೆನಪಿಡಿ, ನಮಗೆ ಬರುವ ಕಷ್ಟಗಳನ್ನು ಉಪಯೋಗಿಸಿ ಸೈತಾನನು ನಮ್ಮ ನಂಬಿಕೆಯನ್ನು ಕುಂದಿಸಲು ಪ್ರಯತ್ನಿಸುತ್ತಾನೆ. ಆದರೆ ನಾವದಕ್ಕೆ ಅವಕಾಶ ಕೊಡಬಾರದು. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ” ಎನ್ನುತ್ತದಲ್ಲಾ ಜ್ಞಾನೋಕ್ತಿ 24:10. ಸಂಕಷ್ಟಗಳನ್ನು ನಿಭಾಯಿಸಿದವರ ಮಾದರಿಗಳು ಬೈಬಲಿನಲ್ಲಿವೆ. ಕೆಲವನ್ನು ನಾವೀಗಾಗಲೇ ಗಮನಿಸಿದೆವು. ಆ ಉತ್ತಮ ಮಾದರಿಗಳ ಬಗ್ಗೆ ಧ್ಯಾನಿಸಿ. ಬಾಳಹಾದಿಯಲ್ಲಿ ಏನೇ ಕಷ್ಟ ಬರಲಿ ಅದನ್ನು ನಿಭಾಯಿಸಲು ಇದು ನಮ್ಮಲ್ಲಿ ಧೈರ್ಯ ತುಂಬುವುದು.

10 ಎಲ್ಲ ಕಷ್ಟಗಳನ್ನು ನಿವಾರಿಸಲು ನಮ್ಮಿಂದ ಆಗುವುದಿಲ್ಲ ಎನ್ನುವುದನ್ನು ಸಹ ನೆನಪಿನಲ್ಲಿಡಬೇಕು. ಕಷ್ಟಗಳು ಬಂದೇ ಬರುತ್ತವೆ. (2 ತಿಮೊ. 3:12) ಏಕೆಂದರೆ ಅಪೊಸ್ತಲರ ಕಾರ್ಯಗಳು 14:22 ಹೇಳುವಂತೆ “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು.” ಹಾಗಾಗಿ ಕಷ್ಟಗಳಲ್ಲಿರುವಾಗ ಕುಗ್ಗಿಹೋಗಬೇಡಿ. ಆ ಕಷ್ಟಗಳನ್ನು, ನಿಮಗೆ ಸಹಾಯಮಾಡಲು ದೇವರಿಗಿರುವ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿದೆ ಎಂದು ತೋರಿಸುವ ಅವಕಾಶಗಳಾಗಿ ಪರಿಗಣಿಸಿ.

11. ಕಷ್ಟಗಳು ನಮ್ಮ ಧೈರ್ಯಗುಂದಿಸದಂತೆ ನಾವೇನು ಮಾಡಬೇಕು?

11 ಸಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುವುದು ಕೂಡ ನಮಗೆ ಸಹಾಯ ಮಾಡುತ್ತದೆ. “ಹರ್ಷಹೃದಯದಿಂದ ಹಸನ್ಮುಖ; ಮನೋವ್ಯಥೆಯಿಂದ ಆತ್ಮಭಂಗ” ಎನ್ನುತ್ತದೆ ಬೈಬಲ್‌. (ಜ್ಞಾನೋ. 15:13) ಸಕಾರಾತ್ಮಕ ಯೋಚನೆಯ ಮಹತ್ವವನ್ನು ವೈದ್ಯರು ಕೂಡ ದೀರ್ಘ ಸಮಯದಿಂದ ಅರಿತಿದ್ದಾರೆ. ರೋಗಿಗಳು ಸಕಾರಾತ್ಮಕವಾಗಿ ಯೋಚಿಸುವುದಾದರೆ ಬೇಗನೆ ಗುಣಹೊಂದಬಲ್ಲರು ಎನ್ನುತ್ತಾರೆ ಅವರು. ಇದನ್ನು ನಿರೂಪಿಸಲು ಕೆಲವು ರೋಗಿಗಳಿಗೆ ಔಷಧಿಯ ಬದಲಿಗೆ ಸಕ್ಕರೆ ಗುಳಿಗೆಗಳನ್ನು ಕೊಡಲಾಯಿತು. ಗುಣವಾಗುತ್ತದೆಂಬ ನಂಬಿಕೆಯಿಂದ ಅದನ್ನು ಸೇವಿಸಿದ ರೋಗಿಗಳ ಆರೋಗ್ಯ ಬೇಗನೆ ಸುಧಾರಿಸಿತು. ಇದಕ್ಕೆ ವ್ಯತಿರಿಕ್ತವಾಗಿ ಔಷಧದಿಂದ ದೇಹಕ್ಕೆ ಹಾನಿಯಿದೆಯೆಂದು ನೆನಸಿದ ರೋಗಿ ಸರಿಯಾದ ಔಷಧ ತೆಗೆದುಕೊಂಡಾಗಲೂ ಅವನ ಆರೋಗ್ಯ ಹದಗೆಟ್ಟಿತು. ಅದೇ ರೀತಿ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ವಿಷಯಗಳ ಬಗ್ಗೆ ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸಿದರೆ ಒಳಿತೇನೂ ಆಗದು. ನಿರುತ್ಸಾಹ ನಮ್ಮನ್ನು ಜಜ್ಜಿಹಾಕುವುದಷ್ಟೆ. ಯೆಹೋವನ ಸಹಾಯ ನಮಗಿದೆ. ಅದು ಸಕ್ಕರೆ ಗುಳಿಗೆಯಂತೆ ನಕಲಿಯಲ್ಲ. ವಿಪತ್ತುಗಳು ಬಂದಪ್ಪಳಿಸುವಾಗಲೂ ತನ್ನ ವಾಕ್ಯದ ಮೂಲಕ ಆತನು ನಮಗೆ ಉತ್ತೇಜನ ಕೊಡುತ್ತಾನೆ. ಸಹೋದರ ಸಹೋದರಿಯರ ಮೂಲಕ ಬೆಂಬಲ ಕೊಡುತ್ತಾನೆ. ಪವಿತ್ರಾತ್ಮದ ಮೂಲಕ ಬಲಪಡಿಸುತ್ತಾನೆ. ಈ ಎಲ್ಲ ಒಳ್ಳೇ ವಿಷಯಗಳ ಕುರಿತು ಯೋಚಿಸುತ್ತಾ ಇರುವುದು ನಮ್ಮಲ್ಲಿ ಚೈತನ್ಯ ಮೂಡಿಸುವುದು. ನಕಾರಾತ್ಮಕ ಘಟನೆಗಳನ್ನೇ ಮನದಲ್ಲಿ ಸುಳಿದಾಡಲು ಬಿಡದೆ ಒಂದೊಂದು ಕಷ್ಟವನ್ನು ನಿಭಾಯಿಸಲು ಪ್ರಾಯೋಗಿಕವಾಗಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿ. ಸಕಾರಾತ್ಮಕ ವಿಷಯಗಳನ್ನು ಮೆಲುಕುಹಾಕಿ.​—⁠ಜ್ಞಾನೋ. 17:⁠22.

12, 13. (1) ವಿಪತ್ತಿನಿಂದಾದ ಕಷ್ಟನಷ್ಟಗಳನ್ನು ತಾಳಿಕೊಳ್ಳಲು ದೇವರ ಸೇವಕರಿಗೆ ಯಾವುದು ಸಹಾಯ ಮಾಡಿತು? ಉದಾಹರಣೆ ಕೊಡಿ. (2) ಜೀವನದಲ್ಲಿ ಯಾವುದು ಪ್ರಾಮುಖ್ಯ ಎಂದು ವಿಪತ್ತು ಬಂದಾಗ ಹೇಗೆ ಗೊತ್ತಾಗುತ್ತದೆ?

12 ಇತ್ತೀಚಿನ ವರ್ಷಗಳಲ್ಲಿ ಭೀಕರ ವಿಪತ್ತುಗಳಿಂದ ಕೆಲವು ದೇಶಗಳು ತತ್ತರಿಸಿವೆ. ಆ ಸ್ಥಳಗಳಲ್ಲಿರುವ ಅನೇಕ ಸಹೋದರರು ತೀರ ಕಷ್ಟವಾದರೂ ಅವುಗಳನ್ನು ಸಹಿಸಿಕೊಂಡದ್ದು ಅನುಕರಣಯೋಗ್ಯ. ಉದಾಹರಣೆಗೆ, 2010ರ ಫೆಬ್ರವರಿಯಲ್ಲಿ ಚಿಲಿಯಲ್ಲಿ ಮಹಾ ಭೂಕಂಪ ಮತ್ತು ಸುನಾಮಿಯ ದೈತ್ಯ ಅಲೆಗಳು ಅಟ್ಟಹಾಸ ತೋರಿದಾಗ ಅನೇಕ ಸಹೋದರರು ಮನೆ, ಆಸ್ತಿಪಾಸ್ತಿಗಳನ್ನು ಸಂಪೂರ್ಣವಾಗಿ ಕಳಕೊಂಡರು. ಕೆಲವರು ಕೆಲಸವನ್ನೂ ಕಳಕೊಂಡರು. ಇಂಥ ಕಷ್ಟಕಾರ್ಪಣ್ಯಗಳ ಮಧ್ಯೆಯೂ ಸಹೋದರರು ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿದ್ದರು. ಸಾಮ್ವೆಲ್‌ ಎಂಬ ಸಹೋದರನ ಉದಾಹರಣೆ ಗಮನಿಸಿ. ಅವನ ಮನೆ ಪೂರ್ಣವಾಗಿ ನಾಶಗೊಂಡಿತು. “ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ನಾನು ಮತ್ತು ನನ್ನ ಹೆಂಡತಿ ಕೂಟಗಳಿಗಾಗಲಿ ಕ್ಷೇತ್ರಸೇವೆಗಾಗಲಿ ತಪ್ಪಿಸಿಕೊಳ್ಳಲಿಲ್ಲ. ಇದು ಹತಾಶರಾಗಿ ಕುಗ್ಗಿಹೋಗದಿರಲು ಸಹಾಯ ಮಾಡಿತು” ಎಂದನು ಅವನು. ಈ ದಂಪತಿ ಮತ್ತು ಇನ್ನಿತರ ಸಹೋದರರು ವಿಪತ್ತು ತಮ್ಮನ್ನು ನಿರುತ್ಸಾಹಗೊಳಿಸುವಂತೆ ಬಿಡಲಿಲ್ಲ. ಯೆಹೋವನ ಸೇವೆಯಲ್ಲಿ ಹುರುಪಿನಿಂದ ಮುಂದುವರಿದರು.

13 ಸೆಪ್ಟೆಂಬರ್‌ 2009ರಲ್ಲಿ ಫಿಲಿಪೀನ್ಸ್‌ನ ಮನಿಲ ನಗರದ 80 ಪ್ರತಿಶತ ಪ್ರದೇಶದಲ್ಲಿ ಮಳೆಯ ಆರ್ಭಟದಿಂದಾಗಿ ನೆರೆ ತುಂಬಿತ್ತು. ಬಹುಪಾಲು ಆಸ್ತಿಯನ್ನು ಕಳಕೊಂಡ ಶ್ರೀಮಂತ ವ್ಯಕ್ತಿಯೊಬ್ಬ ಹೀಗಂದನು: “ಒಂದೇ ನೆಲದಲ್ಲಿ ಬದುಕುವ ಎರಡು ರೀತಿಯ ಜನರನ್ನೂ ನೆರೆ ಒಂದೇ ಸ್ಥಿತಿಗೆ ತಂದು ನಿಲ್ಲಿಸಿತು. ಬಡವರಿಂದ ಹಿಡಿದು ಶ್ರೀಮಂತರ ಮನೆಯ ವರೆಗೆ ಅಂಕೆಯಿಲ್ಲದೆ ನುಗ್ಗಿದ ನೀರು ಇಬ್ಬರಿಗೂ ಕಷ್ಟತೊಂದರೆಗಳನ್ನು ಸಮನಾಗಿ ಹಂಚಿತು.” ಇದು ಯೇಸುವಿನ ಸಲಹೆ ಪಾಲಿಸುವುದು ಎಷ್ಟು ವಿವೇಕಯುತವೆಂದು ಅರ್ಥಮಾಡಿಸುತ್ತದೆ. “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; . . . ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯಾಗಲಿ ಕಿಲುಬಾಗಲಿ ಅದನ್ನು ಹಾಳುಮಾಡುವುದಿಲ್ಲ; ಕಳ್ಳರು ಒಳನುಗ್ಗಿ ಕದಿಯುವುದೂ ಇಲ್ಲ.” (ಮತ್ತಾ. 6:​19, 20) ಇಂದಿದ್ದು ನಾಳೆ ಇಲ್ಲದೆ ಹೋಗುವ ಭೌತಿಕ ವಸ್ತುಗಳ ಸಂಪಾದನೆಗಾಗಿ ಬದುಕನ್ನು ಮುಡುಪಾಗಿಡುವುದು ಅನೇಕವೇಳೆ ಹತಾಶೆಯನ್ನು ಬಳುವಳಿಯಾಗಿ ಕೊಡುತ್ತದಷ್ಟೆ. ಹಾಗಾಗಿ ಯೆಹೋವನೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೆ ಬದುಕಲ್ಲಿ ಆದ್ಯತೆ ಕೊಡುವುದು ಹೆಚ್ಚು ವಿವೇಕವಾಗಿದೆ. ಏಕೆಂದರೆ ಏನೇ ವಿಪತ್ತು ಬಡಿದರೂ ಈ ಸಂಬಂಧ ಕಳೆದುಹೋಗುವಂಥದ್ದಲ್ಲ.​—⁠ಇಬ್ರಿಯ 13:​5, 6 ಓದಿ.

ಧೈರ್ಯದಿಂದಿರಲು ಕಾರಣಗಳು

14. ಧೈರ್ಯದಿಂದಿರಲು ನಮಗೆ ಯಾವ ಕಾರಣಗಳಿವೆ?

14 ತನ್ನ ಸಾನ್ನಿಧ್ಯದ ಸಮಯದಲ್ಲಿ ಕಷ್ಟಸಮಸ್ಯೆಗಳು ಇರುವವೆಂದು ಯೇಸು ತಿಳಿಸಿದ್ದನು. ಆದರೂ “ಭಯಪಡಬೇಡಿರಿ” ಎಂದು ಧೈರ್ಯ ತುಂಬಿದನು. (ಲೂಕ 21:⁠9) ನಮ್ಮ ರಾಜನಾದ ಯೇಸು ಮತ್ತು ಇಡೀ ವಿಶ್ವದ ಸೃಷ್ಟಿಕರ್ತನಾದ ಯೆಹೋವನು ನಮ್ಮ ಜೊತೆ ಇರುವಾಗ ನಾವೇಕೆ ಭಯಪಡಬೇಕು? ತಿಮೊಥೆಯನಿಗೆ ಪೌಲ ಏನೆಂದು ಉತ್ತೇಜಿಸಿದನೆಂದು ಗಮನಿಸಿ: “ದೇವರು ನಮಗೆ ಹೇಡಿತನದ ಮನೋವೃತ್ತಿಯನ್ನು ಕೊಡದೆ ಶಕ್ತಿ, ಪ್ರೀತಿ ಮತ್ತು ಸ್ವಸ್ಥಬುದ್ಧಿಯ ಮನೋವೃತ್ತಿಯನ್ನು ಕೊಟ್ಟಿದ್ದಾನೆ.”​—⁠2 ತಿಮೊ. 1:⁠7.

15. (1) ದೇವಸೇವಕರು ಯೆಹೋವನ ಮೇಲಿಟ್ಟಿದ್ದ ಪೂರ್ಣ ಭರವಸೆಗೆ ಕೆಲವು ಉದಾಹರಣೆ ಕೊಡಿ. (2) ಅವರಂತೆ ನಾವು ಧೈರ್ಯದಿಂದಿರುವುದು ಹೇಗೆಂದು ವಿವರಿಸಿ.

15 ದೇವಸೇವಕರಿಗೆ ಯೆಹೋವನಲ್ಲಿ ಎಷ್ಟು ಬಲವಾದ ಭರವಸೆಯಿತ್ತೆಂದು ಗಮನಿಸಿ. “ಯೆಹೋವನು ನನಗೆ ಬಲವೂ ಗುರಾಣಿಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವದು” ಎಂದನು ದಾವೀದ. (ಕೀರ್ತ. 28:⁠7) ದೇವರ ಮೇಲಿಟ್ಟಿದ್ದ ಅಚಲ ಭರವಸೆಯನ್ನು ಪೌಲ ಹೀಗೆ ವ್ಯಕ್ತಪಡಿಸಿದನು: “ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ.” (ರೋಮ. 8:37) ಸಾಯುವುದಕ್ಕೆ ಸ್ವಲ್ಪ ಮುಂಚೆ ಯೇಸು ತನಗೆ ದೇವರೊಂದಿಗಿರುವ ಅತ್ಯಾಪ್ತ ಸಂಬಂಧವನ್ನು ಈ ಮಾತುಗಳಲ್ಲಿ ಸ್ಪಷ್ಟಪಡಿಸಿದನು: “ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ.” (ಯೋಹಾ. 16:32) ದೇವರ ಸೇವಕರ ಈ ಅಭಿವ್ಯಕ್ತಿಗಳಿಂದ ಏನು ಗೊತ್ತಾಗುತ್ತದೆ? ಅವರೆಲ್ಲರಿಗೂ ಯೆಹೋವನಲ್ಲಿ ಸಂಪೂರ್ಣ ಭರವಸೆಯಿತ್ತು. ದೇವರಲ್ಲಿ ಇಂಥ ದೃಢ ಭರವಸೆಯನ್ನು ಬೆಳಸಿಕೊಳ್ಳುವುದು ಇಂದು ಯಾವುದೇ ಸಂಕಷ್ಟಗಳನ್ನು ನಿಭಾಯಿಸಲು ನಮ್ಮಲ್ಲಿ ಧೈರ್ಯ ತುಂಬುವುದು.​—⁠ಕೀರ್ತನೆ 46:​1-3 ಓದಿ.

ಧೈರ್ಯದಿಂದಿರಲು ದೇವರು ಕೊಡುವ ಸಹಾಯ

16. ದೇವರ ವಾಕ್ಯವನ್ನು ಅಧ್ಯಯನ ಮಾಡುವುದು ಏಕೆ ತುಂಬ ಪ್ರಾಮುಖ್ಯ?

16 ನಾವು ನಮ್ಮ ಮೇಲೆ ಆತುಕೊಳ್ಳುವುದರಿಂದ ಧೈರ್ಯ ಬರುವುದಿಲ್ಲ. ದೇವರನ್ನು ತಿಳಿದು ಆತನ ಮೇಲೆ ಹೊಂದಿಕೊಳ್ಳುವಾಗ ಧೈರ್ಯ ಪಡೆದುಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ನಮಗಿರುವ ಸಹಾಯ ದೇವರ ಲಿಖಿತ ವಾಕ್ಯವಾದ ಬೈಬಲ್‌. ಆದಕಾರಣ ಬೈಬಲನ್ನು ನಾವು ಅಧ್ಯಯನ ಮಾಡಬೇಕು. ಖಿನ್ನತೆಯಿಂದ ಬಳಲುತ್ತಿರುವ ಒಬ್ಬ ಸಹೋದರಿ ತನಗೆ ಯಾವುದು ಸಹಾಯ ಮಾಡಿತೆಂದು ವಿವರಿಸಿದರು: “ಸಾಂತ್ವನ ಕೊಡುವ ಬೈಬಲ್‌ ವಚನಗಳನ್ನು ನಾನು ಪುನಃ ಪುನಃ ಓದುತ್ತೇನೆ.” ಕುಟುಂಬ ಆರಾಧನೆಯನ್ನು ನಿಯತವಾಗಿ ನಡೆಸುವಂತೆ ನಮಗೆ ಸಲಹೆ ಕೊಡಲಾಗಿದೆ. ಅದನ್ನು ಅನ್ವಯಿಸುತ್ತಿದ್ದೇವಾ? ಇದೆಲ್ಲವನ್ನು ಮಾಡುವುದು ಕೀರ್ತನೆಗಾರನ ಈ ಮನೋಭಾವ ನಮ್ಮಲ್ಲಿರಲು ಸಹಾಯ ಮಾಡುವುದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”​—⁠ಕೀರ್ತ. 119:⁠97.

17. (1) ಧೈರ್ಯದಿಂದಿರಲು ಯೆಹೋವನು ನಮಗೆ ಯಾವ ವಿಧಗಳಲ್ಲಿ ಸಹಾಯ ಮಾಡಿದ್ದಾನೆ? (2) ಪ್ರಕಾಶನಗಳಲ್ಲಿ ಬಂದ ಜೀವನ ಕಥೆ ನಿಮಗೆ ಹೇಗೆ ಸಹಾಯ ಮಾಡಿದೆ? ಒಂದು ಉದಾಹರಣೆ ಕೊಡಿ.

17 ಬೈಬಲಾಧರಿತ ಪ್ರಕಾಶನಗಳು ಕೂಡ ನಮಗೆ ಸಹಾಯ ಮಾಡುತ್ತವೆ. ಯೆಹೋವನ ಮೇಲೆ ಭರವಸೆಯನ್ನು ಬಲಪಡಿಸುವ ಭರಪೂರ ಮಾಹಿತಿ ಅವುಗಳಲ್ಲಿದೆ. ನಮ್ಮ ಪತ್ರಿಕೆಗಳಲ್ಲಿ ಬರುವ ಜೀವನ ಕಥೆಗಳು ದೇವರಲ್ಲಿ ಅನೇಕಾನೇಕರ ಭರವಸೆಯನ್ನು ಹೆಚ್ಚಿಸಿವೆ. ಏಷ್ಯಾದ ಸಹೋದರಿಯೊಬ್ಬರು ಬೈಪೋಲಾರ್‌ ಮೂಡ್‌ ಡಿಸಾರ್ಡರ್‌ನಿಂದ (ಚಿತ್ತಸ್ಥಿತಿಯಲ್ಲಿ ಏರುಪೇರಾಗುವ ಒಂದು ಕಾಯಿಲೆ) ಬಳಲುತ್ತಿದ್ದಾರೆ. ಇದೇ ಕಾಯಿಲೆಯಿಂದ ಬಳಲುತ್ತಿದ್ದ ಮಿಷನರಿ ಸಹೋದರರೊಬ್ಬರ ಜೀವನ ಕಥೆಯನ್ನು ಆಕೆ ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದರು. ಅಂಥ ಕಾಯಿಲೆಯಿದ್ದರೂ ಆ ಸಹೋದರರು ಹೇಗೆ ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡಿದರೆಂದು ಓದಿ ಪುಳಕಿತಳಾದ ಆಕೆ ಹೀಗೆ ಬರೆದರು: “ನನಗಿರುವ ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡಿತು. ನನ್ನಿಂದಲೂ ಈ ಅಸ್ವಸ್ಥತೆಯನ್ನು ನಿಭಾಯಿಸಲು ಆಗುತ್ತದೆಂಬ ನಿರೀಕ್ಷೆ ಕೊಟ್ಟಿತು.”

18. ಪ್ರಾರ್ಥನೆಯ ಸದವಕಾಶವನ್ನು ನಾವೇಕೆ ಚೆನ್ನಾಗಿ ಸದುಪಯೋಗಿಸಿಕೊಳ್ಳಬೇಕು?

18 ಎಂಥ ಸನ್ನಿವೇಶದಲ್ಲೂ ಪ್ರಾರ್ಥನೆ ನಮ್ಮನ್ನು ಬಲಪಡಿಸಬಲ್ಲದು. ಪ್ರಾರ್ಥನೆಯ ಮಹತ್ವದ ಬಗ್ಗೆ ಅಪೊಸ್ತಲ ಪೌಲ ಏನು ಹೇಳಿದ್ದಾನೆಂದು ನೋಡಿ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:​6, 7) ನಾವು ಸಂಕಷ್ಟದಲ್ಲಿರುವಾಗ ಈ ಸಹಾಯವನ್ನು ಪೂರ್ಣವಾಗಿ ಸದುಪಯೋಗಿಸುತ್ತೇವೋ? ಈ ಮೂಲಕ ಬಲಪಡೆದುಕೊಳ್ಳುತ್ತೇವೋ? ಬ್ರಿಟನ್‌ನಲ್ಲಿರುವ ಆ್ಯಲಿಕ್ಸ್‌ ಎಂಬ ಸಹೋದರ ದೀರ್ಘ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯನ್ನು ನಿಭಾಯಿಸಲು ಯಾವುದು ಅವರಿಗೆ ಸಹಾಯ ಮಾಡುತ್ತಿದೆ? “ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುವುದು ಮತ್ತು ಆತನ ವಾಕ್ಯವನ್ನು ಓದುವ ಮೂಲಕ ಆತನು ಹೇಳುವುದನ್ನು ಕೇಳುವುದು ನನ್ನನ್ನು ಇದು ವರೆಗೆ ಉಳಿಸಿದೆ” ಎನ್ನುತ್ತಾರೆ ಅವರು.

19. ಕ್ರೈಸ್ತ ಕೂಟಗಳಲ್ಲಿ ಹಾಜರಿರುವ ಬಗ್ಗೆ ನಮಗೆ ಯಾವ ಅಭಿಪ್ರಾಯ ಇರಬೇಕು?

19 ನಮಗಿರುವ ಇನ್ನೊಂದು ಸಹಾಯ ಕೂಟಗಳಾಗಿವೆ. “ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು” ಎಂದನು ಒಬ್ಬ ಕೀರ್ತನೆಗಾರ. (ಕೀರ್ತ. 84:⁠2) ಕೂಟಗಳಿಗೆ ಹಾಜರಾಗಲು ನಾವು ಸಹ ಅಷ್ಟೇ ಹಂಬಲಿಸುತ್ತೇವೋ? ಕೂಟಗಳಿಗೆ ಹಾಜರಾಗುವುದು ಮತ್ತು ಸಹವಾಸ ಮಾಡುವುದು ಪ್ರಮುಖವೆಂದು ಈ ಮುಂಚೆ ತಿಳಿಸಲಾದ ಲ್ಯಾನೀ ತಿಳಿದಿದ್ದಾರೆ. ಆದ್ದರಿಂದಲೇ “ಏನೇ ಆದರೂ ಕೂಟಗಳಿಗೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಯೆಹೋವನಿಂದ ಸಹಾಯ ನಿರೀಕ್ಷಿಸುವ ನಾನು ಆ ಸಹಾಯ ಪಡೆಯಬೇಕಾದರೆ ಕೂಟಗಳಲ್ಲಿ ಇರಲೇಬೇಕು” ಎನ್ನುತ್ತಾರೆ ಅವರು.

20. ಸಾರುವ ಕಾರ್ಯದಲ್ಲಿ ಭಾಗವಹಿಸುವುದು ಹೇಗೆ ಸಹಾಯ ಮಾಡುತ್ತದೆ?

20 ಸಾರುವ ಕಾರ್ಯದಲ್ಲಿ ಮಗ್ನರಾಗಿರುವ ಮೂಲಕವೂ ನಾವು ಧೈರ್ಯ ಪಡೆದುಕೊಳ್ಳುತ್ತೇವೆ. (1 ತಿಮೊ. 4:16) ಅನೇಕಾನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಆಸ್ಟ್ರೇಲಿಯದ ಸಹೋದರಿಯೊಬ್ಬರು ಇದರಿಂದ ಪ್ರಯೋಜನ ಪಡೆದಿದ್ದಾರೆ. ಅವರನ್ನುವುದು: “ಸೇವೆಗೆ ಹೋಗೋದು ಅಂದರೆ ನನಗೆ ಕಷ್ಟ. ಆದರೆ ಹಿರಿಯರೊಬ್ಬರು ತನ್ನ ಜೊತೆಯಲ್ಲಿ ಸೇವೆಗೆ ಬರುವಂತೆ ಕರೆದಾಗ ನಾನು ಹೋದೆ. ಮುಂದೆ ಪ್ರತಿ ಸಲ ಸೇವೆಗೆ ಹೋದಾಗ ನನ್ನಲ್ಲಿ ಸಂತೋಷ ಪುಟಿಯುತ್ತಿತ್ತು. ಯೆಹೋವನೇ ನನಗೆ ಸಹಾಯ ಮಾಡುತ್ತಿದ್ದಿರಬೇಕು.” (ಜ್ಞಾನೋ. 16:20) ಯೆಹೋವನಲ್ಲಿ ನಂಬಿಕೆಯನ್ನು ಕಟ್ಟಲು ಜನರಿಗೆ ಸಹಾಯ ಮಾಡುವ ಮೂಲಕ ತಮ್ಮ ನಂಬಿಕೆ ಬಲಗೊಂಡಿದೆಯೆಂದು ಅನೇಕರು ಅನುಭವದಿಂದ ತಿಳಿದಿದ್ದಾರೆ. ಈ ಕೆಲಸದಲ್ಲಿ ನಿರತರಾಗಿರುವಾಗ ಸ್ವಂತ ಸಮಸ್ಯೆಗಳು ಮನಸ್ಸಿನಿಂದ ಮರೆಯಾಗಿ ಹೆಚ್ಚು ಪ್ರಾಮುಖ್ಯ ವಿಷಯಗಳ ಮೇಲೆ ಮನಸ್ಸಿಡಲು ಅವರಿಗೆ ಸಾಧ್ಯವಾಗಿದೆ.​—⁠ಫಿಲಿ. 1:​10, 11.

21. ನಮಗೆ ಕಷ್ಟಸಮಸ್ಯೆಗಳಿದ್ದರೂ ಯಾವ ಆಶ್ವಾಸನೆಯಿದೆ?

21 ಇಂದು ನಮಗೆ ಬರುವ ಕಷ್ಟಸಮಸ್ಯೆಗಳನ್ನು ಧೃತಿಗೆಡದೆ ನಿಭಾಯಿಸಲು ಯೆಹೋವನು ಅನೇಕ ವಿಧಗಳಲ್ಲಿ ಸಹಾಯ ಮಾಡುತ್ತಿದ್ದಾನೆ. ನಾವು ಇವೆಲ್ಲವುಗಳನ್ನು ಸದುಪಯೋಗಿಸಿಕೊಳ್ಳಬೇಕು. ದೇವರ ಧೀರ ಸೇವಕರ ಉತ್ತಮ ಮಾದರಿಗಳನ್ನು ಧ್ಯಾನಿಸಿ ಅನುಕರಿಸಬೇಕು. ಆಗ ಸಂಕಷ್ಟಗಳನ್ನು ಯಶಸ್ವಿಯಾಗಿ ನಿಭಾಯಿಸಲು ಶಕ್ತರಾಗುವೆವು. ಅಂತ್ಯ ಸಮೀಪಿಸಿದಂತೆ ಇನ್ನೂ ಹೆಚ್ಚು ಕಷ್ಟನೋವುಗಳು ಬರಬಹುದಾದರೂ ನಾವು ಧೈರ್ಯಗುಂದದೆ ಪೌಲನಂತೆ ಹೀಗನ್ನುತ್ತೇವೆ: “ನಾವು ಕೆಡವಲ್ಪಟ್ಟಿದ್ದೇವೆ, ಆದರೆ ನಾಶಮಾಡಲ್ಪಟ್ಟವರಲ್ಲ” ಮತ್ತು “ನಾವು ಬಿಟ್ಟುಬಿಡುವುದಿಲ್ಲ.” (2 ಕೊರಿಂ. 4:​9, 16) ಯೆಹೋವನ ಸಹಾಯ ನಮಗಿರುವುದರಿಂದ ಯಾವುದೇ ಕಷ್ಟ ಬರಲಿ ಧೈರ್ಯದಿಂದ ನಿಭಾಯಿಸಲು ನಾವು ಶಕ್ತರು!​—⁠2 ಕೊರಿಂಥ 4:​17, 18 ಓದಿ.

[ಪಾದಟಿಪ್ಪಣಿ]

^ ಪ್ಯಾರ. 8 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 10, 11ರಲ್ಲಿರುವ ಚಿತ್ರ]

ಸಂಕಷ್ಟ ಬಂದೆರಗಿದಾಗ ಯೆಹೋವನು ಒದಗಿಸಿರುವ ಸಹಾಯದ ಪೂರ್ಣ ಪ್ರಯೋಜನ ಪಡೆಯಿರಿ