ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯದಿಂದ ನೆರವು—ನೀವೂ ಪಡೆಯಿರಿ ಇತರರಿಗೂ ಕೊಡಿ

ದೇವರ ವಾಕ್ಯದಿಂದ ನೆರವು—ನೀವೂ ಪಡೆಯಿರಿ ಇತರರಿಗೂ ಕೊಡಿ

ದೇವರ ವಾಕ್ಯದಿಂದ ನೆರವು—ನೀವೂ ಪಡೆಯಿರಿ ಇತರರಿಗೂ ಕೊಡಿ

“ನಿಜವಾಗಿ ನಿನ್ನ ಎಲ್ಲಾ ನೇಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ.”—ಕೀರ್ತ. 119:128.

ನಿಮ್ಮ ಉತ್ತರವೇನು?

ನೀವು ಇತರರಿಗೆ ಕಲಿಸುವಾಗ ಬೈಬಲನ್ನು ಚೆನ್ನಾಗಿ ಬಳಸುವುದು ಹೇಗೆ?

‘ವಿಷಯಗಳನ್ನು ಸರಿಪಡಿಸುವುದು’ ಎಂದು ಪೌಲ ಹೇಳಿದ್ದರ ಅರ್ಥ ಏನು?

ಹಿರಿಯರು ಮತ್ತು ಹೆತ್ತವರು “ನೀತಿಯಲ್ಲಿ ಶಿಸ್ತು” ಕೊಡುವುದು ಹೇಗೆ?

1. ದೇವರ ವಾಕ್ಯದಲ್ಲಿ ನಮಗೇಕೆ ಸಂಪೂರ್ಣ ಭರವಸೆ ಇರಬೇಕು?

ಒಬ್ಬ ಬೈಬಲ್‌ ವಿದ್ಯಾರ್ಥಿಯು ಪ್ರಚಾರಕನಾಗಲು ಅರ್ಹನೋ ಎಂದು ಹಿರಿಯರು ಪರಿಗಣಿಸುವಾಗ ಅವರು ಒಂದು ವಿಷಯವನ್ನು ಗಮನಿಸುತ್ತಾರೆ. ‘ಆ ವ್ಯಕ್ತಿ ತನ್ನ ಮಾತಿನಲ್ಲೂ ಕ್ರಿಯೆಗಳಲ್ಲೂ ಬೈಬಲನ್ನು ದೇವರ ವಾಕ್ಯವೆಂದು ನಂಬುತ್ತಾನೆ ಎನ್ನುವುದನ್ನು ತೋರಿಸುತ್ತಾನಾ?’ ಎಂದು ಆಲೋಚಿಸುತ್ತಾರೆ. * ಹೌದು ಹೊಸ ಪ್ರಚಾರಕರಷ್ಟೇ ಅಲ್ಲ, ದೇವರ ಸೇವಕರಾದ ನಾವೆಲ್ಲರೂ ಬೈಬಲನ್ನು ದೇವರ ವಾಕ್ಯವೆಂದು ನಂಬುತ್ತೇವೆಂದು ನಮ್ಮ ಜೀವನರೀತಿಯಲ್ಲಿ ಸ್ಪಷ್ಟವಾಗಿ ತೋರಿಸಬೇಕು. ಯಾಕೆ? ದೇವರ ವಾಕ್ಯದಲ್ಲಿ ಸಂಪೂರ್ಣ ಭರವಸೆ ಇಟ್ಟು, ಅದನ್ನು ಸೇವೆಯಲ್ಲಿ ಕೌಶಲದಿಂದ ಬಳಸುವಾಗ ನಾವು ಇತರರಿಗೆ ದೇವರ ಬಗ್ಗೆ ಚೆನ್ನಾಗಿ ತಿಳಿಸಲು ಶಕ್ತರಾಗುತ್ತೇವೆ. ರಕ್ಷಣೆಯ ಪಡೆಯಲು ಅವರಿಗೆ ನೆರವಾಗುತ್ತೇವೆ.

2. ‘ಕಲಿತ ವಿಷಯಗಳಲ್ಲಿ ಮುಂದುವರಿಯುತ್ತಾ’ ಇರಬೇಕೇಕೆ?

2 ದೇವರ ವಾಕ್ಯದ ಮಹತ್ವವನ್ನು ತಿಳಿಸುತ್ತಾ ಪೌಲ ತಿಮೊಥೆಯನಿಗೆ: “ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು” ಎಂದು ಪ್ರೋತ್ಸಾಹಿಸಿದನು. ಪೌಲನು ‘ವಿಷಯಗಳು’ ಎಂದು ಹೇಳುವಾಗ ತಿಮೊಥೆಯನಿಗೆ ಸುವಾರ್ತೆಯಲ್ಲಿ ನಂಬಿಕೆಯಿಡುವಂತೆ ಮಾಡಿದ ಬೈಬಲ್‌ ಸತ್ಯಗಳ ಕುರಿತು ಮಾತಾಡುತ್ತಿದ್ದನು. ಆ ಸತ್ಯಗಳು ಇಂದು ನಮ್ಮ ನಂಬಿಕೆಯನ್ನು ಸಹ ಬಲಪಡಿಸಬಲ್ಲವು ಮತ್ತು ನಮ್ಮನ್ನು ‘ವಿವೇಕಿಗಳನ್ನಾಗಿ ಮಾಡಿ’ ರಕ್ಷಣೆ ಪಡೆಯಲು ನೆರವಾಗಬಲ್ಲವು. (2 ತಿಮೊ. 3:14, 15) 2 ತಿಮೊಥೆಯ 3:16 ರಲ್ಲಿರುವ (ಓದಿ) ಪೌಲನ ಮಾತುಗಳನ್ನು ನಾವು ಸುವಾರ್ತೆ ಸಾರುವಾಗ ಬೈಬಲ್‌ ದೇವಪ್ರೇರಿತ ಎಂದು ರುಜುಪಡಿಸಲು ಬಳಸುತ್ತೇವೆ. ಆದರೆ ಅದರಿಂದ ನಮಗೆ ವೈಯಕ್ತಿಕ ಪ್ರಯೋಜನವು ಇದೆ. ನಾವೀಗ ಆ ವಚನದ ಸಮಗ್ರ ಅಧ್ಯಯನ ಮಾಡೋಣ. ಆಗ ಯೆಹೋವನು ಬೋಧಿಸಿರುವುದೆಲ್ಲವೂ “ನ್ಯಾಯ” ಅಥವಾ ಸರಿಯಾಗಿದೆ ಎಂಬ ಭರವಸೆ ನಮ್ಮಲ್ಲಿ ಮೂಡುತ್ತದೆ.—ಕೀರ್ತ. 119:128.

ಬೋಧಿಸುವುದಕ್ಕೆ ಉಪಯುಕ್ತ’

3-5. (1) ಪಂಚಾಶತ್ತಮದಂದು ಪೇತ್ರನು ಭಾಷಣ ಕೊಟ್ಟಾಗ ಜನರು ಹೇಗೆ ಪ್ರತಿಕ್ರಿಯಿಸಿದರು? ಏಕೆ? (2) ಥೆಸಲೊನೀಕದ ಅನೇಕರು ಸತ್ಯವನ್ನು ಸ್ವೀಕರಿಸುವಂತೆ ಮಾಡಿದ್ದು ಯಾವುದು? (3) ನಾವು ಸಾರುವಾಗ ಜನರಿಗೆ ಯಾವ ವಿಷಯ ಮನಸ್ಪರ್ಶಿಸಬಹುದು?

3 “ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ವಿವೇಕಿಗಳನ್ನೂ ಸಾರ್ವಜನಿಕ ಉಪದೇಶಕರನ್ನೂ ಕಳುಹಿಸುತ್ತಿದ್ದೇನೆ” ಎಂದು ಯೇಸು ಇಸ್ರಾಯೇಲ್ಯರಿಗೆ ಹೇಳಿದನು. (ಮತ್ತಾ. 23:34) ಇಲ್ಲಿ ಯೇಸು ತನ್ನ ಶಿಷ್ಯರ ಕುರಿತು ಮಾತಾಡುತ್ತಿದ್ದನು. ಇವರಿಗೆ ಶಾಸ್ತ್ರವಚನಗಳನ್ನು ಸೇವೆಯಲ್ಲಿ ಹೇಗೆ ಬಳಸಬೇಕೆಂದು ಅವನು ಹೇಳಿಕೊಟ್ಟಿದ್ದನು. ಕ್ರಿ.ಶ. 33ರ ಪಂಚಾಶತ್ತಮ ದಿನದಂದು ಈ ‘ಸಾರ್ವಜನಿಕ ಉಪದೇಶಕರಲ್ಲಿ’ ಒಬ್ಬನಾದ ಪೇತ್ರನು ಯೆರೂಸಲೇಮ್‌ನಲ್ಲಿ ಜನರ ದೊಡ್ಡ ಗುಂಪನ್ನು ಉದ್ದೇಶಿಸಿ ಭಾಷಣ ನೀಡಿದಾಗ ಹೀಬ್ರು ಶಾಸ್ತ್ರವಚನಗಳನ್ನು ಬಳಸಿ ಮಾತಾಡಿದನು. ವಚನಗಳನ್ನು ಅನ್ವಯಿಸುತ್ತಾ ಪೇತ್ರ ಹೇಳಿದ ಮಾತುಗಳನ್ನು ಕೇಳಿ ಅನೇಕರ ‘ಹೃದಯ ಇರಿದಂತಾಯಿತು.’ ಅವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರಲ್ಲಿ ಕ್ಷಮೆಕೋರಿದರು. ಅದೇ ದಿನ ಸುಮಾರು 3,000 ಜನ ಕ್ರೈಸ್ತರಾದರು.—ಅ. ಕಾ. 2:37-41.

4 ಸಾರ್ವಜನಿಕ ಉಪದೇಶಕನಾದ ಅಪೊಸ್ತಲ ಪೌಲನು ಯೆರೂಸಲೇಮ್‌ ಅಲ್ಲದೆ ಬೇರೆಕಡೆಯು ಸುವಾರ್ತೆ ಸಾರಿದನು. ಒಂದು ಸಾರಿ ಥೆಸಲೊನೀಕದ ಮಕೆದೋನ್ಯ ಪಟ್ಟಣದಲ್ಲಿದ್ದ ಸಭಾಮಂದಿರದಲ್ಲಿ ಜನರೊಂದಿಗೆ ಮಾತಾಡಿದನು. “ಮೂರು ಸಬ್ಬತ್‌ ದಿನಗಳ ತನಕ ಅವರೊಂದಿಗೆ ಶಾಸ್ತ್ರಗ್ರಂಥದಿಂದ ತರ್ಕಿಸಿ, ಕ್ರಿಸ್ತನು ಬಾಧೆಯನ್ನು ಅನುಭವಿಸಿ ಸತ್ತವರೊಳಗಿಂದ ಎಬ್ಬಿಸಲ್ಪಡುವುದು ಅಗತ್ಯವಾಗಿತ್ತು ಎಂಬುದನ್ನು” ವಿವರಿಸಿದನು. ಪರಿಣಾಮ? ‘ಕೆಲವು ಯೆಹೂದ್ಯರು’ ಮತ್ತು ‘ಬಹುಮಂದಿ ಗ್ರೀಕರು’ ವಿಶ್ವಾಸಿಗಳಾದರು.”—ಅ. ಕಾ. 17:1-4.

5 ಇಂದು ಸಹ ದೇವಜನರು ಬೈಬಲನ್ನು ಬಳಸುವ ವಿಧ ಅನೇಕರ ಮನಸ್ಪರ್ಶಿಸುತ್ತೆ. ಸ್ವಿಟ್ಜರ್ಲೆಂಡ್‌ನ ಒಬ್ಬ ವ್ಯಕ್ತಿಗೆ ಸಹೋದರಿಯೊಬ್ಬಳು ಬೈಬಲ್‌ನಿಂದ ವಚನವನ್ನು ಓದಿ ತೋರಿಸಿದಾಗ ಹಾಗೇ ಆಯಿತು. ಆ ಮನೆಯವನು “ನೀವು ಯಾವ ಧರ್ಮದವರು?” ಎಂದು ಕೇಳಿದನು. ಅದಕ್ಕೆ ಸಹೋದರಿ “ನಾವು ಯೆಹೋವನ ಸಾಕ್ಷಿಗಳು” ಎಂದಾಗ ಆ ಮನೆಯವನು, “ನೀವು ಯೆಹೋವನ ಸಾಕ್ಷಿ ಅಂತ ನನಗೆ ಮುಂಚೆನೇ ಗೊತ್ತಾಗಬೇಕಿತ್ತು, ಯಾಕೆಂದರೆ ಜನರ ಮನೆಗೆ ಹೋಗಿ ಬೈಬಲನ್ನು ಓದೋದು ನೀವು ಮಾತ್ರ.”

6, 7. (1) ಸಭೆಯಲ್ಲಿ ಭಾಷಣ ಕೊಡುವವರು ಬೈಬಲನ್ನು ಚೆನ್ನಾಗಿ ಬಳಸಲು ಏನು ಮಾಡಬೇಕು? (2) ಬೈಬಲ್‌ ವಿದ್ಯಾರ್ಥಿಯೊಂದಿಗೆ ಅಧ್ಯಯನ ಮಾಡುವಾಗ ಬೈಬಲನ್ನು ಯಾಕೆ ಚೆನ್ನಾಗಿ ಬಳಸಬೇಕು?

6 ಬೋಧಿಸುವಾಗ ಬೈಬಲನ್ನು ಚೆನ್ನಾಗಿ ಬಳಸುವುದು ಹೇಗೆ? ಸಭೆಯಲ್ಲಿ ವೇದಿಕೆಯಿಂದ ಭಾಷಣ ಕೊಡುವ ಸುಯೋಗ ನಿಮಗಿರುವುದಾದರೆ, ವಿಷಯಕ್ಕೆ ಸಂಬಂಧಿಸಿದ ನಿರ್ದಿಷ್ಟ ವಚನಗಳನ್ನು ಬಳಸಿ. ಮುಖ್ಯ ವಚನಗಳ ಸಾರಾಂಶ ಹೇಳುವ ಬದಲು ಅಥವಾ ಅವುಗಳನ್ನು ಹೊರಮೇರೆಯಿಂದ ಓದುವ ಬದಲು ಬೈಬಲನ್ನು ತೆರೆದು ಓದಿ. ಹಾಗೆ ಮಾಡುವಂತೆ ಸಭಿಕರನ್ನೂ ಪ್ರೋತ್ಸಾಹಿಸಿ. ವಚನಗಳನ್ನು ಅನ್ವಯಿಸಲು ಸಾಕಷ್ಟು ಸಮಯ ತೆಗೆದುಕೊಂಡು ಸಭಿಕರು ಯೆಹೋವನಿಗೆ ಇನ್ನಷ್ಟು ಆಪ್ತರಾಗುವಂತೆ ಸಹಾಯಮಾಡಿ. ಸಭಿಕರನ್ನು ನಗಿಸಲೆಂದೇ ಅನುಭವಗಳನ್ನು, ಅರ್ಥವಾಗದ ದೃಷ್ಟಾಂತಗಳನ್ನು ಹೇಳುವ ಬದಲು ದೇವರ ವಾಕ್ಯವನ್ನು ಚೆನ್ನಾಗಿ ವಿವರಿಸಲು ಸಮಯ ಬಳಸಿ.

7 ಬೈಬಲ್‌ ವಿದ್ಯಾರ್ಥಿಯೊಂದಿಗೆ ಅಧ್ಯಯನ ಮಾಡುವಾಗ ನಾವು ಯಾವ ವಿಷಯವನ್ನು ಮನಸ್ಸಿನಲ್ಲಿಡಬೇಕು? ಅಧ್ಯಯನಕ್ಕಾಗಿ ಬಳಸುವ ಸಾಹಿತ್ಯದಲ್ಲಿ ಕೊಟ್ಟಿರುವ ವಚನಗಳನ್ನು ಬಿಟ್ಟುಬಿಡದಂತೆ ಜಾಗ್ರತೆವಹಿಸಬೇಕು. ಕೊಡಲಾಗಿರುವ ವಚನಗಳನ್ನು ಓದಿ ಅದರ ಅರ್ಥವನ್ನು ಗ್ರಹಿಸುವಂತೆ ಬೈಬಲ್‌ ವಿದ್ಯಾರ್ಥಿಗೆ ಸಹಾಯಮಾಡಬೇಕು. ಅದನ್ನು ಹೇಗೆ ಮಾಡುವುದು? ಒಂದು ವಿಷಯದ ಕುರಿತು ನೀವೇ ಉದ್ದ ಭಾಷಣ ಕೊಡುವ ಬದಲು ವಿದ್ಯಾರ್ಥಿ ವಿಷಯವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾನೆ ಎಂದು ಕೇಳಿ. ಏನು ನಂಬಬೇಕು, ಏನು ಮಾಡಬೇಕು ಅಂತ ನೀವೇ ಹೇಳದೆ ಅವರಾಗಿಯೇ ಯೋಚಿಸುವಂತೆ ಕೆಲವು ಪ್ರಶ್ನೆಗಳನ್ನು ಕೇಳಿ. ಹೀಗೆ ಅವರೇ ಸರಿಯಾದ ನಿರ್ಣಯ ಮಾಡಲು ಸಾಧ್ಯ ಆಗುತ್ತೆ. *

‘ಖಂಡಿಸುವುದಕ್ಕೆ ಉಪಯುಕ್ತ’

8. ಪೌಲ ಒಳಗೊಳಗೆ ಯಾವ ಹೋರಾಟವನ್ನು ಮಾಡುತ್ತಿದ್ದನು?

8 ಖಂಡಿಸುವುದು ಹಿರಿಯರ ಕೆಲಸ ಅಂತ ನಾವು ಯಾವಾಗಲೂ ನೆನಸುತ್ತೇವೆ. ಹೌದು ಅದು ಸರಿನೇ. ‘ಪಾಪದ ಪರಿಪಾಠವನ್ನು ಮಾಡುವ ವ್ಯಕ್ತಿಗಳನ್ನು ಖಂಡಿಸುವ’ ಜವಾಬ್ದಾರಿ ಮೇಲ್ವಿಚಾರಕರಿಗಿದೆ. (1 ತಿಮೊ. 5:20; ತೀತ 1:13) ಅದೇ ಸಮಯದಲ್ಲಿ ನಮ್ಮನ್ನು ನಾವೇ ಖಂಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಪೌಲನ ಕುರಿತು ಯೋಚಿಸಿ. ಅವನೊಬ್ಬ ಆದರ್ಶ ಕ್ರೈಸ್ತನಾಗಿದ್ದನು. ಅವನಲ್ಲಿ ಶುದ್ಧ ಮನಸ್ಸಾಕ್ಷಿಯಿತ್ತು. (2 ತಿಮೊ. 1:3) ಹಾಗಿದ್ದರೂ ಅವನು ಬರೆದಿದ್ದು: “ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.” ಪೌಲನು ಪ್ರತಿಬಾರಿ ತನ್ನ ಪಾಪದ ಪ್ರವೃತ್ತಿಯ ವಿರುದ್ಧ ಎಷ್ಟರಮಟ್ಟಿಗೆ ಹೋರಾಡುತ್ತಿದ್ದನು ಎಂದು ತಿಳಿಯಲು ಈ ವಚನದ ಪೂರ್ವಾಪರ ನೋಡೋಣ.ರೋಮನ್ನರಿಗೆ 7:21-25 ಓದಿ.

9, 10. (1) ಪೌಲನಿಗೆ ಯಾವ ಬಲಹೀನತೆಗಳು ಇದ್ದಿರಬಹುದು? (2) ಆ ಬಲಹೀನತೆ ವಿರುದ್ಧ ಅವನು ಹೇಗೆ ಹೋರಾಡಿರಬಹುದು?

9 ಪೌಲನಲ್ಲಿ ಅಂಥ ಯಾವ ಬಲಹೀನತೆ ಇತ್ತು? ಯಾವ ಬಲಹೀನತೆ ತನ್ನಲ್ಲಿತ್ತು ಎಂದು ನಿರ್ದಿಷ್ಟವಾಗಿ ಪೌಲ ಹೇಳಲಿಲ್ಲವಾದರೂ ತಾನು ಮೊದಲು “ದುರಹಂಕಾರಿ” ಆಗಿದ್ದೆನೆಂದು ತಿಮೊಥೆಯನಿಗೆ ಬರೆದ ಪತ್ರದಲ್ಲಿ ಹೇಳಿದನು. (1 ತಿಮೊ. 1:13) ಅವನು ಕ್ರೈಸ್ತನಾಗುವ ಮುಂಚೆ, ಕ್ರೈಸ್ತರನ್ನು ಕಡುವಾಗಿ ಹಿಂಸಿಸಿದನು. ಕ್ರಿಸ್ತನ ಹಿಂಬಾಲಕರ “ಮೇಲೆ ತುಂಬ ಕೋಪ” ಇತ್ತೆಂದು ಅವನೇ ಒಪ್ಪಿಕೊಂಡನು. (ಅ. ಕಾ. 26:11) ಕ್ರೈಸ್ತನಾದ ಮೇಲೆ, ಸಿಟ್ಟನ್ನು ನಿಯಂತ್ರಿಸಲು ಕಲಿತನಾದರೂ ಕೆಲವೊಮ್ಮೆ ತನ್ನ ಮಾತುಗಳನ್ನು ಭಾವನೆಗಳನ್ನು ಹಿಡಿದಿಡಲು ಅವನು ಹೋರಾಡಿರಬೇಕು. (ಅ. ಕಾ. 15:36-39) ತನ್ನ ಭಾವನೆಗಳನ್ನು ನಿಯಂತ್ರಿಸಲು ಅವನಿಗೆ ಯಾವುದು ಸಹಾಯ ಮಾಡಿತು?

10 ಪೌಲ ತನ್ನನ್ನು ತಾನು ಖಂಡಿಸಿಕೊಳ್ಳಲು ಏನು ಮಾಡಿದನೆಂದು ಕೊರಿಂಥದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಹೇಳಿದನು. (1 ಕೊರಿಂಥ 9:26, 27 ಓದಿ.) ತನ್ನ ಅಪರಿಪೂರ್ಣ ಪ್ರವೃತ್ತಿಯ ವಿರುದ್ಧ ಹೋರಾಡಲು ಅವನು ತನ್ನನ್ನೇ ಜಜ್ಜಿಕೊಂಡನು. ಅಂದರೆ ಶಾಸ್ತ್ರವಚನಗಳನ್ನು ಅಧ್ಯಯನ ಮಾಡಿ ತನಗೆ ಅನ್ವಯಿಸುವ ವಿಷಯಗಳಿಗಾಗಿ ಹುಡುಕಿದನು. ಅವುಗಳನ್ನು ಅಳವಡಿಸಿಕೊಳ್ಳಲು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟನು. ತನ್ನ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಪ್ರಯಾಸಪಟ್ಟನು. * ಅವನಂತೆ ನಾವೂ ಪಾಪದ ವಿರುದ್ಧ ಹೋರಾಡುತ್ತಿರುವುದರಿಂದ ಅವನ ಮಾದರಿಯಿಂದ ಪಾಠ ಕಲಿಯೋಣ.

11. ಸತ್ಯ ಮಾರ್ಗದಲ್ಲಿದ್ದೇವಾ ಎಂದು ನಮ್ಮನ್ನು ನಾವೇ “ಪರೀಕ್ಷಿಸಿಕೊಳ್ಳುತ್ತಾ” ಇರುವುದು ಹೇಗೆ?

11 ‘ನಾನು ಯೆಹೋವನ ಸೇವೆಯನ್ನು ಚೆನ್ನಾಗಿ ಮಾಡ್ತಾ ಇದ್ದೇನೆ, ಜಾಸ್ತಿ ಇನ್ನೇನು ಮಾಡಲಿಕ್ಕಿಲ್ಲ’ ಎಂದು ತೃಪ್ತರಾಗಬೇಡಿ. ಸತ್ಯ ಮಾರ್ಗದಲ್ಲಿ ನಡೆಯುತ್ತಿದ್ದೇವಾ ಇಲ್ಲವಾ ಅಂತ ನಾವು “ಪರೀಕ್ಷಿಸಿಕೊಳ್ಳುತ್ತಾ” ಇರಬೇಕು. (2 ಕೊರಿಂ. 13:5) ಉದಾಹರಣೆಗೆ ಕೊಲೊಸ್ಸೆ 3:5-10ರಂಥ ವಚನಗಳನ್ನು ಓದುವಾಗ ನಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಬೇಕು: ‘ನನ್ನಲ್ಲಿರುವ ಪಾಪದ ಪ್ರವೃತ್ತಿಯ ವಿರುದ್ಧ ನಾನು ಹೋರಾಡಲು ಪ್ರಯಾಸಪಡುತ್ತಿದ್ದೇನಾ ಅಥವಾ ನನ್ನ ನೈತಿಕ ಮಟ್ಟ ಕುಸಿಯುವಂತೆ ಬಿಡುತ್ತಿದ್ದೇನಾ? ನಾನು ಇಂಟರನೆಟ್‌ ಬಳಸುವಾಗ ಯಾವುದಾದರೂ ಅಶ್ಲೀಲ ಚಿತ್ರ ಬರುವುದಾದರೆ ನಾನು ತಕ್ಷಣ ಆ ಸೈಟನ್ನು ಬಿಟ್ಟು ಹೊರಗೆ ಬರುತ್ತೇನಾ? ಅಥವಾ ನಾನು ಅಯೋಗ್ಯವಾದ ಸೈಟ್‌ಗಳನ್ನು ಹುಡುಕುತ್ತೇನಾ? ಈ ರೀತಿ ದೇವರ ವಾಕ್ಯದಲ್ಲಿರುವ ಸಲಹೆಗಳು ನನಗಾಗಿಯೇ ಇವೆ ಎಂದು ಅನ್ವಯಿಸಿಕೊಳ್ಳುವಾಗ ನಾವು “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಇರುತ್ತೇವೆ.—1 ಥೆಸಲೊನೀಕ 5:6-8.

‘ವಿಷಯಗಳನ್ನು ಸರಿಪಡಿಸುವುದಕ್ಕೆ ಉಪಯುಕ್ತ’

12, 13. (1) ‘ವಿಷಯಗಳನ್ನು ಸರಿಪಡಿಸುವುದು’ ಅಂದರೇನು? (2) ಈ ವಿಷಯದಲ್ಲಿ ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು? (3) ‘ವಿಷಯಗಳನ್ನು ಸರಿಪಡಿಸುವಾಗ’ ಯಾವ ರೀತಿ ಮಾತಾಡುವುದನ್ನು ನಾವು ತೊರೆಯಬೇಕು?

12 ‘ವಿಷಯಗಳನ್ನು ಸರಿಪಡಿಸು’ ಎಂದು ಬೈಬಲ್‌ ಹೇಳುವಾಗ ಅದರ ಅರ್ಥ ವಿಷಯವನ್ನು ಒಳ್ಳೆಯ, ಯೋಗ್ಯ ಸ್ಥಿತಿಗೆ ತರು ಅಥವಾ ತಿದ್ದು ಎಂದಾಗಿದೆ. ನಾವು ಹೇಳಿದ ಮಾತುಗಳನ್ನು ಅಥವಾ ಮಾಡಿದ ವಿಷಯಗಳನ್ನು ಬೇರೆಯವರು ತಪ್ಪಾಗಿ ತಿಳಿದಾಗ ನಾವು ಅದನ್ನು ಸರಿಪಡಿಸಲು ಹೆಜ್ಜೆ ತಕ್ಕೊಳ್ಳಬೇಕು. ಉದಾಹರಣೆಗೆ ಯೇಸು “ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸಂಗಡ” ದಯೆಯಿಂದ ವರ್ತಿಸುವುದನ್ನು ಯೆಹೂದಿ ಧಾರ್ಮಿಕ ಮುಖಂಡರು ಟೀಕಿಸಿದರು. ಅದಕ್ಕೆ ಯೇಸು “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ. ಆದುದರಿಂದ ನೀವು ಹೋಗಿ, ‘ನನಗೆ ಯಜ್ಞವಲ್ಲ ಕರುಣೆಯೇ ಬೇಕು’ ಎಂಬುದರ ಅರ್ಥವನ್ನು ಕಲಿಯಿರಿ” ಎಂದು ಹೇಳಿದನು. (ಮತ್ತಾ. 9:11-13) ಯೇಸು ದೇವರ ವಾಕ್ಯವನ್ನು ಎಲ್ಲರಿಗೆ ತಾಳ್ಮೆಯಿಂದ ಸೌಮ್ಯಭಾವದಿಂದ ಕಲಿಸಿದನು. ಇದರಿಂದಾಗಿ ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಎಂದು ದೀನ ಜನರು ತಿಳಿಯಲು ಸಾಧ್ಯವಾಯಿತು. (ವಿಮೋ. 34:6) ಹೀಗೆ ‘ವಿಷಯಗಳನ್ನು ಸರಿಪಡಿಸಲು’ ಯೇಸು ಹೆಜ್ಜೆಗಳನ್ನು ತೆಗೆದುಕೊಂಡದ್ದರಿಂದ ಅನೇಕರು ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟರು.

13 ವಿಷಯಗಳನ್ನು ಸರಿಪಡಿಸುವಾಗ ನಾವು ಯೇಸುವನ್ನು ಅನುಕರಿಸಬೇಕು. ಬೇಸರ ಆದಾಗ ಯಾರಾದರೂ ಒರಟಾಗಿ ‘ನಾನು ನಿಮ್ಮ ಹತ್ರ ಮಾತಾಡಿ ಒಂದು ವಿಷಯನಾ ಸರಿಪಡಿಸಬೇಕು’ ಎಂದು ಹೇಳಿದರೆ ಹೇಗಿರುತ್ತೆ? 2 ತಿಮೊಥೆಯ 3:16ರಲ್ಲಿರುವ ಸಲಹೆ ಇದಲ್ಲ. ಅಷ್ಟೆ ಅಲ್ಲದೆ “ಇಡೀ ಶಾಸ್ತ್ರಗ್ರಂಥವು” ಎಲ್ಲೂ ಹೀಗೆ ಮಾಡುವಂತೆ ಪ್ರೋತ್ಸಾಹಿಸಲ್ಲ. “ಕತ್ತಿತಿವಿದ ಹಾಗೆ” ಮಾತಾಡುವುದು ವಿಷಯವನ್ನು ಸರಿಪಡಿಸಲ್ಲ, ಇತರರ ಮನಸ್ಸನ್ನು ಘಾಸಿಗೊಳಿಸುತ್ತದೆ.—ಜ್ಞಾನೋ. 12:18.

14-16. (1) ಇತರರಿಗೆ ಸಮಸ್ಯೆಗಳಿದ್ದಾಗ ಹಿರಿಯರು ಆ ವಿಷಯಗಳನ್ನು ಹೇಗೆ ಸರಿಪಡಿಸಬಹುದು? (2) ಮಕ್ಕಳನ್ನು ಸರಿಪಡಿಸುವಾಗ ಬೈಬಲ್‌ ಸಲಹೆಗಳನ್ನು ಬಳಸುವುದು ಯಾಕೆ ಪ್ರಾಮುಖ್ಯ?

14 ಹಾಗಾದರೆ ‘ವಿಷಯಗಳನ್ನು ಸರಿಪಡಿಸುವಾಗ’ ತಾಳ್ಮೆ, ಸೌಮ್ಯಭಾವ ತೋರಿಸುವುದು ಹೇಗೆ? ಉದಾಹರಣೆಗೆ ಗಂಡ-ಹೆಂಡತಿ ಹಿರಿಯರೊಬ್ಬರ ಹತ್ತಿರ ಬಂದು ತಮ್ಮಲ್ಲಿ ಆಗಾಗ್ಗೆ ಜಗಳ ಆಗುವುದನ್ನು ತಡೆಯುವುದು ಹೇಗೆಂದು ಕೇಳಿಕೊಂಡಿದ್ದಾರೆಂದು ನೆನಸಿ. ಆಗ ಹಿರಿಯನು ಏನು ಮಾಡಬಹುದು? ಯಾರು ಮಾಡಿದ್ದು ಸರಿ ಅಂತ ಹೇಳುತ್ತಾ ಒಬ್ಬರ ಪಕ್ಷ ವಹಿಸುವ ಬದಲು, ಬೈಬಲ್‌ ತತ್ವಗಳನ್ನು ಅನ್ವಯಿಸಲು ಸಹಾಯ ನೀಡಬಹುದು. ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಅಧ್ಯಾಯ 3ರಲ್ಲಿರುವ ಸಲಹೆಗಳನ್ನು ಅವರ ಗಮನಕ್ಕೆ ತರಬಹುದು. ಹೀಗೆ ಹಿರಿಯನು ಚರ್ಚಿಸುತ್ತಾ ಮಾರ್ಗದರ್ಶಿಸುವಾಗ ಗಂಡ ಹೆಂಡತಿ ಇಬ್ಬರೂ ತಾವು ಯಾವ ಸಲಹೆಯನ್ನು ಅನ್ವಯಿಸಬೇಕು ಎಂದು ತಿಳಿದುಕೊಳ್ಳಬಹುದು. ಸ್ವಲ್ಪ ಸಮಯ ಬಿಟ್ಟು ವಿಷಯಗಳು ಸರಿಯಾಗಿವೆಯಾ ಎಂದು ದಂಪತಿಯನ್ನು ಕೇಳಿ ಅಗತ್ಯವಿರುವಲ್ಲಿ ಹೆಚ್ಚಿನ ಸಹಾಯವನ್ನು ಹಿರಿಯನು ನೀಡಬಹುದು.

15 ಹೆತ್ತವರ ಬಗ್ಗೆ ಏನು? ಹೆತ್ತವರು ಮಕ್ಕಳನ್ನು ಸರಿಪಡಿಸುವ ರೀತಿ ಹೇಗಿರಬೇಕೆಂದರೆ ಅದು ಅವರನ್ನು ಆಧ್ಯಾತ್ಮಿಕವಾಗಿ ಕಟ್ಟಬೇಕು. ಈ ಸನ್ನಿವೇಶ ಗಮನಿಸಿ. ಹದಿವಯಸ್ಸಿನಲ್ಲಿರುವ ನಿಮ್ಮ ಮಗಳಿಗಿರುವ ಸ್ನೇಹಿತರು ಒಳ್ಳೆಯವರಲ್ಲ ಅಂತ ನಿಮಗನಿಸಿದೆ. ಹಾಗಾದರೆ ನೀವೇನು ಮಾಡಬೇಕು? ಮೊದಲು ಸತ್ಯಾಂಶ ಏನಂತ ತಿಳಿದುಕೊಳ್ಳಿ. ನಿಜವಾಗಿಯೂ ಸಮಸ್ಯೆ ಇದ್ದಲ್ಲಿ ಆಕೆಯೊಟ್ಟಿಗೆ ಕೂತು ಮಾತಾಡಿ. ಹಾಗೆ ಮಾಡುವಾಗ ನೀವು ಎಚ್ಚರ! ಪತ್ರಿಕೆಯಲ್ಲಿ ಬರುವ ಯುವ ಜನರ ಪ್ರಶ್ನೆ ಎಂಬ ಲೇಖನಗಳನ್ನು ಅಥವಾ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು—ಸಂಪುಟ 2 (ಇಂಗ್ಲಿಷ್‌) ಪುಸ್ತಕದಲ್ಲಿರುವ ಅಂಶಗಳನ್ನು ಬಳಸಿ. ನಂತರದ ದಿನಗಳಲ್ಲಿ ನೀವು ಅವಳೊಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ಅವಳು ಸೇವೆಯಲ್ಲಿರುವಾಗ, ಕುಟುಂಬದವರೊಟ್ಟಿಗೆ ಇರುವಾಗ ಹೇಗಿರುತ್ತಾಳೆ ಎನ್ನುವದನ್ನು ಗಮನಿಸಿ. ಹೀಗೆಲ್ಲ ಮಾಡುವಾಗ ನೀವು ತಾಳ್ಮೆಯಿಂದ ಪ್ರೀತಿಯಿಂದ ವರ್ತಿಸಿ. ಆಗ ಅವಳ ಕಡೆಗೆ ನಿಮಗಿರುವ ಕಾಳಜಿಯನ್ನು ಮಗಳು ಗ್ರಹಿಸುತ್ತಾಳೆ. ಮತ್ತು ನಿಮ್ಮ ಸಲಹೆಯನ್ನು ಅನ್ವಯಿಸಲು ಹೆಜ್ಜೆ ತೆಗೆದುಕೊಳ್ಳುತ್ತಾಳೆ. ಸರಿಯಾದ ಆಯ್ಕೆಗಳನ್ನು ಮಾಡಿ ಆಗಬಹುದಾದ ಅನಾಹುತದಿಂದ ತಪ್ಪಿಸಿಕೊಳ್ಳುತ್ತಾಳೆ.

16 ಇದೇ ರೀತಿಯ ತಾಳ್ಮೆ ಕಾಳಜಿ ತೋರಿಸುತ್ತಾ ಆರೋಗ್ಯ ಸಮಸ್ಯೆ ಇರುವವರಿಗೆ, ಕೆಲಸ ಕಳೆದುಕೊಂಡು ಕಂಗೆಟ್ಟವರಿಗೆ ಅಥವಾ ಬೈಬಲ್‌ನ ಕೆಲವು ಬೋಧನೆಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿರುವವರಿಗೆ ಸಹಾಯ ಮಾಡಬಹುದು. ‘ವಿಷಯಗಳನ್ನು ಸರಿಪಡಿಸಲು’ ದೇವರ ವಾಕ್ಯವನ್ನು ಬಳಸುವುದು ನಮಗೆಲ್ಲರಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ.

‘ನೀತಿಯಲ್ಲಿ ಶಿಸ್ತುಗೊಳಿಸಲು ಉಪಯುಕ್ತ’

17. ಶಿಸ್ತನ್ನು ನಾವೇಕೆ ಗಣ್ಯತೆಯಿಂದ ಸ್ವೀಕರಿಸಬೇಕು?

17 “ಯಾವ ಶಿಸ್ತು ಸಹ ತತ್ಕಾಲಕ್ಕೆ ಆನಂದಕರವಾಗಿ ತೋರದೆ ದುಃಖಕರವಾಗಿಯೇ ತೋರುತ್ತದೆ. ಆದರೆ ತರುವಾಯ ಅದರಿಂದ ತರಬೇತಿಹೊಂದಿದವರಿಗೆ ಸಮಾಧಾನಕರವಾದ ಫಲವನ್ನು ಅಂದರೆ ನೀತಿಯನ್ನು ಫಲಿಸುತ್ತದೆ.” (ಇಬ್ರಿ. 12:11) ಸತ್ಯದಲ್ಲಿರುವ ಹೆತ್ತವರು ನೀಡಿದ ಶಿಸ್ತು ತಮಗೆ ತುಂಬ ಸಹಾಯ ಮಾಡಿತು ಎಂದು ಅನೇಕ ಕ್ರೈಸ್ತ ವಯಸ್ಕರು ಒಪ್ಪಿಕೊಳ್ಳುತ್ತಾರೆ. ಮತ್ತು ಹಿರಿಯರ ಮೂಲಕ ಯೆಹೋವನು ಕೊಡುವ ಶಿಸ್ತನ್ನು ಸ್ವೀಕರಿಸುವುದು ನಮ್ಮನ್ನು ಜೀವ-ಮಾರ್ಗದಲ್ಲಿ ನಡೆಸುತ್ತದೆ.—ಜ್ಞಾನೋ. 4:13.

18, 19. (1)‘ನೀತಿಯಲ್ಲಿ ಶಿಸ್ತುಗೊಳಿಸುವಾಗ’ ಜ್ಞಾನೋಕ್ತಿ 18:13ರಲ್ಲಿರುವ ತತ್ವ ಪಾಲಿಸುವುದು ಅಷ್ಟೇಕೆ ಪ್ರಾಮುಖ್ಯ? (2) ಹಿರಿಯರು ತಪ್ಪಿತಸ್ಥರೊಂದಿಗೆ ಸೌಮ್ಯಭಾವ ಪ್ರೀತಿಯಿಂದ ವ್ಯವಹರಿಸುವಾಗ ಯಾವ ಪ್ರಯೋಜನ ಆಗಬಹುದು?

18 ಒಳ್ಳೆ ಶಿಸ್ತು ಕೊಡುವುದು ನಿಜವಾಗಲೂ ಒಂದು ಕಲೆ. “ನೀತಿ”ಯಲ್ಲಿ ಶಿಸ್ತು ಕೊಡುವಂತೆ ಯೆಹೋವನು ಕ್ರೈಸ್ತರಿಗೆ ಹೇಳಿದ್ದಾನೆ. (2 ತಿಮೊ. 3:16) ಹಾಗಾಗಿ ಶಿಸ್ತು ಕೊಡುವಾಗ ಬೈಬಲ್‌ ತತ್ವಗಳನ್ನು ಆಧಾರವಾಗಿ ಬಳಸಬೇಕು. ಅವುಗಳಲ್ಲಿ ಒಂದು ಜ್ಞಾನೋಕ್ತಿ 18:13. ಅಲ್ಲಿ ಹೇಳುವುದು: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.” ಹಿರಿಯರು ಈ ತತ್ವವನ್ನು ಅನ್ವಯಿಸಬೇಕು. ಗಂಭೀರ ಪಾಪ ಮಾಡಿದ ವ್ಯಕ್ತಿಗೆ ಶಿಸ್ತು ನೀಡುವ ಮುಂಚೆ ಆ ವಿಷಯದ ಕುರಿತು ಎಲ್ಲ ಸತ್ಯಾಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. (ಧರ್ಮೋ. 13:14) ಆಗ ಮಾತ್ರ “ನೀತಿ”ಯಲ್ಲಿ ಶಿಸ್ತು ನೀಡಲು ಹಿರಿಯರಿಗೆ ಸಾಧ್ಯವಾಗುತ್ತದೆ.

19 ಹಿರಿಯರು ಶಿಸ್ತು ಕೊಡುವಾಗ “ಸೌಮ್ಯಭಾವದಿಂದ” ಕೊಡುವಂತೆ ದೇವರ ವಾಕ್ಯ ಹೇಳುತ್ತದೆ. (2 ತಿಮೊಥೆಯ 2:24-26 ಓದಿ.) ಒಬ್ಬ ವ್ಯಕ್ತಿ ಪಾಪ ಮಾಡಿದಾಗ ಯೆಹೋವನ ಹೆಸರಿಗೆ ನಿಂದೆ ತರಬಹುದು, ಬೇರೆಯವರ ಮನಸ್ಸನ್ನು ನೋಯಿಸಬಹುದು. ಹಾಗಂತ ಹಿರಿಯನು ಸಿಟ್ಟಿನಿಂದ ಸಲಹೆ ಶಿಸ್ತನ್ನು ಕೊಡುವಲ್ಲಿ ಅದು ಆ ವ್ಯಕ್ತಿಗೆ ಪ್ರಯೋಜನ ತರಲ್ಲ. ಬದಲಿಗೆ “ದೇವರ ದಯಾಪರ ಗುಣ”ವನ್ನು ಅನುಕರಿಸುತ್ತಾ ಶಿಸ್ತು ನೀಡುವಾಗ ಆ ವ್ಯಕ್ತಿ ಪಶ್ಚಾತ್ತಾಪಪಡಬಹುದು.—ರೋಮ. 2:4.

20. ಹೆತ್ತವರು ಮಕ್ಕಳನ್ನು ಶಿಸ್ತುಗೊಳಿಸುವಾಗ ಯಾವ ತತ್ವಗಳನ್ನು ಅನ್ವಯಿಸಬೇಕು?

20 ಹೆತ್ತವರು ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವಾಗ ಬೈಬಲ್‌ ತತ್ವಗಳನ್ನು ಅನ್ವಯಿಸಬೇಕು. (ಎಫೆ. 6:4) ಮಗನು ತಪ್ಪು ಮಾಡಿದ್ದಾನಂತ ಯಾರಾದರೂ ಹೇಳಿದಾಗ ತಂದೆ ತಕ್ಷಣ ಶಿಕ್ಷಿಸುವ ಬದಲು ಸತ್ಯಾಂಶ ಏನಂತ ತಿಳಿದುಕೊಳ್ಳಬೇಕು. ಅಷ್ಟೆ ಅಲ್ಲದೆ ಕ್ರೈಸ್ತ ಕುಟುಂಬದಲ್ಲಿ ಹಿಂಸಾತ್ಮಕ ಶಿಕ್ಷೆಗೆ ಜಾಗ ಇಲ್ಲ. “ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳೂ” ಆಗಿದ್ದಾನೆ. ಮಕ್ಕಳಿಗೆ ಶಿಸ್ತು ನೀಡುವ ಜವಾಬ್ದಾರಿ ಇರುವವರೆಲ್ಲರೂ ಯೆಹೋವನನ್ನು ಅನುಕರಿಸಲು ಶ್ರಮಿಸಬೇಕು.—ಯಾಕೋ. 5:11.

ಯೆಹೋವನು ನಮಗೆ ಕೊಟ್ಟಿರುವ ಬೆಲೆಕಟ್ಟಲಾಗದ ಕೊಡುಗೆ

21, 22. ಕೀರ್ತನೆ 119:97-104ರಲ್ಲಿರುವ ಯಾವ ಪದಗಳು ಬೈಬಲ್‌ ಬಗ್ಗೆ ನಿಮಗಿರುವ ಭಾವನೆಗಳನ್ನು ಚೆನ್ನಾಗಿ ವರ್ಣಿಸುತ್ತವೆ?

21 ಒಬ್ಬ ದೇವಭಕ್ತನು ಯೆಹೋವನ ಧರ್ಮಶಾಸ್ತ್ರವನ್ನು ಯಾಕೆ ಪ್ರೀತಿಸಿದನೆಂದು ತನ್ನ ಮಾತುಗಳಲ್ಲಿ ಬಿಚ್ಚಿಟ್ಟನು. (ಕೀರ್ತನೆ 119:97-104 ಓದಿ.) ಅದನ್ನು ಅಧ್ಯಯನ ಮಾಡಿದ್ದರಿಂದ ಅವನಿಗೆ ವಿವೇಕ ತಿಳಿವಳಿಕೆ ಮತ್ತು ಆಳವಾದ ಜ್ಞಾನ ಸಿಕ್ಕಿತು. ಅದರ ಸಲಹೆ ಅವನು ದುರ್ಮಾರ್ಗಕ್ಕೆ ಹೋಗದಂತೆ, ಇತರರಿಗೆ ನೋವು ತರದಂತೆ ಸಹಾಯಮಾಡಿತು. ಶಾಸ್ತ್ರಗ್ರಂಥವನ್ನು ಓದುವುದು ಅವನಿಗೆ ಆಹ್ಲಾದಕರವಾಗಿರುತ್ತಿತ್ತು ಹಾಗೂ ಸಂತೃಪ್ತಿ ತರುತ್ತಿತ್ತು. ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ತಂದ ಇಂಥ ಸಲಹೆಸೂಚನೆಗಳನ್ನು ಕೊಟ್ಟಿರುವ ದೇವರಿಗೆ ವಿಧೇಯನಾಗುವ ದೃಢಸಂಕಲ್ಪ ಅವನು ಮಾಡಿದ್ದನು.

22 “ಇಡೀ ಶಾಸ್ತ್ರಗ್ರಂಥ”ವನ್ನು ನೀವು ಗಣ್ಯ ಮಾಡ್ತೀರಾ? ಮಾಡುವುದಾದರೆ ದೇವರ ತನ್ನ ಉದ್ದೇಶವನ್ನು ಪೂರೈಸುತ್ತಾನೆ ಅನ್ನೋ ನಂಬಿಕೆ ಇನ್ನಷ್ಟು ಗಟ್ಟಿ ಆಗುತ್ತೆ. ಅದರಲ್ಲಿರುವ ಪ್ರೇರಿತ ಸಲಹೆ ಪಾಪವನ್ನು ಮತ್ತೆ ಮತ್ತೆ ಮಾಡಿ ಮಾರಕ ಪರಿಣಾಮಗಳಿಗೆ ಒಳಗಾಗದಂತೆ ನಮ್ಮನ್ನು ಕಾಪಾಡುತ್ತೆ. ಇದನ್ನು ನಾವು ಕೌಶಲದಿಂದ ಕಲಿಸುವಾಗ ಇತರರಿಗೆ ಜೀವದ ಮಾರ್ಗಕ್ಕೆ ಬರಲು ಮತ್ತು ಅದರಲ್ಲಿ ಉಳಿಯಲು ಸಹಾಯ ಮಾಡುತ್ತೇವೆ. ಎಲ್ಲರಿಗಿಂತ ವಿವೇಕಿಯೂ ಪ್ರೀತಿಪರನೂ ಆಗಿರುವ ಯೆಹೋವನನ್ನು ಆರಾಧಿಸುತ್ತಾ “ಇಡೀ ಶಾಸ್ತ್ರಗ್ರಂಥ”ವನ್ನು ಚೆನ್ನಾಗಿ ಬಳಸೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 1 ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 79ನೇ ಪುಟ ನೋಡಿ.

^ ಪ್ಯಾರ. 7 ಯೇಸು ಬೋಧಿಸುವಾಗೆಲ್ಲಾ “ನಿಮ್ಮ ಅಭಿಪ್ರಾಯವೇನು?” ಎಂದು ಕೇಳುತ್ತಿದ್ದನು. ಅವರ ಉತ್ತರಕ್ಕಾಗಿ ಕಾಯುತ್ತಿದ್ದನು.—ಮತ್ತಾ. 18:12; 21:28; 22:42.

^ ಪ್ಯಾರ. 10 ಪಾಪದ ಪ್ರಲೋಭನೆಯನ್ನು ಜಯಿಸಲು ಪೌಲ ಬರೆದ ಪತ್ರಗಳಲ್ಲಿ ಪ್ರಾಯೋಗಿಕ ಸಲಹೆಗಳಿವೆ. (ರೋಮ. 6:12; ಗಲಾ. 5:16-18) ಅವನು ಇತರರಿಗೆ ಕೊಟ್ಟ ಸಲಹೆಗಳನ್ನು ತಾನೂ ಖಂಡಿತ ಅನ್ವಯಿಸಿಕೊಂಡಿರಬೇಕು.—ರೋಮ. 2:21.

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

[ಪುಟ 15ರಲ್ಲಿರುವ ಚಿತ್ರಗಳು]

ಹೆತ್ತವರು ಬೈಬಲನ್ನು ಬಳಸಿ ಪ್ರೀತಿಯಿಂದ ಮಕ್ಕಳನ್ನು ‘ಸರಿಪಡಿಸುವ’ ಮೂಲಕ ಜೀವನದಲ್ಲಿ ನೋವುಣ್ಣದಂತೆ ಕಾಪಾಡುತ್ತಾರೆ (ಪ್ಯಾರ 15ನ್ನು ನೋಡಿ)