ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು”

“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು”

“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು”

“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?”​—⁠ಕೀರ್ತ. 143:⁠10.

ಮುಖ್ಯಾಂಶಗಳನ್ನು ನೆನಪಿನಲ್ಲಿಡಿ. . .

ದಾವೀದನು ಯೆಹೋವನ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟಿದ್ದನು ಎಂದು ಯಾವ ಘಟನೆಗಳು ತೋರಿಸುತ್ತವೆ?

ದೇವರ ಚಿತ್ತವೇನೆಂದು ತಿಳಿಯಲು ದಾವೀದನಿಗೆ ಯಾವುದು ಸಹಾಯಮಾಡಿತು?

ದೇವರ ಅನುಗ್ರಹ ಯಾವಾಗಲೂ ನಮ್ಮ ಮೇಲಿರಲು ನಾವೇನು ಮಾಡಬೇಕು?

1, 2. (1) ದೇವರ ಚಿತ್ತವೇನೆಂದು ತಿಳಿದುಕೊಳ್ಳುವುದರಿಂದ ಯಾವ ಪ್ರಯೋಜನವಿದೆ? (2) ಇದರ ಕುರಿತು ರಾಜ ದಾವೀದನಿಂದ ಏನು ಕಲಿಯಬಹುದು?

ನೀವೊಂದು ಪರ್ವತ ಪ್ರದೇಶದಲ್ಲಿ ನಡೆಯುತ್ತಿದ್ದೀರಿ ಎಂದು ನೆನಸಿ. ಹಾಗೆ ಮುಂದೆ ಮುಂದೆ ಸಾಗುತ್ತಿರುವಾಗ ನೀವು ಹೋಗುತ್ತಿರುವ ದಾರಿ ಕವಲೊಡೆದಿರುತ್ತದೆ. ನಿಮಗೆ ಯಾವ ದಾರಿಯಲ್ಲಿ ಹೋಗಬೇಕು ಅನ್ನೋದು ಗೊತ್ತಾಗಲ್ಲ. ಆಗೇನು ಮಾಡುವಿರಿ? ಅಲ್ಲೇ ಅಕ್ಕಪಕ್ಕದಲ್ಲಿರೋ ಎತ್ತರವಾದ ಬಂಡೆಯನ್ನು ಹತ್ತಿ ಪ್ರತಿ ದಾರಿ ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಕಂಡುಕೊಂಡು ಸರಿಯಾದ ದಾರಿಯಲ್ಲಿ ಹೋಗುತ್ತೀರಿ. ಅದೇ ರೀತಿ ನೀವೊಂದು ಪ್ರಾಮುಖ್ಯ ನಿರ್ಧಾರ ಮಾಡುವಾಗ ಈ ರೀತಿಯ ಉಪಾಯವು ಸಹಾಯಕರ. ಯಾವುದೇ ವಿಷಯವನ್ನು ಸೃಷ್ಟಿಕರ್ತನಾದ ಯೆಹೋವನ ಉನ್ನತ ದೃಷ್ಟಿಕೋನದಿಂದ ನೋಡುವಾಗ ಆತನು ಬಯಸುವಂಥ ‘ಮಾರ್ಗದಲ್ಲೇ ನಡೆಯಲು’ ಸಾಧ್ಯ.​—⁠ಯೆಶಾ. 30:⁠21.

2 ಇದಕ್ಕೊಂದು ಉತ್ತಮ ಮಾದರಿ ಪುರಾತನ ಇಸ್ರಾಯೇಲಿನ ರಾಜ ದಾವೀದ. ಆತನು ತನ್ನ ಜೀವನದುದ್ದಕ್ಕೂ ದೇವರ ಚಿತ್ತದಂತೆಯೇ ನಡೆದನು. ಯೆಹೋವನಲ್ಲಿ ಯಥಾರ್ಥಭಕ್ತಿಯನ್ನು ಇಟ್ಟಿದ್ದನು. ದಾವೀದನ ಮಾದರಿಯಿಂದ ಕಲಿಯಲಿಕ್ಕಾಗಿ ಅವನ ಜೀವನದಲ್ಲಿ ನಡೆದ ಕೆಲವು ಘಟನೆಗಳ ಒಳಹೊಕ್ಕು ನೋಡೋಣ.​—⁠1 ಅರ. 11:⁠4.

ದಾವೀದನು ಯೆಹೋವನ ನಾಮವನ್ನು ಗೌರವಿಸಿದನು

3, 4. (1) ಗೊಲ್ಯಾತನನ್ನು ಎದುರಿಸಲು ದಾವೀದನನ್ನು ಪ್ರಚೋದಿಸಿದ್ದು ಯಾವುದು? (2) ದೇವರ ನಾಮದ ಕುರಿತು ದಾವೀದನ ನೋಟವೇನಾಗಿತ್ತು?

3 ದಾವೀದನು ಫಿಲಿಷ್ಟಿಯ ರಣಶೂರನಾದ ಗೊಲ್ಯಾತನನ್ನು ಎದುರಿಸಿದ ಸಂದರ್ಭವನ್ನು ನೆನಪಿಗೆ ತಂದುಕೊಳ್ಳಿ. ಗೊಲ್ಯಾತ ಒಂಬತ್ತುವರೆ ಅಡಿ (ಆರೂವರೆ ಮೊಳ) ಎತ್ತರದ ದೈತ್ಯನಾಗಿದ್ದನು. ಮಾತ್ರವಲ್ಲ ಅವನು ಸಂಪೂರ್ಣ ಶಸ್ತ್ರಸಜ್ಜಿತನಾಗಿದ್ದನು. ಇಂಥ ಶೂರನನ್ನು ಎದುರಿಸಲು ಯುವ ದಾವೀದನನ್ನು ಪ್ರಚೋದಿಸಿದ್ದು ಯಾವುದು? (1 ಸಮು. 17:⁠4) ಅವನಲ್ಲಿದ್ದ ಧೈರ್ಯನಾ? ದೇವರ ಮೇಲಿದ್ದ ನಂಬಿಕೆಯಾ? ಎರಡೂ ಗುಣಗಳು ಈ ಶೌರ್ಯ ಕೃತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವು. ಇದಕ್ಕಿಂತ ಮುಖ್ಯವಾಗಿ ಯೆಹೋವನ ಮೇಲೆ ಮತ್ತು ಆತನ ನಾಮದ ಮೇಲಿದ್ದ ಗೌರವವೇ ದಾವೀದನನ್ನು ಆ ಬಲಾಢ್ಯ ದೈತ್ಯನ ಎದುರು ದೃಢವಾಗಿ ನಿಲ್ಲುವಂತೆ ಪ್ರೇರಿಸಿತು. ಗೊಲ್ಯಾತನ ಹೀಯಾಳಿಕೆಯಿಂದ ದಾವೀದನೆಷ್ಟು ಕ್ರೋಧಗೊಂಡನೆಂದರೆ ಅಲ್ಲಿದ್ದ ಜನರಿಗೆ ಹೀಗೆ ಕೇಳಿದನು: “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು?”​—⁠1 ಸಮು. 17:⁠26.

4 ಗೊಲ್ಯಾತನ ಮುಖಾಮುಖಿಯಾದಾಗ ಯುವ ದಾವೀದನು ಹೇಳಿದ್ದು: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.” (1 ಸಮು. 17:45) ಮುಂದೇನಾಯಿತು? ದಾವೀದನು ಸತ್ಯ ದೇವರ ಮೇಲೆ ಭರವಸೆಯಿಟ್ಟು ಕೇವಲ ಒಂದೇ ಒಂದು ಕವಣೆಕಲ್ಲಿನಿಂದ ಫಿಲಿಷ್ಟಿಯ ರಣಶೂರನನ್ನು ಹೊಡೆದು ನೆಲಕ್ಕುರುಳಿಸಿದನು. ಈ ಒಂದು ಸಂದರ್ಭ ಮಾತ್ರವಲ್ಲ ತನ್ನ ಜೀವನದುದ್ದಕ್ಕೂ ದಾವೀದನು ಯೆಹೋವನ ಮೇಲೆ ಭರವಸೆಯಿಟ್ಟನು. ಆತನ ದಿವ್ಯ ನಾಮವನ್ನು ಗೌರವಿಸಿದನು. ಅಷ್ಟೇ ಅಲ್ಲದೆ ಜೊತೆ ಇಸ್ರಾಯೇಲ್ಯರಿಗೆ ‘ಯೆಹೋವನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ’ ಎಂದು ಪ್ರೋತ್ಸಾಹಿಸಿದನು.​1 ಪೂರ್ವಕಾಲವೃತ್ತಾಂತ 16:​8-10 ಓದಿ.

5. ಗೊಲ್ಯಾತನು ಯೆಹೋವನನ್ನು ಹೀಯಾಳಿಸಿದಂಥದ್ದೇ ಸನ್ನಿವೇಶ ಇಂದು ನಮಗೆ ಹೇಗೆ ಎದುರಾಗಬಹುದು?

5 ಯೆಹೋವನು ನಿಮ್ಮ ದೇವರಾಗಿರುವುದಕ್ಕೆ ನೀವು ಹೆಮ್ಮೆಪಡ್ತೀರಾ? (ಯೆರೆ. 9:24) ನೆರೆಹೊರೆಯವರು, ಜೊತೆ ಕಾರ್ಮಿಕರು, ಸಹಪಾಠಿಗಳು, ಸಂಬಂಧಿಕರು ಯೆಹೋವನ ಬಗ್ಗೆ ಇಲ್ಲಸಲ್ಲದ್ದನ್ನು ಮಾತಾಡುವಾಗ, ಆತನ ಸಾಕ್ಷಿಗಳ ಬಗ್ಗೆ ಕುಚೋದ್ಯ ಮಾಡುವಾಗ ನಿಮ್ಮ ಪ್ರತಿಕ್ರಿಯೆ ಏನು? ಯೆಹೋವನ ನಾಮವನ್ನು ಎತ್ತಿ ಹಿಡಿಯುತ್ತಾ ಆತನನ್ನು ಸಮರ್ಥಿಸುತ್ತೀರಾ? ಅಂಥ ಸಂದರ್ಭದಲ್ಲಿ ಯೆಹೋವನು ನೆರವು ನೀಡುತ್ತಾನೆಂದು ನಂಬುತ್ತೀರಾ? “ಸುಮ್ಮನಿರುವ ಸಮಯ” ಇದೆ ನಿಜ. ಆದರೆ ಯೆಹೋವನ ಸಾಕ್ಷಿಗಳಾಗಿರುವುದಕ್ಕೆ ಮತ್ತು ಯೇಸುವಿನ ಹಿಂಬಾಲಕರಾಗಿರುವುದಕ್ಕೆ ನಾವು ನಾಚಿಕೆಪಟ್ಟು ಸುಮ್ಮನಿರುವ ಅಗತ್ಯವಿಲ್ಲ. (ಪ್ರಸಂ. 3:​1, 7; ಮಾರ್ಕ 8:38) ಯೆಹೋವನನ್ನು ಅಗೌರವಿಸುವ ಜನರೊಂದಿಗೆ ಜಾಣತನ ಮತ್ತು ಸೌಜನ್ಯದಿಂದ ವ್ಯವಹರಿಸಬೇಕಾದರೂ ಗೊಲ್ಯಾತನಿಗೆ ಇಸ್ರಾಯೇಲ್ಯರು ಹೆದರಿದಂತೆ ನಾವು ಹೆದರಬಾರದು. ಅವರು ಫಿಲಿಷ್ಟಿಯನ ಹೀಯಾಳಿಕೆಯ ಮಾತುಗಳನ್ನು “ಕೇಳಿ ಬಹಳವಾಗಿ ಭಯಪಟ್ಟರು; ಅವರ ಎದೆಯೊಡೆದು ಹೋಯಿತು.” (1 ಸಮು. 17:11) ಅದಕ್ಕೆ ಬದಲಾಗಿ ನಾವು ಯೆಹೋವನ ನಾಮವನ್ನು ಪವಿತ್ರೀಕರಿಸಲು ತಕ್ಷಣ ಕ್ರಿಯೆಗೈಯಬೇಕು. ಯೆಹೋವ ದೇವರು ನಿಜವಾಗಿಯೂ ಎಂಥವನಾಗಿದ್ದಾನೆಂದು ಜನರು ತಿಳಿಯಲು ಸಹಾಯ ಮಾಡುವುದೇ ನಮ್ಮ ಇಚ್ಛೆಯಾಗಿರಬೇಕು. ಅದಕ್ಕಾಗಿ ಯೆಹೋವನ ಸಮೀಪಕ್ಕೆ ಬರುವುದರ ಮಹತ್ವವನ್ನು ತಿಳಿಸಲು ಆತನ ವಾಕ್ಯವಾದ ಬೈಬಲನ್ನು ಉಪಯೋಗಿಸಲು ಹಿಂಜರಿಯಬಾರದು.​—⁠ಯಾಕೋ. 4:⁠8.

6. (1) ಯಾವ ಮುಖ್ಯ ಉದ್ದೇಶದಿಂದ ದಾವೀದನು ಗೊಲ್ಯಾತನೊಂದಿಗೆ ಹೋರಾಡಿದನು? (2) ನಮ್ಮ ಮುಖ್ಯ ಗುರಿ ಏನಾಗಿರಬೇಕು?

6 ದಾವೀದ ಗೊಲ್ಯಾತರ ಘಟನೆಯಿಂದ ಇನ್ನೊಂದು ಪ್ರಾಮುಖ್ಯ ಪಾಠವಿದೆ. ದಾವೀದನು ರಣರಂಗಕ್ಕೆ ಬಂದಾಗ, “ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಸಿಕ್ಕುವದೇನೆಂದು ಹೇಳಿದಿರಿ ಎಂದು” ಕೇಳಿದನು. ಅದಕ್ಕುತ್ತರವಾಗಿ ಅಲ್ಲಿ ಸೇರಿದ್ದ ಜನರು “ಯಾವನು [ಗೊಲ್ಯಾತನನ್ನು] ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆಮಾಡುವನು” ಎಂದು ಹೇಳಿದರು. (1 ಸಮು. 17:​25-27) ಆದರೆ ದಾವೀದನ ಮುಖ್ಯ ಉದ್ದೇಶ ಅಪಾರ ಐಶ್ವರ್ಯ ಹೊಂದುವುದಾಗಿರಲಿಲ್ಲ. ಸತ್ಯ ದೇವರನ್ನು ಮಹಿಮೆ ಪಡಿಸುವುದೇ ಅವನ ಮುಖ್ಯ ಉದ್ದೇಶವಾಗಿತ್ತು. (1 ಸಮುವೇಲ 17:​46, 47 ಓದಿ.) ನಮ್ಮ ಕುರಿತು ಏನು? ಅಪಾರ ಸಂಪತ್ತು ಗಳಿಸಿ ಲೋಕದಲ್ಲಿ ನಮಗೊಂದು ಹೆಸರು, ಒಳ್ಳೇ ಸ್ಥಾನಮಾನ ಗಳಿಸುವುದು ನಮ್ಮ ಮುಖ್ಯ ಗುರಿಯಾಗಿದೆಯಾ? ಇಲ್ಲ. “ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ” ಎಂದು ಹಾಡಿದ ದಾವೀದನಂತೆ ನಾವಿರಲು ಬಯಸುತ್ತೇವೆ. (ಕೀರ್ತ. 34:⁠3) ನಾವು ದೇವರಲ್ಲಿ ಭರವಸೆ ಇಡೋಣ. ನಮ್ಮ ಹೆಸರನ್ನಲ್ಲ ಆತನ ಹೆಸರನ್ನು ಮಹಿಮೆಪಡಿಸಲು ಹೆಜ್ಜೆ ತೆಗೆದುಕೊಳ್ಳೋಣ.​—⁠ಮತ್ತಾ. 6:⁠9.

7. ನಮ್ಮ ಸಂದೇಶವನ್ನು ಜನರು ಕೇಳದಿರುವಾಗಲೂ ಸೇವೆಯನ್ನು ಮುಂದುವರಿಸಲು ಬೇಕಾಗುವ ಬಲವಾದ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

7 ಗೊಲ್ಯಾತನನ್ನು ಕೆಚ್ಚೆದೆಯಿಂದ ಎದುರಿಸಿದ ಯುವ ದಾವೀದನಿಗೆ ಯೆಹೋವನ ಮೇಲೆ ಸಂಪೂರ್ಣ ಭರವಸೆ ಮತ್ತು ಬಲವಾದ ನಂಬಿಕೆ ಇತ್ತು. ಅಂಥ ಭರವಸೆ ಬೆಳೆಸಿಕೊಳ್ಳಲು ಸಹಾಯ ಮಾಡಿದ್ದು ಯಾವುದು? ಅವನು ಕುರುಬನಾಗಿ ಕೆಲಸಮಾಡುತ್ತಿದ್ದಾಗ ಯೆಹೋವನ ಮೇಲೆ ಆತುಕೊಂಡದ್ದೇ. (1 ಸಮು. 17:​34-37) ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಬೇಕಾದರೆ ನಮ್ಮಲ್ಲೂ ಬಲವಾದ ನಂಬಿಕೆ ಇರಬೇಕು. ವಿಶೇಷವಾಗಿ ನಾವು ಸಾರುವ ಸಂದೇಶಕ್ಕೆ ಜನರು ಕಿವಿಗೊಡದೆ ಇರುವಾಗ. ನಮ್ಮ ಪ್ರತಿನಿತ್ಯದ ಕೆಲಸಗಳಲ್ಲಿ ಯೆಹೋವನ ಮೇಲೆ ಆತುಕೊಳ್ಳುವಾಗ ನಾವು ಅಂಥ ನಂಬಿಕೆಯನ್ನು ಬೆಳೆಸಿಕೊಳ್ಳಬಹುದು. ಉದಾಹರಣೆಗೆ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ನಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವ ಜನರೊಂದಿಗೆ ಬೈಬಲ್‌ ಸತ್ಯಗಳ ಕುರಿತು ಮಾತಾಡಬಹುದು. ಮಾತ್ರವಲ್ಲ ಮನೆ ಮನೆ ಸೇವೆ ಮಾಡುವಾಗ ದಾರಿಯಲ್ಲಿ ಸಿಗುವವರೊಂದಿಗೂ ನಾವು ಮಾತಾಡಬಹುದಲ್ಲವೇ?​—⁠ಅ. ಕಾ. 20:​20, 21.

ಯೆಹೋವನೇ ಕ್ರಿಯೆಗೈಯುವಂತೆ ದಾವೀದನು ಕಾದನು

8, 9. ಯೆಹೋವನ ಚಿತ್ತ ತನ್ನ ಮನಸ್ಸಿನಲ್ಲಿ ಇತ್ತೆಂದು ದಾವೀದನು ರಾಜ ಸೌಲನೊಂದಿಗೆ ವ್ಯವಹರಿಸಿದ ರೀತಿಯಲ್ಲಿ ಹೇಗೆ ತೋರಿಸಿದನು?

8 ಇನ್ನೊಂದು ಸಂದರ್ಭದಲ್ಲೂ ದಾವೀದನು ಯೆಹೋವನ ಮೇಲೆ ಸಂಪೂರ್ಣ ಭರವಸೆಯಿಟ್ಟನು. ಅದು ಇಸ್ರಾಯೇಲಿನ ಪ್ರಥಮ ರಾಜನಾದ ಸೌಲನಿಂದ ತನಗೆ ಅಪಾಯವಿದ್ದಾಗ. ಹೊಟ್ಟೆಕಿಚ್ಚಿನಿಂದ ಸೌಲನು ಮೂರು ಬಾರಿ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವ ಹಾಗೆ ಈಟಿಯಿಂದ ತಿವಿದನು. ಪ್ರತಿಬಾರಿ ದಾವೀದನು ತಪ್ಪಿಸಿಕೊಂಡನೇ ವಿನಾ ತಿರುಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲಿಲ್ಲ. ಕೊನೆಗೆ ದಾವೀದನು ಸೌಲನಿಂದ ದೂರ ಓಡಿಹೋದನು. (1 ಸಮು. 18:​7-11; 19:10) ಅನಂತರ ಸೌಲನು ಎಲ್ಲಾ ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡಿನಲ್ಲಿದ್ದ ದಾವೀದನನ್ನು ಹುಡುಕಲು ಹೊರಟನು. (1 ಸಮು. 24:⁠2) ಆದರೆ ಒಮ್ಮೆ ಏನಾಯಿತೆಂದರೆ ಸೌಲನು ತನಗೆ ಗೊತ್ತಿಲ್ಲದೆ ದಾವೀದ ಮತ್ತು ಅವನ ಜನರು ಅವಿತುಕೊಂಡಿದ್ದ ಗವಿಯೊಳಕ್ಕೆ ಹೋದನು. ತನ್ನ ಜೀವಕ್ಕೆ ಕಂಟಕನಾಗಿದ್ದ ಆ ರಾಜನನ್ನು ಮುಗಿಸಲು ದಾವೀದನಿಗೆ ಇದೊಂದು ಉತ್ತಮ ಅವಕಾಶವಾಗಿತ್ತು. ಹೇಗೂ ಅವನಿಗೆ ಸೌಲನ ಬದಲಿಗೆ ತಾನೇ ರಾಜನಾಗುವುದು ದೇವರ ಚಿತ್ತವಾಗಿದೆ ಎಂದು ಗೊತ್ತಿತ್ತು. (1 ಸಮು. 16:​1, 13) ದಾವೀದನ ಜನರು ಸಹ ಸೌಲನನ್ನು ಮುಗಿಸುವಂತೆ ಸಲಹೆ ಕೊಟ್ಟರು. ಅದರಂತೆ ಮಾಡಿದ್ದರೆ ಸೌಲನು ಗವಿಯಿಂದ ಜೀವಂತವಾಗಿ ಹೊರಗೆ ಬರುತ್ತಿರಲಿಲ್ಲ. ಆದರೆ ದಾವೀದ ಹಾಗೆ ಮಾಡಲಿಲ್ಲ. ಬದಲಿಗೆ “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ ಎಂದು ಹೇಳಿದನು.” (1 ಸಮುವೇಲ 24:​4-7 ಓದಿ.) ಏಕೆಂದರೆ ಸೌಲ ಇನ್ನೂ ದೇವರ ಅಭಿಷಿಕ್ತ ರಾಜನಾಗಿದ್ದನು. ಸೌಲನನ್ನು ರಾಜನಾಗಿ ಮುಂದುವರೆಯಲು ಯೆಹೋವನೇ ಬಿಟ್ಟಿರುವಾಗ ಅವನಿಂದ ರಾಜತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ದಾವೀದನು ಅವನನ್ನು ಸಾಯಿಸಲು ಬಯಸಲಿಲ್ಲ. ಬದಲಿಗೆ ಸೌಲನ ಮೇಲಂಗಿಯ ತುಂಡನ್ನು ಮಾತ್ರ ಕತ್ತರಿಸಿಕೊಂಡನು. ಹೀಗೆ ಸೌಲನಿಗೆ ಕೇಡು ಬಗೆಯುವ ಯಾವುದೇ ಇಚ್ಛೆ ತನಗಿಲ್ಲ ಎಂದು ತೋರಿಸಿಕೊಟ್ಟನು.​—⁠1 ಸಮು. 24:⁠11.

9 ಮತ್ತೊಂದು ಸಂದರ್ಭದಲ್ಲೂ ದಾವೀದನು ದೇವರ ಅಭಿಷಿಕ್ತನಿಗೆ ಗೌರವ ತೋರಿಸಿದನು. ಅದು ಅವನು ಸೌಲನನ್ನು ಕೊನೆ ಬಾರಿ ನೋಡಿದಾಗ. ಒಮ್ಮೆ ಸೌಲ ಉಳುಕೊಂಡಿದ್ದ ಜಾಗಕ್ಕೆ ದಾವೀದ ಮತ್ತು ಅಬೀಷೈ ಬಂದರು. ಅಲ್ಲಿ ಸೌಲನು ನಿದ್ರಾವಶನಾಗಿರುವುದನ್ನು ಕಂಡರು. ಆಗ ದೇವರೇ ಶತ್ರುವನ್ನು ದಾವೀದನ ಕೈಗೆ ಒಪ್ಪಿಸಿದ್ದಾನೆಂದು ಯೋಚಿಸಿದ ಅಬೀಷೈ ಬರ್ಜಿಯಿಂದ ಸೌಲನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯಲು ಅನುಮತಿ ಕೇಳಿದನು. ಆದರೆ ದಾವೀದನು ಅದಕ್ಕೊಪ್ಪಲಿಲ್ಲ. (1 ಸಮು. 26:​8-11) ಏಕೆಂದರೆ ದಾವೀದನು ದೇವರ ಮಾರ್ಗದರ್ಶನಕ್ಕಾಗಿ ಎದುರುನೋಡುತ್ತಿದ್ದನು. ಅಬೀಷೈಯ ಒತ್ತಾಯದ ಹೊರತಾಗಿಯೂ ಅವನು ಯೆಹೋವನ ಚಿತ್ತವನ್ನು ಮಾಡುವ ತನ್ನ ದೃಢನಿರ್ಧಾರವನ್ನು ಸಡಿಲಗೊಳಿಸಲಿಲ್ಲ.

10. (1) ಯಾವ ಒತ್ತಡದ ಸನ್ನಿವೇಶ ನಮಗೆ ವೈಯಕ್ತಿಕವಾಗಿ ಎದುರಾಗಬಹುದು? (2) ನಾವು ದೃಢರಾಗಿ ನಿಲ್ಲಲು ಯಾವುದು ಸಹಾಯ ಮಾಡುತ್ತದೆ?

10 ನಮಗೂ ಕೂಡ ಇಂಥ ಒತ್ತಡದ ಸನ್ನಿವೇಶ ಎದುರಾಗಬಹುದು. ನಮ್ಮ ಜೊತೆ ಸಹವಾಸ ಮಾಡುವವರು ನಾವು ಯೆಹೋವನ ಚಿತ್ತವನ್ನು ಮಾಡುವಂತೆ ಬೆಂಬಲಿಸುವ ಬದಲು ತಮಗೆ ಏನು ಒಳ್ಳೇದೆಂದು ತೋರುತ್ತದೋ ಅದನ್ನು ಮಾಡುವಂತೆ ಒತ್ತಾಯಿಸಬಹುದು. ಇನ್ನು ಕೆಲವರು ಅಬೀಷೈಯಂತೆ ಯಾವುದೋ ಒಂದು ಕೆಲಸವನ್ನು ಮಾಡುವಾಗ ದೇವರ ಚಿತ್ತವೇನೆಂದು ತಿಳಿಯದೆ ಅದನ್ನು ಮಾಡಲು ಪ್ರೋತ್ಸಾಹಿಸಬಹುದು. ಆದರೆ ನಾವು ಇತರರ ಪ್ರಭಾವಕ್ಕೆ ಒಳಗಾಗದೆ ದೃಢರಾಗಿ ನಿಲ್ಲಬೇಕಾದರೆ, ಯಾವುದೇ ವಿಷಯದಲ್ಲಾಗಲಿ ಯೆಹೋವನ ದೃಷ್ಟಿಕೋನವೇನು ಎನ್ನುವುದನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಆತನು ಏನು ಮಾಡುವಂತೆ ಬಯಸುತ್ತಾನೋ ಅದನ್ನು ಮಾಡಲು ದೃಢ ನಿಶ್ಚಯ ಮಾಡಬೇಕು.

11. (1) ದಾವೀದನು ತನ್ನ ಜೀವನದಲ್ಲಿ ಯೆಹೋವನ ಚಿತ್ತವೇ ಪ್ರಮುಖವಾಗಿತ್ತೆಂದು ಹೇಗೆ ತೋರಿಸಿದನು? (2) ನೀವು ಹೇಗೆ ದಾವೀದನನ್ನು ಅನುಕರಿಸುವಿರಿ?

11 “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು” ಎಂದು ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿದನು. (ಕೀರ್ತನೆ 143:​5, 8, 10 ಓದಿ.) ತನಗೆ ಸರಿಕಂಡದ್ದನ್ನೇ ಅವನು ಮಾಡಲಿಲ್ಲ, ಇತರರ ಒತ್ತಡಕ್ಕೂ ಮಣಿಯಲಿಲ್ಲ. ಬದಲಿಗೆ ಯೆಹೋವನಿಂದ ಕಲಿಯಲು ಹಾತೊರೆದನು. ಅವನು ‘ಯೆಹೋವನ ಎಲ್ಲಾ ಕಾರ್ಯಗಳನ್ನು ಧ್ಯಾನಿಸಿದನು. ಆತನ ಕೈಕೆಲಸಗಳನ್ನು ಸ್ಮರಿಸಿದನು.’ ನಾವು ಕೂಡ ಬೈಬಲಿನ ಗಹನವಾದ ಅಧ್ಯಯನದ ಮೂಲಕ, ಯೆಹೋವನು ಮಾನವರೊಂದಿಗೆ ವ್ಯವಹರಿಸಿದ ಅನೇಕ ವೃತ್ತಾಂತಗಳನ್ನು ಓದಿ ಮನನಮಾಡುವ ಮೂಲಕ ದೇವರ ಚಿತ್ತವೇನೆಂದು ಗ್ರಹಿಸಬಹುದು.

ದಾವೀದನು ನಿಯಮಗಳ ಹಿಂದಿರುವ ತತ್ವಗಳನ್ನು ಅರ್ಥಮಾಡಿಕೊಂಡನು

12, 13. ತನ್ನ ಮೂವರು ಶೂರರು ತಂದ ನೀರನ್ನು ದಾವೀದನು ಏಕೆ ನೆಲದ ಮೇಲೆ ಸುರಿದನು?

12 ದಾವೀದನು ನಡೆದುಕೊಂಡ ರೀತಿಯಿಂದಲೂ ನಾವು ಕಲಿಯಬಹುದು. ಅವನು ನಿಯಮಗಳನ್ನಷ್ಟೇ ಅಲ್ಲ ಅವುಗಳ ಹಿಂದಿರುವ ತತ್ವಗಳನ್ನು ಅರಿತುಕೊಂಡನು. ಅವುಗಳಿಗೆ ಅನುಸಾರವಾಗಿ ಜೀವಿಸಲು ಬಯಸಿದನು. ಈ ಸಂದರ್ಭವನ್ನು ಪರಿಗಣಿಸಿ. ಒಮ್ಮೆ ದಾವೀದ “ಬೇತ್ಲೆಹೇಮ್‌ ಊರಿನ . . . ಬಾವಿಯ ನೀರನ್ನು” ಕುಡಿಯಲು ಹಂಬಲಿಸಿದನು. ಆದರೆ ಬೇತ್ಲೆಹೇಮ್‌ ಫಿಲಿಷ್ಟಿಯರ ವಶದಲ್ಲಿತ್ತು. ಆದರೂ ದಾವೀದನ ಮೂವರು ಶೂರರು ತಮ್ಮ ಜೀವವನ್ನು ಒತ್ತೆಯಿಟ್ಟು ಫಿಲಿಷ್ಟಿಯ ದಂಡಿನೊಳಗೆ ನುಗ್ಗಿಹೋಗಿ ನೀರನ್ನು ತಂದರು. ಆದರೆ ದಾವೀದನು “ನಾನು ಇದನ್ನು ಕುಡಿಯುವದೇ ಇಲ್ಲ ಎಂದು ಹೇಳಿ ಅದನ್ನು ಯೆಹೋವನ ಮುಂದೆ ಹೊಯ್ದನು.” ಕಾರಣ? ತಮ್ಮ ಜೀವವನ್ನು ಸಮರ್ಪಿಸಿದ [ಒತ್ತೆಯಿಟ್ಟು, NW] ಈ ಪುರುಷರ ರಕ್ತವನ್ನು ನಾನು ಕುಡಿಯಲೋ! ನನ್ನ ದೇವರು ಈ ಕಾರ್ಯವನ್ನು ನನಗೆ ದೂರಮಾಡಲಿ. ಅವರು ತಮ್ಮ ಜೀವವನ್ನೇ ಸಮರ್ಪಿಸಿ [ಒತ್ತೆಯಿಟ್ಟು, NW] ಇದನ್ನು ತಂದು ಕೊಟ್ಟರು” ಎಂದನು ದಾವೀದ.​—⁠1 ಪೂರ್ವ. 11:​15-19.

13 ರಕ್ತವನ್ನು ತಿನ್ನಬಾರದು ಅದನ್ನು ‘ಯೆಹೋವನ ಮುಂದೆ ಹೊಯ್ದುಬಿಡಬೇಕೆಂಬ’ ಧರ್ಮಶಾಸ್ತ್ರದ ನಿಯಮ ದಾವೀದನಿಗೆ ಗೊತ್ತಿತ್ತು. ಆ ನಿಯಮ ಏಕಿದೆ ಎನ್ನುವುದನ್ನು ಕೂಡ ಅರ್ಥಮಾಡಿಕೊಂಡಿದ್ದನು. “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ” ಎನ್ನುವುದು ಅವನಿಗೆ ತಿಳಿದಿತ್ತು. ಆದರೆ ಶೂರರು ತಂದಿದ್ದು ನೀರು. ರಕ್ತ ಅಲ್ವಲ್ಲಾ! ಹಾಗಾದರೆ ಅದನ್ನು ಕುಡಿಯಲು ದಾವೀದನು ನಿರಾಕರಿಸಿದ್ದೇಕೆ? ಅವನು ರಕ್ತದ ಕುರಿತಾದ ನಿಯಮದ ಹಿಂದಿರುವ ಮೂಲತತ್ವವನ್ನು ಗೌರವಿಸಿದನು. ಆ ಮೂವರು ಶೂರರು ತಮ್ಮ ಪ್ರಾಣದ ಹಂಗನ್ನು ತೊರೆದು ನೀರನ್ನು ತಂದಕಾರಣ ಆ ನೀರು ಅವರ ರಕ್ತದಷ್ಟೇ ಅಮೂಲ್ಯವಾಗಿತ್ತು. ಆ ನೀರನ್ನು ಕುಡಿಯಲು ಯೋಚಿಸುವುದು ಕೂಡ ದಾವೀದನಿಗೆ ಅಸಾಧ್ಯವಾಗಿತ್ತು. ಹಾಗಾಗಿ ಅದನ್ನು ಕುಡಿಯುವ ಬದಲು ನೆಲದ ಮೇಲೆ ಸುರಿದುಬಿಟ್ಟನು.​—⁠ಯಾಜ. 17:11; ಧರ್ಮೋ. 12:​23, 24.

14. ಯೆಹೋವನ ದೃಷ್ಟಿಕೋನವನ್ನು ಹೊಂದಲು ದಾವೀದನಿಗೆ ಯಾವುದು ಸಹಾಯ ಮಾಡಿತು?

14 ದಾವೀದನು ದಿನನಿತ್ಯದ ಜೀವನದಲ್ಲಿ ದೇವರ ನಿಯಮಗಳಿಗೆ ಮಹತ್ವಪೂರ್ಣ ಸ್ಥಾನ ಕೊಟ್ಟಿದ್ದನು. “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ದಾವೀದ ಹಾಡಿದನು. (ಕೀರ್ತ. 40:⁠8) ಅವನು ದೇವರ ನಿಯಮಗಳನ್ನು ಅಧ್ಯಯನ ಮಾಡಿದನು. ಅದರಿಂದ ಕಲಿತ ವಿಷಯಗಳ ಕುರಿತು ಗಾಢವಾಗಿ ಮನನ ಮಾಡಿದನು. ಯೆಹೋವನ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ವಿವೇಕ ಎಂದು ಬಲವಾಗಿ ನಂಬಿದ್ದನು. ಇದರ ಪರಿಣಾಮವಾಗಿ ಅವನು ಮೋಶೆಯ ಧರ್ಮಶಾಸ್ತ್ರದಲ್ಲಿರುವ ನಿಯಮಗಳಿಗೆ ಮಾತ್ರವಲ್ಲ ಅದರ ಹಿಂದಿರುವ ಮೂಲತತ್ವಗಳಿಗೆ ಅನುಸಾರವಾಗಿ ನಡೆಯಲು ಅಪೇಕ್ಷಿಸಿದನು. ನಾವು ಸಹ ಬೈಬಲನ್ನು ಅಧ್ಯಯನ ಮಾಡುವಾಗ ಕಲಿತ ವಿಷಯಗಳನ್ನು ಮನನ ಮಾಡಬೇಕು. ಆಗ ಅವುಗಳನ್ನು ಮನಸ್ಸಿನಲ್ಲಿಟ್ಟು ನಮ್ಮ ದಿನನಿತ್ಯದ ಜೀವನದಲ್ಲಿ ಯೆಹೋವನನ್ನು ಸಂತೋಷಗೊಳಿಸುವ ನಿರ್ಧಾರಗಳನ್ನು ಮಾಡಸಾಧ್ಯ.

15. ಯಾವ ವಿಧದಲ್ಲಿ ಸೊಲೊಮೋನ ದೇವರ ಧರ್ಮಶಾಸ್ತ್ರಕ್ಕೆ ವಿಧೇಯನಾಗಲು ತಪ್ಪಿಹೋದನು?

15 ದಾವೀದನ ಮಗನಾದ ಸೊಲೊಮೋನನ ಕುರಿತು ಯೋಚಿಸಿ. ಯೆಹೋವನು ಅವನನ್ನು ಬಹಳವಾಗಿ ಆಶೀರ್ವದಿಸಿದ್ದನು. ಆದರೆ ಕಾಲಾನಂತರ ಸೊಲೊಮೋನ ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯನಾದನು. ಇಸ್ರಾಯೇಲಿನ ರಾಜರು “ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು” ಎಂಬ ಯೆಹೋವನ ಆಜ್ಞೆಗೆ ಅವನು ಕಿವಿಗೊಡಲಿಲ್ಲ. (ಧರ್ಮೋ. 17:17) ಅನೇಕ ವಿದೇಶಿ ಸ್ತ್ರೀಯರನ್ನೂ ವರಿಸಿದನು. ಅವನು ವೃದ್ಧನಾದಾಗ “ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು.” ಸೊಲೊಮೋನನು ದೇವರ ಆಜ್ಞೆಯನ್ನು ಅಸಡ್ಡೆ ಮಾಡಿದ್ದಕ್ಕೆ ಏನೇ ಕಾರಣ ಕೊಟ್ಟಿರಲಿ ಅವನು “ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು; ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ.” (1 ಅರ. 11:​1-6) ಬೈಬಲಿನಲ್ಲಿ ಕಂಡುಬರುವ ನಿಯಮ ಮತ್ತು ಮೂಲತತ್ವಗಳನ್ನು ಪಾಲಿಸುವುದು ಎಷ್ಟೊಂದು ಪ್ರಾಮುಖ್ಯ! ಉದಾಹರಣೆಗೆ ಮದುವೆಯಾಗಲು ಬಯಸುವವರಿಗೆ ಇದು ಹೇಗೆ ಅನ್ವಯಿಸುತ್ತದೆ ಎಂದು ನೋಡೋಣ.

16. “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಿ ಎಂಬ ನಿಯಮದ ಹಿಂದಿರುವ ಮೂಲತತ್ವದಿಂದ ನಾವೇನು ಕಲಿಯುತ್ತೇವೆ?

16 ಕೆಲವೊಮ್ಮೆ ಸಾಕ್ಷಿಗಳಲ್ಲದವರು ನಮ್ಮ ಕಡೆ ಪ್ರಣಯಾತ್ಮಕ ಆಸಕ್ತಿ ತೋರಿಸಬಹುದು. ಆಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ದಾವೀದನಂತೆ ಯೆಹೋವನ ದೃಷ್ಟಿಕೋನವನ್ನು ಮನಸ್ಸಿನಲ್ಲಿಡುತ್ತೇವಾ ಅಥವಾ ಸೊಲೊಮೋನನಂತೆ ತಪ್ಪಿಬೀಳುತ್ತೇವಾ? “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಬೇಕೆಂದು ಸತ್ಯಾರಾಧಕರಿಗೆ ಹೇಳಲಾಗಿದೆ. (1 ಕೊರಿಂ. 7:39) ಹಾಗಾಗಿ ಒಬ್ಬ ಸಹೋದರ ಅಥವಾ ಸಹೋದರಿ ಮದುವೆಯಾಗಲು ಬಯಸುವುದಾದರೆ ದೀಕ್ಷಾಸ್ನಾನ ಪಡೆದ ಜೊತೆ ಸಾಕ್ಷಿಯನ್ನೇ ಮದುವೆಯಾಗಬೇಕು. ಇದರ ಹಿಂದಿರುವ ಮೂಲತತ್ವವನ್ನು ಅರ್ಥಮಾಡಿಕೊಳ್ಳುವುದಾದರೆ ನಾವು ಸಾಕ್ಷಿಗಳಲ್ಲದವರನ್ನು ಮದುವೆಯಾಗುವುದಿಲ್ಲ ಮಾತ್ರವಲ್ಲ ಅಂಥವರು ತೋರಿಸುವ ಪ್ರಣಯಾತ್ಮಕ ಆಸಕ್ತಿಗೆ ಕುಮ್ಮಕ್ಕು ನೀಡುವುದಿಲ್ಲ.

17. ಅಶ್ಲೀಲ ಸಾಹಿತ್ಯ ನೋಡುವ ಪಾಶದೊಳಗೆ ಸಿಲುಕದಿರಲು ನಮಗೆ ಯಾವ ಸಹಾಯವಿದೆ?

17 ದಾವೀದನಂತೆ ದೇವರ ಮಾರ್ಗದರ್ಶನೆಯನ್ನು ಕಟ್ಟಾಸಕ್ತಿಯಿಂದ ಹುಡುಕುವುದು ನಾವು ಕಾಮಪ್ರಚೋದಕ ಚಿತ್ರಗಳನ್ನು ನೋಡುವ ಪ್ರಲೋಭನೆಯ ವಿರುದ್ಧ ಹೋರಾಡುವಂತೆ ಸಹಾಯಮಾಡುತ್ತದೆ. ಹೇಗೆ? ಮುಂದಿನ ವಚನಗಳನ್ನು ಓದಿ. ಅವುಗಳಲ್ಲಿರುವ ಮೂಲತತ್ವಗಳ ಕುರಿತು ಯೋಚಿಸಿ. ಯೆಹೋವನ ಚಿತ್ತವೇನೆಂದು ಗ್ರಹಿಸಿ. (ಕೀರ್ತನೆ 119:37; ಮತ್ತಾಯ 5:​28, 29; ಕೊಲೊಸ್ಸೆ 3:5 ಓದಿ.) ಯೆಹೋವನ ಉನ್ನತ ಮಟ್ಟಗಳ ಕುರಿತು ಮನನ ಮಾಡುವಾಗ ಅಶ್ಲೀಲ ಸಾಹಿತ್ಯದ ಪಾಶದಿಂದ ದೂರವಿರಸಾಧ್ಯ.

ಯೆಹೋವನ ದೃಷ್ಟಿಕೋನವನ್ನು ಯಾವಾಗಲೂ ಮನಸ್ಸಿನಲ್ಲಿಡಿ

18, 19. (1) ಅಪರಿಪೂರ್ಣನಾಗಿದ್ದರೂ ದೇವರ ಮೆಚ್ಚುಗೆಯನ್ನು ಪಡೆಯಲು ದಾವೀದನಿಗೆ ಯಾವುದು ಸಹಾಯ ಮಾಡಿತು? (2) ನಿಮ್ಮ ಸ್ಥಿರ ಸಂಕಲ್ಪ ಏನಾಗಿದೆ?

18 ದಾವೀದನು ನಮಗೆ ಉತ್ತಮ ಮಾದರಿಯಾಗಿರುವುದಾದರೂ ಅವನು ಅನೇಕ ಗಂಭೀರ ಪಾಪಗಳನ್ನು ಮಾಡಿದ್ದನು. (2 ಸಮು. 11:​2-4, 14, 15, 22-27; 1 ಪೂರ್ವ. 21:​1, 7) ಆದರೆ ಯಾವಾಗೆಲ್ಲ ತಪ್ಪು ಮಾಡಿದನೋ ಆಗೆಲ್ಲಾ ಪಶ್ಚಾತ್ತಾಪಪಟ್ಟನು. ಅವನು ಯಾವಾಗಲೂ ದೇವರ ಸೇವೆಯನ್ನು ‘ಪೂರ್ಣಮನಸ್ಸಿನಿಂದ’ ಮಾಡಿದನು. (1 ಅರ. 9:⁠4) ಹಾಗೇಕೆ ಹೇಳಸಾಧ್ಯ? ಏಕೆಂದರೆ ದಾವೀದನು ಯೆಹೋವನ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟು ಅದರಂತೆ ನಡೆಯಲು ಪ್ರಯತ್ನಿಸಿದನು.

19 ನಾವು ಕೂಡ ಅಪರಿಪೂರ್ಣರಾಗಿದ್ದೇವೆ. ಆದರೂ ಯೆಹೋವನ ಮೆಚ್ಚಿಕೆ ಪಡೆಯಲು ಸಾಧ್ಯವಿದೆ. ಇದಕ್ಕಾಗಿ ದೇವರ ವಾಕ್ಯವಾದ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡೋಣ. ಕಲಿತ ವಿಷಯಗಳನ್ನು ಮನನ ಮಾಡೋಣ. ಹೃದಯಕ್ಕೆ ತೆಗೆದುಕೊಂಡದ್ದನ್ನು ಕಾರ್ಯರೂಪಕ್ಕೆ ಹಾಕಲು ತ್ವರೆಪಡೋಣ. ಹೀಗೆ ಮಾಡುವಾಗ ನಾವು ಸಹ ಕೀರ್ತನೆಗಾರನಂತೆ ದೀನತೆಯಿಂದ “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು” ಎಂದು ಯೆಹೋವನಲ್ಲಿ ಕೇಳಿಕೊಂಡಂತಿರುವುದು.

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರ]

ಅವಕಾಶ ಸಿಕ್ಕಿದ್ದರೂ ದಾವೀದನು ಸೌಲನನ್ನು ಕೊಲ್ಲಲಿಲ್ಲ ಏಕೆ?

[ಪುಟ 6ರಲ್ಲಿರುವ ಚಿತ್ರ]

ತನ್ನ ಶೂರರು ತಂದ ನೀರನ್ನು ಕುಡಿಯಲು ದಾವೀದ ನಿರಾಕರಿಸಿದ್ದು ನಮಗೆ ಯಾವ ಪಾಠ ಕಲಿಸುತ್ತದೆ?