ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಕ್ಷಮಾಗುಣದಿಂದ ನಿಮಗಿರುವ ಪ್ರಯೋಜನ

ಯೆಹೋವನ ಕ್ಷಮಾಗುಣದಿಂದ ನಿಮಗಿರುವ ಪ್ರಯೋಜನ

ಯೆಹೋವನ ಕ್ಷಮಾಗುಣದಿಂದ ನಿಮಗಿರುವ ಪ್ರಯೋಜನ

‘ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನು, ದೋಷಾಪರಾಧಪಾಪಗಳನ್ನು ಕ್ಷಮಿಸುವವನು.’​—⁠ವಿಮೋ. 34:​6, 7.

ಉತ್ತರ ಕಂಡುಹಿಡಿಯಿರಿ

ದಾವೀದ ಮತ್ತು ಮನಸ್ಸೆ ಪಾಪಮಾಡಿದಾಗ ಯೆಹೋವನು ಅವರೊಂದಿಗೆ ಹೇಗೆ ವ್ಯವಹರಿಸಿದನು? ಏಕೆ?

ಇಸ್ರಾಯೇಲ್‌ ಜನಾಂಗವನ್ನು ಯೆಹೋವನು ಏಕೆ ಕ್ಷಮಿಸಲಿಲ್ಲ?

ಯೆಹೋವನಿಂದ ಕ್ಷಮೆ ಪಡೆಯಬೇಕಾದರೆ ನಾವೇನು ಮಾಡಬೇಕು?

1, 2. (1) ಇಸ್ರಾಯೇಲ್ಯ ಜನಾಂಗಕ್ಕೆ ಯೆಹೋವನು ಎಂಥ ದೇವರಾಗಿದ್ದನು? (2) ಯಾವ ಪ್ರಶ್ನೆಗೆ ಉತ್ತರ ಪಡೆಯಲಿದ್ದೇವೆ?

ನೆಹೆಮೀಯನ ಕಾಲ. ನೆರೆದುಬಂದಿದ್ದ ಸಮೂಹದ ಎದುರು ಕೆಲವು ಲೇವಿಯರು ಪ್ರಾರ್ಥಿಸುತ್ತಿದ್ದರು. ಅವರು ಆ ಪ್ರಾರ್ಥನೆಯಲ್ಲಿ, ತಮ್ಮ ಪಿತೃಗಳು ಯೆಹೋವನ ಆಜ್ಞೆಗಳಿಗೆ ತಿರುಗಿ ಬಿದ್ದು ಪದೇ ಪದೇ ಆತನ “ಮಾತುಕೇಳದೆ”ಹೋದರೆಂದು ಒಪ್ಪಿಕೊಂಡರು. ಯೆಹೋವನು ಆ ಪಿತೃಗಳನ್ನು ಮತ್ತೆ ಮತ್ತೆ ಕ್ಷಮಿಸಿದ್ದನು. ಯೆಹೋವನು ನಿಜಕ್ಕೂ “ಪಾಪಗಳನ್ನು ಕ್ಷಮಿಸುವವನೂ ಕನಿಕರದಯೆಗಳುಳ್ಳವನೂ ದೀರ್ಘಶಾಂತನೂ ಕೃಪಾಳುವೂ ಆಗಿರುವ ದೇವರು.” ಬಂದಿವಾಸದಿಂದ ಬಿಡುಗಡೆಹೊಂದಿ ಸ್ವದೇಶಕ್ಕೆ ಮರಳಿದ್ದ ಆ ಇಸ್ರಾಯೇಲ್ಯರಿಗೆ ಮುಂದಕ್ಕೂ ಆತನು ದಯಾಸಾಗರನಾಗಿದ್ದನು.​—⁠ನೆಹೆ. 9:​16, 17.

2 ನಾವು ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳೋಣ: ‘ಯೆಹೋವನು ತೋರಿಸುವ ಕ್ಷಮೆಯಿಂದ ನನಗೆ ಯಾವ ಪ್ರಯೋಜನವಿದೆ?’ ಈ ಪ್ರಾಮುಖ್ಯ ಪ್ರಶ್ನೆಯ ಉತ್ತರಕ್ಕಾಗಿ ಅರಸರಾದ ದಾವೀದ ಹಾಗೂ ಮನಸ್ಸೆಗೆ ಯೆಹೋವನು ಹೇಗೆ ಕ್ಷಮೆ ತೋರಿಸಿದನೆಂದು ಮತ್ತು ಅವರಿಬ್ಬರು ಅದರಿಂದ ಹೇಗೆ ಪ್ರಯೋಜನ ಪಡೆದರೆಂದು ಗಮನಿಸಿ.

ದಾವೀದನ ಗಂಭೀರ ಪಾಪಗಳು

3-5. ದಾವೀದನು ಯಾವ ಗಂಭೀರ ಪಾಪಗಳನ್ನು ಮಾಡಿದನು?

3 ದಾವೀದ ದೇವಭಯವಿದ್ದ ಪುರುಷನಾಗಿದ್ದರೂ ಗಂಭೀರ ಪಾಪಗಳನ್ನು ಮಾಡಿದ. ಅವನ ಎರಡು ಪಾಪಗಳು ಊರೀಯ ಮತ್ತು ಬತ್ಷೆಬೆ ದಂಪತಿಯನ್ನು ಬಾಧಿಸಿದವು. ಆ ಪಾಪಗಳ ಪರಿಣಾಮಗಳನ್ನು ಮೂವರೂ ಅನುಭವಿಸಿದರು. ದೇವರು ದಾವೀದನನ್ನು ತಿದ್ದಲು ತೆಗೆದುಕೊಂಡ ಹೆಜ್ಜೆಗಳು ಯೆಹೋವನು ಎಷ್ಟೊಂದು ಕ್ಷಮಾಶೀಲನೆಂದು ತೋರಿಸುತ್ತವೆ. ನಡೆದದ್ದೇನೆಂದು ಗಮನಿಸಿ.

4 ದಾವೀದನು ಇಸ್ರಾಯೇಲ್‌ ಸೈನ್ಯವನ್ನು ಅಮ್ಮೋನಿಯರ ರಾಜಧಾನಿ ರಬ್ಬಕ್ಕೆ ಮುತ್ತಿಗೆಹಾಕಲು ಕಳುಹಿಸಿದನು. ಯೆರೂಸಲೇಮಿನಿಂದ ಪೂರ್ವಕ್ಕೆ 80 ಕಿ.ಮೀ. ದೂರದಲ್ಲಿದ್ದ ರಬ್ಬಾ ಪಟ್ಟಣವು ಯೊರ್ದನ್‌ ಹೊಳೆಯ ಆಚೆ ಬದಿಯಿತ್ತು. ಸೈನ್ಯವೆಲ್ಲ ಅತ್ತ ಕದನದಲ್ಲಿದ್ದಾಗ ಯೆರೂಸಲೇಮಿನ ಅರಮನೆಯಲ್ಲಿದ್ದ ರಾಜ ಸಂಜೆ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದಾಗ ಅವನಿಗೆ ಬತ್ಷೆಬೆ ಸ್ನಾನ ಮಾಡುತ್ತಿರುವುದು ಕಾಣಿಸಿತು. ಆಕೆಯ ಗಂಡ ಯುದ್ಧಕ್ಕೆ ಸೈನ್ಯದೊಂದಿಗೆ ಹೋಗಿದ್ದ. ಬತ್ಷೆಬೆಯನ್ನು ನೋಡುತ್ತಲೇ ನಿಂತಿದ್ದ ದಾವೀದನ ಭಾವನೆಗಳು ಕೆರಳಿದವು. ಎಷ್ಟರ ಮಟ್ಟಿಗೆಂದರೆ ಆಕೆಯನ್ನು ಅರಮನೆಗೆ ಕರೆತರಿಸಿ ವ್ಯಭಿಚಾರಗೈದನು.​—⁠2 ಸಮು. 11:​1-4.

5 ಬಳಿಕ ತನ್ನಿಂದ ಬತ್ಷೆಬೆ ಗರ್ಭಿಣಿಯಾಗಿದ್ದಾಳೆಂಬ ಸುದ್ದಿ ದಾವೀದನಿಗೆ ಮುಟ್ಟುತ್ತದೆ. ಆಗ ಅವನು ತನ್ನ ನೀಚಕೃತ್ಯವನ್ನು ಮುಚ್ಚಿಹಾಕಲು ಯುದ್ಧರಂಗದಿಂದ ಊರೀಯನನ್ನು ಕರೆಸಿಕೊಳ್ಳುತ್ತಾನೆ. ಊರೀಯನು ತನ್ನ ಮನೆಗೆ ಹೋಗಿ ಹೆಂಡತಿಯನ್ನು ಕೂಡಿದರೆ ಆ ಮಗುವಿನ ಬಗ್ಗೆ ತಾನೇನೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂಬುದು ದಾವೀದನ ಎಣಿಕೆ. ಆದರೆ ಅವನ ಲೆಕ್ಕಾಚಾರ ತಲೆಕೆಳಗಾಯಿತು. ಯೆರೂಸಲೇಮಿಗೆ ಬಂದ ಊರೀಯನು ತನ್ನ ಮನೆಯೊಳಗೂ ಕಾಲಿಡಲಿಲ್ಲ. ಆದ್ದರಿಂದ ರಾಜ ದಾವೀದನು ತನ್ನ ಸೇನಾಧಿಪತಿಗೆ ಗುಟ್ಟಾಗಿ ಪತ್ರ ಬರೆದು ರಣರಂಗದಲ್ಲಿ ಊರೀಯನನ್ನು “ಘೋರಯುದ್ಧ ನಡೆಯುತ್ತಿರುವ ಕಡೆಗೆ ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿರಿ” ಎಂದು ತಿಳಿಸಿದನು. ದಾವೀದನ ಸಂಚಿಗೆ ಊರೀಯ ಸುಲಭವಾಗಿ ಬಲಿಯಾದ. (2 ಸಮು. 11:​12-17) ರಾಜನು ವ್ಯಭಿಚಾರ ಮಾಡಿದ್ದು ಮಾತ್ರವಲ್ಲ ಒಬ್ಬ ಅಮಾಯಕನನ್ನೂ ಕೊಲೆಮಾಡಿಸಿದ. ಹೀಗೆ ಪಾಪದ ಮೇಲೆ ಪಾಪ ಮಾಡಿದ.

ದಾವೀದನ ಮನಪರಿವರ್ತನೆ

6. (1) ದಾವೀದನು ಪಾಪಗೈದಾಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (2) ಇದು ಯೆಹೋವನ ಕುರಿತು ಏನನ್ನು ತಿಳಿಸುತ್ತದೆ?

6 ನಡೆದದ್ದೆಲ್ಲವನ್ನೂ ಯೆಹೋವನು ನೋಡುತ್ತಿದ್ದನು. ಆತನ ಕಣ್ಣಿಗೆ ಯಾವುದೂ ಮರೆಯಾಗಿರಲಿಲ್ಲ. (ಜ್ಞಾನೋ. 15:⁠3) ಊರೀಯ ಮಡಿದ ನಂತರ ರಾಜ ದಾವೀದ ಬತ್ಷೆಬೆಯನ್ನು ಮದುವೆಯಾದ ನಿಜ. ಆದರೆ ಅವನ “ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.” (2 ಸಮು. 11:27) ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಆತನು ತನ್ನ ಪ್ರವಾದಿ ನಾತಾನನನ್ನು ದಾವೀದನ ಬಳಿ ಕಳುಹಿಸಿದನು. ಪಾಪಗಳನ್ನು ಕ್ಷಮಿಸುವವನಾದ ಯೆಹೋವನು ದಾವೀದನಿಗೆ ಕರುಣೆ ತೋರಿಸಲು ಬಯಸಿದನು. ಆದರೆ ದಾವೀದನು ತನ್ನ ಪಾಪಗಳಿಗೆ ನಿಜವಾಗಿಯೂ ಪಶ್ಚಾತ್ತಾಪಪಡಲು ಸಿದ್ಧನಿದ್ದಾನೋ ಎನ್ನುವುದು ಗೊತ್ತಾಗಬೇಕಿತ್ತು. ಯೆಹೋವನು ಈ ಹೆಜ್ಜೆಗಳನ್ನು ತೆಗೆದುಕೊಂಡದ್ದು ನಿಜಕ್ಕೂ ಮನಸ್ಪರ್ಶಿಯಲ್ಲವೇ? ದಾವೀದ ತನ್ನ ಪಾಪಗಳನ್ನು ಒಪ್ಪಿಕೊಳ್ಳುವಂತೆ ಯೆಹೋವನು ಒತ್ತಾಯಿಸಲಿಲ್ಲ. ಬದಲಿಗೆ ಒಂದು ಕಥೆಯ ಮೂಲಕ ಅವನ ಪಾಪ ಎಷ್ಟೊಂದು ಘೋರವಾದದ್ದೆಂದು ತಿಳಿಸುವಂತೆ ನಾತಾನನಿಗೆ ಹೇಳಿದನಷ್ಟೆ. (2 ಸಮುವೇಲ 12:​1-4 ಓದಿ.) ಇಂಥ ಕ್ಲಿಷ್ಟ ಸನ್ನಿವೇಶವನ್ನು ಯೆಹೋವನು ಎಷ್ಟೊಂದು ನಾಜೂಕಿನಿಂದ ನಿರ್ವಹಿಸಿದನು!

7. ನಾತಾನ ಹೇಳಿದ ಕಥೆ ಕೇಳಿ ದಾವೀದ ಹೇಗೆ ಪ್ರತಿಕ್ರಿಯಿಸಿದ?

7 ನಾತಾನ ಹೇಳಿದ ಕಥೆ ಕೇಳುತ್ತಿದ್ದಂತೆ ದಾವೀದನ ಮನಸ್ಸು ಕುದಿಯಿತು. ಆ ಐಶ್ವರ್ಯವಂತ ಮಾಡಿದ್ದು ತುಂಬ ಅನ್ಯಾಯವೆಂದು ತಿಳಿದು ಅವನು ಕೂಡಲೆ “ಯೆಹೋವನಾಣೆ, ಆ ಮನುಷ್ಯನು ಸಾಯಲೇ ಬೇಕು” ಎಂದು ಹೇಳಿದನು. ಮಾತ್ರವಲ್ಲ ಆ ಬಡಪಾಯಿಗೆ ಆದ ನಷ್ಟವನ್ನು ಭರ್ತಿಮಾಡಬೇಕೆಂದನು. ಆಗ ನಾತಾನನ ಬಾಯಿಂದ ದಾವೀದನು ನಿರೀಕ್ಷಿಸದೇ ಇದ್ದ ಮಾತು ಹೊರಟಿತು. “ಆ ಮನುಷ್ಯನು ನೀನೇ”! ಎಂದನು ನಾತಾನ. ದಾವೀದನಿಗೆ ಸಿಡಿಲು ಬಡಿದಂತಾಯಿತು. ಅವನ ಪಾಪಗಳ ಫಲವಾಗಿ “ಕತ್ತಿಯು” ಅವನ ಮನೆಯನ್ನು ಬಿಟ್ಟುಹೋಗುವದಿಲ್ಲ, ಅವನ ಕುಟುಂಬಕ್ಕೆ ಕೇಡುಂಟಾಗುವುದು ಮತ್ತು ಎಲ್ಲರ ಮುಂದೆ ಅವಮಾನಕ್ಕೆ ಒಳಗಾಗುವನೆಂದು ನಾತಾನ ಹೇಳಿದನು. ತಾನು ಮಾಡಿದ್ದು ಎಷ್ಟು ಘೋರ ಪಾಪವೆಂದು ಅರಿತ ದಾವೀದ ಅದನ್ನು ಒಪ್ಪಿಕೊಂಡು “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ” ಎಂದು ತೀವ್ರ ವ್ಯಥೆಯಿಂದ ನುಡಿದನು.​—⁠2 ಸಮು. 12:​5-14.

ದಾವೀದನ ಪ್ರಾರ್ಥನೆ ಮತ್ತು ದೇವರ ಕ್ಷಮೆ

8, 9. (1) ದಾವೀದನ ಮನದಾಳದ ಅಳಲನ್ನು ಕೀರ್ತನೆ 51 ಹೇಗೆ ಹೊರಗೆಡವುತ್ತದೆ? (2) ಇದು ಯೆಹೋವನ ಕುರಿತು ನಮಗೇನು ತಿಳಿಸುತ್ತದೆ?

8 ತದನಂತರ ದಾವೀದನು 51ನೇ ಕೀರ್ತನೆ ರಚಿಸಿದನು. ಆ ಗೀತೆಯಲ್ಲಿರುವ ಒಂದೊಂದು ಪದಗಳು ತನ್ನ ಪಾಪಕ್ಕಾಗಿ ಅವನಲ್ಲೆಷ್ಟು ದುಃಖ ಇತ್ತೆಂಬುದನ್ನು ಹೊರಗೆಡವುತ್ತವೆ. ಅವನು ಅಂಗಲಾಚುತ್ತಾ ಯೆಹೋವನ ಸಹಾಯಕ್ಕಾಗಿ ಬೇಡಿದನು. ತಾನು ಪಾಪಮಾಡಿದ್ದೇನೆಂದು ಒಪ್ಪಿಕೊಂಡದ್ದು ಮಾತ್ರವಲ್ಲ ಅದಕ್ಕಾಗಿ ಪಶ್ಚಾತ್ತಾಪ ಕೂಡ ಪಟ್ಟನು. ದೇವರೊಂದಿಗಿನ ತನ್ನ ಸುಸಂಬಂಧ ಎಲ್ಲಿ ಕಡಿದುಹೋಗುತ್ತದೋ ಎಂಬುದು ಅವನ ಮುಖ್ಯ ಚಿಂತೆಯಾಗಿತ್ತು. “ನಿನಗೇ ಕೇವಲ ನಿನಗೇ ತಪ್ಪುಮಾಡಿದ್ದೇನೆ” ಎಂದು ಪಾಪನಿವೇದನೆ ಮಾಡಿದನು. “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು . . . ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು” ಎಂದು ಬೇಡಿದನು. (ಕೀರ್ತ. 51:​1-4, 7-12) ನೀವು ಕೂಡ ನಿಮ್ಮ ಪಾಪಗಳನ್ನು ಯೆಹೋವನ ಮುಂದೆ ಅರುಹುವಾಗ ದಾವೀದನಂತೆ ಮುಚ್ಚುಮರೆಯಿಲ್ಲದೆ ಯಥಾರ್ಥವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತೀರೋ?

9 ದಾವೀದನ ಪ್ರಾರ್ಥನೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಪಾಪಗಳ ದುಃಖಕರ ಪರಿಣಾಮಗಳಿಂದ ಯೆಹೋವನು ಅವನನ್ನು ತಪ್ಪಿಸಲಿಲ್ಲ. ದಾವೀದ ಜೀವನಪೂರ್ತಿ ಅದರ ಕಹಿ ಉಣ್ಣಬೇಕಾಯಿತು. ‘ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸು’ ಅವನಿಗಿದ್ದ ಕಾರಣ ಯೆಹೋವನು ಅವನನ್ನು ಕ್ಷಮಿಸಿದನು. (ಕೀರ್ತನೆ 32:5 ಓದಿ; ಕೀರ್ತ. 51:17) ಒಬ್ಬನೇನಾದರೂ ಪಾಪ ಮಾಡಿದರೆ ಅವನು ಯಾಕೆ ಅದನ್ನು ಮಾಡಿದ, ಯಾವ ಮನೋಭಾವದಿಂದ ಮಾಡಿದ ಎನ್ನುವುದನ್ನು ಸರ್ವಶಕ್ತನಾದ ದೇವರು ತಿಳಿದಿದ್ದಾನೆ. ದಾವೀದನ ಬಗ್ಗೆಯೂ ಆತನು ತಿಳಿದಿದ್ದನು. ಆದ್ದರಿಂದಲೇ ಮಾನವ ನ್ಯಾಯಾಧಿಪತಿಗಳು ಧರ್ಮಶಾಸ್ತ್ರಕ್ಕನುಸಾರ ಅವರಿಗೆ ಮರಣದಂಡನೆ ವಿಧಿಸುವಂತೆ ಯೆಹೋವನು ಅನುಮತಿಸಲಿಲ್ಲ. ವಿಷಯವನ್ನು ತಾನೇ ನಿರ್ವಹಿಸಿದನು. ಕರುಣೆ ತೋರಿಸುತ್ತಾ ಅವರಿಬ್ಬರನ್ನು ಕ್ಷಮಿಸಿದನು. (ಯಾಜ. 20:10) ಅಷ್ಟುಮಾತ್ರವಲ್ಲ ಅವರಿಗೆ ಹುಟ್ಟಿದ ಮಗನಾದ ಸೊಲೊಮೋನನನ್ನು ಇಸ್ರಾಯೇಲಿನ ಮುಂದಿನ ಅರಸನನ್ನಾಗಿ ಮಾಡಿದನು.​—⁠1 ಪೂರ್ವ. 22:​9, 10.

10. (1) ದಾವೀದನನ್ನು ಕ್ಷಮಿಸಲು ಯೆಹೋವನಿಗೆ ಬೇರೆ ಯಾವ ಕಾರಣವಿದ್ದಿರಬಹುದು? (2) ಯೆಹೋವನ ಕ್ಷಮೆ ಪಡೆಯಬೇಕಾದರೆ ಒಬ್ಬನು ಏನು ಮಾಡಬೇಕು?

10 ಯೆಹೋವನು ದಾವೀದನನ್ನು ಕ್ಷಮಿಸಲು ಪ್ರಾಯಶಃ ಇನ್ನೊಂದು ಕಾರಣ ಅವನು ಸೌಲನಿಗೆ ದಯೆ ತೋರಿಸಿದ್ದು ಆಗಿರಬಹುದು. (1 ಸಮು. 24:​4-7) ನಾವು ಇತರರನ್ನು ಹೇಗೆ ಉಪಚರಿಸುತ್ತೇವೋ ಅದೇ ರೀತಿ ಯೆಹೋವನು ನಮ್ಮನ್ನು ಉಪಚರಿಸುತ್ತಾನೆ. ಯೇಸು ಹೇಳಿದ್ದು: “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುತ್ತಿರುವ ತೀರ್ಪಿನಿಂದಲೇ ನಿಮಗೂ ತೀರ್ಪಾಗುವುದು; ಮತ್ತು ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು.” (ಮತ್ತಾ. 7:​1, 2) ಯೆಹೋವನು ನಮ್ಮ ಪಾಪಗಳನ್ನು, ಅದರಲ್ಲೂ ವ್ಯಭಿಚಾರ ಅಥವಾ ಕೊಲೆಯಂಥ ಗಂಭೀರ ಪಾಪಗಳನ್ನೂ ಕ್ಷಮಿಸುತ್ತಾನೆ ಎನ್ನುವುದು ನಮ್ಮ ಹೃದಯಕ್ಕೆ ತಂಪೆರೆಯುತ್ತದೆ. ಆತನು ನಮ್ಮ ಪಾಪಗಳನ್ನು ಕ್ಷಮಿಸಬೇಕಾದರೆ ನಮ್ಮಲ್ಲಿ ಕ್ಷಮಿಸುವ ಗುಣ ಇರಬೇಕು. ನಮ್ಮ ಪಾಪಗಳನ್ನು ಆತನಿಗೆ ಅರಿಕೆಮಾಡಬೇಕು. ತಪ್ಪನ್ನು ತಿದ್ದಿಕೊಂಡು ನಡೆಯಬೇಕು. ಹೌದು, ಪಾಪಿಗಳು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟಾಗ ಯೆಹೋವನಿಂದ “ಚೈತನ್ಯದಾಯಕ ಸಮಯಗಳು ಬರುವವು.”​—⁠ಅಪೊಸ್ತಲರ ಕಾರ್ಯಗಳು 3:19 ಓದಿ.

ಘೋರ ಪಾಪಗಳನ್ನು ಮಾಡಿದ ರಾಜ ಮನಸ್ಸೆ ಪಶ್ಚಾತ್ತಾಪಪಟ್ಟ

11. ರಾಜ ಮನಸ್ಸೆ ಯೆಹೋವನಿಗೆ ವಿರುದ್ಧವಾಗಿ ಯಾವ ದುಷ್ಕೃತ್ಯಗಳನ್ನು ಮಾಡಿದನು?

11 ಅತಿ ಘೋರ ಪಾಪಗಳನ್ನು ಕ್ಷಮಿಸಲು ಯೆಹೋವನು ಸಿದ್ಧನೆಂದು ತೋರಿಸುವ ಇನ್ನೊಂದು ಉದಾಹರಣೆ ಬೈಬಲಿನಲ್ಲಿದೆ. ಅದು ರಾಜ ಮನಸ್ಸೆಯದ್ದು. ದಾವೀದ ರಾಜನಾಗಿ ಹೆಚ್ಚುಕಡಿಮೆ 360 ವರ್ಷಗಳ ನಂತರ ಮನಸ್ಸೆ ಯೆಹೂದದ ಅರಸನಾದನು. 55 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಅವನು ಬರೇ ದುಷ್ಕೃತ್ಯಗಳಿಗೆ ಕುಖ್ಯಾತನಾಗಿದ್ದನು. ಹಾಗಾಗಿ ಯೆಹೋವನ ಖಂಡನೆಗೆ ಗುರಿಯಾದನು. ಅವನು ಮಾಡಿದ ಹೇಯಕೃತ್ಯಗಳಿಗೆ ಮಿತಿಯಿಲ್ಲ. ಬಾಳನಿಗೆ ಯಜ್ಞವೇದಿಗಳನ್ನು ಕಟ್ಟಿಸಿದನು. “ಸರ್ವನಕ್ಷತ್ರಮಂಡಲ”ವನ್ನು ಪೂಜಿಸಿದನು. ತನ್ನ ಪುತ್ರರನ್ನು ಆಹುತಿಕೊಟ್ಟನು. ಪ್ರೇತವ್ಯವಹಾರದಲ್ಲಿ ಒಳಗೂಡಿದನು. ಹೀಗೆ ಯೆಹೋವನಿಗೆ ವಿರುದ್ಧವಾಗಿ ಅಗಾಧ ಪ್ರಮಾಣದಲ್ಲಿ ‘ದುಷ್ಕೃತ್ಯಗಳನ್ನು’ ನಡೆಸಿದನು.​—⁠2 ಪೂರ್ವ. 33:​1-6.

12. ಮನಸ್ಸೆ ಯೆಹೋವನ ಕಡೆಗೆ ತಿರುಗಿಕೊಂಡದ್ದು ಹೇಗೆ?

12 ಇದರ ಪರಿಣಾಮವಾಗಿ ಕೊನೆಗೆ ಅವನನ್ನು ಬಂಧಿಸಿ ಬಾಬೆಲಿನಲ್ಲಿ ಸೆರೆಮನೆಗೆ ದೊಬ್ಬಲಾಯಿತು. ಅಲ್ಲಿ ಅವನಿಗೆ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ ಮಾತುಗಳು ನೆನಪಿಗೆ ಬಂದಿರಬೇಕು: “ಎಲ್ಲಾ ಕಷ್ಟಗಳೂ ನಿಮಗೆ ಸಂಭವಿಸಿ ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.” (ಧರ್ಮೋ. 4:30) ಅದೇ ರೀತಿ ಮನಸ್ಸೆ ಯೆಹೋವನ ಕಡೆಗೆ ತಿರುಗಿಕೊಂಡನು. ಹೇಗೆ? “ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಳ್ಳುತ್ತಾ ಆತನಲ್ಲಿ ಪ್ರಾರ್ಥಿಸುತ್ತಾ ಇದ್ದನು.” (ಪುಟ 21ರಲ್ಲಿರುವ ಚಿತ್ರ) (2 ಪೂರ್ವ. 33:​12, 13, NW) ಅವನು ತನ್ನ ಪ್ರಾರ್ಥನೆಗಳಲ್ಲಿ ನಿರ್ದಿಷ್ಟವಾಗಿ ಎಂಥೆಂಥ ಪದಗಳನ್ನು ಬಳಸಿದನೆಂದು ಬೈಬಲ್‌ ಹೇಳುವುದಿಲ್ಲ. ಅವು ಪ್ರಾಯಶಃ ಕೀರ್ತನೆ 51ರಲ್ಲಿರುವ ದಾವೀದನ ಮಾತುಗಳನ್ನು ಹೋಲುತ್ತಿದ್ದಿರಬಹುದು. ಏನೇ ಆಗಿರಲಿ ಮನಸ್ಸೆ ಸಂಪೂರ್ಣವಾಗಿ ಬದಲಾದನೆಂಬುದಂತೂ ಖಂಡಿತ.

13. ಯೆಹೋವನು ಮನಸ್ಸೆಯನ್ನು ಕ್ಷಮಿಸಿದ್ದೇಕೆ?

13 ಮನಸ್ಸೆಯ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ‘ಆತನು ಲಾಲಿಸಿ ಮನಸ್ಸೆಗೆ ಸದುತ್ತರವನ್ನು ದಯಪಾಲಿಸಿದನು.’ ದಾವೀದನಂತೆ ಮನಸ್ಸೆ ಕೂಡ ತಾನೆಷ್ಟು ಗಂಭೀರ ಪಾಪಗಳನ್ನು ಮಾಡಿದ್ದೇನೆಂದು ಅರಿತುಕೊಂಡನು. ಯಥಾರ್ಥವಾಗಿ ಪಶ್ಚಾತ್ತಾಪಪಟ್ಟನು. ಆದ್ದರಿಂದಲೇ ದೇವರು ಮನಸ್ಸೆಯನ್ನು ಕ್ಷಮಿಸಿದನು. ಮಾತ್ರವಲ್ಲ ಯೆರೂಸಲೇಮಿಗೆ ಬರಮಾಡಿ ಪುನಃ ರಾಜತ್ವವನ್ನು ಕೊಟ್ಟನು. “ಆಗ ಯೆಹೋವನೇ ದೇವರೆಂಬದು ಮನಸ್ಸೆಗೆ ಮಂದಟ್ಟಾಯಿತು.” (2 ಪೂರ್ವ. 33:13) ಮನಸ್ಸೆಯ ಈ ಉದಾಹರಣೆ ಕೂಡ ಯಾರು ಯಥಾರ್ಥವಾಗಿ ಪಶ್ಚಾತ್ತಾಪಪಡುತ್ತಾರೋ ಅವರನ್ನು ಕರುಣಾಮಯಿಯಾದ ಯೆಹೋವನು ಕ್ಷಮಿಸುತ್ತಾನೆಂದು ತೋರಿಸುತ್ತದೆ. ಇದು ನಮ್ಮನ್ನು ಸಾಂತ್ವನಗೊಳಿಸಿ ನವಚೈತನ್ಯ ತುಂಬುತ್ತದಲ್ಲವೇ?

ಯೆಹೋವನು ತೋರಿಸುವ ಕ್ಷಮೆಗೆ ಎಲ್ಲೆ ಇಲ್ಲವೇ?

14. ಒಬ್ಬ ಪಾಪಿಗೆ ಕ್ಷಮೆ ನೀಡಬೇಕೋ ಇಲ್ಲವೋ ಎನ್ನುವುದನ್ನು ಯೆಹೋವನು ಹೇಗೆ ನಿರ್ಧರಿಸುತ್ತಾನೆ?

14 ನಮ್ಮಲ್ಲಿ ಹೆಚ್ಚಿನವರಿಗೆ ದಾವೀದ ಮತ್ತು ಮನಸ್ಸೆ ಮಾಡಿದಷ್ಟು ಗಂಭೀರ ಪಾಪಗಳಿಗಾಗಿ ಕ್ಷಮೆ ಕೇಳುವ ಸಂದರ್ಭ ಬಂದಿರಲಿಕ್ಕಿಲ್ಲ. ಆದರೂ ಅವರಿಬ್ಬರ ಉದಾಹರಣೆಗಳು ಒಂದು ಪ್ರಾಮುಖ್ಯ ವಿಷಯವನ್ನು ಎತ್ತಿತೋರಿಸುತ್ತವೆ. ಪಾಪಿಯೊಬ್ಬನು ಮನದಾಳದಿಂದ ಪಶ್ಚಾತ್ತಾಪಪಟ್ಟರೆ ಎಂಥಾ ಘೋರ ಪಾಪಗಳನ್ನೂ ಕ್ಷಮಿಸಲು ಯೆಹೋವನು ಸಿದ್ಧನಿದ್ದಾನೆ.

15. ಯೆಹೋವನು ತಪ್ಪುಮಾಡಿದವರೆಲ್ಲರನ್ನು ಕ್ಷಮಿಸುತ್ತಾ ಇರುವುದಿಲ್ಲವೆಂದು ನಮಗೆ ಹೇಗೆ ಗೊತ್ತು?

15 ಆದರೆ ಯೆಹೋವನು ತಪ್ಪುಮಾಡಿದವರೆಲ್ಲರನ್ನು ಕ್ಷಮಿಸುತ್ತಾ ಇರುತ್ತಾನೆಂದು ನಾವು ನೆನಸಬಾರದು. ದಾವೀದ ಮತ್ತು ಮನಸ್ಸೆಯ ಮನೋಭಾವವನ್ನು ಇಸ್ರಾಯೇಲ್‌ ಮತ್ತು ಯೆಹೂದದ ಅವಿಧೇಯ ಜನರ ಮನೋಭಾವದೊಂದಿಗೆ ಹೋಲಿಸುವಾಗ ನಮಗದು ತಿಳಿಯುತ್ತದೆ. ದಾವೀದನು ಪಾಪಮಾಡಿದಾಗ ದೇವರು ನಾತಾನನನ್ನು ಕಳುಹಿಸಿ ಪಶ್ಚಾತ್ತಾಪಪಡಲು ಅವನಿಗೆ ಒಂದು ಅವಕಾಶ ಕೊಟ್ಟನು. ಇಂಥ ಒಂದು ಅವಕಾಶಕ್ಕಾಗಿ ದಾವೀದನು ಕೃತಜ್ಞತೆ ತೋರಿಸಿದನು. ಪಶ್ಚಾತ್ತಾಪಪಟ್ಟು ತಿರುಗಿಕೊಂಡನು. ಅದೇ ರೀತಿ ಮನಸ್ಸೆ ಕೂಡ ತೀರ ದುಃಸ್ಥಿತಿಯಲ್ಲಿದ್ದಾಗ ತಾನು ಮಾಡಿದ್ದು ನಿಜಕ್ಕೂ ಪಾಪವೆಂದು ಅರಿತು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟನು. ಆದರೆ ಇಸ್ರಾಯೇಲ್‌ ಮತ್ತು ಯೆಹೂದದ ಜನರು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಪಾಪಗಳಿಗಾಗಿ ಸ್ವಲ್ಪವೂ ಪಶ್ಚಾತ್ತಾಪಪಡಲಿಲ್ಲ. ಯೆಹೋವನು ಎಷ್ಟೋ ಬಾರಿ ಪ್ರವಾದಿಗಳನ್ನು ಕಳುಹಿಸಿ ಎಚ್ಚರಿಸಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಹಾಗಾಗಿ ಯೆಹೋವನು ಅವರನ್ನು ಕ್ಷಮಿಸಲಿಲ್ಲ. (ನೆಹೆಮೀಯ 9:30 ಓದಿ.) ಇಸ್ರಾಯೇಲ್ಯರು ಬ್ಯಾಬಿಲೋನಿನ ಬಂಧಿವಾಸದಿಂದ ಬಿಡುಗಡೆಹೊಂದಿ ಸ್ವದೇಶಕ್ಕೆ ಹಿಂತಿರುಗಿದ ಬಳಿಕವೂ ಆತನು ಅವರ ಬಳಿ ಯಾಜಕನಾದ ಎಜ್ರ, ಪ್ರವಾದಿ ಮಲಾಕಿಯ ಹಾಗೂ ಇತರ ನಂಬಿಗಸ್ತ ಸೇವಕರನ್ನು ಕಳುಹಿಸಿ ತನ್ನ ಚಿತ್ತವನ್ನು ತಿಳಿಯಪಡಿಸುತ್ತಿದ್ದನು. ಜನರು ಯೆಹೋವನ ಚಿತ್ತದಂತೆ ನಡೆದಾಗ ಸುಖಸಂತೋಷದಿಂದ ಜೀವಿಸಿದರು.​—⁠ನೆಹೆ. 12:​43-47.

16. (1) ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡದ ಇಸ್ರಾಯೇಲ್‌ ಜನಾಂಗಕ್ಕೆ ಏನು ಸಂಭವಿಸಿತು? (2) ಆ ಜನಾಂಗದಿಂದ ಬಂದವರಿಗೆ ಯೆಹೋವನು ಯಾವ ಅವಕಾಶ ಕೊಟ್ಟಿದ್ದಾನೆ?

16 ಯೇಸು ಭೂಮಿಗೆ ಬಂದು ಪರಿಪೂರ್ಣವಾದ ವಿಮೋಚನಾ ಮೌಲ್ಯ ಯಜ್ಞವನ್ನು ಒದಗಿಸಿದ ಬಳಿಕ ಯೆಹೋವನು ಇಸ್ರಾಯೇಲ್ಯರ ಪ್ರಾಣಿ ಯಜ್ಞಗಳನ್ನು ಸ್ವೀಕರಿಸಲಿಲ್ಲ. (1 ಯೋಹಾ. 4:​9, 10) ಇಸ್ರಾಯೇಲ್ಯರ ಕಡೆಗೆ ತನ್ನ ತಂದೆಗಿದ್ದ ದೃಷ್ಟಿಕೋನವನ್ನು ಯೇಸು ಭೂಮಿಯಲ್ಲಿದ್ದಾಗ ಹೀಗೆ ವ್ಯಕ್ತಪಡಿಸಿದನು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ​—⁠ಕೋಳಿಯು ತನ್ನ ರೆಕ್ಕೆಗಳ ಕೆಳಗೆ ತನ್ನ ಮರಿಗಳನ್ನು ಒಟ್ಟುಗೂಡಿಸಿಕೊಳ್ಳುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟು ಬಾರಿ ಒಟ್ಟುಗೂಡಿಸಿಕೊಳ್ಳಲು ಬಯಸಿದೆ! ಆದರೆ ನೀವು ಅದನ್ನು ಇಷ್ಟಪಡಲಿಲ್ಲ.” ಆದ್ದರಿಂದ ಯೇಸು ಘೋಷಿಸಿದ್ದು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರಿದಾಗಿ ಬಿಡುತ್ತದೆ.” (ಮತ್ತಾ. 23:​37, 38) ಅವಿಧೇಯ ಮತ್ತು ಪಶ್ಚಾತ್ತಾಪಪಡದ ಆ ಇಸ್ರಾಯೇಲ್ಯರನ್ನು ಯೆಹೋವನು ತೊರೆದುಬಿಟ್ಟನು. ಅವರಿಗೆ ಬದಲಾಗಿ ಆಧ್ಯಾತ್ಮಿಕ ಇಸ್ರಾಯೇಲನ್ನು ಆರಿಸಿಕೊಂಡನು. (ಮತ್ತಾ. 21:43; ಗಲಾ. 6:16) ಒಂದುವೇಳೆ ಇಸ್ರಾಯೇಲ್‌ ಜನಾಂಗದಿಂದ ಬಂದವರಲ್ಲಿ ಯಾರಾದರೂ ಪಶ್ಚಾತ್ತಾಪಪಟ್ಟರೆ ಕ್ಷಮೆ ಸಿಗುತ್ತದೆಯೇ? ಹೌದು! ಯೆಹೋವನಲ್ಲಿ ಮತ್ತು ಯೇಸು ಕ್ರಿಸ್ತನ ವಿಮೋಚನಾ ಯಜ್ಞದಲ್ಲಿ ನಂಬಿಕೆಯಿಡುವವರಿಗೆ ಕ್ಷಮೆ ಸಿಗುತ್ತದೆ. ಅಂಥವರಿಗೆ ಕರುಣೆ ತೋರಿಸಲು ಯೆಹೋವನು ಸಿದ್ಧನಿದ್ದಾನೆ. ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡದೆ ಮೃತರಾದವರಲ್ಲಿ ಯಾರನ್ನು ಯೆಹೋವನು ಪುನರುತ್ಥಾನಗೊಳಿಸುತ್ತಾನೋ ಅವರಿಗೆ ಕೂಡ ತನ್ನ ಕರುಣೆ ಮತ್ತು ಕ್ಷಮಾಶೀಲತೆಯಿಂದ ಪ್ರಯೋಜನ ಪಡೆಯುವ ಅವಕಾಶ ಕೊಡುವನು.​—⁠ಯೋಹಾ. 5:​28, 29; ಅ. ಕಾ. 24:⁠15.

ಯೆಹೋವನು ತೋರಿಸುವ ಕ್ಷಮೆಯಿಂದ ಪ್ರಯೋಜನಹೊಂದಿ

17, 18. ಯೆಹೋವನಿಂದ ನಮಗೆ ಕ್ಷಮೆ ಸಿಗಬೇಕಾದರೆ ಏನು ಮಾಡಬೇಕು?

17 ಯೆಹೋವನು ಕ್ಷಮಿಸಲು ಸಿದ್ಧನಿದ್ದಾನೆ. ಹಾಗಾದರೆ ನಾವೇನು ಮಾಡಬೇಕು? ದಾವೀದ ಮತ್ತು ಮನಸ್ಸೆಯಂತೆ ನಾವಿರಬೇಕು. ಪಾಪಿಗಳೆಂಬುದನ್ನು ಒಪ್ಪಿಕೊಂಡು, ಮಾಡಿದ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕು. ಕ್ಷಮೆಗಾಗಿ ಯೆಹೋವನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸಬೇಕು. ನಮ್ಮಲ್ಲಿ ಶುದ್ಧಹೃದಯವನ್ನು ನಿರ್ಮಿಸುವಂತೆ ಕೇಳಿಕೊಳ್ಳಬೇಕು. (ಕೀರ್ತ. 51:10) ಗಂಭೀರ ಪಾಪವನ್ನು ಮಾಡಿರುವಲ್ಲಿ ನಾವು ಸಭಾ ಹಿರಿಯರಿಂದ ಆಧ್ಯಾತ್ಮಿಕ ನೆರವನ್ನು ಪಡೆದುಕೊಳ್ಳಬೇಕು. (ಯಾಕೋ. 5:​14, 15) ನಾವೆಷ್ಟೇ ಘೋರ ಪಾಪ ಮಾಡಿರಲಿ ಒಂದು ವಿಷಯವನ್ನು ಯಾವಾಗಲೂ ನೆನಪಿನಲ್ಲಿಡುವುದು ನಮ್ಮ ಮನಸ್ಸಿಗೆ ನೆಮ್ಮದಿ ಸಾಂತ್ವನ ಕೊಡುತ್ತದೆ. ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಆಗಿದ್ದಾನೆ. ಆತನು ಯಾವತ್ತೂ ಬದಲಾಗುವುದಿಲ್ಲ.​—⁠ವಿಮೋ. 34:​6, 7.

18 ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರಿಗೆ ಯೆಹೋವನು ಅವರ ಪಾಪಗಳ ಕಲೆಯನ್ನು ಸಂಪೂರ್ಣವಾಗಿ ತೆಗೆಯುವೆನೆಂದು ಮಾತುಕೊಟ್ಟನು. ಅವರ ಪಾಪಗಳು ‘ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗಿ’ ಮಾಡುವೆನೆಂದು ಹೇಳಿದನು. ತನ್ನ ಕ್ಷಮಾಶೀಲತೆಯ ಬಗ್ಗೆ ಎಂತಹ ಮನಮುಟ್ಟುವ ವರ್ಣನೆ! (ಯೆಶಾಯ 1:18 ಓದಿ.) ಹಾಗಾದರೆ ಯೆಹೋವನು ತೋರಿಸುವ ಕ್ಷಮೆಯಿಂದ ನಮಗೆ ಯಾವ ಪ್ರಯೋಜನವಿದೆ? ನಾವು ಪಶ್ಚಾತ್ತಾಪಪಟ್ಟರೆ ನಮ್ಮ ಪಾಪಗಳನ್ನು ಆತನು ಸಂಪೂರ್ಣವಾಗಿ ಕ್ಷಮಿಸುತ್ತಾನೆಂಬುದು ಖಚಿತ. ಆತನ ಔದಾರ್ಯಕ್ಕಾಗಿ ನಾವು ಆಭಾರಿಗಳಾಗಿರಬೇಕು.

19. ಮುಂದಿನ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

19 ಯೆಹೋವನಿಂದ ಕ್ಷಮೆಯನ್ನು ಪಡೆದಿರುವ ನಾವು ಆತನ ಕ್ಷಮಾಗುಣವನ್ನು ಹೇಗೆ ಅನುಕರಿಸಬಹುದು? ಗಂಭೀರ ಪಾಪಗಳನ್ನು ಮಾಡಿ ನಂತರ ಯಥಾರ್ಥವಾಗಿ ಪಶ್ಚಾತ್ತಾಪಪಡುವವರನ್ನು ಕ್ಷಮಿಸಲು ನಮಗೆ ಕಷ್ಟವಾಗುತ್ತದಾದರೆ ಅಂಥ ಮನೋಭಾವವನ್ನು ಹೇಗೆ ದೂರ ಮಾಡಬಹುದು? ಮುಂದಿನ ಲೇಖನವು ನಮ್ಮ ಮನೋಭಾವವನ್ನು ಪರೀಕ್ಷಿಸಿಕೊಳ್ಳಲು ಸಹಾಯಮಾಡುತ್ತದೆ. ಇದು ‘ಒಳ್ಳೆಯವನೂ ಕ್ಷಮಿಸಲು’ ಸಿದ್ಧನೂ ಆಗಿರುವ ನಮ್ಮ ತಂದೆಯಾದ ಯೆಹೋವನಂತೆ ನಾವಾಗಲು ನೆರವಾಗುತ್ತದೆ.​—⁠ಕೀರ್ತ. 86:⁠5.

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಯೆಹೋವನು ಕ್ಷಮಿಸಿದ ಕಾರಣ ಮನಸ್ಸೆ ಪುನಃ ಯೆರೂಸಲೇಮಿನ ಅರಸನಾದನು