ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಂಥ ಮನೋಭಾವ ತೋರಿಸುತ್ತೀರಿ?

ನೀವು ಎಂಥ ಮನೋಭಾವ ತೋರಿಸುತ್ತೀರಿ?

ನೀವು ಎಂಥ ಮನೋಭಾವ ತೋರಿಸುತ್ತೀರಿ?

“ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನೀವು ತೋರಿಸುವ ಮನೋಭಾವದೊಂದಿಗಿರಲಿ.”​—⁠ಫಿಲೆ. 25.

ಉತ್ತರಿಸುವಿರಾ?

ನಾವು ಎಂಥ ಮನೋಭಾವ ತೋರಿಸುತ್ತಿದ್ದೇವೆ ಎಂಬುದರ ಕುರಿತು ಏಕೆ ಗಮನಕೊಡಬೇಕು?

ಎಂಥ ಮನೋಭಾವ ನಮ್ಮಲ್ಲಿರಬಾರದು? ಅದನ್ನು ತೊರೆಯಲು ಏನು ಮಾಡಬೇಕು?

ಸಭೆಯಲ್ಲಿ ಭಕ್ತಿವರ್ಧಕ ಮನೋಭಾವವನ್ನು ತೋರಿಸಲು ನಾವೇನು ಮಾಡಬಹುದು?

1. ಪೌಲನು ತನ್ನ ಪತ್ರಗಳಲ್ಲಿ ಪದೇ ಪದೇ ಯಾವ ಭರವಸೆ ವ್ಯಕ್ತಪಡಿಸಿದನು?

ಅಪೊಸ್ತಲ ಪೌಲನು ತನ್ನ ಪತ್ರಗಳಲ್ಲಿ, ಸಭೆಗಳಲ್ಲಿರುವ ಮನೋಭಾವವನ್ನು ದೇವರೂ ಕ್ರಿಸ್ತನೂ ಮೆಚ್ಚುತ್ತಾರೆಂಬ ಭರವಸೆಯನ್ನು ಪದೇ ಪದೇ ವ್ಯಕ್ತಪಡಿಸಿದನು. ಉದಾಹರಣೆಗೆ, ಗಲಾತ್ಯದವರಿಗೆ ಅವನು ಬರೆದದ್ದು: “ಸಹೋದರರೇ, ನೀವು ತೋರಿಸುವ ಮನೋಭಾವದೊಂದಿಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ಇರಲಿ. ಆಮೆನ್‌.” (ಗಲಾ. 6:18) ಇಲ್ಲಿ ಹೇಳಲಾಗಿರುವ “ನೀವು ತೋರಿಸುವ ಮನೋಭಾವ” ಎನ್ನುವುದರ ಅರ್ಥವೇನು?

2, 3. (1) ಕ್ರೈಸ್ತರಲ್ಲಿ ಎಂಥ “ಮನೋಭಾವ” ಇರಬೇಕೆಂದು ಪೌಲ ಉತ್ತೇಜಿಸಿದನು? (2) ನಮ್ಮ ಮನೋಭಾವದ ಸಂಬಂಧದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

2 ಇಲ್ಲಿ ಪೌಲನು ಉಪಯೋಗಿಸಿದ “ಮನೋಭಾವ” ಎಂಬ ಪದವು ಒಳ್ಳೆದಾಗಿಯೋ ಕೆಟ್ಟದಾಗಿಯೋ ಮಾತಾಡುವಂತೆ ಇಲ್ಲವೆ ವರ್ತಿಸುವಂತೆ ಮಾಡುವ ಪ್ರೇರಣಾಶಕ್ತಿಗೆ ಸೂಚಿಸುತ್ತದೆ. ಒಬ್ಬೊಬ್ಬರ ಮನೋಭಾವ ಒಂದೊಂದು ರೀತಿ. ಕೆಲವರು ಕೋಮಲ ಸ್ವಭಾವ, ದಯೆದಾಕ್ಷಿಣ್ಯ, ಸೌಮ್ಯಭಾವ, ಕ್ಷಮಾಭಾವ, ಉದಾರ ಮನೋಭಾವದವರಾಗಿರುತ್ತಾರೆ. ನಾವು “ಶಾಂತ ಮತ್ತು ಸೌಮ್ಯಭಾವ”ದವರು ಆಗಿರುವುದು ಶ್ರೇಯಸ್ಸೆಂದು ಬೈಬಲ್‌ ಹೇಳುತ್ತದೆ. (1 ಪೇತ್ರ 3:4; ಜ್ಞಾನೋ. 17:27) ಇನ್ನು ಕೆಲವರ ಮನೋಭಾವ ಭಿನ್ನವಾಗಿರಬಹುದು. ಕೊಂಕುಮಾತಾಡುವ, ಧನಸಂಪತ್ತನ್ನು ಆಶಿಸುವ, ಕೂಡಲೆ ನೊಂದುಕೊಳ್ಳುವ ಇಲ್ಲವೆ ತನ್ನಿಷ್ಟದಂತೆ ಇರಲು ಬಯಸುವ ಮನೋಭಾವ ಇರಬಹುದು. ಇನ್ನು ಕೆಟ್ಟದೆಂದರೆ ಕೆಲವರಿಗೆ ಅಶುದ್ಧ, ಅವಿಧೇಯ, ದಂಗೆ ಏಳುವ ಮನೋಭಾವ ಇರುತ್ತದೆ.

3 ಹಾಗಾದರೆ “ಕರ್ತನು [ನೀವು] ತೋರಿಸುವ ಮನೋಭಾವದೊಂದಿಗೆ ಇರಲಿ” ಎಂದು ಪೌಲ ಹೇಳಿದಾಗೆಲ್ಲ ಯಾವುದನ್ನು ಉತ್ತೇಜಿಸುತ್ತಿದ್ದನು? ದೇವರ ಚಿತ್ತಕ್ಕೆ ಮತ್ತು ಕ್ರಿಸ್ತನ ವ್ಯಕ್ತಿತ್ವಕ್ಕೆ ಹೊಂದಿಕೆಯಲ್ಲಿರುವ ಮನೋಭಾವವನ್ನು ತೋರಿಸುವಂತೆಯೇ. (2 ತಿಮೊ. 4:22; ಕೊಲೊಸ್ಸೆ 3:​9-12 ಓದಿ.) ನಾವು ಹೀಗೆ ಕೇಳಿಕೊಳ್ಳಬೇಕು: ‘ನಾನು ಎಂಥ ಮನೋಭಾವ ತೋರಿಸುತ್ತಿದ್ದೇನೆ? ದೇವರಿಗೆ ಮೆಚ್ಚಿಗೆಯಾಗುವ ಮನೋಭಾವವನ್ನು ನಾನು ಇನ್ನೂ ಹೆಚ್ಚಾಗಿ ತೋರಿಸುವುದು ಹೇಗೆ? ಇಡೀ ಸಭೆಯ ಒಳ್ಳೇ ಮನೋಭಾವವನ್ನು ಪ್ರವರ್ಧಿಸಲು ನಾನು ಇನ್ನೇನು ಮಾಡಬಲ್ಲೆ?’ ಉದಾಹರಣೆಗೆ ಇದರ ಕುರಿತು ಯೋಚಿಸಿ. ತೋಟದ ತುಂಬ ಸೂರ್ಯಕಾಂತಿ ಹೂಗಳು ಕಂಗೊಳಿಸುತ್ತಾ ಬಾನೆಡೆಗೆ ನೋಡುತ್ತಿವೆ. ನಳನಳಿಸುವ ಆ ಹೂಗಳ ಬಣ್ಣ, ಚೆಲುವು ನೋಡುವುದೇ ಕಣ್ಣಿಗೆ ಹಬ್ಬ. ಇಡೀ ತೋಟದ ಸೌಂದರ್ಯಕ್ಕೆ ಕಾರಣ ಏನೆಂದು ಸ್ವಲ್ಪ ಯೋಚಿಸಿ. ಪ್ರತಿಯೊಂದು ಹೂವು ತನ್ನ ಚೆಲುವಿನಿಂದ ತೋಟದ ಸೊಬಗನ್ನು ಹೆಚ್ಚಿಸುತ್ತದೆ. ಅದೇ ರೀತಿ ನಾವು ಕೂಡ ಸಭೆಯ ಶೋಭೆ ಹೆಚ್ಚಿಸುವ ಒಂದೊಂದು ಹೂವಿನಂತೆ ಇದ್ದೇವಾ? ಹಾಗೆ ಇರಬೇಕು! ಅದಕ್ಕಾಗಿ ಪರಿಶ್ರಮ ಪಡಬೇಕು. ಈಗ ನಾವು ದೇವರಿಗೆ ಮೆಚ್ಚಿಕೆಯಾಗುವ ಮನೋಭಾವವನ್ನು ತೋರಿಸುವುದು ಹೇಗೆಂದು ನೋಡೋಣ.

ಲೋಕದ ಮನೋಭಾವ ನಿಮ್ಮಲ್ಲಿ ಇರದಿರಲಿ

4. “ಲೋಕದ ಮನೋಭಾವ” ಅಂದರೇನು?

4 “ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು ಪಡೆದುಕೊಂಡಿದ್ದೇವೆ” ಎನ್ನುತ್ತದೆ ಬೈಬಲ್‌. (1 ಕೊರಿಂ. 2:12) “ಲೋಕದ ಮನೋಭಾವ” ಅಂದರೇನು? ಅದು ಎಫೆಸ 2:2ರಲ್ಲಿ ತಿಳಿಸಿರುವ ಮನೋಭಾವವಾಗಿದೆ. “ನೀವು ಪೂರ್ವದಲ್ಲಿ ಈ ಲೋಕದ ವಿಷಯಗಳ ವ್ಯವಸ್ಥೆಗನುಸಾರವಾಗಿ ನಡೆದಿರಿ, ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿರುವ ಮಾನಸಿಕ ಪ್ರವೃತ್ತಿಗೆ, ಅಂದರೆ ವಾಯುಮಂಡಲದಲ್ಲಿ ಅಧಿಕಾರ ನಡೆಸುವ ಅಧಿಪತಿಗೆ ಅನುಸಾರವಾಗಿ ನಡೆದಿರಿ.” ಇಲ್ಲಿ ತಿಳಿಸುವ “ವಾಯುಮಂಡಲ” ಲೋಕದಲ್ಲಿರುವ ಮಾನಸಿಕ ಪ್ರವೃತ್ತಿಯಾಗಿದೆ. ಇದು ನಿಜವಾದ ವಾಯುವಿನಂತೆ ನಮ್ಮ ಸುತ್ತ ಆವರಿಸಿದೆ, ಎಲ್ಲೆಲ್ಲೂ ಇದೆ. ಇಂದು ಬಹುತೇಕ ಮಂದಿಯಲ್ಲಿ ಅಂಥ ಮನೋಭಾವವಿದೆ. ಉದಾಹರಣೆಗೆ, ‘ನನಗೆ ಯಾರೂ ಏನೂ ಹೇಳಬೇಕಾಗಿಲ್ಲ’ ಅಥವಾ ‘ನಿಮ್ಮ ಹಕ್ಕುಗಳಿಗಾಗಿ ಹೋರಾಡಿ’ ಎಂಬ ಮನೋಭಾವವಿದೆ. ಅಂಥವರೇ ಸೈತಾನನ ಲೋಕದ ‘ಅವಿಧೇಯತೆಯ ಪುತ್ರರಾಗಿದ್ದಾರೆ.’

5. ಇಸ್ರಾಯೇಲಿನಲ್ಲಿದ್ದ ಕೆಲವರು ಯಾವ ಕೆಟ್ಟ ಮನೋಭಾವ ತೋರಿಸಿದರು?

5 ಇಂಥ ಮನೋಭಾವ ಇವತ್ತು ನಿನ್ನೆಯದ್ದಲ್ಲ. ಪ್ರಾಚೀನ ಸಮಯದಲ್ಲೂ ಇತ್ತು. ಮೋಶೆಯ ಕಾಲದಲ್ಲಿದ್ದ ಕೋರಹ ಇದಕ್ಕೊಂದು ಉದಾಹರಣೆ. ಅವನು ಇಸ್ರಾಯೇಲಿನಲ್ಲಿ ಅಧಿಕಾರದಲ್ಲಿದ್ದವರ ವಿರುದ್ಧ ದಂಗೆಯೆದ್ದ. ವಿಶೇಷವಾಗಿ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದ ಮೋಶೆಯ ಅಣ್ಣ ಆರೋನ ಮತ್ತು ಅವನ ಪುತ್ರರ ಮೇಲೆ ಕಿಡಿಕಾರುತ್ತಿದ್ದ. ಏಕೆ? ಅವರಲ್ಲಿದ್ದ ಬಲಹೀನತೆಗಳನ್ನು ಕೋರಹ ಗಮನಿಸಿದ್ದಿರಬೇಕು ಇಲ್ಲವೆ ಮೋಶೆ ತನ್ನ ಕುಟುಂಬದವರಿಗೆ ವಿಶೇಷ ಸೇವಾಸುಯೋಗ ಕೊಡುತ್ತಿದ್ದಾನೆಂದು ಅವನು ನೆನಸಿದ್ದಿರಬೇಕು. ಏನೇ ಇರಲಿ ಕೋರಹ ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲಿಲ್ಲ ಎಂಬುದು ಸ್ಪಷ್ಟ. ಹಾಗಾಗಿ ಅವನು ಯೆಹೋವನು ನೇಮಿಸಿದವರೊಂದಿಗೆ “ನಿಮ್ಮಿಂದ ಸಾಕಾಯಿತು . . . ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು” ಎಂದು ಅಗೌರವದಿಂದ ಮಾತಾಡಿದ. (ಅರ. 16:⁠3) ದಾತಾನ್‌ ಅಬೀರಾಮ್‌ ಎಂಬವರು ಕೂಡ ಮೋಶೆಯನ್ನು ದೂರಿದರು. “ನಮ್ಮ ಮೇಲೆ ದೊರೆತನಮಾಡಬೇಕೆಂದು ಕೋರುತ್ತೀಯೋ?” ಎಂದು ಅವನ ವಿರುದ್ಧ ಸ್ವರವೆತ್ತಿದರು. ಮೋಶೆ ಅವರನ್ನು ಕರೇಕಳುಹಿಸಿದಾಗ “ನಾವು ಬರುವದಿಲ್ಲ” ಎಂದು ಉದ್ಧಟತನದಿಂದ ಹೇಳಿ ಕಳುಹಿಸಿದರು. (ಅರ. 16:​12-14) ಅವರ ಮನೋಭಾವವನ್ನು ಯೆಹೋವನು ಖಂಡಿತ ಮೆಚ್ಚಲಿಲ್ಲ. ಆ ಎಲ್ಲ ದಂಗೆಕೋರರನ್ನು ಆತನು ಸಾಯಿಸಿದನು.​—⁠ಅರ. 16:​28-35.

6. (1) ಮೊದಲನೇ ಶತಮಾನದಲ್ಲಿ ಕೆಲವರು ಹೇಗೆ ಕೆಟ್ಟ ಮನೋಭಾವ ತೋರಿಸಿದರು? (2) ಕಾರಣ ಏನಿದ್ದಿರಬಹುದು?

6 ಮೊದಲನೇ ಶತಮಾನದಲ್ಲಿ ಕೂಡ ಕೆಲವರು “ಪ್ರಭುತ್ವವನ್ನು ಅಸಡ್ಡೆಮಾಡುತ್ತಾ” ಇದ್ದರು. ಸಭೆಯಲ್ಲಿ ಅಧಿಕಾರ ಸ್ಥಾನದಲ್ಲಿದ್ದವರ ವಿರುದ್ಧ ಟೀಕೆಟಿಪ್ಪಣಿಗಳನ್ನು ಮಾಡುತ್ತ ಅಗೌರವ ತೋರಿಸಿದರು. (ಯೂದ 8) ಈ ಪುರುಷರು ಪ್ರಾಯಶಃ ತಮಗಿದ್ದ ಸೇವಾಸುಯೋಗಗಳಲ್ಲಿ ತೃಪ್ತರಾಗಿರಲಿಲ್ಲ. ಆದ್ದರಿಂದ ಇತರರ ಮನಸ್ಸಲ್ಲೂ ಹುಳಿಹಿಂಡಿ ದೇವದತ್ತ ಸುಯೋಗಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದ ನೇಮಿತ ಪುರುಷರನ್ನು ಅಗೌರವದಿಂದ ಕಾಣುವಂತೆ ಮಾಡುತ್ತಿದ್ದರು.​—⁠3 ಯೋಹಾನ 9, 10 ಓದಿ.

7. ಯಾವ ಮನೋಭಾವ ನಮ್ಮಲ್ಲಿರದಂತೆ ಜಾಗ್ರತೆವಹಿಸಬೇಕು?

7 ಈ ಮನೋಭಾವ ಕ್ರೈಸ್ತ ಸಭೆಯಲ್ಲಿ ಇರಲೇಬಾರದು. ಆದುದರಿಂದ ಅಂಥ ಯೋಚನೆ ನಮ್ಮಲ್ಲಿ ಸುಳಿಯದಂತೆ ಎಲ್ಲರೂ ಜಾಗ್ರತೆವಹಿಸಬೇಕು. ಸಭಾ ಹಿರಿಯರು ಪರಿಪೂರ್ಣರಲ್ಲ ನಿಜ. ಮೋಶೆಯ ದಿನದಲ್ಲಿ ಮತ್ತು ಅಪೊಸ್ತಲ ಯೋಹಾನನ ಸಮಯದಲ್ಲಿ ಹಿರೀಪುರುಷರು ಹೇಗೆ ಪರಿಪೂರ್ಣರಾಗಿರಲಿಲ್ಲವೋ ಹಾಗೆಯೇ. ಕೆಲವೊಮ್ಮೆ ಅವರು ಮಾಡುವ ತಪ್ಪುಗಳು ನಮ್ಮನ್ನು ವೈಯಕ್ತಿಕವಾಗಿ ಬಾಧಿಸಬಹುದು. ಅಂಥ ಸಂದರ್ಭದಲ್ಲಿ ರಂಪಮಾಡಿ ‘ನನಗೆ ನ್ಯಾಯ ಬೇಕು’ ಎಂದೋ ಅಥವಾ ‘ಅವನಿಗೆ ಹಿರಿಯನಾಗಿರಲಿಕ್ಕೆ ಯೋಗ್ಯತೆಯಿಲ್ಲ’ ಎಂದೋ ಹೇಳುವುದು ಲೋಕದ ಮನೋಭಾವವಾಗಿದೆ. ಅದು ಯೋಗ್ಯವಲ್ಲ. ಹಿರಿಯರಲ್ಲಿರುವ ಚಿಕ್ಕಪುಟ್ಟ ಬಲಹೀನತೆಗಳನ್ನು ಯೆಹೋವನು ಮನ್ನಿಸಬಹುದು. ಹೀಗಿರುವಾಗ ಅವುಗಳನ್ನು ನಾವು ಕೂಡ ನಿರ್ಲಕ್ಷಿಸಿಬಿಡಬೇಕಲ್ಲವೇ? ಗಂಭೀರ ಪಾಪಗಳನ್ನು ಮಾಡಿರುವ ಕೆಲವರು ತಮಗೆ ಸಹಾಯ ಮಾಡಲು ನೇಮಿತರಾದ ಹಿರಿಯರು ಮಾಡಿದ್ದೇನೋ ಹಿಡಿಸದ ಕಾರಣ ಅವರ ಬಳಿ ಹೋಗಲು ನಿರಾಕರಿಸುತ್ತಾರೆ. ಅವರಿಂದ ಸಹಾಯ ಸ್ವೀಕರಿಸುವುದಿಲ್ಲ. ಇವರು ವೈದ್ಯನಲ್ಲಿ ತನಗೇನೋ ಹಿಡಿಸದ ಕಾರಣ ಚಿಕಿತ್ಸೆ ಪಡೆಯಲು ನಿರಾಕರಿಸುವ ರೋಗಿಯಂತೆ ಇದ್ದಾರೆ.

8. ಸಭೆಯಲ್ಲಿ ಮುಂದಾಳುತ್ವ ವಹಿಸುವವರ ಕಡೆಗೆ ಯೋಗ್ಯ ಮನೋಭಾವ ಇಟ್ಟುಕೊಳ್ಳಲು ಯಾವ ವಚನಗಳು ಸಹಾಯ ಮಾಡುತ್ತವೆ?

8 ಇಂಥ ಮನೋಭಾವ ನಮ್ಮಲ್ಲಿರದಂತೆ ನೋಡಿಕೊಳ್ಳಲು ಸಾಧ್ಯವಿದೆ. ಹೇಗೆ? ಯೇಸುವಿನ ಕೈಯಲ್ಲಿ “ಏಳು ನಕ್ಷತ್ರಗಳು” ಇವೆಯೆಂದು ಬೈಬಲ್‌ ಹೇಳುತ್ತದೆ. ಆ “ನಕ್ಷತ್ರಗಳು” ಅಭಿಷಿಕ್ತ ಮೇಲ್ವಿಚಾರಕರನ್ನು ಸೂಚಿಸುತ್ತವೆ. ವಿಶಾಲಾರ್ಥದಲ್ಲಿ ಅವುಗಳು ಸಭೆಗಳಲ್ಲಿರುವ ಎಲ್ಲ ಹಿರಿಯರನ್ನು ಸೂಚಿಸುತ್ತವೆ. ಯೇಸುವಿಗೆ ತನ್ನ ಕೈಯಲ್ಲಿರುವ ಆ ‘ನಕ್ಷತ್ರಗಳನ್ನು’ ಯೋಗ್ಯ ವಿಧದಲ್ಲಿ ಮುನ್ನಡೆಸುವುದು ಹೇಗೆಂದು ಗೊತ್ತು. ಈ ವಿಷಯವನ್ನು ನೆನಪಿನಲ್ಲಿಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಅಗೌರವ ತೋರಿಸದಿರುವಂತೆ ನಮಗೆ ಸಹಾಯ ಮಾಡುತ್ತದೆ. (ಪ್ರಕ. 1:​16, 20) ಹೌದು, ಕ್ರೈಸ್ತ ಸಭೆಯ ಶಿರಸ್ಸಾದ ಯೇಸುವಿಗೆ ಹಿರಿಯ ಮಂಡಳಿಯ ಮೇಲೆ ಪೂರ್ಣ ನಿಯಂತ್ರಣವಿದೆ. ಒಂದುವೇಳೆ ಯಾವ ಹಿರಿಯನಾದರೂ ತಪ್ಪು ಮಾಡಿದರೆ ಅದು ಯೇಸುವಿನ ಕಣ್ಣಿಗೆ ಮರೆಯಾಗಿರುವುದಿಲ್ಲ. ಏಕೆಂದರೆ ಆತನ ‘ಕಣ್ಣುಗಳು ಅಗ್ನಿಜ್ವಾಲೆಯಂತಿವೆ.’ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧದಲ್ಲಿ ಖಂಡಿತ ಆತನು ಆ ಹಿರಿಯನಿಗೆ ತಿದ್ದುಪಾಟನ್ನು ಕೊಡುವನು. (ಪ್ರಕ. 1:14) ಆ ವರೆಗೆ ನಾವು ಪವಿತ್ರಾತ್ಮದಿಂದ ನೇಮಿತರಾದವರಿಗೆ ಯೋಗ್ಯ ಗೌರವ ತೋರಿಸಬೇಕು. ಏಕೆಂದರೆ ಪೌಲ ಬರೆದದ್ದು: “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.”​—⁠ಇಬ್ರಿ. 13:⁠17.

9. (1) ತಿದ್ದುಪಾಟು ಸಿಗುವಾಗ ಕ್ರೈಸ್ತನೊಬ್ಬನು ಯಾವ ಮನೋಭಾವ ತೋರಿಸುವ ಸಂಭಾವ್ಯತೆ ಇದೆ? (2) ತಿದ್ದುಪಾಟಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಅತ್ಯುತ್ತಮ?

9 ಒಬ್ಬ ಕ್ರೈಸ್ತನು ಹಿರಿಯರಿಂದ ತಿದ್ದುಪಾಟು ಪಡೆದುಕೊಳ್ಳುವಾಗ ಇಲ್ಲವೆ ಜವಾಬ್ದಾರಿಯುತ ಸ್ಥಾನದಿಂದ ತೆಗೆದುಹಾಕಲ್ಪಟ್ಟಾಗ ಅವನ ಮನೋಭಾವ ನಿಜಕ್ಕೂ ಎಂಥದ್ದೆಂದು ವ್ಯಕ್ತವಾಗುತ್ತದೆ. ಒಬ್ಬ ಯುವ ಸಹೋದರನ ಉದಾಹರಣೆ ಗಮನಿಸಿ. ಅವನು ಹಿಂಸಾತ್ಮಕ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದ. ಹಾಗಾಗಿ ಹಿರಿಯರು ಅವನಿಗೆ ಜಾಣ್ಮೆಯಿಂದ ಸಲಹೆ ನೀಡಿದರು. ಆ ಸಹೋದರ ಸಲಹೆ ಸ್ವೀಕರಿಸದೆ ಹೋದದ್ದು ದುಃಖಕರ. ಶುಶ್ರೂಷಾ ಸೇವಕನಾಗಿದ್ದ ಅವನು ಬೈಬಲ್‌ ಕೇಳಿಕೊಳ್ಳುವ ಅರ್ಹತೆಗೆ ತಕ್ಕಂತೆ ನಡೆಯದ ಕಾರಣ ಆ ಸ್ಥಾನದಿಂದ ಅವನನ್ನು ತೆಗೆಯಬೇಕಾಯಿತು. (ಕೀರ್ತ. 11:5; 1 ತಿಮೊ. 3:​8-10) ಬಳಿಕ ಆ ಸಹೋದರ ಹಿರಿಯರ ನಿರ್ಣಯ ಸರಿಯಲ್ಲವೆಂದು ಸಭೆಯಲ್ಲಿ ಎಲ್ಲರಿಗೆ ಸಾರಿಹೇಳಲಾರಂಭಿಸಿದ. ಅಷ್ಟೇ ಏಕೆ ಹಿರಿಯರ ಬಗ್ಗೆ ದೂರುತ್ತಾ ಬ್ರಾಂಚ್‌ ಆಫೀಸಿಗೆ ಅನೇಕ ಪತ್ರಗಳನ್ನು ಬರೆದ. ಸಭೆಯಲ್ಲಿ ಇತರರೂ ಹೀಗೆ ಮಾಡುವಂತೆ ಪ್ರೇರಿಸಿದ. ಆದರೆ ಯೋಚಿಸಿ, ‘ನಾನು ಮಾಡಿದ್ದೇ ಸರಿ’ ಎಂದು ನಿರೂಪಿಸುವ ಸಲುವಾಗಿ ನಾವು ಇಡೀ ಸಭೆಯ ಶಾಂತಿ ಕದಡುವುದು ನ್ಯಾಯವೇ? ಕೆಲವೊಮ್ಮೆ ನಮ್ಮ ಬಲಹೀನತೆಗಳು ನಮಗೇ ಗೊತ್ತಿರಲಿಕ್ಕಿಲ್ಲ. ತಿದ್ದುಪಾಟು ಸಿಕ್ಕಿದಾಗ ಅವು ನಮ್ಮ ಗಮನಕ್ಕೆ ಬರುತ್ತವೆ. ಹಾಗಾಗಿ ದೀನತೆಯಿಂದ ಅದನ್ನು ಸ್ವೀಕರಿಸುವುದು ನಮಗೇ ಒಳ್ಳೇದು.​ಪ್ರಲಾಪಗಳು 3:​28, 29 ಓದಿ.

10. (1) ಒಳ್ಳೇ ಮತ್ತು ಕೆಟ್ಟ ಮನೋಭಾವದ ಬಗ್ಗೆ ಯಾಕೋಬ 3:​16-18ರಲ್ಲಿರುವ ಮಾತುಗಳಿಂದ ಏನು ಕಲಿಯಬಹುದು? (2) “ಮೇಲಣಿಂದ ಬರುವ ವಿವೇಕ”ಕ್ಕನುಸಾರ ನಡೆಯುವುದರ ಫಲಿತಾಂಶವೇನು?

10 ಸಭೆಯಲ್ಲಿ ನಾವು ಎಂಥ ಮನೋಭಾವ ತೋರಿಸುವುದು ಒಳ್ಳೇದು ಮತ್ತು ಕೆಟ್ಟದ್ದು ಎಂದು ತಿಳಿಯಲು ಯಾಕೋಬ 3:​16-18 ಸಹಾಯ ಮಾಡುತ್ತದೆ. ಅಲ್ಲಿ ಈ ಮಾತುಗಳಿವೆ: “ಹೊಟ್ಟೆಕಿಚ್ಚೂ ಕಲಹಶೀಲ ಮನೋಭಾವವೂ ಇರುವ ಕಡೆ ಅವ್ಯವಸ್ಥೆಯೂ ಪ್ರತಿಯೊಂದು ಕೆಟ್ಟ ವಿಷಯವೂ ಇರುತ್ತದೆ. ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ. ಇದಲ್ಲದೆ, ನೀತಿಯ ಫಲದ ಬೀಜವು ಶಾಂತ ಪರಿಸ್ಥಿತಿಗಳಲ್ಲಿ ಶಾಂತಿಕರ್ತರಿಗಾಗಿ ಬಿತ್ತಲ್ಪಡುತ್ತದೆ.” ನಾವು “ಮೇಲಣಿಂದ ಬರುವ ವಿವೇಕ”ಕ್ಕನುಸಾರ ನಡೆಯುವುದಾದರೆ ನಮ್ಮಲ್ಲಿ ದೇವರು ಮೆಚ್ಚುವ ಗುಣಗಳು ಬೆಳೆಯುವವು. ಅದರ ಮೂಲಕ ಸಭೆಯಲ್ಲಿ ಒಳ್ಳೇ ಮನೋಭಾವವನ್ನು ಪ್ರವರ್ಧಿಸುವೆವು.

ಸಭೆಯಲ್ಲಿ ಗೌರವಭಾವ ತೋರಿಸಿ

11. (1) ಒಳ್ಳೇ ಮನೋಭಾವವನ್ನು ಬೆಳೆಸಿಕೊಂಡರೆ ನಾವು ಏನು ಮಾಡುವುದಿಲ್ಲ? (2) ದಾವೀದನಿಂದ ನಾವು ಏನು ಕಲಿಯಬಹುದು?

11 ನೆನಪಿಡಿ, ‘ಸಭೆಯನ್ನು ಪರಿಪಾಲಿಸುವಂತೆ’ ಯೆಹೋವನು ಹಿರಿಯರನ್ನು ನೇಮಿಸಿದ್ದಾನೆ. (ಅ. ಕಾ. 20:28; 1 ಪೇತ್ರ 5:⁠2) ಆದ್ದರಿಂದ ನಾವು ಹಿರಿಯರ ಸ್ಥಾನದಲ್ಲಿರಲಿ ಇಲ್ಲದಿರಲಿ ದೇವರ ಏರ್ಪಾಡಿಗೆ ಗೌರವ ತೋರಿಸೋಣ. ನಾವು ಒಳ್ಳೇ ಮನೋಭಾವವನ್ನು ಬೆಳೆಸಿಕೊಳ್ಳುವುದಾದರೆ ನಮ್ಮ ಸ್ಥಾನಮಾನದ ಕುರಿತು ಅತಿಯಾಗಿ ಚಿಂತಿಸುವುದಿಲ್ಲ. ರಾಜ ಸೌಲನಿಗೆ ತನ್ನ ರಾಜ್ಯಾಧಿಕಾರದ ಮೇಲೆ ಅತಿಯಾದ ಒಲವಿತ್ತು. ದಾವೀದನಿಂದ ತನ್ನ ಸಿಂಹಾಸನಕ್ಕೆ ಕುತ್ತುಬರುವುದು ಎಂದು ತಿಳಿದ ಅವನು “[ದಾವೀದನ] ಮೇಲೆ ಕಣ್ಣಿಟ್ಟನು.” (1 ಸಮು. 18:⁠9) ಹೀಗೆ ಕೆಟ್ಟ ಮನೋಭಾವವನ್ನು ಬೆಳೆಸಿಕೊಂಡನು. ಎಷ್ಟರ ಮಟ್ಟಿಗೆಂದರೆ ದಾವೀದನನ್ನು ಕೊಲ್ಲಲು ಸಹ ಸಂಚುಹೂಡಿದನು. ಆದರೆ ದಾವೀದ. . . ? ತನ್ನ ಸ್ಥಾನದ ಕುರಿತು ಅತಿಯಾಗಿ ಚಿಂತಿತನಾಗಲಿಲ್ಲ. ಸೌಲನಿಂದ ಎಷ್ಟೋ ಅನ್ಯಾಯ ಅನುಭವಿಸಿದರೂ ದೇವರಿಂದ ನೇಮಿತನಾದ ರಾಜನಿಗೆ ಗೌರವ ತೋರಿಸುವುದನ್ನು ಬಿಟ್ಟುಬಿಡಲಿಲ್ಲ. ಸೌಲನಂತೆ ನಮ್ಮ ಸ್ಥಾನಮಾನದ ಕುರಿತು ಅತಿಯಾಗಿ ಚಿಂತಿಸದೆ ದಾವೀದನಂತೆ ಇರೋಣ.​1 ಸಮುವೇಲ 26:23 ಓದಿ.

12. ಸಭೆಯ ಏಕತೆ ವರ್ಧಿಸಲು ನಾವೇನು ಮಾಡಬಹುದು?

12 ಸಭೆಯಲ್ಲಿ ಕೆಲವೊಮ್ಮೆ ಸಮಸ್ಯೆಗಳೇಳಬಹುದು. ಭಿನ್ನ ಭಿನ್ನ ದೃಷ್ಟಿಕೋನ ಇರುವ ಕಾರಣ ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಕಿರಿಕಿರಿ ಉಂಟುಮಾಡಬಹುದು. ಪ್ರಚಾರಕರಲ್ಲಷ್ಟೇ ಅಲ್ಲ, ಹಿರಿಯರಲ್ಲೂ ಇಂಥ ಸಮಸ್ಯೆ ಬರಬಹುದು. ಎಲ್ಲರಿಗೂ ಬೈಬಲಿನಲ್ಲಿರುವ ಈ ಸಲಹೆಗಳು ಸಹಾಯ ಮಾಡುವವು: “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” “ನಿಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳಾಗಬೇಡಿರಿ.” (ರೋಮ. 12:​10, 16) ಹೌದು, ನಾವು ಹೇಳಿದ್ದೇ ಸರಿಯೆಂದು ವಾದಿಸುವ ಬದಲಿಗೆ ಬೇರೆಯವರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು. ಏಕೆಂದರೆ ಒಂದು ವಿಷಯವನ್ನು ನಿರ್ವಹಿಸಲು ಒಂದಕ್ಕಿಂತ ಹೆಚ್ಚು ಸರಿಯಾದ ಮಾರ್ಗಗಳಿರುತ್ತವೆ. ಹಾಗಾಗಿ ವಿಷಯವನ್ನು ಬೇರೆಯವರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುವುದಾದರೆ ಸಭೆಯಲ್ಲಿ ಏಕತೆ ವರ್ಧಿಸಲು ನೆರವಾಗುತ್ತೇವೆ.​—⁠ಫಿಲಿ. 4:⁠5.

13. (1) ನಮ್ಮ ಅಭಿಪ್ರಾಯಗಳ ಬಗ್ಗೆ ನಮಗೆ ಹೇಗನಿಸಬೇಕು? (2) ಇದಕ್ಕೆ ಉತ್ತಮ ಉದಾಹರಣೆ ಯಾವುದು?

13 ಹಾಗಾದರೆ ಸಭೆಯಲ್ಲಿ ನೀವು ಯಾವುದೋ ಒಂದು ಸಂಗತಿಯನ್ನು ನೋಡಿದ್ದು, ಅದನ್ನು ಹಿರಿಯರ ಗಮನಕ್ಕೆ ತರುವುದು ಅಗತ್ಯವೆಂದು ಕಂಡಾಗಲೂ ಸುಮ್ಮನೆ ಇರಬೇಕೆಂದಾ? ಖಂಡಿತ ಇಲ್ಲ. ಒಂದನೇ ಶತಮಾನದ ಕ್ರೈಸ್ತರ ಒಳ್ಳೇ ಮಾದರಿ ನಮಗಿದೆ. ಸಭೆಯಲ್ಲಿ ಒಂದು ವಿಷಯದ ಕುರಿತು ವಾಗ್ವಾದವೆದ್ದಾಗ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. “ಈ ವಾಗ್ವಾದದ ಕುರಿತು ತಿಳಿಸಲಿಕ್ಕಾಗಿ ಪೌಲ ಬಾರ್ನಬರೂ . . . ಬೇರೆ ಕೆಲವರೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರೀಪುರುಷರ ಬಳಿಗೆ ಹೋಗುವಂತೆ” ಸಹೋದರರು ಏರ್ಪಾಡು ಮಾಡಿದರು. (ಅ. ಕಾ. 15:⁠2) ಈ ವಿಷಯದ ಕುರಿತು ಸಹೋದರರಿಗೆ ತಮ್ಮದೇ ಆದ ಭಿನ್ನ ಅಭಿಪ್ರಾಯಗಳು ಇದ್ದಿರಬಹುದು. ಅದನ್ನು ಹೇಗೆ ಬಗೆಹರಿಸುವುದೆಂದು ಒಂದೊಂದು ವಿಧದಲ್ಲಿ ಯೋಚಿಸಿದ್ದಿರಬಹುದು. ಅವರು ಅಪೊಸ್ತಲರ ಮತ್ತು ಹಿರೀಪುರುಷರ ಬಳಿ ಬಂದು ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ ಅಪೊಸ್ತಲರೂ ಹಿರೀಪುರುಷರೂ ಪವಿತ್ರಾತ್ಮದ ಮಾರ್ಗದರ್ಶನದ ಅಡಿಯಲ್ಲಿ ಒಂದು ನಿರ್ಣಯಕ್ಕೆ ಬಂದ ಬಳಿಕವೂ ತಮ್ಮ ತಮ್ಮ ಅಭಿಪ್ರಾಯವನ್ನೇ ಹಿಡಿದು ಕೂರಲಿಲ್ಲ. ಕೈಗೊಳ್ಳಲಾದ ನಿರ್ಣಯವನ್ನು ಬಳಿಕ ಪತ್ರದ ಮೂಲಕ ಸಭೆಗಳಿಗೆ ತಿಳಿಸಲಾಯಿತು. ಫಲಿತಾಂಶ? ಸಭೆಗಳವರು “ಕೊಡಲ್ಪಟ್ಟ ಉತ್ತೇಜನಕ್ಕಾಗಿ ಸಂತೋಷಪಟ್ಟರು” ಮತ್ತು ‘ನಂಬಿಕೆಯಲ್ಲಿ ಬಲಗೊಳಿಸಲ್ಪಟ್ಟರು.’ (ಅ. ಕಾ. 15:31; 16:​4, 5) ನಾವು ಸಹ ಒಂದು ವಿಷಯವನ್ನು ಹಿರಿಯರ ಗಮನಕ್ಕೆ ತಂದ ಮೇಲೆ ಅದನ್ನು ಅವರಿಗೆ ಬಿಟ್ಟುಬಿಡೋಣ. ಅವರು ಅದರ ಕುರಿತು ಪ್ರಾರ್ಥನಾಪೂರ್ವಕವಾಗಿ ಆಲೋಚಿಸಿ ಸರಿಯಾದ ತೀರ್ಮಾನ ಮಾಡುವರೆಂದು ಭರವಸೆಯಿಡೋಣ.

ಇತರರ ಕಡೆಗೆ ಒಳ್ಳೇ ಮನೋಭಾವ ತೋರಿಸಿ

14. ಇತರರೊಂದಿಗಿನ ಒಡನಾಟದಲ್ಲಿ ನಾವು ಹೇಗೆ ಒಳ್ಳೇ ಮನೋಭಾವ ತೋರಿಸಬಹುದು?

14 ಇತರರೊಂದಿಗಿನ ಒಡನಾಟದಲ್ಲಿ ಒಳ್ಳೇ ಮನೋಭಾವ ತೋರಿಸಲು ವಿಪುಲ ಅವಕಾಶಗಳಿವೆ. ಒಂದು ವಿಧ, ಯಾರಾದರೂ ನಮ್ಮ ಮನನೋಯಿಸಿದಾಗ ಅವರನ್ನು ಕ್ಷಮಿಸುವುದು. “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ” ಎಂದು ಬೈಬಲ್‌ ಉತ್ತೇಜಿಸುತ್ತದೆ. (ಕೊಲೊ. 3:13) “ದೂರುಹೊರಿಸಲು ಕಾರಣವಿದ್ದರೂ” ಎಂದು ಹೇಳಿರುವುದನ್ನು ಗಮನಿಸಿ. ಅಂದರೆ ಇನ್ನೊಬ್ಬನ ಮೇಲೆ ಅಸಮಾಧಾನಗೊಳ್ಳಲು ಸೂಕ್ತ ಕಾರಣ ನಮಗಿರಬಹುದು. ಆದರೂ ಅವರ ಕುಂದುಕೊರತೆಗಳ ಬಗ್ಗೆಯೇ ಅತಿಯಾಗಿ ಯೋಚಿಸದೆ ಯೆಹೋವನಂತೆ ಉದಾರವಾಗಿ ಕ್ಷಮಿಸಿಬಿಡೋಣ. ಹೀಗೆ ಸಭೆಯ ಶಾಂತಿಯನ್ನು ಕಾಪಾಡೋಣ ಮತ್ತು ದೇವರ ಸೇವೆಯಲ್ಲಿ ಕೈಕೈಜೋಡಿಸಿ ಮುಂದುವರಿಯೋಣ.

15. (1) ಕ್ಷಮಾಭಾವದ ಕುರಿತು ನಾವು ಯೋಬನಿಂದ ಏನು ಕಲಿಯುತ್ತೇವೆ? (2) ಒಳ್ಳೇ ಮನೋಭಾವ ತೋರಿಸಲು ಪ್ರಾರ್ಥನೆ ಹೇಗೆ ಸಹಾಯ ಮಾಡುವುದು?

15 ಕ್ಷಮಾಭಾವದ ವಿಷಯದಲ್ಲಿ ನಾವು ಯೋಬನಿಂದ ಒಳ್ಳೇ ಪಾಠ ಕಲಿಯುತ್ತೇವೆ. ಹೆಸರಿಗೆ ಮಾತ್ರ ಸಾಂತ್ವನಗಾರರಾಗಿದ್ದ ಅವನ ಮೂವರು ಮಿತ್ರರು ಚುಚ್ಚಿ ಚುಚ್ಚಿ ಮಾತಾಡಿ ಅವನನ್ನು ನೋಯಿಸಿದರು. ಆದರೂ ಯೋಬ ಕ್ಷಮಾಭಾವ ಮೆರೆದನು. ಅವನಿಗೆ ಯಾವುದು ಸಹಾಯ ಮಾಡಿತು? ‘ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ್ದೇ.’ (ಯೋಬ 16:2; 42:10) ಹೌದು, ನಮ್ಮ ಮನನೋಯಿಸಿದವರಿಗಾಗಿ ಪ್ರಾರ್ಥಿಸಿದರೆ ಅವರ ಮೇಲಿರುವ ಕಹಿಭಾವನೆ ಇಲ್ಲವಾಗುವುದು. ನಮ್ಮ ಎಲ್ಲ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವುದು ಕ್ರಿಸ್ತನಂಥ ಮನೋಭಾವ ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. (ಯೋಹಾ. 13:​34, 35) ಪವಿತ್ರಾತ್ಮ ಶಕ್ತಿ ಕೊಡುವಂತೆಯೂ ನಾವು ಪ್ರಾರ್ಥಿಸಬೇಕು. (ಲೂಕ 11:13) ಈ ಶಕ್ತಿ ನಾವು ಇತರರೊಂದಿಗೆ ವ್ಯವಹರಿಸುವಾಗ ನಿಜ ಕ್ರೈಸ್ತ ಗುಣಗಳನ್ನು ತೋರಿಸುವಂತೆ ನೆರವಾಗುವುದು.​ಗಲಾತ್ಯ 5:​22, 23 ಓದಿ.

ದೇವರ ಸಂಘಟನೆಯಲ್ಲಿ ಒಳ್ಳೇ ಮನೋಭಾವ ವರ್ಧಿಸುವುದರಲ್ಲಿ ನಿಮ್ಮ ಪಾಲು

16, 17. ‘ನೀವು ತೋರಿಸುವ ಮನೋಭಾವದಲ್ಲಿ’ ಯಾವ ಪ್ರಗತಿ ಮಾಡಬೇಕೆಂದು ನಿರ್ಧರಿಸಿದ್ದೀರಿ?

16 ಸಭೆಯಲ್ಲಿ ಒಳ್ಳೇ ಮನೋಭಾವವನ್ನು ವರ್ಧಿಸಲು ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಪಾತ್ರವನ್ನು ಮಾಡುವ ಗುರಿಯಿಡೋಣ. ಆಗ ಫಲಿತಾಂಶ ಎಷ್ಟೊಂದು ಒಳ್ಳೇದಾಗಿರುವುದು! ಈ ಲೇಖನದಲ್ಲಿ ನಾವು ಅನೇಕ ಅಂಶಗಳನ್ನು ಕಲಿತೆವು. ‘ಒಳ್ಳೇ ಮನೋಭಾವ ತೋರಿಸುವದರಲ್ಲಿ ನಾನಿನ್ನೂ ಪ್ರಗತಿ ಮಾಡಲಿಕ್ಕಿದೆ’ ಎಂದು ಈಗ ನಿಮಗನಿಸಬಹುದು. ಹಾಗಿದ್ದಲ್ಲಿ ಯಾವ ಕ್ಷೇತ್ರದಲ್ಲಿ ಪ್ರಗತಿ ಮಾಡಲಿಕ್ಕಿದೆ ಎನ್ನುವುದನ್ನು ದೇವರ ವಾಕ್ಯದ ಮೂಲಕ ಪರೀಕ್ಷಿಸಿಕೊಳ್ಳಿ. (ಇಬ್ರಿ. 4:12) ಪೌಲನು ಸಭೆಯಲ್ಲಿ ಒಳ್ಳೇ ಮನೋಭಾವ ತೋರಿಸಲು ಬಯಸಿದನು. ಹಾಗಾಗಿ ಅವನು ಹೇಳಿದ್ದು: “ನನಗೇ ವಿರುದ್ಧವಾಗಿರುವ ಯಾವುದರ ಪ್ರಜ್ಞೆಯೂ ನನಗಿಲ್ಲ. ಆದರೂ ಇದರಿಂದ ನಾನು ನೀತಿವಂತನೆಂದು ರುಜುವಾಗುವುದಿಲ್ಲ; ನನ್ನನ್ನು ಪರೀಕ್ಷಿಸುವವನು ಯೆಹೋವನೇ ಆಗಿದ್ದಾನೆ.”​—⁠1 ಕೊರಿಂ. 4:⁠4.

17 ಮೇಲಣಿಂದ ಬರುವ ವಿವೇಕಕ್ಕೆ ಅನುಗುಣವಾಗಿ ನಡೆದು ನಮ್ಮ ಸ್ಥಾನಮಾನದ ಕುರಿತು ಅತಿಯಾಗಿ ಚಿಂತಿಸದಿದ್ದರೆ ಸಭೆಯಲ್ಲಿ ಹಿತಕರ ಮನೋಭಾವವನ್ನು ಹೆಚ್ಚಿಸುವೆವು. ಇತರರನ್ನು ಉದಾರವಾಗಿ ಕ್ಷಮಿಸುವ ಮೂಲಕ ಹಾಗೂ ಅವರ ಕುರಿತು ಒಳ್ಳೇ ಅಭಿಪ್ರಾಯವನ್ನೇ ಇಟ್ಟುಕೊಳ್ಳುವ ಮೂಲಕ ಎಲ್ಲರೊಂದಿಗೆ ಶಾಂತಿಸಂಬಂಧದಲ್ಲಿ ಇರುವೆವು. (ಫಿಲಿ. 4:⁠8) ಹೀಗೆ ಮಾಡುತ್ತಾ ಇರುವುದಾದರೆ ‘ನಾವು ತೋರಿಸುವ ಮನೋಭಾವವನ್ನು’ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಮೆಚ್ಚುವರು.​—⁠ಫಿಲೆ. 25.

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರ]

ಸಭೆಯ ಏರ್ಪಾಡಿನಲ್ಲಿ ಯೇಸುವಿನ ಪಾತ್ರದ ಕುರಿತು ಯೋಚಿಸುವುದು ಸಲಹೆಗೆ ನೀವು ಪ್ರತಿಕ್ರಿಯಿಸುವ ವಿಧವನ್ನು ಹೇಗೆ ಪ್ರಭಾವಿಸುತ್ತದೆ?